ಅಧ್ಯಾಯ 52
ಯೇಸು ಅದ್ಭುತಕರವಾಗಿ ಸಾವಿರಾರು ಮಂದಿಗೆ ಉಣಿಸಿದನು
ಗಲಿಲಾಯದ ಆ ಗಮನಾರ್ಹ ಸಾರುವ ಸಂಚಾರದಲ್ಲಿ ಆ ಹನ್ನೆರಡು ಮಂದಿ ಅಪೊಸ್ತಲರು ಆನಂದಿಸಿದ್ದರು. ಈಗ, ಯೋಹಾನನು ಕೊಲ್ಲಿಸಲ್ಪಟ್ಟ ಸ್ವಲ್ಪ ಸಮಯದ ಮೇಲೆ ಅವರು ಹಿಂದೆ ಬಂದು, ಯೇಸುವಿಗೆ ತಮ್ಮ ಆಶ್ಚರ್ಯಕರ ಅನುಭವಗಳನ್ನು ತಿಳಿಸುತ್ತಾರೆ. ಅವರು ಬಹು ದಣಿದಿದ್ದನ್ನು ಕಂಡು ಮತ್ತು ಎಷ್ಟೋ ಜನರು ಬರುತ್ತಾ ಹೋಗುತ್ತಾ ಇದದ್ದರಿಂದ ಊಟ ಮಾಡಲೂ ಸಮಯವಿರದ್ದನ್ನು ಗಮನಿಸಿ ಯೇಸು ಅಂದದ್ದು: ‘ನಾವು ಮಾತ್ರ ವಿಂಗಡವಾಗಿ ಏಕಾಂತ ಸ್ಥಳಕ್ಕೆ ಹೋಗೋಣ, ಅಲ್ಲಿ ನೀವು ಸ್ವಲ್ಪ ದಣುವಾರಿಸಿಕೊಳ್ಳಿರಿ.’
ಆಗ ಅವರು ಪ್ರಾಯಶಃ ಕಪೆರ್ನೌಮಿನ ಹತ್ತಿರ ದೋಣಿಯನ್ನು ಹತ್ತಿ ಯೊರ್ದಾನಿನ ಪೂರ್ವಕ್ಕೆ, ಬೆತ್ಸಾಯಿದದ ಆಚೇಕಡೆಯ ಏಕಾಂತವಾದ ಸ್ಥಳಕ್ಕೆ ಹೊರಟುಹೋದರು. ಅವರು ಹೋಗುವುದನ್ನು ಬಹು ಜನರು ಕಂಡರು ಮತ್ತು ಇತರರಿಗೂ ಅದು ತಿಳಿಯಿತು. ಅವರು ನದೀ ತೀರದಲ್ಲಿ ಓಡುತ್ತಾ, ಅಲ್ಲಿ ದೋಣಿಯು ದಡಸೇರುವ ಮುಂಚೆಯೇ ಅವರಿಗಾಗಿ ಕಾದುಕೂತರು.
ದೋಣಿಯಿಂದ ಇಳಿದು, ನೆರೆದಿದ್ದ ಬಹುಜನರ ಗುಂಪನ್ನು ಕಂಡಾಗ ಯೇಸು ಕನಿಕರಪಟ್ಟನು, ಯಾಕಂದರೆ ಆ ಜನರು ಕುರುಬನಿಲ್ಲದ ಕುರಿಗಳ ಹಾಗಿದ್ದರು. ಆದ್ದರಿಂದ, ಅವರ ರೋಗಿಗಳನ್ನು ಅವನು ವಾಸಿಮಾಡಿದನು ಮತ್ತು ಅವರಿಗೆ ಬಹಳ ವಿಷಯಗಳನ್ನು ಕಲಿಸಲು ತೊಡಗಿದನು.
ಹೀಗೆ ಸಮಯವು ಬೇಗನೇ ದಾಟಿತು, ಶಿಷ್ಯರು ಆತನ ಬಳಿಗೆ ಬಂದು ಹೇಳಿದ್ದು: “ಇದು ಅಡವಿ, ಈಗ ಹೊತ್ತು ಬಹಳವಾಯಿತು. ಈ ಜನರಿಗೆ ಅಪ್ಪಣೆ ಕೊಡು; ಇವರು ಸುತ್ತಲಿರುವ ಹಳ್ಳಿಪಳ್ಳಿಗಳಿಗೆ ಹೋಗಿ ತಮ್ಮ ಊಟಕ್ಕೆ ಏನಾದರೂ ಕೊಂಡುಕೊಳ್ಳಲಿ.”
ಆದರೆ ಯೇಸು ಉತ್ತರಿಸಿದ್ದು: “ನೀವೇ ಅವರಿಗೆ ಊಟಕ್ಕೆ ಕೊಡಿರಿ.” ತಾನು ಏನು ಮಾಡಲಿರುವನೆಂದು ಯೇಸುವಿಗೆ ಈ ಮೊದಲೇ ಗೊತ್ತಿದ್ದರಿಂದ, ಫಿಲಿಪ್ಪನನ್ನು ಪರೀಕ್ಷಿಸುವುದಕ್ಕಾಗಿ ಹೀಗೆ ಕೇಳಿದನು: “ಇವರ ಊಟಕ್ಕೆ ನಾವೆಲ್ಲಿಂದ ರೊಟ್ಟಿ ಕೊಂಡು ತರೋಣ?”
ಫಿಲಿಪ್ಪನ ದೃಷ್ಟಿಕೋನದಿಂದ ಪರಿಸ್ಥಿತಿಯು ಅಶಕ್ಯವಾಗಿತ್ತು. ಯಾಕಂದರೆ ಅಲ್ಲಿ ಸುಮಾರು 5,000 ಗಂಡಸರಿದ್ದರು, ಮತ್ತು ಹೆಂಗಸರು, ಮಕ್ಕಳನ್ನೂ ಕೂಡಿಸಿದರೆ ಪ್ರಾಯಶಃ 10,000 ಕ್ಕಿಂತಲೂ ಹೆಚ್ಚು! ಅದಕ್ಕೆ ಫಿಲಿಪ್ಪನು, “ಒಬ್ಬೊಬ್ಬನಿಗೆ ಸ್ವಲ್ಪ ಸ್ವಲ್ಪ ಸಿಕ್ಕಬೇಕಾದರೆ ಇನ್ನೂರು ದಿನಾರಿ [ಒಂದು ದಿನಾರಿಯಸ್ ಆಗ ಒಂದು ದಿನದ ಸಂಬಳ] ಹಣದ ರೊಟ್ಟಿಯಾದರೂ ಸಾಲದು” ಎಂದು ಪ್ರತಿಕ್ರಿಯಿಸುತ್ತಾನೆ.
ಪ್ರಾಯಶಃ ಅಷ್ಟು ಜನರಿಗೆ ಉಣಿಸುವ ಅಸಾಧ್ಯತೆಯನ್ನು ತೋರಿಸಲು, ಅಂದ್ರೆಯನು ಅಂದದ್ದು: “ಇಲ್ಲಿರುವ ಒಬ್ಬ ಹುಡುಗನ ಬಳಿಯಲ್ಲಿ ಐದು ಜವೆಗೋದಿಯ ರೊಟ್ಟಿಗಳೂ ಎರಡು ಮೀನುಗಳೂ ಅವೆ.” “ಆದರೆ ಇಷ್ಟು ಜನರಿಗೆ ಅವು ಯಾತಕ್ಕಾದಾವು?” ಎಂದು ಕೂಡಿಸುತ್ತಾನೆ.
ಅದು ಸಾ.ಶ. 32 ರ ಪಸ್ಕದ ಸ್ವಲ್ಪ ಮುಂಚೆ, ವಸಂತ ಋತುವಾಗಿದ್ದರಿಂದ, ಆ ಸ್ಥಳ ತುಂಬಾ ಹಸುರು ಹುಲ್ಲು ಬೆಳೆದಿತ್ತು. ಯೇಸು ಶಿಷ್ಯರಿಗೆ ಅವರನ್ನು ಹುಲ್ಲಿನ ಮೇಲೆ ನೂರರ ಮತ್ತು ಐವತ್ತರ ಪಂಕ್ತಿಯಲ್ಲಿ ಕೂತುಕೊಳ್ಳಿಸುವಂತೆ ಹೇಳಿದನು. ಆ ಮೇಲೆ ಆ ಐದು ರೊಟ್ಟಿ ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಸ್ತೋತ್ರ ಮಾಡಿದನು. ಅನಂತರ ರೊಟ್ಟಿಗಳನ್ನು ಮುರಿದು, ಮೀನುಗಳನ್ನು ಪಾಲು ಮಾಡಿ ತನ್ನ ಶಿಷ್ಯರ ಕೈಗೆ ಕೊಟ್ಟು, ಅದನ್ನು ಜನರಿಗೆ ಹಂಚುವಂತೆ ಹೇಳಿದನು. ಆಶ್ಚರ್ಯಕರವಾಗಿ, ಅವರೆಲ್ಲರೂ ಊಟ ಮಾಡಿ ತೃಪ್ತರಾದರು!
ಅನಂತರ ಯೇಸು ತನ್ನ ಶಿಷ್ಯರಿಗೆ, “ಮಿಕ್ಕ ತುಂಡುಗಳನ್ನು ಕೂಡಿಸಿರಿ; ಇದರಲ್ಲಿ ಯಾವುದೂ ವ್ಯರ್ಥವಾಗಬಾರದು” ಅಂದನು. ಅವರು ಊಟವಾದ ಮೇಲೆ ಉಳಿದ ತುಂಡುಗಳನ್ನು ಕೂಡಿಸಲಾಗಿ ಹನ್ನೆರಡು ಪುಟ್ಟಿ ತುಂಬಿತು! ಮತ್ತಾಯ 14:13-21; ಮಾರ್ಕ 6:30-44; ಲೂಕ 9:10-17; ಯೋಹಾನ 6:1-13.
▪ ತನ್ನ ಅಪೊಸ್ತಲರಿಗಾಗಿ ಯೇಸು ಒಂದು ಏಕಾಂತ ಸ್ಥಳವನ್ನು ಹುಡುಕಿದ್ದೇಕೆ?
▪ ಯೇಸು ತನ್ನ ಶಿಷ್ಯರನ್ನು ಎಲ್ಲಿಗೆ ಒಯ್ದನು, ಮತ್ತು ಅವರ ವಿಶ್ರಾಂತಿಯ ಅಗತ್ಯದ ಪೂರೈಕೆಯಾಗಲಿಲ್ಲವೇಕೆ?
▪ ಹೊತ್ತುಹೋದಾಗ, ಶಿಷ್ಯರು ಏನನ್ನು ಒತ್ತಾಯಿಸಿದರು, ಆದರೆ ಯೇಸು ಜನರನ್ನು ಹೇಗೆ ಉಪಚರಿಸಿದನು?