ಯೇಸುವಿನಂತೆ ಕ್ರಿಯೆಗೈಯಲು ನೀವು ಪ್ರಚೋದಿಸಲ್ಪಡುತ್ತೀರೊ?
“ಆತನು . . . ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶಮಾಡುತ್ತಿದ್ದನು.”—ಮಾರ್ಕ 6:34.
1. ಕೆಲವು ವ್ಯಕ್ತಿಗಳು ಮೆಚ್ಚತಕ್ಕ ಗುಣಗಳನ್ನು ಪ್ರದರ್ಶಿಸುತ್ತಾರೆಂಬುದನ್ನು ತಿಳಿದುಕೊಳ್ಳುವುದು ಏಕೆ ಕಷ್ಟಕರವಲ್ಲ?
ಇತಿಹಾಸದಾದ್ಯಂತ ಅನೇಕ ವ್ಯಕ್ತಿಗಳು ಮೆಚ್ಚತಕ್ಕ ಗುಣಗಳನ್ನು ಪ್ರದರ್ಶಿಸಿದ್ದಾರೆ. ಇದರ ಕಾರಣವನ್ನು ತಿಳಿದುಕೊಳ್ಳುವುದು ನಿಮಗೆ ಕಷ್ಟಕರವಾಗಿರಲಾರದು. ನಾವು ಅಮೂಲ್ಯವೆಂದೆಣಿಸುವ ಪ್ರೀತಿ, ದಯೆ, ಉದಾರಭಾವ ಹಾಗೂ ಇತರ ಗುಣಗಳು ಯೆಹೋವ ದೇವರಲ್ಲಿರುವುದು ಮಾತ್ರವಲ್ಲ, ಇವುಗಳನ್ನು ಆತನು ಪ್ರದರ್ಶಿಸುವವನೂ ಆಗಿದ್ದಾನೆ. ಅಷ್ಟೇ ಅಲ್ಲ, ಮಾನವರು ದೇವರ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟಿದ್ದಾರೆ. ಆದುದರಿಂದ ಹೆಚ್ಚಿನವರು ತಮಗೆ ಮನಸ್ಸಾಕ್ಷಿ ಇದೆಯೆಂದು ತೋರಿಸುವುದರಿಂದ, ಅನೇಕರು ಸ್ಪಲ್ಪ ಮಟ್ಟಿಗೆ ಪ್ರೀತಿ, ಕರುಣೆ, ಕನಿಕರ ಮತ್ತು ಇನ್ನಿತರ ದೈವಿಕ ಗುಣಗಳನ್ನು ತೋರಿಸುವುದೇಕೆಂಬುದನ್ನು ನಾವು ಗಣ್ಯಮಾಡಬಲ್ಲೆವು. (ಆದಿಕಾಂಡ 1:26; ರೋಮಾಪುರ 2:14, 15) ಆದರೆ ಕೆಲವರು ಇಂತಹ ಗುಣಗಳನ್ನು ಇತರರಿಗಿಂತಲೂ ಹೆಚ್ಚು ಸುಲಭವಾಗಿ ಪ್ರದರ್ಶಿಸುತ್ತಾರೆ ಎಂಬುದನ್ನು ನೀವು ಮನಗಾಣಬಹುದು.
2. ಯೇಸುವನ್ನು ಅನುಕರಿಸುತ್ತಿದ್ದೇವೆಂದು ನೆನಸುತ್ತಾ, ಜನರು ಮಾಡಬಹುದಾದಂತಹ ಕೆಲವು ಸತ್ಕಾರ್ಯಗಳಾವುವು?
2 ರೋಗಿಗಳನ್ನು ಭೇಟಿಮಾಡಿ ನೆರವು ನೀಡುವ, ಅಂಗವಿಕಲರಿಗೆ ಕನಿಕರವನ್ನು ತೋರಿಸುವ, ಇಲ್ಲವೆ ಬಡವರಿಗೆ ಉದಾರವಾಗಿ ದಾನಮಾಡುವ ಸ್ತ್ರೀಪುರುಷರ ಪರಿಚಯ ನಿಮಗಿರಬಹುದು. ಕನಿಕರದ ಕಾರಣ ಕುಷ್ಠರೋಗಿಗಳಿಗೆ ಸಹಾಯ ಮಾಡುತ್ತಾ ಇಲ್ಲವೆ ಅನಾಥಾಶ್ರಮಗಳಲ್ಲಿ ಕೆಲಸಮಾಡುತ್ತಾ ತಮ್ಮ ಇಡೀ ಜೀವನವನ್ನು ತ್ಯಾಗಮಾಡುವ, ಮತ್ತು ಆಸ್ಪತ್ರೆಗಳಲ್ಲಿ ಇಲ್ಲವೆ ಮರಣಶಯ್ಯೆಯಲ್ಲಿರುವ ರೋಗಿಗಳನ್ನು ನೋಡಿಕೊಳ್ಳುತ್ತಾ ಸ್ವಯಂಸೇವೆ ಮಾಡುವ, ಅಥವಾ ದಿಕ್ಕಿಲ್ಲದವರಿಗೆ ಇಲ್ಲವೆ ನಿರಾಶ್ರಿತರಿಗೆ ಸಹಾಯಮಾಡಲು ಪ್ರಯಾಸಪಡುವ ಜನರ ಕುರಿತು ಸಹ ತುಸು ಯೋಚಿಸಿರಿ. ಕ್ರೈಸ್ತರಿಗೆಲ್ಲ ಒಂದು ಮಾದರಿಯನ್ನಿಟ್ಟ ಯೇಸುವನ್ನು ತಾವು ಅನುಕರಿಸುತ್ತಿದ್ದೇವೆಂದು ಅವರಲ್ಲಿ ಕೆಲವರು ನೆನಸಬಹುದು. ಕ್ರಿಸ್ತನು ರೋಗಗ್ರಸ್ತರನ್ನು ಗುಣಪಡಿಸಿ, ಹಸಿದವರಿಗೆ ಊಟಬಡಿಸಿದನೆಂದು ನಾವು ಸುವಾರ್ತೆಯ ವೃತ್ತಾಂತಗಳಲ್ಲಿ ಓದುತ್ತೇವೆ. (ಮಾರ್ಕ 1:34; 8:1-9; ಲೂಕ 4:40) ತನ್ನ ಸ್ವರ್ಗೀಯ ತಂದೆಯನ್ನು ಅನುಕರಿಸುತ್ತಿದ್ದ ಯೇಸು, ಪ್ರೀತಿ, ಕೋಮಲಭಾವ ಹಾಗೂ ಕನಿಕರವನ್ನು ಪ್ರದರ್ಶಿಸಿದನು. ಇವು ‘ಕ್ರಿಸ್ತನ ಮನಸ್ಸನ್ನು’ ಪ್ರತಿಬಿಂಬಿಸಿದವು.—1 ಕೊರಿಂಥ 2:16.
3. ಯೇಸುವಿನ ಸತ್ಕಾರ್ಯಗಳ ಬಗ್ಗೆ ಸಮತೂಕದ ದೃಷ್ಟಿಕೋನವಿರಲು, ನಾವು ಏನನ್ನು ಪರಿಗಣಿಸುವ ಅಗತ್ಯವಿದೆ?
3 ಯೇಸುವಿನ ಪ್ರೀತಿ ಹಾಗೂ ಕನಿಕರದಿಂದ ಬಹಳವಾಗಿ ಪ್ರಭಾವಿತರಾಗಿರುವ ಅನೇಕರು, ಇಂದು ಕ್ರಿಸ್ತನ ಮನಸ್ಸಿನ ಒಂದು ಮುಖ್ಯಾಂಶವನ್ನು ಕಡೆಗಣಿಸಿರುವುದನ್ನು ನೀವು ಗಮನಿಸಿದ್ದೀರೊ? ಮಾರ್ಕ 6ನೆಯ ಅಧ್ಯಾಯದ ಜಾಗರೂಕ ಪರಿಗಣನೆಯಿಂದ ನಾವು ಇದರ ಬಗ್ಗೆ ಸೂಕ್ಷ್ಮವಾದ ಪರಿಜ್ಞಾನವನ್ನು ಪಡೆದುಕೊಳ್ಳಸಾಧ್ಯವಿದೆ. ಜನರು ಯೇಸುವಿನ ಬಳಿಗೆ ರೋಗಗ್ರಸ್ತರನ್ನು ಕರೆತಂದರೆಂದು ನಾವು ಅಲ್ಲಿ ಓದುತ್ತೇವೆ. ಅವನಲ್ಲಿಗೆ ಬಂದಿದ್ದ ಸಾವಿರಾರು ಜನರು ಹಸಿದಿದ್ದರೆಂದು ಯೇಸುವಿಗೆ ತಿಳಿದುಬಂದಾಗ, ಅವನು ಅದ್ಭುತಕರವಾಗಿ ಅವರೆಲ್ಲರಿಗೆ ಊಟ ಒದಗಿಸಿದನೆಂದು ಪೂರ್ವಾಪರ ವಚನದಿಂದ ತಿಳಿದುಬರುತ್ತದೆ. (ಮಾರ್ಕ 6:35-44, 54-56) ಅಸ್ವಸ್ಥರನ್ನು ಗುಣಪಡಿಸುವುದು ಮತ್ತು ಹಸಿದವರಿಗೆ ಊಟ ಒದಗಿಸುವುದು ಪ್ರೀತಿಪರ ಕನಿಕರದ ತೋರ್ಪಡಿಸುವಿಕೆಗಳಾಗಿದ್ದವು ಎಂಬುದರಲ್ಲಿ ಸಂದೇಹವೇ ಇಲ್ಲ, ಆದರೆ ಇತರರಿಗೆ ಸಹಾಯ ಮಾಡಲು ಯೇಸು ಈ ವಿಧಾನಗಳನ್ನೇ ಪ್ರಧಾನವಾಗಿ ಉಪಯೋಗಿಸಿದನೊ? ಅವನು ಯೆಹೋವನನ್ನು ಅನುಕರಿಸಿದಂತೆ, ನಾವು ಅವನು ತೋರಿಸಿದ ಪ್ರೀತಿ, ದಯೆ, ಮತ್ತು ಕನಿಕರದ ಪರಿಪೂರ್ಣ ಮಾದರಿಯನ್ನು ಹೇಗೆ ಅತ್ಯುತ್ತಮವಾಗಿ ಅನುಕರಿಸಬಲ್ಲೆವು?
ಆತ್ಮಿಕ ಅಗತ್ಯಗಳನ್ನು ಪೂರೈಸುವಂತೆ ಪ್ರಚೋದಿಸಲ್ಪಟ್ಟದ್ದು
4. ಮಾರ್ಕ 6:30-34ರಲ್ಲಿರುವ ವೃತ್ತಾಂತದ ಹಿನ್ನೆಲೆ ಏನಾಗಿತ್ತು?
4 ಯೇಸು ತನ್ನ ಸುತ್ತಲೂ ಇದ್ದವರ ಆತ್ಮಿಕ ಅಗತ್ಯಗಳಿಗಾಗಿಯೇ ಮುಖ್ಯವಾಗಿ ಮರುಕಪಟ್ಟನು. ಭೌತಿಕ ಅಗತ್ಯಗಳಿಗಿಂತಲೂ ಈ ಆತ್ಮಿಕ ಅಗತ್ಯಗಳೇ ಪ್ರಮುಖ ಸ್ಥಾನವನ್ನು ವಹಿಸಿಕೊಂಡಿದ್ದವು. ಮಾರ್ಕ 6:30-34ರಲ್ಲಿರುವ ವೃತ್ತಾಂತವನ್ನು ಪರಿಗಣಿಸಿರಿ. ಅಲ್ಲಿ ದಾಖಲಿಸಲ್ಪಟ್ಟಿರುವ ಘಟನೆಯು, ಸಾ.ಶ. 32ರ ಪಸ್ಕದ ಸಮಯದಲ್ಲಿ ಗಲಿಲಾಯ ಸಮುದ್ರತೀರದ ಬಳಿ ನಡೆಯಿತು. ಅಪೊಸ್ತಲರೆಲ್ಲರೂ ಉಲ್ಲಾಸಭರಿತರಾಗಿದ್ದರು, ಮತ್ತು ಇದಕ್ಕೆ ಸಕಾರಣವಿತ್ತು. ಆಗ ತಾನೇ ಅವರು ಒಂದು ವ್ಯಾಪಕವಾದ ಸಂಚಾರವನ್ನು ಮುಗಿಸಿ, ತಮಗಾದ ಅನುಭವಗಳನ್ನು ಯೇಸುವಿಗೆ ತಿಳಿಸಲು ಕಾತುರಾಗಿದ್ದರೆಂಬುದರಲ್ಲಿ ಸಂದೇಹವೇ ಇಲ್ಲ. ಅವರು ತಮ್ಮ ಅನುಭವಗಳನ್ನು ಹೇಳಬೇಕೆಂದಿದ್ದಾಗ, ಜನರು ಅಲ್ಲಿ ಗುಂಪುಗೂಡಿದರು. ಆ ಗುಂಪು ಎಷ್ಟು ದೊಡ್ಡದಾಗಿತ್ತೆಂದರೆ, ಯೇಸು ಮತ್ತು ಅವನ ಅಪೊಸ್ತಲರಿಗೆ ಊಟಮಾಡಲು ಇಲ್ಲವೆ ವಿಶ್ರಮಿಸಲು ಸಾಧ್ಯವಾಗಲೇ ಇಲ್ಲ. “ನೀವು ಮಾತ್ರ ವಿಂಗಡವಾಗಿ ಅಡವಿಗೆ ಬಂದು ಸ್ವಲ್ಪ ದಣುವಾರಿಸಿಕೊಳ್ಳಿರಿ” ಎಂದು ಯೇಸು ತನ್ನ ಅಪೊಸ್ತಲರಿಗೆ ಹೇಳಿದನು. (ಮಾರ್ಕ 6:31) ಅವರು ಬಹುಶಃ ಕಪೆರ್ನೌಮಿನಿಂದ ದೋಣಿಯನ್ನೇರಿ, ಗಲಿಲಾಯ ಸಮುದ್ರದ ಆಚೆ ಕಡೆಯಿರುವ ಒಂದು ಏಕಾಂತ ಸ್ಥಳಕ್ಕೆ ಹೋದರು. ಆದರೆ ಜನರ ಗುಂಪು ಓಡೋಡಿ ಹೋಗಿ ದೋಣಿಯು ಅಲ್ಲಿ ಬಂದು ಸೇರುವ ಮೊದಲೇ ಒಟ್ಟುಗೂಡಿತ್ತು. ಯೇಸು ಹೇಗೆ ಪ್ರತಿಕ್ರಿಯಿಸಲಿದ್ದನು? ತನ್ನ ಏಕಾಂತತೆಗೆ ಭಂಗವಾಯಿತೆಂದು ಅವನು ಕೋಪಗೊಂಡನೊ? ಇಲ್ಲವೇ ಇಲ್ಲ!
5. ತನ್ನಲ್ಲಿಗೆ ಬಂದ ಜನಸಮೂಹಗಳ ಬಗ್ಗೆ ಯೇಸುವಿಗೆ ಹೇಗನಿಸಿತು, ಮತ್ತು ಅವನು ಏನು ಮಾಡಿದನು?
5 ರೋಗಗ್ರಸ್ತರನ್ನೂ ಸೇರಿಸಿ ಸಾವಿರಾರು ಜನರ ಈ ಗುಂಪು ತನಗಾಗಿ ಆಸೆಯಿಂದ ಕಾದುಕೊಂಡಿರುವುದನ್ನು ನೋಡಿ ಯೇಸುವಿನ ಹೃದಯವು ತುಂಬಿಬಂತು. (ಮತ್ತಾಯ 14:14; ಮಾರ್ಕ 6:44) ಯೇಸುವಿನ ಕನಿಕರವನ್ನು ಕೆರಳಿಸಿದ ಮತ್ತು ಅವನು ಪ್ರತಿಕ್ರಿಯಿಸಿದ ವಿಷಯದ ಮೇಲೆ ಕೇಂದ್ರೀಕರಿಸುತ್ತಾ, ಮಾರ್ಕನು ಬರೆದುದು: “ಆತನು ಹೊರಗೆ ಬಂದು ಬಹುಜನರ ಗುಂಪನ್ನು ಕಂಡು ಇವರು ಕುರುಬನಿಲ್ಲದ ಕುರಿಗಳ ಹಾಗಿದ್ದಾರಲ್ಲಾ ಎಂದು ಕನಿಕರಪಟ್ಟು ಅವರಿಗೆ ಬಹಳ ಉಪದೇಶಮಾಡುತ್ತಿದ್ದನು.” (ಮಾರ್ಕ 6:34) ಯೇಸು ಜನಸಮೂಹವನ್ನಷ್ಟೇ ನೋಡಲಿಲ್ಲ. ಅವನು ಆತ್ಮಿಕ ಅಗತ್ಯಗಳುಳ್ಳ ವ್ಯಕ್ತಿಗಳನ್ನು ನೋಡಿದನು. ಅವರು ಯಾವ ಕುರುಬನಿಂದಲೂ ಸಂರಕ್ಷಣೆಯನ್ನು ಪಡೆಯದ ಇಲ್ಲವೆ ಹುಲ್ಲುಗಾವಲಿಗೆ ಮಾರ್ಗದರ್ಶಿಸಲ್ಪಡದ ನಿಸ್ಸಹಾಯಕ ಕುರಿಗಳಂತೆ ಚದರಿಹೋಗಿದ್ದರು. ಪ್ರೀತಿಪರ ಕುರುಬರಂತೆ ಇರಬೇಕಾಗಿದ್ದ ಈ ಕಲ್ಲೆದೆಯ ಧಾರ್ಮಿಕ ಮುಖಂಡರು, ಸಾಮಾನ್ಯ ಜನರನ್ನು ತುಚ್ಛರೆಂದೆಣಿಸಿ ಅವರ ಆತ್ಮಿಕ ಅಗತ್ಯಗಳನ್ನು ಕಡೆಗಣಿಸುತ್ತಿದ್ದರೆಂದು ಯೇಸುವಿಗೆ ಗೊತ್ತಿತ್ತು. (ಯೆಹೆಜ್ಕೇಲ 34:2-4; ಯೋಹಾನ 7:47-49) ಯೇಸು ಅವರಿಗೆ ತನ್ನಿಂದ ಸಾಧ್ಯವಾದಷ್ಟು ಒಳಿತನ್ನೇ ಮಾಡುವ ಉದ್ದೇಶದಿಂದ ಅವರನ್ನು ಬಹಳ ಭಿನ್ನವಾಗಿ ಉಪಚರಿಸಲಿದ್ದನು. ಆದುದರಿಂದ, ಅವನು ದೇವರ ರಾಜ್ಯದ ಬಗ್ಗೆ ಅವರಿಗೆ ಕಲಿಸಲಾರಂಭಿಸಿದನು.
6, 7. (ಎ) ಜನರ ಅಗತ್ಯಗಳಿಗೆ ಪ್ರತಿಕ್ರಿಯಿಸುವ ಮೂಲಕ ಯೇಸು ಯಾವುದಕ್ಕೆ ಆದ್ಯತೆ ನೀಡಿದನೆಂಬುದು ಸುವಾರ್ತೆಯ ವೃತ್ತಾಂತಗಳಿಂದ ತಿಳಿದುಬರುತ್ತದೆ? (ಬಿ) ಯಾವ ಉದ್ದೇಶದಿಂದ ಯೇಸು ಸಾರಿದನು ಮತ್ತು ಕಲಿಸಿದನು?
6 ಒಂದು ಸಮಾಂತರ ವೃತ್ತಾಂತದಲ್ಲಿ ಸ್ಪಷ್ಟವಾಗಿ ಮೂಡಿಬರುವ ಘಟನೆಗಳ ಕ್ರಮ ಮತ್ತು ಅವುಗಳಿಗೆ ನೀಡಲ್ಪಟ್ಟ ಆದ್ಯತೆಯನ್ನು ಗಮನಿಸಿರಿ. ಇದು, ಇತರರ ಶಾರೀರಿಕ ಸುಕ್ಷೇಮದ ಬಗ್ಗೆ ಬಹಳಷ್ಟು ಆಸಕ್ತನಾಗಿದ್ದ ವೈದ್ಯನಾದ ಲೂಕನಿಂದ ಬರೆಯಲ್ಪಟ್ಟಿತ್ತು. “ಆದರೆ ಜನರ ಗುಂಪು . . . [ಯೇಸುವಿನ] ಹಿಂದೆ ಹೋಗಲು ಆತನು ಅವರನ್ನು ಪ್ರೀತಿಯಿಂದ ಸ್ವೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತಾಡಿ ಕ್ಷೇಮ ಬೇಕಾದವರಿಗೆ ವಾಸಿಮಾಡಿದನು.” (ಲೂಕ 9:11, ಓರೆಅಕ್ಷರಗಳು ನಮ್ಮವು; ಕೊಲೊಸ್ಸೆ 4:14) ಈ ವಿಷಯವು ಅದ್ಭುತಕಾರ್ಯದ ಬಗ್ಗೆ ತಿಳಿಸುವಂತಹ ಪ್ರತಿಯೊಂದು ವೃತ್ತಾಂತದಲ್ಲಿ ಸತ್ಯವಾಗಿರದಿದ್ದರೂ, ಈ ವೃತ್ತಾಂತದಲ್ಲಿ ಲೂಕನ ಪ್ರೇರಿತ ದಾಖಲೆಯು ಯಾವ ಸಂಗತಿಯನ್ನು ಮೊದಲಾಗಿ ತಿಳಿಸುತ್ತದೆ? ಜನರಿಗೆ ಯೇಸು ಕಲಿಸಿದನೆಂಬ ನಿಜಾಂಶವನ್ನೇ.
7 ಮಾರ್ಕ 6:34ರಲ್ಲಿ ಒತ್ತಿಹೇಳಲಾದ ವಿಷಯಕ್ಕೆ ಇದು ಸರಿಯಾಗಿ ಹೊಂದಿಕೊಳ್ಳುತ್ತದೆ. ಯೇಸು ತನ್ನ ಕನಿಕರವನ್ನು ಯಾವ ರೀತಿಯಲ್ಲಿ ವ್ಯಕ್ತಪಡಿಸಲು ಪ್ರಚೋದಿಸಲ್ಪಟ್ಟನೆಂಬುದನ್ನು ಆ ವಚನವು ಸ್ಪಷ್ಟವಾಗಿ ತೋರಿಸುತ್ತದೆ. ಜನರ ಆತ್ಮಿಕ ಅಗತ್ಯಗಳನ್ನು ಪೂರೈಸುತ್ತಾ ಅವನು ಕಲಿಸಿದನು. ತನ್ನ ಶುಶ್ರೂಷೆಯನ್ನು ಆರಂಭಿಸಿದ ಸಮಯದಲ್ಲಿ ಯೇಸು ಹೀಗೆ ಹೇಳಿದ್ದನು: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ; ಇದಕ್ಕಾಗಿಯೇ ಕಳುಹಿಸಲ್ಪಟ್ಟಿದ್ದೇನೆ.” (ಲೂಕ 4:43) ಆದರೂ, ಯೇಸು ರಾಜ್ಯ ಸಂದೇಶದ ಘೋಷಣೆಯನ್ನು ಕೇವಲ ಒಂದು ಕರ್ತವ್ಯವೆಂಬಂತೆ ವೀಕ್ಷಿಸಿ ಮಾಡಿದನೆಂದು, ಅಥವಾ ತನಗೆ ವಹಿಸಲ್ಪಟ್ಟಿದ್ದ ಸಾರುವ ಕೆಲಸವನ್ನು ಮನಸ್ಸಿಲ್ಲದೆ ಮಾಡಿದನೆಂದು ನೆನಸಿದರೆ ಅದು ತಪ್ಪು. ಅದರ ಬದಲು, ಜನರಿಗಾಗಿ ಅವನಲ್ಲಿದ್ದ ಪ್ರೀತಿಪರ ಕನಿಕರವು ತಾನೇ ಅವರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳುವಂತೆ ಅವನನ್ನು ಪ್ರಚೋದಿಸಿತು. ಯೇಸು ಅಸ್ವಸ್ಥರಿಗೆ, ದೆವ್ವಪೀಡಿತರಿಗೆ, ಬಡವರಿಗೆ ಇಲ್ಲವೆ ಹಸಿದಿದ್ದವರಿಗೆ ಮಾಡಬಹುದಾಗಿದ್ದ ಅಂತಿಮ ಒಳಿತು, ದೇವರ ರಾಜ್ಯದ ಕುರಿತಾದ ಸತ್ಯವನ್ನು ಅವರು ತಿಳಿದು, ಅಂಗೀಕರಿಸಿ, ಅದನ್ನು ಪ್ರೀತಿಸುವಂತೆ ಮಾಡುವುದೇ ಆಗಿತ್ತು. ರಾಜ್ಯದ ಕುರಿತಾದ ಆ ಸತ್ಯವು ಬಹಳ ಮಹತ್ವದ್ದಾಗಿತ್ತು, ಏಕೆಂದರೆ ಯೆಹೋವನ ಪರಮಾಧಿಕಾರವನ್ನು ನಿರ್ದೋಷೀಕರಿಸುವುದರಲ್ಲಿ ಮತ್ತು ಮಾನವರಿಗೆ ಅನಂತ ಆಶೀರ್ವಾದಗಳನ್ನು ಒದಗಿಸುವುದರಲ್ಲಿ ಅದು ಮುಖ್ಯ ಪಾತ್ರವನ್ನು ವಹಿಸಲಿತ್ತು.
8. ಯೇಸುವಿಗೆ ಸಾರುವ ಮತ್ತು ಕಲಿಸುವ ಚಟುವಟಿಕೆಯ ಬಗ್ಗೆ ಹೇಗನಿಸಿತು?
8 ಯೇಸು ಭೂಮಿಗೆ ಬಂದ ಮುಖ್ಯ ಕಾರಣವು, ರಾಜ್ಯದ ಬಗ್ಗೆ ಸಕ್ರಿಯವಾಗಿ ಸಾರಲಿಕ್ಕಾಗಿಯೇ. ಅವನ ಭೂಶುಶ್ರೂಷೆಯು ಇನ್ನೇನು ಕೊನೆಗೊಳ್ಳಲಿದ್ದಾಗ, ಯೇಸು ಪಿಲಾತನಿಗೆ ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ.” (ಯೋಹಾನ 18:37) ಯೇಸು ಕೋಮಲವಾದ ಭಾವನೆಗಳುಳ್ಳ ವ್ಯಕ್ತಿ, ಅಂದರೆ ಚಿಂತಿಸುವವನೂ, ಸಮೀಪಿಸಲು ಸಾಧ್ಯವಿರುವವನು, ಇತರರನ್ನು ನಂಬುವವನು, ಮತ್ತು ಎಲ್ಲಕ್ಕಿಂತಲೂ ಮಿಗಿಲಾಗಿ ಪ್ರೀತಿಪರನಾಗಿದ್ದನೆಂದು ನಾವು ಹಿಂದಿನ ಎರಡು ಲೇಖನಗಳಲ್ಲಿ ಗಮನಿಸಿದ್ದೇವೆ. ನಾವು ಕ್ರಿಸ್ತನ ಮನಸ್ಸನ್ನು ನಿಜವಾಗಿಯೂ ತಿಳಿದುಕೊಳ್ಳಲು ಬಯಸುವುದಾದರೆ, ಅವನ ವ್ಯಕ್ತಿತ್ವದ ಈ ಎಲ್ಲ ಅಂಶಗಳನ್ನು ಗಣ್ಯಮಾಡುವ ಅಗತ್ಯವಿದೆ. ಯೇಸು ಸಾರುವ ಮತ್ತು ಕಲಿಸುವ ಕೆಲಸಕ್ಕೆ ನೀಡಿದ ಆದ್ಯತೆಯು ಕೂಡ ಕ್ರಿಸ್ತನ ಮನಸ್ಸಿನಲ್ಲಿ ಸೇರಿದೆ ಎಂಬುದನ್ನು ಗ್ರಹಿಸಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.
ಸಾಕ್ಷಿನೀಡುವಂತೆ ಅವನು ಇತರರನ್ನು ಪ್ರೋತ್ಸಾಹಿಸಿದನು
9. ಸಾರುವ ಮತ್ತು ಕಲಿಸುವ ಚಟುವಟಿಕೆಗೆ ಯಾರು ಆದ್ಯತೆಯನ್ನು ಕೊಡಬೇಕಾಗಿತ್ತು?
9 ಪ್ರೀತಿ ಮತ್ತು ಕನಿಕರದ ಅಭಿವ್ಯಕ್ತಿಯಾಗಿ ಸಾರುವ ಮತ್ತು ಕಲಿಸುವ ಕೆಲಸಕ್ಕೆ ನೀಡಲ್ಪಡುವ ಆದ್ಯತೆಯು, ಕೇವಲ ಯೇಸುವಿಗೆ ಮಾತ್ರ ಸೀಮಿತವಾಗಿರಲಿಲ್ಲ. ಅವನು ತನ್ನ ಹಿಂಬಾಲಕರಿಗೆ ತನ್ನ ಹೇತುಗಳು, ಆದ್ಯತೆಗಳು, ಮತ್ತು ಕ್ರಿಯೆಗಳನ್ನು ಅನುಕರಿಸುವಂತೆ ಉತ್ತೇಜಿಸಿದನು. ಉದಾಹರಣೆಗೆ, ಯೇಸು ಆರಿಸಿದ ಆ 12 ಅಪೊಸ್ತಲರು ಏನು ಮಾಡಲಿದ್ದರು? ಮಾರ್ಕ 3:14, 15 (NW) ನಮಗೆ ಹೇಳುವುದು: “ಆತನು ಹನ್ನೆರಡು ಮಂದಿಯ ಗುಂಪನ್ನು ರಚಿಸಿ, ಅವರು ಯಾವಾಗಲೂ ತನ್ನೊಂದಿಗೆ ಇರುವುದಕ್ಕಾಗಿಯೂ ಮತ್ತು ತಾನು ಅವರನ್ನು ಸಾರುವುದಕ್ಕಾಗಿಯೂ ಮತ್ತು ದೆವ್ವಗಳನ್ನು ಹೊಡೆದೋಡಿಸಲು ಅಧಿಕಾರವುಳ್ಳವರಾಗಿರುವಂತೆಯೂ ಅವರಿಗೆ ‘ಅಪೊಸ್ತಲರು’ ಎಂಬ ಹೆಸರನ್ನಿಟ್ಟನು.” ಅಪೊಸ್ತಲರು ಅನುಸರಿಸಬೇಕಾಗಿದ್ದ ಆದ್ಯತೆಯನ್ನು ನೀವು ಗ್ರಹಿಸಬಲ್ಲಿರೊ?
10, 11. (ಎ) ಅಪೊಸ್ತಲರನ್ನು ಕಳುಹಿಸುವಾಗ ಏನು ಮಾಡುವಂತೆ ಯೇಸು ಅವರಿಗೆ ಹೇಳಿದನು? (ಬಿ) ಅಪೊಸ್ತಲರನ್ನು ಕಳುಹಿಸುವ ವಿಷಯದಲ್ಲಿ ಮುಖ್ಯ ವಿಷಯವು ಏನಾಗಿತ್ತು?
10 ಕಾಲವು ಗತಿಸಿದಂತೆ, ಯೇಸು ಆ 12 ಮಂದಿಗೆ ಇತರರನ್ನು ಗುಣಪಡಿಸುವ ಮತ್ತು ದೆವ್ವಗಳನ್ನು ಬಿಡಿಸುವ ಸಾಮರ್ಥ್ಯವನ್ನು ನೀಡಿದನು. (ಮತ್ತಾಯ 10:1; ಲೂಕ 9:1) ಅವರನ್ನು “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೆ” ಕಳುಹಿಸಿದನು. ಯಾವ ಕಾರಣಕ್ಕಾಗಿ ಕಳುಹಿಸಿದನು? ಯೇಸು ಅವರಿಗೆ ಹೇಳಿದ್ದು: “ಪರಲೋಕರಾಜ್ಯವು ಸಮೀಪವಾಯಿತೆಂದು ಸಾರಿಹೇಳುತ್ತಾ ಹೋಗಿರಿ. ರೋಗಿಗಳನ್ನು ಸ್ವಸ್ಥಮಾಡಿರಿ, ಸತ್ತವರನ್ನು ಬದುಕಿಸಿರಿ, ಕುಷ್ಠಹತ್ತಿದವರನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ.” (ಮತ್ತಾಯ 10:5-8; ಲೂಕ 9:2) ಅವರು ವಾಸ್ತವದಲ್ಲಿ ಮಾಡಿದ್ದೇನು? “ಅವರು ಹೊರಟು ಹೋಗಿ [1] ಜನರಿಗೆ—ದೇವರ ಕಡೆಗೆ ತಿರುಗಿಕೊಳ್ಳಬೇಕೆಂದು ಸಾರಿ [2] ಅನೇಕ ದೆವ್ವಗಳನ್ನು ಬಿಡಿಸಿ ಅನೇಕ ರೋಗಿಗಳಿಗೆ ಎಣ್ಣೆಹಚ್ಚಿ ವಾಸಿಮಾಡಿದರು.”—ಮಾರ್ಕ 6:12, 13.
11 ಪ್ರತಿಯೊಂದು ವೃತ್ತಾಂತದಲ್ಲಿ ಕಲಿಸುವ ಸಂಗತಿಗೆ ಪ್ರಾಧಾನ್ಯವು ನೀಡಲ್ಪಟ್ಟಿಲ್ಲವಾದುದರಿಂದ, ಮೇಲಿನ ಘಟನಾವಳಿಯ ಕ್ರಮಕ್ಕೆ ಗಮನ ನೀಡುವುದು, ಆದ್ಯತೆಗಳಿಗೆ ಇಲ್ಲವೆ ಅದರಲ್ಲಿ ಸೇರಿರುವ ಉದ್ದೇಶಗಳಿಗೆ ತೀರ ಹೆಚ್ಚು ಮಹತ್ವವನ್ನು ಕೊಡುತ್ತಿರುವಂತೆ ತೋರುವುದಿಲ್ಲವೊ? (ಲೂಕ 10:1-9) ಹಾಗಿದ್ದರೂ, ಗುಣಪಡಿಸುವ ವಿಷಯಕ್ಕಿಂತಲೂ ಅನೇಕ ಬಾರಿ ಕಲಿಸುವ ವಿಷಯಕ್ಕೆ ನೀಡಲ್ಪಟ್ಟಿರುವ ಆದ್ಯತೆಯನ್ನು ನಾವು ಅಲ್ಪವೆಂದೆಣಿಸಬಾರದು. ಈ ಸಂದರ್ಭದ ಪೂರ್ವಾಪರವನ್ನು ಗಮನಿಸಿರಿ. ತನ್ನ 12 ಅಪೊಸ್ತಲರನ್ನು ಕಳುಹಿಸುವ ಮುಂಚೆ, ಯೇಸು ಆ ಜನಸಮೂಹದ ಪರಿಸ್ಥಿತಿಯನ್ನು ಕಂಡು ಬಹಳವಾಗಿ ನೊಂದುಹೋಗಿದ್ದನು. ನಾವು ಓದುವುದು: “ಯೇಸು ಎಲ್ಲಾ ಊರುಗಳನ್ನೂ ಹಳ್ಳಿಪಳ್ಳಿಗಳನ್ನೂ ಸುತ್ತಿಕೊಂಡು ಅವರ ಸಭಾಮಂದಿರಗಳಲ್ಲಿ ಉಪದೇಶ ಮಾಡುತ್ತಾ ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳುತ್ತಾ ಎಲ್ಲಾ ತರದ ರೋಗಗಳನ್ನೂ ಎಲ್ಲಾ ತರದ ಬೇನೆಗಳನ್ನೂ ವಾಸಿಮಾಡುತ್ತಾ ಬಂದನು. ಆದರೆ ಜನರ ಗುಂಪುಗಳನ್ನು ನೋಡಿ ಅವರು ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು. ಆಗ ತನ್ನ ಶಿಷ್ಯರಿಗೆ—ಬೆಳೆಯು ಬಹಳ, ಕೆಲಸದವರು ಸ್ವಲ್ಪ; ಆದದರಿಂದ ಬೆಳೆಯ ಯಜಮಾನನನ್ನು—ನಿನ್ನ ಬೆಳೆಗೆ ಕೆಲಸದವರನ್ನು ಕಳುಹಿಸಬೇಕೆಂದು ಬೇಡಿಕೊಳ್ಳಿರಿ ಎಂದು ಹೇಳಿದನು.”—ಮತ್ತಾಯ 9:35-38.
12. ಯೇಸು ಮತ್ತು ಅಪೊಸ್ತಲರು ಮಾಡಿದಂತಹ ಅದ್ಭುತಕಾರ್ಯಗಳು ಯಾವ ಹೆಚ್ಚಿನ ಉದ್ದೇಶವನ್ನು ಪೂರೈಸಲಿದ್ದವು?
12 ಯೇಸುವಿನ ಜೊತೆಗಿರುವ ಮೂಲಕ, ಅಪೊಸ್ತಲರು ಸ್ವಲ್ಪ ಮಟ್ಟಿಗೆ ಕ್ರಿಸ್ತನ ಮನಸ್ಸನ್ನು ಅರ್ಥಮಾಡಿಕೊಳ್ಳಸಾಧ್ಯವಿತ್ತು. ಜನರ ಕಡೆಗೆ ಅವರು ತೋರಿಸುವಂತಹ ಪ್ರೀತಿ ಮತ್ತು ಕನಿಕರದಲ್ಲಿ, ರಾಜ್ಯದ ಕುರಿತು ಸಾರುವುದು ಮತ್ತು ಕಲಿಸುವುದು ಸೇರಿತ್ತೆಂಬುದನ್ನು ಅವರು ಗ್ರಹಿಸಬಹುದಿತ್ತು. ಇದು ಅವರ ಸತ್ಕಾರ್ಯಗಳ ಮುಖ್ಯ ಭಾಗವಾಗಿರಲಿತ್ತು. ರೋಗಗ್ರಸ್ತರನ್ನು ಗುಣಪಡಿಸುವಂತಹ ಭೌತಿಕ ರೀತಿಯ ಸತ್ಕಾರ್ಯಗಳ ಜೊತೆಗೆ, ಈ ಕೆಲಸವು ಅಗತ್ಯದಲ್ಲಿದ್ದವರಿಗೆ ಕೇವಲ ಸಹಾಯ ಮಾಡುವುದಕ್ಕಿಂತಲೂ ಹೆಚ್ಚಿನದ್ದನ್ನು ಸಾಧಿಸಿತು. ಕೆಲವು ಜನರು ಗುಣಪಡಿಸುವಿಕೆಗಳಿಂದ ಮತ್ತು ಅದ್ಭುತಕರವಾಗಿ ಒದಗಿಸಲ್ಪಡುವ ಆಹಾರದಿಂದ ಆಕರ್ಷಿತರಾಗುತ್ತಾರೆಂಬುದು ನಿಮಗೆ ಗೊತ್ತಿರುವ ಸಂಗತಿಯೇ. (ಮತ್ತಾಯ 4:24, 25; 8:16; 9:32, 33; 14:35, 36; ಯೋಹಾನ 6:26) ಈ ಕಾರ್ಯಗಳು ಶಾರೀರಿಕ ರೀತಿಯಲ್ಲಿ ಸಹಾಯವನ್ನು ಮಾಡುವುದರ ಜೊತೆಗೆ, ಯೇಸು ದೇವರ ಮಗನೆಂದು ಮತ್ತು ಮೋಶೆಯು ಮುಂತಿಳಿಸಿದ್ದ “ಪ್ರವಾದಿ”ಯೆಂದು ಅಲ್ಲಿದ್ದವರು ಗುರುತಿಸುವಂತೆ ಮಾಡಿದವು.—ಯೋಹಾನ 6:14; ಧರ್ಮೋಪದೇಶಕಾಂಡ 18:15.
13. ಧರ್ಮೋಪದೇಶಕಾಂಡ 18:18ರಲ್ಲಿರುವ ಪ್ರವಾದನೆಯು ಬರಲಿರುವ ‘ಪ್ರವಾದಿಯ’ ಯಾವ ಪಾತ್ರಕ್ಕೆ ಒತ್ತುನೀಡಿತು?
13 ಯೇಸು “ಪ್ರವಾದಿ”ಯಾಗಿದ್ದನೆಂಬ ವಿಷಯವು ಏಕೆ ಮಹತ್ವದ್ದಾಗಿತ್ತು? ಅವನು ಯಾವ ಮುಖ್ಯ ಪಾತ್ರವನ್ನು ವಹಿಸುವನೆಂದು ಮುಂತಿಳಿಸಲಾಗಿತ್ತು? “ಪ್ರವಾದಿ”ಯು ಅದ್ಭುತಕರವಾಗಿ ಗುಣಪಡಿಸುವ ಸಂಗತಿಗಾಗಿ ಇಲ್ಲವೆ ಹಸಿದಿರುವವರಿಗೆ ಕನಿಕರದಿಂದ ಆಹಾರವನ್ನು ಒದಗಿಸುವುದಕ್ಕಾಗಿ ಜನಪ್ರಿಯನಾಗಿರಬೇಕಿತ್ತೊ? ಧರ್ಮೋಪದೇಶಕಾಂಡ 18:18 ಮುಂತಿಳಿಸಿದ್ದು: “ಇವರ ಸ್ವದೇಶದವರಲ್ಲಿ ನಿನ್ನಂಥ [ಮೋಶೆ] ಪ್ರವಾದಿಯನ್ನು ಅವರಿಗೋಸ್ಕರ ಏರ್ಪಡಿಸುವೆನು; ಅವನ ಬಾಯಿಂದ ನನ್ನ ಮಾತುಗಳನ್ನು ನುಡಿಸುವೆನು; ನಾನು ಅವನಿಗೆ ಆಜ್ಞಾಪಿಸಿದ್ದನ್ನೆಲ್ಲಾ ಅವನು ಅವರಿಗೆ ತಿಳಿಸುವನು.” ಅಪೊಸ್ತಲರು ಕೋಮಲವಾದ ಭಾವನೆಗಳನ್ನು ಬೆಳೆಸಿಕೊಂಡು, ಅವುಗಳನ್ನು ವ್ಯಕ್ತಪಡಿಸಲು ಕಲಿತುಕೊಂಡರೂ, ತಮ್ಮಲ್ಲಿ ವಿಕಸಿಸಿಕೊಂಡಿರುವ ಕ್ರಿಸ್ತನ ಮನಸ್ಸನ್ನು ಅವರು ತಮ್ಮ ಸಾರುವ ಹಾಗೂ ಕಲಿಸುವ ಕೆಲಸದಿಂದ ಸಹ ಪ್ರದರ್ಶಿಸಬಹುದೆಂದು ತೀರ್ಮಾನಿಸಬಹುದಿತ್ತು. ಅವರು ಜನರಿಗಾಗಿ ಮಾಡಬಹುದಾಗಿದ್ದ ಅತ್ಯುತ್ತಮ ಸಹಾಯವು ಇದೇ ಆಗಿರಲಿತ್ತು. ಹೀಗೆ, ರೋಗಗ್ರಸ್ತರಿಗೆ ಮತ್ತು ಬಡವರಿಗೆ ಆಗುವಂತಹ ಪ್ರಯೋಜನಗಳು ಕೇವಲ ಅಲ್ಪಾಯುಷ್ಯಕ್ಕೆ ಇಲ್ಲವೆ ಒಂದೆರಡು ಊಟಗಳಿಗೆ ಮಾತ್ರ ಸೀಮಿತವಾಗಿರದೆ ಶಾಶ್ವತ ಲಾಭಗಳನ್ನು ತರಸಾಧ್ಯವಿತ್ತು.—ಯೋಹಾನ 6:26-30.
ಇಂದೇ ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಳ್ಳಿರಿ
14. ಕ್ರಿಸ್ತನ ಮನಸ್ಸನ್ನು ಹೊಂದಿರುವುದು ನಮ್ಮ ಸಾರುವ ಕೆಲಸದಲ್ಲಿ ಹೇಗೆ ಒಳಗೂಡಿದೆ?
14 “ನಮಗಾದರೋ ಕ್ರಿಸ್ತನ ಮನಸ್ಸು ದೊರಕಿತು” ಎಂದು ಅಪೊಸ್ತಲ ಪೌಲನು ಯಾರ ಕುರಿತು ಬರೆದನೊ ಆ ಪ್ರಥಮ ಶತಮಾನದವರಿಗೆ, ಅಂದರೆ ಯೇಸುವಿಗೆ ಮತ್ತು ಆದಿ ಶಿಷ್ಯರಿಗೆ ಮಾತ್ರ ಈ ಕ್ರಿಸ್ತನ ಮನಸ್ಸು ಅನ್ವಯಿಸಿತೆಂದು ನಮ್ಮಲ್ಲಿ ಯಾರೊಬ್ಬರೂ ನೆನಸಬಾರದು. (1 ಕೊರಿಂಥ 2:16) ನಮಗೆ ಸುವಾರ್ತೆಯನ್ನು ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಹಂಗಿದೆ ಎಂಬುದನ್ನು ನಾವು ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು. (ಮತ್ತಾಯ 24:14; 28:19, 20) ಹಾಗಿದ್ದರೂ, ಆ ಕೆಲಸವನ್ನು ನಾವು ಯಾವ ಉದ್ದೇಶದಿಂದ ಮಾಡುತ್ತಿದ್ದೇವೆ ಎಂಬುದರ ಬಗ್ಗೆ ಪರ್ಯಾಲೋಚಿಸುವುದು ಒಳ್ಳೆಯದು. ಅದು ಮಾಡಲೇಬೇಕಾದ ಒಂದು ಕರ್ತವ್ಯ ಎಂಬ ಮನೋಭಾವ ನಮಗೆ ಇರಬಾರದು. ನಾವು ಶುಶ್ರೂಷೆಯಲ್ಲಿ ಭಾಗವಹಿಸುವ ಮುಖ್ಯ ಕಾರಣವು ದೇವರ ಮೇಲಿನ ಪ್ರೀತಿಯಾಗಿರಬೇಕು, ಮತ್ತು ಕನಿಕರದಿಂದ ಪ್ರಚೋದಿತರಾಗಿ ಸಾರುವ ಮತ್ತು ಕಲಿಸುವ ಕೆಲಸದಲ್ಲಿ ಒಳಗೂಡುವ ಮೂಲಕ ನಾವು ನಿಜವಾಗಿಯೂ ಯೇಸುವಿನಂತೆ ಇರಸಾಧ್ಯವಿದೆ.—ಮತ್ತಾಯ 22:37-39.
15. ಕನಿಕರವು ನಮ್ಮ ಸಾರ್ವಜನಿಕ ಶುಶ್ರೂಷೆಯ ಯೋಗ್ಯವಾದ ಭಾಗವಾಗಿದೆ ಏಕೆ?
15 ನಮ್ಮ ನಂಬಿಕೆಗಳಿಗೆ ಬೆಲೆಕೊಡದಂತಹ ಜನರಿಂದ ನಾವು ತಾತ್ಸಾರ, ತಿರಸ್ಕಾರ, ಇಲ್ಲವೆ ವಿರೋಧವನ್ನು ಎದುರಿಸುವಾಗ, ಅವರಿಗಾಗಿ ಕನಿಕರವುಳ್ಳವರಾಗಿರುವುದು ತೀರ ಕಷ್ಟಕರ. ಆದರೂ, ಜನರಿಗಾಗಿ ನಮ್ಮಲ್ಲಿ ಪ್ರೀತಿ ಮತ್ತು ಕನಿಕರವು ಇಲ್ಲದೆ ಹೋಗುವಲ್ಲಿ, ಕ್ರೈಸ್ತ ಶುಶ್ರೂಷೆಯಲ್ಲಿ ಭಾಗವಹಿಸಲು ಬೇಕಾದ ಆವಶ್ಯಕ ಪ್ರಚೋದನೆಯನ್ನು ನಾವು ಕಳೆದುಕೊಳ್ಳಸಾಧ್ಯವಿದೆ. ಹಾಗಾದರೆ, ನಾವು ಕನಿಕರವನ್ನು ಹೇಗೆ ಬೆಳೆಸಿಕೊಳ್ಳಬಹುದು? ಯೇಸು ಜನರನ್ನು ಹೇಗೆ “ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿ”ದ್ದವರೆಂದು ಗ್ರಹಿಸಿದನೊ, ಹಾಗೆಯೇ ನಾವು ಸಹ ವೀಕ್ಷಿಸಬೇಕು. (ಮತ್ತಾಯ 9:36) ಇಂದು ಅನೇಕರು ಇದೇ ರೀತಿಯ ಪರಿಸ್ಥಿತಿಯಲ್ಲಿದ್ದಾರಲ್ಲವೊ? ಅವರು ಸುಳ್ಳು ಧಾರ್ಮಿಕ ಕುರುಬರಿಂದ ಕಡೆಗಣಿಸಲ್ಪಟ್ಟಿದ್ದಾರೆ ಮತ್ತು ಆತ್ಮಿಕವಾಗಿ ಕುರುಡುಗೊಳಿಸಲ್ಪಟ್ಟಿದ್ದಾರೆ. ಈ ಕಾರಣ, ಬೈಬಲಿನಲ್ಲಿರುವ ಹಿತಕರವಾದ ಮಾರ್ಗದರ್ಶನದ ಕುರಿತಾಗಲಿ, ಇಲ್ಲವೆ ದೇವರ ರಾಜ್ಯವು ಬಹು ಬೇಗನೆ ಈ ಭೂಮಿಗೆ ತರಲಿರುವ ಪ್ರಮೋದವನದಂತಹ ಪರಿಸ್ಥಿತಿಗಳ ಕುರಿತಾಗಲಿ ಅವರಿಗೆ ಏನೂ ಗೊತ್ತಿರುವುದಿಲ್ಲ. ರಾಜ್ಯದ ನಿರೀಕ್ಷೆಯಿಲ್ಲದೆ ಅವರು ಬಡತನ, ಕೌಟುಂಬಿಕ ವೈಮನಸ್ಸು, ಅನಾರೋಗ್ಯ ಮತ್ತು ಮರಣದಂತಹ ದೈನಂದಿನ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವರಿಗೆ ಬೇಕಾದ ನಿರೀಕ್ಷೆ ನಮ್ಮಲ್ಲಿದೆ. ಅದು, ಸ್ವರ್ಗದಲ್ಲಿ ಈಗ ಸ್ಥಾಪಿತವಾಗಿರುವ ದೇವರ ರಾಜ್ಯದ ಜೀವದಾಯಕ ಸುವಾರ್ತೆಯೇ ಆಗಿದೆ!
16. ನಾವು ಇತರರೊಂದಿಗೆ ಸುವಾರ್ತೆಯನ್ನು ಹಂಚಿಕೊಳ್ಳಲು ಏಕೆ ಬಯಸಬೇಕು?
16 ನಿಮ್ಮ ಸುತ್ತಲಿರುವ ಜನರ ಆತ್ಮಿಕ ಅಗತ್ಯಗಳ ಕುರಿತು ನೀವು ಚಿಂತಿಸುವಾಗ, ದೇವರ ಪ್ರೀತಿಪರ ಉದ್ದೇಶದ ಕುರಿತು ಅವರಿಗೆ ಹೇಳಲು ನಿಮ್ಮಿಂದ ಸಾಧ್ಯವಾದುದನ್ನು ಮಾಡುವಂತೆ ನಿಮ್ಮ ಹೃದಯವು ನಿಮ್ಮನ್ನು ಪ್ರಚೋದಿಸುವುದಿಲ್ಲವೊ? ಹೌದು, ನಮ್ಮ ಕೆಲಸವು ಕನಿಕರದ ಕೆಲಸವಾಗಿದೆ. ಯೇಸುವಿನಂತೆ ನಮಗೂ ಜನರ ಬಗ್ಗೆ ಸಹಾನುಭೂತಿಯಿರುವಾಗ, ಅದು ನಮ್ಮ ಧ್ವನಿಯಿಂದ, ಮುಖಭಾವದಿಂದ, ಮತ್ತು ಕಲಿಸುವ ವಿಧಾನದಿಂದ ಸ್ಪಷ್ಟವಾಗಿ ತೋರಿಬರುವುದು. ಯಾರು ‘ನಿತ್ಯಜೀವಕ್ಕೆ ಯೋಗ್ಯರಾಗಿ’ ಎಣಿಸಲ್ಪಡುತ್ತಾರೊ ಅಂತಹವರು ನಮ್ಮ ಸಂದೇಶದಿಂದ ಆಕರ್ಷಿತರಾಗುವಂತೆ ಇದೆಲ್ಲವೂ ಸಹಾಯಮಾಡುವುದು.—ಅ. ಕೃತ್ಯಗಳು 13:48.
17. (ಎ) ಇತರರಿಗೆ ನಮ್ಮ ಪ್ರೀತಿ ಮತ್ತು ಕನಿಕರವನ್ನು ತೋರಿಸಬಹುದಾದ ಕೆಲವು ಮಾರ್ಗಗಳಾವುವು? (ಬಿ) ಸತ್ಕಾರ್ಯಗಳನ್ನು ಮಾಡುವ ಇಲ್ಲವೆ ಸಾರ್ವಜನಿಕ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಂತಹ ಭಿನ್ನ ವಿಷಯಗಳಲ್ಲಿ ನಾವು ಒಂದನ್ನು ಆರಿಸಿಕೊಳ್ಳಲು ಸಾಧ್ಯವಿಲ್ಲ ಏಕೆ?
17 ನಾವು ನಮ್ಮ ಜೀವಿತದುದ್ದಕ್ಕೂ ಪ್ರೀತಿ ಮತ್ತು ಕನಿಕರವನ್ನು ತೋರಿಸುವವರಾಗಿರಬೇಕು. ಸುಖಸೌಕರ್ಯಗಳಿಲ್ಲದವರಿಗೆ, ರೋಗಗ್ರಸ್ತರಿಗೆ, ಮತ್ತು ಬಡವರಿಗೆ ದಯೆತೋರಿಸುತ್ತಾ, ಅವರು ಪಡುವ ಪಾಡನ್ನು ಕಡಿಮೆಗೊಳಿಸಲು ನಮ್ಮಿಂದ ಸಾಧ್ಯವಾದುದನ್ನು ಮಾಡುವುದು ಇದರಲ್ಲಿ ಸೇರಿದೆ. ಮರಣದಲ್ಲಿ ತಮ್ಮ ಪ್ರಿಯರನ್ನು ಕಳೆದುಕೊಂಡಿರುವವರ ದುಃಖವನ್ನು ನಮ್ಮ ನಡೆನುಡಿಗಳಿಂದ ಹೋಗಲಾಡಿಸುವುದು ಇದರ ಒಂದು ಭಾಗವಾಗಿದೆ. (ಲೂಕ 7:11-15; ಯೋಹಾನ 11:33-35) ಆದರೂ, ಕೆಲವು ಲೋಕೋಪಕಾರಿಗಳಂತೆ, ಪ್ರೀತಿ, ದಯೆ ಮತ್ತು ಕನಿಕರದ ಇಂತಹ ಪ್ರದರ್ಶನಗಳೇ ನಮ್ಮ ಸತ್ಕಾರ್ಯಗಳ ಕೇಂದ್ರಬಿಂದುವಾಗಿರಬಾರದು. ಅದರ ಬದಲು, ಇಂತಹದ್ದೇ ದೈವಿಕ ಗುಣಗಳಿಂದ ಪ್ರಚೋದಿಸಲ್ಪಟ್ಟರೂ, ಕ್ರೈಸ್ತ ಸಾರುವಿಕೆ ಮತ್ತು ಕಲಿಸುವಿಕೆಯಿಂದ ಪ್ರದರ್ಶಿಸಲ್ಪಟ್ಟ ಪ್ರಯತ್ನಗಳು ಮಾತ್ರವೇ ಸದಾ ಮಹತ್ವವುಳ್ಳದ್ದಾಗಿವೆ. ಯೇಸು ಯೆಹೂದಿ ಧಾರ್ಮಿಕ ನಾಯಕರ ಬಗ್ಗೆ ಹೇಳಿದ ವಿಷಯವನ್ನು ಜ್ಞಾಪಿಸಿಕೊಳ್ಳಿರಿ: “ನೀವು ಮರುಗ ಸೋಪು ಜೀರಿಗೆಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ, ಆದರೆ ಧರ್ಮ ಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ. ಇವುಗಳನ್ನು ಮಾಡಬೇಕಾಗಿತ್ತು; ಅವುಗಳನ್ನೂ ಬಿಡಬಾರದು.” (ಮತ್ತಾಯ 23:23) ಜನರ ಶಾರೀರಿಕ ಅಗತ್ಯಗಳನ್ನು ಪೂರೈಸುವ ಇಲ್ಲವೆ ಅವರಿಗೆ ಜೀವದಾಯಕ ಆತ್ಮಿಕ ವಿಷಯಗಳನ್ನು ಕಲಿಸುವ ಎರಡು ವಿಷಯಗಳಲ್ಲಿ ಯೇಸು ಒಂದನ್ನು ಮಾತ್ರ ಆರಿಸಿಕೊಳ್ಳಲಿಲ್ಲ. ಅವನು ಎರಡನ್ನೂ ಮಾಡಿದನು. ಆದರೂ ಅವನು ಕಲಿಸುವಿಕೆಗೆ ಹೆಚ್ಚಿನ ಪ್ರಾಧಾನ್ಯವನ್ನು ನೀಡಿದನೆಂಬುದು ಸ್ಪಷ್ಟ, ಏಕೆಂದರೆ ಈ ರೀತಿಯಲ್ಲಿ ಮಾಡಿದಂತಹ ಒಳಿತು ಅನಂತ ಪ್ರಯೋಜನಗಳನ್ನು ತರಲು ಸಹಾಯಮಾಡುವುದು.—ಯೋಹಾನ 20:16.
18. ಕ್ರಿಸ್ತನ ಮನಸ್ಸಿನ ಪರಿಗಣನೆಯು ನಮ್ಮನ್ನು ಏನು ಮಾಡುವಂತೆ ಪ್ರಚೋದಿಸಬೇಕು?
18 ಕ್ರಿಸ್ತನ ಮನಸ್ಸನ್ನು ನಮಗೆ ಪ್ರಕಟಿಸಿರುವುದಕ್ಕಾಗಿ ನಾವು ಯೆಹೋವನಿಗೆ ಎಷ್ಟು ಆಭಾರಿಗಳಾಗಿದ್ದೇವೆ! ಸುವಾರ್ತೆಯ ವೃತ್ತಾಂತಗಳ ಮುಖಾಂತರ, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷನ ವಿಚಾರಗಳು, ಭಾವನೆಗಳು, ಗುಣಗಳು, ಚಟುವಟಿಕೆಗಳು, ಮತ್ತು ಆದ್ಯತೆಗಳ ಕುರಿತು ನಾವು ಉತ್ತಮವಾಗಿ ತಿಳಿದುಕೊಳ್ಳಬಲ್ಲೆವು. ಹೀಗೆ, ಯೇಸುವಿನ ಕುರಿತು ಬೈಬಲು ಪ್ರಕಟಿಸುವಂತಹ ವಿಷಯಗಳನ್ನು ಓದಿ, ಮನನ ಮಾಡಿ, ಅವುಗಳನ್ನು ಕಾರ್ಯರೂಪಕ್ಕೆ ತರುವುದು ನಮ್ಮ ಕೈಯಲ್ಲಿದೆ. ನಾವು ಯೇಸುವಿನಂತೆ ಕ್ರಿಯೆಗೈಯಬೇಕಾದರೆ, ಅಪರಿಪೂರ್ಣ ಮಾನವರಿಂದ ಸಾಧ್ಯವಾಗುವಷ್ಟರ ಮಟ್ಟಿಗೆ ನಾವು ಅವನಂತೆ ಯೋಚಿಸಲು, ಭಾವಿಸಲು ಮತ್ತು ವಿಷಯಗಳ ಯೋಗ್ಯತೆ ನಿರ್ಧರಿಸಲು ಕಲಿತುಕೊಳ್ಳಬೇಕು. ಆದದುರಿಂದ, ನಾವು ಕ್ರಿಸ್ತನ ಮನಸ್ಸನ್ನು ಬೆಳೆಸಿಕೊಂಡು, ಅದರ ಪ್ರಕಾರ ನಡೆಯಲು ನಿಶ್ಚಯಿಸೋಣ. ನಮಗೆ ಜೀವಿಸುವ ಬೇರೊಂದು ಉತ್ತಮ ಮಾರ್ಗವು ಇರದಂತೆಯೇ, ಜನರನ್ನು ಉಪಚರಿಸುವ ಮತ್ತು ಯೇಸು ಪರಿಪೂರ್ಣವಾಗಿ ಪ್ರತಿಬಿಂಬಿಸಿದ ಆ ನಮ್ಮ ಕೋಮಲ ದೇವರಾದ ಯೆಹೋವನ ಬಳಿಗೆ ನಾವೂ ಮತ್ತು ಇತರರೂ ಸೆಳೆಯಲ್ಪಡುವಂತಹ ಉತ್ತಮ ಮಾರ್ಗ ಬೇರೊಂದು ಇರುವುದಿಲ್ಲ.—2 ಕೊರಿಂಥ 1:3; ಇಬ್ರಿಯ 1:3.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
• ಅಗತ್ಯದಲ್ಲಿದ್ದ ಜನರ ಕಡೆಗೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತೆಂಬುದರ ಕುರಿತು ಬೈಬಲ್ ಯಾವ ಒಳನೋಟವನ್ನು ನೀಡುತ್ತದೆ?
• ಯೇಸು ತನ್ನ ಹಿಂಬಾಲಕರಿಗೆ ಮಾರ್ಗದರ್ಶನ ನೀಡುವಾಗ ಯಾವ ವಿಷಯವನ್ನು ಒತ್ತಿಹೇಳಿದನು?
• ನಮ್ಮ ಚಟುವಟಿಕೆಗಳಲ್ಲಿ ನಾವು ‘ಕ್ರಿಸ್ತನ ಮನಸ್ಸನ್ನು’ ಹೇಗೆ ಪ್ರದರ್ಶಿಸಬಲ್ಲೆವು?
[ಪುಟ 23ರಲ್ಲಿ ಇಡೀ ಪುಟದ ಚಿತ್ರ]
[ಪುಟ 24ರಲ್ಲಿರುವ ಚಿತ್ರ]
ಕ್ರೈಸ್ತರು ಇತರರಿಗಾಗಿ ಮಾಡಸಾಧ್ಯವಿರುವ ಅತ್ಯಂತ ಒಳ್ಳೇ ಕಾರ್ಯವು ಯಾವುದಾಗಿದೆ?