ಅಧ್ಯಾಯ 53
ಅಪೇಕ್ಷಿತ ಮನುಷ್ಯಾತೀತ ಪ್ರಭು
ಯೇಸು ಅದ್ಭುತಕರವಾಗಿ ಸಾವಿರಾರು ಮಂದಿಗೆ ಊಟವನ್ನು ಒದಗಿಸಿದಾಗ ಜನರಿಗೆ ಆಶ್ಚರ್ಯ ಉಂಟಾಗುತ್ತದೆ. “ಲೋಕಕ್ಕೆ ಬರಬೇಕಾದ ಪ್ರವಾದಿ ಈತನೇ ನಿಜ” ಎಂದು ಅವರು ಹೇಳುತ್ತಾರೆ. ಯೇಸು ಮೋಶೆಗಿಂತ ದೊಡ್ಡ ಪ್ರವಾದಿ ಮಾತ್ರವೇ ಅಲ್ಲ, ಅವನು ಅತ್ಯಪೇಕ್ಷಣೀಯ ಪ್ರಭುವೂ ಆಗಬಲ್ಲನೆಂದು ಅವರು ತೀರ್ಮಾನಿಸುತ್ತಾರೆ. ಆದ್ದರಿಂದ ಅವನನ್ನು ಹಿಡಿದು ಅರಸನಾಗಿ ಮಾಡಲು ಹಂಚಿಕೆ ಮಾಡುತ್ತಾರೆ.
ಆದರೆ ಯೇಸುವಿಗೆ ಅವರ ಹಂಚಿಕೆ ತಿಳಿಯುತ್ತದೆ. ಅವರಿಂದ ಬಲಾತ್ಕರಿಸಲ್ಪಡುವುದನ್ನು ತಪ್ಪಿಸಲು ಅವನು ಅಲ್ಲಿಂದ ಬೇಗನೇ ಹೊರಡುತ್ತಾನೆ. ಜನರನ್ನು ಹೋಗಲು ಹೇಳಿ, ತನ್ನ ಶಿಷ್ಯರನ್ನು ಹಿಂದೆ ಕಪೆರ್ನೌಮಿಗೆ ದೋಣಿಯಲ್ಲಿ ಹೋಗುವಂತೆ ಒತ್ತಾಯ ಪಡಿಸುತ್ತಾನೆ. ಅವನು ನಂತರ ತಾನು ಪ್ರಾರ್ಥನೆಗಾಗಿ ಬೆಟ್ಟಕ್ಕೆ ಹಿಂದೆ ಸರಿಯುತ್ತಾನೆ. ಆ ರಾತ್ರಿ ಯೇಸು ಅಲ್ಲಿ ಒಂಟಿಗನಾಗಿರುತ್ತಾನೆ.
ಅರುಣೋದಯಕ್ಕೆ ತುಸು ಮೊದಲು ಯೇಸು ತನ್ನ ಎತ್ತರವಾದ ಅನುಕೂಲ ಸ್ಥಳದಿಂದ ಬಲವಾದ ಗಾಳಿಯು ಸಮುದ್ರದಲ್ಲಿ ತೆರೆಗಳನ್ನು ಎಬ್ಬಿಸುವುದನ್ನು ಗಮನಿಸುತ್ತಾನೆ. ಸಮಯವು ಪಸ್ಕಕ್ಕೆ ಸಮೀಪವಾಗಿರುವುದರಿಂದ, ಅಧಿಕಾಂಶ ಹುಣ್ಣಿಮೆಯ ಬೆಳಕಿನಲ್ಲಿ ತನ್ನ ಶಿಷ್ಯರಿರುವ ದೋಣಿ ಅಲೆಗಳ ವಿರುದ್ಧ ಮುಂದುವರಿಯಲು ಹೋರಾಡುವುದನ್ನು ನೋಡುತ್ತಾನೆ. ಶಿಷ್ಯರು ತಮ್ಮ ಶಕ್ತಿಯನ್ನೆಲ್ಲಾ ಹಾಕಿ ಹುಟ್ಟುಹಾಕುತ್ತಿದ್ದಾರೆ.
ಇದನ್ನು ನೋಡಿದ ಯೇಸು, ಬೆಟ್ಟದಿಂದ ಇಳಿದು ತೆರೆಗಳ ನಡುವೆ ದೋಣಿಯ ಕಡೆಗೆ ನಡೆದು ಹೋಗುತ್ತಾನೆ. ಮೂರು ಅಥವಾ ನಾಲ್ಕು ಮೈಲುಗಳಷ್ಟು ದೂರ ನಡೆದು ಅವನು ಶಿಷ್ಯರ ಬಳಿ ತಲಪುತ್ತಾನೆ. ಆದರೆ, ಅವರನ್ನು ದಾಟಿ ಹೋಗುತ್ತಾನೋ ಎಂಬಂತೆ ಅವನು ಮುಂದುವರಿಯುತ್ತಾನೆ. ಅವರು ಅವನನ್ನು ನೋಡಿ “ಭೂತ”ವೆಂದು ಕೂಗುತ್ತಾರೆ!
ಯೇಸು ಶಾಮಕವಾಗಿ, “ನಾನು, ಅಂಜಬೇಡಿರಿ” ಎಂದು ಉತ್ತರ ಕೊಡುತ್ತಾನೆ.
ಆದರೆ ಪೇತ್ರನು, “ಸ್ವಾಮೀ, ನೀನೇಯಾದರೆ ನನಗೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು” ಎಂದು ಹೇಳುತ್ತಾನೆ.
“ಬಾ” ಎನ್ನುತ್ತಾನೆ ಯೇಸು.
ಆಗ ಪೇತ್ರನು ದೋಣಿಯಿಂದ ಇಳಿದು ನೀರಿನ ಮೇಲಿಂದ ಯೇಸುವಿನ ಬಳಿ ನಡೆಯುತ್ತಾನೆ. ಆದರೆ ಬಿರುಗಾಳಿಯನ್ನು ನೋಡಿ, ಪೇತ್ರನು ಗಾಬರಿಗೊಂಡು ಮುಳುಗ ತೊಡಗಿದಾಗ, “ಸ್ವಾಮೀ, ನನ್ನನ್ನು ಕಾಪಾಡು” ಎಂದು ಕೂಗುತ್ತಾನೆ!
ಒಡನೆ ಕೈಚಾಚಿ, ಯೇಸು ಅವನನ್ನು ಹಿಡಿದು, “ಅಲ್ಪ ವಿಶ್ವಾಸಿಯೇ, ಯಾಕೆ ಸಂದೇಹಪಟ್ಟೆ?” ಎಂದು ಕೇಳುತ್ತಾನೆ.
ಪೇತ್ರನೂ ಯೇಸುವೂ ದೋಣಿ ಹತ್ತಿದಾಗ, ಗಾಳಿ ನಿಲ್ಲುತ್ತದೆ. ಶಿಷ್ಯರು ಬೆರಗಾಗುತ್ತಾರೆ. ಅವರು ಬೆರಗಾಗಬೇಕೋ? ಅವರು, ಕೆಲವೇ ತಾಸುಗಳ ಮೊದಲು, ಐದು ರೊಟ್ಟಿ ಮತ್ತು ಎರಡು ಚಿಕ್ಕ ಮೀನುಗಳ ಮೂಲಕ ಸಾವಿರಾರು ಜನರಿಗೆ ಉಣಿಸಿದ ಆ ದೊಡ್ಡ ಅದ್ಭುತವನ್ನು ಗಣ್ಯಮಾಡಿ “ರೊಟ್ಟಿಯ ವಿಷಯವಾದ ಮಹತ್ಕಾರ್ಯವನ್ನು” ಗ್ರಹಿಸುತ್ತಿದ್ದರೆ ಅವನು ನೀರಿನ ಮೇಲೆ ನಡೆಯುವದು ಮತ್ತು ಗಾಳಿ ನಿಲ್ಲುವಂತೆ ಮಾಡಿದ್ದು ಅವರಿಗೆ ಅಷ್ಟೊಂದು ಆಶ್ಚರ್ಯಕರವಾಗಿ ಕಂಡುಬರಬಾರದಾಗಿತ್ತು. ಆದರೆ ಈಗ ಶಿಷ್ಯರು ಅವನಿಗೆ ನಮಸ್ಕರಿಸಿ, “ನಿಜವಾಗಿ ನೀನು ದೇವರ ಕುಮಾರನು” ಎಂದು ಹೇಳುತ್ತಾರೆ.
ಸ್ವಲ್ಪದರಲ್ಲಿ, ಅವರು ಕಪೆರ್ನೌಮಿನ ಸಮೀಪವಿದ್ದ ಸುಂದರವೂ ಫಲವತ್ತೂ ಆದ ಗೆನೆಜರೇತನ್ನು ಮುಟ್ಟುತ್ತಾರೆ. ಅಲ್ಲಿ ಅವರು ದೋಣಿಗೆ ಲಂಗರು ಹಾಕುತ್ತಾರೆ. ಆದರೆ ಅವರು ತೀರ ಸೇರಿದಾಗ ಜನರು ಯೇಸುವನ್ನು ಗುರುತಿಸಿ, ಸುತ್ತಲಿನ ಪ್ರದೇಶಗಳಿಗೆ ರೋಗಿಗಳನ್ನು ಕಂಡು ಹಿಡಿಯಲು ಹೋಗುತ್ತಾರೆ. ಅವರನ್ನು ಮಂಚದ ಮೇಲೆ ಹೊತ್ತುಕೊಂಡು ಬರಲಾಗಿ, ಅವರು ಯೇಸುವಿನ ಹೊರಉಡುಪಿನ ಅಂಚನ್ನು ಮುಟ್ಟಿದಾಗಲೂ ಅವರು ಪೂರ್ತಿ ಸ್ವಸ್ಥರಾಗುತ್ತಾರೆ.
ಮರುದಿನ ಸಾವಿರಾರು ಜನರಿಗೆ ಉಣಿಸಿದ ಅದ್ಭುತವನ್ನು ನೋಡಿದ ಜನರ ಗುಂಪು ಯೇಸು ಅಲ್ಲಿಲ್ಲ ಎಂದು ಕಂಡು ಹಿಡಿಯುತ್ತದೆ. ಆದುದರಿಂದ ತಿಬೇರಿಯದಿಂದ ಚಿಕ್ಕ ದೋಣಿಗಳು ಬಂದಾಗ ಅವರು ಅವುಗಳನ್ನು ಹತ್ತಿ ಯೇಸುವನ್ನು ಹುಡುಕಲು ಕಪೆರ್ನೌಮಿಗೆ ಬರುತ್ತಾರೆ. ಅವನನ್ನು ಕಂಡು ಹಿಡಿದಾಗ, ಅವರು, “ಗುರುವೇ, ಯಾವಾಗ ಇಲ್ಲಿಗೆ ಬರೋಣವಾಯಿತು?” ಎಂದು ಕೇಳುತ್ತಾರೆ. ಆಗ, ನಾವು ಬೇಗನೇ ನೋಡಲಿರುವಂತೆ, ಯೇಸು ಅವರನ್ನು ಗದರಿಸುತ್ತಾನೆ. ಯೋಹಾನ 6:14-25; ಮತ್ತಾಯ 14:22-36; ಮಾರ್ಕ 6:45-56.
▪ ಯೇಸು ಸಾವಿರಾರು ಜನರಿಗೆ ಅದ್ಭುತಕರವಾಗಿ ಉಣಿಸಿದ ಮೇಲೆ ಜನರು ಅವನಿಗೆ ಏನು ಮಾಡ ಬಯಸುತ್ತಾರೆ?
▪ ತಾನು ಹೋಗಿದ್ದ ಬೆಟ್ಟದಿಂದ ಯೇಸು ಏನು ನೋಡುತ್ತಾನೆ, ಮತ್ತು ಆಗ ಅವನೇನು ಮಾಡುತ್ತಾನೆ?
▪ ಶಿಷ್ಯರು ಇದರಿಂದ ಏಕೆ ಬೆರಗಾಗಬಾರದಿತ್ತು?
▪ ಅವರು ದಡ ಮುಟ್ಟಿದ ಬಳಿಕ ಏನಾಗುತ್ತದೆ?