ಅಧ್ಯಾಯ 57
ಪೀಡಿತರಿಗಾಗಿ ಕನಿಕರ
ಯೇಸು ಫರಿಸಾಯರನ್ನು ಅವರ ಸ್ವಾರ್ಥಸಾಧಕ ಸಂಪ್ರದಾಯಗಳಿಗಾಗಿ ಖಂಡಿಸಿದ ಬಳಿಕ ಶಿಷ್ಯರೊಂದಿಗೆ ಅಲ್ಲಿಂದ ಹೊರಟು ಹೋಗುತ್ತಾನೆ. ಅದಕ್ಕೆ ಸ್ವಲ್ಪ ಮುಂಚೆ, ನಿಮಗೆ ನೆನಪಿರುವಂತೆ, ದೂರಹೋಗಿ ಸ್ವಲ್ಪ ದಣಿವಾರಿಸಿಕೊಳ್ಳುವ ಅವನ ಪ್ರಯತ್ನವು ಜನರ ಗುಂಪು ಅವನನ್ನು ಕಂಡುಕೊಂಡಾಗ ವಿಫಲವಾಗಿತ್ತು. ಈಗ ತನ್ನ ಶಿಷ್ಯರೊಂದಿಗೆ ಆತನು, ಉತ್ತರಕ್ಕೆ ಅನೇಕ ಮೈಲುಗಳ ದೂರದಲ್ಲಿರುವ ತೂರ್ ಮತ್ತು ಸಿದೋನ್ ಸೀಮೆಗಳಿಗೆ ಹೋಗುತ್ತಾನೆ. ಇಸ್ರೇಲಿನ ಸೀಮೆಗಳಾಚೆ ತನ್ನ ಶಿಷ್ಯರೊಂದಿಗೆ ಯೇಸು ಮಾಡಿದ್ದ ಒಂದೇ ಸಂಚಾರವು ಇದೆಂಬದು ವ್ಯಕ್ತ.
ಉಳುಕೊಳ್ಳಲು ಒಂದು ಮನೆಯನ್ನು ಕಂಡುಕೊಂಡ ಬಳಿಕ ಯೇಸುವು, ತಮ್ಮ ಸುಳಿವು ಯಾರಿಗೂ ಗೊತ್ತಾಗದಿರುವಂತೆ ತಿಳಿಯಪಡಿಸಿದನು. ಆದರೂ, ಆ ಇಸ್ರಾಯೇಲ್ಯೇತರ ಕ್ಷೇತ್ರದಲ್ಲೂ, ಆತನು ಗುಪ್ತವಾಗಿರುವುದಕ್ಕೆ ಆಗದೆ ಹೋಯಿತು. ಇಲ್ಲಿ ಸಿರಿಯದ ಫಿನಿಶಿಯದಲ್ಲಿ ಜನಿಸಿದ್ದ ಒಬ್ಬ ಗ್ರೀಕ್ ಹೆಂಗಸು ಅವನನ್ನು ಕಂಡುಹಿಡಿದು, ಬೇಡುತ್ತಾ, “ಸ್ವಾಮೀ, ದಾವೀದನ ಕುಮಾರನೇ, ನನ್ನನ್ನು ಕರುಣಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ” ಅನ್ನುತ್ತಾಳೆ. ಆದರೆ ಯೇಸು ಅವಳಿಗೆ ಏನೂ ಉತ್ತರ ಕೊಡುವುದಿಲ್ಲ.
ಕಟ್ಟಕಡೆಗೆ ಅವನ ಶಿಷ್ಯರು, ಯೇಸುವಿಗೆ ಹೀಗನ್ನುತ್ತಾರೆ: “ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ; ಆಕೆಯನ್ನು ಕಳುಹಿಸಿಬಿಡು.” ಅವಳನ್ನು ಗಣನೆಗೆ ತಾರದಿರುವದಕ್ಕೆ ಕಾರಣ ತಿಳಿಸುತ್ತಾ ಯೇಸು, ಅಂದದ್ದು: “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದವರ ಬಳಿಗೇ ಹೊರತು ಮತ್ತಾರ ಬಳಿಗೂ ನಾನು ಕಳುಹಿಸಲ್ಪಟ್ಟವನಲ್ಲ.”
ಆದರೂ ಆ ಸ್ತ್ರೀ ಬಿಟ್ಟುಕೊಡುವುದಿಲ್ಲ. ಆಕೆ ಬಂದು ಯೇಸುವಿಗೆ ಅಡ್ಡಬಿದ್ದು, “ಸ್ವಾಮೀ, ನನಗೆ ಅನುಗ್ರಹ ಮಾಡಬೇಕು” ಎಂದು ಬೇಡುತ್ತಾಳೆ.
ಆ ಸ್ತ್ರೀಯ ಪ್ರಾಮಾಣಿಕ ವಿನಂತಿಯಿಂದಾಗಿ ಯೇಸುವಿನ ಹೃದಯವೆಷ್ಟು ಮಿಡಿದಿರಬೇಕು! ಆದರೂ ಅವನು, ದೇವ ಜನರಾದ ಇಸ್ರಾಯೇಲ್ಯರ ಶುಶ್ರೂಷೆಯೆಡೆಗೆ ತನಗಿರುವ ಪ್ರಥಮ ಜವಾಬ್ದಾರಿಕೆಗೆ ಪುನಃ ಕೈ ತೋರಿಸುತ್ತಾನೆ. ಅದೇ ಸಮಯದಲ್ಲಿ, ಅವಳ ನಂಬಿಕೆಯನ್ನು ಪರೀಕ್ಷಿಸಲಿಕ್ಕೋ ಎಂಬಂತೆ, ಪರ ರಾಷ್ಟ್ರಗಳವರ ಕಡೆಗೆ ಯೆಹೂದ್ಯರ ದುರಭಿಮಾನದ ವೀಕ್ಷಣೆಯನ್ನು ಆತನು ತಿಳಿಸುತ್ತಾ, ತರ್ಕಿಸಿದ್ದು: “ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿ ಮರಿಗಳಿಗೆ ಹಾಕುವುದು ಸರಿಯಲ್ಲ.”
ತನ್ನ ಕನಿಕರದ ಧ್ವನಿ ಮತ್ತು ಮುಖಚರ್ಯೆಯಿಂದ ಯೇಸು, ಯೆಹೂದ್ಯರಲ್ಲದವರ ಕಡೆಗೆ ತನ್ನ ಸ್ವಂತ ಕೋಮಲ ಭಾವನೆಗಳನ್ನು ಪ್ರಕಟಿಸಿದ್ದಾನೆ ನಿಶ್ಚಯ. ಅವರನ್ನು “ನಾಯಿ ಮರಿಗಳು” ಅಥವಾ ಕುನ್ನಿಗಳು ಎಂದು ನಿರ್ದೇಶಿಸಿದ ಮೂಲಕ, ಅನ್ಯ ಜನರನ್ನು ನಾಯಿಗಳಿಗೆ ಹೋಲಿಸುತ್ತಿದ್ದ ದುರಭಿಮಾನವನ್ನೂ ಮೃದುಗೊಳಿಸುತ್ತಾನೆ. ಯೆಹೂದಿ ದುರಭಿಮಾನಗಳನ್ನು ನಿರ್ದೇಶಿಸಿ ಯೇಸು ನುಡಿದ ಮಾತುಗಳನ್ನು ಹಿಡಿದು ರೇಗುವ ಬದಲು, ಆ ಮಹಿಳೆ ಅರ್ಥೈಸಿಕೊಂಡು, “ಸ್ವಾಮೀ, ಆ ಮಾತು ನಿಜವೇ; ನಾಯಿಮರಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ” ಎಂಬ ನಮ್ರ ಅವಲೋಕನೆಯನ್ನು ಮಾಡುತ್ತಾಳೆ.
“ಅಮ್ಮಾ, ನಿನ್ನ ನಂಬಿಕೆ ಬಹಳ,” ಎಂದು ಉತ್ತರಿಸುತ್ತಾನೆ ಯೇಸು. “ನಿನ್ನ ಮನಸ್ಸಿನಂತೆ ಆಗಲಿ.” ಹಾಗೆಯೇ ಆಗುತ್ತದೆ! ಅವಳು ತನ್ನ ಮನೆಗೆ ಹೋಗಿ ನೋಡಲಾಗಿ ಅವಳ ಮಗಳು, ಪೂರ್ಣ ಸ್ವಸ್ಥಳಾಗಿ ಹಾಸಿಗೆಯಲ್ಲಿ ಮಲಗಿದ್ದಳು.
ಸಿದೋನಿನ ಕರಾವಳಿ ಪ್ರದೇಶದಿಂದ ಯೇಸು ಮತ್ತು ಅವನ ಶಿಷ್ಯರು ಪ್ರಾಂತ್ಯಗಳನ್ನು ಹಾದು, ಯೊರ್ದನ್ ಹೊಳೆಯ ಮೇಲ್ಭಾಗದ ಕಡೆಗೆ ಪಯಣಿಸುತ್ತಾರೆ. ಅವರು ಯೊರ್ದನ್ನನ್ನು ಗಲಿಲಾಯ ಸಮುದ್ರದ ಮೇಲ್ಗಡೆ ಒಂದೆಡೆಯಲ್ಲಿ ಹಾದು, ಸಮುದ್ರ ಪೂರ್ವದಲ್ಲಿ ದೆಕಪೊಲಿ ಪ್ರಾಂತ್ಯಕ್ಕೆ ಬರುತ್ತಾರೆ. ಅಲ್ಲಿ ಅವರು ಒಂದು ಬೆಟ್ಟವನ್ನು ಹತ್ತಿ ಕೂತುಕೊಳ್ಳುತ್ತಾರೆ ಆದರೆ, ಜನರ ಗುಂಪುಗಳು ಅವರನ್ನು ಕಂಡುಹಿಡಿದು ತಮ್ಮ ಕುಂಟರನ್ನು, ಕೈಕಾಲಿಲ್ಲದವರನ್ನು, ಕುರುಡರನ್ನು, ಮೂಕರನ್ನು ಮತ್ತು ರೋಗಿಗಳೂ ಅಂಗವಿಕಲರೂ ಆಗಿದ್ದ ಅನೇಕರನ್ನು ಯೇಸುವಿನ ಬಳಿಗೆ ತರುತ್ತಾರೆ. ಅವರನ್ನು ಯೇಸುವಿನ ಪಾದಗಳ ಬಳಿಯಲ್ಲಿ ಬಿಟ್ಟು ಹೋಗುತ್ತಿದ್ದರು ಮತ್ತು ಯೇಸು ಅವರನ್ನು ವಾಸಿಮಾಡುತ್ತಿದ್ದನು. ಕುಂಟರಿಗೆ ಕಾಲು ಬಂದದ್ದನ್ನೂ ಕುರುಡರಿಗೆ ಕಣ್ಣು ಬಂದದ್ದನ್ನೂ ಜನರು ಕಂಡು ಆಶ್ಚರ್ಯ ಪಡುತ್ತಿದ್ದರು ಮತ್ತು ಇಸ್ರಾಯೇಲ್ಯ ಜನರ ದೇವರನ್ನು ಕೊಂಡಾಡುತ್ತಿದ್ದರು.
ಯೇಸುವಿನ ವಿಶೇಷ ಗಮನವು ತೊದಲು ಮಾತಾಡುವ ಒಬ್ಬ ಕಿವುಡನ ಕಡೆ ಸರಿಯಿತು. ಕಿವುಡರು ಹೆಜ್ಜಾಗಿ ಸುಲಭವಾಗಿ ಪೇಚಾಟಕ್ಕೆ ಬೀಳುತ್ತಾರೆ ವಿಶೇಷವಾಗಿ, ಜನಸಂದಣಿಯಲ್ಲಿ. ಈ ಮನುಷ್ಯನ ವಿಶಿಷ್ಟ ಪುಕ್ಕಲುತನವನ್ನು ಯೇಸು ಗಮನಿಸಿದ್ದಿರಬಹುದು. ಆದ್ದರಿಂದ ಯೇಸು ಕನಿಕರದಿಂದ ಅವನನ್ನು, ಜನರ ಗುಂಪಿನಿಂದ ಒತ್ತಟ್ಟಿಗೆ, ಏಕಾಂತಕ್ಕೆ ಕರಕೊಂಡು ಹೋಗಿ ತಾನೇನು ಮಾಡಲಿದ್ದಾನೆಂದು ಸೂಚಿಸುತ್ತಾನೆ. ತನ್ನ ಬೆರಳುಗಳನ್ನು ಆ ಮನುಷ್ಯನ ಕಿವಿಗಳಲ್ಲಿ ಇಟ್ಟು, ಉಗುಳಿ, ಅವನ ನಾಲಿಗೆಯನ್ನು ಮುಟ್ಟುತ್ತಾನೆ. ಅನಂತರ, ಆಕಾಶದ ಕಡೆಗೆ ನೋಡಿ, ನಿಟ್ಟುಸಿರುಬಿಡುತ್ತಾ ಯೇಸು, “ತೆರೆಯಲಿ” ಅನ್ನುತ್ತಾನೆ. ಆ ಕೂಡಲೇ ಆ ಮನುಷ್ಯನ ಕಿವಿಗಳು ಕೇಳಿಸಿದವು ಮತ್ತು ಅವನು ಸರಿಯಾಗಿ ಮಾತಾಡ ಶಕ್ತನಾದನು.
ಯೇಸು ಈ ಎಲ್ಲಾ ವಾಸಿಗಳನ್ನು ನಡಿಸಿದಾಗ ಜನರು ಗಣ್ಯತೆಯಿಂದ ಪ್ರತಿಕ್ರಿಯೆ ತೋರಿಸುತ್ತಾರೆ: “ಎಲ್ಲಾ ಚೆನ್ನಾಗಿ ಮಾಡಿದ್ದಾನೆ. ಕಿವುಡರಾದರೂ ಕೇಳುವಂತೆ ಮಾಡುತ್ತಾನೆ. ಮೂಕರಾದರೂ ಮಾತಾಡುವಂತೆ ಮಾಡುತ್ತಾನೆ.” ಮತ್ತಾಯ 15:21-31; ಮಾರ್ಕ 7:24-37.
▪ ಆ ಗ್ರೀಕ್ ಹೆಂಗಸಿನ ಮಗಳನ್ನು ಯೇಸು ಆ ಕೂಡಲೇ ವಾಸಿ ಮಾಡುವುದಿಲ್ಲವೇಕೆ?
▪ ಅನಂತರ ಯೇಸು, ತನ್ನ ಶಿಷ್ಯರನ್ನು ಎಲ್ಲಿಗೆ ಕರಕೊಂಡು ಹೋಗುತ್ತಾನೆ?
▪ ತೊದಲು ಮಾತಿನ ಕಿವುಡನನ್ನು ಯೇಸು ಹೇಗೆ ಕನಿಕರದಿಂದ ಉಪಚರಿಸಿದನು?