ಅಧ್ಯಾಯ 59
ಯೇಸು ನಿಜವಾಗಿ ಯಾರು?
ಯೇಸು ಮತ್ತು ಆತನ ಶಿಷ್ಯರನ್ನು ಒಯ್ದ ದೋಣಿಯು ಬೇತ್ಸಾಯಿದದಲ್ಲಿ ತಂಗಿದಾಗ, ಜನರು ಒಬ್ಬ ಕುರುಡನನ್ನು ಅವನ ಬಳಿಗೆ ಕರತಂದು, ಅವನನ್ನು ಮುಟ್ಟಿ ವಾಸಿಮಾಡಬೇಕು ಎಂದು ಬೇಡುತ್ತಾರೆ. ಯೇಸು ಅವನ ಕೈ ಹಿಡುಕೊಂಡು ಹಳ್ಳಿಯ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳಲ್ಲಿ ಉಗುಳಿ, “ನಿನಗೇನಾದರೂ ಕಾಣುತ್ತದೋ?” ಎಂದು ಕೇಳುತ್ತಾನೆ.
“ನನಗೆ ಜನರು ಕಾಣುತ್ತಾರೆ; ಅವರು ಮರಗಳಂತೆ ಕಾಣಿಸಿದರೂ ತಿರುಗಾಡುತ್ತಾ ಇದ್ದಾರೆ” ಎಂದುತ್ತರಿಸಿದನಾತನು. ಆಗ ಯೇಸು ಅವನ ಕಣ್ಣುಗಳ ಮೇಲೆ ತಿರುಗಿ ಕೈಯಿಟ್ಟು, ದೃಷ್ಟಿಯು ಸ್ಪಷ್ಟವಾಗಿ ಕಾಣುವಂತೆ, ವಾಸಿಮಾಡುತ್ತಾನೆ. ಅನಂತರ ಯೇಸು ಅವನನ್ನು, ಊರೊಳಕ್ಕೆ ಹೋಗಕೂಡದು ಎಂಬ ಅಪ್ಪಣೆಯೊಂದಿಗೆ ಮನೆಗೆ ಕಳುಹಿಸುತ್ತಾನೆ.
ಯೇಸುವೀಗ ತನ್ನ ಶಿಷ್ಯರೊಂದಿಗೆ ಪಲೆಸ್ತೀನದ ತೀರಾ ಉತ್ತರಕ್ಕಿರುವ ಫಿಲಿಪ್ಪನ ಕೈಸರೈಯ ಗ್ರಾಮಗಳಿಗೆ ಹೋಗುತ್ತಾನೆ. ಸಮುದ್ರ ಮಟ್ಟದಿಂದ ಸುಮಾರು 350 ಮೀಟರು ಉನ್ನತದಲ್ಲಿರುವ ಫಿಲಿಪ್ಪನ ಕೈಸರೈಯದ ಆ ಸುಂದರವಾದ ಸ್ಥಳಕ್ಕೆ ಹೋಗಲು ಸುಮಾರು 48 ಕಿಲೊಮೀಟರುಗಳನ್ನಾವರಿಸಿದ ಉದ್ದವಾದ ಏರು ಇತ್ತು. ಪ್ರಯಾಣಕ್ಕೆ ಪ್ರಾಯಶಃ ಕೆಲವು ದಿನಗಳು ತಗಲಿರಬೇಕು.
ದಾರಿಯಲ್ಲಿ ಯೇಸು, ಏಕಾಂತವಾಗಿ ಪ್ರಾರ್ಥಿಸಲು ಹೋಗುತ್ತಾನೆ. ಅವನ ಮರಣಕ್ಕೆ ಸುಮಾರು ಒಂಭತ್ತು ಅಥವಾ ಹತ್ತು ತಿಂಗಳು ಮಾತ್ರವೇ ಉಳಿದಿತ್ತು, ಮತ್ತು ಅವನು ತನ್ನ ಶಿಷ್ಯರ ವಿಷಯವಾಗಿ ಚಿಂತಸುತ್ತಿದ್ದನು. ಅನೇಕರು ಈವಾಗಲೇ ಅವನನ್ನು ಹಿಂಬಾಲಿಸುವುದನ್ನು ಬಿಟ್ಟದರು. ಇತರರು ಕಳವಳ ಮತ್ತು ನಿರಾಶೆಗೊಂಡಿದ್ದರೆಂದು ಕಾಣುತ್ತದೆ ಯಾಕೆಂದರೆ ಆತನನ್ನು ಅರಸನನ್ನಾಗಿ ಮಾಡುವ ಜನರ ಪ್ರಯತ್ನವನ್ನು ಅವನು ನಿರಾಕರಿಸಿದ್ದನು ಮತ್ತು ಶತ್ರುಗಳಿಂದ ಪಂಥಾಹ್ವಾನಿಸಲ್ಪಟ್ಟಾಗ, ತನ್ನ ರಾಜತ್ವದ ಪುರಾವೆಗಾಗಿ ಆಕಾಶದಿಂದ ಒಂದು ಸೂಚಕ ಕಾರ್ಯವನ್ನು ತೋರಿಸಿಕೊಡಲಿಲ್ಲ. ಅಪೊಸ್ತಲರು ಅವನನ್ನು ಯಾರೆಂದು ನಂಬುತ್ತಾರೆ? ಅವನು ಪ್ರಾರ್ಥಿಸುವಲ್ಲಿಗೆ ಅವರು ಬಂದಾಗ, ಯೇಸು ಕೇಳುತ್ತಾನೆ: “ಜನರು ನನ್ನನ್ನು ಯಾರು ಅನ್ನುತ್ತಾರೆ?”
“ನಿನ್ನನ್ನು ಕೆಲವರು ಸ್ನಾನಿಕನಾದ ಯೋಹಾನನು ಅನ್ನುತ್ತಾರೆ; ಕೆಲವರು ಎಲೀಯನು ಅನ್ನುತ್ತಾರೆ. ಬೇರೆ ಕೆಲವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಅನ್ನುತ್ತಾರೆ” ಎಂದು ಹೇಳುತ್ತಾರೆ ಅವರು. ಹೌದು, ಯೇಸು ಸತ್ತವರೊಳಗಿಂದ ಎದ್ದು ಬಂದ ಆ ಪುರುಷರಲ್ಲಿ ಒಬ್ಬನು ಎಂದವರು ನೆನಸುತ್ತಾರೆ!
“ಆದರೆ ನೀವು ನನ್ನನ್ನು ಯಾರನ್ನುತ್ತೀರಿ,” ಕೇಳುತ್ತಾನೆ ಯೇಸು.
ಪೇತ್ರನು ತಟ್ಟನೇ ಪ್ರತಿಕ್ರಿಯಿಸುತ್ತಾ, “ನೀನು ಬರಬೇಕಾಗಿರುವ ಕ್ರಿಸ್ತನು, ಜೀವಸ್ವರೂಪನಾದ ದೇವರ ಕುಮಾರನು” ಎಂದುತ್ತರಿಸುತ್ತಾನೆ.
ಪೇತ್ರನ ಪ್ರತಿಕ್ರಿಯೆಗೆ ಮೆಚ್ಚಿಕೆ ಸೂಚಿಸುತ್ತಾ, ಯೇಸು ಅನ್ನುವುದು: “ನೀನು ಪೇತ್ರನು, ಈ ಬಂಡೆಯ ಮೇಲೆ ನನ್ನ ಸಭೆಯನ್ನು ಕಟ್ಟುವೆನು. ಪಾತಾಳ ಲೋಕದ (ಹೇಡಿಸಿನ) ಬಲವು ಅದನ್ನು ಸೋಲಿಸಲಾರದು.” ತಾನೊಂದು ಸಭೆಯನ್ನು ಕಟ್ಟಲಿದ್ದೇನೆಂದೂ, ಮತ್ತು ಮರಣವು ಸಹಾ ಅದರ ಸದಸ್ಯರನ್ನು, ಭೂಮಿಯಲ್ಲಿ ಅವರ ನಂಬಿಗಸ್ತ ಜೀವಿತಾನಂತರ ಬಂಧಿಸಿ ಹಿಡಿಯಲಾರದು ಎಂದು ಇಲ್ಲಿ ಯೇಸು ಮೊದಲಾಗಿ ಸೂಚಿಸಿದನು. ಅನಂತರ ಅವನು ಪೇತ್ರನಿಗೆ ಹೇಳುವುದು: “ಪರಲೋಕ ರಾಜ್ಯದ ಬೀಗದ ಕೈಗಳನ್ನು ನಾನು ನಿನಗೆ ಕೊಡುವೆನು.”
ಹೀಗೆ ಪೇತ್ರನು ವಿಶೇಷ ಸುಯೋಗಗಳನ್ನು ಪಡೆಯಲಿದ್ದಾನೆಂದು ಯೇಸು ಪ್ರಕಟಪಡಿಸಿದನು. ಇಲ್ಲ, ಪೇತ್ರನಿಗೆ ಅಪೊಸ್ತಲರಲ್ಲಿ ಮೊದಲನೆಯ ಸ್ಥಾನವು ಕೊಡಲ್ಪಡಲೂ ಇಲ್ಲ, ಇಲ್ಲವೇ ಅವನನ್ನು ಸಭೆಯ ಅಸ್ತಿವಾರವನ್ನಾಗಿ ಮಾಡಲೂ ಇಲ್ಲ. ಯೇಸು ತಾನೇ, ಯಾವುದರ ಮೇಲೆ ತನ್ನ ಸಭೆಯನ್ನು ಕಟ್ಟಲಿದ್ದನೋ ಅದರ ಮೂಲೆಗಲ್ಲಾಗಿದ್ದನು. ಆದರೆ ಪೇತ್ರನಿಗೆ ಏನನ್ನೋ ತೆರೆಯಲಿಕ್ಕೋ ಎಂಬಂತೆ ಮೂರು ಕೀಲಿಕೈಗಳು ಕೊಡಲ್ಪಡಲಿದ್ದವು; ಅದು ಪರಲೋಕ ರಾಜ್ಯಕ್ಕೆ ಪ್ರವೇಶಿಸಲು ಜನರ ಗುಂಪುಗಳಿಗೆ ಸಂದರ್ಭಗಳನ್ನು ತೆರೆಯುವದೇ.
ಪೇತ್ರನು, ಸಾ.ಶ. 33ರ ಪಂಚಾಶತ್ತಮದಲ್ಲಿ ಪಶ್ಚಾತ್ತಾಪ ಪಡೆದ ಯೆಹೂದ್ಯರಿಗೆ ಅವರು ರಕ್ಷಣೆ ಹೊಂದಬೇಕಾದರೆ ಏನು ಮಾಡಬೇಕು ಎಂದು ತೋರಿಸಿದಾಗಲೇ ಆ ಮೊದಲನೆಯ ಬೀಗದ ಕೈಯನ್ನು ಉಪಯೋಗಿಸಿದ್ದನು. ಎರಡನೆಯ ಬೀಗದ ಕೈಯನ್ನು ತದನಂತರ, ನಂಬಿದ ಸಮಾರ್ಯರಿಗೆ ದೇವರ ರಾಜ್ಯವನ್ನು ಪ್ರವೇಶಿಸುವ ಸಂದರ್ಭವನ್ನು ತೆರೆಯಲಿಕ್ಕಾಗಿ ಅವನು ಉಪಯೋಗಿಸಿದನು. ಅನಂತರ, ಸಾ.ಶ. 36ರಲ್ಲಿ, ಸುನ್ನತಿಯಿಲ್ಲದ ಅನ್ಯರಿಗೆ, ಕೊರ್ನೇಲ್ಯ ಮತ್ತು ಅವನ ಮಿತ್ರರಿಗೆ, ಅದೇ ಸಂದರ್ಭವನ್ನು ತೆರೆಯಲು ಮೂರನೆಯ ಕೀಲಿಕೈಯನ್ನುಪಯೋಗಿಸಿದನು.
ಯೇಸು ತನ್ನ ಅಪೊಸ್ತಲರೊಂದಿಗೆ ತನ್ನ ಚರ್ಚೆಯನ್ನು ಮುಂದರಿಸುತ್ತಾನೆ. ಯೆರೂಸಲೇಮಿನಲ್ಲಿ ತಾನು ಬೇಗನೇ ಅನುಭವಿಸಲಿದ್ದ ಕಷ್ಟಾನುಭವಗಳ ಮತ್ತು ಮರಣದ ಕುರಿತು ತಿಳಿಸಿದಾಗ ಅವರು ನಿರಾಶೆಗೊಳ್ಳುತ್ತಾರೆ. ಯೇಸು ಪರಲೋಕ ಜೀವಿತಕ್ಕೆ ಪುನರುತ್ಥಾನವಾಗಲಿದ್ದನೆಂದು ತಿಳಿಯಲು ತಪ್ಪಿದ ಕಾರಣ ಪೇತ್ರನು ಯೇಸುವನ್ನು ಬದಿಗೊಯ್ದು, “ಸ್ವಾಮೀ, ದೇವರು ನಿನ್ನನ್ನು ಕಾಯಲಿ; ನಿನಗೆ ಹೀಗೆ ಎಂದಿಗೂ ಆಗಬಾರದು” ಎಂದು ಹೇಳುತ್ತಾನೆ. ಯೇಸು ತಿರುಗಿಕೊಂಡು ಉತ್ತರಿಸಿದ್ದು: “ಸೈತಾನನೇ, ನನ್ನ ಮುಂದೆ ನಿಲ್ಲಬೇಡ! ನಡೆ, ನನಗೆ ನೀನು ವಿಘ್ನವಾಗಿದ್ದಿ. ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದ್ದಲ್ಲ.”
ಅಪೊಸ್ತಲರಲ್ಲದೆ ಬೇರೆಯವರೂ ಯೇಸುವಿನೊಂದಿಗೆ ಪಯಣಿಸುತ್ತಿದ್ದರೆಂಬದು ವ್ಯಕ್ತ. ಆದ್ದರಿಂದ, ಅವನನ್ನು ಹಿಂಬಾಲಿಸುವುದೇನೂ ಸುಲಭವಲ್ಲವೆಂದು ಅವನೀಗ ಅವರಿಗೆ ವಿವರಿಸುತ್ತಾನೆ. “ಯಾವನಿಗಾದರೂ ನನ್ನ ಹಿಂದೆ ಬರುವುದಕ್ಕೆ ಮನಸ್ಸಿದ್ದರೆ ಅವನು ತನ್ನನ್ನು ನಿರಾಕರಿಸಿ ತನ್ನ ಯಾತನಾಕಂಭವನ್ನು ಹೊತ್ತುಕೊಂಡು ನನ್ನ ಹಿಂದೆ ಬರಲಿ. ತನ್ನ ಪ್ರಾಣವನ್ನು ಉಳಿಸಿಕೊಳ್ಳಬೇಕೆಂದಿರುವವನು ಅದನ್ನು ಕಳಕೊಳ್ಳುವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಉಳಿಸಿಕೊಳ್ಳುವನು.”
ಹೌದು, ಯೇಸುವಿನ ಶಿಷ್ಯರು ಆತನ ಅನುಗ್ರಹಕ್ಕೆ ಪಾತ್ರರಾಗಬೇಕಾದರೆ ಧೈರ್ಯವಂತರೂ ಸ್ವ-ತ್ಯಾಗಿಗಳೂ ಆಗಿರತಕ್ಕದ್ದು. ಆತನಂದದ್ದು: “ವ್ಯಭಿಚಾರಿಣಿಯಂತಿರುವ ಈ ಪಾಪಿಷ್ಠ ಸಂತತಿಯಲ್ಲಿ ಯಾವನು ನನಗೂ ನನ್ನ ಮಾತುಗಳಿಗೂ ನಾಚಿಕೊಳ್ಳುತ್ತಾನೋ ಅವನಿಗೆ ಮನುಷ್ಯ ಕುಮಾರನು, ತಾನು ತನ್ನ ತಂದೆಯ ಪ್ರಭಾವದೊಡನೆ ಪರಿಶುದ್ಧ ದೇವದೂತರೊಡಗೂಡಿ ಬರುವಾಗ ನಾಚಿಕೊಳ್ಳುವನು.” ಮಾರ್ಕ 8:22-38; ಮತ್ತಾಯ 16:13-28; ಲೂಕ 9:18-27.
▪ ತನ್ನ ಶಿಷ್ಯರ ವಿಷಯದಲ್ಲಿ ಯೇಸು ಚಿಂತಿಸಿದ್ದೇಕೆ?
▪ ಯೇಸು ಯಾರೆಂಬ ವಿಷಯದಲ್ಲಿ ಜನರ ನೋಟವೇನಾಗಿತ್ತು?
▪ ಪೇತ್ರನಿಗೆ ಯಾವ ಬೀಗದ ಕೈಗಳು ಕೊಡಲ್ಪಟ್ಟವು, ಮತ್ತು ಅವು ಹೇಗೆ ಉಪಯೋಗಿಸಲ್ಪಟ್ಟವು?
▪ ಯಾವ ತಿದ್ದುಪಾಟು ಪೇತ್ರನಿಗೆ ನೀಡಲ್ಪಟ್ಟಿತು ಮತ್ತು ಏಕೆ?