ಯೇಸು ನರಕಾಗ್ನಿಗೆ ಸೂಚಿಸುತ್ತಿದ್ದನೋ?
ನರಕಾಗ್ನಿಯ ಬೋಧನೆಯನ್ನು ನಂಬುವವರು ಮಾರ್ಕ 9:48 (ಅಥವಾ 44, 46)ರಲ್ಲಿರುವ ಯೇಸುವಿನ ಮಾತುಗಳನ್ನು ಆಧಾರವಾಗಿ ಬಳಸುತ್ತಾರೆ. ಆ ವಚನದಲ್ಲಿ ಯೇಸು, ಸಾಯದ ಹುಳಗಳ (ಅಥವಾ ಮರಿಹುಳಗಳ) ಮತ್ತು ಆರದ ಬೆಂಕಿಯ ಕುರಿತು ತಿಳಿಸಿದನು. ಈ ಕುರಿತು ನಿಮ್ಮನ್ನು ಯಾರಾದರೂ ಕೇಳುವಲ್ಲಿ ನೀವೇನು ಉತ್ತರಿಸುವಿರಿ?
ಆ ವ್ಯಕ್ತಿಯು ಉಪಯೋಗಿಸುವ ಬೈಬಲಿನ ಮೇಲೆ ಹೊಂದಿಕೊಂಡು 44, 46, ಅಥವಾ 48ನೇ ವಚನವನ್ನು ಅವನು ಓದಬಹುದು. ಏಕೆಂದರೆ ಕೆಲವೊಂದು ಬೈಬಲ್ಗಳಲ್ಲಿ ಈ ಮೂರೂ ವಚನಗಳಲ್ಲಿ ಒಂದೇ ರೀತಿಯ ಪದಪ್ರಯೋಗ ಮಾಡಲಾಗಿದೆ.a ನೂತನ ಲೋಕ ಭಾಷಾಂತರ ಹೀಗನ್ನುತ್ತದೆ: “ನಿನ್ನ ಕಣ್ಣು ನಿನ್ನನ್ನು ಎಡವಿಸುವುದಾದರೆ ಅದನ್ನು ಕಿತ್ತು ಬಿಸಾಡು; ನೀನು ಎರಡು ಕಣ್ಣುಳ್ಳವನಾಗಿ ಗೆಹೆನ್ನಕ್ಕೆ ಎಸೆಯಲ್ಪಡುವ ಬದಲು ಒಂದೇ ಕಣ್ಣುಳ್ಳವನಾಗಿ ದೇವರ ರಾಜ್ಯವನ್ನು ಪ್ರವೇಶಿಸುವುದೇ ಲೇಸು. ಅಲ್ಲಿ ಅವರನ್ನು ಕಡಿಯುವ ಮರಿಹುಳು ಸಾಯುವುದಿಲ್ಲ ಮತ್ತು ಬೆಂಕಿಯು ಆರುವುದಿಲ್ಲ.”—ಮಾರ್ಕ 9:47, 48.
ವಿಷಯ ಏನೇ ಆಗಿರಲಿ, ಮರಣಾನಂತರ ದುಷ್ಟ ಜನರ ಆತ್ಮಗಳು ನಿತ್ಯವೂ ನರಳುತ್ತಾ ಇರುತ್ತವೆ ಎಂಬುದನ್ನು ಯೇಸುವಿನ ಮಾತುಗಳು ಸಮರ್ಥಿಸುತ್ತವೆ ಎನ್ನುತ್ತಾರೆ ಕೆಲವರು. ಉದಾಹರಣೆಗೆ, ನವಾರಾ ವಿಶ್ವವಿದ್ಯಾನಿಲಯದ ಸಗ್ರಾತ ಬಿಬ್ಲಿಯ ಎಂಬ ಸ್ಪ್ಯಾನಿಷ್ ಬೈಬಲ್ನಲ್ಲಿ ಈ ಹೇಳಿಕೆಯಿದೆ: “ನಮ್ಮ ಕರ್ತನು [ಈ ಮಾತುಗಳನ್ನು] ನರಕದ ಯಾತನೆಗೆ ಸೂಚಿಸಲು ಬಳಸುತ್ತಿದ್ದಾನೆ. ‘ಹುಳ ಸಾಯುವುದಿಲ್ಲ’ ಎಂಬ ಮಾತುಗಳು ನರಕದಲ್ಲಿರುವವರ ನಿತ್ಯ ಪರಿತಾಪಕ್ಕೆ ಮತ್ತು ‘ಬೆಂಕಿ ಆರುವುದಿಲ್ಲ’ ಎಂಬ ಮಾತುಗಳು ಅವರು ಅನುಭವಿಸುವ ದೈಹಿಕ ನೋವಿಗೆ ಸೂಚಿಸುತ್ತದೆಂದು ಅನೇಕಸಲ ವಿವರಿಸಲಾಗುತ್ತದೆ.”
ಆದರೆ ಯೇಸುವಿನ ಮಾತುಗಳನ್ನು ಯೆಶಾಯನ ಪ್ರವಾದನೆಯ ಕೊನೆಯ ವಚನದೊಂದಿಗೆ ಹೋಲಿಸಿ.b ಯೇಸು, ಯೆಶಾಯ 66ನೇ ಅಧ್ಯಾಯದಲ್ಲಿರುವ ಮಾತುಗಳನ್ನು ಉಲ್ಲೇಖಿಸುತ್ತಿದ್ದನು ಎಂಬುದು ಸ್ಪಷ್ಟವಾಗುವುದಿಲ್ಲವೋ? ಪ್ರವಾದಿ ಯೆಶಾಯನು ಯೆರೂಸಲೇಮಿನ “ಹೊರ ಪ್ರದೇಶದಲ್ಲಿದ್ದ ಹಿನ್ನೋಮ್ ಕಣಿವೆಗೆ (ಗೆಹೆನ್ನ)” ಹೋಗುವುದಕ್ಕೆ ಸೂಚಿಸುತ್ತಿದ್ದಾನೆಂದು ವ್ಯಕ್ತವಾಗುತ್ತದೆ. “ಅಲ್ಲಿ ಒಂದು ಕಾಲದಲ್ಲಿ ನರಬಲಿಗಳನ್ನು ಅರ್ಪಿಸಲಾಗುತ್ತಿತ್ತು (ಯೆರೆ 7:31) ಮತ್ತು ಅದು ಕಾಲಾನಂತರ ಆ ಪಟ್ಟಣದ ಕಸದ ಕೊಂಪೆಯಾಯಿತು.” (ದ ಜೆರೋಮ್ ಬಿಬ್ಲಿಕಲ್ ಕಾಮೆಂಟರಿ) ಯೆಶಾಯ 66:24ರಲ್ಲಿರುವ ಚಿತ್ರಣವು ಜನರ ನರಳಾಟವನ್ನು ಸೂಚಿಸುತ್ತಿಲ್ಲ ಎಂಬುದು ಸ್ಪಷ್ಟ; ಅದು ಹೆಣಗಳ ಬಗ್ಗೆ ಮಾತಾಡುತ್ತದೆ. ಅಲ್ಲಿ ಜೀವಂತ ಮನುಷ್ಯರು ಅಥವಾ ಅಮರ ಆತ್ಮಗಳ ಬಗ್ಗೆ ಅಲ್ಲ ಬದಲಾಗಿ ಹುಳಗಳು ಸಾಯದಿರುವುದರ ಬಗ್ಗೆ ಹೇಳಲಾಗಿದೆ. ಹಾಗಾದರೆ ಯೇಸುವಿನ ಮಾತುಗಳ ಅರ್ಥವೇನಾಗಿತ್ತು?
ಎಲ್ಇವಾನ್ಹೆಲ್ಯೊ ಡೆ ಮಾರ್ಕಾಸ್—ಆನಾಲೀಸಿಸ್ ಲಿಂಗ್ವಿಸ್ಟೀಕೊ ಈ ಕಾಮೆಂಟಾರಿಯೋ ಎಕ್ಸೆಹೀಟಿಕೊ ಎಂಬ ಕ್ಯಾಥೊಲಿಕ್ ಕೃತಿಯ ಸಂಪುಟ IIರಲ್ಲಿ ಮಾರ್ಕ 9:48ರ ಕುರಿತು ಈ ಹೇಳಿಕೆಯನ್ನು ಗಮನಿಸಿ: “ಈ ಪದಪುಂಜವನ್ನು ಯೆಶಾಯದಿಂದ (66, 24) ಆರಿಸಿಕೊಳ್ಳಲಾಗಿದೆ. ಅಲ್ಲಿ ಪ್ರವಾದಿಯು, ಹೆಣಗಳನ್ನು ನಾಶಮಾಡಲಾಗುತ್ತಿದ್ದ ಎರಡು ಸಾಮಾನ್ಯ ವಿಧಗಳನ್ನು ತಿಳಿಸುತ್ತಾನೆ: ಕೊಳೆಯುವಿಕೆ ಮತ್ತು ದಹಿಸುವಿಕೆ . . . ಈ ವಚನದಲ್ಲಿ ಹುಳ ಮತ್ತು ಬೆಂಕಿ ಎಂಬ ಪದಗಳನ್ನು ಒಟ್ಟೊಟ್ಟಾಗಿ ಬಳಸಿರುವುದು ವಿನಾಶದ ನಿಶ್ಚಿತತೆಯನ್ನು ದೃಢೀಕರಿಸುತ್ತದೆ. . . ಈ ಎರಡೂ ವಿನಾಶಕಾರಿ ಶಕ್ತಿಗಳನ್ನು ಸದಾ ಇರುವಂಥವುಗಳೆಂದೂ (‘ಆರದ, ಸಾಯದ’) ಅವುಗಳಿಂದ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದೂ ವರ್ಣಿಸಲಾಗಿದೆ. ಈ ವರ್ಣನೆಯಲ್ಲಿ ನಾಶವಾಗದೆ ಇರುವುದು ಮನುಷ್ಯನಲ್ಲ ಬದಲಾಗಿ ಬೆಂಕಿ ಮತ್ತು ಹುಳಗಳು. ಇವೆರಡೂ ತಮ್ಮ ವಶಕ್ಕೆ ಬೀಳುವ ಎಲ್ಲವನ್ನು ಸಂಪೂರ್ಣವಾಗಿ ನಾಶಮಾಡುತ್ತವೆ. ಆದ್ದರಿಂದ ಇದು ನಿತ್ಯ ಯಾತನೆಯದ್ದಲ್ಲ ಬದಲಾಗಿ ಸಂಪೂರ್ಣ ನಾಶನದ ವರ್ಣನೆಯಾಗಿದೆ. ಅದು ಅಂತಿಮ ಮರಣ ಆಗಿದೆ ಏಕೆಂದರೆ ಅದಕ್ಕೆ ಗುರಿಯಾದವರು ಪುನರುತ್ಥಾನ ಹೊಂದುವುದಿಲ್ಲ. ಹಾಗಾದರೆ [ಬೆಂಕಿ] ಸಂಪೂರ್ಣ ನಾಶನದ ಸಂಕೇತವಾಗಿದೆ.”
ಸತ್ಯ ದೇವರು ಪ್ರೀತಿಪರನು, ನ್ಯಾಯವಂತನು ಎಂದು ತಿಳಿದಿರುವ ಒಬ್ಬ ವ್ಯಕ್ತಿ ಯೇಸುವಿನ ಮಾತುಗಳನ್ನು ಹೀಗೆ ಅರ್ಥಮಾಡಿಕೊಳ್ಳುವುದು ತರ್ಕಬದ್ಧವಾಗಿದೆ ಎಂದು ಗ್ರಹಿಸುತ್ತಾನೆ. ದುಷ್ಟರು ನಿತ್ಯ ಯಾತನೆಯನ್ನು ಅನುಭವಿಸುವರೆಂದು ಯೇಸು ಹೇಳುತ್ತಿರಲಿಲ್ಲ. ಅಂಥವರು ಪುನರುತ್ಥಾನದ ನಿರೀಕ್ಷೆಯಿಲ್ಲದ ಸಂಪೂರ್ಣ ನಾಶನಕ್ಕೆ ಗುರಿಯಾಗುವ ಸಾಧ್ಯತೆಯಿದೆ.
[ಪಾದಟಿಪ್ಪಣಿಗಳು]
a ಅತ್ಯಂತ ಭರವಸಾರ್ಹ ಬೈಬಲ್ ಹಸ್ತಪ್ರತಿಗಳಲ್ಲಿ 44 ಮತ್ತು 46ನೇ ವಚನಗಳಿಲ್ಲ. ಈ ಎರಡು ವಚನಗಳನ್ನು ಬಹುಶಃ ತದನಂತರ ಸೇರಿಸಲಾಯಿತೆಂದು ವಿದ್ವಾಂಸರು ಒಪ್ಪಿಕೊಳ್ಳುತ್ತಾರೆ. ಪ್ರೊಫೆಸರ್ ಆರ್ಚಿಬಾಲ್ಡ್ ಟಿ. ರಾಬರ್ಟ್ಸನ್ ಬರೆಯುವುದು: “ಅತಿ ಹಳೆಯ ಮತ್ತು ಅತ್ಯುತ್ತಮ ಹಸ್ತಪ್ರತಿಗಳಲ್ಲೂ ಈ ಎರಡು ವಚನಗಳು ಕಂಡುಬರುವುದಿಲ್ಲ. ಇವು ಸಿರಿಯದ (ಬೈಸಾಂಟೈನ್) ಮತ್ತು ಪಾಶ್ಚಾತ್ಯ ಶ್ರೇಣಿಯ ಹಸ್ತಪ್ರತಿಗಳಿಂದ ಬಂದವು. ಅವು 48ನೇ ವಚನದ ಪುನರಾವರ್ತನೆ ಆಗಿವೆಯಷ್ಟೇ. ಆದ್ದರಿಂದ ವಿಶ್ವಾಸಾರ್ಹವಲ್ಲದ 44 ಮತ್ತು 46ನೇ ವಚನಗಳನ್ನು ನಾವು ಬಿಟ್ಟುಬಿಟ್ಟಿದ್ದೇವೆ.”
b “ಅವರು ಆಚೆ ಹೋಗಿ ನನಗೆ ದ್ರೋಹಮಾಡಿದವರ ಹೆಣಗಳನ್ನು ನೋಡುವರು; ಅವುಗಳನ್ನು ಕಡಿಯುವ ಹುಳವು ಸಾಯುವದಿಲ್ಲ, ಸುಡುವ ಬೆಂಕಿಯು ಆರುವದಿಲ್ಲ; ಅವು ಲೋಕದವರಿಗೆಲ್ಲಾ ಅಸಹ್ಯವಾಗಿರುವವು.”—ಯೆಶಾ. 66:24.