ವಾಚಕರಿಂದ ಪ್ರಶ್ನೆಗಳು
• ದೇವರ ಪವಿತ್ರಾತ್ಮವು ವ್ಯಕ್ತಿಯಲ್ಲದಿರುವಾಗ ನಾವು ಅದನ್ನು ಹೇಗೆ ದುಃಖಪಡಿಸಬಲ್ಲೆವು?
“ದೇವರ ಪವಿತ್ರಾತ್ಮನನ್ನು [“ಪವಿತ್ರಾತ್ಮವನ್ನು,” NW] ದುಃಖಪಡಿಸಬೇಡಿರಿ” ಎಂದು ಬರೆದವನು ಅಪೊಸ್ತಲ ಪೌಲನು. (ಎಫೆಸ 4:30) ಈ ಮಾತುಗಳು ಪವಿತ್ರಾತ್ಮವು ಒಬ್ಬ ವ್ಯಕ್ತಿಯಾಗಿರುವುದನ್ನು ಸೂಚಿಸುತ್ತವೆಂದು ಕೆಲವರು ಅಭಿಪ್ರಯಿಸುತ್ತಾರೆ. ಆದರೆ, ‘ನಂಬಿಗಸ್ತ ಮನೆವಾರ್ತೆಯವನ’ ಪ್ರಕಾಶನಗಳು ಅನೇಕವೇಳೆ, ಆದಿಕ್ರೈಸ್ತರು ಪವಿತ್ರಾತ್ಮವನ್ನು ವ್ಯಕ್ತಿಯೆಂದಾಗಲಿ ಇಲ್ಲವೆ ತ್ರಯೈಕ್ಯವೆಂದು ಕರೆಯಲಾಗುವಂಥದ್ದರ ಭಾಗವಾಗಿ ಸರ್ವೋನ್ನತನಿಗೆ ಸಮಾನನಾಗಿರುವ ದೇವರೆಂದಾಗಲಿ ವೀಕ್ಷಿಸಲಿಲ್ಲವೆಂಬುದಕ್ಕೆ ಶಾಸ್ತ್ರೀಯ ಹಾಗೂ ಐತಿಹಾಸಿಕ ಪುರಾವೆಯನ್ನು ಒದಗಿಸಿವೆ.a (ಲೂಕ 12:42) ಆದಕಾರಣ ಪೌಲನು ದೇವರ ಪವಿತ್ರಾತ್ಮವನ್ನು ಒಬ್ಬ ವ್ಯಕ್ತಿಯಾಗಿ ಸೂಚಿಸಿ ಮಾತಾಡುತ್ತಿರಲಿಲ್ಲ.
ದೇವರ ಪವಿತ್ರಾತ್ಮವು ಆತನ ಅದೃಶ್ಯವಾದ ಕ್ರಿಯಾಶೀಲ ಶಕ್ತಿ ಆಗಿದೆ. (ಆದಿಕಾಂಡ 1:2) ಯೋಹಾನನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಿದ್ದಂತೆಯೇ ಯೇಸು “ಪವಿತ್ರಾತ್ಮದಲ್ಲಿ” ದೀಕ್ಷಾಸ್ನಾನ ಮಾಡಿಸಲಿಕ್ಕಿದ್ದನು. (ಲೂಕ 3:16) ಸಾ.ಶ. 33ರ ಪಂಚಾಶತ್ತಮದಲ್ಲಿ ಸುಮಾರು 120 ಮಂದಿ ಶಿಷ್ಯರು “ಪವಿತ್ರಾತ್ಮಭರಿತ”ರಾದರು—ಅವರು ಒಬ್ಬ ವ್ಯಕ್ತಿಯಿಂದ ತುಂಬಿದವರಾಗಿರಲಿಲ್ಲವೆಂಬುದು ವ್ಯಕ್ತ. (ಅ. ಕೃತ್ಯಗಳು 1:4, 8; 2:4, 33) ಇಂತಹ ಅಭಿಷಿಕ್ತರು ಸ್ವರ್ಗೀಯ ನಿರೀಕ್ಷೆಯನ್ನು ಪಡೆದರು, ಮತ್ತು ಅವರು ನಂಬಿಗಸ್ತಿಕೆಯ ಜೀವನವನ್ನು ನಡೆಸುವಂತೆ ಪವಿತ್ರಾತ್ಮವು ಅವರನ್ನು ಮಾರ್ಗದರ್ಶಿಸಿತು. (ರೋಮಾಪುರ 8:14-17; 2 ಕೊರಿಂಥ 1:22) ಆ ಆತ್ಮವು ದೈವಿಕ ಫಲಗಳನ್ನು ಫಲಿಸಿ, ದೈವಿಕ ಅಸಮ್ಮತಿಯನ್ನು ತರಸಾಧ್ಯವಿದ್ದ ಪಾಪಕರವಾದ “ಶರೀರಭಾವದ ಕರ್ಮ”ಗಳನ್ನು ವಿಸರ್ಜಿಸುವಂತೆ ಅವರಿಗೆ ಸಹಾಯಮಾಡಿತು.—ಗಲಾತ್ಯ 5:19-25.
ನಾವು ಭೂನಿರೀಕ್ಷೆಯಿರುವ ದೇವರ ಸೇವಕರಾಗಿರುವಲ್ಲಿ, ನಮಗೆ ಪವಿತ್ರಾತ್ಮದಿಂದ ಅಭಿಷೇಕವಾಗಿರುವುದಿಲ್ಲ. ಆದರೂ, ನಮಗೆ ಸ್ವರ್ಗೀಯ ನಿರೀಕ್ಷೆಯಿರುವವರಿಗೆ ದೊರೆಯುವಷ್ಟೇ ಪ್ರಮಾಣದಲ್ಲಿ ಪವಿತ್ರಾತ್ಮವು ದೊರೆಯಬಲ್ಲದು. ಈ ಕಾರಣದಿಂದ, ನಾವೂ ಪವಿತ್ರಾತ್ಮವನ್ನು ದುಃಖಪಡಿಸಬಹುದು. ಆದರೆ ಹೇಗೆ?
ನಾವು ಪವಿತ್ರಾತ್ಮದ ಮಾರ್ಗದರ್ಶನೆಯ ಕೆಳಗೆ ಬರೆಯಲ್ಪಟ್ಟ ಶಾಸ್ತ್ರೀಯ ಸಲಹೆಯನ್ನು ಅಲಕ್ಷಿಸುವುದಾದರೆ, ಆತ್ಮದ ವಿರುದ್ಧವಾಗಿ ಇಚ್ಛಾಪೂರ್ವಕವಾದ ಪಾಪವನ್ನು ಮಾಡುವ, ಯೆಹೋವನ ಅನುಗ್ರಹವನ್ನು ಕಳೆದುಕೊಳ್ಳುವ ಮತ್ತು ಅಂತಿಮವಾಗಿ ನಾಶನದಲ್ಲಿ ಫಲಿಸುವಂಥ ಸ್ವಭಾವಗುಣಗಳನ್ನು ಬೆಳೆಸಿಕೊಳ್ಳುವ ಸಾಧ್ಯತೆಯಿದೆ. (ಮತ್ತಾಯ 12:31, 32) ನಾವಿನ್ನೂ ಗಂಭೀರವಾದ ಪಾಪದಲ್ಲಿ ತೊಡಗಿರಲಿಕ್ಕಿಲ್ಲವಾದರೂ, ನಮ್ಮನ್ನು ಅಂತಿಮವಾಗಿ ಆತ್ಮದ ಮಾರ್ಗದರ್ಶನೆಗೆ ವ್ಯತಿರಿಕ್ತವಾದ ದಿಕ್ಕಿಗೆ ನಡೆಸುವ ತಪ್ಪಾದ ಮಾರ್ಗದಲ್ಲಿ ನಾವು ನಡೆಯಲಾರಂಭಿಸಿರಬಹುದು. ಇಂತಹ ಪರಿಸ್ಥಿತಿಗಳಲ್ಲಿ ನಾವು ಪವಿತ್ರಾತ್ಮವನ್ನು ದುಃಖಪಡಿಸುವವರಾಗುವೆವು.
ಹಾಗಾದರೆ, ನಾವು ದೇವರಾತ್ಮವನ್ನು ದುಃಖಪಡಿಸುವುದರಿಂದ ಹೇಗೆ ದೂರವಿರಬಲ್ಲೆವು? ನಾವು ನಮ್ಮ ಯೋಚನೆಗಳನ್ನೂ ವರ್ತನೆಗಳನ್ನೂ ಖಂಡಿತವಾಗಿಯೂ ನಿಯಂತ್ರಣದಲ್ಲಿರಿಸಬೇಕು. ಅಪೊಸ್ತಲ ಪೌಲನು ಎಫೆಸದವರಿಗೆ ಬರೆದ ಪತ್ರದ ನಾಲ್ಕನೆಯ ಅಧ್ಯಾಯದಲ್ಲಿ, ಅಸತ್ಯ ಹೇಳಿಕೆಗಳು, ಶಾಂತವಾಗದಿರುವ ಕೋಪ, ಸೋಮಾರಿತನ, ಮತ್ತು ಅಯೋಗ್ಯವಾದ ಮಾತುಗಳಂಥ ಪ್ರವೃತ್ತಿಗಳಿಂದ ದೂರವಿರುವ ವಿಷಯದಲ್ಲಿ ಮಾತಾಡಿದನು. ನಾವು “ನೂತನ ಸ್ವಭಾವ”ವನ್ನು ಧರಿಸಿದ ಬಳಿಕವೂ ಇಂಥ ಹಿಂದಿನ ಕೆಟ್ಟ ನಡತೆಗೆ ನಿಧಾನವಾಗಿ ತೇಲಿಕೊಂಡು ಹೋಗುವಲ್ಲಿ, ನಾವೇನು ಮಾಡುತ್ತಿದ್ದೇವೆ? ನಾವು ದೇವರ ವಾಕ್ಯವಾದ ಬೈಬಲಿನ ಆತ್ಮಪ್ರೇರಿತ ಸಲಹೆಗೆ ವಿರುದ್ಧವಾಗಿ ಹೋಗುತ್ತಿದ್ದೇವೆ. ಹೀಗೆ ಮಾಡುವುದರಿಂದ, ನಾವು ಪವಿತ್ರಾತ್ಮವನ್ನು ದುಃಖಪಡಿಸುವೆವು.
ಎಫೆಸ ಅಧ್ಯಾಯ 5ರಲ್ಲಿ, ನಾವು ಜಾರತ್ವದಲ್ಲಿ ಅಹಿತಕರವಾದ ಆಸಕ್ತಿಯನ್ನು ತೋರಿಸುವುದರಿಂದ ದೂರವಿರಬೇಕೆಂಬ ಪೌಲನ ಸಲಹೆಯ ಬಗ್ಗೆ ಓದುತ್ತೇವೆ. ಈ ಅಪೊಸ್ತಲನು ಜೊತೆ ವಿಶ್ವಾಸಿಗಳಿಗೆ, ನಾಚಿಕೆಗೆಟ್ಟ ನಡತೆ ಮತ್ತು ಅಶ್ಲೀಲ ತಮಾಷೆಯಿಂದಲೂ ದೂರವಿರುವಂತೆ ಉತ್ತೇಜಿಸುತ್ತಾನೆ. ನಾವು ದೇವರ ಪವಿತ್ರಾತ್ಮವನ್ನು ದುಃಖಪಡಿಸಲು ಬಯಸದಿರುವಲ್ಲಿ, ಮನೋರಂಜನೆಯನ್ನು ಆರಿಸಿಕೊಳ್ಳುವಾಗ ಆ ಸಲಹೆಯನ್ನು ಮನಸ್ಸಿನಲ್ಲಿಡಬೇಕು. ಇಂತಹ ವಿಷಯಗಳ ಕುರಿತು ಮಾತಾಡುವುದರಿಂದಲೊ, ಓದುವುದರಿಂದಲೊ, ಟೆಲಿವಿಷನ್ನಲ್ಲಿ ತೋರಿಸಲ್ಪಡುವುದನ್ನು ನೋಡುವುದರಿಂದಲೊ ಅವುಗಳಲ್ಲಿ ನಾವೇಕೆ ಆಸಕ್ತಿತೋರಿಸಬೇಕು?
ನಾವು ಆ ಆತ್ಮವನ್ನು ದುಃಖಪಡಿಸುವ ಇತರ ವಿಧಗಳೂ ಇವೆಯೆಂಬುದು ನಿಶ್ಚಯ. ಯೆಹೋವನ ಆತ್ಮವು ಸಭೆಯ ಐಕ್ಯವನ್ನು ವರ್ಧಿಸುತ್ತದೆ ನಿಜ, ಆದರೆ ನಾವು ಹಾನಿಕರವಾದ ಹರಟೆಯನ್ನು ಹಬ್ಬಿಸುವಲ್ಲಿ ಅಥವಾ ಸಭೆಯಲ್ಲಿ ನಮ್ಮದೇ ಆದ ಸಣ್ಣಸಣ್ಣ ಗುಂಪುಗಳನ್ನು ಕಟ್ಟಿ ಪ್ರೋತ್ಸಾಹಿಸುವಲ್ಲಿ ಆಗ ಏನಾಗಬಹುದು? ಆಗ ನಾವು ಐಕ್ಯದ ಕಡೆಗೆ ನಡೆಸುವ ಆತ್ಮದ ಮಾರ್ಗದರ್ಶನಕ್ಕೆ ವಿರೋಧವಾಗಿ ಕೆಲಸಮಾಡುತ್ತಿದ್ದೇವಲ್ಲವೇ? ಹೌದು, ಕೊರಿಂಥದ ಸಭೆಯಲ್ಲಿ ಭೇದ ಹುಟ್ಟಿಸಿದವರು ಮಾಡಿದಂತೆಯೇ, ಒಂದು ಸಾಮಾನ್ಯ ರೀತಿಯಲ್ಲಿ ನಾವೂ ಪವಿತ್ರಾತ್ಮವನ್ನು ದುಃಖಪಡಿಸುವವರಾಗುತ್ತೇವೆ. (1 ಕೊರಿಂಥ 1:10; 3:1-4, 16, 17) ಸಭೆಯ ಆತ್ಮನೇಮಿತ ಪುರುಷರಿಗೆ ಸಿಗಬೇಕಾದ ಸನ್ಮಾನವನ್ನು ನಾವು ಬೇಕುಬೇಕೆಂದು ಕೆಡವಿ ಹಾಕುವಲ್ಲಿಯೂ ನಾವು ಆತ್ಮವನ್ನು ದುಃಖಪಡಿಸುವೆವು.—ಅ. ಕೃತ್ಯಗಳು 20:28; ಯೂದ 8.
ಆದುದರಿಂದ, ಪವಿತ್ರಾತ್ಮದ ಮಾರ್ಗದರ್ಶನೆ ಎಂದು ನಾವು ತಿಳಿದಿರುವ ವಿಷಯಗಳ ಬೆಳಕಿನಲ್ಲಿ, ನಮ್ಮ ಮನೋಭಾವ ಮತ್ತು ವರ್ತನೆಗಳನ್ನು ಪರಿಗಣಿಸುವುದು ವಿವೇಕಪ್ರದ. ಈ ಮಾರ್ಗದರ್ಶನೆಯು ಬೈಬಲು ಮತ್ತು ಕ್ರೈಸ್ತ ಸಭೆಯಲ್ಲಿ ಪ್ರತಿಬಿಂಬಿಸಲ್ಪಡುತ್ತದೆ. ನಾವು “ಪವಿತ್ರಾತ್ಮಪ್ರೇರಿತರಾಗಿ ಪ್ರಾರ್ಥನೆಮಾಡುತ್ತಾ,” ಅದರ ಪ್ರಭಾವಕ್ಕೆ ಮಣಿಯುತ್ತ ಮತ್ತು ದೇವರ ಪ್ರೇರಿತ ವಾಕ್ಯದಲ್ಲಿ ಏನು ಹೇಳಲಾಗಿದೆಯೊ ಅದಕ್ಕೆ ಹೊಂದಿಕೆಯಾಗಿ ಸದಾ ಕ್ರಿಯೆಗೈಯುತ್ತಲೂ ಇರೋಣ. (ಯೂದ 20) ಆತ್ಮವನ್ನು ಎಂದಿಗೂ ದುಃಖಪಡಿಸದೇ, ಯೆಹೋವನ ಪವಿತ್ರ ನಾಮದ ಘನತೆಗಾಗಿ ಅದರಿಂದ ಸದಾ ನಡೆಸಲ್ಪಡುವುದು ನಮ್ಮ ದೃಢನಿರ್ಣಯವಾಗಿರಲಿ.
• ಐಶ್ವರ್ಯವಂತನು ರಾಜ್ಯದೊಳಕ್ಕೆ ಪ್ರವೇಶಿಸಲು ಪಡುವಂಥ ಕಷ್ಟವನ್ನು, ಒಂಟೆಯು ಸೂಜಿಯಕಣ್ಣಿನೊಳಗಿಂದ ದಾಟಿ ಹೋಗಲು ಪ್ರಯತ್ನಿಸುವುದಕ್ಕೆ ಯೇಸು ಕ್ರಿಸ್ತನು ಹೋಲಿಸಿದನು. ಯೇಸು ಅಕ್ಷರಾರ್ಥದ ಒಂಟೆ ಮತ್ತು ನಿಜವಾದ ಹೊಲಿಗೆಯ ಸೂಜಿಯನ್ನು ಅರ್ಥೈಸಿ ಹೇಳಿದನೊ?
ಈ ಹೇಳಿಕೆಯ ಕುರಿತಾದ ಮೂರು ಶಾಸ್ತ್ರೀಯ ವೃತ್ತಾಂತಗಳಲ್ಲಿ ಎರಡು ತೀರ ಸಮಾನವಾಗಿವೆ. ಮತ್ತಾಯನ ವೃತ್ತಾಂತಕ್ಕನುಸಾರ, “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವದು ಸುಲಭ” ಎಂದು ಯೇಸು ಹೇಳಿದನು. (ಮತ್ತಾಯ 19:24) ತದ್ರೀತಿಯಲ್ಲಿ, ಮಾರ್ಕ 10:25 ಹೇಳುವುದು: “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜೀಕಣ್ಣಿನಲ್ಲಿ ನುಗ್ಗಿಹೋಗುವದು ಸುಲಭ.”
ಕೆಲವು ಪರಾಮರ್ಶೆ ಗ್ರಂಥಗಳು, ಈ “ಸೂಜಿಯ ಕಣ್ಣು” ಯೆರೂಸಲೇಮಿನ ಹೆಬ್ಬಾಗಿಲುಗಳೊಂದರಲ್ಲಿ ಇರುವ ಒಂದು ಚಿಕ್ಕ ಬಾಗಿಲಾಗಿತ್ತು ಎಂದು ಹೇಳುತ್ತವೆ. ರಾತ್ರಿಯಲ್ಲಿ ಹೆಬ್ಬಾಗಿಲು ಮುಚ್ಚಿರುವಾಗ ಚಿಕ್ಕ ಬಾಗಿಲನ್ನು ತೆರೆಯಸಾಧ್ಯವಿತ್ತು. ಮತ್ತು ಒಂಟೆ ಇದರಲ್ಲಿ ನುಗ್ಗಿ ಒಳಗೆ ಪ್ರವೇಶಿಸಬಹುದಾಗಿತ್ತೆಂದು ನಂಬಲಾಗುತ್ತದೆ. ಆದರೆ ಯೇಸುವಿನ ಮನಸ್ಸಿನಲ್ಲಿದ್ದ ವಿಚಾರ ಇದಾಗಿತ್ತೊ?
ಇಲ್ಲವೆಂದು ವ್ಯಕ್ತವಾಗುತ್ತದೆ. ಯೇಸು ಹೊಲಿಗೆಯ ಸೂಜಿಯನ್ನು ಸೂಚಿಸುತ್ತಿದ್ದಿರಬೇಕೆಂದು ವ್ಯಕ್ತವಾಗುತ್ತದೆ. ಆ ಪ್ರದೇಶದಲ್ಲಿ ಪೂರ್ವಕಾಲದ ಎಲುಬಿನ ಮತ್ತು ಲೋಹದ ಸೂಜಿಗಳು ಕಂಡುಹಿಡಿಯಲ್ಪಟ್ಟಿರುವುದರಿಂದ ಅವು ಸಾಮಾನ್ಯ ಗೃಹೋಪಯೋಗದ ವಸ್ತುಗಳಾಗಿದ್ದಿರಬೇಕು. ಲೂಕ 18:25 ಯೇಸುವಿನ ಮಾತುಗಳ ಬಗ್ಗೆ ಇರುವ ಯಾವುದೇ ಅನಿಶ್ಚಿತತೆಯನ್ನು ತೆಗೆದುಹಾಕುತ್ತದೆ. ಯೇಸು ಹೇಳಿದ್ದನ್ನು ಅಲ್ಲಿ ಹೀಗೆ ಉಲ್ಲೇಖಿಸಲಾಗಿದೆ: “ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು [“ಹೊಲಿಗೆಯ,” NW] ಸೂಜೀಕಣ್ಣಿನಲ್ಲಿ ನುಗ್ಗುವದು ಸುಲಭ.”
“ಹೊಲಿಗೆಯ ಸೂಜಿ” ಎಂಬ ಪದಗಳನ್ನು ವಿವಿಧ ನಿಘಂಟುಕಾರರು ಒಪ್ಪುತ್ತಾರೆ. ಇವುಗಳನ್ನು ನೂತನ ಲೋಕ ಭಾಷಾಂತರದಲ್ಲಿb ಉಪಯೋಗಿಸಲಾಗಿದೆ. ಮತ್ತಾಯ 19:24 ಮತ್ತು ಮಾರ್ಕ 10:25ರಲ್ಲಿರುವ “ಸೂಜಿ”ಗಾಗಿರುವ ಗ್ರೀಕ್ ಪದ (ರಾಫಿಸ್) ‘ಹೊಲಿ’ ಎಂಬ ಕ್ರಿಯಾಪದದಿಂದ ಬಂದಿದೆ. ಮತ್ತು ಲೂಕ 18:25ರ ಗ್ರೀಕ್ ಪದ (ವೆಲೋನೀ) ಅಕ್ಷರಾರ್ಥದ ಶಸ್ತ್ರಚಿಕಿತ್ಸಾ ಸೂಜಿಗೆ ಸೂಚಿಸಲು ಉಪಯೋಗಿಸಲಾಗಿದೆ. ವೈನ್ಸ್ ಎಕ್ಸ್ಪೊಸಿಟರಿ ಡಿಕ್ಷನೆರಿ ಆಫ್ ಓಲ್ಡ್ ಆ್ಯಂಡ್ ನ್ಯೂ ಟೆಸ್ಟಮೆಂಟ್ ವರ್ಡ್ಸ್ ಹೇಳುವುದು: “‘ಸೂಜಿಯ ಕಣ್ಣನ್ನು’ ಚಿಕ್ಕ ಬಾಗಿಲುಗಳಿಗೆ ಅನ್ವಯಿಸುವ ವಿಚಾರವು ಆಧುನಿಕ ಕಾಲದ್ದಾಗಿದೆ. ಅದನ್ನು ಹಿಂದೆ ಹಾಗೆ ಸೂಚಿಸಲಾಗಿತ್ತು ಎಂಬುದಕ್ಕೆ ಪುರಾವೆಯಿಲ್ಲ. ಈ ಹೇಳಿಕೆಯನ್ನು ಯೇಸು ಮಾಡಿದ ಉದ್ದೇಶವು ಮಾನವ ಅಸಾಧ್ಯತೆಯನ್ನು ವ್ಯಕ್ತಪಡಿಸಲಿಕ್ಕಾಗಿರುವುದರಿಂದ, ಆ ಸಾಮಾನ್ಯ ಸೂಜಿಗೆ ಇನ್ನೊಂದು ಅರ್ಥವನ್ನು ಕೊಟ್ಟು ಆ ಕಷ್ಟವನ್ನು ಹಗುರಗೊಳಿಸುವ ಆವಶ್ಯಕತೆ ಇರುವದಿಲ್ಲ.”—1981, ಸಂಪುಟ 3, ಪುಟ 106.
ಇನ್ನು ಕೆಲವರು ಈ ವಚನಗಳಲ್ಲಿ “ಒಂಟೆ”ಯನ್ನು ಹಗ್ಗವಾಗಿ ಭಾಷಾಂತರಿಸಬೇಕೆಂದು ಸೂಚಿಸುತ್ತಾರೆ. ಹಗ್ಗ (ಕೇಮಿಲಾಸ್) ಮತ್ತು ಒಂಟೆ (ಕೇಮೆಲಾಸ್) ಎಂಬುದಕ್ಕಿರುವ ಗ್ರೀಕ್ ಪದಗಳು ಸದೃಶವಾಗಿವೆ. ಆದರೂ ಮತ್ತಾಯನ ಸುವಾರ್ತೆಯ ಅಸ್ತಿತ್ವದಲ್ಲಿರುವ ಅತಿ ಹಳೆಯ ಗ್ರೀಕ್ ಹಸ್ತಪ್ರತಿ (ಸೈನಾಯ್ಟಿಕ್, ವ್ಯಾಟಿಕನ್ ನಂ. 1209 ಮತ್ತು ಅಲೆಕ್ಸಾಂಡ್ರಿನ್)ಗಳಲ್ಲಿ, ಮತ್ತಾಯ 19:24ರಲ್ಲಿ “ಹಗ್ಗ”ಕ್ಕೆ ಬದಲು “ಒಂಟೆ”ಯನ್ನು ಸೂಚಿಸುವ ಗ್ರೀಕ್ ಪದ ತೋರಿಬರುತ್ತದೆ. ಮತ್ತಾಯನು ತನ್ನ ಸುವಾರ್ತೆಯನ್ನು ಮೊದಲು ಹೀಬ್ರುವಿನಲ್ಲಿ ಬರೆದು ಆಮೇಲೆ ಸ್ವತಃ ಅದನ್ನು ಗ್ರೀಕ್ ಭಾಷೆಗೆ ಭಾಷಾಂತರಿಸಿದನೆಂದು ಹೇಳಲಾಗುತ್ತದೆ. ಯೇಸು ಏನೆಂದನೆಂಬುದು ಮತ್ತಾಯನಿಗೆ ಸರಿಯಾಗಿ ತಿಳಿದಿತ್ತು ಮತ್ತು ಆದಕಾರಣ ಅವನು ಸೂಕ್ತ ಪದವನ್ನೇ ಉಪಯೋಗಿಸಿದನು.
ಹಾಗಾದರೆ, ಅಕ್ಷರಾರ್ಥವಾದ ಹೊಲಿಗೆಯ ಸೂಜಿ ಮತ್ತು ನಿಜವಾದ ಒಂಟೆಯನ್ನು ಯೇಸು ಅರ್ಥೈಸಿದನು. ಒಂದು ವಿಷಯದ ಅಸಾಧ್ಯತೆಯನ್ನು ಒತ್ತಿಹೇಳಲು ಅವನು ಇವುಗಳನ್ನು ಉಪಯೋಗಿಸಿದನು. ಆದರೆ ಐಶ್ವರ್ಯವಂತನಾದ ಯಾವನೂ ರಾಜ್ಯವನ್ನು ಎಂದಿಗೂ ಸೇರಲಾರನೆಂದು ಯೇಸು ಅರ್ಥೈಸಿದನೊ? ಇಲ್ಲ, ಯೇಸುವಿನ ಈ ಮಾತುಗಳನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಬಾರದು. ಅವನು ಉತ್ಪ್ರೇಕ್ಷಾಲಂಕಾರವನ್ನು ಉಪಯೋಗಿಸುತ್ತಿದ್ದನು. ಅಕ್ಷರಾರ್ಥದ ಒಂಟೆ ನಿಜವಾದ ಸೂಜೀಕಣ್ಣಿನೊಳಗಿಂದ ದಾಟಿ ಹೋಗುವದು ಹೇಗೆ ಅಸಾಧ್ಯವೊ ಹಾಗೆಯೇ ಒಬ್ಬ ಧನಿಕನು ತನ್ನ ಧನಕ್ಕೆ ಅಂಟಿಕೊಳ್ಳುತ್ತ ಇದ್ದು ತನ್ನ ಜೀವನದಲ್ಲಿ ಯೆಹೋವನನ್ನು ಪ್ರಥಮವಾಗಿ ಇಡದಿರುವಲ್ಲಿ ದೇವರ ರಾಜ್ಯವನ್ನು ಪ್ರವೇಶಿಸುವುದೂ ಅಸಾಧ್ಯವೆಂಬುದನ್ನು ದೃಷ್ಟಾಂತಿಸಲು ಅವನು ಇದನ್ನು ಉಪಯೋಗಿಸಿದನು.—ಲೂಕ 13:24; 1 ತಿಮೊಥೆಯ 6:17-19.
ಯೇಸು ಹಾಗಂದದ್ದು ಒಬ್ಬ ಧನವಂತನಾದ ಯುವ ಅಧಿಕಾರಿಯು ಯೇಸುವಿನ ಹಿಂಬಾಲಕನಾಗುವ ಸದವಕಾಶವನ್ನು ತಳ್ಳಿಹಾಕಿದ ನಂತರವೇ. (ಲೂಕ 18:18-24) ಆಧ್ಯಾತ್ಮಿಕ ವಿಷಯಗಳಿಗಿಂತ ತನ್ನ ಸ್ವತ್ತುಗಳ ಮೇಲೆ ಹೆಚ್ಚು ಪ್ರೀತಿಯನ್ನಿಡುವ ಒಬ್ಬ ಧನಿಕನು ರಾಜ್ಯದ ಏರ್ಪಾಡಿನಲ್ಲಿ ನಿತ್ಯಜೀವ ಪಡೆಯುವುದನ್ನು ನಿರೀಕ್ಷಿಸಲಾರನು. ಆದರೂ, ಕೆಲವು ಮಂದಿ ಧನಿಕರು ಯೇಸುವಿನ ಶಿಷ್ಯರಾಗಿ ಪರಿಣಮಿಸಿದ್ದೇನೋ ನಿಜ. (ಮತ್ತಾಯ 27:57; ಲೂಕ 19:2, 9) ತನ್ನ ಆಧ್ಯಾತ್ಮಿಕ ಅಗತ್ಯಗಳ ಪ್ರಜ್ಞೆಯಿರುವ ಮತ್ತು ದೈವಿಕ ಸಹಾಯವನ್ನು ಹುಡುಕುವ ಒಬ್ಬ ಧನಿಕನು ದೇವದತ್ತ ರಕ್ಷಣೆಯನ್ನು ಪಡೆಯಲು ಸಾಧ್ಯವಿದೆ.—ಮತ್ತಾಯ 5:3; 19:16-26.
[ಪಾದಟಿಪ್ಪಣಿಗಳು]
a ಯೆಹೋವನ ಸಾಕ್ಷಿಗಳ ಪ್ರಕಾಶನವಾದ, ನೀವು ತ್ರೈಯೈಕ್ಯವನ್ನು ನಂಬ ಬೇಕೋ? ಎಂಬ ಬ್ರೋಷರನ್ನು ನೋಡಿ.
b ಕನ್ನಡದಲ್ಲಿ ಲಭ್ಯವಿಲ್ಲ.