ಅಧ್ಯಾಯ 102
ಯೆರೂಸಲೇಮಿನೊಳಗೆ ಕ್ರಿಸ್ತನ ವಿಜಯೋತ್ಸಾಹದ ಪ್ರವೇಶ
ಮರು ದಿನ ಬೆಳಿಗ್ಗೆ, ಆದಿತ್ಯವಾರ, ನೈಸಾನ್ 9, ಯೇಸುವು ತನ್ನ ಶಿಷ್ಯರೊಂದಿಗೆ ಬೇಥಾನ್ಯವನ್ನು ಬಿಟ್ಟು, ಯೆರೂಸಲೇಮಿಗೆ ಸಮೀಪಿಸಿ, ಎಣ್ಣೆಯ ಮರಗಳ ಗುಡ್ಡದೆಡೆಗೆ ತೆರಳುತ್ತಾನೆ. ಕೊಂಚ ಸಮಯದೊಳಗೆ ಅವರು ಬೇತ್ಫಗೆಗೆ ಸಮೀಪಿಸುತ್ತಾರೆ, ಇದು ಎಣ್ಣೇ ಮರಗಳ ಗುಡ್ಡದಲ್ಲಿತ್ತು. ಯೇಸುವು ಅವನ ಶಿಷ್ಯರಲ್ಲಿ ಇಬ್ಬರಿಗೆ ಹೇಳುವದು:
“ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಹೋದಕೂಡಲೇ ಅಲ್ಲಿ ಕಟ್ಟಿರುವ ಕತ್ತೆಯನ್ನೂ ಅದರ ಕೂಡ ಇರುವ ಮರಿಯನ್ನೂ ಕಾಣುವಿರಿ; ಅವುಗಳನ್ನು ಬಿಚ್ಚಿ ನನ್ನ ಹತ್ತರಕ್ಕೆ ಹಿಡುಕೊಂಡು ಬನ್ನಿರಿ. ಯಾವನಾದರೂ ನಿಮಗೆ ಏನಾದರೂ ಹೇಳಿದರೆ, ಇವು ಸ್ವಾಮಿಯವರಿಗೆ ಬೇಕಾಗಿವೆ ಅನ್ನಿರಿ; ಕೂಡಲೆ ಬಿಟ್ಟುಕೊಡುವನು.”
ಆರಂಭದಲ್ಲಿ ಶಿಷ್ಯರು ಬೈಬಲಿನ ಪ್ರವಾದನೆಯ ನೆರವೇರಿಕೆಯೊಂದಿಗೆ ಈ ಆಜ್ಞೆಗಳಿಗೆ ಏನಾದರೂ ಸಂಬಂಧವಿದೆ ಎಂದು ಅರ್ಥೈಸಿಕೊಳ್ಳಲು ತಪ್ಪಿಹೋದರೂ, ಅನಂತರ ಅಂಥಾ ಸಂಬಂಧವಿದೆ ಎಂದು ತಿಳಿದು ಕೊಳ್ಳುತ್ತಾರೆ. ಪ್ರವಾದಿಯಾದ ಜೆಕರ್ಯನು, ದೇವರ ವಾಗ್ದಾನಿತ ಅರಸನು ಯೆರೂಸಲೇಮಿನೊಳಗೆ ಒಂದು ಕತ್ತೆಯ ಮೇಲೆ, ಹೌದು, “ಪ್ರಾಯದ ಕತ್ತೆಮರಿಯನ್ನು” ಹತ್ತಿದವನಾಗಿ ಬರುವನೆಂದು ಮುಂತಿಳಿಸಿದ್ದನು. ಅರಸನಾಗಿದ್ದ ಸೊಲೊಮೋನನು ತದ್ರೀತಿಯಲ್ಲಿ ಅವನನ್ನು ಅಭಿಷೇಕ ಮಾಡಿದ ನಂತರ ಒಂದು ಕತ್ತೆಯ ಮೇಲೆ ಸವಾರಿಮಾಡಿದ್ದನು.
ಶಿಷ್ಯರು ಬೇತ್ಫಗೆಯನ್ನು ಪ್ರವೇಶಿಸಿ, ಕತ್ತೆಯ ಮರಿಯನ್ನು ಅದರ ತಾಯಿಯೊಂದಿಗೆ ಇರುವದನ್ನು ಕಂಡು ಬಿಚ್ಚುತ್ತಾರೆ, ಆಗ ಅಲ್ಲಿ ನಿಂತಿದ್ದವರಲ್ಲಿ ಕೆಲವರು ಕೇಳುತ್ತಾರೆ: “ಈ ಮರಿಯನ್ನು ಬಿಚ್ಚಿ ಏನು ಮಾಡುತ್ತೀರಿ?” ಆದರೆ ಆ ಪ್ರಾಣಿಗಳು ಸ್ವಾಮಿಗೆ ಬೇಕಾಗಿವೆ ಎಂದು ಹೇಳಿದಾಗ, ಯೇಸುವಿನ ಬಳಿಗೆ ಶಿಷ್ಯರು ಅವನ್ನು ತೆಗೆದುಕೊಂಡು ಹೋಗಲು ಬಿಡುತ್ತಾರೆ. ಶಿಷ್ಯರು ತಾಯಿ ಕತ್ತೆಯ ಮತ್ತು ಅದರ ಮರಿಯ ಮೇಲೆ ಅವರ ಹೊರ ಹೊದಿಕೆಯ ಬಟ್ಟೆಗಳನ್ನು ಹಾಕುತ್ತಾರೆ, ಆದರೆ ಯೇಸು ಕತ್ತೇಮರಿಯನ್ನು ಹತ್ತಿ ಕೂತುಕೊಳ್ಳುತ್ತಾನೆ.
ಯೇಸುವು ಯೆರೂಸಲೇಮಿನೆಡೆಗೆ ಸವಾರಿ ಮಾಡುತ್ತಾ ಹೋಗುವಾಗ, ಜನಸಮೂಹವು ವೃದ್ಧಿಯಾಗುತ್ತದೆ. ಅನೇಕ ಜನರು ದಾರಿಯ ಮೇಲೆ ತಮ್ಮ ಹೊರ ಹೊದಿಕೆಯ ಬಟ್ಟೆಗಳನ್ನು ಹಾಸಿದರು ಮತ್ತು ಇನ್ನಿತರರು ಮರಗಳಿಂದ ಕೊಂಬೆಗಳನ್ನು ಕತ್ತರಿಸಿ, ಅದನ್ನು ಹಾಸಿದರು. “ಜಯ, ಯೆಹೋವನ ಹೆಸರಿನಲ್ಲಿ ಬರುವ ಅರಸನಿಗೆ ಆಶೀರ್ವಾದ” ಎಂದವರು ಆರ್ಭಟಿಸಿದರು. “ಪರಲೋಕದಲ್ಲಿ ಮಂಗಳ, ಮೇಲಣ ಲೋಕಗಳಲ್ಲಿ ಮಹಿಮೆ.”
ಗುಂಪಿನಲ್ಲಿದ್ದ ಕೆಲವು ಫರಿಸಾಯರು ಈ ಘೋಷಣೆಗಳಿಂದ ಅತೃಪ್ತರಾದರು ಮತ್ತು ಯೇಸುವಿಗೆ ದೂರಿಟ್ಟರು: “ಬೋಧಕನೇ, ನಿನ್ನ ಶಿಷ್ಯರನ್ನು ಗದರಿಸು.” ಆದರೆ ಯೇಸುವು ಉತ್ತರಿಸುವದು: “ಇವರು ಸುಮ್ಮನಾದರೆ ಈ ಕಲ್ಲುಗಳೇ ಕೂಗುವವು ಎಂದು ನಿಮಗೆ ಹೇಳುತ್ತೇನೆ.”
ಯೇಸುವು ಯೆರೂಸಲೇಮಿಗೆ ಸಮೀಪಿಸಿದಾಗ, ಅವನು ಪಟ್ಟಣವನ್ನು ದೃಷ್ಟಿಸುತ್ತಾನೆ ಮತ್ತು ಅಳಲಾರಂಭಿಸಿ, ಹೇಳುವದು: “ನೀನಾದರೂ ಸಮಾಧಾನಕ್ಕೆ ಬೇಕಾದದ್ದನ್ನು ಇದೇ ದಿನದಲ್ಲಿ ತಿಳಿದುಕೊಂಡರೆ ಎಷ್ಟೋ ಒಳ್ಳೇದು. ಆದರೆ ಅದು ನಿನ್ನ ಕಣ್ಣಿಗೆ ಮರೆಯಾಗಿದೆ.” ಅವಳ ಸ್ವ-ಇಚ್ಛೆಯ ಅವಿಧೇಯತೆಗಾಗಿ, ಯೆರೂಸಲೇಮ್ ಬೆಲೆಯನ್ನು ತೆರಬೇಕಿತ್ತು, ಯೇಸುವು ಮುನ್ನುಡಿದದ್ದು:
“ನಿನ್ನ ವೈರಿಗಳು [ಜನರಲ್ ಟೈಟಸ್ನ ಕೆಳಗಿನ ರೋಮನರು] ಒಡ್ಡುಕಟ್ಟಿ ನಿನ್ನ ಸುತ್ತಲೂ ಮುತ್ತಿಗೆ ಹಾಕಿ ಎಲ್ಲಾ ಕಡೆಗಳಲ್ಲಿಯೂ ನಿನ್ನನ್ನು ಬಂದು ಮಾಡಿ ನಿನ್ನನ್ನೂ ನಿನ್ನೊಳಗಿರುವ ನಿನ್ನ ಜನರನ್ನೂ ನಿರ್ಮೂಲಮಾಡಿ ನಿನ್ನಲ್ಲಿ ಕಲ್ಲಿನ ಮೇಲೆ ಕಲ್ಲು ನಿಲ್ಲದಂತೆ ಮಾಡುವ ದಿವಸಗಳು ನಿನ್ನ ಮೇಲೆ ಬರುವವು.” ಯೇಸುವಿನಿಂದ ಮುಂತಿಳಿಸಲ್ಪಟ್ಟ ಯೆರೂಸಲೇಮಿನ ಈ ನಾಶನವು ನೈಜವಾಗಿ, 33 ವರುಷಗಳ ನಂತರ, ಅಂದರೆ ಸಾ.ಶ. 70-ರಲ್ಲಿ ಸಂಭವಿಸುತ್ತದೆ.
ಕೆಲವೇ ವಾರಗಳ ಮೊದಲು, ಜನಸಮೂಹದಲ್ಲಿದ್ದ ಅನೇಕರು, ಯೇಸುವು ಲಾಜರನನ್ನು ಪುನರುತ್ಥಾನಗೊಳಿಸಿದ್ದನ್ನು ಕಂಡಿದ್ದರು. ಈಗ ಇವರು ಇತರರಿಗೆ ಈ ಅದ್ಭುತದ ಕುರಿತು ಹೇಳುತ್ತಾ ಇದ್ದರು. ಇದರಿಂದ ಯೇಸುವು ಯೆರೂಸಲೇಮನ್ನು ಸೇರಿದಾಗ, ಪಟ್ಟಣವೆಲ್ಲಾ ಗದ್ದಲದಿಂದ ತುಂಬಿಹೋಯಿತು. “ಇವನು ಯಾರು?” ಜನರು ತಿಳಿಯಲು ಬಯಸಿದರು. ಮತ್ತು ಜನರ ಗುಂಪು ಹೇಳಲಾರಂಭಿಸಿತು: “ಈತನು ಆ ಪ್ರವಾದಿ, ಗಲಿಲಾಯದ ನಜರೇತಿನ ಯೇಸು!” ಸಂಭವಿಸುತ್ತಿರುವದನ್ನು ಕಂಡು, ಫರಿಸಾಯರು ತಮ್ಮ ಯತ್ನವೇನೂ ಸಾಗುವದಿಲ್ಲ ಎಂದು ವ್ಯಥೆಪಡುತ್ತಾ ಹೇಳುವದು: “ಲೋಕವೆಲ್ಲಾ ಆತನ ಹಿಂದೆ ಹೋಯಿತಲ್ಲಾ.”
ಯೆರೂಸಲೇಮಿಗೆ ಅವನು ಭೇಟಿ ನೀಡುವಾಗ, ವಾಡಿಕೆಯ ಪ್ರಕಾರ ಯೇಸುವು ದೇವಾಲಯದಲ್ಲಿ ಉಪದೇಶಿಸಲು ಹೋಗುತ್ತಾನೆ. ಅಲ್ಲಿ ಕುರುಡರೂ, ಅಂಗವಿಕಲರೂ ಅವನ ಬಳಿಗೆ ಬಂದಾಗ, ಅವನು ಅವರನ್ನು ಸ್ವಸ್ಥಗೊಳಿಸುತ್ತಾನೆ. ಮಹಾ ಯಾಜಕರೂ ಶಾಸ್ತ್ರಿಗಳೂ ಆತನು ಮಾಡಿದ ಆಶ್ಚರ್ಯಕರವಾದ ಕಾರ್ಯಗಳನ್ನು ಕಂಡಾಗ, “ದಾವೀದನ ಕುಮಾರನೇ, ನಮ್ಮನ್ನು ರಕ್ಷಿಸು” ಎಂದು ದೇವಾಲಯದಲ್ಲಿ ಹುಡುಗರು ಕೂಗುವದನ್ನು ಕೇಳಿದಾಗ, ಅವರು ಸಿಟ್ಟುಗೊಳ್ಳುತ್ತಾರೆ. “ಇವರು ಹೇಳುವದನ್ನು ಕೇಳುತ್ತಿಯಾ?” ಎಂದವರು ಪ್ರತಿಭಟಿಸುತ್ತಾರೆ.
“ಹೌದು,” ಯೇಸುವು ಉತ್ತರಿಸುತ್ತಾನೆ. “ಕೇಳುತ್ತೇನೆ, ಸಣ್ಣ ಮಕ್ಕಳ ಬಾಯಿಂದಲೂ ಮೊಲೇಕೂಸುಗಳ ಬಾಯಿಂದಲೂ ಸ್ತೋತ್ರವನ್ನು ಸಿದ್ಧಿಗೆ ತಂದಿ ಎಂಬದನ್ನು ನೀವು ಎಂದಾದರೂ ಓದಲಿಲ್ಲವೋ?”
ಯೇಸುವು ಉಪದೇಶಿಸುವದನ್ನು ಮುಂದುವರಿಸುತ್ತಾನೆ ಮತ್ತು ದೇವಾಲಯದ ಸುತ್ತಲೂ ಎಲ್ಲಾ ಸಂಗತಿಗಳನ್ನು ನೋಡುತ್ತಾನೆ. ಅಷ್ಟರಲ್ಲಿ ಅದು ತುಂಬಾ ತಡವಾಗಿತ್ತು. ಆದುದರಿಂದ ಅವನು ತನ್ನ 12 ಮಂದಿಯೊಂದಿಗೆ ಪುನಃ ಸುಮಾರು ಮೂರು ಕಿಲೊಮೀಟರ್ ಹಿಂದಕ್ಕೆ ಪ್ರಯಾಣಿಸಿ, ಬೇಥಾನ್ಯಕ್ಕೆ ಬರುತ್ತಾನೆ. ಅಲ್ಲಿ ಅವನು ಆದಿತ್ಯವಾರದ ರಾತ್ರಿಯನ್ನು, ಪ್ರಾಯಶಃ ಅವನ ಮಿತ್ರನಾದ ಲಾಜರನ ಮನೆಯಲ್ಲಿ ಕಳೆದಿರಬಹುದು. ಮತ್ತಾಯ 21:1-11, 14-17; ಮಾರ್ಕ 11:1-11; ಲೂಕ 19:29-44; ಯೋಹಾನ 12:12-19; ಜೆಕರ್ಯ 9:9.
▪ ಅರಸನೋಪಾದಿ ಯೇಸುವು ಯಾವಾಗ ಮತ್ತು ಹೇಗೆ ಯೆರೂಸಲೇಮನ್ನು ಪ್ರವೇಶಿಸಿದನು?
▪ ಯೇಸುವನ್ನು ಜನರ ಗುಂಪು ಹೊಗಳುವದು ಯಾಕೆ ಅತ್ಯಾವಶ್ಯಕವಾಗಿತ್ತು?
▪ ಯೆರೂಸಲೇಮನ್ನು ಯೇಸುವು ದೃಷ್ಟಿಸಿ ನೋಡಿದಾಗ ಆತನ ಭಾವನೆಗಳು ಏನಾಗಿದ್ದವು, ಮತ್ತು ಅವನು ಯಾವ ಪ್ರವಾದನೆಯನ್ನು ನುಡಿದನು?
▪ ದೇವಾಲಯಕ್ಕೆ ಯೇಸುವು ಹೋದಾಗ ಏನು ಸಂಭವಿಸುತ್ತದೆ?