ಅಧ್ಯಾಯ 108
ಯೇಸುವನ್ನು ಸಿಕ್ಕಿಸಿಹಾಕುವದರಲ್ಲಿ ಅವರು ಸೋತುಹೋಗುತ್ತಾರೆ
ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಿದ್ದನು ಮತ್ತು ಅವನ ಧಾರ್ಮಿಕ ಶತ್ರುಗಳಿಗೆ, ಅವರ ದುಷ್ಟತನವನ್ನು ಬಯಲುಗೊಳಿಸುವ ಮೂರು ಸಾಮ್ಯಗಳ ತಿಳಿಸಿದ್ದರ ಕಾರಣ, ಫರಿಸಾಯರು ಸಿಟ್ಟುಗೊಂಡು, ಅವನನ್ನು ದಸ್ತಗಿರಿ ಮಾಡಲು ಸಾಧ್ಯವಾಗುವಂತೆ ಏನಾದರೂ ಒಂದು ವಿಷಯದಲ್ಲಿ ಅವನನ್ನು ಸಿಕ್ಕಿಸಿಹಾಕಲು ಆಲೋಚನೆ ಮಾಡಿದರು. ಅವರೊಂದು ಹಂಚಿಕೆಯನ್ನು ಹೂಡಿ, ಅವನನ್ನು ಸಿಕ್ಕಿಸಿ ಹಾಕಲು ತಮ್ಮ ಶಿಷ್ಯರನ್ನು ಹೆರೋದಿಯರ ಕೂಡ ಕಳುಹಿಸಿದರು.
“ಗುರುವೇ,” ಈ ಮನುಷ್ಯರು ಹೇಳುವದು, “ನೀನು ಸತ್ಯವಂತನು, ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸುವವನು, ಯಾರಿಗೂ ಹೆದರದವನು; ನೀನು ಜನರ ಮುಖದಿಚ್ಛೆಗೆ ಮಾತಾಡುವವನಲ್ಲ ಎಂದು ಬಲ್ಲೆವು. ಹೀಗಿರಲಾಗಿ ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು.”
ಮುಖಸುತ್ತಿಯಿಂದ ಯೇಸುವು ಮರುಳಾಗಲಿಲ್ಲ. ‘ಅಲ್ಲ, ಈ ತೆರಿಗೆಯನ್ನು ಕೊಡುವದು ಕಾನೂನುಬದ್ಧವಲ್ಲ ಯಾ ಸರಿಯಲ್ಲ’ ಎಂದು ಅವನು ಹೇಳಿದರೆ, ರೋಮಿನ ವಿರುದ್ಧ ದೇಶದ್ರೋಹಕ್ಕೆ ದೋಷಿಯಾಗುತ್ತಿದ್ದನು ಎಂದು ತಿಳಿದು ಕೊಂಡನು. ಆದರೂ, ಅವನು ‘ಹೌದು, ನೀವು ತೆರಿಗೆ ಕೊಡತಕ್ಕದ್ದು’ ಎಂದು ಹೇಳಿದರೆ, ರೋಮಿನ ಅಡಿಯಾಳಾಗಿ ಇರುವದನ್ನು ಧಿಕ್ಕರಿಸುತ್ತಿದ್ದ ಯೆಹೂದ್ಯರು ಅವನನ್ನು ದ್ವೇಷಿಸಾರು. ಆದುದರಿಂದ ಅವನು ಉತ್ತರಿಸುವದು: “ಕಪಟಿಗಳೇ, ನನ್ನನ್ನು ಯಾಕೆ ಪರೀಕ್ಷೆ ಮಾಡುತ್ತೀರಿ? ತೆರಿಗೆಗೆ ಕೊಡುವ ನಾಣ್ಯವನ್ನು ನನಗೆ ತೋರಿಸಿರಿ.”
ಅವರು ಆತನಿಗೆ ಒಂದು ನಾಣ್ಯವನ್ನು ತಂದಾಗ, ಅವನು ವಿಚಾರಿಸುವದು: “ಈ ತಲೆಯೂ ಈ ಮುದ್ರೆಯೂ ಯಾರದು?”
“ಕೈಸರನದು” ಎಂದವರು ಉತ್ತರಿಸಿದರು.
“ಹಾಗಾದರೆ ಕೈಸರನದನ್ನು ಕೈಸರನಿಗೆ ಕೊಡಿರಿ; ಆದರೆ ದೇವರದನ್ನು ದೇವರಿಗೆ ಕೊಡಿರಿ.” ಒಳ್ಳೇದು, ಯೇಸುವಿನ ಕೌಶಲ್ಯತೆಯ ಉತ್ತರವನ್ನು ಈ ಮನುಷ್ಯರು ಕೇಳಿದಾಗ, ಅವರು ಆಶ್ಚರ್ಯ ಪಡುತ್ತಾರೆ. ಅವರು ಅವನನ್ನು ಏಕಾಂಗಿಯಾಗಿ ಬಿಟ್ಟು ತೆರಳುತ್ತಾರೆ.
ಯೇಸುವಿನ ವಿರುದ್ಧವಾಗಿ ಯಾವದನ್ನಾದರೂ ಕಂಡುಕೊಳ್ಳಲು ಫರಿಸಾಯರು ಸೋತದ್ದನ್ನು ಕಂಡು, ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅವನನ್ನು ಸಮೀಪಿಸಿ ಕೇಳುವದು: “ಬೋಧಕನೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ ಅವನ ಹೆಂಡತಿಯನ್ನು ಅವನ ತಮ್ಮನು ಮದುವೆ ಮಾಡಿಕೊಂಡು ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದನಷ್ಟೇ. ಆದರೆ ನಮ್ಮಲ್ಲಿ ಏಳು ಮಂದಿ ಅಣ್ಣತಮ್ಮಂದಿರಿದ್ದರು. ಮೊದಲನೆಯವನು ಮದುವೆಯಾಗಿ ತೀರಿಹೋದನು. ಅವನಿಗೆ ಸಂತಾನವಿಲ್ಲದ ಕಾರಣ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು; ಅದರಂತೆ ಎರಡನೆಯವನೂ ಮೂರನೆಯವನೂ ಮುಂತಾದವರು ಏಳನೆಯವನ ವರೆಗೂ ಮಾಡಿದರು. ಅವರೆಲ್ಲರು ಸತ್ತ ಮೇಲೆ ಆ ಹೆಂಗಸೂ ಸತ್ತಳು. ಹಾಗಾದರೆ ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರ ಹೆಂಡತಿಯಾಗಿರುವಳು? ಆಕೆಯನ್ನು ಅವರೆಲ್ಲರೂ ಮದುವೆಮಾಡಿ ಕೊಂಡಿದ್ದರಲ್ಲಾ.”
ಉತ್ತರವಾಗಿ ಯೇಸುವು ಹೇಳಿದ್ದು: “ನೀವು ಶಾಸ್ತ್ರವನ್ನಾದರೂ ದೇವರ ಶಕ್ತಿಯನ್ನಾದರೂ ತಿಳಿಯದೆ ತಪ್ಪುವವರಾಗಿದ್ದೀರಿ; ಸತ್ತವರು ಬದುಕಿ ಎದ್ದ ಮೇಲೆ ಮದುವೆ ಮಾಡಿ ಕೊಳ್ಳುವದೂ ಇಲ್ಲ, ಮಾಡಿ ಕೊಡುವದೂ ಇಲ್ಲ; ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ. ಆದರೆ ಸತ್ತವರು ಬದುಕಿ ಏಳುತ್ತಾರೆಂಬ ವಿಷಯದಲ್ಲಿ ಹೇಳಬೇಕಾದರೆ—ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ಮೋಶೆಗೆ ನುಡಿದದ್ದನ್ನು ನೀವು ಮೋಶೆಯ ಗ್ರಂಥದಲ್ಲಿ ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಓದಲಿಲ್ಲವೇ? ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ; ನೀವು ಹಿಡಿದ ಅಭಿಪ್ರಾಯವು ಬಹು ತಪ್ಪಾಗಿದೆ.”
ಯೇಸುವಿನ ಉತ್ತರದಿಂದ ಜನರ ಗುಂಪು ಪುನಃ ಅತ್ಯಾಶ್ಚರ್ಯ ಪಟ್ಟಿತು. ಶಾಸ್ತ್ರಿಗಳಲ್ಲಿ ಕೂಡ ಕೆಲವರು ಇದನ್ನು ಅಂಗೀಕರಿಸಿದರು: “ಬೋಧಕನೇ, ಚೆನ್ನಾಗಿ ಹೇಳಿದಿ.”
ಯೇಸುವು ಸದ್ದುಕಾಯರ ಬಾಯಿ ಕಟ್ಟಿದನೆಂದು ಫರಿಸಾಯರು ನೋಡಿದಾಗ, ಅವರು ಒಂದು ಗುಂಪಾಗಿ ಅವನ ಬಳಿಗೆ ಬಂದರು. ಅವನನ್ನು ಇನ್ನಷ್ಟು ಪರೀಕ್ಷಿಸಲು ಅವರಲ್ಲಿ ಒಬ್ಬ ಶಾಸ್ತ್ರಿಯು ಕೇಳುವದು: “ಗುರುವೇ, ಧರ್ಮಶಾಸ್ತ್ರದಲ್ಲಿ ಯಾವ ಆಜ್ಞೆ ಮುಖ್ಯವಾದದ್ದು?”
ಯೇಸುವು ಉತ್ತರಿಸುವದು: “ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಕರ್ತನು [ಯೆಹೋವನು] ಒಬ್ಬನೇ ದೇವರು [ಯೆಹೋವನು]; ನಿನ್ನ ದೇವರಾದ ಕರ್ತನನ್ನು [ಯೆಹೋವನನ್ನು] ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸಬೇಕು ಎಂಬದೇ ಮೊದಲನೆಯ ಆಜ್ಞೆ; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ ಎರಡನೆಯ ಆಜ್ಞೆ; ಇವುಗಳಿಗಿಂತ ಹೆಚ್ಚಿನ ಆಜ್ಞೆ ಮತ್ತೊಂದಿಲ್ಲ.” ವಾಸ್ತವದಲ್ಲಿ ಯೇಸುವು ಕೂಡಿಸುವದು: “ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.”
“ಬೋಧಕನೇ, ಚೆನ್ನಾಗಿ ಹೇಳಿದೆ” ಆ ಶಾಸ್ತ್ರಿಯು ಒಪ್ಪುತ್ತಾನೆ. “ಒಬ್ಬನೇ ಇದ್ದಾನೆ, ಆತನ ಹೊರತು ಮತ್ತೊಬ್ಬ ದೇವರಿಲ್ಲ ಎಂದು ನೀನು ಹೇಳಿದ್ದು ಸತ್ಯ. ಆತನನ್ನು ಪೂರ್ಣ ಹೃದಯದಿಂದಲೂ ಪೂರ್ಣ ಪ್ರಾಣದಿಂದಲೂ ಪೂರ್ಣ ಬುದ್ಧಿಯಿಂದಲೂ ಪೂರ್ಣ ಶಕ್ತಿಯಿಂದಲೂ ಪ್ರೀತಿಸುವದು ಮತ್ತು ತನ್ನನ್ನು ಪ್ರೀತಿಸಿಕೊಳ್ಳುವಂತೆ ತನ್ನ ನೆರೆಯವನನ್ನು ಪ್ರೀತಿಸುವದು ಇವೆರಡೂ ಎಲ್ಲಾ ಸರ್ವಾಂಗಹೋಮಗಳಿಗಿಂತಲೂ ಎಲ್ಲಾ ಯಜ್ಞಗಳಿಗಿಂತಲೂ ಹೆಚ್ಚಿನವು.”
ಶಾಸ್ತ್ರಿಯು ಬುದ್ಧಿಯಿಂದ ಉತ್ತರಕೊಟ್ಟದ್ದನ್ನು ಯೇಸುವು ವಿವೇಚಿಸಿ, ಅವನಂದದ್ದು: “ನೀನು ದೇವರ ರಾಜ್ಯದಿಂದ ದೂರವಾದವನಲ್ಲ.”
ಈಗ ಮೂರು ದಿನಗಳಿಂದ—ಆದಿತ್ಯವಾರ, ಸೋಮವಾರ ಮತ್ತು ಮಂಗಳವಾರ—ಯೇಸುವು ದೇವಾಲಯದಲ್ಲಿ ಉಪದೇಶಿಸುತ್ತಾ ಇದ್ದನು. ಜನರು ಅವನ ಉಪದೇಶವನ್ನು ಸಂತೋಷದಿಂದ ಆಲಿಸುತ್ತಿದ್ದರಾದರೂ ಧಾರ್ಮಿಕ ಮುಖಂಡರು ಅವನನ್ನು ಕೊಲ್ಲಲು ಹವಣಿಸುತ್ತಿದ್ದರು, ಆದರೆ ಇಷ್ಟರ ತನಕ ಅವರ ಪ್ರಯತ್ನಗಳು ಹತಾಶಕರವಾಗಿದ್ದವು. ಮತ್ತಾಯ 22:15-40;ಮಾರ್ಕ 12:13-34; ಲೂಕ 20:20-40.
▪ ಯೇಸುವನ್ನು ಸಿಕ್ಕಿಸಿಹಾಕಲು ಫರಿಸಾಯರು ಯಾವ ತಂತ್ರವನ್ನು ಹೂಡಿದರು, ಮತ್ತು ಅವನು ಸರಿ ಅಥವಾ ಸರಿಯಲ್ಲ ಎಂಬ ಉತ್ತರ ಕೊಟ್ಟಿದ್ದರೆ ಏನು ಸಂಭವಿಸುವ ಸಂದರ್ಭವಿತ್ತು?
▪ ಅವನನ್ನು ಸಿಕ್ಕಿಸಿಹಾಕಲು ಸದ್ದುಕಾಯರು ಮಾಡಿದ ಯಾವ ಪ್ರಯತ್ನಗಳನ್ನು ಯೇಸುವು ನಿಷ್ಫಲಗೊಳಿಸಿದನು?
▪ ಯೇಸುವನ್ನು ಸಿಕ್ಕಿಸಿಹಾಕಲು ಫರಿಸಾಯರು ಯಾವ ಹೆಚ್ಚಿನ ಪ್ರಯತ್ನ ಮಾಡಿದರು ಮತ್ತು ಅದರ ಫಲಿತಾಂಶವೇನಾಗಿತ್ತು?
▪ ಯೆರೂಸಲೇಮಿನಲ್ಲಿ ಅವನ ಕೊನೆಯ ಶುಶ್ರೂಷೆಯ ಸಮಯದಲ್ಲಿ, ಎಷ್ಟು ದಿನ ಯೇಸುವು ದೇವಾಲಯದಲ್ಲಿ ಕಲಿಸಿದನು ಮತ್ತು ಯಾವ ಪರಿಣಾಮದೊಂದಿಗೆ?