ಅಧ್ಯಾಯ 32
ಸಬ್ಬತ್ನಲ್ಲಿ ನಿಯಮಾನುಸಾರವಾದದ್ದು ಯಾವುದು?
ಗಲಿಲಾಯ ಸಮುದ್ರದ ಪಕ್ಕದಲ್ಲಿರುವ ಯೆಹೂದಿ ಸಭಾಮಂದಿರವೊಂದಕ್ಕೆ ಇನ್ನೊಂದು ಸಬ್ಬತ್ನಲ್ಲಿ ಯೇಸುವು ಸಂದರ್ಶಿಸುತ್ತಾನೆ. ಅಲ್ಲಿ ಬಲಕೈ ಬತ್ತಿದವನೊಬ್ಬನಿದ್ದನು. ಶಾಸ್ತ್ರಿಗಳೂ, ಫರಿಸಾಯರೂ, ಯೇಸುವು ಅವನನ್ನು ಗುಣಪಡಿಸುವನೋ ಎಂದು ಬಹಳ ಸಮೀಪದಿಂದ ವೀಕ್ಷಿಸುತ್ತಾ ಇದ್ದರು. ಕೊನೆಗೆ ಅವರು ಕೇಳುತ್ತಾರೆ: “ಸಬ್ಬತ್ನಲ್ಲಿ ಸ್ವಸ್ಥಮಾಡುವದು ನಿಯಮಾನುಸಾರವಾದದ್ದೋ?”
ಜೀವ ಅಪಾಯದಲ್ಲಿದ್ದರೆ ಮಾತ್ರ, ಸಬ್ಬತ್ನಲ್ಲಿ ಸ್ವಸ್ಥಪಡಿಸುವದು ನಿಯಮಾನುಸಾರವಾದದ್ದು ಎಂದು ಯೆಹೂದಿ ಧಾರ್ಮಿಕ ಮುಂದಾಳುಗಳು ನಂಬಿದ್ದರು. ಉದಾಹರಣೆಗೆ ಒಂದು ಮುರಿದ ಎಲುಬನ್ನು ಸರಿಸ್ಥಾನಕ್ಕೆ ತರುವದು ಯಾ ಉಳುಕಿದರೆ ಅದಕ್ಕೆ ಬ್ಯಾಂಡೇಜ್ ಕಟ್ಟುವದು ಸಬ್ಬತ್ನಲ್ಲಿ ನಿಯಮಾನುಸಾರವಲ್ಲದ್ದು ಎಂದವರು ಕಲಿಸುತ್ತಿದ್ದರು. ಆದ್ದರಿಂದ, ಯೇಸುವಿನ ವಿರೋಧವಾಗಿ ಆರೋಪ ಹೊರಿಸುವ ಪ್ರಯತ್ನದಲ್ಲಿ ಶಾಸ್ತ್ರಿಗಳೂ, ಫರಿಸಾಯರೂ, ಯೇಸುವನ್ನು ಪ್ರಶ್ನಿಸುತ್ತಿದ್ದರು.
ಆದಾಗ್ಯೂ, ಯೇಸುವು ಅವರ ಆಲೋಚನಾ ಲಹರಿಯನ್ನು ಬಲ್ಲವನಾಗಿದ್ದನು. ಅದೇ ಸಮಯದಲ್ಲಿ, ಕೆಲಸವನ್ನು ನಿಷೇಧಿಸಿರುವ ಸಬ್ಬತ್ನ ಆವಶ್ಯಕತೆಯಲ್ಲಿ ಯಾವುದು ನಿಯಮ ಭಂಗವಾಗಿರುತ್ತದೆಂಬ ಅವರ ಅತಿರೇಕದ ಹಾಗೂ ಅಶಾಸ್ತ್ರೀಯವಾದ ನೋಟವನ್ನು ಅವರು ಹೊಂದಿದ್ದರೆಂದೂ ಅವನು ಬಲ್ಲವನಾಗಿದ್ದನು. ಆದಕಾರಣ ಯೇಸುವು ಒಂದು ನಾಟಕೀಯ ರೀತಿಯಲ್ಲಿ ಅವರನ್ನೆದುರಿಸಲು ವೇದಿಕೆಯನ್ನು ಸಿದ್ಧಗೊಳಿಸಿ, ಕೈಬತ್ತಿದವನಿಗೆ ಹೇಳಿದ್ದು: “ಎದ್ದು, ನಡುವೆ ಬಂದು ಕುಳಿತುಕೋ.”
ಈಗ, ಶಾಸ್ತ್ರಿಗಳ ಮತ್ತು ಫರಿಸಾಯರ ಕಡೆಗೆ ತಿರುಗಿ, ಯೇಸುವು ಹೇಳಿದ್ದು: “ನಿಮ್ಮಲ್ಲಿ ಯಾರಿಗಾದರೂ ಒಂದೇ ಒಂದು ಕುರಿ ಇದ್ದು ಅದು ಸಬ್ಬತ್ನಲ್ಲಿ ಕುಣಿಯೊಳಗೆ ಬಿದ್ದರೆ ಅವನು ಅದನ್ನು ಹಿಡಿದು ಮೇಲಕ್ಕೆ ತೆಗೆಯದೇ ಇರುವನೇ?” ಕುರಿಯು ಆರ್ಥಿಕ ಭಂಡವಾಳವನ್ನು ಪ್ರತಿನಿಧಿಸುವದರಿಂದ, ಪ್ರಾಯಶಃ ಅಸ್ವಸ್ಥಗೊಂಡು ನಷ್ಟಬರಿಸುವಂತೆ ಅದನ್ನು ಅಲ್ಲಿಯೇ ಕುಣಿಯೊಳಗೆ ಮರುದಿನದ ತನಕ ಇರುವಂತೆ ಅವರು ಬಿಡಲಾರರು. ಅಷ್ಟಲ್ಲದೆ, ಶಾಸ್ತ್ರ ಗ್ರಂಥಗಳು ಹೇಳುವದು: “ಶಿಷ್ಟನು ತನ್ನ ಸಾಕುಪ್ರಾಣಿಯ ಕ್ಷೇಮವನ್ನು ಲಕ್ಷ್ಯಿಸುತ್ತಾನೆ.”
ಅದನ್ನು ಸಮಾನಾಂತರವಾಗಿ ಸರಿದೂಗಿಸುತ್ತಾ, ಯೇಸುವು ಮುಂದುವರಿಸಿದ್ದು: “ಕುರಿಗಿಂತ ಮನುಷ್ಯನು ಎಷ್ಟೋ ಹೆಚ್ಚು! ಆದಕಾರಣ ಸಬ್ಬತ್ನಲ್ಲಿ ಒಳ್ಳೇ ಕೆಲಸ ಮಾಡುವದು ನಿಯಮಾನುಸಾರವಾದದ್ದೇ.” ಅಂತಹ ತರ್ಕಬದ್ಧವಾದ, ಅನುಕಂಪದ ವಿವೇಚನೆಯನ್ನು ಅಲ್ಲಗಳೆಯಲು ಅಸಾಧ್ಯವಾದುದರಿಂದ, ಧಾರ್ಮಿಕ ಮುಂದಾಳುಗಳು ಸುಮ್ಮಗಾದರು.
ಅವರ ಮನಸ್ಸು ಕಲ್ಲಾಗಿರುವದನ್ನು ಕಂಡು, ದುಃಖ ಹಾಗೂ ಕೋಪದಿಂದ ಯೇಸುವು ಸುತ್ತಲೂ ನೋಡುತ್ತಾನೆ. ಅನಂತರ, ಅವನು ಆ ಮನುಷ್ಯನಿಗಂದದ್ದು: “ನಿನ್ನ ಕೈ ಚಾಚು.” ಅವನು ಅದನ್ನು ಚಾಚಿದನು ಮತ್ತು ಕೈ ವಾಸಿಯಾಯಿತು.
ಮನುಷ್ಯನ ಕೈ ವಾಸಿಯಾದದಕ್ಕಾಗಿ ಅವರು ಸಂತೋಷಪಡುವದರ ಬದಲು, ಫರಿಸಾಯರು ಹೊರಗೆ ಹೋಗಿ, ಕೂಡಲೇ ಹೆರೋದನ ಪಕ್ಷದವರನ್ನು ಕೂಡಿಕೊಂಡು, ಯೇಸುವನ್ನು ಕೊಲ್ಲಲು ಉಪಾಯ ಹೂಡುತ್ತಾರೆ. ಈ ರಾಜಕೀಯ ಪಕ್ಷದಲ್ಲಿ ಧಾರ್ಮಿಕ ಸದ್ದುಕಾಯರೂ ಸದಸ್ಯರಾಗಿದ್ದರೆಂಬದು ವ್ಯಕ್ತ. ಸಾಮಾನ್ಯವಾಗಿ, ಈ ರಾಜಕೀಯ ಪಕ್ಷ ಮತ್ತು ಫರಿಸಾಯರು ಬಹಿರಂಗವಾಗಿ ಪರಸ್ಪರ ವಿರೋಧಿಗಳಾಗಿದ್ದರು. ಆದರೆ ಯೇಸುವನ್ನು ವಿರೋಧಿಸುವದರಲ್ಲಿ ಅವರು ಬಲವಾಗಿ ಐಕ್ಯತೆಯಿಂದಿದ್ದರು. ಮತ್ತಾಯ 12:9-14; ಮಾರ್ಕ 3:1-6; ಲೂಕ 6:6-11; ಜ್ಞಾನೋಕ್ತಿ 12:10; ವಿಮೋಚನಕಾಂಡ 20:8-10.
▪ ಯೇಸುವಿನ ಮತ್ತು ಯೆಹೂದಿ ಧಾರ್ಮಿಕ ಮುಂದಾಳುಗಳ ನಡುವಿನ ನಾಟಕೀಯ ವಿವಾದಕ್ಕೆ ಯಾವ ರೀತಿಯ ವೇದಿಕೆಯು ಏರ್ಪಡಿಸಲ್ಪಟ್ಟಿತು?
▪ ಸಬ್ಬತ್ನಲ್ಲಿ ವಾಸಿ ಮಾಡುವುದರ ಕುರಿತು ಈ ಯೆಹೂದ್ಯ ಧಾರ್ಮಿಕ ಮುಂದಾಳುಗಳು ಏನು ನಂಬಿದ್ದರು?
▪ ಅವರ ತಪ್ಪಾದ ನೋಟವನ್ನು ಅಲ್ಲಗಳೆಯಲು ಯೇಸುವು ಯಾವ ಉದಾಹರಣೆಯನ್ನು ಬಳಸಿದನು?