-
‘ಬೆಳಸುವವನು ದೇವರೇ’ಕಾವಲಿನಬುರುಜು—2008 | ಜುಲೈ 15
-
-
ಮಲಗುವ ಬಿತ್ತನೆಗಾರ
13 ಮಾರ್ಕ 4:26-29ರಲ್ಲಿ ಬಿತ್ತುವವನ ಕುರಿತಾದ ಇನ್ನೊಂದು ಸಾಮ್ಯವಿದೆ. “ಒಬ್ಬನು ಭೂಮಿಯಲ್ಲಿ ಬೀಜವನ್ನು ಹಾಕಿ ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರಲು ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು. ಇದರಂತೆ ದೇವರ ರಾಜ್ಯ. ಭೂಮಿಯು ಮೊದಲು ಗರಿಯನ್ನೂ, ಆ ಮೇಲೆ ಹೊಡೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ. ಆದರೆ ಫಲಮಾಗಿದ ಕೂಡಲೆ ಅವನು ಸುಗ್ಗಿಕಾಲ ಬಂತೆಂದು ಕೊಯಿಸುತ್ತಾನೆ.”
14 ಈ ಬಿತ್ತುವವನು ಯಾರು? ಈತನು ಯೇಸುವೆಂದು ಕ್ರೈಸ್ತಪ್ರಪಂಚದ ಕೆಲವರು ನಂಬುತ್ತಾರೆ. ಆದರೆ ಯೇಸು ಮಲಗುತ್ತಾನೆ ಮತ್ತು ಬೀಜ ಬೆಳೆಯುವಾಗ ಆತನಿಗೆ ತಿಳಿಯುವುದಿಲ್ಲ ಎಂದು ಹೇಗೆ ಹೇಳಸಾಧ್ಯ? ಬೆಳವಣಿಗೆಯ ಕುರಿತು ಯೇಸುವಿಗೆ ಖಂಡಿತ ತಿಳಿದಿದೆ! ಈ ಮುಂಚೆ ತಿಳಿಸಲಾಗಿರುವ ಬಿತ್ತುವವನಂತೆಯೇ ಈ ಬಿತ್ತುವವನು ಸಹ ರಾಜ್ಯದ ಬೀಜವನ್ನು ಹುರುಪಿನ ಸಾರುವಿಕೆಯ ಮೂಲಕ ಬಿತ್ತುತ್ತಿರುವ ಪ್ರತಿಯೊಬ್ಬ ರಾಜ್ಯ ಘೋಷಕನನ್ನು ಪ್ರತಿನಿಧಿಸುತ್ತಾನೆ. ಬೀಜವು ಅವರು ಸಾರುತ್ತಿರುವ ವಾಕ್ಯವೇ ಆಗಿದೆ.b
15 ಬಿತ್ತುವವನು ‘ರಾತ್ರಿ ಮಲಗುತ್ತಾ ಹಗಲು ಎದ್ದಿರುತ್ತಾ ಇರುತ್ತಾನೆ’ ಎಂದು ಯೇಸು ಹೇಳಿದನು. ಇದರರ್ಥ ಬಿತ್ತುವವನು ಅಲಕ್ಷ್ಯ ತೋರಿಸುತ್ತಾನೆಂದಲ್ಲ ಬದಲಾಗಿ ಹೆಚ್ಚಿನ ಜನರ ಸಾಮಾನ್ಯ ದಿನಚರಿಯನ್ನು ಇದು ಚಿತ್ರಿಸುತ್ತದೆ. ಆ ವಚನದಲ್ಲಿನ ಪದಪ್ರಯೋಗವು, ಹಗಲಿಗೆ ದುಡಿಯುವ ಮತ್ತು ರಾತ್ರಿ ಮಲಗುವ ನಿರಂತರ ಪ್ರಕ್ರಿಯೆಯ ಒಂದು ಸಮಯಾವಧಿಗೆ ಸೂಚಿಸುತ್ತದೆ. ಆ ಸಮಯದಲ್ಲಿ ಏನು ನಡೆಯಿತೆಂಬುದನ್ನು ಯೇಸು ವಿವರಿಸಿದ್ದು: “ಅವನಿಗೆ ತಿಳಿಯದ ರೀತಿಯಲ್ಲಿ ಆ ಬೀಜವು ಹುಟ್ಟಿ ಬೆಳೆಯುವದು.” ಈ ಬೆಳವಣಿಗೆಯು “ತನ್ನಷ್ಟಕ್ಕೆ ತಾನೇ” ಸಂಭವಿಸುತ್ತದೆ ಎಂಬ ವಿಚಾರವು ಮಹತ್ತ್ವದ್ದಾಗಿದೆ.c
16 ಯೇಸು ಇಲ್ಲಿ ಏನನ್ನು ಸೂಚಿಸುತ್ತಿದ್ದನು? ಬೆಳವಣಿಗೆಗೆ ಮತ್ತು ಅದು ಸಾಗುವ ನಿಧಾನಗತಿಗೆ ಒತ್ತುಕೊಡಲಾಗಿರುವುದನ್ನು ಗಮನಿಸಿ. “ಭೂಮಿಯು ಮೊದಲು ಗರಿಯನ್ನೂ, ಆ ಮೇಲೆ ಹೊಡೆಯನ್ನೂ, ತರುವಾಯ ತೆನೆಯಲ್ಲಿ ತುಂಬಾ ಕಾಳನ್ನೂ ತನ್ನಷ್ಟಕ್ಕೆ ತಾನೇ ಹುಟ್ಟಿಸುತ್ತದೆ.” (ಮಾರ್ಕ 4:28) ಈ ಬೆಳವಣಿಗೆಯು ನಿಧಾನವಾಗಿ ಹಾಗೂ ಹಂತಹಂತವಾಗಿ ನಡೆಯುತ್ತದೆ. ಅದರ ವೇಗವನ್ನು ಹೆಚ್ಚಿಸಲು ಅಥವಾ ನಿಯಂತ್ರಿಸಲು ಸಾಧ್ಯವಿಲ್ಲ. ಆಧ್ಯಾತ್ಮಿಕ ಬೆಳವಣಿಗೆಯ ಸಂಬಂಧದಲ್ಲೂ ಇದು ನಿಜ. ಯೋಗ್ಯ ವ್ಯಕ್ತಿಯ ಹೃದಯದಲ್ಲಿ ಸತ್ಯದ ಬೀಜ ಬೆಳೆಯಲು ಯೆಹೋವನು ಅನುಮತಿಸುವಾಗ ಬೆಳವಣಿಗೆಯು ಹಂತಹಂತವಾಗಿ ನಡೆಯುತ್ತದೆ.—ಅ. ಕೃ. 13:48; ಇಬ್ರಿ. 6:1.
17 “ಫಲಮಾಗಿದ ಕೂಡಲೆ” ಅದರ ಕೊಯ್ಲಿನಲ್ಲಿ ಬಿತ್ತುವವನು ಹೇಗೆ ಪಾಲ್ಗೊಳ್ಳುತ್ತಾನೆ? ಹೊಸ ಶಿಷ್ಯರಲ್ಲಿ ರಾಜ್ಯದ ಸತ್ಯವು ಬೆಳೆಯುವಂತೆ ಯೆಹೋವನು ಮಾಡುವಾಗ ಕ್ರಮೇಣ ಅವರು ತಮ್ಮ ಜೀವನವನ್ನು ಆತನಿಗೆ ಸಮರ್ಪಿಸುವ ಹಂತಕ್ಕೆ ತಲಪುತ್ತಾರೆ. ಇದನ್ನು ಮಾಡಲು ದೇವರ ಮೇಲಣ ಪ್ರೀತಿಯೇ ಅವರನ್ನು ಪ್ರಚೋದಿಸುತ್ತದೆ. ಈ ಸಮರ್ಪಣೆಯನ್ನು ಅವರು ನೀರಿನ ದೀಕ್ಷಾಸ್ನಾನದ ಮೂಲಕ ಬಹಿರಂಗಗೊಳಿಸುತ್ತಾರೆ. ಪ್ರಗತಿ ಮಾಡುತ್ತ ಪ್ರೌಢರಾಗುವ ಸಹೋದರರು ಕ್ರಮೇಣ ಸಭೆಗಳಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಲು ಶಕ್ತರಾಗುತ್ತಾರೆ. ವ್ಯಕ್ತಿಯೊಬ್ಬನನ್ನು ಶಿಷ್ಯನನ್ನಾಗಿ ಮಾಡಿದ ಬೀಜ ಬಿತ್ತನೆಯಲ್ಲಿ ಇತರ ರಾಜ್ಯ ಘೋಷಕರು ವೈಯಕ್ತಿಕವಾಗಿ ಸೇರಿಲ್ಲವಾದರೂ ಆ ಬಿತ್ತುವವನೊಂದಿಗೆ ಅವರು ಸಹ ಈ ರಾಜ್ಯ ಫಲವನ್ನು ಕೊಯ್ಯುತ್ತಾರೆ. (ಯೋಹಾನ 4:36-38 ಓದಿ.) ಹೀಗೆ, “ಬಿತ್ತುವವನಿಗೂ ಕೊಯ್ಯುವವನಿಗೂ ಕೂಡ ಸಂತೋಷವಾಗುವದು.”
-
-
‘ಬೆಳಸುವವನು ದೇವರೇ’ಕಾವಲಿನಬುರುಜು—2008 | ಜುಲೈ 15
-
-
b ಈ ಪತ್ರಿಕೆ ಮುಂಚೆ ವಿವರಿಸಿತ್ತೇನೆಂದರೆ ಬೀಜವು ಒಬ್ಬ ವ್ಯಕ್ತಿಯಲ್ಲಿ ಪಕ್ವಗೊಳ್ಳಬೇಕಾದ ಗುಣಗಳನ್ನು ಪ್ರತಿನಿಧಿಸುತ್ತದೆ. ಪರಿಸರದ ಮೇಲೆ ಹೊಂದಿಕೊಂಡು ಈ ಗುಣಗಳು ಒಳ್ಳೆಯದಾಗಬಹುದು ಇಲ್ಲವೇ ಕೆಟ್ಟದ್ದಾಗಬಹುದು ಎಂದು ಎಣಿಸಲಾಗಿತ್ತು. ಆದರೆ ಗಮನಿಸಬೇಕಾದ ವಿಷಯವೇನೆಂದರೆ ಯೇಸುವಿನ ಸಾಮ್ಯದಲ್ಲಿ ತಿಳಿಸಲಾದ ಬೀಜವು ಕೆಟ್ಟದ್ದಾಗುವುದಿಲ್ಲ ಇಲ್ಲವೇ ಕೆಟ್ಟ ಫಲವನ್ನು ಕೊಡುವುದಿಲ್ಲ. ಅದು ಕೇವಲ ಪಕ್ವಗೊಳ್ಳುತ್ತದೆ ಅಷ್ಟೇ.—1980, ಜೂನ್ 15ರ ಕಾವಲಿನಬುರುಜು (ಇಂಗ್ಲಿಷ್) ಪುಟ 17-19 ನೋಡಿ.
c ಇದೇ ಅಭಿವ್ಯಕ್ತಿಯನ್ನು ಅ. ಕೃತ್ಯಗಳು 12:10ರಲ್ಲಿ ಉಪಯೋಗಿಸಲಾಗಿದೆ. ಅಲ್ಲಿ, ಕಬ್ಬಿಣದ ಬಾಗಿಲು “ತನ್ನಷ್ಟಕ್ಕೆ ತಾನೇ” ತೆರೆದುಕೊಳ್ಳುವ ಕುರಿತು ತಿಳಿಸಲಾಗಿದೆ.
-