ಅವರ ನಂಬಿಕೆಯನ್ನು ಅನುಕರಿಸಿ | ಮರಿಯ
ಕತ್ತಿಯಿಂದ ಇರಿದಂಥ ನೋವನ್ನು ಅನುಭವಿಸಿದರೂ ಮುಂದೆ ಸಾಗಿದಳು
ಮರಿಯಳು ನಿಂತಲ್ಲೇ ಕುಸಿದಳು, ಆಕೆಯ ನೋವು ಮಾತಿನಲ್ಲಿ ಹೇಳಲಸಾಧ್ಯ. ಆಕೆಯ ಮಗ ಅನೇಕ ತಾಸುಗಳ ಚಿತ್ರಹಿಂಸೆಯನ್ನು ಅನುಭವಿಸಿ ಈಗಷ್ಟೇ ಪ್ರಾಣಬಿಟ್ಟಿದ್ದನು. ಅವನಾಡಿದ ಕೊನೆಯ ಮಾತು ಆಕೆಯ ಕಿವಿಯಲ್ಲಿ ಇನ್ನೂ ಗುಂಯ್ಗುಟ್ಟುತ್ತಿತ್ತು. ಅದು ಮಟ ಮಟ ಮಧ್ಯಾಹ್ನವಾಗಿದ್ದರೂ ಇದ್ದಕ್ಕಿದ್ದಂತೆ ಎಲ್ಲಾ ಕಡೆ ಕತ್ತಲು ಕವಿಯಿತು. ಭೂಕಂಪದಿಂದ ಎಲ್ಲ ಅಲ್ಲೋಲ ಕಲ್ಲೋಲವಾಯಿತು. (ಮತ್ತಾಯ 27:45, 51) ಹೀಗೆ ಯೇಸು ಕ್ರಿಸ್ತನ ಮರಣವು ಎಲ್ಲರಿಗಿಂತ ತನಗೆ ಹೆಚ್ಚಿನ ನೋವನ್ನು ತಂದಿದೆ ಎಂದು ಸ್ವತಃ ಯೆಹೋವನೇ ಇಡೀ ಲೋಕಕ್ಕೆ ತೋರಿಸುತ್ತಿದ್ದಂತೆ ಮರಿಯಳಿಗೆ ಅನಿಸಿದ್ದಿರಬಹುದು.
ಕವಿದ ಕತ್ತಲಿನ ಮಧ್ಯದಲ್ಲಿ ಸೂರ್ಯನ ಕಿರಣಗಳು ತೂರಿಬಂದು ಗೊಲ್ಗೊಥಾ ಅಥವಾ ಕಪಾಲ ಸ್ಥಳವನ್ನು ಆವರಿಸಿತು. ಮರಿಯಳು ತನ್ನ ಮಗನಿಗಾಗಿ ಗೋಳಾಡಿದಳು. (ಯೋಹಾನ 19:17, 25) ಮನಃಪಟಲದಲ್ಲಿ ಮರೆಯಾಗಿದ್ದ ಘಟನೆಗಳು ಮತ್ತೆ ಕಣ್ಮುಂದೆ ಸುಳಿದಾಡಿದವು. ಅವುಗಳಲ್ಲೊಂದು ಸುಮಾರು 33 ವರ್ಷಗಳ ಹಿಂದಿನ ಘಟನೆಯಾಗಿದ್ದಿರಬಹುದು. ತಮ್ಮ ಮುದ್ದು ಕಂದನಾಗಿದ್ದ ಯೇಸುವನ್ನು ಮರಿಯ ಮತ್ತು ಯೋಸೇಫ ಮೊದಲ ಬಾರಿ ಯೆರೂಸಲೇಮಿನ ದೇವಾಲಯಕ್ಕೆ ತಂದಿದ್ದರು. ಆಗ ಸಿಮೆಯೋನನೆಂಬ ವೃದ್ಧನು ದೈವಪ್ರೇರಿತನಾಗಿ ಯೇಸು ಮಾಡಲಿದ್ದ ಮಹತ್ತರ ವಿಷಯಗಳ ಬಗ್ಗೆ ಪ್ರವಾದಿಸಿದ್ದನು. ಜೊತೆಗೆ “ಉದ್ದ ಕತ್ತಿಯು ನಿನ್ನ ಜೀವವನ್ನೇ ಭೇದಿಸುವುದು” ಎಂದು ಮರಿಯಳಿಗೆ ಮುಂತಿಳಿಸಿದ್ದನು. (ಲೂಕ 2:25-35) ಸಿಮೆಯೋನನು ಹೇಳಿದ ಆ ಮಾತು ತನ್ನ ಮಗನನ್ನು ಕಳೆದುಕೊಂಡಾಗ ಮರಿಯಳಿಗೆ ಚೆನ್ನಾಗಿ ಅರ್ಥವಾಯಿತು.
ಕಣ್ಣೆದುರಿಗೇ ಕರುಳಕುಡಿಯ ಸಾವು ತರುವ ವೇದನೆಗಿಂತ ಹೆಚ್ಚಿನ ವೇದನೆ ಬೇರೊಂದಿಲ್ಲ. ಸಾವು ಒಂದು ಭಯಂಕರ ಶತ್ರುವಿನಂತೆ ನಮ್ಮೆಲ್ಲರನ್ನು ಒಂದಲ್ಲ ಒಂದು ರೀತಿಯಲ್ಲಿ ಭಾದಿಸುತ್ತದೆ. (ರೋಮನ್ನರಿಗೆ 5:12; 1 ಕೊರಿಂಥ 15:26) ಇಂಥ ನೋವನ್ನು ಸಹಿಸಿಕೊಂಡು ಜೀವನವನ್ನು ಮುಂದೂಡಲು ಸಾಧ್ಯವೇ? ಯೇಸುವಿನ ಶುಶ್ರೂಷೆಯ ಆರಂಭದಿಂದ ಹಿಡಿದು ಆತನ ಮರಣ ಮತ್ತು ನಂತರದ ಸಮಯಾವಧಿಯಲ್ಲಿ ಮರಿಯಳ ಜೀವನ ಹೇಗಿತ್ತೆಂದು ನೋಡೋಣ. ಹೀಗೆ ಕತ್ತಿಯಿಂದ ಭೇದಿಸಲ್ಪಟ್ಟಂತಹ ನೋವನ್ನು ಸಹಿಸಿಕೊಳ್ಳಲು ನೆರವಾದ ಆಕೆಯ ನಂಬಿಕೆಯ ಬಗ್ಗೆ ಹೆಚ್ಚನ್ನು ಕಲಿಯೋಣ.
“ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ”
ಸುಮಾರು ಮೂರೂವರೆ ವರ್ಷಗಳ ಹಿಂದೆ ಏನಾಯಿತೆಂದು ನೋಡೋಣ. ಚಿಕ್ಕ ಪಟ್ಟಣವಾದ ನಜರೇತಿನಲ್ಲಿ ಎಲ್ಲರೂ ಯೋಹಾನನು ಕೊಡುತ್ತಿದ್ದ ದೀಕ್ಷಾಸ್ನಾನ ಮತ್ತು ಪಶ್ಚಾತ್ತಾಪದ ಮನಸ್ಪರ್ಶಿಸುವ ಎಚ್ಚರಿಕೆಯ ಸಂದೇಶದ ಕುರಿತು ಮಾತಾಡುತ್ತಿದ್ದರು. ಶುಶ್ರೂಷೆಯನ್ನು ಆರಂಭಿಸಲು ಇದೇ ಸರಿಯಾದ ಸಮಯವೆಂದು ತನ್ನ ಹಿರೀ ಮಗನು ನೆನಸಿದ್ದನ್ನು ಮರಿಯಳು ಗಮನಿಸಿದ್ದಳು. (ಮತ್ತಾಯ 3:1, 13) ಯೇಸು ಮನೆಯಿಂದ ದೂರ ಹೋದರೆ ಮರಿಯಳ ಮತ್ತು ಆಕೆಯ ಕುಟುಂಬದ ಪರಿಸ್ಥಿತಿ ಏರುಪೇರಾಗಲಿತ್ತು. ಏಕೆ?
ಬಹುಶಃ ಮರಿಯಳ ಗಂಡ ಯೋಸೇಫನು ತುಂಬ ಹಿಂದೆಯೇ ತೀರಿಕೊಂಡಿದ್ದನು.a ಆದ್ದರಿಂದ ಯೇಸು ತನ್ನ ತಂದೆಯ ವ್ಯಾಪಾರ ನೋಡಿಕೊಳ್ಳುತ್ತಿದ್ದನು. ಹಾಗಾಗಿ ಯೇಸು ‘ಬಡಗಿಯ ಮಗ’ ಅಂತ ಮಾತ್ರವಲ್ಲ ಸ್ವತಃ ಒಬ್ಬ ‘ಬಡಗಿಯಾಗಿ’ ಜನರಿಂದ ಗುರುತಿಸಲ್ಪಟ್ಟನು. ತನ್ನ ನಂತರ ಹುಟ್ಟಿದ ಇತರ ಆರು ಮಕ್ಕಳನ್ನೂ ಸೇರಿಸಿ ಆ ದೊಡ್ಡ ಕುಟುಂಬವನ್ನು ಪರಿಪಾಲಿಸುತ್ತಿದ್ದನು. (ಮತ್ತಾಯ 13:55, 56; ಮಾರ್ಕ 6:3) ಕುಟುಂಬದ ವ್ಯಾಪಾರ ನೋಡಿಕೊಳ್ಳಲು ತನ್ನ ಮೊದಲ ತಮ್ಮನಾದ ಯಾಕೋಬನಿಗೆ ಯೇಸು ಕಲಿಸಿದ್ದಿರಬಹುದು. ಆದರೂ ಹಿರಿಯ ಮಗ ಮನೆಯಿಂದ ದೂರ ಹೋಗುವುದು ನಿಜವಾಗಿಯೂ ಭರಿಸಲಾರದ ನಷ್ಟ. ಮರಿಯಳು ಈಗಾಗಲೇ ಸಾಕಷ್ಟು ನೋವನ್ನು ಅನುಭವಿಸಿದ್ದಳು. ಹಾಗಾಗಿ ಈ ಬದಲಾವಣೆಯಿಂದ ಅವಳು ಕುಗ್ಗಿ ಕುಬ್ಜಳಾಗಿ ಹೋದಳಾ? ನಜರೇತಿನ ಯೇಸು ವಾಗ್ದಾತ್ತ ಮೆಸ್ಸೀಯನಾದಾಗ ಆಕೆ ಹೇಗೆ ಪ್ರತಿಕ್ರಿಯಿಸಿರಬಹುದು? ಒಂದು ಬೈಬಲ್ ವೃತ್ತಾಂತದಲ್ಲಿ ಇದಕ್ಕೆ ಉತ್ತರವಿದೆ.—ಯೋಹಾನ 2:1-12.
ಯೋಹಾನನ ಬಳಿ ಹೋಗಿ ಯೇಸು ದೀಕ್ಷಾಸ್ನಾನ ಪಡೆದುಕೊಂಡು ದೇವರ ಅಭಿಷಿಕ್ತನು ಅಥವಾ ಮೆಸ್ಸೀಯನಾದನು. (ಲೂಕ 3:21, 22) ತದನಂತರ ಅವನು ಶಿಷ್ಯರನ್ನು ಆರಿಸಿಕೊಳ್ಳಲು ಆರಂಭಿಸಿದನು. ತನ್ನ ಕೆಲಸವನ್ನು ಪೂರೈಸಲು ಸ್ವಲ್ಪವೇ ಸಮಯ ಉಳಿದಿದ್ದರೂ ಯೇಸು ತನ್ನ ಕುಟುಂಬದೊಂದಿಗೆ ಮತ್ತು ಸ್ನೇಹಿತರೊಂದಿಗೆ ಸಂತೋಷ ಸಮಾರಂಭಗಳಿಗೆ ಹೋಗಲು ಸಮಯ ಮಾಡಿಕೊಂಡನು. ತನ್ನ ತಾಯಿ, ಶಿಷ್ಯರು ಮತ್ತು ತಮ್ಮಂದಿರೊಂದಿಗೆ ಮದುವೆ ಸಮಾರಂಭಕ್ಕೆಂದು ಕಾನಾ ಊರಿಗೆ ಹೋಗಿದ್ದನು. ಅದು ನಜರೇತಿನಿಂದ ಸುಮಾರು 13 ಕಿ.ಮೀ. ದೂರದಲ್ಲಿದ್ದ ಬೆಟ್ಟದ ಮೇಲಿನ ಊರಾಗಿತ್ತು. ಸಮಾರಂಭದಲ್ಲಿ ಏನೋ ಸಮಸ್ಯೆ ಎದ್ದಿದೆ ಎಂದು ಮರಿಯಳಿಗೆ ತಿಳಿಯಿತು. ಮದುವೆ ಮನೆಯವರು ಕಂಗಾಲಾಗಿ ಮುಖ-ಮುಖ ನೋಡುತ್ತಿರುವುದನ್ನು, ತರಾತುರಿಯಲ್ಲಿ ಏನೋ ಪಿಸುಗುಟ್ಟುತ್ತಿರುವುದನ್ನು ಮರಿಯಳು ಗಮನಿಸಿದಳು. ಅಲ್ಲಿ ದ್ರಾಕ್ಷಾಮದ್ಯ ಮುಗಿದು ಹೋಗಿತ್ತು. ಅವರ ಸಂಸ್ಕೃತಿಯಲ್ಲಿ ಅತಿಥಿಸತ್ಕಾರಕ್ಕೆ ದ್ರಾಕ್ಷಾಮದ್ಯವೇ ಮುಖ್ಯವಾಗಿತ್ತು. ಆದ್ದರಿಂದ ಸಾಕಷ್ಟು ದ್ರಾಕ್ಷಾಮದ್ಯ ಇಲ್ಲದಿದ್ದರೆ ಅದು ಇಡೀ ಕುಟುಂಬಕ್ಕೆ ಅವಮಾನದ ವಿಷಯವಾಗಿತ್ತು. ಇದು ಆ ಸಂತೋಷ ಸಮಾರಂಭವನ್ನೇ ಹಾಳುಮಾಡುತ್ತಿತ್ತು. ಮರಿಯಳಿಗೆ ಅವರ ಪರಿಸ್ಥಿತಿ ನೋಡಿ ಅಯ್ಯೋ ಅಂತನಿಸಿತು. ಆದ್ದರಿಂದ ಸಹಾಯಕ್ಕಾಗಿ ಆಕೆ ಯೇಸುವಿನ ಕಡೆಗೆ ನೋಡಿದಳು.
“ಅವರ ಬಳಿ ದ್ರಾಕ್ಷಾಮದ್ಯವಿಲ್ಲ” ಎಂದು ಮರಿಯಳು ಅವನಿಗೆ ಹೇಳಿದಳು. ಅವನೇನು ಮಾಡಬೇಕೆಂದು ಮರಿಯಳು ಬಯಸಿದ್ದಿರಬಹುದು? ಇದರ ಬಗ್ಗೆ ನಿಖರವಾಗಿ ನಾವೇನೂ ಹೇಳಸಾಧ್ಯವಿಲ್ಲ. ತನ್ನ ಮಗನು ಒಬ್ಬ ಮಹಾನ್ ವ್ಯಕ್ತಿ ಮಾತ್ರವಲ್ಲ ಅವನು ಮಹತ್ತರವಾದ ಕೆಲಸಗಳನ್ನೂ ಮಾಡುತ್ತಾನೆಂದು ಆಕೆಗೆ ತಿಳಿದಿತ್ತು. ಅವುಗಳನ್ನು ಈಗಲೇ ಆರಂಭಿಸುತ್ತಾನೆಂದು ಆಕೆ ನೆನಸಿದ್ದಿರಬಹುದು. ಆದ್ದರಿಂದಲೇ ಏನಾದ್ರೂ ಮಾಡುವಂತೆ ತನ್ನ ಮಗನಿಗೆ ಹೇಳಿದಳು. ಅದಕ್ಕೆ ಯೇಸು, “ಸ್ತ್ರೀಯೇ, ನನ್ನ ಗೊಡವೆ ನಿನಗೇಕೆ?” ಎಂದನು. ಇದನ್ನು ಕೇಳಿದಾಕ್ಷಣ ಮರಿಯಳಿಗೆ ಆಶ್ಚರ್ಯವಾಗಿರಬಹುದು. ಇಲ್ಲಿ ಯೇಸು ಮರಿಯಳೊಂದಿಗೆ ಅಗೌರವದಿಂದ ಮಾತಾಡಿದನೆಂದು ಕೆಲವರು ನೆನಸುವುದಾದರೂ ಅದು ನಿಜವಲ್ಲ. ಯೇಸು ಆಕೆಯ ತಪ್ಪನ್ನು ಮೃದುವಾಗಿ ಹೇಳುತ್ತಿದ್ದನಷ್ಟೆ. ತನ್ನ ಶುಶ್ರೂಷೆಯನ್ನು ನಡೆಸಲು ನಿರ್ದೇಶನಗಳನ್ನು ಕೊಡುವುದು ಆಕೆಯ ಕೆಲಸವಲ್ಲ ಎಂದು ಯೇಸು ನೆನಪು ಹುಟ್ಟಿಸಿದನು. ಏಕೆಂದರೆ ಆ ಕೆಲಸ ಅವನ ತಂದೆಯಾದ ಯೆಹೋವನಿಗೆ ಮಾತ್ರ ಮೀಸಲಾಗಿತ್ತು.
ಮರಿಯಳು ವಿಷಯವನ್ನು ಬೇಗನೆ ಗ್ರಹಿಸುವವಳೂ ದೀನಳೂ ಆಗಿದ್ದರಿಂದ ಯೇಸು ಆಕೆಯನ್ನು ತಿದ್ದಿದಾಗ ಅದನ್ನು ಸ್ವೀಕರಿಸಿದಳು. ಆ ಸಮಾರಂಭದಲ್ಲಿ ಕೆಲಸ ಮಾಡುತ್ತಿದ್ದ ಸೇವಕರನ್ನು ಕರೆದು, “ಅವನು ನಿಮಗೆ ಏನು ಹೇಳುತ್ತಾನೋ ಅದನ್ನು ಮಾಡಿರಿ” ಎಂದಳು. ಇನ್ನು ಮುಂದೆ ತನ್ನ ಮಗನಿಗೆ ನಿರ್ದೇಶನ ಕೊಡುವ ಅಧಿಕಾರ ತನಗಿಲ್ಲ, ಬದಲಿಗೆ ತಾನೂ ಇತರರೆಲ್ಲರೂ ಅವನು ಕೊಡುವ ನಿರ್ದೇಶನಗಳನ್ನು ಅನುಸರಿಸಬೇಕೆಂದು ಮರಿಯಳು ಅರ್ಥಮಾಡಿಕೊಂಡಳು. ಅದೇ ಸಮಯದಲ್ಲಿ ಯೇಸು ವಧು-ವರರ ಕಡೆಗೆ ತನ್ನ ತಾಯಿಗಿದ್ದ ಕನಿಕರವನ್ನು ಅರ್ಥಮಾಡಿಕೊಂಡು ತಾನೂ ಅವರಿಗೆ ಕನಿಕರ ತೋರಿಸಿದನು. ನೀರನ್ನು ದ್ರಾಕ್ಷಾಮದ್ಯವನ್ನಾಗಿ ಮಾರ್ಪಡಿಸುವ ಮೂಲಕ ತನ್ನ ಮೊದಲನೇ ಅದ್ಭುತವನ್ನು ಮಾಡಿದನು. ಇದನ್ನು ನೋಡಿದ “ಅವನ ಶಿಷ್ಯರು ಅವನಲ್ಲಿ ನಂಬಿಕೆಯಿಟ್ಟರು.” ಮರಿಯಳು ಸಹ ಅವನಲ್ಲಿ ನಂಬಿಕೆಯಿಟ್ಟಳು. ಆಕೆ ಅವನನ್ನು ತನ್ನ ಮಗನಾಗಿ ಮಾತ್ರವಲ್ಲ ತನ್ನ ಕರ್ತನಾಗಿಯೂ ರಕ್ಷಕನಾಗಿಯೂ ವೀಕ್ಷಿಸಿದಳು.
ಮರಿಯಳು ತೋರಿಸಿದ ನಂಬಿಕೆಯಿಂದ ಇಂದಿನ ಹೆತ್ತವರು ಅನೇಕ ವಿಷಯಗಳನ್ನು ಕಲಿಯಬಲ್ಲರು. ಯಾರೂ ಎಂದೂ ಯೇಸುವಿನಂಥ ಮಗುವನ್ನು ಬೆಳೆಸಿಲ್ಲ ಅನ್ನುವುದು ಸತ್ಯ. ಕಾರಣ ಎಲ್ಲ ಮಕ್ಕಳೂ ಅಪರಿಪೂರ್ಣರೇ. ಆದರೆ ಮಕ್ಕಳು ಬೆಳೆದು ಯುವಕನಾದಾಗ ಅವರಲ್ಲಾಗುವ ಬದಲಾವಣೆಗೆ ಹೊಂದಿಕೊಳ್ಳುವುದು ಹೆತ್ತವರಿಗೆ ಕಷ್ಟವಾಗಬಹುದು. ದೊಡ್ಡವರಾದ ಮೇಲೂ ಚಿಕ್ಕ ಮಕ್ಕಳಂತೆ ಉಪಚರಿಸುವುದು ಸರಿ ಅಲ್ಲದಿದ್ದರೂ ಸಾಮಾನ್ಯವಾಗಿ ಹೆತ್ತವರು ತಮ್ಮ ಮಕ್ಕಳನ್ನು ಚಿಕ್ಕ ಮಗುವಿನಂತೆಯೇ ಉಪಚರಿಸುತ್ತಾರೆ. (1 ಕೊರಿಂಥ 13:11) ಯೌವನಾವಸ್ಥೆಗೆ ಬಂದ ಮಕ್ಕಳಿಗೆ ಹೆತ್ತವರು ಹೇಗೆ ಸಹಾಯ ಮಾಡಬಹುದು? ತಮ್ಮ ಮಕ್ಕಳು ಬೈಬಲ್ ಬೋಧನೆಗೆ ಅನುಸಾರವಾಗಿ ನಡೆಯುತ್ತಾರೆ, ಯೆಹೋವನ ಆಶೀರ್ವಾದವನ್ನು ಪಡೆಯುತ್ತಾರೆ ಎಂಬ ಭರವಸೆಯನ್ನು ವ್ಯಕ್ತಪಡಿಸುವ ಮೂಲಕವೇ. ತಮ್ಮ ಮಕ್ಕಳ ಮೇಲೆ ನಂಬಿಕೆ ಮತ್ತು ಭರವಸೆ ಇದೆ ಎಂದು ಹೆತ್ತವರು ತೋರಿಸುವುದೇ ಬೆಳೆದ ಮಕ್ಕಳಿಗೆ ಎಷ್ಟೋ ಸಹಾಯ ಮಾಡುತ್ತದೆ. ಮರಿಯಳು ತನಗೆ ಕೊಟ್ಟ ಬೆಂಬಲಕ್ಕಾಗಿ ಯೇಸು ಖಂಡಿತ ಸಂತೋಷಿಸಿರುತ್ತಾನೆ.
“ತಮ್ಮಂದಿರು ಅವನಲ್ಲಿ ನಂಬಿಕೆಯಿಟ್ಟಿರಲಿಲ್ಲ”
ಯೇಸುವಿನ ಶೂಶ್ರೂಷೆಯ ಆ ಮೂರುವರೆ ವರ್ಷಗಳ ಅವಧಿಯಲ್ಲಿ ಮರಿಯಳ ಬಗ್ಗೆ ಸುವಾರ್ತಾ ಪುಸ್ತಕಗಳು ಹೆಚ್ಚೇನು ಹೇಳುವುದಿಲ್ಲ. ಆಕೆ ಈಗಾಗಲೇ ವಿಧವೆಯಾಗಿದ್ದಳು. ಒಂಟಿ ಹೆತ್ತವಳಾಗಿ ತನ್ನ ಇತರ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿ ಆಕೆಗಿತ್ತು ಎನ್ನುವುದನ್ನು ನೆನಪಿನಲ್ಲಿಡಿ. ಆದ್ದರಿಂದಲೇ ಯೇಸು ಸಾರುತ್ತಾ ಹೋದಲ್ಲೆಲ್ಲಾ ಮರಿಯಳು ಅವನೊಂದಿಗೆ ಹೋಗಲಿಲ್ಲ ಎಂದು ತಿಳಿಯುತ್ತದೆ. (1 ತಿಮೊಥೆಯ 5:8) ಆದರೂ ಮೆಸ್ಸೀಯನ ಬಗ್ಗೆ ತಾನು ಕಲಿತಿದ್ದ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಧ್ಯಾನಿಸುತ್ತಿದ್ದಳು. ವಾಡಿಕೆಯ ಪ್ರಕಾರ ಸ್ಥಳೀಯ ಸಭಾಮಂದಿರದಲ್ಲಿ ನಡೆಯುತ್ತಿದ್ದ ಕೂಟಗಳಿಗೆ ಹಾಜರಾಗುತ್ತಿದ್ದಳು.—ಲೂಕ 2:19, 51; 4:16.
ಹಾಗಾದರೆ, ಯೇಸು ನಜರೇತಿನ ಸಭಾಮಂದಿರದಲ್ಲಿ ಮಾತಾಡಿದಾಗ ಸಭಿಕರ ಮಧ್ಯೆ ಆಕೆಯೂ ಇದ್ದಿರಬಹುದಲ್ವಾ? ಅನೇಕ ಶತಮಾನಗಳ ಹಿಂದೆ ತಿಳಿಸಿದ್ದ ಮೆಸ್ಸೀಯನ ಪ್ರವಾದನೆ ತನ್ನಲ್ಲೇ ನೆರವೇರಿದೆ ಎಂದು ಸ್ವತಃ ತನ್ನ ಮಗನೇ ಹೇಳುವುದನ್ನು ಕೇಳುವಾಗ ಆಕೆಗೆಷ್ಟು ಸಂತೋಷವಾಗಿರಬಹುದು! ಆದರೆ ಆ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ! ಏಕೆಂದರೆ ನಜರೇತಿನ ಜನರು ಅವನನ್ನು ಮೆಸ್ಸೀಯನೆಂದು ಒಪ್ಪಿಕೊಳ್ಳದೆ, ಕೊಲ್ಲಲು ಪ್ರಯತ್ನಿಸಿದರು.—ಲೂಕ 4:17-30.
ತನ್ನ ಮಕ್ಕಳೇ ಯೇಸುವನ್ನು ನಂಬದಿದ್ದಾಗಲೂ ಮರಿಯಳಿಗೆ ತುಂಬಾ ನೋವಾಗಿರಬೇಕು. ಯೋಹಾನ 7:5ನ್ನು ಗಮನಿಸುವುದಾದರೆ ತಾಯಿಗಿದ್ದ ನಂಬಿಕೆ ಮಕ್ಕಳಿಗಿರಲಿಲ್ಲ ಎಂದು ತಿಳಿಯುತ್ತದೆ. “ಅವನ ತಮ್ಮಂದಿರು ಅವನಲ್ಲಿ ನಂಬಿಕೆಯಿಟ್ಟಿರಲಿಲ್ಲ” ಎಂದು ಅಲ್ಲಿ ತಿಳಿಸಲಾಗಿದೆ. ಯೇಸುವಿಗೆ ಕಡಿಮೆಪಕ್ಷ ಇಬ್ಬರು ತಂಗಿಯರೂ ಇದ್ದರು. ಆದರೆ ಬೈಬಲ್ ಅವರ ಬಗ್ಗೆ ಯಾವುದೇ ಮಾಹಿತಿ ನೀಡುವುದಿಲ್ಲ.b ಧಾರ್ಮಿಕವಾಗಿ ವಿಭಜಿತಗೊಂಡಿರುವ ಕುಟುಂಬದಲ್ಲಿ ಉಂಟಾಗುವ ತೀವ್ರ ನೋವನ್ನು ಮರಿಯಳು ಅನುಭವಿಸಿದಳು. ತಾನು ಹೇಳಿದಂತೆಯೇ ಮಾಡಬೇಕೆಂದು ಒತ್ತಡ ಹಾಕದೆ, ವಾದ ಮಾಡದೆ ತನ್ನ ಕುಟುಂಬದವರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುತ್ತಾ ಅದೇ ಸಮಯದಲ್ಲಿ ದೈವಿಕ ಸತ್ಯಕ್ಕೆ ಅಂಟಿಕೊಂಡಿರಲು ಹೆಣಗಾಡಬೇಕಿತ್ತು.
ಒಮ್ಮೆ ಯೇಸುವಿನ ತಮ್ಮಂದಿರು ಮತ್ತು ಸಂಬಂಧಿಕರು ಅವನನ್ನು ‘ಹಿಡಿದುತರಬೇಕೆಂದು’ ನಿರ್ಣಯಿಸಿದ್ದರು. “ಇವನಿಗೆ ಹುಚ್ಚುಹಿಡಿದಿದೆ” ಎಂದು ಅವರು ಮಾತಾಡಿಕೊಳ್ಳುತ್ತಿದ್ದರು. (ಮಾರ್ಕ 3:21, 31) ಮರಿಯಳು ಮಾತ್ರ ಹಾಗೆ ಯೋಚಿಸಿರಲಿಕ್ಕಿಲ್ಲ. ಆದರೂ ಅಲ್ಲಿ ಹೋದಾಗ ತನ್ನ ಮಕ್ಕಳು ಯೇಸು ಮಾಡುತ್ತಿದ್ದ ವಿಷಯಗಳನ್ನು ನೋಡಿ ಅವನಲ್ಲಿ ನಂಬಿಕೆ ಇಡಬಹುದು ಅಂದುಕೊಂಡು ಆಕೆಯೂ ಅವರೊಂದಿಗೆ ಹೋದಳು. ಆಕೆ ಭಾವಿಸಿದಂತೆ ಅವರು ನಂಬಿಕೆ ಇಟ್ಟರಾ? ಯೇಸು ಅದ್ಭುತಗಳನ್ನು ಮಾಡುತ್ತಾ ಮಹತ್ತರ ಸತ್ಯಗಳನ್ನು ಬೋಧಿಸುತ್ತಿದ್ದರೂ ಅವರು ಅವನಲ್ಲಿ ನಂಬಿಕೆ ಇಡಲಿಲ್ಲ. ಆಗ ಮರಿಯಳು ಕಿರಿಕಿರಿಗೊಂಡು ‘ಏನು ಮಾಡಿದರೂ ಇವರಿಗೆ ಅರ್ಥನೇ ಆಗಲ್ವಾ’ ಎಂದು ಯೋಚಿಸಿದಳಾ?
ನೀವು ಧಾರ್ಮಿಕವಾಗಿ ವಿಭಜಿತಗೊಂಡಿರುವ ಕುಟುಂಬದಲ್ಲಿ ಜೀವಿಸುತ್ತಿದ್ದೀರಾ? ಹಾಗಿದ್ದರೆ, ಮರಿಯಳ ನಂಬಿಕೆಯಿಂದ ನೀವು ಬಹಳ ವಿಷಯಗಳನ್ನು ಕಲಿಯಬಹುದು. ‘ಏನೇ ಆದರೂ ಇವರಿಗೆ ನಂಬಿಕೆ ಬರುವುದೇ ಇಲ್ಲ’ ಎಂದು ಭಾವಿಸಿ ಆಕೆ ಕೈ ಚೆಲ್ಲಿ ಕೂರಲಿಲ್ಲ. ಬದಲಿಗೆ ತನ್ನ ನಂಬಿಕೆಯಿಂದ ಸಿಕ್ಕಿದ ಸಂತೋಷ ಮತ್ತು ನೆಮ್ಮದಿಯನ್ನು ತನ್ನ ಮಕ್ಕಳು ಕಣ್ಣಾರೆ ನೋಡಿ ತಿಳಿದುಕೊಳ್ಳಬೇಕೆಂದು ಬಯಸಿದಳು. ಅದೇ ಸಮಯದಲ್ಲಿ ಆಕೆ ತನ್ನ ಮಗನಾದ ಯೇಸುವಿಗೆ ಬೆಂಬಲ ನೀಡುತ್ತಲೇ ಇದ್ದಳು. ಯೇಸುವಿನ ಅನುಪಸ್ಥಿತಿ ಮರಿಯಳನ್ನು ಯಾವಾಗಲೂ ಕಾಡುತ್ತಿತ್ತಾ? ಯೇಸು ತಮ್ಮ ಜೊತೆಯಲ್ಲೇ ಇರಬೇಕಿತ್ತು ಎಂದು ಬಯಸಿದ್ದಳಾ? ಒಂದು ವೇಳೆ ಹಾಗನಿಸಿದ್ದರೂ, ಆ ಭಾವನೆಗಳನ್ನು ತನ್ನಲ್ಲೇ ಇಟ್ಟುಕೊಂಡಿದ್ದಳು. ಯೇಸುವಿಗೆ ಬೆಂಬಲ ನೀಡುವುದು ಮತ್ತು ಪ್ರೋತ್ಸಾಹಿಸುವುದು ತನಗೆ ಸಿಕ್ಕಿದ ಸದವಕಾಶ ಎಂದು ಭಾವಿಸಿದ್ದಳು. ಮರಿಯಳಂತೆಯೇ ನೀವು ಸಹ ದೇವರಿಗೆ ಪ್ರಥಮ ಸ್ಥಾನ ಕೊಡಲು ನಿಮ್ಮ ಮಕ್ಕಳಿಗೆ ಸಹಾಯ ಮಾಡುತ್ತೀರಾ?
“ಒಂದು ಉದ್ದ ಕತ್ತಿಯು ನಿನ್ನ ಜೀವವನ್ನೇ ಭೇದಿಸುವುದು”
ಮರಿಯಳು ಯೇಸುವಿನ ಮೇಲಿಟ್ಟ ನಂಬಿಕೆಗೆ ತಕ್ಕ ಪ್ರತಿಫಲ ಸಿಕ್ಕಿತಾ? ಯೆಹೋವನು ನಂಬಿಕೆಗೆ ತಕ್ಕ ಪ್ರತಿಫಲ ಕೊಡಲು ಮರೆಯುವುದಿಲ್ಲ. ಆದ್ದರಿಂದ ಖಂಡಿತವಾಗಿ ಮರಿಯಳಿಗೂ ತಕ್ಕ ಪ್ರತಿಫಲ ಕೊಟ್ಟಿರುತ್ತಾನೆ. (ಇಬ್ರಿಯ 11:6) ತನ್ನ ಮಗನ ಬೋಧನೆಗಳನ್ನು ಕೇಳಿಸಿಕೊಂಡಾಗ ಅಥವಾ ಇತರರು ತನ್ನ ಮಗನ ಬೋಧನೆಗಳ ಬಗ್ಗೆ ಹೇಳುವಾಗ ಮರಿಯಳಿಗೆ ಎಷ್ಟು ಸಂತೋಷವಾಗಿರಬಹುದು!
ತನ್ನ ಮಗ ದೃಷ್ಟಾಂತಗಳನ್ನು ಹೇಳುತ್ತಿದ್ದಾಗ ಅವನ ಬಾಲ್ಯದಲ್ಲಿ ನಡೆದ ಘಟನೆಗಳ ನೆನಪು ಮರಿಯಳ ಮನಸ್ಸಿನಲ್ಲಿ ಹಾದುಹೋಗಿರಬಹುದಾ? ಕಳೆದು ಹೋದ ನಾಣ್ಯವನ್ನು ಹುಡುಕಲು ಮನೆಯನ್ನು ಗುಡಿಸಿದ ಸ್ತ್ರೀಯ ಕುರಿತು, ಬೀಸು ಕಲ್ಲಿಂದ ಹಿಟ್ಟನ್ನು ತಯಾರಿಸುವುದರ ಕುರಿತು, ದೀಪವನ್ನು ಹಚ್ಚಿ ದೀಪಸ್ತಂಭದ ಮೇಲೆ ಇಡುವುದರ ಕುರಿತು ಯೇಸು ಮಾತಾಡಿದಾಗ ಮರಿಯಳಿಗೆ ಯಾವುದರ ನೆನಪಾಗಿರಬಹುದು? ತಾನು ಈ ದಿನನಿತ್ಯದ ಕೆಲಸಗಳನ್ನು ಮಾಡುತ್ತಿದ್ದಾಗೆಲ್ಲಾ ತನ್ನ ಜೊತೆಯಲ್ಲೇ ಇರುತ್ತಿದ್ದ ಪುಟ್ಟ ಪೋರ ಯೇಸುವಿನ ನೆನಪಾಗಿರಬಹುದು. (ಲೂಕ 11:33; 15:8, 9; 17:35) ಯೇಸು ತನ್ನ ನೊಗ ಮೃದುವಾದದ್ದೂ ಹೊರೆಯು ಹಗುರವಾದದ್ದೂ ಆಗಿದೆ ಎಂದಾಗ ಮರಿಯಳ ಮನಸ್ಸಿಗೆ ಏನು ಬಂದಿರಬಹುದು? ಪ್ರಾಣಿಗಳು ಸುಲಭವಾಗಿ ಹೊರಲು ಸಾಧ್ಯವಾಗುವಂಥ ನೊಗವನ್ನು ಹೇಗೆ ಮಾಡುವುದೆಂದು ಯೋಸೇಫನು ಯುವಕನಾಗಿದ್ದ ಯೇಸುವಿಗೆ ಕಲಿಸಿದ ಸಂದರ್ಭ ಮರಿಯಳ ನೆನಪಿಗೆ ಬಂದಿರಬಹುದು. (ಮತ್ತಾಯ 11:30) ಮುಂದೆ ಮೆಸ್ಸೀಯನಾಗಲಿದ್ದ ಮಗನನ್ನು ಬೆಳೆಸುವಂತೆ ಮತ್ತು ತರಬೇತಿ ನೀಡುವಂತೆ ಯೆಹೋವನು ಕೊಟ್ಟ ಅಮೂಲ್ಯ ಅವಕಾಶದ ಕುರಿತು ಧ್ಯಾನಿಸುವುದೇ ಮರಿಯಳಿಗೆ ಎಷ್ಟೋ ಸಂತೃಪ್ತಿ ತಂದಿರಬೇಕು. ಮಾನವರಲ್ಲೇ ಅತ್ಯುತ್ತಮ ಬೋಧಕನಾದ ಯೇಸು ಸಾಮಾನ್ಯ ವಿಷಯಗಳನ್ನು ಉಪಯೋಗಿಸುತ್ತಾ ಗಹನವಾದ ಸತ್ಯಗಳನ್ನು ಕಲಿಸುತ್ತಿದ್ದನು. ಅದನ್ನು ಕೇಳಿಸಿಕೊಂಡಾಗೆಲ್ಲಾ ಆಕೆಯ ಹೃದಯ ಸಂತೋಷದಿಂದ ಸಂಭ್ರಮಿಸಿರಬೇಕು!
ಮರಿಯಳು ಸಂತೋಷಿಸಲು ಇಷ್ಟೆಲ್ಲಾ ಕಾರಣಗಳಿದ್ದರೂ ದೀನಳಾಗಿಯೇ ನಡೆದುಕೊಂಡಳು. ಯೇಸು ತನ್ನ ತಾಯಿಗೆ ಹೆಚ್ಚಿನ ಮಹಿಮೆಯನ್ನು ಕೊಡಲಿಲ್ಲ. ಯೆಹೋವನಿಗೆ ಮಾತ್ರ ತನ್ನ ಅನನ್ಯ ಭಕ್ತಿಯನ್ನು ಸಲ್ಲಿಸಿದನು. ಒಮ್ಮೆ ಜನರ ಗುಂಪಿನಲ್ಲಿದ್ದ ಒಬ್ಬ ಸ್ತ್ರೀ ಗಟ್ಟಿಯಾಗಿ, ‘ನಿನಗೆ ಜನ್ಮ ನೀಡಿದ ತಾಯಿ ಸಂತೋಷಿತಳು’ ಎಂದು ಯೇಸುವಿಗೆ ಹೇಳಿದಳು. ಅದಕ್ಕೆ ಯೇಸು, “ಇಲ್ಲ, ದೇವರ ವಾಕ್ಯವನ್ನು ಕೇಳಿಸಿಕೊಳ್ಳುತ್ತಿದ್ದು ಅದರಂತೆ ನಡೆಯುತ್ತಿರುವವರೇ ಸಂತೋಷಿತರು” ಎಂದನು. (ಲೂಕ 11:27, 28) ಇನ್ನೊಂದು ಸಂದರ್ಭದಲ್ಲಿ, ಕೂಡಿ ಬಂದ ಜನಸಮೂಹದಲ್ಲಿದ್ದ ಕೆಲವರು ಯೇಸುವಿಗೆ ‘ನಿನ್ನ ತಾಯಿ ಮತ್ತು ತಮ್ಮಂದಿರು ಬಂದಿದ್ದಾರೆ’ ಎಂದು ಹೇಳಿದರು. ಆದರೆ ಯೇಸು, ನಂಬಿಕೆಯನ್ನು ತೋರಿಸುವವರೇ ತನ್ನ ನಿಜವಾದ ತಾಯಿ ಮತ್ತು ತಮ್ಮಂದಿರು ಎಂದನು. ಇದನ್ನು ಕೇಳಿಸಿಕೊಂಡಾಗ ಮರಿಯಳು ಅಸಮಾಧಾನಗೊಳ್ಳಲಿಲ್ಲ. ಆಧ್ಯಾತ್ಮಿಕ ಬಂಧಗಳು ಶಾರೀರಿಕ ಸಂಬಂಧಗಳಿಗಿಂತ ಹೆಚ್ಚು ಪ್ರಾಮುಖ್ಯ ಎಂದು ಯೇಸು ಹೇಳುತ್ತಿದ್ದಾನೆಂದು ಅರ್ಥಮಾಡಿಕೊಂಡಳು.—ಮಾರ್ಕ 3:32-35.
ತನ್ನ ಮಗನು ಯಾತನಾ ಕಂಬದ ಮೇಲೆ ಚಿತ್ರಹಿಂಸೆ ಅನುಭವಿಸಿ ಸಾಯುವುದನ್ನು ನೋಡುವಾಗ ಮರಿಯಳಿಗೆ ಹೇಗಾಗಿರಬಹುದು? ಅದನ್ನು ಮಾತಿನಲ್ಲಿ ಹೇಳಲು ಸಾಧ್ಯವೇ ಇಲ್ಲ. ಇದನ್ನೆಲ್ಲ ಕಣ್ಣಾರೆ ಕಂಡ ಅಪೊಸ್ತಲ ಯೋಹಾನನು ಆ ಸಂದರ್ಭದಲ್ಲಿ ಏನಾಯಿತೆಂದು ವಿವರಿಸಿದ್ದಾನೆ. ಯೇಸುವಿನ ಆ ಕಷ್ಟಕರ ಸಮಯದಲ್ಲಿ ಮರಿಯಳು ಅವನ ‘ಯಾತನಾ ಕಂಬದ ಬಳಿಯಲ್ಲೇ’ ನಿಂತುಕೊಂಡಿದ್ದಳೆಂದು ತಿಳಿಸಿದ್ದಾನೆ. ಯೇಸುವಿನ ಮೇಲೆ ಮರಿಯಳಿಗೆ ಎಷ್ಟೊಂದು ಪ್ರೀತಿ, ನಿಷ್ಠೆ ಇತ್ತೆಂದರೆ ಅವನು ಕೊನೆಯುಸಿರು ಎಳೆಯುವವರೆಗೂ ಆಕೆ ನಿಂತ ಜಾಗದಿಂದ ಕದಲಲಿಲ್ಲ. ಪ್ರತಿ ಸಾರಿ ಉಸಿರೆಳೆಯುವಾಗಲೂ ಸಹಿಸಲಾರದಷ್ಟು ನೋವನ್ನು ಅನುಭವಿಸುತ್ತಿದ್ದರೂ, ಮಾತನಾಡುವುದೇ ಕಷ್ಟ ಎನ್ನುವಂಥ ಆ ಸ್ಥಿತಿಯಲ್ಲೂ ಯೇಸು ಆಕೆಯ ಕುರಿತು ಮಾತಾಡಿದನು. ತನ್ನ ತಾಯಿಯನ್ನು ನೋಡಿಕೊಳ್ಳುವಂತೆ ತನ್ನ ಅಚ್ಚುಮೆಚ್ಚಿನ ಶಿಷ್ಯನಾದ ಯೋಹಾನನಿಗೆ ಹೇಳಿದನು. ಯೇಸುವಿನ ತಮ್ಮಂದಿರು ಇನ್ನೂ ಅವನಲ್ಲಿ ನಂಬಿಕೆ ಇಟ್ಟಿರಲಿಲ್ಲವಾದ್ದರಿಂದ ತನ್ನ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಆ ನಂಬಿಗಸ್ತ ಶಿಷ್ಯನಿಗೆ ಒಪ್ಪಿಸಿದನು. ಹೀಗೆ ಅವನು ದೇವರನ್ನು ಆರಾಧಿಸುವವರು ತನ್ನವರ ಕಾಳಜಿ ವಹಿಸುವುದು, ಅದರಲ್ಲೂ ಮುಖ್ಯವಾಗಿ ಅವರ ಆಧ್ಯಾತ್ಮಿಕ ಅಗತ್ಯಗಳನ್ನು ಪೂರೈಸುವುದು ತುಂಬ ಪ್ರಾಮುಖ್ಯ ಎಂದು ತೋರಿಸಿಕೊಟ್ಟನು.—ಯೋಹಾನ 19:25-27.
ಯೇಸು ಕೊನೆಯುಸಿರೆಳೆದಾಗ ಅನೇಕ ವರ್ಷಗಳ ಹಿಂದೆ ತಿಳಿಸಿದಂತೆ ಮರಿಯಳು ಉದ್ದ ಕತ್ತಿಯಿಂದ ಇರಿದಂಥ ನೋವನ್ನು ಅನುಭವಿಸಿದ್ದಳು. ಆಗ ಆಕೆಗಾದ ನೋವು ನಮ್ಮ ಊಹೆಗೂ ನಿಲುಕದ್ದು. ಆದರೆ ಮೂರು ದಿನಗಳ ನಂತರ ಯೇಸು ಪುನರುತ್ಥಾನಗೊಂಡಾಗ ಆಕೆಗಾದ ಸಂತೋಷ, ಸಂಭ್ರಮ ಮಾತಿನಲ್ಲಿ ಅಳೆಯಲು ಅಸಾಧ್ಯ. ಯೇಸುವಿನ ಪುನರುತ್ಥಾನ ಮರಿಯಳಿಗೆ ತಾನು ನೋಡಿದ ಎಲ್ಲಾ ಅದ್ಭುತಗಳಿಗಿಂತ ಮಹತ್ತರವಾದದ್ದಾಗಿತ್ತು. ಅವನು ತನ್ನ ತಮ್ಮನಾದ ಯಾಕೋಬನಿಗೆ ಕಾಣಿಸಿಕೊಂಡಾಗ ಆಕೆಯ ಸಂತೋಷ ದುಪ್ಪಟ್ಟಾಗಿರಬೇಕು. (1 ಕೊರಿಂಥ 15:7) ಆ ಭೇಟಿಯಿಂದ ಯಾಕೋಬ ಮತ್ತು ಯೇಸುವಿನ ಇತರ ತಮ್ಮಂದಿರು ಪ್ರಭಾವಿತರಾಗಿ ಯೇಸುವೇ ಕ್ರಿಸ್ತನೆಂದು ನಂಬಿದರು. ಇದಾಗಿ ಸ್ವಲ್ಪದರಲ್ಲೇ ಅವರು ತಮ್ಮ ತಾಯಿಯೊಂದಿಗೆ ಕ್ರೈಸ್ತ ಕೂಟಗಳಿಗೆ ಹಾಜರಾಗಿ ಪ್ರಾರ್ಥನೆಯಲ್ಲಿ ನಿರತರಾದರು.’ (ಅಪೊಸ್ತಲರ ಕಾರ್ಯಗಳು 1:14) ತದನಂತರ ಅವರಲ್ಲಿ ಯಾಕೋಬ ಮತ್ತು ಯೂದರೆಂಬ ಇಬ್ಬರು ತಮ್ಮಂದಿರು ಬೈಬಲ್ ಪುಸ್ತಕಗಳನ್ನು ಸಹ ಬರೆದರು.
ಮರಿಯಳು ಕೂಟಗಳಲ್ಲಿ ತನ್ನ ಮಕ್ಕಳೊಂದಿಗೆ ಪ್ರಾರ್ಥಿಸುತ್ತಿದ್ದುದರ ಬಗ್ಗೆ ತಿಳಿಸುತ್ತಾ ಆಕೆಯ ವೃತ್ತಾಂತ ಕೊನೆಗೊಳ್ಳುತ್ತದೆ. ಎಂಥ ಸೂಕ್ತ ಮುಕ್ತಾಯವಲ್ಲವೆ! ಆಕೆ ನಮ್ಮೆಲ್ಲರಿಗೂ ಅತ್ಯುತ್ತಮ ಮಾದರಿಯಾಗಿದ್ದಾಳೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನಂಬಿಕೆಯಿಂದಲೇ ಆಕೆ ಉದ್ದ ಕತ್ತಿಯಿಂದ ಭೇದಿಸಿದಂತಿದ್ದ ನೋವನ್ನು ಸಹಿಸಿಕೊಂಡಳು. ಇದರಿಂದಾಕೆಗೆ ಮಹಿಮಾನ್ವಿತ ಪ್ರತಿಫಲ ಸಿಕ್ಕಿತು. ಅವಳ ನಂಬಿಕೆಯನ್ನು ಅನುಕರಿಸುವುದಾದರೆ ಈ ಲೋಕದಿಂದ ಅದೆಂತಹ ಸಂಕಷ್ಟಗಳೇ ಬರುವುದಾದರೂ ಅವುಗಳನ್ನು ನಾವು ಸಹಿಸಿಕೊಳ್ಳುವೆವು ಮತ್ತು ನಮ್ಮ ಕಲ್ಪನೆಗೂ ಮೀರಿದ ಪ್ರತಿಫಲವನ್ನು ಪಡೆಯುವೆವು. (w14-E 05/01)
a ಯೇಸುವಿಗೆ 12 ವರ್ಷವಾದಾಗ ನಡೆದ ಘಟನೆಯ ನಂತರ ಯೋಸೇಫನ ಕುರಿತು ಸುವಾರ್ತಾ ಪುಸ್ತಕಗಳಲ್ಲಿ ಯಾವುದೇ ದಾಖಲೆ ಇಲ್ಲ. ತದನಂತರ ಯೇಸುವಿನ ತಾಯಿ ಮತ್ತು ಆಕೆಯ ಮಕ್ಕಳ ಕುರಿತು ದಾಖಲೆ ಇದೆ. ಒಮ್ಮೆ ಯೇಸುವನ್ನು “ಮರಿಯಳ ಮಗನಲ್ಲವೇ” ಎಂದು ಹೇಳಿದ್ದರ ದಾಖಲೆ ಇದೆಯೇ ಹೊರತು ಯೋಸೇಫನ ಕುರಿತು ಯಾವುದೇ ಮಾಹಿತಿ ಇಲ್ಲ.—ಮಾರ್ಕ 6:3.
b ಯೋಸೇಫನು ಯೇಸುವಿನ ಸ್ವಂತ ತಂದೆಯಾಗಿರಲಿಲ್ಲ. ಆದ್ದರಿಂದ ಈ ಸಹೋದರ-ಸಹೋದರಿಯರು ಯೇಸುವಿನ ಮಲತಮ್ಮ, ತಂಗಿಯರಾಗಿದ್ದರು.—ಮತ್ತಾಯ 1:20.