‘ಅನ್ಯಾಯದ ಧನದ ಮೂಲಕ ಸ್ನೇಹಿತರನ್ನು ಮಾಡಿಕೊಳ್ಳಿರಿ’
“ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; . . . ಸ್ವಲ್ಪವಾದದ್ದರಲ್ಲಿ ನಂಬಿಗಸ್ತನಾದವನು ಬಹಳವಾದದರ್ದಲಿಯ್ಲೂ ನಂಬಿಗಸ್ತನಾಗುವನು.”—ಲೂಕ 16:9, 10.
1. ಐಗುಪ್ತದಿಂದ ತಮ್ಮ ಬಿಡುಗಡೆಯ ತರುವಾಯ, ಮೋಶೆ ಮತ್ತು ಇಸ್ರಾಯೇಲ್ಯ ಪುತ್ರರು ಯೆಹೋವನನ್ನು ಹೇಗೆ ಸ್ತುತಿಸಿದರು?
ಅದ್ಭುತದ ಮೂಲಕ ರಕ್ಷಿಸಲ್ಪಡುವುದು—ವಿಶ್ವಾಸವನ್ನು ಬಲಪಡಿಸುವ ಎಂತಹ ಒಂದು ಅನುಭವ! ಐಗುಪ್ತದಿಂದ ಇಸ್ರಾಯೇಲಿನ ನಿರ್ಗಮನವು ಸರ್ವಶಕ್ತನಾದ ಯೆಹೋವನನ್ನು ಬಿಟ್ಟು ಬೇರೆ ಯಾರಿಗೂ ಸೇರಿದ್ದೆಂದು ಹೇಳಲು ಸಾಧ್ಯವಿಲ್ಲ. “ನನ್ನ ಬಲವೂ ಕೀರ್ತನೆಯೂ ಯಾಹುವೇ, ಆತನಿಂದ ನನಗೆ ರಕ್ಷಣೆಯುಂಟಾಯಿತು. ನಮ್ಮ ದೇವರು ಆತನೇ, ಆತನನ್ನು ವರ್ಣಿಸುವೆವು; ನಮ್ಮ ಪಿತೃಗಳ ದೇವರು ಆತನೇ, ಆತನ ಮಹಿಮೆಯನ್ನು ಪ್ರಖ್ಯಾತಿಪಡಿಸುವೆವು,” ಎಂದು ಮೋಶೆ ಮತ್ತು ಇಸ್ರಾಯೇಲ್ಯರು ಹಾಡಿದುದರಲ್ಲಿ ಯಾವ ಆಶ್ಚರ್ಯವೂ ಇಲ್ಲ.—ವಿಮೋಚನಕಾಂಡ 15:1, 2; ಧರ್ಮೋಪದೇಶಕಾಂಡ 29:2.
2. ಅವರು ಐಗುಪ್ತವನ್ನು ಬಿಟ್ಟು ಹೋದಂತೆ, ಯೆಹೋವನ ಜನರು ತಮ್ಮೊಂದಿಗೆ ಏನನ್ನು ಕೊಂಡೊಯ್ದರು?
2 ಹೊಸದಾಗಿ ಕಂಡುಕೊಳ್ಳಲ್ಪಟ್ಟ ಇಸ್ರಾಯೇಲಿನ ಸ್ವಾತಂತ್ರ್ಯವು ಐಗುಪ್ತದಲ್ಲಿದ್ದ ತಮ್ಮ ಸನ್ನಿವೇಶಕ್ಕೆ ಎಷ್ಟು ಪ್ರತಿಕೂಲವಾಗಿತ್ತು! ಈಗ ಅವರು ಯೆಹೋವನನ್ನು ತಡೆಯಿಲ್ಲದೆ ಆರಾಧಿಸಬಹುದಿತ್ತು. ಮತ್ತು ಅವರು ಐಗುಪ್ತವನ್ನು ಬರಿಗೈಯಲ್ಲಿ ಬಿಡಲಿಲ್ಲ. ಮೋಶೆಯು ಹೇಳುವುದು: “ಇಸ್ರಾಯೇಲ್ಯರು . . . ಐಗುಪ್ತ್ಯರಿಂದ ಬೆಳ್ಳಿಬಂಗಾರದ ಒಡವೆಗಳನ್ನೂ ಬಟ್ಟೆಗೆಳನ್ನೂ ಕೇಳಿಕೊಂಡರು. ಯೆಹೋವನು ಅವರ ಮೇಲೆ ಐಗುಪ್ತ್ಯರಲ್ಲಿ ದಯೆಯನ್ನು ಹುಟ್ಟಿಸಿದ್ದರಿಂದ ಅವರು ಕೇಳಿಕೊಂಡದ್ದನ್ನು ಕೊಟ್ಟರು. ಹೀಗೆ ಇಸ್ರಾಯೇಲ್ಯರು ಐಗುಪ್ತ್ಯರ ಸೊತ್ತನ್ನು ಸುಲುಕೊಂಡರು.” (ವಿಮೋಚನಕಾಂಡ 12:35, 36) ಆದರೆ ಐಗುಪ್ತದ ಈ ಸೊತ್ತುಗಳನ್ನು ಅವರು ಹೇಗೆ ಬಳಸಿದರು? ಅದು ‘ಯೆಹೋವನನ್ನು ಉನ್ನತಕ್ಕೆ ಏರಿಸುವುದರಲ್ಲಿ’ ಫಲಿಸಿತೊ? ಅವರ ಉದಾಹರಣೆಯಿಂದ ನಾವು ಏನನ್ನು ಕಲಿಯುತ್ತೇವೆ?—ಹೋಲಿಸಿ 1 ಕೊರಿಂಥ 10:11.
“ಯೆಹೋವನ ಕಾಣಿಕೆ”
3. ಸುಳ್ಳು ಆರಾಧನೆಯಲ್ಲಿ ಇಸ್ರಾಯೇಲ್ಯರ ಮೂಲಕ ಬಂಗಾರದ ಬಳಕೆಯು ಯೆಹೋವನಿಂದ ಯಾವ ಪ್ರತಿಕ್ರಿಯೆಯನ್ನು ಪ್ರೇರಿಸಿತು?
3 ಇಸ್ರಾಯೇಲ್ಗಾಗಿ ದೇವರ ಉಪದೇಶಗಳನ್ನು ಪಡೆಯಲು ಸೀನಾಯಿ ಬೆಟ್ಟದ ಮೇಲೆ ಮೋಶೆಯ 40 ದಿನಗಳ ದೀರ್ಘವಾದ ತಂಗುವಿಕೆಯ ಸಮಯದಲ್ಲಿ, ಬೆಟ್ಟದ ಕೆಳಗೆ ಕಾಯುತ್ತಿದ್ದ ಜನರು ಚಡಪಡಿಸತೊಡಗಿದರು. ತಮ್ಮ ಬಂಗಾರದ ಓಲೆಗಳನ್ನು ತೆಗೆಯುತ್ತಾ, ಆರಾಧಿಸಲಿಕ್ಕಾಗಿ ಅವರಿಗೆ ಒಂದು ಮೂರ್ತಿಯನ್ನು ಮಾಡಲು ಅವರು ಆರೋನನನ್ನು ನಿರ್ದೇಶಿಸಿದರು. ಆರೋನನು ಅವರಿಗಾಗಿ ಒಂದು ವೇದಿಕೆಯನ್ನು ಸಹ ಕಟ್ಟಿದನು, ಮತ್ತು ಮರುದಿನ ಬೇಗನೆ ಅವರು ಅಲ್ಲಿ ಬಲಿಗಳನ್ನು ಅರ್ಪಿಸಿದರು. ಬಂಗಾರದ ಈ ಬಳಕೆಯು ಅವರನ್ನು ತಮ್ಮ ರಕ್ಷಕನಿಗೆ ಪ್ರೀತಿಪಾತ್ರರನ್ನಾಗಿ ಮಾಡಿತೊ? ಖಂಡಿತವಾಗಿಯೂ ಇಲ್ಲ! “ಆದಕಾರಣ ನೀನು ನನ್ನನ್ನು ತಡೆಯಬೇಡ,” ಎಂದು ಯೆಹೋವನು ಮೋಶೆಗೆ ಘೋಷಿಸಿದನು, “ನನ್ನ ಕೋಪಾಗ್ನಿ ಉರಿಯಲಿ, ಅವರನ್ನು ಭಸ್ಮಮಾಡುವೆನು.” ಮೋಶೆಯು ಬೇಡಿಕೊಂಡದರ್ದಿಂದ ಮಾತ್ರ ಯೆಹೋವನು ಜನಾಂಗವನ್ನು ಉಳಿಸಿದನಾದರೂ, ದಂಗೆಕೋರ ಮುಖಂಡರು ದೇವರಿಂದ ಬಂದ ಒಂದು ಬಾಧೆಯ ಮೂಲಕ ಕೊಲ್ಲಲ್ಪಟ್ಟರು.—ವಿಮೋಚನಕಾಂಡ 32:1-6, 10-14, 30-35.
4. “ಯೆಹೋವನ ಕಾಣಿಕೆ”ಯು ಏನಾಗಿತ್ತು, ಮತ್ತು ಅದನ್ನು ಯಾರು ಅರ್ಪಿಸಿದರು?
4 ತದನಂತರ, ತಮ್ಮಲ್ಲಿದ್ದ ಸ್ವತ್ತುಗಳನ್ನು ಯೆಹೋವನಿಗೆ ಮೆಚ್ಚಿಕೆಯಾದ ರೀತಿಯಲ್ಲಿ ಬಳಸುವ ಅವಕಾಶ ಇಸ್ರಾಯೇಲಿಗಿತ್ತು. “ಯೆಹೋವನಿಗಾಗಿ ಕಾಣಿಕೆ” ಯನ್ನು ಅವರು ಒಟ್ಟುಗೂಡಿಸಿದರು.a ಸಾಕ್ಷಿಗುಡಾರದ ನಿರ್ಮಾಣ ಮತ್ತು ಸಜ್ಜುಗೊಳಿಸುವಿಕೆಗಾಗಿ ಕೂಡಿಸಲ್ಪಟ್ಟ ದಾನಗಳಲ್ಲಿ ಬಂಗಾರ, ಬೆಳ್ಳಿ, ತಾಮ್ರ, ನೀಲಿ ದಾರಗಳು, ಹಲವಾರು ವರ್ಣಗಳುಳ್ಳ ನಾರುಬಟ್ಟೆಗೆಳು, ಕುರಿದೊಗಲುಗಳು, ಕಡಲುಹಂದಿಯ ತೊಗಲುಗಳು, ಮತ್ತು ಜಾಲೀಮರವಿದ್ದವು. ದಾನವನ್ನು ಕೊಡುವವನ ಮನೋಭಾವದ ಮೇಲೆ ದಾಖಲೆಯು ನಮ್ಮ ಗಮನವನ್ನು ನಿರ್ದೇಶಿಸುತ್ತದೆ. “ಯೆಹೋವನಿಗೆ ಕಾಣಿಕೆಯನ್ನು . . . ಮನಃಪೂರ್ವಕವಾಗಿ . . . ತರಬೇಕು.” (ವಿಮೋಚನಕಾಂಡ 35:5-9) ಇಸ್ರಾಯೇಲ್ ಜನಾಂಗವು ಅತಿಯಾಗಿ ಪ್ರತಿಕ್ರಿಯಿಸಿತು. ಆದಕಾರಣ, ಒಬ್ಬ ಪಂಡಿತನ ಮಾತುಗಳನ್ನು ನಮೂದಿಸುವುದಾದರೆ, ಸಾಕ್ಷಿಗುಡಾರವು “ಸೌಂದರ್ಯ ಮತ್ತು ಉದಾತ್ತ ಭವ್ಯತೆ”ಯ ರಚನೆಯಾಗಿತ್ತು.
ದೇವಾಲಯಕ್ಕಾಗಿ ಕಾಣಿಕೆಗಳು
5, 6. ದೇವಾಲಯದ ಸಂಬಂಧದಲ್ಲಿ, ದಾವೀದನು ತನ್ನ ಧನವನ್ನು ಹೇಗೆ ಉಪಯೋಗಿಸಿದನು, ಮತ್ತು ಇತರರು ಹೇಗೆ ಪ್ರತಿಕ್ರಿಯಿಸಿದರು?
5 ಯೆಹೋವನ ಆರಾಧನೆಗಾಗಿ ಶಾಶ್ವತವಾದೊಂದು ಗೃಹದ ನಿರ್ಮಾಣವನ್ನು ಇಸ್ರಾಯೇಲ್ನ ರಾಜ ಸೊಲೊಮೋನನು ನಿರ್ದೇಶಿಸಿದರೂ, ಅವನ ತಂದೆಯಾದ ದಾವೀದನು, ಅದಕ್ಕಾಗಿ ವಿಸ್ತಾರವಾದ ತಯಾರಿಯನ್ನು ಮಾಡಿದ್ದನು. ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಮರ, ಮತ್ತು ಅಮೂಲ್ಯ ರತ್ನಗಳ ಮಹಾ ಮೊತ್ತವನ್ನು ದಾವೀದನು ಶೇಖರಿಸಿದನು. “ನನ್ನ ದೇವರ ಆಲಯದ ಮೇಲಣ ಅನುರಾಗದಿಂದ ನನ್ನ ಸ್ವಂತ ಸೊತ್ತಿನಿಂದ ಮೂರು ಸಾವಿರ ತಲಾಂತು . . . ಬಂಗಾರವನ್ನೂ ಏಳು ಸಾವಿರ ತಲಾಂತು ಚೊಕ್ಕ ಬೆಳ್ಳಿಯನ್ನೂ ಕೊಡುತ್ತೇನೆ. ಈ ಬೆಳ್ಳಿ ಬಂಗಾರಗಳಿಂದ ಆಲಯದ ಗೋಡೆಗಳನ್ನು ಹೊದಿಸಬೇಕು,” ಎಂದು ದಾವೀದನು ತನ್ನ ಜನರಿಗೆ ಹೇಳಿದನು. ಇತರರೂ ಉದಾರಿಗಳಾಗಿರುವಂತೆ ದಾವೀದನು ಉತ್ತೇಜಿಸಿದನು. ಪ್ರತಿಕ್ರಿಯೆಯು ಪುಷ್ಕಳವಾಗಿತ್ತು: ಅಧಿಕ ಬಂಗಾರ, ಬೆಳ್ಳಿ, ತಾಮ್ರ, ಕಬ್ಬಿಣ, ಮತ್ತು ಅಮೂಲ್ಯ ರತ್ನಗಳು. “ಪೂರ್ಣಮನಸ್ಸಿನಿಂದ” ಜನರು “ಯೆಹೋವನಿಗೆ (ಮನಃಪೂರ್ವಕ, NW) ಕಾಣಿಕೆ ಕೊಟ್ಟರು.”—1 ಪೂರ್ವಕಾಲವೃತ್ತಾಂತ 22:5; 29:1-9.
6 ಮನಃಪೂರ್ವಕವಾದ ಈ ಕಾಣಿಕೆಗಳಿಂದ, ಇಸ್ರಾಯೇಲ್ಯರು ಯೆಹೋವನ ಆರಾಧನೆಗೆ ಆಳವಾದ ಗಣ್ಯತೆಯನ್ನು ವ್ಯಕ್ತಪಡಿಸಿದರು. ದಾವೀದನು ದೈನ್ಯವಾಗಿ ಪ್ರಾರ್ಥಿಸಿದ್ದು: “ನಾವು ಈ ಪ್ರಕಾರ ಸ್ವೇಚ್ಛೆಯಿಂದ ಕಾಣಿಕೆಗಳನ್ನು ಸಮರ್ಪಿಸಲು ಶಕ್ತಿಹೊಂದಿದ್ದಕ್ಕೆ ನಾನಾಗಲಿ ನನ್ನ ಪ್ರಜೆಗಳಾಗಲಿ ಎಷ್ಟರವರು?” ಏಕೆ? “ಈ ಎಲ್ಲಾ ವಸ್ತುಗಳು ನಿನ್ನಿಂದಲೇ ನಮಗೆ ದೊರಕಿದವು; ಇವೆಲ್ಲಾ ನಿನ್ನವೇ. . . . ನಾನಂತೂ ಯಥಾರ್ಥಮನಸ್ಸಿನಿಂದಲೂ ಸ್ವೇಚ್ಛೆಯಿಂದಲೂ ಇದನ್ನೆಲ್ಲಾ ಕೊಟ್ಟಿದೇನ್ದೆ.”—1 ಪೂರ್ವಕಾಲವೃತ್ತಾಂತ 29:14, 16, 17.
7. ಆಮೋಸನ ದಿನದಿಂದ ಯಾವ ಎಚ್ಚರಿಕೆಯ ಪಾಠವನ್ನು ನಾವು ಕಲಿಯುತ್ತೇವೆ?
7 ಆದರೂ, ಇಸ್ರಾಯೇಲ್ ಕುಲಗಳು ಯೆಹೋವನ ಆರಾಧನೆಯನ್ನು ತಮ್ಮ ಮನಸ್ಸುಗಳಲ್ಲಿ ಮತ್ತು ಹೃದಯಗಳಲ್ಲಿ ಪ್ರಧಾನವಾಗಿಡಲು ತಪ್ಪಿಹೋದವು. ಸಾ.ಶ.ಪೂ. ಒಂಬತ್ತನೆಯ ಶತಮಾನದೊಳಗಾಗಿ, ವಿಭಾಗಿತ ಇಸ್ರಾಯೇಲ್ ಆತ್ಮಿಕ ಉಪೇಕ್ಷೆಯ ದೋಷಿಯಾಗಿತ್ತು. ಉತ್ತರದ ಹತ್ತು ಕುಲಗಳ ಇಸ್ರಾಯೇಲ್ ರಾಜ್ಯದ ಕುರಿತು, ಯೆಹೋವನು ಆಮೋಸನ ಮುಖಾಂತರ ಘೋಷಿಸಿದ್ದು: “ಅಯ್ಯೋ, ಚೀಯೋನಿನಲ್ಲಿ ನೆಮ್ಮದಿಯಾಗಿರುವವರ ಗತಿಯನ್ನು ಏನೆಂದು ಹೇಳಲಿ! . . . ಸಮಾರ್ಯದ ಬೆಟ್ಟದಲ್ಲಿ ನಿಶ್ಚಿಂತರಾಗಿರುವವರ ಪಾಡನ್ನು ಎಂಥದೆನ್ನಲಿ!” ಆತನು ಅವರನ್ನು “ದಂತದ ಮಂಚಗಳ ಮೇಲೆ ಮಲಗಿಕೊಳ್ಳುವ . . . ತಮ್ಮ ಗದ್ದುಗೆಗಳಲ್ಲಿ ಹಾಯಾಗಿ ಒರಗಿಕೊಳ್ಳುವ . . . ಹಿಂಡಿನ ಮರಿಗಳನ್ನೂ ಕೊಟ್ಟಿಗೆಯ ಕರುಗಳನ್ನೂ ತಿನ್ನುವ . . . ದ್ರಾಕ್ಷಾರಸವನ್ನು ಬೋಗುಣಿಗಳಲ್ಲಿ ಕುಡಿಯುವ” ಜನರೋಪಾದಿ ವರ್ಣಿಸುತ್ತಾನೆ. ಆದರೆ ಅವರ ಪುಷ್ಕಳತೆಯು ಯಾವ ರಕ್ಷಣೆಯನ್ನೂ ನೀಡಲಿಲ್ಲ. ದೇವರು ಎಚ್ಚರಿಸಿದ್ದು: “ಹೀಗಿರಲು ಸೆರೆಗೆ ಒಯ್ಯಲ್ಪಡುವವರ ಮುಂದುಗಡೆ ಅವರು ಸೆರೆಗೆ ಹೋಗುವರು; ಒರಗಿಕೊಳ್ಳುವವರ ಹರ್ಷಧ್ವನಿಯು ನಿಂತುಹೋಗುವದು.” ಸಾ.ಶ.ಪೂ. 740 ರಲ್ಲಿ, ಅಶ್ಶೂರ್ಯರ ಕೈಗಳಲ್ಲಿ ಇಸ್ರಾಯೇಲ್ ಕಷ್ಟಾನುಭವಿಸಿತು. (ಆಮೋಸ 6:1, 4, 6, 7) ಸಕಾಲದಲ್ಲಿ ದಕ್ಷಿಣದ ಯೂದಾಯ ರಾಜ್ಯವೂ ಪ್ರಾಪಂಚಿಕತೆಗೆ ಬಲಿಬಿದ್ದಿತು.—ಯೆರೆಮೀಯ 5:26-29.
ಕ್ರೈಸ್ತ ಸಮಯಗಳಲ್ಲಿ ಸಂಪನ್ಮೂಲಗಳ ಯೋಗ್ಯವಾದ ಬಳಕೆ
8. ಸಂಪನ್ಮೂಲಗಳನ್ನು ಬಳಸುವ ವಿಷಯದಲ್ಲಿ ಯೋಸೇಫ ಮತ್ತು ಮರಿಯ ಯಾವ ಉತ್ತಮ ಮಾದರಿಯನ್ನು ಒದಗಿಸುತ್ತಾರೆ?
8 ವೈದೃಶ್ಯವಾಗಿ, ತದನಂತರದ ಸಮಯಗಳಲ್ಲಿ ದೇವರ ಸೇವಕರ ಸಂಬಂಧಸೂಚಕವಾದ ಬಡ ಪರಿಸ್ಥಿತಿಯು, ಸತ್ಯಾರಾಧನೆಗಾಗಿ ಹುರುಪನ್ನು ಪ್ರದರ್ಶಿಸುವುದರಿಂದ ಅವರನ್ನು ತಡೆಯಲಿಲ್ಲ. ಮರಿಯ ಮತ್ತು ಯೋಸೇಫರನ್ನು ಪರಿಗಣಿಸಿರಿ. ಚಕ್ರವರ್ತಿಯಾದ ಔಗುಸ್ತನ ಆಜೆಗ್ಞೆ ವಿಧೇಯತೆ ತೋರಿಸುತ್ತಾ, ತಮ್ಮ ಸ್ವಂತ ಊರಾದ ಬೇತ್ಲೆಹೇಮಿಗೆ ಅವರು ಪ್ರಯಾಣ ಬೆಳೆಸಿದರು. (ಲೂಕ 2:4, 5) ಅಲ್ಲಿ ಯೇಸು ಜನಿಸಿದನು. ನಲ್ವತ್ತು ದಿನಗಳ ತರುವಾಯ, ವಿಧಿಸಲ್ಪಟ್ಟ ಶುದ್ಧೀಕರಣದ ಅರ್ಪಣೆಯನ್ನು ಸಲ್ಲಿಸಲು ಹತ್ತಿರದ ಯೆರೂಸಲೇಮಿನಲ್ಲಿದ್ದ ದೇವಾಲಯವನ್ನು ಯೋಸೇಫ ಮತ್ತು ಮರಿಯ ಸಂದರ್ಶಿಸಿದರು. ತಮ್ಮ ಬಡ ಪ್ರಾಪಂಚಿಕ ಸ್ಥಿತಿಯನ್ನು ಸೂಚಿಸುತ್ತಾ, ಮರಿಯಳು ಎರಡು ಚಿಕ್ಕ ಹಕ್ಕಿಗಳನ್ನು ಅರ್ಪಿಸಿದಳು. ಆಕೆಯಾಗಲಿ ಯೋಸೇಫನಾಗಲಿ ಬಡತನವನ್ನು ಒಂದು ನೆಪವಾಗಿ ಉಪಯೋಗಿಸಲಿಲ್ಲ. ಬದಲಿಗೆ, ತಮ್ಮ ಸೀಮಿತ ಸಂಪನ್ಮೂಲಗಳನ್ನು ಅವರು ವಿಧೇಯತೆಯಿಂದ ಬಳಸಿದರು.—ಯಾಜಕಕಾಂಡ 12:8; ಲೂಕ 2:22-24.
9-11. (ಎ) ಹಣವನ್ನು ಉಪಯೋಗಿಸುವ ವಿಷಯದಲ್ಲಿ ಯಾವ ಮಾರ್ಗದರ್ಶನವನ್ನು ಮತ್ತಾಯ 22:21 ರಲ್ಲಿರುವ ಯೇಸುವಿನ ಮಾತುಗಳು ಒದಗಿಸುತ್ತವೆ? (ಬಿ) ವಿಧವೆಯ ಅಲ್ಪ ಕಾಣಿಕೆಯು ವ್ಯರ್ಥವಾಗಿ ನೀಡಲ್ಪಟ್ಟಿರಲಿಲ್ಲ ಏಕೆ?
9 ತದನಂತರ, ಫರಿಸಾಯರು ಮತ್ತು ಹೆರೋದನ ಪಕ್ಷದ ಹಿಂಬಾಲಕರು ಹೀಗೆ ಹೇಳುತ್ತಾ ಯೇಸುವನ್ನು ಮೋಸಗೊಳಿಸಲು ಪ್ರಯತ್ನಿಸಿದರು: “ಹೀಗಿರಲಾಗಿ ಕೈಸರನಿಗೆ ತೆರಿಗೆ ಕೊಡುವದು ಸರಿಯೋ ಸರಿಯಲ್ಲವೋ? ನಿನಗೆ ಹೇಗೆ ತೋರುತ್ತದೆ? ನಮಗೆ ಹೇಳು ಅಂದರು.” ಯೇಸುವಿನ ಉತ್ತರ ಅವನ ವಿವೇಚನೆಯನ್ನು ಪ್ರಕಟಿಸಿತು. ಅವನಿಗೆ ಅವರು ಕೊಟ್ಟ ನಾಣ್ಯವನ್ನು ಸೂಚಿಸುತ್ತಾ, ಯೇಸು ಕೇಳಿದ್ದು: “ಈ ತಲೆಯೂ ಈ ಮುದ್ರೆಯೂ ಯಾರದು.” ಅವರು ಉತ್ತರಿಸಿದ್ದು: “ಕೈಸರನದು.” ಬುದ್ಧಿವಂತಿಕೆಯಿಂದ ಅವನು ಸಮಾಪ್ತಿಗೊಳಿಸಿದ್ದು: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.” (ಮತ್ತಾಯ 22:17-21) ನಾಣ್ಯವನ್ನು ಹೊರಡಿಸುತ್ತಿರುವ ಅಧಿಕಾರಿಯು ತೆರಿಗೆಗಳನ್ನು ಸಲ್ಲಿಸುವಂತೆ ಅಪೇಕ್ಷಿಸಿದನೆಂದು ಯೇಸುವಿಗೆ ಗೊತ್ತಿತ್ತು. ಆದರೆ ಅಲ್ಲಿ ಅವನು ತನ್ನ ಹಿಂಬಾಲಕರಿಗೆ ಮತ್ತು ವೈರಿಗಳಿಗೆ ಸಮಾನವಾಗಿ, ಒಬ್ಬ ನಿಜ ಕ್ರೈಸ್ತನು “ದೇವರದನ್ನು ದೇವರಿಗೆ ಕೊಡಲು” ಸಹ ಪ್ರಯತ್ನಿಸುತ್ತಾನೆ ಎಂಬ ವಿಷಯವನ್ನು ಗ್ರಹಿಸುವಂತೆ ಸಹಾಯ ಮಾಡಿದನು. ಇದು ಒಬ್ಬನ ಪ್ರಾಪಂಚಿಕ ಸ್ವತ್ತುಗಳ ಯೋಗ್ಯವಾದ ಬಳಕೆಯನ್ನು ಒಳಗೊಳ್ಳುತ್ತದೆ.
10 ದೇವಾಲಯದಲ್ಲಿ ಯೇಸು ಕಣ್ಣಾರೆ ಕಂಡ ಒಂದು ಘಟನೆಯು ಇದನ್ನು ದೃಷ್ಟಾಂತಿಸುತ್ತದೆ. ಅವನು ಆಗ ತಾನೇ ‘ವಿಧವೆಯರ ಮನೆಗಳನ್ನು ನುಂಗಿದ’ ಅತ್ಯಾಶೆಯ ಶಾಸ್ತ್ರಿಗಳನ್ನು ಖಂಡಿಸಿದ್ದನು. “ಯೇಸು ತಲೆಯೆತ್ತಿ ನೋಡಿ ಐಶ್ವರ್ಯವಂತರು ಕಾಣಿಕೆಗಳನ್ನು ಬೊಕ್ಕಸದಲ್ಲಿ ಹಾಕುವದನ್ನು ಕಂಡ” ನೆಂದು ಲೂಕನು ವರದಿಸುತ್ತಾನೆ. “ಆಗ ಒಬ್ಬ ಬಡ ವಿಧವೆಯು ಬಂದು ಎರಡು ಕಾಸುಗಳನ್ನು ಹಾಕಲು ಆತನು ಅದನ್ನು ನೋಡಿ—ನಿಮಗೆ ಸತ್ಯವಾಗಿ ಹೇಳುತ್ತೇನೆ, ಈ ಬಡ ವಿಧವೆ ಎಲ್ಲರಿಗಿಂತಲೂ ಹೆಚ್ಚು ಹಾಕಿದ್ದಾಳೆ. ಹೇಗಂದರೆ ಅವರೆಲ್ಲರು ತಮಗೆ ಸಾಕಾಗಿ ಮಿಕ್ಕದರ್ದಲ್ಲಿ ಕಾಣಿಕೆಕೊಟ್ಟರು; ಈಕೆಯೋ ತನ್ನ ಬಡತನದಲ್ಲಿಯೂ ತನಗಿದ್ದ ಜೀವನವನ್ನೆಲ್ಲಾ ಕೊಟ್ಟುಬಿಟ್ಟಳು ಅಂದನು.” (ಲೂಕ 20:46, 47; 21:1-4) ದೇವಾಲಯವು ಅಮೂಲ್ಯ ರತ್ನಗಳಿಂದ ಅಲಂಕಾರಗೊಳಿಸಲ್ಪಟ್ಟಿತ್ತೆಂದು ಕೆಲವು ಜನರು ಹೇಳಿದರು. ಯೇಸು ಪ್ರತಿಕ್ರಿಯಿಸಿದ್ದು: “ನೀವು ಇವುಗಳನ್ನು ನೋಡುತ್ತೀರಲ್ಲಾ, ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯದೆ ಎಲ್ಲಾ ಕೆಡವಲ್ಪಡುವ ದಿವಸಗಳು ಬರುವವು.” (ಲೂಕ 21:5, 6) ಆ ವಿಧವೆಯ ಅಲ್ಪ ಕಾಣಿಕೆಯು ವ್ಯರ್ಥವಾಗಿತ್ತೊ? ಖಂಡಿತವಾಗಿಯೂ ಇಲ್ಲ. ಆ ಸಮಯದಲ್ಲಿ ಯೆಹೋವನು ಸ್ಥಾಪಿಸಿದ್ದ ಏರ್ಪಾಡನ್ನು ಆಕೆ ಬೆಂಬಲಿಸಿದಳು.
11 ತನ್ನ ನಿಜ ಹಿಂಬಾಲಕರಿಗೆ ಯೇಸು ಹೇಳಿದ್ದು: “ಯಾವ ಆಳಾದರೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು; ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು, ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಾತ್ಸಾರಮಾಡುವನು. ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.” (ಲೂಕ 16:13) ಹೀಗೆ, ನಮ್ಮ ಹಣಕಾಸಿನ ಸಂಪನ್ಮೂಲಗಳನ್ನು ಉಪಯೋಗಿಸುವುದರಲ್ಲಿ ನಾವು ತಕ್ಕದಾದ ಸಮತೂಕವನ್ನು ಹೇಗೆ ಪ್ರದರ್ಶಿಸಬಲ್ಲೆವು?
ನಂಬಿಗಸ್ತ ಮನೆವಾರ್ತೆಗಾರರು
12-14. (ಎ) ಕ್ರೈಸ್ತರು ಯಾವ ಸಂಪನ್ಮೂಲಗಳ ಮನೆವಾರ್ತೆಗಾರರಾಗಿದ್ದಾರೆ? (ಬಿ) ಯಾವ ಎದ್ದುಕಾಣುವ ವಿಧಗಳಲ್ಲಿ ಯೆಹೋವನ ಜನರಿಂದು ನಂಬಿಗಸ್ತಿಕೆಯಿಂದ ತಮ್ಮ ಅಧಿಕಾರವನ್ನು ಪೂರೈಸುತ್ತಿದ್ದಾರೆ? (ಸಿ) ಇಂದು ದೇವರ ಕೆಲಸವನ್ನು ಬೆಂಬಲಿಸಲಿಕ್ಕಾಗಿ ಹಣವು ಎಲ್ಲಿಂದ ಬರುತ್ತದೆ?
12 ನಮ್ಮ ಜೀವಿತಗಳನ್ನು ನಾವು ಯೆಹೋವನಿಗೆ ಸಮರ್ಪಿಸುವಾಗ, ನಮ್ಮಲ್ಲಿರುವ ಸರ್ವಸ್ವವೂ, ನಮ್ಮ ಎಲ್ಲಾ ಸಂಪನ್ಮೂಲಗಳೂ, ಆತನಿಗೆ ಸೇರಿವೆಯೆಂದು ನಾವು ಕಾರ್ಯತಃ ಹೇಳುತ್ತೇವೆ. ಹಾಗಾದರೆ, ನಮ್ಮಲ್ಲಿರುವುದನ್ನು ನಾವು ಹೇಗೆ ಬಳಸಬೇಕು? ಸಭೆಯಲ್ಲಿ ಕ್ರೈಸ್ತ ಸೇವೆಯ ಕುರಿತು ಚರ್ಚಿಸುತ್ತಾ, ವಾಚ್ ಟವರ್ ಸೊಸೈಟಿಯ ಪ್ರಥಮ ಅಧ್ಯಕ್ಷರಾದ ಸಹೋದರ ಸಿ. ಟಿ. ರಸ್ಸಲ್ ಬರೆದದ್ದು: “ಪ್ರತಿಯೊಬ್ಬನು ತನ್ನನ್ನು ತನ್ನ ಸ್ವಂತ ಸಮಯ, ಪ್ರಭಾವ, ಹಣ, ಮುಂತಾದವುಗಳ ಮನೆವಾರ್ತೆಗಾರನಾಗಿರಲು ಕರ್ತನ ಮೂಲಕ ನೇಮಿಸಲ್ಪಟ್ಟವನೋಪಾದಿ ಪರಿಗಣಿಸಿಕೊಳ್ಳಬೇಕು, ಮತ್ತು ಯಜಮಾನನ ಮಹಿಮೆಗೆ, ತನ್ನ ಸಾಮರ್ಥ್ಯದ ಅತ್ಯುತ್ತಮ ಮಟ್ಟಕ್ಕೆ ಈ ಕೌಶಲಗಳನ್ನು ಉಪಯೋಗಿಸಲು ಪ್ರತಿಯೊಬ್ಬನು ಪ್ರಯತ್ನಿಸಬೇಕು.”—ದ ನ್ಯೂ ಕ್ರಿಯೇಶನ್, ಪುಟ 345.
13 “ಹೀಗಿರಲು ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಲ್ಲವೇ,” ಎಂದು 1 ಕೊರಿಂಥ 4:2 ಹೇಳುತ್ತದೆ. ಅಂತಾರಾಷ್ಟ್ರೀಯ ಸಂಸ್ಥೆಯೋಪಾದಿ, ತಮ್ಮ ಕಲಿಕೆಯ ಸಾಮರ್ಥ್ಯಗಳನ್ನು ಜಾಗರೂಕವಾಗಿ ಬೆಳೆಸಿಕೊಳ್ಳುತ್ತಾ, ಕ್ರೈಸ್ತ ಶುಶ್ರೂಷೆಯಲ್ಲಿ ತಮಗೆ ಸಾಧ್ಯವಾದಷ್ಟು ಅಧಿಕ ಸಮಯವನ್ನು ವ್ಯಯಿಸುತ್ತಾ, ಆ ವರ್ಣನೆಗನುಸಾರವಾಗಿ ಜೀವಿಸಲು ಯೆಹೋವನ ಸಾಕ್ಷಿಗಳು ಶ್ರಮಿಸುತ್ತಾರೆ. ಅಲ್ಲದೆ, ರೀಜನಲ್ ಬಿಲ್ಡಿಂಗ್ ಕಮಿಟಿಯ ನಿರ್ದೇಶನದ ಕೆಳಗೆ ಸ್ವಯಂ ಸೇವಕರ ತಂಡಗಳು, ಆರಾಧನೆಗಾಗಿ ಕೂಟದ ಉತ್ತಮ ಗೃಹಗಳನ್ನು ಸಿದ್ಧಗೊಳಿಸಲು ತಮ್ಮ ಸಮಯ, ಬಲ, ಮತ್ತು ಜ್ಞಾನವನ್ನು ಮನಃಪೂರ್ವಕವಾಗಿ ನೀಡುತ್ತವೆ. ಈ ಎಲ್ಲಾ ವಿಷಯಗಳಿಂದ, ಯೆಹೋವನು ಬಹಳ ಸಂತೋಷಗೊಳ್ಳುತ್ತಾನೆ.
14 ಈ ವಿಶಾಲವಾದ ಕಲಿಕೆಯ ಚಳುವಳಿ ಮತ್ತು ನಿರ್ಮಾಣ ಕಾರ್ಯವನ್ನು ಬೆಂಬಲಿಸಲಿಕ್ಕಾಗಿ ಹಣವು ಎಲ್ಲಿಂದ ಬರುತ್ತದೆ? ಸಾಕ್ಷಿಗುಡಾರದ ನಿರ್ಮಾಣದ ದಿನಗಳಲ್ಲಿ ಆದಂತೆಯೇ, ಸಿದ್ಧಮನಸ್ಸಿನವರಿಂದ. ವೈಯಕ್ತಿಕವಾಗಿ, ನಮಗದರಲ್ಲಿ ಒಂದು ಭಾಗವಿದೆಯೆ? ನಮ್ಮ ಹಣಕಾಸಿನ ಸಂಪನ್ಮೂಲಗಳನ್ನು ನಾವು ಬಳಸುವ ವಿಧವು, ಯೆಹೋವನ ಸೇವೆ ನಮಗೆ ಅತ್ಯಂತ ಮಹತ್ವದ್ದಾಗಿದೆ ಎಂಬುದನ್ನು ಪ್ರದರ್ಶಿಸುತ್ತದೊ? ಹಣದ ವಿಷಯಗಳಲ್ಲಿ, ನಾವು ನಂಬಿಗಸ್ತ ಮನೆವಾರ್ತೆಗಾರರಾಗಿರೋಣ.
ಉದಾರತೆಯ ಒಂದು ನಮೂನೆ
15, 16. (ಎ) ಪೌಲನ ದಿನದ ಕ್ರೈಸ್ತರು ಉದಾರತೆಯನ್ನು ಹೇಗೆ ಪ್ರದರ್ಶಿಸಿದರು? (ಬಿ) ನಮ್ಮ ಪ್ರಸ್ತುತ ಚರ್ಚೆಯನ್ನು ನಾವು ಹೇಗೆ ವೀಕ್ಷಿಸಬೇಕು?
15 ಮಕೆದೋನ್ಯ ಮತ್ತು ಅಖಾಯದಲ್ಲಿದ್ದ ಕ್ರೈಸ್ತರ ಉದಾರ ಆತ್ಮದ ಕುರಿತು ಅಪೊಸ್ತಲ ಪೌಲನು ಬರೆದನು. (ರೋಮಾಪುರ 15:26) ಸ್ವತಃ ತಾವೇ ಬಾಧೆಯನ್ನು ಅನುಭವಿಸಿದರೂ, ತಮ್ಮ ಸಹೋದರರಿಗೆ ಸಹಾಯ ಮಾಡಲು ಅವರು ಮನಃಪೂರ್ವಕವಾಗಿ ನೆರವಾದರು. ಅಂತೆಯೇ, ಇತರರ ನ್ಯೂನತೆಯನ್ನು ಸರಿದೂಗಿಸಲು ತಮ್ಮ ಆಧಿಕ್ಯವನ್ನು ಉಚಿತವಾಗಿ ಕೊಡುತ್ತಾ, ಉದಾರವಾಗಿ ನೀಡುವಂತೆ ಪೌಲನು ಕೊರಿಂಥದ ಕ್ರೈಸ್ತರನ್ನು ಉತ್ತೇಜಿಸಿದನು. ಸುಲಿಗೆಯ ವಿಷಯವಾಗಿ ಯಾರೂ ಪೌಲನನ್ನು ಯೋಗ್ಯವಾಗಿ ಆಪಾದಿಸುವಂತಿರಲಿಲ್ಲ. ಅವನು ಬರೆದದ್ದು: “ಸ್ವಲ್ಪವಾಗಿ ಬಿತ್ತುವವನು ಪೈರನ್ನು ಸ್ವಲ್ಪವಾಗಿ ಕೊಯ್ಯುವನು; ಹೆಚ್ಚಾಗಿ ಬಿತ್ತುವವನು ಹೆಚ್ಚಾಗಿ ಕೊಯ್ಯುವನು ಎಂದು ತಿಳುಕೊಳ್ಳಿರಿ. ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”—2 ಕೊರಿಂಥ 8:1-3, 14; 9:5-7, 13.
16 ಲೋಕವ್ಯಾಪಕ ರಾಜ್ಯ ಕೆಲಸಕ್ಕಾಗಿ ಇಂದು ನಮ್ಮ ಸಹೋದರರು ಮತ್ತು ಅಭಿರುಚಿಯುಳ್ಳ ವ್ಯಕ್ತಿಗಳು ಮಾಡುವ ಉದಾರ ಕಾಣಿಕೆಗಳು, ಈ ಸುಯೋಗವನ್ನು ಅವರು ಎಷ್ಟು ಗೌರವದಿಂದ ಕಾಣುತ್ತಾರೆ ಎಂಬುದರ ಪ್ರಮಾಣವನ್ನು ಕೊಡುತ್ತವೆ. ಆದರೆ, ಪೌಲನು ಕೊರಿಂಥದವರಿಗೆ ಜ್ಞಾಪಕ ಹುಟ್ಟಿಸಿದಂತೆಯೇ, ಈ ಚರ್ಚೆಯನ್ನು ನಾವು ಒಂದು ಮರುಜ್ಞಾಪನದಂತೆ ಪರಿಗಣಿಸುವುದು ಒಳ್ಳೆಯದಾಗಿರುವುದು.
17. ಯಾವ ನಮೂನೆಯ ಕೊಡುವಿಕೆಯನ್ನು ಪೌಲನು ಉತ್ತೇಜಿಸಿದನು, ಮತ್ತು ಇದನ್ನು ಇಂದು ಅನ್ವಯಿಸಸಾಧ್ಯವಿದೆಯೊ?
17 ತಮ್ಮ ಕೊಡುವಿಕೆಯಲ್ಲಿ ಒಂದು ನಮೂನೆಯನ್ನು ಅನುಸರಿಸುವಂತೆ ಪೌಲನು ಸಹೋದರರನ್ನು ಪ್ರೋತ್ಸಾಹಿಸಿದನು. “ವಾರವಾರದ ಮೊದಲನೆಯ ದಿನದಲ್ಲಿ,” ಅವನಂದದ್ದು, “ತನಗೆ ಬಂದ ಸಂಪಾದನೆಯ ಮೇರೆಗೆ . . . ಗಂಟುಮಾಡಿ ತನ್ನ ಮನೆಯಲ್ಲಿಟ್ಟುಕೊಂಡಿರಬೇಕು.” (1 ಕೊರಿಂಥ 16:1, 2) ಸಭೆಯ ಮೂಲಕವಾಗಲಿ ನೇರವಾಗಿಯಾಗಲಿ ಅತಿ ಹತ್ತಿರದಲ್ಲಿರುವ ವಾಟ್ ಟವರ್ ಸೊಸೈಟಿಯ ಬ್ರಾಂಚ್ ಆಫೀಸಿಗೆ ಕಳುಹಿಸುವ ಮೂಲಕವಾಗಲಿ, ಅದು ನಮಗೆ ಮತ್ತು ನಮ್ಮ ಮಕ್ಕಳಿಗೆ ಕಾಣಿಕೆ ಕೊಡುವುದರಲ್ಲಿ ಮಾದರಿಯಾಗಿರಬಲ್ಲದು. ಪೂರ್ವ ಆಫ್ರಿಕದ ಪಟ್ಟಣವೊಂದರಲ್ಲಿ ಸಾರಲು ನೇಮಿಸಲ್ಪಟ್ಟ ಒಬ್ಬ ಮಿಷನೆರಿ ದಂಪತಿಗಳು, ಬೈಬಲ್ ಅಧ್ಯಯನವೊಂದಕ್ಕೆ ತಮ್ಮನ್ನು ಸೇರುವಂತೆ ಆಸಕ್ತಿಯಿದ್ದವರನ್ನು ಆಮಂತ್ರಿಸಿದರು. ಈ ಪ್ರಥಮ ಕೂಟದ ಕೊನೆಯಲ್ಲಿ, “ರಾಜ್ಯ ಕೆಲಸಕ್ಕಾಗಿ ಕಾಣಿಕೆಗಳು” ಎಂಬುದಾಗಿ ಗುರುತಿಸಲ್ಪಟ್ಟ ಒಂದು ಪೆಟ್ಟಿಗೆಯೊಳಗೆ ಮಿಷನೆರಿಗಳು ಕೆಲವು ನಾಣ್ಯಗಳನ್ನು ವಿವೇಚನೆಯಿಂದ ಹಾಕಿದರು. ಹಾಜರಾದ ಇತರರೂ ಹಾಗೆಯೇ ಮಾಡಿದರು. ತದನಂತರ, ಈ ಹೊಸಬರು ಒಂದು ಕ್ರೈಸ್ತ ಸಭೆಯಾಗಿ ಸಂಘಟಿಸಲ್ಪಟ್ಟ ತರುವಾಯ, ಸರ್ಕಿಟ್ ಮೇಲ್ವಿಚಾರಕರು ಸಂದರ್ಶಿಸಿದರು ಮತ್ತು ಅವರ ಕಾಣಿಕೆಗಳ ಕ್ರಮಬದ್ಧತೆಯ ಕುರಿತು ಹೇಳಿಕೆಯನ್ನೀಡಿದರು.—ಕೀರ್ತನೆ 50:10, 14, 23.
18. ಸಂಕಟದಲ್ಲಿರುವ ನಮ್ಮ ಸಹೋದರರಿಗೆ ನಾವು ಹೇಗೆ ಸಹಾಯ ಮಾಡಬಲ್ಲೆವು?
18 ನೈಸರ್ಗಿಕ ವಿಪತ್ತುಗಳ ಬಲಿಯಾಗುವವರಿಗೆ ಮತ್ತು ಯುದ್ಧದಿಂದ ಧ್ವಂಸಮಾಡಲ್ಪಟ್ಟ ಕ್ಷೇತ್ರಗಳಲ್ಲಿ ಜೀವಿಸುವವರಿಗೆ ಸಹಾಯ ಮಾಡಲು, ನಮ್ಮ ಸಂಪನ್ಮೂಲಗಳನ್ನು ಬಳಸುವ ಸುಯೋಗವೂ ನಮಗಿದೆ. ಲೋಕದ ಆ ಭಾಗದಲ್ಲಿ ಆರ್ಥಿಕ ಹಾಗೂ ರಾಜಕೀಯ ಬದಲಾವಣೆಯು ಸಂಭವಿಸಿದಂತೆ, ಪೂರ್ವ ಯೂರೋಪಿಗೆ ಕಳುಹಿಸಲ್ಪಟ್ಟ ಪರಿಹಾರ ಸರಬರಾಯಿಗಳ ಕುರಿತು ಓದಲು ನಾವು ಎಷ್ಟು ರೋಮಾಂಚಗೊಂಡೆವು! ವಸ್ತುಗಳ ಹಾಗೂ ಹಣದ—ಎರಡರ—ಕಾಣಿಕೆಗಳು, ನಮ್ಮ ಸಹೋದರರ ಉದಾರತೆಯನ್ನು ಮತ್ತು ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಕ್ರೈಸ್ತರೊಂದಿಗೆ ಐಕಮತ್ಯವನ್ನು ಪ್ರದರ್ಶಿಸಿತು.b—2 ಕೊರಿಂಥ 8:13, 14.
19. ಪೂರ್ಣ ಸಮಯದ ಸೇವೆಯಲ್ಲಿರುವವರಿಗೆ ನೆರವಾಗಲು ಯಾವ ಪ್ರಾಯೋಗಿಕ ವಿಷಯಗಳನ್ನು ನಾವು ಮಾಡಬಲ್ಲೆವು?
19 ಪಯನೀಯರರೋಪಾದಿ, ಸಂಚರಣ ಮೇಲ್ವಿಚಾರಕರೋಪಾದಿ, ಮಿಷನೆರಿಗಳೋಪಾದಿ, ಮತ್ತು ಬೆತೆಲ್ ಸ್ವಯಂಸೇವಕರೋಪಾದಿ ಪೂರ್ಣ ಸಮಯದ ಸೇವೆಯಲ್ಲಿ ತೊಡಗುವ ನಮ್ಮ ಸಹೋದರರ ಕೆಲಸವನ್ನು ನಾವು ಬಹಳ ಅಮೂಲ್ಯವೆಂದೆಣಿಸುತ್ತೇವೆ, ಅಲ್ಲವೆ? ನಮ್ಮ ಸ್ಥಿತಿಗತಿಗಳು ಅನುಮತಿಸುವಂತೆ, ನಾವು ನೇರವಾಗಿ ಅವರಿಗೆ ಸ್ವಲ್ಪ ಭೌತಿಕ ಸಹಾಯವನ್ನು ನೀಡಲು ಶಕ್ತರಾಗಿರಬಹುದು. ಉದಾಹರಣೆಗೆ, ಸರ್ಕಿಟ್ ಮೇಲ್ವಿಚಾರಕನು ನಿಮ್ಮ ಸಭೆಯನ್ನು ಸಂದರ್ಶಿಸುವಾಗ, ನೀವು ಅವನಿಗೆ ವಸತಿಗಳನ್ನು, ಊಟಗಳನ್ನು, ಅಥವಾ ಅವನ ಸಂಚಾರ ವೆಚ್ಚಗಳಿಗಾಗಿ ಸಹಾಯವನ್ನು ಒದಗಿಸಲು ಶಕ್ತರಾಗಿರಬಹುದು. ತನ್ನ ಸೇವಕರು ಪರಾಮರಿಸಲ್ಪಡಬೇಕೆಂದು ಬಯಸುವ ನಮ್ಮ ಸ್ವರ್ಗೀಯ ತಂದೆಯಿಂದ ಇಂತಹ ಉದಾರತೆಯು ಕಡೆಗಣಿಸಲ್ಪಡುವುದಿಲ್ಲ. (ಕೀರ್ತನೆ 37:25) ಕೆಲವು ವರ್ಷಗಳ ಹಿಂದೆ, ಕೇವಲ ಅಲ್ಪ ಉಪಾಹಾರಗಳನ್ನು ನೀಡಲು ಶಕ್ತನಾಗಿದ್ದ ಒಬ್ಬ ಸಹೋದರನು, ಸಂಚರಣ ಮೇಲ್ವಿಚಾರಕನನ್ನು ಮತ್ತು ಅವನ ಹೆಂಡತಿಯನ್ನು ತನ್ನ ಮನೆಗೆ ಆಮಂತ್ರಿಸಿದನು. ದಂಪತಿಗಳು ಅಲ್ಲಿಂದ ಸಂಜೆಯ ಕ್ಷೇತ್ರ ಸೇವೆಗಾಗಿ ಹೊರಟಾಗ, ಸಹೋದರನು ತನ್ನ ಭೇಟಿಕಾರರಿಗೆ ಒಂದು ಲಕೋಟೆಯನ್ನು ನೀಡಿದನು. ಅದರೊಳಗೆ ಬ್ಯಾಂಕಿನ ಒಂದು ಪ್ರಾಮಿಸರಿ ನೋಟು (ಒಂದು ಅಮೆರಿಕನ್ ಡಾಲರಿಗೆ ಸರಿಸಮಾನ) ಮತ್ತು ಅದರೊಂದಿಗೆ ಈ ಲಿಖಿತ ಟಿಪ್ಪಣಿಯಿತ್ತು: “ಒಂದು ಕಪ್ ಚಹಕ್ಕಾಗಿ, ಯಾ ಒಂದು ಗ್ಯಾಲನ್ ಪೆಟ್ರೋಲ್ಗಾಗಿ.” ಈ ದೈನ್ಯವಾದ ವಿಧಾನದಲ್ಲಿ ಎಂತಹ ಉತ್ತಮವಾದ ಗಣ್ಯತೆಯನ್ನು ವ್ಯಕ್ತಪಡಿಸಲಾಗಿದೆ!
20. ಯಾವ ಸುಯೋಗ ಮತ್ತು ಜವಾಬ್ದಾರಿಯನ್ನು ಕಡೆಗಣಿಸಲು ನಾವು ಬಯಸುವುದಿಲ್ಲ?
20 ಆತ್ಮಿಕವಾಗಿ, ಯೆಹೋವನ ಜನರು ಆಶೀರ್ವದಿಸಲ್ಪಟ್ಟಿದ್ದಾರೆ! ನಮ್ಮ ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ನಾವು ಆತ್ಮಿಕ ಔತಣವನ್ನು ಅನುಭವಿಸುತ್ತೇವೆ. ಅಲ್ಲಿ ಹೊಸ ಪ್ರಕಾಶನಗಳನ್ನು, ಉತ್ತಮ ಬೋಧನೆಯನ್ನು, ಮತ್ತು ಪ್ರಾಯೋಗಿಕ ಸಲಹೆಯನ್ನು ನಾವು ಪಡೆಯುತ್ತೇವೆ. ನಮ್ಮ ಆತ್ಮಿಕ ಆಶೀರ್ವಾದಗಳಿಗೆ ಗಣ್ಯತೆಯಿಂದ ತುಂಬಿದ ಹೃದಯಗಳೊಂದಿಗೆ, ಲೋಕವ್ಯಾಪಕವಾಗಿ ದೇವರ ರಾಜ್ಯದ ಅಭಿರುಚಿಗಳನ್ನು ಮುಂದುವರಿಸಲಿಕ್ಕಾಗಿ ಉಪಯೋಗಿಸಲ್ಪಡುವ ದಾನಗಳನ್ನು ನೀಡುವ ನಮ್ಮ ಸುಯೋಗವನ್ನು ಮತ್ತು ಜವಾಬ್ದಾರಿಯನ್ನು ನಾವು ಮರೆಯುವುದಿಲ್ಲ.
‘ಅನ್ಯಾಯದ ಧನದ ಮೂಲಕ ಸ್ನೇಹಿತರನ್ನು ಮಾಡಿಕೊಳ್ಳಿರಿ’
21, 22. “ಅನ್ಯಾಯದ ಧನ”ಕ್ಕೆ ಬೇಗನೆ ಏನು ಸಂಭವಿಸುವುದು, ಮತ್ತು ಕೂಡಲೆ ಏನನ್ನು ಮಾಡುವಂತೆ ಇದು ನಮ್ಮನ್ನು ಅವಶ್ಯಪಡಿಸುತ್ತದೆ?
21 ಸತ್ಯವಾಗಿಯೂ, ಯೆಹೋವನ ಆರಾಧನೆಯು ನಮ್ಮ ಜೀವಿತಗಳಲ್ಲಿ ಅತ್ಯಂತ ಪ್ರಾಮುಖ್ಯವಾಗಿದೆ ಎಂದು ತೋರಿಸಬಲ್ಲ ಬೇಕಾದಷ್ಟು ವಿಧಗಳಿವೆ. ಮತ್ತು ಇದನ್ನು ತೋರಿಸುವ ಒಂದು ಅತಿ ಮುಖ್ಯವಾದ ವಿಧವು, ಯೇಸುವಿನ ಬುದ್ಧಿವಾದಕ್ಕೆ ಕಿವಿಗೊಡುವುದನ್ನು ಒಳಗೊಳ್ಳುತ್ತದೆ: “ಅನ್ಯಾಯದ ಧನದ ಮೂಲಕವಾಗಿ ನಿಮಗೆ ಸ್ನೇಹಿತರನ್ನು ಮಾಡಿಕೊಳ್ಳಿರಿ; ಹೀಗೆ ಮಾಡಿದರೆ ಅದು ನಿಮ್ಮ ಕೈಬಿಟ್ಟುಹೋದಾಗ ಅವರು ನಿಮ್ಮನ್ನು ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವರು.”—ಲೂಕ 16:9.
22 ಅನ್ಯಾಯದ ಧನದ ವಿಫಲತೆಯ ಕುರಿತು ಯೇಸು ಮಾತಾಡಿದನೆಂಬುದನ್ನು ಗಮನಿಸಿರಿ. ಹೌದು, ಈ ವ್ಯವಸ್ಥೆಯ ಹಣವು ಮೌಲ್ಯರಹಿತವಾಗುವ ದಿನವು ಬರುವುದು. “ಅವರು ತಮ್ಮ ಬೆಳ್ಳಿಯನ್ನು ಬೀದಿಗಳಲ್ಲಿ ಬಿಸಾಡುವರು, ಅವರ ಬಂಗಾರವು ಅಶುದ್ಧ ಪದಾರ್ಥದಂತಿರುವದು,” ಎಂದು ಯೆಹೆಜ್ಕೇಲನು ಪ್ರವಾದಿಸಿದನು. “ಯೆಹೋವನು ತನ್ನ ರೋಷವನ್ನು ತೀರಿಸುವ ದಿನದಲ್ಲಿ ಅವರ ಬೆಳ್ಳಿಬಂಗಾರವು ಅವರನ್ನು ರಕ್ಷಿಸಲಾರದು.” (ಯೆಹೆಜ್ಕೇಲ 7:19) ಇದು ಸಂಭವಿಸುವ ತನಕ ನಮ್ಮ ಪ್ರಾಪಂಚಿಕ ಸ್ವತ್ತುಗಳನ್ನು ನಾವು ಬಳಸುವ ವಿಧದಲ್ಲಿ ನಾವು ವಿವೇಕ ಮತ್ತು ವಿವೇಚನೆಯನ್ನು ಅಭ್ಯಸಿಸಬೇಕು. ಹೀಗೆ ಯೇಸುವಿನ ಎಚ್ಚರಿಕೆಗೆ ಕಿವಿಗೊಡಲು ತಪ್ಪಿಹೋಗಿದಕ್ಕಾಗಿ ನಾವು ವಿಷಾದಿಸೆವು: “ಹೀಗಿರುವದರಿಂದ ಅನ್ಯಾಯದ ಧನದ ವಿಷಯದಲ್ಲಿ ನೀವು ನಂಬಿಗಸ್ತರಲ್ಲದವರಾದರೆ ನಿಜವಾದ ಧನವನ್ನು ನಿಮ್ಮ ವಶಕ್ಕೆ ಯಾರು ಕೊಟ್ಟಾರು? . . . ನೀವು ದೇವರನ್ನೂ ಧನವನ್ನೂ ಕೂಡ ಸೇವಿಸಲಾರಿರಿ.”—ಲೂಕ 16:11-13.
23. ನಾವು ಏನನ್ನು ವಿವೇಕದಿಂದ ಉಪಯೋಗಿಸಬೇಕು, ಮತ್ತು ನಮ್ಮ ಪ್ರತಿಫಲವು ಏನಾಗಿರುವುದು?
23 ಹಾಗಾದರೆ, ನಮ್ಮ ಜೀವಿತಗಳಲ್ಲಿ ಯೆಹೋವನ ಆರಾಧನೆಯನ್ನು ಪ್ರಥಮವಾಗಿಡುವ ಮತ್ತು ನಮ್ಮ ಸ್ವತ್ತುಗಳ ವಿವೇಕವುಳ್ಳ ಬಳಕೆಯನ್ನು ಮಾಡುವ ಕುರಿತಾದ ಈ ಮರುಜ್ಞಾಪನಗಳನ್ನು ನಾವೆಲ್ಲರೂ ನಂಬಿಗಸ್ತಿಕೆಯಿಂದ ಕಿವಿಗೊಡೋಣ. ಹೀಗೆ ಹಣವು ವಿಫಲವಾದಾಗ ನಮ್ಮನ್ನು “ಶಾಶ್ವತವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳುವ” ವಾಗ್ದಾನವನ್ನು ಮಾಡುವ ಯೆಹೋವ ಮತ್ತು ಯೇಸುವಿನೊಂದಿಗೆ ನಮ್ಮ ಸ್ನೇಹವನ್ನು ನಾವು ಕಾಪಾಡಬಹುದು. ಇದು ಸ್ವರ್ಗೀಯ ರಾಜ್ಯದಲ್ಲಾಗಲಿ ಯಾ ಭೂಪ್ರಮೋದವನಲ್ಲಾಗಲಿ ಅನಂತ ಜೀವನದ ಪ್ರತೀಕ್ಷೆಯನ್ನು ಒಳಗೊಳ್ಳುತ್ತದೆ.—ಲೂಕ 16:9.
[ಅಧ್ಯಯನ ಪ್ರಶ್ನೆಗಳು]
a “ಕಾಣಿಕೆ” ಎಂಬುದಾಗಿ ತರ್ಜುಮೆ ಮಾಡಲಾದ ಹೀಬ್ರು ಪದವು, ಅಕ್ಷರಾರ್ಥಕವಾಗಿ “ಉದಾತ್ತವಾಗಿರು; ಉನ್ನತಕ್ಕೇರಿಸಲ್ಪಡು; ಎತ್ತರಿಸು” ಎಂಬ ಅರ್ಥಕೊಡುವ ಕ್ರಿಯಾಪದದಿಂದ ಬರುತ್ತದೆ.
b ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಇನ್ಕ್, ಇವರ ಮೂಲಕ 1993 ರಲ್ಲಿ ಪ್ರಕಾಶಿಸಲ್ಪಟ್ಟ ಯೆಹೋವನ ಸಾಕ್ಷಿಗಳು—ದೇವರ ರಾಜ್ಯದ ಘೋಷಕರು, (ಇಂಗ್ಲಿಷ್ನಲ್ಲಿ) ಎಂಬ ಪುಸ್ತಕ, ಪುಟಗಳು 307-15 ನೋಡಿರಿ.
ನಿಮಗೆ ನೆನಪಿದೆಯೊ?
▫ ಸಾಕ್ಷಿಗುಡಾರದ ನಿರ್ಮಾಣಕ್ಕೆ ನೆರವಾಗುವ ಯೆಹೋವನ ಆಮಂತ್ರಣಕ್ಕೆ ಇಸ್ರಾಯೇಲ್ ಹೇಗೆ ಪ್ರತಿಕ್ರಿಯಿಸಿತು?
▫ ವಿಧವೆಯ ಕಾಣಿಕೆಯು ವ್ಯರ್ಥವಾಗಿರಲಿಲ್ಲವೇಕೆ?
▫ ತಮ್ಮ ಸಂಪನ್ಮೂಲಗಳನ್ನು ತಾವು ಬಳಸುವ ವಿಧಕ್ಕಾಗಿ ಯಾವ ಜವಾಬ್ದಾರಿಯನ್ನು ಕ್ರೈಸ್ತರು ಹೊರುತ್ತಾರೆ?
▫ ಹಣದ ನಮ್ಮ ಬಳಕೆಗಾಗಿರುವ ವಿಷಾದಗಳನ್ನು ನಾವು ಹೇಗೆ ತೊರೆಯಬಲ್ಲೆವು?
[ಪುಟ 15 ರಲ್ಲಿರುವ ಚಿತ್ರ]
ವಿಧವೆಯ ಕಾಣಿಕೆಯು, ಅಲ್ಪವಾಗಿದ್ದರೂ, ವ್ಯರ್ಥವಾಗಿರಲಿಲ್ಲ
[ಪುಟ 16,17 ರಲ್ಲಿರುವಚಿತ್ರಗಳು]
ನಮ್ಮ ಕಾಣಿಕೆಗಳು ಲೋಕವ್ಯಾಪಕ ರಾಜ್ಯ ಕೆಲಸವನ್ನು ಬೆಂಬಲಿಸುತ್ತವೆ