“ಅಂತ್ಯ ಕಾಲದಲ್ಲಿ” ಎಚ್ಚರವಾಗಿರ್ರಿ
“ಆ ಕಾಲವು ಯಾವಾಗ ಬರುವುದೋ ನಿಮಗೆ ಗೊತ್ತಿಲ್ಲವಾದ್ದರಿಂದ ನೋಡಿಕೊಳ್ಳಿರಿ, ಎಚ್ಚರವಾಗಿರ್ರಿ.”—ಮಾರ್ಕ 13:33, NW.
1. ಈ “ಅಂತ್ಯಕಾಲ” ದಲ್ಲಿ ಉದ್ರೇಕಕಾರಿ ಘಟನಾವಳಿಗಳು ಪ್ರಕಟವಾಗುವಾಗ ನಾವು ಹೇಗೆ ಪ್ರತಿವರ್ತಿಸಬೇಕು?
ಈ “ಅಂತ್ಯ ಕಾಲದಲ್ಲಿ” ಉದ್ರೇಕಕಾರಿ ವಿಷಯಗಳು ಪ್ರಕಟವಾಗುತ್ತಿರುವಾಗ, ಕ್ರೈಸ್ತರು ಹೇಗೆ ಪ್ರತಿಕ್ರಿಯೆ ತೋರಿಸಬೇಕು? (ದಾನಿಯೇಲ 12:4) ಅವರು ಸಂದೇಹದಲ್ಲಿ ಬಿಡಲ್ಪಟ್ಟಿರುವುದಿಲ್ಲ. ಈ 20 ನೆಯ ಶತಮಾನದಲ್ಲಿ ನೆರವೇರುತ್ತಾ ಇರುವ ಸಂಘಟಿತ ಚಿಹ್ನೆಯು ಅಡಕವಾಗಿರುವ ಆ ಪ್ರವಾದನೆಯನ್ನು ಯೇಸು ತಿಳಿಸಿದನು. 1914 ರಿಂದ ಈ ಕಾಲಾವಧಿಯನ್ನು ಗುರುತಿಸಿರುವ ಅನೇಕ ವೈಶಿಷ್ಟ್ಯಗಳು ಅದ್ವಿತೀಯವಾಗಿವೆ ಎಂದು ಆತನು ಮುಂತಿಳಿಸಿದನು. “ಅಂತ್ಯ ಕಾಲದ” ಕುರಿತಾದ ದಾನಿಯೇಲನ ಪ್ರವಾದನೆಯ ಪರಿಚಯವಿದವ್ದನಾದ್ದರಿಂದ, ತನ್ನ ಶಿಷ್ಯರನ್ನು “ಎಚ್ಚರವಾಗಿರ್ರಿ” ಎಂದು ಪ್ರೋತ್ಸಾಹ ನೀಡುತ್ತಾ, ತನ್ನ ಸ್ವಂತ ಮಹಾ ಪ್ರವಾದನೆಯನ್ನು ಮುಗಿಸಿದನು.—ಲೂಕ 21:36.
2. ಆತ್ಮಿಕವಾಗಿ ಎಚ್ಚರವಾಗಿ ಉಳಿಯುವ ಮಹಾ ಅಗತ್ಯವು ಇದೆಯೇಕೆ?
2 ಎಚ್ಚರವಾಗಿರುವುದು ಏತಕ್ಕಾಗಿ? ಏಕೆಂದರೆ ಇದು ಮಾನವ ಇತಿಹಾಸದಲ್ಲಿ ಅತ್ಯಂತ ಗಂಡಾಂತರದ ಸಮಯವಾಗಿದೆ. ಈ ಸಮಯದಲ್ಲಿ ಕ್ರೈಸ್ತರು ಆತ್ಮಿಕವಾಗಿ ತೂಕಡಿಸುತ್ತಾ ಇರುವುದು ವಿಪತ್ಕಾರಕವಾಗಿದೆ. ನಾವು ಸ್ವಸಂತುಷ್ಟರಾಗಿರುವ ಮೂಲಕ ಅಥವಾ ಜೀವಿತದ ಚಿಂತೆಗಳಿಂದ ನಮ್ಮ ಹೃದಯಗಳನ್ನು ಭಾರಗೊಳ್ಳುವಂತೆ ಬಿಟ್ಟಲ್ಲಿ, ನಾವು ಅಪಾಯದಲ್ಲಿರುವೆವು. ಲೂಕ 21:34, 35 ರಲ್ಲಿ ಯೇಸು ಕ್ರಿಸ್ತನು ನಮ್ಮನ್ನು ಎಚ್ಚರಿಸಿದ್ದು: “ನಿಮ್ಮ ವಿಷಯದಲ್ಲಿ ಜಾಗರೂಕರಾಗಿರ್ರಿ. ಅತಿ ಭೋಜನದ ಮದಡಿನಿಂದಲೂ ಅಮಲಿನಿಂದಲೂ ಪ್ರಪಂಚದ ಚಿಂತೆಗಳಿಂದಲೂ ನಿಮ್ಮ ಹೃದಯಗಳು ಭಾರವಾಗಿರಲಾಗಿ ಆ ದಿವಸವು ನಿಮ್ಮ ಮೇಲೆ ಉರ್ಲಿನಂತೆ ಫಕ್ಕನೆ ಬಂದೀತು. ಆ ದಿವಸವು ಭೂನಿವಾಸಿಗಳೆಲ್ಲರ ಮೇಲೆ ಬರುವದು.”
3, 4. (ಎ) ದೇವರ ರೌದ್ರದ ದಿನವು ಮನುಷ್ಯರ ಮೇಲೆ “ಉರ್ಲಿನಂತೆ” ಫಕ್ಕನೆ ಬರುವುದು ಎಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ? (ಬಿ) ದೇವರು ಉರ್ಲನ್ನು ಒಡ್ಡುವುದಿಲ್ಲವಾದ್ದರಿಂದ, ಆ ದಿನವು ಅನಿರೀಕ್ಷಿತವಾಗಿ ಜನ ಸಾಮಾನ್ಯರ ಮೇಲೆ ಬೀಳುವದೇಕೆ?
3 ಯೆಹೋವನ ದಿನವು ‘ನಮ್ಮ ಮೇಲೆ ಉರ್ಲಿ [ಬೋನು] ನಂತೆ ಫಕ್ಕನೆ ಬಂದೀತು’ ಎಂದು ಯೇಸು ಹೇಳಿದ್ದು ಸಕಾರಣದಿಂದಲೇ. ಒಂದು ಬೋನು ಹೆಚ್ಚಾಗಿ ಒಂದು ಪಾಶದಿಂದ ಕೂಡಿರುತ್ತದೆ, ಮತ್ತು ಪಕ್ಷಿಗಳನ್ನು ಮತ್ತು ಪ್ರಾಣಿಗಳನ್ನು ಸೆರೆಹಿಡಿಯಲಿಕ್ಕಾಗಿ ಅದನ್ನು ಬಳಸಲಾಗುತ್ತದೆ. ಬೋನಿನಲ್ಲಿ ಒಂದು ಸನ್ನೆಕೀಲು ಇರುತ್ತದೆ, ಮತ್ತು ಅದರೊಳಕ್ಕೆ ನಡೆಯುವ ಯಾವನಾದರೂ ಕೀಲನ್ನು ಎಡವುತ್ತಾನೆ. ಬೋನು ಆಗ ಜಗ್ಗಲ್ಪಟ್ಟು ಮುಚ್ಚಿಬಿಡುತ್ತದೆ, ಪಶುವು ಅದರಲ್ಲಿ ಸಿಕ್ಕಿಬೀಳುತ್ತದೆ. ಇವೆಲ್ಲವೂ ಅತಿ ದಿಢೀರನೇ ಸಂಭವಿಸುತ್ತದೆ. ಅದೇ ರೀತಿಯಲ್ಲಿ, ಯೇಸುವಂದದ್ದು, “ದೇವರ ರೌದ್ರದ ದಿನ” ದಲ್ಲಿ ಆತ್ಮಿಕವಾಗಿ ನಿಷ್ಕ್ರಿಯರು ಆಶ್ಚರ್ಯಗೊಳಿಸಲ್ಪಡುವರು ಮತ್ತು ಹಠಾತ್ತಾಗಿ ಹಿಡಿಯಲ್ಪಡುವರು.—ಜ್ಞಾನೋಕ್ತಿ 11:4.
4 ಜನರಿಗಾಗಿ ಉರ್ಲನ್ನು ಒಡ್ಡುವವನು ಯೆಹೋವ ದೇವರೋ? ಅಲ್ಲ. ಜನರು ಎಚ್ಚರತಪ್ಪಿ ಇರುವಾಗ ಅವರನ್ನು ಹಿಡಿದು ನಾಶಮಾಡಲು ಅವನು ಕಾದು ನಿಂತಿರುವುದಿಲ್ಲ. ಆದರೆ ಆ ದಿನವು ಜನ ಸಾಮಾನ್ಯರನ್ನು ಹಠಾತ್ತಾಗಿ ಹಿಡಿಯುತ್ತದೆ ಯಾಕಂದರೆ ಅವರು ದೇವರ ರಾಜ್ಯಕ್ಕೆ ತಮ್ಮ ಮುಖ್ಯ ಗಮನವನ್ನು ಕೊಡುವುದಿಲ್ಲ. ಅವರು ತಮ್ಮ ಸುತ್ತಮುತ್ತಲಿನ ವಿಕಸನಗಳ ಅರ್ಥವನ್ನು ಅಸಡ್ಡೆ ಮಾಡುತ್ತಾ, ತಮ್ಮ ಸ್ವಂತ ಮಾರ್ಗದಲ್ಲಿ ಜೀವನದ ಬೆನ್ನಟ್ಟುವಿಕೆಗಳನ್ನು ನಡಿಸುತ್ತಾ ಹೋಗುತ್ತಾರೆ. ಆದರೆ ಇದು ದೇವರ ಕಾಲಕ್ರಮವನ್ನು ಬದಲಾಯಿಸುವುದಿಲ್ಲ. ವಿಷಯಗಳನ್ನು ಇತ್ಯರ್ಥಗೊಳಿಸಲು ದೇವರಿಗೆ ತನ್ನ ಸ್ವಂತ ಗೊತ್ತುಮಾಡಿದ ಸಮಯವಿದೆ. ಮತ್ತು ಕರುಣಾಪೂರ್ಣವಾಗಿ, ಬರಲಿರುವ ತನ್ನ ತೀರ್ಪಿನ ಕುರಿತು ಮನುಷ್ಯರನ್ನು ಆತನು ಅಜ್ಞಾನಿಗಳಾಗಿ ಇಡುವುದಿಲ್ಲ.—ಮಾರ್ಕ 13:10.
5, 6. (ಎ) ಬರಲಿರುವ ತೀರ್ಪಿನ ಕಾರಣ, ಮಾನವ ಜೀವಿಗಳಿಗಾಗಿ ಯಾವ ಪ್ರೀತಿಯುಳ್ಳ ಒದಗಿಸುವಿಕೆಯನ್ನು ನಿರ್ಮಾಣಿಕನು ಮಾಡಿದ್ದಾನೆ, ಆದರೆ ಯಾವ ಸಾಮಾನ್ಯ ಫಲಿತಾಂಶದೊಂದಿಗೆ? (ಬಿ) ನಮ್ಮನ್ನು ಎಚ್ಚರವಾಗಿಡಲು ಸಹಾಯಕ್ಕಾಗಿ ಏನನ್ನು ಚರ್ಚಿಸಲಾಗುವದು?
5 ಈ ಮುನ್ನೆಚ್ಚರಿಕೆಯು, ಇಲ್ಲಿ ಅವನ ಸಾಂಕೇತಿಕ ಪಾದಪೀಠದಲ್ಲಿರುವ ಮಾನವ ಜೀವಿಗಳ ಸುಕ್ಷೇಮದಲ್ಲಿ ಆಸಕ್ತನಾಗಿರುವ ಮಹಾ ನಿರ್ಮಾಣಿಕನ ಒಂದು ಪ್ರೀತಿಯ ಒದಗಿಸುವಿಕೆಯಾಗಿದೆ. (ಯೆಶಾಯ 66:1) ಆತನ ಪಾದಗಳು ಎಲ್ಲಿ ವಿಶ್ರಮಿಸುತ್ತವೆಂದು ಹೇಳಲಾಗಿದೆಯೋ ಆ ಸ್ಥಳದ ನಿವಾಸಿಗಳನ್ನು ಆತನು ನೆಚ್ಚುತ್ತಾನೆ. ಆದುದರಿಂದ ಆತನು ತನ್ನ ಐಹಿಕ ರಾಯಭಾರಿಗಳ ಮತ್ತು ರಾಜದೂತರ ಮೂಲಕವಾಗಿ, ಅವರ ಮುಂದಿರುವ ಘಟನೆಗಳ ಕುರಿತಾದ ಎಚ್ಚರಿಕೆಯನ್ನು ಕೊಡುತ್ತಾನೆ. (2 ಕೊರಿಂಥ 5:20) ಆದರೂ, ಕೊಡಲ್ಪಟ್ಟ ಎಲ್ಲಾ ಎಚ್ಚರಿಕೆಯ ನಡುವೆಯೂ, ಆ ಘಟನೆಗಳು ಮಾನವ ಕುಲದ ಮೇಲೆ, ಅವರು ಒಂದು ಉರ್ಲಿನೊಳಗೆ ಕಾಲಿಟ್ಟರೋ ಎಂಬಂತೆ ಅನಿರೀಕ್ಷಿತವಾಗಿ ಬರುವುದು. ಏಕೆ? ಏಕೆಂದರೆ ಹೆಚ್ಚಿನ ಜನರು ಆತ್ಮಿಕವಾಗಿ ನಿದ್ದೆಮಾಡುತ್ತಾ ಇದ್ದಾರೆ. (1 ಥೆಸಲೊನೀಕ 5:6) ತುಲನಾತ್ಮಕವಾಗಿ ಕೇವಲ ಒಂದು ಚಿಕ್ಕ ಸಂಖ್ಯೆ ಮಾತ್ರವೇ ಎಚ್ಚರಿಕೆಗೆ ಕಿವಿಗೊಡುತ್ತಿದ್ದಾರೆ ಮತ್ತು ಅವರು ದೇವರ ಹೊಸ ಲೋಕದೊಳಗೆ ಪಾರಾಗುವರು.—ಮತ್ತಾಯ 7:13, 14.
6 ಹೀಗಿರಲಾಗಿ ನಾವು ರಕ್ಷಣೆ ಹೊಂದುವವರೊಂದಿಗೆ ಲೆಕ್ಕಿಸಲ್ಪಡುವಂತೆ ಈ ಅಂತ್ಯ ಕಾಲದಲ್ಲಿ ಎಚ್ಚರವಾಗಿರುವುದಾದರೂ ಹೇಗೆ? ಬೇಕಾದ ಸಹಾಯವನ್ನು ಯೆಹೋವನು ಒದಗಿಸುತ್ತಾನೆ. ನಾವು ಮಾಡಸಾಧ್ಯವಿರುವ ಏಳು ವಿಷಯಗಳನ್ನು ಗಮನಕ್ಕೆ ತರೋಣ.
ಅಪಕರ್ಷಣೆಯ ವಿರುದ್ಧ ಹೋರಾಡಿರಿ
7. ಅಪಕರ್ಷಣೆಯ ಕುರಿತು ಯಾವ ಎಚ್ಚರಿಕೆಯನ್ನು ಯೇಸು ಕೊಟ್ಟನು?
7 ಮೊತ್ತಮೊದಲಾಗಿ, ನಾವು ಅಪಕರ್ಷಣೆಯ ವಿರುದ್ಧ ಹೋರಾಡಬೇಕು. ಮತ್ತಾಯ 24:42, 44 ರಲ್ಲಿ ಯೇಸು ಅಂದದ್ದು: “ಹೀಗಿರಲಾಗಿ ನಿಮ್ಮ ಕರ್ತನು ಬರುವ ದಿನವು ನಿಮಗೆ ಗೊತ್ತಿಲ್ಲವಾದದರಿಂದ ಎಚ್ಚರವಾಗಿರ್ರಿ. ಕಳ್ಳನು ಬರುವ ಜಾವ ಯಜಮಾನನಿಗೆ ತಿಳಿದಿದ್ದರೆ ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕಗೊಡಿಸುತ್ತಿರಲಿಲ್ಲವೆಂದು ತಿಳುಕೊಳ್ಳಿರಿ. ಆದಕಾರಣ ನೀವು ಸಹ ಸಿದ್ಧವಾಗಿರ್ರಿ; ನೀವು ನೆನಸದ ಗಳಿಗೆಯಲ್ಲಿ ಮನುಷ್ಯ ಕುಮಾರನು ಬರುತ್ತಾನೆ.” ಯೇಸು ಇಲ್ಲಿ ಉಪಯೋಗಿಸಿದ ಭಾಷೆಯು ಸೂಚಿಸುತ್ತದ್ದೇನಂದರೆ ಈ ಕಠಿಣಕಾಲದಲ್ಲಿ ಹೆಚ್ಚು ಅಪಕರ್ಷಣೆಗಳು ಇರುವವು, ಮತ್ತು ಅಪಕರ್ಷಣೆಗಳು ನಾಶನಕ್ಕೆ ನಡಿಸಬಲ್ಲವು. ನೋಹನ ದಿನಗಳಲ್ಲಿ ಅನೇಕ ವಿಷಯಗಳಲ್ಲಿ ಜನರು ತಲ್ಲೀನರಾಗಿದ್ದರು. ಫಲಿತಾಂಶವಾಗಿ, ಅಪಕರ್ಷಿತ ಜನರು ಸಂಭವಿಸುತ್ತಿದ್ದ ವಿಷಯಗಳ ಕಡೆಗೆ “ಗಮನ ಕೊಡದೆ” ಇದ್ದರು ಮತ್ತು ಪ್ರಲಯವು ಬಂದು ಎಲ್ಲರನ್ನು ಬಡುಕೊಂಡು ಹೋಯಿತು. ಅದರಂತೆ, ಯೇಸು ಎಚ್ಚರಿಕೆ ಕೊಟ್ಟದ್ದು: “ಮನುಷ್ಯ ಕುಮಾರನು ಪ್ರತ್ಯಕ್ಷನಾಗುವ [ಸಾನಿಧ್ಯ, NW] ಕಾಲದಲ್ಲಿಯೂ ಇರುವದು.”—ಮತ್ತಾಯ 24:37-39.
8, 9. (ಎ) ಜೀವಿತದ ಸಾಮಾನ್ಯ ಬೆನ್ನಟ್ಟುವಿಕೆಗಳು ಸಹ ನಮ್ಮನ್ನು ಅಪಾಯಕರವಾಗಿ ಅಪಕರ್ಷಿಸಬಲ್ಲವು ಹೇಗೆ? (ಬಿ) ಪೌಲ ಮತ್ತು ಯೇಸು ಯಾವ ಎಚ್ಚರಿಕೆಗಳನ್ನು ಕೊಟ್ಟರು?
8 ಯೇಸು ಲೂಕ 21:34, 35 ರಲ್ಲಿ ಕೊಟ್ಟ ಎಚ್ಚರಿಕೆಯಲ್ಲಿ, ಜೀವಿತದ ಸಾಮಾನ್ಯ ವೈಶಿಷ್ಟ್ಯಗಳಾದ ಊಟಮಾಡುವುದು, ಕುಡಿಯುವುದು ಮತ್ತು ಜೀವನೋಪಾಯದ ಚಿಂತೆಗಳೇ ಮೊದಲಾದವುಗಳನ್ನು ಆತನು ಚರ್ಚಿಸುತ್ತಿದ್ದನೆಂದು ಸಹ ನೆನಪಿನಲ್ಲಿಡಿರಿ. ಅವು ಎಲ್ಲಾ ಮನುಷ್ಯರಿಗೆ ಸರ್ವಸಾಮಾನ್ಯ ವಿಷಯಗಳಾಗಿದ್ದವು, ಕರ್ತನಾದ ಯೇಸುವಿನ ಶಿಷ್ಯರಿಗೆ ಸಹ. (ಮಾರ್ಕ 6:31 ನ್ನು ಹೋಲಿಸಿರಿ.) ಈ ವಿಷಯಗಳು ತಮ್ಮಲ್ಲಿ ತಾವೇ ಹಾನಿಕರವಲ್ಲ, ಆದರೆ ಬಿಟ್ಟುಕೊಡುವಲ್ಲಿ ಅವು ನಮ್ಮನ್ನು ಅಪಕರ್ಷಿಸಬಲ್ಲವು, ತಲ್ಲೀನಗೊಳಿಸಬಲ್ಲವು, ಮತ್ತು ಹೀಗೆ ನಮ್ಮಲ್ಲಿ ಅಪಾಯಕರವಾದ ಆತ್ಮಿಕ ತೂಕಡಿಸುವಿಕೆಯನ್ನು ತರಬಲ್ಲವು.
9 ಆದುದರಿಂದ ಅತ್ಯಂತ ಮಹತ್ವದ ವಿಷಯವನ್ನು—ದೈವಿಕ ಅನುಗ್ರಹವನ್ನು ಪಡೆಯುವುದನ್ನು ನಾವು ದುರ್ಲಕ್ಷ್ಯಿಸದೆ ಇರೋಣ. ಜೀವಿತದ ಸಾಮಾನ್ಯ ವಿಷಯಗಳಲ್ಲಿ ಕಾರ್ಯಮಗ್ನರಾಗಿ ಇರುವ ಬದಲಿಗೆ, ನಮ್ಮ ಪೋಷಣೆಗೆ ಬೇಕಾದ ಸೀಮಿತ ಮಟ್ಟದ ತನಕ ಮಾತ್ರವೇ ನಾವದನ್ನು ಉಪಯೋಗಿಸೋಣ. (ಫಿಲಿಪ್ಪಿ 3:8) ಅವು ರಾಜ್ಯಾಭಿರುಚಿಯನ್ನು ಹೊರಗಿಡಬಾರದು. ರೋಮಾಪುರ 14:17 ಹೇಳುವ ಪ್ರಕಾರ, “ತಿನ್ನುವದೂ ಕುಡಿಯುವದೂ ದೇವರ ರಾಜ್ಯವಲ್ಲ; ನೀತಿಯೂ ಸಮಾಧಾನವೂ ಪವಿತ್ರಾತ್ಮದಿಂದಾಗುವ ಆನಂದವೂ ಆಗಿದೆ.” ಯೇಸುವಂದ ಈ ಮಾತುಗಳನ್ನು ನೆನಪಿಗೆ ತನ್ನಿರಿ: “ಹೀಗಿರುವದರಿಂದ ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕ ಪಡಿರಿ. ಇವುಗಳ ಕೂಡ ಅವೆಲ್ಲವು ನಿಮಗೆ ದೊರಕುವವು.” (ಮತ್ತಾಯ 6:33) ಅದಲ್ಲದೆ, ಲೂಕ 9:62 ರಲ್ಲಿ ಯೇಸು ಪ್ರಕಟಿಸಿದ್ದು: “ಯಾವನಾದರೂ ನೇಗಿಲಿನ ಮೇಲೆ ತನ್ನ ಕೈಯನ್ನು ಹಾಕಿ ಹಿಂದಕ್ಕೆ ನೋಡಿದರೆ ಅವನು ದೇವರ ರಾಜ್ಯಕ್ಕೆ ತಕ್ಕವನಲ್ಲ.”
10. ನಾವು ಗುರಿಯ ಕಡೆಗೆ ನೇರವಾಗಿ ದೃಷ್ಟಿಯಿಡದಿದ್ದರೆ ಯಾವ ಅಪಾಯವು ಅಲ್ಲಿರುವುದು?
10 ಸಾಂಕೇತಿಕವಾಗಿ, ಒಮ್ಮೆ ನಾವು ಉಳಲಾರಂಭಿಸಿದರೆ, ಉತ್ತ ಗೆರೆಯಲ್ಲಿ ನೇರವಾಗಿ ಮುಂದರಿಯಬೇಕಾಗಿದೆ. ಉಳುವವನು ಹಿಂದಕ್ಕೆ ನೋಡಿದರೆ ನೇರವಾದ ನೇಗಿಲಸಾಲನ್ನು ಉಳಲಾರನು. ಅವನು ಅಪಕರ್ಷಿತನಾಗುವನು ಮತ್ತು ಸುಲಭವಾಗಿ ಪಕ್ಕಕ್ಕೆಳೆಯಲ್ಪಡುವನು ಅಥವಾ ಯಾವುದೇ ತಡೆಗಟ್ಟಿನಿಂದ ತಡೆಯಲ್ಪಡುವನು. ಹಿಂದಕ್ಕೆ ನೋಡಿದ ಮತ್ತು ಸುರಕ್ಷೆಯನ್ನು ಪಡೆಯದೆ ಹೋದ ಲೋಟನ ಹೆಂಡತಿಯಂತೆ ನಾವೆಂದೂ ಇರದಿರೋಣ. ನಮ್ಮ ಕಣ್ಣುಗಳನ್ನು ಗುರಿಯೆಡೆಗೆ ನೇರವಾಗಿಡುವ ಅಗತ್ಯ ನಮಗಿದೆ. ಇದನ್ನು ಮಾಡಲು ಅಪಕರ್ಷಣೆಯ ವಿರುದ್ಧ ಹೋರಾಡಬೇಕಾಗಿದೆ.—ಆದಿಕಾಂಡ 19:17, 26; ಲೂಕ 17:32.
ಮನಃಪೂರ್ವಕವಾಗಿ ಪ್ರಾರ್ಥಿಸಿರಿ
11. ಅಪಕರ್ಷಣೆಯ ಅಪಾಯದ ಎಚ್ಚರಿಕೆ ಕೊಟ್ಟಾದ ಮೇಲೆ ಯೇಸು ಏನನ್ನು ಒತ್ತಿಹೇಳಿದನು?
11 ಆದರೂ, ಎಚ್ಚರವಾಗಿ ಉಳಿಯಲು ನಾವು ಇನ್ನೂ ಹೆಚ್ಚನ್ನು ಮಾಡಬಲ್ಲೆವು. ಎರಡನೆಯದಾದ ಮಹತ್ವದ ವಿಷಯವು: ಮನಃಪೂರ್ವಕವಾಗಿ ಪ್ರಾರ್ಥಿಸಿರಿ. ಜೀವಿತದ ಸಾಮಾನ್ಯ ಬೆನ್ನಟ್ಟುವಿಕೆಗಳಿಂದ ಅಪಕರ್ಷಿಸಲ್ಪಡುವ ವಿರುದ್ಧವಾಗಿ ಎಚ್ಚರಿಕೆ ಕೊಟ್ಟ ಬಳಿಕ, ಯೇಸು ಸೂಚನೆ ಕೊಟ್ಟದ್ದು: “ಬರುವದಕ್ಕಿರುವ ಇವೆಲ್ಲವುಗಳೊಳಗಿಂದ ತಪ್ಪಿಸಿಕೊಳ್ಳುವದಕ್ಕೂ ಮನುಷ್ಯ ಕುಮಾರನ ಮುಂದೆ ನಿಂತುಕೊಳ್ಳುವದಕ್ಕೂ ನೀವು ಪೂರ್ಣ ಶಕ್ತರಾಗುವಂತೆ ಎಲ್ಲಾ ಕಾಲದಲ್ಲಿಯೂ ದೇವರಿಗೆ ವಿಜ್ಞಾಪನೆ ಮಾಡಿಕೊಳ್ಳುತ್ತಾ ಎಚ್ಚರವಾಗಿರ್ರಿ.”—ಲೂಕ 21:36.
12. ಯಾವ ರೀತಿಯ ಪ್ರಾರ್ಥನೆಯ ಅಗತ್ಯವಿದೆ ಮತ್ತು ಯಾವ ಫಲಿತಾಂಶ ದೊರೆಯುವುದು?
12 ಹೀಗೆ, ನಮ್ಮ ಪರಿಸ್ಥಿತಿಯ ಅಪಾಯದ ಕುರಿತು ಮತ್ತು ಎಚ್ಚರವಾಗಿರುವ ನಮ್ಮ ಅಗತ್ಯತೆಯ ಕುರಿತು ನಾವು ಸದಾ ಅನ್ವಯವನ್ನು ಮಾಡುತ್ತಿರಬೇಕು. ಆದ್ದರಿಂದ ಮನಃಪೂರ್ವಕವಾದ ವಿಜ್ಞಾಪನೆಗಳಿಂದ ನಾವು ದೇವರ ಬಳಿಗೆ ಪ್ರಾರ್ಥನಾಪೂರ್ವಕವಾಗಿ ಹೋಗೋಣ. ರೋಮಾಪುರ 12:12 ರಲ್ಲಿ ಪೌಲನು ಅನ್ನುವುದು: “ಬೇಸರಗೊಳ್ಳದೆ ಪ್ರಾರ್ಥನೆ ಮಾಡಿರಿ.” ಎಫೆಸ 6:18 ರಲ್ಲಿ ನಾವು ಓದುವುದು: “ಎಲ್ಲಾ ಸಮಯಗಳಲ್ಲಿ ಸಕಲ ವಿಧವಾದ ಪ್ರಾರ್ಥನೆಯಿಂದಲೂ ವಿಜ್ಞಾಪನೆಯಿಂದಲೂ ದೇವರನ್ನು ಪ್ರಾರ್ಥಿಸಿರಿ. . . . ಸ್ಥಿರಚಿತ್ತರಾಗಿದ್ದು ವಿಜ್ಞಾಪನೆಮಾಡುತ್ತಾ ಎಚ್ಚರವಾಗಿರ್ರಿ.” ಇದು ಕೇವಲ ಯಾವ ಮಹಾ ಫಲಿತಾಂಶವೂ ಇಲ್ಲದ ಒಂದು ಪ್ರಾಸಂಗಿಕ ವಿಷಯವೆಂಬಂತೆ ಪ್ರಾರ್ಥನೆ ಮಾಡುವದಲ್ಲ. ನಮ್ಮ ಅಸ್ತಿತ್ವವು ತಾನೇ ಗಂಡಾಂತರದಲ್ಲಿದೆ. ಆದುದರಿಂದ ದೈವಿಕ ಸಹಾಯಕ್ಕಾಗಿ ನಾವು ಮನಃಪೂರ್ವಕವಾಗಿ ಅಪ್ಪೀಲುಮಾಡುವ ಅಗತ್ಯವಿದೆ. (ಇಬ್ರಿಯ 5:7 ಕ್ಕೆ ಹೋಲಿಸಿರಿ.) ಆ ರೀತಿಯಲ್ಲಿ ನಾವು ನಮ್ಮನ್ನು ದೇವರ ಪಕ್ಷದಲ್ಲಿ ಉಳಿಸಿಕೊಳ್ಳುವೆವು. ಇದನ್ನು ಪೂರೈಸಲು ನಮಗೆ ಸಹಾಯ ಮಾಡುವುದರಲ್ಲಿ ‘ಎಲ್ಲಾ ಸಮಯಗಳಲ್ಲಿ ಪ್ರಾರ್ಥನೆ’ ಮಾಡುವುದಕ್ಕಿಂತ ಹೆಚ್ಚು ಪ್ರಯೋಜನಕಾರಿಯಾದದ್ದು ಬೇರೆ ಇಲ್ಲ. ಆಗ ಯೆಹೋವನು ನಮ್ಮನ್ನು ಒಂದು ಎಚ್ಚರವುಳ್ಳ ಅರಿವಿನ ಸ್ಥಿತಿಯಲ್ಲಿ ಇಡುವನು. ಆದುದರಿಂದ ಪ್ರಾರ್ಥನೆಯಲ್ಲಿ ನಿರತರಾಗಿರುವುದು ಅದೆಷ್ಟು ಮಹತ್ವದ್ದು!
ದೇವರ ಸಂಸ್ಥೆಗೆ ಮತ್ತು ಅದರ ಕೆಲಸಕ್ಕೆ ನಿಕಟವಾಗಿ ಅಂಟಿಕೊಳ್ಳಿರಿ
13. ಎಚ್ಚರವಾಗಿ ಉಳಿಯಲು ಯಾವ ರೀತಿಯ ಸಹವಾಸವು ಅಗತ್ಯವಾಗಿದೆ?
13 ಲೋಕದ ಮೇಲೆ ಬರಲಿರುವ ಈ ಎಲ್ಲಾ ಸಂಗತಿಗಳನ್ನು ನಾವು ಪಾರಾಗಬಯಸುತ್ತೇವೆ. ಮನುಷ್ಯ ಕುಮಾರನ ಮುಂದೆ, ಆತನ ಅನುಗ್ರಹ ಪಡೆದವರಾಗಿ, ನಿಲ್ಲುವುದಕ್ಕೆ ನಾವು ಬಯಸುತ್ತೇವೆ. ಇದಕ್ಕಾಗಿ ನಾವು ಮಾಡಬಲ್ಲ ಮೂರನೆಯದಾದ ವಿಷಯವಿದೆ: ಯೆಹೋವನ ದೇವಪ್ರಭುತ್ವ ಸಂಸ್ಥೆಗೆ ಅಖಂಡವಾಗಿ ಅಂಟಿಕೊಳ್ಳಿರಿ. ಆ ಸಂಸ್ಥೆಯೊಂದಿಗೆ ಶರ್ತರಹಿತವಾಗಿ ಸಹವಸಿಸುವ ಮತ್ತು ಅದರ ಚಟುವಟಿಕೆಗಳಲ್ಲಿ ಪಾಲಿಗರಾಗುವ ಅಗತ್ಯ ನಮಗಿದೆ. ಈ ರೀತಿಯಲ್ಲಿ ನಾವು ಜಾಗರಣೆಯಲ್ಲಿರುವ ಕ್ರೈಸ್ತರೆಂದು ನಮ್ಮನ್ನು ನಿಸ್ಸಂದೇಹವಾಗಿ ಗುರುತಿಸಿಕೊಳ್ಳುವೆವು.
14, 15. (ಎ) ಯಾವ ಕೆಲಸದಲ್ಲಿ ಮಗ್ನರಾಗುವಿಕೆಯು ನಮಗೆ ಎಚ್ಚರವಾಗಿ ಉಳಿಯಲು ಸಹಾಯ ಮಾಡುವುದು? (ಬಿ) ಸಾರುವ ಕಾರ್ಯವು ಯಾವಾಗ ಮುಗಿಯುತ್ತದೆ ಎಂದು ನಿರ್ಧರಿಸುವಾತನು ಯಾರು, ಮತ್ತು ಅದರ ಕುರಿತು ನಮ್ಮ ಅನಿಸಿಕೆ ಏನಾಗಿರಬೇಕು? (ಸಿ) ಮಹಾ ಸಂಕಟದ ಅನಂತರ, ನಡಿಸಲ್ಪಟ್ಟ ರಾಜ್ಯ ಸಾರುವಿಕೆಯ ಕಡೆಗೆ ಹಿನ್ನೋಡುವಾಗ ನಾವು ಏನನ್ನು ಕಂಡುಕೊಳ್ಳುವೆವು?
14 ನಮ್ಮನ್ನು ಎಚ್ಚರವಾಗಿ ಉಳಿಯಲು ಸಹಾಯ ಮಾಡಬಲ್ಲ ನಾಲ್ಕನೆಯ ವಿಷಯವು ಇದಕ್ಕೆ ನಿಕಟವಾಗಿ ಸಂಬಂಧಿಸಿದೆ. ಬರಲಿರುವ ಈ ವಿಷಯ ವ್ಯವಸ್ಥೆಯ ಅಂತ್ಯದ ಕುರಿತು ಜನರಿಗೆ ಎಚ್ಚರಿಕೆ ಕೊಡುವ ಜನರೊದಿಗೆ ನಾವು ಜತೆಗೂಡಬೇಕು. “ಪರಲೋಕ ರಾಜ್ಯದ ಈ ಸುವಾರ್ತೆಯು” ಸರ್ವಶಕ್ತನಾದ ದೇವರು ಉದ್ದೇಶಿಸಿರುವ ಮಟ್ಟಿಗೆ ಸಾರಲ್ಪಡುವ ತನಕ ಈ ಹಳೇ ವಿಷಯ ವ್ಯವಸ್ಥೆಯ ಅಂತ್ಯವು ಬರಲಾರದು. (ಮತ್ತಾಯ 24:14) ಸಾರುವ ಕಾರ್ಯವು ಯಾವಾಗ ಮುಕ್ತಾಯವಾಗಬೇಕು ಎಂದು ನಿರ್ಧರಿಸುವವರು ಯೆಹೋವನ ಸಾಕ್ಷಿಗಳಲ್ಲ. ಆ ಹಕ್ಕನ್ನು ಯೆಹೋವನು ತನಗಾಗಿ ಇಟ್ಟುಕೊಂಡಿದ್ದಾನೆ. (ಮಾರ್ಕ 13:32, 33) ನಾವಾದರೋ, ಮಾನವ ಕುಲವು ಎಂದಾದರೂ ಪಡೆಯಶಕ್ಯವಾದ ಅತ್ಯುತ್ತಮ ಸರಕಾರವಾದ ದೇವರ ರಾಜ್ಯದ ಕುರಿತು ಸಾರುವುದರಲ್ಲಿ ಸಾಧ್ಯವಾದಷ್ಟು ಕಷ್ಟಪಟ್ಟು ಮತ್ತು ಅವಶ್ಯವಿರುವಷ್ಟು ಕಾಲ ಕೆಲಸಮಾಡಲು ನಿರ್ಧಾರವನ್ನು ಮಾಡಿದ್ದೇವೆ. ನಾವು ಈ ಕಾರ್ಯವನ್ನು ಇನ್ನೂ ಮಾಡುತ್ತಿರುವಾಗಲೇ “ಮಹಾ ಸಂಕಟ” ತಲೆದೋರುವದು. (ಮತ್ತಾಯ 24:21) ಪಾರಾಗಿ ಉಳಿದವರು, ಭವಿಷ್ಯತ್ತಿನ ಸಮಯವೆಲ್ಲಾದರಲ್ಲಿ, ಹಿನ್ನೋಡಿ ಯೇಸು ಕ್ರಿಸ್ತನು ಒಬ್ಬ ಸುಳ್ಳು ಪ್ರವಾದಿಯಲ್ಲವೆಂದು ಹೃದಯಪೂರ್ವಕವಾಗಿ ದೃಢೀಕರಿಸ ಶಕ್ತರಾಗುವರು. (ಪ್ರಕಟನೆ 19:11) ಸಾರುವ ಕಾರ್ಯವು ಅದರಲ್ಲಿ ಪಾಲಿಗರಾದವರಿಂದ ನಿರೀಕ್ಷಿಸಲ್ಪಟ್ಟದ್ದಕ್ಕಿಂತಲೂ ಎಷ್ಟೋ ಅಧಿಕ ಪ್ರಮಾಣದಲ್ಲಿ ನೆರವೇರಿಸಲ್ಪಟ್ಟಿರುವುದು.
15 ಇದಕ್ಕನುಸಾರ, ದೇವರ ಸ್ವಂತ ತೃಪ್ತಿಗೆ ಹೊಂದಿಕೆಯಾಗಿ ಈ ಕಾರ್ಯವು ಪೂರೈಸಲ್ಪಡುವ ಆ ಪ್ರಾಮುಖ್ಯ ಸಮಯದಲ್ಲಿ, ಹಿಂದಿನ ಯಾವುದೇ ಕಾಲಾವಧಿಗಿಂತ ಹೆಚ್ಚು ಜನರು ಅದರಲ್ಲಿ ಭಾಗವಹಿಸುವುದು ಸಂಭವನೀಯ. ಈ ಮಹಾ ಕಾರ್ಯದಲ್ಲಿ ಪಾಲಿಗರಾಗಲು ಸಂಧಿ ಸಿಕ್ಕಿದುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರುವೆವು! “ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಬೇಕೆಂದು” ಯೆಹೋವನು ಅಪೇಕ್ಷಿಸುತ್ತಾನೆಂದು ಅಪೊಸ್ತಲ ಪೇತ್ರನು ನಮಗೆ ಆಶ್ವಾಸನೆ ಕೊಡುತ್ತಾನೆ. (2 ಪೇತ್ರ 3:9) ಫಲಿಶಾಂಶವಾಗಿ, ಸರ್ವಶಕ್ತನಾದ ದೇವರ ಕ್ರಿಯಾಶೀಲ ಶಕ್ತಿಯು ಎಂದಿಗಿಂತಲೂ ಹೆಚ್ಚು ತೀವ್ರವಾಗಿ ಕಾರ್ಯನಡಿಸುತ್ತದೆ ಮತ್ತು ಯೆಹೋವನ ಸಾಕ್ಷಿಗಳು ಈ ಆತ್ಮ-ಪ್ರೇರಕ ಚಟುವಟಿಕೆಯಲ್ಲಿ ಮುಂದುವರಿಯಲು ಬಯಸುತ್ತಾರೆ. ಆದ್ದರಿಂದ ಯೆಹೋವನ ಸಂಸ್ಥೆಗೆ ನಿಕಟವಾಗಿ ಅಂಟಿಕೊಳ್ಳಿರಿ ಮತ್ತು ಬಹಿರಂಗ ಶುಶ್ರೂಷೆಯಲ್ಲಿ ಮಗ್ನರಾಗಿರ್ರಿ. ಇದು ನಿಮಗೆ ಎಚ್ಚರವಾಗಿ ಉಳಿಯಲು ಇನ್ನೊಂದು ಸಹಾಯಕವಾಗಿರುವುದು.
ಆತ್ಮ ಪರೀಕ್ಷೆ ಮಾಡಿರಿ
16. ನಮ್ಮ ಪ್ರಚಲಿತ ಆತ್ಮಿಕ ಸ್ಥಿತಿಗತಿಯ ಒಂದು ಆತ್ಮ ಪರೀಕ್ಷೆಯನ್ನು ನಾವು ಮಾಡಬೇಕು ಯಾಕೆ?
16 ಎಚ್ಚರವಾಗಿ ಉಳಿಯುವದಕ್ಕೋಸ್ಕರ ನಾವು ಮಾಡಬಲ್ಲ ಐದನೆಯ ವಿಷಯವೊಂದಿದೆ. ನಾವು ನಮ್ಮ ಪ್ರಚಲಿತ ಸ್ಥಿತಿಗತಿಯ ಆತ್ಮ ಪರೀಕ್ಷೆಯನ್ನು ಮಾಡಬೇಕು. ಇದು ಹಿಂದಿಗಿಂತಲೂ ಹೆಚ್ಚಾಗಿ ಇಂದು ಯುಕ್ತವಾಗಿದೆ. ಯಾರ ಪಕ್ಷದಲ್ಲಿ ನಾವು ದೃಢತೆಯಿಂದ ನಿಂತಿದ್ದೇವೆಂದು ರುಜುಪಡಿಸುವ ಅಗತ್ಯ ನಮಗಿದೆ. ಗಲಾತ್ಯ 6:4 ರಲ್ಲಿ ಪೌಲನು ಹೇಳಿದ್ದು: “ಪ್ರತಿಯೊಬ್ಬನು ತಾನು ಮಾಡಿದ ಕೆಲಸವನ್ನು ಪರಿಶೋಧಿಸಲಿ.” 1 ಥೆಸಲೊನೀಕ 5:6-8 ರಲ್ಲಿ ಪೌಲನ ಮಾತುಗಳ ಹೊಂದಿಕೆಯಲ್ಲಿ ಒಂದು ಆತ್ಮ ಪರೀಕ್ಷೆಯನ್ನು ಮಾಡಿರಿ: “ಆದಕಾರಣ ನಾವು ಇತರರಂತೆ ನಿದ್ದೆ ಮಾಡದೆ ಎಚ್ಚರವಾಗಿರೋಣ. ಸ್ವಸ್ಥಚಿತ್ತರಾಗಿರೋಣ. ನಿದ್ದೆಮಾಡುವವರು ರಾತ್ರಿಯಲ್ಲಿ ನಿದ್ದೆಮಾಡುತ್ತಾರೆ, ಅಮಲೇರುವವರು ರಾತ್ರಿಯಲ್ಲಿ ಅಮಲೇರುತ್ತಾರಷ್ಟೆ. ನಾವಾದರೋ ಹಗಲಿನವರಾಗಿರಲಾಗಿ ವಿಶ್ವಾಸಪ್ರೀತಿಗಳೆಂಬ ವಜ್ರಕವಚವನ್ನೂ ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನೂ ಧರಿಸಿಕೊಂಡು ಸ್ವಸ್ಥಚಿತ್ತರಾಗಿರೋಣ.”
17. ಆತ್ಮ ಪರೀಕ್ಷೆಯನ್ನು ಮಾಡುವಾಗ, ಯಾವ ಪ್ರಶ್ನೆಗಳನ್ನು ನಮಗೆ ನಾವು ಕೇಳಬೇಕು?
17 ನಮ್ಮ ವಿಷಯದಲ್ಲೇನು? ಶಾಸ್ತ್ರವಚನಗಳ ಬೆಳಕಿನಲ್ಲಿ ನಾವು ನಮ್ಮನ್ನು ಪರೀಕ್ಷಿಸುವಾಗ, ರಕ್ಷಣೆಯ ನಿರೀಕ್ಷೆಯೆಂಬ ಶಿರಸ್ತ್ರಾಣವನ್ನು ಧರಿಸಿದವರಾಗಿ ಕಾಣಿಸಿಕೊಳ್ಳುತ್ತೇವೆಯೆ? ನಾವು ಈ ಹಳೇ ವ್ಯವಸ್ಥೆಯಿಂದ ನಮ್ಮನ್ನು ನಿಶ್ಚಯವಾಗಿ ಪ್ರತ್ಯೇಕಿಸಿಕೊಂಡವರಾದ ಮತ್ತು ಇನ್ನು ಮೇಲೆ ಅದರ ವಿಚಾರಗಳನ್ನು ನಡಿಸದವರಾದ ವ್ಯಕ್ತಿಗಳಾಗಿದ್ದೇವೋ? ದೇವರ ಹೊಸ ಲೋಕದ ಮನೋಭಾವ ನಿಜವಾಗಿಯೂ ನಮ್ಮಲ್ಲಿದೆಯೇ? ಈ ವ್ಯವಸ್ಥೆಯ ಎಲ್ಲಿಗೆ ಸಾಗುತ್ತಿದೆ ಎಂಬ ವಿಷಯದಲ್ಲಿ ನಾವು ಪೂರ್ಣವಾಗಿ ಎಚ್ಚತ್ತಿದ್ದೇವೆಯೆ? ಹಾಗಿದ್ದರೆ ಯೆಹೋವನ ದಿನವು ನಮ್ಮನ್ನು ಕಳ್ಳರೋ ಎಂಬಂತೆ ಪಕ್ಕನೆ ಹಿಡಿಯಲಾರದು.—1 ಥೆಸಲೊನೀಕ 5:4.
18. ಇನ್ನು ಯಾವ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಾದೀತು, ಯಾವ ಫಲಿತಾಂಶದೊಂದಿಗೆ?
18 ಒಂದು ಉತ್ತಮ, ಸುಖಕರವಾದ, ಆರಾಮದ ನಿಶ್ಚಿಂತ ಜೀವನವನ್ನು ನಡಿಸಲು ಪ್ರಯತ್ನಪಡುತ್ತಿದ್ದೇವೆಂದು ನಮ್ಮ ಪರೀಕ್ಷೆಯು ತೋರಿಸಿಕೊಟ್ಟರೆ ಆಗೇನು? ನಮ್ಮ ಆತ್ಮಿಕ ಕಣ್ಣುಗಳು ತೂಕಡಿಸುವಿಕೆ ಮತ್ತು ನಿದ್ದೆಯಿಂದ ಭಾರವಾಗಿ ಹೋಗಿವೆಯೆಂದು ಕಂಡುಬಂದರೆ ಆಗೇನು? ಕನಸಿನಂಥ ಸ್ಥಿತಿಯಲ್ಲಿ ಇದ್ದವರಾಗಿ, ಯಾವುದೇ ಐಹಿಕ ಭ್ರಾಂತಿಯನ್ನು ನಾವು ಬೆನ್ನಟ್ಟುತ್ತಿದ್ದೇವೆಯೆ? ಹಾಗಿದ್ದರೆ ನಾವು ಎಚ್ಚರಗೊಳ್ಳೋಣ!—1 ಕೊರಿಂಥ 15:34.
ನೆರವೇರಿದ ಪ್ರವಾದನೆಗಳ ಮನನ ಮಾಡಿರಿ
19. ಯಾವ ಕೆಲವು ಪ್ರವಾದನೆಗಳು ನೆರವೇರುವುದನ್ನು ನಾವು ಕಂಡಿದ್ದೇವೆ?
19 ಎಚ್ಚರವಾಗಿ ಉಳಿಯುವಂತೆ ನಮಗೆ ಸಹಾಯ ಮಾಡಲಿರುವ ಆರನೆಯ ವಿಷಯಕ್ಕೆ ನಾವೀಗ ಬರುತ್ತೇವೆ: ಈ ಅಂತ್ಯ ಕಾಲದಲ್ಲಿ ನೆರವೇರಿದ ಅನೇಕ ಪ್ರವಾದನೆಗಳನ್ನು ಮನನ ಮಾಡಿರಿ. ಜನಾಂಗಗಳಿಗೆ ನೇಮಿತವಾದ ಕಾಲವು 1914 ರಲ್ಲಿ ಅಂತ್ಯವಾದಂದಿನಿಂದ 77 ವರ್ಷಗಳನ್ನು ನಾವು ಈವಾಗಲೇ ದಾಟಿರುತ್ತೇವೆ. ಆ ಮುಕ್ಕಾಲು ಶತಮಾನವನ್ನು ನಾವು ಹಿನ್ನೋಡುವಲ್ಲಿ, ಪ್ರವಾದನೆಗಳು ಒಂದರನಂತರ ಒಂದು—ಸತ್ಯಾರಾಧನೆಯ ಪುನಃಸ್ಥಾಪನೆ; ಆತ್ಮಿಕ ಪರದೈಸದೊಳಕ್ಕೆ ಅವರ ಸಂಗಡಿಗರೊಂದಿಗೆ ಅಭಿಷಿಕ್ತ ಉಳಿಕೆಯವರ ಬಿಡುಗಡೆ; ದೇವರ ರಾಜ್ಯದ ಸುವಾರ್ತೆಯನ್ನು ವಿಶ್ವವ್ಯಾಪಕ ಪ್ರಮಾಣದಲ್ಲಿ ಸಾರುವಿಕೆ; ಮಹಾ ಸಮೂಹದವರ ತೋರಿಬರುವಿಕೆ. (ಯೆಶಾಯ 2:2, 3; ಅಧ್ಯಾಯ 35; ಜೆಕರ್ಯ 8:23; ಮತ್ತಾಯ 24:14; ಪ್ರಕಟನೆ 7:9) ಯೆಹೋವನ ಮಹಾ ನಾಮದ ಮತ್ತು ವಿಶ್ವ ಸಾರ್ವಭೌಮತ್ವದ ಉನ್ನತಿಗೇರಿಸುವಿಕೆ ಹಾಗೂ ಯೆಹೋವನು ತಕ್ಕ ಸಮಯದಲ್ಲಿ ತರ್ವೆಗೊಳಿಸಿದ ಕಾರಣ ಚಿಕ್ಕವನಿಂದ ಸಾವಿರವಾಗುವಿಕೆ ಮತ್ತು ಅಲ್ಪನಿಂದ ಬಲವಾದ ಜನಾಂಗವಾಗುವಿಕೆ ಉಂಟಾಗಿದೆ. (ಯೆಶಾಯ 60:22; ಯೆಹೆಜ್ಕೇಲ 38:23) ಮತ್ತು ಅಪೊಸ್ತಲ ಯೋಹಾನನ ಪ್ರಕಟನೆ ಪುಸ್ತಕದ ದರ್ಶನಗಳು ಈಗ ತಮ್ಮ ಪರಮಾವಧಿಯನ್ನು ಹತ್ತರಿಸುತ್ತಲಿವೆ.
20. ಯಾವ ಭರವಸದಲ್ಲಿ ಯೆಹೋವನ ಸಾಕ್ಷಿಗಳು ಪಾಲಿಗರಾಗುತ್ತಾರೆ, ಮತ್ತು ಅವರು ಕಾರ್ಯತಃ ಏನಾಗಿ ರುಜುವಾಗಿದ್ದಾರೆ?
20 ಆದ್ದರಿಂದ, ಹಿಂದೆಂದಿಗಿಂತಲೂ ಹೆಚ್ಚಾಗಿ, 1914 ರಿಂದ ಲೋಕದ ಕಾರ್ಯಾಧಿಗಳ ಅರ್ಥದ ತಮ್ಮ ತಿಳುವಳಿಕೆಯು ಸರಿಯಾಗಿದೆ ಎಂಬ ದೃಢ ಭರವಸ ಯೆಹೋವನ ಸಾಕ್ಷಿಗಳಿಗಿದೆ. ಅಂಥ ಭರವಸವುಳ್ಳವರಾಗಿರುವುದರಿಂದ, ಸರ್ವೂನ್ನತ ದೇವರ ಹಸ್ತದಲ್ಲಿರುವ ಸಾಧನಗಳಾಗಿ ಅವರು ಪರಿಣಮಿಸಿದ್ದಾರೆ. ಈ ಮಹತ್ವದ ಸಮಯದಲ್ಲಿ ದೈವಿಕ ಸಂದೇಶವನ್ನು ನೀಡುವ ಕೆಲಸವು ಅವರಿಗೆ ವಹಿಸಲ್ಪಟ್ಟಿದೆ. (ರೋಮಾಪುರ 10:15, 18) ಹೌದು, ಈ ಅಂತ್ಯಕಾಲಕ್ಕಾಗಿರುವ ಯೆಹೋವನ ಮಾತುಗಳು ಸತ್ಯವಾಗಿ ನೆರವೇರಿವೆ. (ಯೆಶಾಯ 55:11) ಇದು ನಮ್ಮನ್ನು ಯೇಸು ಕ್ರಿಸ್ತನ ಮೂಲಕ ದೇವರ ವಾಗ್ದಾನಗಳೆಲ್ಲವೂ ಪೂರ್ಣವಾಗಿ ನೆರವೇರುವುದನ್ನು ಕಾಣುವ ತನಕ ಮುಂದರಿಯುತ್ತಾ ಇರುವಂತೆ ಪ್ರೇರೇಪಿಸಬೇಕು.
ನಾವು ವಿಶ್ವಾಸಿಗಳಾದ ಸಮಯಕ್ಕಿಂತ ಈಗ ರಕ್ಷಣೆ ಹೆಚ್ಚು ಸಮೀಪ
21. ಆತ್ಮಿಕವಾಗಿ ಎಚ್ಚರವುಳ್ಳವರಾಗಿರಲು ಯಾವ ಏಳನೆಯ ಸಹಾಯವು ನಮಗಿದೆ?
21 ಕೊನೆಯದಾಗಿ, ಎಚ್ಚರವಾಗಿ ಉಳಿಯಲು ಏಳನೆಯ ಸಹಾಯ: ನಾವು ಮೊದಲು ವಿಶ್ವಾಸಿಗಳಾದ ಸಮಯಕ್ಕಿಂತ ಈಗ ರಕ್ಷಣೆಯು ಹೆಚ್ಚು ಹತ್ತಿರವೆಂಬದನ್ನು ಸದಾ ಮನಸ್ಸಿನಲ್ಲಿಡಿರಿ. ಅಧಿಕ ಪ್ರಾಮುಖ್ಯವಾಗಿ, ಯೆಹೋವನ ವಿಶ್ವ ಸಾರ್ವಭೌಮತೆಯ ನಿರ್ದೋಷೀಕರಣ ಮತ್ತು ಆತನ ನಾಮದ ಪವಿತ್ರೀಕರಣ ಹೆಚ್ಚು ಹತ್ತಿರವಾಗಿದೆ. ಹೀಗೆ ಎಚ್ಚರವಾಗಿ ಉಳಿಯುವ ಅಗತ್ಯ ಎಂದಿಗಿಂತಲೂ ಹೆಚ್ಚು ಜರೂರಿಯದ್ದು. ಅಪೊಸ್ತಲ ಪೌಲನು ಬರೆದದ್ದು: “ಈಗಿನ ಕಾಲವು ನಿದ್ದೆಯಿಂದ ಎಚ್ಚರವಾಗತಕ್ಕ ಕಾಲವೆಂದು ಅರಿತು ಇದನ್ನೆಲ್ಲಾ ಮಾಡಿರಿ. ನಾವು ಕ್ರಿಸ್ತನನ್ನು ಮೊದಲು ನಂಬಿದ ಕಾಲದಲ್ಲಿ ಇದ್ದದ್ದಕ್ಕಿಂತ ಈಗ ನಮ್ಮ ವಿಮೋಚನೆಯು ಹತ್ತಿರವಾಯಿತು. ಇರುಳು ಬಹಳ ಮಟ್ಟಿಗೆ ಕಳೆಯಿತು; ಹಗಲು ಸಮೀಪವಾಯಿತು.”—ರೋಮಾಪುರ 13:11, 12.
22. ನಮ್ಮ ರಕ್ಷಣೆಯ ಸಾಮೀಪ್ಯವು ನಮ್ಮನ್ನು ಹೇಗೆ ಪ್ರಭಾವಿಸಬೇಕು?
22 ನಮ್ಮ ರಕ್ಷಣೆಯು ಅಷ್ಟು ಹತ್ತಿರವಾಗಿರಲಾಗಿ, ನಾವು ಎಚ್ಚರವಾಗಿ ಉಳಿಯಲೇ ಬೇಕು! ಈ ಅಂತ್ಯ ಕಾಲದಲ್ಲಿ ಯೆಹೋವನು ತನ್ನ ಜನರಿಗಾಗಿ ಏನು ಮಾಡುತ್ತಿದ್ದಾನೋ ಅದಕ್ಕಾಗಿ ನಮ್ಮ ಗಣ್ಯತೆಯನ್ನು, ಯಾವುದೇ ವೈಯಕ್ತಿಕ ಅಥವಾ ಐಹಿಕ ಅಭಿರುಚಿಗಳು ಅಡಗಿಸಿಬಿಡುವಂತೆ ಬಿಟ್ಟುಕೊಡಲೇಬಾರದು. (ದಾನಿಯೇಲ 12:3) ದೇವರ ವಾಕ್ಯವು ನಮಗೆ ಸ್ಪಷ್ಟವಾಗಿಗಿ ನಮೂದಿಸುವ ಮಾರ್ಗದಿಂದ ಪಕ್ಕಕ್ಕೆ ತಳ್ಳಲ್ಪಡದಿರುವಂತೆ ನಾವು ಎಂದಿಗಿಂತಲೂ ಹೆಚ್ಚು ಸ್ಧಿರಚಿತ್ತವನ್ನು ತೋರಿಸುವ ಅಗತ್ಯವಿದೆ. (ಮತ್ತಾಯ 13:22) ಈ ಲೋಕವು ತನ್ನ ಕೊನೆಯ ದಿನಗಳಲ್ಲಿದೆ ಎಂದು ರುಜುವಾತು ಸ್ಪಷ್ಟವಾಗಿಗಿ ತೋರಿಸುತ್ತದೆ. ಬೇಗನೇ ಅದು ಅಸ್ತಿತ್ವದಿಂದ ಶಾಶ್ವತವಾಗಿ ನಿರ್ಮೂಲಗೊಳಿಸಲ್ಪಟ್ಟು ನೀತಿಯುಳ್ಳ ಒಂದು ಹೊಸ ಲೋಕಕ್ಕೆ ದಾರಿಮಾಡಿ ಕೊಡುವುದು.—2 ಪೇತ್ರ 3:13.
23. ಯಾವ ರೀತಿಯಲ್ಲಿ ಯೆಹೋವನು ನಮಗೆ ಸಹಾಯ ಮಾಡುವನು, ಯಾವ ಆಶೀರ್ವದಿತ ಫಲಿತಾಂಶದೊಂದಿಗೆ?
23 ಆದ್ದರಿಂದ ನಾವೆಲ್ಲರೂ ಅವಶ್ಯವಾಗಿ ಎಚ್ಚರದಿಂದಿರೋಣ. ಕಾಲ ಪ್ರವಾಹದಲ್ಲಿ ನಾವು ಎಲ್ಲಿದ್ದೇವೋ ಅದರ ವಿಷಯದಲ್ಲಿ ಹಿಂದಿಗಿಂತ ಎಷ್ಟೋ ಹೆಚ್ಚಾಗಿ ಜಾಗೃತರಾಗಿರೋಣ. ಈ ವಿಷಯದಲ್ಲಿ ಯೆಹೋವನೆಂದೂ ನಿದ್ರೆ ಹೋಗುವುದಿಲ್ಲ ಎಂಬದನ್ನು ಜ್ಞಾಪಕದಲ್ಲಿಡಿರಿ. ಬದಲಿಗೆ, ಈ ಅಂತ್ಯಕಾಲದಲ್ಲಿ ಎಚ್ಚರವಾಗಿ ಉಳಿಯಲು ಅತನು ಸದಾ ನಮಗೆ ಸಹಾಯ ಮಾಡುವನು. ಇರುಳು ಬಹಳ ಮಟ್ಟಿಗೆ ಕಳೆದು ಹೋಯಿತು. ಹಗಲು ಸಮೀಪವಾಗುತ್ತಾ ಇದೆ. ಆದುದರಿಂದ ಎಚ್ಚರವಾಗಿರ್ರಿ! ಬೇಗನೇ ನಾವು, ಮೆಸ್ಸೀಯನ ರಾಜ್ಯವು ಭೂಮಿಯ ಕಡೆಗಿನ ಯೆಹೋವನ ಉದ್ದೇಶಗಳನ್ನು ನೆರವೇರಿಸುವಾಗ, ಎಲ್ಲದ್ದಕ್ಕಿಂತ ಅತ್ಯಂತ ಸುಂದರವಾದ ದಿನಗಳನ್ನು ಅನುಭವಿಸಲಿರುವೆವು!—ಪ್ರಕಟನೆ 21:4, 5. (w92 5⁄1)
ನಿಮ್ಮ ಉತ್ತರಗಳೇನು?
▫ ದೇವರ ರೌದ್ರದ ದಿನವು “ಉರ್ಲಿನಂತೆ” ಜನರ ಮೇಲೆ ಬರುವುದು ಎಂದು ಯೇಸು ಹೇಳಿದ್ದು ಯಾವ ಅರ್ಥದಲ್ಲಿ?
▫ ಅಪಕರ್ಷಣೆಯ ವಿರುದ್ಧ ನಾವು ಏಕೆ ಹೋರಾಡಬೇಕು ಮತ್ತು ನಾವದನ್ನು ಹೇಗೆ ಮಾಡಬಲ್ಲೆವು?
▫ ಎಚ್ಚರವಾಗಿ ಉಳಿಯಲಿಕ್ಕೆ ಯಾವ ರೀತಿಯ ಪ್ರಾರ್ಥನೆಯ ಅಗತ್ಯವಿದೆ?
▫ ಯಾವ ರೀತಿಯ ಸಹವಾಸವು ಅತ್ಯಾವಶ್ಯಕ?
▫ ನಮ್ಮ ಆತ್ಮಿಕ ಸ್ಥಿತಿಗತಿಯ ಆತ್ಮ-ಪರೀಕ್ಷೆಯನ್ನು ಏಕೆ ಮಾಡಬೇಕು?
▫ ನಾವು ಆತ್ಮಿಕವಾಗಿ ಎಚ್ಚರದಿಂದಿರುವುದರಲ್ಲಿ ಪ್ರವಾದನೆಯು ಯಾವ ಪಾತ್ರವನ್ನು ವಹಿಸುತ್ತದೆ?