ಅಧ್ಯಾಯ 112
ಯೇಸುವಿನ ಕೊನೆಯ ಪಸ್ಕ ಹಬ್ಬ ಸಮೀಪಿಸಿದೆ
ನೈಸಾನ್ 11, ಮಂಗಳವಾರವು ಮುಕ್ತಾಯಗೊಳ್ಳುತ್ತಿದ್ದಂತೆಯೇ, ಯೇಸುವು ಎಣ್ಣೇ ಮರಗಳ ಗುಡ್ಡದ ಮೇಲೆ ಅಪೊಸ್ತಲರಿಗೆ ಬೋಧಿಸುವದನ್ನು ಕೊನೆಗೊಳಿಸಿದನು. ಅದೆಂಥಾ ಒಂದು ಕಾರ್ಯಮಗ್ನ ಹಾಗೂ ಶ್ರಮಭರಿತ ದಿನವಾಗಿತ್ತು! ಈಗ ರಾತ್ರಿಯಲ್ಲಿ ಬೇಥಾನ್ಯದಲ್ಲಿ ಉಳುಕೊಳ್ಳಲಿಕ್ಕಾಗಿ ಅವರು ಪ್ರಾಯಶಃ ಹಿಂದಿರುಗುತ್ತಿರುವಾಗ, ಅವನು ಅಪೊಸ್ತಲರಿಗೆ ಹೇಳುವದು: “ಎರಡು ದಿವಸಗಳಾದ ಮೇಲೆ ಪಸ್ಕ ಹಬ್ಬ ಬರುತ್ತದೆಂದು ಬಲ್ಲಿರಿ; ಆಗ ಮನುಷ್ಯ ಕುಮಾರನನ್ನು ವಧಾಸ್ತಂಭಕ್ಕೆ ಹಾಕುವದಕ್ಕೆ ಒಪ್ಪಿಸಿಕೋಡೋಣವಾಗುವದು.”
ಮರುದಿನ, ನೈಸಾನ್ 12ರ ಬುಧವಾರವನ್ನು ಯೇಸುವು ಬಹುಶಃ ತನ್ನ ಅಪೊಸ್ತಲರೊಂದಿಗೆ ಶಾಂತ ಏಕಾಂತತೆಯಲ್ಲಿ ಕಳೆದಿರಬೇಕು. ಮುಂಚಿನ ದಿನ ಅವನು ಧಾರ್ಮಿಕ ಮುಖಂಡರುಗಳನ್ನು ಬಹಿರಂಗವಾಗಿ ಗದರಿಸಿದ್ದನು, ಮತ್ತು ಅವನನ್ನು ಕೊಲ್ಲಲು ಅವರು ಹುಡುಕುತ್ತಾ ಇದ್ದಾರೆ ಎಂಬುದನ್ನು ಅವನು ಅರಿತನು. ಆದುದರಿಂದ ಬುಧವಾರ ಅವನು ಬಹಿರಂಗವಾಗಿ ತನ್ನನ್ನು ಎಲ್ಲಿಯೂ ತೋರಿಸಿಕೊಳ್ಳುವದಿಲ್ಲ, ಯಾಕಂದರೆ ಮರುದಿನ ತನ್ನ ಅಪೊಸ್ತಲರೊಂದಿಗೆ ಅವನು ಆಚರಿಸುವ ಪಸ್ಕ ಹಬ್ಬಕ್ಕೆ ಯಾವುದೇ ಸಂಗತಿಯು ಅಡ್ಡಿ ಬಾರದಂತೆ ಅವನು ಬಯಸಿದನು.
ತನ್ಮಧ್ಯೆ, ಮಹಾ ಯಾಜಕರೂ, ಪ್ರಜೆಯ ಹಿರಿಯರೂ ಕಾಯಫನೆಂಬ ಮಹಾ ಯಾಜಕನ ಮಠಕ್ಕೆ ಕೂಡಿ ಬಂದಿದ್ದರು. ತಮ್ಮ ಮೇಲೆ ಮುಂಚಿನ ದಿನದ ಯೇಸುವಿನ ಛೀಕಾರದಿಂದ ಕುದಿಯುತ್ತಾ, ಅವನನ್ನು ಉಪಾಯದಿಂದ ಹಿಡಿದು ಕೊಲ್ಲಬೇಕೆಂಬದಾಗಿ ಅವರು ಯೋಜನೆಗಳನ್ನು ಮಾಡುತ್ತಾರೆ. ಆದರೂ ಅವರು ಮಾತಾಡಿಕೊಳ್ಳುವದು: “ಹಬ್ಬದಲ್ಲಿ ಹಿಡಿಯಬಾರದು, ನಮ್ಮ ಜನರಲ್ಲಿ ಗದ್ದಲವಾದೀತು.” ಜನರ ಮೆಚ್ಚಿಗೆ ಯೇಸುವಿನ ಕಡೆಗೆ ಇದ್ದುದರಿಂದ, ಅವರಿಗೆ ಜನರ ಭಯವಿತ್ತು.
ಯೇಸುವನ್ನು ಕೊಲ್ಲಲು ಧಾರ್ಮಿಕ ಮುಖಂಡರುಗಳು ದುಷ್ಟತನದಿಂದ ಹಂಚಿಕೆಗಳನ್ನು ಮಾಡುತ್ತಿದ್ದಾಗ, ಅವರ ಬಳಿಗೆ ಒಬ್ಬ ಸಂದರ್ಶಕನು ಬರುತ್ತಾನೆ. ಅವರಿಗೇ ಆಶ್ಚಯವಾಗುವೆಂತೆ, ಅವನ ಪ್ರಭುವನ್ನು ಮೋಸದಿಂದ ಹಿಡಿದು ಕೊಡುವ ನಿಕೃಷ್ಟ ಯೋಚನೆಯನ್ನು ಸೈತಾನನು ಬಿತ್ತಿದ, ಯೇಸುವಿನ ಸ್ವಂತ ಅಪೊಸ್ತಲರಲ್ಲಿ ಒಬ್ಬನಾದ ಇಸ್ಕರಿಯೋತ ಯೂದನು ಆತನಾಗಿದ್ದನು! ಯೂದನು ಹೀಗೆ ಕೇಳಿದಾಗ ಅವರಿಗೆ ಎಷ್ಟೊಂದು ಆನಂದವಾಗಿರಬೇಕು: “ನಾನು ಅವನನ್ನು ನಿಮಗೆ ಹಿಡುಕೊಟ್ಟರೆ ನನಗೆ ಏನು ಕೊಡುತ್ತೀರಿ?” ಅವರು ಸಂತೋಷದಿಂದ ಮೂವತ್ತು ಬೇಳ್ಳಿನಾಣ್ಯಗಳನ್ನು ಕೊಡಲು ಒಪ್ಪುತ್ತಾರೆ, ಅದು ಮೋಶೆಯ ನಿಯಮದೊಡಂಬಡಿಕೆಯ ಪ್ರಕಾರ ಒಬ್ಬ ದಾಸನ ಬೆಲೆಯಾಗಿತ್ತು. ಅಂದಿನಿಂದ ಯೂದನು ಜನರ ಗುಂಪು ಇಲ್ಲದ ಸಮಯದಲ್ಲಿ ಯೇಸುವನ್ನು ಹಿಡುಕೊಡಲು ಒಂದು ಅನುಕೂಲವಾದ ಸಮಯವನ್ನು ನೋಡುತ್ತಾ ಇದ್ದನು.
ನೈಸಾನ್ 13 ಬುಧವಾರ ಸೂರ್ಯಾಸ್ತಮಾನದಿಂದ ಆರಂಭಗೊಳ್ಳುತ್ತದೆ. ಶುಕ್ರವಾರ ಯೇಸುವು ಯೆರಿಕೋವಿನಿಂದ ಬಂದಂದಿನಿಂದ, ಅವನು ಬೇಥಾನ್ಯದಲ್ಲಿ ಕಳೆಯುವದು ಇದು ಆರನೆಯ ಹಾಗೂ ಕೊನೆಯ ರಾತ್ರಿಯಾಗಿತ್ತು. ಮರುದಿನ, ಗುರುವಾರ ಸೂರ್ಯಾಸ್ತಮಾನದ ನಂತರ ಆರಂಭಗೊಳ್ಳುವ ಪಸ್ಕ ಹಬ್ಬಕ್ಕಾಗಿ ಕೊನೆಯ ತಯಾರಿಯನ್ನು ಮಾಡುವ ಆವಶ್ಯಕತೆ ಇತ್ತು. ಆಗ ಪಸ್ಕ ಹಬ್ಬದ ಕುರಿಯನ್ನು ಕೊಯ್ಯಬೇಕಿತ್ತು ಮತ್ತು ಅದನ್ನು ಇಡೀಯಾಗಿ ಸುಡಬೇಕಿತ್ತು. ಅವರು ಈ ಹಬ್ಬವನ್ನು ಎಲ್ಲಿ ಆಚರಿಸುವರು ಮತ್ತು ಅವರಿಗಾಗಿ ಯಾರು ಸಿದ್ಧಮಾಡುವರು?
ಪಸ್ಕ ಹಬ್ಬವನ್ನು ಆಚರಿಸುವ ಸಮಯದಲ್ಲಿ ಮಹಾ ಯಾಜಕರು ಅವನನ್ನು ಹಿಡಿಯಲು ಸಾಧ್ಯವಾಗುವಂಥ ರೀತಿಯಲ್ಲಿ ಯೂದನು ಅವರಿಗೆ ತಿಳಿಸುವದನ್ನು ಪ್ರಾಯಶಃ ತಡೆಯಲಿಕ್ಕಾಗಿ ಯೇಸುವು ಅದರ ವಿವರಣೆಗಳನ್ನು ಕೊಡಲಿಲ್ಲ. ಆದರೆ ಈಗ ಬಹುಶಃ ಗುರುವಾರ ಅಪರಾಹ್ನದ ಆರಂಭದ ಸಮಯವಾಗಿರಬಹುದು, ಯೇಸುವು ಪೇತ್ರ ಮತ್ತು ಯೋಹಾನರನ್ನು ಬೇಥಾನ್ಯದಿಂದ ಕಳುಹಿಸಿ ಹೇಳುವದು: “ನೀವು ಹೋಗಿ ನಾವು ಪಸ್ಕ ಹಬ್ಬದ ಊಟಮಾಡುವಂತೆ ಸಿದ್ಧಮಾಡಿರಿ”
“ನಾವು ಎಲ್ಲಿ ಸಿದ್ಧಮಾಡಬೇಕನ್ನುತ್ತಿ?” ಎಂದವರು ಕೇಳುತ್ತಾರೆ.
“ನೋಡಿರಿ, ನೀವು ಪಟ್ಟಣದೊಳಗೆ ಹೋದ ಮೇಲೆ,” ಯೇಸುವು ವಿವರಿಸುವದು, “ಒಬ್ಬ ಮನುಷ್ಯನು ತುಂಬಿದ ಕೊಡವನ್ನು ಹೊತ್ತುಕೊಂಡು ನಿಮ್ಮೆದುರಿಗೆ ಬರುವನು. ಅವನು ಹೋಗುವ ಮನೆಗೆ ನೀವು ಅವನ ಹಿಂದೆ ಹೋಗಿ ಆ ಮನೆಯ ಯಜಮಾನನಿಗೆ—ನಮ್ಮ ಬೋಧಕನು ತನ್ನ ಶಿಷ್ಯರ ಸಂಗಡ ಪಸ್ಕದ ಊಟವನ್ನು ಮಾಡುವದಕ್ಕೆ ಭೋಜನಶಾಲೆ ಎಲ್ಲಿದೆ ಎಂದು ಕೇಳುತ್ತಾನೆ ಎಂಬದಾಗಿ ಹೇಳಿರಿ. ಅವನು ತಕ್ಕ ಸಾಮಾನಿಟ್ಟಿರುವ ಮೇಲಂತಸ್ತಿನ ದೊಡ್ಡ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ಸಿದ್ಧ ಮಾಡಿರಿ.”
ಈ ವಿಶೇಷ ಸಂದರ್ಭಕ್ಕಾಗಿ ಅವನ ಮನೆಯನ್ನು ಬಳಸಲು ಯೇಸುವಿನ ಕೋರಿಕೆಯನ್ನು ಬಹುಶಃ ನಿರೀಕ್ಷಿಸುತ್ತಿದ್ದ ಆ ಮನೇ ಯಜಮಾನನು ಯೇಸುವಿನ ಒಬ್ಬ ಶಿಷ್ಯನಾಗಿದ್ದಿರಬಹುದು. ಹೇಗೂ ಇರಲಿ, ಪೇತ್ರ ಮತ್ತು ಯೋಹಾನರು ಯೆರೂಸಲೇಮಿಗೆ ಬರುತ್ತಾರೆ, ಅಲ್ಲಿ ಅವರು ಯೇಸುವು ಮುಂತಿಳಿಸಿದಂತೆ ಎಲ್ಲವೂ ಇರುವದನ್ನು ಕಾಣುತ್ತಾರೆ. ಹೀಗೆ ಇವರಿಬ್ಬರು ಕುರಿಮರಿಯನ್ನು ಸಿದ್ಧಪಡಿಸುತ್ತಾರೆ ಮತ್ತು ಪಸ್ಕ ಹಬ್ಬದಲ್ಲಿ ಪಾಲಿಗರಾಗುವ 13 ಮಂದಿಗೆ,—ಯೇಸು ಮತ್ತು ಅವನ 12 ಅಪೊಸ್ತಲರಿಗೆ,—ಬೇಕಾದ ಇತರ ಎಲ್ಲಾ ಆವಶ್ಯಕತೆಗಳ ಏರ್ಪಾಡನ್ನು ನೋಡಿಕೊಳ್ಳುತ್ತಾರೆ. ಮತ್ತಾಯ 26:1-5, 14-19; ಮಾರ್ಕ 14:1, 2; 10-16; ಲೂಕ 22:1-13; ವಿಮೋಚನಕಾಂಡ 21:32.
▪ ಬುಧವಾರ ಯೇಸು ಏನನ್ನು ಮಾಡಿರಬಹುದು ಮತ್ತು ಯಾಕೆ?
▪ ಮಹಾ ಯಾಜಕನ ಮನೆಯಲ್ಲಿ ಯಾವ ಕೂಟವು ನಡೆಯಿತು, ಮತ್ತು ಯಾವ ಕಾರಣಕ್ಕಾಗಿ ಧಾರ್ಮಿಕ ಮುಖಂಡರುಗಳನ್ನು ಯೂದನು ಸಂದರ್ಶಿಸುತ್ತಾನೆ?
▪ ಗುರುವಾರ ಯೇಸು ಯೆರೂಸಲೇಮಿಗೆ ಯಾರನ್ನು ಕಳುಹಿಸುತ್ತಾನೆ ಮತ್ತು ಯಾವ ಉದ್ದೇಶಕ್ಕಾಗಿ?
▪ ಯೇಸುವಿನ ಅದ್ಭುತಕರ ಶಕ್ತಿಯನ್ನು ಪುನಃ ಪ್ರಕಟಿಸುವ ಯಾವುದನ್ನು ಕಳುಹಿಸಲ್ಪಟ್ಟವರು ಕಂಡುಕೊಳ್ಳುತ್ತಾರೆ?