ಯೇಸುವಿನ ಮಾನವ ಜೀವಿತದ ಕೊನೆಯ ದಿನ
ಸಾ.ಶ. 33ರ ನೈಸಾನ್ 14, ಶುಕ್ರವಾರ ಮಧ್ಯಾಹ್ನದ ಹೊತ್ತು. ಸ್ತ್ರೀಪುರುಷರ ಒಂದು ಗುಂಪು ಸ್ವಲ್ಪ ಸಮಯದಲ್ಲೇ ಪ್ರಿಯ ಮಿತ್ರನೊಬ್ಬನ ಶವಸಂಸ್ಕಾರವನ್ನು ಮಾಡಲಿದೆ. ಆ ಗುಂಪಿನಲ್ಲಿ ಒಬ್ಬನಾದ ನಿಕೊದೇಮನು, ಶವವನ್ನು ಸಿದ್ಧಗೊಳಿಸಲು ಪರಿಮಳದ್ರವ್ಯಗಳನ್ನು ತಂದಿದ್ದಾನೆ. ಗಾಯಗಳಿಂದ ಜರ್ಜರಿತವಾಗಿದ್ದ ಆ ಶವವನ್ನು ಸುತ್ತಿಡಲು ಯೋಸೇಫನೆಂಬವನು ಶುದ್ಧವಾದ ಬಟ್ಟೆಯನ್ನು ಒದಗಿಸಿದ್ದಾನೆ.
ಈ ಜನರೆಲ್ಲರು ಯಾರು ಮತ್ತು ಅವರು ಯಾರನ್ನು ಹೂಣಿಡುತ್ತಿದ್ದಾರೆ? ಇವೆಲ್ಲವೂ ನಿಮ್ಮ ಮೇಲೆ ಪ್ರಭಾವ ಬೀರುತ್ತದೊ? ಈ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು, ಆ ಬಹುಮುಖ್ಯವಾದ ದಿನದ ಆರಂಭಕ್ಕೆ ತೆರಳೋಣ.
ಗುರುವಾರ ಸಾಯಂಕಾಲ, ನೈಸಾನ್ 14
ಯೆರೂಸಲೇಮಿನಲ್ಲಿ ಪ್ರಕಾಶಮಾನವಾದ ಹುಣ್ಣಿಮೆಯ ಚಂದ್ರನು ಮೆಲ್ಲನೆ ಮೇಲೇರುತ್ತಿದ್ದಾನೆ. ಒಂದು ಕಾರ್ಯಮಗ್ನ ದಿನದ ಅಂತ್ಯದಲ್ಲಿ, ಆ ಜನನಿಬಿಡವಾದ ನಗರವು ಶಾಂತಗೊಳ್ಳುತ್ತಿದೆ. ಈ ಸಾಯಂಕಾಲದಂದು, ಸುಡುತ್ತಿರುವ ಕುರಿಯ ಸುವಾಸನೆಯು ಎಲ್ಲೆಡೆಯೂ ಪಸರಿಸಿದೆ. ಸಾವಿರಾರು ಜನರು, ಒಂದು ವಿಶೇಷ ಘಟನೆಯಾದ ಪಸ್ಕಹಬ್ಬದ ವಾರ್ಷಿಕ ಆಚರಣೆಗಾಗಿ ಸಿದ್ಧತೆಯನ್ನು ಮಾಡುತ್ತಿದ್ದಾರೆ.
ಅತಿಥಿಗಳಿಗಾಗಿರುವ ಒಂದು ದೊಡ್ಡ ಕೋಣೆಯಲ್ಲಿ, ಯೇಸು ಕ್ರಿಸ್ತನು ಮತ್ತು ಅವನ 12 ಅಪೊಸ್ತಲರು ಅಣಿಮಾಡಲ್ಪಟ್ಟಿರುವ ಒಂದು ಮೇಜಿನ ಸುತ್ತಲೂ ಕುಳಿತುಕೊಂಡಿದ್ದಾರೆ. ಯೇಸು ಮಾತಾಡುತ್ತಿರುವುದನ್ನು ಆಲಿಸಿರಿ! “ನಾನು ಶ್ರಮೆ [“ಯಾತನೆ,” NW] ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ” ಎಂದು ಅವನು ಹೇಳುತ್ತಾನೆ. (ಲೂಕ 22:15) ಧಾರ್ಮಿಕ ಶತ್ರುಗಳು ತನ್ನನ್ನು ಕೊಲ್ಲಲು ತುದಿಗಾಲಲ್ಲಿ ನಿಂತಿದ್ದಾರೆಂದು ಯೇಸುವಿಗೆ ತಿಳಿದಿದೆ. ಆದರೆ ಅದು ಸಂಭವಿಸುವ ಮುಂಚೆ, ಒಂದು ಬಹಳ ಪ್ರಾಮುಖ್ಯ ಘಟನೆಯು ಈ ಸಾಯಂಕಾಲ ನಡೆಯಲಿದೆ.
ಪಸ್ಕವನ್ನು ಆಚರಿಸಿದ ಬಳಿಕ, ಯೇಸು ಘೋಷಿಸುವುದು: ‘ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡುಕೊಡುವನು.’ (ಮತ್ತಾಯ 26:21) ಈ ಮಾತನ್ನು ಕೇಳಿ, ಆ ವ್ಯಕ್ತಿ ಯಾರಾಗಿರಬಹುದು ಎಂದು ಅಪೊಸ್ತಲರು ಕಳವಳಪಡುತ್ತಾರೆ. ಒಂದಿಷ್ಟು ಮಾತುಕತೆಯ ನಂತರ, ಯೇಸು ಇಸ್ಕರಿಯೋತ ಯೂದನಿಗೆ ಹೇಳುತ್ತಾನೆ: “ನೀನು ಮಾಡುವದನ್ನು ಬೇಗನೆ ಮಾಡಿಬಿಡು.” (ಯೋಹಾನ 13:27) ಆ ದ್ರೋಹಿ, ಯೂದನಾಗಿದ್ದಾನಾದರೂ ಈ ಸಂಗತಿಯು ಇತರರಿಗೆ ಗೊತ್ತಿರುವುದಿಲ್ಲ. ಯೇಸುವಿನ ವಿರುದ್ಧ ಹೂಡಿರುವ ಸಂಚಿನಲ್ಲಿ, ತನ್ನ ನೀಚ ಕೆಲಸವನ್ನು ಮಾಡಲು ಅವನು ಅಲ್ಲಿಂದ ಹೊರಡುತ್ತಾನೆ.
ಒಂದು ವಿಶೇಷ ಆಚರಣೆ
ಯೇಸು ಈಗ ಒಂದು ಹೊಸ ಆಚರಣೆಯನ್ನು ಆರಂಭಿಸುತ್ತಾನೆ. ಅದು ಅವನ ಮರಣದ ಜ್ಞಾಪಕಾರ್ಥವಾಗಿರುವುದು. ಯೇಸು ಒಂದು ರೊಟ್ಟಿ ತುಂಡನ್ನು ತೆಗೆದುಕೊಂಡು, ಉಪಕಾರವನ್ನು ಹೇಳುವ ಒಂದು ಪ್ರಾರ್ಥನೆಯನ್ನು ಮಾಡುತ್ತಾನೆ. ಅದನ್ನು ತುಂಡುಮಾಡುತ್ತಾ “ತಕ್ಕೊಳ್ಳಿರಿ, ತಿನ್ನಿರಿ” ಎಂದು ಅವನು ಹೇಳುತ್ತಾನೆ. “ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ.” ಅವರಲ್ಲಿ ಪ್ರತಿಯೊಬ್ಬನು ಸ್ವಲ್ಪ ರೊಟ್ಟಿಯನ್ನು ತಿಂದ ಬಳಿಕ, ಅವನು ಕೆಂಪು ದ್ರಾಕ್ಷಾಮದ್ಯವಿರುವ ಪಾತ್ರೆಯನ್ನು ತೆಗೆದುಕೊಂಡು ಪ್ರಾರ್ಥನೆಯನ್ನು ಸಲ್ಲಿಸುತ್ತಾನೆ. “ಇದರಲ್ಲಿರುವದನ್ನು ಎಲ್ಲರೂ ಕುಡಿಯಿರಿ” ಎಂದು ಯೇಸು ಅವರಿಗೆ ಹೇಳುತ್ತಾ, ವಿವರಿಸುವುದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.” ತನ್ನ ಉಳಿದಿರುವ 11 ನಂಬಿಗಸ್ತ ಅಪೊಸ್ತಲರಿಗೆ ಅವನು ಉಪದೇಶಿಸುವುದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.”—ಮತ್ತಾಯ 26:26-28; ಲೂಕ 22:19, 20; 1 ಕೊರಿಂಥ 11 :24, 25.
ಆ ಸಾಯಂಕಾಲ ಯೇಸು, ತನ್ನ ನಿಷ್ಠಾವಂತ ಅಪೊಸ್ತಲರನ್ನು ಮುಂದೆ ಕಾದಿರುವ ಸಂಗತಿಗಳಿಗಾಗಿ ಸಜ್ಜುಗೊಳಿಸುತ್ತಾನೆ ಮತ್ತು ಅವರಿಗಾಗಿರುವ ತನ್ನ ಗಾಢವಾದ ಪ್ರೀತಿಯನ್ನು ದೃಢೀಕರಿಸುತ್ತಾನೆ. “ಪ್ರಾಣವನ್ನೇ ಸ್ನೇಹಿತರಿಗೋಸ್ಕರ ಕೊಡುವ ಪ್ರೀತಿಗಿಂತ ಹೆಚ್ಚಿನ ಪ್ರೀತಿಯು ಯಾವದೂ ಇಲ್ಲ. ನಾನು ನಿಮಗೆ ಕೊಟ್ಟ ಆಜ್ಞೆಗಳಿಗೆ ಸರಿಯಾಗಿ ನೀವು ನಡೆದರೆ ನೀವು ನನ್ನ ಸ್ನೇಹಿತರು” ಎಂದು ಅವನು ವಿವರಿಸುತ್ತಾನೆ. (ಯೋಹಾನ 15:13-15) ಹೌದು, ಆ 11 ಮಂದಿ ಅಪೊಸ್ತಲರು, ಯೇಸುವಿನ ಸಂಕಷ್ಟದ ಸಮಯದಲ್ಲೂ ಅವನೊಂದಿಗೆ ಅಂಟಿಕೊಳ್ಳುವ ಮೂಲಕ ತಾವು ನಿಜವಾದ ಸ್ನೇಹಿತರೆಂದು ರುಜುಪಡಿಸಿದ್ದಾರೆ.
ಆ ರಾತ್ರಿ—ಪ್ರಾಯಶಃ ಮಧ್ಯರಾತ್ರಿ ದಾಟಿರಬಹುದು—ಯೇಸು ಒಂದು ಸ್ಮರಣೀಯ ಪ್ರಾರ್ಥನೆಯನ್ನು ಮಾಡುತ್ತಾನೆ. ನಂತರ ಅವರು ಯೆಹೋವನಿಗೆ ಸ್ತುತಿಗೀತೆಗಳನ್ನು ಹಾಡುತ್ತಾರೆ. ಬಳಿಕ ಅವರು ಪೂರ್ಣ ಚಂದ್ರನ ಬೆಳಕಿನಲ್ಲಿ, ನಗರದಿಂದ ಹೊರಟು ಕಿದ್ರೋನ್ ಹಳ್ಳವನ್ನು ದಾಟುತ್ತಾರೆ.—ಯೋಹಾನ 17:1-18:1.
ಗೆತ್ಸೇಮನೆ ತೋಟದಲ್ಲಿ
ಸ್ವಲ್ಪ ಸಮಯದ ನಂತರ, ಯೇಸು ಮತ್ತು ಅವನ ಅಪೊಸ್ತಲರು ಗೆತ್ಸೇಮನೆ ತೋಟವನ್ನು ತಲುಪುತ್ತಾರೆ. ಯೇಸು ಎಂಟು ಮಂದಿ ಅಪೊಸ್ತಲರನ್ನು ತೋಟದ ಪ್ರವೇಶದ್ವಾರದ ಬಳಿ ಬಿಟ್ಟು, ಪೇತ್ರ, ಯಾಕೋಬ ಮತ್ತು ಯೋಹಾನರನ್ನು ಇನ್ನು ಮುಂದಕ್ಕೆ ಎಣ್ಣೇ ಮರಗಳ ನಡುವೆ ಕರೆದುಕೊಂಡುಹೋಗುತ್ತಾನೆ. “ನನ್ನ ಪ್ರಾಣವು ಸಾಯುವಷ್ಟು ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ಎಚ್ಚರವಾಗಿರ್ರಿ” ಎಂದು ಅವನು ಆ ಮೂವರಿಗೆ ಹೇಳುತ್ತಾನೆ.—ಮಾರ್ಕ 14:33, 34.
ಯೇಸು ಪ್ರಾರ್ಥನೆ ಮಾಡಲು ತೋಟದಲ್ಲಿ ಇನ್ನೂ ಮುಂದಕ್ಕೆ ಹೋಗುವಾಗ ಅಪೊಸ್ತಲರು ಕಾದುಕುಳಿತಿರುತ್ತಾರೆ. ಯೇಸು ಗಟ್ಟಿಯಾದ ಸ್ವರದಲ್ಲಿ, ಕಣ್ಣೀರಿಡುತ್ತಾ ಬೇಡಿಕೊಳ್ಳುವುದು: “ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು.” ಯೇಸುವಿನ ಮೇಲೆ ಒಂದು ದೊಡ್ಡ ಜವಾಬ್ದಾರಿ ಇದೆ. ಯೆಹೋವನ ಏಕಜಾತ ಪುತ್ರನು ಒಬ್ಬ ಅಪರಾಧಿಯಂತೆ ಕಂಬಕ್ಕೇರಿಸಲ್ಪಟ್ಟಾಗ ಆತನ ಶತ್ರುಗಳು ಏನೆಲ್ಲ ಹೇಳುವರೆಂಬ ಆಲೋಚನೆಯೇ ಅವನನ್ನು ಎಷ್ಟು ಸಂಕಟಕ್ಕೀಡುಮಾಡಿದ್ದಿರಬಹುದು! ಈ ಘೋರ ಯಾತನಾಮಯ ಪರೀಕ್ಷೆಯಲ್ಲಿ ತಾನು ವಿಫಲನಾಗುವುದಾದರೆ, ತನ್ನ ಪ್ರಿಯ ಸ್ವರ್ಗೀಯ ತಂದೆಗಾಗುವ ನಿಂದೆಯ ಕುರಿತಾದ ಯೋಚನೆ ಅವನನ್ನು ಮಾನಸಿಕವಾಗಿ ಇನ್ನಷ್ಟು ಹಿಂಸಿಸಿರಬಹುದು. ಯೇಸು ಎಷ್ಟು ಶ್ರದ್ಧೆಯಿಂದ ಪ್ರಾರ್ಥಿಸುತ್ತಾನೆ ಮತ್ತು ಎಷ್ಟು ಸಂಕಟಕ್ಕೀಡಾಗುತ್ತಾನೆಂದರೆ, ಅವನ ಬೆವರು ನೆಲದ ಮೇಲೆ ರಕ್ತದ ಹನಿಗಳಂತೆ ತೊಟ್ಟಿಕ್ಕುತ್ತದೆ.—ಲೂಕ 22:42, 44.
ಯೇಸು ಈಗ ತಾನೇ ಮೂರನೆಯ ಬಾರಿ ಪ್ರಾರ್ಥಿಸಿ ಮುಗಿಸಿದ್ದಾನೆ. ಈಗ, ಪಂಜುಗಳನ್ನು ಮತ್ತು ದೀಪಗಳನ್ನು ಹಿಡಿದಿರುವ ಪುರುಷರು ಆಗಮಿಸುತ್ತಾರೆ. ಅವರೆಲ್ಲರಿಗಿಂತ ಮುಂದೆ ಬರುತ್ತಿರುವವನು ಇಸ್ಕಾರಿಯೋತ ಯೂದನೇ. ಅವನು ನೇರವಾಗಿ ಯೇಸುವಿನ ಬಳಿ ಬರುತ್ತಾನೆ. ಯೇಸುವಿಗೆ ಅತಿ ಕೋಮಲವಾಗಿ ಮುದ್ದಿಡುತ್ತಾ, “ಗುರುವೇ, ನಮಸ್ಕಾರ” ಎಂದು ಹೇಳುತ್ತಾನೆ. “ಯೂದನೇ, ಮುದ್ದಿಟ್ಟು ಮನುಷ್ಯಕುಮಾರನನ್ನು ಹಿಡುಕೊಡುತ್ತೀಯಾ” ಎಂದು ಯೇಸು ಕೇಳುತ್ತಾನೆ.—ಮತ್ತಾಯ 26:49; ಲೂಕ 22:47, 48; ಯೋಹಾನ 18:3.
ಏನು ನಡೆಯುತ್ತಿದೆಯೆಂದು ಅಪೊಸ್ತಲರಿಗೆ ಆಗ ತಟ್ಟನೆ ಗೊತ್ತಾಗುತ್ತದೆ. ತಮ್ಮ ಸ್ವಾಮಿ ಮತ್ತು ಪ್ರಿಯ ಮಿತ್ರನು ಸ್ವಲ್ಪ ಸಮಯದಲ್ಲೇ ಬಂಧಿಸಲ್ಪಡುವನು! ಆದುದರಿಂದ ಪೇತ್ರನು ಕತ್ತಿಯೊಂದನ್ನು ಕಸಿದುಕೊಂಡು, ಮಹಾ ಯಾಜಕನ ದಾಸನ ಕಿವಿಯನ್ನು ಕತ್ತರಿಸಿಬಿಡುತ್ತಾನೆ. “ಇಷ್ಟಕ್ಕೇ ಬಿಡಿರಿ” ಎಂದು ಯೇಸು ಕೂಡಲೇ ಹೇಳುತ್ತಾನೆ. ಮುಂದೆ ಬಂದು ಆ ದಾಸನನ್ನು ಗುಣಪಡಿಸಿ, ಅವನು ಪೇತ್ರನಿಗೆ ಆಜ್ಞಾಪಿಸುವುದು: “ನಿನ್ನ ಕತ್ತಿಯನ್ನು ತಿರಿಗಿ ಒರೆಯಲ್ಲಿ ಸೇರಿಸು; ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು.” (ಲೂಕ 22:50, 51; ಮತ್ತಾಯ 26:52) ಅಧಿಕಾರಿಗಳು ಮತ್ತು ಸೈನಿಕರು ಯೇಸುವನ್ನು ಹಿಡಿದು ಬಂಧಿಸುತ್ತಾರೆ. ಭಯಭೀತರಾಗಿ ಗಲಿಬಿಲಿಗೊಂಡ ಅಪೊಸ್ತಲರು ಯೇಸುವನ್ನು ಬಿಟ್ಟು ಕತ್ತಲಲ್ಲಿ ಓಡಿಹೋಗುತ್ತಾರೆ.—ಮತ್ತಾಯ 26:56; ಯೋಹಾನ 18:12.
ಶುಕ್ರವಾರ ಬೆಳಗ್ಗೆ, ನೈಸಾನ್ 14
ಮಧ್ಯರಾತ್ರಿ ದಾಟಿ, ಶುಕ್ರವಾರದ ಆರಂಭದ ತಾಸುಗಳಲ್ಲಿ ಯೇಸುವನ್ನು ಪ್ರಥಮವಾಗಿ ಮಾಜಿ ಮಹಾ ಯಾಜಕನಾದ ಅನ್ನನ ಬಳಿ ಕರೆದೊಯ್ಯಲಾಗುತ್ತದೆ. ಅವನು ಇನ್ನೂ ಬಹಳಷ್ಟು ಪ್ರಭಾವ ಮತ್ತು ಅಧಿಕಾರವನ್ನು ಹೊಂದಿದ್ದಾನೆ. ಅನ್ನನು ಯೇಸುವನ್ನು ಪ್ರಶ್ನಿಸಿ, ಮಹಾ ಯಾಜಕನಾದ ಕಾಯಫನ ಮನೆಗೆ ಕಳುಹಿಸುತ್ತಾನೆ. ಅಲ್ಲಿ ಮಹಾ ಸಭೆಯು ಕೂಡಿಬಂದಿದೆ.
ಯೇಸುವಿನ ವಿರುದ್ಧ ಒಂದು ಮೊಕದ್ದಮೆಯನ್ನು ರಚಿಸಲು, ಧಾರ್ಮಿಕ ಮುಖಂಡರು, ಈಗ ಸಾಕ್ಷಿಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ. ಆದರೆ, ಆ ಸುಳ್ಳು ಸಾಕ್ಷಿಗಳು ಕೊಡುವ ಸಾಕ್ಷ್ಯವು ಸಹ ಒಂದಕ್ಕೊಂದು ಹೊಂದಿಕೆಯಲ್ಲಿರುವುದಿಲ್ಲ. ಇದೆಲ್ಲವೂ ನಡೆಯುತ್ತಿರುವಾಗ, ಯೇಸು ಮೌನವಾಗಿರುತ್ತಾನೆ. ತನ್ನ ತಂತ್ರಗಳನ್ನು ಬದಲಾಯಿಸಿ, ಕಾಯಫನು ತಗಾದೆಮಾಡುವುದು: “ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು.” ಆ ವಾಸ್ತವಾಂಶವನ್ನು ಅಲ್ಲಗಳೆಯುವುದು ಅಸಾಧ್ಯವಾದುದರಿಂದ ಯೇಸು ಧೈರ್ಯದಿಂದ ಉತ್ತರಿಸುವುದು: “ನಾನೇ ಇದಲ್ಲದೆ ಮನುಷ್ಯಕುಮಾರನು ಸರ್ವಶಕ್ತನ ಬಲಗಡೆಯಲ್ಲಿ ಆಸೀನನಾಗಿರುವದನ್ನೂ ಆಕಾಶದ ಮೇಘಗಳೊಂದಿಗೆ ಬರುವದನ್ನೂ ನೋಡುವಿರಿ.”—ಮತ್ತಾಯ 26:63; ಮಾರ್ಕ 14:60-62.
“ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು?” ಎಂದು ಕಾಯಫನು ಕೂಗಾಡುತ್ತಾನೆ. ಈಗ ಕೆಲವರು ಯೇಸುವಿನ ಕೆನ್ನೆಗೆ ಹೊಡೆಯುತ್ತಾರೆ ಮತ್ತು ಅವನ ಮುಖದ ಮೇಲೆ ಉಗುಳುತ್ತಾರೆ. ಇನ್ನಿತರರು ಅವನನ್ನು ತಮ್ಮ ಮುಷ್ಠಿಗಳಿಂದ ಗುದ್ದುತ್ತಾರೆ ಮತ್ತು ಅವನನ್ನು ದೂಷಿಸುತ್ತಾರೆ. (ಮತ್ತಾಯ 26:65-68; ಮಾರ್ಕ 14:63-65) ಶುಕ್ರವಾರ ಅರುಣೋದಯದ ನಂತರ ಕೂಡಲೇ ಮಹಾಸಭೆಯು ಪುನಃ ಕೂಡಿಬರುತ್ತದೆ. ಅವರು ರಾತ್ರಿ ಸಮಯದಲ್ಲಿ ನಡೆಸಿದ ಕಾನೂನುಬಾಹಿರ ವಿಚಾರಣೆಗೆ ಪ್ರಾಯಶಃ ನ್ಯಾಯಬದ್ಧತೆಯ ತೋರಿಕೆಯನ್ನು ಕೊಡಲಿಕ್ಕಾಗಿ ಇದನ್ನು ಮಾಡಿರಬಹುದು. ಪುನಃ ಯೇಸು ತಾನು ದೇವರ ಪುತ್ರನಾದ ಕ್ರಿಸ್ತನಾಗಿದ್ದೇನೆಂದು ಧೈರ್ಯದಿಂದ ಸೂಚಿಸುತ್ತಾನೆ.—ಲೂಕ 22:66-71.
ಅನಂತರ, ಆ ಮಹಾಯಾಜಕರು ಮತ್ತು ಹಿರೀಪುರುಷರು, ಯೂದಾಯದ ರೋಮನ್ ಅಧಿಪತಿಯಾದ ಪೊಂತ್ಯ ಪಿಲಾತನು ಯೇಸುವಿನ ವಿಚಾರಣೆಮಾಡುವಂತೆ ಅವನನ್ನು ಅಲ್ಲಿಗೆ ಎಳೆದೊಯ್ಯುತ್ತಾರೆ. ಯೇಸು ಜನರ ಮನಸ್ಸನ್ನು ಕೆಡಿಸುತ್ತಿದ್ದಾನೆ, ಕೈಸರನಿಗೆ ತೆರಿಗೆ ಕೊಡುವುದನ್ನು ನಿಷೇಧಿಸುತ್ತಾನೆ, ಮತ್ತು “ತಾನೇ ಕ್ರಿಸ್ತನೆಂಬ ಒಬ್ಬ ಅರಸನಾಗಿದ್ದೇನೆಂದು ಹೇಳುತ್ತಾ”ನೆಂಬ ಆರೋಪವನ್ನು ಅವನ ಮೇಲೆ ಹೊರಿಸುತ್ತಾರೆ. (ಲೂಕ 23:2; ಹೋಲಿಸಿರಿ ಮಾರ್ಕ 12:17.) ಯೇಸುವನ್ನು ವಿಚಾರಣೆಗೊಳಪಡಿಸಿದ ನಂತರ, ಪಿಲಾತನು ಘೋಷಿಸುವುದು: “ಈ ಮನುಷ್ಯನಲ್ಲಿ ನನಗೆ ಯಾವ ಅಪರಾಧವೂ ಕಾಣಿಸುವದಿಲ್ಲ.” (ಲೂಕ 23:4) ಯೇಸು ಗಲಿಲಾಯದವನೆಂದು ಪಿಲಾತನಿಗೆ ಗೊತ್ತಾದಾಗ, ಅವನು ಯೇಸುವನ್ನು ಗಲಿಲಾಯದ ಅಧಿಪತಿಯಾದ ಹೆರೋದ ಅಂತಿಪನ ಬಳಿ ಕಳುಹಿಸುತ್ತಾನೆ. ಹೆರೋದನು ಪಸ್ಕದ ಆಚರಣೆಗಾಗಿ ಯೆರೂಸಲೇಮಿಗೆ ಬಂದಿರುತ್ತಾನೆ. ಹೆರೋದನ ಉದ್ದೇಶವು, ನ್ಯಾಯವನ್ನು ಕೊಡುವುದಲ್ಲ, ಬದಲಾಗಿ ಯೇಸು ಒಂದು ಅದ್ಭುತಕಾರ್ಯ ಮಾಡುವುದನ್ನು ನೋಡಲು ಬಯಸುತ್ತಾನಷ್ಟೇ. ಅವನ ಈ ಕುತೂಹಲವನ್ನು ಯೇಸು ತಣಿಸದೆ ಮೌನವಾಗಿರುವುದರಿಂದ ಹೆರೋದ ಮತ್ತು ಅವನ ಸೈನಿಕರು ಅವನನ್ನು ಗೇಲಿಮಾಡಿ, ಪುನಃ ಪಿಲಾತನ ಬಳಿ ಕಳುಹಿಸುತ್ತಾರೆ.
“ಯಾಕೆ? ಕೆಟ್ಟದ್ದೇನು ಮಾಡಿದನು?” ಎಂದು ಪಿಲಾತನು ಪುನಃ ಕೇಳುತ್ತಾನೆ. “ನಾನು ಇವನಲ್ಲಿ ಮರಣದಂಡನೆಗೆ ತಕ್ಕ ಅಪರಾಧವೇನೂ ಕಾಣಲಿಲ್ಲ; ಆದದರಿಂದ ಇವನನ್ನು ಹೊಡಿಸಿ ಬಿಟ್ಟುಬಿಡುತ್ತೇನೆ.” (ಲೂಕ 23:22) ಆದುದರಿಂದ, ಅವನು ಯೇಸುವನ್ನು ಚರ್ಮದ ಅನೇಕ ಪಟ್ಟಿಗಳುಳ್ಳ ಚಾವಟಿಯಿಂದ ಹೊಡೆಸುತ್ತಾನೆ. ಆ ಚಾವಟಿಯ ಪಟ್ಟಿಗಳು ಯೇಸುವಿನ ಬೆನ್ನನ್ನು ಸೀಳುತ್ತವೆ. ಅನಂತರ ಆ ಸೈನಿಕರು ಅವನ ತಲೆಯ ಮೇಲೆ ಮುಳ್ಳಿನ ಕಿರೀಟವನ್ನು ತೊಡಿಸಿ, ಅದುಮುತ್ತಾರೆ. ಅವನನ್ನು ಅಣಕಿಸಿ, ಒಂದು ಗಟ್ಟಿಯಾದ ಕೋಲಿನಿಂದ ತಲೆ ಮೇಲೆ ಹೊಡೆಯುತ್ತಾರೆ. ಹೀಗೆ ಮಾಡಿದ್ದರಿಂದ ಆ ಮುಳ್ಳಿನ ಕಿರೀಟವು ಅವನ ನೆತ್ತಿಯೊಳಗೆ ಇಳಿಯುತ್ತದೆ. ಈ ವರ್ಣಿಸಲಸಾಧ್ಯವಾದಂತಹ ನೋವು ಮತ್ತು ನಿಂದೆಯನ್ನು ಅನುಭವಿಸುತ್ತಿರುವಾಗ, ಯೇಸು ಅಸಾಧಾರಣವಾದ ಘನಗಾಂಭೀರ್ಯ ಮತ್ತು ಮನೋಬಲವನ್ನು ತೋರಿಸುತ್ತಾನೆ.
ಯೇಸುವಿನ ಜರ್ಜರಿತ ಸ್ಥಿತಿಯನ್ನು ನೋಡಿ ಜನರು ಸ್ವಲ್ಪವಾದರೂ ಅನುಕಂಪವನ್ನು ತೋರಿಸುವರೆಂಬ ಆಶೆಯಿಂದ, ಪಿಲಾತನು ಅವನನ್ನು ಪುನಃ ಒಮ್ಮೆ ಅವರ ಮುಂದೆ ಹಾಜರುಪಡಿಸುತ್ತಾನೆ. “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ಹೊರಗೆ ತರುತ್ತೇನೆ, ನೋಡಿರಿ” ಎಂದು ಪಿಲಾತನು ಉದ್ಗರಿಸುತ್ತಾನೆ. ಆದರೆ, ಮಹಾ ಯಾಜಕರು “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಾಡುತ್ತಾರೆ. (ಯೋಹಾನ 19:4-6) ಜನರು ಹೆಚ್ಚೆಚ್ಚು ಹಠಮಾಡಿದಾಗ, ಪಿಲಾತನು ಸೊಲೊಪ್ಪಿಕೊಂಡು ಯೇಸುವನ್ನು ಕಂಬಕ್ಕೇರಿಸುವಂತೆ ಒಪ್ಪಿಸುತ್ತಾನೆ.
ಯಾತನಾಮಯ ಮರಣ
ಈಗ ಬೆಳಗ್ಗಿನ ಸಮಯ, ಪ್ರಾಯಶಃ ಮಧ್ಯಾಹ್ನವಾಗಲಿದೆ. ಯೇಸುವನ್ನು ಯೆರೂಸಲೇಮಿನ ಹೊರಗೆ ಗೊಲ್ಗೊಥಾ ಎಂಬ ಸ್ಥಳಕ್ಕೆ ಕೊಂಡೊಯ್ಯಲಾಗುತ್ತದೆ. ಯೇಸುವನ್ನು ಯಾತನಾ ಕಂಬದ ಮೇಲೆ ಮಲಗಿಸಿ, ಅವನ ಕೈಕಾಲುಗಳಿಗೆ ಸುತ್ತಿಗೆಯಿಂದ ದೊಡ್ಡ ದೊಡ್ಡ ಮೊಳೆಗಳನ್ನು ಹೊಡೆಯಲಾಗುತ್ತದೆ. ಆ ಯಾತನಾ ಕಂಬವು ಮೇಲೆತ್ತಲ್ಪಡುವಾಗ, ಅವನ ದೇಹದ ಭಾರವು ಆ ಮೊಳೆಗಳ ಮೇಲೆ ಬಿದ್ದು ಅವನಿಗಾಗುವ ಯಾತನೆಯು, ಶಬ್ದಗಳಿಂದ ವರ್ಣಿಸಲಸಾಧ್ಯವಾದುದು. ಯೇಸು ಮತ್ತು ಇಬ್ಬರು ಅಪರಾಧಿಗಳು ಕಂಬಕ್ಕೇರಿಸಲ್ಪಡುವುದನ್ನು ನೋಡಲು ಜನರ ಗುಂಪು ಸೇರುತ್ತದೆ. ಅನೇಕರು ಯೇಸುವನ್ನು ನಿಂದಿಸಿ ಮಾತಾಡುತ್ತಾರೆ. “ಮತ್ತೊಬ್ಬರನ್ನು ರಕ್ಷಿಸಿದನು, ತನ್ನನ್ನು ರಕ್ಷಿಸಿಕೊಳ್ಳಲಾರನು” ಎಂದು ಮಹಾಯಾಜಕರೂ ಇತರರೂ ಅಣಕಿಸುತ್ತಾರೆ. ಸೈನಿಕರು ಮತ್ತು ಕಂಬಕ್ಕೇರಿಸಲ್ಪಟ್ಟ ಇಬ್ಬರು ಪಾತಕಿಗಳು ಸಹ ಯೇಸುವನ್ನು ಅಪಹಾಸ್ಯಮಾಡುತ್ತಾರೆ.—ಮತ್ತಾಯ 27:41-44.
ಯೇಸು ಕಂಬಕ್ಕೇರಿಸಲ್ಪಟ್ಟ ಸುಮಾರು ಸಮಯದ ನಂತರ ಒಮ್ಮೆಲೆ ನಡುಮಧ್ಯಾಹ್ನದಲ್ಲಿ, ದೈವಿಕ ಮೂಲದಿಂದಾದ ಭಯಹುಟ್ಟಿಸುವ ಕಾರ್ಗತ್ತಲೆಯು ಮೂರು ತಾಸುಗಳ ವರೆಗೆ ದೇಶವನ್ನು ಆವರಿಸುತ್ತದೆ.a ಪ್ರಾಯಶಃ ಇದನ್ನೇ ನೋಡಿ ಅಲ್ಲಿದ್ದ ಒಬ್ಬ ಕಳ್ಳನು ಇನ್ನೊಬ್ಬನನ್ನು ಗದರಿಸುತ್ತಾನೆ. ನಂತರ ಯೇಸುವಿನ ಕಡೆಗೆ ತಿರುಗಿ ಅವನು ಬೇಡಿಕೊಳ್ಳುವುದು: “ನೀನು ನಿನ್ನ ರಾಜ್ಯವನ್ನು ಪಡೆದವನಾಗಿ ಬರುವಾಗ ನನ್ನನ್ನು ನೆನಸಿಕೋ.” ಇನ್ನೇನು ಸಾಯುವ ಸ್ಥಿತಿಯಲ್ಲಿದ್ದ ಆ ವ್ಯಕ್ತಿಯು ತೋರಿಸಿದ ನಂಬಿಕೆಯು ಎಷ್ಟು ಅದ್ಭುತವಾದುದು! “ಇಂದೇ ನಿನಗೆ ಸತ್ಯವಾಗಿ ಹೇಳುತ್ತೇನೆ, ನೀನು ನನ್ನ ಸಂಗಡ ಪ್ರಮೋದವನದಲ್ಲಿರುವಿ” ಎಂದು ಯೇಸು ಉತ್ತರಿಸುತ್ತಾನೆ.—ಲೂಕ 23:39-43, NW.
ಮಧ್ಯಾಹ್ನ ಸುಮಾರು ಮೂರು ಘಂಟೆಗೆ, ತನ್ನ ಅಂತ್ಯ ಸಮೀಪವಿದೆಯೆಂದು ಯೇಸುವಿಗೆ ಅನಿಸುತ್ತದೆ. “ನನಗೆ ನೀರಡಿಕೆ ಆಗಿದೆ” ಎಂದು ಹೇಳುತ್ತಾನೆ. ಅನಂತರ ಗಟ್ಟಿಯಾದ ಸ್ವರದಿಂದ ಅವನು ಹೀಗೆ ಕೂಗುತ್ತಾನೆ: “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ”? ಯೇಸುವಿನ ಸಮಗ್ರತೆಯು ಸಂಪೂರ್ಣವಾಗಿ ಪರೀಕ್ಷಿಸಲ್ಪಡುವಂತೆ ಅವನ ತಂದೆಯು ಸಂರಕ್ಷಣೆಯನ್ನು ಹಿಂದೆಗೆದಿದ್ದಾನೆಂಬುದನ್ನು ಅವನು ಗ್ರಹಿಸುತ್ತಾ, ದಾವೀದನ ಮಾತುಗಳನ್ನು ಉಲ್ಲೇಖಿಸುತ್ತಾನೆ. ಯಾರೊ ಒಬ್ಬನು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ, ಅವನ ತುಟಿಗಿರಿಸುತ್ತಾನೆ. ಅದರಲ್ಲಿ ಸ್ವಲ್ಪವನ್ನು ಕುಡಿದು, ಯೇಸು ಏದುಸಿರು ಬಿಡುತ್ತಾ ಹೇಳುವುದು: “ತೀರಿತು.” ಅನಂತರ ಅವನು, “ತಂದೆಯೇ, ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸಿಕೊಡುತ್ತೇನೆ” ಎಂದು ಕೂಗಿ ತಲೆಬಗ್ಗಿಸಿ ಸಾಯುತ್ತಾನೆ.—ಯೋಹಾನ 19:28-30; ಮತ್ತಾಯ 27:46; ಲೂಕ 23:46; ಕೀರ್ತನೆ 22:1.
ಮಧ್ಯಾಹ್ನವು ಅಂತ್ಯಗೊಳ್ಳುತ್ತಿದುದರಿಂದ, ಸೂರ್ಯಾಸ್ತಮಾನದ ಸಮಯದಲ್ಲಿ ಆರಂಭಗೊಳ್ಳುವ ಸಬ್ಬತ್ದಿನಕ್ಕೆ (ನೈಸಾನ್ 15) ಮುಂಚೆಯೇ ಯೇಸುವನ್ನು ಹೂಣಿಡಲಿಕ್ಕಾಗಿ ತರಾತುರಿಯ ಏರ್ಪಾಡುಗಳನ್ನು ಮಾಡಲಾಗುತ್ತದೆ. ಯೇಸುವಿನ ಗುಪ್ತ ಶಿಷ್ಯನಾಗಿದ್ದ, ಸನ್ಹೇದ್ರಿನ್ನ ಪ್ರಸಿದ್ಧ ಸದಸ್ಯ ಅರಿಮಥಾಯದ ಯೋಸೇಫನು, ಯೇಸುವನ್ನು ಹೂಣಿಡಲಿಕ್ಕೋಸ್ಕರ ಅನುಮತಿಯನ್ನು ಪಡೆದುಕೊಳ್ಳುತ್ತಾನೆ. ಯೇಸುವಿನಲ್ಲಿ ನಂಬಿಕೆಯನ್ನಿಟ್ಟಿದ್ದೇನೆಂದು ಗುಪ್ತವಾಗಿ ತಿಳಿಸಿರುವ, ಅದೇ ಸನ್ಹೇದ್ರಿನ್ನ ಸದಸ್ಯನೂ ಆಗಿರುವ ನಿಕೊದೇಮನು, ಮೂವತ್ತಮೂರು ಕಿಲೋ ರಕ್ತಬೋಳ ಮತ್ತು ಅಗರುಗಳನ್ನು ಕೊಟ್ಟು ಸಹಾಯಮಾಡುತ್ತಾನೆ. ಜಾಗರೂಕತೆಯಿಂದ ಅವರು ಯೇಸುವಿನ ಶವವನ್ನು, ಹತ್ತಿರದಲ್ಲೇ ಇರುವ ಒಂದು ಹೊಸ ಸ್ಮಾರಕ ಸಮಾಧಿಯಲ್ಲಿರಿಸುತ್ತಾರೆ.
ಪುನಃ ಜೀವಂತನು!
ಭಾನುವಾರ ಮುಂಜಾನೆ, ಮಗ್ದಲದ ಮರಿಯಳು ಮತ್ತು ಇನ್ನಿತರ ಸ್ತ್ರೀಯರು ಯೇಸುವಿನ ಸಮಾಧಿಯ ಬಳಿ ಬರುವಾಗ ಇನ್ನೂ ಕತ್ತಲಾಗಿರುತ್ತದೆ. ಆದರೆ ನೋಡಿ! ಸಮಾಧಿಯ ಮುಂದಿರುವ ಕಲ್ಲನ್ನು ಪಕ್ಕಕ್ಕೆ ಸರಿಸಲಾಗಿದೆ. ಅಷ್ಟುಮಾತ್ರವಲ್ಲ, ಸಮಾಧಿಯು ಬರಿದಾಗಿದೆ! ಪೇತ್ರ ಯೋಹಾನರಿಗೆ ಇದನ್ನು ತಿಳಿಸಲು ಮಗ್ದಲದ ಮರಿಯಳು ಓಡಿಹೋಗುತ್ತಾಳೆ. (ಯೋಹಾನ 20:1, 2) ಅವಳು ಹೊರಟುಹೋದ ಸ್ವಲ್ಪ ಸಮಯದೊಳಗೆ, ಒಬ್ಬ ದೇವದೂತನು ಆ ಇನ್ನಿತರ ಸ್ತ್ರೀಯರಿಗೆ ಕಾಣಿಸಿಕೊಳ್ಳುತ್ತಾನೆ. ಅವನನ್ನುವುದು: “ನೀವು ಹೆದರಬೇಡಿರಿ.” ಅವನು ಹೀಗೂ ಪ್ರಚೋದಿಸುತ್ತಾನೆ: “ಬೇಗ ಹೋಗಿ ಆತನ ಶಿಷ್ಯರಿಗೆ—ಸತ್ತವನು ಬದುಕಿದ್ದಾನೆ . . . ಎಂದು ತಿಳಿಸಿರಿ.”—ಮತ್ತಾಯ 28:2-7.
ಅವರು ಅವಸರದಿಂದ ಹೋಗುತ್ತಿರುವಾಗ, ಅವರು ಸ್ವತಃ ಯೇಸುವನ್ನೇ ಭೇಟಿಯಾಗುತ್ತಾರೆ! ‘ನನ್ನ ಸಹೋದರರ ಬಳಿಗೆ ಹೋಗಿ ಹೇಳಿರಿ’ ಎಂದು ಅವರಿಗೆ ಹೇಳುತ್ತಾನೆ. (ಮತ್ತಾಯ 28:8-10) ತದನಂತರ, ಮಗ್ದಲದ ಮರಿಯಳು ಸಮಾಧಿಯ ಬಳಿ ಅಳುತ್ತಿದ್ದಾಗ, ಯೇಸು ಅವಳಿಗೆ ಕಾಣಿಸಿಕೊಳ್ಳುತ್ತಾನೆ. ತನ್ನ ಸಂತೋಷವನ್ನು ತಡೆದುಕೊಳ್ಳಲಾರದೆ, ಆ ಆಶ್ಚರ್ಯಕರ ಸುದ್ದಿಯನ್ನು ಇತರ ಶಿಷ್ಯರಿಗೆ ತಿಳಿಸಲು ಅವಳು ಅವಸರದಿಂದ ಹೋಗುತ್ತಾಳೆ. (ಯೋಹಾನ 20:11-18) ವಾಸ್ತವದಲ್ಲಿ, ಆ ಅವಿಸ್ಮರಣೀಯ ಭಾನುವಾರದಂದು ಪುನರುತ್ಥಾನಗೊಂಡಿರುವ ಯೇಸು ವಿಭಿನ್ನ ಶಿಷ್ಯರಿಗೆ ಐದು ಬಾರಿ ಕಾಣಿಸಿಕೊಳ್ಳುತ್ತಾನೆ. ಅವನು ನಿಜವಾಗಿಯೂ ಪುನಃ ಜೀವಂತನಾಗಿದ್ದಾನೆಂದು ಸಂದೇಹಿಸಲು ಯಾವುದೇ ಆಸ್ಪದವಿಲ್ಲ!
ಇದು ನಿಮ್ಮ ಮೇಲೆ ಹೇಗೆ ಪ್ರಭಾವವನ್ನು ಬೀರುತ್ತದೆ?
1,966 ವರ್ಷಗಳ ಹಿಂದೆ ನಡೆದ ಈ ಘಟನೆಗಳು, 21ನೆಯ ಶತಮಾನದ ಹೊಸ್ತಿಲಿನಲ್ಲಿ ನಿಂತಿರುವ ನಿಮ್ಮನ್ನು ಹೇಗೆ ಪ್ರಭಾವಿಸಬಲ್ಲದು? ಈ ಘಟನೆಗಳ ಒಬ್ಬ ಪ್ರತ್ಯಕ್ಷಸಾಕ್ಷಿಯು ವಿವರಿಸುವುದು: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪ ನಿವಾರಣಾರ್ಥವಾಗಿ [“ಅನುಗ್ರಹಾರ್ಥಕ ಯಜ್ಞವಾಗಿ,” NW] ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.”—1 ಯೋಹಾನ 4:9, 10.
ಕ್ರಿಸ್ತನ ಮರಣವು “ಅನುಗ್ರಹಾರ್ಥಕ ಯಜ್ಞವಾಗಿ”ರುವುದು ಹೇಗೆ? ಅದು ಅನುಗ್ರಹಾರ್ಥಕವಾಗಿರುವುದು ಹೇಗೆಂದರೆ, ದೇವರೊಂದಿಗೆ ಅನುಗ್ರಹವುಳ್ಳ ಸಂಬಂಧವನ್ನು ಅದು ಸಾಧ್ಯಮಾಡುತ್ತದೆ. ಪ್ರಥಮ ಮನುಷ್ಯನಾದ ಆದಾಮನು ದೇವರ ವಿರುದ್ಧ ದಂಗೆಯೆದ್ದು, ತನ್ನ ಸಂತತಿಗೆ ಪಾಪ ಮತ್ತು ಮರಣದ ಆಸ್ತಿಯನ್ನು ದಾಟಿಸಿದನು. ಇನ್ನೊಂದು ಕಡೆಯಲ್ಲಿ ಯೇಸು, ಮಾನವಕುಲದ ಪಾಪ ಮತ್ತು ಮರಣದ ಬೆಲೆಯನ್ನು ತೆರಲು ತನ್ನ ಜೀವವನ್ನೇ ಪ್ರಾಯಶ್ಚಿತ್ತವಾಗಿ ಅರ್ಪಿಸಿದನು. ಹೀಗೆ, ದೇವರು ನಮಗೆ ಕರುಣೆ ಮತ್ತು ಕೃಪೆಯನ್ನು ತೋರಿಸಲು ಒಂದು ಆಧಾರವನ್ನು ಒದಗಿಸಿದನು. (1 ತಿಮೊಥೆಯ 2:5, 6) ಯೇಸುವಿನ ಪಾಪ ಪರಿಹಾರಕ ಯಜ್ಞದಲ್ಲಿ ನಂಬಿಕೆಯನ್ನಿಡುವ ಮೂಲಕ, ಪಾಪಿ ಆದಾಮನಿಂದ ನೀವು ಬಾಧ್ಯತೆಯಾಗಿ ಪಡೆದಿರುವ ಶಾಪದಿಂದ ಬಿಡುಗಡೆಯನ್ನು ಹೊಂದಬಲ್ಲಿರಿ. (ರೋಮಾಪುರ 5:12; 6:23) ಇದು, ನಿಮ್ಮ ಪ್ರೀತಿಪರ ಸ್ವರ್ಗೀಯ ತಂದೆಯಾದ ಯೆಹೋವ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಹೊಂದುವ ಅದ್ಭುತಕರ ಅವಕಾಶವನ್ನು ತೆರೆಯುತ್ತದೆ. ಸಂಕ್ಷಿಪ್ತವಾಗಿ ಹೇಳುವಲ್ಲಿ, ಯೇಸುವಿನ ಸರ್ವೋಚ್ಚ ಯಜ್ಞವು ನಿಮಗೆ ಅಂತ್ಯವಿಲ್ಲದ ಜೀವನವನ್ನು ಕೊಡಬಲ್ಲದು.—ಯೋಹಾನ 3:16; 17:3.
ಇದನ್ನು ಮತ್ತು ಇದಕ್ಕೆ ಸಂಬಂಧಿಸಿರುವ ವಿಷಯಗಳನ್ನು ಏಪ್ರಿಲ್ 1ರ ಗುರುವಾರ ಸಾಯಂಕಾಲದಂದು ಚರ್ಚಿಸಲಾಗುವುದು. ಆ ದಿನ, ಲಕ್ಷಾಂತರ ಜನರು ಯೇಸು ಕ್ರಿಸ್ತನ ಮರಣವನ್ನು ಸ್ಮರಿಸಲು ಸಾವಿರಾರು ಸ್ಥಳಗಳಲ್ಲಿ ಒಟ್ಟುಗೂಡುವರು. ನಿಮಗೂ ಆಮಂತ್ರಣವನ್ನು ನೀಡಲಾಗುತ್ತದೆ. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು, ನೀವು ಎಲ್ಲಿ ಮತ್ತು ಯಾವಾಗ ಹಾಜರಾಗಬಹುದೆಂಬುದನ್ನು ಸಂತೋಷದಿಂದ ತಿಳಿಸುವರು. ಅಲ್ಲಿ ಹಾಜರಿರುವುದರಿಂದ, ಯೇಸುವಿನ ಮಾನವ ಜೀವಿತದ ಕೊನೆಯ ದಿನದಂದು, ನಮ್ಮ ಪ್ರೀತಿಪರ ದೇವರು ಮತ್ತು ಆತನ ಪ್ರಿಯ ಮಗನು ಏನನ್ನು ಮಾಡಿದ್ದಾರೊ ಅದಕ್ಕಾಗಿರುವ ನಿಮ್ಮ ಗಣ್ಯತೆಯು ನಿಸ್ಸಂದೇಹವಾಗಿಯೂ ಹೆಚ್ಚಾಗುವುದು.
[ಅಧ್ಯಯನ ಪ್ರಶ್ನೆಗಳು]
a ಹುಣ್ಣಿಮೆಯ ಸಮಯದಲ್ಲಿ ಯೇಸು ಸತ್ತದ್ದರಿಂದ, ಆ ಕತ್ತಲೆಯು ಸೂರ್ಯಗ್ರಹಣದಿಂದ ಆಗಿರಲಾರದು. ಸೂರ್ಯಗ್ರಹಣಗಳು ಕೇವಲ ಕೆಲವು ನಿಮಿಷಗಳ ತನಕ ಇದ್ದು, ಅಮಾವಾಸ್ಯೆಯ ಸಮಯದಲ್ಲಿ ಅಂದರೆ ಚಂದ್ರನು, ಭೂಮಿ ಹಾಗೂ ಸೂರ್ಯನ ಮಧ್ಯದಲ್ಲಿ ಇರುವಾಗ ಮಾತ್ರ ಆಗುತ್ತವೆ.
[ಪುಟ 7 ರಲ್ಲಿರುವ ಚೌಕ/ಚಿತ್ರಗಳು]
ಯೇಸುವಿನ ಮರಣ ಮತ್ತು ಪುನರುತ್ಥಾನ
ಸಾ.ಶ. 33ರ ನೈಸಾನ್ ಘಟನೆಗಳು ಮಹಾನ್ ಪುರುಷb
14 ಗುರುವಾರ ಪಸ್ಕಹಬ್ಬದ ಆಚರಣೆ; ಯೇಸು 113, ಪ್ಯಾರ. 2 ರಿಂದ
ಸಾಯಂಕಾಲ ಅಪೊಸ್ತಲರ ಪಾದಗಳನ್ನು 117,ಪ್ಯಾರ. 1
ತೊಳೆಯುತ್ತಾನೆ; ಕ್ರಿಸ್ತನು ತನ್ನ ಮರಣದ
ಜ್ಞಾಪಕಾಚರಣೆಯನ್ನು ಆರಂಭಿಸುತ್ತಾನೆ (ಈ ವರ್ಷ
ಗುರುವಾರ, ಏಪ್ರಿಲ್ 1ರಂದು ಸೂರ್ಯಾಸ್ತಮಾನದ
ನಂತರ ಆಚರಿಸಲ್ಪಡುವುದು); ತನ್ನ ಅಗಲುವಿಕೆಗಾಗಿ
ಅಪೊಸ್ತಲರನ್ನು ಸಜ್ಜುಗೊಳಿಸಲು ಬುದ್ಧಿಹೇಳುತ್ತಾನೆ
ಮಧ್ಯರಾತ್ರಿಯಿಂದ ಪ್ರಾರ್ಥನೆ ಮತ್ತು ಸ್ತುತಿಯ 117ರಿಂದ 120
ಹಿಡಿದು ಮುಂಜಾನೆಗೆ ಮುಂಚೆ ಗೀತೆಗಳ ನಂತರ, ಯೇಸು ಮತ್ತು ಅಪೊಸ್ತಲರು
ಗೆತ್ಸೇಮನೆ ತೋಟಕ್ಕೆ ಹೋಗುತ್ತಾರೆ; ಯೇಸು
ಗಟ್ಟಿಯಾಗಿ ಕೂಗುತ್ತಾ, ಕಣ್ಣೀರಿಡುತ್ತಾ ಪ್ರಾರ್ಥಿಸುತ್ತಾನೆ;
ಇಸ್ಕಾರಿಯೋತ ಯೂದನು ಒಂದು ದೊಡ್ಡ ಗುಂಪಿನೊಂದಿಗೆ
ಬಂದು, ಯೇಸುವಿಗೆ ದ್ರೋಹಬಗೆಯುತ್ತಾನೆ; ಯೇಸು
ಬಂಧಿಸಲ್ಪಟ್ಟು, ಅನ್ನನ ಬಳಿ ಕೊಂಡೊಯ್ಯಲ್ಪಡುವಾಗ
ಅಪೊಸ್ತಲರು ಓಡಿಹೋಗುತ್ತಾರೆ; ಸನ್ಹೇದ್ರಿನ್ನ ಮುಂದೆ
ಹಾಜರಾಗಲು ಯೇಸುವನ್ನು ಮಹಾ ಯಾಜಕ ಕಾಯಫನ ಬಳಿ
ಕೊಂಡೊಯ್ಯಲಾಗುತ್ತದೆ; ಮರಣ ದಂಡನೆ
ನೀಡಲ್ಪಡುತ್ತದೆ; ಶಾಬ್ದಿಕವಾಗಿ ಮತ್ತು ದೈಹಿಕವಾಗಿ
ಹಿಂಸೆಗೊಳಗಾಗುತ್ತಾನೆ; ಪೇತ್ರನು ಯೇಸುವನ್ನು
ಮೂರು ಸಲ ಅಲ್ಲಗಳೆಯುತ್ತಾನೆ
ಶುಕ್ರವಾರ ಬೆಳಗ್ಗೆ ಅರುಣೋದಯದ ಸಮಯದಲ್ಲಿ, 121ರಿಂದ 124
ಯೇಸು ಪುನಃ ಸನ್ಹೇದ್ರಿನ್ನ ಮುಂದೆ ನಿಲ್ಲುತ್ತಾನೆ;
ಪಿಲಾತನ ಬಳಿ ಕೊಂಡೊಯ್ಯಲಾಗುತ್ತದೆ; ಹೆರೋದನ ಬಳಿ
ಕಳುಹಿಸಲಾಗುತ್ತದೆ; ಪುನಃ ಪಿಲಾತನ ಬಳಿ
ಕಳುಹಿಸಲಾಗುತ್ತದೆ; ಯೇಸುವಿಗೆ ಕೊರಡೆ ಏಟುಗಳನ್ನು
ಕೊಡಲಾಗುತ್ತದೆ, ಹೀನೈಸಲಾಗುತ್ತದೆ ಮತ್ತು
ಆಕ್ರಮಿಸಲಾಗುತ್ತದೆ; ಪಿಲಾತನು ಒತ್ತಡಕ್ಕೆ ಮಣಿದು
ಅವನನ್ನು ವಧಾಸ್ತಂಭಕ್ಕೇರಿಸಲಿಕ್ಕಾಗಿ ಜನರ
ವಶಕ್ಕೊಪ್ಪಿಸುತ್ತಾನೆ; ಮಧ್ಯಾಹ್ನಕ್ಕೆ
ಹತ್ತಿರವಾಗುತ್ತಿರುವ ಸಮಯದಲ್ಲಿ, ಹತಿಸಲ್ಪಡಲು
ಗೊಲ್ಗೊಥಾಗೆ ಕೊಂಡೊಯ್ಯಲಾಗುತ್ತದೆ
ನಡು ಬೆಳಗ್ಗಿನಿಂದ ಮಧ್ಯಾಹ್ನಕ್ಕೆ ಸ್ವಲ್ಪ ಮುಂಚೆ 125, 126 ನಡು ಮಧ್ಯಾಹ್ನದ ಕಂಬಕ್ಕೇರಿಸಲ್ಪಡುತ್ತಾನೆ; ಮಧ್ಯಾಹ್ನದಿಂದ
ವರೆಗೆ ಸುಮಾರು ಮೂರು ಘಂಟೆಯ ವರೆಗೆ ಕತ್ತಲೆ, ಆಗ
ಯೇಸು ಸಾಯುತ್ತಾನೆ; ಭಯಂಕರವಾದ ಭೂಕಂಪ;
ದೇವಾಲಯದ ತೆರೆಯು ಹರಿದು ಇಬ್ಭಾಗವಾಗುತ್ತದೆ
ಸಂಜೆ ಸಬ್ಬತ್ ದಿನದ ಮುಂಚೆ ಯೇಸುವಿನ 127, ಪ್ಯಾರ.1-7
ಸೂರ್ಯಾಸ್ತಮಾನದ ದೇಹವನ್ನು ತೋಟದಲ್ಲಿನ ಸಮಾಧಿಯಲ್ಲಿ
ಮುಂಚೆ ಇರಿಸಲಾಗುತ್ತದೆ
15 ಶುಕ್ರವಾರ ಸಬ್ಬತ್ ಆರಂಭವಾಗುತ್ತದೆ
ಸಾಯಂಕಾಲ
ಶನಿವಾರ ಯೇಸುವಿನ ಸಮಾಧಿಯ ಬಳಿ 127, ಪ್ಯಾರ. 8-9.
ಕಾವಲುಗಾರರನ್ನಿಡಲು ಪಿಲಾತನು ಅನುಮತಿಸುತ್ತಾನೆ
16 ಭಾನುವಾರ ಮುಂಜಾನೆ ಹೊತ್ತಿನಲ್ಲಿ 127, ಪ್ಯಾರ. 10ರಿಂದ
129, ಪ್ಯಾರ. 10ರ ವರೆಗೆ
ಯೇಸುವಿನ ಸಮಾಧಿಯು
ಖಾಲಿಯಾಗಿರುವುದನ್ನು
ನೋಡಲಾಗುತ್ತದೆ; ಪುನರುತ್ಥಿತ ಯೇಸು
(1) ಸಲೋಮೆ, ಯೊಹನ್ನ ಮತ್ತು ಯಾಕೋಬನ
ತಾಯಿಯಾದ ಮರಿಯರನ್ನು ಸೇರಿಸಿ, ಶಿಷ್ಯೆಯರ ಗುಂಪಿಗೆ;
(2) ಮಗ್ದಲದ ಮರಿಯಳಿಗೆ; (3) ಕ್ಲೋಪ ಮತ್ತು ಅವನ
ಸಂಗಾತಿಗೆ; (4) ಸಿಮೋನ ಪೇತ್ರನಿಗೆ; (5) ಅಪೊಸ್ತಲರ
ಮತ್ತು ಇತರ ಶಿಷ್ಯರ ಗುಂಪಿಗೆ ಕಾಣಿಸಿಕೊಳ್ಳುತ್ತಾನೆ.
[ಪಾದಟಿಪ್ಪಣಿ]
b ಇಲ್ಲಿ ಪಟ್ಟಿಮಾಡಲ್ಪಟ್ಟಿರುವ ಸಂಖ್ಯೆಗಳು, ಜೀವಿಸಿರುವವರಲ್ಲಿ ಅತ್ಯಂತ ಮಹಾನ್ ಪುರುಷ ಎಂಬ ಪುಸ್ತಕದಲ್ಲಿನ ಅಧ್ಯಾಯಗಳನ್ನು ಸೂಚಿಸುತ್ತವೆ. ಯೇಸುವಿನ ಅಂತಿಮ ಶುಶ್ರೂಷೆಗಾಗಿ ಸವಿವರ ಶಾಸ್ತ್ರೀಯ ಉಲ್ಲೇಖಗಳನ್ನು ಒಳಗೊಂಡಿರುವ ಚಾರ್ಟ್ಗಾಗಿ, “ಆಲ್ ಸ್ಕ್ರಿಪ್ಚರ್ ಈಸ್ ಇನ್ಸ್ಪ್ಯರ್ಡ್ ಆಫ್ ಗಾಡ್ ಆ್ಯಂಡ್ ಬೆನಿಫಿಷಿಯಲ್” ಪುಸ್ತಕದ, ಪುಟ 290ನ್ನು ನೋಡಿರಿ. ಈ ಪುಸ್ತಕಗಳು ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟಿವೆ.