ಪವಿತ್ರಾತ್ಮದ ಮಾರ್ಗದರ್ಶನೆ ಏಕೆ ಅತ್ಯಾವಶ್ಯಕ?
“ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ.” —ಕೀರ್ತ. 143:10.
1. ಕಣ್ಣಿಗೆ ಕಾಣದ ಕಾಂತಶಕ್ತಿ ಮಾನವರಿಗೆ ಹೇಗೆ ಮಾರ್ಗದರ್ಶಿ ಆಗಿದೆ?
ದಿಕ್ಸೂಚಿ ಒಂದು ಚಿಕ್ಕ ಉಪಕರಣ. ಅದರ ಸಹಾಯದಿಂದ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವುದನ್ನು ನಾವು ಸುಲಭವಾಗಿ ತಿಳಿದುಕೊಳ್ಳಬಹುದು. ಅದರಲ್ಲಿ ಅಯಸ್ಕಾಂತದ ಒಂದು ಮುಳ್ಳು ಇದ್ದು ಸದಾ ಉತ್ತರ ದಿಕ್ಕನ್ನು ತೋರಿಸುತ್ತಿರುತ್ತದೆ. ಭೂಮಿಯ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವದ ನಡುವಿನ ಕಾಂತಶಕ್ತಿಯನ್ನು ಆಧರಿಸಿ ಈ ಮುಳ್ಳು ಸದಾ ಉತ್ತರ ದಿಕ್ಕಿನೆಡೆಗೆ ನಿಲ್ಲುತ್ತದೆ. ಕಾಂತ ಕ್ಷೇತ್ರವಾಗಲಿ ಅದರ ಶಕ್ತಿಯಾಗಲಿ ಮನುಷ್ಯರ ಕಣ್ಣಿಗೆ ಕಾಣಿಸುವುದಿಲ್ಲ. ಹಾಗಿದ್ದರೂ, ನೂರಾರು ವರ್ಷಗಳಿಂದ ಅನ್ವೇಷಕರು ಮತ್ತು ನಾವಿಕರು ಸರಿಯಾದ ಮಾರ್ಗವನ್ನು ಕಂಡುಕೊಳ್ಳಲು ದಿಕ್ಸೂಚಿಯನ್ನು ಬಳಸಿದ್ದಾರೆ.
2, 3. (ಎ) ಆದಿಯಲ್ಲಿ ಯೆಹೋವ ದೇವರು ಬಳಸಿದ ಪ್ರಬಲ ಶಕ್ತಿ ಯಾವುದು? (ಬಿ) ದೇವರಾತ್ಮವು ಮಾನವರಿಗೆ ಮಾರ್ಗದರ್ಶನೆ ನೀಡುತ್ತದೆ ಎನ್ನುವುದು ನಮಗೆ ಹೇಗೆ ಗೊತ್ತು?
2 ನಮ್ಮ ಕಣ್ಣಿಗೆ ಕಾಣಿಸದ ಇನ್ನೊಂದು ಮಹಾ ಶಕ್ತಿ ಇದೆ. ಪ್ರತಿಯೊಬ್ಬ ಮನುಷ್ಯನಿಗೆ ಅದರ ಮಾರ್ಗದರ್ಶನೆ ಅತ್ಯಾವಶ್ಯಕ. ಅದು ಯಾವ ಶಕ್ತಿ? ಬೈಬಲಿನ ಆರಂಭದ ವಚನಗಳಲ್ಲಿ ಅದರ ಕುರಿತು ಬರೆಯಲಾಗಿದೆ. ಸೃಷ್ಟಿಯ ಆರಂಭ ಹೇಗೆ ಆಯಿತು ಎಂದು ಹೇಳುತ್ತಾ ಆದಿಕಾಂಡ ಪುಸ್ತಕವು “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂದು ಹೇಳುತ್ತದೆ. ಅನಂತರ ಯೆಹೋವ ದೇವರು ಸೃಷ್ಟಿಕಾರ್ಯದಲ್ಲಿ ಬಳಸಿದ ಪ್ರಬಲ ಶಕ್ತಿಯ ಕುರಿತು ಹೀಗೆ ತಿಳಿಸುತ್ತದೆ: “ದೇವರಾತ್ಮವು ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.” (ಆದಿ. 1:1, 2) ಹೌದು, ದೇವರು ತನ್ನ ಪ್ರಬಲ ಶಕ್ತಿಯಾದ ಪವಿತ್ರಾತ್ಮವನ್ನು ಸೃಷ್ಟಿಕಾರ್ಯದಲ್ಲಿ ಬಳಸಿದನು. ಅದಕ್ಕಾಗಿ ನಾವು ಎಷ್ಟು ಆಭಾರಿಗಳಾಗಿದ್ದರೂ ಸಾಲದು. ಏಕೆಂದರೆ, ನಾವಾಗಲಿ ಇತರ ಜೀವರಾಶಿಗಳಾಗಲಿ ಇಂದು ಅಸ್ತಿತ್ವದಲ್ಲಿರಲು ಕಾರಣ ಆ ಶಕ್ತಿಯಾಗಿದೆ.—ಯೋಬ 33:4; ಕೀರ್ತ. 104:30.
3 ನಮ್ಮನ್ನು ಸೃಷ್ಟಿಸಲು ದೇವರು ತನ್ನ ಪವಿತ್ರಾತ್ಮವನ್ನು ಬಳಸಿದ್ದು ನಿಜ. ಆದರೆ ಅದು ನಮ್ಮ ಬದುಕಿಗೆ ಮಾರ್ಗದರ್ಶನೆಯನ್ನೂ ನೀಡಬಲ್ಲದಾ? ಹೌದೆಂದು ದೇವಪುತ್ರನಾದ ಯೇಸು ತನ್ನ ಶಿಷ್ಯರಿಗೆ ತಿಳಿಸಿದನು: “ಪವಿತ್ರಾತ್ಮ . . . ನಿಮ್ಮನ್ನು ಮಾರ್ಗದರ್ಶಿಸಿ ನೀವು ಸತ್ಯವನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ನಿಮಗೆ ಸಹಾಯಮಾಡುವನು.” (ಯೋಹಾ. 16:13) ಈ ಪವಿತ್ರಾತ್ಮ ನಿಜವಾಗಿಯೂ ಏನಾಗಿದೆ? ಅದರ ಮಾರ್ಗದರ್ಶನೆ ನಮಗೇಕೆ ಅಷ್ಟು ಅತ್ಯಾವಶ್ಯಕ?
ಪವಿತ್ರಾತ್ಮ ಅಂದರೆ ಏನು?
4, 5. (ಎ) ತ್ರಯೈಕ್ಯವಾದಿಗಳಿಗೆ ಪವಿತ್ರಾತ್ಮದ ಕುರಿತು ಯಾವ ತಪ್ಪಭಿಪ್ರಾಯ ಇದೆ? (ಬಿ) ಪವಿತ್ರಾತ್ಮ ನಿಜವಾಗಿಯೂ ಏನಾಗಿದೆ ಎಂಬುದನ್ನು ನೀವು ಹೇಗೆ ವಿವರಿಸುವಿರಿ?
4 ಕ್ಷೇತ್ರ ಸೇವೆಯಲ್ಲಿ ನೀವು ಭೇಟಿಯಾಗುವ ಕೆಲವರು ಪವಿತ್ರಾತ್ಮದ ಬಗ್ಗೆ ಬೈಬಲ್ ಏನು ಹೇಳುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವುದಿಲ್ಲ. ಉದಾಹರಣೆಗೆ, ತ್ರಯೈಕ್ಯವಾದಿಗಳು ಪವಿತ್ರಾತ್ಮವನ್ನು ಒಬ್ಬ ವ್ಯಕ್ತಿಯೆಂದೂ ತಂದೆಯಾದ ದೇವರಿಗೆ ಸಮಾನನೆಂದೂ ತಪ್ಪಾಗಿ ಹೇಳುತ್ತಾರೆ. (1 ಕೊರಿಂ. 8:6) ಆದರೆ ತ್ರಯೈಕ್ಯವಾದವನ್ನು ಬೈಬಲ್ ಒಪ್ಪುವುದಿಲ್ಲ.
5 ಹಾಗಾದರೆ, ಪವಿತ್ರಾತ್ಮ ನಿಜವಾಗಿಯೂ ಏನಾಗಿದೆ? ಆದಿಕಾಂಡ 1:2ರಲ್ಲಿರುವ “ಆತ್ಮ” ಎಂಬದಕ್ಕೆ ಹೀಬ್ರುನಲ್ಲಿರುವ ಪದ ರೂಆಖ್ ಎಂದಾಗಿದೆ. ಆ ಪದವನ್ನು “ಗಾಳಿ”ಯನ್ನು ಸೂಚಿಸಲು ಮಾತ್ರವಲ್ಲ, ಕಣ್ಣಿಗೆ ಕಾಣದ ಆದರೆ ಸದಾ ಸಕ್ರಿಯವಾಗಿರುವ ಶಕ್ತಿಯನ್ನು ಸೂಚಿಸಲು ಸಹ ಬಳಸಲಾಗಿದೆ. ಉದಾಹರಣೆಗೆ, ಆದಿಕಾಂಡ 3:8 ಹಾಗೂ 8:1ರಲ್ಲಿ “ಗಾಳಿ” ಎಂಬುದಕ್ಕಿರುವ ಮೂಲ ಹೀಬ್ರು ಪದ ರೂಆಖ್ ಆಗಿದೆ. ಗಾಳಿ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಶಕ್ತಿಯನ್ನು ನಾವು ನೋಡಬಹುದು. ಅದೇ ರೀತಿ, ಪವಿತ್ರಾತ್ಮ ನಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ಆದರೆ ಅದರ ಶಕ್ತಿಯನ್ನು ಅದು ಉಂಟುಮಾಡುವ ಪರಿಣಾಮಗಳಿಂದ ನಾವು ತಿಳಿದುಕೊಳ್ಳಬಹುದು. ಗಾಳಿ ಹೇಗೆ ವ್ಯಕ್ತಿಯಲ್ಲವೋ ಅದೇ ರೀತಿ ಪವಿತ್ರಾತ್ಮ ಸಹ ವ್ಯಕ್ತಿಯಲ್ಲ. ಅದು ದೇವರ ಶಕ್ತಿಯಾಗಿದೆ. ಆತನು ತನ್ನ ಚಿತ್ತವನ್ನು ನೆರವೇರಿಸಲು ಅದನ್ನು ವಿವಿಧ ರೀತಿಯಲ್ಲಿ ಬಳಸುತ್ತಾನೆ. ಮಾನವರಿಗೂ ಕೊಡುತ್ತಾನೆ. ಸರ್ವಶಕ್ತನಾಗಿರುವ ದೇವರ ಬಳಿಯಿಂದ ಅಂಥ ಒಂದು ಬಲಾಢ್ಯ ಶಕ್ತಿ ಹೊರಟು ಬರುತ್ತದೆ ಎನ್ನುವುದನ್ನು ನಂಬಲು ಕಷ್ಟನಾ? ಖಂಡಿತ ಇಲ್ಲ!—ಯೆಶಾಯ 40:12, 13 ಓದಿ.
6. ದಾವೀದನು ಯೆಹೋವ ದೇವರಲ್ಲಿ ಏನೆಂದು ಬೇಡಿಕೊಂಡನು?
6 ಯೆಹೋವ ದೇವರು ಪವಿತ್ರಾತ್ಮ ಶಕ್ತಿಯ ಮೂಲಕ ನಮ್ಮ ಬದುಕಿನುದ್ದಕ್ಕೂ ಮಾರ್ಗದರ್ಶನೆ ನೀಡುವನಾ? ಕೀರ್ತನೆಗಾರ ದಾವೀದನಿಗೆ ಆತನು ಮಾತುಕೊಟ್ಟಿರುವುದನ್ನು ಗಮನಿಸಿ: “ನಿನ್ನನ್ನು ಉಪದೇಶಿಸಿ ನಡೆಯಬೇಕಾದ ಮಾರ್ಗವನ್ನು ತಿಳಿಸುವೆನು.” (ಕೀರ್ತ. 32:8) ದಾವೀದನಿಗೆ ದೇವರ ಮಾರ್ಗದರ್ಶನೆಯ ಅಗತ್ಯವಿತ್ತಾ? ಹೌದು, ಅವನು ದೇವರನ್ನು, “ನಿನ್ನ ಚಿತ್ತದಂತೆ ನಡಕೊಳ್ಳುವದನ್ನು ನನಗೆ ಕಲಿಸು; ನನ್ನ ದೇವರು ನೀನಲ್ಲವೋ? ಶುಭಕಾರಿಯಾಗಿರುವ ನಿನ್ನ ಆತ್ಮನು ನನ್ನನ್ನು ಮಟ್ಟನೆಲದಲ್ಲಿ ನಡಿಸಲಿ” ಎಂದು ಬೇಡಿಕೊಂಡಿದ್ದನು. (ಕೀರ್ತ. 143:10) ದೇವರಾತ್ಮದ ಮಾರ್ಗದರ್ಶನೆಯ ಪ್ರಕಾರ ನಡೆಯುವ ವಾಂಛೆಯನ್ನು ನಾವು ಸಹ ಬೆಳೆಸಿಕೊಳ್ಳಬೇಕು. ಯಾಕೆ? ನಾಲ್ಕು ಕಾರಣಗಳನ್ನು ನೋಡೋಣ.
ತಮ್ಮನ್ನು ಮಾರ್ಗದರ್ಶಿಸಿಕೊಳ್ಳುವ ಸಾಮರ್ಥ್ಯ ಮಾನವರಿಗಿಲ್ಲ
7, 8. (ಎ) ಮಾನವರಿಗೆ ತಮ್ಮನ್ನು ತಾವೇ ಮಾರ್ಗದರ್ಶಿಸುವ ಸಾಮರ್ಥ್ಯ ಇಲ್ಲವೇಕೆ? (ಬಿ) ಈ ದುಷ್ಟ ಲೋಕವನ್ನು ಹಾದು ಹೋಗಲು ನಮಗೆ ದೇವರ ಸಹಾಯ ಅತ್ಯಗತ್ಯ ಎಂದು ಯಾವ ಉದಾಹರಣೆ ತೋರಿಸುತ್ತದೆ?
7 ಸ್ವತಃ ತಮ್ಮನ್ನು ಮಾರ್ಗದರ್ಶಿಸುವ ಸಾಮರ್ಥ್ಯ ಮಾನವರಿಗಿಲ್ಲ. ನಮಗೆ ದೇವರ ಮಾರ್ಗದರ್ಶನೆ ಅತ್ಯಾವಶ್ಯಕ ಅನ್ನೋದಕ್ಕೆ ಇದು ಮೊದಲ ಕಾರಣವಾಗಿದೆ. ಮಾರ್ಗದರ್ಶಿಸು ಎನ್ನುವುದರ ಅರ್ಥ ಸರಿಯಾದ ಮಾರ್ಗವನ್ನು ತೋರಿಸು ಎಂದಾಗಿದೆ. ಆ ಸಾಮರ್ಥ್ಯವನ್ನು ದೇವರು ಮಾನವರಿಗೆ ಕೊಟ್ಟಿಲ್ಲ. ಅದರಲ್ಲೂ ನಾವೀಗ ಅಪರಿಪೂರ್ಣರು ಆಗಿರುವುದರಿಂದ ನಮ್ಮನ್ನೇ ನಾವು ಮಾರ್ಗದರ್ಶಿಸಿಕೊಳ್ಳಲು ಸಾಧ್ಯವೇ ಇಲ್ಲ. ದೇವರ ಪ್ರವಾದಿ ಯೆರೆಮೀಯ ಬರೆದಿರುವುದನ್ನು ಸ್ವಲ್ಪ ಗಮನಿಸಿ: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆ. 10:23) ಯಾಕೆ ಇಡಲಾರನು? ಕಾರಣವನ್ನು ದೇವರೇ ಯೆರೆಮೀಯನಿಗೆ ತಿಳಿಸಿದನು. ನಮ್ಮ ಅಂತರಾಳದ ಸ್ವಭಾವವನ್ನು ತಿಳಿಸುತ್ತಾ, “ಹೃದಯವು ಎಲ್ಲಕ್ಕಿಂತಲೂ ವಂಚಕ; ಗುಣವಾಗದ ರೋಗಕ್ಕೆ ಒಳಗಾಗಿದೆ; ಅದನ್ನು ಯಾರು ತಿಳಿದಾರು?” ಎಂದು ಆತನು ಹೇಳಿದನು.—ಯೆರೆ. 17:9; ಮತ್ತಾ. 15:19.
8 ಸ್ವಲ್ಪ ಯೋಚಿಸಿ, ಒಬ್ಬ ವ್ಯಕ್ತಿ ಅಪಾಯಕಾರಿಯಾದ ದಟ್ಟ ಕಾಡನ್ನು ಹಾದು ಹೋಗಬೇಕಾಗಿದೆ. ಆ ಕಾಡಿನ ಪರಿಚಯವೇ ಇಲ್ಲದ ಅವನು ಯಾರ ಸಹಾಯವನ್ನೂ ಪಡೆಯದೆ, ದಿಕ್ಸೂಚಿಯನ್ನೂ ತೆಗೆದುಕೊಳ್ಳದೆ ಒಬ್ಬನೇ ಹೋಗಲು ನಿರ್ಧರಿಸುವಲ್ಲಿ ಅದು ಮೂರ್ಖತನ ಆಗಿರುವುದಲ್ಲವೇ? ಕಾಡು ಮೃಗಗಳಿಂದ ಹೇಗೆ ತಪ್ಪಿಸಿಕೊಳ್ಳುವುದು, ಸುರಕ್ಷಾ ಮಾರ್ಗ ಯಾವುದು ಎಂದು ಗೊತ್ತಿಲ್ಲದ ಅವನು ಯಾರ ನೆರವೂ ಇಲ್ಲದೇ ಹೆಜ್ಜೆ ಹಾಕುವುದು ಜೀವಕ್ಕೆ ಅಪಾಯವೇ ಸರಿ. ಅದೇ ರೀತಿಯಲ್ಲಿ ಈ ದುಷ್ಟ ಲೋಕದಲ್ಲಿ ತನಗೆ ದೇವರ ಮಾರ್ಗದರ್ಶನದ ಅಗತ್ಯವಿಲ್ಲ, ಸರಿಯಾದ ಮಾರ್ಗವನ್ನು ತಾನೇ ಕಂಡುಕೊಳ್ಳಬಲ್ಲೆ ಎಂದು ನೆನಸುವ ಪ್ರತಿಯೊಬ್ಬನು ತನ್ನ ಜೀವವನ್ನು ಅಪಾಯಕ್ಕೆ ಒಡ್ಡುತ್ತಾನೆ. ಈ ದುಷ್ಟ ಲೋಕವನ್ನು ಸುರಕ್ಷಿತವಾಗಿ ಹಾದು ಹೋಗಲು ನಮಗಿರುವ ಒಂದೇ ಮಾರ್ಗವೆಂದರೆ ದಾವೀದನಂತೆ ಯೆಹೋವನ ಮೊರೆಹೋಗುವುದೇ. ಅವನು ಹೀಗೆ ಪ್ರಾರ್ಥಿಸಿದನು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು.” (ಕೀರ್ತ. 25:4; 23:3) ಅಂಥ ಸುಭದ್ರ ಮಾರ್ಗದರ್ಶನೆ ಪಡೆದುಕೊಳ್ಳುವುದು ಹೇಗೆ?
9. ಪುಟ 17ರಲ್ಲಿ ತೋರಿಸಲಾಗಿರುವಂತೆ ದೇವರಾತ್ಮ ನಮ್ಮನ್ನು ಯಾವ ರೀತಿಯಲ್ಲಿ ಮಾರ್ಗದರ್ಶಿಸಬಲ್ಲದು?
9 ನಾವು ದೀನರಾಗಿದ್ದರೆ, ಯೆಹೋವನ ನೆರವನ್ನು ಯಾಚಿಸುವ ಮನಸ್ಸು ನಮಗಿದ್ದರೆ, ಯಾವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕು ಎಂದು ತೋರಿಸಲು ಆತನು ತನ್ನ ಪವಿತ್ರಾತ್ಮದ ಸಹಾಯವನ್ನು ನಮಗೆ ನೀಡುವನು. ಪವಿತ್ರಾತ್ಮ ಶಕ್ತಿ ಹೇಗೆ ನಮಗೆ ಸಹಾಯ ನೀಡಬಲ್ಲದು? ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತನ್ನು ಗಮನಿಸಿ: “ನನ್ನ ಹೆಸರಿನಲ್ಲಿ ತಂದೆಯು ಕಳುಹಿಸಿಕೊಡುವ ಸಹಾಯಕ, ಅಂದರೆ ಆ ಒಬ್ಬನಾದ ಪವಿತ್ರಾತ್ಮ ನಿಮಗೆ ಎಲ್ಲ ವಿಷಯಗಳನ್ನು ಬೋಧಿಸುವನು ಮತ್ತು ನಾನು ನಿಮಗೆ ಹೇಳಿದ ಎಲ್ಲ ವಿಷಯಗಳನ್ನು ನಿಮ್ಮ ಮನಸ್ಸಿಗೆ ತರುವನು.” (ಯೋಹಾ. 14:26) ನಾವು ದೇವರ ವಾಕ್ಯವನ್ನು ಹಾಗೂ ಅದರಲ್ಲಿರುವ ಕ್ರಿಸ್ತನ ಬೋಧನೆಗಳನ್ನು ನಿಯತವಾಗಿ ಅಧ್ಯಯನ ಮಾಡುವಲ್ಲಿ ಯೆಹೋವ ದೇವರ ಅಗಾಧ ವಿವೇಕವನ್ನು ಗ್ರಹಿಸಲು ಪವಿತ್ರಾತ್ಮವು ನಮಗೆ ನೆರವಾಗುವುದು. ಆಗ ನಾವಾತನ ಚಿತ್ತವನ್ನು ಪೂರ್ಣವಾಗಿ ಮಾಡಲು ಶಕ್ತರಾಗುವೆವು. (1 ಕೊರಿಂ. 2:10) ಮಾತ್ರವಲ್ಲ, ನಮ್ಮ ಬದುಕು ಅನಿರೀಕ್ಷಿತ ತಿರುವುಗಳನ್ನು ಕಂಡಾಗ ಸಾಗಬೇಕಾದ ಸರಿ ದಾರಿಯನ್ನು ಪವಿತ್ರಾತ್ಮ ತೋರಿಸಿಕೊಡುವುದು. ನಾವೀಗಾಗಲೇ ಕಲಿತಿರುವ ಬೈಬಲ್ ಮೂಲತತ್ವಗಳನ್ನು ನೆನಪಿಗೆ ತಂದುಕೊಟ್ಟು ಯಾವ ಕಡೆ ಹೆಜ್ಜೆ ಎತ್ತಿಡಬೇಕೆಂದು ಗ್ರಹಿಸಲು ನೆರವಾಗುವುದು.
ಯೇಸು ದೇವರಾತ್ಮದ ಮಾರ್ಗದರ್ಶನವನ್ನು ಪಾಲಿಸಿದನು
10, 11. ಪವಿತ್ರಾತ್ಮದ ಮಾರ್ಗದರ್ಶನದ ಕುರಿತು ಯೇಸುವಿಗೆ ಮೊದಲೇ ಏನು ಗೊತ್ತಿತ್ತು? ಪವಿತ್ರಾತ್ಮವು ಅವನಿಗೆ ಯಾವ ನೆರವು ನೀಡಿತು?
10 ಸ್ವತಃ ದೇವಪುತ್ರನೇ ಪವಿತ್ರಾತ್ಮದ ಮಾರ್ಗದರ್ಶನವನ್ನು ಪಾಲಿಸಿದನು. ಇದು ಪವಿತ್ರಾತ್ಮದ ಮಾರ್ಗದರ್ಶನೆ ನಮಗೆ ಅತ್ಯಾವಶ್ಯಕ ಎನ್ನುವುದಕ್ಕೆ ಎರಡನೇ ಕಾರಣವಾಗಿದೆ. ಭೂಮಿಗೆ ಬರುವ ಮೊದಲು ದೇವರ ಏಕೈಕಜಾತ ಪುತ್ರನು ಈ ಪ್ರವಾದನೆಯನ್ನು ತಿಳಿದುಕೊಂಡಿದ್ದನು: “ಆ ಅಂಕುರದ ಮೇಲೆ ಜ್ಞಾನವಿವೇಕದಾಯಕ ಆತ್ಮ, ಆಲೋಚನಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆಯನ್ನೂ ಯೆಹೋವನ ಭಯವನ್ನೂ ಉಂಟುಮಾಡುವ ಆತ್ಮ, ಅಂತು ಯೆಹೋವನ ಆತ್ಮವೇ ನೆಲೆಗೊಂಡಿರುವದು.” (ಯೆಶಾ. 11:2) ಭೂಮಿಗೆ ಬಂದಾಗ ಅವನು ಪವಿತ್ರಾತ್ಮದ ಮಾರ್ಗದರ್ಶನೆಗಾಗಿ ಹಾತೊರೆದನು ಎನ್ನುವುದು ಖಚಿತ. ಏಕೆಂದರೆ, ಭೂಮಿಯಲ್ಲಿ ಯೇಸುವಿನ ಬದುಕು ಸುಲಭವಾಗಿರಲಿಲ್ಲ.
11 ಯೆಹೋವನು ನುಡಿದಂತೆಯೇ ನಡೆಯಿತು. ಯೇಸು ದೀಕ್ಷಾಸ್ನಾನ ಪಡೆದುಕೊಂಡ ಕೂಡಲೇ “ಪವಿತ್ರಾತ್ಮಭರಿತನಾಗಿ ಯೋರ್ದನ್ ನದಿಯಿಂದ ಹಿಂದಿರುಗಿ ಆ ಆತ್ಮದಿಂದ ಅರಣ್ಯಕ್ಕೆ” ನಡೆಸಲ್ಪಟ್ಟನು ಎಂದು ಸುವಾರ್ತಾ ವೃತ್ತಾಂತಗಳು ತಿಳಿಸುತ್ತವೆ. (ಲೂಕ 4:1) ಅರಣ್ಯದಲ್ಲಿ ಉಪವಾಸವಿದ್ದು ಪ್ರಾರ್ಥನೆ ಧ್ಯಾನಗಳನ್ನು ಮಾಡಿದ ಸಮಯದಲ್ಲಿ ಯೆಹೋವನು ಅವನಿಗೆ ಮಾರ್ಗದರ್ಶನೆ ನೀಡಿ ಭವಿಷ್ಯತ್ತನ್ನು ಎದುರಿಸಲು ಅಣಿಗೊಳಿಸಿರಬೇಕು. ಪವಿತ್ರಾತ್ಮವು ಯೇಸುವಿನ ಹೃದಮನಗಳನ್ನು ಗಾಢವಾಗಿ ಪ್ರಭಾವಿಸಿತು. ಚೆನ್ನಾಗಿ ಆಲೋಚಿಸಿ ನಿರ್ಧಾರ ತೆಗೆದುಕೊಳ್ಳುವಂತೆ ಮಾರ್ಗದರ್ಶಿಸಿತು. ಹಾಗಾಗಿ ಪ್ರತಿಯೊಂದು ಸನ್ನಿವೇಶದಲ್ಲೂ ತಾನೇನು ಮಾಡಬೇಕು ಎಂಬುದು ಯೇಸುವಿಗೆ ಸ್ಪಷ್ಟವಾಗಿತ್ತು. ತನ್ನ ತಂದೆ ಬಯಸಿದ ರೀತಿಯಲ್ಲೇ ಯೇಸು ಎಲ್ಲವನ್ನು ಮಾಡಿದನು.
12. ದೇವರಾತ್ಮದ ಮಾರ್ಗದರ್ಶನಕ್ಕಾಗಿ ನಾವು ಏಕೆ ಪ್ರಾರ್ಥಿಸಬೇಕು?
12 ತನ್ನ ಬದುಕಿನಲ್ಲಿ ಪವಿತ್ರಾತ್ಮದ ಮಾರ್ಗದರ್ಶನೆ ಎಷ್ಟು ಮಹತ್ವವೆಂದು ಯೇಸು ಚೆನ್ನಾಗಿ ಮನಗಂಡಿದ್ದನು. ಹಾಗಾಗಿ ಅದನ್ನು ಪಡೆದುಕೊಳ್ಳಲು ದೇವರಲ್ಲಿ ಪ್ರಾರ್ಥಿಸುವಂತೆ ಹಾಗೂ ಅದರ ಮಾರ್ಗದರ್ಶನವನ್ನು ಪಾಲಿಸುವಂತೆ ತನ್ನ ಶಿಷ್ಯರನ್ನು ಪ್ರೋತ್ಸಾಹಿಸಿದನು. (ಲೂಕ 11:9-13 ಓದಿ.) ದೇವರಾತ್ಮದ ಮಾರ್ಗದರ್ಶನಕ್ಕಾಗಿ ನಾವು ಏಕೆ ಪ್ರಾರ್ಥಿಸಬೇಕು? ಏಕೆಂದರೆ, ಕ್ರಿಸ್ತನ ಮನಸ್ಸನ್ನು ಹೋಲುವಂತಹ ರೀತಿಯಲ್ಲಿ ನಮ್ಮ ಆಲೋಚನೆಗಳನ್ನು ಮಾರ್ಪಡಿಸುವ ಶಕ್ತಿ ಅದಕ್ಕಿದೆ. (ರೋಮ. 12:2; 1 ಕೊರಿಂ. 2:16) ದೇವರಾತ್ಮದ ಮಾರ್ಗದರ್ಶನವನ್ನು ಜೀವನಪರ್ಯಂತ ಪಾಲಿಸುವಾಗ ನಾವು ಕ್ರಿಸ್ತನಂತೆ ಆಲೋಚಿಸಬಲ್ಲೆವು ಹಾಗೂ ಆತನ ಮಾದರಿಯನ್ನು ಅನುಕರಿಸಬಲ್ಲೆವು.—1 ಪೇತ್ರ 2:21.
ಲೋಕವು ದಾರಿ ತಪ್ಪಿಸುತ್ತದೆ
13. ಲೋಕದ ಮನೋಭಾವ ಎಂದರೇನು? ಏನು ಮಾಡುವಂತೆ ಅದು ಜನರನ್ನು ಪ್ರಚೋದಿಸುತ್ತದೆ?
13 ಮೂರನೇ ಕಾರಣವೇನೆಂದರೆ, ಪವಿತ್ರಾತ್ಮದ ಮಾರ್ಗದರ್ಶನೆ ಇಲ್ಲದಿದ್ದಲ್ಲಿ ಈ ಲೋಕ ನಮ್ಮನ್ನು ದಾರಿ ತಪ್ಪಿಸುತ್ತದೆ. ಅಧಿಕಾಂಶ ಜನರಲ್ಲಿ ಇಂದು ಲೋಕದ ಮನೋಭಾವ ತುಂಬಿದ್ದು ಪವಿತ್ರಾತ್ಮದ ಮಾರ್ಗದರ್ಶನೆಗೆ ತದ್ವಿರುದ್ಧವಾದ ಕೆಲಸವನ್ನು ಮಾಡಲು ಪ್ರಚೋದಿಸಲ್ಪಟ್ಟಿದ್ದಾರೆ. ಜನರು ಕ್ರಿಸ್ತನ ಮನಸ್ಸನ್ನು ಹೊಂದದಂತೆ ಈ ಲೋಕ ಮಾಡುತ್ತದೆ. ತನ್ನ ಅಧಿಪತಿಯಾದ ಸೈತಾನನ ದುರಾಲೋಚನೆಯನ್ನು ಅವರಲ್ಲಿ ತುರುಕಿಸಿ ಅವನಂತೆ ನೀಚ ಕಾರ್ಯಗಳನ್ನು ಮಾಡುವಂತೆ ಪ್ರೇರೇಪಿಸುತ್ತದೆ. (ಎಫೆಸ 2:1-3; ತೀತ 3:3 ಓದಿ.) ಒಬ್ಬನು ಲೋಕದ ಮನೋಭಾವವನ್ನು ಬೆಳೆಸಿಕೊಂಡು ಶರೀರಭಾವದ ಪ್ರವೃತ್ತಿಗಳನ್ನು ರೂಢಿಸಿಕೊಳ್ಳುವಲ್ಲಿ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಅವನು ದೇವರ ರಾಜ್ಯವನ್ನು ಪ್ರವೇಶಿಸಲಾರನು.—ಗಲಾ. 5:19-21.
14, 15. ಲೋಕದ ಮನೋಭಾವದಿಂದ ಮಲಿನರಾಗದಿರಲು ನಾವು ಏನು ಮಾಡಬೇಕು?
14 ಲೋಕದ ಮನೋಭಾವದಿಂದ ನಾವು ಮಲಿನರಾಗದಿರಲು ಯೆಹೋವನು ಸಹಾಯ ಮಾಡುವನು. “ಕರ್ತನಲ್ಲಿಯೂ ಆತನ ಪರಾಕ್ರಮಭರಿತ ಶಕ್ತಿಯಲ್ಲಿಯೂ ನೀವು ಬಲವನ್ನು ಪಡೆದುಕೊಳ್ಳುತ್ತಾ ಇರಿ” ಎಂದು ಅಪೊಸ್ತಲ ಪೌಲ ಹೇಳಿದನು. ಏಕೆ? “ದುಷ್ಟ ದಿನದಲ್ಲಿ ನೀವು ಎದುರಿಸಶಕ್ತರಾಗುವಂತೆ ಮತ್ತು . . . ದೃಢರಾಗಿ ನಿಲ್ಲಶಕ್ತರಾಗುವಂತೆ.” (ಎಫೆ. 6:10, 13) ಹೌದು, ನಮ್ಮನ್ನು ದಾರಿ ತಪ್ಪಿಸಲು ಸೈತಾನನು ಮಾಡುವ ಪ್ರಯತ್ನಗಳಿಗೆ ಬಲಿಯಾಗದಂತೆ ದೇವರು ನಮ್ಮನ್ನು ಪವಿತ್ರಾತ್ಮದಿಂದ ಬಲಪಡಿಸುವನು. (ಪ್ರಕ. 12:9) ನಮ್ಮ ಮನಸ್ಸನ್ನು ಹಾಳುಮಾಡುವ ಶಕ್ತಿ ಲೋಕದ ಮನೋಭಾವಕ್ಕಿದೆ. ಅದರ ಪ್ರಾಬಲ್ಯವನ್ನು ಪೂರ್ಣವಾಗಿ ಕಿತ್ತೊಗೆಯಲು ನಮ್ಮಿಂದ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ನಾವು ಅದರ ಪ್ರಭಾವಕ್ಕೆ ತುತ್ತಾಗಿ ಭ್ರಷ್ಟರಾಗಬೇಕೆಂದಿಲ್ಲ. ಪವಿತ್ರಾತ್ಮ ಅದಕ್ಕಿಂತ ಬಲಾಢ್ಯ ಶಕ್ತಿಯಾಗಿದೆ! ಅದು ನಮಗೆ ಸಹಾಯ ಮಾಡುತ್ತದೆ.
15 ಒಂದನೇ ಶತಮಾನದಲ್ಲಿ ಕ್ರೈಸ್ತ ಮಾರ್ಗವನ್ನು ತೊರೆದವರ ಕುರಿತು ಅಪೊಸ್ತಲ ಪೇತ್ರ ಹೀಗೆ ಹೇಳಿದನು: “ಅವರು ನೇರವಾದ ಮಾರ್ಗವನ್ನು ಬಿಟ್ಟು ದಾರಿತಪ್ಪಿಸಲ್ಪಟ್ಟಿದ್ದಾರೆ.” (2 ಪೇತ್ರ 2:15) ನಮ್ಮ ವಿಷಯದಲ್ಲಿ ಹೇಳುವುದಾದರೆ, ನಾವು ದೇವರಿಗೆ ಚಿರ ಋಣಿಗಳು. ಏಕೆಂದರೆ, “ನಾವು ಲೋಕದ ಮನೋಭಾವವನ್ನಲ್ಲ, ದೇವರಿಂದ ಬರುವ ಆತ್ಮವನ್ನು ಪಡೆದುಕೊಂಡಿದ್ದೇವೆ.” (1 ಕೊರಿಂ. 2:12) ಆ ಆತ್ಮದ ಮಾರ್ಗದರ್ಶನವನ್ನು ಪಾಲಿಸುವ ಮೂಲಕ ಹಾಗೂ “ನೇರವಾದ” ಮಾರ್ಗದಲ್ಲಿ ಸಾಗಲು ಯೆಹೋವ ದೇವರು ಒದಗಿಸಿರುವ ಎಲ್ಲಾ ಏರ್ಪಾಡುಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ನಾವು ಸೈತಾನನ ಲೋಕದ ಮನೋಭಾವದಿಂದ ಹಾಳಾಗದಂತೆ ನೋಡಿಕೊಳ್ಳಬಲ್ಲೆವು.—ಗಲಾ. 5:16.
ಪವಿತ್ರಾತ್ಮದ ಫಲ ಸುಮಧುರ
16. ಪವಿತ್ರಾತ್ಮ ನಮ್ಮಲ್ಲಿ ಯಾವ ಫಲ ಉತ್ಪಾದಿಸುತ್ತದೆ?
16 ಪವಿತ್ರಾತ್ಮದ ಮಾರ್ಗದರ್ಶನೆ ಅತ್ಯಾವಶ್ಯಕ ಎನ್ನುವುದಕ್ಕಿರುವ ನಾಲ್ಕನೇ ಕಾರಣವೇನೆಂದರೆ, ಅದು ನಮ್ಮಲ್ಲಿ ಶ್ರೇಷ್ಠ ಗುಣಗಳನ್ನು ಉತ್ಪಾದಿಸುತ್ತದೆ. (ಗಲಾತ್ಯ 5:22, 23 ಓದಿ.) ನಮ್ಮಲ್ಲಿ ಯಾರು ತಾನೇ ಇನ್ನಷ್ಟು ಪ್ರೀತಿ ತೋರಿಸಲು, ಆನಂದ, ಶಾಂತಿಯಿಂದ ಸಮೃದ್ಧರಾಗಿರಲು ಇಷ್ಟಪಡುವುದಿಲ್ಲ? ದೀರ್ಘಸಹನೆ, ದಯೆ, ಒಳ್ಳೇತನವನ್ನು ಮತ್ತಷ್ಟು ಬೆಳೆಸಿಕೊಳ್ಳಲು ಬಯಸುವುದಿಲ್ಲ? ಗಾಢ ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣವನ್ನು ಸದಾ ತೋರಿಸಲು ಹಾತೊರೆಯುವುದಿಲ್ಲ? ಈ ಸುಂದರ ಗುಣಗಳು ನಮಗೂ ನಮ್ಮ ಕುಟುಂಬಕ್ಕೂ ಸಭೆಗೂ ಮಹತ್ತರ ಪ್ರಯೋಜನ ತರಬಲ್ಲವು. ನಾವು ನಿರಂತರವಾಗಿ ಈ ಗುಣಗಳನ್ನು ಮೈಗೂಡಿಸಿಕೊಳ್ಳುತ್ತಾ ದೇವರಾತ್ಮದ ಫಲವನ್ನು ನಮ್ಮ ಜೀವನದಲ್ಲಿ ತೋರಿಸಲು ಶ್ರಮಿಸಬೇಕು. ಏಕೆಂದರೆ ಪವಿತ್ರಾತ್ಮ ಉಂಟುಮಾಡುವ ಫಲ ಹೇರಳವಾದದ್ದು. ಅದಕ್ಕೆ ಮಿತಿ ಎನ್ನುವುದು ಇಲ್ಲ. ನಮ್ಮ ಜೀವನದಲ್ಲಿ ಇಷ್ಟೇ ಇಷ್ಟು ಸಾಕೆಂದು ನಾವು ಪರಿಧಿ ಹಾಕಿಕೊಳ್ಳಬಾರದು.
17. ಪವಿತ್ರಾತ್ಮದ ಫಲದ ಒಂದು ನಿರ್ದಿಷ್ಟ ಗುಣವನ್ನು ಮತ್ತಷ್ಟು ಬೆಳೆಸಿಕೊಳ್ಳಲು ನಾವೇನು ಮಾಡಬೇಕು?
17 ಪವಿತ್ರಾತ್ಮದ ಫಲ ನಮ್ಮಲ್ಲಿದೆ ಎಂದು ನಮ್ಮ ನಡೆನುಡಿಗಳು ತೋರಿಸಿಕೊಡುತ್ತವಾ? ನಾವು ನಮ್ಮನ್ನೇ ಪರೀಕ್ಷಿಸಿಕೊಳ್ಳುವುದು ಬುದ್ಧಿವಂತಿಕೆಯಾಗಿದೆ. (2 ಕೊರಿಂ. 13:5ಎ; ಗಲಾ. 5:25) ಪವಿತ್ರಾತ್ಮದ ಫಲದ ಒಂದು ನಿರ್ದಿಷ್ಟ ಗುಣವನ್ನು ನಾವು ಇನ್ನು ಹೆಚ್ಚು ತೋರಿಸಬೇಕು ಎಂದು ಅನಿಸುವಲ್ಲಿ ನಾವು ತಕ್ಕ ಕ್ರಮ ತೆಗೆದುಕೊಳ್ಳಬೇಕು. ಅದನ್ನು ಬೆಳೆಸಿಕೊಳ್ಳಲು ಶ್ರಮಹಾಕಿ ಪವಿತ್ರಾತ್ಮದ ಮಾರ್ಗದರ್ಶನೆಯನ್ನು ಚಾಚೂತಪ್ಪದೆ ಪಾಲಿಸಬೇಕು. ಬೈಬಲಿನಲ್ಲಿ ಹಾಗೂ ನಮ್ಮ ಸಾಹಿತ್ಯಗಳಲ್ಲಿ ಪವಿತ್ರಾತ್ಮದ ಫಲದ ಪ್ರತಿಯೊಂದು ಗುಣದ ಬಗ್ಗೆ ಇರುವ ಮಾಹಿತಿಯನ್ನು ಅಧ್ಯಯನ ಮಾಡುವುದು ನಮಗೆ ಈ ನಿಟ್ಟಿನಲ್ಲಿ ಸಹಾಯಕರ. ಹಾಗೆ ಕಲಿತಂತೆ ನಾವು ಆ ಗುಣಗಳನ್ನು ದೈನಂದಿನ ಬದುಕಿನಲ್ಲಿ ಹೇಗೆ ತೋರಿಸುವುದು ಎಂದು ಯೋಚಿಸಿ ಕಾರ್ಯರೂಪಕ್ಕೆ ಹಾಕಬೇಕು.a ಪವಿತ್ರಾತ್ಮದ ಸುಮಧುರ ಫಲ ನಮ್ಮ ಹಾಗೂ ಸಹೋದರ ಸಹೋದರಿಯರ ಜೀವನದಲ್ಲಿ ಉಂಟುಮಾಡುವ ಉತ್ತಮ ಪರಿಣಾಮಗಳನ್ನು ನೋಡುವಾಗ ಅದರ ಮಾರ್ಗದರ್ಶನೆ ನಮಗೆಷ್ಟು ಮಹತ್ವವಾಗಿದೆ ಎನ್ನುವುದು ಸ್ಪಷ್ಟವಾಗಿ ಅರ್ಥವಾಗುತ್ತದೆ.
ಪವಿತ್ರಾತ್ಮದ ಮಾರ್ಗದರ್ಶನೆಯನ್ನು ಪಾಲಿಸುತ್ತಿದ್ದೀರಾ?
18. ಪವಿತ್ರಾತ್ಮದ ಮಾರ್ಗದರ್ಶನೆಯನ್ನು ಪಾಲಿಸುವ ವಿಷಯದಲ್ಲಿ ಯೇಸು ಹೇಗೆ ನಮಗೆ ಮಾದರಿ ಇಟ್ಟಿದ್ದಾನೆ?
18 ಸೃಷ್ಟಿಕಾರ್ಯದಲ್ಲಿ ದೇವರೊಡನೆ ಕುಶಲ “ಶಿಲ್ಪಿಯಾಗಿ” ಕೆಲಸ ನಿರ್ವಹಿಸಿದ ಯೇಸುವಿಗೆ ಭೂಕಾಂತ ಕ್ಷೇತ್ರದ ಪೂರ್ಣ ಅರಿವಿತ್ತು. ಇಂದು ಮಾನವರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸಲು ಈ ಕಾಂತ ಕ್ಷೇತ್ರವನ್ನು ಅವಲಂಬಿಸುತ್ತಾರೆ. (ಜ್ಞಾನೋ. 8:30; ಯೋಹಾ. 1:3) ಯೇಸು ತನ್ನ ಜೀವನವನ್ನು ಬಲಾಢ್ಯವಾದ ಪವಿತ್ರಾತ್ಮ ಶಕ್ತಿ ಮಾರ್ಗದರ್ಶಿಸುವುದನ್ನು ಇಷ್ಟಪಟ್ಟನೆಂದು ಬೈಬಲ್ ತಿಳಿಸುತ್ತದೆ. ಪವಿತ್ರಾತ್ಮದ ಮಾರ್ಗದರ್ಶನೆಯನ್ನು ಪಾಲಿಸಲು ಅವನು ಸದಾ ಹಾತೊರೆಯುತ್ತಿದ್ದನು. ಅದರ ಮಹತ್ವವನ್ನು ಮನಗಂಡು ಅದರ ಪ್ರಚೋದನೆಗೆ ಅನುಗುಣವಾಗಿ ಬದುಕಿದನು. (ಮಾರ್ಕ 1:12, 13; ಲೂಕ 4:14) ನೀವೂ ಅದನ್ನೇ ಮಾಡುತ್ತಿರುವಿರಾ?
19. ಪವಿತ್ರಾತ್ಮದ ಮಾರ್ಗದರ್ಶನೆ ಪಡೆದುಕೊಳ್ಳಲು ನಾವು ಏನು ಮಾಡಬೇಕು?
19 ಪವಿತ್ರಾತ್ಮದ ಮಾರ್ಗದರ್ಶನೆಗೆ ಅನುಗುಣವಾಗಿ ಜೀವಿಸಲು ಮನಸ್ಸು ಮಾಡುವವರ ಹೃದಮನಗಳನ್ನು ಅದು ಇಂದು ಸಹ ಪ್ರಭಾವಿಸುತ್ತದೆ. ಅದರ ಮಾರ್ಗದರ್ಶನೆ ಪಡೆದು ಸರಿಯಾದ ದಾರಿಯಲ್ಲಿ ಹೆಜ್ಜೆ ಹಾಕಲು ನೀವು ಏನು ಮಾಡಬೇಕು? ಪವಿತ್ರಾತ್ಮವನ್ನು ದಯಪಾಲಿಸುವಂತೆ ಮತ್ತು ಅದರ ಮಾರ್ಗದರ್ಶನೆಯನ್ನು ಪಾಲಿಸಲು ಸಹಾಯ ಮಾಡುವಂತೆ ಯೆಹೋವ ದೇವರಲ್ಲಿ ಎಡೆಬಿಡದೆ ಪ್ರಾರ್ಥಿಸಿ. (ಎಫೆಸ 3:14-16ಓದಿ.) ಪವಿತ್ರಾತ್ಮದ ಉತ್ಪನ್ನವಾಗಿರುವ ಬೈಬಲನ್ನು ಅಧ್ಯಯನ ಮಾಡಿ ಸಲಹೆಯನ್ನು ಪಾಲಿಸಿ. ಪವಿತ್ರಾತ್ಮದ ಮಾರ್ಗದರ್ಶನೆ ಪಡೆದುಕೊಳ್ಳಲು ನೀವು ಮನಸಾರೆ ಇಷ್ಟಪಡುತ್ತಿದ್ದೀರಿ ಎಂದು ಅದು ತೋರಿಸಿಕೊಡುತ್ತದೆ. (2 ತಿಮೊ. 3:16, 17) ಬೈಬಲಿನಲ್ಲಿರುವ ವಿವೇಕದ ನುಡಿ ಉಪದೇಶಗಳಿಗೆ ವಿಧೇಯತೆ ತೋರಿಸುತ್ತಾ ಪವಿತ್ರಾತ್ಮ ಪ್ರಚೋದಿಸುವ ದಿಕ್ಕಿನಲ್ಲಿ ಸಾಗಿ. ಈ ದುಷ್ಟ ಲೋಕದಲ್ಲಿ ಸುರಕ್ಷಿತವಾಗಿ ಹೆಜ್ಜೆ ಹಾಕಲು ಬೇಕಾದ ಮಾರ್ಗದರ್ಶನೆ ನೀಡುವ ಸಾಮರ್ಥ್ಯ ಯೆಹೋವ ದೇವರಿಗೆ ಇದೆ. ಅದನ್ನು ನಂಬುತ್ತೀರೆಂದು ತೋರಿಸಿ.
[ಪಾದಟಿಪ್ಪಣಿ]
a ಪ್ರತಿಯೊಂದು ಗುಣವನ್ನು ಬೆಳೆಸಿಕೊಳ್ಳುವುದು ಹೇಗೆಂಬ ಮಾಹಿತಿಗಾಗಿ, w07 8/1 18-19; w03 1/15 11; w02 1/15 17; w95 1/15 16; w01 11/1 14-15; w03 7/1 6; w01 1/1 22; w03 4/1 15, 19-20; w03 10/15 14 ನೋಡಿ.
ಮುಖ್ಯ ಅಂಶಗಳು ನೆನಪಿವೆಯೇ?
• ಪವಿತ್ರಾತ್ಮ ನಮ್ಮ ಬದುಕಿನುದ್ದಕ್ಕೂ ಹೇಗೆ ನೆರವಾಗುತ್ತದೆ?
• ಪವಿತ್ರಾತ್ಮದ ಮಾರ್ಗದರ್ಶನೆ ನಮಗೆ ಅತ್ಯಾವಶ್ಯಕ ಎನ್ನುವುದಕ್ಕಿರುವ ನಾಲ್ಕು ಕಾರಣಗಳು ಯಾವುವು?
• ಪವಿತ್ರಾತ್ಮದ ಮಾರ್ಗದರ್ಶನೆ ಪಡೆದುಕೊಳ್ಳಲು ನಾವೇನು ಮಾಡಬೇಕು?
[ಪುಟ 15ರಲ್ಲಿರುವ ಚಿತ್ರ]
ಪವಿತ್ರಾತ್ಮವು ಯೇಸುವಿನ ಬದುಕಿನಲ್ಲಿ ಪ್ರಚೋದಕ ಶಕ್ತಿ ಆಗಿತ್ತು
[ಪುಟ 17ರಲ್ಲಿರುವ ಚಿತ್ರ]
ಪವಿತ್ರಾತ್ಮವು ಹೃದಮನಗಳನ್ನು ಪ್ರಭಾವಿಸಿ ಮಾರ್ಗದರ್ಶಿಸುತ್ತದೆ