ಅಧ್ಯಾಯ 13
ಯೇಸುವಿನ ಶೋಧನೆಗಳಿಂದ ಕಲಿಯುವುದು
ದೀಕ್ಷಾಸ್ನಾನವಾದ ಕೂಡಲೇ, ಯೇಸುವು ಯೂದಾಯದ ಅಡವಿಗೆ ದೇವರ ಆತ್ಮನಿಂದ ನಡಿಸಲ್ಪಟ್ಟನು. ಅವನಿಗೆ ತುಂಬಾ ಯೋಚಿಸಲಿಕ್ಕಿತ್ತು, ಯಾಕಂದರೆ ಅವನ ದೀಕ್ಷಾಸ್ನಾನದ ಸಂದರ್ಭದಲ್ಲಿ “ಪರಲೋಕವು ತೆರೆಯಿತು”, ಅದರಿಂದ ಸ್ವರ್ಗೀಯ ವಿಷಯಗಳನ್ನು ಅವನು ವಿವೇಚಿಸುವಂತೆ ಸಾಧ್ಯವಾಯಿತು. ಖಂಡಿತವಾಗಿಯೂ ಮನನ ಮಾಡಲು ಅವನಿಗೆ ಬಹಳಷ್ಟು ಇತ್ತು!
ಯೇಸುವು 40 ದಿನ ಮತ್ತು 40 ರಾತ್ರಿ ಅಡವಿಯಲ್ಲಿ ಕಳೆದನು ಮತ್ತು ಆ ಸಮಯದಲ್ಲಿ ಏನನ್ನೂ ತಿನ್ನಲಿಲ್ಲ. ಅನಂತರ, ಯೇಸು ಬಹಳ ಹಸಿವೆಯಿಂದಿರುವಾಗ, ಪಿಶಾಚನು ಅವನನ್ನು ಶೋಧಿಸಲು ಸಮೀಪಿಸುತ್ತಾ ಹೀಗನ್ನುತ್ತಾನೆ: “ನೀನು ಒಂದು ವೇಳೆ ದೇವರ ಮಗನಾಗಿದ್ದರೆ, ಈ ಕಲ್ಲುಗಳನ್ನು ರೊಟ್ಟಿಯಾಗುವಂತೆ ಅಪ್ಪಣೆಕೊಡು.” ಆದರೆ ಅವನ ವೈಯಕ್ತಿಕ ಆಶೆಗಳನ್ನು ತೃಪ್ತಿಗೊಳಿಸಲು ಅವನ ಅದ್ಭುತಕರ ಶಕ್ತಿಯನ್ನು ಉಪಯೋಗಿಸುವದು ತಪ್ಪು ಎಂದು ಯೇಸುವಿಗೆ ತಿಳಿದಿತ್ತು. ಆದುದರಿಂದ ಅವನು ಶೋಧಿಸಲ್ಪಡಲು ನಿರಾಕರಿಸುತ್ತಾನೆ.
ಆದರೆ ಪಿಶಾಚನು ಅಲ್ಲಿಯೇ ಬಿಟ್ಟುಬಿಡಲಿಲ್ಲ. ಅವನು ಇನ್ನೊಂದು ವಿಧದಿಂದ ಸಮೀಪಿಸುತ್ತಾನೆ. ದೇವಾಲಯದ ಶಿಖರದಿಂದ ಧುಮುಕುವದಾದರೆ ದೇವದೂತರು ಅವನನ್ನು ಪಾರುಗೊಳಿಸುವರೋ ನೋಡೋಣ ಎಂಬ ಪಂಥಾಹ್ವಾನವನ್ನು ಯೇಸುವಿಗೆ ಎಸೆಯುತ್ತಾನೆ. ಆದರೆ ಯೇಸುವು ಅಂಥಹ ಪ್ರೇಕ್ಷಣೀಯ ಪ್ರದರ್ಶನವನ್ನು ಮಾಡುವ ಶೋಧನೆಗೆ ಬಲಿಯಾಗಲಿಲ್ಲ. ಶಾಸ್ತ್ರವಚನಗಳಿಂದ ಉಲ್ಲೇಖಿಸುತ್ತಾ, ಈ ರೀತಿಯಲ್ಲಿ ದೇವರನ್ನು ಪರೀಕ್ಷಿಸುವದು ತಪ್ಪೆಂದು ತೋರಿಸುತ್ತಾನೆ.
ಮೂರನೆಯ ಶೋಧನೆಯಲ್ಲಿ, ಯಾವುದೋ ಒಂದು ಅದ್ಭುತ ರೀತಿಯಲ್ಲಿ ಪಿಶಾಚನು ಪ್ರಪಂಚದ ಎಲ್ಲಾ ರಾಜ್ಯಗಳನ್ನು ಯೇಸುವಿಗೆ ತೋರಿಸುತ್ತಾನೆ ಮತ್ತು ಹೇಳುವದು: “ನೀನು ನನಗೆ ಅಡ್ಡ ಬಿದ್ದು ಒಂದು ಆರಾಧನಾ ಕ್ರಿಯೆ ಮಾಡಿದರೆ, ಇವುಗಳನ್ನೆಲ್ಲಾ ನಿನಗೆ ಕೊಡುವೆನು.” ಆದರೆ ಪುನಃ ಯೇಸುವು ತಪ್ಪನ್ನು ಮಾಡುವ ಶೋಧನೆಗೆ ಶರಣಾಗತನಾಗಲು ನಿರಾಕರಿಸಿ, ದೇವರಿಗೆ ನಂಬಿಗಸ್ತನಾಗಿರಲು ಆಯ್ಕೆ ಮಾಡುತ್ತಾನೆ.
ಯೇಸುವಿನ ಈ ಶೋಧನೆಗಳಿಂದ ನಾವು ಕಲಿಯಬಲ್ಲೆವು. ಉದಾಹರಣೆಗೆ, ಕೆಲವು ಜನರು ಹೇಳುವ ಪ್ರಕಾರ ಪಿಶಾಚನು ಕೇವಲ ಕೆಟ್ಟತನದ ಒಂದು ಗುಣವಲ್ಲ, ಬದಲು ಅವನು ಒಂದು ನೈಜ, ಅದೃಶ್ಯ ವ್ಯಕ್ತಿಯಾಗಿದ್ದಾನೆ ಎಂದು ಅವು ತೋರಿಸುತ್ತವೆ. ಎಲ್ಲಾ ಲೋಕ ಸರಕಾರಗಳು ಪಿಶಾಚನ ಆಸ್ತಿಯೆಂದು ಕೂಡಾ ಯೇಸುವಿನ ಶೋಧನೆಯು ತೋರಿಸುತ್ತದೆ. ಅವು ನಿಜವಾಗಿ ಅವನದ್ದಲ್ಲವಾಗಿದ್ದರೆ, ಪಿಶಾಚನು ಕ್ರಿಸ್ತನಿಗೆ ಅವನ್ನು ನೀಡುವುದು ಒಂದು ನೈಜ ಶೋಧನೆ ಹೇಗಾಗುತ್ತಿತ್ತು?
ಮತ್ತು ಇದನ್ನು ಯೋಚಿಸಿರಿ: ಒಂದು ಆರಾಧನಾ ಕ್ರಿಯೆ ಮಾಡಿದರೆ, ಅವನಿಗೆ ಪ್ರಪಂಚದ ಎಲ್ಲಾ ರಾಜ್ಯಗಳನ್ನು ಬಹುಮಾನವಾಗಿ ಕೊಡಲು ತಾನು ಸಿದ್ಧನಿದ್ದೇನೆ ಎಂದು ಪಿಶಾಚನು ಹೇಳಿದನು. ಅದೇ ರೀತಿಯಾಗಿ ಸೈತಾನನು ಇಂದು ನಮ್ಮನ್ನು ಶೋಧಿಸಲು ಪ್ರಯತ್ನಿಸಬಹುದು, ಪ್ರಾಯಶಃ ಪ್ರಾಪಂಚಿಕ ಐಶ್ವರ್ಯ, ಅಧಿಕಾರ ಅಥವಾ ಪದವಿಯನ್ನು ಪಡೆಯುವ ಆಶೆ ಉಂಟುಮಾಡುವ ಸಂದರ್ಭಗಳನ್ನು ನಮ್ಮ ಮುಂದೆ ಇಡಬಹುದು. ಆದರೆ ಯಾವುದೇ ಶೋಧನೆಗಳಿರಲಿ, ಯೇಸುವಿನ ಮಾದರಿಯನ್ನು ಅನುಸರಿಸಿ, ದೇವರಿಗೆ ನಂಬಿಗಸ್ತರಾಗಿರುವದು ನಮಗೆ ಎಷ್ಟೋ ವಿವೇಕದ್ದಾಗಿರುತ್ತದೆ! ಮತ್ತಾಯ 3:16; 4:1-11; ಮಾರ್ಕ 1:12, 13; ಲೂಕ 4:1-13.
▪ ಅರಣ್ಯದಲ್ಲಿ 40 ದಿನಗಳ ಸಮಯದಲ್ಲಿ ಯೇಸುವು ಪ್ರಾಯಶಃ ಯಾವ ಸಂಗತಿಗಳನ್ನು ಮನನ ಮಾಡುತ್ತಿದ್ದಿರಬೇಕು?
▪ ಯೇಸುವನ್ನು ಶೋಧಿಸಲು ಪಿಶಾಚನು ಹೇಗೆ ಪ್ರಯತ್ನಿಸಿದನು?
▪ ಯೇಸುವಿನ ಶೋಧನೆಗಳಿಂದ ನಾವೇನು ಕಲಿಯಬಹುದು?