ನಿರ್ದೋಷಿಗಳಾಗಿ ನಡೆದುದಕ್ಕಾಗಿ ಅವರು ಬಹುಮಾನಿಸಲ್ಪಟ್ಟರು
ಯೆಹೋವನು ತನ್ನ ನಂಬಿಗಸ್ತ ಸೇವಕರನ್ನು ಆಶೀರ್ವದಿಸುತ್ತಾನೆ ಮತ್ತು ಅವರಿಗೆ ಬಹುಮಾನವನ್ನೀಯುತ್ತಾನೆ. ದೇವರ ಉದ್ದೇಶಗಳು ಹೇಗೆ ನೆರವೇರಲ್ಪಡುತ್ತಿವೆಯೆಂಬುದನ್ನು ಕಾಣಲು ಸ್ವಲ್ಪ ಸಮಯ ಅವರು ಕಾಯಬೇಕಾಗಿರಬಹುದಾದರೂ, ಆತನ ಆಶೀರ್ವಾದವು ಅನುಭವಿಸಲ್ಪಡುವಾಗ ಅದು ಎಂಥ ಮಹದಾನಂದ!
ಇದು ಸುಮಾರು ಎರಡು ಸಾವಿರ ವರುಷಗಳ ಹಿಂದೆ, ಯೆಹೂದಿ ಯಾಜಕನಾದ ಜಕರೀಯ ಮತ್ತು ಅವನ ಹೆಂಡತಿ ಎಲಿಸಬೇತಳ—ಇಬ್ಬರೂ ಆರೋನನ ವಂಶದವರು—ಸಂಬಂಧದಲ್ಲಿ ಚೆನ್ನಾಗಿ ದೃಷ್ಟಾಂತಿಸಲ್ಪಟ್ಟಿತ್ತು. ಇಸ್ರಾಯೇಲ್ಯರು ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸಿದ್ದಲ್ಲಿ, ಅವರನ್ನು ಸಂತಾನದ ಮೂಲಕ ಆಶೀರ್ವದಿಸುವೆನೆಂದು ಆತನು ವಾಗ್ದಾನಿಸಿದ್ದನು. ಮಕ್ಕಳು ಒಂದು ಬಹುಮಾನವಾಗಿದ್ದಾರೆಂದು ಆತನು ಹೇಳಿದನು. (ಯಾಜಕಕಾಂಡ 26:9; ಕೀರ್ತನೆ 127:3) ಹಾಗಿದ್ದರೂ, ಜಕರೀಯ ಮತ್ತು ಎಲಿಸಬೇತರಿಗೆ ಮಕ್ಕಳಿರಲಿಲ್ಲ ಮತ್ತು ಅವರು ವೃದ್ಧರಾಗಿದ್ದರು.—ಲೂಕ 1:1-7.
ಜಕರೀಯ ಮತ್ತು ಎಲಿಸಬೇತ “ಅವರಿಬ್ಬರೂ ಕರ್ತನ ಎಲ್ಲಾ ಆಜ್ಞೆಗಳನ್ನೂ ನೇಮನಿಷ್ಠೆಗಳನ್ನೂ ಕೈಕೊಂಡು ತಪ್ಪಿಲ್ಲದೆ ನಡಕೊಳ್ಳುತ್ತಾ ದೇವರ ದೃಷ್ಟಿಯಲ್ಲಿ ನೀತಿವಂತರಾಗಿದ್ದರು,” ಎಂದು ವಚನಗಳು ಹೇಳುತ್ತವೆ. (ಲೂಕ 1:6) ಅವರು ದೇವರನ್ನು ಎಷ್ಟು ಪ್ರೀತಿಸಿದರೆಂದರೆ, ಆತನ ಆಜ್ಞೆಗಳನ್ನು ಪಾಲಿಸುವುದು ಮತ್ತು ನೀತಿಯ ಜೀವನಪಥವನ್ನು ಅನುಸರಿಸುವುದು ಅವರಿಗೆ ಹೊರೆಯಾಗಿರಲಿಲ್ಲ.—1 ಯೋಹಾನ 5:3.
ಅನಿರೀಕ್ಷಿತ ಆಶೀರ್ವಾದಗಳು
ಸಾ.ಶ.ಪೂ. 3 ನೆಯ ವರ್ಷದ ವಸಂತ ಋತುವಿನ ಕೊನೆಯ ಭಾಗಕ್ಕೆ ಅಥವಾ ಬೇಸಗೆಯ ಮೊದಲ ಭಾಗಕ್ಕೆ ನಾವು ಹಿಂದೆರಳೋಣ. ಮಹಾ ಹೆರೋದನು ಯೂದಾಯದಲ್ಲಿ ಅರಸನಾಗಿ ಆಳುತ್ತಿದ್ದಾನೆ. ಒಂದು ದಿನ, ಯೆರೂಸಲೇಮಿನಲ್ಲಿ ದೇವಾಲಯದ ಪವಿತ್ರಸ್ಥಳವನ್ನು ಯಾಜಕನಾದ ಜಕರೀಯನು ಪ್ರವೇಶಿಸುತ್ತಾನೆ. ಪವಿತ್ರಸ್ಥಳದ ಹೊರಗೆ ಜನರು ಒಟ್ಟುಗೂಡಿ ಪ್ರಾರ್ಥಿಸುತ್ತಿರುವಾಗ, ಅವನು ಚಿನ್ನದ ಧೂಪಪೀಠದ ಮೇಲೆ ಧೂಪವನ್ನು ಸುಡುತ್ತಾನೆ. ಪ್ರತಿನಿತ್ಯದ ಸೇವೆಗಳಿಗಿಂತ ಅತ್ಯಂತ ಹೆಚ್ಚು ಗೌರವಾರ್ಹವೆಂದು ಪರಿಗಣಿಸಬಹುದಾದ ಇದು, ಯಜ್ಞವು ಸಮರ್ಪಿಸಲ್ಪಟ್ಟ ಬಳಿಕ ಮಾಡಲ್ಪಡುತ್ತದೆ. ಒಬ್ಬ ಯಾಜಕನು ತನ್ನ ಜೀವಮಾನದಲ್ಲಿ ಕೇವಲ ಒಮ್ಮೆ ಮಾತ್ರ ಈ ಸುಯೋಗವನ್ನು ಹೊಂದಿದ್ದಿರಬಹುದು.
ತಾನು ಏನನ್ನು ನೋಡುತ್ತಾನೋ ಅದರ ಕುರಿತು ಜಕರೀಯನು ಆಶ್ಚರ್ಯಗೊಂಡನು. ಯಾಕಂದರೆ, ಯೆಹೋವನ ದೂತನು ಧೂಪಪೀಠದ ಬಲಗಡೆಯಲ್ಲಿ ನಿಂತಿದ್ದಾನೆ! ಮುಪ್ಪಿನ ಯಾಜಕನು ತತ್ತರಗೊಂಡು ಭಯಹಿಡಿದವನಾದನು. ಆದರೆ ದೇವದೂತನು ಹೇಳುವುದು: “ಜಕರೀಯಾ, ಭಯಪಡಬೇಡ; ನಿನ್ನ ವಿಜ್ಞಾಪನೆ ದೇವರಿಗೆ ಮುಟ್ಟಿತು; ನಿನ್ನ ಹೆಂಡತಿಯಾದ ಎಲಿಸಬೇತಳು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು.” ಹೌದು, ಯೆಹೋವನು ಎಲಿಸಬೇತ ಮತ್ತು ಜಕರೀಯರ ಶ್ರದ್ಧಾಪೂರ್ವಕವಾದ ಪ್ರಾರ್ಥನೆಗಳನ್ನು ಕೇಳಿದ್ದಾನೆ.—ಲೂಕ 1:8-13.
ದೇವದೂತನು ಕೂಡಿಸಿದ್ದು: “ನಿನಗೆ ಸಂತೋಷವೂ ಉಲ್ಲಾಸವೂ ಉಂಟಾಗುವದು; ಮತ್ತು ಅವನು ಹುಟ್ಟಿದ್ದಕ್ಕೆ ಬಹು ಜನರು ಸಂತೋಷಪಡುವರು. ಅವನು ಕರ್ತನ ದೃಷ್ಟಿಯಲ್ಲಿ ಮಹಾಪುರುಷನಾಗಿರುವನು; ದ್ರಾಕ್ಷಾರಸವನ್ನಾಗಲಿ ಯಾವ ಮದ್ಯವನ್ನಾಗಲಿ ಕುಡಿಯದವನಾಗಿರುವನು; ಅವನು ಹುಟ್ಟಿದಂದಿನಿಂದಲೂ ಪವಿತ್ರಾತ್ಮಭರಿತನಾಗಿರುವನು.” ದೇವರ ಪವಿತ್ರಾತ್ಮದಿಂದ ಭರಿತನಾಗಿದ್ದು ಯೋಹಾನನು ಜೀವಾವಧಿಯ ನಾಜೀರನಾಗಿರುವನು. ದೇವದೂತನು ಮುಂದುವರಿಸಿದ್ದು: “ಇಸ್ರಾಯೇಲ್ಯರಲ್ಲಿ ಅನೇಕರನ್ನು ಅವರ ದೇವರಾಗಿರುವ ಕರ್ತನ ಕಡೆಗೆ ತಿರುಗಿಸುವನು. ಅವನು ಆತನ ಮುಂದೆ ಹೋಗಿ ಎಲೀಯನ ಗುಣಶಕ್ತಿಗಳಿಂದ ಕೂಡಿದವನಾಗಿ ತಂದೆಗಳ ಹೃದಯವನ್ನು ಮಕ್ಕಳ ಕಡೆಗೂ ಹಟಹಿಡಿದವರನ್ನು ನೀತಿವಂತರ ಜ್ಞಾನದ ಕಡೆಗೂ ತಿರುಗಿಸಿ ಸಿದ್ಧವಾದ ಜನವನ್ನು ಕರ್ತನಿಗೆ ಒದಗಿಸುವನು.”—ಲೂಕ 1:14-17.
ಜಕರೀಯನು ಕೇಳುವುದು: “ಇದನ್ನು ನಾನು ಯಾತರಿಂದ ತಿಳುಕೊಳ್ಳಲಿ? ನಾನು ಮುದುಕನು; ನನ್ನ ಹೆಂಡತಿಯೂ ದಿನಹೋದವಳು.” ದೇವದೂತನು ಉತ್ತರಿಸುವುದು: “ನಾನು ದೇವರ ಸನ್ನಿಧಿಯಲ್ಲಿ ನಿಲ್ಲುವ ಗಬ್ರಿಯೇಲನು; ನಿನ್ನ ಕೂಡ ಮಾತಾಡಿ ಈ ಶುಭವರ್ತಮಾನವನ್ನು ನಿನಗೆ ತಿಳಿಸುವದಕ್ಕಾಗಿ ನಾನು ಕಳುಹಿಸಲ್ಪಟ್ಟಿದ್ದೇನೆ. ಈ ನನ್ನ ಮಾತು ತಕ್ಕ ಸಮಯದಲ್ಲಿ ನೆರವೇರುವದು; ಆದರೆ ನೀನು ಅದನ್ನು ನಂಬದೆಹೋದದ್ದರಿಂದ ಅದೆಲ್ಲಾ ಸಂಭವಿಸುವ ದಿನದ ವರೆಗೂ ಮಾತನಾಡಲಾರದೆ ಮೂಕನಾಗಿರುವಿ.” ಜಕರೀಯನು ಪವಿತ್ರ ಸ್ಥಳದಿಂದ ಹೊರಬಂದಾಗ, ಅವನಿಗೆ ಮಾತನಾಡಲು ಸಾಧ್ಯವಿರಲಿಲ್ಲ, ಮತ್ತು ಜನರು ಅವನು ಅದ್ಭುತ ದರ್ಶನವನ್ನು ಕಂಡಿರಬೇಕೆಂದು ಗ್ರಹಿಸಿದರು. ತನ್ನ ಅಭಿಪ್ರಾಯಗಳನ್ನು ತಿಳಿಸಲು ಭಾವಾಭಿನಯಗಳನ್ನು ಉಪಯೋಗಿಸಿ, ಕೈಸನ್ನೆಗಳನ್ನು ಮಾಡುವುದು ಮಾತ್ರ ಅವನಿಂದ ಸಾಧ್ಯವಿತ್ತು. ಅವನ ಸಾರ್ವಜನಿಕ ಸೇವೆಯು ಮುಗಿದ ಬಳಿಕ, ಅವನು ತನ್ನ ಮನೆಗೆ ಹಿಂದಿರುಗುತ್ತಾನೆ.—ಲೂಕ 1:18-23.
ಸಂತೋಷಕ್ಕೆ ಕಾರಣ
ವಾಗ್ದಾನಿಸಿದಂತೆ, ಎಲಿಸಬೇತಳು ಹರ್ಷಿಸಲು ಬೇಗನೆ ಕಾರಣ ಒದಗಿ ಬರುತ್ತದೆ. ಬಂಜೆತನದ ನಿಂದೆಯನ್ನು ತೆಗೆದುಹಾಕುತ್ತಾ, ಅವಳು ಗರ್ಭಿಣಿಯಾದಳು. ಅವಳ ಸಂಬಂಧಿಯಾಗಿದ್ದ ಮರಿಯಳು ಸಹ ಹರ್ಷಿತಳಾದಳು, ಯಾಕಂದರೆ ಅದೇ ದೇವದೂತನು—ಗಬ್ರಿಯೇಲನು—ಅವಳಿಗೆ ಹೇಳುವುದು: “ಇಗೋ, ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ; ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಮಹಾಪುರುಷನಾಗಿ ಪರಾತ್ಪರನ ಕುಮಾರನೆನಿಸಿಕೊಳ್ಳುವನು; ಇದಲ್ಲದೆ ದೇವರಾಗಿರುವ ಕರ್ತನು [ಯೆಹೋವನು, NW.] ಆತನ ಮೂಲಪಿತನಾದ ದಾವೀದನ ಸಿಂಹಾಸನವನ್ನು ಆತನಿಗೆ ಕೊಡುವನು.” “ಕರ್ತನ [ಯೆಹೋವನ, NW.] ದಾಸಿ”ಯ ಪಾತ್ರವನ್ನು ನಿರ್ವಹಿಸಲು ಮರಿಯಳು ಮನಃಪೂರ್ವಕವಾಗಿ ಸಿದ್ಧಳಾಗಿದ್ದಳು.—ಲೂಕ 1:24-38.
ಮರಿಯಳು ಮಲೆನಾಡಿನ ಯೆಹೂದದಲ್ಲಿರುವ ಒಂದೂರಿಗೆ, ಜಕರೀಯ ಮತ್ತು ಎಲಿಸಬೇತಳ ಮನೆಗೆ ತರ್ವೆಯಾಗಿ ಹೋಗುತ್ತಾಳೆ. ಮರಿಯಳ ವಂದನೆಯ ಶಬ್ದವನ್ನು ಕೇಳುತ್ತಲೇ ಎಲಿಸಬೇತಳ ಗರ್ಭದಲ್ಲಿದ್ದ ಶಿಶು ಹಾರಾಡುತ್ತದೆ. ದೇವರ ಪವಿತ್ರಾತ್ಮದ ಫ್ರಭಾವದ ಕೆಳಗೆ, ಎಲಿಸಬೇತಳು ಮಹಾಧ್ವನಿಯಿಂದ ಕೂಗುತ್ತಾಳೆ: “ನೀನು ಸ್ತ್ರೀಯರೊಳಗೆ ಆಶೀರ್ವಾದ ಹೊಂದಿದವಳು, ಮತ್ತು ನಿನ್ನಲ್ಲಿ ಹುಟ್ಟುವ ಕೂಸು ಆಶೀರ್ವಾದ ಹೊಂದಿದ್ದು ನನ್ನ ಸ್ವಾಮಿಯ ತಾಯಿಯು ನನ್ನ ಬಳಿಗೆ ಬರುವಷ್ಟು ಭಾಗ್ಯ ನನಗೆ ಎಲ್ಲಿಂದಾಯಿತು? ಇಗೋ, ನಿನ್ನ ವಂದನೆಯು ನನ್ನ ಕಿವಿಗೆ ಬೀಳುತ್ತಲೇ ಕೂಸು ನನ್ನ ಗರ್ಭದಲ್ಲಿ ಹಾರಾಡಿತು. ನಂಬಿದವಳಾದ ನೀನು ಧನ್ಯಳೇ; ಕರ್ತನು ನಿನಗೆ ಹೇಳಿದ ಮಾತುಗಳು ನೆರವೇರುವವು.” ಮರಿಯಳು ಮಹಾ ಸಂತೋಷದಿಂದ ಪ್ರತಿಕ್ರಿಯಿಸುತ್ತಾಳೆ. ಅವಳು ಎಲಿಸಬೇತಳ ಬಳಿಯಲ್ಲಿ ಸುಮಾರು ಮೂರು ತಿಂಗಳು ಇರುತ್ತಾಳೆ.—ಲೂಕ 1:39-56.
ಯೋಹಾನನು ಜನಿಸುತ್ತಾನೆ
ಜಕರೀಯ ಮತ್ತು ಎಲಿಸಬೇತರಿಗೆ ಸಕಾಲದಲ್ಲಿ ಒಬ್ಬ ಮಗನು ಜನಿಸುತ್ತಾನೆ. ಎಂಟನೆಯ ದಿನದಲ್ಲಿ, ಶಿಶುವಿಗೆ ಸುನ್ನತಿಮಾಡಲ್ಪಡುತ್ತದೆ. ಸಂಬಂಧಿಗಳು ಹುಡುಗನನ್ನು ಜಕರೀಯ ಎಂದು ಕರೆಯಲು ಬಯಸುತ್ತಾರೆ, ಆದರೆ “ಅದು ಬೇಡ, ಯೋಹಾನನೆಂದು ಹೆಸರಿಡಬೇಕು,” ಎಂದು ಎಲಿಸಬೇತಳು ಹೇಳುತ್ತಾಳೆ. ಇನ್ನೂ ಮೂಕನಾಗಿರುವ ಅವಳ ಗಂಡನು ಒಪ್ಪಿದನೊ? ಅವನು ಒಂದು ಹಲಿಗೆಯ ಮೇಲೆ “ಯೋಹಾನನೆಂತಲೇ ಅದರ ಹೆಸರು,” ಎಂದು ಬರೆದನು. ಆ ಕೂಡಲೇ ಜಕರೀಯನ ನಾಲಿಗೆ ಸಡಿಲಿಸಿತು, ಮತ್ತು ಅವನು ಮಾತಾಡಲಾರಂಭಿಸಿ, ಯೆಹೋವನನ್ನು ಕೊಂಡಾಡಿದನು.—ಲೂಕ 1:57-66.
ಆನಂದಭರಿತನಾದ ಯಾಜಕನು ಪವಿತ್ರಾತ್ಮಭರಿತನಾಗಿ ಪ್ರವಾದಿಸುತ್ತಾನೆ. ವಾಗ್ದಾನಿತ ವಿಮೋಚಕನು—‘ದಾವೀದನ ಮನೆತನದಲ್ಲಿ ರಕ್ಷಣೆಯ ಕೊಂಬು’—ಎಲ್ಲಾ ಜನಾಂಗಗಳಿಗಾಗಿ ಆಶೀರ್ವಾದದ ಒಂದು ಸಂತತಿಯ ಕುರಿತಾದ ಅಬ್ರಹಾಮ ಸಂಬಂಧಿತ ಒಡಂಬಡಿಕೆಯೊಂದಿಗೆ ಹೊಂದಿಕೆಯಲ್ಲಿ ಈಗಾಗಲೆ ಎಬ್ಬಿಸಲ್ಪಟ್ಟಿದ್ದಾನೋ ಎಂಬಂತೆ ಅವನು ಮಾತಾಡುತ್ತಾನೆ. (ಆದಿಕಾಂಡ 22:15-18) ಮೆಸ್ಸೀಯನ ಅಗ್ರಗಾಮಿಯಂತೆ, ಅದ್ಭುತವಾಗಿ ಜನಿಸಿದ ಜಕರೀಯನ ಸ್ವಂತ ಮಗನು ‘ಜನರಿಗೆ ರಕ್ಷಣೆಯ ತಿಳಿವಳಿಕೆಯನ್ನು ಕೊಡಲಿಕ್ಕಾಗಿ ಯೆಹೋವನ ಮುಂದೆ ಹೋಗು’ ವನು. ವರ್ಷಗಳು ಗತಿಸಿದಂತೆ, ಯೋಹಾನನು ಬೆಳೆಯುತ್ತಿದ್ದನು ಮತ್ತು ಆತ್ಮದಲ್ಲಿ ಪ್ರಬಲನಾಗುತ್ತಿದ್ದನು.—ಲೂಕ 1:67-80.
ಹೇರಳವಾಗಿ ಆಶೀರ್ವದಿಸಲ್ಪಟ್ಟದ್ದು
ಜಕರೀಯ ಮತ್ತು ಎಲಿಸಬೇತರು ನಂಬಿಕೆ ಮತ್ತು ತಾಳ್ಮೆಯ ಉತ್ತಮ ಮಾದರಿಗಳಾಗಿದ್ದರು. ಅವರು ಯೆಹೋವನ ಮೇಲೆ ಕಾಯಬೇಕ್ತಿತಾದರೂ, ಅವರು ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸುವುದನ್ನು ಮುಂದುವರಿಸಿದರು, ಮತ್ತು ಅವರು ಪ್ರಾಯದಲ್ಲಿ ತೀರ ವೃದ್ಧರಾಗಿರುವಾಗಲೇ ಅವರ ಅತ್ಯಂತ ಮಹತ್ತಾದ ಆಶೀರ್ವಾದಗಳು ಲಭಿಸಿದವು.
ಆದರೂ, ಎಲಿಸಬೇತ್ ಮತ್ತು ಜಕರೀಯರು ಎಂತಹ ಆಶೀರ್ವಾದಗಳನ್ನು ಅನುಭವಿಸಿದರು! ದೇವರ ಆತ್ಮದ ಪ್ರಭಾವದಿಂದ, ಅವರಿಬ್ಬರೂ ಪ್ರವಾದಿಸಿದರು. ಮೆಸ್ಸೀಯನ ಮುನ್ಸೂಚಕನಾದ ಸ್ನಾನಿಕ ಯೋಹಾನನ ಹೆತ್ತವರೂ ಬೋಧಕರೂ ಆಗುವ ಸುಯೋಗವು ಅವರಿಗೆ ಕೊಡಲ್ಪಟ್ಟಿತು. ಅದಲ್ಲದೆ, ದೇವರು ಅವರನ್ನು ನೀತಿವಂತರೆಂದು ಎಣಿಸಿದನು. ತದ್ರೀತಿಯಲ್ಲಿ, ಇಂದು ಒಂದು ದೈವಿಕ ಜೀವನಪಥವನ್ನು ಅನುಸರಿಸುವವರು ದೇವರೊಂದಿಗೆ ಒಂದು ನೀತಿಯ ನಿಲುವುಳ್ಳವರಾಗಿರಬಲ್ಲರು ಮತ್ತು ಯೆಹೋವನ ಆಜ್ಞೆಗಳಲ್ಲಿ ನಿರ್ದೋಷಿಗಳಾಗಿ ನಡೆದುದಕ್ಕಾಗಿ, ಅನೇಕ ಆಶೀರ್ವದಿತ ಬಹುಮಾನಗಳನ್ನು ಪಡೆಯವರು.