ಅಧ್ಯಾಯ 34
ಅವನ ಅಪೊಸ್ತಲರನ್ನು ಆರಿಸುವದು
ಯೇಸುವು ದೇವರ ಕುರಿಮರಿಯೆಂದು ಸ್ನಾನಿಕನಾದ ಯೋಹಾನನು ಪರಿಚಯಿಸಿದ ಬಳಿಕ ಮತ್ತು ಯೇಸುವು ತನ್ನ ಬಹಿರಂಗ ಶುಶ್ರೂಪಷೆಯನ್ನು ಆರಂಭಿಸಿದ ನಂತರ, ಈಗಾಗಲೇ ಸುಮಾರು ಒಂದೂವರೆ ವರ್ಷಗಳಾಗಿದ್ದವು. ಆ ಸಮಯದಲ್ಲಿ ಅಂದ್ರೆಯ, ಸೀಮೋನ ಪೇತ್ರ, ಯೋಹಾನ ಮತ್ತು ಪ್ರಾಯಶಃ ಯಾಕೋಬ (ಯೋಹಾನನ ಸಹೋದರನು) ಹಾಗೂ ಫಿಲಿಪ್ಪ ಮತ್ತು ನತಾನಯೇಲನು (ಬಾರ್ತೊಲೊಮಾಯನೆಂದೂ ಕರೆಯಲ್ಪಟ್ಟಿದ್ದಾನೆ) ಅವನ ಮೊದಲ ಶಿಷ್ಯರಾಗಿದ್ದರು. ಸಮಯ ಕಳೆದಂತೆ, ಕ್ರಿಸ್ತನನ್ನು ಹಿಂಬಾಲಿಸುವದರಲ್ಲಿ ಅವರೊಂದಿಗೆ ಇನ್ನಿತರ ಅನೇಕರು ಸೇರಿಕೊಂಡರು.
ಈಗ ಯೇಸುವು ತನ್ನ ಅಪೊಸ್ತಲರನ್ನು ಆರಿಸುವದಕ್ಕೆ ಸಿದ್ಧನಾಗಿದ್ದನು. ಇವರು ಆತನ ಆಪ್ತ ಸಹವಾಸಿಗಳಾಗಲಿದ್ದರು, ಇವರಿಗೆ ವಿಶೇಷ ತರಬೇತಿ ನೀಡಲ್ಪಡಲಿಕ್ಕಿತ್ತು. ಆದರೆ ಅವರನ್ನು ಆರಿಸುವ ಮೊದಲು, ಯೇಸುವು ಬೆಟ್ಟಕ್ಕೆ ಹೋಗಿ, ಇಡೀ ರಾತ್ರಿಯನ್ನು ಪ್ರಾರ್ಥನೆಯಲ್ಲಿ ಕಳೆಯುತ್ತಾನೆ, ಪ್ರಾಯಶಃ ವಿವೇಕ ಮತ್ತು ದೇವರ ಆಶೀರ್ವಾದಕ್ಕಾಗಿ ಬೇಡಿದ್ದಿರಬೇಕು. ಬೆಳಗಾದ ಮೇಲೆ, ಅವನು ತನ್ನ ಶಿಷ್ಯರನ್ನು ಕರೆದು, ಅವರಿಂದ 12 ಜನರನ್ನು ಆರಿಸುತ್ತಾನೆ. ಆದರೂ, ಅವರಿನ್ನೂ ಯೇಸುವಿನ ವಿದ್ಯಾರ್ಥಿಗಳಾಗಿರುವದನ್ನು ಮುಂದುವರಿಸುವದರಿಂದ, ಅವರನ್ನು ಶಿಷ್ಯರೆಂದೂ ಇನ್ನೂ ಕರೆಯಲಾಗುತ್ತಿತ್ತು.
ಯೇಸುವು ಆರಿಸಿದ್ದವರಲ್ಲಿ ಆರು ಮಂದಿ, ಮೇಲೆ ಹೆಸರಿಸಲ್ಪಟ್ಟಿದ್ದಾರೆ, ಅವರು ಆತನ ಮೊದಲ ಶಿಷ್ಯರಾಗಿದ್ದವರು. ಸುಂಕ ವಸೂಲಿಯ ಆಫೀಸಿನಿಂದ ಯೇಸುವಿನಿಂದ ಕರೆಯಲ್ಪಟ್ಟ ಮತ್ತಾಯನು ಕೂಡಾ ಆರಿಸಲ್ಪಟ್ಟನು. ಇನ್ನಿತರ ಐದು ಜನ ಆರಿಸಲ್ಪಟ್ಟವರು ಯೂದನು (ತದ್ದಾಯನೆಂದೂ ಕರೆಯಲ್ಪಟ್ಟಿದ್ದಾನೆ), ಇಸ್ಕರಿಯೋತ ಯೂದನು, ಕಾನಾನ್ಯದವನಾದ ಸೀಮೋನ, ತೋಮನು ಮತ್ತು ಅಲ್ಫಾಯನ ಮಗನಾದ ಯಾಕೋಬನು. ಈ ಯಾಕೋಬನನ್ನು ಚಿಕ್ಕವನೆನಿಸಿಕೊಳ್ಳುವ ಯಾಕೋಬನು ಎಂದೂ ಕರೆಯಲಾಗುತ್ತಿತ್ತು. ಪ್ರಾಯಶಃ ಇನ್ನೊಬ್ಬ ಅಪೊಸ್ತಲನಾದ ಯಾಕೋಬನಿಗಿಂತ ದೇಹಧಾರ್ಡ್ಯದಲ್ಲಿ ಗಿಡ್ಡ ಅಥವಾ ಪ್ರಾಯದಲ್ಲಿ ಚಿಕ್ಕವನಾಗಿದ್ದ ಕಾರಣದಿಂದಿರಬಹುದು.
ಕೆಲವು ಸಮಯಗಳಿಂದ ಈ ಹನ್ನೆರಡು ಮಂದಿ ಯೇಸುವಿನೊಂದಿಗೆ ಇದ್ದರು, ಮತ್ತು ಅವನು ಅವರನ್ನು ಚೆನ್ನಾಗಿ ಅರಿತನು. ವಾಸ್ತವದಲ್ಲಿ, ಅವರಲ್ಲಿ ಕೆಲವರು ಅವನ ಸ್ವಂತ ಸಂಬಂಧಿಕರಾಗಿದ್ದರು. ಯಾಕೋಬನೂ, ಅವನ ಸಹೋದರ ಯೋಹಾನನೂ ಯೇಸುವಿನ ಚಿಕ್ಕಮ್ಮನ ಮಕ್ಕಳಾಗಿದ್ದರು ಎಂಬದು ವ್ಯಕ್ತ. ಮತ್ತು ಅಲ್ಫಾಯನು ಯೇಸುವಿನ ದತ್ತ ತಂದೆಯಾದ ಯೋಸೇಫನ ಸಹೋದರನಾಗಿದ್ದಿರಬಹುದು. ಆದುದರಿಂದ ಅಲ್ಫಾಯನ ಮಗನಾದ ಅಪೊಸ್ತಲ ಯಾಕೋಬನು ಯೇಸುವಿನ ಸೋದರನಂಟನೂ ಆಗಿರುವನು.
ಯೇಸುವಿಗೆ ಅಪೊಸ್ತಲರ ಹೆಸರುಗಳನ್ನು ನೆನಪಿಸಿಕೊಳ್ಳುವುದರಲ್ಲಿ ಸಮಸ್ಯೆಯಿರಲಿಲ್ಲ ನಿಶ್ಚಯ. ಆದರೆ, ನೀವು ಅವುಗಳನ್ನು ನೆನಪಿಸಶಕ್ತರೋ? ಒಳ್ಳೆಯದು, ಸೀಮೋನನೆಂಬವರು ಇಬ್ಬರು, ಯಾಕೋಬನೆಂಬವರು ಇಬ್ಬರು, ಯೂದನೆಂಬವರು ಇಬ್ಬರು, ಸೀಮೋನನಿಗೆ ಒಬ್ಬ ಸಹೋದರ ಅಂದ್ರೆಯನು ಮತ್ತು ಯಾಕೋಬನಿಗೆ ಒಬ್ಬ ಸಹೋದರ ಯೋಹಾನನು ಇದ್ದಾರೆಂದು ನೆನಪಿಸಿರಿ. ಇದು ಎಂಟು ಅಪೊಸ್ತಲರುಗಳ ಹೆಸರುಗಳನ್ನು ನೆನಪಿಸಲು ಕೀಲಿಕೈ. ಇನ್ನಿತರ ನಾಲ್ವರು ಸುಂಕ ವಸೂಲಿಗಾರ (ಮತ್ತಾಯ), ಇನ್ನೊಬ್ಬನು ಕೊನೆಯಲ್ಲಿ ಸಂದೇಹಪಟ್ಟವನು (ತೋಮನು), ಮರದ ಕೆಳಗಿದ್ದಾಗ ಕರೆಯಲ್ಪಟ್ಟವನು (ನತಾನಯೇಲನು), ಮತ್ತು ಅವನ ಗೆಳೆಯ ಫಿಲಿಪ್ಪನು.
ಅಪೊಸ್ತಲರಲ್ಲಿ 11 ಮಂದಿ ಯೇಸುವಿನ ಸ್ವಂತ ಕ್ಷೇತ್ರವಾದ ಗಲಿಲಾಯದವರು. ನತಾನಯೇಲನು ಕಾನಾ ಊರಿನವನು, ಫಿಲಿಪ್ಪ, ಪೇತ್ರ ಮತ್ತು ಅಂದ್ರೆಯರು ಮೂಲತಃ ಬೇತ್ಸಾಯಿದದವರು. ಆದಾಗ್ಯೂ ತದನಂತರ ಪೇತ್ರ ಮತ್ತು ಅಂದ್ರೆಯರು, ಮತ್ತಾಯನು ಎಲ್ಲಿ ಜೀವಿಸುತ್ತಿದ್ದನೋ ಅಲ್ಲಿ ಅಂದರೆ ಕಪೆರ್ನೌಮಿಗೆ ಸ್ಥಳಾಂತರಿಸಿದಿರ್ದಬಹುದು. ಯಾಕೋಬ, ಯೋಹಾನರು ಮೀನು ವ್ಯವಸಾಯದಲ್ಲಿದ್ದು, ಕಪೆರ್ನೌಮಿನ ಆಸುಪಾಸಿನಲ್ಲಿ ಜೀವಿಸಿದ್ದಿರಬೇಕು. ಯೇಸುವಿಗೆ ಕೊನೆಯಲ್ಲಿ ದ್ರೋಹ ಬಗೆದ ಇಸ್ಕಾರಿಯೋತ ಯೂದನು ಯೂದಾಯದಿಂದ ಬಂದ ಏಕ ಮಾತ್ರ ಅಪೊಸ್ತಲನಾಗಿದ್ದನು. ಮಾರ್ಕ 3:13-19; ಲೂಕ 6:12-16.
▪ ಯೇಸುವಿನ ಸಂಬಂಧಿಕರಾಗಿದ್ದಿರಬಹುದಾದ ಅಪೊಸ್ತಲರು ಯಾರು?
▪ ಯೇಸುವಿನ ಅಪೊಸ್ತಲರು ಯಾರು, ಮತ್ತು ಅವರ ಹೆಸರುಗಳನ್ನು ನೀವು ಹೇಗೆ ನೆನಪಿಸಬಹುದು?
▪ ಯಾವ ಕ್ಷೇತ್ರಗಳಿಂದ ಅಪೊಸ್ತಲರು ಬಂದಿದ್ದರು?