-
ದೇವರೊಂದಿಗೆ ನಡೆಯುವುದರಲ್ಲಿ “ನ್ಯಾಯವನ್ನು ಆಚರಿಸುವದು”ಯೆಹೋವನ ಸಮೀಪಕ್ಕೆ ಬನ್ನಿರಿ
-
-
13 ದೇವರ ನ್ಯಾಯದ ಕರುಣಾಭರಿತ ಸ್ವಭಾವವನ್ನು ನಾವು ಗಣ್ಯಮಾಡುವುದಾದರೆ, ನಮಗೆ ನಿಜವಾಗಿ ಸಂಬಂಧಿಸದಂಥ ಅಥವಾ ಅಷ್ಟೇನೂ ಮಹತ್ವವಲ್ಲದ ವಿಷಯದಲ್ಲಿ ಇತರರನ್ನು ತೀರ್ಪುಮಾಡಲು ನಾವು ತ್ವರೆಪಡಬಾರದು. ತನ್ನ ಪರ್ವತಪ್ರಸಂಗದಲ್ಲಿ ಯೇಸು ಎಚ್ಚರಿಕೆ ನೀಡಿದ್ದು: “ತೀರ್ಪುಮಾಡುವುದನ್ನು ನಿಲ್ಲಿಸಿರಿ; ಆಗ ನಿಮಗೂ ತೀರ್ಪಾಗುವದಿಲ್ಲ.” (ಮತ್ತಾಯ 7:1, NW) ಲೂಕನ ವೃತ್ತಾಂತಕ್ಕನುಸಾರ, ಯೇಸು ಕೂಡಿಸಿದ್ದು: “ಅಪರಾಧಿಯೆಂದು ನಿರ್ಣಯಿಸುವುದನ್ನು ನಿಲ್ಲಿಸಿರಿ; ಆಗ ನಿಮಗೂ ಖಂಡನೆಯಾಗುವದಿಲ್ಲ.”a (ಲೂಕ 6:37, NW) ಅಪರಿಪೂರ್ಣ ಮಾನವರಲ್ಲಿರುವಂಥ, ಇತರರಿಗೆ ತೀರ್ಪುಮಾಡುವ ಪ್ರವೃತ್ತಿ ಯೇಸುವಿಗೆ ಗೊತ್ತಿತ್ತು. ಅವನಿಗೆ ಕಿವಿಗೊಡುತ್ತಿದ್ದ ಜನರಲ್ಲಿ ಯಾವನಿಗಾದರೂ ಇತರರನ್ನು ಕಠಿನವಾಗಿ ತೀರ್ಪುಮಾಡುವ ಅಭ್ಯಾಸವಿದ್ದಲ್ಲಿ ಅವನದನ್ನು ನಿಲ್ಲಿಸಬೇಕಿತ್ತು.
14. ನಾವು ಏಕೆ ಇತರರಿಗೆ ‘ತೀರ್ಪುಮಾಡುವುದನ್ನು ನಿಲ್ಲಿಸಬೇಕು’?
14 ನಾವು ಏಕೆ ಇತರರ ‘ತೀರ್ಪುಮಾಡುವುದನ್ನು ನಿಲ್ಲಿಸಬೇಕು’? ಒಂದು ಕಾರಣವೇನೆಂದರೆ, ನಮಗಿರುವ ಅಧಿಕಾರವು ಸೀಮಿತವಾಗಿರುತ್ತದೆ. ಶಿಷ್ಯ ಯಾಕೋಬನು ನಮಗೆ ಮರುಜ್ಞಾಪನ ಕೊಟ್ಟಿರುವುದು: ‘ನಿಯಮದಾತನೂ, ನ್ಯಾಯಾಧಿಪತಿಯೂ ಒಬ್ಬನೇ’—ಯೆಹೋವನು. ಆದುದರಿಂದ ಯಾಕೋಬನು ನೇರವಾಗಿ ಕೇಳುವುದು: “ನಿನ್ನ ನೆರೆಯವನ ವಿಷಯದಲ್ಲಿ ತೀರ್ಪುಮಾಡುವದಕ್ಕೆ ನೀನು ಯಾರು?” (ಯಾಕೋಬ 4:12; ರೋಮಾಪುರ 14:1-4) ಅದಲ್ಲದೆ, ನಮ್ಮ ಪಾಪಪೂರ್ಣ ಸ್ವಭಾವದಿಂದಾಗಿ ನಾವು ಅತಿ ಸುಲಭವಾಗಿಯೇ ತಪ್ಪಾದ ತೀರ್ಪುಗಳನ್ನು ಮಾಡಬಲ್ಲೆವು. ಪೂರ್ವಾಭಿಪ್ರಾಯ, ಅಭಿಮಾನಕ್ಕೆ ಬಿದ್ದಿರುವ ಪೆಟ್ಟು, ಹೊಟ್ಟೆಕಿಚ್ಚು, ಮತ್ತು ಸ್ವನೀತಿಯೇ ಮುಂತಾದವುಗಳು ಸೇರಿರುವ ಅನೇಕ ಮನೋಭಾವಗಳು ಮತ್ತು ಹೇತುಗಳು, ನಾವು ನಮ್ಮ ಜೊತೆ ಮಾನವರನ್ನು ದೃಷ್ಟಿಸುವ ವಿಧವನ್ನೇ ವಕ್ರಗೊಳಿಸಬಲ್ಲವು. ನಮ್ಮಲ್ಲಿ ಇನ್ನೂ ಅನೇಕ ಇತಿಮಿತಿಗಳಿವೆ, ಮತ್ತು ಇವುಗಳ ಕುರಿತಾದ ಮನವರಿಕೆಯು ನಮ್ಮನ್ನು ಇತರರ ತಪ್ಪುಗಳನ್ನು ಹುಡುಕಲು ತ್ವರೆಪಡುವುದರಿಂದ ತಡೆಯತಕ್ಕದ್ದು. ಇತರರ ಹೃದಯದಲ್ಲೇನಿದೆಯೆಂಬುದು ನಮಗೆ ಗೊತ್ತಿಲ್ಲ; ಇಲ್ಲವೆ ಅವರ ವೈಯಕ್ತಿಕ ಪರಿಸ್ಥಿತಿಗಳೆಲ್ಲವನ್ನೂ ನಾವು ಬಲ್ಲವರಲ್ಲ. ಹೀಗಿರಲಾಗಿ ಜೊತೆ ಕ್ರೈಸ್ತರಿಗೆ ತಪ್ಪು ಹೇತುಗಳಿವೆಯೆಂದು ಆಪಾದಿಸಲು ಇಲ್ಲವೆ ದೇವರ ಸೇವೆಯಲ್ಲಿ ಅವರ ಪ್ರಯತ್ನಗಳನ್ನು ಟೀಕಿಸಲು ನಾವಾರು? ನಮ್ಮ ಸಹೋದರ ಸಹೋದರಿಯರ ಬಲಹೀನತೆಗಳ ಮೇಲೆ ಕೇಂದ್ರೀಕರಿಸುವ ಬದಲಿಗೆ ಅವರಲ್ಲಿರುವ ಒಳಿತನ್ನು ಹುಡುಕುವ ಮೂಲಕ ಯೆಹೋವನನ್ನು ಅನುಕರಿಸುವುದು ಅದೆಷ್ಟು ಹೆಚ್ಚು ಉತ್ತಮ!
15. ದೇವರ ಆರಾಧಕರ ನಡುವೆ ಯಾವ ರೀತಿಯ ಮಾತುಗಳಿಗೆ ಮತ್ತು ವ್ಯವಹಾರಕ್ಕೆ ಆಸ್ಪದವಿಲ್ಲ, ಮತ್ತು ಏಕೆ?
15 ನಮ್ಮ ಕುಟುಂಬ ಸದಸ್ಯರ ಕುರಿತಾಗಿ ಏನು? ಇಂದಿನ ಲೋಕದಲ್ಲಿ, ಶಾಂತಿಯ ಬೀಡಾಗಿರಬೇಕಾದ ಮನೆಯಲ್ಲೇ ಅತ್ಯಂತ ಕಠೋರವಾದ ಕೆಲವು ತೀರ್ಪುಗಳು ಕೊಡಲ್ಪಡುವುದು ವಿಷಾದನೀಯವೇ ಸರಿ. ಒಬ್ಬರನ್ನೊಬ್ಬರು ಸದಾ ದೂಷಿಸುವ ಗಂಡಹೆಂಡಂದಿರು ಅಥವಾ ತಮ್ಮ ಕುಟುಂಬ ಸದಸ್ಯರನ್ನು ಸದಾ ಬೈಗುಳಗಳಿಂದ ಜರೆಯುತ್ತಾ ಅಥವಾ ಶಾರೀರಿಕ ದೌರ್ಜನ್ಯಕ್ಕೊಳಪಡಿಸುತ್ತಾ “ದಂಡನೆ ವಿಧಿಸುವ” ಹೆತ್ತವರ ಕುರಿತು ಕೇಳಿಸಿಕೊಳ್ಳುವುದೇನೂ ಅಸಾಮಾನ್ಯವಲ್ಲ. ಆದರೆ ಅಣಕದ ಮಾತುಗಳು, ಕಟುವಾದ ವ್ಯಂಗ್ಯನುಡಿ, ಮತ್ತು ಶಾರೀರಿಕ ದುರುಪಚಾರ ಮುಂತಾದವುಗಳಿಗೆ ದೇವರ ಆರಾಧಕರ ನಡುವೆ ಯಾವುದೇ ಆಸ್ಪದವಿಲ್ಲ. (ಎಫೆಸ 4:29, 31; 5:33; 6:4) “ತೀರ್ಪುಮಾಡುವುದನ್ನು ನಿಲ್ಲಿಸಿರಿ” ಮತ್ತು “ಖಂಡನೆಮಾಡುವುದನ್ನು ನಿಲ್ಲಿಸಿರಿ” ಎಂಬ ಯೇಸುವಿನ ಸಲಹೆಯು ನಾವು ಮನೆಯಲ್ಲಿರುವಾಗ ಅನ್ವಯವಾಗುವುದಿಲ್ಲ ಎಂದಲ್ಲ. ನ್ಯಾಯವನ್ನು ಆಚರಿಸುವುದರಲ್ಲಿ, ಯೆಹೋವನು ನಮ್ಮೊಂದಿಗೆ ವ್ಯವಹರಿಸುವ ರೀತಿಯಲ್ಲೇ ನಾವು ಇತರರೊಂದಿಗೆ ವ್ಯವಹರಿಸುವುದು ಸೇರಿದೆಯೆಂಬುದನ್ನು ನೆನಪಿಗೆ ತನ್ನಿರಿ. ನಮ್ಮ ದೇವರು ನಮ್ಮೊಂದಿಗೆ ಎಂದೂ ಕ್ರೂರವಾಗಿ ಅಥವಾ ಕಠಿನವಾಗಿ ವ್ಯವಹರಿಸುವುದಿಲ್ಲವಲ್ಲಾ. ಬದಲಿಗೆ, ತನ್ನನ್ನು ಪ್ರೀತಿಸುವವರ ಕಡೆಗೆ ಆತನು “ಕರುಣಾಸಾಗರನು” ಆಗಿದ್ದಾನೆ. (ಯಾಕೋಬ 5:11) ನಮಗೆ ಅನುಕರಿಸಲಿಕ್ಕಾಗಿ ಎಂಥ ಅದ್ಭುತಕರ ಮಾದರಿಯಿದು!
-
-
ದೇವರೊಂದಿಗೆ ನಡೆಯುವುದರಲ್ಲಿ “ನ್ಯಾಯವನ್ನು ಆಚರಿಸುವದು”ಯೆಹೋವನ ಸಮೀಪಕ್ಕೆ ಬನ್ನಿರಿ
-
-
a ಕೆಲವು ಭಾಷಾಂತರಗಳು “ತೀರ್ಪುಮಾಡಬೇಡಿರಿ” ಮತ್ತು “ಅಪರಾಧಿಯೆಂದು ನಿರ್ಣಯಿಸಬೇಡಿರಿ” ಎಂದು ಹೇಳುತ್ತವೆ. ಅಂಥ ತರ್ಜುಮೆಗಳು ಕಾರ್ಯತಃ “ತೀರ್ಪುಮಾಡಲು ಆರಂಭಿಸಬೇಡಿರಿ” ಮತ್ತು “ಅಪರಾಧಿಯೆಂದು ನಿರ್ಣಯಿಸಲು ಆರಂಭಿಸಬೇಡಿರಿ” ಎಂಬುದನ್ನು ಸೂಚಿಸುತ್ತವೆ. ಆದರೆ ಮೂಲಭಾಷೆಯಲ್ಲಿ ಬೈಬಲ್ ಲೇಖಕರು ಇಲ್ಲಿ ನಿಷೇಧದ ಆಜ್ಞೆಗಳನ್ನು, ಮುಂದುವರಿಯುತ್ತಾ ಇರುವ ಕ್ರಿಯೆಯನ್ನು ವರ್ತಮಾನಕಾಲದಲ್ಲಿ ಉಪಯೋಗಿಸಿದ್ದಾರೆ. ಹೀಗೆ ಇಲ್ಲಿ ತಿಳಿಸಲ್ಪಟ್ಟಿರುವ ಕ್ರಿಯೆಗಳು ಆ ಸಮಯದಲ್ಲಿ ನಡೆಯುತ್ತಾ ಇದ್ದವು, ಆದರೆ ಅವನ್ನು ನಿಲ್ಲಿಸಬೇಕಿತ್ತು.
-