ಅಧ್ಯಾಯ 40
ಕರುಣೆಯ ಒಂದು ಪಾಠ
ಯೇಸುವು ಎಲ್ಲಿ ವಿಧವೆಯೊಬ್ಬಳ ಮಗನನ್ನು ಪುನರುತ್ಥಾನಗೊಳಿಸಿದನೋ ಆ ನಾಯಿನ್ ಊರಿನಲ್ಲಯೇ ಇನ್ನೂ ಇದ್ದಿರಬಹುದು ಅಥವಾ ಅದರ ಹತ್ತಿರದ ಪಟ್ಟಣವೊಂದಕ್ಕೆ ಪ್ರಾಯಶಃ ಭೇಟಿಕೊಡುತ್ತಿದ್ದರಬಹುದು. ಅಂಥಾ ಗಮನಾರ್ಹವಾದ ಕಾರ್ಯಗಳನ್ನು ಮಾಡುತ್ತಿರುವವನನ್ನು ಹತ್ತಿರದಿಂದ ನೋಡಲು ಸೀಮೋನನೆಂಬ ಫರಿಸಾಯನು ಬಯಸುತ್ತಾನೆ. ಆದುದರಿಂದ ಯೇಸುವಿನೊಡನೆ ಒಂದು ಊಟ ಮಾಡುವಂತೆ, ಅವನು ಯೇಸುವನ್ನು ಅಮಂತ್ರಿಸುತ್ತಾನೆ.
ಈ ಸಂದರ್ಭವನ್ನು ಸೇವಾ ಸುಯೋಗವಾಗಿ ವೀಕ್ಷಿಸುತ್ತಾ, ಯೇಸು, ತಾನು ಹಿಂದೆ ಸುಂಕ ವಸೂಲಿಯವರೊಂದಿಗೂ ಪಾಪಿಗಳೊಂದಿಗೂ ಊಟಮಾಡಲು ಹೇಗೆ ಆಮಂತ್ರಣವನ್ನು ಅಂಗೀಕರಿಸಿದ್ದನೋ ಹಾಗೆಯೇ ಇದನ್ನೂ ಅಂಗೀಕರಿಸುತ್ತಾನೆ. ಆದರೂ ಸೀಮೋನನ ಮನೆಯನ್ನು ಪ್ರವೇಶಿಸಿದಾಗ ಸಾಧಾರಣ ಅತಿಥಿಗಳಿಗೂ ದೊರೆಯುವ ಹೃತ್ಪೂರ್ವಕ ಗಮನ ಯೇಸುವಿಗೆ ದೊರೆಯಲಿಲ್ಲ.
ಧೂಳು ತುಂಬಿದ ಗಲಿಲಾಯದ ರಸ್ತೆಗಳಲ್ಲಿ ಪ್ರಯಾಣ ಮಾಡುವಾಗ ಮೆಟ್ಟು ಹಾಕಿದ ಪಾದಗಳು ಬಿಸಿಯಾಗಿಯೂ, ಕೊಳಕಾಗಿಯೂ ಇರುತ್ತವೆ. ಮತ್ತು ಅತಿಥಿಗಳ ಪಾದವನ್ನು ತಣ್ಣೀರಿನಿಂದ ತೊಳೆಯುವುದು ಸಾಮಾನ್ಯವಾದ ಅತಿಥಿ ಸತ್ಕಾರವಾಗಿದೆ. ಆದರೆ ಯೇಸು ಬಂದು ಮುಟ್ಟಿದಾಗ ಅವನ ಪಾದಗಳು ತೊಳೆಯಲ್ಪಡುವದಿಲ್ಲ. ಮತ್ತು ಸಾಮಾನ್ಯ ಸಮಾಜ ನಿಯಮವಾದ ಸ್ವಾಗತ ಚುಂಬನವೂ ಅವನಿಗೆ ದೊರೆಯುವದಿಲ್ಲ. ಮತ್ತು ಅವನ ಕೂದಲಿಗೆ ವಾಡಿಕೆಯ ಸತ್ಕಾರದ ತೈಲವೂ ಒದಗಿಸಲ್ಪಡುವದಿಲ್ಲ.
ಊಟಮಾಡುತ್ತಿರುವ ಸಮಯದಲ್ಲಿ ಅತಿಥಿಗಳು ಮೇಜಿನ ಮುಂದೆ ಒರಗಿದಾಗ, ಆಮಂತ್ರಿಸಲ್ಪಟ್ಟಿರದ ಒಬ್ಬ ಸ್ತ್ರೀಯು ಮೆಲ್ಲನೆ ಕೋಣೆಯನ್ನು ಪ್ರವೇಶಿಸುತ್ತಾಳೆ. ದುರಾಚಾರ ಜೀವನದ ಸ್ತ್ರೀಯೆಂದು ಆಕೆ ಪಟ್ಟಣದಲ್ಲಿ ಕುಪ್ರಸಿದ್ಧಳು. ಯೇಸುವಿನ ಬೋಧನೆಗಳನ್ನು, ಅದರಲ್ಲೂ ‘ಹೊರೆ ಹೊತ್ತವರು ವಿಶ್ರಾಂತಿಗಾಗಿ ಅವನ ಬಳಿಗೆ ಬರಬಹುದೆಂಬ’ ಅವನ ಆಮಂತ್ರಣವನ್ನು ಅವಳು ಕೇಳಿದ್ದಿರಬಹುದು. ಮತ್ತು ಆಕೆ ನೋಡಿ, ಕೇಳಿದ ವಿಷಯಗಳಿಂದ ಆಳವಾಗಿ ಪ್ರಚೋದಿತಳಾಗಿ, ಈಗ ಅವಳು ಯೇಸುವನ್ನು ಹುಡುಕುತ್ತಾ ಬಂದಿದ್ದಾಳೆ.
ಆ ಸ್ತ್ರೀಯು ಮೇಜಿನ ಬಳಿ ಇದ್ದ ಯೇಸುವಿನ ಹಿಂದಿನಿಂದ ಬಂದು ಅವನ ಪಾದಗಳ ಬಳಿ ಮೊಣಕಾಲೂರುತ್ತಾಳೆ. ಆಕೆಯ ಕಣ್ಣೀರು ಅವನ ಪಾದಗಳಿಗೆ ಬಿದ್ದಂತೆ ಅವಳು ತನ್ನ ಕೂದಲುಗಳಿಂದ ಅದನ್ನು ಒರಸುತ್ತಾಳೆ. ಅವಳು ತನ್ನ ಬುದ್ದಲಿಯಿಂದ ಸುಗಂಧ ತೈಲವನ್ನು ತೆಗೆದು ಅವನ ಪಾದಗಳಿಗೆ ಮುದ್ದಿಟ್ಟು, ಆ ತೈಲವನ್ನು ಹೊಯ್ಯುತ್ತಾಳೆ. ಸೀಮೋನನು ಇದನ್ನು ಅಸಮ್ಮತಿಯಿಂದ ನೋಡುತ್ತಾನೆ. “ಇವಳು ದುರಾಚಾರಿ, ಇವನು ಪ್ರವಾದಿಯಾಗಿದ್ದರೆ, ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು” ಎಂದು ಅವನು ತರ್ಕಿಸುತ್ತಾನೆ.
ಅವನ ಈ ಯೋಚನೆಯನ್ನು ಗ್ರಹಿಸಿದ ಯೇಸು, “ಸೀಮೋನನೇ, ನಾನು ನಿನಗೆ ಹೇಳಬೇಕಾದ ಮಾತೊಂದಿದೆ” ಎನ್ನುತ್ತಾನೆ.
“ಬೋಧಕನೇ, ಹೇಳು” ಅನ್ನುತ್ತಾನೆ ಆತನು.
ಆಗ ಯೇಸು, “ಒಬ್ಬ ಸಾಹುಕಾರನಿಗೆ ಇಬ್ಬರು ಸಾಲಗಾರರಿದ್ದರು. ಒಬ್ಬನು ಐನೂರು ಹಣ ಕೊಡಬೇಕಾಗಿತ್ತು. ಮತ್ತೊಬ್ಬನು ಐವತ್ತು ಹಣ ಕೊಡಬೇಕಾಗಿತ್ತು. ತೀರಿಸುವದಕ್ಕೆ ಅವರಿಗೆ ಗತಿಯಿಲ್ಲದರ್ದಿಂದ ಆ ಇಬ್ಬರಿಗೂ ಸಾಲವನ್ನು ಧರ್ಮಾರ್ಥವಾಗಿ ಬಿಟ್ಟು ಬಿಟ್ಟನು. ಹಾಗಾದರೆ ಅವರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸಾನು?” ಎಂದು ಕೇಳುತ್ತಾನೆ.
ಸಂಬಂಧವಿಲ್ಲವೆಂದು ಕಾಣುವ ಈ ಪ್ರಶ್ನೆಯನ್ನು ಕೇಳಿ, ಪ್ರಾಯಶಃ ಉದಾಸೀನ ಭಾವದಿಂದ ಸೀಮೋನನು, “ಯಾವನಿಗೆ ಹೆಚ್ಚಾಗಿ ಬಿಟ್ಟನೋ ಅವನೇ” ಎಂದು ಉತ್ತರ ಕೊಡುತ್ತಾನೆ.
“ನೀನು ಸರಿಯಾಗಿ ತೀರ್ಪು ಮಾಡಿದಿ” ಎಂದು ಯೇಸುವು ಹೇಳುತ್ತಾನೆ. ಬಳಿಕ ಸ್ತ್ರೀಯ ಕಡೆ ತಿರುಗಿ, ಸೀಮೋನನಿಗೆ, “ಈ ಹೆಂಗಸನ್ನು ನೋಡಿದಿಯಾ? ನಾನು ನಿನ್ನ ಮನೆಗೆ ಬಂದಾಗ ನೀನು ನನ್ನ ಕಾಲಿಗೆ ನೀರು ಕೊಡಲಿಲ್ಲ, ಇವಳಾದರೋ ನನ್ನ ಕಾಲುಗಳನ್ನು ಕಣ್ಣೀರಿನಿಂದ ತ್ಯಾವಮಾಡಿ ತನ್ನ ತಲೆಯ ಕೂದಲುಗಳಿಂದ ಒರಸಿದಳು. ನೀನು ನನಗೆ ಮುದ್ದಿಡಲಿಲ್ಲ; ಇವಳಾದರೋ ನಾನು ಒಳಗೆ ಬಂದಾಗಿನಿಂದ ನನ್ನ ಕಾಲಿಗೆ ಮುದ್ದಿಡುವದನ್ನೇ ಬಿಟ್ಟಲ್ಲ. ನೀನು ನನ್ನ ತಲೆಗೆ ಎಣ್ಣೆ ಹಚ್ಚಲಿಲ್ಲ; ಇವಳಾದರೋ ಸುಗಂಧ ತೈಲವನ್ನು ಕಾಲಿಗೆ ಹಚ್ಚಿದಳು” ಎಂದು ಹೇಳುತ್ತಾನೆ.
ಹೀಗೆ ಈ ಸ್ತ್ರೀಯು ತನ್ನ ಹಿಂದಿನ ದುರಾಚಾರಕ್ಕೆ ಹೃತ್ಪೂರ್ವಕವಾಗಿ ಪಶ್ಚಾತ್ತಾಪ ಪಟ್ಟಿದ್ದ ರುಜುವಾತನ್ನು ಕೊಟ್ಟಳು. ಆದುದರಿಂದ ಯೇಸು ಹೀಗೆ ತೀರ್ಮಾನಿಸುತ್ತಾನೆ: “ಇವಳ ಪಾಪಗಳು ಬಹಳವಾಗಿದ್ದರೂ ಅವು ಕ್ಷಮಿಸಲ್ಪಟ್ಟಿವೆ, ಇದಕ್ಕೆ ಪ್ರಮಾಣವೇನಂದರೆ ಇವಳು ತೋರಿಸಿದ ಪ್ರೀತಿ ಬಹಳ. ಆದರೆ ಯಾವನಿಗೆ ಸ್ವಲ್ಪ ಮಾತ್ರ ಕ್ಷಮಿಸಲ್ಪಟ್ಟಿದೆಯೋ ಅವನು ತೋರಿಸುವ ಪ್ರೀತಿ ಸ್ವಲ್ಪವೇ.”
ಯೇಸು ದುರಾಚಾರವನ್ನು ಮನ್ನಿಸಿದನು ಅಥವಾ ಗಮನಕ್ಕೆ ತಂದು ಕೊಳ್ಳದೇ ಹೋದನೆಂದು ಇದರ ಅರ್ಥವಲ್ಲ. ಬದಲಿಗೆ, ಜೀವನದಲ್ಲಿ ತಪ್ಪು ಮಾಡಿದ ಬಳಿಕ ಅವುಗಳಿಗಾಗಿ ದುಃಖ ವ್ಯಕ್ತ ಪಡಿಸಿ ಉಪಶಮನಕ್ಕಾಗಿ ಕ್ರಿಸ್ತನ ಬಳಿಗೆ ಬರುವ ಜನರಿಗೆ ಅವನಲ್ಲಿರುವ ಕನಿಕರದ ತಿಳುವಳಿಕೆಯನ್ನು ಈ ಸಂಭವವು ತೋರಿಸುತ್ತದೆ. ಈ ಸ್ತ್ರೀಗೆ ನಿಜ ಉಪಶಮನವನ್ನು ಕೊಡುತ್ತಾ, ಯೇಸುವು ಹೇಳುವದು: “ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ. . . . ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿಯದೆ; ಸಮಾಧಾನದಿಂದ ಹೋಗು.” ಲೂಕ 7:36-50; ಮತ್ತಾಯ 11:28-30.
▪ ಅತಿಥೇಯ ಸೀಮೋನನು ಯೇಸುವನ್ನು ಹೇಗೆ ಬರಮಾಡುತ್ತಾನೆ?
▪ ಯೇಸುವನ್ನು ಹುಡುಕುತ್ತಾ ಯಾರು ಬರುತ್ತಾರೆ ಮತ್ತು ಏಕೆ?
▪ ಯೇಸುವು ಯಾವ ದೃಷ್ಟಾಂತವನ್ನು ಒದಗಿಸುತ್ತಾನೆ, ಮತ್ತು ಅವನು ಅದನ್ನು ಹೇಗೆ ಅನ್ವಯಿಸುತ್ತಾನೆ?