ಮಹಾ ಶಿಷ್ಯ-ರಚಕನನ್ನು ಅನುಕರಿಸಿರಿ
“ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ.”—ಲೂಕ 8:18.
ಯೇಸು ಕ್ರಿಸ್ತನು ತನ್ನ ಹಿಂಬಾಲಕರಿಗೆ “ನೀವು ಹೇಗೆ ಕಿವಿಗೊಡಬೇಕೋ ನೋಡಿಕೊಳ್ಳಿರಿ” ಎಂದು ಹೇಳಿದಾಗ ಮಹಾ ಬೋಧಕನೂ ಶಿಷ್ಯ-ರಚಕನೂ ಆಗಿರುವ ತನ್ನ ಪಾತ್ರವನ್ನು ಪೂರೈಸುತ್ತಿದ್ದನು. (ಲೂಕ 8:16-18) ಆ ಮೂಲತತ್ತ್ವವು ಕ್ರೈಸ್ತರಾದ ನಿಮ್ಮ ಶುಶ್ರೂಷೆಗೆ ಅನ್ವಯಿಸುತ್ತದೆ. ಆಧ್ಯಾತ್ಮಿಕ ಉಪದೇಶಕ್ಕೆ ಗಮನ ಕೊಡುವುದಾದರೆ ನೀವು ಅದನ್ನು ಅನ್ವಯಿಸಿಕೊಳ್ಳುವಿರಿ ಮತ್ತು ಪರಿಣಾಮಕಾರಿಯಾದ ರಾಜ್ಯ ಘೋಷಕರಾಗುವಿರಿ. ಯೇಸುವಿನ ಸ್ವರವನ್ನು ಇಂದು ನೀವು ಕೇಳಲಾರಿರಿ ನಿಶ್ಚಯ. ಆದರೆ ಶಾಸ್ತ್ರಗ್ರಂಥದಲ್ಲಿ ತಿಳಿಸಿರುವ ಪ್ರಕಾರ, ಆತನು ಹೇಳಿದ ಮತ್ತು ಮಾಡಿದ ವಿಷಯಗಳನ್ನು ನೀವು ಓದಬಲ್ಲಿರಿ. ಅವು, ಯೇಸು ತನ್ನ ಶುಶ್ರೂಷೆಯಲ್ಲಿ ಜನರೊಂದಿಗೆ ವ್ಯವಹರಿಸಿದ ರೀತಿಯ ಕುರಿತು ಏನನ್ನು ಪ್ರಕಟಿಸುತ್ತವೆ?
2 ಯೇಸು ಒಬ್ಬ ಅತ್ಯುತ್ತಮ ಸೌವಾರ್ತಿಕನೂ ಶಾಸ್ತ್ರಾಧಾರಿತ ಸತ್ಯದ ಉತ್ಕೃಷ್ಟ ಬೋಧಕನೂ ಆಗಿದ್ದನು. (ಲೂಕ 8:1; ಯೋಹಾನ 8:28) ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಸಾರುವುದು ಮತ್ತು ಬೋಧಿಸುವುದು ಎರಡೂ ಸೇರಿರುತ್ತದೆ. ಕೆಲವು ಕ್ರೈಸ್ತರು ಸಾರುವುದರಲ್ಲಿ ಪರಿಣಾಮಕಾರಿಗಳಾಗಿದ್ದಾರೆ ಆದರೆ ಜನರಿಗೆ ಬೋಧಿಸುವುದು ಅವರಿಗೆ ಕಷ್ಟಕರವಾಗಿ ಕಾಣುತ್ತದೆ. ಸಾರುವುದರಲ್ಲಿ ಒಂದು ಸಂದೇಶದ ಘೋಷಣೆಯು ಮಾತ್ರ ಸೇರಿದೆ. ಯೆಹೋವನ ಮತ್ತು ಆತನ ಉದ್ದೇಶಗಳ ಕುರಿತು ಜನರಿಗೆ ಬೋಧಿಸುವುದರಲ್ಲಾದರೊ, ಬೋಧಕನು ಶಿಷ್ಯನೊಂದಿಗೆ ಒಂದು ಸಂಬಂಧ ಬೆಸೆಯುವುದನ್ನು ಅವಶ್ಯಪಡಿಸುತ್ತದೆ. (ಮತ್ತಾಯ 28:19, 20) ಮಹಾ ಬೋಧಕನೂ ಶಿಷ್ಯ-ರಚಕನೂ ಆಗಿರುವ ಯೇಸು ಕ್ರಿಸ್ತನನ್ನು ಅನುಕರಿಸುವ ಮೂಲಕ ನಾವು ಇದನ್ನು ಮಾಡಸಾಧ್ಯವಿದೆ.—ಯೋಹಾನ 13:13.
3 ಯೇಸುವಿನ ಬೋಧನಾ ವಿಧಾನಗಳನ್ನು ಅನುಕರಿಸುವುದಾದರೆ, ಅಪೊಸ್ತಲ ಪೌಲನ ಈ ಬುದ್ಧಿವಾದವನ್ನು ನೀವು ಅನುಸರಿಸುವಿರಿ: “ಸಮಯವನ್ನು ಸುಮ್ಮನೆ ಕಳಕೊಳ್ಳದೆ ಅದನ್ನು ಬೆಲೆಯುಳ್ಳದ್ದೆಂದು ಉಪಯೋಗಿಸಿ ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಿರಿ. ನಿಮ್ಮ ಸಂಭಾಷಣೆ ಯಾವಾಗಲೂ ಇಂಪಾಗಿಯೂ ರಸವತ್ತಾಗಿಯೂ ಇರಲಿ; ಹೀಗೆ ನೀವು ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕೋ ಅದನ್ನು ತಿಳುಕೊಳ್ಳುವಿರಿ.” (ಕೊಲೊಸ್ಸೆ 4:5, 6) ಶಿಷ್ಯರನ್ನಾಗಿ ಮಾಡುವುದರಲ್ಲಿ ಯೇಸುವನ್ನು ಅನುಕರಿಸಲು ಪ್ರಯತ್ನವು ಅವಶ್ಯ ನಿಜ. ಆದರೆ ಅದು ನಿಮ್ಮ ಬೋಧಿಸುವಿಕೆಯನ್ನು ಪರಿಣಾಮಕಾರಿಯಾಗಿ ಮಾಡುತ್ತದೆ. ಯಾಕಂದರೆ ಒಬ್ಬನ ವೈಯಕ್ತಿಕ ಅಗತ್ಯಕ್ಕೆ ಅನುಸಾರವಾಗಿ “ಯಾರಾರಿಗೆ ಯಾವಾವ ರೀತಿಯಲ್ಲಿ ಉತ್ತರಹೇಳಬೇಕು” ಎಂಬುದನ್ನು ತಿಳಿಯಲು ಅದು ನಿಮಗೆ ಸಹಾಯಮಾಡುವುದು.
ಇತರರು ಮಾತಾಡುವಂತೆ ಯೇಸು ಉತ್ತೇಜಿಸಿದನು
4 ಜನರಿಗೆ ಕಿವಿಗೊಡುವುದು ಮತ್ತು ಅವರು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸುವಂತೆ ಉತ್ತೇಜಿಸುವುದು ಯೇಸುವಿಗೆ ಬಾಲ್ಯದಿಂದಲೇ ರೂಢಿಯಾಗಿತ್ತು. ದೃಷ್ಟಾಂತಕ್ಕಾಗಿ, ಅವನು 12 ವರ್ಷದ ಬಾಲಕನಾಗಿದ್ದಾಗ ದೇವಾಲಯದಲ್ಲಿ ಬೋಧಕರ ನಡುವೆ ಕುಳಿತುಕೊಂಡು “ಅವರ ಉಪದೇಶವನ್ನು ಕೇಳುತ್ತಾ ಪ್ರಶ್ನೆಮಾಡುತ್ತಾ” ಇದ್ದದನ್ನು ಅವನ ಹೆತ್ತವರು ಕಂಡರು. (ಲೂಕ 2:46) ಯೇಸು ತನ್ನ ಜ್ಞಾನದಿಂದ ಆ ಬೋಧಕರನ್ನು ಮುಜುಗರಪಡಿಸಲು ದೇವಾಲಯಕ್ಕೆ ಹೋಗಿರಲಿಲ್ಲ. ಅವನು ಪ್ರಶ್ನೆಗಳನ್ನು ಕೇಳಿದನಾದರೂ ಅಲ್ಲಿಗೆ ಹೋದದ್ದು ಉಪದೇಶಕ್ಕೆ ಕಿವಿಗೊಡಲಿಕ್ಕಾಗಿಯೇ. ಅವನು ದೇವರ ಮತ್ತು ಮನುಷ್ಯರ ದಯೆಯನ್ನು ಹೆಚ್ಚೆಚ್ಚಾಗಿ ಗಳಿಸುವಂತೆ ಮಾಡಿದ ಅನೇಕ ಗುಣಗಳಲ್ಲಿ ಚೆನ್ನಾಗಿ ಕಿವಿಗೊಡುವುದು ಒಂದಾಗಿದ್ದಿರಬೇಕು.—ಲೂಕ 2:52.
5 ಜನರಿಗೆ ಕಿವಿಗೊಡುವ ಈ ಆಸಕ್ತಿಯನ್ನು ಯೇಸು ತನ್ನ ದೀಕ್ಷಾಸ್ನಾನದ ಮತ್ತು ಮೆಸ್ಸೀಯನಾಗಿ ಅಭಿಷೇಕಿತನಾದ ನಂತರವೂ ಮುಂದುವರಿಸಿದನು. ತನ್ನನ್ನು ಆಲೈಸಲು ಬಂದಿದ್ದವರನ್ನು ಅಲಕ್ಷ್ಯಮಾಡುವಷ್ಟರ ಮಟ್ಟಿಗೆ ಅವನು ತನ್ನ ಬೋಧಿಸುವಿಕೆಯಲ್ಲಿ ತಲ್ಲೀನನಾಗಿ ಹೋಗಲಿಲ್ಲ. ಆಗಾಗ್ಗೆ ತನ್ನ ಮಾತನ್ನು ನಿಲ್ಲಿಸಿ, ಅವರ ಅಭಿಪ್ರಾಯವೇನು ಎಂದು ಕೇಳುತ್ತಾ ಅವರ ಪ್ರತ್ಯುತ್ತರಕ್ಕೆ ಕಿವಿಗೊಡುತ್ತಿದ್ದನು. (ಮತ್ತಾಯ 16:13-15) ಉದಾಹರಣೆಗೆ, ಮಾರ್ಥಳ ತಮ್ಮನಾದ ಲಾಜರನ ಮರಣಾನಂತರ ಯೇಸು ಅವಳಿಗೆ ಅಂದದ್ದು: “ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವದಿಲ್ಲ.” ತದನಂತರ ಅವನು ಅವಳಿಗೆ “ಇದನ್ನು ನಂಬುತ್ತೀಯಾ?” ಎಂದು ಕೇಳಿದನು. ಮಾರ್ಥಳು ಉತ್ತರಿಸುತ್ತಾ “ಹೌದು, ಸ್ವಾಮೀ, ಲೋಕಕ್ಕೆ ಬರಬೇಕಾದ ದೇವಕುಮಾರನಾದ ಕ್ರಿಸ್ತನು ನೀನೇ ಎಂದು ನಂಬಿದ್ದೇನೆ” ಎಂದು ಹೇಳಿದಾಗ ಯೇಸು ನಿಶ್ಚಯವಾಗಿ ಕಿವಿಗೊಟ್ಟನು. (ಯೋಹಾನ 11:26, 27) ಮಾರ್ಥಳು ಹೀಗೆ ತನ್ನ ನಂಬಿಕೆಯನ್ನು ವ್ಯಕ್ತಪಡಿಸಿದ್ದನ್ನು ಕೇಳಿಸಿಕೊಳ್ಳುವುದು ಅದೆಷ್ಟು ಸಂತೃಪ್ತಿಕರವಾಗಿದ್ದಿರಬೇಕು!
6 ಅನೇಕ ಮಂದಿ ಶಿಷ್ಯರು ಹಿಂಜರಿದು ಯೇಸುವನ್ನು ಬಿಟ್ಟುಹೋದಾಗ, ಅವನು ತನ್ನ ಅಪೊಸ್ತಲರ ಅಭಿಪ್ರಾಯವನ್ನು ಕೇಳಿಸಿಕೊಳ್ಳಲು ಆಸಕ್ತಿ ತೋರಿಸಿದನು. ಆದುದರಿಂದ ಯೇಸು ಕೇಳಿದ್ದು: “ನೀವು ಸಹ ಹೋಗಬೇಕೆಂದಿದ್ದೀರಾ?” ಆಗ ಸೀಮೋನ್ ಪೇತ್ರನು ಉತ್ತರಿಸಿದ್ದು: “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು; ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ.” (ಯೋಹಾನ 6:66-69) ಆ ಮಾತುಗಳು ಯೇಸುವನ್ನು ಎಷ್ಟು ಸಂತೋಷಗೊಳಿಸಿದ್ದಿರಬೇಕು! ತದ್ರೀತಿಯಲ್ಲಿ ಬೈಬಲ್ ವಿದ್ಯಾರ್ಥಿಯ ನಂಬಿಕೆಯ ನುಡಿಗಳು ನಿಮ್ಮನ್ನು ಖಂಡಿತವಾಗಿಯೂ ಹರ್ಷಗೊಳಿಸುವುವು.
ಯೇಸು ಗೌರವದಿಂದ ಕಿವಿಗೊಟ್ಟನು
7 ಯೇಸು ಒಬ್ಬ ಪರಿಣಾಮಕಾರಿ ಶಿಷ್ಯ-ರಚಕನಾಗಿದ್ದನು ಎಂಬುದಕ್ಕೆ ಇನ್ನೊಂದು ಕಾರಣವು ಅವನು ಜನರ ಕಡೆಗೆ ಚಿಂತೆ ತೋರಿಸಿ ಅವರಿಗೆ ಗೌರವದಿಂದ ಕಿವಿಗೊಟ್ಟದ್ದೇ. ದೃಷ್ಟಾಂತಕ್ಕೆ, ಒಂದು ಸಂದರ್ಭದಲ್ಲಿ ಯೇಸು ಸುಖರೆಂಬ ಊರಿನಲ್ಲಿ ಯಾಕೋಬನು ತೆಗೆಸಿದ ಬಾವಿ ಬಳಿ ಒಬ್ಬಾಕೆ ಸಮಾರ್ಯದ ಸ್ತ್ರೀಗೆ ಸಾಕ್ಷಿಯನ್ನಿತ್ತನು. ಸಂಭಾಷಣೆಯ ವೇಳೆ ಯೇಸುವೇ ಎಲ್ಲಾ ಸಮಯ ಮಾತಾಡಲಿಲ್ಲ. ಅವಳು ಹೇಳುತ್ತಿದ್ದ ಮಾತುಗಳಿಗೂ ಕಿವಿಗೊಟ್ಟನು. ಅವಳಿಗೆ ಕಿವಿಗೊಡುವಾಗ ಆರಾಧನೆಯ ವಿಷಯದಲ್ಲಿ ಅವಳಿಗಿದ್ದ ಆಸಕ್ತಿಯನ್ನು ಯೇಸು ಗಮನಿಸಿದನು ಮತ್ತು ದೇವರು ತನ್ನನ್ನು ಆತ್ಮದಿಂದಲೂ ಸತ್ಯದಿಂದಲೂ ಆರಾಧಿಸುತ್ತಿರುವವರಿಗಾಗಿ ಹುಡುಕುತ್ತಿದ್ದಾನೆಂದು ತಿಳಿಸಿದನು. ಈ ಹೆಂಗಸಿಗೆ ಯೇಸು ಗೌರವವನ್ನೂ ಪರಿಗಣನೆಯನ್ನೂ ತೋರಿಸಿದನು. ಆಮೇಲೆ ಅವಳು ಅವನ ಕುರಿತು ಇತರರಿಗೂ ತಿಳಿಸಲಾಗಿ “ಆ ಹೆಂಗಸಿನ ಮಾತಿನ ಮೇಲೆ ಆ ಊರಿನ ಸಮಾರ್ಯರಲ್ಲಿ ಅನೇಕರು ಆತನನ್ನು ನಂಬುವವರಾದರು.”—ಯೋಹಾನ 4:5-29, 39-42.
8 ಜನರು ಸಾಮಾನ್ಯವಾಗಿ ತಮ್ಮ ಸ್ವಂತ ದೃಷ್ಟಿಕೋನಗಳನ್ನು ವ್ಯಕ್ತಪಡಿಸುವುದರಲ್ಲಿ ಆನಂದಿಸುತ್ತಾರೆ. ದೃಷ್ಟಾಂತಕ್ಕೆ, ಪುರಾತನ ಅಥೇನೆ ಪಟ್ಟಣದ ನಿವಾಸಿಗಳು ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಹಾಗೂ ಯಾವುದಾದರೂ ಹೊಸ ವಿಷಯಗಳನ್ನು ಕೇಳಿಸಿಕೊಳ್ಳಲು ಸಂತೋಷಿಸುತ್ತಿದ್ದರು. ಇದು ಅಪೊಸ್ತಲ ಪೌಲನನ್ನು ಆ ಪಟ್ಟಣದ ಅರಿಯೊಪಾಗದ ಮಧ್ಯದಲ್ಲಿ ನಿಂತು ಪರಿಣಾಮಕಾರಿ ಭಾಷಣವನ್ನು ನೀಡುವಂತೆ ನಡಿಸಿತು. (ಅ. ಕೃತ್ಯಗಳು 17:18-34) ಇಂದು ನಿಮ್ಮ ಶುಶ್ರೂಷೆಯಲ್ಲಿ ಮನೆಯವನೊಂದಿಗೆ ಸಂಭಾಷಣೆ ಆರಂಭಿಸುವಾಗ ನೀವು ಹೀಗನ್ನಬಹುದು: “[ಒಂದು ನಿರ್ದಿಷ್ಟ ವಿಷಯದ] ಕುರಿತು ನಿಮ್ಮ ಅಭಿಪ್ರಾಯವನ್ನು ತಿಳಿಯಲು ಆಸಕ್ತನಾಗಿರುವುದರಿಂದ ನಿಮ್ಮನ್ನು ಭೇಟಿಯಾಗುತ್ತಿದ್ದೇನೆ.” ಆ ವ್ಯಕ್ತಿಯ ಅಭಿಪ್ರಾಯಕ್ಕೆ ಕಿವಿಗೊಡಿರಿ, ಹೇಳಿಕೆ ನೀಡಿರಿ ಅಥವಾ ಅದರ ಕುರಿತು ಒಂದು ಪ್ರಶ್ನೆಕೇಳಿರಿ. ಅನಂತರ ಆ ವಿಷಯದ ಕುರಿತು ಬೈಬಲ್ ಹೇಳುವುದನ್ನು ದಯೆಯಿಂದ ತೋರಿಸಿರಿ.
ಸಂಭಾಷಣೆ ಆರಂಭಿಸುವದು ಹೇಗೆಂದು ಯೇಸುವಿಗೆ ತಿಳಿದಿತ್ತು
9 ಏನು ಹೇಳುವುದೆಂದು ತೋಚದಂಥ ಸ್ಥಿತಿಯಲ್ಲಿ ಯೇಸು ಎಂದೂ ಇರಲಿಲ್ಲ. ಅವನು ಚೆನ್ನಾಗಿ ಕಿವಿಗೊಡುವವನಾಗಿದ್ದನು ಮಾತ್ರವಲ್ಲದೆ ಜನರು ಏನನ್ನು ಯೋಚಿಸುತ್ತಿದ್ದಾರೆಂಬ ಅರಿವು ಅವನಿಗೆ ಹೆಚ್ಚಾಗಿ ಇತ್ತು ಮತ್ತು ಏನು ಹೇಳಬೇಕೆಂಬುದು ಅವನಿಗೆ ಸರಿಯಾಗಿ ತಿಳಿದಿತ್ತು. (ಮತ್ತಾಯ 9:4; 12:22-30; ಲೂಕ 9:46, 47) ದೃಷ್ಟಾಂತಕ್ಕೆ, ಯೇಸುವಿನ ಪುನರುತ್ಥಾನದ ಸ್ವಲ್ಪ ಸಮಯದ ನಂತರ ಅವನ ಇಬ್ಬರು ಶಿಷ್ಯರು ಯೆರೂಸಲೇಮಿನಿಂದ ಎಮ್ಮಾಹುವಿಗೆ ನಡೆದುಕೊಂಡು ಹೋಗುತ್ತಿದ್ದರು. ಸುವಾರ್ತಾ ವೃತ್ತಾಂತವು ತಿಳಿಸುವುದು: “ಅವರು ಸಂಭಾಷಣೆಯಲ್ಲಿ ಚರ್ಚಿಸುತ್ತಿರುವಾಗ ಯೇಸು ತಾನೇ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ಹೋದನು. ಆದರೆ ಅವರು ಆತನ ಗುರುತನ್ನು ಹಿಡಿಯಲಿಲ್ಲ; ಅವರ ಕಣ್ಣುಕಟ್ಟಿದ ಹಾಗಾಯಿತು. ಆತನು ಅವರನ್ನು—ನೀವು ಮಾರ್ಗದಲ್ಲಿ ಹೋಗುತ್ತಾ ಚರ್ಚಿಸಿ ಮಾತಾಡಿಕೊಳ್ಳುವ ಈ ಸಂಗತಿಗಳೇನು ಎಂದು ಕೇಳಲು ಅವರು ದುಃಖದ ಮುಖವುಳ್ಳವರಾಗಿ ನಿಂತರು. ಅವರಲ್ಲಿ ಕ್ಲೆಯೊಫನೆಂಬವನು ಆತನನ್ನು—ಯೆರೂಸಲೇಮಿಗೆ ಬಂದ ಪರಸ್ಥಳದವರೆಲ್ಲರಿಗೂ ಈ ದಿವಸಗಳಲ್ಲಿ ಅದರೊಳಗೆ ನಡೆದಿರುವ ಸಂಗತಿಗಳು ಗೊತ್ತಿರಲಾಗಿ ನಿನಗೆ ಮಾತ್ರ ಗೊತ್ತಿಲ್ಲವೋ ಎಂದು ಕೇಳಲು ಆತನು ಅವರನ್ನು—ಯಾವ ಸಂಗತಿಗಳು ಎಂದು ಕೇಳಿದನು.” ಉತ್ತರವಾಗಿ ಅವರು ನಜರೇತಿನ ಯೇಸು ಜನರಿಗೆ ಬೋಧಿಸಿದ, ಅದ್ಭುತಗಳನ್ನು ನಡಿಸಿದ ಮತ್ತು ಕೊಲ್ಲಲ್ಪಟ್ಟ ವಿಷಯವನ್ನೂ ಮತ್ತು ಈಗ ಅವನು ಸತ್ತವರೊಳಗಿಂದ ಎದ್ದು ಬಂದಿದ್ದಾನೆಂದು ಕೆಲವರು ಹೇಳುತ್ತಾರೆ ಎಂಬುದನ್ನೂ ವಿವರಿಸಿದಾಗ, ಮಹಾ ಬೋಧಕನು ಕಿವಿಗೊಟ್ಟು ಕೇಳಿದನು. ಕ್ಲೆಯೊಫನೂ ಅವನ ಸಂಗಡಿಗನೂ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಯೇಸು ಅವಕಾಶಕೊಟ್ಟನು. ಅನಂತರ ಅವರಿಗೆ ತಿಳಿಯಲು ಅಗತ್ಯವಿದ್ದುದನ್ನು ತಿಳಿಸುತ್ತಾ ‘ಗ್ರಂಥಗಳ ಅರ್ಥವನ್ನು ಬಿಚ್ಚಿಹೇಳಿದನು.’—ಲೂಕ 24:13-27, 32.
10 ಒಬ್ಬ ನಿರ್ದಿಷ್ಟ ಮನೆಯವನ ಧಾರ್ಮಿಕ ದೃಷ್ಟಿಕೋನದ ಕುರಿತು ಒಂದುವೇಳೆ ನಿಮಗೆ ಏನೂ ತಿಳಿದಿರಲಿಕ್ಕಿಲ್ಲ. ಅದನ್ನು ಕಂಡುಹಿಡಿಯಲಿಕ್ಕಾಗಿ ನೀವು ಹೀಗೆ ಮಾಡಬಹುದು: ಜನರು ಪ್ರಾರ್ಥನೆಯ ಕುರಿತು ಏನು ನೆನಸುತ್ತಾರೆಂದು ತಿಳಿದುಕೊಳ್ಳಲು ನಿಮಗೆ ಮನಸ್ಸಿದೆ ಎಂದು ಹೇಳಿರಿ. ಆಮೇಲೆ, “ನಮ್ಮ ಪ್ರಾರ್ಥನೆಗಳನ್ನು ದೇವರು ನಿಜವಾಗಿ ಆಲಿಸುತ್ತಾನೋ?” ಎಂದು ಕೇಳಿರಿ. ಅವನು ಕೊಡುವ ಉತ್ತರವು ಅವನ ದೃಷ್ಟಿಕೋನ ಮತ್ತು ಧಾರ್ಮಿಕ ಹಿನ್ನೆಲೆಯ ಕುರಿತು ಬಹಳಷ್ಟನ್ನು ನಿಮಗೆ ಪ್ರಕಟಪಡಿಸೀತು. ಅವನು ಧಾರ್ಮಿಕ ಮನಸ್ಸುಳ್ಳ ವ್ಯಕ್ತಿಯಾಗಿದ್ದರೆ ಅವನ ದೃಷ್ಟಿಕೋನದ ಕುರಿತು ಇನ್ನೂ ಹೆಚ್ಚನ್ನು ತಿಳಿಯಲಿಕ್ಕಾಗಿ ಹೀಗೆ ಕೇಳಬಹುದು: “ದೇವರು ಎಲ್ಲ ಪ್ರಾರ್ಥನೆಗಳನ್ನೂ ಆಲಿಸುತ್ತಾನೆಂದು ನೀವು ನೆನಸುತ್ತೀರೋ ಅಥವಾ ಅವನು ಮೆಚ್ಚದಿರುವ ಕೆಲವು ಪ್ರಾರ್ಥನೆಗಳು ಇರಬಹುದೋ?” ಇಂಥ ಪ್ರಶ್ನೆಗಳು ಮುಕ್ತ ಸಂಭಾಷಣೆಗೆ ನಡಿಸಬಲ್ಲವು. ಬೈಬಲಿನ ವಚನವೊಂದನ್ನು ಮನೆಯವನಿಗೆ ತೋರಿಸುವುದು ಸೂಕ್ತವೆಂದು ಕಂಡಾಗ ಅದನ್ನು ಜಾಣ್ಮೆಯಿಂದ ಮಾಡಿರಿ, ವ್ಯಕ್ತಿಯ ನಂಬಿಕೆಯ ಮೇಲೆ ದಾಳಿಮಾಡಿ ಅಲ್ಲ. ನಿಮಗೆ ಕಿವಿಗೊಡುವುದರಲ್ಲಿ ಅವನು ಸಂತೋಷಿಸಿದಲ್ಲಿ ನೀವು ಪುನರ್ಭೇಟಿ ಮಾಡುವುದಕ್ಕೂ ಅವನು ಸಮ್ಮತಿಸಬಹುದು. ನಿಮಗೆ ಉತ್ತರಿಸಲಾಗದ ಒಂದು ಪ್ರಶ್ನೆಯನ್ನು ಅವನು ಕೇಳುವಲ್ಲಿ ಆಗೇನು? ಆ ಪ್ರಶ್ನೆಯ ಕುರಿತು ಸ್ವಲ್ಪ ಸಂಶೋಧನೆ ಮಾಡಿ, ತಯಾರಿಸಿ, ಅನಂತರ ಬಂದು ‘ನಿಮ್ಮಲ್ಲಿರುವ ನಿರೀಕ್ಷೆಗೆ ಆಧಾರವೇನೆಂದು ಕೇಳವವರಿಗೆ ಸಾತ್ವಿಕತ್ವದಿಂದಲೂ ಗೌರವದಿಂದಲೂ’ ಉತ್ತರವನ್ನು ಕೊಡಿ.—1 ಪೇತ್ರ 3:15, NIBV.
ಯೋಗ್ಯರಾದವರಿಗೆ ಯೇಸು ಕಲಿಸಿದನು
11 ಪರಿಪೂರ್ಣ ಮನುಷ್ಯನಾಗಿದ್ದ ಯೇಸುವಿನಲ್ಲಿ, ಕಲಿಸಲು ಯೋಗ್ಯರಾದ ಜನರನ್ನು ಗುರುತಿಸಲು ಸಾಧ್ಯಗೊಳಿಸಿದ ವಿವೇಚನೆಯಿತ್ತು. ನಮಗಾದರೋ ‘ನಿತ್ಯಜೀವಕ್ಕೆ ನೇಮಿಸಲ್ಪಟ್ಟವರನ್ನು’ ಹುಡುಕುವುದು ಎಷ್ಟೋ ಕಷ್ಟದ ಕೆಲಸ. (ಅ. ಕೃತ್ಯಗಳು 13:48) “ನೀವು ಯಾವದೊಂದು ಊರಿಗೆ ಅಥವಾ ಹಳ್ಳಿಗೆ ಸೇರಿದಾಗ ಅಲ್ಲಿ ಯೋಗ್ಯರು ಯಾರೆಂದು ವಿಚಾರಣೆ ಮಾಡಿ” ಎಂದು ಯೇಸು ಹೇಳಿದ್ದ ಆ ಅಪೊಸ್ತಲರಿಗೂ ಅದು ಕಷ್ಟವಾಗಿತ್ತು. (ಮತ್ತಾಯ 10:11) ಶಾಸ್ತ್ರಾಧಾರಿತ ಸತ್ಯಕ್ಕೆ ಕಿವಿಗೊಡಲು ಮತ್ತು ಬೋಧಿಸಲ್ಪಡಲು ಸಿದ್ಧರಿರುವ ಯೋಗ್ಯ ಜನರಿಗಾಗಿ ಯೇಸುವಿನ ಅಪೊಸ್ತಲರಂತೆ ನೀವು ಹುಡುಕಲೇ ಬೇಕು. ನೀವು ಮಾತನಾಡುವ ಜನರೆಲ್ಲರಿಗೆ ಜಾಗರೂಕತೆಯಿಂದ ಕಿವಿಗೊಟ್ಟು ಅವರಲ್ಲಿ ಪ್ರತಿಯೊಬ್ಬನ ಮನೋಭಾವವನ್ನು ಗಮನಿಸುವ ಮೂಲಕ ಯೋಗ್ಯರಾದ ವ್ಯಕ್ತಿಗಳನ್ನು ನೀವು ಕಂಡುಕೊಳ್ಳಬಲ್ಲಿರಿ.
12 ರಾಜ್ಯದ ಸಂದೇಶದಲ್ಲಿ ಸ್ವಲ್ಪ ಆಸಕ್ತಿಯನ್ನು ತೋರಿಸಿದ ವ್ಯಕ್ತಿಗೆ ಭೇಟಿನೀಡಿದ ನಂತರವೂ ಅವನ ಆಧ್ಯಾತ್ಮಿಕ ಅಗತ್ಯತೆಗಳ ಕುರಿತು ಯೋಚಿಸುತ್ತಾ ಇರುವುದು ಪ್ರಯೋಜನಕರ. ಸುವಾರ್ತೆಯ ಕುರಿತು ಒಬ್ಬನೊಂದಿಗೆ ಮಾತಾಡಿದ ಬಳಿಕ ಅವನ ಕುರಿತು ನೀವು ತಿಳಿದುಕೊಂಡ ವಿಷಯವನ್ನು ಬರೆದಿಟ್ಟುಕೊಂಡರೆ, ಅವನಿಗೆ ಅಧ್ಯಾತ್ಮಿಕವಾಗಿ ಸಹಾಯ ಮಾಡುತ್ತಾ ಇರಲು ನಿಮಗದು ನೆರವಾಗುವುದು. ಆ ವ್ಯಕ್ತಿಯ ನಂಬಿಕೆಗಳು, ಮನೋಭಾವ ಅಥವಾ ಪರಿಸ್ಥಿತಿಗಳ ಕುರಿತು ಇನ್ನೂ ಹೆಚ್ಚು ತಿಳಿಯಬೇಕಾದರೆ ಪುನರ್ಭೇಟಿಗಳನ್ನು ಮಾಡುವ ಸಮಯದಲ್ಲಿ ನೀವು ಆ ವ್ಯಕ್ತಿಗೆ ಜಾಗರೂಕತೆಯಿಂದ ಕಿವಿಗೊಡುವ ಅಗತ್ಯವಿದೆ.
13 ಬೈಬಲಿನ ಕುರಿತು ಜನರ ಅನಿಸಿಕೆಯೇನು ಎಂದು ನಿಮಗೆ ತಿಳಿಸುವಂತೆ ಮಾಡಲು ಅವರನ್ನು ನೀವು ಹೇಗೆ ಉತ್ತೇಜಿಸಬಲ್ಲಿರಿ? ಕೆಲವು ಕ್ಷೇತ್ರಗಳಲ್ಲಿ ಹೀಗೆ ಕೇಳುವುದು ಪರಿಣಾಮಕಾರಿ: “ಬೈಬಲನ್ನು ಅರ್ಥಮಾಡಿಕೊಳ್ಳುವುದು ಕಷ್ಟಕರವೆಂದು ನಿಮಗನಿಸಿದೆಯೋ?” ಈ ಪ್ರಶ್ನೆಗೆ ವ್ಯಕ್ತಿಯು ಕೊಡುವ ಉತ್ತರವು ಆಧ್ಯಾತ್ಮಿಕ ವಿಷಯಗಳ ಕಡೆಗೆ ಅವನಿಗಿರುವ ಮನೋಭಾವವನ್ನು ಹೆಚ್ಚಾಗಿ ಪ್ರಕಟಪಡಿಸುತ್ತದೆ. ಇನ್ನೊಂದು ವಿಧ ಯಾವುದೆಂದರೆ ಒಂದು ವಚನವನ್ನು ಓದಿ ನಂತರ, “ಇದರ ಬಗ್ಗೆ ನಿಮಗೆ ಹೇಗನಿಸುತ್ತದೆ?” ಎಂದು ಕೇಳುವುದೇ. ಯೇಸುವಿನಂತೆ ಸೂಕ್ತವಾದ ಪ್ರಶ್ನೆಗಳನ್ನು ಕೇಳುವ ಮೂಲಕ ನಿಮ್ಮ ಶುಶ್ರೂಷೆಯಲ್ಲಿ ನೀವು ಹೆಚ್ಚನ್ನು ಪೂರೈಸಬಲ್ಲಿರಿ. ಆದರೆ ಇದರಲ್ಲಿ ಮುಂಜಾಗ್ರತೆ ವಹಿಸುವುದು ಅಗತ್ಯ.
ಯೇಸು ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಬಳಸಿದನು
14 ಬೇರೆಯವರನ್ನು ಮುಜುಗರಕ್ಕೆ ಗುರಿಪಡಿಸದೇ ಅವರ ದೃಷ್ಟಿಕೋನದಲ್ಲಿ ಆಸಕ್ತಿ ತೋರಿಸಿರಿ. ಯೇಸುವಿನ ವಿಧಾನವನ್ನು ಅನುಸರಿಸಿರಿ. ಅವನು ಔಚಿತ್ಯವರಿಯದೆ ವಿಚಾರಣಾತ್ಮಕ ಪ್ರಶ್ನೆಗಳನ್ನು ಕೇಳಲಿಲ್ಲ, ಬದಲಾಗಿ ವಿಚಾರ-ಪ್ರೇರಕ ಪ್ರಶ್ನೆಗಳನ್ನು ಹಾಕಿದನು. ಯೇಸು ದಯೆಯಿಂದ ಕಿವಿಗೊಡುವವನೂ ಆಗಿದ್ದು ಯಥಾರ್ಥ ಜನರನ್ನು ಚೈತನ್ಯಗೊಳಿಸಿ ಹಾಯಾಗಿರಿಸಿದನು. (ಮತ್ತಾಯ 11:28) ಎಲ್ಲಾ ರೀತಿಯ ಜನರು ತಮ್ಮ ಸಮಸ್ಯೆಗಳೊಂದಿಗೆ ಸಂಕೋಚವಿಲ್ಲದೆ ಬಂದು ಆತನನ್ನು ಗೋಚರಿಸಿದರು. (ಮಾರ್ಕ 1:40; 5:35, 36; 10:13, 17, 46, 47) ಜನರು ಬೈಬಲಿನ ಮತ್ತು ಅದರ ಬೋಧನೆಗಳ ಕುರಿತು ತಮ್ಮ ಅಭಿಪ್ರಾಯವೇನೆಂದು ಸಂಕೋಚವಿಲ್ಲದೆ ತಿಳಿಸಬೇಕೆಂದು ನೀವು ಬಯಸುವುದಾದರೆ, ವಿಚಾರಾಣಾತ್ಮಕ ಪ್ರಶ್ನೆಗಳನ್ನು ಕೇಳಬೇಡಿರಿ.
15 ಪ್ರಶ್ನೆಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸುವುದಲ್ಲದೆ, ಏನಾದರೂ ಆಸಕ್ತಿಕರ ವಿಷಯವನ್ನು ತಿಳಿಸುವ ಮೂಲಕ ಮತ್ತು ಪ್ರತಿಕ್ರಿಯೆಗೆ ಕಿವಿಗೊಡುವ ಮೂಲಕ ನಾವು ಸಂಭಾಷಣೆಯನ್ನು ಉತ್ತೇಜಿಸಬಲ್ಲೆವು. ಉದಾಹರಣೆಗೆ, ಯೇಸು ನಿಕೊದೇಮನಿಗೆ ಹೇಳಿದ್ದು: “ಒಬ್ಬನು ಹೊಸದಾಗಿ ಹುಟ್ಟದಿದ್ದರೆ ಅವನು ದೇವರ ರಾಜ್ಯವನ್ನು ಕಾಣಲಾರನು.” (ಯೋಹಾನ 3:3) ಆ ಮಾತುಗಳು ಎಷ್ಟು ಆಸಕ್ತಿಕರವಾಗಿದ್ದವೆಂದರೆ ನಿಕೊದೇಮನು ಆ ಕೂಡಲೇ ಯೇಸುವಿಗೆ ಪ್ರತಿಕ್ರಿಯಿಸಿ ಕಿವಿಗೊಟ್ಟನು. (ಯೋಹಾನ 3:4-20) ತದ್ರೀತಿಯಲ್ಲಿ ನೀವು ಸಹ ಜನರನ್ನು ಸಂಭಾಷಣೆಗೆ ಎಳೆಯಲು ಶಕ್ತರಾಗಬಲ್ಲಿರಿ.
16 ಇಂದು ಅನೇಕ ಹೊಸ ಹೊಸ ಧರ್ಮ-ಪಂಗಡಗಳ ಆಗಮನವು ಆಫ್ರಿಕ, ಪೂರ್ವ ಯುರೋಪ್ ಮತ್ತು ಲ್ಯಾಟಿನ್ ಅಮೆರಿಕದಂಥ ದೇಶಗಳಲ್ಲಿ ಎಲ್ಲರೂ ಮಾತಾಡುವಂಥ ವಿಷಯವಾಗಿ ಪರಿಣಮಿಸಿದೆ. ಇಂಥ ಸ್ಥಳಗಳಲ್ಲಿ ನೀವು ಅನೇಕಸಲ ಹೀಗೆ ಸಂಭಾಷಣೆ ಆರಂಭಿಸಬಹುದು: “ಇಷ್ಟು ಹೆಚ್ಚು ಧರ್ಮಗಳು ಇರುವುದು ನನ್ನನ್ನು ವ್ಯಾಕುಲಗೊಳಿಸಿದೆ. ಆದರೆ ಎಲ್ಲಾ ಜನಾಂಗಗಳ ಜನರು ಸತ್ಯಾರಾಧನೆಯಲ್ಲಿ ಬೇಗನೆ ಐಕ್ಯಗೊಳ್ಳುವುದನ್ನು ನೋಡಲು ನಾನು ನಿರೀಕ್ಷಿಸುತ್ತೇನೆ. ನೀವು ಸಹ ಅದನ್ನು ನೋಡಲು ಬಯಸುವುದಿಲ್ಲವೇ?” ನಿಮ್ಮ ನಿರೀಕ್ಷೆಯ ಕುರಿತು ಆಶ್ಚರ್ಯದ ವಿಷಯವೊಂದನ್ನು ತಿಳಿಸುವ ಮೂಲಕ, ಜನರು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸುವಂತೆ ಮಾಡಲು ನೀವು ಶಕ್ತರಾಗಬಹುದು. ಎರಡು ಸಂಭಾವ್ಯ ಉತ್ತರಗಳಿರುವಾಗ ಪ್ರಶ್ನೆಗಳನ್ನು ಉತ್ತರಿಸುವುದು ಹೆಚ್ಚು ಸುಲಭ. (ಮತ್ತಾಯ 17:25) ಮನೆಯವನು ನಿಮ್ಮ ಪ್ರಶ್ನೆಗೆ ಉತ್ತರವನ್ನು ಕೊಟ್ಟಾದ ಮೇಲೆ, ಒಂದೆರಡು ಶಾಸ್ತ್ರವಚನಗಳ ಆಧಾರದಿಂದ ನೀವೇ ಅದನ್ನು ಉತ್ತರಿಸಿರಿ. (ಯೆಶಾಯ 11:9; ಚೆಫನ್ಯ 3:9) ಜಾಗ್ರತೆಯಿಂದ ಕಿವಿಗೊಡುತ್ತ ವ್ಯಕ್ತಿಯ ಪ್ರತಿಕ್ರಿಯೆಯನ್ನು ಗಮನಿಸುವ ಮೂಲಕ ಮುಂದಿನ ಭೇಟಿಯಲ್ಲಿ ಏನನ್ನು ಚರ್ಚಿಸಬಹುದೆಂದು ನಿರ್ಧರಿಸಲು ನೀವು ಶಕ್ತರಾಗಬಹುದು.
ಯೇಸು ಮಕ್ಕಳಿಗೆ ಕಿವಿಗೊಟ್ಟನು
17 ಯೇಸು ದೊಡ್ಡವರಲ್ಲಿ ಮಾತ್ರವಲ್ಲ ಮಕ್ಕಳಲ್ಲೂ ಆಸಕ್ತಿಯನ್ನು ತೋರಿಸಿದನು. ಮಕ್ಕಳು ಆಡಿದ ಆಟಗಳ ಮತ್ತು ಮಾತನಾಡಿದ ವಿಷಯಗಳ ಕುರಿತು ಅವನಿಗೆ ತಿಳಿದಿತ್ತು. ಮಕ್ಕಳನ್ನು ಕೆಲವೊಮ್ಮೆ ತನ್ನ ಬಳಿಗೆ ಅವನು ಬರಗೊಡಿಸುತ್ತಿದ್ದನು. (ಲೂಕ 7:31, 32; 18:15-17) ಯೇಸುವಿಗೆ ಕಿವಿಗೊಡುತ್ತಿದ್ದಂಥ ಗುಂಪುಗಳಲ್ಲಿ ಅನೇಕ ಮಕ್ಕಳು ಸಹ ಕೂಡಿದ್ದರು. ಹುಡುಗರು ಮೆಸ್ಸೀಯನಿಗೆ ಜಯಕಾರವೆತ್ತುತ್ತಾ ಕೂಗಿದಾಗ ಯೇಸು ಅದನ್ನು ಗಮನಿಸಿದನು ಮಾತ್ರವಲ್ಲ ಶಾಸ್ತ್ರಗ್ರಂಥವು ಅದನ್ನು ಮುಂತಿಳಿಸಿತ್ತೆಂದೂ ಸೂಚಿಸಿದನು. (ಮತ್ತಾಯ 14:21; 15:38; 21:15, 16) ಇಂದು ಸಹ ಅನೇಕ ಮಕ್ಕಳು ಯೇಸುವಿನ ಶಿಷ್ಯರಾಗುತ್ತಾ ಇದ್ದಾರಲ್ಲಾ. ಆದುದರಿಂದ ನೀವು ಅವರಿಗೆ ಹೇಗೆ ಸಹಾಯ ಮಾಡಬಲ್ಲಿರಿ?
18 ನಿಮ್ಮ ಮಗುವಿಗೆ ಆಧ್ಯಾತ್ಮಿಕ ರೀತಿಯಲ್ಲಿ ಸಹಾಯ ಮಾಡಲು ನೀವು ಅವನಿಗೆ ಕಿವಿಗೊಡುವುದು ಅತ್ಯಾವಶ್ಯಕ. ಯೆಹೋವನ ಆಲೋಚನೆಗೆ ಹೊಂದಿಕೆಯಲ್ಲಿಲ್ಲದ ಯಾವ ವಿಚಾರಗಳು ಅವನಲ್ಲಿವೆ ಎಂದು ತಿಳಿಯುವ ಅಗತ್ಯ ನಿಮಗಿದೆ. ಮಕ್ಕಳು ಏನೇ ಹೇಳಲಿ, ಪ್ರಥಮವಾಗಿ ಅದಕ್ಕೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸುವುದು ವಿವೇಕಪ್ರದ. ಅನಂತರ ನಿಮ್ಮ ಮಗುವಿಗೆ ಯೆಹೋವನ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲು ನೀವು ಸೂಕ್ತ ವಚನಗಳನ್ನು ಉಪಯೋಗಿಸಬಲ್ಲಿರಿ.
19 ಮಕ್ಕಳ ದೃಷ್ಟಿಕೋನವನ್ನು ಅರಿತುಕೊಳ್ಳಲು ಪ್ರಶ್ನೆಗಳು ಒಂದು ಪಾತ್ರವನ್ನು ವಹಿಸುತ್ತವೆ ನಿಜ. ಆದರೆ ಡೊಡ್ಡವರು ಹೇಗೋ ಹಾಗೆ ಮಕ್ಕಳು ಸಹ ವಿಚಾರಣಾತ್ಮಕ ಪ್ರಶ್ನೆಗಳನ್ನು ಇಷ್ಟಪಡುವುದಿಲ್ಲ. ಹಲವಾರು ಕಷ್ಟಕರ ಪ್ರಶ್ನೆಗಳನ್ನು ಉತ್ತರಿಸುವ ಭಾರವನ್ನು ಮಗುವಿನ ಮೇಲೆ ಹಾಕುವ ಬದಲಾಗಿ ಸ್ವತಃ ನಿಮ್ಮ ಕುರಿತಾಗಿ ಒಂದು ಸಂಕ್ಷಿಪ್ತ ಹೇಳಿಕೆಯನ್ನು ನೀವು ಮಾಡಬಹುದು. ನೀವು ಚರ್ಚಿಸುತ್ತಿರುವ ವಿಷಯದ ಮೇಲೆ ಹೊಂದಿಕೊಂಡು, ಒಂದು ಸಮಯದಲ್ಲಿ ನಿಮಗೆ ಅದರ ಬಗ್ಗೆ ಒಂದು ನಿರ್ದಿಷ್ಟ ಅನಿಸಿಕೆಯಿತ್ತು ಮತ್ತು ಅದು ಏಕಿತ್ತು ಎಂಬದನ್ನು ನೀವು ತಿಳಿಸಬಹುದು. ಅನಂತರ, “ನಿನಗೂ ಹಾಗನಿಸುತ್ತದೋ?” ಎಂದು ಕೇಳಿರಿ. ನಿಮ್ಮ ಮಗು ಕೊಡುವ ಉತ್ತರವು, ಒಂದು ಸಹಾಯಕಾರಿ ಮತ್ತು ಉತ್ತೇಜನೀಯ ಶಾಸ್ತ್ರಾಧಾರಿತ ಚರ್ಚೆಗೆ ನಡೆಸಬಹುದು.
ಮಹಾ ಶಿಷ್ಯ-ರಚಕನನ್ನು ಅನುಕರಿಸುತ್ತಾ ಇರಿ
20 ನೀವು ಒಂದು ವಿಷಯವನ್ನು ನಿಮ್ಮ ಮಗುವಿನೊಂದಿಗಾಗಲಿ ಬೇರೆ ಯಾರೊಂದಿಗಾಗಲಿ ಚರ್ಚಿಸುತ್ತಿರಲಿ, ಚೆನ್ನಾಗಿ ಕಿವಿಗೊಡುವುದಂತೂ ಅತ್ಯಾವಶ್ಯಕ. ಅದು ಒಂದು ಪ್ರೀತಿಯ ಅಭಿವ್ಯಕ್ತಿಯಾಗಿದೆ ನಿಶ್ಚಯ. ಕಿವಿಗೊಟ್ಟು ಕೇಳುವ ಮೂಲಕ ನೀವು ದೀನತೆಯಿಂದ ವರ್ತಿಸುತ್ತೀರಿ. ಅದು, ಮಾತಾಡುವವನಿಗೆ ಗೌರವ ಮತ್ತು ಪ್ರೀತಿಯ ಪರಿಗಣನೆಯನ್ನು ತೋರಿಸುತ್ತದೆ. ಕಿವಿಗೊಡುವಿಕೆಯು ಆ ವ್ಯಕ್ತಿಯ ಮಾತುಗಳಿಗೆ ನಾವು ಗಮನಕೊಡುವುದನ್ನೂ ಅವಶ್ಯಪಡಿಸುತ್ತದೆ ನಿಶ್ಚಯ.
21 ಕ್ರೈಸ್ತ ಶುಶ್ರೂಷೆಯಲ್ಲಿ ನೀವು ಭಾಗವಹಿಸುವಾಗ ಮನೆಯವರಿಗೆ ಜಾಗರೂಕತೆಯಿಂದ ಕಿವಿಗೊಡಿರಿ. ಅವರು ಹೇಳುವುದನ್ನು ನೀವು ಗಮನಕೊಟ್ಟು ಕೇಳುವುದಾದರೆ, ಬೈಬಲಿನ ಯಾವ ಸತ್ಯವು ಅವರಿಗೆ ವಿಶೇಷವಾಗಿ ಇಷ್ಟವಾಗುವುದು ಎಂದು ವಿವೇಚಿಸಲು ಶಕ್ತರಾಗುವಿರಿ. ಅನಂತರ ಯೇಸುವಿನ ಬೋಧಿಸುವಿಕೆಯ ವಿವಿಧ ವಿಧಾನಗಳನ್ನು ಉಪಯೋಗಿಸುವ ಮೂಲಕ ಅವರಿಗೆ ಸಹಾಯ ಮಾಡಿರಿ. ಹಾಗೆ ಮಾಡುವಾಗ ನೀವು ಮಹಾ ಶಿಷ್ಯ-ರಚಕನನ್ನು ಅನುಕರಿಸುತ್ತಿರುವ ಕಾರಣ ಸಂತೋಷ ಮತ್ತು ಸಂತೃಪ್ತಿಯ ಪ್ರತಿಫಲವು ನಿಮ್ಮದಾಗುವದು. (w07 11/15)
ನಿಮ್ಮ ಉತ್ತರವೇನು?
• ಇತರರು ತಮ್ಮ ವಿಚಾರಗಳನ್ನು ತಿಳಿಸುವಂತೆ ಯೇಸು ಅವರನ್ನು ಹೇಗೆ ಪ್ರೋತ್ಸಾಹಿಸಿದನು?
• ಯೇಸು ತಾನು ಬೋಧಿಸಿದವರಿಗೆ ಕಿವಿಗೊಟ್ಟದ್ದೇಕೆ?
• ನಿಮ್ಮ ಶುಶ್ರೂಷೆಯಲ್ಲಿ ಪ್ರಶ್ನೆಗಳನ್ನು ನೀವು ಹೇಗೆ ಉಪಯೋಗಿಸಬಲ್ಲಿರಿ?
• ಮಕ್ಕಳಿಗೆ ಆಧ್ಯಾತ್ಮಿಕವಾಗಿ ನೆರವಾಗಲು ನೀವೇನು ಮಾಡಬಲ್ಲಿರಿ?
[ಅಧ್ಯಯನ ಪ್ರಶ್ನೆಗಳು]
1, 2. ಯೇಸು ತನ್ನ ಶುಶ್ರೂಷೆಯ ಸಮಯದಲ್ಲಿ ಜನರೊಂದಿಗೆ ವ್ಯವಹರಿಸಿದ ರೀತಿಗೆ ನೀವೇಕೆ ಗಮನಕೊಡಬೇಕು?
3. ಯೇಸುವನ್ನು ಅನುಕರಿಸುವುದು ಶಿಷ್ಯರನ್ನಾಗಿ ಮಾಡುವ ನಿಮ್ಮ ಪ್ರಯತ್ನದ ಮೇಲೆ ಯಾವ ಪರಿಣಾಮ ಬೀರಬಲ್ಲದು?
4. ಯೇಸು ಚೆನ್ನಾಗಿ ಕಿವಿಗೊಡುವವನಾಗಿದ್ದನೆಂದು ಏಕೆ ಹೇಳಸಾಧ್ಯವಿದೆ?
5, 6. ತಾನು ಬೋಧಿಸಿದ ಜನರ ಅಭಿವ್ಯಕ್ತಿಗಳಿಗೆ ಯೇಸು ಕಿವಿಗೊಟ್ಟನೆಂದು ನಮಗೆ ಹೇಗೆ ತಿಳಿದಿದೆ?
7. ಸಮಾರ್ಯರಲ್ಲಿ ಅನೇಕರು ಯೇಸುವನ್ನು ನಂಬುವವರಾದದ್ದು ಏಕೆ?
8. ಜನರಿಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಲು ಇರುವ ಸಾಮಾನ್ಯ ಅಪೇಕ್ಷೆಯು ಶುಶ್ರೂಷೆಯಲ್ಲಿ ಸಂಭಾಷಣೆ ಆರಂಭಿಸಲು ನಿಮಗೆ ಹೇಗೆ ನೆರವಾಗಬಲ್ಲದು?
9. ಕ್ಲೆಯೊಫನಿಗೆ ಮತ್ತು ಅವನ ಸಂಗಡಿಗನಿಗೆ ‘ಗ್ರಂಥಗಳ ಅರ್ಥವನ್ನು ಬಿಚ್ಚಿ ಹೇಳುವ’ ಮುಂಚೆ ಯೇಸು ಏನು ಮಾಡಿದನು?
10. ಶುಶ್ರೂಷೆಯಲ್ಲಿ ಭೇಟಿಯಾಗುವ ವ್ಯಕ್ತಿಯೊಬ್ಬನ ಧಾರ್ಮಿಕ ದೃಷ್ಟಿಕೋನವನ್ನು ನೀವು ಹೇಗೆ ಕಂಡುಹಿಡಿಯಬಹುದು?
11. ಬೋಧಿಸಲ್ಪಡಲು ಯೋಗ್ಯರಾದ ಜನರನ್ನು ಕಂಡುಕೊಳ್ಳಲು ನಿಮಗೆ ಯಾವುದು ಸಹಾಯ ಮಾಡುವುದು?
12. ಆಸಕ್ತಿತೋರಿಸುವ ವ್ಯಕ್ತಿಗೆ ನೀವು ಹೇಗೆ ಸಹಾಯ ಮಾಡುತ್ತಾ ಇರಬಲ್ಲಿರಿ?
13. ಬೈಬಲ್ ಕುರಿತು ಒಬ್ಬ ವ್ಯಕ್ತಿಗಿರುವ ಅನಿಸಿಕೆಗಳನ್ನು ವಿವೇಚಿಸಲು ನಿಮಗೆ ಯಾವುದು ಸಹಾಯ ಮಾಡಬಹುದು?
14. ಜನರಿಗೆ ವಿಚಾರಣಾತ್ಮಕ ಪ್ರಶ್ನೆಗಳನ್ನು ಹಾಕದೇ ಅವರ ದೃಷ್ಟಿಕೋನದಲ್ಲಿ ನೀವು ಹೇಗೆ ಆಸಕ್ತಿ ತೋರಿಸಬಹುದು?
15, 16. ಧಾರ್ಮಿಕ ವಿಷಯಗಳ ಕುರಿತು ನೀವು ಜನರನ್ನು ಹೇಗೆ ಸಂಭಾಷಣೆಗೆ ಎಳೆಯಬಲ್ಲಿರಿ?
17. ಯೇಸು ಮಕ್ಕಳಲ್ಲಿ ಆಸಕ್ತನಿದ್ದನೆಂದು ಯಾವುದು ತೋರಿಸುತ್ತದೆ?
18, 19. ನಿಮ್ಮ ಮಗುವಿಗೆ ಆಧ್ಯಾತ್ಮಿಕವಾಗಿ ಹೇಗೆ ಸಹಾಯ ನೀಡಬಲ್ಲಿರಿ?
20, 21. ಶಿಷ್ಯರನ್ನಾಗಿ ಮಾಡುವ ನಿಮ್ಮ ಕೆಲಸದಲ್ಲಿ ನೀವು ಚೆನ್ನಾಗಿ ಕಿವಿಗೊಡುವವರಾಗಿರಬೇಕು ಏಕೆ?
[ಪುಟ 28ರಲ್ಲಿರುವ ಚಿತ್ರ]
ಸಾರುವಾಗ ಕಿವಿಗೊಡಲು ನಿಶ್ಚಯದಿಂದಿರ್ರಿ
[ಪುಟ 30ರಲ್ಲಿರುವ ಚಿತ್ರ]
ಮಕ್ಕಳಿಗೆ ಆಧ್ಯಾತ್ಮಿಕವಾಗಿ ನೆರವಾಗುವಾಗ ನಾವು ಯೇಸುವನ್ನು ಅನುಕರಿಸುತ್ತೇವೆ