ಅಧ್ಯಾಯ 46
ಅವಳು ಅವನ ಉಡುಪನ್ನು ಮುಟ್ಟದಳು
ದೆಕಪೊಲಿಯಿಂದ ಯೇಸುವಿನ ಹಿಂದಿರುಗುವಿಕೆಯ ವಾರ್ತೆ ಕಪೆರ್ನೌಮಿಗೆ ಮುಟ್ಟುತ್ತದೆ, ಮತ್ತು ಒಂದು ದೊಡ್ಡ ಗುಂಪು ಆತನನ್ನು ಸ್ವಾಗತಿಸಲು ಸಮುದ್ರದ ಹತ್ತಿರ ಒಟ್ಟುಗೂಡುತ್ತದೆ. ಆತನು ಬಿರುಗಾಳಿಯನ್ನು ಶಾಂತಗೊಳಿಸಿದ ಮತ್ತು ದೆವ್ವ ಹಿಡಿದ ಮನುಷ್ಯರನ್ನು ಗುಣಪಡಿಸಿದ ವಿಷಯವನ್ನು ಅವರು ಕೇಳಿದ್ದರೆಂಬದಕ್ಕೆ ಸಂಶಯವಿಲ್ಲ. ಈಗ ಆತನು ದಂಡೆಯನ್ನು ಹತ್ತುತ್ತಿರುವಾಗ ಕುತೂಹಲ ಹಾಗೂ ನಿರೀಕ್ಷೆಯಿಂದ ಅವರು ಆತನನ್ನು ಸುತ್ತುವರಿಯುತ್ತಾರೆ.
ಯೇಸುವನ್ನು ಕಾಣಲು ತವಕಪಟ್ಟವರಲ್ಲಿ ಸಭಾಮಂದಿರದ ಅಧಿಕಾರಿಯಾದ ಯಾಯಿರನು ಒಬ್ಬನು. ಆತನು ಯೇಸುವಿನ ಕಾಲುಗಳಿಗೆ ಬಿದ್ದು, “ನನ್ನ ಚಿಕ್ಕ ಮಗಳು ಈಗ ಸಾಯುತ್ತಾಳೆ. ಆಕೆ ವಾಸಿಯಾಗಿ ಬದುಕಿ ಕೊಳ್ಳುವಂತೆ ನೀನು ಬಂದು ಆಕೆಯ ಮೇಲೆ ಕೈಯಿಡಬೇಕು” ಎಂದು ಪುನಃ ಪುನಃ ಬೇಡಿಕೊಳ್ಳುತ್ತಾನೆ. ಅವಳು ಆತನ ಒಬ್ಬಳೇ ಮಗಳು ಮತ್ತು ಕೇವಲ 12 ವರ್ಷದವಳಾಗಿದ್ದದರಿಂದ ಅವಳು ವಿಶೇಷವಾಗಿ ಯಾಯಿರನಿಗೆ ಅಮೂಲ್ಯವಾಗಿದ್ದಳು.
ಯೇಸು ಇದಕ್ಕೆ ಪ್ರತಿಕ್ರಿಯಿಸಿ ಜನರ ಗುಂಪಿನೊಂದಿಗೆ ಜತೆಗೂಡಿ ಯಾಯಿರನ ಮನೇಕಡೆ ಹೊರಡುತ್ತಾನೆ. ಇನ್ನೊಂದು ಅದ್ಭುತಕಾರ್ಯವನ್ನು ನಿರೀಕ್ಷಿಸುವ ಜನರ ಉದ್ರೇಕವನ್ನು ನಾವು ಊಹಿಸಬಹುದು. ಆದರೆ ಜನರ ಗುಂಪಿನ ಒಬ್ಬ ಹೆಂಗಸಿನ ಗಮನವು ತನ್ನ ಸ್ವಂತ ವಿಪರೀತ ಸಮಸ್ಯೆಯ ಮೇಲೆ ಕೇಂದ್ರಿತವಾಗಿದೆ.
ಹನ್ನೆರಡು ವರ್ಷಗಳ ದೀರ್ಘಕಾಲ ಈ ಹೆಂಗಸು ರಕ್ತ ಕುಸುಮ ರೋಗದಿಂದ ನರಳುತ್ತಿದ್ದಳು. ಒಬ್ಬನಿಂದ ಇನ್ನೊಬ್ಬ ವೈದ್ಯನಿಗೆ ಹೋಗುತ್ತಾ ಅವಳು ತನ್ನೆಲ್ಲಾ ಹಣವನ್ನು ಚಿಕಿತ್ಸೆಗೋಸ್ಕರ ಖರ್ಚು ಮಾಡಿದ್ದಳು. ಆದರೆ ಇದರಿಂದ ಅವಳಿಗೆ ಸಹಾಯವಾಗಲಿಲ್ಲ. ಬದಲಾಗಿ ಅವಳ ಸಮಸ್ಯೆಯು ಇನ್ನೂ ಕೆಟ್ಟಿತ್ತು.
ಅವಳನ್ನು ತುಂಬಾ ಬಲಹೀನಗೊಳಿಸುವ ಜೊತೆಗೆ ಅವಳ ಕಾಯಿಲೆ ಪೇಚಾಡಿಸುವ ಮತ್ತು ಹೀನಸ್ಥಿತಿಯದ್ದಾಗಿತ್ತೆಂಬದನ್ನು ನೀವು ಬಹು ಮಟ್ಟಿಗೆ ಗ್ರಹಿಸಬಹುದು. ಸಾಮಾನ್ಯವಾಗಿ ಒಬ್ಬನು ಇಂಥ ರೋಗದ ಕುರಿತು ಬಹಿರಂಗವಾಗಿ ಮಾತಾಡುವದಿಲ್ಲ. ಮೇಲಾಗಿ, ಮೋಶೆಯ ನಿಯಮಶಾಸ್ತ್ರದ ಕೆಳಗೆ ರಕ್ತಸ್ರಾವವು ಒಬ್ಬ ಹೆಂಗಸನ್ನು ಅಶುದ್ಧಳನ್ನಾಗಿ ಮಾಡುತ್ತಿತ್ತು. ಮತ್ತು ಅವಳನ್ನು ಅಥವಾ ಅವಳ ರಕ್ತಕಲುಷಿತ ಬಟ್ಟೆಗಳನ್ನು ಮುಟ್ಟಿದವರು ತಮ್ಮನ್ನು ತೊಳೆದು ಕೊಂಡು ಸಂಜೆಯ ತನಕ ಅಶುದ್ಧರಾಗಿರಬೇಕಿತ್ತು.
ಈ ಹೆಂಗಸು ಯೇಸುವಿನ ಅದ್ಭುತ ಕಾರ್ಯಗಳ ಕುರಿತು ಕೇಳಿದ್ದಾಳೆ ಮತ್ತು ಅವನನ್ನು ಈಗ ಕಂಡು ಹಿಡಿದಿದ್ದಾಳೆ. ತನ್ನ ಅಶುದ್ಧತೆಯನ್ನು ದೃಷ್ಟಿಯಲ್ಲಿಟ್ಟು ಸಾಧ್ಯವಾದಷ್ಟು ಗಮನ ಸೆಳೆಯದೇ ಗುಂಪಿನ ನಡುವೆ ನುಸುಳುತ್ತಾಳೆ. ಮತ್ತು ತನ್ನಷ್ಟಕ್ಕೆ “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು” ಎಂದು ಹೇಳಿಕೊಳ್ಳುತ್ತಾಳೆ. ಅವಳು ಹಾಗೆ ಮಾಡಿದಾಗ, ತನ್ನ ರಕ್ತಸ್ರಾವ ನಿಂತಿದೆ ಎಂದು ತಕ್ಷಣ ಅವಳಿಗೆ ಅರಿವಾಗುತ್ತದೆ.
“ನನ್ನನ್ನು ಯಾರು ಮುಟ್ಟಿದರು?“ ಎಂಬ ಯೇಸುವಿನ ಮಾತು ಅವಳನ್ನೆಷ್ಟು ತಲ್ಲಣಗೊಳಿಸಿರಬೇಕು! ಅವನಿಗೆ ತಿಳಿದದ್ದು ಹೇಗೆ? ಪೇತ್ರನು “ಗುರುವೇ, ಜನರು ನಿನ್ನನ್ನು ನೂಕುವದನ್ನು ಕಂಡೂ ನನ್ನನ್ನು ಯಾರು ಮುಟ್ಟಿದರೆಂದು ಕೇಳುತ್ತಿಯಲ್ಲಾ” ಎಂದು ಪ್ರತಿಭಟಿಸಿದನು.
ಆ ಹೆಂಗಸಿಗಾಗಿ ಹುಡುಕುತ್ತಾ ಯೇಸು ವಿವರಿಸುವುದು: “ಯಾರೋ ಒಬ್ಬರು ನನ್ನನ್ನು ಮುಟ್ಟಿದರು. ನನ್ನಿಂದ ಶಕ್ತಿಯು ಹೊರಟಿತೆಂದು ನನಗೆ ಗೊತ್ತಾಯಿತು.” ನಿಶ್ಚಯವಾಗಿ, ಅದೊಂದು ಸಾಧಾರಣ ಸ್ಪರ್ಶವಾಗಿರಲಿಲ್ಲ ಏಕೆಂದರೆ ಅದರಿಂದ ಉಂಟಾದ ವಾಸಿಯು ಯೇಸುವಿನ ಪ್ರಾಣಧಾರಕ ಶಕ್ತಿಯನ್ನು ಸೆಳೆದಿತ್ತು.
ತಾನು ಮರೆಯಾಗಿಲ್ಲವೆಂದು ತಿಳಿದು, ಆ ಹೆಂಗಸು ಹೆದರಿ ನಡುಗುತ್ತಾ ಯೇಸುವಿನ ಕಾಲುಗಳಿಗೆ ಅಡ್ಡ ಬೀಳುತ್ತಾಳೆ ಮತ್ತು ಎಲ್ಲಾ ಜನರ ಎದುರಲ್ಲಿ ಅವಳ ರೋಗದ ಕುರಿತಾಗಿ ಮತ್ತು ತಾನು ಈವಾಗಲೇ ಹೇಗೆ ವಾಸಿಯಾದಳೆಂಬ ಪೂರ್ಣ ಸತ್ಯವನ್ನು ತಿಳಿಸುತ್ತಾಳೆ.
ಅವಳ ಪೂರ್ಣ ತಪ್ಪೊಪ್ಪಿಗೆಯಿಂದ ಪ್ರೇರಿಸಲ್ಪಟ್ಟ ಯೇಸು “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು, ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗ ಹೋಗಿ ನಿನಗೆ ಗುಣವಾಗಲಿ” ಎಂದು ಸಹಾನುಭೂತಿಯಿಂದ ಸಂತೈಸುತ್ತಾನೆ. ಭೂಮಿಯನ್ನು ಆಳಲು ದೇವರು ಆರಿಸಿಕೊಂಡಿರುವ ವ್ಯಕ್ತಿಯು ಬೆಚ್ಚನೆಯ, ಸಹಾನುಭೂತಿಯ ವ್ಯಕ್ತಿಯಾಗಿದ್ದು ಜನರನ್ನು ಲಕ್ಷ್ಯಿಸುವವನೂ ಮತ್ತು ಅವರಿಗೆ ಸಹಾಯ ಮಾಡ ಶಕ್ತಿಯಿದ್ದವನೂ ಆಗಿದ್ದಾನೆಂದು ತಿಳಿಯುವದು ಎಷ್ಟು ಒಳ್ಳೇದು! ಮತ್ತಾಯ 9:18-22; ಮಾರ್ಕ 5:21-34; ಲೂಕ 8:40-48; ಯಾಜಕಕಾಂಡ 15:25-27.
▪ ಯಾಯಿರನು ಯಾರು, ಮತ್ತು ಅವನು ಯೇಸುವಿನೆಡೆಗೆ ಏಕೆ ಬರುತ್ತಾನೆ?
▪ ಒಬ್ಬ ಹೆಂಗಸಿಗೆ ಯಾವ ಸಮಸ್ಯೆ ಇತ್ತು, ಮತ್ತು ಸಹಾಯಕ್ಕಾಗಿ ಯೇಸುವಿನೆಡೆ ಬರುವುದು ಅವಳಿಗೆ ಅಷ್ಟು ಕಷ್ಟಕರವಾಗಿತ್ತೇಕೆ?
▪ ಆ ಹೆಂಗಸು ಹೇಗೆ ಗುಣವಾದಳು, ಮತ್ತು ಯೇಸು ಅವಳನ್ನು ಹೇಗೆ ಸಂತೈಸುತ್ತಾನೆ?