ಮಾನವಕುಲದ ಅದ್ಭುತಕರ ವಾಸಿಮಾಡುವಿಕೆಯು ಹತ್ತಿರವಿದೆ
“ನಾವು ಇಂಥದನ್ನು ಎಂದಿಗೂ ನೋಡಿದ್ದೇ ಇಲ್ಲ.” ಹಾಗೆಂದು, ಯೇಸುವಿನ ಮೂಲಕ ಒಬ್ಬ ಪಾರ್ಶ್ವವಾಯು ಪೀಡಿತ ಮನುಷ್ಯನ ಅದ್ಭುತಕರ, ತತ್ಕ್ಷಣದ ವಾಸಿಮಾಡುವಿಕೆಯನ್ನು ಕಂಡ ಪ್ರತ್ಯಕ್ಷಸಾಕ್ಷಿಗಳು ನುಡಿದರು. (ಮಾರ್ಕ 2:12) ಯೇಸು ಕುರುಡರನ್ನು, ಮೂಕರನ್ನು, ಮತ್ತು ಕುಂಟರನ್ನು ಸಹ ಗುಣಪಡಿಸಿದನು, ಮತ್ತು ಅವನ ಹಿಂಬಾಲಕರೂ ಹಾಗೆಯೇ ಮಾಡಿದರು. ಯಾವ ಶಕ್ತಿಯಿಂದ ಯೇಸು ಅದನ್ನು ಮಾಡಿದನು? ನಂಬಿಕೆಯು ಯಾವ ಪಾತ್ರವನ್ನು ವಹಿಸಿತು? ಈ ಪ್ರಥಮ ಶತಮಾನದ ಅನುಭವಗಳು, ಇಂದು ನಡೆಯುವ ಅದ್ಭುತಕರ ವಾಸಿಮಾಡುವಿಕೆಯ ಮೇಲೆ ಯಾವ ಬೆಳಕನ್ನು ಬೀರುತ್ತವೆ?—ಮತ್ತಾಯ 15:30, 31.
“ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು”
ಹನ್ನೆರಡು ವರ್ಷಗಳಿಂದ ರಕ್ತಕುಸುಮರೋಗದಿಂದ ಕಷ್ಟಾನುಭವಿಸುತ್ತಿದ್ದ ಒಬ್ಬ ಸ್ತ್ರೀಯು, ಗುಣಹೊಂದಲಿಕ್ಕಾಗಿ ಯೇಸುವಿನ ಬಳಿಗೆ ಬಂದಾಗ, ಅವನು ಅವಳಿಗೆ ಹೇಳಿದ ಮಾತುಗಳನ್ನು ಉದಾಹರಿಸಲು ಇಂದಿನ ಭಕ್ತಿಚಿಕಿತ್ಸಕರು ಇಷ್ಟಪಡುತ್ತಾರೆ: “ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು.” (ಲೂಕ 8:43-48) ಅವಳ ಗುಣಹೊಂದುವಿಕೆಯು ಅವಳ ನಂಬಿಕೆಯ ಮೇಲೆ ಅವಲಂಬಿಸಿತ್ತೆಂಬುದನ್ನು ಯೇಸುವಿನ ಮಾತುಗಳು ಸೂಚಿಸಿದವೊ? ಅದು ಇಂದು ಆಚರಣೆಯಲ್ಲಿರುವಂತಹ “ಭಕ್ತಿಚಿಕಿತ್ಸೆ”ಯ ಒಂದು ಉದಾಹರಣೆಯಾಗಿತ್ತೊ?
ನಾವು ಬೈಬಲ್ ದಾಖಲೆಯನ್ನು ಜಾಗರೂಕವಾಗಿ ಓದುವಾಗ, ಹೆಚ್ಚಿನ ಸಂದರ್ಭಗಳಲ್ಲಿ ರೋಗಗ್ರಸ್ಥರು ತಾವು ಗುಣಹೊಂದುವ ಮೊದಲು ತಮ್ಮ ನಂಬಿಕೆಯನ್ನು ಪ್ರಕಟಪಡಿಸುವಂತೆ ಯೇಸು ಮತ್ತು ಅವನ ಶಿಷ್ಯರು ಕೇಳಿಕೊಳ್ಳಲಿಲ್ಲವೆಂಬುದನ್ನು ನಾವು ನೋಡುತ್ತೇವೆ. ಮೇಲೆ ಉದಾಹರಿಸಲ್ಪಟ್ಟ ಸ್ತ್ರೀಯು ಬಂದು, ಯೇಸುವಿನೊಂದಿಗೆ ಒಂದು ಮಾತನ್ನೂ ಆಡದೆ, ನಿಶ್ಶಬ್ದವಾಗಿ ಅವನ ನಿಲುವಂಗಿಯನ್ನು ಹಿಂದಿನಿಂದ ಮುಟ್ಟಿದಳು, ಮತ್ತು “ಮುಟ್ಟುತ್ತಲೇ ಆಕೆಗೆ ರಕ್ತಹರಿಯುವದು ನಿಂತಿತು.” ಮತ್ತೊಂದು ಸಂದರ್ಭದಲ್ಲಿ ಯೇಸು, ತನ್ನನ್ನು ಸೆರೆಹಿಡಿಯಲು ಬಂದಿದ್ದವರಲ್ಲಿ ಒಬ್ಬ ಮನುಷ್ಯನನ್ನು ವಾಸಿಮಾಡಿದನು. ಯೇಸು ಯಾರಾಗಿದ್ದನೆಂಬ ಕಲ್ಪನೆಯೇ ಇರದಿದ್ದ ಒಬ್ಬ ಮನುಷ್ಯನನ್ನೂ ಅವನು ವಾಸಿಮಾಡಿದನು.—ಲೂಕ 22:50, 51; ಯೋಹಾನ 5:5-9, 13; 9:24-34.
ಹಾಗಾದರೆ, ನಂಬಿಕೆಯು ಯಾವ ಪಾತ್ರವನ್ನು ವಹಿಸಿತು? ಯೇಸು ಮತ್ತು ಅವನ ಶಿಷ್ಯರು ತೂರ್ ಮತ್ತು ಸೀದೋನ್ನ ಜಿಲ್ಲೆಯಲ್ಲಿದ್ದಾಗ, ಫಿನಿಷಿಯದ ಸ್ತ್ರೀಯೊಬ್ಬಳು ಬಂದು, ಕೂಗಿ ಹೇಳಿದ್ದು: “ಸ್ವಾಮೀ, ದಾವೀದನ ಕುಮಾರನೇ, ನನ್ನನ್ನು ಕರುಣಿಸು. ನನ್ನ ಮಗಳಿಗೆ ದೆವ್ವದ ಕಾಟ ಬಹಳವಾಗಿದೆ.” “ಸ್ವಾಮೀ, ನನಗೆ ಅನುಗ್ರಹ ಮಾಡಬೇಕು” ಎಂದು ಅವಳು ಬೇಡಿಕೊಂಡಾಗ, ಅವಳ ಹತಾಶೆಯನ್ನು ಕಲ್ಪಿಸಿಕೊಳ್ಳಿರಿ. ಕನಿಕರದಿಂದ ತುಂಬಿದವನಾಗಿ, ಯೇಸು ಉತ್ತರಿಸಿದ್ದು: “ಅಮ್ಮಾ, ನಿನ್ನ ನಂಬಿಕೆ ಬಹಳ; ನಿನ್ನ ಮನಸ್ಸಿನಂತೆ ಆಗಲಿ.” ಮತ್ತು ಅವಳ ಮಗಳು “ಅದೇ ಗಳಿಗೆಯಲ್ಲಿ” ವಾಸಿಯಾದಳು. (ಮತ್ತಾಯ 15:21-28) ಸ್ಪಷ್ಟವಾಗಿಯೇ, ನಂಬಿಕೆಯು ಅದರಲ್ಲಿ ಸೇರಿತ್ತು, ಆದರೆ ಯಾರ ನಂಬಿಕೆ? ಯೇಸು, ರೋಗಗ್ರಸ್ಥ ಮಗುವಿನ ನಂಬಿಕೆಯನ್ನಲ್ಲ, ಆ ತಾಯಿಯ ನಂಬಿಕೆಯನ್ನು ಪ್ರಶಂಸಿಸಿದನೆಂಬುದನ್ನು ಗಮನಿಸಿರಿ. ಮತ್ತು ಯಾವ ವಿಷಯದಲ್ಲಿ ನಂಬಿಕೆ? ಯೇಸುವನ್ನು “ಸ್ವಾಮೀ, ದಾವೀದನ ಕುಮಾರನೇ” ಎಂಬುದಾಗಿ ಸಂಬೋಧಿಸುವ ಮೂಲಕ, ಯೇಸುವು ವಾಗ್ದತ್ತ ಮೆಸ್ಸೀಯನಾಗಿದ್ದನೆಂಬುದನ್ನು ಆ ಸ್ತ್ರೀಯು ಬಹಿರಂಗವಾಗಿ ಅಂಗೀಕರಿಸುತ್ತಿದ್ದಳು. ಅದು ದೇವರಲ್ಲಿನ ಇಲ್ಲವೆ ವಾಸಿಮಾಡುವವನ ಶಕ್ತಿಯಲ್ಲಿನ ನಂಬಿಕೆಯ ಒಂದು ಸರಳ ಅಭಿವ್ಯಕ್ತಿಯಾಗಿರಲಿಲ್ಲ. “ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು” ಎಂದು ಯೇಸು ಹೇಳಿದಾಗ, ಮೆಸ್ಸೀಯನೋಪಾದಿ ಅವನಲ್ಲಿ ನಂಬಿಕೆಯಿಡದ ಹೊರತು, ಬಾಧಿತರು ವಾಸಿಯಾಗಲು ತನ್ನ ಬಳಿಗೆ ಬರುತ್ತಿರಲಿಲ್ಲ ಎಂಬುದನ್ನು ಅವನು ಅರ್ಥೈಸಿದನು.
ಯೇಸುವಿನಿಂದ ನಡೆಸಲ್ಪಟ್ಟ ವಾಸಿಮಾಡುವಿಕೆಯು, ಇಂದು ಸಾಮಾನ್ಯವಾಗಿ ನೋಡಲ್ಪಡುವ ಇಲ್ಲವೆ ಪ್ರತಿಪಾದಿಸಲ್ಪಡುವ ವಾಸಿಮಾಡುವಿಕೆಯಿಂದ ಬಹಳ ಭಿನ್ನವಾಗಿತ್ತೆಂದು, ನಾವು ಈ ಶಾಸ್ತ್ರೀಯ ಉದಾಹರಣೆಗಳಿಂದ ನೋಡಬಲ್ಲೆವು. ಜನರ ಗುಂಪುಗಳಿಂದ—ಕೂಗಾಟ, ಹಾಡುವಿಕೆ, ಗೋಳಾಟ, ಮೂರ್ಛೆಹೋಗುವುದು, ಇನ್ನು ಮುಂತಾದ—ಬಲವಾದ ಭಾವಾತ್ಮಕ ಪ್ರದರ್ಶನವಾಗಲಿ ಹಾಗೂ ಯೇಸುವಿನ ವತಿಯಿಂದ ನಾಟಕೀಯ ಉನ್ಮಾದವಾಗಲಿ ಅಲ್ಲಿರಲಿಲ್ಲ. ಇದಕ್ಕೆ ಕೂಡಿಸಿ, ದುರ್ಬಲರಲ್ಲಿ ನಂಬಿಕೆಯ ಕೊರತೆಯಿದೆ ಇಲ್ಲವೆ ಅವರ ಕಾಣಿಕೆ ಸಾಕಷ್ಟು ಉದಾರವಾದದ್ದಾಗಿರಲಿಲ್ಲವೆಂಬ ನೆಪದಿಂದ, ಯೇಸು ಅವರನ್ನು ವಾಸಿಮಾಡಲು ಎಂದೂ ತಪ್ಪಲಿಲ್ಲ.
ದೇವರ ಶಕ್ತಿಯಿಂದ ಉಂಟಾದ ಗುಣಪಡಿಸುವಿಕೆಗಳು
ಯೇಸು ಮತ್ತು ಅವನ ಶಿಷ್ಯರ ವಾಸಿಮಾಡುವಿಕೆಗಳು ಹೇಗೆ ಸಂಭವಿಸಿದವು? “ಗುಣಮಾಡುವದಕ್ಕೆ ಕರ್ತನ [“ಯೆಹೋವನ,” NW] ಶಕ್ತಿಯು ಆತನಲ್ಲಿತ್ತು” ಎಂಬುದಾಗಿ ಬೈಬಲು ಉತ್ತರಿಸುತ್ತದೆ. (ಲೂಕ 5:17) ಒಂದು ವಾಸಿಮಾಡುವಿಕೆಯ ಅನಂತರ, “ಅದನ್ನು ನೋಡಿ ಎಲ್ಲರು ದೇವರ ಮಹತ್ವಕ್ಕೆ ಬೆರಗಾದರು” ಎಂಬುದಾಗಿ ಲೂಕ 9:43 ಹೇಳುತ್ತದೆ. ಸೂಕ್ತವಾಗಿಯೇ, ವಾಸಿಮಾಡುವವನಂತೆ ಯೇಸು ತನ್ನ ಕಡೆಗೆ ಗಮನವನ್ನು ಸೆಳೆಯಲಿಲ್ಲ. ಒಂದು ಸಂದರ್ಭದಲ್ಲಿ, ದೆವ್ವದ ಕಾಟದಿಂದ ತಾನು ಮುಕ್ತಗೊಳಿಸಿದ್ದ ಒಬ್ಬ ಮನುಷ್ಯನಿಗೆ ಅವನು ಹೇಳಿದ್ದು: “ನೀನು ನಿನ್ನ ಮನೆಗೂ ನಿನ್ನ ಜನರ ಬಳಿಗೂ ಹೋಗಿ ಸ್ವಾಮಿಯು [“ಯೆಹೋವನು,” NW] ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಎಂಥೆಂಥ ಉಪಕಾರಗಳನ್ನು ಮಾಡಿದ್ದಾನೋ ಅದನ್ನು ಹೇಳು.”—ಮಾರ್ಕ 5:19.
ಯೇಸು ಮತ್ತು ಅಪೊಸ್ತಲರು ದೇವರ ಶಕ್ತಿಯಿಂದ ವಾಸಿಮಾಡಿದ ಕಾರಣ, ವಾಸಿಮಾಡುವಿಕೆಗಾಗಿ, ಗುಣಹೊಂದುತ್ತಿರುವ ವ್ಯಕ್ತಿಯ ವತಿಯಿಂದ ನಂಬಿಕೆಯು ಏಕೆ ಯಾವಾಗಲೂ ಬೇಕಾಗಿರಲಿಲ್ಲವೆಂಬುದನ್ನು ನೋಡುವುದು ಸುಲಭ. ಆದಾಗಲೂ, ವಾಸಿಮಾಡುವವನ ವತಿಯಿಂದ ಬಲವಾದ ನಂಬಿಕೆಯು ಅಗತ್ಯವಾಗಿತ್ತು. ಆದಕಾರಣ, ವಿಶೇಷವಾಗಿ ಶಕ್ತಿಶಾಲಿಯಾಗಿದ್ದ ಒಂದು ದೆವ್ವವನ್ನು ಬಿಡಿಸಲು ಯೇಸುವಿನ ಹಿಂಬಾಲಕರು ಅಶಕ್ತರಾಗಿದ್ದಾಗ, ಯೇಸು ಅವರಿಗೆ ಕಾರಣವನ್ನು ತಿಳಿಸಿದನು: “ನಿಮ್ಮ ನಂಬಿಕೆ ಕಡಿಮೆಯಾಗಿರುವದರಿಂದಲೇ.”—ಮತ್ತಾಯ 17:20.
ಅದ್ಭುತಕರ ವಾಸಿಮಾಡುವಿಕೆಯ ಉದ್ದೇಶ
ತನ್ನ ಭೂಶುಶ್ರೂಷೆಯ ಆದ್ಯಂತ ಯೇಸು ಬಹಳಷ್ಟು ಜನರನ್ನು ವಾಸಿಮಾಡಿದನಾದರೂ, ಅವನು ಪ್ರಧಾನವಾಗಿ ‘ವಾಸಿಮಾಡುವ ಶುಶ್ರೂಷೆ’ಯನ್ನು ಬೆನ್ನಟ್ಟುತ್ತಿರಲಿಲ್ಲ. ಅವನ ಅದ್ಭುತಕರ ವಾಸಿಮಾಡುವಿಕೆಯು—ಅದಕ್ಕಾಗಿ ಅವನು ಎಂದಿಗೂ ಜನರಿಂದ ಹಣವನ್ನು ಕೇಳಲಿಲ್ಲ ಇಲ್ಲವೆ ಯಾವುದೇ ದಾನಗಳನ್ನು ಕೋರಲಿಲ್ಲ—ಅವನ ಪ್ರಧಾನ ಹಿತಾಸಕ್ತಿಯಾಗಿದ್ದ, ‘ಪರಲೋಕರಾಜ್ಯದ ಸುವಾರ್ತೆಯನ್ನು ಸಾರಿ ಹೇಳು’ವುದಕ್ಕೆ ದ್ವಿತೀಯವಾಗಿತ್ತು. (ಮತ್ತಾಯ 9:35) ಒಂದು ಸಂದರ್ಭದಲ್ಲಿ “ಆತನು ಅವರನ್ನು ಪ್ರೀತಿಯಿಂದ ಸ್ವೀಕರಿಸಿ ದೇವರ ರಾಜ್ಯದ ವಿಷಯವಾಗಿ ಅವರ ಸಂಗಡ ಮಾತಾಡಿ ಕ್ಷೇಮ ಬೇಕಾದವರಿಗೆ ವಾಸಿಮಾಡಿದನು” ಎಂಬುದಾಗಿ ದಾಖಲೆಯು ಹೇಳುತ್ತದೆ. (ಲೂಕ 9:11) ಸುವಾರ್ತಾ ವೃತ್ತಾಂತಗಳಲ್ಲಿ, ಯೇಸು ಪದೇ ಪದೇ “ಬೋಧಕ”ನೆಂಬುದಾಗಿ ಸಂಬೋಧಿಸಲ್ಪಟ್ಟನೇ ಹೊರತು, “ವಾಸಿಮಾಡುವವ”ನಾಗಿ ಎಂದಿಗೂ ಸಂಬೋಧಿಸಲ್ಪಡಲಿಲ್ಲ.
ಹಾಗಾದರೆ, ಯೇಸು ಅದ್ಭುತಕರ ಗುಣಪಡಿಸುವಿಕೆಗಳನ್ನು ಏಕೆ ನಡೆಸಿದನು? ಪ್ರಧಾನವಾಗಿ ವಾಗ್ದಾನಿತ ಮೆಸ್ಸೀಯನೋಪಾದಿ ತನ್ನ ಗುರುತನ್ನು ಸ್ಥಾಪಿಸುವುದಕ್ಕಾಗಿಯೇ. ಸ್ನಾನಿಕನಾದ ಯೋಹಾನನು ಅನ್ಯಾಯವಾಗಿ ಬಂಧಿಸಲ್ಪಟ್ಟಾಗ, ಏನನ್ನು ಮಾಡುವಂತೆ ದೇವರು ತನ್ನನ್ನು ಕಳುಹಿಸಿದ್ದನೊ ಅದನ್ನು ತಾನು ಸಾಧಿಸಿದ್ದೇನೆಂಬ ಆಶ್ವಾಸನೆ ಅವನಿಗೆ ಬೇಕಿತ್ತು. ಅವನು ಯೇಸುವಿನ ಬಳಿಗೆ ತನ್ನ ಸ್ವಂತ ಶಿಷ್ಯರನ್ನು ಕಳುಹಿಸಿ, ಹೀಗೆ ಕೇಳಿದನು: “ಬರಬೇಕಾದವನು ನೀನೋ, ನಾವು ಬೇರೊಬ್ಬನ ದಾರಿಯನ್ನು ನೋಡಬೇಕೋ”? ಯೋಹಾನನ ಶಿಷ್ಯರಿಗೆ ಯೇಸು ಹೇಳಿದ ವಿಷಯವನ್ನು ಗಮನಿಸಿ: “ಕುರುಡರಿಗೆ ಕಣ್ಣು ಬರುತ್ತವೆ; ಕುಂಟರಿಗೆ ಕಾಲು ಬರುತ್ತವೆ; ಕುಷ್ಠರೋಗಿಗಳು ಶುದ್ಧರಾಗುತ್ತಾರೆ; ಕಿವುಡರಿಗೆ ಕಿವಿ ಬರುತ್ತವೆ; ಸತ್ತವರು ಜೀವವನ್ನು ಹೊಂದುತ್ತಾರೆ; ಬಡವರಿಗೆ ಸುವಾರ್ತೆ ಸಾರಲ್ಪಡುತ್ತದೆ; ನೀವು ಹೋಗಿ ಕಂಡುಕೇಳುವವುಗಳನ್ನು ಯೋಹಾನನಿಗೆ ತಿಳಿಸಿರಿ.”—ಮತ್ತಾಯ 11:2-5.
ಹೌದು, ಯೇಸು ವಾಸಿಮಾಡುವಿಕೆಯನ್ನು ಮಾತ್ರವಲ್ಲ, ಸುವಾರ್ತೆಗಳಲ್ಲಿ ದಾಖಲಿಸಲ್ಪಟ್ಟ ಇತರ ಅದ್ಭುತಕರ ಕೆಲಸಗಳನ್ನೂ ಮಾಡಿದನೆಂಬ ನಿಜತ್ವವು, “ಬರಬೇಕಾದ” ವಾಗ್ದತ್ತ ಮೆಸ್ಸೀಯನೋಪಾದಿ ಅವನ ಗುರುತನ್ನು ದೃಢವಾಗಿ ಸ್ಥಾಪಿಸಿತು. ‘ಬೇರೊಬ್ಬನ ದಾರಿಯನ್ನು ನೋಡಬೇಕಾದ’ ಅಗತ್ಯ ಯಾರಿಗೂ ಇರಲಿಲ್ಲ.
ಇಂದು ಅದ್ಭುತಕರ ಗುಣಪಡಿಸುವಿಕೆಗಳೊ?
ಹಾಗಾದರೆ, ಇಂದು ಗುಣಪಡಿಸುವಿಕೆಗಳ ಮೂಲಕ ದೇವರು ತನ್ನ ಶಕ್ತಿಯ ಪ್ರಮಾಣವನ್ನು ನೀಡಲು ನಾವು ಅಪೇಕ್ಷಿಸಬೇಕೊ? ಇಲ್ಲ. ದೇವರ ಶಕ್ತಿಯಿಂದ ತಾನು ನಡೆಸಿದ ಅದ್ಭುತಕರ ಕಾರ್ಯಗಳ ಮೂಲಕ, ಬರಲಿರುವನೆಂದು ದೇವರು ವಾಗ್ದಾನಿಸಿದ್ದ ಮೆಸ್ಸೀಯನು ತಾನಾಗಿದ್ದೇನೆಂಬುದನ್ನು ಯೇಸು ನಿಸ್ಸಂಶಯವಾಗಿ ಸ್ಥಾಪಿಸಿದ್ದನು. ಎಲ್ಲರು ಓದುವಂತೆ ಯೇಸುವಿನ ಪ್ರಬಲ ಕೃತ್ಯಗಳು ಬೈಬಲಿನಲ್ಲಿ ದಾಖಲಿಸಲ್ಪಟ್ಟಿವೆ. ಪ್ರತಿಯೊಂದು ಸಂತತಿಯ ಜನರ ಮುಂದೆ ಇಂತಹ ಕೃತ್ಯಗಳನ್ನು ಪುನರಾವರ್ತಿಸುವ ಮೂಲಕ, ತನ್ನ ಶಕ್ತಿಯನ್ನು ರುಜುಪಡಿಸುವ ಅಗತ್ಯ ದೇವರಿಗಿಲ್ಲ.
ಆಸಕ್ತಿಕರವಾಗಿ, ಈ ಗುಣಪಡಿಸುವಿಕೆಗಳು ಮತ್ತು ಇತರ ಅದ್ಭುತಕರ ಕಾರ್ಯಗಳು ಒಂದಿಷ್ಟು ಮಟ್ಟಿಗೆ ಮಾತ್ರ ಮನಗಾಣಿಸುವಂತಹವುಗಳಾಗಿದ್ದವು. ಯೇಸುವಿನ ಅದ್ಭುತಗಳನ್ನು ಕಣ್ಣಾರೆಕಂಡ ಕೆಲವು ಸಾಕ್ಷಿಗಳು ಸಹ, ಅವನಿಗೆ ತನ್ನ ಸ್ವರ್ಗೀಯ ಪಿತನ ಸಮರ್ಥನೆಯಿತ್ತೆಂಬುದನ್ನು ನಂಬಲಿಲ್ಲ. “ಆತನು ಅವರ ಮುಂದೆ ಅಷ್ಟು ಸೂಚಕಕಾರ್ಯಗಳನ್ನು ಮಾಡಿದರೂ ಅವರು ಆತನನ್ನು ನಂಬಲಿಲ್ಲ.” (ಯೋಹಾನ 12:37) ಆದುದರಿಂದಲೇ, ಪ್ರಥಮ ಶತಮಾನದ ಕ್ರೈಸ್ತ ಸಭೆಯ ವಿಭಿನ್ನ ಸದಸ್ಯರಿಗೆ ದೇವರು ಕೊಟ್ಟಿದ್ದ ಹಲವಾರು ಅದ್ಭುತಕರ ಕೊಡುಗೆ—ಪ್ರವಾದಿಸುವುದು, ಅನ್ಯಭಾಷೆಗಳಲ್ಲಿ ಮಾತಾಡುವುದು, ವಾಸಿಮಾಡುವುದು, ಇನ್ನು ಮುಂತಾದವು—ಗಳ ಕುರಿತು ಚರ್ಚಿಸಿದ ಅನಂತರ, ಅಪೊಸ್ತಲ ಪೌಲನು ಹೀಗೆ ಹೇಳುವಂತೆ ಪ್ರೇರೇಪಿಸಲ್ಪಟ್ಟನು: “ಪ್ರವಾದನೆಗಳಾದರೋ ಇಲ್ಲದಂತಾಗುವವು; ವಾಣಿಗಳೋ ನಿಂತುಹೋಗುವವು; ವಿದ್ಯೆಯೋ ಇಲ್ಲದಂತಾಗುವದು. ಅಪೂರ್ಣವಾಗಿ ತಿಳುಕೊಳ್ಳುತ್ತೇವೆ, ಅಪೂರ್ಣವಾಗಿ ಪ್ರವಾದಿಸುತ್ತೇವೆ. ಆದರೆ ಸಂಪೂರ್ಣವಾದದ್ದು ಬಂದಾಗ ಅಪೂರ್ಣವಾದದ್ದು ಇಲ್ಲದಂತಾಗುವದು.”—1 ಕೊರಿಂಥ 12:28-31; 13:8-10.
ನಿಶ್ಚಯವಾಗಿಯೂ, ದೇವರಲ್ಲಿ ನಂಬಿಕೆಯಿರುವುದು ನಮ್ಮ ಸುಕ್ಷೇಮಕ್ಕೆ ಅತ್ಯಾವಶ್ಯಕ. ಆದಾಗಲೂ, ಗುಣಪಡಿಸುವಿಕೆಗಳ ಕುರಿತ ಸುಳ್ಳು ವಾಗ್ದಾನಗಳ ಮೇಲೆ ಒಬ್ಬನ ನಂಬಿಕೆಯನ್ನು ಆಧರಿಸುವುದು, ಕೇವಲ ನಿರಾಶೆಗೆ ನಡೆಸುವುದು. ಅಲ್ಲದೆ, ಅಂತ್ಯದ ಸಮಯದ ಕುರಿತಾಗಿ, ಯೇಸು ಈ ಎಚ್ಚರಿಕೆಯನ್ನು ಕೊಟ್ಟನು: “ಸುಳ್ಳುಕ್ರಿಸ್ತರೂ ಸುಳ್ಳುಪ್ರವಾದಿಗಳೂ ಎದ್ದು ಸಾಧ್ಯವಾದರೆ ದೇವರಾದುಕೊಂಡವರನ್ನು ಸಹ ಮೋಸಗೊಳಿಸುವದಕ್ಕೋಸ್ಕರ ದೊಡ್ಡ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.” (ಮತ್ತಾಯ 24:24) ಮೋಸಗಾರಿಕೆ ಮತ್ತು ವಂಚನೆಗಳಲ್ಲದೆ, ಪೈಶಾಚಿಕ ಶಕ್ತಿಯ ಪ್ರದರ್ಶನಗಳೂ ಇರುವವು. ಫಲಸ್ವರೂಪವಾಗಿ, ವಿವರಿಸಲಾಗದ ಘಟನೆಗಳ ಪ್ರತಿಪಾದನೆಗಳು ನಮ್ಮನ್ನು ಆಶ್ಚರ್ಯಗೊಳಿಸಬಾರದು, ಮತ್ತು ಇವು, ದೇವರಲ್ಲಿ ಯಥಾರ್ಥವಾದ ನಂಬಿಕೆಗಾಗಿ ನಿಶ್ಚಯವಾಗಿಯೂ ಒಂದು ಆಧಾರವಾಗಿರುವುದಿಲ್ಲ.
ಯೇಸು ಮಾಡಿದಂತಹ ಗುಣಪಡಿಸುವಿಕೆಗಳನ್ನು ಇಂದು ಯಾರೊಬ್ಬರೂ ನಡೆಸದೆ ಇರುವ ಕಾರಣ, ಇದರಿಂದ ನಮಗೆ ಯಾವ ನಷ್ಟವಾದರೂ ಇದೆಯೋ? ಖಂಡಿತವಾಗಿಯೂ ಇಲ್ಲ. ವಾಸ್ತವದಲ್ಲಿ, ಯೇಸುವಿನಿಂದ ವಾಸಿಮಾಡಲ್ಪಟ್ಟವರು ಕಟ್ಟಕಡೆಗೆ ಪುನಃ ರೋಗಗ್ರಸ್ಥರಾಗಸಾಧ್ಯವಿತ್ತು. ಅವರೆಲ್ಲರು ವೃದ್ಧರಾಗಿ ಸತ್ತರು. ವಾಸಿಮಾಡುವಿಕೆಯಿಂದ ತಾವು ಪಡೆದಂತಹ ಪ್ರಯೋಜನಗಳು ಸಂಬಂಧಸೂಚಕವಾಗಿ ಕ್ಷಣಿಕವಾಗಿದ್ದವು. ಆದರೂ, ಯೇಸುವಿನ ಅದ್ಭುತಕರ ಗುಣಪಡಿಸುವಿಕೆಗಳಿಗೆ ಶಾಶ್ವತ ಅರ್ಥವಿದೆ. ಅವು ಭಾವಿ ಆಶೀರ್ವಾದಗಳನ್ನು ಮುನ್ಸೂಚಿಸಿದವು.
ಆದಕಾರಣ, ದೇವರ ವಾಕ್ಯವಾದ ಬೈಬಲನ್ನು ಪರಿಶೀಲಿಸಿದ ಬಳಿಕ, ಈ ಮೊದಲು ಉಲ್ಲೇಖಿಸಲ್ಪಟ್ಟ ಆಲೀಷಾಂಡ್ರೆ ಮತ್ತು ಬೆನೆಡೀಟ, ಇನ್ನು ಮುಂದೆ ತಮ್ಮ ನಂಬಿಕೆಯನ್ನು ಆಧುನಿಕ ಭಕ್ತಿಚಿಕಿತ್ಸೆ ಮತ್ತು ಪ್ರೇತವ್ಯವಹಾರಾತ್ಮಕ ಗುಣಪಡಿಸುವಿಕೆಗಳಲ್ಲಿ ಇಡುವುದಿಲ್ಲ. ಆದರೂ, ಅದ್ಭುತಕರ ವಾಸಿಮಾಡುವಿಕೆಗಳು ಗತಕಾಲದಲ್ಲಿ ಸಂಭವಿಸಿದ ವಿಷಯಗಳಾಗಿಲ್ಲ ಎಂಬುದನ್ನು ಅವರು ಮನಗಂಡಿದ್ದಾರೆ. ಹಾಗೇಕೆ? ಲೋಕದಾದ್ಯಂತವಿರುವ ಲಕ್ಷಾಂತರ ಜನರಂತೆ, ಅವರು ದೇವರ ರಾಜ್ಯದಲ್ಲಿ ಸಂಭವಿಸಲಿರುವ ವಾಸಿಮಾಡುವಿಕೆಯ ಆಶೀರ್ವಾದಗಳಿಗಾಗಿ ಎದುರುನೋಡುತ್ತಾರೆ.—ಮತ್ತಾಯ 6:10.
ಅನಾರೋಗ್ಯ ಮತ್ತು ಮರಣ ಇನ್ನಿಲ್ಲ
ನಾವು ಈ ಮೊದಲು ನೋಡಿರುವಂತೆ, ಯೇಸುವಿನ ಶುಶ್ರೂಷೆಯ ಮುಖ್ಯ ಉದ್ದೇಶವು, ರೋಗಗ್ರಸ್ಥರನ್ನು ವಾಸಿಮಾಡಿ, ಇತರ ಅದ್ಭುತಗಳನ್ನು ನಡೆಸುವುದಾಗಿರಲಿಲ್ಲ. ಬದಲಿಗೆ, ಅವನು ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದನ್ನು ತನ್ನ ಮುಖ್ಯ ಕೆಲಸವನ್ನಾಗಿ ಮಾಡಿದನು. (ಮತ್ತಾಯ 9:35; ಲೂಕ 4:43; 8:1) ಆ ರಾಜ್ಯವು, ದೇವರು ಮಾನವಕುಲದ ಅದ್ಭುತಕರ ವಾಸಿಮಾಡುವಿಕೆಯನ್ನು ನೆರವೇರಿಸಲಿರುವ ಮತ್ತು ಮಾನವ ಕುಟುಂಬದ ಮೇಲೆ ಪಾಪ ಹಾಗೂ ಅಪರಿಪೂರ್ಣತೆಯು ಬರಮಾಡಿರುವ ಸಕಲ ಹಾನಿಯನ್ನು ಅಳಿಸಿಬಿಡಲಿರುವ ಸಾಧನವಾಗಿದೆ. ಇದನ್ನು ಆತನು ಹೇಗೆ ಮತ್ತು ಯಾವಾಗ ಸಾಧಿಸುವನು?
ದೂರದ ಭವಿಷ್ಯತ್ತನ್ನು ಮುಂತಿಳಿಸುತ್ತಾ, ಕ್ರಿಸ್ತ ಯೇಸು ತನ್ನ ಅಪೊಸ್ತಲನಾದ ಯೋಹಾನನಿಗೆ ಒಂದು ಪ್ರವಾದನಾತ್ಮಕ ದರ್ಶನವನ್ನು ನೀಡಿದನು: “ಈಗ ರಕ್ಷಣೆ ಮತ್ತು ಶಕ್ತಿ ಮತ್ತು ನಮ್ಮ ದೇವರ ರಾಜ್ಯವು ಮತ್ತು ಅವನ ಕ್ರಿಸ್ತನ ಅಧಿಕಾರವು ಉಂಟಾದವು!” (ಪ್ರಕಟನೆ 12:10, NW) ಎಲ್ಲ ಪ್ರಮಾಣವು ತೋರಿಸುವುದೇನೆಂದರೆ, 1914ರಂದಿನಿಂದ ದೇವರ ಮಹಾ ವಿರೋಧಿಯಾದ ಸೈತಾನನು, ಭೂಮಿಯ ಪರಿಸರಕ್ಕೆ ದೊಬ್ಬಲ್ಪಟ್ಟಿದ್ದಾನೆ, ಮತ್ತು ರಾಜ್ಯವು ಈಗ ಒಂದು ನೈಜತೆಯಾಗಿ ಕಾರ್ಯಮಾಡುತ್ತಿದೆ! ಯೇಸು ಆ ಮೆಸ್ಸೀಯ ಸಂಬಂಧಿತ ರಾಜ್ಯದ ರಾಜನಾಗಿ ಪ್ರತಿಷ್ಠಾಪಿಸಲ್ಪಟ್ಟಿದ್ದಾನೆ ಮತ್ತು ಈಗ ಭೂಮಿಯ ಮೇಲೆ ಮಹತ್ತರವಾದ ಬದಲಾವಣೆಗಳನ್ನು ಮಾಡಲು ಸಿದ್ಧನಾಗಿದ್ದಾನೆ.
ಹತ್ತಿರದ ಭವಿಷ್ಯತ್ತಿನಲ್ಲಿ, ಯೇಸುವಿನ ಸ್ವರ್ಗೀಯ ಸರಕಾರವು, ಒಂದು ನೀತಿಯ ಹೊಸ ಮಾನವ ಸಮಾಜದ ಮೇಲೆ, ಕಾರ್ಯತಃ “ನೂತನ ಭೂಮಂಡಲ”ದ ಮೇಲೆ ಆಳ್ವಿಕೆ ನಡೆಸುವುದು. (2 ಪೇತ್ರ 3:13) ಆಗ ಪರಿಸ್ಥಿತಿಗಳು ಹೇಗಿರುವವು? ಇಲ್ಲೊಂದು ಮಹಿಮಾಭರಿತ ಮುನ್ನೋಟವಿದೆ: “ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು; . . . ಮತ್ತು [ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲ್ಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:1, 4.
ಮಾನವಕುಲದ ಅದ್ಭುತಕರ ವಾಸಿಮಾಡುವಿಕೆಯು ನಿಜವಾಗಿ ಪರಿಣಮಿಸುವಾಗ, ಜೀವನವು ಹೇಗಿರುವುದೆಂದು ನೀವು ಕಲ್ಪಿಸಿಕೊಳ್ಳಬಲ್ಲಿರೊ? “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು; ಅಲ್ಲಿಯ ಜನರ ಪಾಪವು ಪರಿಹಾರವಾಗುವದು.” ಹೌದು, ಭಕ್ತಿಚಿಕಿತ್ಸಕರಿಂದ ಎಂದೂ ಮಾಡಸಾಧ್ಯವಿರದ ವಿಷಯವನ್ನು ದೇವರು ಸಾಧಿಸುವನು. “ಮರಣವನ್ನು ಶಾಶ್ವತವಾಗಿ ನಿರ್ನಾಮಮಾಡುವನು.” ನಿಶ್ಚಯವಾಗಿಯೂ, “ಕರ್ತನಾದ ಯೆಹೋವನು ಎಲ್ಲರ ಮುಖದಲ್ಲಿನ ಕಣ್ಣೀರನ್ನು ಒರಸಿಬಿಡುವನು.”—ಯೆಶಾಯ 25:8; 33:24.
[ಪುಟ 7 ರಲ್ಲಿರುವ ಚಿತ್ರ]
ದೇವರ ರಾಜ್ಯದ ಕೆಳಗೆ, ಮಾನವಕುಲವು ಅದ್ಭುತಕರವಾಗಿ ವಾಸಿಗೊಳಿಸಲ್ಪಡುವುದು