ಯೇಸುವಿನ ಜನನ ನೈಜ ಇತಿಹಾಸ
ನಿಮ್ಮ ದೇಶದ ಇತಿಹಾಸದಲ್ಲಿನ ಅತಿ ಪ್ರಸಿದ್ಧ ಘಟನೆಯ ಕುರಿತಾಗಿ ಸ್ವಲ್ಪ ಯೋಚಿಸಿರಿ. ಅದರ ಕುರಿತು ಒಬ್ಬನಿಗಿಂತಲೂ ಹೆಚ್ಚು ಇತಿಹಾಸಕಾರರು ಬರೆದು, ಅದು ಚೆನ್ನಾಗಿ ದಾಖಲಿಸಲ್ಪಟ್ಟಿದೆ. ಆದರೆ ಯಾರೊ ಒಬ್ಬರು ನಿಮ್ಮ ಬಳಿ ಬಂದು, ಆ ಘಟನೆಯು ಸಂಭವಿಸಿಯೇ ಇಲ್ಲ, ಅದೆಲ್ಲವೂ ಒಂದು ಮಿಥ್ಯೆಯಾಗಿದೆಯೆಂದು ಹೇಳುವಲ್ಲಿ, ನಿಮಗೆ ಹೇಗನಿಸೀತು? ಇಲ್ಲವೇ, ಆ ವಿಷಯವನ್ನು ಹೆಚ್ಚು ವೈಯಕ್ತಿಕವಾದ ರೀತಿಯಲ್ಲಿ ನಿಮಗೇ ಅನ್ವಯಿಸೋಣ. ನಿಮ್ಮ ಸ್ವಂತ ಅಜ್ಜನ ಜನನ ಮತ್ತು ಆರಂಭದ ಜೀವನದ ಕುರಿತಾಗಿ ನಿಮ್ಮ ಕುಟುಂಬವು ನಿಮಗೆ ಹೇಳಿದ ಹೆಚ್ಚಿನ ವಿಷಯವು ಸುಳ್ಳು ಎಂದು ಯಾರಾದರೂ ಹೇಳುವಲ್ಲಿ, ಆಗೇನು? ಈ ಎರಡೂ ವಿದ್ಯಮಾನಗಳಲ್ಲಿ, ಹಾಗೆ ಹೇಳುವುದೇ ನಿಮ್ಮನ್ನು ಸಿಟ್ಟುಗೊಳಿಸಬಹುದು, ಅಲ್ಲವೇ? ಅವರು ಹಾಗೆ ಹೇಳಿದ ಕೂಡಲೇ ನೀವು ಅದನ್ನು ಖಂಡಿತವಾಗಿಯೂ ಒಪ್ಪಿಕೊಳ್ಳುವುದಿಲ್ಲ.
ಇಂದು, ಸಾಮಾನ್ಯವಾಗಿ ವಿಮರ್ಶಕರು, ಯೇಸುವಿನ ಜನನದ ಕುರಿತಾಗಿ ಮತ್ತಾಯ ಮತ್ತು ಲೂಕನು ಬರೆದ ಸುವಾರ್ತಾ ದಾಖಲೆಗಳನ್ನು ಕಡೆಗಣಿಸುತ್ತಾರೆ. ಈ ವೃತ್ತಾಂತಗಳಲ್ಲಿ ತುಂಬ ವಿರೋಧೋಕ್ತಿಗಳಿವೆ, ಅವುಗಳನ್ನು ಒಂದಕ್ಕೊಂದು ಹೊಂದಿಸಲು ಸಾಧ್ಯವಿಲ್ಲ, ಮತ್ತು ಎರಡೂ ವೃತ್ತಾಂತಗಳಲ್ಲಿ ಮುಚ್ಚುಮರೆಯಿಲ್ಲದ ಸುಳ್ಳುಗಳು ಹಾಗೂ ಐತಿಹಾಸಿಕ ತಪ್ಪುಗಳಿವೆಯೆಂದು ಅವರು ಹೇಳುತ್ತಾರೆ. ಅದು ನಿಜವೊ? ಅಂತಹ ಆಪಾದನೆಗಳನ್ನು ಒಪ್ಪಿಕೊಳ್ಳುವ ಬದಲು, ನಾವಾಗಿಯೇ ಆ ಸುವಾರ್ತಾ ವೃತ್ತಾಂತಗಳನ್ನು ಪರೀಕ್ಷಿಸೋಣ. ಹಾಗೆ ಮಾಡುವಾಗ, ಅವು ಇಂದು ನಮಗೆ ಯಾವ ಪಾಠವನ್ನು ಕಲಿಸುತ್ತವೆಂಬುದನ್ನು ನಾವು ನೋಡೋಣ.
ಅವುಗಳು ಬರೆಯಲ್ಪಟ್ಟಿರುವ ಉದ್ದೇಶ
ಪ್ರಥಮವಾಗಿ, ಈ ಬೈಬಲ್ ವೃತ್ತಾಂತಗಳ ಉದ್ದೇಶವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಉತ್ತಮ. ಅವು ಜೀವನಚರಿತ್ರೆಗಳಲ್ಲ, ಬದಲಾಗಿ ಸುವಾರ್ತೆಗಳಾಗಿವೆ. ಈ ವ್ಯತ್ಯಾಸವನ್ನು ಗಮನದಲ್ಲಿಡುವುದು ಪ್ರಾಮುಖ್ಯ. ಒಂದು ಜೀವನಚರಿತ್ರೆಯಲ್ಲಿ, ಲೇಖಕನು, ಅವನು ಯಾರ ಕುರಿತಾಗಿ ಬರೆಯುತ್ತಿದ್ದಾನೊ ಆ ವ್ಯಕ್ತಿಯು ಹೇಗೆ ಅಷ್ಟು ಪ್ರಸಿದ್ಧ ವ್ಯಕ್ತಿಯಾದನೆಂಬುದನ್ನು ತೋರಿಸಲು ಪ್ರಯತ್ನಿಸುತ್ತಾ, ನೂರಾರು ಪುಟಗಳನ್ನು ಬರೆಯುತ್ತಾನೆ. ಆದುದರಿಂದಲೇ ಕೆಲವು ಜೀವನಚರಿತ್ರೆಗಳಲ್ಲಿ ವ್ಯಕ್ತಿಯ ವಂಶ, ಜನನ, ಮತ್ತು ಬಾಲ್ಯಾವಸ್ಥೆಯ ಕುರಿತಾಗಿ ನೂರಾರು ಪುಟಗಳಲ್ಲಿ ವಿವರಿಸಿ ಬರೆಯಲಾಗಿರುತ್ತದೆ. ಆದರೆ ಸುವಾರ್ತಾ ಪುಸ್ತಕಗಳಲ್ಲಿ ಹಾಗಿರುವುದಿಲ್ಲ. ಇರುವ ನಾಲ್ಕು ಸುವಾರ್ತಾ ದಾಖಲೆಗಳಲ್ಲಿ, ಯೇಸುವಿನ ಜನನ ಮತ್ತು ಬಾಲ್ಯದ ಕುರಿತಾಗಿ ಕೇವಲ ಮತ್ತಾಯ ಮತ್ತು ಲೂಕನ ಎರಡು ಸುವಾರ್ತೆಗಳು ತಿಳಿಸುತ್ತವೆ. ಆದರೆ, ಯೇಸು ಒಬ್ಬ ಮಹಾನ್ ವ್ಯಕ್ತಿಯಾದದ್ದು ಹೇಗೆ ಎಂಬುದರ ಇತಿಹಾಸವನ್ನು ಕೊಡುವುದು ಅವುಗಳ ಉದ್ದೇಶವಾಗಿರಲಿಲ್ಲ. ಯೇಸು ಭೂಮಿಗೆ ಬರುವ ಮುಂಚೆ ಒಬ್ಬ ಆತ್ಮಜೀವಿಯಾಗಿ ಅಸ್ತಿತ್ವದಲ್ಲಿದ್ದನೆಂಬುದನ್ನು ಅವನ ಹಿಂಬಾಲಕರು ಅಂಗೀಕರಿಸಿದ್ದರೆಂಬ ವಿಷಯವನ್ನು ಜ್ಞಾಪಿಸಿಕೊಳ್ಳಿರಿ. (ಯೋಹಾನ 8:23, 58) ಆದುದರಿಂದ, ಯೇಸು ಯಾವ ರೀತಿಯ ವ್ಯಕ್ತಿಯಾದನು ಎಂಬುದನ್ನು ವಿವರಿಸಲಿಕ್ಕೋಸ್ಕರ ಮತ್ತಾಯ ಮತ್ತು ಲೂಕನು ಯೇಸುವಿನ ಬಾಲ್ಯವನ್ನು ಸವಿಸ್ತಾರವಾಗಿ ವರ್ಣಿಸಲಿಲ್ಲ. ಅದಕ್ಕೆ ಬದಲಾಗಿ, ಅವರು ತಮ್ಮ ಸುವಾರ್ತೆ ಪುಸ್ತಕಗಳ ಉದ್ದೇಶಕ್ಕೆ ಹೊಂದಿಕೆಯಲ್ಲಿದ್ದ ಘಟನೆಗಳನ್ನು ಮಾತ್ರ ತಿಳಿಸಿದರು.
ಹಾಗಾದರೆ ಅವರು ಆ ಸುವಾರ್ತೆಗಳನ್ನು ಬರೆಯುವ ಉದ್ದೇಶವೇನಾಗಿತ್ತು? ಆ ಇಬ್ಬರ ಸಂದೇಶವು ಒಂದೇ ಆಗಿತ್ತು. ಅದೇನೆಂದರೆ, ಯೇಸು ವಾಗ್ದತ್ತ ಮೆಸ್ಸೀಯ ಅಥವಾ ಕ್ರಿಸ್ತನು; ಅವನು ಮಾನವಕುಲದ ಪಾಪಗಳಿಗೋಸ್ಕರ ಸತ್ತನು; ಮತ್ತು ಪುನರುತ್ಥಾನಗೊಳಿಸಲ್ಪಟ್ಟು ಸ್ವರ್ಗಕ್ಕೆ ಹೋದನು ಎಂಬುದೇ. ಆದರೆ ಆ ಇಬ್ಬರು ಲೇಖಕರು ತೀರ ಭಿನ್ನವಾದ ಹಿನ್ನೆಲೆಯುಳ್ಳವರಾಗಿದ್ದರು ಮತ್ತು ಭಿನ್ನಭಿನ್ನ ವಾಚಕರಿಗಾಗಿ ಬರೆದರು. ಸುಂಕದವನಾದ ಮತ್ತಾಯನು, ತನ್ನ ವೃತ್ತಾಂತವನ್ನು ಬಹುಮಟ್ಟಿಗೆ ಯೆಹೂದಿ ವಾಚಕರಿಗಾಗಿ ರಚಿಸಿದನು. ಒಬ್ಬ ವೈದ್ಯನಾಗಿದ್ದ ಲೂಕನು, ಯಾವುದೋ ಒಂದು ಉಚ್ಚ ಸ್ಥಾನದಲ್ಲಿದ್ದಿರಬಹುದಾದ “ಶ್ರೀಮತ್ ಥೆಯೊಫಿಲ”ನಿಗೆ ಮತ್ತು ಬಹುಶಃ ವಿಸ್ತಾರವಾಗಿ ಯೆಹೂದ್ಯರು ಹಾಗೂ ಅನ್ಯಜನಾಂಗದವರಿಗಾಗಿ ಬರೆದನು. (ಲೂಕ 1:1-3) ಈ ಲೇಖಕರಲ್ಲಿ ಪ್ರತಿಯೊಬ್ಬನು ತನ್ನ ನಿರ್ದಿಷ್ಟ ವಾಚಕವೃಂದಕ್ಕೆ ಹೆಚ್ಚಾಗಿ ಸಂಬಂಧಿಸುವ ಮತ್ತು ಅವರಿಗೆ ಹೆಚ್ಚು ಮನಗಾಣಿಸುವಂತಹ ಘಟನೆಗಳನ್ನು ಆಯ್ದುಬರೆದನು. ಹೀಗಿರುವುದರಿಂದ, ಮತ್ತಾಯನ ದಾಖಲೆಯು, ಯೇಸುವಿನ ಸಂಬಂಧದಲ್ಲಿ ನೆರವೇರಿದಂತಹ ಹೀಬ್ರೂ ಶಾಸ್ತ್ರಗಳ ಪ್ರವಾದನೆಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಆದರೆ ಲೂಕನು, ತನ್ನ ಯೆಹೂದ್ಯೇತರ ವಾಚಕವೃಂದವು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿರುವ, ಹೆಚ್ಚು ಸಾಹಿತ್ಯಾತ್ಮಕ ಐತಿಹಾಸಿಕ ಶೈಲಿಯನ್ನು ಬಳಸುತ್ತಾನೆ.
ಆದುದರಿಂದ ಅವರ ವೃತ್ತಾಂತಗಳು ಭಿನ್ನವಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ. ಆದರೆ, ವಿಮರ್ಶಕರು ಹೇಳುವಂತೆ, ಅವು ಒಂದಕ್ಕೊಂದು ವಿರೋಧವಾಗಿರುವುದಿಲ್ಲ. ಅವು ಒಂದು ಹೆಚ್ಚು ಪೂರ್ಣವಾದ ಚಿತ್ರಣವನ್ನು ರಚಿಸಲು ಚೆನ್ನಾಗಿ ಲೀನವಾಗುತ್ತಾ, ಒಂದಕ್ಕೊಂದು ಪೂರಕವಾಗಿವೆ.
ಬೇತ್ಲೆಹೇಮಿನಲ್ಲಿ ಯೇಸುವಿನ ಜನನ
ಮತ್ತಾಯ ಮತ್ತು ಲೂಕನು, ಇಬ್ಬರೂ ಯೇಸುವಿನ ಜನನದ ಸಂಬಂಧದಲ್ಲಿ ಒಂದು ಗಮನಾರ್ಹವಾದ ಅದ್ಭುತವನ್ನು ದಾಖಲಿಸುತ್ತಾರೆ—ಅವನೊಬ್ಬ ಕನ್ಯೆಯಿಂದ ಹುಟ್ಟಿದನು. ಶತಮಾನಗಳ ಹಿಂದೆಯೇ ಯೆಶಾಯನು ತಿಳಿಸಿದಂತಹ ಒಂದು ಪ್ರವಾದನೆಯನ್ನು ಈ ಅದ್ಭುತವು ನೆರವೇರಿಸಿತೆಂದು ಮತ್ತಾಯನು ತೋರಿಸುತ್ತಾನೆ. (ಯೆಶಾಯ 7:14; ಮತ್ತಾಯ 1:22, 23) ಕೈಸರನು ಆಯೋಜಿಸಿದ ಖಾನೆಷುಮಾರಿಯು, ಯೋಸೇಫ ಮತ್ತು ಮರಿಯಳು ಬೇತ್ಲೆಹೇಮಿಗೆ ಪ್ರಯಾಣಿಸುವಂತೆ ನಿರ್ಬಂಧಿಸಿದ್ದರಿಂದ, ಯೇಸು ಬೇತ್ಲೆಹೇಮಿನಲ್ಲಿ ಜನಿಸಿದನೆಂದು ಲೂಕನು ವಿವರಿಸುತ್ತಾನೆ. (ಪುಟ 7ರಲ್ಲಿರುವ ರೇಖಾಚೌಕವನ್ನು ನೋಡಿರಿ.) ಯೇಸು ಬೇತ್ಲೆಹೇಮಿನಲ್ಲಿ ಜನಿಸಿದ್ದು ಗಮನಾರ್ಹವಾದ ಸಂಗತಿಯಾಗಿತ್ತು. ಮೆಸ್ಸೀಯನು ಯೆರೂಸಲೇಮಿನ ಬಳಿಯಲ್ಲಿನ ಅಷ್ಟೇನೂ ಪ್ರಸಿದ್ಧವಲ್ಲದ ಒಂದು ಚಿಕ್ಕ ಪಟ್ಟಣದಿಂದ ಬರುವನೆಂದು ಶತಮಾನಗಳ ಹಿಂದೆ ಪ್ರವಾದಿಯಾದ ಮೀಕನು ಮುಂತಿಳಿಸಿದ್ದನು.—ಮೀಕ 5:2.
ಯೇಸುವಿನ ಜನನದ ರಾತ್ರಿಯು, ಗೋದಲಿಯ ದೃಶ್ಯಗಳಿಗೆ ಆಧಾರದೋಪಾದಿ ಜನಪ್ರಿಯವಾಗಿದೆ. ಆದರೆ ವಾಸ್ತವದಲ್ಲಿ, ನೈಜ ಕಥೆಯು, ಗೋದಲಿಯ ದೃಶ್ಯಗಳಲ್ಲಿ ಚಿತ್ರಿಸಲಾಗುವ ಕಥೆಗಿಂತ ತೀರ ಭಿನ್ನವಾಗಿದೆ. ಯೋಸೇಫ ಮತ್ತು ಮರಿಯಳು ಬೇತ್ಲೆಹೇಮಿಗೆ ಬರುವಂತೆ ಮಾಡಿದ ಖಾನೆಷುಮಾರಿಯ ಕುರಿತಾಗಿ ತಿಳಿಸಿದ ಇತಿಹಾಸಕಾರ ಲೂಕನು ಆ ಮಹತ್ವಪೂರ್ಣ ರಾತ್ರಿಯಂದು, ಕುರುಬರು ತಮ್ಮ ಕುರಿಹಿಂಡುಗಳೊಂದಿಗೆ ಹೊಲಗಳಲ್ಲಿದ್ದರು ಎಂಬದನ್ನು ಸಹ ತಿಳಿಸುತ್ತಾನೆ. ಈ ಎರಡು ಪರಿಸ್ಥಿತಿಗಳಿಂದಾಗಿ, ಯೇಸು ಡಿಸೆಂಬರ್ ತಿಂಗಳಿನಲ್ಲಿ ಜನಿಸಿರಲು ಸಾಧ್ಯವೇ ಇಲ್ಲವೆಂಬ ತೀರ್ಮಾನಕ್ಕೆ ಅನೇಕ ಸಂಶೋಧಕರು ಬಂದಿದ್ದಾರೆ. ಸಿಡಿದೇಳುವ ಪ್ರವೃತ್ತಿಯುಳ್ಳ ಯೆಹೂದ್ಯರು, ಆ ಶೀತಲ ಮತ್ತು ಮಳೆಗಾಲದಲ್ಲಿ ತಮ್ಮ ಸ್ವಂತ ಊರುಗಳಿಗೆ ಪ್ರಯಾಣಬೆಳಸುವಂತೆ ಕೈಸರನು ಒತ್ತಾಯಪಡಿಸುವ ಅಸಂಭವನೀಯತೆಯ ಕುರಿತು ಅವರು ತಿಳಿಸುತ್ತಾರೆ. ಯಾಕಂದರೆ ಇದು ಆ ದಂಗೆಕೋರ ಜನರನ್ನು ಇನ್ನೂ ಹೆಚ್ಚು ಸಿಟ್ಟಿಗೆಬ್ಬಿಸಸಾಧ್ಯವಿತ್ತು. ಅಂತೆಯೇ, ಅಂತಹ ತೀಕ್ಷ್ಣ ಹವಾಮಾನದಲ್ಲಿ ಕುರುಬರು ತಮ್ಮ ಕುರಿಹಿಂಡುಗಳೊಂದಿಗೆ ಹೊರಗೆ ಹೊಲಗಳಲ್ಲಿರುವುದು ಅಷ್ಟೇ ಅಸಂಭವನೀಯವೆಂದು ವಿದ್ವಾಂಸರು ಹೇಳುತ್ತಾರೆ.—ಲೂಕ 2:8-14.
ಯೆಹೋವನು ತನ್ನ ಪುತ್ರನ ಜನನದ ಕುರಿತಾಗಿ, ಆ ಸಮಯದಲ್ಲಿನ ಶಿಕ್ಷಿತ ಮತ್ತು ಪ್ರಭಾವಶಾಲಿ ಧಾರ್ಮಿಕ ಮುಖಂಡರಿಗೆ ಅಲ್ಲ, ಬದಲಾಗಿ ಹೊಲಗಳಲ್ಲಿದ್ದ ಸಾಮಾನ್ಯ ಕಾರ್ಮಿಕರಿಗೆ ಪ್ರಕಟಪಡಿಸಿದನೆಂಬುದನ್ನು ಗಮನಿಸಿರಿ. ಆ ಶಾಸ್ತ್ರಿಗಳು ಮತ್ತು ಫರಿಸಾಯರು, ಕುರುಬರೊಂದಿಗೆ ಯಾವುದೇ ಸಂಪರ್ಕವನ್ನು ಇಡುತ್ತಿರಲಿಲ್ಲ. ಏಕೆಂದರೆ ಈ ಕುರುಬರ ಕೆಲಸದ ಸಮಯವು, ಅವರು ಮೌಖಿಕ ನಿಯಮದ ಕೆಲವೊಂದು ವಿಷಯಗಳನ್ನು ಪಾಲಿಸುವಂತೆ ಅನುಮತಿಸುತ್ತಿರಲಿಲ್ಲ. ಆದರೆ ದೇವರು ಈ ನಮ್ರ, ನಂಬಿಗಸ್ತ ಪುರುಷರನ್ನು ಒಂದು ದೊಡ್ಡ ರೀತಿಯಲ್ಲಿ ಸನ್ಮಾನಿಸಿದನು—ದೇವರ ಜನರು ಸಾವಿರಾರು ವರ್ಷಗಳಿಂದ ಯಾರಿಗಾಗಿ ಎದುರುನೋಡುತ್ತಾ ಇದ್ದರೊ, ಆ ಮೆಸ್ಸೀಯನು ಈಗ ತಾನೇ ಬೇತ್ಲೆಹೇಮಿನಲ್ಲಿ ಜನಿಸಿದ್ದಾನೆಂದು ದೇವದೂತರ ಒಂದು ಗುಂಪು ಅವರಿಗೆ ತಿಳಿಸಿತು. ಮರಿಯಳು ಮತ್ತು ಯೋಸೇಫನನ್ನು ಭೇಟಿಮಾಡಿ, ಈ ಮುಗ್ಧ ಶಿಶು ಒಂದು ಮೇವು ತೊಟ್ಟಿಯಲ್ಲಿ ಮಲಗಿರುವುದನ್ನು ನೋಡಿದವರು ಈ ಪುರುಷರೇ ಹೊರತು, ಗೋದಲಿಯ ದೃಶ್ಯಗಳಲ್ಲಿ ತೋರಿಸಲಾಗುವಂತೆ ಆ “ಮೂವರು ರಾಜರು” ಅಲ್ಲ.—ಲೂಕ 2:15-20.
ಸತ್ಯದ ನಮ್ರ ಅನ್ವೇಷಕರಿಗೆ ಯೆಹೋವನ ಅನುಗ್ರಹ
ದೇವರು ತನ್ನನ್ನು ಪ್ರೀತಿಸುವವರನ್ನು ಮತ್ತು ತನ್ನ ಉದ್ದೇಶಗಳು ನೆರವೇರುವುದನ್ನು ನೋಡುವುದರಲ್ಲಿ ತೀವ್ರ ಆಸಕ್ತಿಯುಳ್ಳವರಿಗೆ ಅನುಗ್ರಹವನ್ನು ತೋರಿಸುತ್ತಾನೆ. ಇದು, ಯೇಸುವಿನ ಜನನದ ಸಮಯದಲ್ಲಿ ನಡೆದಂತಹ ಘಟನೆಗಳಲ್ಲಿ ಎದ್ದುಕಾಣುವ ಸಂಗತಿಯಾಗಿದೆ. ಮಗುವಿನ ಜನನದ ಸುಮಾರು ಒಂದು ತಿಂಗಳ ನಂತರ, ಮೋಶೆಯ ಧರ್ಮಶಾಸ್ತ್ರಕ್ಕೆ ವಿಧೇಯತೆಯಲ್ಲಿ ಯೋಸೇಫ ಮತ್ತು ಮರಿಯಳು, ಅವನನ್ನು ದೇವಾಲಯಕ್ಕೆ ತರುತ್ತಾರೆ. ಅಲ್ಲಿ ಅವರು ‘ಒಂದು ಜೋಡಿ ಬೆಳವಕ್ಕಿಗಳನ್ನೊ ಎರಡು ಪಾರಿವಾಳದ ಮರಿಗಳನ್ನೊ’ ಅರ್ಪಿಸುತ್ತಾರೆ. (ಲೂಕ 2:22-24) ವಾಸ್ತವದಲ್ಲಿ ಧರ್ಮಶಾಸ್ತ್ರವು ಒಂದು ಕುರಿಯನ್ನು ಅವಶ್ಯಪಡಿಸಿತು. ಆದರೆ ಬಡವರಿಗಾಗಿ, ಅದು ಆ ದುಬಾರಿಯಲ್ಲದ ಆಯ್ಕೆಯನ್ನು ಅನುಮತಿಸಿತು. (ಯಾಜಕಕಾಂಡ 12:1-8) ಸ್ವಲ್ಪ ಯೋಚಿಸಿರಿ. ವಿಶ್ವದ ಪರಮಾಧಿಕಾರಿಯಾದ ಯೆಹೋವ ದೇವರು, ತನ್ನ ಪ್ರಿಯ, ಏಕಜಾತ ಪುತ್ರನು ಬೆಳೆಯುವ ಮನೆತನವಾಗಿ, ಒಂದು ಶ್ರೀಮಂತ ಕುಟುಂಬವನ್ನು ಅಲ್ಲ ಬದಲಾಗಿ ಒಂದು ಬಡ ಕುಟುಂಬವನ್ನು ಆಯ್ಕೆಮಾಡಿದನು. ನೀವು ಒಬ್ಬ ಹೆತ್ತವರಾಗಿರುವಲ್ಲಿ, ನೀವು ನಿಮ್ಮ ಮಕ್ಕಳಿಗೆ ಕೊಡಸಾಧ್ಯವಿರುವ ಅತ್ಯುತ್ತಮವಾದ ಕೊಡುಗೆಯು, ಆತ್ಮಿಕ ಮೌಲ್ಯಗಳನ್ನು ಪ್ರಥಮವಾಗಿಡುವ ಮನೆ ಪರಿಸರವೇ ಆಗಿದೆ ಎಂಬುದನ್ನು ಇದು ನಿಮಗೆ ಜ್ಞಾಪಕಹುಟ್ಟಿಸಬೇಕು. ಅದು ಭೌತಿಕ ಧನ ಅಥವಾ ಪ್ರತಿಷ್ಠೆಯ ಶಿಕ್ಷಣಕ್ಕಿಂತಲೂ ಶ್ರೇಷ್ಠವಾಗಿದೆ.
ದೇವಾಲಯದಲ್ಲಿ ಇನ್ನಿಬ್ಬರು ನಂಬಿಗಸ್ತ, ನಮ್ರ ಆರಾಧಕರಿಗೆ ಯೆಹೋವನು ಅನುಗ್ರಹವನ್ನು ತೋರಿಸುತ್ತಾನೆ. ಅವರಲ್ಲಿ ಒಬ್ಬಳು, “ದೇವಾಲಯವನ್ನು ಬಿಟ್ಟುಹೋಗದೆ” ಇರುತ್ತಿದ್ದ 84 ವರ್ಷ ಪ್ರಾಯದ ವಿಧವೆ ಅನ್ನಳಾಗಿದ್ದಳು. (ಲೂಕ 2:36, 37) ಇನ್ನೊಬ್ಬನು, ಒಬ್ಬ ನಂಬಿಗಸ್ತ ವೃದ್ಧ ಪುರುಷನಾದ ಸಿಮೆಯೋನನಾಗಿದ್ದನು. ತಾವು ಸಾಯುವ ಮುಂಚೆ ವಾಗ್ದತ್ತ ಮೆಸ್ಸೀಯನನ್ನು ಕಣ್ಣಾರೆ ಕಾಣುವ ಸುಯೋಗವನ್ನು ದೇವರು ತಮಗೆ ದಯಪಾಲಿಸಿದ್ದಕ್ಕಾಗಿ ಅವರಿಬ್ಬರೂ ಉಲ್ಲಾಸಿಸುತ್ತಾರೆ. ಸಿಮೆಯೋನನು ಆ ಮಗುವಿನ ಕುರಿತಾಗಿ ಒಂದು ಪ್ರವಾದನೆಯನ್ನು ನುಡಿಯುತ್ತಾನೆ. ಅದು ನಿರೀಕ್ಷೆಯಿಂದ ತುಂಬಿರುವುದಾದರೂ, ಕೊಂಚ ದುಃಖದೊಂದಿಗೆ ಮಿಶ್ರಿತವಾಗಿರುವ ಒಂದು ಪ್ರವಾದನೆಯಾಗಿದೆ. ಆ ಯುವ ತಾಯಿಯಾದ ಮರಿಯಳು, ಒಂದು ದಿನ ತನ್ನ ಪ್ರಿಯ ಪುತ್ರನಿಗಾಗಿ ಶೋಕದಿಂದ ಇರಿಯಲ್ಪಡುವಳೆಂದು ಅವನು ಮುಂತಿಳಿಸುತ್ತಾನೆ.—ಲೂಕ 2:25-35.
ಅಪಾಯದಲ್ಲಿರುವ ಮಗು
ಈ ಮುಗ್ಧ ಮಗು, ದ್ವೇಷಕ್ಕೆ ಗುರಿಯಾಗುವುದೆಂಬದನ್ನು ಸಿಮೆಯೋನನ ಪ್ರವಾದನೆಯು ಕಠೋರವಾಗಿ ಜ್ಞಾಪಿಸುತ್ತದೆ. ಅವನೊಬ್ಬ ಶಿಶುವಾಗಿದ್ದಾಗಲೇ, ಈ ದ್ವೇಷವು ಕಾರ್ಯನಡಿಸುತ್ತಾ ಇತ್ತು. ಅದು ಹೇಗೆಂಬುದನ್ನು ಮತ್ತಾಯನ ವೃತ್ತಾಂತವು ವಿವರಿಸುತ್ತದೆ. ಅನೇಕ ತಿಂಗಳುಗಳು ದಾಟಿವೆ ಮತ್ತು ಈಗ ಯೋಸೇಫ, ಮರಿಯಳು, ಹಾಗೂ ಯೇಸು ಬೇತ್ಲೆಹೇಮಿನಲ್ಲಿರುವ ಒಂದು ಮನೆಯಲ್ಲಿ ಜೀವಿಸುತ್ತಿದ್ದಾರೆ. ಅನಿರೀಕ್ಷಿತವಾಗಿ ಹಲವಾರು ಪರದೇಶಿಗಳು ಅವರನ್ನು ಸಂದರ್ಶಿಸುತ್ತಾರೆ. ಗೋದಲಿಯ ದೃಶ್ಯಗಳು ಮೂರು ಮಂದಿಯನ್ನು ಚಿತ್ರಿಸುತ್ತವಾದರೂ, ಎಷ್ಟು ಮಂದಿ ಬಂದಿದ್ದರೆಂಬುದನ್ನು ಮತ್ತಾಯನು ಯಾವುದೇ ರೀತಿಯಲ್ಲಿ ಸ್ಪಷ್ಟಪಡಿಸುವುದಿಲ್ಲ. ಅವನು ಇವರನ್ನು “ಜ್ಞಾನಿ ಪುರುಷರು,” ಮತ್ತು “ಮೂವರು ರಾಜರು” ಎಂದೂ ಕರೆಯುವುದಿಲ್ಲ. ಅವನು ಮ್ಯಾಗಿ ಎಂಬ ಗ್ರೀಕ್ ಪದವನ್ನು ಉಪಯೋಗಿಸುತ್ತಾನೆ. ಇದರರ್ಥ “ಜೋಯಿಸರು.” ಇಲ್ಲಿ ಏನೋ ಕುತಂತ್ರ ನಡೆಯುತ್ತಿದೆ ಎಂಬುದಕ್ಕೆ ಇದು ತಾನೇ ವಾಚಕನಿಗೆ ಸುಳಿವನ್ನು ಕೊಡಬೇಕು. ಯಾಕಂದರೆ ದೇವರ ವಾಕ್ಯವು ಜ್ಯೋತಿಶ್ಶಾಸ್ತ್ರವನ್ನು ಖಂಡಿಸುತ್ತದೆ, ಮತ್ತು ನಂಬಿಗಸ್ತ ಯೆಹೂದ್ಯರು ಬಹು ಎಚ್ಚರಿಕೆಯಿಂದ ಅದರಿಂದ ದೂರವಿರುತ್ತಿದ್ದರು.—ಧರ್ಮೋಪದೇಶಕಾಂಡ 18:10-12; ಯೆಶಾಯ 47:13, 14.
ಈ ಜೋಯಿಸರು ಪೂರ್ವದಿಂದ ಒಂದು ನಕ್ಷತ್ರವನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ ಮತ್ತು “ಯೆಹೂದ್ಯರ ಅರಸನಾಗಿ ಹುಟ್ಟಿದವ”ನಿಗಾಗಿ ಕೊಡುಗೆಗಳನ್ನು ತಂದಿದ್ದಾರೆ. (ಮತ್ತಾಯ 2:2) ಆದರೆ ಆ ನಕ್ಷತ್ರವು ಅವರನ್ನು ನೇರವಾಗಿ ಬೇತ್ಲೆಹೇಮಿಗೆ ನಡಿಸುವುದಿಲ್ಲ. ಅದು ಅವರನ್ನು ಯೆರೂಸಲೇಮಿಗೆ, ಮಹಾ ಹೆರೋದನ ಬಳಿ ಕೊಂಡೊಯ್ಯುತ್ತದೆ. ಎಳೆಯ ಯೇಸುವಿಗೆ ಹಾನಿಯನ್ನು ಮಾಡಲು, ಜಗತ್ತಿನಲ್ಲಿದ್ದ ಬೇರೆ ಯಾವ ಮನುಷ್ಯನಿಗೂ ಇಂತಹ ಮಾಧ್ಯಮ ಮತ್ತು ಉದ್ದೇಶವು ಇರಲಿಲ್ಲ. ಈ ಮಹತ್ವಾಕಾಂಕ್ಷೆಯುಳ್ಳ ರಕ್ತಪಿಪಾಸಿ ಮನುಷ್ಯನು, ತನ್ನ ಸ್ವಂತ ಕುಟುಂಬದ ಸದಸ್ಯರಲ್ಲಿ ತನಗೆ ಬೆದರಿಕೆಯಾಗಿರುವಂತೆ ಕಂಡ ಅನೇಕರನ್ನು ಕೊಂದುಹಾಕಿದ್ದನು.a ಒಬ್ಬ ಭಾವೀ ‘ಯೆಹೂದ್ಯರ ಅರಸನ’ ಕುರಿತಾಗಿ ಕೇಳಿ ಕಳವಳಗೊಂಡು, ಅವನನ್ನು ಬೇತ್ಲೆಹೇಮಿನಲ್ಲಿ ಕಂಡುಹಿಡಿಯಲು ಅವನು ಆ ಜೋಯಿಸರನ್ನು ಕಳುಹಿಸುತ್ತಾನೆ. ಅವರು ಹೋಗುತ್ತಿರುವಾಗ, ಒಂದು ವಿಚಿತ್ರ ಸಂಗತಿ ನಡೆಯುತ್ತದೆ. ಯೆರೂಸಲೇಮಿಗೆ ಪ್ರಯಾಣಿಸುವಂತೆ ಅವರನ್ನು ನಡಿಸಿದ ಆ “ನಕ್ಷತ್ರ”ವು ಚಲಿಸುತ್ತಿರುವಂತೆ ತೋರುತ್ತದೆ!—ಮತ್ತಾಯ 2:1-9.
ಆ ನಕ್ಷತ್ರವು ಆಕಾಶದಲ್ಲಿ ನಿಜವಾಗಿ ಒಂದು ಪ್ರಕಾಶವಾಗಿತ್ತೊ ಅಥವಾ ಕೇವಲ ಒಂದು ದರ್ಶನವಾಗಿತ್ತೊ ಎಂಬುದು ನಮಗೆ ಗೊತ್ತಿಲ್ಲ. ಆದರೆ ಆ “ನಕ್ಷತ್ರ”ವು ದೇವರಿಂದ ಬಂದದ್ದಾಗಿರಲಿಲ್ಲವೆಂಬುದು ಮಾತ್ರ ನಮಗೆ ಖಂಡಿತವಾಗಿಯೂ ತಿಳಿದಿದೆ. ಗುರಿತಪ್ಪದೆ ಅದು, ಈ ವಿಧರ್ಮಿ ಆರಾಧಕರನ್ನು ನೇರವಾಗಿ ಯೇಸುವಿನ ಬಳಿ ನಡಿಸುತ್ತದೆ. ಆಗ ಅವನು ಕೇವಲ ಒಬ್ಬ ಬಡ ಬಡಗಿ ಮತ್ತು ಅವನ ಪತ್ನಿಯಿಂದ ಸಂರಕ್ಷಿಸಲ್ಪಟ್ಟಿರುವ ಒಬ್ಬ ಸುಲಭಭೇದ್ಯ, ನಿಸ್ಸಹಾಯಕ ಮಗುವಾಗಿದ್ದನು. ತಮಗೆ ಅರಿವಿಲ್ಲದೆ ಹೆರೋದನ ಕೈಗೊಂಬೆಗಳಾಗಿದ್ದ ಈ ಜೋಯಿಸರು, ಆ ದ್ವೇಷಭರಿತ ಸಾಮ್ರಾಟನ ಬಳಿಗೆ ಹಿಂದಿರುಗಿ ವರದಿಯನ್ನು ಒಪ್ಪಿಸುವ ಸಾಧ್ಯತೆಯಿತ್ತು. ಮತ್ತು ಇದು ಆ ಮಗುವಿನ ನಾಶಕ್ಕೆ ನಡಿಸಸಾಧ್ಯವಿತ್ತು. ಆದರೆ ದೇವರು ಒಂದು ಕನಸಿನ ಮೂಲಕ ಮಧ್ಯಪ್ರವೇಶಿಸಿ, ಅವರನ್ನು ಇನ್ನೊಂದು ಮಾರ್ಗದಲ್ಲಿ ಮನೆಗೆ ಹಿಂದಿರುಗಿಸುತ್ತಾನೆ. ಹಾಗಾದರೆ ಆ “ನಕ್ಷತ್ರ”ವು, ಮೆಸ್ಸೀಯನಿಗೆ ಹಾನಿಯಾಗುವಂತೆ ಏನನ್ನೇ ಮಾಡಲು ಸಿದ್ಧನಾಗಿದ್ದ ದೇವರ ಶತ್ರುವಾದ ಸೈತಾನನ ಒಂದು ಸಾಧನವಾಗಿದ್ದಿರಬೇಕು. ಗೋದಲಿಯ ದೃಶ್ಯಗಳಲ್ಲಿ ಆ “ನಕ್ಷತ್ರ” ಮತ್ತು ಜೋಯಿಸರು ದೇವರ ಪ್ರತಿನಿಧಿಗಳೋಪಾದಿ ಚಿತ್ರಿಸಲ್ಪಟ್ಟಿರುವುದು ಎಷ್ಟು ಹಾಸ್ಯಾಸ್ಪದ!—ಮತ್ತಾಯ 2:9-12.
ಆದರೂ, ಸೈತಾನನು ಬಿಟ್ಟುಕೊಡಲಿಲ್ಲ. ಈ ವಿಷಯದಲ್ಲಿ ಅವನ ಕೈಗೊಂಬೆಯಾಗಿದ್ದ ರಾಜ ಹೆರೋದನು, ಬೇತ್ಲೆಹೇಮಿನಲ್ಲಿದ್ದ ಎರಡು ವರ್ಷಕ್ಕಿಂತಲೂ ಕಡಿಮೆ ಪ್ರಾಯದ ಎಲ್ಲ ಗಂಡುಕೂಸುಗಳು ಕೊಲ್ಲಲ್ಪಡಬೇಕೆಂಬ ಆಜ್ಞೆಯನ್ನು ಹೊರಡಿಸುತ್ತಾನೆ. ಆದರೆ ಸೈತಾನನು ಯೆಹೋವನ ವಿರುದ್ಧ ಹೋರಾಡಿ ಜಯ ಗಳಿಸಲಾರನು. ಮುಗ್ಧ ಮಕ್ಕಳ ಈ ಘೋರ ಹತ್ಯೆಯನ್ನು ಸಹ ದೇವರು ಎಷ್ಟೋ ಸಮಯದ ಹಿಂದೆಯೇ ಮುನ್ನೋಡಿದ್ದನೆಂದು ಮತ್ತಾಯನು ತಿಳಿಸುತ್ತಾನೆ. ಸುರಕ್ಷೆಗಾಗಿ ಐಗುಪ್ತಕ್ಕೆ ಓಡಿಹೋಗುವಂತೆ ಒಬ್ಬ ದೇವದೂತನ ಮುಖಾಂತರ ಯೋಸೇಫನನ್ನು ಎಚ್ಚರಿಸುವ ಮೂಲಕ, ಪುನಃ ಒಮ್ಮೆ ಯೆಹೋವನು ಸೈತಾನನನ್ನು ಎದುರಿಸಿದನು. ಸ್ವಲ್ಪ ಸಮಯದ ಬಳಿಕ ಯೋಸೇಫನು ಪುನಃ ಒಮ್ಮೆ ತನ್ನ ಚಿಕ್ಕ ಕುಟುಂಬದೊಂದಿಗೆ ಸ್ಥಳಾಂತರಿಸಿ, ಕೊನೆಗೆ ನಜರೇತಿನಲ್ಲಿ ನೆಲೆಸಿದನೆಂದು ಮತ್ತಾಯನು ವರದಿಸುತ್ತಾನೆ. ಅಲ್ಲಿಯೇ ಯೇಸು ತನ್ನ ತಮ್ಮಂದಿರು ಮತ್ತು ತಂಗಿಯರೊಂದಿಗೆ ಬೆಳೆದನು.—ಮತ್ತಾಯ 2:13-23; 13:55, 56.
ಕ್ರಿಸ್ತನ ಜನನ—ನಿಮಗೆ ಮಹತ್ವಪೂರ್ಣವಾಗಿರಲು ಕಾರಣ
ಯೇಸುವಿನ ಜನನ ಮತ್ತು ಬಾಲ್ಯಾವಸ್ಥೆಯ ಆರಂಭದ ಸಮಯದಲ್ಲಿನ ಘಟನೆಗಳ ಈ ಸಾರಾಂಶದಿಂದ ನಿಮಗೆ ಸ್ವಲ್ಪ ಆಶ್ಚರ್ಯವಾಗುತ್ತದೊ? ಅನೇಕರಿಗೆ ಆಶ್ಚರ್ಯವಾಗುತ್ತದೆ. ಈ ವೃತ್ತಾಂತಗಳು ವಾಸ್ತವದಲ್ಲಿ ಹೊಂದಿಕೆಯಲ್ಲಿರುವವುಗಳೂ ನಿಷ್ಕೃಷ್ಟವಾದವುಗಳೂ ಆಗಿವೆಯೆಂದು ಅವರಿಗೆ ತಿಳಿದುಬರುವಾಗ, ಕೆಲವು ಜನರ ವ್ಯತಿರಿಕ್ತ ಪ್ರತಿಪಾದನೆಗಳ ಎದುರಲ್ಲೂ, ಅವರು ವಿಸ್ಮಯಪಡುತ್ತಾರೆ. ಕೆಲವೊಂದು ಘಟನೆಗಳು ನೂರಾರು ವರ್ಷಗಳ ಮುಂಚೆಯೇ ಮುಂತಿಳಿಸಲ್ಪಟ್ಟಿದ್ದವೆಂಬುದನ್ನು ತಿಳಿದು ಅವರಿಗೆ ಆಶ್ಚರ್ಯವಾಗುತ್ತದೆ. ಮತ್ತು ಸುವಾರ್ತೆಗಳಲ್ಲಿರುವ ಕೆಲವು ಮುಖ್ಯಾಂಶಗಳು, ಸಾಂಪ್ರದಾಯಿಕವಾದ ಯೇಸುವಿನ ಜನನದ ಕುರಿತಾದ ಕಥೆಗಳು ಮತ್ತು ಗೋದಲಿ ದೃಶ್ಯಗಳಲ್ಲಿ ತೋರಿಸಲ್ಪಟ್ಟಿರುವ ವಿಷಯಕ್ಕಿಂತಲೂ ತುಂಬ ಭಿನ್ನವಾಗಿವೆಯೆಂದು ತಿಳಿದು ಅವರು ಚಕಿತರಾಗುತ್ತಾರೆ.
ಸಾಂಪ್ರದಾಯಿಕ ಕ್ರಿಸ್ಮಸ್ ಆಚರಣೆಗಳಲ್ಲಿ ಹೆಚ್ಚಿನವು, ಸುವಾರ್ತಾ ಕಥನಗಳಲ್ಲಿರುವ ಅತ್ಯಾವಶ್ಯಕ ಅಂಶಗಳನ್ನು ಬಿಟ್ಟುಬಿಡುತ್ತವೆಂಬುದು ಪ್ರಾಯಶಃ ಎಲ್ಲಕ್ಕಿಂತಲೂ ಹೆಚ್ಚು ಆಶ್ಚರ್ಯಗೊಳಿಸುವ ಸಂಗತಿಯಾಗಿದೆ. ಉದಾಹರಣೆಗಾಗಿ, ಯೇಸುವಿನ ತಂದೆಯಾಗಿರುವ—ಯೋಸೇಫನಲ್ಲ—ಯೆಹೋವ ದೇವರಿಗೆ ಯಾವುದೇ ಮಹತ್ವವನ್ನು ಕೊಡಲಾಗುವುದಿಲ್ಲ. ತನ್ನ ಪ್ರಿಯ ಪುತ್ರನನ್ನು ಬೆಳೆಸಲು ಮತ್ತು ಪೋಷಿಸಲಿಕ್ಕಾಗಿ ಅವನನ್ನು ಯೋಸೇಫ ಮತ್ತು ಮರಿಯಳಿಗೆ ವಹಿಸಿಕೊಡುವಾಗ ಆತನಿಗೆ ಹೇಗನಿಸಿದ್ದಿರಬೇಕೆಂಬುದನ್ನು ಸ್ವಲ್ಪ ಊಹಿಸಿಕೊಳ್ಳಿರಿ. ಆ ಮಗನು, ಇನ್ನೂ ಒಬ್ಬ ಪುಟ್ಟ ಮಗುವಾಗಿರುವಾಗಲೇ, ಅವನನ್ನು ಕೊಲ್ಲಲು ಹೊಂಚುಹೂಡುವ ದ್ವೇಷಭರಿತ ಅರಸನೊಬ್ಬನಿರುವ ಒಂದು ಜಗತ್ತಿನಲ್ಲಿ ಬೆಳೆಯಲು ಅನುಮತಿಸುವಾಗ, ಆ ಸ್ವರ್ಗೀಯ ತಂದೆಗಾದ ಪ್ರಾಣಸಂಕಟವನ್ನು ಊಹಿಸಿಕೊಳ್ಳಿರಿ! ಮಾನವಕುಲಕ್ಕಾಗಿರುವ ಗಾಢವಾದ ಪ್ರೀತಿಯೇ, ಯೆಹೋವನು ಈ ತ್ಯಾಗವನ್ನು ಮಾಡುವಂತೆ ಆತನನ್ನು ಪ್ರಚೋದಿಸಿತು.—ಯೋಹಾನ 3:16.
ಅನೇಕವೇಳೆ ಕ್ರಿಸ್ಮಸ್ ಆಚರಣೆಗಳಲ್ಲಿ ನಿಜವಾದ ಯೇಸುವನ್ನು ಹೊರಗಿಡಲಾಗುತ್ತದೆ. ಅವನು ಶಿಷ್ಯರಿಗೆ ತನ್ನ ಜನನದ ತಾರೀಖನ್ನು ತಿಳಿಸಿರುವ ಕುರಿತಾಗಿ ಯಾವುದೇ ದಾಖಲೆಯಿಲ್ಲ; ಅಥವಾ ಅವನ ಹಿಂಬಾಲಕರು ಅವನ ಜನ್ಮದಿನವನ್ನು ಆಚರಿಸಿರುವುದರ ಕುರಿತಾಗಿಯೂ ಯಾವುದೇ ಸೂಚನೆಯಿಲ್ಲ.
ಯೇಸು ತನ್ನ ಹಿಂಬಾಲಕರಿಗೆ ತನ್ನ ಜನನವನಲ್ಲ, ಬದಲಾಗಿ ಜಗತ್ತಿನ ಇತಿಹಾಸವನ್ನು ಪ್ರಭಾವಿಸಿದ ಒಂದು ಮಹತ್ವಪೂರ್ಣ ಘಟನೆಯೋಪಾದಿ ತನ್ನ ಮರಣವನ್ನು ಸ್ಮರಿಸುವಂತೆ ಹೇಳಿದನು. (ಲೂಕ 22:19, 20) ಯೇಸು, ಮೇವಿನ ತೊಟ್ಟಿಯಲ್ಲಿರುವ ಒಬ್ಬ ನಿಸ್ಸಹಾಯಕ ಶಿಶುವಿನೋಪಾದಿ ಸ್ಮರಿಸಲ್ಪಡುವಂತೆ ಬಯಸಲಿಲ್ಲ. ಯಾಕಂದರೆ ಅವನು ಈಗ ಒಂದು ಶಿಶುವಾಗಿಲ್ಲ. ತನ್ನ ಮರಣದ 60ಕ್ಕಿಂತಲೂ ಹೆಚ್ಚು ವರ್ಷಗಳ ಬಳಿಕ, ಯೇಸು ಒಂದು ದರ್ಶನದಲ್ಲಿ, ಯುದ್ಧಕ್ಕೆ ಸವಾರಿಗೈಯುತ್ತಿರುವ ಒಬ್ಬ ಶಕ್ತಿಶಾಲಿ ರಾಜನೋಪಾದಿ ಅಪೊಸ್ತಲ ಯೋಹಾನನಿಗೆ ತನ್ನನ್ನು ಪ್ರಕಟಿಸಿಕೊಂಡನು. (ಪ್ರಕಟನೆ 19:11-16) ನಾವು ಇಂದು ಯೇಸುವನ್ನು ಆ ಪಾತ್ರದಲ್ಲಿ, ಅಂದರೆ ದೇವರ ಸ್ವರ್ಗೀಯ ರಾಜ್ಯದ ಅಧಿಪತಿಯೋಪಾದಿ ತಿಳಿದುಕೊಳ್ಳಬೇಕು. ಯಾಕಂದರೆ ಅವನು ಜಗತ್ತನ್ನೇ ಬದಲಾಯಿಸಲಿರುವ ಒಬ್ಬ ರಾಜನಾಗಿದ್ದಾನೆ.
[ಅಧ್ಯಯನ ಪ್ರಶ್ನೆಗಳು]
a ವಾಸ್ತವದಲ್ಲಿ, ಹೆರೋದನ ಮಗನಾಗಿರುವುದಕ್ಕಿಂತಲೂ, ಹೆರೋದನ ಹಂದಿಯಾಗಿ ಜೀವಿಸುವುದು ಹೆಚ್ಚು ಸುರಕ್ಷಿತವಾಗಿತ್ತೆಂದು ಸೀಸರ್ ಆಗಸ್ಟಸ್ ಹೇಳಿದನು.
[ಪುಟ 8 ರಲ್ಲಿರುವ ಚಿತ್ರ]
ಕ್ರಿಸ್ತನ ಜನನದ ಕುರಿತಾದ ಸುವಾರ್ತೆಯನ್ನು ನಮ್ರ ಕುರುಬರಿಗೆ ತಿಳಿಸುವ ಮೂಲಕ ಯೆಹೋವನ ದೂತನು ಅವರಿಗೆ ಅನುಗ್ರಹವನ್ನು ತೋರಿಸಿದನು