ಯೆಹೋವನ ವಾಕ್ಯವು ಸಜೀವವಾದದ್ದು
ಲೂಕ ಪುಸ್ತಕದ ಮುಖ್ಯಾಂಶಗಳು
ಮತ್ತಾಯನ ಸುವಾರ್ತೆಯು ಪ್ರಧಾನವಾಗಿ ಯೆಹೂದಿ ಓದುಗರಿಗಾಗಿಯೂ ಮಾರ್ಕನ ಸುವಾರ್ತೆಯು ಯೆಹೂದ್ಯೇತರರಿಗಾಗಿಯೂ ಬರೆಯಲಾಗಿದೆ ಎಂದು ತಿಳಿದುಬರುತ್ತದೆ. ಆದರೆ ಲೂಕನ ಸುವಾರ್ತೆಯು ಎಲ್ಲಾ ಜನರಿಗಾಗಿ ಬರೆಯಲಾಗಿದೆ. ಯೇಸುವಿನ ಜೀವನ ಮತ್ತು ಶುಶ್ರೂಷೆಯ ಸಮಗ್ರ ವೃತ್ತಾಂತವಾದ ಲೂಕ ಪುಸ್ತಕವನ್ನು ಸಾ.ಶ. 56ರಿಂದ 58ರ ಸುಮಾರಿಗೆ ಬರೆಯಲಾಯಿತು.
ಕಾಳಜಿಯುಳ್ಳ ಹಾಗೂ ಜಾಗರೂಕ ವೈದ್ಯ ಲೂಕನು “ಬುಡದಿಂದ ಎಲ್ಲವನ್ನೂ ಚೆನ್ನಾಗಿ ವಿಚಾರಿಸಿ” ಬರೆದನು ಮತ್ತು 35 ವರ್ಷಗಳ ಅಂದರೆ ಸಾ.ಶ.ಪೂ. 3ರಿಂದ ಸಾ.ಶ. 33ರ ವರೆಗಿನ ಕಾಲಾವಧಿಯನ್ನು ಆವರಿಸಿದನು. (ಲೂಕ 1:3) ಇತರ ಸುವಾರ್ತಾ ವೃತ್ತಾಂತಗಳಿಗಿಂತ ಸುಮಾರು 60 ಶೇಕಡದಷ್ಟು ಹೆಚ್ಚಿನ ಮಾಹಿತಿ ಲೂಕನ ಸುವಾರ್ತಾ ಪುಸ್ತಕದಲ್ಲಿದೆ.
ಯೇಸುವಿನ ಶುಶ್ರೂಷೆಯ ಆರಂಭ
ಲೂಕನು, ಮೊದಲಾಗಿ ಸ್ನಾನಿಕ ಯೋಹಾನ ಮತ್ತು ಯೇಸುವಿನ ಜನನದ ಕುರಿತ ಮಾಹಿತಿ ನೀಡುತ್ತಾನೆ. ಅನಂತರ, ಚಕ್ರವರ್ತಿ ತಿಬೇರಿಯನು ಪಟ್ಟಕ್ಕೆ ಬಂದ ಹದಿನೈದನೆಯ ವರುಷದಲ್ಲಿ ಅಂದರೆ ಸಾ.ಶ. 29ರ ವಸಂತಕಾಲದಲ್ಲಿ ಯೋಹಾನನು ತನ್ನ ಶುಶ್ರೂಷೆಯನ್ನು ಪ್ರಾರಂಭಿಸಿದನು ಎಂದು ತಿಳಿಸುತ್ತಾನೆ. (ಲೂಕ 3:1, 2) ಅದೇ ವರ್ಷದ ಶರತ್ಕಾಲದಲ್ಲಿ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಕೊಡುತ್ತಾನೆ. (ಲೂಕ 3:21, 22) ಸಾ.ಶ. 30ರಷ್ಟಕ್ಕೆ ‘ಯೇಸು ಗಲಿಲಾಯಕ್ಕೆ ಹಿಂದಿರುಗಿ ಹೋಗಿ ಅಲ್ಲಿನ ಸಭಾಮಂದಿರಗಳಲ್ಲಿ ಬೋಧಿಸಲು’ ಪ್ರಾರಂಭಿಸುತ್ತಾನೆ.—ಲೂಕ 4:14, 15.
ಯೇಸು ಗಲಿಲಾಯದಲ್ಲಿ ತನ್ನ ಮೊದಲ ಸಾರುವ ಸಂಚಾರವನ್ನು ಆರಂಭಿಸಿದನು. ಜನರ ಗುಂಪಿಗೆ ಅವನು ಹೀಗೆ ಹೇಳುತ್ತಾನೆ: “ನಾನು ದೇವರ ರಾಜ್ಯದ ಸುವಾರ್ತೆಯನ್ನು ಬೇರೆ ಊರುಗಳಿಗೂ ಸಾರಿ ಹೇಳಬೇಕಾಗಿದೆ.” (ಲೂಕ 4:43) ಬೆಸ್ತನಾದ ಸೀಮೋನ ಪೇತ್ರ ಮತ್ತು ಇನ್ನಿತರರನ್ನು ಯೇಸು ತನ್ನೊಂದಿಗೆ ಕರೆದುಕೊಂಡು ಹೋಗಿ ‘ಇಂದಿನಿಂದ ನೀವು ಮನುಷ್ಯರನ್ನು ಹಿಡಿಯುವವರಾಗುವಿರಿ’ ಎಂದು ಅವರಿಗೆ ಹೇಳಿದನು. (ಲೂಕ 5:1-11; ಮತ್ತಾ. 4:18, 19) ಗಲಿಲಾಯದಲ್ಲಿ ಯೇಸುವಿನ ಎರಡನೆಯ ಸಾರುವ ಸಂಚಾರದಲ್ಲಿ ಆತನೊಂದಿಗೆ 12 ಮಂದಿ ಅಪೊಸ್ತಲರು ಇದ್ದರು. (ಲೂಕ 8:1) ಮೂರನೆಯ ಸಾರುವ ಸಂಚಾರದಲ್ಲಿ ಯೇಸು 12 ಮಂದಿಯನ್ನು “ದೇವರ ರಾಜ್ಯದ ವಿಷಯವನ್ನು ಸಾರುವದಕ್ಕೂ ಅಸ್ವಸ್ಥರಾದವರನ್ನು ಸ್ವಸ್ಥಮಾಡುವದಕ್ಕೂ” ಕಳುಹಿಸುತ್ತಾನೆ.—ಲೂಕ 9:1, 2.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
1:35—ಮರಿಯಳ ಗರ್ಭಧಾರಣೆಯಲ್ಲಿ ಅವಳ ಅಂಡಾಣುವನ್ನು ಬಳಸಲಾಗಿತ್ತೊ? ದೇವರು ವಾಗ್ದಾನಿಸಿದಂತೆ ಮರಿಯಳ ಮಗು ಅವಳ ಪೂರ್ವಜರಾದ ಅಬ್ರಹಾಮ, ಯೆಹೂದ ಮತ್ತು ದಾವೀದರ ಒಬ್ಬ ನಿಜ ವಂಶಜನಾಗಬೇಕಾದರೆ ಆ ಮಗುವಿನ ರಚನೆಗಾಗಿ ಅವಳ ಅಂಡಾಣುವನ್ನು ಬಳಸುವ ಅಗತ್ಯವಿತ್ತು. (ಆದಿ. 22:15, 18; 49:10; 2 ಸಮು. 7:8, 16) ಆದರೆ ಯೆಹೋವನ ಪವಿತ್ರಾತ್ಮವು ಆತನ ಮಗನ ಪರಿಪೂರ್ಣ ಜೀವವನ್ನು ಸ್ಥಳಾಂತರಿಸಿ ಮರಿಯಳನ್ನು ಗರ್ಭಿಣಿಯಾಗಿ ಮಾಡುವುದರಲ್ಲಿ ಕಾರ್ಯನಿರ್ವಹಿಸಿತ್ತು. (ಮತ್ತಾ. 1:18) ಇದು ಮರಿಯಳ ಅಂಡಾಣುವಿನ ಯಾವುದೇ ಅಪರಿಪೂರ್ಣತೆಯನ್ನು ತೆಗೆದುಹಾಕಿ, ಬೆಳೆಯುತ್ತಿರುವ ಭ್ರೂಣವನ್ನು ಆರಂಭದ ಹಂತದಿಂದಲೇ ಯಾವುದೇ ಹಾನಿಯಿಂದ ಕಾಪಾಡಿತೆಂದು ತೋರಿಬರುತ್ತದೆ.
1:62—ಜಕರೀಯನು ಮೂಕನೂ ಕಿವುಡನೂ ಆದನೋ? ಇಲ್ಲ. ಅವನು ಮಾತಾಡುವ ಶಕ್ತಿಯನ್ನು ಮಾತ್ರ ಕಳೆದುಕೊಂಡನು. ಮಗುವಿಗೆ ಯಾವ ಹೆಸರನ್ನಿಡಬೇಕೆಂದು ಇತರರು ಜಕರೀಯನಿಗೆ “ಸನ್ನೆ ಮಾಡಿ” ಕೇಳಿದ್ದು ಅವನು ಕಿವುಡನಾಗಿದ್ದರಿಂದ ಅಲ್ಲ. ತಮ್ಮ ಮಗನಿಗೆ ಯಾವ ಹೆಸರಿಡಬೇಕೆಂದು ಪತ್ನಿ ಹೇಳಿದ ಮಾತನ್ನು ಜಕರೀಯನು ಕೇಳಿಸಿಕೊಂಡಿದ್ದಿರಬಹುದು. ಬಹುಶಃ ಇದರ ಬಗ್ಗೆ ಸನ್ನೆಯ ಮೂಲಕ ಅಥವಾ ಅಭಿನಯದ ಮೂಲಕ ಇತರರು ಜಕರೀಯನನ್ನು ಕೇಳಿದರು. ಅವನು ಕೇವಲ ತನ್ನ ವಾಕ್ ಶಕ್ತಿಯನ್ನು ಮರಳಿ ಪಡೆಯಬೇಕಾಗಿತ್ತೆಂಬ ನಿಜತ್ವವು ಅವನು ಕಿವುಡನಾಗಲಿಲ್ಲ ಎಂಬುದನ್ನು ಸೂಚಿಸುತ್ತದೆ.—ಲೂಕ 1:13, 18-20, 60-64.
2:1, 2—ಯೇಸುವಿನ ಜನನದ ವರ್ಷವನ್ನು ಗೊತ್ತುಮಾಡಲು “ಮೊದಲನೆಯ ಖಾನೇಷುಮಾರಿ” ಎಂಬ ಮಾತುಗಳು ಹೇಗೆ ಸಹಾಯ ಮಾಡುತ್ತವೆ? ಚಕ್ರವರ್ತಿ ಔಗುಸ್ತನ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಖಾನೇಷುಮಾರಿಗಳು ನಡೆದಿವೆ. ಅದರಲ್ಲಿ ಮೊದಲನೆಯದು ದಾನಿಯೇಲ 11:20ರ ಹೊಂದಿಕೆಯಲ್ಲಿ ಸಾ.ಶ.ಪೂ. 2ರಲ್ಲಿ ನಡೆಯಿತು. ಎರಡನೆಯದು ಸಾ.ಶ. 6 ಅಥವಾ 7ರಲ್ಲಿ ನಡೆಯಿತು. (ಅ. ಕೃ. 5:37) ಈ ಎರಡೂ ಖಾನೇಷುಮಾರಿಗಳ ಸಮಯದಲ್ಲಿ ಕುರೇನ್ಯನು ಸುರಿಯದ (ಸಿರಿಯ) ಅಧಿಪತಿಯಾಗಿದ್ದನು ಏಕೆಂದರೆ ಅವನು ಎರಡು ಸಾರಿ ಅಧಿಪತಿಯ ಸ್ಥಾನದಲ್ಲಿದ್ದನೆಂಬುದಕ್ಕೆ ಸಾಕ್ಷ್ಯವಿದೆ. ಆದ್ದರಿಂದ ಲೂಕನು ಹೇಳಿದಂತೆ ಮೊದಲನೆಯ ಖಾನೇಷುಮಾರಿಯ ಸಮಯದಲ್ಲಿ ಅಂದರೆ ಸಾ.ಶ.ಪೂ. 2ರಲ್ಲಿ ಯೇಸು ಜನಿಸಿದನು.
2:35—ಮರಿಯಳ ಪ್ರಾಣಕ್ಕೆ “ಅಲಗು” ನಾಟಿದ್ದು ಹೇಗೆ? ಅಧಿಕಾಂಶ ಜನರು ಯೇಸುವನ್ನು ಮೆಸ್ಸೀಯನೆಂದು ಅಂಗೀಕರಿಸದೆ ಇರುವುದನ್ನು ನೋಡಿದಾಗ ಮತ್ತು ಯೇಸು ಯಾತನಾಮಯ ಮರಣವನ್ನು ಅನುಭವಿಸುವುದನ್ನು ಕಾಣುವಾಗ ಅವಳಿಗಾಗಲಿದ್ದ ವೇದನೆಯನ್ನು ಇದು ವರ್ಣಿಸುತ್ತದೆ.
9:27, 28—ಯೇಸು ತಾನು ರಾಜ್ಯದಲ್ಲಿ ಬರುವುದನ್ನು ನೋಡುವ ತನಕ ತನ್ನ ಶಿಷ್ಯರಲ್ಲಿ ಕೆಲವರು “ಮರಣಹೊಂದುವದಿಲ್ಲ” ಎಂದು ವಾಗ್ದಾನಿಸಿ “ಆರು ದಿವಸಗಳಾದ ಮೇಲೆ” ರೂಪಾಂತರವು ನಡೆಯಿತು ಎಂದು ಮತ್ತಾಯ ಮಾರ್ಕರು ಹೇಳುತ್ತಾರೆ. ಆದರೆ ಲೂಕನು ಅದು “ಎಂಟು ದಿವಸಗಳಾದ” ಮೇಲೆ ನಡೆಯಿತೆಂದು ಹೇಳುವುದೇಕೆ? (ಮತ್ತಾ. 17:1; ಮಾರ್ಕ 9:2) ಇಲ್ಲಿ ಲೂಕನು ಎರಡು ದಿನಗಳನ್ನು ಹೆಚ್ಚಾಗಿ ಕೂಡಿಸುತ್ತಾನೆಂಬುದು ಸುವ್ಯಕ್ತ. ಅಂದರೆ ಯೇಸು ತನ್ನ ಶಿಷ್ಯರೊಂದಿಗೆ ಆ ವಾಗ್ದಾನ ಮಾಡಿದ ದಿವಸ ಮತ್ತು ರೂಪಾಂತರದ ದಿವಸ ಇವೆರಡೂ ದಿನಗಳನ್ನು ಸೇರಿಸುತ್ತಾನೆ.
9:49, 50—ಯೇಸು, ತನ್ನೊಂದಿಗೆ ಸೇರದಿದ್ದ ಒಬ್ಬ ವ್ಯಕ್ತಿ ದೆವ್ವಗಳನ್ನು ಬಿಡಿಸುತ್ತಿದ್ದನೆಂದು ಕೇಳಿದಾಗ ಅವನನ್ನು ಏಕೆ ತಡೆಯಲಿಲ್ಲ? ಯೇಸು ಆ ವ್ಯಕ್ತಿಯನ್ನು ತಡೆಯಲಿಲ್ಲ ಯಾಕೆಂದರೆ ಆಗಿನ್ನೂ ಕ್ರೈಸ್ತ ಸಭೆಯ ರಚನೆಯಾಗಿರಲಿಲ್ಲ. ಆದ್ದರಿಂದ ಯೇಸುವಿನ ಹೆಸರಿನಲ್ಲಿ ನಂಬಿಕೆಯನ್ನಿಡಲು ಮತ್ತು ದೆವ್ವಗಳನ್ನು ಬಿಡಿಸಲು ಆ ವ್ಯಕ್ತಿಯು ಯೇಸುವಿನೊಂದಿಗೆ ದೈಹಿಕವಾಗಿ ಜೊತೆಯಲ್ಲೇ ಇರಬೇಕಾದ ಆವಶ್ಯಕತೆ ಇರಲಿಲ್ಲ.—ಮಾರ್ಕ 9:38-40.
ನಮಗಾಗಿರುವ ಪಾಠಗಳು:
1:32, 33; 2:19, 51. ಪ್ರವಾದನೆಗಳನ್ನು ನೆರವೇರಿಸಿದಂಥ ಘಟನೆಗಳು ಮತ್ತು ಹೇಳಿಕೆಗಳನ್ನು ಮರಿಯಳು ತನ್ನ ಮನಸ್ಸಿನಲ್ಲಿಟ್ಟುಕೊಂಡಳು. ಯೇಸು ‘ಯುಗದ ಸಮಾಪ್ತಿಯ’ ಬಗ್ಗೆ ಮುಂತಿಳಿಸಿದ ವಿಷಯಗಳನ್ನು ಅಮೂಲ್ಯವೆಂದೆಣಿಸಿ, ಅವುಗಳನ್ನು ಇಂದು ಸಂಭವಿಸುತ್ತಿರುವ ವಿಷಯಗಳೊಂದಿಗೆ ಹೋಲಿಸಿನೋಡುತ್ತೇವೋ?—ಮತ್ತಾ. 24:3.
2:37. ಯೆಹೋವನನ್ನು ಸ್ಥಿರಚಿತ್ತದಿಂದ ಆರಾಧಿಸಬೇಕು, ‘ಬೇಸರಗೊಳ್ಳದೆ ಪ್ರಾರ್ಥಿಸಬೇಕು’ ಮತ್ತು ಕ್ರೈಸ್ತ ಕೂಟಗಳಲ್ಲಿ “ಸಭೆಯಾಗಿ ಕೂಡಿಕೊಳ್ಳುವದನ್ನು” ಬಿಟ್ಟುಬಿಡಬಾರದು ಎಂದು ಅನ್ನಳ ಉದಾಹರಣೆಯು ನಮಗೆ ಕಲಿಸುತ್ತದೆ.—ರೋಮಾ. 12:12; ಇಬ್ರಿ. 10:24, 25.
2:41-50. ಯೋಸೇಫನು ತನ್ನ ಜೀವನದಲ್ಲಿ ಆಧ್ಯಾತ್ಮಿಕ ಅಭಿರುಚಿಗಳನ್ನು ಪ್ರಥಮವಾಗಿಟ್ಟನು ಮತ್ತು ತನ್ನ ಕುಟುಂಬದ ಶಾರೀರಿಕ ಹಾಗು ಆಧ್ಯಾತ್ಮಿಕ ಹಿತಕ್ಷೇಮದ ಬಗ್ಗೆಯೂ ಕಾಳಜಿವಹಿಸಿದನು. ಈ ವಿಷಯಗಳಲ್ಲಿ ಕುಟುಂಬದ ಶಿರಸ್ಸುಗಳಿಗೆ ಯೋಸೇಫನು ಒಂದು ಉತ್ತಮ ಮಾದರಿಯನ್ನಿಟ್ಟಿದ್ದಾನೆ.
4:4. ನಾವು ಪ್ರತಿದಿನವೂ ತಪ್ಪದೇ ಆಧ್ಯಾತ್ಮಿಕ ವಿಷಯಗಳ ಬಗ್ಗೆ ಪರ್ಯಾಲೋಚಿಸಬೇಕು.
6:40. ದೇವರ ವಾಕ್ಯದ ಬೋಧಕನೊಬ್ಬನು ತನ್ನ ವಿದ್ಯಾರ್ಥಿಗಳಿಗಾಗಿ ಯೋಗ್ಯ ಮಾದರಿಯನ್ನಿಡಬೇಕು. ಅವನು ತಾನು ಬೋಧಿಸುವ ಪ್ರಕಾರವೇ ನಡೆದುಕೊಳ್ಳಬೇಕು.
8:15. “[ವಾಕ್ಯವನ್ನು] ಹೃದಯದಲ್ಲಿ ಇಟ್ಟುಕೊಂಡು ತಾಳ್ಮೆಯಿಂದ ಫಲ” ಕೊಡಲು ನಾವು ದೇವರ ವಾಕ್ಯವನ್ನು ಅರ್ಥಮಾಡಿಕೊಂಡು, ಅದರ ಮೌಲ್ಯವನ್ನು ಅಂಗೀಕರಿಸಿ ನಮ್ಮದಾಗಿ ಮಾಡಬೇಕು. ಬೈಬಲ್ ಮತ್ತು ಬೈಬಲಾಧಾರಿತ ಸಾಹಿತ್ಯಗಳನ್ನು ಓದುವಾಗ ಪ್ರಾರ್ಥನಾಪೂರ್ವಕವಾಗಿ ಧ್ಯಾನಿಸುವುದು ಅತ್ಯಾವಶ್ಯಕ.
ಯೇಸುವಿನ ಶುಶ್ರೂಷೆಯ ಕೊನೆ ಭಾಗ
ಯೇಸು 70 ಮಂದಿಯನ್ನು ಯೂದಾಯದ ಊರುಗಳಿಗೂ ಸ್ಥಳಗಳಿಗೂ ಮುಂದಾಗಿ ಕಳುಹಿಸಿದನು. (ಲೂಕ 10:1) ಯೇಸು “ಊರೂರಿಗೂ ಗ್ರಾಮಗ್ರಾಮಕ್ಕೂ ಹೋಗಿ ಉಪದೇಶಮಾಡುತ್ತಾ” ಸಂಚರಿಸಿದನು.—ಲೂಕ 13:22.
ಸಾ.ಶ. 33ರ ಪಸ್ಕಹಬ್ಬದ ಐದು ದಿನಗಳ ಮೊದಲು ಯೇಸು ಕತ್ತೇಮರಿಯ ಮೇಲೆ ಸವಾರಿ ಮಾಡುತ್ತಾ ಯೆರೂಸಲೇಮನ್ನು ಪ್ರವೇಶಿಸುತ್ತಾನೆ. ಅವನು ತನ್ನ ಶಿಷ್ಯರಿಗೆ ಹೇಳಿದ ಈ ಮಾತುಗಳು ನೆರವೇರುವ ಸಮಯವು ಈಗ ಬಂದಿದೆ: “ಮನುಷ್ಯಕುಮಾರನು ಬಹು ಕಷ್ಟಗಳನ್ನನುಭವಿಸಿ ಹಿರಿಯರಿಂದಲೂ ಮಹಾಯಾಜಕರಿಂದಲೂ ಶಾಸ್ತ್ರಿಗಳಿಂದಲೂ ನಿರಾಕೃತನಾಗಿ ಕೊಲ್ಲಲ್ಪಟ್ಟು ಮೂರನೆಯ ದಿನದಲ್ಲಿ ಜೀವಿತನಾಗಿ ಎಬ್ಬಿಸಲ್ಪಡಬೇಕಾಗಿದೆ.”—ಲೂಕ 9:22, 44.
ಶಾಸ್ತ್ರಾಧಾರಿತ ಪ್ರಶ್ನೆಗಳಿಗೆ ಉತ್ತರಗಳು:
10:18—“ಸೈತಾನನು ಸಿಡಿಲಿನಂತೆ ಆಕಾಶದಿಂದ ಬೀಳುವದನ್ನು ಕಂಡೆನು” ಎಂದು ಯೇಸು ತನ್ನ 70 ಮಂದಿ ಶಿಷ್ಯರಿಗೆ ಹೇಳಿದ್ದು ಯಾವ ಅರ್ಥದಲ್ಲಿ? ಸೈತಾನನು ಸ್ವರ್ಗದಿಂದ ಆ ಮೊದಲೇ ದೊಬ್ಬಲ್ಪಟ್ಟಿದ್ದನೆಂದು ಯೇಸು ಹೇಳುತ್ತಿರಲಿಲ್ಲ. ಅದು 1914ರಲ್ಲಿ ಕ್ರಿಸ್ತನು ಸ್ವರ್ಗೀಯ ರಾಜನಾಗಿ ಪಟ್ಟವೇರಿದ ಬಳಿಕವೇ ನಡೆಯಿತು. (ಪ್ರಕ. 12:1-10) ನಾವು ಭವಿಷ್ಯತ್ತಿನಲ್ಲಿ ನಡೆಯಲಿಕ್ಕಿರುವ ಒಂದು ವಿಷಯವನ್ನು ಸಂಭವಿಸಿದೆಯೋ ಎಂಬಂತೆ ಭೂತಕಾಲದಲ್ಲಿ ಖಚಿತವಾಗಿ ಹೇಳಸಾಧ್ಯವಿಲ್ಲ. ಯೇಸುವಾದರೊ ಆ ಘಟನೆಯ ಖಂಡಿತ ನೆರವೇರಿಕೆಯನ್ನು ಒತ್ತಿ ಹೇಳುತ್ತಿದ್ದನೆಂಬುದು ಸುವ್ಯಕ್ತ.
14:26—ಕ್ರಿಸ್ತನ ಹಿಂಬಾಲಕರು ತಮ್ಮ ಸಂಬಂಧಿಕರನ್ನು “ಹಗೆ” ಮಾಡುವುದು ಯಾವ ಅರ್ಥದಲ್ಲಿ? ಬೈಬಲಿನಲ್ಲಿ, “ಹಗೆ” ಎಂಬ ಪದವು ಒಬ್ಬ ವ್ಯಕ್ತಿ ಅಥವಾ ವಸ್ತುವನ್ನು ಮತ್ತೊಬ್ಬ ವ್ಯಕ್ತಿ ಅಥವಾ ವಸ್ತುವಿಗಿಂತ ಕಡಿಮೆ ಪ್ರೀತಿಸುವುದಕ್ಕೆ ಸೂಚಿಸಬಲ್ಲದು. ಕ್ರೈಸ್ತರು ತಮ್ಮ ಸಂಬಂಧಿಕರನ್ನು “ಹಗೆ” ಮಾಡುವುದೆಂದರೆ, ಅವರನ್ನು ಯೇಸುವಿಗಿಂತ ಕಡಿಮೆ ಪ್ರೀತಿಸುತ್ತಾರೆ.—ಮತ್ತಾ. 10:37.
17:34-37—“ಹದ್ದುಗಳು” ಯಾರು ಮತ್ತು ಅವುಗಳು ಕೂಡುತ್ತಿದ್ದ ಆ “ಹೆಣ” ಅಥವಾ ದೇಹ ಯಾವುದು? ‘ತೆಗೆದುಕೊಳ್ಳಲ್ಪಡುವವರು’ ಅಥವಾ ಬಿಡುಗಡೆಯಾದವರು ದೂರದೃಷ್ಟಿಯುಳ್ಳ ಹದ್ದುಗಳಂತಿದ್ದಾರೆ. ದೇಹವು, ಅದೃಶ್ಯ ಸಾನಿಧ್ಯದಲ್ಲಿ ಬರುವ ನಿಜ ಕ್ರಿಸ್ತನಿಗೆ ಮತ್ತು ಯೆಹೋವನು ಒದಗಿಸುವ ಆಧ್ಯಾತ್ಮಿಕ ಆಹಾರಕ್ಕೆ ಸೂಚಿಸುತ್ತದೆ.—ಮತ್ತಾ. 24:28.
22:44—ಯೇಸು ಯಾಕೆ ಅಷ್ಟು ಮನೋವ್ಯಥೆಪಟ್ಟನು? ಅನೇಕ ಕಾರಣಗಳಿಗಾಗಿ ವ್ಯಥೆಪಟ್ಟನು. ತಾನೊಬ್ಬ ಅಪರಾಧಿಯೋಪಾದಿ ಸಾಯುವಾಗ ಅದು ಯೆಹೋವ ದೇವರ ಮತ್ತು ಆತನ ನಾಮದ ಮೇಲೆ ಯಾವ ಕೆಟ್ಟ ಪರಿಣಾಮಬೀರುವುದು ಎಂಬ ವಿಷಯದಲ್ಲಿ ಅವನು ಚಿಂತಿತನಾಗಿದ್ದನು. ಎಲ್ಲದಕ್ಕಿಂತಲೂ ಮಿಗಿಲಾಗಿ ತನ್ನ ಅನಂತ ಜೀವನ ಮತ್ತು ಇಡೀ ಮಾನವಕುಲದ ಭವಿಷ್ಯತ್ತು ತಾನು ನಂಬಿಗಸ್ತನಾಗಿ ಉಳಿಯುವುದರ ಮೇಲೆ ಹೊಂದಿಕೊಂಡಿದೆ ಎಂಬ ವಿಷಯ ಯೇಸುವಿಗೆ ಚೆನ್ನಾಗಿ ಗೊತ್ತಿತ್ತು.
23:44, 45—ಮೂರು ತಾಸು ಕತ್ತಲೆಕವಿಯುವುದಕ್ಕೆ ಸೂರ್ಯಗ್ರಹಣ ಕಾರಣವಾಗಿತ್ತೋ? ಇಲ್ಲ. ಸೂರ್ಯಗ್ರಹಣವಾಗುವುದು ಅಮಾವಾಸ್ಯೆಯ ಸಮಯದಲ್ಲಿ ಮಾತ್ರ. ಪಸ್ಕಹಬ್ಬದ ಸಮಯದಲ್ಲಿರುವಂತೆ ಹುಣ್ಣಿಮೆಯ ಸಮಯದಲ್ಲಿ ಸೂರ್ಯಗ್ರಹಣವಾಗುವುದಿಲ್ಲ. ಹೀಗಿರುವುದರಿಂದ, ಯೇಸು ಮರಣಪಟ್ಟ ದಿನದಲ್ಲಿ ಉಂಟಾದ ಕತ್ತಲೆಯು ದೇವರ ಅದ್ಭುತವಾಗಿತ್ತು.
ನಮಗಾಗಿರುವ ಪಾಠಗಳು:
11:1-4. ಇಲ್ಲಿ ಕೊಡಲಾಗಿರುವ ನಿರ್ದೇಶನಗಳನ್ನು, 18 ತಿಂಗಳುಗಳ ಹಿಂದೆ ಪರ್ವತ ಪ್ರಸಂಗದಲ್ಲಿ ಯೇಸು ಕಲಿಸಿದ ಮಾದರಿ ಪ್ರಾರ್ಥನೆಯಲ್ಲಿರುವ ಸ್ವಲ್ಪ ಭಿನ್ನ ಪದಪ್ರಯೋಗದೊಂದಿಗೆ ಹೋಲಿಸುವಾಗ, ನಮ್ಮ ಪ್ರಾರ್ಥನೆಗಳು ಕೆಲವೊಂದು ನಿರ್ದಿಷ್ಟ ಪದಗಳ ಬರೇ ಪುನರಾವರ್ತನೆ ಆಗಿರಬಾರದು ಎಂಬುದನ್ನು ಅದು ನಮಗೆ ತೋರಿಸುತ್ತದೆ.—ಮತ್ತಾ. 6:9-13.
11:5, 13. ಯೆಹೋವನು ನಮ್ಮ ಪ್ರಾರ್ಥನೆಗಳಿಗೆ ಉತ್ತರಕೊಡಲು ಸಿದ್ಧನಿದ್ದಾನಾದರೂ ನಾವು ಪಟ್ಟುಹಿಡಿದು ಪ್ರಾರ್ಥಿಸಬೇಕು.—1 ಯೋಹಾ. 5:14.
11:27, 28. ನಿಜ ಸಂತೋಷವು ಕೌಟುಂಬಿಕ ಸಂಬಂಧಗಳಿಂದಾಗಲಿ ಅಪಾರ ಭೌತಿಕ ಸಂಪತ್ತಿನಿಂದಾಗಲಿ ಲಭಿಸುವುದಿಲ್ಲ; ಬದಲಾಗಿ ದೇವರ ಚಿತ್ತವನ್ನು ನಂಬಿಗಸ್ತಿಕೆಯಿಂದ ಮಾಡುವುದರಿಂದ ಸಿಗುತ್ತದೆ.
11:41. ನಾವು ಮಾಡುವ ಉಪಕಾರಗಳು ಪ್ರೀತಿ ಮತ್ತು ಸಿದ್ಧಮನಸ್ಸಿನಿಂದ ಪ್ರಚೋದಿಸಲ್ಪಟ್ಟಿರಬೇಕು.
12:47, 48. ದೊಡ್ಡ ಜವಾಬ್ದಾರಿಯಿದ್ದೂ ಅದನ್ನು ಅಲಕ್ಷಿಸುವ ವ್ಯಕ್ತಿಯು ಕರ್ತವ್ಯಗಳ ಬಗ್ಗೆ ಏನೂ ತಿಳಿದಿರದ ಅಥವಾ ಅದನ್ನು ಪೂರ್ಣವಾಗಿ ಗ್ರಹಿಸಿರದ ವ್ಯಕ್ತಿಗಿಂತಲೂ ಹೆಚ್ಚು ದೋಷಿಯಾಗಿದ್ದಾನೆ.
14:28, 29. ನಮ್ಮ ಬಳಿ ಏನಿದೆಯೋ ಅದರಲ್ಲೇ ತೃಪ್ತರಾಗಿ ಜೀವನ ನಡೆಸುವುದು ವಿವೇಕಯುತ.
22:36-38. ಯೇಸು ತನ್ನ ಶಿಷ್ಯರಿಗೆ ಸಂರಕ್ಷಣೆಗಾಗಿ ಅಥವಾ ಸ್ವರಕ್ಷಣೆಗಾಗಿ ಆಯುಧವನ್ನು ಒಯ್ಯುವಂತೆ ಹೇಳಲಿಲ್ಲ. ಯೇಸು ಹಿಡುಕೊಡಲ್ಪಟ್ಟ ರಾತ್ರಿಯಂದು ಅವರ ಬಳಿ ಕತ್ತಿಗಳಿದ್ದದ್ದು, “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂಬ ಪ್ರಧಾನ ಪಾಠವನ್ನು ಅವನು ತನ್ನ ಶಿಷ್ಯರಿಗೆ ಕಲಿಸಲು ಸಾಧ್ಯಮಾಡಿತು.—ಮತ್ತಾ. 26:52.
[ಪುಟ 31ರಲ್ಲಿರುವ ಚಿತ್ರ]
ಯೋಸೇಫನು ಕುಟುಂಬದ ಶಿರಸ್ಸಾಗಿ ಒಳ್ಳೇ ಮಾದರಿಯನ್ನಿಟ್ಟನು
[ಪುಟ 32ರಲ್ಲಿರುವ ಚಿತ್ರ]
ಯೇಸುವಿನ ಜೀವನ ಮತ್ತು ಶುಶ್ರೂಷೆಯ ಅತಿ ವಿವರವಾದ ವೃತ್ತಾಂತವನ್ನು ಲೂಕನು ಬರೆದನು