ಯೆಹೋವನ ಪವಿತ್ರಾತ್ಮ ವರ
“ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟು ಹೆಚ್ಚಾಗಿ ಪವಿತ್ರಾತ್ಮ ವರವನ್ನು ಕೊಡುವನಲ್ಲವೇ!” —ಲೂಕ 11:13.
1, 2. (ಎ) ಪವಿತ್ರಾತ್ಮದ ಕುರಿತು ಯೇಸು ಯಾವ ವಾಗ್ದಾನವನ್ನು ಮಾಡಿದನು, ಮತ್ತು ಅದೇಕೆ ನಿಜವಾಗಿಯೂ ಸಾಂತ್ವನಕರವು? (ಬಿ) ಪವಿತ್ರಾತ್ಮ ಎಂದರೇನು?
ಸಾ.ಶ. 32ರ ಮಾಗಿಕಾಲದಲ್ಲಿ ಯೇಸು ಯೂದಾಯದಲ್ಲಿ ಸುವಾರ್ತೆಯನ್ನು ಸಾರುತ್ತಿದ್ದಾಗ, ಯೆಹೋವನ ಔದಾರ್ಯದ ಕುರಿತಾಗಿ ಆತನು ಮಾತಾಡಿದ್ದನು. ಆತನು ಕೆಲವು ಪ್ರಭಾವಭರಿತ ಸಾಮ್ಯಗಳನ್ನು ಉಪಯೋಗಿಸಿದನು ಮತ್ತು ಅನಂತರ ಒಂದು ಆಶ್ಚರ್ಯಕರ ವಾಗ್ದಾನವನ್ನು ಕೊಡುತ್ತಾ, ಅಂದದ್ದು: “ಹಾಗಾದರೆ ಕೆಟ್ಟವರಾದ ನೀವು ನಿಮ್ಮ ಮಕ್ಕಳಿಗೆ ಒಳ್ಳೇ ಪದಾರ್ಥಗಳನ್ನು ಕೊಡಬಲ್ಲವರಾದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ತನ್ನನ್ನು ಬೇಡಿಕೊಳ್ಳುವವರಿಗೆ ಎಷ್ಟೋ ಹೆಚ್ಚಾಗಿ ಪವಿತ್ರಾತ್ಮ ವರವನ್ನು ಕೊಡುವನಲ್ಲವೇ!”—ಲೂಕ 11:13.
2 ಆ ಮಾತುಗಳು ಎಷ್ಟೊಂದು ಸಾಂತ್ವನವನ್ನು ಕೊಡುತ್ತವೆ! ಈ ಲೋಕದ ಅಂತ್ಯಕಾಲದ ತೊಂದರೆಗಳನ್ನು ನಾವು ತಾಳಿಕೊಳ್ಳುತ್ತಿರುವಾಗ, ಸೈತಾನನ ಮತ್ತು ಅವನ ದುರಾತ್ಮಗಳ ದ್ವೇಷವನ್ನು ಎದುರಿಸುತ್ತಿರುವಾಗ ಮತ್ತು ನಮ್ಮ ಸ್ವಂತ ಪಾಪಪೂರ್ಣ ಪ್ರವೃತ್ತಿಗಳ ವಿರುದ್ಧ ಹೋರಾಡುತ್ತಿರುವಾಗ, ದೇವರು ತನ್ನಾತ್ಮದಿಂದ ನಮ್ಮನ್ನು ಬಲಗೊಳಿಸುವನೆಂದು ತಿಳಿಯುವದು ಹೃದಯವನ್ನೆಷ್ಟು ಹರ್ಷಗೊಳಿಸುತ್ತದೆ. ಆ ಬೆಂಬಲವು ಇಲ್ಲದಿದ್ದಲ್ಲ ನಂಬಿಗಸ್ತ ತಾಳ್ಮೆಯು ಅಸಾಧ್ಯವೆಂಬದು ನಿಶ್ಚಯ. ದೇವರ ಸ್ವಂತ ಕ್ರಿಯಾಶೀಲ ಶಕ್ತಿಯಾದ ಈ ಆತ್ಮದ ಬಲವನ್ನು ನೀವು ಅನುಭವಿಸಿದ್ದೀರೋ? ಅದು ನಿಮಗೆ ಎಷ್ಟು ಸಹಾಯ ಮಾಡಬಲ್ಲದೆಂಬ ತಿಳುವಳಿಕೆ ನಿಮಗಿದೆಯೇ? ನೀವದನ್ನು ಪೂರ್ಣವಾಗಿ ಉಪಯೋಗಿಸುತ್ತೀರೋ?
ಪವಿತ್ರಾತ್ಮದ ಶಕ್ತಿ
3, 4. ಪವಿತ್ರಾತ್ಮದ ಶಕ್ತಿಯನ್ನು ದೃಷ್ಟಾಂತಿಸಿರಿ.
3 ಮೊದಲಾಗಿ ಪವಿತ್ರಾತ್ಮದ ಶಕ್ತಿಯನ್ನು ಪರಿಗಣಿಸಿರಿ. 1954ನೆಯ ವರ್ಷದಷ್ಟು ಹಿಂದಿನ ಸಮಯವನ್ನು ಯೋಚಿಸಿರಿ. ದಕ್ಷಿಣ ಪ್ಯಾಸಿಫಿಕ್ ಬಿಕಿನಿ ಅಟಾಲ್ನ ಮೇಲೆ ಹೈಡ್ರೋಜನ್ ಬಾಂಬ್ ಸ್ಫೋಟ ಮಾಡಲ್ಪಟ್ಟ ಸಮಯವದು. ಬಾಂಬ್ ಸ್ಫೋಟವಾದ ಆ ಕ್ಷಣದಲ್ಲೇ, ಆ ಸುಂದರವಾದ ದ್ವೀಪವು ಒಂದು ಅಪಾರವಾದ ಬೆಂಕೀಗೋಲದಲ್ಲಿ ಧುಮುಕಿಬಿಟ್ಟಿತು ಮತ್ತು 150 ಲಕ್ಷ ಟನ್ TNT ಸ್ಫೋಟಕ ಶಕ್ತಿಗೆ ಸಮಾನವಾದ ಪ್ರಚಂಡ ರಭಸದ ಸ್ಫೋಟದಿಂದ ಜರ್ಜರಿತಗೊಂಡಿತು. ಆ ಅಪಾರ ನಾಶಕಾರಕ ಶಕಿಯ್ತೆಲ್ಲವು ಬಂದದ್ದು ಎಲ್ಲಿಂದ? ಬಾಂಬಿನ ನಾಭಿಯು ಯಾವುದರಿಂದ ರಚಿಸಲ್ಪಟಿದೆಯೇ ಆ ಯುರೇನಿಯಮ್ ಮತ್ತು ಹೈಡ್ರೋಜನ್ನ ಒಂದು ಬರೇ ಅಲ್ಪಾಂಶವನ್ನು ಶಕ್ತಿಯಾಗಿ ಮಾರ್ಪಡಿಸಿದ ಫಲಿತಾಂಶವದು. ಆದರೆ ವಿಜ್ಞಾನಿಗಳು ಬಿಕಿನಿಯಲ್ಲಿ ಪೂರೈಸಿದ್ದಕ್ಕಿಂತ ವಿರುದ್ಧವಾದ ಒಂದು ಸಂಗತಿಯನ್ನು ಮಾಡಶಕ್ತರಾಗಿದ್ದಲ್ಲಿ ಆಗೇನು? ಒಂದುವೇಳೆ ಆ ಎಲ್ಲಾ ಅಗ್ನಿಮಯ ಶಕ್ತಿಯನ್ನು ಸೆರೆಹಿಡಿದು ಕೆಲವು ಕಿಲೋ ಯುರೇನಿಯಮ್ ಮತ್ತು ಹೈಡ್ರೋಜನ್ನಾಗಿ ಮಾರ್ಪಡಿಸ ಶಕ್ತರಾಗಿದ್ದಲ್ಲಿ ಎಂಥ ಪೂರೈಕೆಯು ಅದಾಗಿರುತ್ತಿತ್ತು! ಆದರೂ ಯೆಹೋವನು ಅದಕ್ಕೆ ಸಾಮ್ಯವಾದ ಒಂದು ಸಂಗತಿಯನ್ನು, ಆದರೆ ಅದಕ್ಕಿಂತ ಅತ್ಯಂತ ಮಹತ್ತಾದ ಪ್ರಮಾಣದಲ್ಲಿ ಮಾಡಿದ್ದು, “ಆದಿಯಲ್ಲಿ [ಆತನು] ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿ”ದಾಗಲೇ.—ಆದಿಕಾಂಡ 1:1.
4 ಯೆಹೋವನಲ್ಲಿ ಮಹಾಕ್ರಿಯಾತ್ಮಕ ಶಕ್ತಿಯ ಅಪಾರ ನೆಲೆಗಳು ಇವೆ. (ಯೆಶಾಯ 40:26) ಈ ವಿಶ್ವವು ಯಾವುದರಿಂದ ಮಾಡಲ್ಪಟ್ಟಿದೆಯೇ ಆ ಎಲ್ಲಾ ಭೌತದ್ರವ್ಯಗಳನ್ನು ಆತನು ರೂಪಿಸಿದಾಗ ಈ ಮಹಾಶಕ್ತಿಯ ಕೊಂಚ ಭಾಗವನ್ನು ಆತನು ಬಳಸಿದ್ದಿರಬೇಕು. ಈ ಸೃಷ್ಟಿಯ ರಚನಾತ್ಮಕ ಚಟುವಟಿಕೆಯಲ್ಲಿ ಆತನು ಉಪಯೋಗಿಸಿದ್ದು ಏನನ್ನು? ಪವಿತ್ರ ಆತ್ಮವನ್ನೇ. ನಾವು ಓದುವುದು: “ಯೆಹೋವನ ಅಪ್ಪಣೆಯಿಂದಲೇ ಆಕಾಶ ಉಂಟಾಯಿತು; ಅದರಲ್ಲಿರುವುದೆಲ್ಲವೂ ಆತನ ಆತ್ಮದಿಂದ [ಅವನ ಬಾಯ ಶ್ವಾಸದಿಂದ, NW ]ನಿರ್ಮಿತವಾದವು.” (ಕೀರ್ತನೆ 33:6) ಮತ್ತು ಸೃಷ್ಟಿಯ ಕುರಿತಾಗಿ ಆದಿಕಾಂಡ ವೃತ್ತಾಂತವು ಹೇಳುವುದು: “ದೇವರ ಕ್ರಿಯಾಶೀಲ ಶಕ್ತಿಯು [ಪವಿತ್ರಾತ್ಮ] ಜಲಸಮೂಹಗಳ ಮೇಲೆ ಚಲಿಸುತ್ತಿತ್ತು.” (ಆದಿಕಾಂಡ 1:2, NW) ಪವಿತ್ರಾತ್ಮವು ಎಂಥ ಒಂದು ಪ್ರಚಂಡವಾದ ಶಕ್ತಿಯಾಗಿದೆ!
ಅದ್ಭುತ ಕೃತ್ಯಗಳು
5. ಯಾವ ಮಹತ್ತಾದ ರೀತಿಯಲ್ಲಿ ಪವಿತ್ರಾತ್ಮವು ಕಾರ್ಯನಡಿಸುತ್ತದೆ?
5 ಪವಿತ್ರಾತ್ಮವು ಅತ್ಯಂತ ಮಹತ್ತಾದ ರೀತಿಯಲ್ಲಿ ಇನ್ನೂ ಕಾರ್ಯನಡಿಸುತ್ತದೆ. ಅದು ಯೆಹೋವನ ಸ್ವರ್ಗೀಯ ಸಂಸ್ಥೆಯನ್ನು ಮಾರ್ಗದರ್ಶಿಸುತ್ತದೆ ಮತ್ತು ನಡಿಸುತ್ತದೆ. (ಯೆಹೆಜ್ಕೇಲ 1:20, 21) ಹೈಡ್ರೋಜನ್ ಬಾಂಬಿನಿಂದ ಬಿಡುಗಡೆಯಾಗುವ ಶಕ್ತಿಯಂತೆ, ಯೆಹೋವನ ಶತ್ರುಗಳ ಮೇಲೆ ತೀರ್ಪನ್ನು ನಿರ್ವಹಿಸಲು ಅದನ್ನು ನಾಶಕರವಾಗಿ ಉಪಯೋಗಿಸಬಹುದು, ಆದರೆ ನಮ್ಮನ್ನು ಭಯಚಿಕಿತಗೊಳಿಸುವ ಬೇರೆ ರೀತಿಯಲ್ಲೂ ಅದು ಕಾರ್ಯನಡಿಸಿರುತ್ತದೆ.—ಯೆಶಾಯ 11:15; 30:27, 28; 40:7, 8; 2 ಥೆಸಲೋನಿಕ 2:8.
6. ಪವಿತ್ರಾತ್ಮವು ಮೋಶೆಯನ್ನು ಮತ್ತು ಇಸ್ರಾಯೇಲ್ಯ ಪುತ್ರರನ್ನು ಇಜಿಪ್ಟಿನೊಂದಿಗೆ ಅವರ ವ್ಯವಹಾರದಲ್ಲಿ ಬೆಂಬಲಿಸಿದ್ದು ಹೇಗೆ?
6 ದೃಷ್ಟಾಂತಕ್ಕಾಗಿ, ಸುಮಾರು ಸಾ.ಶ.ಪೂ. 1513ರಲ್ಲಿ ಯೆಹೋವನು ಇಸ್ರಾಯೇಲ್ಯ ಪುತ್ರರನ್ನು ಬಿಡುಗಡೆ ಮಾಡುವಂತೆ ಕೇಳಲು ಇಜಿಪ್ಟಿನ ಫರೋಹನ ಬಳಿಗೆ ಮೋಶೆಯನ್ನು ಕಳುಹಿಸಿದನು. ಹಿಂದಣ 40 ವರ್ಷಗಳಲ್ಲಿ ಮೋಶೆಯು ಮಿದ್ಯಾನಿನಲ್ಲಿ ಒಬ್ಬ ಕುರುಬನಾಗಿದ್ದನು, ಹೀಗಿರಲಾಗಿ ಫರೋಹನು ಒಬ್ಬ ಕುರುಬನಿಗೆ ಏಕೆ ಕಿವಿಗೊಡಬೇಕು? ಏಕೆಂದರೆ ಮೋಶೆಯು ಒಬ್ಬನೇ ಸತ್ಯ ದೇವರಾದ ಯೆಹೋವನ ಹೆಸರಿನಲ್ಲಿ ಬಂದಿದ್ದನು. ಇದನ್ನು ರುಜುಪಡಿಸಲು ಯೆಹೋವನು ಅವನಿಗೆ ಅದ್ಭುತಗಳನ್ನು ನಡಿಸುವಂಥ ಶಕ್ತಿಯನ್ನು ಕೊಟ್ಟನು. ಅವೆಷ್ಟು ಪ್ರಭಾವಶಾಲಿಯಾಗಿದವ್ದೆಂದರೆ ಇಜಿಪ್ಟಿನ ಯಾಜಕರು ಸಹಾ ಹೀಗೆಂದು ಒಪ್ಪಲು ಒತ್ತಾಯಿಸಲ್ಪಟ್ಟರು: “ಇದು ದೇವರ ಬೆರಳೇ ಸರಿ!”a (ವಿಮೋಚನಕಾಂಡ 8:19, NW) ಯೆಹೋವನು ಇಜಿಪ್ಟಿನವರ ಮೇಲೆ ಹತ್ತು ಬಾಧೆಗಳನ್ನು ತಂದನು, ಅದರಲ್ಲಿ ಕೊನೆಯದ್ದು ಇಸ್ರಾಯೇಲ್ಯರನ್ನು ಇಜಿಪ್ಟಿನಿಂದ ಹೋಗಲು ಬಿಡುವಂತೆ ಫರೋಹನನ್ನು ನಿರ್ಬಂಧಪಡಿಸಿತು. ಫರೋಹನು ಹಟದಿಂದ ತನ್ನ ಸೇನೆಯೊಂದಿಗೆ ಅವರನ್ನು ಬೆನ್ನಟ್ಟಿದಾಗ, ಕೆಂಪು ಸಮುದ್ರದ ಮಧ್ಯೆ ಒಂದು ದಾರಿಯು ಅದ್ಭುತಕರವಾಗಿ ತೆರೆಯಲ್ಪಟ್ಟಿತು ಮತ್ತು ಇಸ್ರಾಯೇಲ್ಯರು ಪಾರಾದರು. ಇಜಿಪ್ಟಿನ ಸೈನ್ಯವು ಅವರನ್ನು ಹಿಂಬಾಲಿಸಿತು ಮತ್ತು ಸಮುದ್ರದೊಳಗೆ ಮುಳುಗಿ ನಾಶವಾಯಿತು.—ಯೆಶಾಯ 63:11-14; ಹಗ್ಗಾಯ 2:4, 5.
7. (ಎ) ಪವಿತ್ರಾತ್ಮವು ಅದ್ಭುತಗಳನ್ನು ನಡಿಸಿದ್ದಕ್ಕೆ ಕೆಲವು ಕಾರಣಗಳು ಯಾವುದಾಗಿದ್ದವು? (ಬಿ) ಪವಿತ್ರಾತ್ಮದಿಂದ ನಡಿಸಲ್ಪಡುವ ಅದ್ಭುತಗಳು ಈಗ ಸಂಭವಿಸುವುದಿಲ್ಲವಾದರೂ, ಬೈಬಲಿನಲ್ಲಿ ಅವುಗಳ ದಾಖಲೆಯು ಏಕೆ ಸಾಂತ್ವನಕರವು?
7 ಹೌದು, ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ಮೋಶೆಯ ಕಾಲದಲ್ಲಿ ಇಸ್ರಾಯೇಲ್ಯರ ಪರವಾಗಿ ಶಕ್ತಿಯುಕ್ತ ಮಹತ್ಕಾರ್ಯಗಳನ್ನು ಮಾಡಿದ್ದನು, ಬೇರೆ ಸಮಯಗಳಲ್ಲಿ ಸಹಾ ಮಾಡಿದ್ದನು. ಆ ಅದ್ಭುತಗಳ ಹೇತು ಏನಾಗಿತ್ತು? ಅವು ಯೆಹೋವನ ಉದ್ದೇಶಗಳನ್ನು ಪ್ರವರ್ಧಿಸಿದ್ದವು, ಆತನ ನಾಮವನ್ನು ಪ್ರಖ್ಯಾತಪಡಿಸಿದ್ದವು ಮತ್ತು ಆತನ ಶಕ್ತಿಯನ್ನು ಪ್ರದರ್ಶಿಸಿ ತೋರಿಸಿದ್ದವು. ಮತ್ತು ಕೆಲವು ಸಲ, ಮೋಶೆಯ ವಿಷಯದಲ್ಲಿ ಇದ್ದಂತೆ, ಒಬ್ಬ ವ್ಯಕ್ತಿಗೆ ಯೆಹೋವನ ಬೆಂಬಲವು ಇದ್ದದ್ದನ್ನು ಅದು ನಿಶ್ಚಾಯಕವಾಗಿ ರುಜುಪಡಿಸಿತ್ತು. (ವಿಮೋಚನಕಾಂಡ 4:1-9; 9:14-16) ಆದರೂ, ಪವಿತ್ರಾತ್ಮದಿಂದ ತರಲ್ಪಟ್ಟ ಅದ್ಭುತಗಳು ಇತಿಹಾಸದಲ್ಲೆಲ್ಲೂ ಬಹು ಅಪೂರ್ವವಾಗಿತ್ತು.b ಬೈಬಲಿನ ಕಾಲದಲ್ಲಿ ಜೀವಿಸಿದ್ದ ಹೆಚ್ಚಿನ ಜನರು ಅದನ್ನೆಂದೂ ಕಂಡಿರದ್ದು ಸಂಭವನೀಯ, ಮತ್ತು ಇಂದು ಅವು ಸಂಭವಿಸುವುದೂ ಇಲ್ಲ. ಆದಾಗ್ಯೂ, ಪರಿಹರಿಸಲಸಾಧ್ಯವೆಂದು ಕಾಣಬಹುದಾದ ಸಮಸ್ಯೆಗಳೊಂದಿಗೆ ನಾವಿಂದು ಹೋರಾಡುತ್ತಿರುವಾಗ, ಯೆಹೋವನೊಂದಿಗೆ ನಾವು ನಂಬಿಕೆಯಿಂದ ಬೇಡಿಕೊಂಡಲ್ಲಿ, ಫರೋಹನ ಮುಂದೆ ಮೋಶೆಯನ್ನು ಬೆಂಬಲಿಸಿದ್ದ ಮತ್ತು ಕೆಂಪು ಸಮುದ್ರದ ಮಧ್ಯದಲ್ಲಿ ಇಸ್ರಾಯೇಲ್ಯರಿಗೆ ದಾರಿಯನ್ನು ತೆರೆದ ಅದೇ ಆತ್ಮವನ್ನು ಆತನು ನಮಗೆ ಕೊಡುವನೆಂದು ತಿಳಿಯುವದು ಸಾಂತ್ವನಕಾರಿಯಲ್ಲವೇ?—ಮತ್ತಾಯ 17:20.
ಪ್ರೇರಿತ ಬರಹಗಳು
8. ದಶಾಜ್ಞೆಗಳನ್ನು ಕೊಟ್ಟದ್ದರಲ್ಲಿ ಪವಿತ್ರ ಆತ್ಮದ ಪಾತ್ರವು ಯಾವುದಾಗಿತ್ತು?
8 ಇಜಿಪ್ಟಿನಿಂದ ಅವರ ಬಿಡುಗಡೆಯಾದ ನಂತರ, ಮೋಶೆಯು ಇಸ್ರಾಯೇಲ್ಯರನ್ನು ಸೀನಾಯಿ ಬೆಟ್ಟಗಳ ಕಡೆಗೆ ನಡಿಸಿದನು, ಅಲ್ಲಿ ಯೆಹೋವನು ಅವರೊಂದಿಗೆ ಒಂದು ಒಡಂಬಡಿಕೆಯನ್ನು ಸ್ಥಾಪಿಸಿದನು ಮತ್ತು ತನ್ನ ನಿಯಮಶಾಸ್ತ್ರವನ್ನು ಕೊಟ್ಟನು. ಮೋಶೆಯ ಮೂಲಕ ಕೊಡಲ್ಪಟ್ಟ ಆ ನಿಯಮಶಾಸ್ತ್ರದ ಪ್ರಧಾನ ಭಾಗವು ದಶಾಜ್ಞೆಗಳಾಗಿದ್ದವು, ಮತ್ತು ಇವುಗಳ ಮೂಲ ಪ್ರತಿಗಳು ಕಲ್ಲಿನ ಹಲಗೆಗಳ ಮೇಲೆ ಕೆತ್ತಲ್ಪಟ್ಟಿದ್ದವು. ಹೇಗೆ? ಪವಿತ್ರಾತ್ಮದ ಮೂಲಕವಾಗಿಯೇ. ಬೈಬಲ್ ಅನ್ನುವುದು: “ಯೆಹೋವನು ಸೀನಾಯಿ ಬೆಟ್ಟದ ಮೇಲೆ ಮೋಶೆಯ ಸಂಗಡ ಮಾತಾಡುವುದನ್ನು ಮುಗಿಸಿದ ಮೇಲೆ ಅವನಿಗೆ ಆ ಎರಡು ಆಜ್ಞಾಶಾಸನಗಳನ್ನು ಕೊಟ್ಟನು. ಅವು ದೇವರ ಬೆರಳಿನಿಂದ ಬರೆಯಲ್ಪಟ್ಟ ಶಿಲಾಶಾಸನಗಳೇ.”—ವಿಮೋಚನಕಾಂಡ 31:18; 34:1, NW.
9, 10. ಹಿಬ್ರೂ ಶಾಸ್ತ್ರಗ್ರಂಥದ ಬರೆಯುವಿಕೆಯಲ್ಲಿ ಪವಿತ್ರಾತ್ಮವು ಕ್ರಿಯಾಶೀಲವಾಗಿದ್ದದ್ದು ಹೇಗೆ, ಮತ್ತು ಯೇಸುವಿನ ಶಿಷ್ಯರಿಂದ ಉಪಯೋಗಿಸಲ್ಪಟ್ಟ ಹೇಳಿಕೆಗಳಿಂದ ಇದು ಹೇಗೆ ತೋರಿಬರುತ್ತದೆ?
9 ದಶಾಜ್ಞೆಗಳಲ್ಲದೆ, ಯೆಹೋವನು ತನ್ನ ಆತ್ಮದ ಮೂಲಕ ನಂಬಿಗಸ್ತ ಪುರುಷರ ಮತ್ತು ಸ್ತ್ರೀಯರ ಜೀವಿತಗಳನ್ನು ಮಾರ್ಗದರ್ಶಿಸುವುದಕ್ಕಾಗಿ ಇತರ ನೂರಾರು ನಿಯಮಗಳನ್ನು ಮತ್ತು ಕಟ್ಟಳೆಗಳನ್ನು ಕೊಟ್ಟನು. ಮತ್ತು ಮುಂದಕ್ಕೆ ಇನ್ನೂ ಹೆಚ್ಚು ಬರಲಿಕ್ಕಿದ್ದವು. ಮೋಶೆಯ ನಂತರ ಶತಮಾನಗಳ ಬಳಿಕ, ಲೇವ್ಯರು ಯೆಹೋವನಿಗೆ ಮಾಡಿದ ಬಹಿರಂಗ ಪ್ರಾರ್ಥನೆಯಲ್ಲಿ ದೃಢೀಕರಿಸಿದ್ದು: “ನೀನು ಅನೇಕ ವರ್ಷಗಳ ತನಕ ಅವರ [ಇಸ್ರಾಯೇಲ್ಯರ] ವಿಷಯ ತಾಳಿಕೊಂಡು ಪ್ರವಾದಿಗಳ ಮುಖಾಂತರ ಮಾತಾಡುತ್ತಿದ್ದ ನಿನ್ನ ಆತ್ಮದಿಂದ ಅವರನ್ನು ಎಷ್ಟು ಎಚ್ಚರಿಸುತ್ತಿದ್ದೀ.” (ನೆಹೆಮೀಯ 9:5, 30) ಆ ಪ್ರವಾದಿಗಳಿಂದ ನುಡಿಯಲ್ಪಟ್ಟ ಅನೇಕ ಪ್ರವಾದನೆಗಳು ದಾಖಲೆಮಾಡಲ್ಪಟ್ಟವು. ಅಷ್ಟಲ್ಲದೆ, ಪವಿತ್ರಾತ್ಮವು ಪವಿತ್ರ ಇತಿಹಾಸಗಳನ್ನು ಮತ್ತು ಹೃದಯಪ್ರೇರಿತ ಸ್ತುತಿಗೀತೆಗಳನ್ನು ಬರೆಯುವಂತೆ ನಂಬಿಗಸ್ತ ಪುರುಷರನ್ನು ಪ್ರೇರೇಪಿಸಿತ್ತು.
10 “ಎಲ್ಲಾ ಶಾಸ್ತ್ರವಚನಗಳು ದೈವಪ್ರೇರಿತವಾಗಿವೆ” ಎಂದು ಪೌಲನು ಬರೆದಾಗ ಈ ಎಲ್ಲಾ ಬರಹಗಳ ಕುರಿತೇ ಮಾತಾಡಿದ್ದನು. (2 ತಿಮೊಥಿ 3:16; 2 ಸಮುವೇಲ 23:2; 2 ಪೇತ್ರ 1:20, 21) ನಿಶ್ಚಯವಾಗಿ, ಈ ಶಾಸ್ತ್ರವಚನಗಳ ಕುರಿತು ಮಾತಾಡಿದಾಗ, ಯೇಸುವಿನ ಮೊದಲನೆಯ ಶತಕದ ಶಿಷ್ಯರು “ಪವಿತ್ರಾತ್ಮ ದಾವೀದನ ಬಾಯಿಂದ ಮೊದಲೇ ಹೇಳಿಸಿದ,” “ಪವಿತ್ರಾತ್ಮ ಪ್ರವಾದಿಯಾದ ಯೆಶಾಯನ ಬಾಯಿಂದ ವಿಹಿತವಾಗಿ ಹೇಳಿರುವ,” ಅಥವಾ “ಪವಿತ್ರಾತ್ಮವು ಹೇಳುವ ಪ್ರಕಾರವೇ” ಮುಂತಾದ ಹೇಳಿಕೆಗಳನ್ನು ಆಗಾಗ್ಗೆ ಉಪಯೋಗಿಸಿದ್ದಾರೆ. (ಅಪೊಸ್ತಲರ ಕೃತ್ಯಗಳು 1:16; 4:25; 28:25, 26; ಇಬ್ರಿಯ 3:7) ಆ ಪವಿತ್ರ ಶಾಸ್ತ್ರವಚನಗಳ ಬರೆಯುವಿಕೆಯನ್ನು ಪ್ರಭಾವಿಸಿದ್ದ ಆದೇ ಪವಿತ್ರ ಆತ್ಮವು, ಅವು ಇಂದು ನಮ್ಮನ್ನು ಮಾರ್ಗದರ್ಶಿಸುವಂತೆ ಮತ್ತು ಸಂತೈಸುವಂತೆ ಅವನ್ನು ಕಾಪಾಡಿ ಉಳಿಸಿರುವುದು ಅದೆಂಥ ಆಶೀರ್ವಾದವು!—1 ಪೇತ್ರ 1:25.
ಪವಿತ್ರಾತ್ಮದ ಮೇಲೆ ಆತುಕೊಳ್ಳುವಿಕೆ
11. ಗುಡಾರದ ಕಟ್ಟುವಿಕೆಯ ಸಂಬಂಧದಲ್ಲಿ ಪವಿತ್ರಾತ್ಮದ ಯಾವ ಚಟುವಟಿಕೆಯು ಕಂಡುಬಂದಿತ್ತು?
11 ಸೀನಾಯಿ ಬೆಟ್ಟದ ಬುಡದಲ್ಲಿ ಇಸ್ರಾಯೇಲ್ಯರು ಪಾಳೆಯ ಮಾಡಿದ್ದಾಗ, ಸತ್ಯಾರಾಧನೆಯ ಒಂದು ಕೇಂದ್ರವಾಗಿ ಒಂದು ಗುಡಾರವನ್ನು ಕಟ್ಟುವಂತೆ ಯೆಹೋವನು ಅವರಿಗೆ ಆಜ್ಞಾಪಿಸಿದನು. ಅವರಿದನ್ನು ನಿರ್ವಹಿಸಲು ಶಕ್ತರಾದದ್ದು ಹೇಗೆ? “ಮತ್ತು ಮೋಶೆಯು ಇಸ್ರಾಯೇಲ್ಯರಿಗೆ ಹೀಗಂದನು—ಯೆಹೋವನು ಯೆಹೂದ ಕುಲದ ಹೂರನ ಮೊಮ್ಮಗನೂ ಊರಿಯ ಮಗನೂ ಆಗಿರುವ ಬೆಚಲೇಲನೆಂಬವನನ್ನು ಗೊತ್ತಾಗಿ ನೇಮಿಸಿ ಅವನಿಗೆ ದಿವ್ಯಾತ್ಮವನ್ನು ಕೊಟ್ಟು ಬೇಕಾದ ಜ್ಞಾನವಿದ್ಯಾವಿವೇಕಗಳನ್ನೂ ಸಕಲಶಿಲ್ಪಶಾಸ್ತ್ರಜ್ಞಾನವನ್ನೂ ಅನುಗ್ರಹಿಸಿದ್ದಾನೆ.” (ವಿಮೋಚನಕಾಂಡ 35:30, 32, 33) ಬೆಚಲೇಲನಲ್ಲಿದ್ದ ಯಾವುದೇ ಸ್ವಾಭಾವಿಕ ನೈಪುಣ್ಯತೆಗಳನ್ನು ಪವಿತ್ರಾತ್ಮವು ಪುಷ್ಟಿಗೊಳಿಸಿತು ಮತ್ತು ಅವನು ಆ ಗಮನಾರ್ಹ ಕಟ್ಟಡದ ರಚನೆಯನ್ನು ಸಾಫಲ್ಯದಿಂದ ಮೇಲ್ವಿಚಾರ ನಡಿಸಲು ಶಕ್ತನಾದನು.
12. ಮೋಶೆಯ ಕಾಲದ ಅನಂತರ ಪವಿತ್ರಾತ್ಮವು ವ್ಯಕ್ತಿಗಳನ್ನು ಹೇಗೆ ಅಸಾಧಾರಣ ರೀತಿಗಳಲ್ಲಿ ಬಲಪಡಿಸಿತ್ತು?
12 ತದನಂತರದ ಒಂದು ಸಮಯದಲ್ಲಿ, ಯೆಹೋವನ ಆತ್ಮವು ಸಂಸೋನನ ಮೇಲೆ ಕಾರ್ಯ ಪ್ರವೃತ್ತವಾಗಿ, ಇಸ್ರಾಯೇಲ್ಯರನ್ನು ಫಿಲಿಷ್ಟಿಯರಿಂದ ಬಿಡಿಸಲು ಅವನನ್ನು ಶಕ್ತನನ್ನಾಗಿ ಮಾಡಿತು. (ನ್ಯಾಯಸ್ಥಾಪಕರು 14:5-7, 9; 15:14-16; 16:28-30) ಇನ್ನಷ್ಟು ಸಮಯದ ನಂತರ, ದೇವರಾದುಕೊಂಡ ಜನರ ರಾಜನಾದ ಸೊಲೊಮೋನನಿಗೆ ವಿಶೇಷ ವಿವೇಕವನ್ನು ಅನುಗ್ರಹಿಸಲಾಯಿತು. (2 ಪೂರ್ವಕಾಲವೃತ್ತಾಂತ 1:12, 13) ಅವನ ಕೆಳಗೆ ಇಸ್ರಾಯೇಲ್ ಹಿಂದೆಂದಿಗಿಂತಲೂ ಹೆಚ್ಚು ಸಮೃದ್ಧಿಯನ್ನು ಪಡೆದಿತ್ತು, ಮತ್ತು ಅದರ ಸಂತೋಷದ ಪರಿಸ್ಥಿತಿಯು, ಮಹಾ ಸೊಲೊಮೋನನಾದ ಯೇಸು ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಕೆಳಗೆ ದೇವಜನರು ಆನಂದಿಸಲಿರುವ ಆಶೀರ್ವಾದಗಳಿಗೆ ಒಂದು ನಮೂನೆಯಾಗಿ ಪರಿಣಮಿಸಿತು.—1 ಅರಸು 4:20, 25, 29-34; ಯೆಶಾಯ 2:3, 4; 11:1, 2; ಮತ್ತಾಯ 12:42.
13. ಬೆಚಲೇಲ, ಸಂಸೋನ ಮತ್ತು ಸೊಲೊಮೋನನನ್ನು ಪವಿತ್ರಾತ್ಮವು ಬಲಪಡಿಸಿದ್ದ ದಾಖಲೆಯು ನಮ್ಮನ್ನು ಇಂದು ಪ್ರೋತ್ಸಾಹಿಸುವುದು ಹೇಗೆ?
13 ಅದೇ ಆತ್ಮವು ನಮಗೆ ದೊರೆಯುವಂತೆ ಯೆಹೋವನು ಮಾಡುವುದು ಅದೆಷ್ಟು ಆಶೀರ್ವಾದಪ್ರದವು! ಒಂದು ನೇಮಕವನ್ನು ಪೂರೈಸಲು ಅಥವಾ ಸಾರುವ ಕಾರ್ಯದಲ್ಲಿ ಭಾಗವಹಿಸಲು ನಮ್ಮಲ್ಲಿ ಸಾಕಷ್ಟು ಯೋಗ್ಯತೆಗಳಿಲ್ಲವೆಂಬ ಅನಿಸಿಕೆಯಾದಾಗ, ಬೆಚಲೇಲನಿಗೆ ಯೆಹೋವನು ಕೊಟ್ಟ ಆದೇ ಆತ್ಮವನ್ನು ನಮಗೆ ಕೊಡುವಂತೆ ನಾವು ದೇವರನ್ನು ಕೇಳಿಕೊಳ್ಳಬಹುದು. ನಾವು ಅಸೌಖ್ಯವನ್ನು ಅನುಭವಿಸುವಾಗ ಅಥವಾ ಹಿಂಸೆಯನ್ನು ತಾಳಿಕೊಳ್ಳುವಾಗ, ಸಂಸೋನನಿಗೆ ಅಸಾಧಾರಣವಾದ ಬಲವನ್ನು ಕೊಟ್ಟ ಅದೇ ಆತ್ಮವು ನಮ್ಮನ್ನು ಬಲಪಡಿಸುವುದು—ಆದರೂ ನಿಶ್ಚಯವಾಗಿ ಅದ್ಭುತಕರವಾಗಿ ಅಲ್ಲ. ಮತ್ತು ನಾವು ಕಷ್ಟಕರವಾದ ಸಮಸ್ಯೆಗಳನ್ನು ಎದುರಿಸುವಾಗ ಅಥವಾ ಮಹತ್ವದ ನಿರ್ಣಯಗಳನ್ನು ಮಾಡಬೇಕಾದಾಗ, ನಾವು ವಿವೇಕದಿಂದ ಕ್ರಿಯೆಗೈಯಲು ಸಹಾಯಕವಾಗಿ, ಸೊಲೊಮೋನನಿಗೆ ಅಸಾಧಾರಣವಾದ ವಿವೇಕವನ್ನು ದಯಪಾಲಿಸಿದ್ದ ಯೆಹೋವನನ್ನು ನಾವು ಕೇಳಿಕೊಳ್ಳಬಲ್ಲೆವು. ಅನಂತರ, ಪೌಲನಂತೆ, ನಾವೂ ಹೀಗನ್ನುವೆವು: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.” (ಫಿಲಿಪ್ಪಿ 4:13) ಮತ್ತು ಯಾಕೋಬನ ವಾಗ್ದಾನವು ನಮಗೆ ಅನ್ವಯಿಸುವುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ [ವಿವೇಕ, NW ] ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವುದು. ದೇವರು ಹಂಗಿಸದೆ ಎಲ್ಲರಿಗೆ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.”—ಯಾಕೋಬ 1:5.
14. ಪುರಾತನ ಕಾಲದಲ್ಲಿ ಮತ್ತು ಇಂದು, ಯಾರು ಪವಿತ್ರಾತ್ಮದಿಂದ ಬೆಂಬಲಿಸಲ್ಪಟ್ಟಿರುತ್ತಾರೆ?
14 ಜನಾಂಗದ ನ್ಯಾಯತೀರಿಸುವ ಕೆಲಸವನ್ನು ಮಾಡುವಾಗಲೂ ಯೆಹೋವನ ಆತ್ಮವು ಮೋಶೆಯ ಮೇಲಿತ್ತು. ಇತರರು ಮೋಶೆಗೆ ನೆರವಾಗುವಂತೆ ನೇಮಿಸಲ್ಪಟ್ಟಾಗ, ಯೆಹೋವನು ಅಂದದ್ದು: “ಅದಲ್ಲದೆ ನಾನು ನಿನಗೆ ಅನುಗ್ರಹಿಸಿರುವ ಆತ್ಮದಲ್ಲಿ ಸ್ವಲ್ಪಾಂಶವನ್ನು ತೆಗೆದು ಅವರ ಮೇಲೆ ಇಡುವೆನು. ಆಗ ನೀನೊಬ್ಬನೇ ಈ ಜನರ ಭಾರವನ್ನು ವಹಿಸಬೇಕಾಗಿರದೆ ಇವರು ನಿನಗೆ ಸಹಾಯವನ್ನು ಮಾಡುವರು.” (ಅರಣ್ಯಕಾಂಡ 11:17, NW) ಹೀಗೆ, ಆ ಜನರು ತಮ್ಮ ಸ್ವಂತ ಶಕಿಯ್ತಿಂದ ಕೆಲಸಮಾಡಲಿಕ್ಕಿರಲಿಲ್ಲ. ಪವಿತ್ರಾತ್ಮವು ಅವರಿಗೆ ಬೆಂಬಲವಾಗಿತ್ತು. ತದನಂತರದ ಸಂದರ್ಭಗಳಲ್ಲಿ ಯೆಹೋವನ ಆತ್ಮವು ಬೇರೆ ವ್ಯಕ್ತಿಗಳ ಮೇಲೂ ಇತ್ತು ಎಂಬದನ್ನು ನಾವು ಓದುತ್ತೇವೆ. (ನ್ಯಾಯಸ್ಥಾಪಕರು 3:10, 11; 11:29) ಸಮುವೇಲನು ದಾವೀದನನ್ನು ಇಸ್ರಾಯೇಲಿನ ಭವಿಷ್ಯತ್ತಿನ ರಾಜನಾಗಿ ಅಭಿಷೇಕಿಸಿದಾಗ, ದಾಖಲೆಯು ಅನ್ನುವುದು: “ಸಮುವೇಲನು ಎಣ್ಣೆಯ ಕೊಂಬನ್ನು ತೆಗೆದುಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲೇ ಅಭಿಷೇಕಿಸಿದನು. ಕೂಡಲೆ ಯೆಹೋವನ ಆತ್ಮವು ದಾವೀದನ ಮೇಲೆ ಬಂದು ನೆಲೆಗೊಂಡಿತು.” (1 ಸಮುವೇಲ 16:13) ಯಾರಿಗೆ ಇಂದು—ಕುಟುಂಬ, ಸಭೆ ಅಥವಾ ಸಂಸ್ಥೆಯ—ಭಾರವಾದ ಜವಾಬ್ದಾರಿಕೆಗಳು ಇವೆಯೋ ಅವರು ದೇವರಾತ್ಮವು ಆತನ ಸೇವಕರಿಗೆ ತಮ್ಮ ಹಂಗುಗಳನ್ನು ನಿರ್ವಹಿಸಲು ಇನ್ನೂ ಬೆಂಬಲವನ್ನು ಕೊಡುತ್ತದೆ ಎಂದು ತಿಳಿಯುವುದರಲ್ಲಿ ಸಾಂತ್ವನವನ್ನು ಪಡೆಯಬಲ್ಲರು.
15. ಯಾವ ರೀತಿಯಲ್ಲಿ ಪವಿತ್ರಾತ್ಮವು ಯೆಹೋವನ ಸಂಸ್ಥೆಯನ್ನು ಬಲಪಡಿಸಿದೆ (ಎ) ಹಗ್ಗಾಯ ಮತ್ತು ಜೆಕರ್ಯನ ದಿನಗಳಲ್ಲಿ? ಮತ್ತು (ಬಿ) ಇಂದು?
15 ಮೋಶೆಯ ದಿನಗಳ ಅನಂತರ ಕೆಲವು ಸಾವಿರ ವರ್ಷಗಳ ಮೇಲೆ, ಇಸ್ರಾಯೇಲ್ಯ ಪುತ್ರರಲ್ಲಿ ನಂಬಿಗಸ್ತರು ಆಲಯವನ್ನು ಕಟ್ಟುವ ನಿಯೋಗದೊಂದಿಗೆ ಬೆಬಿಲೋನಿನಿಂದ ಯೆರೂಸಲೇಮಿಗೆ ಹಿಂತಿರುಗಿದರು. (ಎಜ್ರ 1:1-4; ಯೆರೆಮೀಯ 25:12; 29:14) ಆದರೂ, ಕಷ್ಟದ ಅಡಿತ್ಡಡೆಗಳು ತಲೆದೋರಿದವು, ಮತ್ತು ಅನೇಕ ವರ್ಷಗಳ ತನಕ ಅವರು ನಿರಾಶೆಯನ್ನು ಹೊಂದಿದರು. ಕೊನೆಗೆ ಯೆಹೋವನು, ಯೆಹೂದ್ಯರು ತಮ್ಮ ಸ್ವಂತ ಬಲದಲ್ಲಿ ಆತುಕೊಳ್ಳದಂತೆ ಪ್ರೋತ್ಸಾಹಿಸಲು ಪ್ರವಾದಿಗಳಾದ ಹಗ್ಗಾಯ ಮತ್ತು ಜೆಕರ್ಯರನ್ನು ಎಬ್ಬಿಸಿದನು. ಆದರೆ ಕೆಲಸವನ್ನು ಪೂರೈಸುವುದಾದರೂ ಹೇಗೆ? “ಯುದ್ಧಬಲದಿಂದಲ್ಲ, ಶಕಿಯ್ತಿಂದಲ್ಲ, ನನ್ನ ಆತ್ಮನಿಂದಲೇ ಎಂಬದು ಸೇನಾಧೀಶ್ವರ ಯೆಹೋವನ ನುಡಿ.” (ಜೆಕರ್ಯ 4:6, NW) ಮತ್ತು ದೇವರ ಆತ್ಮದ ಬೆಂಬಲದೊಂದಿಗೆ ಆಲಯವು ಕಟ್ಟಲ್ಪಟ್ಟಿತು. ಇದೇ ರೀತಿ ಇಂದು ದೇವಜನರು ಹೆಚ್ಚನ್ನು ಪೂರೈಸಿದ್ದಾರೆ. ಸುವಾರ್ತೆಯ ಸಾರುವಿಕೆಯು ಭೂಸುತ್ತಲೂ ವಿಸ್ತಾರಗೊಂಡಿದೆ. ಲಕ್ಷಾಂತರ ಜನರು ಸತ್ಯ ಮತ್ತು ನೀತಿಯಲ್ಲಿ ಶಿಕ್ಷಣವನ್ನು ಹೊಂದುತ್ತಿದ್ದಾರೆ. ಅಧಿವೇಶನಗಳು ಸಂಸ್ಥಾಪಿಸಲ್ಪಡುತ್ತಿವೆ. ರಾಜ್ಯ ಸಭಾಗೃಹಗಳು ಮತ್ತು ಬ್ರಾಂಚ್ ಆಫೀಸುಗಳು ಕಟ್ಟಲ್ಪಡುತ್ತಾ ಇವೆ. ಇವುಗಳಲ್ಲಿ ಹೆಚ್ಚಿನವು ಕಟು ವಿರೋಧದ ನಡುವೆ ನಿರ್ವಹಿಸಲ್ಪಟ್ಟಿವೆ. ಆದರೆ ಯೆಹೋವನ ಸಾಕ್ಷಿಗಳು ನಿರಾಶೆ ಹೊಂದಿರುವುದಿಲ್ಲ, ಯಾಕಂದರೆ ಅವರು ನಿರ್ವಹಿಸಿರುವ ಪ್ರತಿಯೊಂದು ವಿಷಯವು, ಯುದ್ಧಬಲದಿಂದಾಗಲಿ ಮನುಷ್ಯ ಶಕಿಯ್ತಿಂದಾಗಲಿ ಅಲ್ಲ, ದೇವರ ಆತ್ಮದಿಂದಲೇ ಎಂದವರಿಗೆ ಗೊತ್ತಿದೆ.
ಒಂದನೆಯ ಶತಮಾನದಲ್ಲಿ ದೇವರ ಆತ್ಮ
16. ದೇವರಾತ್ಮದ ಚಟುವಟಿಕೆಯ ಸಂಬಂಧದಲ್ಲಿ ಯೆಹೋವನ ಕ್ರೈಸ್ತ-ಪೂರ್ವದ ಸೇವಕರಿಗೆ ಯಾವ ಅನುಭವವಾಗಿತ್ತು?
16 ನಾವು ನೋಡಿದ ಪ್ರಕಾರ, ಕ್ರೈಸ್ತ-ಪೂರ್ವದ ದೇವರ ಸೇವಕರು ದೇವರ ಆತ್ಮದ ಶಕ್ತಿಯನ್ನು ಚೆನ್ನಾಗಿ ಅರಿತವರಾಗಿದ್ದರು. ಭಾರವಾದ ಹಂಗುಗಳನ್ನು ನೆರವೇರಿಸಲು ಮತ್ತು ದೇವರ ಚಿತ್ತವನ್ನು ಪೂರೈಸಲು ಸಹಾಯಕ್ಕಾಗಿ ಅವರು ಅದರ ಮೇಲೆ ಆತುಕೊಂಡಿದ್ದರು. ನಿಯಮಶಾಸ್ತ್ರ ಮತ್ತು ಇತರ ಪವಿತ್ರ ಬರಹಗಳು ದೈವಪ್ರೇರಿತವೆಂದೂ, ಯೆಹೋವನ ಆತ್ಮದ ಪ್ರಭಾವದ ಕೆಳಗೆ ಬರೆಯಲ್ಪಟ್ಟಿದ್ದ ‘ದೇವರ ವಾಕ್ಯ’ವೆಂದೂ ಅವರಿಗೆ ಗೊತ್ತಿತ್ತು. (ಕೀರ್ತನೆ 119:105) ಹಾಗಾದರೆ ಕ್ರೈಸ್ತ ಯುಗದ ಕುರಿತೇನು?
17, 18. ಕ್ರೈಸ್ತ ಯುಗದಲ್ಲಿ ಪವಿತ್ರಾತ್ಮದ ಕೆಲವು ಅದ್ಭುತಕರವಾದ ಪ್ರದರ್ಶನೆಗಳು ಯಾವುವು, ಮತ್ತು ಅವು ಯಾವ ಉದ್ದೇಶವನ್ನು ಪೂರೈಸಿದವು?
17 ನಮ್ಮ ಸಾಮಾನ್ಯ ಶಕದ ಮೊದಲನೆಯ ಶತಮಾನವು ಸಹಾ ದೇವರ ಆತ್ಮದ ಆಶ್ಚರ್ಯಕರ ಚಟುವಟಿಕೆಗಳನ್ನು ಕಂಡಿತ್ತು. ಆತ್ಮ-ಪ್ರೇರಿತ ಪ್ರವಾದಿಸುವಿಕೆಯು ಅಲ್ಲಿತ್ತು. (1 ಕೊರಿಂಥ 14:1, 3) ತಾನು ಹೇಳಿದ ಎಲ್ಲಾ ವಿಷಯಗಳ ಮರುಜ್ಞಾಪಕವನ್ನು ಪವಿತ್ರ ಆತ್ಮವು ತನ್ನ ಶಿಷ್ಯರಿಗೆ ಕೊಡುವುದು ಮತ್ತು ಸತ್ಯದ ಅಧಿಕ ಮುಖಗಳನ್ನು ಅವರಿಗೆ ಕಲಿಸುವುದು ಎಂಬ ಯೇಸುವಿನ ವಾಗ್ದಾನದ ನೆರವೇರಿಕೆಯಲ್ಲಿ, ಹಲವಾರು ಪುಸ್ತಕಗಳು ಪವಿತ್ರ ಆತ್ಮದ ಪ್ರಭಾವದ ಕೆಳಗೆ ಬರೆಯಲ್ಪಟ್ಟವು. (ಯೋಹಾನ 14:26; 15:26, 27; 16:12, 13) ಮತ್ತು ನಮ್ಮ ಮುಂದಿನ ಲೇಖನದಲ್ಲಿ ಅಧಿಕ ಪೂರ್ಣವಾಗಿ ಚರ್ಚಿಸಲ್ಪಡುವ, ಅದ್ಭುತಗಳೂ ಅಲ್ಲಿ ಇದ್ದವು. ನಿಶ್ಚಯವಾಗಿ ಮೊದಲನೆಯ ಶತಮಾನದ ಪ್ರವೇಶವೇ ಒಂದು ಗಮನಾರ್ಹ ಅದ್ಭುತದಿಂದ ಒಳಗೂಡಿತ್ತು. ಸಾ.ಶ.ಪೂ. ಸುಮಾರು 2ನೆಯ ವರ್ಷದಲ್ಲಿ ಒಂದು ವಿಶೇಷವಾದ ಕೂಸು ಜನಿಸಲಿಕ್ಕಿತ್ತು, ಮತ್ತು ಚಿಹ್ನೆಯೋಪಾದಿ, ಅದರ ಯುವ ತಾಯಿಯು ಕನ್ನಿಕೆಯಾಗಿದ್ದಿರಬೇಕಿತ್ತು. ಅದು ಹೇಗೆ ಸಾಧ್ಯ? ಪವಿತ್ರಾತ್ಮದ ಮೂಲಕವೇ. ದಾಖಲೆಯು ಅನ್ನುವುದು: “ಯೇಸು ಕ್ರಿಸ್ತನ ಜನನವು ಹೇಗಾಯಿತೆಂದರೆ—ಆತನ ತಾಯಿಯಾದ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿರಲಾಗಿ ಅವರು ಕೂಡುವುದಕ್ಕೆ ಮುಂಚೆಯೇ ಆಕೆಯು ಪವಿತ್ರಾತ್ಮದಿಂದ ಬಸುರಾಗಿದ್ದದ್ದು ತಿಳಿದುಬಂತು.”—ಮತ್ತಾಯ 1:18; ಲೂಕ 1:35, 36.
18 ಯೇಸು ಬೆಳೆದು ದೊಡ್ಡವನಾದಾಗ, ಅವನು ಪವಿತ್ರಾತ್ಮದ ಶಕಿಯ್ತಿಂದ ದೆವ್ವಗಳನ್ನು ಬಿಡಿಸಿದನು, ರೋಗಿಗಳನ್ನು ವಾಸಿಮಾಡಿದನು ಮತ್ತು ಸತ್ತವರನ್ನು ಕೂಡ ಎಬ್ಬಿಸಿದನು. ಅವನ ಹಿಂಬಾಲಕರಲ್ಲಿ ಕೆಲವರು ಸಹಾ ಅದ್ಭುತಗಳನ್ನು ಮತ್ತು ಮಹತ್ಕಾರ್ಯಗಳನ್ನು ನಡಿಸಿದರು. ಈ ವಿಶೇಷ ಸಾಮರ್ಥ್ಯಗಳು ಆತ್ಮದ ವರದಾನಗಳಾಗಿದ್ದವು. ಅವುಗಳ ಉದ್ದೇಶವೇನಾಗಿತ್ತು? ಆರಂಭದ ಅದ್ಭುತಗಳು ಮಾಡಿದ ಹಾಗೆಯೇ, ಅವು ದೇವರ ಉದ್ದೇಶಗಳನ್ನು ಪ್ರವರ್ಧಿಸಿದವು ಮತ್ತು ಆತನ ಶಕ್ತಿಯನ್ನು ಪ್ರಕಟಪಡಿಸಿದವು. ಅದಲ್ಲದೆ, ತಾನು ದೇವರಿಂದ ಕಳುಹಿಸಲ್ಪಟ್ಟವನೆಂಬ ಯೇಸುವಿನ ವಾದದ ಸತ್ಯತೆಯನ್ನು ಅವು ಪ್ರದರ್ಶಿಸಿದವು; ಮತ್ತು ತರುವಾಯ, ಒಂದನೆಯ ಶತಮಾನದ ಕ್ರೈಸ್ತ ಸಭೆಯು ದೇವರು ಆದುಕೊಂಡ ಜನಾಂಗವೆಂಬದನ್ನು ಅವು ರುಜುಪಡಿಸಿದವು.—ಮತ್ತಾಯ 11:2-6; ಯೋಹಾನ 16:8; ಅಪೊಸ್ತಲರ ಕೃತ್ಯಗಳು 2:22; 1 ಕೊರಿಂಥ 12:4-11; ಇಬ್ರಿಯ 2:4; 1 ಪೇತ್ರ 2:9.
19. ಯೇಸುವಿನ ಮತ್ತು ಆತನ ಅಪೊಸ್ತಲರ ಅದ್ಭುತಗಳ ಬೈಬಲ್ ದಾಖಲೆಯಿಂದ ನಮ್ಮ ನಂಬಿಕೆಯು ಬಲಗೊಂಡದ್ದು ಹೇಗೆ?
19 ಆದರೂ ಅಂಥ ಅದ್ಭುತಕರವಾದ ಆತ್ಮದ ಶಕ್ತಿ ಪ್ರದರ್ಶನೆಗಳು ಸಭೆಯು ಬಾಲ್ಯಾವಸ್ಥೆಗೆ ಸೇರಿತ್ತೆಂದೂ ಮತ್ತು ಅದು ದಾಟಿಹೋಗುವುದೆಂದೂ ಅಪೊಸ್ತಲ ಪೌಲನು ಹೇಳಿದ್ದಾನೆ, ಆದುದರಿಂದ ಅಂಥ ಅದ್ಭುತಗಳು ಪವಿತ್ರಾತ್ಮದಿಂದ ಮಾಡಲ್ಪಡುವುದನ್ನು ನಾವಿಂದು ಕಾಣುವುದಿಲ್ಲ. (1 ಕೊರಿಂಥ 13:8-11) ಆದರೂ, ಯೇಸು ಮತ್ತು ಅವನ ಅಪೊಸ್ತಲರಿಂದ ನಡಿಸಲ್ಪಟ್ಟ ಅದ್ಭುತಗಳಿಗೆ ಚಾರಿತ್ರಿಕ ಅಭಿರುಚಿಗಿಂತ ಇನ್ನೆಷ್ಟೋ ಹೆಚ್ಚಿನದ್ದು ಇದೆ. ನೂತನ ಲೋಕದಲ್ಲಿ ಯೇಸುವಿನ ಆಳಿಕೆಯ ಕೆಳಗೆ ರೋಗ ಮತ್ತು ಮರಣಕ್ಕೆ ಯಾವ ಸ್ಥಾನವೂ ಇರದು ಎಂಬ ದೇವರ ವಾಗ್ದಾನದಲ್ಲಿ ಅವು ನಮ್ಮ ನಂಬಿಕೆಯನ್ನು ಬಲಗೊಳಿಸುತ್ತವೆ.—ಯೆಶಾಯ 25:6-8; 33:24; 65:20-24.
ದೇವರ ಪವಿತ್ರಾತ್ಮದಿಂದ ಪ್ರಯೋಜನ
20, 21. ಪವಿತ್ರಾತ್ಮದ ಒದಗಿಸುವಿಕೆಯನ್ನು ನಾವು ಹೇಗೆ ನಮಗೆ ದೊರಕಿಸಿಕೊಳ್ಳಬಲ್ಲೆವು?
20 ಈ ಆತ್ಮವು ಎಷ್ಟು ಪ್ರಬಲವಾದ ಶಕ್ತಿಯುಳ್ಳದ್ದು! ಆದರೆ ಇಂದು ಕ್ರೈಸ್ತರು ಅದನ್ನು ದೊರಕಿಸಿಕೊಳ್ಳುವುದು ಹೇಗೆ? ಮೊದಲನೆಯದಾಗಿ, ನಾವದಕ್ಕಾಗಿ ಬೇಡಿಕೊಳ್ಳಬೇಕು ಎಂದು ಯೇಸು ಹೇಳಿದ್ದಾನೆ, ಆದ್ದರಿಂದ ಅದನ್ನೇ ನಾವೇಕೆ ಮಾಡಬಾರದು? ಈ ಆಶ್ಚರ್ಯಕರವಾದ ವರವನ್ನು ನಿಮಗೆ ಒತ್ತಡದ ಸಮಯದಲ್ಲಿ ಮಾತ್ರವೇ ಅಲ್ಲ, ಪ್ರತಿಯೊಂದು ಸಂದರ್ಭದಲ್ಲೂ ಕೊಡುವಂತೆ ಯೆಹೋವನಿಗೆ ಪ್ರಾರ್ಥಿಸಿರಿ. ಅದಲ್ಲದೆ, ಪವಿತ್ರಾತ್ಮವು ನಿಮ್ಮೊಂದಿಗೆ ಮಾತಾಡಲಾಗುವಂತೆ, ಬೈಬಲನ್ನು ಓದಿರಿ. (ಇಬ್ರಿಯ 3:7ಕ್ಕೆ ಹೋಲಿಸಿ.) ಪವಿತ್ರಾತ್ಮವು ನಿಮ್ಮ ಜೀವಿತವನ್ನು ಪ್ರಭಾವಿಸಲಾಗುವಂತೆ, ನೀವೇನನ್ನು ಓದುತ್ತೀರೋ ಅದನ್ನು ಮನನ ಮಾಡಿರಿ ಮತ್ತು ಅನ್ವಯಿಸಿಕೊಳ್ಳಿರಿ. (ಕೀರ್ತನೆ 1:1-3) ಅಷ್ಟಲ್ಲದೆ, ದೇವರ ಆತ್ಮದ ಮೇಲೆ ಆತುಕೊಳ್ಳುವ ಇತರರೊಂದಿಗೆ—ವೈಯಕ್ತಿಕವಾಗಿ, ಸಭೆಗಳಲ್ಲಿ, ಮತ್ತು ಸಮ್ಮೇಳನಗಳಲ್ಲಿ—ಸಹವಾಸ ಮಾಡಿರಿ. “ಸಮ್ಮೇಳವಾಗಿ” ತಮ್ಮ ದೇವರನ್ನು ಕೊಂಡಾಡುವ ಜನರನ್ನು ಎಷ್ಟು ಹೇರಳವಾಗಿ ಪವಿತ್ರಾತ್ಮವು ಬಲಪಡಿಸುತ್ತದೆ!—ಕೀರ್ತನೆ 68:26.
21 ಯೆಹೋವನು ಒಬ್ಬ ಔದಾರ್ಯವುಳ್ಳ ದೇವರಾಗಿಲ್ಲವೇ? ಪವಿತ್ರಾತ್ಮಕ್ಕಾಗಿ ನಾವು ಬೇಡಿಕೊಂಡರೆ ಮಾತ್ರವೇ ಸಾಕು ಆತನು ನಮಗದನ್ನು ಕೊಡುವನೆಂದು ಆತನು ಹೇಳುತ್ತಾನೆ. ಅಂಥ ಪ್ರಬಲವಾದ ಸಹಾಯವು ನಮಗೆ ದೊರೆಯುವಾಗ, ನಮ್ಮ ಸ್ವಂತ ಬಲದಲ್ಲಿ ಮತ್ತು ಸ್ವಂತ ಜ್ಞಾನದಲ್ಲಿ ಆತುಕೊಳ್ಳುವುದು ಅದೆಷ್ಟು ಅವಿವೇಕತನ! ಆದರೂ, ಪವಿತ್ರ ಆತ್ಮದ ಸಂಬಂಧದಲ್ಲಿ ಕ್ರೈಸ್ತರಾದ ನಮ್ಮನ್ನು ಪ್ರಭಾವಿಸುವ ಬೇರೆ ವಿಷಯಗಳೂ ಅಲ್ಲಿವೆ ಮತ್ತು ಅವನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುವು. (w92 2/1)
[ಅಧ್ಯಯನ ಪ್ರಶ್ನೆಗಳು]
a “ದೇವರ ಬೆರಳು” ಎಂಬ ಹೇಳಿಕೆಯು ಸಾಮಾನ್ಯವಾಗಿ ಪವಿತ್ರಾತ್ಮಕ್ಕೆ ಸೂಚಿತವಾಗಿದೆ.—ಲೂಕ 11:20 ಮತ್ತು ಮತ್ತಾಯ 12:28ನ್ನು ಹೋಲಿಸಿರಿ.
b ಬೈಬಲಿನಲ್ಲಿ ದಾಖಲೆಯಾಗಿರುವ ಹೆಚ್ಚಿನ ಅದ್ಭುತಗಳು ಮೋಶೆ ಮತ್ತು ಯೆಹೋಶುವ, ಎಲೀಯ ಮತ್ತು ಎಲೀಷ, ಯೇಸು ಮತ್ತು ಆತನ ಅಪೊಸ್ತಲರ ಸಮಯದಲ್ಲಿ ನಡೆದಿದ್ದವು.
ಕೆಳಗಿನ ಪ್ರಶ್ನೆಗಳನ್ನು ನೀವು ಉತ್ತರಿಸಬಲ್ಲಿರೋ?
▫ ವಿಶ್ವದ ಎಲ್ಲಾ ಭೌತದ್ರವ್ಯಗಳನ್ನು ಯೆಹೋವನು ನಿರ್ಮಿಸಿದ್ದು ಹೇಗೆ?
▫ ಕ್ರೈಸ್ತ-ಪೂರ್ವದ ಸಮಯದಲ್ಲಿ ಪವಿತ್ರಾತ್ಮವು ಕಾರ್ಯನಡಿಸಿದ ಕೆಲವು ವಿಧಾನಗಳು ಯಾವುವು?
▫ ಪುರಾತನ ಕಾಲದಲ್ಲಿ ಪವಿತ್ರಾತ್ಮವು ಏನನ್ನು ಪೂರೈಸಿತ್ತೊ ಅದು ನಮ್ಮನ್ನು ಸಾಂತ್ವನಗೊಳಿಸುವುದು ಹೇಗೆ?
▫ ಪವಿತ್ರಾತ್ಮದ ಒದಗಿಸುವಿಕೆಯನ್ನು ನಮಗಾಗಿ ನಾವು ದೊರಕಿಸಿಕೊಳ್ಳುವುದು ಹೇಗೆ?
[ಪುಟ 10 ರಲ್ಲಿರುವ ಚಿತ್ರ]
ಸಂಸೋನನಿಗೆ ಮನುಷ್ಯಾತೀತ ಬಲವನ್ನು ಕೊಟ್ಟ ಪವಿತ್ರಾತ್ಮವು ನಮಗೂ ಎಲ್ಲಾ ವಿಷಯಗಳಿಗಾಗಿ ಶಕ್ತಿಯನ್ನು ಕೊಡಬಲ್ಲದು