ಅಧ್ಯಾಯ 76
ಫರಿಸಾಯನೊಂದಿಗೆ ಊಟಮಾಡುವದು
ಮಾತಾಡಲು ಬಾರದ ಮೂಕನನ್ನು ಗುಣಪಡಿಸಲು ಅವನಿಗಿದ್ದ ಶಕ್ತಿಯ ಮೂಲದ ಕುರಿತಾದ ಪ್ರಶ್ನೆಗೆ ಠೀಕಿಸುವವರಿಗೆ ಯೇಸುವು ಉತ್ತರಿಸಿದ ನಂತರ, ಫರಿಸಾಯನೊಬ್ಬನು ಅವನನ್ನು ಊಟಕ್ಕೆ ಆಮಂತ್ರಿಸುತ್ತಾನೆ. ಅವರು ಊಟಕ್ಕೆ ಕುಳಿತುಕೊಳ್ಳುವ ಮೊದಲು ಫರಿಸಾಯರು ಮೊಣಕೈ ತನಕ ಕೈಗಳನ್ನು ತೊಳೆಯುವ ಅವರ ಸಾಂಪ್ರದಾಯಿಕ ಪದ್ಧತಿಯಲ್ಲಿ ತೊಡಗುತ್ತಿದ್ದರು. ಅವರು ಅದನ್ನು ಊಟದ ಮೊದಲು ಮತ್ತು ನಂತರ ಮತ್ತು ಖಾದ್ಯಗಳ ಉಣ್ಣುವಿಕೆಯ ನಡುವೆಯೂ ಕೂಡ ಮಾಡುತ್ತಿದ್ದರು. ಈ ಸಂಪ್ರದಾಯವು ದೇವರ ಲಿಖಿತ ನಿಯಮವನ್ನು ಮುರಿಯದೆ ಇರುವದಾದರೂ, ವಿಧಿವಿಹಿತ ಶುದ್ಧಾಚಾರದ ವಿಷಯದಲ್ಲಿ ದೇವರು ಏನು ಬಯಸುತ್ತಾನೋ ಅದನ್ನು ಮೀರಿ ಇದು ಹೋಗುತ್ತದೆ.
ಈ ಸಂಪ್ರದಾಯವನ್ನು ಪಾಲಿಸಲು ಯೇಸುವು ತಪ್ಪಿದ್ದರಿಂದ ಅವನ ಆತಿಥೇಯನಿಗೆ ಆಶ್ಚರ್ಯಪುಂಟಾಯಿತು. ಅವನು ತನ್ನ ಆಶ್ಚರ್ಯವನ್ನು ಬಾಯಿಮಾತಿನ ಮೂಲಕ ವ್ಯಕ್ತಪಡಿಸದೇ ಇದ್ದರೂ, ಯೇಸುವು ಅದನ್ನು ಕಂಡುಕೊಂಡು, ಹೇಳುವದು: “ಫರಿಸಾಯರಾದ ನೀವು ಪಂಚಪಾತ್ರೆ ಬಟ್ಟಲು ಇವುಗಳ ಹೊರಭಾಗವನ್ನು ಶುಚಿಮಾಡುತ್ತೀರಿ ಸರಿ; ಆದರೆ ನಿಮ್ಮ ಒಳಭಾಗವು ಸುಲಿಗೆಯಿಂದಲೂ ಕೆಟ್ಟತನದಿಂದಲೂ ತುಂಬಿರುತ್ತದೆ. ಬುದ್ಧಿಯಿಲ್ಲದವರೇ, ಹೊರಭಾಗವನ್ನು ಮಾಡಿದಾತನು ಒಳಭಾಗವನ್ನೂ ಮಾಡಿದನಲ್ಲವೇ?”
ದುಷ್ಟತನದಿಂದ ತಮ್ಮ ಹೃದಯಗಳನ್ನು ಶುಚಿಮಾಡಲು ತಪ್ಪುವ, ಆದರೆ ತಮ್ಮ ಕೈಗಳನ್ನು ವಿಧಿವಿಹಿತವಾಗಿ ತೊಳೆಯುವ ಫರಿಸಾಯರ ಕಪಟತನವನ್ನು ಯೇಸುವು ಈ ರೀತಿಯಲ್ಲಿ ಪ್ರಕಟಪಡಿಸುತ್ತಾನೆ. ಅವನು ಬುದ್ಧಿವಾದವನ್ನೀಯುವದು: “ಹೇಗೂ ಒಳಗಿರುವಂಥದನ್ನು ದಾನಾಕೊಡಿರಿ; ಆಗ ಸಕಲವೂ ನಿಮಗೆ ಶುದ್ಧವಾಗಿರುವದು.” ಅವರ ನೀತಿಯ ನಟನೆಯೊಂದಿಗೆ ಇತರರನ್ನು ಪ್ರಭಾವಿಸುವ ಇಚ್ಛೆಯಿಂದ ಇದು ಇರದೆ, ಅವರ ಕೊಡುವಿಕೆಯು ಪ್ರೀತಿಯ ಹೃದಯದಿಂದ ಪ್ರಚೋದಿಸಲ್ಪಡಬೇಕಾಗಿದೆ.
“ಅಯ್ಯೋ ಫರಿಸಾಯರೇ,” ಯೇಸುವು ಮುಂದುವರಿಸುವದು, “ನೀವು ಮರುಗ ಸದಾಪು ಮುಂತಾದ ಸಕಲ ಪಲ್ಯಗಳಲ್ಲಿ ಹತ್ತರಲ್ಲೊಂದು ಪಾಲು ಕೊಡುತ್ತೀರಿ ಸರಿ; ಆದರೆ ನ್ಯಾಯವನ್ನೂ ದೇವರ ಪ್ರೀತಿಯನ್ನೂ ಒತ್ತಟ್ಟಿಗೆ ಬಿಟ್ಟಿದ್ದೀರಿ; ಇವುಗಳನ್ನು ಮಾಡಬೇಕಾಗಿತ್ತು, ಅವುಗಳನ್ನೂ ಬಿಡಬಾರದು.” ತಮ್ಮ ಹೊಲಗಳ ಉತ್ಪಾದನೆಯಲ್ಲಿ ದಶಮಾಂಶ, ಇಲ್ಲವೆ ಹತ್ತನೆಯ ಒಂದು ಪಾಲನ್ನು ಕೊಡಬೇಕು ಎಂದು ದೇವರ ನಿಯಮವು ಇಸ್ರಾಯೇಲ್ಯರಿಗೆ ವಿಧಿಸಿತ್ತು. ಮರುಗ ಯಾ ಸದಾಪು ಬಹಳ ಚಿಕ್ಕ ಗಿಡಗಳು ಇಲ್ಲವೆ ಬಳ್ಳಿಗಳಾಗಿದ್ದು, ಆಹಾರಕ್ಕೆ ರುಚಿಕೊಡುತ್ತಿದ್ದವು. ಇಂಥಾ ನಗಣ್ಯವಾದ ಬಳ್ಳಿಗಳಿಂದಲೂ ದಶಮಾಂಶವನ್ನು ಫರಿಸಾಯರು ಬಹಳ ಜಾಗರೂಕತೆಯಿಂದ ಸಲ್ಲಿಸುತ್ತಿದ್ದರು, ಆದರೆ ಪ್ರೀತಿ, ದಯೆ ತೋರಿಸುವದು ಮತ್ತು ನಮ್ರತೆಯವರಾಗಿರುವದು ಮುಂತಾದ ಹೆಚ್ಚು ಪ್ರಾಮುಖ್ಯ ಆವಶ್ಯಕತೆಗಳನ್ನು ಅವರು ಅಲಕ್ಷ್ಯಿಸಿದುದಕ್ಕಾಗಿ ಯೇಸುವು ಅವರನ್ನು ಖಂಡಿಸುತ್ತಾನೆ.
ಇನ್ನಷ್ಟು ಅವರನ್ನು ಖಂಡಿಸುತ್ತಾ, ಯೇಸು ಹೇಳಿದ್ದು: “ಅಯ್ಯೋ ಫರಿಸಾಯರೇ, ಸಭಾಮಂದಿರಗಳಲ್ಲಿ ಮುಖ್ಯಪೀಠಗಳೂ ಅಂಗಡಿ ಬೀದಿಗಳಲ್ಲಿ ನಮಸ್ಕಾರಗಳೂ ನಿಮಗೆ ಇಷ್ಟ! ನಿಮ್ಮ ಗತಿಯನ್ನು ಏನು ಹೇಳಲಿ; ನೆಲಸಮವಾದ ಸಮಾಧಿಗಳ ಹಾಗಿದ್ದೀರಿ; ಅವುಗಳ ಮೇಲೆ ತಿರುಗಾಡುವ ಜನರಿಗೆ ಇದು ಸಮಾಧಿಯೆಂದು ತಿಳಿಯದು!” ಅವರ ಅಶುದ್ಧತೆಯು ಕಾಣುವದಿಲ್ಲ. ಫರಿಸಾಯರ ಧರ್ಮಕ್ಕೆ ಹೊರಗಿನಿಂದ ಆಡಂಬರವಿದೆ ಆದರೆ ಒಳಗಿನಿಂದ ಏನೂ ಮೌಲ್ಯತೆಯದ್ದಲ್ಲ! ಅದು ಕಪಟತನದ ಮೇಲೆ ಆಧರಿತವಾಗಿರುತ್ತದೆ.
ಅಂಥಾ ಖಂಡಿಸುವಿಕೆಯನ್ನು ಆಲಿಸಿ, ಒಬ್ಬ ವಕೀಲನು ಅಂದರೆ ದೇವರ ನಿಯಮದಲ್ಲಿ ನಿಪುಣರಾಗಿದ್ದವರಲ್ಲಿ ಒಬ್ಬನು, ದೂರುವದು: “ಬೋಧಕನೇ, ಈ ಮಾತುಗಳನ್ನು ಹೇಳಿದ ಮೂಲಕ ನಮ್ಮನ್ನೂ ನಿಂದಿಸಿದ ಹಾಗಾಯಿತು.”
ನಿಯಮದಲ್ಲಿ ಪ್ರವೀಣರಾಗಿರುವವರನ್ನೂ ಯೇಸುವು ಜವಾಬ್ದಾರರನ್ನಾಗಿ ಮಾಡುತ್ತಾ, ಹೇಳುವದು: “ಧರ್ಮೋಪದೇಶಕರೇ, ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಜನರ ಮೇಲೆ ಹೊರಲಾರದ ಹೊರೆಗಳನ್ನು ಹೊರಿಸುತ್ತೀರಿ; ನೀವಾದರೋ ಆ ಹೊರೆಗಳನ್ನು ಒಂದು ಬೆರಳಿನಿಂದಲೂ ಮುಟ್ಟುವದಿಲ್ಲ! ನಿಮ್ಮ ಗತಿಯನ್ನು ಏನು ಹೇಳಲಿ? ನೀವು ಪ್ರವಾದಿಗಳ ಗೋರಿಗಳನ್ನು ಕಟ್ಟುತ್ತೀರಿ; ಅವರನ್ನು ಕೊಂದವರು ನಿಮ್ಮ ಪಿತೃಗಳೇ!”
ಯೇಸುವು ಹೇಳಿದ ಹೊರೆಗಳು ಅವರ ಮೌಖಿಕ ಸಂಪ್ರದಾಯಗಳು, ಆದರೆ ಜನರಿಗೆ ಅದನ್ನು ಸುಲಭವನ್ನಾಗಿ ಮಾಡಲು, ಅದರ ಒಂದು ಚಿಕ್ಕ ಕಾನೂನನ್ನು ಸಹ ಈ ವಕೀಲರು [ಧರ್ಮೋಪದೇಶಕರು] ಎತ್ತಿಯೂ ನೋಡುವದಿಲ್ಲ. ಪ್ರವಾದಿಗಳ ಕೊಲ್ಲುವಿಕೆಗೆ ಅವರು ತಮ್ಮ ಒಪ್ಪಿಗೆಯನ್ನು ಸಹ ಕೊಡುವರು ಎಂದು ಯೇಸುವು ಪ್ರಕಟಿಸುತ್ತಾ, ಎಚ್ಚರಿಸುವದು: “ಹೀಗೆ ಲೋಕಾದಿಯಿಂದ ಹೇಬೆಲನ ರಕ್ತವು ಮೊದಲುಗೊಂಡು ಯಜ್ಞವೇದಿಗೂ ದೇವಾಲಯಕ್ಕೂ ನಡುವೆ ಹತವಾದ ಜಕರೀಯನ ರಕ್ತದ ವರೆಗೂ ಸುರಿಸಲ್ಪಟ್ಟ ಎಲ್ಲಾ ಪ್ರವಾದಿಗಳ ರಕ್ತಕ್ಕೂ ಈ ಸಂತತಿಯವರು ಉತ್ತರ ಕೊಡಬೇಕು ಎಂಬದೇ; ಹೌದು, ಈ ಸಂತತಿಯವರೇ ಉತ್ತರ ಕೊಡಬೇಕೆಂದು ನಿಮಗೆ ಹೇಳುತ್ತೇನೆ.”
ಬಿಡುಗಡೆ ಹೊಂದ ಸಾಧ್ಯವಾದ ಮಾನವಕುಲದ ಲೋಕವು ಆದಾಮ ಮತ್ತು ಹವ್ವರ ಮಕ್ಕಳ ಜನನದಿಂದ ಆರಂಭಗೊಂಡಿತು; ಈ ರೀತಿಯಲ್ಲಿ ಹೇಬೆಲನು “ಲೋಕಾದಿಯಲ್ಲಿ” [ಲೋಕವು ಸ್ಥಾಪಿಸಲ್ಪಟ್ಟಂದಿನಿಂದ] ಜೀವಿಸಿದ್ದನು. ಜಕರೀಯನ ಕೆಟ್ಟ ರೀತಿಯ ಕೊಲೆಯ ನಂತರ, ಒಂದು ಸಿರಿಯದ ಸೇನೆಯು ಯೂದಾಯವನ್ನು ಧ್ವಂಸಗೊಳಿಸಿತು. ಆದರೆ ತನ್ನ ಸ್ವಂತ ಸಂತತಿಯ ಮಹಾ ದುಷ್ಟತೆಯ ಕಾರಣ ಒಂದು ದೊಡ್ಡ ಧ್ವಂಸತೆಯ ಕುರಿತು ಯೇಸುವು ಮಾತಾಡುತ್ತಾನೆ. ಈ ನಾಶನವು ಸುಮಾರು 38 ವರ್ಷಗಳ ನಂತರ, ಅಂದರೆ ಸಾ.ಶ. 70ರಲ್ಲಿ ಸಂಭವಿಸುತ್ತದೆ.
ಅವನ ಖಂಡಿಸುವಿಕೆಯನ್ನು ಮುಂದುವರಿಸುತ್ತಾ, ಯೇಸುವು ಹೇಳುವದು: “ಅಯ್ಯೋ ಧರ್ಮೋಪದೇಶಕರೇ, ಜ್ಞಾನಕ್ಕೆ ಸಾಧನವಾದ ಬೀಗದಕೈಯನ್ನು ತೆಗೆದುಬಿಟ್ಟಿರಿ. ನೀವೂ ಒಳಕ್ಕೆ ಹೋಗಲಿಲ್ಲ; ಒಳಕ್ಕೆ ಹೋಗುತ್ತಿರುವವರಿಗೂ ಅಡ್ಡಿಮಾಡಿದಿರಿ!” ದೇವರ ವಾಕ್ಯವನ್ನು ಜನರಿಗೆ ವಿವರಿಸಿ, ಅದರ ಅರ್ಥವನ್ನು ಬಿಡಿಸಿ ಹೇಳುವ ಹಂಗು ನಿಯಮದ ಈ ನಿಪುಣ ಉಪದೇಶಕರಿಗೆ ಬದ್ಧವಾಗಿತ್ತು. ಆದರೆ ಅವರು ಇದನ್ನು ಮಾಡಲು ತಪ್ಪಿದರು ಮತ್ತು ಇದನ್ನು ತಿಳಿದು ಕೊಳ್ಳುವ ಸಂದರ್ಭವನ್ನು ಕೂಡ ಅವರು ಜನರಿಂದ ಕಸಿದುಕೊಂಡರು.
ಫರಿಸಾಯರು ಮತ್ತು ಕಾನೂನು ತಜ್ಞರು, ಈ ರೀತಿ ಅವರ ತಪ್ಪನ್ನು ಹೊರಪಡಿಸಿದ್ದಕ್ಕಾಗಿ ಯೇಸುವಿನೆಡೆಗೆ ಕೋಪಭರಿತರಾದರು. ಅವನು ಮನೆಗೆ ಹೋಗಬೇಕೆಂದಿರುವಾಗ, ಅವರು ಆತನನ್ನು ಕಠಿಣವಾಗಿ ವಿರೋಧಿಸಿ, ಪ್ರಶ್ನೆಗಳ ಸುರಿಮಳೆಯನ್ನು ಹಾಕಿದರು. ಅವನನ್ನು ಅವರು ಸೆರೆಹಿಡಿಯಲು ಸಾಧ್ಯವಾಗುವಂತೆ ಅವನು ಏನಾದರೂ ಹೇಳಲು ಅವನನ್ನು ಹೊಂಚಿನೋಡುತ್ತಿದ್ದರು. ಲೂಕ 11:37-54; ಧರ್ಮೋಪದೇಶಕಾಂಡ 14:22; ಮೀಕ 6:8; 2 ಪೂರ್ವಕಾಲವೃತ್ತಾಂತ 24:20-25.
▪ ಫರಿಸಾಯರನ್ನು ಮತ್ತು ನಿಯಮದಲ್ಲಿ ನಿಪುಣರಾಗಿರುವವರನ್ನು ಯೇಸುವು ಯಾಕೆ ಖಂಡಿಸುತ್ತಾನೆ?
▪ ವಕೀಲರು ಜನರ ಮೇಲೆ ಯಾವ ಹೊರೆಗಳನ್ನು ಹೊರಿಸಿದರು?
▪ “ಲೋಕಾದಿಯಿಂದ [ಲೋಕವು ಸ್ಥಾಪಿಸಲ್ಪಟ್ಟಂದಿನಿಂದ] ಅಂದರೆ ಯಾವಾಗ?