ದೈವಿಕ ಶಾಂತಿಯ ಸಂದೇಶವಾಹಕರಾಗಿ ಸೇವೆಮಾಡುವುದು
“ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭ ಸಮಾಚಾರವನ್ನು ತಂದು ಸಮಾಧಾನವನ್ನು [“ಶಾಂತಿಯನ್ನು,” NW] ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ!”—ಯೆಶಾಯ 52:7.
1, 2. (ಎ) ಯೆಶಾಯ 52:7ರಲ್ಲಿ ಮುಂತಿಳಿಸಲ್ಪಟ್ಟಂತೆ, ಯಾವ ಸುವಾರ್ತೆಯು ಪ್ರಚುರಪಡಿಸಲ್ಪಡಬೇಕು? (ಬಿ) ಪುರಾತನ ಇಸ್ರಾಯೇಲಿನ ವಿಷಯದಲ್ಲಿ ಯೆಶಾಯನ ಪ್ರವಾದನಾತ್ಮಕ ಮಾತುಗಳ ಅರ್ಥವೇನಾಗಿತ್ತು?
ಘೋಷಿಸಲಿಕ್ಕಾಗಿ ಸುವಾರ್ತೆಯು ಇದೆ! ಅದು ಶಾಂತಿಯ—ನಿಜ ಶಾಂತಿಯ ವಾರ್ತೆಯಾಗಿದೆ. ಅದು ದೇವರ ರಾಜ್ಯದೊಂದಿಗೆ ಸಂಬಂಧಿಸಿರುವ ರಕ್ಷಣೆಯ ಸಂದೇಶವಾಗಿರುತ್ತದೆ. ಬಹಳ ಹಿಂದೆಯೇ ಪ್ರವಾದಿಯಾದ ಯೆಶಾಯನು ಅದರ ಕುರಿತಾಗಿ ಬರೆದನು, ಮತ್ತು ಅವನ ಮಾತುಗಳು ಯೆಶಾಯ 52:7ರಲ್ಲಿ ನಮಗಾಗಿ ಸಂರಕ್ಷಿಸಿ ಇಡಲ್ಪಟ್ಟಿವೆ. ಅಲ್ಲಿ ನಾವು ಓದುವುದು: “ಪರ್ವತಗಳ ಮೇಲೆ ತ್ವರೆಪಡುತ್ತಾ ಶುಭಸಮಾಚಾರವನ್ನು ತಂದು ಸಮಾಧಾನವನ್ನು [“ಶಾಂತಿಯನ್ನು,” NW] ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ! ಒಳ್ಳೆಯ ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು ರಕ್ಷಣೆಯನ್ನು ಪ್ರಕಟಿಸುತ್ತಾ—ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.”
2 ಯೆಹೋವನು ಆ ಸಂದೇಶವನ್ನು ಪುರಾತನ ಇಸ್ರಾಯೇಲಿನ ಪ್ರಯೋಜನಕ್ಕಾಗಿ ಮತ್ತು ಇಂದು ನಮ್ಮ ಪ್ರಯೋಜನಕ್ಕಾಗಿ ದಾಖಲಿಸುವಂತೆ ತನ್ನ ಪ್ರವಾದಿಯಾದ ಯೆಶಾಯನನ್ನು ಪ್ರೇರಿಸಿದನು. ಆ ಸಂದೇಶದ ಅರ್ಥವೇನು? ಯೆಶಾಯನು ಆ ಮಾತುಗಳನ್ನು ಬರೆದ ಸಮಯದಲ್ಲಿ, ಇಸ್ರಾಯೇಲಿನ ಉತ್ತರ ರಾಜ್ಯವು ಆಗಲೇ ಆಶ್ಶೂರ್ಯರಿಂದ ದೇಶಭ್ರಷ್ಟವಾಗಿ ಕೊಂಡೊಯ್ಯಲ್ಪಟ್ಟಿದ್ದಿರಬಹುದು. ತದನಂತರ, ಯೆಹೂದದ ದಕ್ಷಿಣ ರಾಜ್ಯದ ನಿವಾಸಿಗಳು ಬಾಬೆಲಿಗೆ ದೇಶಭ್ರಷ್ಟರಾಗಿ ಕೊಂಡೊಯ್ಯಲ್ಪಡಲಿದ್ದರು. ಆ ದಿನಗಳು ದೇಶದಲ್ಲಿ ಮನೋವ್ಯಥೆ ಮತ್ತು ಸಂಕ್ಷೋಭೆಯ ದಿನಗಳಾಗಿದ್ದವು, ಯಾಕಂದರೆ ಜನರು ಯೆಹೋವನಿಗೆ ವಿಧೇಯರಾಗಿರಲಿಲ್ಲ ಮತ್ತು ಈ ಕಾರಣದಿಂದ ದೇವರೊಂದಿಗೆ ಶಾಂತಿಯಿಂದಿರಲಿಲ್ಲ. ಯೆಹೋವನು ಅವರಿಗೆ ಹೇಳಿದಂತೆ, ಅವರ ಪಾಪಪೂರ್ಣ ನಡತೆಯು, ಅವರ ಮತ್ತು ಅವರ ದೇವರ ನಡುವೆ ಒಂದು ವಿಭಜನೆಯನ್ನು ಉಂಟುಮಾಡುತ್ತಿತ್ತು. (ಯೆಶಾಯ 42:24; 59:2-4) ಆದಾಗಲೂ, ಬಾಬೆಲಿನ ದ್ವಾರಗಳು ತಕ್ಕ ಸಮಯದಲ್ಲಿ ತೆರೆದುಕೊಳ್ಳುವವು ಎಂಬುದನ್ನು ಯೆಹೋವನು ಯೆಶಾಯನ ಮೂಲಕ ಮುಂತಿಳಿಸಿದನು. ದೇವರ ಜನರು ತಮ್ಮ ಸ್ವದೇಶಕ್ಕೆ, ಯೆಹೋವನ ದೇವಾಲಯವನ್ನು ಪುನಃ ಕಟ್ಟಲಿಕ್ಕಾಗಿ ಹಿಂದಿರುಗಲು ಸ್ವತಂತ್ರರಾಗಿರುವರು. ಚೀಯೋನ್ ಪುನಃಸ್ಥಾಪಿಸಲ್ಪಡುವುದು, ಮತ್ತು ಸತ್ಯ ದೇವರ ಆರಾಧನೆಯು ಪುನಃ ಒಮ್ಮೆ ಯೆರೂಸಲೇಮಿನಲ್ಲಿ ನಡೆಸಲ್ಪಡುವುದು.—ಯೆಶಾಯ 44:28; 52:1, 2.
3. ಇಸ್ರಾಯೇಲಿನ ಪುನಃಸ್ಥಾಪನೆಯ ವಾಗ್ದಾನವು, ಒಂದು ಶಾಂತಿಯ ಪ್ರವಾದನೆಯೂ ಆಗಿತ್ತು ಹೇಗೆ?
3 ಬಿಡುಗಡೆಯ ಈ ವಾಗ್ದಾನವು, ಒಂದು ಶಾಂತಿಯ ಪ್ರವಾದನೆಯೂ ಆಗಿತ್ತು. ಯೆಹೋವನು ಇಸ್ರಾಯೇಲ್ಯರಿಗೆ ಕೊಟ್ಟಿದ್ದ ದೇಶಕ್ಕೆ ಪುನಃಸ್ಥಾಪಿಸಲ್ಪಡುವುದು, ದೇವರ ಕರುಣೆ ಮತ್ತು ಅವರ ಪಶ್ಚಾತ್ತಾಪದ ರುಜುವಾತಾಗಿರಲಿತ್ತು. ಅವರು ದೇವರೊಂದಿಗೆ ಶಾಂತಿಯಿಂದಿದ್ದರೆಂಬುದನ್ನು ಇದು ಸೂಚಿಸಲಿತ್ತು.—ಯೆಶಾಯ 14:1; 48:17, 18.
“ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ”
4. (ಎ) ಸಾ.ಶ.ಪೂ. 537ರಲ್ಲಿ, ‘ಯೆಹೋವನು ರಾಜ್ಯಭಾರವನ್ನು ವಹಿಸಿದ್ದಾನೆ’ ಎಂದು ಯಾವ ಅರ್ಥದಲ್ಲಿ ಹೇಳಸಾಧ್ಯವಿತ್ತು? (ಬಿ) ತದನಂತರದ ವರ್ಷಗಳಲ್ಲಿ ಯೆಹೋವನು ತನ್ನ ಜನರ ಪ್ರಯೋಜನಕ್ಕಾಗಿ ವಿಷಯಗಳನ್ನು ಹೇಗೆ ನಿರ್ವಹಿಸಿದನು?
4 ಸಾ.ಶ.ಪೂ. 537ರಲ್ಲಿ ಯೆಹೋವನು ಈ ಬಿಡುಗಡೆಯನ್ನು ನಡಿಸಿದಾಗ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂಬ ಪ್ರಕಟಣೆಯನ್ನು ಸೂಕ್ತವಾಗಿಯೇ ಚೀಯೋನಿಗೆ ಮಾಡಸಾಧ್ಯವಿತ್ತು. ನಿಜ, ಯೆಹೋವನು “ನಿತ್ಯತೆಯ ಅರಸ” (NW)ನಾಗಿದ್ದಾನೆ. (ಪ್ರಕಟನೆ 15:3) ಆದರೆ ಆತನ ಜನರ ಈ ಬಿಡುಗಡೆಯು, ಆತನ ಪರಮಾಧಿಕಾರದ ಇನ್ನೊಂದು ಪ್ರದರ್ಶನವಾಗಿತ್ತು. ಆ ಸಮಯದ ತನಕ ಇದ್ದಂತಹ ಅತಿ ಬಲಿಷ್ಠವಾದ ಮಾನವ ಸಾಮ್ರಾಜ್ಯವನ್ನೂ ಮೀರಿದ ಆತನ ಶಕ್ತಿಯ ಶ್ರೇಷ್ಠತೆಯನ್ನು ಅದು ಗಮನಸೆಳೆಯುವಂತಹ ಒಂದು ವಿಧದಲ್ಲಿ ಪ್ರದರ್ಶಿಸಿತು. (ಯೆರೆಮೀಯ 51:56, 57) ಯೆಹೋವನ ಆತ್ಮದ ಕಾರ್ಯಾಚರಣೆಯ ಫಲಿತಾಂಶವಾಗಿ, ಆತನ ಜನರ ವಿರುದ್ಧವಾದ ಇತರ ಒಳಸಂಚುಗಳು ತಡೆಯಲ್ಪಟ್ಟವು. (ಎಸ್ತೇರ 9:24, 25) ತನ್ನ ಸ್ವಂತ ಪರಮ ಚಿತ್ತವನ್ನು ನಡೆಸಲಿಕ್ಕಾಗಿ ಮೇದ್ಯ-ಪಾರಸೀಯ ರಾಜರನ್ನು ಸಹಕರಿಸುವಂತೆ ಮಾಡಲು ಯೆಹೋವನು ಪುನಃ ಪುನಃ ವಿವಿಧ ರೀತಿಗಳಲ್ಲಿ ಹಸ್ತಕ್ಷೇಪಮಾಡಿದನು. (ಜೆಕರ್ಯ 4:6) ಆ ದಿನಗಳಲ್ಲಿ ನಡೆದಂತಹ ಆ ಅದ್ಭುತಕರ ಘಟನೆಗಳು, ಎಜ್ರ, ನೆಹೆಮೀಯ, ಎಸ್ತೇರ, ಹಗ್ಗಾಯ ಮತ್ತು ಜೆಕರ್ಯ ಎಂಬ ಬೈಬಲ್ ಪುಸ್ತಕಗಳಲ್ಲಿ ನಮಗಾಗಿ ದಾಖಲಿಸಲ್ಪಟ್ಟಿವೆ. ಮತ್ತು ಅವುಗಳನ್ನು ಪುನರ್ವಿಮರ್ಶಿಸುವುದು, ವಿಶ್ವಾಸವನ್ನು ಎಷ್ಟು ಬಲವರ್ಧಕಗೊಳಿಸುವಂತಹದ್ದಾಗಿದೆ!
5. ಯೆಶಾಯ 52:13–53:12ರಲ್ಲಿ ಯಾವ ಪ್ರಮುಖ ಘಟನೆಗಳು ನಿರ್ದೇಶಿಸಲ್ಪಟ್ಟಿವೆ?
5 ಆದರೂ, ಸಾ.ಶ.ಪೂ. 537ರಲ್ಲಿ ಮತ್ತು ತದನಂತರ ಏನು ಸಂಭವಿಸಿತೊ ಅದು ಕೇವಲ ಒಂದು ಆರಂಭವಾಗಿತ್ತು. ಅಧ್ಯಾಯ 52ರಲ್ಲಿರುವ ಪುನಃಸ್ಥಾಪನಾ ಪ್ರವಾದನೆಯನ್ನು ಹಿಂಬಾಲಿಸಿ, ಒಡನೆಯೇ ಯೆಶಾಯನು ಮೆಸ್ಸೀಯನ ಬರುವಿಕೆಯ ಕುರಿತಾಗಿ ಬರೆದನು. (ಯೆಶಾಯ 52:13–53:12) ಯೇಸು ಕ್ರಿಸ್ತನಾಗಿ ಪರಿಣಮಿಸಿದ ಮೆಸ್ಸೀಯನ ಮೂಲಕ, ಸಾ.ಶ.ಪೂ. 537ರಲ್ಲಿ ಏನು ಸಂಭವಿಸಿತೊ ಅದಕ್ಕಿಂತಲೂ ಹೆಚ್ಚು ಮಹಾ ಪ್ರಮುಖತೆಯ ಬಿಡುಗಡೆ ಮತ್ತು ಶಾಂತಿಯ ಒಂದು ಸಂದೇಶವನ್ನು ಯೆಹೋವನು ಒದಗಿಸಲಿದ್ದನು.
ಯೆಹೋವನ ಅತ್ಯಂತ ಮಹಾನ್ ಶಾಂತಿಯ ಸಂದೇಶವಾಹಕ
6. ಯೆಹೋವನ ಅತ್ಯಂತ ಮಹಾನ್ ಶಾಂತಿಯ ಸಂದೇಶವಾಹಕನು ಯಾರು, ಮತ್ತು ಅವನು ತನಗೆ ಯಾವ ಕಾರ್ಯಭಾರವನ್ನು ಅನ್ವಯಿಸಿಕೊಂಡನು?
6 ಯೇಸು ಕ್ರಿಸ್ತನು, ಯೆಹೋವನ ಅತ್ಯಂತ ಮಹಾನ್ ಶಾಂತಿಯ ಸಂದೇಶವಾಹಕನಾಗಿದ್ದಾನೆ. ಅವನು ದೇವರ ವಾಕ್ಯವೂ, ಯೆಹೋವನ ಸ್ವಂತ ವೈಯಕ್ತಿಕ ವದನಕನೂ ಆಗಿದ್ದಾನೆ. (ಯೋಹಾನ 1:14) ಇದರೊಂದಿಗೆ ಹೊಂದಿಕೆಯಲ್ಲಿ, ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಸ್ವಲ್ಪ ಸಮಯದ ನಂತರ, ಯೇಸು ನಜರೇತಿನಲ್ಲಿನ ಸಭಾಮಂದಿರದಲ್ಲಿ ಎದ್ದುನಿಂತು, ಯೆಶಾಯ 61ನೆಯ ಅಧ್ಯಾಯದಿಂದ ತನ್ನ ಕಾರ್ಯಭಾರದ ಕುರಿತು ಗಟ್ಟಿಯಾಗಿ ಓದಿಹೇಳಿದನು. ಅವನು ಏನನ್ನು ಸಾರಲು ಕಳುಹಿಸಲ್ಪಟ್ಟಿದ್ದನೊ ಅದು, “ವಿಮೋಚನೆ” ಮತ್ತು “ಗುಣಪಡಿಸುವಿಕೆ” (NW)ಯನ್ನು ಹಾಗೂ ಯೆಹೋವನೊಂದಿಗೆ ಮೆಚ್ಚಿಕೆಯನ್ನು ಕಂಡುಕೊಳ್ಳುವ ಒಂದು ಅವಕಾಶವನ್ನು ಒಳಗೊಂಡಿದೆಯೆಂದು ಆ ಕಾರ್ಯಭಾರವು ಸ್ಪಷ್ಟಪಡಿಸಿತು. ಆದರೂ, ಯೇಸು ಶಾಂತಿಯ ಒಂದು ಸಂದೇಶವನ್ನು ಘೋಷಿಸುವುದಕ್ಕಿಂತಲೂ ಹೆಚ್ಚನ್ನು ಮಾಡಿದನು. ಬಾಳುವಂತಹ ಶಾಂತಿಗಾಗಿ ಆಧಾರವನ್ನು ಒದಗಿಸಲಿಕ್ಕಾಗಿಯೂ ದೇವರು ಅವನನ್ನು ಕಳುಹಿಸಿದ್ದನು.—ಲೂಕ 4:16-21.
7. ಯೇಸು ಕ್ರಿಸ್ತನ ಮೂಲಕ ಸಾಧ್ಯಮಾಡಲ್ಪಟ್ಟಿರುವ ದೇವರೊಂದಿಗಿನ ಶಾಂತಿಯಿಂದ ಏನು ಫಲಿಸುತ್ತದೆ?
7 ಯೇಸುವಿನ ಜನನದ ಸಮಯದಲ್ಲಿ, ಬೇತ್ಲೆಹೇಮಿನ ಬಳಿಯಲ್ಲಿದ್ದ ಕುರುಬರಿಗೆ, ದೇವದೂತರು ದೇವರನ್ನು ಸ್ತುತಿಸುತ್ತಾ ಹೀಗೆ ಹೇಳುತ್ತಿರುವುದು ತೋರಿಬಂತು: “ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸುಚಿತ್ತವುಳ್ಳ ಮನುಷ್ಯರ ನಡುವೆ ಶಾಂತಿ” (NW). (ಲೂಕ 2:8, 13, 14) ಹೌದು, ಯಾರಿಗೆ ದೇವರು ಸುಚಿತ್ತವನ್ನು ತೋರಿಸುವನೊ ಅವರಿಗೆ ಶಾಂತಿಯಿರುವುದು, ಯಾಕಂದರೆ ಆತನು ತನ್ನ ಪುತ್ರನ ಮೂಲಕ ಮಾಡುತ್ತಿದ್ದ ಒದಗಿಸುವಿಕೆಯಲ್ಲಿ ಅವರು ನಂಬಿಕೆಯನ್ನಿಟ್ಟರು. ಅದು ಏನನ್ನು ಅರ್ಥೈಸುವುದು? ಮನುಷ್ಯರು ಪಾಪದಲ್ಲಿ ಜನಿಸಿರುವುದಾದರೂ, ಅವರು ದೇವರೊಂದಿಗೆ ಒಂದು ಶುದ್ಧವಾದ ನಿಲುವನ್ನು, ಆತನೊಂದಿಗೆ ಒಂದು ಮೆಚ್ಚಿಕೆಯ ಸಂಬಂಧವನ್ನು ಪಡೆದುಕೊಳ್ಳಸಾಧ್ಯವಿದೆಯೆಂಬುದನ್ನು ಅದು ಅರ್ಥೈಸುವುದು. (ರೋಮಾಪುರ 5:1) ಬೇರೆ ಯಾವ ವಿಧದಲ್ಲೂ ಸಾಧ್ಯವಿರದ ಆಂತರಿಕ ಪ್ರಶಾಂತತೆಯನ್ನು, ಶಾಂತಿಯನ್ನು ಅವರು ಅನುಭವಿಸಸಾಧ್ಯವಿತ್ತು. ದೇವರ ನೇಮಿತ ಸಮಯದಲ್ಲಿ, ಆದಾಮನಿಂದ ಬಾಧ್ಯತೆಯಾಗಿ ಪಡೆದಂತಹ ಪಾಪದ ಎಲ್ಲಾ ಪರಿಣಾಮಗಳಿಂದ—ಅಸ್ವಸ್ಥತೆ ಮತ್ತು ಮರಣವನ್ನು ಒಳಗೂಡಿಸಿ—ಬಿಡುಗಡೆಯಿರಲಿತ್ತು. ಇನ್ನು ಮುಂದೆ ಜನರು ಕುರುಡರು ಅಥವಾ ಕಿವುಡರು ಅಥವಾ ಕುಂಟರು ಆಗಿರುವುದಿಲ್ಲ. ಆಶಾಭಂಗಗೊಳಿಸುವಂತಹ ದೌರ್ಬಲ್ಯ ಮತ್ತು ದುಃಖಕರವಾದ ಮಾನಸಿಕ ಅಸ್ವಸ್ಥತೆಗಳು ಶಾಶ್ವತವಾಗಿ ತೆಗೆದುಹಾಕಲ್ಪಡುವವು. ಪರಿಪೂರ್ಣ ಸ್ಥಿತಿಯಲ್ಲಿ ಸದಾಕಾಲ ಜೀವನವನ್ನು ಆನಂದಿಸುವುದು ಸಾಧ್ಯವಾಗುವುದು.—ಯೆಶಾಯ 33:24; ಮತ್ತಾಯ 9:35; ಯೋಹಾನ 3:16.
8. ದೈವಿಕ ಶಾಂತಿಯು ಯಾರಿಗೆ ನೀಡಲ್ಪಡುತ್ತದೆ?
8 ದೈವಿಕ ಶಾಂತಿಯು ಯಾರಿಗೆ ನೀಡಲ್ಪಡುತ್ತದೆ? ಯೇಸು ಕ್ರಿಸ್ತನಲ್ಲಿ ನಂಬಿಕೆಯನ್ನಿಡುವವರೆಲ್ಲರಿಗೆ ಅದು ನೀಡಲ್ಪಡುತ್ತದೆ. ‘ಯೇಸು ಶಿಲುಬೆಯ ಮೇಲೆ ಸುರಿಸಿದ ರಕ್ತದಿಂದ ತಾನು ಸಮಾಧಾನವನ್ನು ಉಂಟುಮಾಡಿ, ಸಮಸ್ತವನ್ನೂ ಕ್ರಿಸ್ತನ ಮೂಲಕ ತನಗೆ ಸಂಧಾನಪಡಿಸಿಕೊಳ್ಳಬೇಕೆಂತಲೂ ದೇವರು ನಿಷ್ಕರ್ಷೆಮಾಡಿದನು’ ಎಂದು ಅಪೊಸ್ತಲ ಪೌಲನು ಬರೆದನು. ಈ ಸಂಧಾನಪಡಿಸಿಕೊಳ್ಳುವಿಕೆಯು ‘ಪರಲೋಕದಲ್ಲಿರುವ ಸಂಗತಿಗಳು’—ಅಂದರೆ, ಸ್ವರ್ಗದಲ್ಲಿ ಕ್ರಿಸ್ತನೊಂದಿಗೆ ಸಹಬಾಧ್ಯಸ್ಥರಾಗಿರುವವರನ್ನು ಒಳಗೂಡುವುದೆಂದು ಅಪೊಸ್ತಲನು ಕೂಡಿಸಿದನು. ಅದು ‘ಭೂಮಿಯಲ್ಲಿರುವ ಸಂಗತಿಗಳನ್ನು’ ಸಹ ಒಳಗೂಡಿಸುವುದು—ಅಂದರೆ, ಈ ಭೂಮಿಯು ಪ್ರಮೋದವನದ ಪೂರ್ಣ ಸ್ಥಿತಿಗೆ ತರಲ್ಪಡುವಾಗ, ಅದರಲ್ಲಿ ಸದಾಕಾಲ ಜೀವಿಸುವ ಅವಕಾಶದೊಂದಿಗೆ ಅನುಗ್ರಹಿಸಲ್ಪಡುವವರನ್ನೂ ಒಳಗೂಡಿಸುವುದು. (ಕೊಲೊಸ್ಸೆ 1:19, 20) ಯೇಸುವಿನ ಯಜ್ಞದ ಮೌಲ್ಯದ ಲಾಭವನ್ನು ಪಡೆದುಕೊಂಡಿರುವುದರಿಂದ ಮತ್ತು ಹೃದಯದಾಳದಿಂದ ದೇವರಿಗಾಗಿರುವ ತಮ್ಮ ವಿಧೇಯತೆಯಿಂದಾಗಿ, ಇವರೆಲ್ಲರೂ ದೇವರೊಂದಿಗೆ ಹೃದಯೋಲ್ಲಾಸದ ಸ್ನೇಹವನ್ನು ಅನುಭವಿಸಸಾಧ್ಯವಿದೆ.—ಯಾಕೋಬ 2:22, 23ನ್ನು ಹೋಲಿಸಿರಿ.
9. (ಎ) ದೇವರೊಂದಿಗಿನ ಶಾಂತಿಯು ಬೇರೆ ಯಾವ ಸಂಬಂಧಗಳನ್ನು ಪ್ರಭಾವಿಸುತ್ತದೆ? (ಬಿ) ಎಲ್ಲೆಡೆಯೂ ಬಾಳುವ ಶಾಂತಿಯನ್ನು ತರುವ ನೋಟದೊಂದಿಗೆ, ಯೆಹೋವನು ತನ್ನ ಮಗನಿಗೆ ಯಾವ ಅಧಿಕಾರವನ್ನು ದಯಪಾಲಿಸಿದನು?
9 ದೇವರೊಂದಿಗಿನ ಅಂತಹ ಶಾಂತಿಯು ಎಷ್ಟು ಅತ್ಯಾವಶ್ಯಕ! ದೇವರೊಂದಿಗೆ ಶಾಂತಿಯಿಲ್ಲದಿರುವಲ್ಲಿ, ಬೇರೆ ಯಾವುದೇ ಸಂಬಂಧದಲ್ಲಿ ಯಾವುದೇ ಬಾಳುವ ಅಥವಾ ಅರ್ಥಪೂರ್ಣವಾದ ಶಾಂತಿಯಿರಲು ಸಾಧ್ಯವಿಲ್ಲ. ಯೆಹೋವನೊಂದಿಗಿನ ಶಾಂತಿಯು ಭೂಮಿಯ ಮೇಲಿನ ನಿಜ ಶಾಂತಿಗೆ ತಳಪಾಯವಾಗಿರುತ್ತದೆ. (ಯೆಶಾಯ 57:19-21) ಸೂಕ್ತವಾಗಿಯೇ, ಯೇಸು ಕ್ರಿಸ್ತನು ಶಾಂತಿಯ ಪ್ರಭುವಾಗಿದ್ದಾನೆ. (ಯೆಶಾಯ 9:6) ಯಾರ ಮೂಲಕ ಮಾನವರು ದೇವರೊಂದಿಗೆ ಸಂಧಾನ ಮಾಡಿಕೊಳ್ಳಸಾಧ್ಯವಿದೆಯೊ ಅಂಥವನಾದ ಇವನಿಗೆ, ಯೆಹೋವನು ಆಳುವ ಅಧಿಕಾರವನ್ನೂ ವಹಿಸಿದ್ದಾನೆ. (ದಾನಿಯೇಲ 7:13, 14) ಮತ್ತು ಮಾನವಕುಲದ ಮೇಲೆ ಯೇಸುವಿನ ರಾಜಯೋಗ್ಯ ಆಳ್ವಿಕೆಯ ಫಲಿತಾಂಶಗಳ ಕುರಿತಾಗಿ ಯೆಹೋವನು ವಾಗ್ದಾನಿಸುವುದು: “ಶಾಂತಿಗೆ ಅಂತ್ಯವಿರದು.”—ಯೆಶಾಯ 9:7, NW; ಕೀರ್ತನೆ 72:7.
10. ಶಾಂತಿಯ ಕುರಿತಾದ ದೇವರ ಸಂದೇಶವನ್ನು ಪ್ರಚುರಪಡಿಸುವುದರಲ್ಲಿ ಯೇಸು ಹೇಗೆ ಒಂದು ಮಾದರಿಯನ್ನಿಟ್ಟನು?
10 ಶಾಂತಿಯ ಕುರಿತಾದ ದೇವರ ಸಂದೇಶವು ಎಲ್ಲಾ ಮಾನವಕುಲಕ್ಕೆ ಅಗತ್ಯ. ಅದನ್ನು ಸಾರುವುದರಲ್ಲಿ ಯೇಸು ವೈಯಕ್ತಿಕವಾಗಿ ಒಂದು ಹುರುಪಿನ ಮಾದರಿಯನ್ನಿಟ್ಟನು. ಯೆರೂಸಲೇಮಿನಲ್ಲಿನ ಆಲಯದ ಕ್ಷೇತ್ರದಲ್ಲಿ, ಗುಡ್ಡಪಕ್ಕದಲ್ಲಿ, ರಸ್ತೆಯಲ್ಲಿ, ಒಂದು ಬಾವಿಯ ಹತ್ತಿರ ಒಬ್ಬ ಸಮಾರ್ಯದ ಸ್ತ್ರೀಗೆ, ಮತ್ತು ಜನರ ಮನೆಗಳಲ್ಲಿ ಅವನು ಸಾರಿದನು. ಎಲ್ಲೆಲ್ಲಿ ಜನರಿದ್ದರೊ ಅಲ್ಲೆಲ್ಲಾ ಯೇಸು ಶಾಂತಿಯ ಕುರಿತಾಗಿ ಮತ್ತು ದೇವರ ರಾಜ್ಯದ ಕುರಿತಾಗಿ ಸಾರಲು ಅವಕಾಶಗಳನ್ನು ರಚಿಸಿದನು.—ಮತ್ತಾಯ 4:18, 19; 5:1, 2; 9:9; 26:55; ಮಾರ್ಕ 6:34; ಲೂಕ 19:1-10; ಯೋಹಾನ 4:5-26.
ಕ್ರಿಸ್ತನ ಹೆಜ್ಜೆಜಾಡಿನಲ್ಲಿ ನಡೆಯಲು ತರಬೇತುಗೊಳಿಸಲ್ಪಟ್ಟದ್ದು
11. ಯಾವ ಕೆಲಸಕ್ಕಾಗಿ ಯೇಸು ತನ್ನ ಶಿಷ್ಯರನ್ನು ತರಬೇತುಗೊಳಿಸಿದನು?
11 ಶಾಂತಿಯ ಕುರಿತಾದ ದೇವರ ಸಂದೇಶವನ್ನು ಸಾರುವಂತೆ ಯೇಸು ತನ್ನ ಶಿಷ್ಯರಿಗೆ ಕಲಿಸಿದನು. ಯೇಸು ಯೆಹೋವನ “ನಂಬತಕ್ಕ ಸತ್ಯ ಸಾಕ್ಷಿ”ಯಾಗಿದ್ದಂತೆಯೇ, ಅವರಿಗೂ ಸಾಕ್ಷಿನೀಡುವ ಜವಾಬ್ದಾರಿಯಿತ್ತೆಂಬುದನ್ನು ಅವರು ಗ್ರಹಿಸಿದರು. (ಪ್ರಕಟನೆ 3:14; ಯೆಶಾಯ 43:10-12) ಅವರು ಕ್ರಿಸ್ತನನ್ನು ತಮ್ಮ ನಾಯಕನೋಪಾದಿ ಪರಿಗಣಿಸಿದರು.
12. ಪೌಲನು ಸಾರುವ ಚಟುವಟಿಕೆಯ ಪ್ರಾಮುಖ್ಯವನ್ನು ಹೇಗೆ ತೋರಿಸಿಕೊಟ್ಟನು?
12 ಅಪೊಸ್ತಲ ಪೌಲನು ಸಾರುವ ಚಟುವಟಿಕೆಯ ಪ್ರಾಮುಖ್ಯದ ಕುರಿತಾಗಿ ತರ್ಕಿಸುತ್ತಾ ಹೇಳಿದ್ದು: “ಆತನ ಮೇಲೆ ನಂಬಿಕೆಯಿಡುವ ಯಾವನಾದರೂ ಆಶಾಭಂಗಪಡುವದಿಲ್ಲವೆಂದು ಶಾಸ್ತ್ರವು ಹೇಳುತ್ತದೆಯಷ್ಟೆ.” ಅಂದರೆ, ಯೆಹೋವನ ರಕ್ಷಣೆಯ ಪ್ರಮುಖ ಕಾರ್ಯಭಾರಿಯೆಂದು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಡುವ ಯಾವನೂ ನಿರಾಶೆಗೊಳ್ಳದಿರುವನು. ಮತ್ತು ಯಾರೊಬ್ಬರ ಕುಲಸಂಬಂಧಿತ ಹಿನ್ನೆಲೆಯು, ಅನರ್ಹಗೊಳಿಸುವಂತಹ ಅಂಶವಾಗಿರುವುದಿಲ್ಲ, ಯಾಕಂದರೆ ಪೌಲನು ಕೂಡಿಸಿದ್ದು: “ಈ ವಿಷಯದಲ್ಲಿ ಯೆಹೂದ್ಯನಿಗೂ ಗ್ರೀಕನಿಗೂ ಹೆಚ್ಚುಕಡಿಮೆ ಏನೂ ಇಲ್ಲ. ಎಲ್ಲರಿಗೂ ಒಬ್ಬನೇ ಕರ್ತ; ಆತನು ತನ್ನ ನಾಮವನ್ನು ಹೇಳಿಕೊಳ್ಳುವವರಿಗೆ ಹೇರಳವಾಗಿ ಕೊಡುವವನಾಗಿದ್ದಾನೆ. ಕರ್ತನ [“ಯೆಹೋವನ,” NW] ನಾಮವನ್ನು ಹೇಳಿಕೊಳ್ಳುವವರೆಲ್ಲರಿಗೆ ರಕ್ಷಣೆಯಾಗು”ವುದು. (ರೋಮಾಪುರ 10:11-13) ಆದರೆ ಜನರು ಆ ಅವಕಾಶದ ಕುರಿತು ಹೇಗೆ ಕಲಿಯಲಿದ್ದರು?
13. ಜನರು ಸುವಾರ್ತೆಯನ್ನು ಕೇಳಬೇಕಾದರೆ ಏನು ಅಗತ್ಯವಾಗಿತ್ತು, ಮತ್ತು ಪ್ರಥಮ ಶತಮಾನದ ಕ್ರೈಸ್ತರು ಆ ಅಗತ್ಯಕ್ಕೆ ಹೇಗೆ ಪ್ರತಿಕ್ರಿಯಿಸಿದರು?
13 ಪೌಲನು ಪ್ರಶ್ನೆಗಳನ್ನು ಕೇಳುವ ಮೂಲಕ ಆ ಅಗತ್ಯದೊಂದಿಗೆ ವ್ಯವಹರಿಸಿದನು. ಆ ಪ್ರಶ್ನೆಗಳ ಕುರಿತಾಗಿ ಯೋಚಿಸುವುದು ಯೆಹೋವನ ಪ್ರತಿಯೊಬ್ಬ ಸೇವಕನಿಗೆ ಒಳಿತಾಗಿರುವುದು. ಅಪೊಸ್ತಲನು ಕೇಳಿದ್ದು: “ತಾವು ಯಾವನನ್ನು ನಂಬಲಿಲ್ಲವೋ ಆತನ ನಾಮವನ್ನು ಹೇಳಿಕೊಳ್ಳುವದು ಹೇಗೆ? ಮತ್ತು ಆತನ ಸುದ್ದಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ? ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ?” (ರೋಮಾಪುರ 10:14, 15) ಸ್ತ್ರೀಪುರುಷರು, ಅಬಾಲವೃದ್ಧರು, ಕ್ರಿಸ್ತನು ಮತ್ತು ಅವನ ಅಪೊಸ್ತಲರಿಂದ ಇಡಲ್ಪಟ್ಟ ಮಾದರಿಗೆ ಪ್ರತಿಕ್ರಿಯಿಸಿದರೆಂಬ ವಿಷಯಕ್ಕೆ, ಆದಿ ಕ್ರೈಸ್ತತ್ವದ ದಾಖಲೆಯು ಶಕ್ತಿಯುತವಾದ ಸಾಕ್ಷ್ಯವನ್ನು ಕೊಡುತ್ತದೆ. ಅವರು ಸುವಾರ್ತೆಯ ಹುರುಪಿನ ಘೋಷಕರಾದರು. ಯೇಸುವನ್ನು ಅನುಕರಿಸುತ್ತಾ, ಅವರು ಜನರನ್ನು ಕಂಡಲ್ಲೆಲ್ಲಾ ಅವರಿಗೆ ಸಾರಿದರು. ಯಾರನ್ನೂ ತಪ್ಪದೇ ಇರುವ ಬಯಕೆಯಿಂದ, ಅವರು ತಮ್ಮ ಶುಶ್ರೂಷೆಯನ್ನು ಸಾರ್ವಜನಿಕ ಸ್ಥಳಗಳಲ್ಲೂ, ಮನೆಯಿಂದ ಮನೆಗೂ ಮುಂದುವರಿಸಿಕೊಂಡು ಹೋದರು.—ಅ. ಕೃತ್ಯಗಳು 17:17; 20:20.
14. ಸುವಾರ್ತೆಯನ್ನು ಘೋಷಿಸುವವರ ‘ಪಾದಗಳು ಅಂದ’ವಾಗಿದ್ದವು ಎಂಬುದು ಹೇಗೆ ನಿಜವೆಂದು ರುಜುವಾಯಿತು?
14 ನಿಶ್ಚಯವಾಗಿಯೂ, ಪ್ರತಿಯೊಬ್ಬರೂ ಕ್ರೈಸ್ತ ಸೌವಾರ್ತಿಕರನ್ನು ವಿನೀತರಾಗಿ ಸ್ವೀಕರಿಸಲಿಲ್ಲ. ಹಾಗಿದ್ದರೂ, ಯೆಶಾಯ 52:7ರಿಂದ ತೆಗೆಯಲಾದ ಪೌಲನ ಉಲ್ಲೇಖವು ಸತ್ಯವೆಂದು ರುಜುವಾಯಿತು. ‘ಸಾರುವವರು ಕಳುಹಿಸಲ್ಪಡದೆ ಸಾರುವದೆಲ್ಲಿ?’ ಎಂಬ ಪ್ರಶ್ನೆಯನ್ನು ಕೇಳಿದ ನಂತರ, ಅವನು ಕೂಡಿಸಿದ್ದು: “ಇದಕ್ಕೆ ಸರಿಯಾಗಿ ಶುಭದ ಸುವಾರ್ತೆಯನ್ನು ಸಾರುವವರ ಪಾದಗಳು ಎಷ್ಟೋ ಅಂದವಾಗಿವೆ ಎಂದು ಬರೆದದೆ.” ನಮ್ಮಲ್ಲಿ ಹೆಚ್ಚಿನವರು ನಮ್ಮ ಪಾದಗಳನ್ನು ಅಂದ ಅಥವಾ ಸುಂದರವಾಗಿರುವುದಾಗಿ ಎಣಿಸುವುದಿಲ್ಲ. ಹಾಗಾದರೆ ಇದರ ಅರ್ಥವೇನು? ಒಬ್ಬ ವ್ಯಕ್ತಿಯು ಇತರರಿಗೆ ಸಾರಲು ಹೊರಡುವಾಗ ಸಾಮಾನ್ಯವಾಗಿ ಪಾದಗಳು ಒಬ್ಬ ವ್ಯಕ್ತಿಯನ್ನು ಚಲಿಸುವಂತೆ ಮಾಡುತ್ತವೆ. ಅಂತಹ ಪಾದಗಳು ನಿಜವಾಗಿ ಆ ವ್ಯಕ್ತಿಯನ್ನು ಪ್ರತಿನಿಧಿಸುತ್ತವೆ. ಮತ್ತು ಅಪೊಸ್ತಲರಿಂದ ಹಾಗೂ ಯೇಸು ಕ್ರಿಸ್ತನ ಪ್ರಥಮ ಶತಮಾನದ ಇತರ ಶಿಷ್ಯರಿಂದ ಸುವಾರ್ತೆಯನ್ನು ಕೇಳಿದಂತಹ ಅನೇಕರಿಗೆ, ಈ ಆದಿ ಕ್ರೈಸ್ತರು ಒಂದು ಮನೋಹರವಾದ ನೋಟವಾಗಿದ್ದರೆಂಬ ವಿಷಯದಲ್ಲಿ ನಾವು ಖಾತ್ರಿಯಿಂದಿರಸಾಧ್ಯವಿದೆ. (ಅ. ಕೃತ್ಯಗಳು 16:13-15) ಅದಕ್ಕಿಂತಲೂ ಹೆಚ್ಚಾಗಿ, ಅವರು ದೇವರ ದೃಷ್ಟಿಯಲ್ಲಿ ಅಮೂಲ್ಯರಾಗಿದ್ದರು.
15, 16. (ಎ) ಆದಿ ಕ್ರೈಸ್ತರು ತಾವು ನಿಜವಾಗಿ ಶಾಂತಿಯ ಸಂದೇಶವಾಹಕರಾಗಿದ್ದೆವೆಂಬುದನ್ನು ಹೇಗೆ ತೋರಿಸಿಕೊಟ್ಟರು? (ಬಿ) ಪ್ರಥಮ ಶತಮಾನದ ಕ್ರೈಸ್ತರು ತಮ್ಮ ಶುಶ್ರೂಷೆಯನ್ನು ನಡೆಸಿಕೊಂಡು ಹೋದ ರೀತಿಯಲ್ಲೇ ನಾವೂ ನಡೆಸಿಕೊಂಡು ಹೋಗುವಂತೆ ಯಾವುದು ನಮಗೆ ಸಹಾಯ ಮಾಡಸಾಧ್ಯವಿದೆ?
15 ಯೇಸುವಿನ ಹಿಂಬಾಲಕರಲ್ಲಿ ಶಾಂತಿಯ ಸಂದೇಶವಿತ್ತು, ಮತ್ತು ಅವರು ಅದನ್ನು ಒಂದು ಶಾಂತಿಪೂರ್ವಕ ವಿಧದಲ್ಲಿ ಮುಟ್ಟಿಸಿದರು. ಯೇಸು ತನ್ನ ಶಿಷ್ಯರಿಗೆ ಈ ಅಪ್ಪಣೆಗಳನ್ನು ಕೊಟ್ಟನು: “ನೀವು ಯಾವ ಮನೆಯೊಳಗೆ ಹೋದರೂ—ಈ ಮನೆಗೆ ಶುಭವಾಗಲಿ ಎಂದು ಮೊದಲು ಹೇಳಿರಿ. ಆಶೀರ್ವಾದ ಪಾತ್ರನು ಅಲ್ಲಿ ಇದ್ದರೆ ನಿಮ್ಮ ಆಶೀರ್ವಾದವು ಅವನ ಮೇಲೆ ನಿಲ್ಲುವದು; ಇಲ್ಲದಿದ್ದರೆ ಅದು ನಿಮಗೆ ಹಿಂತಿರುಗುವದು.” (ಲೂಕ 10:5, 6) ಶಾಲೋಮ್ ಅಥವಾ “ಶಾಂತಿ,” ಎಂಬುದು ಒಂದು ಸಾಂಪ್ರದಾಯಿಕ ಯೆಹೂದಿ ಅಭಿವಂದನೆಯಾಗಿದೆ. ಆದಾಗಲೂ, ಯೇಸುವಿನ ಅಪ್ಪಣೆಗಳು ಇದಕ್ಕಿಂತ ಹೆಚ್ಚಿನದ್ದನ್ನು ಒಳಗೊಂಡವು. “ಕ್ರಿಸ್ತನ ರಾಯಭಾರಿ”ಗಳೋಪಾದಿ, ಅವನ ಅಭಿಷಿಕ್ತ ಶಿಷ್ಯರು ಜನರನ್ನು ಪ್ರೇರೇಪಿಸಿದ್ದು: “ದೇವರೊಂದಿಗೆ ಸಮಾಧಾನ”ವಾಗಿರಿ. (2 ಕೊರಿಂಥ 5:20) ಯೇಸುವಿನ ಅಪ್ಪಣೆಗಳಿಗೆ ಹೊಂದಿಕೆಯಲ್ಲಿ, ಅವರು ದೇವರ ರಾಜ್ಯದ ಕುರಿತಾಗಿ ಮತ್ತು ವ್ಯಕ್ತಿಗತವಾಗಿ ಅದು ಅವರಿಗೆ ಯಾವ ಅರ್ಥದಲ್ಲಿ ಇರಸಾಧ್ಯವಿದೆಯೆಂಬುದರ ಕುರಿತಾಗಿ ಜನರೊಂದಿಗೆ ಮಾತಾಡಿದರು. ಕಿವಿಗೊಟ್ಟವರು ಆಶೀರ್ವಾದವನ್ನು ಪಡೆದರು; ಆ ಸಂದೇಶವನ್ನು ತಿರಸ್ಕರಿಸಿದವರು ಆಶೀರ್ವಾದವನ್ನು ಪಡೆಯಲು ತಪ್ಪಿಹೋದರು.
16 ಯೆಹೋವನ ಸಾಕ್ಷಿಗಳು ಇಂದು ತಮ್ಮ ಶುಶ್ರೂಷೆಯನ್ನು ಅದೇ ರೀತಿಯಲ್ಲಿ ನಡೆಸುತ್ತಾರೆ. ಅವರು ಜನರ ಬಳಿಗೆ ಕೊಂಡೊಯ್ಯುವ ಸುವಾರ್ತೆಯು ಅವರದ್ದಲ್ಲ; ಅದು ಅವರನ್ನು ಕಳುಹಿಸಿಕೊಟ್ಟಾತನದ್ದಾಗಿದೆ. ಅವರ ಕಾರ್ಯಭಾರವು ಅದನ್ನು ತಿಳಿಯಪಡಿಸುವುದಾಗಿದೆ. ಜನರು ಅದನ್ನು ಸ್ವೀಕರಿಸುವಲ್ಲಿ, ಅವರು ತಮ್ಮನ್ನು ಅದ್ಭುತಕರವಾದ ಆಶೀರ್ವಾದಗಳನ್ನು ಪಡೆದುಕೊಳ್ಳುವ ಸ್ಥಾನದಲ್ಲಿರಿಸಿಕೊಳ್ಳುತ್ತಾರೆ. ಅವರದನ್ನು ತಿರಸ್ಕರಿಸುವಲ್ಲಿ, ಅವರು ಯೆಹೋವ ದೇವರು ಮತ್ತು ಆತನ ಮಗನಾದ ಯೇಸು ಕ್ರಿಸ್ತನೊಂದಿಗಿನ ಶಾಂತಿಯನ್ನು ತಿರಸ್ಕರಿಸುತ್ತಿದ್ದಾರೆ.—ಲೂಕ 10:16.
ಗೊಂದಲಮಯ ಲೋಕವೊಂದರಲ್ಲಿ ಶಾಂತಿಭರಿತರು
17. ನಿಂದಾತ್ಮಕ ಜನರಿಂದ ಎದುರಿಸಲ್ಪಟ್ಟಾಗಲೂ, ನಾವು ಹೇಗೆ ವರ್ತಿಸಬೇಕು, ಮತ್ತು ಏಕೆ?
17 ಜನರ ಪ್ರತಿಕ್ರಿಯೆ ಏನೇ ಆಗಿರಲಿ, ಯೆಹೋವನ ಸೇವಕರು ತಾವು ದೈವಿಕ ಶಾಂತಿಯ ಸಂದೇಶವಾಹಕರು ಎಂಬುದನ್ನು ಮನಸ್ಸಿನಲ್ಲಿಡುವುದು ಪ್ರಾಮುಖ್ಯ. ಲೋಕದ ಜನರು ಉದ್ರೇಕದ ವಾದಗಳಲ್ಲಿ ತೊಡಗಬಹುದು ಮತ್ತು ಚುಚ್ಚುವ ಹೇಳಿಕೆಗಳನ್ನು ನುಡಿಯುವ ಮೂಲಕ ಅಥವಾ ಅವರನ್ನು ಕಿರಿಕಿರಿಗೊಳಿಸುವವರನ್ನು ಬೈಯುವ ಮೂಲಕ ಕೋಪವನ್ನು ತೋರಿಸಿಕೊಳ್ಳಬಹುದು. ಪ್ರಾಯಶಃ ನಮ್ಮಲ್ಲಿ ಕೆಲವರು ಗತಸಮಯಗಳಲ್ಲಿ ಅದನ್ನು ಮಾಡಿದೆವು. ಆದಾಗಲೂ, ನಾವು ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡಿರುವುದಾದರೆ, ಮತ್ತು ಈಗ ಲೋಕದ ಭಾಗವಾಗಿರದೆ ಇರುವಲ್ಲಿ, ನಾವು ಅವರ ಮಾರ್ಗಗಳನ್ನು ಅನುಕರಿಸದಿರುವೆವು. (ಎಫೆಸ 4:23, 24, 31; ಯಾಕೋಬ 1:19, 20) ಇತರರು ಹೇಗಾದರೂ ವರ್ತಿಸಲಿ, ನಾವು ಈ ಸಲಹೆಯನ್ನು ಅನ್ವಯಿಸಿಕೊಳ್ಳುವೆವು: “ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ.”—ರೋಮಾಪುರ 12:18.
18. ಒಬ್ಬ ಸಾರ್ವಜನಿಕ ಅಧಿಕಾರಿಯು ನಮ್ಮೊಂದಿಗೆ ಒರಟಾಗಿ ವರ್ತಿಸುವುದಾದರೆ, ನಾವು ಹೇಗೆ ಪ್ರತಿಕ್ರಿಯಿಸಬೇಕು, ಮತ್ತು ಏಕೆ?
18 ನಮ್ಮ ಶುಶ್ರೂಷೆಯಿಂದಾಗಿ ನಾವು ಕೆಲವೊಮ್ಮೆ ಸಾರ್ವಜನಿಕ ಅಧಿಕಾರಿಗಳ ಮುಂದೆ ಹೋಗಬೇಕಾಗಬಹುದು. ತಮ್ಮ ಅಧಿಕಾರವನ್ನು ತೋರಿಸುತ್ತಾ, ನಾವು ಕೆಲವೊಂದು ಸಂಗತಿಗಳನ್ನು ಏಕೆ ಮಾಡುತ್ತೇವೆ ಅಥವಾ ನಿರ್ದಿಷ್ಟವಾದೊಂದು ಚಟುವಟಿಕೆಯಲ್ಲಿ ತೊಡಗುವುದರಿಂದ ಏಕೆ ದೂರವಿರುತ್ತೇವೆ ಎಂಬುದಕ್ಕೆ ಒಂದು ವಿವರಣೆಯನ್ನು ಅವರು ‘ನಮ್ಮಿಂದ ಕೇಳ’ಬಹುದು. ನಾವು ಸಾರುವಂತಹ ಸಂದೇಶವನ್ನು—ಸುಳ್ಳು ಧರ್ಮವನ್ನು ಬಯಲುಗೊಳಿಸುವ ಮತ್ತು ಸದ್ಯದ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ತಿಳಿಸುವಂತಹ ಒಂದು ಸಂದೇಶ—ನಾವೇಕೆ ಸಾರುತ್ತೇವೆ ಎಂಬುದನ್ನು ಅವರು ತಿಳಿಯಲು ಬಯಸಬಹುದು. ಕ್ರಿಸ್ತನಿಂದ ಇಡಲ್ಪಟ್ಟ ಮಾದರಿಗಾಗಿರುವ ನಮ್ಮ ಗೌರವವು, ನಾವು ಸಾತ್ವಿಕತೆ ಮತ್ತು ಗಾಢವಾದ ಗೌರವವನ್ನು ತೋರಿಸುವಂತೆ ನಮ್ಮನ್ನು ಪ್ರಚೋದಿಸುವುದು. (1 ಪೇತ್ರ 2:23; 3:15) ಪದೇ ಪದೇ, ಅಂತಹ ಅಧಿಕಾರಿಗಳು ಪಾದ್ರಿವರ್ಗದಿಂದ ಅಥವಾ ಸಂಭವತಃ ತಮ್ಮ ಸ್ವಂತ ಮೇಲಧಿಕಾರಿಗಳಿಂದ ಒತ್ತಡಕ್ಕೆ ಒಳಗಾಗಿರುತ್ತಾರೆ. ಒಂದು ಮೃದುವಾದ ಉತ್ತರವು, ನಮ್ಮ ಚಟುವಟಿಕೆಯು ಅವರಿಗೆ ಅಥವಾ ಸಮುದಾಯದ ಶಾಂತಿಗೆ ಬೆದರಿಕೆಯಾಗಿಲ್ಲವೆಂಬುದನ್ನು ಗಣ್ಯಮಾಡುವಂತೆ ಸಹಾಯ ಮಾಡಬಹುದು. ಅಂತಹ ಒಂದು ಉತ್ತರವು, ಅದನ್ನು ಸ್ವೀಕರಿಸುವವರಲ್ಲಿ ಗೌರವ, ಸಹಕಾರ, ಮತ್ತು ಶಾಂತಿಯ ಮನೋವೃತ್ತಿಯನ್ನು ಉಂಟುಮಾಡುತ್ತದೆ.—ತೀತ 3:1, 2.
19. ಯೆಹೋವನ ಸಾಕ್ಷಿಗಳು ಯಾವ ಚಟುವಟಿಕೆಗಳಲ್ಲಿ ಎಂದೂ ಒಳಗೂಡುವುದಿಲ್ಲ?
19 ಲೋಕದ ಕಲಹದಲ್ಲಿ ಭಾಗವಹಿಸದ ಜನರೋಪಾದಿ ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಜ್ಞಾತರಾಗಿದ್ದಾರೆ. ಅವರು, ಜಾತಿ, ಧರ್ಮ, ಅಥವಾ ರಾಜಕೀಯದ ಕುರಿತಾದ ಲೋಕದ ಸಂಘರ್ಷಗಳಲ್ಲಿ ಒಳಗೂಡುವುದಿಲ್ಲ. (ಯೋಹಾನ 17:14) ನಾವು “ಮೇಲಿರುವ ಅಧಿಕಾರಿಗಳಿಗೆ ಅಧೀನ”ರಾಗಿರಬೇಕೆಂದು ದೇವರ ವಾಕ್ಯವು ನಮಗೆ ನಿರ್ದೇಶಿಸುವುದರಿಂದ, ಸರಕಾರದ ಧೋರಣೆಗಳನ್ನು ಪ್ರತಿಭಟಿಸುವಂತಹ ರೀತಿಯ ನಾಗರಿಕ ಗಲಭೆಯ ಕೃತ್ಯಗಳಲ್ಲಿ ಭಾಗವಹಿಸುವುದರ ಕುರಿತು ನಾವು ಆಲೋಚಿಸುವುದೂ ಇಲ್ಲ. (ರೋಮಾಪುರ 13:1) ಒಂದು ಸರಕಾರವನ್ನು ಕೆಡವಿಬಿಡುವ ಉದ್ದೇಶವುಳ್ಳ ಯಾವುದೇ ಚಳುವಳಿಯಲ್ಲಿ ಯೆಹೋವನ ಸಾಕ್ಷಿಗಳು ಎಂದೂ ಸೇರಿಕೊಂಡಿಲ್ಲ. ತನ್ನ ಕ್ರೈಸ್ತ ಸೇವಕರಿಗಾಗಿ ಯೆಹೋವನಿಂದ ಇಡಲ್ಪಟ್ಟಿರುವ ಮಟ್ಟಗಳ ನೋಟದಲ್ಲಿ, ರಕ್ತಪಾತ ಅಥವಾ ಯಾವುದೇ ರೀತಿಯ ಹಿಂಸಾಚಾರದಲ್ಲಿ ಅವರು ಭಾಗವಹಿಸುವುದು ಯೋಚಿಸಲಸಾಧ್ಯವಾದ ವಿಷಯವೇ! ನಿಜ ಕ್ರೈಸ್ತರು ಶಾಂತಿಯ ಕುರಿತಾಗಿ ಮಾತಾಡುತ್ತಾರೆ ಮಾತ್ರವಲ್ಲ, ಅವರು ಏನನ್ನು ಸಾರುತ್ತಾರೊ ಅದಕ್ಕೆ ಹೊಂದಿಕೆಯಲ್ಲಿ ಅವರು ಜೀವಿಸುತ್ತಾರೆ.
20. ಶಾಂತಿಯ ವಿಷಯದಲ್ಲಿ, ಮಹಾ ಬಾಬೆಲ್ ಯಾವ ರೀತಿಯ ದಾಖಲೆಯನ್ನು ಮಾಡಿದೆ?
20 ನಿಜ ಕ್ರೈಸ್ತರಿಗೆ ವ್ಯತಿರಿಕ್ತವಾಗಿ, ಕ್ರೈಸ್ತಪ್ರಪಂಚದ ಧಾರ್ಮಿಕ ಸಂಸ್ಥೆಗಳನ್ನು ಪ್ರತಿನಿಧಿಸುವವರು, ಶಾಂತಿಯ ಸಂದೇಶವಾಹಕರಾಗಿ ಪರಿಣಮಿಸಿಲ್ಲ. ಮಹಾ ಬಾಬೆಲಿನ ಧರ್ಮಗಳು—ಕ್ರೈಸ್ತಪ್ರಪಂಚದ ಚರ್ಚುಗಳು ಮತ್ತು ಅಕ್ರೈಸ್ತ ಧರ್ಮಗಳು ಸಮಾನವಾಗಿ—ರಾಷ್ಟ್ರಗಳ ಯುದ್ಧಗಳನ್ನು ಮನ್ನಿಸಿವೆ, ಬೆಂಬಲಿಸಿವೆ ಮತ್ತು ವಾಸ್ತವವಾಗಿ ಮುಂದಾಳುತ್ವವನ್ನು ವಹಿಸಿವೆ. ಅವು ಯೆಹೋವನ ನಂಬಿಗಸ್ತ ಸೇವಕರ ಹಿಂಸೆಯನ್ನು ಮತ್ತು ಹತ್ಯೆಯನ್ನೂ ಕೆರಳಿಸಿವೆ. ಹೀಗಿರುವುದರಿಂದ, ಮಹಾ ಬಾಬೆಲಿನ ಕುರಿತಾಗಿ ಪ್ರಕಟನೆ 18:24 ಘೋಷಿಸುವುದು: “ಪ್ರವಾದಿಗಳ ರಕ್ತವೂ ದೇವಜನರ ರಕ್ತವೂ ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವೂ ನಿನ್ನಲ್ಲಿ ಸಿಕ್ಕಿತು.”
21. ಯೆಹೋವನ ಜನರ ನಡತೆ ಮತ್ತು ಸುಳ್ಳು ಧರ್ಮವನ್ನು ಅಭ್ಯಾಸಿಸುತ್ತಿರುವವರ ನಡತೆಯ ನಡುವಿನ ವ್ಯತ್ಯಾಸವನ್ನು ಪ್ರಾಮಾಣಿಕ ಹೃದಯದ ಜನರು ನೋಡುವಾಗ, ಅವರು ಹೇಗೆ ಪ್ರತಿಕ್ರಿಯಿಸುತ್ತಾರೆ?
21 ಕ್ರೈಸ್ತಪ್ರಪಂಚದ ಧರ್ಮಗಳು ಮತ್ತು ಮಹಾ ಬಾಬೆಲಿನ ಉಳಿದ ಭಾಗಕ್ಕೆ ಅಸದೃಶವಾಗಿ, ನಿಜ ಧರ್ಮವು ಒಂದು ಸಕಾರಾತ್ಮಕ, ಏಕೀಕರಿಸುವ ಶಕ್ತಿಯಾಗಿದೆ. ತನ್ನ ನಿಜ ಹಿಂಬಾಲಕರಿಗೆ ಯೇಸು ಕ್ರಿಸ್ತನು ಹೇಳಿದ್ದು: “ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು.” (ಯೋಹಾನ 13:35) ಅದು, ಇಂದು ಮಾನವಕುಲದ ಉಳಿದ ಭಾಗವನ್ನು ವಿಭಜಿಸುತ್ತಿರುವಂತಹ, ರಾಷ್ಟ್ರೀಯ, ಸಾಮಾಜಿಕ, ಆರ್ಥಿಕ, ಮತ್ತು ಜಾತೀಯ ಸರಹದ್ದುಗಳನ್ನು ಮೀರುವಂತಹ ಪ್ರೀತಿಯಾಗಿದೆ. ಇದನ್ನು ಗಮನಿಸಿದವರಾಗಿದ್ದು, ಭೂವ್ಯಾಪಕವಾಗಿ ಲಕ್ಷಾಂತರ ಜನರು ಯೆಹೋವನ ಅಭಿಷಿಕ್ತ ಸೇವಕರಿಗೆ ಹೀಗೆ ಹೇಳುತ್ತಿದ್ದಾರೆ: “ನಾವು ನಿಮ್ಮೊಂದಿಗೆ ಬರುವೆವು, ದೇವರು ನಿಮ್ಮ ಸಂಗಡ ಇದ್ದಾನೆಂಬ ಸುದ್ದಿಯು ನಮ್ಮ ಕಿವಿಗೆ ಬಿದ್ದಿದೆ.”—ಜೆಕರ್ಯ 8:23.
22. ಇನ್ನೂ ಮಾಡಲ್ಪಡಬೇಕಾದ ಸಾಕ್ಷಿ ಕಾರ್ಯವನ್ನು ನಾವು ಹೇಗೆ ದೃಷ್ಟಿಸುತ್ತೇವೆ?
22 ಏನು ಸಾಧಿಸಲ್ಪಟ್ಟಿದೆಯೊ ಅದರಲ್ಲಿ ನಾವು ಯೆಹೋವನ ಜನರೋಪಾದಿ, ಬಹಳವಾಗಿ ಹರ್ಷಿಸುತ್ತೇವೆ. ಆದರೆ ಕೆಲಸವು ಇನ್ನೂ ಪೂರ್ಣಗೊಂಡಿಲ್ಲ. ಬೀಜವನ್ನು ಬಿತ್ತಿ, ತನ್ನ ಹೊಲವನ್ನು ಸಾಗುವಳಿ ಮಾಡಿದ ನಂತರ, ಒಬ್ಬ ರೈತನು ಕೆಲಸವನ್ನು ನಿಲ್ಲಿಸಿಬಿಡುವುದಿಲ್ಲ. ಅವನು ಕೆಲಸ ಮಾಡುತ್ತಾ ಇರುತ್ತಾನೆ, ವಿಶೇಷವಾಗಿ ಕೊಯ್ಲಿನ ಕಾಲದ ಉಚ್ಛ್ರಾಯ ಸ್ಥಿತಿಯಲ್ಲಿ. ಕೊಯ್ಲಿನ ಸಮಯವು, ಅವಿಶ್ರಾಂತವಾದ, ತೀವ್ರ ಪ್ರಯತ್ನವನ್ನು ಅವಶ್ಯಪಡಿಸುತ್ತದೆ. ಮತ್ತು ಹಿಂದೆಂದಿಗಿಂತಲೂ ಹೆಚ್ಚಾಗಿ ಈಗ, ಸತ್ಯ ದೇವರ ಆರಾಧಕರ ಒಂದು ಮಹಾ ಕೊಯ್ಲು ಇದೆ. ಇದು ಹರ್ಷಿಸುವ ಒಂದು ಸಮಯವಾಗಿದೆ. (ಯೆಶಾಯ 9:3) ನಾವು ವಿರೋಧ ಮತ್ತು ಉದಾಸೀನತೆಯನ್ನು ಎದುರಿಸುತ್ತೇವೆ ನಿಜ. ವ್ಯಕ್ತಿಗತವಾಗಿ ನಾವು ಗಂಭೀರವಾದ ಅಸ್ವಸ್ಥತೆ, ಕಷ್ಟಕರವಾದ ಕುಟುಂಬ ಪರಿಸ್ಥಿತಿಗಳು, ಅಥವಾ ಆರ್ಥಿಕ ಬಿಕ್ಕಟ್ಟಿನೊಂದಿಗೆ ವ್ಯವಹರಿಸಲು ಪ್ರಯತ್ನಿಸುತ್ತಿರಬಹುದು. ಆದರೆ ಯೆಹೋವನಿಗಾಗಿರುವ ಪ್ರೀತಿಯು ನಮ್ಮನ್ನು ಪಟ್ಟುಹಿಡಿಯುವಂತೆ ಪ್ರಚೋದಿಸುತ್ತದೆ. ದೇವರು ನಮ್ಮ ವಶಕ್ಕೆ ಕೊಟ್ಟಿರುವ ಸಂದೇಶವು, ಜನರು ಕೇಳಬೇಕಾಗಿರುವ ಒಂದು ವಿಷಯವಾಗಿದೆ. ಅದು ಶಾಂತಿಯ ಒಂದು ಸಂದೇಶವಾಗಿದೆ. ಖಂಡಿತವಾಗಿಯೂ, ಅದು ಸ್ವತಃ ಯೇಸು ಸಾರಿದಂತಹ ಸಂದೇಶವಾಗಿದೆ—ದೇವರ ರಾಜ್ಯದ ಸುವಾರ್ತೆ.
ನಿಮ್ಮ ಉತ್ತರವೇನು?
◻ ಯೆಶಾಯ 52:7, ಪುರಾತನ ಇಸ್ರಾಯೇಲಿನ ಮೇಲೆ ಯಾವ ನೆರವೇರಿಕೆಯನ್ನು ಪಡೆಯಿತು?
◻ ಯೇಸು ಶಾಂತಿಯ ಅತ್ಯಂತ ಮಹಾನ್ ಸಂದೇಶವಾಹಕನಾಗಿ ಪರಿಣಮಿಸಿದ್ದು ಹೇಗೆ?
◻ ಅಪೊಸ್ತಲ ಪೌಲನು ಯೆಶಾಯ 52:7ನ್ನು, ಕ್ರೈಸ್ತರು ಪಾಲಿಗರಾಗುವ ಕೆಲಸದೊಂದಿಗೆ ಹೇಗೆ ಜೋಡಿಸಿದನು?
◻ ನಮ್ಮ ದಿನದಲ್ಲಿ ಶಾಂತಿಯ ಸಂದೇಶವಾಹಕರಾಗಿರುವುದರಲ್ಲಿ ಏನು ಒಳಗೊಂಡಿದೆ?
[ಪುಟ 13 ರಲ್ಲಿರುವ ಚಿತ್ರ]
ಯೇಸುವಿನಂತೆ, ಯೆಹೋವನ ಸಾಕ್ಷಿಗಳು ದೈವಿಕ ಶಾಂತಿಯ ಸಂದೇಶವಾಹಕರಾಗಿದ್ದಾರೆ
[ಪುಟ 15 ರಲ್ಲಿರುವ ಚಿತ್ರ]
ಜನರು ರಾಜ್ಯ ಸಂದೇಶಕ್ಕೆ ಹೇಗೂ ಪ್ರತಿಕ್ರಿಯಿಸಲಿ, ಯೆಹೋವನ ಸಾಕ್ಷಿಗಳು ಶಾಂತಿಭರಿತರಾಗಿರುತ್ತಾರೆ