ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರೊಂದಿಗೆ ನಡೆಯುವುದು
“ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.”—ಮೀಕ 4:5.
1. ಯೆಹೋವನನ್ನು ‘ನಿತ್ಯತೆಯ ಅರಸ’ನೆಂದು ಏಕೆ ಕರೆಯಸಾಧ್ಯವಿದೆ?
ಯೆಹೋವ ದೇವರಿಗೆ ಆದಿಯಿಲ್ಲ. ಆತನ ಅಸ್ತಿತ್ವವು ಅನಿಶ್ಚಿತ ಸಮಯದಿಂದಲೂ ಮುಂದುವರಿದಿರುವುದರಿಂದ, ಆತನನ್ನು ಸೂಕ್ತವಾಗಿಯೇ “ಮಹಾವೃದ್ಧ”ನೆಂದು ಕರೆಯಲಾಗಿದೆ. (ದಾನಿಯೇಲ 7:9, 13) ಯೆಹೋವನು ಅನಂತ ಭವಿಷ್ಯತ್ತನ್ನೂ ಅನುಭವಿಸುವನು. ಆತನು ಮಾತ್ರ ‘ನಿತ್ಯತೆಯ ಅರಸ’ನಾಗಿದ್ದಾನೆ. (ಪ್ರಕಟನೆ 10:6; 15:3) ಮತ್ತು ಆತನ ದೃಷ್ಟಿಯಲ್ಲಿ, ಒಂದು ಸಾವಿರ ವರ್ಷಗಳು “ಗತಿಸಿಹೋದ ನಿನ್ನಿನ ದಿನದಂತೆಯೂ ರಾತ್ರಿಯ ಜಾವದಂತೆಯೂ ಅವೆ.”—ಕೀರ್ತನೆ 90:4.
2. (ಎ) ವಿಧೇಯ ಮಾನವರಿಗಾಗಿ ದೇವರ ಉದ್ದೇಶವು ಏನಾಗಿದೆ? (ಬಿ) ಯಾವುದರ ಮೇಲೆ ನಾವು ನಮ್ಮ ನಿರೀಕ್ಷೆಗಳು ಹಾಗೂ ಯೋಜನೆಗಳನ್ನು ಕೇಂದ್ರೀಕರಿಸಬೇಕು?
2 ಜೀವದಾತನು ನಿತ್ಯನಾಗಿರುವುದರಿಂದ, ಆತನು ಪ್ರಥಮ ಮಾನವ ಜೋಡಿಯಾದ ಆದಾಮಹವ್ವರಿಗೆ, ಪ್ರಮೋದವನದಲ್ಲಿ ಅಂತ್ಯರಹಿತ ಜೀವಿತದ ಪ್ರತೀಕ್ಷೆಯನ್ನೇ ವಾಗ್ದಾನಿಸಸಾಧ್ಯವಿತ್ತು. ಆದರೆ ಅವಿಧೇಯತೆಯ ಕಾರಣ, ಆದಾಮನು ತನ್ನ ಸಂತತಿಗೆ ಪಾಪಮರಣಗಳನ್ನು ದಾಟಿಸುತ್ತಾ, ನಿತ್ಯ ಜೀವದ ಹಕ್ಕನ್ನು ಕಳೆದುಕೊಂಡನು. (ರೋಮಾಪುರ 5:12) ಆದರೂ, ಆದಾಮನ ದಂಗೆಯು ದೇವರ ಮೂಲಭೂತ ಉದ್ದೇಶವನ್ನು ವಿಫಲಗೊಳಿಸಲಿಲ್ಲ. ವಿಧೇಯ ಮಾನವರು ಸದಾ ಜೀವಿಸಬೇಕೆಂಬುದು ಯೆಹೋವನ ಚಿತ್ತವಾಗಿದೆ, ಮತ್ತು ತನ್ನ ಉದ್ದೇಶವನ್ನು ಆತನು ಖಂಡಿತವಾಗಿಯೂ ನೆರವೇರಿಸುವನು. (ಯೆಶಾಯ 55:11) ಆದುದರಿಂದ, ಯೆಹೋವನಿಗೆ ನಿತ್ಯವೂ ಸೇವೆಸಲ್ಲಿಸಲು ಸಾಧ್ಯವಾಗುವಂತೆ, ನಾವು ನಮ್ಮ ನಿರೀಕ್ಷೆಗಳು ಹಾಗೂ ಯೋಜನೆಗಳನ್ನು ನಿತ್ಯತೆಯ ಮೇಲೆ ಕೇಂದ್ರೀಕರಿಸುವುದು ಯೋಗ್ಯವಾಗಿದೆ. ನಾವು ‘ಯೆಹೋವನ ದಿನ’ವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಲು ಬಯಸುತ್ತೇವಾದರೂ, ದೇವರೊಂದಿಗೆ ಸದಾಕಾಲ ನಡೆಯುವುದೇ ನಮ್ಮ ಗುರಿಯಾಗಿದೆ.—2 ಪೇತ್ರ 3:12.
ಯೆಹೋವನು ತನ್ನ ನಿಯಮಿತ ಸಮಯದಲ್ಲಿ ಕ್ರಿಯೆಗೈಯುವನು
3. ಯೆಹೋವನಿಗೆ ತನ್ನ ಉದ್ದೇಶಗಳನ್ನು ನೆರವೇರಿಸಲು ಒಂದು ‘ನಿಯಮಿತ ಸಮಯ’ವಿದೆ ಎಂದು ನಮಗೆ ಹೇಗೆ ಗೊತ್ತಿದೆ?
3 ದೇವರೊಂದಿಗೆ ನಡೆಯುವ ಜನರೋಪಾದಿ, ನಾವು ಆತನ ಚಿತ್ತವನ್ನು ಪೂರೈಸುವ ವಿಷಯದಲ್ಲಿ ಬಹಳಷ್ಟು ಆಸಕ್ತರಾಗಿದ್ದೇವೆ. ಯೆಹೋವನು ಮಹಾನ್ ಸಮಯಪಾಲಕನಾಗಿರುವುದರಿಂದ, ನಿಯಮಿತ ಸಮಯದಲ್ಲಿ ಆತನು ತನ್ನ ಉದ್ದೇಶಗಳನ್ನು ನೆರವೇರಿಸಲು ಎಂದಿಗೂ ತಪ್ಪುವುದಿಲ್ಲವೆಂಬ ಭರವಸೆ ನಮಗಿದೆ. ಉದಾಹರಣೆಗೆ, “ಕಾಲವು ಪರಿಪೂರ್ಣವಾದಾಗ ದೇವರು ತನ್ನ ಮಗನನ್ನು ಕಳುಹಿಸಿಕೊಟ್ಟನು.” (ಗಲಾತ್ಯ 4:4) ಮತ್ತು ದರ್ಶನಗಳಲ್ಲಿ ನೋಡಿದಂತಹ ಪ್ರವಾದನಾತ್ಮಕ ವಿಷಯಗಳ ನೆರವೇರಿಕೆಗೆ ‘ನಿಯಮಿತ ಸಮಯ’ವಿದೆ ಎಂದು ಅಪೊಸ್ತಲ ಯೋಹಾನನಿಗೆ ಹೇಳಲಾಯಿತು. (ಪ್ರಕಟನೆ 1:1-3) ಮತ್ತು “ಸತ್ತವರು ತೀರ್ಪುಹೊಂದುವ ಸಮಯ”ವೊಂದಿದೆ. (ಪ್ರಕಟನೆ 11:18) 1,900ಕ್ಕಿಂತಲೂ ಹೆಚ್ಚು ವರ್ಷಗಳ ಹಿಂದೆ, ದೇವರು “ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ” ಎಂದು ಅಪೊಸ್ತಲ ಪೌಲನು ಹೇಳುವಂತೆ ಪ್ರೇರಿಸಲ್ಪಟ್ಟನು.—ಅ. ಕೃತ್ಯಗಳು 17:31.
4. ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರಲು ಯೆಹೋವನು ಬಯಸುತ್ತಾನೆಂದು ನಮಗೆ ಹೇಗೆ ಗೊತ್ತಿದೆ?
4 ಈ ಲೋಕದಲ್ಲಿ ಯೆಹೋವನ ನಾಮವು ನಿಂದೆಗೊಳಗಾಗುತ್ತಿರುವುದರಿಂದ, ಆತನು ಈ ದುಷ್ಟ ವಿಷಯಗಳ ವ್ಯವಸ್ಥೆಗೆ ಅಂತ್ಯವನ್ನು ತರುವನು. ದುಷ್ಟರು ಹುಲ್ಲಿನಂತೆ ಬೆಳೆದಿದ್ದಾರೆ. (ಕೀರ್ತನೆ 92:7) ಅವರು ತಮ್ಮ ನಡೆನುಡಿಗಳಿಂದ ದೇವರನ್ನು ಅಪಮಾನಕ್ಕೆ ಗುರಿಪಡಿಸುತ್ತಾರೆ. ಮತ್ತು ತನ್ನ ಸೇವಕರು ದೂಷಿಸಲ್ಪಡುವುದನ್ನು ಹಾಗೂ ಹಿಂಸಿಸಲ್ಪಡುವುದನ್ನು ನೋಡುವಾಗ ಆತನು ತೀವ್ರವಾದ ವ್ಯಥೆಯನ್ನು ಅನುಭವಿಸುತ್ತಾನೆ. (ಜೆಕರ್ಯ 2:8) ಆದಕಾರಣ, ಸೈತಾನನ ಸಂಪೂರ್ಣ ಸಂಸ್ಥೆಯು ಬೇಗನೆ ಅಂತ್ಯಗೊಳಿಸಲ್ಪಡುವುದೆಂದು ಯೆಹೋವನು ಆಜ್ಞೆವಿಧಿಸಿದ್ದಾನೆ! ಇದು ನಿಖರವಾಗಿ ಯಾವಾಗ ಸಂಭವಿಸುವುದೆಂಬುದನ್ನು ದೇವರು ನಿರ್ಧರಿಸಿದ್ದಾನೆ, ಮತ್ತು ನಾವು ಈಗ “ಅಂತ್ಯ ಕಾಲ”ದಲ್ಲಿ ಜೀವಿಸುತ್ತಿದ್ದೇವೆ ಎಂಬುದನ್ನು ಬೈಬಲ್ ಪ್ರವಾದನೆಗಳ ನೆರವೇರಿಕೆಯು ಸ್ಪಷ್ಟಗೊಳಿಸುತ್ತವೆ. (ದಾನಿಯೇಲ 12:4) ಆತನನ್ನು ಪ್ರೀತಿಸುವವರೆಲ್ಲರ ಒಳಿತಿಗಾಗಿ ಆತನು ಬೇಗನೆ ಕ್ರಿಯೆಗೈಯುವನು.
5. ತಮ್ಮನ್ನು ಸುತ್ತುವರಿದಿದ್ದ ಪರಿಸ್ಥಿತಿಗಳನ್ನು ಲೋಟ ಮತ್ತು ಹಬಕ್ಕೂಕರು ಹೇಗೆ ವೀಕ್ಷಿಸಿದರು?
5 ಗತಕಾಲದ ಯೆಹೋವನ ನಂಬಿಗಸ್ತ ಸೇವಕರು, ದುಷ್ಟತನದ ಅಂತ್ಯವನ್ನು ನೋಡಲು ಹಾತೊರೆದರು. ನೀತಿವಂತನಾದ ಲೋಟನು “ಅವರ ಅನ್ಯಾಯಕೃತ್ಯಗಳನ್ನು ನೋಡುತ್ತಾ ಕೇಳುತ್ತಾ . . . ಬಹಳವಾಗಿ ಕರಕರೆಗೊಂಡನು.” (2 ಪೇತ್ರ 2:8) ತನ್ನನ್ನು ಸುತ್ತುವರಿದಿದ್ದ ಪರಿಸ್ಥಿತಿಗಳಿಂದ ಬಹಳಷ್ಟು ದುಃಖಪಟ್ಟ ಪ್ರವಾದಿಯಾದ ಹಬಕ್ಕೂಕನು ಬೇಡಿಕೊಂಡದ್ದು: “ಯೆಹೋವನೇ, ನಾನು ಮೊರೆಯಿಡುತ್ತಿದ್ದರೂ ನೀನು ಎಷ್ಟು ಕಾಲ ಕೇಳದೇ ಇರುವಿ? ಹಿಂಸೆ, ಹಿಂಸೆ ಎಂದು ನಿನ್ನನ್ನು ಕೂಗಿಕೊಂಡರೂ ರಕ್ಷಿಸದೆ ಇರುವಿ. ಕೇಡನ್ನು ನನ್ನ ಕಣ್ಣಿಗೆ ಏಕೆ ಬೀಳಿಸುತ್ತಿದ್ದೀ? ಕಷ್ಟವನ್ನೇಕೆ ನನಗೆ ತೋರಿಸುತ್ತಿದ್ದೀ? ಹಿಂಸೆಬಾಧೆಗಳು ನನ್ನ ಕಣ್ಣೆದುರಿಗೆ ಇದ್ದೇ ಇವೆ; ಜಗಳವಾಗುತ್ತಿದೆ, ವ್ಯಾಜ್ಯವೇಳುತ್ತಿದೆ.”—ಹಬಕ್ಕೂಕ 1:2, 3.
6. ಹಬಕ್ಕೂಕನ ಪ್ರಾರ್ಥನೆಗೆ ಉತ್ತರವಾಗಿ ಯೆಹೋವನು ಏನು ಹೇಳಿದನು, ಮತ್ತು ಇದರಿಂದ ನಾವು ಏನನ್ನು ಕಲಿಯಸಾಧ್ಯವಿದೆ?
6 ಯೆಹೋವನು ಹೀಗೆ ಹೇಳುತ್ತಾ ಹಬಕ್ಕೂಕನಿಗೆ ಉತ್ತರ ನೀಡಿದ್ದು: “[ದರ್ಶನವು] ಕ್ಲುಪ್ತಕಾಲದಲ್ಲಿ ನೆರವೇರತಕ್ಕದ್ದು, ಆದರೆ ಪರಿಣಾಮಕ್ಕೆ ತ್ವರೆಪಡುತ್ತದೆ, ಮೋಸಮಾಡದು; ತಡವಾದರೂ ಅದಕ್ಕೆ ಕಾದಿರು; ಅದು ಬಂದೇ ಬರುವದು, ತಾಮಸವಾಗದು.” (ಹಬಕ್ಕೂಕ 2:3) ತಾನು “ಕ್ಲುಪ್ತಕಾಲದಲ್ಲಿ” ಕ್ರಿಯೆಗೈಯವೆನೆಂದು ದೇವರು ತಿಳಿಯಪಡಿಸಿದನು. ಅದು ತಡವಾಗುತ್ತಿದೆಯೆಂದು ನಮಗೆ ಅನಿಸಿದರೂ, ಯೆಹೋವನು ತಪ್ಪದೆ ತನ್ನ ಉದ್ದೇಶವನ್ನು ನೆರವೇರಿಸುವನು.—2 ಪೇತ್ರ 3:9.
ಕಡಿಮೆಯಾಗದ ಹುರುಪಿನೊಂದಿಗೆ ಸೇವೆಸಲ್ಲಿಸುವುದು
7. ಯೆಹೋವನ ದಿನವು ಯಾವಾಗ ಬರುವುದೆಂದು ಯೇಸುವಿಗೆ ನಿಖರವಾಗಿ ತಿಳಿದಿರದಿದ್ದರೂ, ಅವನು ತನ್ನ ಕಾರ್ಯಗಳನ್ನು ಹೇಗೆ ಪೂರೈಸಿದನು?
7 ಯೆಹೋವನೊಂದಿಗೆ ಹುರುಪಿನಿಂದ ನಡೆಯಲು, ನಾವು ಆತನ ನಿಯಮಿತ ಸಮಯವನ್ನು ಅರಿತಿರಲೇಬೇಕೆಂಬುದು ಆವಶ್ಯಕವೊ? ಇಲ್ಲ. ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ. ದೇವರ ಚಿತ್ತವು ಪರಲೋಕದಲ್ಲಿ ನೆರವೇರುವಂತೆ ಭೂಮಿಯ ಮೇಲೆ ನೆರವೇರುವ ಆ ಸಮಯದಲ್ಲಿ ಯೇಸುವಿಗೆ ವಿಶೇಷ ಆಸಕ್ತಿಯಿತ್ತು. ಆದುದರಿಂದಲೇ, ಹೀಗೆ ಪ್ರಾರ್ಥಿಸುವಂತೆ ಕ್ರಿಸ್ತನು ತನ್ನ ಹಿಂಬಾಲಕರಿಗೆ ಕಲಿಸಿದನು: “ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವೆಂದು ಎಣಿಸಲ್ಪಡಲಿ. ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ವೆರವೇರಲಿ.” (ಮತ್ತಾಯ 6:9, 10) ಈ ಪ್ರಾರ್ಥನೆಗೆ ಉತ್ತರವು ದೊರಕುವುದೆಂದು ಯೇಸುವಿಗೆ ಗೊತ್ತಿದ್ದರೂ, ಅದು ನಿಖರವಾಗಿ ಯಾವಾಗ ಸಂಭವಿಸುವುದೆಂದು ಅವನಿಗೆ ಗೊತ್ತಿರಲಿಲ್ಲ. ಈ ವಿಷಯಗಳ ವ್ಯವಸ್ಥೆಯ ಅಂತ್ಯದ ಕುರಿತಾದ ತನ್ನ ಮಹಾ ಪ್ರವಾದನೆಯಲ್ಲಿ ಅವನು ಹೇಳಿದ್ದು: “ಇದಲ್ಲದೆ ಆ ದಿನದ ವಿಷಯವೂ ಆ ಗಳಿಗೆಯ ವಿಷಯವೂ ನನ್ನ ತಂದೆಯೊಬ್ಬನಿಗೆ ತಿಳಿಯುವದೇ ಹೊರತು ಮತ್ತಾರಿಗೂ ತಿಳಿಯದು; ಪರಲೋಕದಲ್ಲಿರುವ ದೂತರಿಗೂ ತಿಳಿಯದು, ಮಗನಿಗೂ ತಿಳಿಯದು.” (ಮತ್ತಾಯ 24:36) ದೇವರ ಉದ್ದೇಶಗಳ ನೆರವೇರಿಕೆಯಲ್ಲಿ ಯೇಸು ಕ್ರಿಸ್ತನು ಮುಖ್ಯ ಪಾತ್ರವನ್ನು ವಹಿಸುವುದರಿಂದ, ಅವನು ತನ್ನ ಸ್ವರ್ಗೀಯ ತಂದೆಯ ವೈರಿಗಳ ನಾಶನದಲ್ಲಿ ನೇರವಾಗಿ ಒಳಗೂಡುವನು. ಆದರೆ, ಯೇಸು ಭೂಮಿಯಲ್ಲಿದ್ದಾಗ, ದೇವರು ಕ್ರಿಯೆಗೈಯಲಿದ್ದ ಸಮಯದ ಕುರಿತು ಅವನಿಗೂ ಗೊತ್ತಿರಲಿಲ್ಲ. ಇದು ಯೆಹೋವನ ಸೇವೆಯಲ್ಲಿನ ಅವನ ಹುರುಪನ್ನು ಕಡಿಮೆಮಾಡಿತೊ? ನಿಶ್ಚಯವಾಗಿಯೂ ಇಲ್ಲ! ಯೇಸು ಹುರುಪಿನಿಂದ ದೇವಾಲಯವನ್ನು ಸ್ವಚ್ಛಗೊಳಿಸುತ್ತಿರುವುದನ್ನು ನೋಡಿ, “ನಿನ್ನ ಆಲಯಾಭಿಮಾನವು ಬೆಂಕಿಯಂತೆ ನನ್ನನ್ನು ದಹಿಸುತ್ತದೆ ಎಂದು ಬರೆದ ಮಾತು ಶಿಷ್ಯರ ನೆನಪಿಗೆ ಬಂತು.” (ಯೋಹಾನ 2:17; ಕೀರ್ತನೆ 69:9) ತಾನು ಭೂಮಿಗೆ ಕಳುಹಿಸಲ್ಪಟ್ಟ ಉದ್ದೇಶವನ್ನು ನೆರವೇರಿಸುವುದರಲ್ಲಿ ಯೇಸು ಕಾರ್ಯಮಗ್ನನಾಗಿ ಉಳಿದು, ಅದರಲ್ಲಿ ತನಗಿದ್ದ ಹುರುಪನ್ನು ಕಡಿಮೆಯಾಗುವಂತೆ ಬಿಡಲಿಲ್ಲ. ಅವನು ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡವನಾಗಿ ದೇವರಿಗೆ ಸೇವೆಸಲ್ಲಿಸಿದನು.
8, 9. ರಾಜ್ಯದ ಪುನಸ್ಥಾಪನೆಯ ಕುರಿತು ಶಿಷ್ಯರು ಪ್ರಶ್ನಿಸಿದಾಗ, ಯಾವ ಉತ್ತರವು ಅವರಿಗೆ ದೊರಕಿತು, ಮತ್ತು ಅವರು ಹೇಗೆ ಪ್ರತಿಕ್ರಿಯಿಸಿದರು?
8 ಕ್ರಿಸ್ತನ ಶಿಷ್ಯರ ವಿಷಯದಲ್ಲೂ ಇದು ಸತ್ಯವಾಗಿತ್ತು. ಯೇಸು ಸ್ವರ್ಗಕ್ಕೆ ಏರಿಹೋಗುವ ತುಸು ಮುಂಚೆ ಅವರನ್ನು ಭೇಟಿಯಾದನು. ಆ ವೃತ್ತಾಂತವು ಹೇಳುವುದು: “ಕೂಡಿಬಂದವರು ಆತನನ್ನು—ಸ್ವಾಮೀ, ನೀನು ಇದೇ ಕಾಲದಲ್ಲಿ ಇಸ್ರಾಯೇಲ್ ಜನರಿಗೆ ರಾಜ್ಯವನ್ನು ತಿರಿಗಿ ಸ್ಥಾಪಿಸಿಕೊಡುವಿಯೋ?” ಎಂದು ಕೇಳಿದರು. ತಮ್ಮ ಯಜಮಾನನಂತೆ, ಆ ರಾಜ್ಯಕ್ಕಾಗಿ ಅವರೂ ಹಾತೊರೆದರು. ಯೇಸು ಅವರಿಗೆ ಉತ್ತರಿಸಿದ್ದು: “ತಂದೆಯು ಸ್ವಂತ ಅಧಿಕಾರದಲ್ಲಿಟ್ಟುಕೊಂಡಿರುವ ಕಾಲಗಳನ್ನೂ ಸಮಯಗಳನ್ನೂ ತಿಳುಕೊಳ್ಳುವದು ನಿಮ್ಮ ಕೆಲಸವಲ್ಲ. ಆದರೆ ಪವಿತ್ರಾತ್ಮ ನಿಮ್ಮ ಮೇಲೆ ಬರಲು ನೀವು ಬಲವನ್ನು ಹೊಂದಿ ಯೆರೂಸಲೇಮಿನಲ್ಲಿಯೂ ಎಲ್ಲಾ ಯೂದಾಯ ಸಮಾರ್ಯ ಸೀಮೆಗಳಲ್ಲಿಯೂ ಭೂಲೋಕದ ಕಟ್ಟಕಡೆಯ ವರೆಗೂ ಸಾಕ್ಷಿಗಳಾಗಿರಬೇಕು.”—ಅ. ಕೃತ್ಯಗಳು 1:6-8.
9 ಈ ಉತ್ತರದಿಂದ ಶಿಷ್ಯರು ಎದೆಗುಂದಿದರೆಂಬುದಕ್ಕೆ ಯಾವ ಸೂಚನೆಯೂ ಇಲ್ಲ. ಬದಲಿಗೆ, ಸಾರುವ ಕೆಲಸದಲ್ಲಿ ಅವರು ಹುರುಪಿನಿಂದ ಕಾರ್ಯಮಗ್ನರಾದರು. ವಾರಗಳೊಳಗೆ, ಅವರು ಇಡೀ ಯೆರೂಸಲೇಮನ್ನು ತಮ್ಮ ಬೋಧನೆಯಿಂದ ತುಂಬಿಸಿದ್ದರು. (ಅ. ಕೃತ್ಯಗಳು 5:28) ಮತ್ತು 30 ವರ್ಷಗಳೊಳಗೆ, ಅವರು ತಮ್ಮ ಸಾರುವ ಚಟುವಟಿಕೆಯನ್ನು ಎಷ್ಟರ ಮಟ್ಟಿಗೆ ವಿಸ್ತರಿಸಿದ್ದರೆಂದರೆ, ಸುವಾರ್ತೆಯು ‘ಆಕಾಶದ ಕೆಳಗಿರುವ ಎಲ್ಲ ಸೃಷ್ಟಿಗೆ ಸಾರಲ್ಪಟ್ಟಿತು’ ಎಂದು ಪೌಲನು ಹೇಳಸಾಧ್ಯವಿತ್ತು. (ಕೊಲೊಸ್ಸೆ 1:23) ಶಿಷ್ಯರು ತಪ್ಪಾಗಿ ನಿರೀಕ್ಷಿಸಿದಂತೆ, ರಾಜ್ಯವು ‘ಇಸ್ರಾಯೇಲ್ಯರಿಗೆ ತಿರುಗಿ ಸ್ಥಾಪಿಸಲ್ಪಡದಿದ್ದರೂ’ ಮತ್ತು ಅದು ಅವರ ಜೀವಮಾನದಲ್ಲಿ ಸ್ವರ್ಗದಲ್ಲಿ ಸ್ಥಾಪನೆಗೊಳ್ಳದಿದ್ದರೂ, ಅವರು ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಹುರುಪಿನಿಂದ ಯೆಹೋವನಿಗೆ ಸೇವೆಸಲ್ಲಿಸುತ್ತಾ ಇದ್ದರು.
ನಮ್ಮ ಉದ್ದೇಶಗಳನ್ನು ಪರೀಕ್ಷಿಸುವುದು
10. ದೇವರು ಸೈತಾನನ ವ್ಯವಸ್ಥೆಯನ್ನು ನಾಶಪಡಿಸುವ ಸಮಯವು ನಮಗೆ ಗೊತ್ತಿಲ್ಲದಿರುವುದರಿಂದ, ನಾವು ಯಾವ ಪುರಾವೆಯನ್ನು ನೀಡಬಹುದು?
10 ಆಧುನಿಕ ದಿನದ ಯೆಹೋವನ ಸೇವಕರು ಸಹ, ಈ ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ನೋಡಲು ಹಾತೊರೆಯುತ್ತಿದ್ದಾರೆ. ಆದರೆ, ನಮ್ಮ ಮುಖ್ಯ ಚಿಂತೆಯು, ದೇವರ ವಾಗ್ದತ್ತ ಹೊಸ ಲೋಕದೊಳಗೆ ಪ್ರವೇಶಿಸುವುದು ಮಾತ್ರ ಆಗಿರಬಾರದು. ಬದಲಿಗೆ ಯೆಹೋವನ ನಾಮದ ಶುದ್ಧೀಕರಣ ಹಾಗೂ ಆತನ ಪರಮಾಧಿಕಾರದ ನಿರ್ದೋಷೀಕರಣವನ್ನು ನೋಡುವುದೇ ನಮ್ಮ ಬಯಕೆಯಾಗಿರಬೇಕು. ಇದರಿಂದಾಗಿ, ಸೈತಾನನ ವ್ಯವಸ್ಥೆಯ ನಾಶನಕ್ಕಾಗಿ ದೇವರು ನೇಮಿಸಿರುವ ‘ದಿನ ಇಲ್ಲವೆ ಗಳಿಗೆ’ಯನ್ನು ಆತನು ನಮಗೆ ತಿಳಿಸದೆ ಇರುವ ಕಾರಣ ನಾವು ಆನಂದಿಸಸಾಧ್ಯವಿದೆ. ಅಲ್ಲದೆ, ನಾವು ಅಲ್ಪಕಾಲದ, ಸ್ವಾರ್ಥ ಗುರಿಗಳಿಂದಾಗಿ ಅಲ್ಲ, ದೇವರನ್ನು ಪ್ರೀತಿಸುವ ಕಾರಣ ಆತನೊಂದಿಗೆ ಅನಂತವಾಗಿ ನಡೆಯಲು ನಿಶ್ಚಯಿಸಿದ್ದೇವೆ ಎಂಬ ಪುರಾವೆಯನ್ನೂ ನಾವು ಕೊಡಬಲ್ಲೆವು.
11, 12. ಯೋಬನ ಸಮಗ್ರತೆಗೆ ಯಾವ ಪಂಥಾಹ್ವಾನವನ್ನು ಒಡ್ಡಲಾಯಿತು, ಮತ್ತು ಆ ಪಂಥಾಹ್ವಾನವು ನಮಗೆ ಹೇಗೆ ಸಂಬಂಧಿಸುತ್ತದೆ?
11 ದೇವರಿಗೆ ನಾವು ತೋರಿಸುವ ಸಮಗ್ರತೆಯು, ನಿರ್ದೋಷಿಯಾದ ಯೋಬನು ಮತ್ತು ಅವನಂತಿರುವ ಮಾನವರು, ದೇವರನ್ನು ಸ್ವಾರ್ಥಕ್ಕಾಗಿ ಸೇವಿಸುತ್ತಾರೆಂಬ ಸೈತಾನನ ಆರೋಪವು ಸುಳ್ಳೆಂದು ರುಜುಪಡಿಸಲು ಸಹ ಸಹಾಯ ಮಾಡುತ್ತದೆ. “ಆಗ ಯೆಹೋವನು—ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ? ಅವನು ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ ಆಗಿದ್ದಾನೆ. ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ ಎಂದು ಸೈತಾನನಿಗೆ ಹೇಳಿದನು. ಅದಕ್ಕೆ ಸೈತಾನನು—ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಟ್ಟಿದ್ದಾನೋ? ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.” (ಯೋಬ 1:8-11) ಪರೀಕ್ಷೆಯ ಸಮಯದಲ್ಲಿ ತನ್ನ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ, ಈ ದುಷ್ಟಾರೋಪವು ಸುಳ್ಳೆಂಬುದನ್ನು ಯೋಬನು ರುಜುಪಡಿಸಿದನು.
12 ತದ್ರೀತಿಯಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವ ಮೂಲಕ, ಕೇವಲ ಬಹುಮಾನಕ್ಕಾಗಿ ನಾವು ದೇವರಿಗೆ ಸೇವೆಸಲ್ಲಿಸುತ್ತೇವೆಂಬ ಸೈತಾನನ ಆರೋಪವನ್ನು ನಾವು ಸುಳ್ಳೆಂದು ರುಜುಪಡಿಸಸಾಧ್ಯವಿದೆ. ದುಷ್ಟರ ಮೇಲೆ ದೇವರು ಮುಯ್ಯಿ ತೀರಿಸುವ ನಿಖರವಾದ ಸಮಯ ನಮಗೆ ಗೊತ್ತಿರದೇ ಇರುವುದರಿಂದ, ನಾವು ಯೆಹೋವನನ್ನು ನಿಜವಾಗಿಯೂ ಪ್ರೀತಿಸುತ್ತೇವೆ ಮತ್ತು ಸದಾಕಾಲ ಆತನ ಮಾರ್ಗಗಳಲ್ಲಿ ನಡೆಯಲು ಬಯಸುತ್ತೇವೆ ಎಂಬುದನ್ನು ರುಜುಪಡಿಸುವ ಸಂದರ್ಭವನ್ನೂ ಅದು ನೀಡುತ್ತದೆ. ನಾವು ದೇವರಿಗೆ ನಿಷ್ಠಾವಂತರಾಗಿರುತ್ತೇವೆ ಎಂಬುದನ್ನು ಮತ್ತು ಕಾರ್ಯಗಳನ್ನು ನಿರ್ವಹಿಸುವ ಆತನ ಸಾಮರ್ಥ್ಯದಲ್ಲಿ ನಮಗೆ ಭರವಸೆಯಿದೆ ಎಂಬುದನ್ನು ಅದು ತೋರಿಸುತ್ತದೆ. ಆ ದಿನ ಮತ್ತು ಗಳಿಗೆ ಯಾವಾಗ ಬರುವುದೆಂಬುದು ನಮಗೆ ಗೊತ್ತಿಲ್ಲದಿರುವುದರಿಂದ, ನಾವು ಜಾಗರೂಕರೂ ಆತ್ಮಿಕವಾಗಿ ಎಚ್ಚರವುಳ್ಳವರೂ ಆಗಿರುವಂತೆ ಅದು ಸಹಾಯಮಾಡುತ್ತದೆ. ಏಕೆಂದರೆ ಅಂತ್ಯವು ಯಾವುದೇ ಸಮಯದಲ್ಲಿ, ರಾತ್ರಿಯಲ್ಲಿ ಬರುವ ಕಳ್ಳನಂತೆ ಹಠಾತ್ತನೆ ಬರಬಹುದೆಂದು ನಮಗೆ ಗೊತ್ತಿದೆ. (ಮತ್ತಾಯ 24:42-44) ನಾವು ಯೆಹೋವನೊಂದಿಗೆ ದಿನಾಲೂ ನಡೆಯುವ ಮೂಲಕ, ಆತನ ಹೃದಯವನ್ನು ಸಂತೋಷಗೊಳಿಸುತ್ತೇವೆ ಮತ್ತು ಆತನನ್ನು ಕೆಣಕುವ ಸೈತಾನನಿಗೆ ತಕ್ಕ ಉತ್ತರವನ್ನು ನೀಡಶಕ್ತರಾಗುತ್ತೇವೆ.—ಜ್ಞಾನೋಕ್ತಿ 27:11.
ನಿತ್ಯತೆಗಾಗಿ ಯೋಜಿಸಿರಿ!
13. ಭವಿಷ್ಯತ್ತಿಗಾಗಿ ಯೋಜಿಸುವುದರ ಕುರಿತು ಬೈಬಲು ಏನನ್ನು ಸೂಚಿಸುತ್ತದೆ?
13 ಭವಿಷ್ಯತ್ತಿಗಾಗಿ ನ್ಯಾಯಸಮ್ಮತವಾದ ಯೋಜನೆಗಳನ್ನು ಮಾಡುವುದು ವಿವೇಕಪ್ರದವೆಂದು, ದೇವರೊಂದಿಗೆ ನಡೆಯುವವರಿಗೆ ತಿಳಿದಿದೆ. ವೃದ್ಧಾಪ್ಯದ ಸಮಸ್ಯೆಗಳು ಹಾಗೂ ಇತಿಮಿತಿಗಳ ಅರಿವು ತಮಗಿರುವುದರಿಂದ, ಅನೇಕ ಜನರು ತಮ್ಮ ಯೌವನ ಹಾಗೂ ಶಕ್ತಿಯ ಸದುಪಯೋಗವನ್ನು ಮಾಡಿಕೊಂಡು, ತಮ್ಮ ತದನಂತರದ ಜೀವಿತವನ್ನು ಆರ್ಥಿಕವಾಗಿ ಭದ್ರಗೊಳಿಸಿಕೊಳ್ಳುತ್ತಾರೆ. ಹಾಗಾದರೆ, ಅದಕ್ಕಿಂತಲೂ ಹೆಚ್ಚು ಪ್ರಾಮುಖ್ಯವಾದ ಆತ್ಮಿಕ ಭವಿಷ್ಯತ್ತಿನ ಕುರಿತಾಗಿ ಏನು? ಜ್ಞಾನೋಕ್ತಿ 21:5 ಹೇಳುವುದು: “ಶ್ರಮಶೀಲರಿಗೆ ತಮ್ಮ ಯತ್ನಗಳಿಂದ [“ಯೋಜನೆಗಳಿಂದ,” NW] ಸಮೃದ್ಧಿ; ಆತುರಪಡುವವರಿಗೆಲ್ಲಾ ಕೊರತೆಯೇ.” ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಯೋಜಿಸುವುದು ನಿಜವಾಗಿಯೂ ಲಾಭದಾಯಕವಾಗಿದೆ. ಈ ವ್ಯವಸ್ಥೆಯ ಅಂತ್ಯ ಯಾವಾಗ ಬರುವುದೆಂದು ನಮಗೆ ನಿಖರವಾಗಿ ಗೊತ್ತಿಲ್ಲದಿರುವುದರಿಂದ, ನಮ್ಮ ಭವಿಷ್ಯತ್ತಿನ ಅಗತ್ಯಗಳ ಕುರಿತು ಸ್ವಲ್ಪಮಟ್ಟಿಗೆ ಯೋಚಿಸುವುದು ನ್ಯಾಯಸಮ್ಮತವಾಗಿದೆ. ಆದರೆ ನಾವು ಸಮತೂಕಭಾವದವರಾಗಿದ್ದು, ಜೀವಿತದಲ್ಲಿ ದೈವಿಕ ಅಭಿರುಚಿಗಳನ್ನು ಪ್ರಥಮವಾಗಿಡೋಣ. ತಮ್ಮ ಜೀವಿತದಲ್ಲಿ ದೇವರ ಚಿತ್ತವನ್ನು ಪ್ರಥಮವಾಗಿಡುವವರು, ದೂರದೃಷ್ಟಿಯಿಲ್ಲದವರೆಂದು ಅವಿಶ್ವಾಸಿಗಳು ಹೇಳಬಹುದು. ಆದರೆ ಅದು ಸತ್ಯವೊ?
14, 15. (ಎ) ಭವಿಷ್ಯತ್ತಿಗಾಗಿ ಮಾಡಲ್ಪಡುವ ಯೋಜನೆಗಳ ಸಂಬಂಧದಲ್ಲಿ ಯೇಸು ಯಾವ ದೃಷ್ಟಾಂತವನ್ನು ಕೊಟ್ಟನು? (ಬಿ) ಯೇಸುವಿನ ದೃಷ್ಟಾಂತದಲ್ಲಿರುವ ಧನಿಕನು ಏಕೆ ದೂರದೃಷ್ಟಿಯಿಲ್ಲದವನಾಗಿದ್ದನು?
14 ಈ ಸಂಬಂಧದಲ್ಲಿ ಹೆಚ್ಚಿನ ತಿಳುವಳಿಕೆ ನೀಡುವ ಒಂದು ದೃಷ್ಟಾಂತವನ್ನು ಯೇಸು ಕೊಟ್ಟನು. ಅವನಂದದ್ದು: “ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯು ಚೆನ್ನಾಗಿ ಬೆಳೆಯಿತು. ಆಗ ಅವನು ತನ್ನೊಳಗೆ—ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ—ಒಂದು ಕೆಲಸ ಮಾಡುತ್ತೇನೆ; ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು. ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು ನನ್ನ ಜೀವಾತ್ಮಕ್ಕೆ—ಜೀವವೇ, ಅನೇಕ ವರುಷಗಳಿಗೆ ಬೇಕಾದಷ್ಟು ಸರಕು ನಿನಗೆ ಬಿದ್ದದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು. ಆದರೆ ದೇವರು ಅವನಿಗೆ—ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು; ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು ಎಂದು ಹೇಳಿದನು. ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.”—ಲೂಕ 12:16-21.
15 ಭವಿಷ್ಯತ್ತಿಗಾಗಿ ಭೌತಿಕ ವಸ್ತುಗಳನ್ನು ಕೂಡಿಸಿಟ್ಟುಕೊಳ್ಳಲು ಆ ಧನಿಕನು ಶ್ರಮಪಟ್ಟಿರಬಾರದಿತ್ತೆಂದು ಯೇಸು ಹೇಳುತ್ತಿದ್ದನೊ? ಇಲ್ಲ, ನಾವು ಕಷ್ಟಪಟ್ಟು ದುಡಿಯಬೇಕೆಂದು ಶಾಸ್ತ್ರವಚನಗಳು ಹೇಳುತ್ತವೆ. (2 ಥೆಸಲೊನೀಕ 3:10) ಆ ಧನಿಕನು ಮಾಡಿದ ತಪ್ಪು ಏನೆಂದರೆ, ಅವನು ‘ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗಲು’ ಮಾಡಬೇಕಾಗಿದ್ದ ಕೆಲಸಗಳನ್ನು ಮಾಡಲಿಲ್ಲ. ತನ್ನ ಐಹಿಕ ಸ್ವತ್ತನ್ನು ಅನೇಕ ವರ್ಷಗಳ ಕಾಲ ಅವನು ಅನುಭವಿಸಶಕ್ತನಾಗಿದ್ದರೂ, ಅವನು ಕೊನೆಗೆ ಸಾಯಲಿದ್ದನು. ಅವನು ನಿತ್ಯತೆಯ ಕುರಿತು ಯೋಚಿಸಲಿಲ್ಲ, ಅಂದರೆ ಅವನು ದೂರದೃಷ್ಟಿಯುಳ್ಳವನಾಗಿರಲಿಲ್ಲ.
16. ಭದ್ರವಾದ ಭವಿಷ್ಯತ್ತಿಗಾಗಿ ನಾವು ಯೆಹೋವನ ಮೇಲೆ ಪೂರ್ಣ ಭರವಸೆಯಿಂದ ಏಕೆ ಆತುಕೊಳ್ಳಸಾಧ್ಯವಿದೆ?
16 ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಯೆಹೋವನೊಂದಿಗೆ ನಡೆಯುವುದು, ಪ್ರಾಯೋಗಿಕವೂ ದೂರದೃಷ್ಟಿಯುಳ್ಳದ್ದೂ ಆಗಿದೆ. ಅದು ಭವಿಷ್ಯತ್ತಿಗಾಗಿ ಯೋಜಿಸುವ ಅತ್ಯುತ್ತಮ ಮಾರ್ಗವೂ ಆಗಿದೆ. ವಿದ್ಯಾಭ್ಯಾಸ, ಉದ್ಯೋಗ, ಮತ್ತು ಕುಟುಂಬ ಜವಾಬ್ದಾರಿಗಳ ವಿಷಯದಲ್ಲಿ ಪ್ರಾಯೋಗಿಕ ಯೋಜನೆಗಳನ್ನು ಮಾಡುವುದು ವಿವೇಕಪ್ರದವಾಗಿರುವುದಾದರೂ, ಯೆಹೋವನು ತನ್ನ ನಿಷ್ಠಾವಂತ ಸೇವಕರನ್ನು ಎಂದಿಗೂ ತ್ಯಜಿಸುವುದಿಲ್ಲ ಎಂಬುದನ್ನು ನಾವು ಯಾವಾಗಲೂ ಜ್ಞಾಪಕದಲ್ಲಿಟ್ಟುಕೊಳ್ಳಬೇಕು. ರಾಜ ದಾವೀದನು ಹಾಡಿದ್ದು: “ನಾನು ಬಾಲಕನಾಗಿದ್ದೆನು, ಈಗ ವೃದ್ಧನಾಗಿದ್ದೇನೆ; ಈ ವರೆಗೂ ನೀತಿವಂತನು ದಿಕ್ಕಿಲ್ಲದೆ ಬಿದ್ದಿರುವದನ್ನಾಗಲಿ ಅವನ ಸಂತತಿಯವರು ಭಿಕ್ಷೆಬೇಡಿ ತಿನ್ನುವದನ್ನಾಗಲಿ ನೋಡಲಿಲ್ಲ.” (ಕೀರ್ತನೆ 37:25) ತನ್ನ ರಾಜ್ಯವನ್ನು ಪ್ರಥಮವಾಗಿ ಹುಡುಕುವವರಿಗೆ ಮತ್ತು ತನ್ನ ನೀತಿಯ ಮಾರ್ಗಗಳಲ್ಲಿ ಯೆಹೋವನು ನಡೆಯುವವರಿಗೆ ಬೇಕಾದುದನ್ನು ಒದಗಿಸುವನೆಂಬ ಆಶ್ವಾಸನೆಯನ್ನು ಯೇಸು ಕೊಟ್ಟನು.—ಮತ್ತಾಯ 6:33.
17. ಅಂತ್ಯವು ಹತ್ತಿರವಿದೆ ಎಂದು ನಮಗೆ ಹೇಗೆ ಗೊತ್ತು?
17 ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ದೇವರಿಗೆ ಸೇವೆಸಲ್ಲಿಸುವುದಾದರೂ, ಅದರೊಂದಿಗೆ ನಾವು ಯೆಹೋವನ ದಿನವನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇವೆ. ಆ ದಿನವು ತೀರ ಹತ್ತಿರವಾಗಿದೆ ಎಂಬುದಕ್ಕೆ ಬೈಬಲ್ ಪ್ರವಾದನೆಯ ನೆರವೇರಿಕೆಯು ಸಾಕ್ಷ್ಯನೀಡುತ್ತದೆ. ಯುದ್ಧಗಳು, ಅಂಟುರೋಗಗಳು, ಭೂಕಂಪಗಳು, ಆಹಾರದ ಅಭಾವಗಳು, ಇವುಗಳೊಂದಿಗೆ ಸತ್ಯ ಕ್ರೈಸ್ತರ ಮೇಲಾಗುವ ಹಿಂಸೆ ಹಾಗೂ ದೇವರ ರಾಜ್ಯದ ಸುವಾರ್ತೆಯ ಭೌಗೋಲಿಕ ಸಾರುವಿಕೆಯು, ಈ ಶತಮಾನದ ವಿಶಿಷ್ಟ ಲಕ್ಷಣವಾಗಿದೆ. ಇವುಗಳೆಲ್ಲವು, ಈ ದುಷ್ಟ ವ್ಯವಸ್ಥೆಯ ವಿಷಯಗಳ ಅಂತ್ಯದ ವೈಶಿಷ್ಟ್ಯಗಳಾಗಿವೆ. (ಮತ್ತಾಯ 24:7-14; ಲೂಕ 21:11) ಈ ಲೋಕವು “ಸ್ವಾರ್ಥಚಿಂತಕರೂ ಹಣದಾಸೆಯವರೂ ಬಡಾಯಿಕೊಚ್ಚುವವರು ಅಹಂಕಾರಿಗಳೂ ದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಉಪಕಾರನೆನಸದವರೂ ದೇವಭಯವಿಲ್ಲದವರೂ ಮಮತೆಯಿಲ್ಲದವರೂ ಸಮಾಧಾನವಾಗದವರೂ ಚಾಡಿಹೇಳುವವರೂ ದಮೆಯಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೇದನ್ನು ಪ್ರೀತಿಸದವರೂ ದ್ರೋಹಿಗಳೂ ದುಡುಕಿನವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸದೆ ಭೋಗಗಳನ್ನೇ ಪ್ರೀತಿಸುವವರೂ ಭಕ್ತಿಯ ವೇಷವಿದ್ದು ಅದರ ಬಲವನ್ನು ಬೇಡವೆನ್ನುವವರೂ ಆಗಿರುವ” ಜನರಿಂದ ತುಂಬಿತುಳುಕುತ್ತಿದೆ. (2 ತಿಮೊಥೆಯ 3:1-5) ಯೆಹೋವನ ಸೇವಕರಾದ ನಮಗೆ, ಈ ಕಠಿನವಾದ ಕಡೇ ದಿವಸಗಳಲ್ಲಿ ಜೀವಿತವು ತುಂಬ ಕಷ್ಟಕರವಾದದ್ದಾಗಿದೆ. ಯೆಹೋವನ ರಾಜ್ಯವು ಎಲ್ಲಾ ಕೆಟ್ಟತನವನ್ನು ನಿರ್ನಾಮಮಾಡಲಿರುವ ಆ ದಿನಕ್ಕಾಗಿ ನಾವು ಬಹಳವಾಗಿ ಹಾತೊರೆಯುತ್ತೇವಲ್ಲವೇ! ಅಲ್ಲಿಯ ತನಕ, ನಾವು ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರೊಂದಿಗೆ ನಡೆಯುವ ದೃಢನಿರ್ಧಾರ ಮಾಡೋಣ.
ಅಂತ್ಯರಹಿತ ಜೀವಿತವನ್ನು ಮನಸ್ಸಿನಲ್ಲಿಟ್ಟುಕೊಂಡು ಸೇವೆಸಲ್ಲಿಸುವುದು
18, 19. ಗತಕಾಲದ ನಂಬಿಗಸ್ತರು, ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರಿಗೆ ಹೇಗೆ ಸೇವೆಸಲ್ಲಿಸಿದರು?
18 ನಾವು ಯೆಹೋವನೊಂದಿಗೆ ನಡೆದಂತೆ, ಹೇಬೆಲ, ಹನೋಕ, ನೋಹ, ಅಬ್ರಹಾಮ, ಮತ್ತು ಸಾರಳ ನಂಬಿಕೆಯ ಮಾದರಿಯನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳೋಣ. ಅವರ ಕುರಿತು ತಿಳಿಸುತ್ತಾ ಪೌಲನು ಬರೆದುದು: “ಇವರೆಲ್ಲರು ವಾಗ್ದಾನದ ಫಲಗಳನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ಉಲ್ಲಾಸದೊಡನೆ ವಂದಿಸಿ ನಂಬಿಕೆಯುಳ್ಳವರಾಗಿ ಮೃತರಾದರು. ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿಗಳೂ ಆಗಿದ್ದೇವೆಂದು ಒಪ್ಪಿಕೊಂಡರು.” (ಇಬ್ರಿಯ 11:13) ಆ ನಂಬಿಗಸ್ತರು “ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ”ರಾಗಿದ್ದರು. (ಇಬ್ರಿಯ 11:16) ನಂಬಿಕೆಯಿಂದಲೇ ಅವರು ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಆಳ್ವಿಕೆಯಲ್ಲಿ ಒಂದು ಉತ್ತಮ ಸ್ಥಾನಕ್ಕಾಗಿ ಎದುರುನೋಡಿದರು. ಆ ಉತ್ತಮ ಸ್ಥಳದಲ್ಲಿ, ಅಂದರೆ ರಾಜ್ಯದ ಆಳ್ವಿಕೆಯ ಕೆಳಗಿನ ಭೌಮಿಕ ಪ್ರಮೋದವನದಲ್ಲಿ, ದೇವರು ಅವರಿಗೆ ಅನಂತ ಜೀವನವನ್ನು ಬಹುಮಾನಿಸುವನೆಂಬ ವಿಷಯದಲ್ಲಿ ನಾವು ನಿಶ್ಚಯದಿಂದಿರಬಹುದು.—ಇಬ್ರಿಯ 11:39, 40.
19 ದೇವರನ್ನು ಎಲ್ಲಾ ನಿತ್ಯತೆಗೂ ಆರಾಧಿಸುವ ಯೆಹೋವನ ಜನರ ದೃಢನಿಶ್ಚಯವನ್ನು ಪ್ರವಾದಿಯಾದ ಮೀಕನು ವ್ಯಕ್ತಪಡಿಸಿದನು. ಅವನು ಬರೆದುದು: “ಅನ್ಯಜನಾಂಗಗಳು ತಮ್ಮ ತಮ್ಮ ದೇವರುಗಳ ಹೆಸರಿನಲ್ಲಿ ನಡೆಯುತ್ತವೆ; ನಾವಾದರೋ ನಮ್ಮ ದೇವರಾದ ಯೆಹೋವನ ಹೆಸರಿನಲ್ಲಿ ಯುಗಯುಗಾಂತರಗಳಲ್ಲಿ ನಡೆಯುವೆವು.” (ಮೀಕ 4:5) ಮೀಕನು ನಿಷ್ಠೆಯಿಂದ ತನ್ನ ಮರಣದ ವರೆಗೆ ಯೆಹೋವನಿಗೆ ಸೇವೆಸಲ್ಲಿಸಿದನು. ಹೊಸ ಲೋಕದಲ್ಲಿ ಪುನರುತ್ಥಾನಗೊಂಡ ಬಳಿಕವೂ, ಆ ಪ್ರವಾದಿಯು ಸದಾಕಾಲಕ್ಕೂ ದೇವರೊಂದಿಗೆ ನಡೆಯುವುದನ್ನು ಮುಂದುವರಿಸುವನು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಅಂತ್ಯದ ಸಮಯದಲ್ಲಿ ಜೀವಿಸುತ್ತಿರುವ ನಮಗೆಲ್ಲರಿಗೂ ಇವರು ಎಂತಹ ಉತ್ತಮ ಮಾದರಿಯಾಗಿದ್ದಾರೆ!
20. ನಮ್ಮ ದೃಢನಿಶ್ಚಯವು ಏನಾಗಿರಬೇಕು?
20 ನಾವು ಆತನ ಹೆಸರಿಗಾಗಿ ತೋರಿಸುವ ಪ್ರೀತಿಯನ್ನು ಯೆಹೋವನು ಗಣ್ಯಮಾಡುತ್ತಾನೆ. (ಇಬ್ರಿಯ 6:10) ಪಿಶಾಚನ ಅಧಿಕಾರದಲ್ಲಿರುವ ಈ ಲೋಕದಲ್ಲಿ ಸಮಗ್ರತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರವೆಂದು ಆತನಿಗೆ ಗೊತ್ತಿದೆ. ಯಾಕೆಂದರೆ ‘ಲೋಕವು . . . ಗತಿಸಿಹೋಗುತ್ತದೆ’ಯಾದರೂ, “ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17; 5:19) ಹಾಗಾದರೆ, ಯೆಹೋವನ ಸಹಾಯದಿಂದ ನಾವು ಅನುದಿನವೂ ಎದುರಿಸುವ ಪರೀಕ್ಷೆಗಳನ್ನು ತಾಳಿಕೊಳ್ಳಲು ದೃಢನಿಶ್ಚಯ ಮಾಡಿಕೊಳ್ಳೋಣ. ನಮ್ಮ ಆಲೋಚನಾರೀತಿ ಹಾಗೂ ಜೀವನ ಕ್ರಮವು, ನಮ್ಮ ಪ್ರೀತಿಪರ ಸ್ವರ್ಗೀಯ ತಂದೆಯು ವಾಗ್ದಾನಿಸಿರುವ ಅದ್ಭುತಕರ ಆಶೀರ್ವಾದಗಳ ಮೇಲೆ ಕೇಂದ್ರೀಕರಿಸುವಂತಾಗಲಿ. ನಾವು ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರೊಂದಿಗೆ ನಡೆಯುತ್ತಾ ಇರುವಲ್ಲಿ, ಆ ಆಶೀರ್ವಾದಗಳು ನಮ್ಮದಾಗುವವು.—ಯೂದ 20, 21.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
◻ ದೇವರು ವಿಧೇಯ ಮಾನವರಿಗೆ ಯಾವ ಉದ್ದೇಶವನ್ನು ಇಟ್ಟಿದ್ದಾನೆ?
◻ ಭಕ್ತಿಹೀನ ಲೋಕಕ್ಕೆ ಅಂತ್ಯವನ್ನು ತರಲು ಯೆಹೋವನು ಇನ್ನೂ ಏಕೆ ಕ್ರಿಯೆಗೈದಿಲ್ಲ?
◻ ದೇವರು ಅಂತ್ಯವನ್ನು ಯಾವಾಗ ತರುವನೆಂಬುದರ ಕುರಿತಾದ ಅಜ್ಞಾನವು, ನಮ್ಮ ಹುರುಪನ್ನು ಏಕೆ ಕಡಿಮೆಮಾಡಬಾರದು?
◻ ನಿತ್ಯತೆಯನ್ನು ಮನಸ್ಸಿನಲ್ಲಿಟ್ಟುಕೊಂಡು ದೇವರೊಂದಿಗೆ ನಡೆಯುವುದರ ಕೆಲವು ಪ್ರಯೋಜನಗಳಾವುವು?
[ಪುಟ 17 ರಲ್ಲಿರುವ ಚಿತ್ರ]
ನಾವು ದೇವರೊಂದಿಗೆ ನಡೆಯಬೇಕಾದರೆ, ಕ್ರಿಸ್ತನ ಆದಿ ಶಿಷ್ಯರು ಮಾಡಿದಂತೆಯೇ ಹುರುಪಿನಿಂದ ಆತನಿಗೆ ಸೇವೆಸಲ್ಲಿಸಬೇಕು