ಅಧ್ಯಾಯ 77
ಹಕ್ಕುಬಾಧ್ಯತೆಯ ಪ್ರಶ್ನೆ
ಯೇಸುವು ಫರಿಸಾಯನ ಮನೆಯಲ್ಲಿ ಊಟ ಮಾಡುತ್ತಾನೆಂದು ಜನರಿಗೆ ತಿಳಿದಿತ್ತು ಎಂದು ವ್ಯಕ್ತವಾಗುತ್ತದೆ. ಆದುದರಿಂದ ಸಾವಿರಾರು ಜನರು ಅಲ್ಲಿ ಕೂಡಿಬಂದಿದ್ದರು ಮತ್ತು ಯೇಸುವು ಹೊರಗೆ ಬರುವದನ್ನು ಕಾದು ನಿಂತಿದ್ದರು. ಯೇಸುವನ್ನು ವಿರೋಧಿಸಿ, ಅವನನ್ನು ಯಾವದಾದರೊಂದು ತಪ್ಪಿನಲ್ಲಿ ಹಿಡಿಯಲು ಪ್ರಯತ್ನಿಸುವ ಫರಿಸಾಯರಿಗಿಂತ ವ್ಯತಿರಿಕ್ತವಾಗಿ, ಈ ಜನರು ಗಣ್ಯತೆಯಿಂದ ಯೇಸುವಿನ ಮಾತುಗಳನ್ನು ಆಲಿಸಲು ಆಸಕ್ತರಾಗಿದ್ದರು.
ಮೊದಲು ಅವನ ಶಿಷ್ಯರೆಡೆಗೆ ತಿರುಗಿ, ಯೇಸುವು ಹೇಳಿದ್ದು: “ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ್ರಿ.” ಊಟದ ಸಮಯದಲ್ಲಿ ಪ್ರದರ್ಶಿಸಲ್ಪಟ್ಟಂತೆ, ಫರಿಸಾಯರ ಇಡೀ ಧಾರ್ಮಿಕ ವ್ಯವಸ್ಥೆಯೇ ಕಪಟತನದಿಂದ ತುಂಬಿಹೋಗಿತ್ತು. ಆದರೆ ಅವರ ಧರ್ಮಶೃದ್ಧೆಯ ಹೊರಗಣ ವೇಷದಿಂದ ಫರಿಸಾಯರು ತಮ್ಮ ದುಷ್ಟತನವನ್ನು ಅಡಗಿಸಬಹುದಾದರೂ, ಕಟ್ಟಕಡೆಗೆ ಅದು ಬೆಳಕಿಗೆ ಬರುವದು. “ಮರೆಯಾಗಿರುವ ಯಾವದೂ ವ್ಯಕ್ತವಾಗದೆ ಇರುವದಿಲ್ಲ,” ಯೇಸು ಹೇಳುತ್ತಾನೆ, “ಹೊರಪಡದ ರಹಸ್ಯವೂ ಇಲ್ಲ.”
ಗಲಿಲಾಯದ ಸಾರುವಿಕೆಯ ಸಂಚಾರದಲ್ಲಿ ಅವನು 12 ಮಂದಿಯನ್ನು ಕಳುಹಿಸಿದಾಗ ಕೊಟ್ಟ ಪ್ರೋತ್ಸಾಹನೆಯನ್ನು ಯೇಸುವು ಪುನರಾವರ್ತಿಸುತ್ತಾನೆ. ಅವನು ಹೇಳುವದು: “ದೇಹವನ್ನು ಕೊಂದು ಅದಕ್ಕಿಂತ ಹೆಚ್ಚಿನದೇನೂ ಮಾಡಲಾರದವರಿಗೆ ಹೆದರಬೇಡಿರಿ.” ದೇವರು ಒಂದು ಚಿಕ್ಕ ಗುಬ್ಬಿಯನ್ನು ಕೂಡ ಮರೆಯುವದಿಲ್ಲವಾದ್ದರಿಂದ, ಅವರನ್ನು ಕೂಡ ಮರೆಯಲಾರನು ಎಂದು ತನ್ನ ಹಿಂಬಾಲಕರಿಗೆ ಯೇಸುವು ಆಶ್ವಾಸನೆಯನ್ನೀಯುತ್ತಾನೆ. ಅವನು ಹೇಳುವದು: “ಅವರು ನಿಮ್ಮನ್ನು ಸಭಾಮಂದಿರಗಳ ಅಧ್ಯಕ್ಷರ ಮುಂದಕ್ಕೂ ಅಧಿಕಾರಿಗಳ ಮುಂದಕ್ಕೂ ಅಧಿಪತಿಗಳ ಮುಂದಕ್ಕೂ ಹಿಡುಕೊಂಡು ಹೋಗುವಾಗ . . . ನೀವು ಹೇಳತಕ್ಕದ್ದನ್ನು ಪವಿತ್ರಾತ್ಮನು ಆ ಗಳಿಗೆಯಲ್ಲಿಯೇ ನಿಮಗೆ ಕಲಿಸಿಕೊಡುವನು.”
ಆಗ ಜನರ ಗುಂಪಿನಿಂದ ಒಬ್ಬನು ಮಾತಾಡುತ್ತಾನೆ. “ಬೋಧಕನೇ,” ಅವನು ವಿನಂತಿಸುತ್ತಾನೆ, “ತಂದೆಯ ಆಸ್ತಿಯನ್ನು ನನಗೆ ಪಾಲುಮಾಡಿಕೊಡುವಂತೆ ನನ್ನ ಅಣ್ಣನಿಗೆ ಹೇಳು.” ಮೋಶೆಯ ನಿಯಮಶಾಸ್ತ್ರದ ಪ್ರಕಾರ ಚೊಚ್ಚಲಮಗನಿಗೆ ಆಸ್ತಿಯ ಎರಡು ಪಾಲು ಹೋಗಬೇಕೆಂದು ನಿರ್ದೇಶಿಸಿದೆ, ಆದುದರಿಂದ ಅಲ್ಲಿ ವಿವಾದಕ್ಕೆ ಯಾವುದೇ ಕಾರಣ ಇರುವದಿಲ್ಲ. ಆದರೆ ಹಕ್ಕಿನ ಆಸ್ತಿಯ ಕಾನೂನುಬದ್ಧ ಪಾಲಿಗಿಂತಲೂ ಈ ಮನುಷ್ಯನು ಹೆಚ್ಚನ್ನು ಪ್ರಾಯಶಃ ಬಯಸುತ್ತಿದ್ದನು ಎಂದು ತಿಳಿದುಬರುತ್ತದೆ.
ಯೇಸುವು ನ್ಯಾಯಬದ್ಧವಾಗಿಯೇ ಇದರಲ್ಲಿ ಒಳಗೂಡಲು ನಿರಾಕರಿಸುತ್ತಾನೆ. “ಎಲಾ ಮನುಷ್ಯಾ, ನನ್ನನ್ನು ನಿನ್ನ ನ್ಯಾಯಾಧಿಪತಿಯಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು?” ಅವನು ಪ್ರಶ್ನಿಸುತ್ತಾನೆ. ಅನಂತರ ಅವನು ಜನಸಮೂಹಕ್ಕೆ ಒಂದು ಪ್ರಮುಖ ಎಚ್ಚರಿಕೆಯನ್ನು ಕೊಡುತ್ತಾನೆ: “ಎಲ್ಲಾ ಲೋಭಕ್ಕೂ ಎಚ್ಚರಿಕೆಯಾಗಿದ್ದು ನಿಮ್ಮನ್ನು ಕಾಪಾಡಿಕೊಳ್ಳಿರಿ. ಒಬ್ಬನಿಗೆ ಎಷ್ಟು ಆಸ್ತಿಯಿದ್ದರೂ ಅದು ಅವನಿಗೆ ಜೀವಾಧಾರವಾಗುವದಿಲ್ಲ.” ಹೌದು, ಒಬ್ಬ ಮನುಷ್ಯನು ಎಷ್ಟೇ ಮೊತ್ತದ ಆಸ್ತಿಯನ್ನು ಸಂಪಾದಿಸಲಿ, ಅವನು ಸಾಮಾನ್ಯವಾಗಿ ಸಾಯುವನು ಮತ್ತು ಅದೆಲ್ಲಾವನ್ನು ಹಿಂದಕ್ಕೆ ಬಿಟ್ಟು ಹೋಗುವನು. ಈ ವಾಸ್ತವತೆಯನ್ನು ಒತ್ತಿಹೇಳಲು ಮತ್ತು ದೇವರೊಂದಿಗೆ ಒಂದು ಉತ್ತಮ ಹೆಸರನ್ನು ಮಾಡಿಕೊಳ್ಳಲು ಒಬ್ಬನು ತಪ್ಪುವದರಲ್ಲಿ ಇರುವ ವ್ಯರ್ಥತೆಯನ್ನು ತೋರಿಸಲು, ಯೇಸುವು ಒಂದು ಸಾಮ್ಯವನ್ನು ಬಳಸುತ್ತಾನೆ. ಅವನು ವಿವರಿಸುವದು:
“ಒಬ್ಬಾನೊಬ್ಬ ಐಶ್ವರ್ಯವಂತನ ಭೂಮಿಯು ಚೆನ್ನಾಗಿ ಬೆಳೆಯಿತು. ಆಗ ಅವನು ತನ್ನೊಳಗೆ—ನಾನೇನು ಮಾಡಲಿ? ನನ್ನ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲವಲ್ಲಾ ಎಂದು ಆಲೋಚಿಸಿ—ಒಂದು ಕೆಲಸ ಮಾಡುತ್ತೇನೆ; ನನ್ನ ಕಣಜಗಳನ್ನು ಕೀಳಿಸಿ ಅವುಗಳಿಗಿಂತ ದೊಡ್ಡ ಕಣಜಗಳನ್ನು ಕಟ್ಟಿಸುವೆನು; ಅಲ್ಲಿ ನನ್ನ ಎಲ್ಲಾ ದವಸಧಾನ್ಯಗಳನ್ನೂ ಸರಕುಗಳನ್ನೂ ತುಂಬಿಟ್ಟು ನನ್ನ ಜೀವಾತ್ಮಕ್ಕೆ—ಜೀವವೇ, ಅನೇಕ ವರ್ಷಗಳಿಗೆ ಬೇಕಾದಷ್ಟು, ಸರಕು ನಿನಗೆ ಬಿದ್ದದೆ; ವಿಶ್ರಮಿಸಿಕೋ, ಊಟಮಾಡು, ಕುಡಿ, ಸುಖಪಡು ಎಂದು ಹೇಳುವೆನು ಅಂದುಕೊಂಡನು. ಆದರೆ ದೇವರು ಅವನಿಗೆ—ಬುದ್ಧಿಹೀನನು ನೀನು! ಈ ಹೊತ್ತು ರಾತ್ರಿ ನಿನ್ನ ಪ್ರಾಣವನ್ನು ನಿನ್ನ ಕಡೆಯಿಂದ ಕೇಳುವರು. ಆಗ ನೀನು ಸಿದ್ಧಮಾಡಿಟ್ಟಿರುವದು ಯಾರಿಗಾಗುವದು?”
ಸಮಾಪ್ತಿಯಲ್ಲಿ ಯೇಸುವು ಹೇಳುವದು: “ತನಗೋಸ್ಕರ ದ್ರವ್ಯವನ್ನಿಟ್ಟುಕೊಂಡು ದೇವರ ವಿಷಯಗಳಲ್ಲಿ ಐಶ್ವರ್ಯವಂತನಾಗದೆ ಇರುವವನು ಅವನಂತೆಯೇ ಇದ್ದಾನೆ.” ಐಶ್ವರ್ಯವನ್ನು ಶೇಖರಿಸಿ ಇಡುವ ವ್ಯರ್ಥತೆಗೆ ಅವನ ಶಿಷ್ಯರು ಒಂದುವೇಳೆ ಬಲಿಬೀಳದೆ ಇರಬಹುದಾದರೂ, ಅವರ ಜೀವನದ ದೈನಂದಿನ ಚಿಂತೆಗಳು ಕೂಡ ಅವರನ್ನು ಯೆಹೋವನ ಪೂರ್ಣಾತ್ಮದ ಸೇವೆಯಿಂದ ಅಪಕರ್ಶಿಸಬಲ್ಲವು. ಆದುದರಿಂದ ಯೇಸುವು ಸುಮಾರು ಒಂದೂವರೆ ವರ್ಷಗಳ ಹಿಂದೆ ಪರ್ವತ ಪ್ರಸಂಗದಲ್ಲಿ ನೀಡಿದ ಬುದ್ಧಿವಾದವನ್ನು ಅವನು ಪುನಃ ಹೇಳುತ್ತಾನೆ. ಅವನ ಶಿಷ್ಯರ ಕಡೆಗೆ ತಿರುಗಿ ಅವನನ್ನುವದು:
“ಈ ಕಾರಣದಿಂದ ಪ್ರಾಣಧಾರಣೆಗೆ ಏನು ಮಾಡಬೇಕು? ದೇಹರಕ್ಷಣೆಗೆ ಏನು ಹೊದ್ದುಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ ಎಂಬದಾಗಿ ನಿಮಗೆ ಹೇಳುತ್ತೇನೆ. . . . ಕಾಗೆಗಳನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ಬಿತ್ತುವದಿಲ್ಲ, ಕೊಯ್ಯುವದಿಲ್ಲ, ಅವುಗಳಿಗೆ ಉಗ್ರಾಣವೂ ಇಲ್ಲ, ಕಣಜವೂ ಇಲ್ಲ; ಆದಾಗ್ಯೂ ದೇವರು ಅವುಗಳನ್ನು ಸಾಕಿ ಸಲಹುತ್ತಾನೆ. . . . ಹೂವುಗಳು ಬೆಳೆಯುವ ರೀತಿಯನ್ನು ಲಕ್ಷ್ಯವಿಟ್ಟು ಯೋಚಿಸಿರಿ; ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದರೂ ಈ ಹೂವುಗಳೊಳಗೆ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ. . . .
“ಏನು ಊಟಮಾಡಬೇಕು? ಏನು ಕುಡಿಯಬೇಕು ಎಂದು ತವಕಪಡುತ್ತಾ ಇರಬೇಡಿರಿ, ಮತ್ತು ಅನುಮಾನ ಪಡುತ್ತಾ ಇರಬೇಡಿರಿ. ಇವೆಲ್ಲವುಗಳ ಮೇಲೆ ಇಹಲೋಕದ ಜನಗಳು ತವಕಪಡುತ್ತಾರೆ; ಇವು ನಿಮಗೆ ಆವಶ್ಯವೆಂದು ನಿಮ್ಮ ತಂದೆಗೆ ತಿಳಿದಿದೆ. ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡುತ್ತಾ ಇರ್ರಿ. [NW] ಮತ್ತು ಇದರ ಕೂಡ ಅವು ನಿಮಗೆ ದೊರಕುವವು.”
ವಿಶೇಷವಾಗಿ ಆರ್ಥಿಕ ಅಡಚಣೆಯ ಸಮಯದಲ್ಲಿ ಯೇಸುವಿನ ಈ ಮಾತುಗಳು ನಿಕಟವಾದ ಗಮನಕ್ಕೆ ಅರ್ಹವಾಗಿವೆ. ಪ್ರಾಪಂಚಿಕ ಆವಶ್ಯಕತೆಗಳ ಕುರಿತು ಅತಿಯಾಗಿ ಚಿಂತಿಸುವವನು ಮತ್ತು ಆತ್ಮಿಕ ವಿಷಯಗಳ ಬೆನ್ನಟ್ಟುವಿಕೆಗಳಲ್ಲಿ ಸ್ವಲ್ಪ ನಿಧಾನಿಸಲು ಆರಂಭಿಸುವವನು, ವಾಸ್ತವದಲ್ಲಿ, ದೇವರಿಗೆ ತನ್ನ ಸೇವಕರಿಗೆ ಒದಗಿಸುವದರಲ್ಲಿರುವ ಸಾಮರ್ಥ್ಯದಲ್ಲಿ ನಂಬಿಕೆಯ ಕೊರತೆಯನ್ನು ಪ್ರದರ್ಶಿಸುತ್ತಾನೆ. ಲೂಕ 12:1-31; ಧರ್ಮೋಪದೇಶಕಾಂಡ 21:17.
▪ ಪ್ರಾಯಶಃ ಯಾಕೆ ಹಕ್ಕಿನ ಆಸ್ತಿಯ ಕುರಿತು ಆ ಮನುಷ್ಯನು ಕೇಳುತ್ತಾನೆ, ಮತ್ತು ಯೇಸುವು ಯಾವ ಎಚ್ಚರಿಕೆಯನ್ನು ಕೊಡುತ್ತಾನೆ?
▪ ಯಾವ ಸಾಮ್ಯವನ್ನು ಯೇಸುವು ಉಪಯೋಗಿಸುತ್ತಾನೆ, ಮತ್ತು ಅದರ ಮುಖ್ಯ ತಾತ್ಪರ್ಯವೇನು?
▪ ಯಾವ ಬುದ್ಧಿವಾದವನ್ನು ಯೇಸುವು ಪುನಃ ಹೇಳುತ್ತಾನೆ, ಮತ್ತು ಅದು ಯಾಕೆ ಸಮಂಜಸತೆಯದ್ದಾಗಿತ್ತು?