ಅಧ್ಯಾಯ 78
ಸಿದ್ಧವಾಗಿಟ್ಟುಕೊಳ್ಳಿರಿ!
ಲೋಭತ್ವದ ಕುರಿತು ಜನರ ಗುಂಪುಗಳನ್ನು ಎಚ್ಚರಿಸಿದ ನಂತರ ಮತ್ತು ಪ್ರಾಪಂಚಿಕ ವಸ್ತುಗಳ ಕಡೆಗೆ ಅನಗತ್ಯವಾದ ಗಮನವನ್ನು ಕೊಡುವದರ ಕುರಿತು ತನ್ನ ಶಿಷ್ಯರಿಗೆ ಜಾಗ್ರತೆಯನ್ನಿತ್ತ ಬಳಿಕ, ಯೇಸುವು ಉತ್ತೇಜಿಸುವದು: “ಚಿಕ್ಕಹಿಂಡೇ, ಹೆದರಬೇಡ; ಆ ರಾಜ್ಯವನ್ನು ನಿಮಗೆ ದಯಪಾಲಿಸುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.” ಈ ರೀತಿಯಲ್ಲಿ ಕೇವಲ ಕೊಂಚ ಸಂಖ್ಯೆಯವರು ಮಾತ್ರ (ಅನಂತರ 1,44,000 ಮಂದಿ ಎಂದು ಗುರುತಿಸಲ್ಪಟ್ಟಿದ್ದಾರೆ) ಸ್ವರ್ಗೀಯ ರಾಜ್ಯದಲ್ಲಿ ಇರುವರು ಎಂದವನು ಪ್ರಕಟಿಸುತ್ತಾನೆ. ನಿತ್ಯಜೀವವನ್ನು ಪಡೆಯುವ ಅಧಿಕಸಂಖ್ಯಾತರು ಆ ರಾಜ್ಯದ ಪ್ರಜೆಗಳಾಗಿರುವರು.
“ಆ ರಾಜ್ಯ” ಎಂಥಾ ಒಂದು ಅದ್ಭುತಕರ ಕೊಡುಗೆ! ಅದನ್ನು ಪಡೆಯಲು ಶಿಷ್ಯರಲ್ಲಿರಬೇಕಾದ ಯೋಗ್ಯ ಪ್ರತಿವರ್ತನೆಯ ಕುರಿತು ವಿವರಿಸುತ್ತಾ, ಯೇಸುವು ಅವರನ್ನು ಉತ್ತೇಜಿಸುವದು: “ನಿಮಗಿರುವದನ್ನು ಮಾರಿಬಿಟ್ಟು ದಾನಾಕೊಡಿರಿ.” ಹೌದು, ಅವರು ತಮ್ಮ ಆಸ್ತಿಗಳನ್ನು ಆತ್ಮಿಕವಾಗಿ ಇತರರಿಗೆ ಪ್ರಯೋಜನವಾಗುವ ರೀತಿಯಲ್ಲಿ ಬಳಸತಕ್ಕದ್ದು ಮತ್ತು ಈ ರೀತಿಯಲ್ಲಿ “ಪರಲೋಕದಲ್ಲಿ ಎಂದಿಗೂ ಲಯವಾಗದ ದ್ರವ್ಯವನ್ನು” ಹೆಚ್ಚಿಸಲು ಸಾಧ್ಯವಾಗುತ್ತದೆ.
ಯೇಸುವು ಅನಂತರ, ತನ್ನ ಶಿಷ್ಯರು ತನ್ನ ಹಿಂತೆರಳಿ ಬರುವಿಕೆಗಾಗಿ ಸಿದ್ಧರಾಗಿರುವಂತೆ ಎಚ್ಚರಿಸುತ್ತಾನೆ. ಅವನು ಹೇಳುವದು: “ನಿಮ್ಮ ನಡುಗಳು ಕಟ್ಟಿರಲಿ; ನಿಮ್ಮ ದೀವಟಿಗೆಗಳು ಉರಿಯುತ್ತಾ ಇರಲಿ. ನೀವಂತೂ ತಮ್ಮ ಯಜಮಾನನು ಬಂದು ತಟ್ಟಿದ ಕೂಡಲೇ ಕದವನ್ನು ತೆರೆಯುವದಕ್ಕೆ ಸಿದ್ಧವಾಗಿದ್ದು ಮದುವೇ ಊಟವನ್ನು ಯಾವಾಗ ತೀರಿಸಿಕೊಂಡು ಬರುವನೋ ಎಂದು ಅವನನ್ನು ಎದುರುನೋಡುತ್ತಿರುವ ಮನುಷ್ಯರಂತಿರ್ರಿ. ಯಜಮಾನನು ಬಂದು ಯಾವ ಯಾವ ಆಳುಗಳು ಎಚ್ಚರವಾಗಿರುವದನ್ನು ಕಂಡುಕೊಳ್ಳುವನೋ ಆ ಆಳುಗಳೇ ಧನ್ಯರು. ಆತನೇ ನಡುಕಟ್ಟಿಕೊಂಡು ಅವರನ್ನು ಊಟಕ್ಕೆ ಕೂಡ್ರಿಸಿ ಹತ್ತರಕ್ಕೆ ಬಂದು ಅವರಿಗೆ ಸೇವೆ ಮಾಡುವನು ಎಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಈ ಸಾಮ್ಯದಲ್ಲಿ, ಸೇವಕರು ತಮ್ಮ ಉದ್ದವಾದ ನಿಲುವಂಗಿಗಳನ್ನು ಧರಿಸಿಕೊಂಡು ಮತ್ತು ನಡುಕಟ್ಟುಗಳನ್ನು ಕಟ್ಟಿಕೊಂಡು, ಎಣ್ಣೆ ತುಂಬಿದ ದೀವಟಿಗೆಗಳ ಬೆಳಕಿನ ಕೆಳಗೆ ರಾತ್ರಿಯ ಸಮಯದಲ್ಲಿ ತಮ್ಮ ಕರ್ತವ್ಯಗಳನ್ನು ಪೂರೈಸಲು ನಿರತರಾಗಿರುವದು, ಯಜಮಾನನು ಹಿಂತೆರಳಿ ಬಂದಾಗ ಸೇವಕರು ಸಿದ್ಧರಾಗಿರುತ್ತಾರೆಂಬದನ್ನು ತೋರಿಸುತ್ತದೆ. ಯೇಸುವು ವಿವರಿಸುವದು: ‘ಯಜಮಾನನು ಎರಡನೆಯ ಜಾವದಲ್ಲಿಯಾಗಲಿ [ಸುಮಾರು ರಾತ್ರಿ ಒಂಭತ್ತು ಗಂಟೆಯಿಂದ ಮಧ್ಯರಾತ್ರಿಯ ತನಕ], ಮೂರನೆಯ ಜಾವದಲ್ಲಿಯಾಗಲಿ [ಮಧ್ಯರಾತ್ರಿಯಿಂದ ಬೆಳಿಗ್ಗೆಯ ಮೂರು ಗಂಟೆಯ ತನಕ] ಬಂದಾಗ ಆತನಿಗೆ ಹಾಗೆ ಕಾಣಿಸಿಕೊಂಡವರು ಧನ್ಯರು!’
ಯಜಮಾನನು ತನ್ನ ಸೇವಕರನ್ನು ಒಂದು ಅಸಾಮಾನ್ಯ ರೀತಿಯಲ್ಲಿ ಬಹುಮಾನಿಸುತ್ತಾನೆ. ಅವನು ಅವರನ್ನು ತನ್ನ ಮೇಜಲ್ಲಿ ಊಟಕ್ಕೆ ಕೂಡ್ರಿಸಿ, ಅವರ ಸೇವೆ ಮಾಡಲು ಆರಂಭಿಸುತ್ತಾನೆ. ಅವರನ್ನು ಅವನು ಸೇವಕರಂತೆ ಉಪಚರಿಸುವದಿಲ್ಲ, ಬದಲು ತನ್ನ ನಿಷ್ಠೆಯ ಸ್ನೇಹಿತರೋಪಾದಿ ಸತ್ಕರಿಸುತ್ತಾನೆ. ಯಜಮಾನನ ಹಿಂತೆರಳುವಿಕೆಯನ್ನು ನಿರೀಕ್ಷಿಸುತ್ತಾ ಇಡೀ ರಾತ್ರಿ ಕೆಲಸದಲ್ಲಿ ಅವರು ನಿರತರಾಗಿ ಮುಂದುವರಿದದ್ದಕ್ಕಾಗಿ ಎಂಥಾ ಒಂದು ಉತ್ತಮ ಬಹುಮಾನ! ಯೇಸುವು ಕೊನೆಗೊಳಿಸುವದು: “ನೀವು ಸಹ ಸಿದ್ಧವಾಗಿರ್ರಿ. ನೀವು ನೆನಸದ ಗಳಿಗೆಯಲ್ಲಿ ಮನುಷ್ಯಕುಮಾರನು ಬರುತ್ತಾನೆ.”
ಪೇತ್ರನು ಈಗ ಕೇಳುವದು: “ಸ್ವಾಮೀ, ನೀನು ಈ ಸಾಮ್ಯವನ್ನು ನಮಗೆ ಮಾತ್ರ ಹೇಳುತ್ತೀಯೋ? ಎಲ್ಲರಿಗೆ ಹೇಳುತ್ತೀಯೋ?”
ನೇರವಾಗಿ ಉತ್ತರಿಸುವದರ ಬದಲಾಗಿ, ಯೇಸುವು ಇನ್ನೊಂದು ಸಾಮ್ಯವನ್ನು ಕೊಡುತ್ತಾನೆ. “ಹೊತ್ತುಹೊತ್ತಿಗೆ ಅಶನಕ್ಕೆ ಬೇಕಾದದ್ದನ್ನು ಅಳೆದುಕೊಡುವದಕ್ಕಾಗಿ ಯಜಮಾನನು ತನ್ನ ಮನೆಯವರ [ಪರಿಚಾರಕರ ಮಂಡಲಿ] ಮೇಲೆ ನೇಮಿಸಿದ ನಂಬಿಗಸ್ತನೂ ವಿವೇಕಿಯೂ ಆಗಿರುವ ಮನೆವಾರ್ತೆಯವನು ಯಾರು?” ಎಂದವನು ಕೇಳುತ್ತಾನೆ. “ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು! ಅಂಥವನನ್ನು ಅವನು ತನ್ನ ಎಲ್ಲಾ ಆಸ್ತಿಯ ಮೇಲೆ ನೇಮಿಸುವನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.”
ಆ “ಯಜಮಾನನು” ಯೇಸು ಕ್ರಿಸ್ತನೆಂದು ವ್ಯಕ್ತವಾಗುತ್ತದೆ. “ಮನೆವಾರ್ತೆಯವನು” ಒಂದು ಸಾಮೂಹಿಕ ಮಂಡಲಿಯೋಪಾದಿ ಶಿಷ್ಯರುಗಳ “ಚಿಕ್ಕ ಹಿಂಡನ್ನು” ಚಿತ್ರಿಸುತ್ತಾನೆ. ಮತ್ತು “ಮನೆಯವರು [ಪರಿಚಾರಕರ ಮಂಡಲಿ]” ಅಂದರೆ ಸ್ವರ್ಗೀಯ ರಾಜ್ಯವನ್ನು ಪಡೆಯುವ 1,44,000 ಮಂದಿಯ ಅದೇ ಗುಂಪನ್ನು ಸೂಚಿಸುತ್ತದಾದರೂ, ಈ ಪದವು ವ್ಯಕ್ತಿಗತವಾಗಿ ಅವರ ಕೆಲಸವನ್ನು ಎತ್ತಿ ಹೇಳುತ್ತದೆ. ನಂಬಿಗಸ್ತ ಮನೆವಾರ್ತೆಯವನು ಜಾಗ್ರತೆ ವಹಿಸಬೇಕಾದ “ಆಸ್ತಿಯು” ಯಜಮಾನನ ಭೂಮಿಯ ಮೇಲಿನ ರಾಜ್ಯಾಭಿರುಚಿಗಳು ಆಗಿರುತ್ತವೆ, ಇದರಲ್ಲಿ ರಾಜ್ಯದ ಐಹಿಕ ಪ್ರಜೆಗಳೂ ಕೂಡಿರುತ್ತಾರೆ.
ಸಾಮ್ಯವನ್ನು ಮುಂದುವರಿಸುತ್ತಾ, ಆ ಮನೆವಾರ್ತೆಯವನು ಇಲ್ಲವೇ ಆಳು ವರ್ಗದ ಎಲ್ಲಾ ಸದಸ್ಯರು ನಿಷ್ಠರಾಗಿಲ್ಲದಿರುವುದರ ಸಾಧ್ಯತೆಗಳ ಕಡೆಗೆ ಯೇಸುವು ಕೈತೋರಿಸುತ್ತಾ, ವಿವರಿಸುವದು: “ಆದರೆ ಆ ಆಳು—ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ ಅಂತ ತನ್ನ ಮನಸ್ಸಿನಲ್ಲಿ ಅಂದುಕೊಂಡು ಗಂಡಾಳು ಹೆಣ್ಣಾಳುಗಳನ್ನು ಹೊಡೆಯುವದಕ್ಕೂ ತಿಂದು ಕುಡಿದು ಅಮಲೇರುವದಕ್ಕೂ ತೊಡಗಿದರೆ ಅವನು ನೆನಸದ ದಿನದಲ್ಲಿಯೂ ತಿಳಿಯದ ಗಳಿಗೆಯಲ್ಲಿಯೂ ಬಂದು . . . ಅವನನ್ನು ಕಠಿಣವಾಗಿ ಹೊಡಿಸುವನು.”
ಕೆಲವರು ಅವನ ಬೋಧನೆಯನ್ನು ಸ್ವೀಕರಿಸಿ, ಇನ್ನಿತರು ಅದನ್ನು ನಿರಾಕರಿಸುವದರಿಂದ, ಯೇಸುವಿನ ಬರೋಣವು, ಯೆಹೂದ್ಯರಿಗೆ ಬೆಂಕಿಯಂಥ ಸಮಯವನ್ನು ತಂದಿತು ಎಂದು ಅವನು ಸೂಚಿಸುತ್ತಾನೆ. ಸುಮಾರು ಮೂರು ವರ್ಷಗಳ ಮೊದಲು ಅವನು ನೀರಿನಿಂದ ದೀಕ್ಷಾಸ್ನಾನವನ್ನು ಪಡೆದನು, ಆದರೆ ಈಗ ಮರಣದಲ್ಲಿ ಅವನ ದೀಕ್ಷಾಸ್ನಾನವು ಅದರ ಸಮಾಪ್ತಿಗೆ ಬಹಳಷ್ಟು ಹತ್ತಿರಕ್ಕೆ ಬರುತ್ತಾ ಇದೆ ಎಂದು ಸೂಚಿಸುತ್ತಾ, ಮತ್ತು ಹೇಳುವದು: “ಅದು ನೆರವೇರುವ ತನಕ ನಾನು ಎಷ್ಟೋ ಬಿಕ್ಕಟ್ಟಿನಲ್ಲಿದ್ದೇನೆ!”
ಈ ಹೇಳಿಕೆಗಳನ್ನು ತನ್ನ ಶಿಷ್ಯರೆಡೆಗೆ ನಿರ್ದೇಶಿಸಿಯಾದ ಮೇಲೆ, ಯೇಸುವು ಪುನಃ ಜನರ ಗುಂಪುಗಳಿಗೆ ಮಾತಾಡುತ್ತಾನೆ. ಅವನ ಗುರುತಿನ ಮತ್ತು ಅದರ ವೈಶಿಷ್ಟತೆಯ ಸ್ಪಷ್ಟ ರುಜುವಾತುಗಳನ್ನು ಸ್ವೀಕರಿಸಲು ಅವರ ಮೊಂಡತನದ ನಿರಾಕರಣೆಯಿಂದ ವ್ಯಥೆಪಡುತ್ತಾನೆ. “ಪಶ್ಚಿಮ ದಿಕ್ಕಿನಲ್ಲಿ ಮೋಡ ಏಳುವದನ್ನು ನೀವು ನೋಡಿದ ಕೂಡಲೆ,” ಅವನು ಅವಲೋಕಿಸುವದು, “ಮಳೆ ಬರುತ್ತದೆ ಅನ್ನುತ್ತೀರಿ; ಹಾಗೇ ಆಗುತ್ತದೆ. ದಕ್ಷಿಣ ದಿಕ್ಕಿನ ಗಾಳಿ ಬೀಸಲಾಗಿ ಸೆಕೆ ಹುಟ್ಟುವದು ಅನ್ನುತ್ತೀರಿ; ಅದೂ ಆಗುತ್ತದೆ. ಕಪಟಿಗಳು ನೀವು, ಭೂಮ್ಯಾಕಾಶಗಳ ಭಾವವನ್ನು ಶೋಧಿಸುವದಕ್ಕೆ ನಿಮಗೆ ಗೊತ್ತಿರುವಲ್ಲಿ ಈ ಸಮಯವನ್ನು ಶೋಧಿಸುವದಕ್ಕೆ ನಿಮಗೆ ಯಾಕೆ ಗೊತ್ತಿಲ್ಲ?” ಲೂಕ 12:32-59.
▪ “ಚಿಕ್ಕ ಹಿಂಡು” ಎಷ್ಟು ಮಂದಿಯಿಂದ ಕೂಡಿರುತ್ತದೆ, ಮತ್ತು ಅವರು ಏನನ್ನು ಪಡೆಯುತ್ತಾರೆ?
▪ ಆತನ ಸೇವಕರು ಸಿದ್ಧರಾಗಿರುವದರ ಆವಶ್ಯಕತೆಯನ್ನು ಯೇಸುವು ಒತ್ತಿಹೇಳಿದ್ದು ಹೇಗೆ?
▪ ಯೇಸುವಿನ ಸಾಮ್ಯದಲ್ಲಿ “ಯಜಮಾನನು”, “ಮನೆವಾರ್ತೆಯವನು”, “ಮನೆಯವನು [ಪರಿಚಾರಕರ ಮಂಡಲಿ]” ಮತ್ತು “ಆಸ್ತಿ” ಯಾರು ಇಲ್ಲವೇ ಯಾವದು?