ಪ್ರತಿಯೊಬ್ಬನು ತನ್ನ ಅಂಜೂರ ಮರದ ನೆರಳಿನಲ್ಲಿ ಕುಳಿತುಕೊಳ್ಳುವನು
ಮಧ್ಯ ಪೂರ್ವದ ದೇಶಗಳ ಸುಡುವ ಬೇಸಗೆ ಕಾಲಗಳಲ್ಲಿ ನೆರಳಿಗೆ ತುಂಬ ಬೇಡಿಕೆಯಿರುತ್ತದೆ. ಸೂರ್ಯನ ಕಿರಣಗಳಿಂದ ರಕ್ಷೆಯನ್ನು ಕೊಡುವ ಯಾವುದೇ ಮರವಿರಲಿ, ವಿಶೇಷವಾಗಿ ಅದು ಒಬ್ಬನ ಮನೆಯ ಹತ್ತಿರವಿರುವಲ್ಲಿ ಅದು ಅಪೇಕ್ಷಣೀಯವಾದದ್ದಾಗಿರುತ್ತದೆ. ಅಂಜೂರ ಮರದ ದೊಡ್ಡ, ಅಗಲವಾದ ಎಲೆಗಳು ಮತ್ತು ವಿಸ್ತಾರವಾಗಿ ಹರಡಿಕೊಂಡಿರುವ ಕೊಂಬೆಗಳಿಂದಾಗಿ, ಅದು ಆ ಪ್ರದೇಶದ ಬೇರಾವುದೇ ಮರಕ್ಕಿಂತಲೂ ಒಳ್ಳೆಯ ನೆರಳನ್ನು ಕೊಡುತ್ತದೆ.
ಬೈಬಲಿನ ಗಿಡಗಳು (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, “[ಅಂಜೂರ ಮರದ] ನೆರಳು, ಒಂದು ಗುಡಾರದ ನೆರಳಿಗಿಂತಲೂ ಹೆಚ್ಚು ಚೈತನ್ಯದಾಯಕವೂ ಹೆಚ್ಚು ತಂಪಾದದ್ದೂ ಆಗಿದೆಯೆಂದು ಹೇಳಲಾಗುತ್ತದೆ.” ಪ್ರಾಚೀನ ಇಸ್ರಾಯೇಲಿನ ದ್ರಾಕ್ಷೇತೋಟಗಳ ಅಂಚುಗಳಲ್ಲಿ ಬೆಳೆಯುತ್ತಿದ್ದ ಅಂಜೂರ ಮರಗಳು, ಹೊಲದಲ್ಲಿ ಕೆಲಸಮಾಡುತ್ತಿದ್ದವರಿಗೆ ವಿಶ್ರಾಂತಿಗಾಗಿ ಉತ್ತಮ ತಾಣಗಳಾಗಿದ್ದವು.
ಚಟುವಟಿಕೆಭರಿತವಾದ ಹಾಗೂ ಬಿಸಿಲಿನ ದಿನದ ಅಂತ್ಯದಲ್ಲಿ ಕುಟುಂಬ ಸದಸ್ಯರು ತಮ್ಮ ಅಂಜೂರ ಮರದ ಕೆಳಗೆ ಕುಳಿತುಕೊಂಡು ಹಿತಕರವಾದ ಸಹವಾಸದಲ್ಲಿ ಆನಂದಿಸುತ್ತಿದ್ದರು. ಅದಲ್ಲದೆ, ಅಂಜೂರ ಮರವು ತನ್ನ ಧಣಿಗೆ ಹೇರಳವಾದ, ಪೌಷ್ಟಿಕ ಹಣ್ಣುಗಳನ್ನು ಕೊಡುವ ಮೂಲಕವೂ ಪ್ರತಿಫಲವನ್ನು ಕೊಡುತ್ತದೆ. ಆದುದರಿಂದ ರಾಜ ಸೊಲೊಮೋನನ ಸಮಯದಿಂದ ಹಿಡಿದು, ಒಬ್ಬನು ತನ್ನ ಸ್ವಂತ ಅಂಜೂರ ಮರದ ಕೆಳಗೆ ಕುಳಿತುಕೊಳ್ಳುವುದು ಶಾಂತಿ, ಏಳಿಗೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತಿತ್ತು.—1 ಅರಸುಗಳು 4:24, 25.
ಅದಕ್ಕಿಂತಲೂ ಶತಮಾನಗಳ ಹಿಂದೆ, ಪ್ರವಾದಿಯಾದ ಮೋಶೆಯು ವಾಗ್ದತ್ತ ದೇಶವನ್ನು ‘ಅಂಜೂರ ಬೆಳೆಯುವ ದೇಶ’ ಎಂದು ವರ್ಣಿಸಿದ್ದನು. (ಧರ್ಮೋಪದೇಶಕಾಂಡ 8:8) ಆ ದೇಶದ ಫಲವತ್ತತೆಯ ಸಾಕ್ಷ್ಯವಾಗಿ, ಹನ್ನೆರಡು ಮಂದಿ ಗೂಢಚಾರರು ಇಸ್ರಾಯೇಲಿನ ಪಾಳೆಯಕ್ಕೆ ಹಿಂದಿರುಗಿ ಬರುವಾಗ, ಅಂಜೂರಗಳನ್ನೂ ಇನ್ನಿತರ ಹಣ್ಣುಗಳನ್ನೂ ತಂದರು. (ಅರಣ್ಯಕಾಂಡ 13:21-23) 19ನೆಯ ಶತಮಾನದಲ್ಲಿ, ಬೈಬಲ್ ದೇಶಗಳ ಯಾತ್ರಿಕನೊಬ್ಬನು ವರದಿಸಿದ್ದೇನೆಂದರೆ, ಅಲ್ಲಿನ ಅತ್ಯಂತ ಸಾಮಾನ್ಯ ಮರಗಳಲ್ಲಿ ಅಂಜೂರ ಮರವು ಒಂದಾಗಿದೆ. ಆದುದರಿಂದ ಶಾಸ್ತ್ರಗಳು ಅಂಜೂರಗಳು ಮತ್ತು ಅಂಜೂರ ಮರಗಳ ಬಗ್ಗೆಯೂ ಅನೇಕ ಸಲ ತಿಳಿಸುವುದು ಆಶ್ಚರ್ಯವೇನಲ್ಲ!
ವರ್ಷಕ್ಕೆ ಎರಡಾವರ್ತಿ ಫಸಲನ್ನು ಕೊಡುವ ಮರ
ಅಂಜೂರ ಮರವು ಹೆಚ್ಚಿನ ವಿಧದ ಮಣ್ಣುಗಳಿಗೆ ಹೊಂದಿಕೊಳ್ಳುತ್ತದೆ. ಮತ್ತು ಅದಕ್ಕಿರುವ ವಿಸ್ತಾರವಾದ ಬೇರು ವ್ಯವಸ್ಥೆಯು, ಅದು ಮಧ್ಯ ಪೂರ್ವದ ದೀರ್ಘ, ಶುಷ್ಕ ಬೇಸಗೆಕಾಲಗಳನ್ನು ತಾಳಿಕೊಳ್ಳುವಂತೆ ಸಾಧ್ಯಮಾಡುತ್ತದೆ. ಈ ಮರವು ಅಸಾಮಾನ್ಯವಾಗಿದೆ ಏಕೆಂದರೆ ಅದು ಜೂನ್ ತಿಂಗಳಿನಲ್ಲಿ ಅಂಜೂರಗಳ ಆರಂಭದ ಫಸಲನ್ನು ಮತ್ತು ಸಾಮಾನ್ಯವಾಗಿ ಆಗಸ್ಟ್ನಿಂದ ಮುಂದಕ್ಕೆ ಮುಖ್ಯ ಬೆಳೆಯನ್ನು ಕೊಡುತ್ತದೆ. (ಯೆಶಾಯ 28:4) ಸಾಮಾನ್ಯವಾಗಿ ಇಸ್ರಾಯೇಲ್ಯರು, ಆರಂಭದ ಫಸಲಿನ ಹಣ್ಣುಗಳನ್ನು ತಾಜಾ ತಿನ್ನುತ್ತಿದ್ದರು. ಮತ್ತು ಮುಂದಿನ ಫಸಲನ್ನು ವರ್ಷದಾದ್ಯಂತದ ಬಳಕೆಗಾಗಿ ಒಣಗಿಸಿಡುತ್ತಿದ್ದರು. ಒಣಗಿರುವ ಅಂಜೂರಗಳನ್ನು, ಗೋಲಾಕಾರದ ಉಂಡೆಗಳಾಗಿ ಮಾಡಲು ಅದುಮಲಾಗುತ್ತಿತ್ತು. ಕೆಲವೊಮ್ಮೆ ಇದಕ್ಕೆ ಬಾದಾಮಿಯನ್ನೂ ಸೇರಿಸಲಾಗುತ್ತಿತ್ತು. ಈ ಅಂಜೂರದ ಉಂಡೆಗಳು ಉಪಯೋಗಿಸಲು ಅನುಕೂಲಕರವಾಗಿದ್ದವು, ಪೌಷ್ಟಿಕವಾಗಿದ್ದವು ಮತ್ತು ರುಚಿಕರವಾಗಿದ್ದವು.
ವಿವೇಚನಾಶೀಲ ಸ್ತ್ರೀಯಾದ ಅಬೀಗೈಲಳು ದಾವೀದನಿಗೆ ಅಂಜೂರಹಣ್ಣುಗಳ 200 ಉಂಡೆಗಳನ್ನು ಕೊಟ್ಟಳು. ಶತ್ರುವಿನಿಂದ ಪಾಲಾಯನಗೈಯುತ್ತಿದ್ದ ಅವರಿಗೆ ಇದೇ ಉತ್ತಮ ಆಹಾರವೆಂದು ಅವಳು ನಿಸ್ಸಂದೇಹವಾಗಿ ನೆನಸಿದ್ದಿರಬಹುದು. (1 ಸಮುವೇಲ 25:18, 27) ಈ ಅಂಜೂರಗಳ ಉಂಡೆಗಳನ್ನು ಔಷಧಕ್ಕಾಗಿಯೂ ಉಪಯೋಗಿಸಲಾಗುತ್ತಿತ್ತು. ರಾಜನಾದ ಹಿಜ್ಕೀಯನ ಜೀವಕ್ಕೆ ಬೆದರಿಕೆಯೊಡ್ಡಿದ ಒಂದು ಕುರುವಿಗೆ, ಒಣಗಿದ ಅಂಜೂರಗಳ ಉಂಡೆಯಿಂದ ಮಾಡಲ್ಪಟ್ಟ ಹುಣ್ಣುಪಟ್ಟಿಯನ್ನು ಕಟ್ಟಲಾಯಿತು. ಆದರೆ, ಹಿಜ್ಕೀಯನು ತದನಂತರ ಗುಣಮುಖನಾದದ್ದು ಮುಖ್ಯವಾಗಿ ದೇವರ ಹಸ್ತಕ್ಷೇಪದಿಂದಾಗಿಯೇ.a—2 ಅರಸುಗಳು 20:4-7.
ಪ್ರಾಚೀನ ಸಮಯಗಳಲ್ಲಿ, ಭೂಮಧ್ಯ ಸಾಗರದ ಪ್ರದೇಶದಾದ್ಯಂತ ಒಣಗಿದ ಅಂಜೂರಗಳನ್ನು ಬಹಳಷ್ಟು ಗಣ್ಯಮಾಡಲಾಗುತ್ತಿತ್ತು. ಕಾರ್ತೆಜ್ನ ವಿರುದ್ಧ ಮೂರನೆಯ ಪ್ಯೂನಿಕ್ ಯುದ್ಧದಲ್ಲಿ ತೊಡಗುವಂತೆ ರಾಜನೀತಿಜ್ಞನಾದ ಕೇಟೊ ಒಂದು ಅಂಜೂರವನ್ನು ತೋರಿಸುವ ಮೂಲಕ ರೋಮನ್ ಶಾಸನ ಸಭೆಯ ಮನವೊಪ್ಪಿಸಿದನು. ರೋಮ್ನ ಅತ್ಯುತ್ತಮ ಗುಣಮಟ್ಟದ ಒಣಗಿದ ಅಂಜೂರಗಳು, ಏಷ್ಯಾ ಮೈನರಿನ ಕ್ಯಾರಿಯಾದಿಂದ ಬರುತ್ತಿದ್ದವು. ಹೀಗೆ, ಒಣಗಿದ ಅಂಜೂರಗಳಿಗಾಗಿರುವ ಲ್ಯಾಟಿನ್ ಹೆಸರು ಕ್ಯಾರಿಕಾ ಎಂದಾಯಿತು. ಇಂದಿನ ಟರ್ಕಿಯಲ್ಲಿರುವ ಆ ಪ್ರದೇಶವೇ ಈಗಲೂ ಅತ್ಯುತ್ಕೃಷ್ಟ ಗುಣಮಟ್ಟದ ಒಣಗಿದ ಅಂಜೂರಗಳನ್ನು ಉತ್ಪಾದಿಸುತ್ತದೆ.
ಇಸ್ರಾಯೇಲ್ಯ ರೈತರು, ಹೆಚ್ಚಾಗಿ ದ್ರಾಕ್ಷೇತೋಟಗಳಲ್ಲಿ ಅಂಜೂರದ ಮರಗಳನ್ನು ನೆಡುತ್ತಿದ್ದರು. ಆದರೆ ಫಲಕೊಡದಂಥ ಮರಗಳನ್ನು ಅವರು ಕಡಿದುಹಾಕುತ್ತಿದ್ದರು. ಏಕೆಂದರೆ ಸೀಮಿತವಾಗಿದ್ದಂಥ ಫಲವತ್ತಾದ ಮಣ್ಣನ್ನು, ಫಲಕೊಡದಂಥ ಮರಗಳಿಗಾಗಿ ಅವರು ಹಾಳುಮಾಡಲು ಬಯಸುತ್ತಿರಲಿಲ್ಲ. ಫಲವನ್ನು ಉತ್ಪಾದಿಸದ ಅಂಜೂರ ಮರದ ಕುರಿತಾದ ಯೇಸುವಿನ ದೃಷ್ಟಾಂತದಲ್ಲಿ, ಕೃಷಿಕನು ತೋಟಮಾಡುವವನಿಗೆ ಹೇಳಿದ್ದು: “ನೋಡು, ನಾನು ಮೂರು ವರುಷದಿಂದಲೂ ಈ ಅಂಜೂರದ ಮರದಲ್ಲಿ ಹಣ್ಣನ್ನು ಹುಡುಕುತ್ತಾ ಬಂದಿದ್ದೇನೆ; ಆದರೂ ನನಗೆ ಸಿಕ್ಕಲಿಲ್ಲ. ಇದನ್ನು ಕಡಿದು ಹಾಕು; ಇದರಿಂದ ಭೂಮಿಯೂ ಯಾಕೆ ಬಂಜೆಯಾಗಬೇಕು”? (ಲೂಕ 13:6, 7) ಯೇಸುವಿನ ಸಮಯದಲ್ಲಿ ಅಂಜೂರದ ಮರಗಳಿಗಾಗಿ ತೆರಿಗೆಯನ್ನು ಕೊಡಬೇಕಾದದ್ದರಿಂದ, ಫಲವನ್ನು ಉತ್ಪಾದಿಸದ ಯಾವುದೇ ಮರವು, ಅನಪೇಕ್ಷಣೀಯವಾದ ಆರ್ಥಿಕ ಹೊರೆಯಾಗುತ್ತಿತ್ತು.
ಇಸ್ರಾಯೇಲ್ಯರ ಆಹಾರ ಪಥ್ಯದಲ್ಲಿ ಅಂಜೂರಗಳಿಗೆ ತುಂಬ ಮಹತ್ವವಿತ್ತು. ಆದುದರಿಂದ ಅಂಜೂರದ ಫಸಲು ಒಳ್ಳೆಯದಾಗಿರದಿದ್ದಲ್ಲಿ, ಮತ್ತು ಪ್ರಾಯಶಃ ಯೆಹೋವನಿಂದ ಬಂದಿರುವ ಪ್ರತಿಕೂಲ ನ್ಯಾಯತೀರ್ಪಿನಿಂದಾಗಿ ಹೀಗಾಗಿರುತ್ತಿದ್ದಲ್ಲಿ, ಅದೊಂದು ವಿಪತ್ತಾಗಿರುತ್ತಿತ್ತು. (ಹೋಶೇಯ 2:12; ಆಮೋಸ 4:9) ಪ್ರವಾದಿಯಾದ ಹಬಕ್ಕೂಕನು ಹೇಳಿದ್ದು: “ಅಂಜೂರವು ಚಿಗುರದಿದ್ದರೂ ದ್ರಾಕ್ಷಾಲತೆಗಳಲ್ಲಿ ಹಣ್ಣು ಸಿಕ್ಕದಿದ್ದರೂ ಎಣ್ಣೆಮರಗಳ ಉತ್ಪತ್ತಿಯು ಶೂನ್ಯವಾದರೂ ಹೊಲಗದ್ದೆಗಳು ಆಹಾರವನ್ನು ಕೊಡದೆಹೋದರೂ . . . ನಾನು ಯೆಹೋವನಲ್ಲಿ ಉಲ್ಲಾಸಿಸುವೆನು, ನನ್ನ ರಕ್ಷಕನಾದ ದೇವರಲ್ಲಿ ಆನಂದಿಸುವೆನು.”—ಹಬಕ್ಕೂಕ 3:17, 18.
ನಂಬಿಕೆಹೀನ ಜನಾಂಗದ ಸಂಕೇತ
ಶಾಸ್ತ್ರವಚನಗಳು ಕೆಲವೊಮ್ಮೆ ಅಂಜೂರಗಳನ್ನು ಇಲ್ಲವೆ ಅಂಜೂರ ಮರಗಳನ್ನು ಸಾಂಕೇತಿಕವಾಗಿಯೂ ಉಪಯೋಗಿಸುತ್ತವೆ. ಉದಾಹರಣೆಗಾಗಿ, ಯೆಹೂದದ ನಂಬಿಗಸ್ತ ಸೆರೆಯಾಳುಗಳನ್ನು ಯೆರೆಮೀಯನು, ಉತ್ತಮ ಅಂಜೂರದ ಫಲಗಳುಳ್ಳ ಪುಟ್ಟಿಗೆ ಹೋಲಿಸಿದನು. ಇವು ಸಾಮಾನ್ಯವಾಗಿ ತಾಜಾ ತಿನ್ನಲಾಗುತ್ತಿದ್ದ ಆರಂಭದ ಅಂಜೂರಗಳಾಗಿದ್ದವು. ಆದರೆ ಆ ಅಪನಂಬಿಗಸ್ತ ಸೆರೆಯಾಳುಗಳನ್ನು ಕೆಟ್ಟ ಅಂಜೂರದ ಹಣ್ಣುಗಳಿಗೆ ಹೋಲಿಸಲಾಗಿತ್ತು. ಅವುಗಳನ್ನು ತಿನ್ನಲಾಗದೇ, ಬಿಸಾಡಬೇಕಿತ್ತು.—ಯೆರೆಮೀಯ 24:2, 5, 8, 10.
ಫಲಕೊಡದಂಥ ಅಂಜೂರ ಮರದ ದೃಷ್ಟಾಂತದಲ್ಲಿ, ಯೆಹೂದಿ ಜನಾಂಗಕ್ಕೆ ದೇವರು ತೋರಿಸಿದ ತಾಳ್ಮೆಯನ್ನು ಯೇಸು ತೋರಿಸಿದನು. ಈ ಮುಂಚೆ ತಿಳಿಸಲ್ಪಟ್ಟಂತೆ, ತನ್ನ ದ್ರಾಕ್ಷೇತೋಟದಲ್ಲಿ ಒಂದು ಅಂಜೂರ ಮರವನ್ನು ನೆಟ್ಟಂಥ ಒಬ್ಬ ಮನುಷ್ಯನ ಕುರಿತಾಗಿ ಅವನು ಮಾತಾಡಿದನು. ಆ ಮರವು ಮೂರು ವರ್ಷಗಳಿಂದ ಫಲವನ್ನು ಕೊಟ್ಟಿರಲಿಲ್ಲ, ಮತ್ತು ಧಣಿಯು ಅದನ್ನು ಇನ್ನೇನು ಕಡಿದುಹಾಕಲಿದ್ದನು. ಆದರೆ ತೋಟಮಾಡುವವನು ಹೇಳಿದ್ದು: “ಅಯ್ಯಾ, ಈ ವರುಷವೂ ಇದನ್ನು ಬಿಡು; ಅಷ್ಟರಲ್ಲಿ ನಾನು ಇದರ ಸುತ್ತಲು ಅಗಿದು ಗೊಬ್ಬರಹಾಕುತ್ತೇನೆ; ಮುಂದೆ ಹಣ್ಣುಬಿಟ್ಟರೆ ಸರಿ; ಇಲ್ಲದಿದ್ದರೆ ಇದನ್ನು ಕಡಿದುಹಾಕಬಹುದು.”—ಲೂಕ 13:8, 9.
ಯೇಸು ಈ ದೃಷಾಂತವನ್ನು ಕೊಟ್ಟಾಗ, ಅವನು ಈಗಾಗಲೇ ಮೂರು ವರ್ಷಗಳಿಂದ ಸಾರಿದ್ದನು. ಮತ್ತು ಯೆಹೂದಿ ಜನಾಂಗದ ಸದಸ್ಯರಲ್ಲಿ ನಂಬಿಕೆಯನ್ನು ಬೆಳೆಸಲು ಪ್ರಯತ್ನಿಸಿದ್ದನು. ಯೇಸು ತನ್ನ ಚಟುವಟಿಕೆಯನ್ನು ತೀವ್ರಗೊಳಿಸುತ್ತಾ, ಆ ಸಾಂಕೇತಿಕ ಅಂಜೂರ ಮರ ಅಂದರೆ ಯೆಹೂದಿ ರಾಷ್ಟ್ರಕ್ಕೆ ‘ಗೊಬ್ಬರ ಹಾಕಿದನು’ ಮತ್ತು ಅದು ಫಲವನ್ನು ಉತ್ಪಾದಿಸುವಂತೆ ಇನ್ನೊಂದು ಅವಕಾಶವನ್ನು ಕೊಟ್ಟನು. ಆದರೆ ಯೇಸು ಮರಣಪಟ್ಟ ಹಿಂದಿನ ವಾರದಲ್ಲಿ, ಒಟ್ಟಿನಲ್ಲಿ ಆ ಜನಾಂಗವು ಮೆಸ್ಸೀಯನನ್ನು ತಿರಸ್ಕರಿಸಿತ್ತೆಂಬುದು ವ್ಯಕ್ತವಾಯಿತು.—ಮತ್ತಾಯ 23:37, 38.
ಪುನಃ ಒಮ್ಮೆ ಯೇಸು, ಆ ರಾಷ್ಟ್ರದ ಕೆಟ್ಟ ಆತ್ಮಿಕ ಸ್ಥಿತಿಯನ್ನು ದೃಷ್ಟಾಂತಿಸಲು ಅಂಜೂರದ ಮರವನ್ನು ಉಪಯೋಗಿಸಿದನು. ತನ್ನ ಮರಣಕ್ಕೆ ಇನ್ನೂ ನಾಲ್ಕು ದಿನಗಳಿದ್ದಾಗ, ಬೇಥಾನ್ಯದಿಂದ ಯೆರೂಸಲೇಮಿಗೆ ಪ್ರಯಾಣಿಸುತ್ತಿದ್ದ ದಾರಿಯಲ್ಲಿ ಬಹಳಷ್ಟು ಎಲೆಗಳಿದ್ದರೂ ಯಾವುದೇ ಹಣ್ಣಿಲ್ಲದ ಒಂದು ಅಂಜೂರದ ಮರವನ್ನು ಅವನು ನೋಡಿದನು. ಆರಂಭದ ಅಂಜೂರಗಳು ಎಲೆಗಳೊಂದಿಗೇ—ಕೆಲವೊಮ್ಮೆ ಎಲೆಗಳಿಗಿಂತಲೂ ಮುಂಚೆಯೇ—ಬೆಳೆಯುವುದರಿಂದ, ಈ ಮರದಲ್ಲಿ ಯಾವುದೇ ಹಣ್ಣು ಇಲ್ಲದೆ ಇದದ್ದು ಅದು ನಿಷ್ಪ್ರಯೋಜಕವೆಂಬುದನ್ನು ತೋರಿಸಿತು.—ಮಾರ್ಕ 11:13, 14.b
ನೋಡಲು ಚೆನ್ನಾಗಿರುವ ಆದರೆ ಫಲವನ್ನು ಉತ್ಪಾದಿಸದ ಅಂಜೂರ ಮರದಂತೆಯೇ ಯೆಹೂದಿ ಜನಾಂಗಕ್ಕೂ ಮೋಸಕರವಾದ ಬಾಹ್ಯ ತೋರಿಕೆಯಿತ್ತು. ಆದರೆ ಅದು ದೈವಿಕ ಫಲಗಳನ್ನು ಉತ್ಪಾದಿಸಿರಲಿಲ್ಲ, ಮತ್ತು ಕೊನೆಯಲ್ಲಿ ಯೆಹೋವನ ಸ್ವಂತ ಮಗನನ್ನು ತಿರಸ್ಕರಿಸಿಬಿಟ್ಟಿತ್ತು. ಯೇಸು ಆ ಫಲಬಿಡದ ಅಂಜೂರ ಮರವನ್ನು ಶಪಿಸಿದನು, ಮತ್ತು ಮರುದಿನ ಅದು ಈಗಾಗಲೇ ಬಾಡಿಹೋಗಿರುವುದನ್ನು ಶಿಷ್ಯರು ಗಮನಿಸಿದರು. ಸೂಕ್ತವಾಗಿಯೇ ಆ ಒಣಗಿಹೋದ ಮರವು, ದೇವರು ಮುಂದಕ್ಕೆ ಯೆಹೂದ್ಯರನ್ನು ತಾನು ಆಯ್ದುಕೊಂಡಿರುವ ಜನರೋಪಾದಿ ತಿರಸ್ಕರಿಸುವುದನ್ನು ಸೂಚಿಸಿತು.—ಮಾರ್ಕ 11:20, 21.
‘ಅಂಜೂರದ ಮರದಿಂದ ಬುದ್ಧಿಕಲಿಯಿರಿ’
ತನ್ನ ಸಾನ್ನಿಧ್ಯದ ಕುರಿತಾದ ಒಂದು ಪ್ರಮುಖ ಪಾಠವನ್ನು ಕಲಿಸಲಿಕ್ಕಾಗಿಯೂ ಯೇಸು ಅಂಜೂರದ ಮರವನ್ನು ಉಪಯೋಗಿಸಿದನು. ಅವನಂದದ್ದು: “ಅಂಜೂರದ ಮರದ ದೃಷ್ಟಾಂತದಿಂದ ಬುದ್ಧಿಕಲಿಯಿರಿ. ಅದರ ಕೊಂಬೆ ಇನ್ನೂ ಎಳೆಯದಾಗಿದ್ದು ಎಲೆ ಬಿಡುವಾಗ ಬೇಸಿಗೆಯು ಹತ್ತರವಾಯಿತೆಂದು ತಿಳುಕೊಳ್ಳುತ್ತೀರಲ್ಲಾ. ಹಾಗೆಯೇ ನೀವು ಸಹ ಇದನ್ನೆಲ್ಲಾ ನೋಡುವಾಗ ಆ ದಿನವು ಹತ್ತರವದೆ, ಬಾಗಲಲ್ಲೇ ಅದೆ ಎಂದು ತಿಳುಕೊಳ್ಳಿರಿ.” (ಮತ್ತಾಯ 24:32, 33) ಅಂಜೂರ ಮರದ ಉಜ್ವಲ ಹಸಿರು ಬಣ್ಣದ ಎಲೆಗಳು ಎದ್ದುಕಾಣುವಂಥವುಗಳಾಗಿವೆ ಮತ್ತು ಬೇಸಗೆಯು ಹತ್ತಿರವಿದೆ ಎಂಬುದರ ಸುಸ್ಪಷ್ಟ ಸಂಕೇತವಾಗಿವೆ. ಅದೇ ರೀತಿಯಲ್ಲಿ, ಮತ್ತಾಯ ಅಧ್ಯಾಯ 24, ಮಾರ್ಕ ಅಧ್ಯಾಯ 13, ಮತ್ತು ಲೂಕ ಅಧ್ಯಾಯ 21ರಲ್ಲಿ ದಾಖಲಿಸಲ್ಪಟ್ಟಿರುವ ಯೇಸುವಿನ ಮಹಾ ಪ್ರವಾದನೆಯು, ಅವನು ಈಗ ಸ್ವರ್ಗೀಯ ರಾಜ್ಯಾಧಿಕಾರದಲ್ಲಿ ಉಪಸ್ಥಿತನಿದ್ದಾನೆಂಬುದಕ್ಕೆ ಸ್ಪಷ್ಟವಾದ ಸಾಕ್ಷ್ಯವನ್ನು ಕೊಡುತ್ತದೆ.—ಲೂಕ 21:29-31.
ಇತಿಹಾಸದಲ್ಲೇ ಅತಿ ನಿರ್ಣಾಯಕವಾದ ಸಮಯದಲ್ಲಿ ನಾವೀಗ ಜೀವಿಸುತ್ತಿರುವುದರಿಂದ, ನಾವು ಖಂಡಿತವಾಗಿಯೂ ಅಂಜೂರ ಮರದಿಂದ ಪಾಠವನ್ನು ಕಲಿಯಲು ಬಯಸುತ್ತೇವೆ. ನಾವು ಹಾಗೆ ಮಾಡುವಲ್ಲಿ, ಮತ್ತು ಆತ್ಮಿಕವಾಗಿ ಎಚ್ಚರವಾಗಿರುವಲ್ಲಿ, ಈ ಭವ್ಯವಾದ ವಾಗ್ದಾನದ ನೆರವೇರಿಕೆಯನ್ನು ಅನುಭವಿಸುವ ನಿರೀಕ್ಷೆಯನ್ನು ಹೊಂದಿರಬಲ್ಲೆವು: “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು; ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದಿದೆ.”—ಮೀಕ 4:4.
[ಪಾದಟಿಪ್ಪಣಿಗಳು]
a ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಬೈಬಲ್ ದೇಶಗಳಿಗೆ ಭೇಟಿಯಿತ್ತ ಏಚ್. ಬಿ. ಟ್ರಿಸ್ಟ್ರಾಮ್ ಎಂಬ ಪ್ರಕೃತಿ ಶಾಸ್ತ್ರಜ್ಞನು, ಅಲ್ಲಿನ ಸ್ಥಳಿಕ ಜನರು ಆಗಲೂ ಕುರುಗಳಿಗೆ ಔಷಧವಾಗಿ ಅಂಜೂರಗಳ ಹುಣ್ಣುಪಟ್ಟಿಯನ್ನು ಉಪಯೋಗಿಸುವುದನ್ನು ಗಮನಿಸಿದನು.
b ಈ ಘಟನೆಯು, ಬೇತ್ಫಗೆ ಎಂಬ ಹಳ್ಳಿಯ ಹತ್ತಿರ ನಡೆಯಿತು. ಈ ಹೆಸರಿನ ಅರ್ಥ, “ಆರಂಭದ ಅಂಜೂರಗಳ ಮನೆ” ಎಂದಾಗಿದೆ. ಇದು, ಆ ಕ್ಷೇತ್ರವು ಆರಂಭದ ಅಂಜೂರಗಳ ಸಮೃದ್ಧ ಫಸಲನ್ನು ಉತ್ಪಾದಿಸುವುದಕ್ಕೆ ಪ್ರಸಿದ್ಧವಾಗಿತ್ತೆಂಬುದನ್ನು ತೋರಿಸುತ್ತದೆ.