ನಿಮ್ಮ ಕುಟುಂಬದಲ್ಲಿ ದೇವರಿಗೆ ಪ್ರಥಮ ಸ್ಥಾನವಿದೆಯೆ?
“ನೀನು ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದ ಪ್ರೀತಿಸಬೇಕು.”—ಮಾರ್ಕ 12:29, 30, NW.
1. ನಾವು ಯೆಹೋವನನ್ನು ಪ್ರೀತಿಸುವುದು ಎಷ್ಟು ಪ್ರಾಮುಖ್ಯವಾದದ್ದಾಗಿದೆ?
“ಎಲ್ಲಾ ಆಜ್ಞೆಗಳಲ್ಲಿ ಮೊದಲನೆಯದು ಯಾವದು?” ಎಂದು ಒಬ್ಬ ಶಾಸ್ತ್ರಿಯು ಯೇಸುವನ್ನು ಕೇಳಿದ್ದನು. ತನ್ನ ಸ್ವಂತ ಅಭಿಪ್ರಾಯವನ್ನು ಕೊಡುವುದಕ್ಕೆ ಬದಲಾಗಿ, ಯೇಸುವು ದೇವರ ವಾಕ್ಯದಿಂದ ಧರ್ಮೋಪದೇಶಕಾಂಡ 6:4, 5 ರಲ್ಲಿರುವ ವಿಷಯವನ್ನು ಎತ್ತಿಹೇಳುವ ಮೂಲಕ ಅವನ ಪ್ರಶ್ನೆಗೆ ಉತ್ತರಕೊಟ್ಟನು. ಆತನು ಉತ್ತರಿಸಿದ್ದು: “ಇಸ್ರಾಯೇಲ್ ಜನವೇ ಕೇಳು, ನಮ್ಮ ದೇವರಾದ ಯೆಹೋವನು ಒಬ್ಬನೇ ದೇವರು, ಮತ್ತು ನೀನು ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಶಕಿಯ್ತಿಂದಲೂ ಪ್ರೀತಿಸಬೇಕು.”—ಮಾರ್ಕ 12:28-30.
2. (ಎ) ಯೇಸು ಯಾವ ವಿರೋಧವನ್ನು ಎದುರಿಸಬೇಕಿತ್ತು? (ಬಿ) ಆಗಾಗ ಯೆಹೋವನನ್ನು ಸಂತೋಷಪಡಿಸುವುದನ್ನು ಯಾವುದು ಕಷ್ಟಕರವನ್ನಾಗಿ ಮಾಡಬಹುದು?
2 ಮೊದಲನೆಯ ಆಜ್ಞೆ—ಅತ್ಯಂತ ಪ್ರಾಮುಖ್ಯವಾದ ಒಂದು ಆಜ್ಞೆ—ಯೆಂದು ಯೇಸು ಯಾವುದನ್ನು ಕರೆದನೋ ಅದಕ್ಕೆ ವಿಧೇಯರಾಗುವುದು, ಯೆಹೋವನನ್ನು ಸಂತೋಷಪಡಿಸುವ ವಿಷಯಗಳನ್ನು ನಾವು ಸರ್ವದಾ ಮಾಡುವುದನ್ನು ಅಗತ್ಯಪಡಿಸುತ್ತದೆ. ಒಂದು ಸಂದರ್ಭದಲ್ಲಿ ಅಪೊಸ್ತಲ ಪೇತ್ರನು ಯೇಸುವಿನ ಮಾರ್ಗಕ್ರಮಕ್ಕಾಗಿ ಆಕ್ಷೇಪವನ್ನು ಎತ್ತಿದಾಗ್ಯೂ, ಇನ್ನೊಂದು ಸಂದರ್ಭದಲ್ಲಿ ತನ್ನ ಸ್ವಂತ ಆಪ್ತ ಸಂಬಂಧಿಕರು ಹಾಗೆ ಮಾಡಿದಾಗ್ಯೂ, ಯೇಸು ಯೆಹೋವನನ್ನು ಸಂತೋಷಪಡಿಸಿದನು. (ಮತ್ತಾಯ 16:21-23; ಮಾರ್ಕ 3:21; ಯೋಹಾನ 8:29) ನೀವು ನಿಮ್ಮನ್ನು ತದ್ರೀತಿಯ ಒಂದು ಸನ್ನಿವೇಶದಲ್ಲಿ ಕಂಡುಕೊಳ್ಳುವುದಾದರೆ ಆಗೇನು? ನೀವು ನಿಮ್ಮ ಬೈಬಲ್ ಅಧ್ಯಯನವನ್ನು ಹಾಗೂ ಯೆಹೋವನ ಸಾಕ್ಷಿಗಳೊಂದಿಗಿನ ನಿಮ್ಮ ಸಹವಾಸವನ್ನು ನಿಲ್ಲಿಸಿಬಿಡುವಂತೆ ನಿಮ್ಮ ಕುಟುಂಬದ ಸದಸ್ಯರು ಬಯಸುತ್ತಾರೆಂದು ಭಾವಿಸಿ. ಆತನನ್ನು ಸಂತೋಷಪಡಿಸುವ ವಿಷಯವನ್ನು ಮಾಡುವ ಮೂಲಕ ನೀವು ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವಿರೊ? ಆತನನ್ನು ಸೇವಿಸಲಿಕ್ಕಾಗಿರುವ ನಿಮ್ಮ ಪ್ರಯತ್ನಗಳನ್ನು ನಿಮ್ಮ ಕುಟುಂಬದ ಸದಸ್ಯರು ವಿರೋಧಿಸಬಹುದಾಗಿರುವಾಗಲೂ, ದೇವರಿಗೆ ಪ್ರಥಮ ಸ್ಥಾನವಿದೆಯೆ?
ಕುಟುಂಬ ವಿರೋಧದ ಪಾಶ
3. (ಎ) ಕುಟುಂಬಕ್ಕೆ, ಯೇಸುವಿನ ಬೋಧನೆಗಳ ಪರಿಣಾಮಗಳು ಯಾವುವಾಗಿರಬಹುದು? (ಬಿ) ತಾವು ಯಾರಿಗಾಗಿ ಹೆಚ್ಚು ಮಹತ್ತರವಾದ ಮಮತೆಯನ್ನು ಹೊಂದಿದ್ದೇವೆಂಬುದನ್ನು ಕುಟುಂಬದ ಸದಸ್ಯರು ಹೇಗೆ ತೋರಿಸಬಲ್ಲರು?
3 ತನ್ನ ಬೋಧನೆಗಳನ್ನು ಅಂಗೀಕರಿಸುವ ಸದಸ್ಯನನ್ನು, ಕುಟುಂಬದಲ್ಲಿರುವ ಇತರರು ವಿರೋಧಿಸುವಾಗ ಫಲಿಸಬಹುದಾದ ಕಷ್ಟದೆಶೆಗಳಿಗೆ ಯೇಸು ಕಡಿಮೆ ಬೆಲೆಕಟ್ಟಲಿಲ್ಲ. “ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು” ಎಂದು ಯೇಸು ಹೇಳಿದನು. ಆದರೂ, ಆ ದುಃಖಕರ ಪರಿಣಾಮದ ಹೊರತಾಗಿಯೂ, ಯಾರಿಗೆ ಪ್ರಥಮ ಸ್ಥಾನವು ಕೊಡಲ್ಪಡಬೇಕೆಂಬುದನ್ನು ತೋರಿಸುತ್ತಾ ಯೇಸು ಹೇಳಿದ್ದು: “ತಂದೆಯ ಮೇಲಾಗಲಿ ತಾಯಿಯ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ; ಮಗನ ಮೇಲಾಗಲಿ ಮಗಳ ಮೇಲಾಗಲಿ ನನ್ನ ಮೇಲೆ ಇಡುವದಕ್ಕಿಂತ ಹೆಚ್ಚಾದ ಮಮತೆಯನ್ನಿಡುವವನು ನನಗೆ ಯೋಗ್ಯನಲ್ಲ.” (ಮತ್ತಾಯ 10:34-37) ಆತನ ಮಗನೂ “ಆತನ [ದೇವರ] ತತ್ವದ ಮೂರ್ತಿಯೂ” ಆಗಿರುವ ಯೇಸು ಕ್ರಿಸ್ತನ ಬೋಧನೆಗಳನ್ನು ಹಿಂಬಾಲಿಸುವ ಮೂಲಕವಾಗಿ ನಾವು ಯೆಹೋವ ದೇವರಿಗೆ ಪ್ರಥಮ ಸ್ಥಾನವನ್ನು ಕೊಡುತ್ತೇವೆ.—ಇಬ್ರಿಯ 1:3; ಯೋಹಾನ 14:9.
4. (ಎ) ತನ್ನ ಹಿಂಬಾಲಕರಾಗುವುದರಲ್ಲಿ ಏನು ಒಳಗೂಡಿತ್ತೆಂದು ಯೇಸು ಹೇಳಿದನು? (ಬಿ) ಯಾವ ಅರ್ಥದಲ್ಲಿ ಕ್ರೈಸ್ತರು ಕುಟುಂಬದ ಸದಸ್ಯರನ್ನು ದ್ವೇಷಿಸಬೇಕು?
4 ಇನ್ನೊಂದು ಸಂದರ್ಭದಲ್ಲಿ, ತನ್ನ ನಿಜ ಹಿಂಬಾಲಕರಾಗಿರುವುದರಲ್ಲಿ ವಾಸ್ತವವಾಗಿ ಏನು ಒಳಗೂಡಿದೆ ಎಂಬುದರ ಕುರಿತು ಯೇಸು ಚರ್ಚಿಸುತ್ತಿದ್ದಾಗ, ಆತನು ಹೇಳಿದ್ದು: “ಯಾವನಾದರೂ ನನ್ನ ಬಳಿಗೆ ಬಂದು ತನ್ನ ತಂದೆ ತಾಯಿ ಹೆಂಡತಿ ಮಕ್ಕಳು ಅಣತ್ಣಮ್ಮಂದಿರು ಅಕ್ಕತಂಗಿಯರು ಇವರನ್ನೂ ತನ್ನ ಪ್ರಾಣವನ್ನು ಸಹ ಹಗೆಮಾಡದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.” (ಲೂಕ 14:26) ತಮ್ಮ ವೈರಿಗಳನ್ನು ಸಹ ಪ್ರೀತಿಸುವಂತೆ ಜನರಿಗೆ ಆತನು ಆಜ್ಞಾಪಿಸಿರುವುದರಿಂದ, ತನ್ನ ಹಿಂಬಾಲಕರು ಅಕ್ಷರಶಃ ತಮ್ಮ ಕುಟುಂಬದ ಸದಸ್ಯರನ್ನು ದ್ವೇಷಿಸಬೇಕೆಂಬುದನ್ನು ಯೇಸು ಅರ್ಥೈಸಲಿಲ್ಲವೆಂಬುದು ಸ್ಪಷ್ಟವಾಗಿಗಿದೆ. (ಮತ್ತಾಯ 5:44) ಬದಲಾಗಿ, ತನ್ನ ಹಿಂಬಾಲಕರು, ಅವರು ದೇವರನ್ನು ಪ್ರೀತಿಸುವುದಕ್ಕಿಂತಲೂ ಕಡಿಮೆ ಯಾಗಿ ಕುಟುಂಬದ ಸದಸ್ಯರನ್ನು ಪ್ರೀತಿಸಬೇಕು ಎಂದು ಯೇಸು ಇಲ್ಲಿ ಅರ್ಥೈಸಿದನು. (ಮತ್ತಾಯ 6:24ನ್ನು ಹೋಲಿಸಿರಿ.) ಆ ತಿಳಿವಳಿಕೆಗೆ ಅನುಗುಣವಾಗಿ, ಯಾಕೋಬನು ಲೇಯಳನ್ನು “ಅಲಕ್ಷ್ಯ [“ದ್ವೇಷ,” NW]” ಮಾಡಿದನು ಮತ್ತು ರಾಹೇಲಳನ್ನು ಪ್ರೀತಿಸಿದನು ಎಂದು ಬೈಬಲ್ ಹೇಳುತ್ತದೆ; ಅವನು ಅವಳ ತಂಗಿಯಾದ ರಾಹೇಲಳನ್ನು ಪ್ರೀತಿಸಿದಷ್ಟು ಹೆಚ್ಚಾಗಿ ಲೇಯಳನ್ನು ಪ್ರೀತಿಸಲಿಲ್ಲವೆಂಬುದು ಅದರ ಅರ್ಥವಾಗಿತ್ತು. (ಆದಿಕಾಂಡ 29:30-32) ನಮ್ಮ ಸ್ವಂತ “ಪ್ರಾಣ” ಅಥವಾ ಜೀವವು ಸಹ, ದ್ವೇಷಿಸಲ್ಪಡಬೇಕು ಅಥವಾ ಯೆಹೋವನಿಗಿಂತ ಕಡಿಮೆ ಪ್ರೀತಿಸಲ್ಪಡಬೇಕು ಎಂದು ಯೇಸು ಹೇಳಿದನು!
5. ಸೈತಾನನು ಕುಯುಕ್ತಿಯಿಂದ ಕುಟುಂಬ ಏರ್ಪಾಡನ್ನು ಹೇಗೆ ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ?
5 ಸೃಷ್ಟಿಕರ್ತ ಮತ್ತು ಜೀವದಾತನೋಪಾದಿ ಯೆಹೋವನು ತನ್ನ ಎಲ್ಲಾ ಸೇವಕರಿಂದ ಸಂಪೂರ್ಣ ಭಕ್ತಿಗೆ ಅರ್ಹನಾಗಿದ್ದಾನೆ. (ಪ್ರಕಟನೆ 4:11) ‘ಯಾವ ತಂದೆಯಿಂದ ಭೂಪರಲೋಕಗಳಲ್ಲಿರುವ ಪ್ರತಿ ಜನವೂ ಹೆಸರು ತೆಗೆದುಕೊಳ್ಳುತ್ತದೋ ಆ ತಂದೆಯ ಮುಂದೆ ನಾನು ಮೊಣಕಾಲು’ ಊರುತ್ತೇನೆ ಎಂದು ಅಪೊಸ್ತಲ ಪೌಲನು ಬರೆದನು. (ಎಫೆಸ 3:14, 15) ಕುಟುಂಬದ ಸದಸ್ಯರು ಒಬ್ಬರಿಗೊಬ್ಬರು ಸ್ವಾಭಾವಿಕ ಮಮತೆಯನ್ನು ಹೊಂದಿರುವಂತಹ ಒಂದು ಅದ್ಭುತಕರ ರೀತಿಯಲ್ಲಿ ಯೆಹೋವನು ಕುಟುಂಬದ ಏರ್ಪಾಡನ್ನು ಸೃಷ್ಟಿಸಿದ್ದಾನೆ. (1 ಅರಸುಗಳು 3:25, 26; 1 ಥೆಸಲೊನೀಕ 2:7) ಹಾಗಿದ್ದರೂ, ಪ್ರೀತಿಪಾತ್ರರನ್ನು ಸಂತೋಷಪಡಿಸುವ ಒಂದು ಅಪೇಕ್ಷೆಯನ್ನು ಒಳಗೊಂಡಿರುವ, ಈ ಸ್ವಾಭಾವಿಕ ಕುಟುಂಬ ಮಮತೆಯನ್ನು ಪಿಶಾಚನಾದ ಸೈತಾನನು ಕುಯುಕ್ತಿಯಿಂದ ಸ್ವಪ್ರಯೇಜನಕ್ಕಾಗಿ ಉಪಯೋಗಿಸಿಕೊಳ್ಳುತ್ತಾನೆ. ಕುಟುಂಬ ವಿರೋಧದ ಜ್ವಾಲೆಗಳನ್ನು ಅವನು ತೀವ್ರಗೊಳಿಸುತ್ತಾನೆ, ಮತ್ತು ಅದರ ಎದುರಿನಲ್ಲಿ ಬೈಬಲ್ ಸತ್ಯಕ್ಕಾಗಿ ದೃಢವಾಗಿ ನಿಲ್ಲುವುದನ್ನು ಅನೇಕರು ಒಂದು ಪಂಥಾಹ್ವಾನವಾಗಿ ಕಂಡುಕೊಳ್ಳುತ್ತಾರೆ.—ಪ್ರಕಟನೆ 12:9, 12.
ಪಂಥಾಹ್ವಾನದೊಂದಿಗೆ ಯಶಸ್ವಿಯಾಗಿ ಹೋರಾಡುವುದು
6, 7. (ಎ) ಬೈಬಲ್ ಅಧ್ಯಯನ ಮತ್ತು ಕ್ರೈಸ್ತ ಸಹವಾಸದ ಪ್ರಮುಖತೆಯನ್ನು ಗಣ್ಯ ಮಾಡುವಂತೆ ಕುಟುಂಬದ ಸದಸ್ಯರು ಹೇಗೆ ಸಹಾಯ ಮಾಡಲ್ಪಡಸಾಧ್ಯವಿದೆ? (ಬಿ) ನಾವು ನಿಜವಾಗಿಯೂ ನಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಸುತ್ತೇವೆಂಬುದನ್ನು ನಾವು ಹೇಗೆ ಪ್ರದರ್ಶಿಸಬಲ್ಲೆವು?
6 ದೇವರನ್ನು ಸಂತೋಷಪಡಿಸುವುದು ಅಥವಾ ಒಬ್ಬ ಕುಟುಂಬ ಸದಸ್ಯನನ್ನು ಸಂತೋಷಪಡಿಸುವುದರ ನಡುವೆ ಒಂದು ಆಯ್ಕೆಯನ್ನು ಮಾಡುವಂತೆ ನೀವು ಒತ್ತಾಯಿಸಲ್ಪಡುವುದಾದರೆ ನೀವೇನು ಮಾಡುವಿರಿ? ಆತನ ವಾಕ್ಯವನ್ನು ಅಭ್ಯಾಸಿಸುವುದು ಅಥವಾ ಅದರ ಮೂಲತತ್ವಗಳನ್ನು ಅನ್ವಯಿಸಿಕೊಳ್ಳುವುದು ಕುಟುಂಬ ಮನಸ್ತಾಪವನ್ನು ಉಂಟುಮಾಡುವುದಾದರೆ, ಹಾಗೆ ಮಾಡುವುದನ್ನು ದೇವರು ನಮ್ಮಿಂದ ಅಪೇಕ್ಷಿಸುವುದಿಲ್ಲವೆಂದು ನೀವು ತರ್ಕಸಮ್ಮತವಾಗಿ ವಿವರಿಸುವಿರೊ? ಆದರೆ ಅದರ ಕುರಿತು ಆಲೋಚಿಸಿರಿ. ನೀವು ಬಿಟ್ಟುಕೊಟ್ಟು, ನಿಮ್ಮ ಬೈಬಲ್ ಅಧ್ಯಯನವನ್ನು ಅಥವಾ ಯೆಹೋವನ ಸಾಕ್ಷಿಗಳೊಂದಿಗಿನ ಸಹವಾಸವನ್ನು ನಿಲ್ಲಿಸುವುದಾದರೆ, ಬೈಬಲಿನ ನಿಷ್ಕೃಷ್ಟವಾದ ಜ್ಞಾನವು ಸಾವುಬದುಕಿನ ವಿಷಯವಾಗಿದೆಯೆಂದು ಪ್ರೀತಿಪಾತ್ರರು ಎಂದಾದರೂ ತಿಳಿದುಕೊಳ್ಳುವುದು ಹೇಗೆ?—ಯೋಹಾನ 17:3; 2 ಥೆಸಲೊನೀಕ 1:6-8.
7 ಆ ಸನ್ನಿವೇಶವನ್ನು ನಾವು ಈ ರೀತಿಯಲ್ಲಿ ದೃಷ್ಟಾಂತಿಸಬಹುದು: ಕುಟುಂಬದ ಒಬ್ಬ ಸದಸ್ಯನಿಗೆ ಮದ್ಯಪಾನಕ್ಕಾಗಿ ವಿಪರೀತವಾದ ಹಂಬಲಿಕೆಯಿರಬಹುದು. ತನ್ನ ಕುಡಿತದ ಸಮಸ್ಯೆಯನ್ನು ಕಡೆಗಣಿಸುವುದು ಅಥವಾ ಗಮನಕ್ಕೆ ತಂದುಕೊಳ್ಳದೆ ಬಿಡುವುದು ಅವನ ನಿಜವಾದ ಪ್ರಯೋಜನಕ್ಕಾಗಿರಸಾಧ್ಯವಿದೆಯೊ? ಅದಕ್ಕೆ ಬಗ್ಗುತ್ತಾ, ಅವನ ಸಮಸ್ಯೆಯ ಕುರಿತು ಏನನ್ನೂ ಮಾಡದೆ ಇರುವ ಮೂಲಕ ಶಾಂತಿಯನ್ನು ಕಾಪಾಡಿಕೊಳ್ಳುವುದು ಹೆಚ್ಚು ಉತ್ತಮವಾದದ್ದಾಗಿರಸಾಧ್ಯವಿದೆಯೊ? ಇಲ್ಲ, ಅವನ ಕೋಪ ಮತ್ತು ಬೆದರಿಕೆಗಳನ್ನು ಧೈರ್ಯವಾಗಿ ಎದುರಿಸುವ ಅರ್ಥದಲ್ಲಿದ್ದರೂ, ತನ್ನ ಕುಡಿತದ ಸಮಸ್ಯೆಯನ್ನು ಜಯಿಸುವಂತೆ ಅವನಿಗೆ ಸಹಾಯ ಮಾಡಲು ಪ್ರಯತ್ನಿಸುವುದು ಅತ್ಯುತ್ತಮವಾಗಿರಸಾಧ್ಯವಿದೆ ಎಂಬುದನ್ನು ನೀವು ಬಹುಶಃ ಒಪ್ಪುತ್ತೀರಿ. (ಜ್ಞಾನೋಕ್ತಿ 29:25) ತದ್ರೀತಿಯಲ್ಲಿ, ನೀವು ನಿಜವಾಗಿಯೂ ನಿಮ್ಮ ಕುಟುಂಬದ ಸದಸ್ಯರನ್ನು ಪ್ರೀತಿಸುವಲ್ಲಿ, ಬೈಬಲನ್ನು ಅಭ್ಯಾಸ ಮಾಡುವುದರಿಂದ ನಿಮ್ಮನ್ನು ತಡೆಯಲಿಕ್ಕಾಗಿರುವ ಅವರ ಪ್ರಯತ್ನಗಳಿಗೆ ನೀವು ಬಗ್ಗುವುದಿಲ್ಲ. (ಅ. ಕೃತ್ಯಗಳು 5:29) ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳುವ ಮೂಲಕವಾಗಿ ಮಾತ್ರವೇ, ನಮ್ಮ ಬದುಕೇ ಕ್ರಿಸ್ತನ ಬೋಧನೆಗಳಿಗನುಸಾರ ಜೀವಿಸುವುದರ ಅರ್ಥವಾಗಿದೆ ಎಂಬುದನ್ನು ಗಣ್ಯ ಮಾಡುವಂತೆ ನೀವು ಅವರಿಗೆ ಸಹಾಯ ಮಾಡಬಹುದು.
8. ಯೇಸು ನಂಬಿಗಸ್ತಿಕೆಯಿಂದ ದೇವರ ಚಿತ್ತವನ್ನು ಮಾಡಿದನು ಎಂಬ ಸಂಗತಿಯಿಂದ ನಾವು ಹೇಗೆ ಪ್ರಯೋಜನವನ್ನು ಪಡೆಯುವೆವು?
8 ಕೆಲವೊಮ್ಮೆ ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವುದು ಬಹಳ ಕಷ್ಟಕರವಾಗಿರಬಹುದು. ಆದರೆ ಸೈತಾನನು ಸಹ, ದೇವರ ಚಿತ್ತವನ್ನು ಮಾಡುವುದನ್ನು ಯೇಸುವಿಗೆ ಕಷ್ಟಕರವಾಗಿ ಮಾಡಿದನೆಂಬುದನ್ನು ನೆನಪಿನಲ್ಲಿಡಿರಿ. ಆದರೂ ಯೇಸು ಎಂದಿಗೂ ಸೋಲೊಪ್ಪಿಕೊಳ್ಳಲಿಲ್ಲ; ನಮಗಾಗಿ ಆತನು ಯಾತನಾ ಕಂಭದ ತೀವ್ರಯಾತನೆಯನ್ನೂ ಸಹಿಸಿಕೊಂಡನು. “ಯೇಸು ಕ್ರಿಸ್ತನು ನಮ್ಮ ರಕ್ಷಕ[ನಾಗಿದ್ದಾನೆ]” ಎಂದು ಬೈಬಲ್ ಹೇಳುತ್ತದೆ. “ಆತನು ನಮಗೋಸ್ಕರ ಸತ್ತನು.” (ತೀತ 3:6, NW; 1 ಥೆಸಲೊನೀಕ 5:10) ಯೇಸು ವಿರೋಧಕ್ಕೆ ಬಿಟ್ಟುಕೊಡಲಿಲ್ಲ ಎಂಬುದಕ್ಕೆ ನಾವು ಕೃತಜ್ಞರಾಗಿರುವುದಿಲ್ಲವೊ? ಆತನು ಯಜ್ಞಾರ್ಪಿತ ಮರಣವನ್ನು ಸಹಿಸಿಕೊಂಡದರ್ದಿಂದ, ಆತನು ಸುರಿಸಿದ ರಕ್ತದಲ್ಲಿ ನಂಬಿಕೆಯನ್ನು ಅಭ್ಯಾಸಿಸುವ ಮೂಲಕ, ನೀತಿಯ ಒಂದು ಶಾಂತಿಭರಿತ ಹೊಸ ಲೋಕದಲ್ಲಿ ನಿತ್ಯಜೀವದ ಪ್ರತೀಕ್ಷೆ ನಮಗಿದೆ.—ಯೋಹಾನ 3:16, 36; ಪ್ರಕಟನೆ 21:3, 4.
ಒಂದು ಶಕ್ಯ ಸಮೃದ್ಧ ಪ್ರತಿಫಲ
9. (ಎ) ಇತರರನ್ನು ರಕ್ಷಿಸುವುದರಲ್ಲಿ ಕ್ರೈಸ್ತರು ಹೇಗೆ ಪಾಲುತೆಗೆದುಕೊಳ್ಳಬಲ್ಲರು? (ಬಿ) ತಿಮೊಥೆಯನ ಕುಟುಂಬದ ಸನ್ನಿವೇಶವು ಏನಾಗಿತ್ತು?
9 ಆತ್ಮೀಯರಾದ ಪ್ರೀತಿಪಾತ್ರ ಸಂಬಂಧಿಕರನ್ನು ಒಳಗೊಂಡು, ಇತರರನ್ನು ರಕ್ಷಿಸುವುದರಲ್ಲಿ ನೀವೂ ಒಂದು ಪಾಲನ್ನು ಪಡೆದುಕೊಳ್ಳಸಾಧ್ಯವಿದೆಯೆಂಬುದನ್ನು ನೀವು ಗ್ರಹಿಸಿದ್ದೀರೊ? ಅಪೊಸ್ತಲ ಪೌಲನು ತಿಮೊಥೆಯನಿಗೆ ಪ್ರಚೋದಿಸಿದ್ದು: “ನೀನು [ನಿನಗೆ ಕಲಿಸಲ್ಪಟ್ಟಿರುವ] ಈ ಕಾರ್ಯಗಳಲ್ಲಿ ನಿರತನಾಗಿರು; ಹೀಗಿರುವದರಿಂದ ನಿನ್ನನ್ನೂ ನಿನ್ನ ಉಪದೇಶ ಕೇಳುವವರನ್ನೂ ರಕ್ಷಿಸು”ವಿ. (1 ತಿಮೊಥೆಯ 4:16, ಓರೆಅಕ್ಷರಗಳು ನಮ್ಮವು.) ತಿಮೊಥೆಯನು ಒಂದು ವಿಭಜಿತ ಕುಟುಂಬದಲ್ಲಿ ಜೀವಿಸಿದ್ದನು; ಗ್ರೀಕನಾದ ಅವನ ತಂದೆ ಅವಿಶ್ವಾಸಿಯಾಗಿದ್ದನು. (ಅ. ಕೃತ್ಯಗಳು 16:1; 2 ತಿಮೊಥೆಯ 1:5; 3:14) ತಿಮೊಥೆಯನ ತಂದೆಯು ಎಂದಾದರೂ ಒಬ್ಬ ವಿಶ್ವಾಸಿಯಾದನೊ ಇಲ್ಲವೊ ಎಂಬುದರ ಕುರಿತು ನಮಗೆ ತಿಳಿದಿಲ್ಲವಾದರೂ, ತನ್ನ ಹೆಂಡತಿಯಾದ ಯೂನೀಕೆ ಮತ್ತು ತಿಮೊಥೆಯನ ನಂಬಿಗಸ್ತ ನಡವಳಿಕೆಯಿಂದ ಅವನಿಗಿದ್ದಿರಬಹುದಾದ ಸಾಧ್ಯತೆಯು ಬಹಳವಾಗಿ ವರ್ಧಿಸಿತ್ತು.
10. ತಮ್ಮ ಅವಿಶ್ವಾಸಿ ಸಂಗಾತಿಗಳ ಪರವಾಗಿ ಕ್ರೈಸ್ತರು ಏನು ಮಾಡಬಲ್ಲರು?
10 ಬೈಬಲ್ ಸತ್ಯತೆಯನ್ನು ದೃಢನಿಷ್ಠೆಯಿಂದ ಎತ್ತಿಹಿಡಿಯುವ ಗಂಡಂದಿರು ಮತ್ತು ಹೆಂಡತಿಯರು, ಅವರು ವಿಶ್ವಾಸಿಗಳಾಗುವಂತೆ ಸಹಾಯ ಮಾಡುವ ಮೂಲಕ ತಮ್ಮ ಕ್ರೈಸ್ತೇತರ ಸಂಗಾತಿಗಳನ್ನು ರಕ್ಷಿಸುವದಕ್ಕೆ ನೆರವನ್ನೀಯಬಲ್ಲರೆಂದು ಶಾಸ್ತ್ರವಚನಗಳು ಪ್ರಕಟಿಸುತ್ತವೆ. ಅಪೊಸ್ತಲ ಪೌಲನು ಬರೆದುದು: “ಒಬ್ಬ ಸಹೋದರನಿಗೆ ಕ್ರಿಸ್ತನಂಬಿಕೆಯಿಲ್ಲದ ಹೆಂಡತಿಯಿರಲಾಗಿ ಆಕೆ ಅವನೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಅವನು ಆಕೆಯನ್ನು ಬಿಡಬಾರದು. ಒಬ್ಬ ಸ್ತ್ರೀಗೆ ಕ್ರಿಸ್ತನಂಬಿಕೆಯಿಲ್ಲದ ಗಂಡನಿರಲಾಗಿ ಅವನು ಆಕೆಯೊಂದಿಗೆ ಒಗತನಮಾಡುವದಕ್ಕೆ ಸಮ್ಮತಿಸಿದರೆ ಆಕೆಯು ಅವನನ್ನು ಬಿಡಬಾರದು. ಎಲೌ ಸ್ತ್ರೀಯೇ, ನಿನ್ನ ಗಂಡನನ್ನು ರಕ್ಷಿಸುವಿಯೋ ಏನೋ ನಿನಗೇನುಗೊತ್ತು? ಎಲೈ ಪುರುಷನೇ, ನಿನ್ನ ಹೆಂಡತಿಯನ್ನು ರಕ್ಷಿಸುವಿಯೋ ಏನೋ ನಿನಗೇನು ಗೊತ್ತು?” (1 ಕೊರಿಂಥ 7:12, 13, 16) ಕಾರ್ಯತಃ, ಹೆಂಡತಿಯರು ತಮ್ಮ ಗಂಡಂದಿರನ್ನು ಹೇಗೆ ರಕ್ಷಿಸಸಾಧ್ಯವಿದೆ ಎಂಬುದನ್ನು ಅಪೊಸ್ತಲ ಪೇತ್ರನು ವಿವರಿಸಿದನು, ಅವನು ಪ್ರೋತ್ಸಾಹಿಸಿದ್ದು: “ನಿಮ್ಮ ಗಂಡಂದಿರಿಗೆ ಅಧೀನರಾಗಿರಿ. ಅವರಲ್ಲಿ ಕೆಲವರು ದೇವರ ವಾಕ್ಯಕ್ಕೆ ಅವಿಧೇಯರಾಗಿದ್ದರೂ ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”—1 ಪೇತ್ರ 3:1, 2.
11, 12. (ಎ) ಸಾವಿರಾರು ಕ್ರೈಸ್ತರು ಯಾವ ಪ್ರತಿಫಲವನ್ನು ಪಡೆದುಕೊಂಡಿದ್ದಾರೆ, ಮತ್ತು ಅದನ್ನು ಪಡೆದುಕೊಳ್ಳಲು ಅವರೇನು ಮಾಡುತ್ತಾರೆ? (ಬಿ) ನಂಬಿಗಸ್ತ ತಾಳ್ಮೆಗಾಗಿ ಪ್ರತಿಫಲವನ್ನು ಪಡೆದುಕೊಂಡಿರುವ ಕುಟುಂಬ ಸದಸ್ಯನೊಬ್ಬನ ಅನುಭವವನ್ನು ವಿವರಿಸಿರಿ.
11 ತಮ್ಮ ಸಾಕ್ಷಿ ಸಂಬಂಧಿಕರ ಕ್ರೈಸ್ತ ಚಟುವಟಿಕೆಯ ಕುರಿತು ತಿಂಗಳುಗಟ್ಟಲೆ ಮತ್ತು ವರ್ಷಗಟ್ಟಲೆ ವಿರೋಧಿಸಿದ ಬಳಿಕವೂ, ಇತ್ತೀಚಿನ ವರ್ಷಗಳಲ್ಲಿ ಅನೇಕ ಸಾವಿರಾರು ಮಂದಿ ಯೆಹೋವನ ಸಾಕ್ಷಿಗಳಾಗಿದ್ದಾರೆ. ದೃಢನಿಷ್ಠೆಯಿಂದ ಉಳಿದಿರುವಂತಹ ಕ್ರೈಸ್ತರಿಗಾಗಿ ಇದು ಎಂತಹ ಒಂದು ಪ್ರತಿಫಲವಾಗಿದೆ, ಮತ್ತು ಒಮ್ಮೆ ವಿರೋಧಿಗಳಾಗಿದ್ದವರಿಗೆ ಎಂತಹ ಒಂದು ಆಶೀರ್ವಾದವಾಗಿದೆ! ತನ್ನ ಭಾವಪರವಶವಾದ ಧ್ವನಿಯೊಂದಿಗೆ, 74 ವರ್ಷ ಪ್ರಾಯದ ಕ್ರೈಸ್ತ ಹಿರಿಯನೊಬ್ಬನು ವಿವರಿಸಿದ್ದು: “ನಾನು ಅವರನ್ನು ವಿರೋಧಿಸುತ್ತಿದ್ದ ವರ್ಷಗಳಲ್ಲಿ ನನ್ನ ಹೆಂಡತಿ ಮತ್ತು ಮಕ್ಕಳು ಸತ್ಯದೊಂದಿಗೆ ಅಂಟಿಕೊಂಡಿದುದಕ್ಕಾಗಿ ನಾನು ಅನೇಕವೇಳೆ ಅವರಿಗೆ ಉಪಕಾರ ಸಲ್ಲಿಸುತ್ತೇನೆ.” ಮೂರು ವರ್ಷಗಳ ವರೆಗೆ, ತನ್ನೊಂದಿಗೆ ಬೈಬಲಿನ ಕುರಿತು ಮಾತಾಡಲಿಕ್ಕಾಗಿ ತನ್ನ ಹೆಂಡತಿಗೆ ಅನುಮತಿಯನ್ನು ನೀಡಲು ಸಹ ತಾನು ಹಟಮಾರಿತನದಿಂದ ನಿರಾಕರಿಸಿದೆನೆಂದು ಅವನು ಹೇಳಿದನು. “ಆದರೆ ನನ್ನ ಮನಸ್ಸಿನಮೇಲೆ ಸರಿಯಾದ ಪರಿಣಾಮವುಂಟಾಗುವ ಸಮಯವನ್ನು ಅವಳು ಉಪಯೋಗಿಸಿಕೊಂಡಳು. ಮತ್ತು ಅವಳು ನನ್ನ ಪಾದವನ್ನು ತಿಕ್ಕುವಾಗ ನನಗೆ ಸಾಕ್ಷಿನೀಡಲಾರಂಭಿಸಿದಳು. ನನ್ನ ವಿರೋಧಕ್ಕೆ ಅವಳು ತನ್ನನ್ನು ಬಿಟ್ಟುಕೊಡದೆ ಇದುದ್ದಕ್ಕಾಗಿ ನಾನು ಅವಳಿಗೆ ಎಷ್ಟು ಕೃತಜ್ಞನಾಗಿದ್ದೇನೆ!” ಎಂದು ಅವನಂದನು.
12 ತನ್ನ ಕುಟುಂಬವನ್ನು ವಿರೋಧಿಸಿದ ಇನ್ನೊಬ್ಬ ಗಂಡನು ಬರೆದುದು: ‘ನಾನು ನನ್ನ ಹೆಂಡತಿಯ ಪರಮನೀಚ ವೈರಿಯಾಗಿದ್ದೆ, ಏಕೆಂದರೆ ಅವಳು ಸತ್ಯವನ್ನು ಪಡೆದುಕೊಂಡ ಬಳಿಕ ನಾನು ಅವಳಿಗೆ ಬೆದರಿಕೆಹಾಕಿದೆ ಮತ್ತು ನಾವು ಪ್ರತಿ ದಿನ ಜಗಳವಾಡಿದೆವು; ಹೇಳಬೇಕೆಂದರೆ, ನಾನೇ ಯಾವಾಗಲೂ ಜಗಳವನ್ನು ಆರಂಭಿಸಿದೆ. ಆದರೆ ಎಲ್ಲವೂ ವ್ಯರ್ಥವಾಯಿತು; ನನ್ನ ಹೆಂಡತಿ ಬೈಬಲಿಗೆ ಅಂಟಿಕೊಂಡಳು. ಹೀಗೆ, ಸತ್ಯದ ವಿರುದ್ಧ ಮತ್ತು ನನ್ನ ಹೆಂಡತಿ ಹಾಗೂ ಮಗುವಿನ ವಿರುದ್ಧವಾದ ಪ್ರಚಂಡ ಹೋರಾಟದಲ್ಲಿ ಹನ್ನೆರಡು ವರ್ಷಗಳು ಗತಿಸಿದವು. ಅವರಿಬ್ಬರಿಗೆ ನಾನು ಅವತಾರವೆತ್ತ ಪಿಶಾಚಿಯಾಗಿದ್ದೆ.’ ಕ್ರಮೇಣ ಆ ಮನುಷ್ಯನು ತನ್ನ ನಡವಳಿಕೆಯನ್ನು ಸೂಕ್ಷ್ಮದೃಷ್ಟಿಯಿಂದ ಪರೀಕ್ಷಿಸಲಾರಂಭಿಸಿದನು. ‘ತಾನೆಷ್ಟು ಕೀಳು ಮನಸ್ಸಿನವನಾಗಿದ್ದೆ ಎಂಬುದನ್ನು ನಾನು ಕಂಡುಕೊಂಡೆ’ ಎಂದು ಅವನು ವಿವರಿಸಿದನು. ‘ನಾನು ಬೈಬಲನ್ನು ಓದಿದೆ, ಮತ್ತು ಅದರ ಉಪದೇಶದ ಫಲವಾಗಿ ನಾನು ಇಂದು ಒಬ್ಬ ದೀಕ್ಷಾಸ್ನಾನಿತ ಸಾಕ್ಷಿಯಾಗಿದ್ದೇನೆ.’ ಹೌದು, ಅವನ ವಿರೋಧವನ್ನು 12 ವರ್ಷಗಳ ವರೆಗೆ ನಂಬಿಗಸ್ತಿಕೆಯಿಂದ ಸಹಿಸಿಕೊಳ್ಳುವ ಮೂಲಕ ‘ತನ್ನ ಗಂಡನನ್ನು ರಕ್ಷಿಸಲು’ ಸಹಾಯ ಮಾಡಿರುವ ಆ ಹೆಂಡತಿಯ ಮಹಾ ಪ್ರತಿಫಲದ ಕುರಿತಾಗಿ ಆಲೋಚಿಸಿರಿ!
ಯೇಸುವಿನಿಂದ ಕಲಿಯುವುದು
13. (ಎ) ಯೇಸುವಿನ ಜೀವನ ಮಾರ್ಗದಿಂದ ಗಂಡಹೆಂಡತಿಯರು ಕಲಿಯಬೇಕಾದ ಪ್ರಮುಖ ಪಾಠವು ಯಾವುದು? (ಬಿ) ದೇವರ ಚಿತ್ತಕ್ಕೆ ಅಧೀನಪಡಿಸಿಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಳ್ಳುವ ಜನರು, ಯೇಸುವಿನ ಮಾದರಿಯಿಂದ ಹೇಗೆ ಪ್ರಯೋಜನ ಪಡೆದುಕೊಳ್ಳಬಲ್ಲರು?
13 ಯೇಸುವಿನ ಜೀವನ ಮಾರ್ಗದಿಂದ ಗಂಡಂದಿರು ಮತ್ತು ಹೆಂಡತಿಯರು ಕಲಿಯಬೇಕಾದ ಪ್ರಮುಖ ಪಾಠವು, ದೇವರಿಗೆ ವಿಧೇಯತೆಯ ಕುರಿತಾಗಿದೆ. ‘ನಾನು ಆತನಿಗೆ ಮೆಚ್ಚಿಕೆಯಾದದ್ದನ್ನೇ ಯಾವಾಗಲೂ ಮಾಡುತ್ತೇನೆ’ ಎಂದು ಯೇಸು ಹೇಳಿದನು. “ಸ್ವಂತ ಚಿತ್ತ ನೆರವೇರಬೇಕೆಂದು ಅಪೇಕ್ಷಿಸದೆ ನನ್ನನ್ನು ಕಳುಹಿಸಿದಾತನ ಚಿತ್ತ ನೆರವೇರಬೇಕೆಂದು ಅಪೇಕ್ಷಿಸು” ತ್ತೇನೆ. (ಯೋಹಾನ 5:30; 8:29) ಒಮ್ಮೆ ಯೇಸು ದೇವರ ಚಿತ್ತದ ನಿರ್ದಿಷ್ಟ ಅಂಶವನ್ನು ಅಪ್ರೀತಿಯದ್ದಾಗಿ ಕಂಡುಕೊಂಡಿದ್ದಾಗಲೂ, ಆತನು ವಿಧೇಯನಾದನು. “ನಿನಗೆ ಇಷ್ಟವಿದ್ದರೆ ಈ ಪಾತ್ರೆಯನ್ನು ನನ್ನಿಂದ ತೊಲಗಿಸು” ಎಂದು ಆತನು ಪ್ರಾರ್ಥಿಸಿದನು. ಆದರೆ ಆ ಕೂಡಲೆ ಆತನು ಕೂಡಿಸಿದ್ದು: “ಹೇಗೂ ನನ್ನ ಚಿತ್ತವಲ್ಲ, ನಿನ್ನ ಚಿತ್ತವೇ ಆಗಲಿ.” (ಲೂಕ 22:42) ಆತನ ಚಿತ್ತವನ್ನು ಬದಲಾಯಿಸುವಂತೆ ಯೇಸು ದೇವರನ್ನು ಕೇಳಲಿಲ್ಲ; ಅವನಿಗಾಗಿ ದೇವರ ಚಿತ್ತವು ಏನೇ ಆಗಿದ್ದರೂ ಅದಕ್ಕೆಲ್ಲಾ ವಿಧೇಯತೆಯಿಂದ ಅಧೀನಪಡಿಸಿಕೊಳ್ಳುವ ಮೂಲಕ, ಆತನು ನಿಜವಾಗಿಯೂ ದೇವರನ್ನು ಪ್ರೀತಿಸಿದನೆಂದು ತೋರಿಸಿದನು. (1 ಯೋಹಾನ 5:3) ಯೇಸು ಮಾಡಿದಂತೆ, ಸರ್ವದಾ ದೇವರ ಚಿತ್ತವನ್ನು ಪ್ರಥಮವಾಗಿಡುವುದು, ಅವಿವಾಹಿತ ಜೀವನದಲ್ಲಿ ಮಾತ್ರವಲ್ಲ, ವಿವಾಹಿತ ಹಾಗೂ ಕುಟುಂಬ ಜೀವನದಲ್ಲಿ ಸಹ ಯಶಸ್ವಿಯನ್ನು ಗಳಿಸಲು ಅತ್ಯಾವಶ್ಯಕವಾಗಿ ಪ್ರಾಮುಖ್ಯವಾಗಿದೆ. ಇದು ಹಾಗೇಕೆಂದು ಪರಿಗಣಿಸಿ.
14. ಕೆಲವು ಕ್ರೈಸ್ತರು ಅಯುಕ್ತವಾಗಿ ಹೇಗೆ ತರ್ಕಿಸುತ್ತಾರೆ?
14 ಈ ಮುಂಚೆ ಗಮನಿಸಿದಂತೆ, ವಿಶ್ವಾಸಿಗಳು ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವಾಗ, ಅವರು ತಮ್ಮ ಅವಿಶ್ವಾಸಿ ಸಂಗಾತಿಗಳೊಂದಿಗೆ ಉಳಿಯಲು ಪ್ರಯತ್ನಿಸುತ್ತಾರೆ ಮತ್ತು ಅನೇಕವೇಳೆ ಅವರು ರಕ್ಷಣೆಯ ಹಾದಿಗೆ ಬರುವಂತೆ ಸಹಾಯ ಮಾಡಲು ಶಕ್ತರಾಗಿದ್ದಾರೆ. ಇಬ್ಬರು ಸಂಗಾತಿಗಳು ವಿಶ್ವಾಸಿಗಳಾಗಿರುವಾಗಲೂ, ಅವರ ವಿವಾಹವು ಆದರ್ಶಪ್ರಾಯವಾಗಿರುವುದಕ್ಕಿಂತ ಭಿನ್ನವಾಗಿರಬಹುದು. ಪಾಪಪೂರ್ಣ ಪ್ರವೃತ್ತಿಗಳ ಕಾರಣದಿಂದಾಗಿ, ಗಂಡಹೆಂಡತಿಯರು ಪರಸ್ಪರ ಪ್ರೀತಿಪರ ಆಲೋಚನೆಗಳನ್ನು ಯಾವಾಗಲೂ ಹೊಂದಿರುವುದಿಲ್ಲ. (ರೋಮಾಪುರ 7:19, 20; 1 ಕೊರಿಂಥ 7:28) ವಿವಾಹ ವಿಚ್ಛೇದಕ್ಕಾಗಿ ಅವರಿಗೆ ಶಾಸ್ತ್ರೀಯ ಆಧಾರಗಳು ಇಲ್ಲದಿದ್ದರೂ, ಕೆಲವರು ಬೇರೊಬ್ಬ ಸಂಗಾತಿಯನ್ನು ಪಡೆದುಕೊಳ್ಳುವುದನ್ನು ಬೆನ್ನಟ್ಟುವ ಮಟ್ಟಕ್ಕೆ ಸಹ ಹೋಗುತ್ತಾರೆ. (ಮತ್ತಾಯ 19:9; ಇಬ್ರಿಯ 13:4) ಗಂಡಹೆಂಡತಿಯರು ಒಟ್ಟಿಗೆ ಉಳಿಯುವ ದೇವರ ಚಿತ್ತವು ತೀರ ಕಷ್ಟಕರವಾದದ್ದಾಗಿರುವುದರಿಂದ, ತಮಗೆ ಇದು ಅತ್ಯುತ್ತಮವಾಗಿದೆಯೆಂದು ಅವರು ತರ್ಕಿಸುತ್ತಾರೆ. (ಮಲಾಕಿಯ 2:16; ಮತ್ತಾಯ 19:5, 6) ಪ್ರಶ್ನಾರಹಿತವಾಗಿ, ಇದು ದೇವರ ಆಲೋಚನೆಗಳ ಕುರಿತು ಯೋಚಿಸುವುದಕ್ಕೆ ಬದಲಾಗಿ ಮಾನವ ಆಲೋಚನೆಗಳನ್ನು ಯೋಚಿಸುವ ಇನ್ನೊಂದು ವಿದ್ಯಮಾನವಾಗಿದೆ.
15. ದೇವರಿಗೆ ಪ್ರಥಮ ಸ್ಥಾನವನ್ನು ಕೊಡುವುದು ಒಂದು ರಕ್ಷಣೆಯಾಗಿದೆ ಏಕೆ?
15 ದೇವರಿಗೆ ಪ್ರಥಮ ಸ್ಥಾನವನ್ನು ಕೊಡಲು ಇದು ಎಂತಹ ಒಂದು ಸಂರಕ್ಷಣೆಯಾಗಿದೆ! ಹಾಗೆ ಮಾಡುವ ವಿವಾಹಿತ ದಂಪತಿಗಳು, ದೇವರ ವಾಕ್ಯದ ಸಲಹೆಯನ್ನು ಅನ್ವಯಿಸುವ ಮೂಲಕ ಜೊತೆಯಾಗಿ ಉಳಿಯಲು ಮತ್ತು ತಮ್ಮ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುವರು. ಹೀಗೆ ಆತನ ಚಿತ್ತವು ಅಲಕ್ಷ್ಯ ಮಾಡಲ್ಪಡುವಾಗ ಫಲಿಸುವ ಎಲ್ಲಾ ರೀತಿಯ ಮನೋವ್ಯಥೆಗಳನ್ನು ಅವರು ದೂರಮಾಡುತ್ತಾರೆ. (ಕೀರ್ತನೆ 19:7-11) ವಿವಾಹ ವಿಚ್ಛೇದದ ಅಂತಿಮ ಭಾಗದಲ್ಲಿದ್ದಾಗ, ಬೈಬಲಿನ ಸಲಹೆಯನ್ನು ಅನುಸರಿಸಲು ನಿರ್ಧರಿಸಿದ ಒಬ್ಬ ಯುವ ದಂಪತಿಗಳಿಂದ ಇದು ದೃಷ್ಟಾಂತಿಸಲ್ಪಡುತ್ತದೆ. ವರ್ಷಗಳ ಬಳಿಕ ತನ್ನ ವಿವಾಹದಲ್ಲಿ ತಾನು ಹೊಂದಿದ್ದ ಸಂತೋಷದ ಕುರಿತು ಹೆಂಡತಿಯು ಜ್ಞಾಪಿಸಿಕೊಳ್ಳುವಾಗ ಅವಳು ಹೇಳಿದ್ದು: “ಈ ಎಲ್ಲಾ ವರ್ಷಗಳಲ್ಲಿ ನನ್ನ ಗಂಡನಿಂದ ಬೇರೆಯಾಗಿ ಜೀವಿಸಿದ್ದಿರಬಹುದಾದ ಸಂಭವನೀಯತೆಯನ್ನು ನಾನು ಪರಿಗಣಿಸುವಾಗ ನಾನು ಕುಳಿತು ಅಳಬೇಕು. ತದನಂತರ ನಾನು ಯೆಹೋವನಿಗೆ ಪ್ರಾರ್ಥಿಸುತ್ತೇನೆ ಮತ್ತು ಇಂತಹ ಒಂದು ಸಂತೋಷದ ಸಂಬಂಧದಲ್ಲಿ ನಮ್ಮನ್ನು ಒಟ್ಟುಗೂಡಿಸಿದ ಆತನ ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಆತನಿಗೆ ಉಪಕಾರ ಸಲ್ಲಿಸುತ್ತೇನೆ.”
ಗಂಡಂದಿರೇ, ಹೆಂಡತಿಯರೇ—ಕ್ರಿಸ್ತನನ್ನು ಅನುಕರಿಸಿರಿ!
16. ಗಂಡಂದಿರು ಮತ್ತುಹೆಂಡತಿಯರು ಇಬ್ಬರಿಗಾಗಿ ಯೇಸು ಯಾವ ಮಾದರಿಯನ್ನಿಟ್ಟನು?
16 ದೇವರಿಗೆ ಸರ್ವದಾ ಪ್ರಥಮ ಸ್ಥಾನವನ್ನು ಕೊಟ್ಟ ಯೇಸುವು, ಗಂಡಹೆಂಡತಿಯರಿಬ್ಬರಿಗೂ ಒಂದು ಅದ್ಭುತಕರವಾದ ಮಾದರಿಯನ್ನು ಇಟ್ಟನು, ಮತ್ತು ಅದಕ್ಕೆ ಜಾಗರೂಕ ಗಮನವನ್ನು ಕೊಡಲಿಕ್ಕಾಗಿ ಅವರು ಚೆನ್ನಾಗಿ ಕಾರ್ಯನಡಿಸುತ್ತಾರೆ. ಕ್ರೈಸ್ತ ಸಭೆಯ ಸದಸ್ಯರ ಮೇಲೆ ಯೇಸು ಕೋಮಲ ತಲೆತನವನ್ನು ಪ್ರಯೋಗಿಸುವಂತಹ ವಿಧಾನವನ್ನು ಅನುಕರಿಸುವಂತೆ ಗಂಡಂದಿರು ಪ್ರಚೋದಿಸಲ್ಪಡುತ್ತಾರೆ. (ಎಫೆಸ 5:23) ಮತ್ತು ದೇವರಿಗೆ ಅಧೀನತೆಯನ್ನು ತೋರಿಸಿದ ಯೇಸುವಿನ ದೋಷರಹಿತ ಮಾದರಿಯಿಂದ ಕ್ರೈಸ್ತ ಹೆಂಡತಿಯರು ಕಲಿಯಬಲ್ಲರು.—1 ಕೊರಿಂಥ 11:3.
17, 18. ಯಾವ ವಿಧಗಳಲ್ಲಿ ಯೇಸು ಗಂಡಂದಿರಿಗಾಗಿ ಒಂದು ಅತ್ಯುತ್ತಮವಾದ ಮಾದರಿಯನ್ನಿಟ್ಟನು?
17 ಬೈಬಲು ಆಜ್ಞಾಪಿಸುವುದು: “ಪುರುಷರೇ, ಕ್ರಿಸ್ತನು ಸಭೆಯನ್ನು ಪ್ರೀತಿಸಿದ ಪ್ರಕಾರವೇ ನಿಮ್ಮನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಆತನು ಅದನ್ನು ಪ್ರತಿಷ್ಠೆಪಡಿಸುವದಕ್ಕಾಗಿ ತನ್ನನ್ನು ಒಪ್ಪಿಸಿಕೊಟ್ಟನು.” (ಎಫೆಸ 5:25, 26) ತನ್ನ ಹಿಂಬಾಲಕರ ಸಭೆಗಾಗಿ ಯೇಸು ತನ್ನ ಪ್ರೀತಿಯನ್ನು ತೋರಿಸಿದ ಪ್ರಾಮುಖ್ಯ ವಿಧಾನವು, ಅವರ ಆಪ್ತ ಸ್ನೇಹಿತನಾಗಿರುವ ಮೂಲಕವಾಗಿತ್ತು. “ನಿಮ್ಮನ್ನು ಸ್ನೇಹಿತರೆಂದು ಹೇಳಿದ್ದೇನೆ; ತಂದೆಯ ಕಡೆಯಿಂದ ನಾನು ಕೇಳಿದ್ದನ್ನೆಲ್ಲಾ ನಿಮಗೆ ತಿಳಿಸಿದ್ದೇನೆ” ಎಂದು ಯೇಸು ಹೇಳಿದನು. (ಯೋಹಾನ 15:15) ಯೇಸು ತನ್ನ ಶಿಷ್ಯರೊಂದಿಗೆ—ಅವರೊಂದಿಗೆ ಆತನು ಮಾಡಿದ್ದ ಅನೇಕಾನೇಕ ಚರ್ಚೆಗಳು—ಮಾತಾಡುತ್ತಾ ಕಳೆದ ಎಲ್ಲಾ ಸಮಯದ ಕುರಿತು ಮತ್ತು ಆತನು ಅವರಲ್ಲಿ ಇಟ್ಟಂತಹ ಭರವಸೆಯ ಕುರಿತು ಯೋಚಿಸಿರಿ! ಅದು ಗಂಡಂದಿರಿಗೆ ಒಂದು ಅತ್ಯುತ್ತಮವಾದ ಮಾದರಿಯಾಗಿರುವುದಿಲ್ಲವೊ?
18 ಯೇಸು ತನ್ನ ಶಿಷ್ಯರಲ್ಲಿ ಒಂದು ನಿಜವಾದ ಆಸಕ್ತಿಯನ್ನು ವಹಿಸಿದನು ಮತ್ತು ಅವರಿಗಾಗಿ ಪ್ರಾಮಾಣಿಕವಾದ ಅಕ್ಕರೆಯು ಆತನಿಗಿತ್ತು. (ಯೋಹಾನ 13:1) ಆತನ ಬೋಧನೆಗಳು ಅವರಿಗೆ ಅಸ್ಪಷ್ಟವಾಗಿಗಿದ್ದಾಗ, ವಿಷಯಗಳನ್ನು ಸ್ಪಷ್ಟೀಕರಿಸಲಿಕ್ಕಾಗಿ ಆತನು ತಾಳ್ಮೆಯಿಂದ ಖಾಸಗಿಯಾಗಿ ಸಮಯವನ್ನು ತೆಗೆದುಕೊಂಡನು. (ಮತ್ತಾಯ 13:36-43) ಗಂಡಂದಿರೇ, ನಿಮ್ಮ ಹೆಂಡತಿಯ ಆತ್ಮಿಕ ಕ್ಷೇಮವು ನಿಮಗೆ ಅಷ್ಟೇ ಪ್ರಾಮುಖ್ಯವಾಗಿದೆಯೆ? ನೀವಿಬ್ಬರೂ ಬೈಬಲ್ ಸತ್ಯತೆಗಳನ್ನು ಮನಸ್ಸು ಮತ್ತು ಹೃದಯದಲ್ಲಿ ಸ್ಪಷ್ಟವಾಗಿಗಿ ಇಟ್ಟುಕೊಂಡಿದ್ದೀರೆಂಬುದನ್ನು ಖಚಿತಪಡಿಸಿಕೊಳ್ಳುತ್ತಾ, ನೀವು ಅವಳೊಂದಿಗೆ ಸಮಯವನ್ನು ಕಳೆಯುತ್ತೀರೊ? ಬಹುಶಃ ಅವರಲ್ಲಿ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ತರಬೇತುಗೊಳಿಸುತ್ತಾ, ಯೇಸುವು ಶುಶ್ರೂಷೆಯಲ್ಲಿ ತನ್ನ ಅಪೊಸ್ತಲರ ಜೊತೆಗೂಡಿದನು. ಮನೆಯಿಂದಮನೆಗೆ ಭೇಟಿನೀಡುವುದರಲ್ಲಿ ಮತ್ತು ಬೈಬಲ್ ಅಧ್ಯಯನಗಳನ್ನು ನಡೆಸುವುದರಲ್ಲಿ ಪಾಲನ್ನು ತೆಗೆದುಕೊಳ್ಳುತ್ತಾ, ನೀವು ಶುಶ್ರೂಷೆಯಲ್ಲಿ ನಿಮ್ಮ ಹೆಂಡತಿಯ ಜೊತೆಗೂಡುತ್ತೀರೊ?
19. ತನ್ನ ಅಪೊಸ್ತಲರ ಆವರ್ತಕ ದೌರ್ಬಲ್ಯಗಳೊಂದಿಗೆ ಯೇಸು ವ್ಯವಹರಿಸಿದ ರೀತಿಯು, ಗಂಡಂದಿರಿಗಾಗಿ ಒಂದು ಮಾದರಿಯನ್ನು ಹೇಗೆ ಒದಗಿಸಿತು?
19 ವಿಶೇಷವಾಗಿ ತನ್ನ ಅಪೊಸ್ತಲರ ಅಪರಿಪೂರ್ಣತೆಗಳೊಂದಿಗೆ ವ್ಯವಹರಿಸುವುದರಲ್ಲಿ ಯೇಸುವು ಗಂಡಂದಿರಿಗಾಗಿ ಒಂದು ಯಥಾರ್ಥವಾದ ಮಾದರಿಯನ್ನು ಒದಗಿಸುತ್ತಾನೆ. ತನ್ನ ಅಪೊಸ್ತಲರೊಂದಿಗಿನ ಆತನ ಕಡೆಯ ಭೋಜನದ ಸಮಯದಲ್ಲಿ, ಪ್ರತಿಸ್ಪರ್ಧೆಯ ಆವರ್ತಕ ಆತ್ಮವನ್ನು ಆತನು ಕಂಡುಕೊಳ್ಳಶಕ್ತನಾದನು. ಆತನು ಅವರನ್ನು ಒರಟಾಗಿ ಟೀಕಿಸಿದನೊ? ಇಲ್ಲ, ಬದಲಾಗಿ ಆತನು ಪ್ರತಿಯೊಬ್ಬರ ಪಾದಗಳನ್ನು ನಮ್ರತೆಯಿಂದ ತೊಳೆದನು. (ಮಾರ್ಕ 9:33-37; 10:35-45; ಯೋಹಾನ 13:2-17) ನೀವು ನಿಮ್ಮ ಹೆಂಡತಿಯೊಂದಿಗೆ ಅಂತಹ ತಾಳ್ಮೆಯನ್ನು ತೋರಿಸುತ್ತೀರೊ? ಒಂದು ಆವರ್ತಕ ದೌರ್ಬಲ್ಯದ ಕುರಿತು ಆಪಾದಿಸುವುದಕ್ಕೆ ಬದಲಾಗಿ, ಅವಳಿಗೆ ಸಹಾಯ ಮಾಡಲು ಮತ್ತು ನಿಮ್ಮ ಮಾದರಿಯಿಂದ ಅವಳ ಹೃದಯವನ್ನು ತಲಪಲು ನೀವು ತಾಳ್ಮೆಯಿಂದ ಪ್ರಯತ್ನಿಸುತ್ತೀರೊ? ಅಪೊಸ್ತಲರು ಕ್ರಮೇಣವಾಗಿ ಪ್ರತಿಕ್ರಿಯಿಸಿದಂತೆ, ಅಂತಹ ಪ್ರೀತಿಪರ ಅನುಕಂಪಕ್ಕೆ ಹೆಂಡತಿಯರು ಪ್ರತಿಕ್ರಿಯಿಸುವುದು ಸಂಭವನೀಯ.
20. ಕ್ರೈಸ್ತ ಹೆಂಡತಿಯರು ಯಾವುದನ್ನು ಎಂದಿಗೂ ಮರೆಯಬಾರದು, ಮತ್ತು ಅವರಿಗಾಗಿ ಯಾರು ಒಂದು ಮಾದರಿಯೋಪಾದಿ ಒದಗಿಸಲ್ಪಟ್ಟಿದ್ದಾರೆ?
20 “ಕ್ರಿಸ್ತನಿಗೆ ದೇವರು ತಲೆ ಆಗಿದ್ದಾನೆ” ಎಂಬುದನ್ನು ಎಂದಿಗೂ ಮರೆಯದಿದ್ದ ಯೇಸುವನ್ನು, ಹೆಂಡತಿಯರು ಸಹ ಪರಿಗಣಿಸುವ ಅಗತ್ಯವಿದೆ. ಆತನು ಯಾವಾಗಲೂ ತನ್ನ ಸ್ವರ್ಗೀಯ ತಂದೆಗೆ ಅಧೀನಪಡಿಸಿಕೊಂಡನು. ತದ್ರೀತಿಯಲ್ಲಿ, ಹೆಂಡತಿಯರು “ಸ್ತ್ರೀಗೆ ಪುರುಷನು ತಲೆ,” ಹೌದು, ತಮ್ಮ ಗಂಡಂದಿರು ತಮಗೆ ತಲೆಯಾಗಿದ್ದಾರೆ ಎಂಬುದನ್ನು ಮರೆಯಬಾರದು. (1 ಕೊರಿಂಥ 11:3; ಎಫೆಸ 5:23) ಆದಿ ಕಾಲಗಳ “ಭಕ್ತೆ [“ಪವಿತ್ರ,” NW]ಯರಾದ ಸ್ತ್ರೀಯರ,” ವಿಶೇಷವಾಗಿ “ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದ” ಸಾರಳ ಮಾದರಿಯನ್ನು ಪರಿಗಣಿಸುವಂತೆ ಅಪೊಸ್ತಲ ಪೇತ್ರನು ಕ್ರೈಸ್ತ ಹೆಂಡತಿಯರನ್ನು ಪ್ರಚೋದಿಸಿದನು.—1 ಪೇತ್ರ 3:5, 6.
21. ಅಬ್ರಹಾಮ ಮತ್ತು ಸಾರಳ ವಿವಾಹವು ಯಶಸ್ವಿಯಾಗಿತ್ತಾದರೂ, ಲೋಟ ಮತ್ತು ಅವನ ಹೆಂಡತಿಯ ವಿವಾಹವು ಅಪಜಯದ್ದಾಗಿತ್ತೇಕೆ?
21 ವಿದೇಶವೊಂದರಲ್ಲಿ ಗುಡಾರಗಳಲ್ಲಿ ವಾಸಮಾಡಲಿಕ್ಕಾಗಿ ಸಾರಳು, ಒಂದು ಸಮೃದ್ಧವಾದ ಪಟ್ಟಣದಲ್ಲಿನ ಸುಖಸೌಕರ್ಯಗಳಿಂದ ಕೂಡಿದ ಮನೆಯನ್ನು ಬಿಟ್ಟುಬಂದಳೆಂಬುದು ಸ್ಪಷ್ಟ. ಏಕೆ? ಅವಳು ಆ ಜೀವನಶೈಲಿಯನ್ನು ಇಷ್ಟಪಟ್ಟ ಕಾರಣದಿಂದಲೊ? ಇಲ್ಲವೆಂಬುದು ಸಂಭವನೀಯ. ಅವಳ ಗಂಡನು ಅವಳನ್ನು ಹೋಗಲು ಕೇಳಿಕೊಂಡದರ್ದಿಂದಲೊ? ಅವನ ದೈವಭಕ್ತಿಯುಳ್ಳ ಗುಣಗಳ ಕಾರಣದಿಂದ ಸಾರಳು ಅಬ್ರಹಾಮನನ್ನು ಪ್ರೀತಿಸಿ ಗೌರವಿಸಿದ್ದರಿಂದ, ಇದೂ ಒಂದು ಅಂಶವಾಗಿತ್ತೆಂಬುದರಲ್ಲಿ ಸಂದೇಹವಿಲ್ಲ. (ಆದಿಕಾಂಡ 18:12) ಆದರೆ ಅವಳು ತನ್ನ ಗಂಡನೊಂದಿಗೆ ಹೋದದ್ದರ ಪ್ರಮುಖ ಕಾರಣವು, ಯೆಹೋವನಿಗಾಗಿ ಅವಳ ಪ್ರೀತಿ ಮತ್ತು ದೇವರ ಮಾರ್ಗದರ್ಶನವನ್ನು ಹಿಂಬಾಲಿಸುವ ಅವಳ ಹೃತ್ಪೂರ್ವಕವಾದ ಅಪೇಕ್ಷೆಯಾಗಿತ್ತು. (ಆದಿಕಾಂಡ 12:1) ದೇವರಿಗೆ ವಿಧೇಯತೆ ತೋರಿಸುವುದರಲ್ಲಿ ಅವಳು ಸಂತೋಷವನ್ನು ಕಂಡುಕೊಂಡಳು. ಇನ್ನೊಂದುಕಡೆ ಲೋಟನ ಹೆಂಡತಿ, ದೇವರ ಚಿತ್ತವನ್ನು ಮಾಡಲು ಹಿಂಜರಿದಳು ಮತ್ತು ಹೀಗೆ ತನ್ನ ಸ್ವಂತ ಪಟ್ಟಣವಾದ ಸೊದೋಮ್ನಲ್ಲಿ ಬಿಟ್ಟಂತಹ ವಸ್ತುಗಳಿಗಾಗಿ ಹಂಬಲಿಕೆಯಿಂದ ಹಿಂದಿರುಗಿ ನೋಡಿದಳು. (ಆದಿಕಾಂಡ 19:15, 25, 26; ಲೂಕ 17:32) ಅವಳು ದೇವರಿಗೆ ಅವಿಧೇಯತೆ ತೋರಿಸಿದ ಕಾರಣಕ್ಕಾಗಿಯೇ, ಆ ವಿವಾಹಕ್ಕೆ ಎಂತಹ ಒಂದು ದುರಂತಮಯ ಅಂತ್ಯ!
22. (ಎ) ಕುಟುಂಬದ ಸದಸ್ಯರು ಯಾವ ಸ್ವಪರೀಕ್ಷೆಯನ್ನು ಬುದ್ಧಿಪೂರ್ವಕವಾಗಿ ಮಾಡುವರು? (ಬಿ) ನಮ್ಮ ಮುಂದಿನ ಅಭ್ಯಾಸದಲ್ಲಿ ನಾವು ಏನನ್ನು ಪರಿಗಣಿಸುವೆವು?
22 ಆದುದರಿಂದ ಒಬ್ಬ ಗಂಡ ಅಥವಾ ಹೆಂಡತಿಯೋಪಾದಿ, ನೀವು ನಿಮ್ಮನ್ನು ಹೀಗೆ ಕೇಳಿಕೊಳ್ಳುವುದು ಅತ್ಯಾವಶ್ಯಕವಾಗಿದೆ, ‘ನಮ್ಮ ಕುಟುಂಬದಲ್ಲಿ ದೇವರಿಗೆ ಪ್ರಥಮ ಸ್ಥಾನವಿದೆಯೆ? ದೇವರು ನನಗೆ ಕೊಟ್ಟಿರುವ ಕುಟುಂಬ ಪಾತ್ರವನ್ನು ಪೂರೈಸಲಿಕ್ಕಾಗಿ ನಾನು ನಿಜವಾಗಿಯೂ ಪ್ರಯತ್ನಿಸುತ್ತೇನೊ? ನನ್ನ ಸಂಗಾತಿಯನ್ನು ಪ್ರೀತಿಸಲು ಮತ್ತು ಅವಳು ಯೆಹೋವನೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಪಡೆದುಕೊಳ್ಳುವಂತೆ ಅಥವಾ ಕಾಪಾಡಿಕೊಳ್ಳುವಂತೆ ಸಹಾಯ ಮಾಡಲು ನಾನು ಯಥಾರ್ಥವಾದ ಒಂದು ಪ್ರಯತ್ನವನ್ನು ಮಾಡುತ್ತೇನೊ?’ ಅಧಿಕಾಂಶ ಕುಟುಂಬಗಳಲ್ಲಿ ಮಕ್ಕಳೂ ಇದ್ದಾರೆ. ಹೆತ್ತವರ ಪಾತ್ರ ಮತ್ತು ದೇವರಿಗೆ ಪ್ರಥಮ ಸ್ಥಾನವನ್ನು ಕೊಡಲು ಅವರಿಗೆ ಮತ್ತು ಅವರ ಮಕ್ಕಳಿಗಿರುವ ಅಗತ್ಯದ ಕುರಿತು ನಾವು ಮುಂದೆ ಪರಿಗಣಿಸುವೆವು.
ನಿಮಗೆ ನೆನಪಿದೆಯೆ?
◻ ಅನೇಕ ಕುಟುಂಬಗಳಿಗೆ, ಯೇಸುವಿನ ಬೋಧನೆಗಳ ಪರಿಣಾಮಗಳು ಯಾವುವಾಗಿರಬಹುದು?
◻ ಸಾವಿರಾರು ದೃಢನಿಷ್ಠ ಕ್ರೈಸ್ತರು ಯಾವ ಪ್ರತಿಫಲವನ್ನು ಪಡೆದುಕೊಂಡರು?
◻ ಅನೈತಿಕತೆ ಮತ್ತು ವಿವಾಹ ವಿಚ್ಛೇದವನ್ನು ದೂರಮಾಡುವಂತೆ ಸಂಗಾತಿಗಳಿಗೆ ಯಾವುದು ಸಹಾಯ ಮಾಡುವುದು?
◻ ಯೇಸುವಿನ ಮಾದರಿಯಿಂದ ಗಂಡಂದಿರು ಏನನ್ನು ಕಲಿಯಬಲ್ಲರು?
◻ ಒಂದು ಸಂತೋಷದ ವಿವಾಹಕ್ಕೆ ಹೆಂಡತಿಯರು ಹೇಗೆ ನೆರವನ್ನೀಯಬಲ್ಲರು?
[ಪುಟ 10 ರಲ್ಲಿರುವ ಚಿತ್ರ]
ತನ್ನ ವಿವಾಹದ ಯಶಸ್ವಿಗೆ ಸಾರಳು ಹೇಗೆ ನೆರವನ್ನಿತ್ತಳು?