ನಿಮ್ಮ ವ್ಯಾಪಾರವು ನಿಮಗೆ ಯಾವ ವೆಚ್ಚವನ್ನು ತಗಲಿಸುವುದು?
ದಕ್ಷಿಣ ಅಮೆರಿಕದ ರಾಷ್ಟ್ರವೊಂದರ ಅಧ್ಯಕ್ಷರ ಪತ್ನಿಯು, ತನ್ನ ಕುಟುಂಬದ ಸದಸ್ಯರಿಂದ ಸ್ಥಾಪಿಸಲ್ಪಟ್ಟ ಕೃತ್ರಿಮ ವ್ಯಾಪಾರ ಸಂಘಗಳಿಗೆ ಕಾಂಟ್ರ್ಯಾಕ್ಟ್ಕೊಟ್ಟು ಲಕ್ಷಾಂತರ ಡಾಲರುಗಳನ್ನು ಹಾಯಿಸಿದಳೆಂದು ಆರೋಪಿಸಲ್ಪಟ್ಟಳು. ಭಾರತದಲ್ಲಿ 38 ವರ್ಷ ಪ್ರಾಯದ ಒಬ್ಬ ಷೇರು ದಳ್ಳಾಳಿಯು ದಸ್ತಗಿರಿ ಮಾಡಲ್ಪಟ್ಟು, ತನ್ನ ಬಹಳ ಆಡಂಬರದ ವಾಸದ ಮಹಡಿಯಿಂದ ಮತ್ತು 29 ಕಾರುಗಳಿಂದ ಅಗಲಿಸಲ್ಪಟ್ಟನು. ಇದು 160 ಕೋಟಿ ಬಿಲಿಯನ್ ಡಾಲರುಗಳ ಬ್ಯಾಂಕಿಂಗ್ ಮತ್ತು ಷೇರು ಮಾರುಕಟ್ಟೆಯ ಹಗರಣದಲ್ಲಿ ಅವನ ಆಪಾದಿತ ಒಳಗೊಳ್ಳುವಿಕೆಯಿಂದಾಗಿತ್ತು. ಫಿಲಿಪ್ಪೀನ್ಸ್ನಲ್ಲಿ, ಒಂದು ದ್ವೀಪದ ಸಾವಿರಾರು ನಿವಾಸಿಗಳು ಬಂದೂಕುಗಳನ್ನು ನ್ಯಾಯವಿರುದ್ಧವಾಗಿ ತಯಾರಿಸುವ ಮೂಲಕ ತಮ್ಮ ಜೀವನೋಪಾಯವನ್ನು ಸಂಪಾದಿಸುತ್ತಾರೆ. ಈ ಲಾಭಕರ ವೃತ್ತಿಯಲ್ಲಿ ಉಳಿಯಲು, ಅಡ್ಡೈಸದೆ ಇರುವಂತೆ ಅವರು ಅಧಿಕಾರಿಗಳಿಗೆ ಲಂಚ ಕೊಡುವುದು ವಾಡಿಕೆ ಎಂದು ವರದಿಸಲಾಗುತ್ತದೆ.
ಹೌದು, ಲೋಕದ ಎಲ್ಲೆಡೆಯೂ ವ್ಯಾಪಾರದಲ್ಲಿ ಅಪ್ರಾಮಾಣಿಕತೆ ಮತ್ತು ವಂಚನೆಯು ಬಹಳವಾಗಿ ಹಬ್ಬಿರುತ್ತದೆ. ಮತ್ತು ಅನೇಕ ಬಾರಿ ಅದು ಒಳಗೊಂಡ ಜನರಿಗೆ ಸ್ಥಾನಮಾನದ ಅಷ್ಟೇ ಅಲ್ಲದೆ ಹಣದ ನಷ್ಟವನ್ನೂ ಉಂಟುಮಾಡುತ್ತದೆ.
ನಿಮ್ಮ ಕುರಿತೇನು? ನೀವು ವ್ಯಾಪಾರದಲ್ಲಿ ತೊಡಗಿದ್ದೀರೊ? ಅಥವಾ ಒಂದು ವ್ಯಾಪಾರವನ್ನು ಆರಂಭಿಸುವುದರ ಕುರಿತು ನೀವು ಯೋಚಿಸುತ್ತಿದ್ದೀರೊ? ಅದು ನಿಮಗೆ ಯಾವ ವೆಚ್ಚವನ್ನು ತಗಲಿಸುವುದು? ಅನಿವಾರ್ಯವಾಗಿ ವ್ಯಾಪಾರದಲ್ಲಿರುವುದು ಸ್ವಲ್ಪ ವೆಚ್ಚವನ್ನಾದರೂ ತಗಲಿಸುವುದು. ಇದು ಕೆಟ್ಟದೆಂಬುದಾಗಿರಬೇಕಾಗಿಲ್ಲ. ಹಾಗಿದ್ದರೂ, ಒಂದು ವ್ಯಾಪಾರ ಕೆಲಸವನ್ನು ಕೈಕೊಳ್ಳುವ ಮೊದಲು ಅಥವಾ ಈಗಾಗಲೇ ಸ್ಥಾಪಿಸಲ್ಪಟ್ಟಿರುವ ವ್ಯಾಪಾರದ ಕುರಿತು ನಿರ್ಣಯಗಳನ್ನು ಮಾಡುವ ಮೊದಲು ವೆಚ್ಚವನ್ನು ಎಣಿಸುವುದು ಬುದ್ಧಿವಂತಿಕೆಯಾಗಿದೆ. (ಲೂಕ 14:28) ನೀವು ಪರಿಗಣನೆಗೆ ತೆಗೆದುಕೊಳ್ಳಲು ಬಯಸುವ ಕೆಲವು ವೆಚ್ಚಗಳನ್ನು ಪುಟ 31 ರಲ್ಲಿರುವ ರೇಖಾಚೌಕವು ತೋರಿಸುತ್ತದೆ.
ವ್ಯಾಪಾರದಲ್ಲಿರುವುದು ಸರಳವಾದ ವಿಷಯವಲ್ಲವೆಂಬುದು ಸ್ಪಷ್ಟ. ಕ್ರೈಸ್ತನೊಬ್ಬನಿಗೆ, ಪರಿಗಣಿಸಲಿಕ್ಕಾಗಿ ಆತ್ಮಿಕ ಹಾಗೂ ನೈತಿಕ ಹಂಗುಗಳಿರುತ್ತವೆ. ನೀವು ವೆಚ್ಚಗಳನ್ನು ನಿಭಾಯಿಸಿ ಆತ್ಮಿಕವಾಗಿ ಸಮತೆಯಲ್ಲಿ ಉಳಿಯಬಲ್ಲಿರೊ? ಕೆಲವೊಂದು ವೆಚ್ಚಗಳು ನೀವು ನೈತಿಕವಾಗಿ ಸ್ವೀಕರಿಸಬಲ್ಲ ವಿಷಯಗಳನ್ನು ಮೀರಿ ಇವೆಯೋ? ಯಾವ ವೆಚ್ಚಗಳು ಸ್ವೀಕಾರಯೋಗ್ಯ ಮತ್ತು ಯಾವ ವೆಚ್ಚಗಳು ಸ್ವೀಕಾರಯೋಗ್ಯವಲ್ಲವೆಂದು ನಿರ್ಧರಿಸುವಂತೆ ನಿಮಗೆ ಸಹಾಯ ಮಾಡುವ ಕೆಲವು ಮೂಲ ತತ್ವಗಳು ಯಾವುವು?
ಹಣವನ್ನು ಅದರ ಸ್ಥಾನದಲ್ಲಿಡಿರಿ
ವ್ಯಾಪಾರವೊಂದನ್ನು ನಡೆಸಲು ಹಣದ ಅಗತ್ಯವಿದೆ, ಮತ್ತು ಒಂದು ವ್ಯಾಪಾರವು ಒಬ್ಬನ ಕುಟುಂಬವನ್ನು ಪೋಷಿಸಲು ಸಾಕಷ್ಟು ಹಣವನ್ನು ತರುವುದೆಂದು ನಿರೀಕ್ಷಿಸಲಾಗುತ್ತದೆ. ಹಾಗಿದ್ದರೂ, ಹಣಕ್ಕೆ ಸಂಬಂಧಿಸಿರುವ ಗುರಿಗಳು ಸುಲಭವಾಗಿ ವಿರೂಪಗೊಳ್ಳಬಲ್ಲವು. ಲೋಭವು ಒಂದು ಅಂಶವಾಗಬಹುದು. ಅನೇಕ ಜನರಿಗೆ, ಹಣವು ಒಳಗೊಂಡಿರುವಲ್ಲಿ ಬೇರೆ ಎಲ್ಲವೂ ಅಪ್ರಧಾನವಾಗಿರುತ್ತದೆ. ಆದರೂ, ಬೈಬಲಿನ ಜ್ಞಾನೋಕ್ತಿಗಳ ಪುಸ್ತಕದ ಒಬ್ಬ ಬರಹಗಾರನಾದ ಆಗೂರನು, “ಬಡತನವನ್ನಾಗಲಿ ಐಶ್ವರ್ಯವನ್ನಾಗಲಿ ಕೊಡದೆ ನನಗೆ ತಕ್ಕಷ್ಟು ಆಹಾರವನ್ನು ಭೋಜನಮಾಡಿಸು,” ಎಂದು ಹೇಳಿದಾಗ ಸಮತೆಯ ದೃಷ್ಟಿಕೋನವನ್ನು ವ್ಯಕ್ತಪಡಿಸಿದನು. (ಜ್ಞಾನೋಕ್ತಿ 30:8) ಜೀವನಾಧಾರಕ್ಕೆ ಸಾಕಾಗುವಷ್ಟು ಮೊತ್ತದಿಂದ ತೃಪ್ತನಾಗುವುದರ ಮೌಲ್ಯವನ್ನು ಅವನು ಗ್ರಹಿಸಿದನು—ವ್ಯಾಪಾರದಲ್ಲಿ ಕೆಲವರು ಹೇಳುವಂತೆ ಅವನು “ಐಶ್ವರ್ಯವನ್ನು ಗಳಿಸಲು” ಬಯಸಲಿಲ್ಲ.
ಲೋಭವಾದರೊ, ಸುವರ್ಣ ಅವಕಾಶವೆಂದು ಕರೆಯಲ್ಪಡುವ ಆ ಸಂದರ್ಭವು ಏಳುವಾಗ, ಈ ತತ್ವವನ್ನು ಒಬ್ಬನು ಮರೆಯುವಂತೆ ಮಾಡಬಲ್ಲದು. ಅಭಿವೃದ್ಧಿಶೀಲ ದೇಶವೊಂದರಲ್ಲಿ ಯೆಹೋವನ ಸಾಕ್ಷಿಗಳ ಒಬ್ಬ ಸಂಚರಣ ಶುಶ್ರೂಷಕನು ಇಂತಹ ಒಂದು ವಿದ್ಯಮಾನದ ಕುರಿತು ವರದಿಸಿದನು. ಬಂಡವಾಳ ಹಣದ ಅಗತ್ಯವಿದ್ದ ಒಂದು ಕಂಪನಿಯು, ಹಣ ಹಾಕುವವರು ಬಹುಶಃ ಕೆಲವೇ ತಿಂಗಳುಗಳಲ್ಲಿ ತಮ್ಮ ಹಣವನ್ನು ಬೇಗನೆ ಇಮ್ಮಡಿಗೊಳಿಸುವರು ಎಂಬ ಭಾವನೆಯನ್ನು ನೀಡಿತು. ಕಡಿಮೆ ಪ್ರಯತ್ನದಿಂದ ಬಹಳಷ್ಟು ಹಣವನ್ನು ಮಾಡುವ ಈ ಅವಕಾಶವು, ಹಣವನ್ನು ಹಾಕುವಂತೆ ಅನೇಕರನ್ನು ನಡೆಸಿತು. ಸಂಚರಣ ಶುಶ್ರೂಷಕನು ಹೇಳುವುದು: “ಅದರಲ್ಲಿ ಒಳಗೊಳ್ಳಲು ಕೆಲವರು ಬಹಳ ಆತುರವುಳ್ಳವರಾಗಿದ್ದರು. ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳುತ್ತಿರಲಿಲ್ಲ, ಮತ್ತು [ಹಣ ಹಾಕಲು] ಸಾಲ ತೆಗೆದುಕೊಂಡರು.”
ವ್ಯತಿರಿಕ್ತವಾಗಿ, ಇಬ್ಬರು ಹಣ ಹಾಕುವ ಮೊದಲು ಈ ಕಂಪನಿಯ ಆಫೀಸಿನ ತನಿಖೆ ನಡೆಸಲು ಹೋದರು. ಉತ್ಪಾದನಾ ಸೌಕರ್ಯಗಳನ್ನು ನೋಡಬೇಕೆಂಬ ಅವರ ವಿನಂತಿಯು ನಿರಾಕರಿಸಲ್ಪಟ್ಟಿತು. ಇದು ಕಂಪನಿಯ ಖ್ಯಾತಿಯನ್ನು ಅವರು ಸಂದೇಹಿಸುವಂತೆ ಮಾಡಿತು. ಇದು ಅವರಿಗೆ ಒಂದು ರಕ್ಷಣೆಯೋಪಾದಿ ಪರಿಣಮಿಸಿತು ಯಾಕೆಂದರೆ ಕೆಲವೇ ವಾರಗಳೊಳಗೆ, ಸುವ್ಯಕ್ತವಾದ ವಂಚನೆಯ ಯೋಜನೆಯು ಬಯಲುಗೊಳಿಸಲ್ಪಟ್ಟಿತು ಮತ್ತು ಜನರು ಸೆರೆ ಹಿಡಿಯಲ್ಪಟ್ಟರು. ಮೊದಲು ತನಿಖೆ ನಡೆಸದಿದ್ದವರಿಗೆ ಇದು ಯಾವ ವೆಚ್ಚವನ್ನು ತಗಲಿಸಿತು ಎಂಬುದನ್ನು ಕೇವಲ ಯೋಚಿಸಿರಿ. ಅವರು ಹಣವನ್ನು ಮಾತ್ರವಲ್ಲ, ಆದರೆ ಬಹುಶಃ ಅವರಿಗೆ ಸಾಲ ಕೊಟ್ಟ, ಆದರೆ ಯೋಜನೆಯು ಕುಸಿದುಬಿದ್ದಾಗ ಹಿಂದಿರುಗಿ ಪಡೆಯಲು ಸಾಧ್ಯವಾಗದಿದ್ದ ಮಿತ್ರರನ್ನು ಸಹ ಕಳೆದುಕೊಂಡರು. ಹಣದ ವಿಷಯಗಳಲ್ಲಿ, ಜ್ಞಾನೋಕ್ತಿ 22:3ರ ತತ್ವವನ್ನು ಅನ್ವಯಿಸುವುದು ಎಷ್ಟು ವಿವೇಕವುಳ್ಳದ್ದಾಗಿದೆ: “ಜಾಣನು ಕೇಡನ್ನು ಕಂಡು ಅಡಗಿಕೊಳ್ಳುವನು; ಬುದ್ಧಿಹೀನನು ಮುಂದೆ ಹೋಗಿ ನಷ್ಟಪಡುವನು”!
ನಿಮ್ಮ ಮಾತಿಗೆ ಬಲವಾಗಿ ಅಂಟಿಕೊಳ್ಳಿರಿ
ವ್ಯಾಪಾರವು ನೀವು ನಿರೀಕ್ಷಿಸಿದ ಲಾಭವನ್ನು ಪಡೆಯದಿದ್ದಲ್ಲಿ ಆಗೇನು? ತನ್ನ ಒಪ್ಪಂದಗಳಿಗೆ ಅಂಟಿಕೊಳ್ಳುವುದು ಪ್ರಯೋಜನಕರವಲ್ಲದ್ದಿದರೂ ಅವುಗಳಿಗೆ ಅಂಟಿಕೊಳ್ಳುವ ವ್ಯಕ್ತಿಯನ್ನು ಕೀರ್ತನೆ 15:4 ಪ್ರಶಂಸಿಸುತ್ತದೆ: “ನಷ್ಟವಾದರೂ ಪ್ರಮಾಣತಪ್ಪದವನೂ ಆಗಿರಬೇಕು.” ವ್ಯಾಪಾರವು ಏಳಿಗೆ ಹೊಂದುತ್ತಿರುವಾಗ ಒಬ್ಬನ ಮಾತಿಗೆ ಅಂಟಿಕೊಳ್ಳುವುದು ಸುಲಭವಾಗಿದೆ. ಆದರೆ ಹಣಕಾಸಿನ ದೃಷ್ಟಿಯಿಂದ ಒಬ್ಬನ ನಷ್ಟವಾಗುವಾಗ ಅದು ಸಮಗ್ರತೆಯ ಒಂದು ಪರೀಕೆಯ್ಷಾಗಿ ಪರಿಣಮಿಸುತ್ತದೆ.
ಯೆಹೋಶುವನ ಸಮಯದ ಒಂದು ಬೈಬಲಿನ ಉದಾಹರಣೆಯನ್ನು ಜ್ಞಾಪಿಸಿಕೊಳ್ಳಿ. ಇಸ್ರಾಯೇಲಿನ ಸೇನಾ ನಾಯಕರು ತಮ್ಮೊಂದಿಗೆ ಒಡಂಬಡಿಕೆಯನ್ನು ಮಾಡಿ ತಮ್ಮನ್ನು ನಾಶಗೊಳಿಸದಂತೆ ಗಿಬ್ಯೋನ್ಯರು ಯುಕ್ತಿಯಿಂದ ವಿಷಯಗಳನ್ನು ಯೋಜಿಸಿದರು. ನಿಜವಾಗಿಯೂ ಅವರು ಇಸ್ರಾಯೇಲಿನ ಒಂದು ಬೆದರಿಕೆಯೋಪಾದಿ ಪರಿಗಣಿಸಲ್ಪಟ್ಟ ಒಂದು ಜನಾಂಗದ ಭಾಗವಾಗಿದ್ದರು. ಕುಯುಕ್ತಿಯು ಬಯಲುಗೊಳಿಸಲ್ಪಟ್ಟಾಗ, “ಸಮೂಹಪ್ರಧಾನರು ಇಸ್ರಾಯೇಲ್ ದೇವರಾದ ಯೆಹೋವನ ಹೆಸರಿನಲ್ಲಿ ಅವರಿಗೆ ಪ್ರಮಾಣಮಾಡಿದ್ದರಿಂದ ಇಸ್ರಾಯೇಲ್ಯರು ಅವರನ್ನು ಹೊಡೆಯಲಿಲ್ಲ.” (ಯೆಹೋಶುವ 9:18) ಈ ಗುಂಪು ವೈರಿಯ ಪ್ರದೇಶದಿಂದ ಬಂದಿದ್ದರೂ, ತಮ್ಮ ಮಾತನ್ನು ಉಳಿಸಿಕೊಳ್ಳುವುದು ಪ್ರಾಮುಖ್ಯವೆಂದು ಸಮೂಹಪ್ರಧಾನರಿಗೆ ಅನಿಸಿತು. ಮತ್ತು ಇದು ಯೆಹೋವನನ್ನು ಮೆಚ್ಚಿಸಿತ್ತೆಂದು ಮುಂದಿನ ಘಟನೆಗಳು ತೋರಿಸಿದವು.—ಯೆಹೋಶುವ 10:6-11.
ನೀವು ನಿರೀಕ್ಷಿಸಿದಂತೆ ವಿಷಯಗಳು ಮುಂದುವರಿಯದಿದ್ದರೂ ನಿಮ್ಮ ವ್ಯಾಪಾರದ ಒಪ್ಪಂದಗಳಿಗೆ ಮತ್ತು ಕರಾರುಗಳಿಗೆ ನೀವೂ ಅಂಟಿಕೊಳ್ಳುವಿರೊ?a ಹಾಗೆ ಮಾಡುವುದು, ತನ್ನ ಮಾತಿಗೆ ಯಾವಾಗಲೂ ಅಂಟಿಕೊಳ್ಳುವ ಯೆಹೋವನಿಗೆ ನಿಮ್ಮನ್ನು ಹೆಚ್ಚು ಅನುರೂಪವಾಗಿ ಮಾಡುವುದು.—ಯೆಶಾಯ 55:11.
ಪ್ರಾಮಾಣಿಕರಾಗಿರ್ರಿ
ಪ್ರಾಮಾಣಿಕತೆಯು, ಇಂದಿನ ವ್ಯಾಪಾರ ಲೋಕದಲ್ಲಿ ನಿರ್ಮೂಲವಾದ ಜಾತಿಯಂತೆ ಇರದಿದ್ದರೂ, ಅಪಾಯಕ್ಕೆ ಸಿಕ್ಕಿರುವ ಜಾತಿಯಂತಿದೆ. ನಿಮಗೆ ತದ್ರೀತಿಯಾದ ವ್ಯಾಪಾರಗಳಲ್ಲಿರುವ ಇತರರು ತಮ್ಮ ಸಂಪಾದನೆಗಳನ್ನು ಹೆಚ್ಚಿಸಲು ಅಪ್ರಾಮಾಣಿಕ ವಿಧಾನಗಳನ್ನು ಉಪಯೋಗಿಸಬಹುದು. ಜಾಹೀರಾತುಗಳಲ್ಲಿ ಅವರು ಅಪ್ರಾಮಾಣಿಕರಾಗಿರಬಹುದು. ಮತ್ತೊಂದು ಕಂಪನಿಯ ಹೆಸರನ್ನು ಕದ್ದು ತಮ್ಮ ಉತ್ಪಾದನೆಯ ಮೇಲೆ ಅವರು ಹಾಕಬಹುದು. ಅಥವಾ ಕೆಳ ಮಟ್ಟದ ಒಂದು ಉತ್ಪಾದನೆಯನ್ನು ಉಚ್ಚ ಗುಣಮಟ್ಟದ ಉತ್ಪಾದನೆಯೆಂದು ಅವರು ಸಾದರಪಡಿಸಬಹುದು. ಇವೆಲ್ಲವು ಅಪ್ರಾಮಾಣಿಕತೆಯ ಬಗೆಗಳಾಗಿವೆ. ಇವುಗಳನ್ನು ಮಾಡುವವರು ಆಸಾಫನಿಗನುಸಾರ, ಸ್ಪಷ್ಟವಾಗಿಗಿ ವಂಚನೆಯ ವಿಧದಲ್ಲಿ “ಸದಾ ಸ್ಥಿತಿವಂತರಾಗಿ ಹೋಗುತ್ತಾ” ಇರುವ “ದುಷ್ಟರ” ಹಾಗೆ ಇದ್ದಾರೆ.—ಕೀರ್ತನೆ 73:12.
ಒಬ್ಬ ಕ್ರೈಸ್ತನೋಪಾದಿ ನೀವು ನಿಷಿದ್ಧ ವಿಧಾನಗಳನ್ನು ಬಳಸುವಿರೊ? ಅಥವಾ, “ನಾವು ನಿಮ್ಮಲ್ಲಿ ಯಾರಿಗೂ ಅನ್ಯಾಯಮಾಡಲಿಲ್ಲ, ಯಾರನ್ನೂ ಕೆಡಿಸಲಿಲ್ಲ, ಯಾರನ್ನೂ ವಂಚಿಸಲಿಲ್ಲ”; “ನಾಚಿಕೆಯನ್ನು ಹುಟ್ಟಿಸುವ ಗುಪ್ತಕಾರ್ಯಗಳನ್ನು ನಾವು ಬಿಟ್ಟುಬಿಟ್ಟು ತಂತ್ರದಲ್ಲಿ ನಡೆಯದೆ” ಇದ್ದೇವೆ; “ತೂಕದ ಕಲ್ಲನ್ನು ಹೆಚ್ಚಿಸುವದು ತಗ್ಗಿಸುವದು ಯೆಹೋವನಿಗೆ ಅಸಹ್ಯ; ಮೋಸದ ತ್ರಾಸು ಒಳ್ಳೇದಲ್ಲ” ಎಂಬ ಬೈಬಲಿನ ಮೂಲ ಸೂತ್ರಗಳಿಂದ ನೀವು ಮಾರ್ಗದರ್ಶಿಸಲ್ಪಡುವಿರೊ? (2 ಕೊರಿಂಥ 4:2; 7:2; ಜ್ಞಾನೋಕ್ತಿ 20:23) ಅಪ್ರಾಮಾಣಿಕತೆಯ ಮೂಲನು, “ಸುಳ್ಳಿಗೆ ಮೂಲಪುರುಷ” ನಾದ ಪಿಶಾಚನಾದ ಸೈತಾನನ ಹೊರತು ಬೇರೆ ಯಾರೂ ಅಲ್ಲ ಎಂಬುದನ್ನು ನೆನಪಿನಲ್ಲಿಡಿ.—ಯೋಹಾನ 8:44.
ಕೆಲವರು ಆಕ್ಷೇಪಿಸಿ ಹೇಳಬಹುದು: ‘ಇತರರು ಮಾಡುವಂತೆ ಅಪ್ರಾಮಾಣಿಕ ವಿಧಾನಗಳನ್ನು ಒಬ್ಬನು ಬಳಸದ ಹೊರತು ವ್ಯಾಪಾರದಲ್ಲಿ ಉಳಿಯುವುದು ಕಷ್ಟಕರ.’ ಕ್ರೈಸ್ತನು ಯೆಹೋವನಲ್ಲಿ ತನ್ನ ನಂಬಿಕೆಯನ್ನು ಪ್ರದರ್ಶಿಸಸಾಧ್ಯವಿರುವುದು ಇಲ್ಲಿಯೇ. ಪ್ರಾಮಾಣಿಕತೆಯು, ಅದಕ್ಕೆ ತುಸು ವೆಚ್ಚ ತಗಲಿಸುವಾಗ, ಪರೀಕ್ಷಿಸಲ್ಪಡುತ್ತದೆ. ಅಪ್ರಾಮಾಣಿಕನಾಗಿರದೆ ವ್ಯಕ್ತಿಯೊಬ್ಬನಿಗೆ ಜೀವನೋಪಾಯ ನಡೆಸುವುದು ಸಾಧ್ಯವಿಲ್ಲವೆಂದು ಹೇಳುವುದು, ಆತನನ್ನು ಪ್ರೀತಿಸುವವರ ಕುರಿತು ದೇವರು ಚಿಂತಿಸುವುದಿಲ್ಲವೆಂದು ಹೇಳುವುದಕ್ಕೆ ಸಮಾನವಾಗಿದೆ. ಯಾವುದೇ ದೇಶದಲ್ಲಿ ಮತ್ತು ಯಾವುದೇ ಸನ್ನಿವೇಶದಲ್ಲಿರುವ ತನ್ನ ಸೇವಕರಿಗಾಗಿ ದೇವರು ಒದಗಿಸಬಲ್ಲನೆಂದು, ಯೆಹೋವನಲ್ಲಿ ನಿಜವಾದ ನಂಬಿಕೆ ಇರುವವನಿಗೆ ಗೊತ್ತಿದೆ. (ಇಬ್ರಿಯ 13:5) ಅಪ್ರಾಮಾಣಿಕರಿಗೆ ಸಿಗಬಹುದಾದ ವರಮಾನಕ್ಕಿಂತ ಕಡಿಮೆಯಾದ ವರಮಾನದಿಂದ ಒಬ್ಬನು ತುಪ್ತನಾಗಬೇಕಾಗಬಹುದು ನಿಜ, ಆದರೆ ದೇವರ ಆಶೀರ್ವಾದವನ್ನು ಪಡೆಯಲಿಕ್ಕಾಗಿ ಸಲ್ಲಿಸಬೇಕಾದ ಯೋಗ್ಯ ಬೆಲೆಯು ಇದಾಗಿರುವುದಿಲ್ಲವೊ?
ಅಪ್ರಾಮಾಣಿಕತೆಯು ಎಸೆದವನ ಬಳಿಗೆ ಹಿಂದಿರುಗಿ ಬರುವ ಬೂಮರಾಂಗದಂತಿದೆ ಎಂಬುದನ್ನು ನೆನಪಿನಲ್ಲಿಡಿ. ಒಬ್ಬ ವ್ಯಾಪಾರಿಯು ಅಪ್ರಾಮಾಣಿಕನೆಂದು ತಿಳಿದುಬರುವಲ್ಲಿ, ಗಿರಾಕಿಗಳು ಮತ್ತು ಸರಬರಾಯಿಗಾರರು ಅನೇಕ ವೇಳೆ ಅವನನ್ನು ತೊರೆಯುವರು. ಅವನು ಅವರನ್ನು ಒಂದು ಬಾರಿ ವಂಚಿಸಬಹುದು, ಆದರೆ ಅದು ಕೊನೆಯ ಬಾರಿ ಆಗಿರಬಹುದು. ಇನ್ನೊಂದು ಕಡೆಯಲ್ಲಿ, ಒಬ್ಬ ಪ್ರಾಮಾಣಿಕ ವ್ಯಾಪಾರಿಯು ಸಾಮಾನ್ಯವಾಗಿ ಇತರರ ಗೌರವವನ್ನು ಗಳಿಸುತ್ತಾನೆ. ‘ಬೇರೆ ಎಲ್ಲರೂ ಅದನ್ನು ಮಾಡುತ್ತಾರೆ, ಆದುದರಿಂದ ಪರವಾಗಿಲ್ಲ’ ಎಂಬ ತಪ್ಪಾದ ವಿವೇಚನೆಯಿಂದ ಪ್ರಭಾವಿಸಲ್ಪಡದಂತೆ ಜಾಗರೂಕರಾಗಿರ್ರಿ. ಬೈಬಲಿನ ತತ್ವವು, “ದುಷ್ಕಾರ್ಯವನ್ನು ಮಾಡುವವರು ಬಹು ಮಂದಿ ಆದಾಗ್ಯೂ ಅವರ ಜೊತೆಯಲ್ಲಿ ಸೇರಬಾರದು.”—ವಿಮೋಚನಕಾಂಡ 23:2.
ನಿಮ್ಮ ದೀರ್ಘ ಸಮಯದ ವ್ಯಾಪಾರ ಪಾಲುದಾರನು ಜೊತೆ ಕ್ರೈಸ್ತನಲ್ಲವೆಂದು ಮತ್ತು ಯಾವಾಗಲೂ ಬೈಬಲಿನ ಮೂಲ ಸೂತ್ರಗಳಿಗೆ ಅಂಟಿಕೊಳ್ಳುವುದಿಲ್ಲವೆಂದು ಭಾವಿಸಿರಿ. ಅಶಾಸ್ತ್ರೀಯವಾದ ಯಾವುದೊ ವಿಷಯವು ಮಾಡಲ್ಪಟ್ಟಾಗ, ನಿಮ್ಮ ಸ್ವಂತ ಜವಾಬ್ದಾರಿಯಿಂದ ಜಾರಿಕೊಳ್ಳಲು ಇದನ್ನು ಒಂದು ನೆಪದಂತೆ ಬಳಸುವುದು ಯೋಗ್ಯವಾಗಿರುವುದೊ? ಆದಾಮ ಮತ್ತು ಸೌಲನಂತಹ ಉದಾಹರಣೆಗಳನ್ನು ಜ್ಞಾಪಿಸಿಕೊಳ್ಳಿರಿ. ಪಾಪವನ್ನು ತೊರೆಯುವ ಬದಲು, ಇತರರಿಂದ ಬಂದ ಒತ್ತಡಕ್ಕೆ ಅವರು ಮಣಿದರು ಮತ್ತು ನಂತರ ತಮ್ಮ ಸಂಗಡಿಗರನ್ನು ದೂಷಿಸಿದರು. ಎಂತಹ ಒಂದು ಉನ್ನತ ಬೆಲೆಯನ್ನು ಅವರು ತೆತ್ತರು!—ಆದಿಕಾಂಡ 3:12, 17-19; 1 ಸಮುವೇಲ 15:20-26.
ಜೊತೆ ವಿಶ್ವಾಸಿಗಳೊಂದಿಗೆ ಯೋಗ್ಯವಾಗಿ ವ್ಯವಹರಿಸಿರಿ
ಯೆಹೋವನ ಜೊತೆ ಆರಾಧಕರೊಂದಿಗೆ ವ್ಯಾಪಾರ ವ್ಯವಹಾರಗಳಲ್ಲಿ ತೊಡಗುವಾಗ ಪರಿಗಣಿಸಬೇಕಾದ ವೆಚ್ಚಗಳು ಇವೆಯೋ? ಪ್ರವಾದಿಯಾದ ಯೆರೆಮೀಯನು ತನ್ನ ಸ್ವದೇಶವಾದ ಅನಾತೋತಿನಲ್ಲಿ ಸ್ವಂತ ಚಿಕ್ಕಪ್ಪನ ಮಗನಿಂದ ಒಂದು ಹೊಲವನ್ನು ಕೊಂಡುಕೊಂಡಾಗ, ಕೇವಲ ಅವನಿಗೆ ಹಣವನ್ನು ಕೊಟ್ಟು ಕೈಕುಲುಕಲಿಲ್ಲ. ಬದಲಿಗೆ, ಅವನು ಹೇಳಿದ್ದು: “ಪತ್ರಕ್ಕೆ ರುಜುಹಾಕಿ ಮುಚ್ಚಿ [ಮುಚ್ಚಳಕ್ಕೆ] ಸಾಕ್ಷಿಗಳನ್ನು ಹಾಕಿಸಿ ತ್ರಾಸಿನಲ್ಲಿ ಆ ಬೆಳ್ಳಿಯನ್ನು ತೂಗಿ ಅವನಿಗೆ ಕೊಟ್ಟೆನು.” (ಯೆರೆಮೀಯ 32:10) ಇಂತಹ ಲಿಖಿತ ಒಪ್ಪಂದಗಳನ್ನು ಮಾಡುವುದು, ನಂತರದ ಸಮಯದಲ್ಲಿ ಪರಿಸ್ಥಿತಿಗಳು ಬದಲಾದರೆ ಏಳಬಲ್ಲ ಮನಸ್ತಾಪವನ್ನು ತಡೆಯಬಲ್ಲದು.
ಆದರೆ ವ್ಯಾಪಾರದಲ್ಲಿ ಒಬ್ಬ ಕ್ರೈಸ್ತ ಸಹೋದರನು ನಿಮ್ಮನ್ನು ಅನ್ಯಾಯವಾಗಿ ನಡೆಸಿಕೊಂಡಿರುವುದಾಗಿ ತೋರಿದರೆ ಆಗೇನು? ವಿಷಯವನ್ನು ನ್ಯಾಯಾಲಯದಲ್ಲಿ ಬಗೆಹರಿಸಲು ನೀವು ಪ್ರಯತ್ನಿಸಬೇಕೊ? ಬೈಬಲು ಈ ವಿಷಯದಲ್ಲಿ ಬಹಳ ಸ್ಪಷ್ಟವಾಗಿಗಿದೆ. “ನಿಮ್ಮಲ್ಲಿ ಒಬ್ಬನಿಗೆ ಮತ್ತೊಬ್ಬನ ಮೇಲೆ ವ್ಯಾಜ್ಯವಿದ್ದರೆ ನ್ಯಾಯವಿಚಾರಣೆಗೆ ದೇವಜನರ ಮುಂದೆ ಹೋಗದೆ ಅನ್ಯಜನರ ಮುಂದೆ ಹೋಗುವದಕ್ಕೆ ಅವನಿಗೆ ಧೈರ್ಯವುಂಟೋ?” ಎಂದು ಪೌಲನು ಕೇಳಿದನು. ಸಮಸ್ಯೆಯೊಂದು ತೃಪ್ತಿಕರವಾಗಿ ಕೂಡಲೆ ಬಗೆಹರಿಸಲ್ಪಡದಿದ್ದರೆ ಆಗೇನು? ಪೌಲನು ಕೂಡಿಸುವುದು: “ನಿಮ್ಮ ನಿಮ್ಮಲ್ಲಿ ವ್ಯಾಜ್ಯವಾಡುವದೇ ನೀವು ಸೋತವರೆಂಬದಕ್ಕೆ ಗುರುತು. ಅದಕ್ಕಿಂತ ಅನ್ಯಾಯವನ್ನು ಯಾಕೆ ಸಹಿಸಬಾರದು? ಆಸ್ತಿಯ ನಷ್ಟವನ್ನು ಯಾಕೆ ತಾಳಬಾರದು?” ನಿಜ ಕ್ರೈಸ್ತರು ನ್ಯಾಯಾಲಯದಲ್ಲಿ ಹೋರಾಡುತ್ತಿರುವುದರ ಕುರಿತು ಹೊರಗಿನವರು ಕೇಳಿದರೆ, ಕ್ರೈಸ್ತ ಸಭೆಗೆ ಅದು ಎಂತಹ ಕಳಂಕವನ್ನು ತರುವುದು ಎಂಬುದರ ಕುರಿತು ಸ್ವಲ್ಪ ಯೋಚಿಸಿರಿ! ಅಂತಹ ಸಂದರ್ಭಗಳಲ್ಲಿ ಹಣದಾಸೆಯು ಸಹೋದರನಿಗಾಗಿರುವ ಪ್ರೀತಿಗಿಂತ ಹೆಚ್ಚು ಪ್ರಬಲವಾಗಿರಸಾಧ್ಯವೊ? ಅಥವಾ ಒಬ್ಬನ ಘನತೆ ಕಳಂಕಿತಗೊಂಡಿದ್ದು, ಮನಸ್ಸಿನಲ್ಲಿ ಪ್ರತೀಕಾರವು ಪ್ರಧಾನವಾಗಿರಸಾಧ್ಯವೊ? ಅಂತಹ ವಿದ್ಯಮಾನಗಳಲ್ಲಿ ನ್ಯಾಯಾಲಯಕ್ಕೆ ಹೋಗುವುದಕ್ಕಿಂತ ನಷ್ಟವನ್ನು ಅನುಭವಿಸುವುದು ಲೇಸು ಎಂದು ಪೌಲನ ಸಲಹೆಯು ತೋರಿಸುತ್ತದೆ.—1 ಕೊರಿಂಥ 6:1, 7; ರೋಮಾಪುರ 12:17-21.
ಸಭೆಯೊಳಗೆ ಇಂತಹ ವ್ಯಾಜ್ಯಗಳನ್ನು ನಿರ್ವಹಿಸುವ ಶಾಸ್ತ್ರೀಯ ವಿಧವು ನಿಶ್ಚಯವಾಗಿಯೂ ಇದೆ. (ಮತ್ತಾಯ 5:37; 18:15-17) ಶಿಫಾರಸ್ಸು ಮಾಡಲ್ಪಟ್ಟ ಹೆಜ್ಜೆಗಳನ್ನು ಒಳಗೊಂಡ ಸಹೋದರರು ಅನುಸರಿಸುವಂತೆ ಸಹಾಯ ಮಾಡುವುದರಲ್ಲಿ, ಕ್ರೈಸ್ತ ಮೇಲ್ವಿಚಾರಕರು ಸಂಬಂಧಪಟ್ಟ ಎಲ್ಲರಿಗೆ ಕೊಂಚ ಸಹಾಯಕಾರಿ ಸಲಹೆಯನ್ನು ನೀಡಬಹುದು. ಇಂತಹ ಚರ್ಚೆಗಳ ಸಂದರ್ಭದಲ್ಲಿ ಬೈಬಲಿನ ಮೂಲ ಸೂತ್ರಗಳೊಂದಿಗೆ ಸಮ್ಮತಿಸುವುದು ಸುಲಭವೆಂದು ತೋರಬಹುದು, ಆದರೆ ತದನಂತರ ಕೊಡಲ್ಪಟ್ಟ ಸಲಹೆಯನ್ನು ಅನ್ವಯಿಸುವ ಮೂಲಕ ಆಲಿಸಿದಿರೆಂದು ನೀವು ನಿಜವಾಗಿಯೂ ತೋರಿಸುತ್ತೀರೊ? ದೇವರಿಗಾಗಿ ಮತ್ತು ನಮ್ಮ ಜೊತೆ ಕ್ರೈಸ್ತರಿಗಾಗಿರುವ ಪ್ರೀತಿಯು ಹಾಗೆ ಮಾಡುವಂತೆ ನಮ್ಮನ್ನು ಪ್ರಚೋದಿಸುವುದು.
ನಿಸ್ಸಂದೇಹವಾಗಿ, ವ್ಯಾಪಾರದಲ್ಲಿರುವುದು ನಿಮಗೆ ಸ್ವಲ್ಪ ವೆಚ್ಚವನ್ನಾದರೂ ತಗಲಿಸುವುದು. ಆಶಾಜನಕವಾಗಿ, ನೀವು ಸಲ್ಲಿಸುವ ಬೆಲೆಯು ನ್ಯಾಯಸಮ್ಮತವಾಗಿರುವುದು. ನಿರ್ಣಯಗಳಿಂದ ಅಥವಾ ಯಾವುದೇ ಸಂದೇಹಾಸ್ಪದವಾದ ಸನ್ನಿವೇಶದಿಂದ ಎದುರಿಸಲ್ಪಡುವಾಗ, ಹಣಕ್ಕಿಂತ ಬಹಳ ಹೆಚ್ಚು ಅಮೂಲ್ಯವಾದ ಅನೇಕ ವಿಷಯಗಳು ಜೀವನದಲ್ಲಿವೆ ಎಂಬುದನ್ನು ಮನಸ್ಸಿನಲ್ಲಿಡಿ. ಹಣವನ್ನು ಅದರ ಸ್ಥಾನದಲ್ಲಿಡುವ ಮೂಲಕ, ಒಬ್ಬನ ಮಾತನ್ನು ಉಳಿಸಿಕೊಳ್ಳುವ ಮೂಲಕ, ಪ್ರಾಮಾಣಿಕರಾಗಿರುವ ಮೂಲಕ, ಮತ್ತು ವ್ಯಾಪಾರದ ಒಡನಾಡಿಗಳೊಂದಿಗೆ ಕ್ರೈಸ್ತೋಚಿತವಾದ ವಿಧದಲ್ಲಿ ವ್ಯವಹರಿಸುವ ಮೂಲಕ, ಒಂದು ವ್ಯಾಪಾರವು ಅಗತ್ಯವಿರುವುದಕ್ಕಿಂತ ಹೆಚ್ಚಿನ ಸಮಯ ಮತ್ತು ಹಣದ ವೆಚ್ಚವನ್ನು ತಗಲಿಸದೆಂಬುದನ್ನು ಖಚಿತಪಡಿಸಿಕೊಳ್ಳಬಲ್ಲೆವು, ಮತ್ತು ಅದೇ ಸಮಯದಲ್ಲಿ, ನಾವು ಗೆಳೆತನಗಳನ್ನು, ಒಂದು ಒಳ್ಳೆಯ ಮನಸ್ಸಾಕ್ಷಿಯನ್ನು, ಮತ್ತು ಯೆಹೋವನೊಂದಿಗೆ ಒಂದು ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಬಲ್ಲೆವು.
[ಅಧ್ಯಯನ ಪ್ರಶ್ನೆಗಳು]
a ವ್ಯಾಪಾರದಲ್ಲಿ ಒಬ್ಬನ ಮಾತಿಗೆ ಅಂಟಿಕೊಳ್ಳುವುದರ, ಆಧುನಿಕ ದಿನದ ಒಂದು ಉದಾಹರಣೆಗಾಗಿ, 1988 ಮೇ 8ರ ಅವೇಕ್! ನಲ್ಲಿ ಪುಟಗಳು 11–13 ರಲ್ಲಿರುವ “ನನ್ನ ಮಾತು ನನ್ನ ಕರಾರು” (ಇಂಗ್ಲಿಷ್) ಎಂಬ ಲೇಖನವನ್ನು ನೋಡಿರಿ.
[ಪುಟ 31 ರಲ್ಲಿರುವ ಚೌಕ]
ನಿಮ್ಮ ವ್ಯಾಪಾರವು ನಿಮಗೆ ವೆಚ್ಚ ತಗಲಿಸಬಹುದಾದ ವಿಷಯಗಳು
ಸಮಯ: ಒಬ್ಬನ ಸ್ವಂತ ವ್ಯಾಪಾರವನ್ನು ನಡೆಸುವುದು ಬಹುಮಟ್ಟಿಗೆ ಯಾವಾಗಲೂ ಒಂದು ಕಂಪನಿಗಾಗಿ ಒಬ್ಬ ನೌಕರನಂತೆ ಕೆಲಸ ಮಾಡುವುದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತದೆ. ಪ್ರಾಮುಖ್ಯವಾದ ಆತ್ಮಿಕ ಚಟುವಟಿಕೆಗಳಿಗೆ ಕಡಿಮೆ ಸಮಯವನ್ನು ಬಿಡುತ್ತಾ, ನಿಮ್ಮ ಕಾಲತಖ್ತೆಯನ್ನು ಅಡ್ಡೈಸುತದ್ತೊ? ಸಕಾರಾತ್ಮಕ ಕಡೆಯಲ್ಲಿ, ದೇವರ ಚಿತ್ತವನ್ನು ಮಾಡುವುದರಲ್ಲಿ ಹೆಚ್ಚಿನ ಸಮಯವನ್ನು ವ್ಯಯಿಸುವಂತೆ ನಿಮ್ಮ ವ್ಯವಹಾರಗಳನ್ನು ಏರ್ಪಡಿಸಲು ನೀವು ಶಕ್ತರಾಗಿರುವಿರೊ? ಶಕ್ತರಾಗಿರುವಲ್ಲಿ ಬಹಳ ಒಳ್ಳೆಯದು. ಆದರೆ ಎಚ್ಚರವಾಗಿರ್ರಿ! ಇದು ಸುಲಭವಲ್ಲ.
ಹಣ: ಹಣ ಗಳಿಸಲು ಹಣವು ಬೇಕಾಗಿದೆ. ನಿಮ್ಮ ವ್ಯಾಪಾರಕ್ಕೆ ಯಾವ ಬಂಡವಾಳವು ಬೇಕಾಗಿದೆ? ನಿಮ್ಮಲ್ಲಿ ನಿಧಿಗಳು ಈಗಾಗಲೇ ಇವೆಯೋ? ಅಥವಾ ನೀವು ಸಾಲ ಪಡೆಯಬೇಕಾಗುವುದೊ? ಸ್ವಲ್ಪ ಹಣವನ್ನು ಕಳೆದುಕೊಳ್ಳಲು ನೀವು ಶಕ್ತರೊ? ಅಥವಾ ವಿಷಯಗಳು ನೀವು ನಿರೀಕ್ಷಿಸಿದಂತೆ ಮುಂದುವರಿಯದಿದ್ದರೆ, ವೆಚ್ಚವು ನೀವು ಸಹಿಸಸಾಧ್ಯವಿರುವುದಕ್ಕಿಂತ ಹೆಚ್ಚಾಗಿರುವುದೊ?
ಮಿತ್ರರು: ಪ್ರತಿದಿನದ ಕಾರ್ಯಾಚರಣೆಗಳಲ್ಲಿ ಏಳುವ ಸಮಸ್ಯೆಗಳಿಂದ, ಅನೇಕ ವ್ಯಾಪಾರ ಯೋಜಕರ ವ್ಯಾಪಾರವು ಅವರಿಗೆ ಮಿತ್ರರ ನಷ್ಟವನ್ನುಂಟುಮಾಡಿದೆ. ಮಿತ್ರರನ್ನು ಮಾಡಿಕೊಳ್ಳುವ ಸಾಧ್ಯತೆಯಿರುವುದಾದರೂ, ವಿಷಮವಾದ ಸಂಬಂಧಗಳ ಸಾಧ್ಯತೆಯೂ ಬಹಳ ನೈಜವಾಗಿದೆ. ಈ ಮಿತ್ರರು ನಮ್ಮ ಕ್ರೈಸ್ತ ಸಹೋದರರಾಗಿರುವುದಾದರೆ ಆಗೇನು?
ಒಂದು ಒಳ್ಳೆಯ ಮನಸಾಕ್ಷಿ: ಇಂದಿನ ಲೋಕದಲ್ಲಿ ವ್ಯಾಪಾರದಲ್ಲಿ ತೊಡಗುವ ಸಾಮಾನ್ಯ ವಿಧಾನವು “ಕನಿಕರವಿಲ್ಲದ ಸ್ಪರ್ಧೆ” ಅಥವಾ “ನಾನು ಹೇಗೆ ಲಾಭ ಪಡೆಯಬಲ್ಲಿ?” ಎಂದಾಗಿದೆ. ವ್ಯಾಪಾರ ಜೀವನದಲ್ಲಿ ನೀತಿ ತತ್ವಗಳಿಗೆ ಕಡಿಮೆ ಅಥವಾ ಯಾವ ಸ್ಥಾನವೂ ಇರುವುದಿಲ್ಲವೆಂದು ಒಂದು ಯೂರೋಪಿಯನ್ ಸಮೀಕ್ಷೆಯಲ್ಲಿ 70 ಪ್ರತಿಶತಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ದೃಢವಾಗಿ ಹೇಳಿದರು. ಮೋಸ, ಅಪ್ರಾಮಾಣಿಕತೆ, ಮತ್ತು ಸಂದೇಹಾಸ್ಪದವಾದ ವ್ಯಾಪಾರ ರೂಢಿಗಳು ಸಾಮಾನ್ಯವಾಗಿರುವುದು ಆಶ್ಚರ್ಯವೇನೂ ಅಲ್ಲ. ಇತರರು ಮಾಡಿದ್ದನ್ನೇ ಮಾಡುವಂತೆ ನೀವು ಪ್ರೇರೇಪಿಸಲ್ಪಡುತ್ತೀರೊ?
ಯೆಹೋವನೊಂದಿಗಿನ ನಿಮ್ಮ ಸಂಬಂಧ: ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯವಾಗಿದ್ದರೂ, ದೇವರ ನಿಯಮಗಳ ಮತ್ತು ತತ್ವಗಳ ವಿರುದ್ಧವಾಗಿ ವ್ಯಾಪಾರದಲ್ಲಿನ ಯಾವುದೇ ಕ್ರಿಯೆಯು, ತನ್ನ ನಿರ್ಮಾಣಿಕನೊಂದಿಗಿರುವ ಒಬ್ಬ ವ್ಯಕ್ತಿಯ ಸಂಬಂಧವನ್ನು ಕೆಡಿಸುವುದು. ಇದು ಅನಂತ ಜೀವನದ ಅವನ ಪ್ರತೀಕ್ಷೆಯ ನಷ್ಟವನ್ನು ಉಂಟುಮಾಡಬಲ್ಲದು. ಪ್ರಾಪಂಚಿಕ ಪ್ರಯೋಜನವು ಏನೇ ಆಗಿರಲಿ, ಒಬ್ಬ ನಿಷ್ಠಾವಂತ ಕ್ರೈಸ್ತನಿಗೆ ಇದು ಸ್ಪಷ್ಟವಾಗಿಗಿಯೂ ನೀಡಬೇಕಾದ ಅತಿ ಉನ್ನತ ಬೆಲೆಯಾಗಿರಲಾರದೊ?
[ಪುಟ 31 ರಲ್ಲಿರುವ ಚಿತ್ರಗಳು]
ತದನಂತರದ ಮನಸ್ತಾಪಗಳನ್ನು ತಡೆಯುವಂತೆ ಯಾವುದು ಸಹಾಯ ಮಾಡುವುದು? ಸಭ್ಯರ ಒಪ್ಪಂದವೊ ಅಥವಾ ಒಂದು ಲಿಖಿತ ಕರಾರೊ?