ಅಧ್ಯಾಯ ನಾಲ್ಕು
ನೀವು ಒಂದು ಮನೆವಾರ್ತೆಯನ್ನು ಹೇಗೆ ನಿರ್ವಹಿಸಬಲ್ಲಿರಿ?
1. ಇಂದು ಒಂದು ಮನೆವಾರ್ತೆಯನ್ನು ನಿರ್ವಹಿಸುವುದು ಏಕೆ ಅಷ್ಟು ಕಷ್ಟಕರವಾಗಿರಬಲ್ಲದು?
“ಈ ಪ್ರಪಂಚದ ತೋರಿಕೆಯು ಗತಿಸಿ ಹೋಗುತ್ತಾ ಅದೆ.” (1 ಕೊರಿಂಥ 7:31) ಆ ಮಾತುಗಳು 1,900 ವರುಷಗಳ ಹಿಂದೆ ಬರೆಯಲ್ಪಟ್ಟವು, ಮತ್ತು ಇಂದು ಅವೆಷ್ಟು ನಿಜವಾಗಿವೆ! ವಿಷಯಗಳು ಬದಲಾವಣೆ ಹೊಂದುತ್ತ ಇವೆ, ವಿಶೇಷವಾಗಿ ಕುಟುಂಬ ಜೀವನದ ಸಂಬಂಧದಲ್ಲಿ. 40 ಅಥವಾ 50 ವರ್ಷಗಳ ಹಿಂದೆ ಸಾಧಾರಣ ಅಥವಾ ಸಾಂಪ್ರದಾಯಿಕವೆಂದು ವೀಕ್ಷಿಸಲ್ಪಟ್ಟ ವಿಷಯಗಳು, ಇಂದು ಅನೇಕ ವೇಳೆ ಅಸ್ವೀಕಾರಾರ್ಹವಾಗಿರುತ್ತವೆ. ಈ ಕಾರಣದಿಂದ, ಮನೆವಾರ್ತೆಯೊಂದನ್ನು ಯಶಸ್ವಿಯಾಗಿ ನಿರ್ವಹಿಸುವುದು ವಿಪರೀತವಾದ ಪಂಥಾಹ್ವಾನಗಳನ್ನು ಒಡ್ಡಬಲ್ಲದು. ಆದರೂ, ಶಾಸ್ತ್ರೀಯ ಸಲಹೆಯನ್ನು ಆಲಿಸುವಲ್ಲಿ, ಆ ಪಂಥಾಹ್ವಾನಗಳನ್ನು ನೀವು ಎದುರಿಸಬಲ್ಲಿರಿ.
ನಿಮ್ಮ ಸಂಪಾದನೆಗೆ ತಕ್ಕಂತೆ ಜೀವಿಸಿರಿ
2. ಒಂದು ಕುಟುಂಬದಲ್ಲಿ ಯಾವ ಆರ್ಥಿಕ ಪರಿಸ್ಥಿತಿಗಳು ಒತ್ತಡವನ್ನು ಉಂಟುಮಾಡುತ್ತವೆ?
2 ಇಂದು ಅನೇಕ ಜನರು ಇನ್ನುಮುಂದೆ ಸರಳವಾದ, ಕುಟುಂಬಾಭಿಮುಖವಾದ ಜೀವನದಲ್ಲಿ ತೃಪ್ತರಾಗಿರುವುದಿಲ್ಲ. ವಾಣಿಜ್ಯ ಜಗತ್ತು ಹೆಚ್ಚೆಚ್ಚು ಉತ್ಪನ್ನಗಳನ್ನು ತಯಾರಿಸಿ, ಸಾರ್ವಜನಿಕರನ್ನು ಆಕರ್ಷಿಸಪ್ರಯತ್ನಿಸಲು ತನ್ನ ಜಾಹೀರಾತು ಕೌಶಲಗಳನ್ನು ಉಪಯೋಗಿಸಿದಂತೆ, ಲಕ್ಷಾಂತರ ಮಂದಿ ತಂದೆತಾಯಿಯರು ಈ ಉತ್ಪನ್ನಗಳನ್ನು ಖರೀದಿಸಸಾಧ್ಯವಾಗುವಂತೆ ದೀರ್ಘ ತಾಸುಗಳನ್ನು ಕೆಲಸದಲ್ಲಿ ವ್ಯಯಿಸುತ್ತಾರೆ. ಬೇರೆ ಕೋಟಿಗಟ್ಟಲೆ ಜನರು ಕೇವಲ ಕೊಂಚ ಆಹಾರವನ್ನು ತಂದು ಬಡಿಸಲಿಕ್ಕಾಗಿ ದಿನ ದಿನವೂ ಹೋರಾಟವನ್ನು ಎದುರಿಸುತ್ತಾರೆ. ಹಿಂದೆ ಇದ್ದುದಕ್ಕೆ ಅಸದೃಶವಾಗಿ, ಕೆಲಸದಲ್ಲಿ ಅವರಿಗೆ, ಕೇವಲ ಆವಶ್ಯಕತೆಗಳಿಗೆ ತೆರಲಿಕ್ಕಾಗಿ, ಪ್ರಾಯಶಃ ಎರಡು ಕೆಲಸಗಳನ್ನು ಇಟ್ಟುಕೊಂಡು ಎಷ್ಟೋ ಹೆಚ್ಚು ತಾಸುಗಳನ್ನು ಕಳೆಯಬೇಕಾಗುತ್ತದೆ. ಆದರೂ ಇನ್ನಿತರರು, ನಿರುದ್ಯೋಗವು ಒಂದು ಬಹುವ್ಯಾಪಕ ಸಮಸ್ಯೆಯಾಗಿರುವುದರಿಂದ ಒಂದು ಕೆಲಸವನ್ನು ಕಂಡುಕೊಳ್ಳಲು ಸಂತೋಷಿಸುವರು. ಹೌದು, ಆಧುನಿಕ ಕುಟುಂಬಕ್ಕೆ ಜೀವನವು ಸದಾ ಸುಲಭವಲ್ಲ, ಆದರೆ ಬೈಬಲ್ ಮೂಲತತ್ವಗಳು ಕುಟುಂಬಗಳು ಈ ಸನ್ನಿವೇಶದಲ್ಲಿ ಜಯಶಾಲಿಗಳಾಗಲು ಸಹಾಯ ಮಾಡಬಲ್ಲವು.
3. ಅಪೊಸ್ತಲ ಪೌಲನು ಯಾವ ಮೂಲತತ್ವವನ್ನು ವಿವರಿಸಿದನು, ಮತ್ತು ಅದರ ಅನ್ವಯಿಸುವಿಕೆಯು ಒಬ್ಬನು ಮನೆವಾರ್ತೆಯ ನಿರ್ವಹಣೆಯಲ್ಲಿ ಯಶಸ್ವಿಯಾಗುವಂತೆ ಹೇಗೆ ನಡೆಸಬಲ್ಲದು?
3 ಅಪೊಸ್ತಲ ಪೌಲನು ಆರ್ಥಿಕ ಒತ್ತಡಗಳನ್ನು ಅನುಭವಿಸಿದನು. ಅವುಗಳನ್ನು ನಿರ್ವಹಿಸುವುದರಲ್ಲಿ ಅವನು, ಯಾವುದನ್ನು ತನ್ನ ಮಿತ್ರನಾದ ತಿಮೊಥೆಯನಿಗೆ ಬರೆದ ಒಂದು ಪತ್ರದಲ್ಲಿ ವಿವರಿಸಿದನೊ ಆ ಒಂದು ಬೆಲೆಬಾಳುವ ಪಾಠವನ್ನು ಕಲಿತನು. ಪೌಲನು ಬರೆಯುವುದು: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.” (1 ತಿಮೊಥೆಯ 6:7, 8) ನಿಜ, ಒಂದು ಕುಟುಂಬಕ್ಕೆ ಕೇವಲ ಆಹಾರ ಮತ್ತು ವಸ್ತ್ರಕ್ಕಿಂತ ಹೆಚ್ಚಿನದ್ದು ಆವಶ್ಯಕ. ಅದಕ್ಕೆ ಎಲ್ಲಿಯಾದರೂ ಜೀವಿಸುವ ಅಗತ್ಯವೂ ಇದೆ. ಮಕ್ಕಳಿಗೆ ವಿದ್ಯಾಭ್ಯಾಸವು ಆವಶ್ಯಕ. ಮತ್ತು ಔಷಧ ಚಿಕಿತ್ಸೆಯ ಖರ್ಚು ಮತ್ತು ಇತರ ಖರ್ಚುಗಳಿವೆ. ಆದರೂ, ಪೌಲನ ಮಾತುಗಳ ಮೂಲತತ್ವವು ಇಲ್ಲಿ ಅನ್ವಯಿಸುತ್ತದೆ. ನಾವು ನಮ್ಮ ಅಪೇಕ್ಷೆಗಳನ್ನು ತಣಿಸುವ ಬದಲಾಗಿ ನಮ್ಮ ಆವಶ್ಯಕತೆಗಳನ್ನು ತೃಪ್ತಿಗೊಳಿಸಲು ಮನಸ್ಸುಳ್ಳವರಾದರೆ, ಜೀವನವು ಹೆಚ್ಚು ಹಾಯಾಗಿರುವುದು.
4, 5. ಮನೆವಾರ್ತೆಯ ನಿರ್ವಹಣೆಯಲ್ಲಿ ಮುಂದಾಲೋಚನೆ ಮತ್ತು ಯೋಜನೆಯು ಹೇಗೆ ಸಹಾಯ ಮಾಡಬಲ್ಲದು?
4 ಇನ್ನೊಂದು ಸಹಾಯಕಾರಿಯಾದ ಮೂಲತತ್ವವು ಯೇಸುವಿನ ದೃಷ್ಟಾಂತಗಳಲ್ಲೊಂದರಲ್ಲಿ ಕಂಡುಬರುತ್ತದೆ. ಅವನು ಹೇಳಿದ್ದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?” (ಲೂಕ 14:28) ಯೇಸುವು ಇಲ್ಲಿ ಮುಂದಾಲೋಚನೆಯ, ಮುಂದಾಗಿಯೇ ಯೋಜಿಸುವ ವಿಷಯವನ್ನು ಮಾತಾಡುತ್ತಿದ್ದಾನೆ. ಒಬ್ಬ ಯುವ ದಂಪತಿಗಳು ವಿವಾಹವಾಗಲು ಯೋಚಿಸುತ್ತಿರುವಾಗ ಇದು ಹೇಗೆ ಸಹಾಯ ಮಾಡುತ್ತದೆಂಬುದನ್ನು ನಾವು ಹಿಂದಿನ ಒಂದು ಅಧ್ಯಾಯದಲ್ಲಿ ನೋಡಿದೆವು. ಮತ್ತು ವಿವಾಹಾನಂತರ, ಮನೆವಾರ್ತೆಯನ್ನು ನಿರ್ವಹಿಸುವುದರಲ್ಲಿಯೂ ಇದು ಸಹಾಯಕರವಾಗಿರುತ್ತದೆ. ಈ ಕ್ಷೇತ್ರದ ಮುಂದಾಲೋಚನೆಯಲ್ಲಿ, ದೊರೆಯುವ ಸಂಪನ್ಮೂಲಗಳನ್ನು ಅತಿ ವಿವೇಕದಿಂದ ಬಳಸಲು ಮುಂದಾಗಿಯೇ ಯೋಜಿಸುವ, ಆಯವ್ಯಯದ ಅಂದಾಜುಪಟ್ಟಿ (ಬಜೆಟ್) ಸೇರಿದೆ. ಈ ವಿಧದಲ್ಲಿ ಕುಟುಂಬವು, ಪ್ರತಿ ದಿನ ಅಥವಾ ಪ್ರತಿ ವಾರ, ಆವಶ್ಯಕವಾಗಿರುವುವುಗಳ ಮೇಲೆ ಖರ್ಚುಮಾಡಲು ಹಣವನ್ನು ಬದಿಗಿಟ್ಟು, ಖರ್ಚುಗಳನ್ನು ನಿಯಂತ್ರಿಸಬಲ್ಲದು, ಆ ಮಿತಿಯನ್ನು ಮೀರಿ ಜೀವಿಸುವುದಲ್ಲ.
5 ಕೆಲವು ದೇಶಗಳಲ್ಲಿ, ಇಂತಹ ಆಯವ್ಯಯದ ಅಂದಾಜುಪಟ್ಟಿಯನ್ನು ಮಾಡುವುದು, ಅನಾವಶ್ಯಕ ಖರೀದಿಗಳನ್ನು ಮಾಡಲಿಕ್ಕಾಗಿ ಉನ್ನತ ಬಡ್ಡಿಯಲ್ಲಿ ಸಾಲ ತೆಗೆದುಕೊಳ್ಳುವ ಪ್ರಚೋದನೆಯನ್ನು ತಡೆಯುವುದನ್ನು ಅರ್ಥೈಸೀತು. ಇತರರಲ್ಲಿ, ಕ್ರೆಡಿಟ್ ಕಾರ್ಡುಗಳ ಉಪಯೋಗದ ಮೇಲೆ ಬಿಗಿಯಾದ ನಿಯಂತ್ರಣ ಇಟ್ಟುಕೊಳ್ಳುವುದನ್ನು ಇದು ಅರ್ಥೈಸಬಹುದು. (ಜ್ಞಾನೋಕ್ತಿ 22:7) ಅವಿಚಾರಿತ ಆವೇಗದ ಕೊಳ್ಳುವಿಕೆ—ಆವಶ್ಯಕತೆಗಳನ್ನು ಮತ್ತು ಪರಿಣಾಮಗಳನ್ನು ತೂಗಿನೋಡದೆ ತಟಕ್ಕನೆ ಖರೀದಿಸುವಿಕೆ—ಯನ್ನು ಪ್ರತಿಭಟಿಸಬೇಕೆಂದೂ ಇದು ಅರ್ಥೈಸೀತು. ಅಲ್ಲದೆ, ಆಯವ್ಯಯದ ಅಂದಾಜುಪಟ್ಟಿಯು, ಜೂಜಾಟ, ಹೊಗೆಸೊಪ್ಪಿನ ಸೇದುವಿಕೆ ಮತ್ತು ವಿಪರೀತ ಕುಡಿತದಲ್ಲಿ ಹಣವನ್ನು ಸ್ವಾರ್ಥದಿಂದ ಹಾಳುಮಾಡುವುದು, ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಹಾನಿಮಾಡುತ್ತದೆಂಬುದನ್ನು ಸ್ಪಷ್ಟಗೊಳಿಸುವುದು, ಹಾಗೂ ಬೈಬಲ್ ಮೂಲತತ್ವಗಳಿಗೆ ವ್ಯತಿರಿಕ್ತವಾಗಿ ಹೋಗುತ್ತದೆ.—ಜ್ಞಾನೋಕ್ತಿ 23:20, 21, 29-35; ರೋಮಾಪುರ 6:19; ಎಫೆಸ 5:3-5.
6. ದಾರಿದ್ರ್ಯದಲ್ಲಿ ಜೀವಿಸಬೇಕಾದವರಿಗೆ ಯಾವ ಶಾಸ್ತ್ರೀಯ ಸತ್ಯಗಳು ಸಹಾಯ ಮಾಡುತ್ತವೆ?
6 ಆದರೆ, ಬಡತನದಲ್ಲಿ ಜೀವಿಸಲು ನಿರ್ಬಂಧಕ್ಕೊಳಗಾಗುವವರ ವಿಷಯವೇನು? ಒಂದು ವಿಷಯವೇನಂದರೆ, ಈ ಲೋಕವ್ಯಾಪಕ ಸಮಸ್ಯೆಯು ಕೇವಲ ತಾತ್ಕಾಲಿಕವೆಂದು ತಿಳಿಯಲು ಅವರು ಉಪಶಮನ ಪಡೆಯಬಲ್ಲರು. ರಭಸದಿಂದ ಸಮೀಪಿಸುತ್ತಿರುವ ಆ ನೂತನ ಲೋಕದಲ್ಲಿ, ಯೆಹೋವನು ದಾರಿದ್ರ್ಯವನ್ನು, ಮಾನವಕುಲಕ್ಕೆ ದುರವಸ್ಥೆಯನ್ನು ಉಂಟುಮಾಡುವ ಇತರ ಸಕಲ ಕೆಡುಕುಗಳೊಂದಿಗೆ ನೀಗಿಸುವನು. (ಕೀರ್ತನೆ 72:1, 12-16) ಈ ಮಧ್ಯೆ, ಸತ್ಯ ಕ್ರೈಸ್ತರು, ಅವರು ಅತಿ ಬಡವರಾಗಿದ್ದರೂ ಪೂರ್ತಿ ಹತಾಶರಾಗುವುದಿಲ್ಲ, ಏಕೆಂದರೆ, “ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ, ಎಂದಿಗೂ ತೊರೆಯುವದಿಲ್ಲ” ಎಂಬ ಯೆಹೋವನ ವಾಗ್ದಾನದಲ್ಲಿ ಅವರಿಗೆ ನಂಬಿಕೆಯಿದೆ. ಆ ಕಾರಣದಿಂದ ಒಬ್ಬ ವಿಶ್ವಾಸಿಯು ಭರವಸೆಯಿಂದ, “ಕರ್ತನು [“ಯೆಹೋವನು,” NW] ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು?” ಎಂದು ಹೇಳಬಲ್ಲನು. (ಇಬ್ರಿಯ 13:5, 6) ಈ ಕಷ್ಟಕರವಾದ ದಿನಗಳಲ್ಲಿ, ಯೆಹೋವನ ಜನರು ಆತನ ಮೂಲತತ್ವಗಳಿಗನುಸಾರ ಜೀವಿಸಿ ತಮ್ಮ ಜೀವಿತಗಳಲ್ಲಿ ಆತನ ರಾಜ್ಯವನ್ನು ಪ್ರಥಮವಾಗಿಡುವಾಗ, ಆತನು ತನ್ನ ಆರಾಧಕರನ್ನು ಅನೇಕ ವಿಧಗಳಲ್ಲಿ ಬೆಂಬಲಿಸಿದ್ದಾನೆ. (ಮತ್ತಾಯ 6:33) ಅವರಲ್ಲಿ ದೊಡ್ಡ ಸಂಖ್ಯೆಯು ಅಪೊಸ್ತಲ ಪೌಲನ ಮಾತುಗಳಲ್ಲಿ ಹೀಗೆ ಹೇಳುತ್ತ ಸಾಕ್ಷಿ ನೀಡಬಲ್ಲದು: “ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ. ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”—ಫಿಲಿಪ್ಪಿ 4:12, 13.
ಹೊರೆಯಲ್ಲಿ ಪಾಲಿಗರಾಗುವುದು
7. ಅನ್ವಯಿಸಲ್ಪಡುವಲ್ಲಿ, ಯೇಸುವಿನ ಯಾವ ಮಾತುಗಳು ಮನೆವಾರ್ತೆಯ ಯಶಸ್ವೀ ನಿರ್ವಹಣೆಯಲ್ಲಿ ಸಹಾಯ ಮಾಡುವವು?
7 ಯೇಸುವು, ತನ್ನ ಭೂಶುಶ್ರೂಷೆಯ ಅಂತ್ಯದಷ್ಟಕ್ಕೆ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” ಎಂದು ಹೇಳಿದನು. (ಮತ್ತಾಯ 22:39) ಈ ಸಲಹೆಯನ್ನು ಕುಟುಂಬದಲ್ಲಿ ಅನ್ವಯಿಸುವುದು ಮನೆವಾರ್ತೆಯ ನಿರ್ವಹಣೆಯಲ್ಲಿ ಅಪರಿಮಿತವಾಗಿ ಸಹಾಯ ಮಾಡುತ್ತದೆ. ಎಷ್ಟೆಂದರೂ, ಕುಟುಂಬ ನಿವಾಸದಲ್ಲಿ ಭಾಗಿಗಳು—ಗಂಡಂದಿರು ಮತ್ತು ಹೆಂಡತಿಯರು, ಹೆತ್ತವರು ಮತ್ತು ಮಕ್ಕಳು—ಅಲ್ಲದೆ ಮತ್ತಾರು ನಮ್ಮ ಅತಿ ಹತ್ತಿರದ, ಅತ್ಯಂತ ಪ್ರಿಯ ನೆರೆಯವರಾಗಿದ್ದಾರೆ? ಕುಟುಂಬ ಸದಸ್ಯರು ಒಬ್ಬರಿಗೊಬ್ಬರು ಹೇಗೆ ಪ್ರೀತಿ ತೋರಿಸಬಲ್ಲರು?
8. ಕುಟುಂಬದೊಳಗೆ ಪ್ರೀತಿಯನ್ನು ಹೇಗೆ ವ್ಯಕ್ತಪಡಿಸಸಾಧ್ಯವಿದೆ?
8 ಇದರ ಒಂದು ವಿಧವು, ಪ್ರತಿಯೊಬ್ಬ ಕುಟುಂಬ ಸದಸ್ಯನು ಮನೆವಾರ್ತೆಯ ಕೆಲಸದಲ್ಲಿ ತನ್ನ ನ್ಯಾಯಸಮ್ಮತವಾದ ಭಾಗವನ್ನು ಮಾಡುವುದೇ. ಹೀಗೆ, ಬಟ್ಟೆಬರೆಯಾಗಲಿ, ಆಟಿಕೆಗಳಾಗಲಿ, ಅವುಗಳನ್ನು ಬಳಸಿದ ಅನಂತರ ವಸ್ತುಗಳನ್ನು ತೆಗೆದಿಡುವಂತೆ ಮಕ್ಕಳಿಗೆ ಕಲಿಸುವುದು ಅಗತ್ಯ. ಪ್ರತಿ ಬೆಳಗ್ಗೆ ಹಾಸಿಗೆಯನ್ನು ಅಚ್ಚುಕಟ್ಟಾಗಿರಿಸಲು ಸಮಯ ಮತ್ತು ಪ್ರಯತ್ನ ಬೇಕಾಗಬಹುದು, ಆದರೆ ಅದು ಮನೆವಾರ್ತೆಯ ನಿರ್ವಹಣೆಯಲ್ಲಿ ಒಂದು ದೊಡ್ಡ ಸಹಾಯವಾಗಿದೆ. ಕೆಲವು ಅಮುಖ್ಯ, ತಾತ್ಕಾಲಿಕ ಅವ್ಯವಸ್ಥೆಗಳು ಅನಿವಾರ್ಯ, ನಿಶ್ಚಯ, ಆದರೆ ಮನೆಯನ್ನು ತಕ್ಕಮಟ್ಟಿಗೆ ಚೊಕ್ಕಟವಾಗಿರಿಸುವುದರಲ್ಲಿ ಹಾಗೂ ಊಟಗಳ ಬಳಿಕ ಶುಚಿಮಾಡುವುದರಲ್ಲಿ ಎಲ್ಲರೂ ಒಂದುಗೂಡಿ ಕೆಲಸಮಾಡಬಲ್ಲರು. ಸೋಮಾರಿತನ, ವಿಷಯಲೋಲುಪತೆ ಮತ್ತು ಅಸಮಾಧಾನದ, ಮನಸ್ಸಿಲ್ಲದ ಮನೋಭಾವವು ಪ್ರತಿಯೊಬ್ಬನ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ. (ಜ್ಞಾನೋಕ್ತಿ 26:14-16) ಇನ್ನೊಂದು ಪಕ್ಕದಲ್ಲಿ, ಉತ್ಸಾಹದ, ಸಿದ್ಧಮನಸ್ಸಿನ ಮನೋಭಾವವು ಸಂತೋಷವುಳ್ಳ ಕುಟುಂಬ ಜೀವನವನ್ನು ಪೋಷಿಸುತ್ತದೆ. “ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.”—2 ಕೊರಿಂಥ 9:7.
9, 10. (ಎ) ಮನೆಯ ಸ್ತ್ರೀಯ ಮೇಲೆ ಅನೇಕ ವೇಳೆ ಯಾವ ಹೊರೆಯಿರುತ್ತದೆ, ಮತ್ತು ಇದನ್ನು ಹೇಗೆ ಹಗುರಮಾಡಸಾಧ್ಯವಿದೆ? (ಬಿ) ಮನೆಗೆಲಸದ ಯಾವ ಸಮತೆಯ ನೋಟವನ್ನು ಸೂಚಿಸಲಾಗುತ್ತದೆ?
9 ಪರಿಗಣನೆ ಮತ್ತು ಪ್ರೀತಿಯು, ಕೆಲವು ಮನೆಗಳಲ್ಲಿ ಯಾವುದು ಗಂಭೀರವಾದ ಸಮಸ್ಯೆಯಾಗಿದೆಯೊ ಅದನ್ನು ತಡೆಯುವಂತೆ ಸಹಾಯ ಮಾಡುವುದು. ತಾಯಂದಿರು ಸಾಂಪ್ರದಾಯಿಕವಾಗಿ ಗೃಹಜೀವನದ ಮುಖ್ಯಾಧಾರವಾಗಿದ್ದಾರೆ. ಅವರು ಮಕ್ಕಳನ್ನು ಪರಾಮರಿಸಿ, ಮನೆಯನ್ನು ಶುಚಿಮಾಡಿ, ಕುಟುಂಬದ ಅಗಸಗಿತ್ತಿಯಾಗಿ, ಆಹಾರವನ್ನು ಖರೀದಿಸಿ, ಅಡುಗೆ ಮಾಡಿದ್ದಾರೆ. ಕೆಲವು ದೇಶಗಳಲ್ಲಿ, ಹೆಂಗಸರು ವಾಡಿಕೆಯಂತೆ ಹೊಲಗಳಲ್ಲಿ ಕೆಲಸಮಾಡಿ, ಉತ್ಪಾದನೆಗಳನ್ನು ಮಾರುಕಟ್ಟೆಯಲ್ಲಿ ಮಾರಿದ್ದಾರೆ, ಇಲ್ಲವೆ ಕುಟುಂಬ ಖರ್ಚಿನ ಆಯವ್ಯಯದ ಅಂದಾಜುಪಟ್ಟಿಗೆ ಇತರ ರೀತಿಗಳಲ್ಲಿ ಸಹಾಯ ಮಾಡಿದ್ದಾರೆ. ಇದು ಹಿಂದೆ ವಾಡಿಕೆಯಾಗಿದ್ದಿರದ ಸ್ಥಳದಲ್ಲಿಯೂ, ಆವಶ್ಯಕತೆಯು ಕೋಟಿಗಟ್ಟಲೆ ವಿವಾಹಿತ ಸ್ತ್ರೀಯರು ಮನೆಯ ಹೊರಗೆ ಕೆಲಸ ಹುಡುಕುವಂತೆ ನಿರ್ಬಂಧಿಸಿದೆ. ಈ ವಿಭಿನ್ನ ಕ್ಷೇತ್ರಗಳಲ್ಲಿ ಶ್ರಮಪಟ್ಟು ಕೆಲಸಮಾಡುವ ಹೆಂಡತಿ ಮತ್ತು ತಾಯಿಯು ಪ್ರಶಂಸಾರ್ಹಳು. ಬೈಬಲಿನಲ್ಲಿ ವರ್ಣಿಸಲಾಗಿರುವ “ಸಮರ್ಥೆಯಾದ ಹೆಂಡತಿ” (NW)ಯಂತೆ, ಆಕೆಯ ದಿನವು ಪೂರ್ತಿಯಾಗಿ ಕೆಲಸದಿಂದ ತುಂಬಿದೆ. ಆಕೆ “ಸೋಮಾರಿತನದ ಅನ್ನವನ್ನು ತಿನ್ನು”ವುದಿಲ್ಲ. (ಜ್ಞಾನೋಕ್ತಿ 31:10, 27) ಆದರೆ ಮನೆಯಲ್ಲಿನ ಕೆಲಸ ಮಾಡಸಾಧ್ಯವಿರುವವಳು ಸ್ತ್ರೀಯೊಬ್ಬಳೇ ಎಂದು ಇದರ ಅರ್ಥವಲ್ಲ. ಗಂಡಹೆಂಡತಿಯರಿಬ್ಬರೂ ಮನೆಯ ಹೊರಗೆ ಇಡೀ ದಿನ ಕೆಲಸ ಮಾಡಿರುವಾಗ, ಗಂಡನೂ ಕುಟುಂಬದ ಇತರರೂ ವಿಶ್ರಮಿಸುತ್ತಿರುವಾಗ, ಹೆಂಡತಿಯೊಬ್ಬಳೇ ಮನೆಯಲ್ಲಿನ ಕೆಲಸದ ಭಾರವನ್ನು ಹೊರಬೇಕೊ? ಇಲ್ಲವೇ ಇಲ್ಲ ನಿಶ್ಚಯ. (ಹೋಲಿಸಿ 2 ಕೊರಿಂಥ 8:13, 14.) ಹೀಗೆ, ಉದಾಹರಣೆಗಾಗಿ ತಾಯಿಯು ಊಟವನ್ನು ಸಿದ್ಧಗೊಳಿಸಲಿರುವುದಾದರೆ, ಕುಟುಂಬದ ಇತರ ಸದಸ್ಯರು ಮೇಜನ್ನು ಸಿದ್ಧಗೊಳಿಸಿ, ತುಸು ಖರೀದಿಸುವಿಕೆಯನ್ನು ಮಾಡಿ ಅಥವಾ ಮನೆಯನ್ನು ತುಸು ಸ್ವಚ್ಛಗೊಳಿಸುವ ಮೂಲಕ, ಆ ತಯಾರಿಕೆಯಲ್ಲಿ ಸಹಾಯ ಮಾಡುವುದಾದರೆ ಆಕೆ ಕೃತಜ್ಞಳಾಗಿರಬಹುದು. ಹೌದು, ಆ ಜವಾಬ್ದಾರಿಯನ್ನು ಎಲ್ಲರೂ ಹಂಚಿಕೊಳ್ಳಬಲ್ಲರು.—ಹೋಲಿಸಿ ಗಲಾತ್ಯ 6:2.
10 “ನಾನು ಜೀವಿಸುವಲ್ಲಿ ಅಂತಹ ಕೆಲಸವನ್ನು ಮಾಡುವುದು ಒಬ್ಬ ಪುರುಷನ ಪಾತ್ರವಲ್ಲ,” ಎಂದು ಕೆಲವರು ಹೇಳಬಹುದು. ಅದು ನಿಜವಾಗಿರಬಹುದು, ಆದರೆ ಈ ಸಂಗತಿಗೆ ತುಸು ಪರಿಗಣನೆಯನ್ನು ಕೊಡುವುದು ಒಳ್ಳೆಯದಲ್ಲವೊ? ಯೆಹೋವ ದೇವರು ಕುಟುಂಬವನ್ನು ಉಂಟುಮಾಡಿದಾಗ, ನಿರ್ದಿಷ್ಟ ಕೆಲಸವು ಸ್ತ್ರೀಯರಿಂದಲೇ ಮಾಡಲ್ಪಡಬೇಕೆಂಬುದಾಗಿ ಆತನು ಆಜ್ಞಾಪಿಸಲಿಲ್ಲ. ಒಂದು ಸಂದರ್ಭದಲ್ಲಿ, ಯೆಹೋವನಲ್ಲಿಂದ ಬಂದ ವಿಶೇಷ ಸಂದೇಶವಾಹಕರು ನಂಬಿಗಸ್ತ ಮನುಷ್ಯನಾದ ಅಬ್ರಹಾಮನನ್ನು ಭೇಟಿಮಾಡಿದಾಗ, ಅವನು ವೈಯಕ್ತಿಕವಾಗಿ ಭೇಟಿಕಾರರಿಗೆ ಊಟ ತಯಾರಿಸಿ, ಬಡಿಸುವುದರಲ್ಲಿ ಭಾಗಿಯಾದನು. (ಆದಿಕಾಂಡ 18:1-8) ಬೈಬಲು ಸಲಹೆ ನೀಡುವುದು: “ಹಾಗೆಯೇ ಪುರುಷರು ಸಹ ಸ್ವಂತ ಶರೀರವನ್ನು ಪ್ರೀತಿಸಿಕೊಳ್ಳುವ ಪ್ರಕಾರವೇ ತಮ್ಮ ಹೆಂಡತಿಯರನ್ನು ಪ್ರೀತಿಸುವ ಹಂಗಿನವರಾಗಿದ್ದಾರೆ.” (ಎಫೆಸ 5:28) ದಿನಾಂತ್ಯದಲ್ಲಿ, ಗಂಡನು ದಣಿದಿರುವುದರಿಂದ ವಿಶ್ರಮಿಸಬಯಸುವುದಾದರೆ, ಹೆಂಡತಿಗೂ ಹಾಗೆಯೇ—ಪ್ರಾಯಶಃ ಅದಕ್ಕಿಂತಲೂ ಹೆಚ್ಚು—ಅನಿಸುವುದು ಸಂಭವನೀಯವಾಗಿರುವುದಿಲ್ಲವೊ? (1 ಪೇತ್ರ 3:7) ಹಾಗಾದರೆ, ಗಂಡನು ಮನೆಯಲ್ಲಿ ಸಹಾಯ ಮಾಡುವುದು ಸಮಂಜಸವೂ ಪ್ರೀತಿಯುಳ್ಳದ್ದೂ ಆಗಿರುವುದಿಲ್ಲವೊ?—ಫಿಲಿಪ್ಪಿ 2:3, 4.
11. ಮನೆವಾರ್ತೆಯ ಪ್ರತಿ ಸದಸ್ಯನಿಗೆ ಯೇಸುವು ಯಾವ ವಿಧದಲ್ಲಿ ಒಂದು ಉತ್ತಮ ಮಾದರಿಯನ್ನು ಇಟ್ಟಿದ್ದಾನೆ?
11 ದೇವರನ್ನು ಮೆಚ್ಚಿಸಿದವರಲ್ಲಿ ಮತ್ತು ತನ್ನ ಒಡನಾಡಿಗಳಿಗೆ ಸಂತೋಷವನ್ನು ತಂದವರಲ್ಲಿ ಯೇಸುವು ಅತ್ಯುತ್ತಮ ಮಾದರಿಯಾಗಿದ್ದಾನೆ. ಯೇಸು ವಿವಾಹವನ್ನೇ ಮಾಡಿಕೊಂಡಿರದಿದ್ದರೂ, ಅವನು ಗಂಡಂದಿರಿಗೆ ಮತ್ತು ಹೆಂಡತಿಯರಿಗೆ ಹಾಗೂ ಮಕ್ಕಳಿಗೆ ಉತ್ತಮವಾದ ಒಂದು ಮಾದರಿಯಾಗಿದ್ದಾನೆ. ಅವನು ತನ್ನ ವಿಷಯದಲ್ಲೇ ಹೇಳಿದ್ದು: “ಮನುಷ್ಯಕುಮಾರನು ಸೇವೆಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದ”ಕ್ಕೆ, ಅಂದರೆ, ಇತರರ ಸೇವೆಮಾಡಲು ಬಂದನು. (ಮತ್ತಾಯ 20:28) ಎಲ್ಲ ಸದಸ್ಯರು ಅಂತಹ ಮನೋಭಾವವನ್ನು ಎಲ್ಲಿ ಬೆಳೆಸುತ್ತಾರೊ ಅಂತಹ ಕುಟುಂಬಗಳು ಎಷ್ಟು ಆನಂದಕರವಾಗಿವೆ!
ಸ್ವಚ್ಛತೆ—ಅಷ್ಟೇಕೆ ಪ್ರಾಮುಖ್ಯ?
12. ತನ್ನನ್ನು ಸೇವಿಸುವವರಿಂದ ಯೆಹೋವನು ಏನನ್ನು ಅವಶ್ಯಪಡುತ್ತಾನೆ?
12 ಒಂದು ಮನೆವಾರ್ತೆಯ ನಿರ್ವಹಣೆಯಲ್ಲಿ ಸಹಾಯ ಮಾಡಬಲ್ಲ ಇನ್ನೊಂದು ಬೈಬಲ್ ಮೂಲತತ್ವವು 2 ಕೊರಿಂಥ 7:1ರಲ್ಲಿ ಕಂಡುಬರುತ್ತದೆ. ಅಲ್ಲಿ ನಾವು ಓದುವುದು: “ನಾವು ಶರೀರಾತ್ಮಗಳ ಕಲ್ಮಶಗಳನ್ನು ತೊಲಗಿಸಿ ನಮ್ಮನ್ನು ಶುಚಿ”ಮಾಡಿಕೊಳ್ಳೋಣ. ಈ ಪ್ರೇರಿತ ಮಾತುಗಳಿಗೆ ವಿಧೇಯರಾಗುವವರು, “ಶುದ್ಧವೂ ನಿರ್ಮಲವೂ ಆಗಿರುವ ಭಕ್ತಿ [“ಆರಾಧನೆ,” NW]”ಯನ್ನು ಅವಶ್ಯಪಡುವ ಯೆಹೋವನಿಗೆ ಅಂಗೀಕೃತರಾಗುತ್ತಾರೆ. (ಯಾಕೋಬ 1:27) ಮತ್ತು ಅವರ ಮನೆವಾರ್ತೆಯು ಜೊತೆಗೂಡಿದ ಪ್ರಯೋಜನಗಳನ್ನು ಪಡೆಯುತ್ತದೆ.
13. ಮನೆವಾರ್ತೆಯ ನಿರ್ವಹಣೆಯಲ್ಲಿ ಸ್ವಚ್ಛತೆಯು ಏಕೆ ಪ್ರಾಮುಖ್ಯವಾಗಿದೆ?
13 ಉದಾಹರಣೆಗಾಗಿ ಇನ್ನುಮುಂದೆ ರೋಗ ಮತ್ತು ಅಸ್ವಸ್ಥತೆಯು ಇಲ್ಲದ ದಿನವು ಬರುವುದೆಂದು ಬೈಬಲು ನಮಗೆ ಆಶ್ವಾಸನೆ ನೀಡುತ್ತದೆ. ಆ ಸಮಯದಲ್ಲಿ, “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.” (ಯೆಶಾಯ 33:24; ಪ್ರಕಟನೆ 21:4, 5) ಆದರೂ ಅಂದಿನ ತನಕ, ಪ್ರತಿ ಕುಟುಂಬವು ಆಗಿಂದಾಗ್ಗೆ ಅಸ್ವಸ್ಥತೆಯನ್ನು ನಿರ್ವಹಿಸಬೇಕಾಗುತ್ತದೆ. ಪೌಲ ಮತ್ತು ತಿಮೊಥೆಯರೂ ಅಸ್ವಸ್ಥರಾದರು. (ಗಲಾತ್ಯ 4:13; 1 ತಿಮೊಥೆಯ 5:23) ಆದರೂ, ಅಧಿಕಾಂಶ ಅಸ್ವಸ್ಥತೆಯು ತಡೆಗಟ್ಟಸಾಧ್ಯವೆಂದು ವೈದ್ಯಕೀಯ ನಿಪುಣರು ಹೇಳುತ್ತಾರೆ. ವಿವೇಕಿ ಕುಟುಂಬಗಳು, ಶಾರೀರಿಕ ಹಾಗೂ ಆತ್ಮಿಕ ಅಶುದ್ಧತೆಯಿಂದ ದೂರವಿರುವಲ್ಲಿ, ತಡೆಗಟ್ಟಸಾಧ್ಯವಿರುವ ಕೆಲವು ಅನಾರೋಗ್ಯಗಳನ್ನು ಪಾರಾಗುತ್ತವೆ. ಹೇಗೆಂದು ನಾವು ಪರಿಗಣಿಸೋಣ.—ಜ್ಞಾನೋಕ್ತಿ 22:3ನ್ನು ಹೋಲಿಸಿರಿ.
14. ನೈತಿಕ ಶುದ್ಧತೆಯು ಒಂದು ಕುಟುಂಬವನ್ನು ಅಸ್ವಸ್ಥತೆಯಿಂದ ಯಾವ ವಿಧದಲ್ಲಿ ಕಾಪಾಡಬಲ್ಲದು?
14 ಆತ್ಮದ ಶುದ್ಧತೆಯಲ್ಲಿ ನೈತಿಕ ಶುದ್ಧತೆಯು ಸೇರಿದೆ. ಸುವಿದಿತವಾಗಿರುವಂತೆ, ಬೈಬಲು ಉನ್ನತ ನೈತಿಕ ಮಟ್ಟಗಳನ್ನು ಪ್ರವರ್ಧಿಸುತ್ತದೆ, ಮತ್ತು ವಿವಾಹದ ಹೊರಗಣ ಯಾವುದೇ ಲೈಂಗಿಕ ಸಂಬಂಧವನ್ನು ಖಂಡಿಸುತ್ತದೆ. “ಜಾರರು . . . ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು . . . ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.” (1 ಕೊರಿಂಥ 6:9, 10) ಇಂದಿನ ಅವನತ ಜಗತ್ತಿನಲ್ಲಿ ಜೀವಿಸುತ್ತಿರುವ ಕ್ರೈಸ್ತರಿಗೆ ಈ ಕಟ್ಟುನಿಟ್ಟಾದ ಮಟ್ಟಗಳನ್ನು ಪಾಲಿಸುವುದು ಅತಿ ಪ್ರಾಮುಖ್ಯವಾಗಿದೆ. ಹಾಗೆ ಮಾಡುವುದು ದೇವರನ್ನು ಮೆಚ್ಚಿಸುತ್ತದೆ, ಮತ್ತು ಏಡ್ಸ್, ಸಿಫಿಲಿಸ್, ಗಾನೊರೀಯ ಮತ್ತು ಕ್ಲಮಿಡೀಯದಂತಹ ರತಿ ರವಾನಿತ ರೋಗಗಳಿಂದಲೂ ಕುಟುಂಬವನ್ನು ಕಾಪಾಡಲು ಸಹಾಯ ಮಾಡುತ್ತದೆ.—ಜ್ಞಾನೋಕ್ತಿ 7:10-23.
15. ಅನಾವಶ್ಯಕ ಅನಾರೋಗ್ಯವನ್ನು ಉಂಟುಮಾಡಬಲ್ಲ ಶಾರೀರಿಕ ಶುದ್ಧತೆಯ ಕೊರತೆಯ ಒಂದು ಉದಾಹರಣೆಯನ್ನು ಕೊಡಿರಿ.
15 ‘ಶರೀರದ ಪ್ರತಿಯೊಂದು ಕಲ್ಮಶದಿಂದ ಒಬ್ಬನು ತನ್ನನ್ನು ಶುದ್ಧಮಾಡಿಕೊಳ್ಳುವುದು,’ ಬೇರೆ ಅಸ್ವಸ್ಥತೆಗಳಿಂದಲೂ ಕುಟುಂಬವನ್ನು ಕಾಪಾಡಲು ಸಹಾಯ ಮಾಡುತ್ತದೆ. ಅನೇಕ ರೋಗಗಳು ಶಾರೀರಿಕ ಶುದ್ಧತೆಯ ಕೊರತೆಯ ಕಾರಣ ಬರುತ್ತವೆ. ಒಂದು ಪ್ರಧಾನ ಉದಾಹರಣೆಯು ಧೂಮಪಾನದ ಚಟವಾಗಿದೆ. ಧೂಮಪಾನವು ಶ್ವಾಸಕೋಶಗಳು, ಬಟ್ಟೆಬರೆಗಳು ಮತ್ತು ಗಾಳಿಯನ್ನೂ ಮಲಿನಗೊಳಿಸುವುದು ಮಾತ್ರವಲ್ಲ, ಅದು ಜನರನ್ನು ಅಸ್ವಸ್ಥರನ್ನಾಗಿಯೂ ಮಾಡುತ್ತದೆ. ಅವರು ಹೊಗೆಸೊಪ್ಪನ್ನು ಸೇದಿದ ಕಾರಣದಿಂದ ಪ್ರತಿ ವರ್ಷ ಲಕ್ಷಾಂತರ ಜನರು ಸಾಯುತ್ತಾರೆ. ಇದರ ಕುರಿತಾಗಿ ಯೋಚಿಸಿರಿ; ಆ ‘ಶರೀರದ ಕಲ್ಮಶ’ದಿಂದ ದೂರವಿರುತ್ತಿದ್ದರೆ, ಲಕ್ಷಾಂತರ ಜನರು ಪ್ರತಿ ವರ್ಷ, ಕಾಯಿಲೆ ಬಿದ್ದು ಸಮಯಕ್ಕೆ ಮುಂಚೆ ಸಾಯುತ್ತಿರಲಿಲ್ಲ!
16, 17. (ಎ) ಯೆಹೋವನಿಂದ ಕೊಡಲ್ಪಟ್ಟ ಯಾವ ನಿಯಮವು ಕೆಲವು ಅನಾರೋಗ್ಯಗಳಿಂದ ಇಸ್ರಾಯೇಲ್ಯರನ್ನು ಸಂರಕ್ಷಿಸಿತು? (ಬಿ) ಎಲ್ಲಾ ಮನೆವಾರ್ತೆಗಳಲ್ಲಿ, ಧರ್ಮೋಪದೇಶಕಾಂಡ 23:12, 13ರ ಹಿಂದಿರುವ ಮೂಲತತ್ವವನ್ನು ಹೇಗೆ ಅನ್ವಯಿಸಸಾಧ್ಯವಿದೆ?
16 ಇನ್ನೊಂದು ಉದಾಹರಣೆಯನ್ನು ಪರಿಗಣಿಸಿರಿ. ಸುಮಾರು 3,500 ವರ್ಷಗಳ ಹಿಂದೆ, ದೇವರು ಅವರ ಆರಾಧನೆಯನ್ನು, ಮತ್ತು ಸ್ವಲ್ಪಮಟ್ಟಿಗೆ, ಅವರ ದೈನಂದಿನ ಜೀವಿತವನ್ನು ವ್ಯವಸ್ಥಾಪಿಸಲಿಕ್ಕಾಗಿ ಇಸ್ರಾಯೇಲ್ ಜನಾಂಗಕ್ಕೆ ತನ್ನ ಧರ್ಮಶಾಸ್ತ್ರವನ್ನು ಕೊಟ್ಟನು. ಕೆಲವು ಮೂಲ ಆರೋಗ್ಯ ನಿಯಮಗಳನ್ನು ಕೊಡುವ ಮೂಲಕ ಆ ಧರ್ಮಶಾಸ್ತ್ರವು ಆ ಜನಾಂಗವನ್ನು ರೋಗದಿಂದ ಕಾಪಾಡಲು ಸಹಾಯ ಮಾಡಿತು. ಇಂತಹ ಒಂದು ನಿಯಮವು ಮಾನವ ಮಲಮೂತ್ರ ವಿಸರ್ಜನೆಯ ಸಂಬಂಧದಲ್ಲಿತ್ತು. ಜನರು ಜೀವಿಸುವ ಕ್ಷೇತ್ರವು ಮಲಿನಗೊಳ್ಳದಿರುವಂತೆ, ಅವನ್ನು ಪಾಳೆಯದ ಹೊರಗೆ ದೂರದಲ್ಲಿ ಸರಿಯಾಗಿ ಹುಗಿಯಬೇಕಾಗಿತ್ತು. (ಧರ್ಮೋಪದೇಶಕಾಂಡ 23:12, 13) ಆ ಪುರಾತನ ನಿಯಮವು ಇನ್ನೂ ಒಳ್ಳೆಯ ಸಲಹೆಯಾಗಿದೆ. ಇಂದೂ ಜನರು ಅದನ್ನು ಅನುಸರಿಸದಿರುವುದರಿಂದ ಅವರು ಕಾಯಿಲೆ ಬಿದ್ದು ಸಾಯುತ್ತಾರೆ.a
17 ಆ ಇಸ್ರಾಯೇಲ್ಯ ನಿಯಮದ ಹಿಂದಿರುವ ಮೂಲತತ್ವಕ್ಕೆ ಹೊಂದಿಕೆಯಾಗಿ, ಕುಟುಂಬದ ಸ್ನಾನಗೃಹ ಮತ್ತು ಪಾಯಿಖಾನೆಯ ಕ್ಷೇತ್ರವನ್ನು—ಅದು ಮನೆಯ ಒಳಗಿರಲಿ, ಹೊರಗಿರಲಿ—ಶುದ್ಧವಾಗಿಯೂ ಸೋಂಕುರಹಿತವಾದುದಾಗಿಯೂ ಇಡಬೇಕು. ಪಾಯಿಖಾನೆಯ ಕ್ಷೇತ್ರವನ್ನು ಶುದ್ಧವಾಗಿಡದೆ ಅಥವಾ ಮುಚ್ಚದೆ ಇಡುವಲ್ಲಿ, ಅಲ್ಲಿ ನೊಣಗಳು ಕೂಡಿಬಂದು, ಮನೆಯ ಇತರ ಭಾಗಗಳಿಗೆ ಮತ್ತು ನಾವು ತಿನ್ನುವ ಆಹಾರದ ಮೇಲೆ ರೋಗಾಣುಗಳನ್ನು ಹರಡಿಸುವವು! ಅಲ್ಲದೆ, ಈ ಕ್ಷೇತ್ರವನ್ನು ಸಂದರ್ಶಿಸಿದ ಬಳಿಕ ಮಕ್ಕಳು ಮತ್ತು ವಯಸ್ಕರು ತಮ್ಮ ಕೈಗಳನ್ನು ತೊಳೆಯಬೇಕು. ಇಲ್ಲದಿರುವಲ್ಲಿ ಅವರು ತಮ್ಮ ಚರ್ಮಗಳ ಮೇಲೆ ರೋಗಾಣುಗಳನ್ನು ಹಿಂದೆ ತರುವರು. ಒಬ್ಬ ಫ್ರೆಂಚ್ ವೈದ್ಯರಿಗನುಸಾರ, ಕೈ ತೊಳೆಯುವುದು, “ಇನ್ನೂ ಕೆಲವು ಪಚನಕ್ರಿಯೆಗೆ ಸಂಬಂಧವಾದ, ಶ್ವಾಸೋಚ್ಛ್ವಾಸದ ಅಥವಾ ಚರ್ಮದ ಸೋಂಕುಗಳ ನಿರೋಧಕ್ಕಿರುವ ಅತ್ಯುತ್ತಮ ಖಾತರಿಗಳಲ್ಲಿ ಒಂದಾಗಿದೆ.”
18, 19. ಒಂದು ಬಡ ನೆರೆಹೊರೆಯಲ್ಲಿ ಕೂಡ ಒಂದು ಸ್ವಚ್ಛ ಮನೆಯನ್ನು ಕಾಪಾಡಿಕೊಳ್ಳುವಂತೆ ಯಾವ ಸೂಚನೆಗಳನ್ನು ಕೊಡಲಾಗುತ್ತದೆ?
18 ಬಡ ನೆರೆಹೊರೆಯೊಂದರಲ್ಲಿ ಸ್ವಚ್ಛತೆಯು ಒಂದು ಪಂಥಾಹ್ವಾನವೆಂಬುದು ನಿಜ. ಅಂತಹ ಸ್ಥಳಗಳ ಪರಿಚಯವಿರುವ ಒಬ್ಬನು ವಿವರಿಸಿದ್ದು: “ಅದುಮಿಡುವಂತಹ ಬಿಸಿ ಹವಾಮಾನವು ಶುಚಿಮಾಡುವ ಕೆಲಸವನ್ನು ಇಮ್ಮಡಿ ಕಷ್ಟಕರವಾಗಿ ಮಾಡುತ್ತದೆ. ಧೂಳಿನ ಬಿರುಗಾಳಿಗಳು ಮನೆಯ ಪ್ರತಿಯೊಂದು ಬಿರುಕನ್ನು ಸೂಕ್ಷ್ಮ ಕಂದು ಹುಡಿಯಿಂದ ಮುಚ್ಚುತ್ತವೆ. . . . ನಗರಗಳಲ್ಲಿ ಹಾಗೂ ಕೆಲವು ಗ್ರಾಮ ಪ್ರದೇಶಗಳಲ್ಲಿನ ಬೆಳೆಯುತ್ತಿರುವ ಜನಸಂಖ್ಯೆಗಳು ಸಹ ಆರೋಗ್ಯಾಪಾಯಗಳನ್ನು ಉಂಟುಮಾಡುತ್ತವೆ. ತೆರೆದಿರುವ ಚರಂಡಿಗಳು, ತೆಗೆದುಕೊಂಡು ಹೋಗದಿರುವ ಕಚಡದ ರಾಶಿಗಳು, ಹೊಲಸಾದ ಸಾಮುದಾಯಿಕ ಪಾಯಿಖಾನೆಗಳು, ರೋಗವಾಹಕ ಇಲಿಗಳು, ಜಿರಲೆಗಳು ಮತ್ತು ನೊಣಗಳು ಸಾಮಾನ್ಯ ದೃಶ್ಯಗಳಾಗಿವೆ.”
19 ಈ ಸ್ಥಿತಿಗಳಡಿಯಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದು ಕಷ್ಟಕರ. ಆದರೂ ಈ ಪ್ರಯತ್ನ ಪ್ರಯೋಜನಕರ. ಸಾಬೂನು, ನೀರು ಮತ್ತು ತುಸು ಹೆಚ್ಚು ಕೆಲಸವು, ಔಷಧ ಮತ್ತು ಆಸ್ಪತ್ರೆಯ ಬಿಲ್ಗಳಿಗಿಂತ ಹೆಚ್ಚು ಅಗ್ಗವಾಗಿವೆ. ನೀವು ಅಂತಹ ಒಂದು ಪರಿಸರದಲ್ಲಿ ಜೀವಿಸುವುದಾದರೆ, ಆದಷ್ಟು ಮಟ್ಟಿಗೆ, ನಿಮ್ಮ ಸ್ವಂತ ಮನೆ ಮತ್ತು ಅಂಗಣವನ್ನು ಸ್ವಚ್ಛವಾಗಿಯೂ ಪ್ರಾಣಿ ಸಗಣಿ ಮುಕ್ತವಾಗಿಯೂ ಇಡಿರಿ. ನಿಮ್ಮ ಮನೆಗಿರುವ ಕಾಲುದಾರಿಯು ಮಳೆಯ ಸಮಯದಲ್ಲಿ ಕೆಸರಾಗುವ ಪ್ರವೃತ್ತಿಯದ್ದಾಗಿದ್ದರೆ, ಕೆಸರನ್ನು ಮನೆಯಿಂದ ಹೊರಗಿಡುವಂತೆ ಆ ದಾರಿಗೆ ದಪ್ಪಮರಳನ್ನೊ ಕಲ್ಲುಗಳನ್ನೊ ಹಾಕಸಾಧ್ಯವಿದೆಯೆ? ಪಾದರಕ್ಷೆಗಳು ಅಥವಾ ಮೆಟ್ಟುಗಳು ಉಪಯೋಗಿಸಲ್ಪಡುವಲ್ಲಿ, ಅದನ್ನು ಧರಿಸುವವನು ಮನೆಯನ್ನು ಪ್ರವೇಶಿಸುವ ಮೊದಲು ಇವುಗಳನ್ನು ಕಳಚಸಾಧ್ಯವಿದೆಯೊ? ಅಲ್ಲದೆ, ನೀವು ನಿಮ್ಮ ನೀರಿನ ಸರಬರಾಯಿಯನ್ನು ಮಲಿನಮುಕ್ತವಾಗಿಡಬೇಕು. ಒಂದು ವರುಷದಲ್ಲಿ ಕಡಿಮೆಪಕ್ಷ 20 ಲಕ್ಷ ಮರಣಗಳು, ಕೊಳಕು ನೀರು ಮತ್ತು ನ್ಯೂನ ನೈರ್ಮಲ್ಯದೊಂದಿಗೆ ಸಂಬಂಧಿಸಿದ ರೋಗಗಳ ಕಾರಣದಿಂದ ಸಂಭವಿಸುತ್ತವೆಂದು ಅಂದಾಜು ಮಾಡಲಾಗುತ್ತದೆ.
20. ಮನೆಯು ಸ್ವಚ್ಛವಾಗಿರಬೇಕಾದರೆ ಜವಾಬ್ದಾರಿಯನ್ನು ಯಾರು ಹಂಚಿಕೊಳ್ಳಬೇಕು?
20 ಒಂದು ಸ್ವಚ್ಛವಾದ ಮನೆ ಪ್ರತಿಯೊಬ್ಬರ—ತಾಯಿ, ತಂದೆ, ಮಕ್ಕಳು ಮತ್ತು ಭೇಟಿಕಾರರು—ಮೇಲೆ ಹೊಂದಿಕೊಳ್ಳುತ್ತದೆ. ಕೆನ್ಯದಲ್ಲಿ ಎಂಟು ಮಕ್ಕಳ ಒಬ್ಬ ತಾಯಿ ಹೇಳಿದ್ದು: “ಎಲ್ಲರು ತಮ್ಮ ತಮ್ಮ ಪಾಲನ್ನು ಮಾಡಲು ಕಲಿತಿದ್ದಾರೆ.” ಒಂದು ಸ್ವಚ್ಛವಾದ ಚೊಕ್ಕಟ ಮನೆಯು ಇಡೀ ಕುಟುಂಬವನ್ನು ಉತ್ತಮವಾಗಿ ಪ್ರತಿಬಿಂಬಿಸುತ್ತದೆ. ಒಂದು ಸ್ಪ್ಯಾನಿಷ್ ನಾಣ್ಣುಡಿ ಹೇಳುವುದು: “ದಾರಿದ್ರ್ಯ ಮತ್ತು ಸ್ವಚ್ಛತೆಗಳ ಮಧ್ಯೆ ಯಾವ ಹೋರಾಟವೂ ಇಲ್ಲ.” ಒಬ್ಬನು ಒಂದು ಭವನದಲ್ಲಿ ಜೀವಿಸಲಿ, ವಾಸದ ಮಹಡಿ, ಬಡಮನೆ, ಅಥವಾ ಗುಡಿಸಿಲಿನಲ್ಲಿ ಜೀವಿಸಲಿ, ಹೆಚ್ಚು ಆರೋಗ್ಯಕರ ಕುಟುಂಬಕ್ಕಿರುವ ಕೀಲಿ ಕೈಯು ಸ್ವಚ್ಫತೆಯೇ.
ಪ್ರೋತ್ಸಾಹನೆಯು ನಾವು ಏಳಿಗೆ ಹೊಂದುವಂತೆ ಮಾಡುತ್ತದೆ
21. ಜ್ಞಾನೋಕ್ತಿ 31:28ಕ್ಕೆ ಹೊಂದಿಕೆಯಾಗಿ, ಒಂದು ಮನೆವಾರ್ತೆಯಲ್ಲಿ ಸಂತೋಷವನ್ನು ತರಲು ಯಾವುದು ಸಹಾಯ ಮಾಡುವುದು?
21 ಸಮರ್ಥೆಯಾದ ಹೆಂಡತಿಯ ಕುರಿತು ಚರ್ಚಿಸುವಾಗ ಜ್ಞಾನೋಕ್ತಿ ಪುಸ್ತಕವು ಹೇಳುವುದು: ‘ಮಕ್ಕಳು ಎದ್ದುನಿಂತು ಆಕೆಯನ್ನು ಧನ್ಯಳು ಎಂದು ಹೇಳುವರು; ಗಂಡನು ಸಹ . . . ಆಕೆಯನ್ನು ಕೊಂಡಾಡುವನು.’ (ಜ್ಞಾನೋಕ್ತಿ 31:28) ನಿಮ್ಮ ಕುಟುಂಬದ ಸದಸ್ಯನೊಬ್ಬನನ್ನು ನೀವು ಕೊನೆಯ ಬಾರಿ ಪ್ರಶಂಸಿಸಿದ್ದು ಯಾವಾಗ? ನಿಜವಾಗಿಯೂ, ವಸಂತಕಾಲದಲ್ಲಿ ತುಸು ಬೆಚ್ಚಗಿನ ಸ್ಥಿತಿಯನ್ನು ಮತ್ತು ತೇವವನ್ನು ಪಡೆಯುವಾಗ ಹೂವು ಬಿಡಲು ಸಿದ್ಧವಾಗಿರುವ ಸಸ್ಯಗಳಂತೆ ನಾವಿದ್ದೇವೆ. ನಮ್ಮ ವಿಷಯದಲ್ಲಾದರೊ, ನಮಗೆ ಪ್ರಶಂಸೆಯ ಬೆಚ್ಚಗೆ ಮಾಡುವಿಕೆಯು ಅಗತ್ಯ. ಇದು ತನ್ನ ಗಂಡನು ತನ್ನ ಕಠಿನ ಕೆಲಸ ಮತ್ತು ಪ್ರೀತಿಯ ಆರೈಕೆಯನ್ನು ಗಣ್ಯಮಾಡುತ್ತಾನೆ, ಅವಳನ್ನು ಮಾಮೂಲಿಯಾಗಿ ತೆಗೆದುಕೊಳ್ಳುವುದಿಲ್ಲವೆಂಬುದನ್ನು ತಿಳಿಯಲು ಹೆಂಡತಿಗೆ ಸಹಾಯ ಮಾಡುತ್ತದೆ. (ಜ್ಞಾನೋಕ್ತಿ 15:23; 25:11) ಮತ್ತು ತನ್ನ ಗಂಡನು ಮನೆಯ ಹೊರಗೂ ಒಳಗೂ ಮಾಡುವ ಕೆಲಸಕ್ಕಾಗಿ ಹೆಂಡತಿಯು ಅವನನ್ನು ಪ್ರಶಂಸಿಸುವಾಗ ಅದು ಆನಂದಕರವಾಗಿರುತ್ತದೆ. ಶಾಲೆಯಲ್ಲಿ, ಮನೆಯಲ್ಲಿ ಅಥವಾ ಕ್ರೈಸ್ತ ಸಭೆಯಲ್ಲಿ ಅವರು ಮಾಡುವ ಪ್ರಯತ್ನಗಳಿಗಾಗಿ ಅವರ ಹೆತ್ತವರು ಅವರನ್ನು ಪ್ರಶಂಸಿಸುವಾಗ ಮಕ್ಕಳೂ ಪ್ರಫುಲ್ಲರಾಗುತ್ತಾರೆ. ಮತ್ತು ತುಸು ಕೃತಜ್ಞತೆಯು ಎಷ್ಟು ಅಗಾಧವಾಗುತ್ತದೆ! “ನಿಮಗೆ ಉಪಕಾರ,” ಎಂದು ಹೇಳಲು ಎಷ್ಟು ಖರ್ಚಾಗುತ್ತದೆ? ತೀರ ಅಲ್ಪವಾದರೂ ಕುಟುಂಬ ನೀತಿಶೀಲದಲ್ಲಿ ಪ್ರಯೋಜನಗಳೊ ಅಪಾರವಾಗಿರಸಾಧ್ಯವಿದೆ.
22. “ಸ್ಥಿರವಾಗಿ ಸ್ಥಾಪಿಸ”ಲ್ಪಡಬೇಕಾಗಿರುವಲ್ಲಿ, ಒಂದು ಮನೆವಾರ್ತೆಗೆ ಏನು ಅಗತ್ಯ, ಮತ್ತು ಇದನ್ನು ಹೇಗೆ ಪಡೆಯಸಾಧ್ಯವಿದೆ?
22 ಮನೆವಾರ್ತೆಯನ್ನು ನಿರ್ವಹಿಸುವುದು, ಅನೇಕ ಕಾರಣಗಳಿಂದಾಗಿ ಸುಲಭವಾಗಿರುವುದಿಲ್ಲ. ಆದರೂ ಅದನ್ನು ಯಶಸ್ವಿಯಾಗಿ ಮಾಡಸಾಧ್ಯವಿದೆ. ಬೈಬಲಿನ ಒಂದು ಜ್ಞಾನೋಕ್ತಿ ಹೇಳುವುದು: “ಒಂದು ಮನೆವಾರ್ತೆಯು ವಿವೇಕದ ಮೂಲಕ ಕಟ್ಟಲ್ಪಡುವುದು, ಮತ್ತು ವಿವೇಚನಾಶಕ್ತಿಯ ಮೂಲಕ ಅದು ಸ್ಥಿರವಾಗಿ ಸ್ಥಾಪಿಸಲ್ಪಡುವುದು.” (ಜ್ಞಾನೋಕ್ತಿ 24:3, NW) ಕುಟುಂಬದಲ್ಲಿ ಎಲ್ಲರೂ ದೇವರ ಇಷ್ಟವನ್ನು ಕಲಿತು ಅದನ್ನು ತಮ್ಮ ಜೀವಿತಗಳಲ್ಲಿ ಅನ್ವಯಿಸಿಕೊಳ್ಳಲು ಶ್ರಮಿಸುವಲ್ಲಿ, ವಿವೇಕವನ್ನೂ ವಿವೇಚನಾಶಕ್ತಿಯನ್ನೂ ಸಂಪಾದಿಸಸಾಧ್ಯವಿದೆ. ಒಂದು ಸಂತೋಷದ ಕುಟುಂಬವು ನಿಶ್ಚಯವಾಗಿಯೂ ಪ್ರಯತ್ನಕ್ಕೆ ಅರ್ಹವಾದದ್ದಾಗಿದೆ!
a ಅತಿಭೇದಿ—ಅನೇಕ ಶಿಶುಮರಣಗಳಿಗೆ ನಡೆಸುವ ಒಂದು ಸಾಮಾನ್ಯ ಕಾಯಿಲೆ—ಯಿಂದ ಹೇಗೆ ದೂರವಿರುವುದೆಂದು ಸಲಹೆ ನೀಡುವ ಒಂದು ಕೈಪಿಡಿಯಲ್ಲಿ ಲೋಕಾರೋಗ್ಯ ಸಂಸ್ಥೆಯು ಹೇಳುವುದು: “ಪಾಯಿಖಾನೆಯಿಲ್ಲದಿರುವಲ್ಲಿ ಮನೆಯಿಂದ ಮತ್ತು ಮಕ್ಕಳು ಆಡುವ ಸ್ಥಳಗಳಿಂದ ದೂರ, ನೀರಿನ ಸರಬರಾಯಿಯಿಂದ ಕಡಿಮೆಪಕ್ಷ 30 ಅಡಿ ದೂರದಲ್ಲಿ ಮಲವಿಸರ್ಜನೆ ಮಾಡಿರಿ; ಮಲವನ್ನು ಮಣ್ಣಿನಿಂದ ಮುಚ್ಚಿರಿ.”