ಅಧ್ಯಾಯ 85
ಕಳೆದುಹೋದದ್ದನ್ನು ಹುಡುಕುವದು
ದೇವರನ್ನು ನಮ್ರತೆಯಿಂದ ಸೇವಿಸುವವರನ್ನು ಹುಡುಕಲು ಮತ್ತು ಕಂಡುಕೊಳ್ಳಲು ಯೇಸುವು ಆಸಕ್ತಿಯುಳ್ಳವನಾಗಿದ್ದನು. ಆದುದರಿಂದ ದೇವರ ರಾಜ್ಯದ ಕುರಿತು ಪ್ರತಿಯೊಬ್ಬನಿಗೂ, ಕುಖ್ಯಾತ ಪಾಪಿಗಳಿಗೂ, ಅವನು ಹುಡುಕಿ, ತಿಳಿಸಿದನು. ಅಂಥ ವ್ಯಕ್ತಿಗಳು ಈಗ ಅವನನ್ನು ಕೇಳಲು ಸಮೀಪಿಸುತ್ತಿದ್ದರು.
ಇದನ್ನು ಅವಲೋಕಿಸಿ, ಫರಿಸಾಯರೂ, ಶಾಸ್ತ್ರಿಗಳೂ, ಯಾರೊಂದಿಗೆ ಸಹವಾಸವನ್ನಿಟ್ಟುಕೊಳ್ಳಲು ಅಯೋಗ್ಯರೆಂದು ಪರಿಗಣಿಸುತ್ತಿದ್ದರೋ ಅಂಥ ಜನರೊಂದಿಗೆ ಯೇಸುವು ಸೇರಿಕೊಂಡಿರುವದನ್ನು ಠೀಕಿಸುತ್ತಾರೆ. ಅವರು ಗುಣುಗುಟ್ಟುವದು: “ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ.” ಅವರ ಉಚ್ಛ ಅಂತಸ್ತಿಗಿಂತ ಇದು ಎಷ್ಟೋ ಕೆಳಮಟ್ಟದ್ದು! ಫರಿಸಾಯರು ಮತ್ತು ಶಾಸ್ತ್ರಿಗಳು ಸಾಧಾರಣ ಜನರನ್ನು ಅವರ ಕಾಲಕೆಳಗಿನ ಕೊಳೆಯೋಪಾದಿ ನೋಡುತ್ತಿದ್ದರು. ವಾಸ್ತವದಲ್ಲಿ, ಅಂಥ ಜನರೆಡೆಗೆ ತಮಗಿರುವ ಧಿಕ್ಕಾರವನ್ನು ತೋರಿಸಲು ಅವರು ಆಮ್ ಹಾ-‘ಆ‘ರೆಟ್ಸ್, ಅಂದರೆ “ದೇಶದ [ಭೂಮಿಯ] ಜನರು” ಎನ್ನುವ ಹಿಬ್ರೂ ಶಬ್ದವನ್ನು ಬಳಸುತ್ತಿದ್ದರು.
ಇನ್ನೊಂದು ಪಕ್ಕದಲ್ಲಿ, ಯೇಸುವು ಎಲ್ಲರನ್ನೂ ಗೌರವ, ದಯೆ ಮತ್ತು ಅನುಕಂಪದಿಂದ ಉಪಚರಿಸುತ್ತಿದ್ದನು. ಇದರ ಫಲವಾಗಿ, ಅನೇಕ ಕೀಳ್ಮಟ್ಟದವರು, ತಪ್ಪುಗಳನ್ನು ಆಚರಿಸುತ್ತಿದ್ದ ವ್ಯಕ್ತಿಗಳು ಕೂಡ, ಅವನನ್ನು ಕೇಳಲು ಆಸಕ್ತಿಯಿಂದ ಇದ್ದರು. ಆದರೆ ಫರಿಸಾಯರು, ತಾವು ಅಯೋಗ್ಯರೆಂದು ಎಣಿಸುತ್ತಿದ್ದ ಜನರ ಪರವಾಗಿ ಯೇಸುವು ತನ್ನನ್ನು ನೀಡಿಕೊಳ್ಳುವದನ್ನು ಠೀಕಿಸುವದರ ಕುರಿತಾಗಿ ಏನು?
ಒಂದು ಸಾಮ್ಯವನ್ನು ಬಳಸಿ, ಯೇಸುವು ಅವರ ಅಡ್ಡಿಗೆ ಉತ್ತರವನ್ನೀಯುತ್ತಾನೆ. ಫರಿಸಾಯರ ಸ್ವಂತನೋಟವಾಗಿದ್ದ, ತಾವು ನೀತಿವಂತರು ಮತ್ತು ದೇವರ ಮಂದೆಯೊಳಗೆ ಸುರಕ್ಷಿತರಾಗಿದ್ದವರು, ಆದರೆ ಕೀಳ್ಮಟ್ಟದ ಆಮ್ ಹಾ-‘ಆ‘ರೆಟ್ಸ್ ಜನರು ಚದರಿ ದೂರ ಹೋಗಿರುವವರು ಮತ್ತು ತಪ್ಪಿಹೋದವರು ಎಂಬ ವಿಷಯದಲ್ಲಿ ಯೇಸುವು ಈಗ ಮಾತಾಡುತ್ತಾನೆ. ಅವನು ಮಾತಾಡುವದನ್ನು ಕೇಳೋಣ:
“ನಿಮ್ಮೊಳಗೆ ಯಾವ ಮನುಷ್ಯನಾದರೂ ತನಗೆ ನೂರು ಕುರಿಗಳಿರಲಾಗಿ ಅವುಗಳಲ್ಲಿ ಒಂದು ಕಳೆದುಹೋದರೆ ಅವನು ತೊಂಭತ್ತೊಂಭತ್ತನ್ನು ಅಡವಿಯಲ್ಲಿ ಬಿಟ್ಟು ಕಳೆದು ಹೋದದ್ದು ಸಿಕ್ಕುವ ತನಕ ಅದನ್ನು ಹುಡುಕಿ ಕೊಂಡು ಹೋಗದೆ ಇದ್ದಾನೇ? ಸಿಕ್ಕಿದ ಮೇಲೆ ಅವನು ಸಂತೋಷ ಪಡುತ್ತಾ ಅದನ್ನು ತನ್ನ ಹೆಗಲಿನ ಮೇಲೆ ಇಟ್ಟುಕೊಂಡು ಮನೆಗೆ ಬಂದು ಸ್ನೇಹಿತರನ್ನೂ ನೆರೆಹೊರೆಯವರನ್ನೂ ಕೂಡಿಸಿ—ಕಳೆದು ಹೋಗಿದ್ದ ಕುರಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಅವರಿಗೆ ಹೇಳುವನಲ್ಲವೇ.”
ಅನಂತರ ಯೇಸುವು ತನ್ನ ಕಥನದ ಅನ್ವಯವನ್ನು ಮಾಡುತ್ತಾ, ವಿವರಿಸುವದು: “ಅದರಂತೆ ದೇವರ ಕಡೆಗೆ ತಿರುಗಿ ಕೊಳ್ಳುವದಕ್ಕೆ [ಪಶ್ಚಾತ್ತಾಪ ಪಡುವ] ಆವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವದೆಂದು ನಿಮಗೆ ಹೇಳುತ್ತೇನೆ.”
ಫರಿಸಾಯರು ತಮ್ಮನ್ನು ನೀತಿವಂತರೆಂದು ಮತ್ತು ಈ ರೀತಿ ಪಶ್ಚಾತ್ತಾಪ ಪಡುವ ಆವಶ್ಯಕತೆಯಿಲ್ಲವೆಂದು ಎಣಿಸಿಕೊಳ್ಳುತ್ತಿದ್ದರು. ಸುಂಕದವರೊಂದಿಗೆ ಮತ್ತು ಪಾಪಿಗಳೊಂದಿಗೆ ಎರಡು ವರ್ಷಗಳ ಹಿಂದೆ ಯೇಸುವು ಊಟಮಾಡುವದನ್ನು ಕಂಡು ಠೀಕೆ ಮಾಡಿದಾಗ, ಅವನು ಅವರಿಗೆ ಅಂದದ್ದು: “ನಾನು ನೀತಿವಂತರನ್ನು ಕರೆಯುವದಕ್ಕೆ ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು.” ಸ್ವ-ನೀತಿಯ ಫರಿಸಾಯರು ಪಶ್ಚಾತ್ತಾಪ ಪಡುವ ಆವಶ್ಯಕತೆಯನ್ನು ಕಾಣಲು ತಪ್ಪಿಹೋದುದರಿಂದ ಪರಲೋಕದಲ್ಲಿ ಯಾವುದೇ ಸಂತೋಷಕ್ಕೆ ಕಾರಣವಿರುವದಿಲ್ಲ. ಆದರೆ ನಿಜವಾದ ಪಶ್ಚಾತ್ತಾಪಿಗಳು ಇದಕ್ಕೆ ಕಾರಣರಾಗುತ್ತಾರೆ.
ಕಳೆದು ಹೋದವರ ಪುನಃಸ್ಥಾಪನೆಯು ಒಂದು ಮಹಾ ಸಂತೋಷಕ್ಕೆ ಕಾರಣವಾಗುತ್ತದೆ ಎಂಬ ವಿಷಯವನ್ನು ಇಮ್ಮಡಿಯಾಗಿ ಬಲಪಡಿಸಲು, ಯೇಸುವು ಇನ್ನೊಂದು ಸಾಮ್ಯವನ್ನು ತಿಳಿಸುತ್ತಾನೆ. ಅವನನ್ನುವದು: “ಯಾವ ಹೆಂಗಸು ತನ್ನಲ್ಲಿ ಹತ್ತು ಪಾವಲಿಗಳಿರಲಾಗಿ ಒಂದು ಪಾವಲಿ ಹೋದರೆ ದೀಪ ಹಚ್ಚಿ ಮನೆಯನ್ನು ಗುಡಿಸಿ ಸಿಕ್ಕುವ ತನಕ ಅದನ್ನು ಎಚ್ಚರದಿಂದ ಹುಡುಕದೆ ಇದ್ದಾಳು? ಸಿಕ್ಕಿದ ಮೇಲೆ ಆಕೆಯು ತನ್ನ ಗೆಣತಿಯರನ್ನೂ ನೆರೆಹೊರೆಯವರನ್ನೂ ಕೂಡಿಸಿ—ಹೋಗಿದ್ದ ಪಾವಲಿ ಸಿಕ್ಕಿತು, ನನ್ನ ಸಂಗಡ ಸಂತೋಷಿಸಿರಿ ಎಂದು ಹೇಳುವಳಲ್ಲವೇ.”
ಅನಂತರ ಯೇಸುವು ತದ್ರೀತಿಯ ಅನ್ವಯವನ್ನು ಮಾಡುತ್ತಾನೆ. ಅವನು ಹೇಳುತ್ತಾ ಮುಂದರಿದದ್ದು: “ಅದರಂತೆ ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವದೆಂದು ನಿಮಗೆ ಹೇಳುತ್ತೇನೆ.”
ಕಳಕೊಂಡ ಪಾಪಿಗಳ ಪುನಃಸ್ಥಾಪನೆಗಾಗಿ ದೇವರ ದೂತರುಗಳ ಪ್ರೀತಿಪೂರ್ವಕ ಪರಿಗಣನೆಯು ಎಷೊಂದು ಗಮನಾರ್ಹವಾದದ್ದು! ವಿಶೇಷವಾಗಿ ಇದು ಹಾಗಿರುತ್ತದೆ ಯಾಕಂದರೆ ಇಂಥ ಒಮ್ಮೆ ಕನಿಷ್ಠರೂ, ಧಿಕ್ಕರಿಸಲ್ಪಟ್ಟವರೂ ಆದ ಆಮ್ ಹಾ-‘ಆ‘ರೆಟ್ಸ್ರವರು ಕ್ರಮೇಣ ದೇವರ ಸ್ವರ್ಗೀಯ ರಾಜ್ಯದ ಸದಸ್ಯತನದ ಸಾಲಿನಲ್ಲಿ ಬರಲಿಕ್ಕಿದ್ದರು. ಅದರ ಫಲಿತಾಂಶವಾಗಿ, ಅವರು ಸ್ವರ್ಗದಲ್ಲಿ ಸ್ವತಃ ದೇವದೂತರಿಗಿಂತಲೂ ಉನ್ನತವಾದ ಪದವಿಯನ್ನು ಪಡೆಯಲಿರುವರು! ಆದರೆ ದೇವದೂತರು ಇದರಿಂದ ಮತ್ಸರ ಇಲ್ಲವೆ ಅವಗಣನೆ ಅನಿಸಿಕೊಳ್ಳುವ ಬದಲು, ಈ ಪಾಪಪೂರ್ಣ ಮಾನವರು ಅನುಕಂಪ ಮತ್ತು ಕರುಣೆಯುಳ್ಳ ಸ್ವರ್ಗೀಯ ರಾಜರೂ, ಯಾಜಕರೂ ಆಗಿ ಸೇವೆ ಸಲ್ಲಿಸುವರೆ ಸನ್ನದ್ಧರಾಗಲು ಜೀವಿತದಲ್ಲಿ ಅನೇಕ ಸನ್ನಿವೇಶಗಳನ್ನು ಎದುರಿಸಿ, ಜಯಿಸಿದವರು ಎಂಬದನ್ನು ದೀನತೆಯಿಂದ ಗಣ್ಯಮಾಡುವರು. ಲೂಕ 15:1-10; ಮತ್ತಾಯ 9:13; 1 ಕೊರಿಂಥ 6:2, 3; ಪ್ರಕಟನೆ 20:6.
▪ ಪಾಪಿಗಳೆಂದು ಪ್ರಖ್ಯಾತರಾದವರೊಂದಿಗೆ ಯೇಸುವು ಯಾಕೆ ಸಹವಾಸ ಮಾಡುತ್ತಿದ್ದನು, ಮತ್ತು ಫರಿಸಾಯರಿಂದ ಯಾವ ಠೀಕೆಗೆ ಅವನು ಒಳಗಾದನು?
▪ ಸಾಮಾನ್ಯ ಜನರನ್ನು ಫರಿಸಾಯರು ಹೇಗೆ ನೋಡುತ್ತಿದ್ದರು?
▪ ಯೇಸುವು ಯಾವ ಸಾಮ್ಯಗಳನ್ನು ಬಳಸಿದನು, ಮತ್ತು ಅವುಗಳಿಂದ ನಾವೇನು ಕಲಿಯಬಲ್ಲೆವು?
▪ ದೇವದೂತರುಗಳು ಸಂತೋಷ ಪಡುವದು ಗಮನಾರ್ಹವಾದದ್ದು ಯಾಕೆ?