‘ಯೆಹೋವ, ಕರುಣೆಯೂ ದಯೆಯೂ ಉಳ್ಳ ದೇವರು’
“ಯೆಹೋವ, ಯೆಹೋವ ಕರುಣೆಯೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳವನು.”—ವಿಮೋಚನಕಾಂಡ 34:6, NW.
1. (ಎ) ಪ್ರಿಯ ಜನರು ಶುದ್ಧಾರಾಧನೆಯನ್ನು ಬಿಟ್ಟುಹೋಗುವುದನ್ನು ನೋಡಿರುವವರಿಗೆ ಬೈಬಲು ಯಾವ ಸಾಂತ್ವನವನ್ನು ಕೊಡುತ್ತದೆ? (ಬಿ) ಯೆಹೋವನು ತಪ್ಪಿತಸ್ಥರನ್ನು ಯಾವ ರೀತಿ ವೀಕ್ಷಿಸುತ್ತಾನೆ?
“ಇನ್ನುಮುಂದೆ ನಾನು ಕ್ರೈಸ್ತ ಸಭೆಯ ಭಾಗವಾಗಿರಲು ಬಯಸುವುದಿಲ್ಲ ಎಂದು ನನ್ನ ಮಗಳು ಹೇಳಿದಳು” ಎಂದು ಒಬ್ಬ ಕ್ರೈಸ್ತ ತಂದೆಯು ಹೇಳುತ್ತಾನೆ. “ಅನೇಕ ದಿನಗಳು, ವಾರಗಳು, ಮತ್ತು ತಿಂಗಳುಗಳ ವರೆಗೆ ನನ್ನ ಮನಸ್ಸಿಗೆ ತುಂಬ ಆಘಾತವಾಗಿತ್ತು. ಅದು ಸಾವಿಗಿಂತ ಹೀನವಾದ ಸ್ಥಿತಿಯಾಗಿತ್ತು.” ಖಂಡಿತವಾಗಿಯೂ, ಪ್ರಿಯ ವ್ಯಕ್ತಿಯೊಬ್ಬನು ಶುದ್ಧಾರಾಧನೆಯ ಮಾರ್ಗವನ್ನು ಬಿಟ್ಟುಹೋಗುವುದನ್ನು ನೋಡುವುದು ವೇದನಾಭರಿತವಾದದ್ದಾಗಿದೆ. ಹೀಗೆ ಎಂದಾದರೂ ನಿಮಗೆ ಸಂಭವಿಸಿದೆಯೊ? ಸಂಭವಿಸಿರುವಲ್ಲಿ, ನಿಮಗೆ ಹೇಗನಿಸುತ್ತದೆ ಎಂಬುದು ಯೆಹೋವನಿಗೆ ಚೆನ್ನಾಗಿ ತಿಳಿದಿದೆ ಎಂಬ ವಿಷಯದಿಂದ ನೀವು ಸಾಂತ್ವನವನ್ನು ಪಡೆದುಕೊಳ್ಳುವಿರಿ. (ವಿಮೋಚನಕಾಂಡ 3:7; ಯೆಶಾಯ 63:9) ಆದರೆ ಅಂತಹ ತಪ್ಪಿತಸ್ಥರನ್ನು ಆತನು ಹೇಗೆ ವೀಕ್ಷಿಸುತ್ತಾನೆ? ಅವರು ಪುನಃ ತನ್ನ ಅನುಗ್ರಹಕ್ಕೆ ಪಾತ್ರರಾಗುವಂತೆ, ಯೆಹೋವನು ಕರುಣೆಯಿಂದ ಅವರನ್ನು ಆಮಂತ್ರಿಸುತ್ತಾನೆ ಎಂದು ಬೈಬಲು ತೋರಿಸುತ್ತದೆ. ಮಲಾಕಿಯನ ದಿನದ ಯೆಹೂದ್ಯರನ್ನು ಆತನು, “ನನ್ನ ಕಡೆಗೆ ಪುನಃ ತಿರುಗಿರಿ; ತಿರುಗಿದರೆ ನಾನು ನಿಮ್ಮ ಕಡೆಗೆ ಪುನಃ ತಿರುಗುವೆನು” ಎಂದು ಬೇಡಿಕೊಂಡನು.—ಮಲಾಕಿಯ 3:7.
2. ಯೆಹೋವನ ವ್ಯಕ್ತಿತ್ವದ ಅತಿ ಪ್ರಾಮುಖ್ಯ ಭಾಗವು ಕರುಣೆಯಾಗಿದೆ ಎಂಬುದನ್ನು ಬೈಬಲು ಹೇಗೆ ತೋರಿಸುತ್ತದೆ?
2 ಮೋಶೆಗೆ ದೇವರ ಕರುಣೆಯು ಸೀನಾಯಿ ಪರ್ವತದ ಮೇಲೆ ಪ್ರಕಟವಾಗಿ ತೋರಿಸಲ್ಪಟ್ಟಿತು. ಅಲ್ಲಿ, ಯೆಹೋವನು ತನ್ನನ್ನು “ಕರುಣೆಯೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳ”ವನಾಗಿ ತೋರ್ಪಡಿಸಿಕೊಂಡನು. (ವಿಮೋಚನಕಾಂಡ 34:6, NW) ಯೆಹೋವನ ವ್ಯಕ್ತಿತ್ವದ ಅತಿ ಪ್ರಾಮುಖ್ಯ ಗುಣವು ಕರುಣೆಯಾಗಿದೆ ಎಂಬುದನ್ನು ಇದು ಒತ್ತಿಹೇಳುತ್ತದೆ. ಆತನು “ಎಲ್ಲರೂ ಪಶ್ಚಾತ್ತಾಪಪಡುವಂತೆ ಅಪೇಕ್ಷಿಸುತ್ತಾನೆ” ಎಂದು ಕ್ರೈಸ್ತ ಅಪೊಸ್ತಲ ಪೌಲನು ಬರೆದನು. (2 ಪೇತ್ರ 3:9, NW) ಆದರೆ ದೇವರ ಕರುಣೆಗೆ ಮಿತಿಯಿದೆ ಎಂಬುದು ನಿಶ್ಚಯ. ಆತನು “ಅಪರಾಧಗಳನ್ನು ಶಿಕ್ಷಿಸದೆ ಬಿಡದವನು” ಎಂದು ಮೋಶೆಗೆ ಹೇಳಲಾಯಿತು. (ವಿಮೋಚನಕಾಂಡ 34:7; 2 ಪೇತ್ರ 2:9) ಆದರೂ, “ದೇವರು ಪ್ರೀತಿಸ್ವರೂಪಿ”ಯಾಗಿದ್ದಾನೆ, ಮತ್ತು ಆ ಗುಣದ ಅತ್ಯಂತ ಪ್ರಾಮುಖ್ಯ ಅಂಶವು ಕರುಣೆಯಾಗಿದೆ. (1 ಯೋಹಾನ 4:8; ಯಾಕೋಬ 3:17) ಯೆಹೋವನು “ನಿತ್ಯವೂ ಕೋಪಿಸುವವನಲ್ಲ,” ಮತ್ತು “ಪ್ರೀತಿಪೂರ್ಣ ದಯೆಯೇ ಆತನಿಗೆ ಇಷ್ಟ”ವಾಗಿದೆ (NW).—ಮೀಕ 7:18, 19.
3. ಕರುಣೆಯ ವಿಷಯದಲ್ಲಿ ಯೇಸುವಿನ ದೃಷ್ಟಿಕೋನಕ್ಕೂ ಫರಿಸಾಯರ ದೃಷ್ಟಿಕೋನಕ್ಕೂ ಯಾವ ಭಿನ್ನತೆಯಿತ್ತು?
3 ಯೇಸು ಸಹ ತನ್ನ ಸ್ವರ್ಗೀಯ ತಂದೆಯಂತೆಯೇ ಕರುಣೆಯನ್ನು ತೋರಿಸಿದನು. (ಯೋಹಾನ 5:19) ಅವನು ತಪ್ಪಿತಸ್ಥರನ್ನು ಉಪಚರಿಸಿದ ರೀತಿಯು, ಅವರ ಪಾಪಗಳನ್ನು ಅಲಕ್ಷಿಸುತ್ತಿದ್ದಾನೆ ಎಂಬುದನ್ನು ಅರ್ಥೈಸಲಿಲ್ಲ, ಬದಲಾಗಿ ಶಾರೀರಿಕವಾಗಿ ಅಸ್ವಸ್ಥರಾದವರ ಕಡೆಗೆ ಅವನು ತೋರಿಸಿದಂತಹ ಅದೇ ಕೋಮಲ ಭಾವನೆಗಳನ್ನು ಇವರಿಗೂ ತೋರಿಸಿದನು. (ಮಾರ್ಕ 1:40, 41ನ್ನು ಹೋಲಿಸಿರಿ.) ಹೌದು, ಯೇಸು ಕರುಣೆಯನ್ನು, ದೇವರ ನಿಯಮಶಾಸ್ತ್ರದ ಅತಿ ಪ್ರಾಮುಖ್ಯವಾದ ಆವಶ್ಯಕತೆಗಳಲ್ಲಿ ಒಂದಾಗಿ ಪರಿಗಣಿಸಿದನು. (ಮತ್ತಾಯ 23:23) ಅದಕ್ಕೆ ಬದಲಾಗಿ, ಶಾಸ್ತ್ರಿಗಳನ್ನೂ ಫರಿಸಾಯರನ್ನೂ ತೆಗೆದುಕೊಳ್ಳಿ. ಅವರು ನ್ಯಾಯವನ್ನು ವಿಧಿಸುತ್ತಿದ್ದಾಗ, ಕರುಣೆಯನ್ನು ತೋರಿಸುತ್ತಿರಲಿಲ್ಲ. ಯೇಸು ಪಾಪಿಗಳೊಂದಿಗೆ ಸಹವಾಸಿಸುತ್ತಿರುವುದನ್ನು ಅವರು ನೋಡಿದಾಗ, “ಇವನು ಪಾಪಿಗಳನ್ನು ಸೇರಿಸಿಕೊಂಡು ಅವರ ಜೊತೆಯಲ್ಲಿ ಊಟಮಾಡುತ್ತಾನೆ” ಎಂದು ಅವರು ಆಪಾದಿಸಿದರು. (ಲೂಕ 15:1, 2) ಯೇಸು ತನ್ನ ನಿಂದಕರಿಗೆ ಮೂರು ದೃಷ್ಟಾಂತಗಳನ್ನು ಕೊಡುವ ಮೂಲಕ ಉತ್ತರ ಕೊಟ್ಟನು. ಅವುಗಳಲ್ಲಿ ಪ್ರತಿಯೊಂದು ದೃಷ್ಟಾಂತವು ದೇವರ ಕರುಣೆಯನ್ನು ಎತ್ತಿತೋರಿಸುತ್ತದೆ.
4. ಯಾವ ಎರಡು ದೃಷ್ಟಾಂತಗಳನ್ನು ಯೇಸು ಹೇಳಿದನು, ಮತ್ತು ಅವುಗಳಲ್ಲಿ ಪ್ರತಿಯೊಂದರ ಅರ್ಥವು ಏನಾಗಿತ್ತು?
4 ಮೊದಲಾಗಿ, ಕಳೆದುಹೋದ ಒಂದು ಕುರಿಯನ್ನು ಹುಡುಕಲಿಕ್ಕಾಗಿ 99 ಕುರಿಗಳನ್ನು ಬಿಟ್ಟುಹೋದ ಮನುಷ್ಯನ ಕುರಿತಾಗಿ ಯೇಸು ಹೇಳಿದನು. ಇದರಿಂದ ಅವನು ಏನನ್ನು ತೋರಿಸುತ್ತಿದ್ದನು? “ದೇವರ ಕಡೆಗೆ ತಿರುಗಿಕೊಳ್ಳುವದಕ್ಕೆ ಅವಶ್ಯವಿಲ್ಲದ ತೊಂಭತ್ತೊಂಭತ್ತು ಮಂದಿ ನೀತಿವಂತರಿಗಿಂತ ದೇವರ ಕಡೆಗೆ ತಿರುಗಿಕೊಳ್ಳುವ ಒಬ್ಬ ಪಾಪಿಯ ವಿಷಯವಾಗಿ ಪರಲೋಕದಲ್ಲಿ ಸಂತೋಷವುಂಟಾಗುವುದು.” ಎರಡನೆಯದಾಗಿ, ಕಳೆದುಹೋದ ಒಂದು ಪಾವಲಿಯನ್ನು ಹುಡುಕಿ, ಅದನ್ನು ಕಂಡುಕೊಂಡಾಗ ಸಂತೋಷಪಟ್ಟ ಒಬ್ಬ ಸ್ತ್ರೀಯ ಕುರಿತು ಯೇಸು ಹೇಳುತ್ತಾನೆ. ಅವನು ಹೇಳಿದ ವಿಷಯದ ಅರ್ಥವೇನಾಗಿತ್ತು? “ಒಬ್ಬ ಪಾಪಿಯು ದೇವರ ಕಡೆಗೆ ತಿರುಗಿಕೊಳ್ಳುವ ವಿಷಯದಲ್ಲಿ ದೇವದೂತರ ಮುಂದೆ ಸಂತೋಷವಾಗುವುದು.” ಯೇಸು ತನ್ನ ಮೂರನೆಯ ದೃಷ್ಟಾಂತವನ್ನು ಒಂದು ಸಾಮ್ಯದ ರೂಪದಲ್ಲಿ ವಿವರಿಸಿದನು.a ಅನೇಕರು ಆ ಸಾಮ್ಯವನ್ನು ಅತ್ಯುತ್ತಮವಾದ ಸಣ್ಣ ಕಥೆ ಎಂದು ಪರಿಗಣಿಸುತ್ತಾರೆ. ಈ ಸಾಮ್ಯವನ್ನು ಅಭ್ಯಾಸಿಸುವುದು, ದೇವರ ಕರುಣೆಯನ್ನು ಗಣ್ಯಮಾಡಲು ಹಾಗೂ ಅನುಕರಿಸಲು ನಮಗೆ ಸಹಾಯ ಮಾಡುವುದು.—ಲೂಕ 15:3-10.
ಒಬ್ಬ ದಂಗೆಕೋರ ಮಗನು ಮನೆ ಬಿಟ್ಟುಹೋಗುತ್ತಾನೆ
5, 6. ಯೇಸುವಿನ ಮೂರನೆಯ ಸಾಮ್ಯದಲ್ಲಿ ಉಲ್ಲೇಖಿಸಲ್ಪಟ್ಟ ಕಿರಿಯ ಮಗನು, ತೀರ ಗಣ್ಯತೆರಹಿತ ಭಾವವನ್ನು ಹೇಗೆ ತೋರಿಸಿದನು?
5 “ಒಬ್ಬಾನೊಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವರಲ್ಲಿ ಕಿರಿಯವನು ತಂದೆಗೆ—ಅಪ್ಪಾ, ಆಸ್ತಿಯಲ್ಲಿ ನನಗೆ ಬರತಕ್ಕ ಪಾಲನ್ನು ಕೊಡು ಎಂದು ಕೇಳಿಕೊಳ್ಳಲು ತಂದೆಯು ಬದುಕನ್ನು ಅವರಿಗೆ ಹಂಚಿಕೊಟ್ಟನು. ಸ್ವಲ್ಪ ದಿವಸದ ಮೇಲೆ ಆ ಕಿರೀಮಗನು ಎಲ್ಲಾ ಕೂಡಿಸಿಕೊಂಡು ದೂರದೇಶಕ್ಕೆ ಹೊರಟುಹೋಗಿ ಅಲ್ಲಿ ಪಟಿಂಗನಾಗಿ ಬದುಕಿ ತನ್ನ ಆಸ್ತಿಯನ್ನೂ ಸೂರೆಮಾಡಿಬಿಟ್ಟನು.”—ಲೂಕ 15:11-13.b
6 ಇಲ್ಲಿ ಕಿರಿಯ ಮಗನು ಗಣ್ಯತೆಯನ್ನು ತೋರಿಸಲೇ ಇಲ್ಲ. ಮೊದಲಾಗಿ ಅವನು ತನ್ನ ಪಾಲಿನ ಆಸ್ತಿಯನ್ನು ಕೊಡುವಂತೆ ತಗಾದೆಮಾಡಿದನು, ತದನಂತರ ಅವನು “ಪಟಿಂಗನಾಗಿ ಬದುಕಿ” ಅದನ್ನು ಹಾಳುಮಾಡಿದನು. ‘ಪಟಿಂಗ ಬದುಕು’ ಎಂಬ ಅಭಿವ್ಯಕ್ತಿಯು, “ಸ್ವೇಚ್ಛಾ ಜೀವನ” ಎಂಬ ಅರ್ಥವನ್ನು ಕೊಡುವ ಗ್ರೀಕ್ ಶಬ್ದದಿಂದ ಭಾಷಾಂತರಿಸಲ್ಪಟ್ಟಿದೆ. ಒಬ್ಬ ವಿದ್ವಾಂಸನು ಹೇಳುವುದೇನೆಂದರೆ, ಆ ಶಬ್ದವು “ಅವನು ಈ ಮುಂಚೆ ಹೇಗಿದ್ದನೋ ಅದಕ್ಕಿಂತ ಈಗ ಸಂಪೂರ್ಣವಾಗಿ ಬದಲಾಗಿದ್ದನು ಎಂಬುದನ್ನು ವ್ಯಕ್ತಪಡಿಸುತ್ತದೆ.” ಸಕಾರಣದಿಂದಲೇ, ಯೇಸುವಿನ ಸಾಮ್ಯದಲ್ಲಿದ್ದ ಯೌವನಸ್ಥನು ಕೆಲವೊಮ್ಮೆ ಪೋಲಿಹೋದವನು ಎಂದು ಕರೆಯಲ್ಪಟ್ಟಿದ್ದಾನೆ. ಈ ಶಬ್ದವು, ಮುಂದಾಲೋಚನೆಯಿಲ್ಲದೆ ದುಂದುವೆಚ್ಚಮಾಡುವ ಹಾಗೂ ಪೋಲುಮಾಡುವ ಒಬ್ಬ ವ್ಯಕ್ತಿಯನ್ನು ವರ್ಣಿಸುತ್ತದೆ.
7. ಇಂದು ಯಾರು ಪೋಲಿಹೋದ ಮಗನಂತಿದ್ದಾರೆ, ಮತ್ತು ಅಂತಹ ಅನೇಕ ವ್ಯಕ್ತಿಗಳು “ದೂರದೇಶ”ದಲ್ಲಿ ಸ್ವತಂತ್ರರಾಗಿರಲು ಏಕೆ ಪ್ರಯತ್ನಿಸುತ್ತಾರೆ?
7 ಪೋಲಿಹೋದ ಮಗನಂತೆಯೇ ಇರುವ ಜನರು ಇಂದೂ ಇದ್ದಾರೋ? ಹೌದು, ತುಂಬ ಕಡಿಮೆ ಜನರು ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನ ಸುರಕ್ಷಿತ “ಮನೆ”ಯನ್ನು ಬಿಟ್ಟುಹೋಗಿದ್ದಾರೆ ಎಂಬುದು ದುಃಖದಾಯಕ ಸಂಗತಿಯಾಗಿದೆ. (1 ತಿಮೊಥೆಯ 3:15) ಯೆಹೋವನ ಮನೆವಾರ್ತೆಯ ಭಾಗವಾಗಿರುವುದು, ಬಹಳ ಕಟ್ಟುನಿಟ್ಟಿನದ್ದಾಗಿದೆ; ಯೆಹೋವನು ನಮ್ಮನ್ನು ಸಂರಕ್ಷಿಸುವ ಬದಲಿಗೆ, ನಾವು ಏನನ್ನು ಮಾಡಲು ಬಯಸುತ್ತೇವೋ ಅದನ್ನು ಮಾಡದಂತೆ ನಮ್ಮನ್ನು ತಡೆಯುತ್ತಾನೆ ಎಂದು ಇವರಲ್ಲಿ ಕೆಲವರು ನೆನಸುತ್ತಾರೆ. (ಕೀರ್ತನೆ 32:8ನ್ನು ಹೋಲಿಸಿರಿ.) ಬೈಬಲ್ ಮೂಲತತ್ವಗಳಿಗೆ ಅನುಸಾರವಾಗಿ ಬೆಳೆಸಲ್ಪಟ್ಟ ಒಬ್ಬ ಕ್ರೈಸ್ತ ಸ್ತ್ರೀಯನ್ನು ಪರಿಗಣಿಸಿರಿ. ಕಾಲಕ್ರಮೇಣ ಅವಳು ಮದ್ಯಪಾನದ ದುರುಪಯೋಗ ಹಾಗೂ ಅಮಲೌಷಧಗಳನ್ನು ಸೇವಿಸತೊಡಗಿದಳು. ತನ್ನ ಜೀವಿತದ ಕರಾಳ ದಿನಗಳನ್ನು ಪುನಃ ಜ್ಞಾಪಿಸಿಕೊಳ್ಳುತ್ತಾ ಅವಳು ಹೇಳುವುದು: “ನನ್ನ ಜೀವಿತವನ್ನು ನಾನು ಯಶಸ್ವಿಕರವಾಗಿ ನಡೆಸಬಲ್ಲಿ ಎಂಬುದನ್ನು ನಾನು ರುಜುಪಡಿಸಲು ಬಯಸಿದೆ. ನನ್ನ ಮನಸ್ಸಿಗೆ ಬಂದ ಹಾಗೆ ಮಾಡಲು ನಾನು ಬಯಸಿದೆ, ಬೇರೆ ಯಾರೂ ನನಗೆ ಏನನ್ನೂ ಹೇಳಬಾರದೆಂಬುದು ನನ್ನ ಅಪೇಕ್ಷೆಯಾಗಿತ್ತು.” ಪೋಲಿಹೋದ ಮಗನಂತೆ, ಈ ಯುವತಿಯು ಸ್ವತಂತ್ರ ವರ್ತನೆಯನ್ನು ಆಯ್ದುಕೊಂಡಳು. ವಿಷಾದಕರವಾಗಿ, ಅವಳ ಅಶಾಸ್ತ್ರೀಯ ಹವ್ಯಾಸಗಳ ಫಲಿತಾಂಶವಾಗಿ, ಅವಳನ್ನು ಕ್ರೈಸ್ತ ಸಭೆಯಿಂದ ಬಹಿಷ್ಕರಿಸಬೇಕಾಯಿತು.—1 ಕೊರಿಂಥ 5:11-13.
8. (ಎ) ದೇವರ ಮಟ್ಟಗಳಿಗೆ ವಿರುದ್ಧವಾಗಿ ಜೀವಿಸುವ ಅಪೇಕ್ಷೆಯನ್ನು ತೋರಿಸುವವರಿಗೆ ಯಾವ ಸಹಾಯವನ್ನು ಕೊಡಸಾಧ್ಯವಿದೆ? (ಬಿ) ನಮ್ಮ ಆರಾಧನಾ ಆಯ್ಕೆಯನ್ನು ನಾವು ಏಕೆ ಗಂಭೀರವಾಗಿ ಪರಿಗಣಿಸಬೇಕು?
8 ಒಬ್ಬ ಜೊತೆ ವಿಶ್ವಾಸಿಯು, ದೇವರ ಮಟ್ಟಗಳಿಗೆ ವಿರುದ್ಧವಾಗಿ ಜೀವಿಸುವ ಅಪೇಕ್ಷೆಯನ್ನು ತೋರಿಸುವಾಗ, ಅದು ನಿಜವಾಗಿಯೂ ದುಃಖಕರವಾದದ್ದಾಗಿದೆ. (ಫಿಲಿಪ್ಪಿ 3:18) ಹೀಗೆ ಆಗುವಾಗ, ಹಿರಿಯರು ಹಾಗೂ ಆತ್ಮಿಕ ಅರ್ಹತೆಗಳಿರುವ ಇನ್ನಿತರರು, ತಪ್ಪುಮಾಡುತ್ತಿರುವ ಆ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸುವರು. (ಗಲಾತ್ಯ 6:1) ಆದರೂ, ಕ್ರೈಸ್ತ ಶಿಷ್ಯನಾಗುವಂತೆ ಯಾರನ್ನೂ ಬಲವಂತಮಾಡಲಾಗುವುದಿಲ್ಲ. (ಮತ್ತಾಯ 11:28-30; 16:24) ಯುವಕರು ಸಹ ಸಾಕಷ್ಟು ದೊಡ್ಡವರಾದಾಗ, ಆರಾಧನೆಯ ವಿಷಯದಲ್ಲಿ ತಮ್ಮ ಸ್ವಂತ ಆಯ್ಕೆಯನ್ನು ಮಾಡಬೇಕು. ಕಟ್ಟಕಡೆಗೆ, ನಮ್ಮಲ್ಲಿ ಪ್ರತಿಯೊಬ್ಬರೂ ಸ್ವನಿರ್ಣಯ ಮಾಡಶಕ್ತರಾಗುತ್ತೇವೆ, ಮತ್ತು ನಮ್ಮ ವಿಷಯದಲ್ಲಿ ನಾವೇ ದೇವರ ಮುಂದೆ ಲೆಕ್ಕವನ್ನು ಒಪ್ಪಿಸುವವರಾಗುತ್ತೇವೆ. (ರೋಮಾಪುರ 14:12) ‘ನಾವು ಏನನ್ನು ಬಿತ್ತುವೆವೋ ಅದನ್ನೇ ಕೊಯ್ಯುವೆವು’ ಎಂಬುದು ಖಂಡಿತ. ಇದು ಯೇಸುವಿನ ಸಾಮ್ಯದಲ್ಲಿದ್ದ ಪೋಲಿಹೋದ ಮಗನು ಸ್ವಲ್ಪದರಲ್ಲೇ ಕಲಿಯಲಿಕ್ಕಿದ್ದ ಒಂದು ಪಾಠವಾಗಿತ್ತು.—ಗಲಾತ್ಯ 6:7, 8.
ದೂರದ ದೇಶದಲ್ಲಿ ಹತಾಶೆ
9, 10. (ಎ) ಪೋಲಿಹೋದ ಮಗನಿಗೆ ಯಾವ ಅನುಭವವಾಯಿತು, ಮತ್ತು ಅವನು ಅದಕ್ಕೆ ಹೇಗೆ ಪ್ರತಿಕ್ರಿಯಿಸಿದನು? (ಬಿ) ಇಂದು ಸತ್ಯಾರಾಧನೆಯನ್ನು ಬಿಟ್ಟುಹೋಗುವ ಕೆಲವರು, ಪೋಲಿಹೋದ ಮಗನಿಗೆ ಉಂಟಾದ ಅವಸ್ಥೆಯನ್ನೇ ಹೇಗೆ ಅನುಭವಿಸುತ್ತಾರೆ ಎಂಬುದನ್ನು ದೃಷ್ಟಾಂತಿಸಿರಿ.
9 “ಅವನು ಎಲ್ಲಾ ಹಾಳುಮಾಡಿಕೊಂಡ ಮೇಲೆ ಆ ದೇಶದಲ್ಲೆಲ್ಲಾ ಘೋರವಾದ ಬರ ಬಂದು ಏನೂ ಗತಿಯಿಲ್ಲದವನಾದನು. ಆಗ ಅವನು ಹೋಗಿ ಆ ದೇಶದ ನಿವಾಸಿಗಳೊಳಗೆ ಒಬ್ಬನಲ್ಲಿ ಸೇರಿಕೊಂಡನು; ಆ ಮನುಷ್ಯನು ಹಂದಿಗಳನ್ನು ಮೇಯಿಸುವದಕ್ಕೆ ಅವನನ್ನು ತನ್ನ ಹೊಲಗಳಿಗೆ ಕಳುಹಿಸಿದನು. ಹೀಗಿರಲಾಗಿ ಅವನು ಹಂದಿ ತಿನ್ನುತ್ತಿದ್ದ ಕಾಯಿಗಳನ್ನಾದರೂ ತಿಂದು ಹಸಿವನ್ನು ತೀರಿಸಿಕೊಳ್ಳಬೇಕೆಂದು ಆಶೆಪಟ್ಟನು; ಆದರೂ ಯಾರೂ ಅವನಿಗೆ ಕೊಡಲಿಲ್ಲ.”—ಲೂಕ. 15:14-16.
10 ಅವನು ನಿರ್ಗತಿಕನಾಗಿದ್ದನಾದರೂ, ಮನೆಗೆ ಹಿಂದಿರುಗುವ ಮನಸ್ಸು ಮಾಡಲಿಲ್ಲ. ಬದಲಾಗಿ, ಅವನು ಒಬ್ಬ ಸ್ಥಳಿಕ ವ್ಯಕ್ತಿಯ ಬಳಿಗೆ ಹೋದನು. ಆ ವ್ಯಕ್ತಿಯು ಅವನಿಗೆ ಹಂದಿಗಳನ್ನು ಮೇಯಿಸುವ ಕೆಲಸವನ್ನು ಕೊಟ್ಟನು. ಹಂದಿಗಳು ಅಶುದ್ಧ ಪ್ರಾಣಿಗಳು ಎಂದು ಮೋಶೆಯ ಧರ್ಮಶಾಸ್ತ್ರವು ಹೇಳಿತ್ತಾದ್ದರಿಂದ, ಅಂತಹ ಒಂದು ಕೆಲಸವು ಒಬ್ಬ ಯೆಹೂದ್ಯನಿಗೆ ಅನಪೇಕ್ಷಿತವಾಗಿತ್ತು. (ಯಾಜಕಕಾಂಡ 11:7, 8) ಆದರೆ ಈ ಕೆಲಸದ ಬಗ್ಗೆ ಅವನ ಮನಸ್ಸಾಕ್ಷಿಯು ಅವನಿಗೆ ಕಿರಿಕಿರಿಯನ್ನು ಉಂಟುಮಾಡಿದ್ದಲ್ಲಿ, ಅವನು ಆ ಅನಿಸಿಕೆಗಳನ್ನು ನಿಗ್ರಹಿಸಬೇಕಿತ್ತು. ಏನೇ ಆಗಲಿ, ಆ ದೇಶದ ನಿವಾಸಿಯಾಗಿದ್ದ ಅವನ ಧಣಿಯು, ಈ ವಿದೇಶಿ ನಿರ್ಗತಿಕನ ಭಾವನೆಗಳ ವಿಷಯದಲ್ಲಿ ಚಿಂತೆ ತೋರಿಸುವ ಸಾಧ್ಯತೆ ಇರಲಿಲ್ಲ. ಆ ಪೋಲಿಹೋದ ಮಗನ ಅವಸ್ಥೆಯು, ಇಂದು ಶುದ್ಧಾರಾಧನೆಯನ್ನು ಬಿಟ್ಟುಹೋಗುವ ಅನೇಕರ ಅನುಭವಕ್ಕೆ ಸಮಾನವಾಗಿದೆ. ಅನೇಕವೇಳೆ ಅಂತಹ ಜನರು, ಹೀನಾಯವೆಂದು ತಾವು ಈ ಮುಂಚೆ ಪರಿಗಣಿಸುತ್ತಿದ್ದ ಕೆಲಸಗಳಲ್ಲೇ ಈಗ ಒಳಗೂಡುತ್ತಾರೆ. ಉದಾಹರಣೆಗಾಗಿ, ಕ್ರೈಸ್ತನೋಪಾದಿ ಬೆಳೆಸಲ್ಪಟ್ಟಿದ್ದ ಒಬ್ಬ ಯೌವನಸ್ಥನು, 17ನೆಯ ವರ್ಷ ಪ್ರಾಯದಲ್ಲಿ ಸತ್ಯವನ್ನು ಬಿಟ್ಟುಹೋದನು. “ಅನೈತಿಕತೆ ಹಾಗೂ ಅಮಲೌಷಧದ ದುರುಪಯೋಗವು, ಅನೇಕ ವರ್ಷಗಳ ಬೈಬಲ್ ಆಧಾರಿತ ಬೋಧನೆಗಳನ್ನು ಅಳಿಸಿಹಾಕಿತು” ಎಂದು ಅವನು ಒಪ್ಪಿಕೊಳ್ಳುತ್ತಾನೆ. ಸ್ವಲ್ಪ ಸಮಯದಲ್ಲೇ, ಶಸ್ತ್ರಸಜ್ಜಿತ ದರೋಡೆ ಹಾಗೂ ಕೊಲೆಯ ಕಾರಣದಿಂದ ಈ ಯೌವನಸ್ಥನು ಸೆರೆಮನೆಗೆ ಹಾಕಲ್ಪಟ್ಟನು. ತದನಂತರ ಅವನು ಸತ್ಯಕ್ಕೆ ಹಿಂದಿರುಗಿ ಬಂದನಾದರೂ, “ಸ್ವಲ್ಪಕಾಲ ಪಾಪಭೋಗಗಳನ್ನನುಭವಿಸಿದ್ದ”ಕ್ಕಾಗಿ ಎಂತಹ ಕಟುಶಿಕ್ಷೆಯನ್ನು ಅವನು ಅನುಭವಿಸಬೇಕಾಯಿತು!—ಇಬ್ರಿಯ 11:24-26ನ್ನು ಹೋಲಿಸಿರಿ.
11. ಪೋಲಿಹೋದ ಮಗನ ಸನ್ನಿವೇಶವು ಹೇಗೆ ಇನ್ನೂ ಹೆಚ್ಚು ಕೆಟ್ಟದ್ದಾಗಿ ಪರಿಣಮಿಸಿತು, ಮತ್ತು ಇಂದು ಕೆಲವರು ಲೋಕದ ಆಕರ್ಷಣೆಗಳು “ಮೋಸವಾದ ನಿರರ್ಥಕ” ವಿಷಯಗಳಿಗೆ ಸಮಾನವಾಗಿವೆ ಎಂಬುದನ್ನು ಹೇಗೆ ಕಂಡುಕೊಂಡಿದ್ದಾರೆ?
11 ‘ಯಾರೂ ಅವನಿಗೆ ಏನನ್ನೂ ಕೊಡಲಿಲ್ಲ’ ಎಂಬ ವಾಸ್ತವಾಂಶದಿಂದ, ಆ ಪೋಲಿಹೋದ ಮಗನ ಪರಿಸ್ಥಿತಿಯು ಇನ್ನೂ ಹೆಚ್ಚು ಕೆಟ್ಟದ್ದಾಗಿ ಪರಿಣಮಿಸಿತು. ಅವನ ಹೊಸ ಸ್ನೇಹಿತರು ಎಲ್ಲಿದ್ದರು? ಈಗ ಅವನಲ್ಲಿ ಬಿಡಿಗಾಸೂ ಇರಲಿಲ್ಲವಾದ್ದರಿಂದ, ಅವನು ಆ ಸ್ನೇಹಿತರ “ದ್ವೇಷಕ್ಕೆ ಪಾತ್ರ”ನಾಗಿದ್ದನು. (ಜ್ಞಾನೋಕ್ತಿ 14:20, NW) ತದ್ರೀತಿಯಲ್ಲಿ, ಇಂದು ಸತ್ಯವನ್ನು ಬಿಟ್ಟುಹೋಗಿರುವ ಅನೇಕರು, ಈ ಲೋಕದ ಆಕರ್ಷಣೆಗಳು ಹಾಗೂ ದೃಷ್ಟಿಕೋನಗಳು “ಮೋಸವಾದ ನಿರರ್ಥಕ” ವಿಷಯಗಳಿಗೆ ಸಮಾನವಾಗಿವೆ ಎಂಬುದನ್ನು ಕಂಡುಕೊಂಡಿದ್ದಾರೆ. (ಕೊಲೊಸ್ಸೆ 2:8) ಸ್ವಲ್ಪ ಕಾಲದ ವರೆಗೆ ದೇವರ ಸಂಸ್ಥೆಯನ್ನು ಬಿಟ್ಟುಹೋಗಿದ್ದ ಒಬ್ಬ ಯುವತಿಯು, “ಯೆಹೋವನ ಮಾರ್ಗದರ್ಶನವಿಲ್ಲದೆ ನಾನು ಹೆಚ್ಚು ವೇದನೆಯನ್ನು ಹಾಗೂ ಮನೋವ್ಯಥೆಯನ್ನು ಅನುಭವಿಸಿದೆ” ಎಂದು ಹೇಳುತ್ತಾಳೆ. “ನಾನು ಲೋಕದ ಭಾಗವಾಗಿರಲು ಪ್ರಯತ್ನಿಸಿದೆ, ಆದರೆ ನಾನು ಸಂಪೂರ್ಣವಾಗಿ ಇತರರಂತೆ ಇರಲಿಲ್ಲವಾದ ಕಾರಣ, ಅವರು ನನ್ನನ್ನು ತ್ಯಜಿಸಿದರು. ದಾರಿತಪ್ಪಿದ್ದ ಕಾರಣ, ಒಬ್ಬ ತಂದೆಯ ಮಾರ್ಗದರ್ಶನದ ಅಗತ್ಯವಿರುವ ಒಂದು ಮಗುವಿನ ಅನಿಸಿಕೆ ನನಗಾಯಿತು. ಆಗಲೇ ಯೆಹೋವನ ಅಗತ್ಯ ನನಗಿದೆ ಎಂಬ ಅರಿವಾಯಿತು. ಇನ್ನೆಂದಿಗೂ ನಾನು ಆತನಿಂದ ಸ್ವತಂತ್ರವಾಗಿ ಜೀವಿಸಲು ಬಯಸಲಿಲ್ಲ.” ತದ್ರೀತಿಯಲ್ಲಿ, ಯೇಸುವಿನ ದೃಷ್ಟಾಂತದಲ್ಲಿನ ಪೋಲಿಹೋದ ಮಗನಿಗೆ ತಿಳುವಳಿಕೆ ಬಂತು.
ಪೋಲಿಹೋದ ಮಗನಿಗೆ ಬುದ್ಧಿಬರುತ್ತದೆ
12, 13. ತಾವು ಮಾಡುತ್ತಿದ್ದದ್ದು ತಪ್ಪು ಎಂಬುದನ್ನು ಅರ್ಥಮಾಡಿಕೊಳ್ಳಲು ಇಂದು ಕೆಲವರಿಗೆ ಯಾವ ವಿಷಯಗಳು ಸಹಾಯ ಮಾಡಿವೆ? (ರೇಖಾಚೌಕವನ್ನು ನೋಡಿರಿ.)
12 “ಆಗ ಅವನಿಗೆ ಬುದ್ಧಿಬಂದು ಅವನು—ನನ್ನ ತಂದೆಯ ಬಳಿಯಲ್ಲಿ ಎಷ್ಟೋ ಮಂದಿ ಕೂಲಿಯಾಳುಗಳಿಗೆ ಬೇಕಾದಷ್ಟು ಆಹಾರವದೆ; ನಾನಾದರೋ ಇಲ್ಲಿ ಹಸಿವಿನಿಂದ ಸಾಯುತ್ತೇನೆ. ನಾನು ಎದ್ದು ನನ್ನ ತಂದೆಯ ಬಳಿಗೆ ಹೋಗಿ ಅವನಿಗೆ—ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪ ಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ; ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು ಎಂದು ಹೇಳುವೆನು ಅಂದುಕೊಂಡು ಎದ್ದು ತನ್ನ ತಂದೆಯ ಕಡೆಗೆ ಬಂದನು.”—ಲೂಕ 15:17-19.
13 ಆ ಪೋಲಿಹೋದ ಮಗನಿಗೆ ‘ಬುದ್ಧಿಬಂತು.’ ಸ್ವಲ್ಪ ಸಮಯದ ವರೆಗೆ, ಆ ಪೋಲಿಹೋದ ಮಗನು ಕನಸಿನ ಲೋಕದಲ್ಲಿ ವಿಹರಿಸುತ್ತಾ, ಸುಖಭೋಗಗಳನ್ನು ಅನುಭವಿಸುತ್ತಾ ಇದ್ದನು. ಆದರೆ ಈಗ ಅವನಿಗೆ ತನ್ನ ನಿಜವಾದ ಆತ್ಮಿಕ ಸ್ಥಿತಿಯ ಅರಿವಾಯಿತು. ಅವನು ಈ ಹಿಂದೆ ಪಾಪ ಮಾಡಿದ್ದನಾದರೂ, ಈ ಯೌವನಸ್ಥನಿಗೆ ಇನ್ನೂ ನಿರೀಕ್ಷೆಯಿತ್ತು. ಅವನಲ್ಲಿ ಕೆಲವು ಒಳ್ಳೆಯ ಗುಣಗಳು ಇದ್ದಿರಸಾಧ್ಯವಿದೆ. (ಜ್ಞಾನೋಕ್ತಿ 24:16; 2 ಪೂರ್ವಕಾಲವೃತ್ತಾಂತ 19:2, 3ನ್ನು ಹೋಲಿಸಿರಿ.) ಇಂದು ದೇವರ ಆರಾಧನೆಯನ್ನು ಬಿಟ್ಟುಹೋಗುವವರ ಕುರಿತಾಗಿ ಏನು? ಅವರಿಗೆ ಯಾವ ನಿರೀಕ್ಷೆಯೂ ಇಲ್ಲ, ಏಕೆಂದರೆ ತಮ್ಮ ದಂಗೆಕೋರ ಜೀವನಮಾರ್ಗದಲ್ಲಿ ಅವರು ಏನು ಮಾಡಿದ್ದಾರೋ ಅದು, ಅವರು ದೇವರ ಪವಿತ್ರಾತ್ಮದ ವಿರುದ್ಧವಾಗಿ ಪಾಪಮಾಡಿದ್ದಾರೆ ಎಂಬುದನ್ನು ರುಜುಪಡಿಸುತ್ತದೆ ಎಂದು ತೀರ್ಮಾನಿಸುವುದು ನ್ಯಾಯಸಮ್ಮತವಾಗಿದೆಯೊ? (ಮತ್ತಾಯ 12:31, 32) ಯಾವಾಗಲೂ ಅಲ್ಲ. ಅವರಲ್ಲಿ ಕೆಲವರು ತಮ್ಮ ಪಾಪಭರಿತ ಜೀವನ ರೀತಿಯ ವಿಷಯದಲ್ಲಿ ತಪ್ಪಿತಸ್ಥ ಮನೋಭಾವವನ್ನು ತೋರಿಸುತ್ತಾರೆ, ಮತ್ತು ಸಕಾಲದಲ್ಲಿ ಇವರಲ್ಲಿ ಅನೇಕರಿಗೆ ತಾವು ಮಾಡಿದ್ದು ತಪ್ಪು ಎಂಬ ತಿಳುವಳಿಕೆ ಬರುತ್ತದೆ. ದೇವರ ಸಂಸ್ಥೆಯಿಂದ ಹೊರಹೋಗಿ ಕಳೆದ ಸಮಯವನ್ನು ಪುನಃ ಜ್ಞಾಪಿಸಿಕೊಳ್ಳುತ್ತಾ, “ನಾನು ಯಾವಾಗಲೂ ಯೆಹೋವನನ್ನು ಜ್ಞಾಪಿಸಿಕೊಳ್ಳುತ್ತಿದ್ದೆ” ಎಂದು ಒಬ್ಬ ಸಹೋದರಿಯು ಹೇಳುತ್ತಾಳೆ. “ಹೇಗಾದರೂ ಒಂದಲ್ಲ ಒಂದು ದಿನ ಯೆಹೋವನು ನನ್ನನ್ನು ಸತ್ಯಕ್ಕೆ ಹಿಂದಿರುಗುವಂತೆ ಮಾಡಲಿ ಎಂದು ನಾನು ಯಾವಾಗಲೂ ಪ್ರಾರ್ಥಿಸುತ್ತಿದ್ದೆ.”—ಕೀರ್ತನೆ 119:176.
14. ಪೋಲಿಹೋದ ಮಗನು ಯಾವ ನಿರ್ಧಾರವನ್ನು ಮಾಡಿದನು, ಮತ್ತು ಹಾಗೆ ಮಾಡುವುದರಲ್ಲಿ ಅವನು ದೀನಭಾವವನ್ನು ಹೇಗೆ ತೋರಿಸಿದನು?
14 ಆದರೆ ಸತ್ಯವನ್ನು ಬಿಟ್ಟುಹೋಗಿರುವವರು ತಮ್ಮ ಸನ್ನಿವೇಶದ ಕುರಿತು ಏನು ಮಾಡಸಾಧ್ಯವಿದೆ? ಯೇಸುವಿನ ಸಾಮ್ಯದಲ್ಲಿನ ಪೋಲಿಹೋದ ಮಗನು, ಮನೆಗೆ ಹಿಂದಿರುಗಿ, ತನ್ನ ತಂದೆಯ ಕ್ಷಮಾಪಣೆಯನ್ನು ಕೇಳಲು ನಿರ್ಧರಿಸಿದನು. ಆ ಪೋಲಿಹೋದ ಮಗನು, “ನನ್ನನ್ನು ನಿನ್ನ ಕೂಲಿಯಾಳುಗಳಲ್ಲಿ ಒಬ್ಬನಂತೆ ಮಾಡು” ಎಂದು ತನ್ನ ತಂದೆಗೆ ಹೇಳಲು ನಿಶ್ಚಯಿಸಿದನು. ಒಬ್ಬ ಕೂಲಿಯಾಳನ್ನು ಪ್ರತಿ ದಿನದ ಕೂಲಿಯ ಆಧಾರದ ಮೇಲೆ ಕೆಲಸಕ್ಕೆ ಇಟ್ಟುಕೊಳ್ಳಲಾಗುತ್ತಿತ್ತು; ಮತ್ತು ಬೇಡವೆನಿಸಿದಾಗ ಅದೇ ದಿನ ಅವನನ್ನು ಕೆಲಸದಿಂದ ತೆಗೆದುಹಾಕಸಾಧ್ಯವಿತ್ತು. ಒಂದರ್ಥದಲ್ಲಿ, ಕುಟುಂಬದ ಸದಸ್ಯನೋಪಾದಿ ಇರಿಸಿಕೊಳ್ಳಲ್ಪಡುತ್ತಿದ್ದ ಒಬ್ಬ ದಾಸನಿಗಿಂತಲೂ ಇದು ಹೀನವಾದ ಸ್ಥಾನವಾಗಿತ್ತು. ಆದುದರಿಂದ ಈ ಪೋಲಿಹೋದ ಮಗನು, ತಾನು ಪುನಃ ಒಬ್ಬ ಮಗನೋಪಾದಿ ತಂದೆಯಿಂದ ಸ್ವೀಕರಿಸಲ್ಪಡಬೇಕೆಂದು ಬಯಸಲಿಲ್ಲ. ತಾನು ಮಾಡಿರುವ ಕೃತ್ಯಕ್ಕಾಗಿ ನಿಜವಾಗಿಯೂ ಪಶ್ಚಾತ್ತಾಪ ಪಡುತ್ತೇನೆ ಎಂಬುದನ್ನು ದಿನಾಲೂ ರುಜುಪಡಿಸಲಿಕ್ಕಾಗಿ, ಅವನು ತೀರ ಹೀನವಾದ ಸ್ಥಾನವನ್ನು ಸ್ವೀಕರಿಸಲೂ ಸಿದ್ಧನಿದ್ದನು. ಆದರೂ, ಆ ಪೋಲಿಹೋದ ಮಗನಿಗಾಗಿ ಒಂದು ಆಶ್ಚರ್ಯವು ಕಾದಿತ್ತು.
ಹೃತ್ಪೂರ್ವಕವಾದ ಒಂದು ಸ್ವಾಗತ
15-17. (ಎ) ತನ್ನ ಮಗನನ್ನು ನೋಡಿದ ಕೂಡಲೆ ತಂದೆಯು ಏನು ಮಾಡಿದನು? (ಬಿ) ಆ ತಂದೆಯು ತನ್ನ ಮಗನಿಗೆ ಒದಗಿಸಿದ ನಿಲುವಂಗಿ, ಉಂಗುರ, ಹಾಗೂ ಜೋಡುಗಳು ಏನನ್ನು ಸೂಚಿಸುತ್ತವೆ? (ಸಿ) ತಂದೆಯು ಒಂದು ಹಬ್ಬವನ್ನು ಏರ್ಪಡಿಸಿದ್ದು ಏನನ್ನು ತೋರಿಸುತ್ತದೆ?
15 “ಅವನು ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು ಕಂಡು ಕನಿಕರಪಟ್ಟು ಓಡಿಬಂದು ಅವನ ಕೊರಳನ್ನು ಅಪ್ಪಿಕೊಂಡು ಅವನಿಗೆ ಬಹಳವಾಗಿ ಮುದ್ದಿಟ್ಟನು. ಆದರೂ ಮಗನು ಅವನಿಗೆ—ಅಪ್ಪಾ, ಪರಲೋಕಕ್ಕೆ ವಿರೋಧವಾಗಿಯೂ ನಿನ್ನ ಮುಂದೆಯೂ ಪಾಪಮಾಡಿದ್ದೇನೆ; ಇನ್ನು ನಾನು ನಿನ್ನ ಮಗನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ ಎಂದು ಹೇಳಲು ತಂದೆಯು ತನ್ನ ಆಳುಗಳಿಗೆ—ಶ್ರೇಷ್ಠವಾದ ನಿಲುವಂಗಿಯನ್ನು ತಟ್ಟನೆ ತಂದು ಇವನಿಗೆ ತೊಡಿಸಿರಿ; ಇವನ ಕೈಗೆ ಉಂಗುರವನ್ನು ಇಡಿರಿ; ಕಾಲಿಗೆ ಜೋಡು ಮೆಡಿಸಿರಿ; ಕೊಬ್ಬಿಸಿದ ಆ ಕರುವನ್ನು ತಂದು ಕೊಯ್ಯಿರಿ; ಹಬ್ಬಮಾಡೋಣ, ಉಲ್ಲಾಸಪಡೋಣ. ಈ ನನ್ನ ಮಗನು ಸತ್ತವನಾಗಿದ್ದನು, ತಿರಿಗಿ ಬದುಕಿ ಬಂದನು; ಪೋಲಿಹೋಗಿದ್ದನು, ಸಿಕ್ಕಿದನು ಎಂದು ಹೇಳಿದನು. ಆಗ ಅವರು ಉಲ್ಲಾಸಪಡುವದಕ್ಕೆ ತೊಡಗಿದರು.”—ಲೂಕ 15:20-24.
16 ಪ್ರೀತಿಯುಳ್ಳ ಹೆತ್ತವರು ತಮ್ಮ ಮಕ್ಕಳ ಆತ್ಮಿಕ ಚೇತರಿಸಿಕೊಳ್ಳುವಿಕೆಗಾಗಿ ಹಾತೊರೆಯುತ್ತಾರೆ. ಆದುದರಿಂದ, ಪೋಲಿಹೋದ ಮಗನ ತಂದೆಯು, ತನ್ನ ಮಗನು ಬಂದೇ ಬರುತ್ತಾನೆಂದು ಕಾತುರದಿಂದ ನಿರೀಕ್ಷಿಸುತ್ತಾ, ಮನೆಯ ಮುಂದಿನ ದಾರಿಯನ್ನೇ ನೋಡುತ್ತಾ ಇರುವುದನ್ನು ಸ್ವಲ್ಪ ಕಲ್ಪಿಸಿಕೊಳ್ಳಿರಿ. ಆ ದಾರಿಯಲ್ಲಿ ಮಗನು ಬರುತ್ತಾ ಇರುವುದು ಅವನ ದೃಷ್ಟಿಗೆ ಬೀಳುತ್ತದೆ! ಆ ಹುಡುಗನ ಹೊರತೋರಿಕೆಯು ತುಂಬ ಬದಲಾಗಿರುತ್ತದೆ. ಆದರೂ, ಅವನು “ಇನ್ನೂ ದೂರದಲ್ಲಿರುವಾಗ ಅವನ ತಂದೆಯು ಅವನನ್ನು” ಗುರುತಿಸುತ್ತಾನೆ. ಮಗನ ಹರಿದ ಬಟ್ಟೆಯನ್ನು ಹಾಗೂ ಅವನ ಹತಾಶ ಸ್ಥಿತಿಯನ್ನು ಗಮನಿಸದೆ, ಅವನು ತನ್ನ ಮಗನನ್ನು ನೋಡುತ್ತಾನೆ, ಮತ್ತು ಅವನ ಬಳಿಗೆ ಓಡುತ್ತಾನೆ!
17 ತಂದೆಯು ಮಗನನ್ನು ಸಮೀಪಿಸಿ, ಅವನು ತನ್ನ ಮಗನನ್ನು ತಬ್ಬಿಕೊಂಡು ಮುತ್ತಿಡುತ್ತಾನೆ. ಬಳಿಕ ಅವನು ತನ್ನ ಸೇವಕರನ್ನು ಕರೆದು, ತನ್ನ ಮಗನಿಗೆ ಒಂದು ಶ್ರೇಷ್ಠವಾದ ನಿಲುವಂಗಿಯನ್ನು, ಉಂಗುರವನ್ನು, ಹಾಗೂ ಜೋಡನ್ನು ಕೊಡುವಂತೆ ಆಜ್ಞಾಪಿಸುತ್ತಾನೆ. ಈ ನಿಲುವಂಗಿಯು ಒಂದು ಸರಳವಾದ ಬಟ್ಟೆಯ ನಿಲುವಂಗಿಯಾಗಿರಲಿಲ್ಲ, ಬದಲಾಗಿ “ಶ್ರೇಷ್ಠ”ವಾದ, ಗೌರವಾನಿತ್ವ ಅತಿಥಿಗಳಿಗೆ ಉಡುಗೊರೆಯಾಗಿ ಕೊಡಲ್ಪಡುತ್ತಿದ್ದಂತಹ ರೀತಿಯ ಅತ್ಯಂತ ದುಬಾರಿಯಾದ ಉಡುಪು ಅದಾಗಿದ್ದಿರಬಹುದು. ಸಾಮಾನ್ಯವಾಗಿ ಸೇವಕರು ಉಂಗುರ ಹಾಗೂ ಜೋಡುಗಳನ್ನು ಹಾಕುತ್ತಿರಲಿಲ್ಲವಾದುದರಿಂದ, ಅವನು ಒಬ್ಬ ಕುಟುಂಬ ಸದಸ್ಯನೋಪಾದಿ ಮನೆಗೆ ಪುನಃ ಸ್ವಾಗತಿಸಲ್ಪಡುತ್ತಿದ್ದಾನೆ ಎಂಬುದನ್ನು ತಂದೆಯು ಇಲ್ಲಿ ಸ್ಪಷ್ಟಪಡಿಸುತ್ತಿದ್ದನು. ಆದರೆ ತಂದೆಯು ಇನ್ನೂ ಹೆಚ್ಚಿನದ್ದನ್ನು ಮಾಡಿದನು. ತನ್ನ ಮಗನ ಹಿಂದಿರುಗುವಿಕೆಯನ್ನು ಆಚರಿಸಲಿಕ್ಕಾಗಿ ಅವನು ಒಂದು ಹಬ್ಬವನ್ನು ನಡೆಸಿದನು. ಈ ಮನುಷ್ಯನು ತನ್ನ ಮಗನನ್ನು ಅಸಮಾಧಾನದಿಂದಾಗಲಿ ಅಥವಾ ಅದು ತನ್ನ ಹಂಗು ಎಂಬ ಕಾರಣದಿಂದಾಗಲಿ ಕ್ಷಮಾಪಣೆಯನ್ನು ನೀಡುತ್ತಿರಲಿಲ್ಲ; ಅವನು ಕ್ಷಮಾಪಣೆಯನ್ನು ನೀಡಲು ಇಷ್ಟಪಟ್ಟನು. ಇದು ಅವನಿಗೆ ಸಂತೋಷವನ್ನು ತಂದಿತು.
18, 19. (ಎ) ಪೋಲಿಹೋದ ಮಗನ ಕುರಿತಾದ ಸಾಮ್ಯವು ನಮಗೆ ಯೆಹೋವನ ಕುರಿತು ಏನನ್ನು ಕಲಿಸುತ್ತದೆ? (ಬಿ) ಯೆಹೂದ ಹಾಗೂ ಯೆರೂಸಲೇಮ್ನೊಂದಿಗಿನ ಯೆಹೋವನ ವ್ಯವಹಾರಗಳಿಂದ ತೋರಿಸಲ್ಪಟ್ಟಿರುವಂತೆ, ಆತನು ಪಾಪಿಗಳ ಹಿಂದಿರುಗುವಿಕೆಗಾಗಿ ಹೇಗೆ ‘ಕಾದಿರುತ್ತಾನೆ?’
18 ಇಷ್ಟರ ತನಕ, ನಾವು ಯಾರನ್ನು ಆರಾಧಿಸುವ ಸುಯೋಗವನ್ನು ಪಡೆದಿದ್ದೇವೋ ಆ ದೇವರ ಕುರಿತು, ಪೋಲಿಹೋದ ಮಗನ ಸಾಮ್ಯವು ನಮಗೆ ಏನನ್ನು ಕಲಿಸುತ್ತದೆ? ಮೊದಲನೆಯದಾಗಿ, ಯೆಹೋವನು “ಕರುಣೆಯೂ ದಯೆಯೂ ಉಳ್ಳ ದೇವರು; ದೀರ್ಘಶಾಂತನೂ ಪ್ರೀತಿಯೂ ನಂಬಿಕೆಯೂ ಉಳ್ಳ”ವನಾಗಿದ್ದಾನೆ ಎಂಬುದನ್ನು ಕಲಿಸುತ್ತದೆ. (ವಿಮೋಚನಕಾಂಡ 34:6, NW) ಖಂಡಿತವಾಗಿಯೂ ಕರುಣೆಯು ದೇವರ ಪ್ರಾಮುಖ್ಯ ಗುಣವಾಗಿದೆ. ಆವಶ್ಯಕತೆಯಲ್ಲಿರುವವರ ಕಡೆಗೆ ಅವನು ಸಾಮಾನ್ಯವಾಗಿ ಇದೇ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾನೆ. ಇದಲ್ಲದೆ, ಯೆಹೋವನು “ಕ್ಷಮಿಸುವವ”ನಾಗಿದ್ದಾನೆ ಎಂದು ಯೇಸುವಿನ ಸಾಮ್ಯವು ಕಲಿಸುತ್ತದೆ. (ಕೀರ್ತನೆ 86:5) ಸಾಂಕೇತಿಕ ಅರ್ಥದಲ್ಲಿ, ಪಾಪಭರಿತ ಮಾನವರು ಮನಸ್ಸು ಬದಲಾಯಿಸಿದ್ದಾರೋ ಎಂಬುದನ್ನು ಗಮನಿಸಿ, ಅವರಿಗೆ ಕರುಣೆಯನ್ನು ತೋರಿಸುವ ಅವಕಾಶಕ್ಕಾಗಿ ಯೆಹೋವನು ಜಾಗರೂಕತೆಯಿಂದ ಹುಡುಕುತ್ತಿದ್ದಾನೆ.—2 ಪೂರ್ವಕಾಲವೃತ್ತಾಂತ 12:12; 16:9.
19 ಉದಾಹರಣೆಗಾಗಿ, ಇಸ್ರಾಯೇಲ್ಯರೊಂದಿಗೆ ದೇವರು ನಡೆಸಿದ ವ್ಯವಹಾರಗಳ ಕುರಿತು ಆಲೋಚಿಸಿರಿ. ಯೆಹೂದ ಹಾಗೂ ಯೆರೂಸಲೇಮು ‘ಅಂಗಾಲಿನಿಂದ ನಡುನೆತ್ತಿಯ ತನಕ’ ಅಸ್ವಸ್ಥವಾಗಿದೆ ಎಂದು ವರ್ಣಿಸುವಂತೆ, ಯೆಹೋವನು ಪ್ರವಾದಿಯಾದ ಯೆಶಾಯನನ್ನು ಪ್ರೇರಿಸಿದನು. ಆದರೂ, ಅವನು ಹೇಳಿದ್ದು: “ಯೆಹೋವನು ನಿಮಗೆ ಕೃಪೆತೋರಿಸಬೇಕೆಂದು ಕಾದಿರುವನು; ನಿಮ್ಮನ್ನು ಕರುಣಿಸಬೇಕೆಂದು ಉನ್ನತೋನ್ನತನಾಗಿ ಕಾಣಿಸಿಕೊಳ್ಳುವನು.” (ಯೆಶಾಯ 1:5, 6; 30:18; 55:7; ಯೆಹೆಜ್ಕೇಲ 33:11) ಯೇಸುವಿನ ಸಾಮ್ಯದಲ್ಲಿನ ತಂದೆಯಂತೆ, ಯೆಹೋವನು ‘ದಾರಿ ಕಾಯುತ್ತಾ’ ಇರುತ್ತಾನೆ. ಆತನ ಆರಾಧನೆಯನ್ನು ಬಿಟ್ಟುಹೋಗಿರುವವರು ಯಾರೇ ಆಗಿರಲಿ, ಅವರ ಹಿಂದಿರುಗುವಿಕೆಯನ್ನು ಅವನು ಆತುರದಿಂದ ಎದುರುನೋಡುತ್ತಾನೆ. ಒಬ್ಬ ಪ್ರೀತಿಪೂರ್ಣ ತಂದೆಯಿಂದ ನಾವು ಇದನ್ನೇ ನಿರೀಕ್ಷಿಸುತ್ತೇವಲ್ಲವೊ?—ಕೀರ್ತನೆ 103:13.
20, 21. (ಎ) ಯಾವ ವಿಧದಲ್ಲಿ ಇಂದು ಅನೇಕರು ದೇವರ ಕರುಣೆಯ ಕಡೆಗೆ ಸೆಳೆಯಲ್ಪಡುತ್ತಿದ್ದಾರೆ? (ಬಿ) ಮುಂದಿನ ಲೇಖನದಲ್ಲಿ ಯಾವ ವಿಷಯವನ್ನು ಚರ್ಚಿಸಲಾಗುವುದು?
20 ಪ್ರತಿ ವರ್ಷ, ಅನೇಕರಿಗೆ ಬುದ್ಧಿಬಂದು, ಅವರು ಪುನಃ ಸತ್ಯಾರಾಧನೆಗೆ ಹಿಂದಿರುಗುವಂತೆ ಯೆಹೋವನ ಕರುಣೆಯು ಅವರನ್ನು ಸೆಳೆಯುತ್ತದೆ. ಅವರ ಪ್ರಿಯ ಜನರಿಗೆ ಇದು ಎಷ್ಟೊಂದು ಆನಂದವನ್ನು ಉಂಟುಮಾಡುತ್ತದೆ! ಉದಾಹರಣೆಗಾಗಿ, ಈ ಲೇಖನದ ಆರಂಭದಲ್ಲಿ ತಿಳಿಸಲಾದ ಕ್ರೈಸ್ತ ತಂದೆಯನ್ನು ತೆಗೆದುಕೊಳ್ಳಿ. ಅವನ ಮಗಳು ಪುನಃ ಸತ್ಯಕ್ಕೆ ಹಿಂದಿರುಗಿದಳು ಮತ್ತು ಈಗ ಒಬ್ಬ ಪೂರ್ಣ ಸಮಯದ ಶುಶ್ರೂಷಕಿಯಾಗಿ ಸೇವೆಮಾಡುತ್ತಿದ್ದಾಳೆ. “ಈ ಹಳೆಯ ವಿಷಯಗಳ ವ್ಯವಸ್ಥೆಯಲ್ಲಿ ನಾನು ಅತ್ಯಂತ ಸಂತೋಷಭರಿತ ವ್ಯಕ್ತಿಯಾಗಿದ್ದೇನೆ” ಎಂದು ಅವನು ಹೇಳುತ್ತಾನೆ. “ನನ್ನ ದುಃಖಾಶ್ರು ಆನಂದಾಶ್ರುವಾಗಿದೆ.” ನಿಶ್ಚಯವಾಗಿಯೂ, ಯೆಹೋವನು ಸಹ ಸಂತೋಷಪಡುತ್ತಾನೆ!—ಜ್ಞಾನೋಕ್ತಿ 27:11.
21 ಆದರೆ ಪೋಲಿಹೋದ ಮಗನ ಸಾಮ್ಯದಲ್ಲಿ ಇನ್ನೂ ಹೆಚ್ಚಿನ ವಿಷಯವು ಒಳಗೂಡಿದೆ. ಯೆಹೋವನ ಕರುಣೆಗೂ ಶಾಸ್ತ್ರಿಗಳು ಹಾಗೂ ಫರಿಸಾಯರ ನಡುವೆ ಸಾಮಾನ್ಯವಾಗಿದ್ದ ಕಟ್ಟುನಿಟ್ಟಾದ, ನಿಂದಾತ್ಮಕ ಮನೋಭಾವಕ್ಕೂ ಇರುವ ವ್ಯತ್ಯಾಸವನ್ನು ತೋರಿಸಸಾಧ್ಯವಾಗುವಂತೆ ಯೇಸು ತನ್ನ ಕಥೆಯನ್ನು ಮುಂದುವರಿಸಿದನು. ಅವನು ಅದನ್ನು ಹೇಗೆ ಮಾಡಿದನು ಮತ್ತು ಇದು ನಮಗೆ ಯಾವ ಅರ್ಥದಲ್ಲಿದೆ ಎಂಬುದನ್ನು ಮುಂದಿನ ಲೇಖನವು ಚರ್ಚಿಸುವುದು.
[ಅಧ್ಯಯನ ಪ್ರಶ್ನೆಗಳು]
a ಬೈಬಲಿನಲ್ಲಿ ತಿಳಿಸಲ್ಪಟ್ಟಿರುವ ಸಾಮ್ಯಗಳು ಹಾಗೂ ಇನ್ನಿತರ ದೃಷ್ಟಾಂತಗಳು ವಾಸ್ತವವಾಗಿ ಸಂಭವಿಸಲಿಲ್ಲ. ಇದಲ್ಲದೆ, ನೀತಿ ಬೋಧೆಯನ್ನು ಕಲಿಸುವುದೇ ಈ ಕಥೆಗಳ ಉದ್ದೇಶವಾಗಿರುವುದರಿಂದ, ಪ್ರತಿಯೊಂದಕ್ಕೂ ಒಂದು ಸಾಂಕೇತಿಕ ಅರ್ಥವನ್ನು ಹುಡುಕುವ ಅಗತ್ಯವಿಲ್ಲ.
b ಈ ಸಾಮ್ಯದ ಪ್ರವಾದನಾತ್ಮಕ ಅರ್ಥವನ್ನು, ಫೆಬ್ರವರಿ 15, 1989ರ ವಾಚ್ಟವರ್ ಸಂಚಿಕೆಯ, 16, 17ನೆಯ ಪುಟಗಳಲ್ಲಿ ಚರ್ಚಿಸಲಾಗಿದೆ.
ಪುನರ್ವಿಮರ್ಶೆಯಲ್ಲಿ
◻ ಕರುಣೆಯ ಕಡೆಗಿನ ಯೇಸುವಿನ ಮನೋಭಾವವು, ಫರಿಸಾಯರ ಮನೋಭಾವಕ್ಕಿಂತ ಹೇಗೆ ಭಿನ್ನವಾಗಿತ್ತು?
◻ ಇಂದು ಯಾರು ಪೋಲಿಹೋದ ಮಗನಂತಿದ್ದಾರೆ, ಮತ್ತು ಹೇಗೆ?
◻ ಯಾವ ಸನ್ನಿವೇಶಗಳು ಪೋಲಿಹೋದ ಮಗನಿಗೆ ಬುದ್ಧಿಬರುವಂತೆ ಮಾಡಿದವು?
◻ ಪಶ್ಚಾತ್ತಾಪಪಟ್ಟ ತನ್ನ ಮಗನಿಗೆ ಆ ತಂದೆಯು ಹೇಗೆ ಕರುಣೆಯನ್ನು ತೋರಿಸಿದನು?
[ಪುಟ 11 ರಲ್ಲಿರುವ ಚೌಕ]
ಅವರಿಗೆ ತಮ್ಮ ತಪ್ಪಿನ ಅರಿವಾಯಿತು
ಕ್ರೈಸ್ತ ಸಭೆಯಿಂದ ಬಹಿಷ್ಕರಿಸಲ್ಪಟ್ಟವರಿಗೆ, ತಾವು ಮಾಡಿದ ತಪ್ಪನ್ನು ಅರಿತುಕೊಳ್ಳುವಂತೆ ಯಾವುದು ಸಹಾಯ ಮಾಡಿದೆ? ಈ ಕೆಳಗಿನ ಹೇಳಿಕೆಗಳು ಆ ವಿಷಯ ಯಾವುದೆಂದು ತಿಳಿಸುತ್ತವೆ.
“ನನ್ನ ಮನಸ್ಸಿನಲ್ಲಿ ಸತ್ಯಕ್ಕೆ ಯಾವ ಸ್ಥಾನವಿತ್ತು ಎಂಬುದು ನನಗೆ ಗೊತ್ತಿತ್ತು. ಅನೇಕ ವರ್ಷಗಳಿಂದ ಬೈಬಲನ್ನು ಅಭ್ಯಾಸಿಸುತ್ತಿದ್ದದ್ದು ಹಾಗೂ ಕ್ರೈಸ್ತ ಕೂಟಗಳಿಗೆ ಹೋಗುತ್ತಿದ್ದದ್ದು, ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತ್ತು. ಇನ್ನುಮುಂದೆ ನಾನು ಯೆಹೋವನನ್ನು ಬೇಕುಬೇಕೆಂದು ಹೇಗೆ ಅಲಕ್ಷಿಸಸಾಧ್ಯವಿದೆ? ಆತನು ನನ್ನನ್ನು ತೊರೆದಿಲ್ಲ; ನಾನೇ ಆತನನ್ನು ತೊರೆದಿದ್ದೇನೆ. ಕೊನೆಯದಾಗಿ, ನಾನು ಮಾಡಿದ್ದು ತಪ್ಪಾಗಿತ್ತು, ಹಾಗೂ ನಾನು ಹಟಮಾರಿಯಾಗಿದ್ದೆ, ಮತ್ತು ‘ನೀವು ಏನನ್ನು ಬಿತ್ತುತ್ತೀರೋ ಅದನ್ನೇ ಕೊಯ್ಯುವಿರಿ’ ಎಂದು ಯೆಹೋವನ ವಾಕ್ಯವು ಹೇಳುವುದು ಯಾವಾಗಲೂ ಸರಿಯಾಗಿದೆ ಎಂಬುದನ್ನು ನಾನು ಒಪ್ಪಿಕೊಂಡೆ.”—ಸಿ.ಡಬ್ಲ್ಯೂ.
“ನನ್ನ ಹೆಣ್ಣು ಮಗು ಮಾತಾಡಲು ಆರಂಭಿಸಿತು ಮತ್ತು ಅದು ನನ್ನ ಹೃದಯವನ್ನು ಸ್ಪರ್ಶಿಸಿತು, ಯಾಕೆಂದರೆ ಯೆಹೋವನು ಯಾರು ಹಾಗೂ ಆತನಿಗೆ ಹೇಗೆ ಪ್ರಾರ್ಥಿಸುವುದು ಎಂಬಂತಹ ವಿಷಯಗಳನ್ನು ನಾನು ಅವಳಿಗೆ ಕಲಿಸಲು ಬಯಸಿದ್ದೆ. ನನಗೆ ಮಲಗಲು ಆಗಲಿಲ್ಲ, ಮತ್ತು ಒಂದು ದಿನ ರಾತ್ರಿ ನಾನು ಪಾರ್ಕಿಗೆ ಹೋಗಿ, ತುಂಬ ಅತ್ತುಬಿಟ್ಟೆ. ನಾನು ಅಳುತ್ತಾ, ಬಹಳ ಸಮಯದ ಬಳಿಕ ಮೊಟ್ಟಮೊದಲ ಬಾರಿಗೆ ಯೆಹೋವನಿಗೆ ಪ್ರಾರ್ಥಿಸಿದೆ. ನನ್ನ ಜೀವಿತದಲ್ಲಿ ನನಗೆ ಪುನಃ ಯೆಹೋವನ ಆವಶ್ಯಕತೆಯಿದೆ ಎಂಬುದಷ್ಟೇ ನನಗೆ ಗೊತ್ತಿತ್ತು, ಮತ್ತು ಆತನು ನನ್ನನ್ನು ಕ್ಷಮಿಸಸಾಧ್ಯವಿದೆ ಎಂದು ನಾನು ನಿರೀಕ್ಷಿಸಿದೆ.”—ಜಿ.ಏಚ್.
“ಜನರು ಧರ್ಮದ ಕುರಿತು ಮಾತಾಡಿದಾಗ ನಾನು ಅವರಿಗೆ, ಸತ್ಯವನ್ನು ಕಲಿಸುವ ಧರ್ಮವನ್ನು ಆರಿಸಿಕೊಳ್ಳಬೇಕಾದರೆ, ನಾವು ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾಗಬೇಕು ಎಂದು ಹೇಳುತ್ತಿದ್ದೆ. ನಾನು ಅವರಲ್ಲಿ ಒಬ್ಬಳಾಗಿದ್ದೆ, ಆದರೆ ನಾನು ಅದಕ್ಕನುಸಾರವಾಗಿ ಜೀವಿಸಲು ಸಾಧ್ಯವಾಗಲಿಲ್ಲ, ಆದುದರಿಂದ ಅದನ್ನು ಬಿಟ್ಟುಬಿಟ್ಟೆ. ಇದರ ಅರಿವು ನನಗಾದಾಗ, ನನಗೆ ಅನೇಕವೇಳೆ ತಪ್ಪಿತಸ್ಥ ಮನೋಭಾವವು ಉಂಟಾಯಿತು ಮತ್ತು ನಾನು ತುಂಬ ದುಃಖಪಟ್ಟೆ. ‘ನಾನು ಮಾಡಿದ್ದು ತಪ್ಪಾಯಿತು. ನನ್ನ ಜೀವಿತದಲ್ಲಿ ನಾನು ಬಹಳಷ್ಟು ಬದಲಾವಣೆಗಳನ್ನು ಮಾಡಬೇಕು’ ಎಂಬುದನ್ನು ನಾನು ಕೊನೆಗೆ ಒಪ್ಪಿಕೊಂಡೆ.”—ಸಿ.ಎನ್.
“ಮೂವತ್ತೈದು ವರ್ಷಗಳ ಹಿಂದೆ ನನ್ನನ್ನೂ ನನ್ನ ಪತಿಯನ್ನೂ ಬಹಿಷ್ಕರಿಸಲಾಗಿತ್ತು. ತದನಂತರ 1991ರಲ್ಲಿ, ಇಬ್ಬರು ಹಿರಿಯರು ನಮ್ಮನ್ನು ಸಂದರ್ಶಿಸಿದ ಅನಿರೀಕ್ಷಿತ ಅನುಭವವು ನಮಗಾಯಿತು. ಯೆಹೋವನ ಕಡೆಗೆ ಹಿಂದಿರುಗುವುದರ ಸಾಧ್ಯತೆಯ ಕುರಿತು ಆ ಹಿರಿಯರು ನಮಗೆ ತಿಳಿಯಪಡಿಸಿದರು. ಆರು ತಿಂಗಳುಗಳ ತರುವಾಯ, ನಮ್ಮನ್ನು ಪುನಸ್ಸ್ಥಾಪಿಸಿದ್ದಕ್ಕಾಗಿ ನಾವು ಅತ್ಯುಲ್ಲಾಸಪಟ್ಟೆವು. ನನ್ನ ಪತಿಯ ಪ್ರಾಯ 79 ಹಾಗೂ ನನ್ನ ಪ್ರಾಯ 63 ಆಗಿದೆ.”—ಸಿ.ಎ.