ನಿಜವಾದ ಐಶ್ವರ್ಯವನ್ನು ಸಂಪಾದಿಸಿ
“ಅನೀತಿಯ ಐಶ್ವರ್ಯದ ಮೂಲಕ ನಿಮಗೋಸ್ಕರ ಸ್ನೇಹಿತರನ್ನು ಮಾಡಿಕೊಳ್ಳಿ.”—ಲೂಕ 16:9.
1, 2. ಈ ಲೋಕದಲ್ಲಿ ಬಡವರು ಯಾವಾಗಲೂ ಇರುತ್ತಾರೆ ಯಾಕೆ?
ಇಂದಿನ ಆರ್ಥಿಕ ವ್ಯವಸ್ಥೆ ತುಂಬ ಹದಗೆಟ್ಟಿದೆ, ತುಂಬ ಅನ್ಯಾಯ ಆಗುತ್ತಿದೆ. ಉದಾಹರಣೆಗೆ, ಅನೇಕ ಯೌವನಸ್ಥರಿಗೆ ಕೆಲಸ ಸಿಗುವುದು ಕಷ್ಟ ಆಗಿದೆ. ಕೆಲವರು ತಮ್ಮ ಜೀವವನ್ನೂ ಅಪಾಯಕ್ಕೊಡ್ಡಿ ಶ್ರೀಮಂತ ದೇಶಗಳಿಗೆ ಹೋಗುತ್ತಾರೆ. ಆ ದೇಶಗಳಲ್ಲೂ ಅನೇಕ ಬಡವರಿದ್ದಾರೆ. ಇಡೀ ಲೋಕದಲ್ಲಿ ಶ್ರೀಮಂತರು ಇನ್ನೂ ಶ್ರೀಮಂತರಾಗುತ್ತಾ ಹೋಗುತ್ತಾರೆ, ಬಡವರು ಇನ್ನೂ ಬಡವರಾಗುತ್ತಾ ಇದ್ದಾರೆ. ಲೋಕದಲ್ಲಿರುವ 99% ಜನರ ಕೈಯಲ್ಲಿರುವಷ್ಟು ಹಣ ಉಳಿದ 1% ಅಗರ್ಭ ಶ್ರೀಮಂತರ ಕೈಯಲ್ಲಿದೆ ಎಂದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳು ತೋರಿಸುತ್ತವೆ. ಕೆಲವರು ಮೂರು ನಾಲ್ಕು ತಲೆಮಾರಿಗೆ ಬೇಕಾದಷ್ಟು ದುಡ್ಡು ಸೇರಿಸಿಟ್ಟಿದ್ದಾರೆ. ಆದರೆ ಕೋಟಿಗಟ್ಟಲೆ ಜನರು ಒಂದು ಹೊತ್ತು ಊಟಕ್ಕೂ ಇಲ್ಲದೆ ಪರದಾಡುತ್ತಿದ್ದಾರೆ. ಯೇಸುವಿಗೆ ಇದು ಗೊತ್ತಿತ್ತು. ಆದ್ದರಿಂದಲೇ “ಬಡವರು ಯಾವಾಗಲೂ ನಿಮ್ಮ ಬಳಿ ಇರುತ್ತಾರೆ” ಎಂದು ಹೇಳಿದ್ದಾನೆ. (ಮಾರ್ಕ 14:7) ಯಾಕೆ ಇಂಥ ತಾರತಮ್ಯ?
2 ಈ ಲೋಕದ ವಾಣಿಜ್ಯ ವ್ಯವಸ್ಥೆಯನ್ನು ದೇವರ ರಾಜ್ಯ ಮಾತ್ರ ಬದಲಾಯಿಸಬಲ್ಲದು ಎಂದು ಯೇಸುವಿಗೆ ಗೊತ್ತಿತ್ತು.a ರಾಜಕೀಯ, ಧಾರ್ಮಿಕ ವ್ಯವಸ್ಥೆಗಳು ಮತ್ತು “ವರ್ತಕರು” ಅಂದರೆ ವಾಣಿಜ್ಯ ವ್ಯವಸ್ಥೆ ಇವೆಲ್ಲಾ ಸೈತಾನನ ಲೋಕದ ಭಾಗವಾಗಿವೆ ಎಂದು ಬೈಬಲ್ ತಿಳಿಸುತ್ತದೆ. (ಪ್ರಕ. 18:3) ಯೆಹೋವನ ಜನರು ರಾಜಕೀಯ ಮತ್ತು ಸುಳ್ಳು ಧರ್ಮದಿಂದ ಸಂಪೂರ್ಣವಾಗಿ ದೂರವಿರಲು ಸಾಧ್ಯವಾಗಿದೆ. ಆದರೆ ಅವರಲ್ಲಿ ಅನೇಕರಿಗೆ ಸೈತಾನನ ಲೋಕದ ವಾಣಿಜ್ಯ ವ್ಯವಸ್ಥೆಯಿಂದ ಪೂರ್ತಿಯಾಗಿ ದೂರವಿರಲು ಸಾಧ್ಯವಿಲ್ಲ.
3. ನಾವು ಯಾವ ಪ್ರಶ್ನೆಗಳನ್ನು ಚರ್ಚಿಸಲಿದ್ದೇವೆ?
3 ಕ್ರೈಸ್ತರಾಗಿರುವ ನಮಗೆ ಈ ಲೋಕದ ವಾಣಿಜ್ಯ ವ್ಯವಸ್ಥೆಯ ಬಗ್ಗೆ ಯಾವ ಮನೋಭಾವ ಇದೆ ಎಂದು ಪರೀಕ್ಷಿಸಿಕೊಳ್ಳಬೇಕು. ನಮ್ಮನ್ನೇ ಹೀಗೆ ಕೇಳಿಕೊಳ್ಳೋಣ: ‘ದೇವರಿಗೆ ನಂಬಿಗಸ್ತನಾಗಿದ್ದೇನೆ ಎಂದು ತೋರಿಸುವ ವಿಧದಲ್ಲಿ ನಾನು ನನ್ನ ಪ್ರಾಪಂಚಿಕ ವಸ್ತುಗಳನ್ನು ಹೇಗೆ ಬಳಸಬಹುದು? ವಾಣಿಜ್ಯ ವ್ಯವಸ್ಥೆ ನನ್ನ ಸಮಯ ಶಕ್ತಿಯನ್ನೆಲ್ಲಾ ಹೀರಿಕೊಳ್ಳದಂತೆ ಹೇಗೆ ನೋಡಿಕೊಳ್ಳಬಹುದು? ಯೆಹೋವನ ಜನರು ಆತನಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದಾರೆಂದು ಯಾವ ಅನುಭವಗಳು ತೋರಿಸುತ್ತವೆ?’
ಅನೀತಿವಂತ ಮನೆವಾರ್ತೆಯವನ ಕಥೆ
4, 5. (ಎ) ಮನೆವಾರ್ತೆಯವನಿಗೆ ಯಾವ ಕಷ್ಟ ಎದುರಾಯಿತು? (ಬಿ) ಏನು ಮಾಡಬೇಕೆಂದು ಯೇಸು ತನ್ನ ಹಿಂಬಾಲಕರಿಗೆ ಹೇಳಿದನು?
4 ಲೂಕ 16:1-9 ಓದಿ. ಯೇಸು ಹೇಳಿದ ಅನೀತಿವಂತ ಮನೆವಾರ್ತೆಯವನ ಕಥೆಯ ಬಗ್ಗೆ ನಾವೆಲ್ಲ ಸ್ವಲ್ಪ ಯೋಚಿಸಬೇಕು. ಇವನು ಯಜಮಾನನ ವಸ್ತುಗಳನ್ನು ಹಾಳುಮಾಡುತ್ತಿದ್ದಾನೆ ಎಂಬ ದೂರನ್ನು ಹಾಕಲಾಯಿತು. ಆದ್ದರಿಂದ ಯಜಮಾನನು ಇವನನ್ನು ಕೆಲಸದಿಂದ ತೆಗೆಯಲು ತೀರ್ಮಾನಿಸಿದನು.b ಆಗ ಮನೆವಾರ್ತೆಯವನು “ಪ್ರಾಯೋಗಿಕ ವಿವೇಕ” ಬಳಸಿದನು. ಕೆಲಸ ಕಳಕೊಳ್ಳುವ ಮುಂಚೆ, ಮುಂದೆ ತನಗೆ ಯಾರಿಂದ ಸಹಾಯ ಆಗಬಹುದೋ ಅಂಥ ಜನರೊಟ್ಟಿಗೆ ಸ್ನೇಹ ಬೆಳೆಸಲು ಪ್ರಯತ್ನಿಸಿದನು. ಯೇಸು ಈ ಕಥೆಯ ಮೂಲಕ ತನ್ನ ಶಿಷ್ಯರಿಗೆ, ಜೀವನ ಸಾಗಿಸಬೇಕಾದರೆ ಸ್ವಲ್ಪ ಮೋಸ-ವಂಚನೆ ಮಾಡಬೇಕೆಂದು ಹೇಳುತ್ತಿರಲಿಲ್ಲ. ಬದಲಿಗೆ “ಈ ವಿಷಯಗಳ ವ್ಯವಸ್ಥೆಯ ಪುತ್ರರು” ಅಂದರೆ ಲೋಕದ ಜನರು ಹೀಗೆ ಮಾಡುತ್ತಾರೆ ಎಂದನು. ಈ ಕಥೆಯ ಮೂಲಕ ಯೇಸು ಒಂದು ಪ್ರಾಮುಖ್ಯ ಪಾಠವನ್ನು ಕಲಿಸಲು ಬಯಸಿದನು.
5 ಆ ಮನೆವಾರ್ತೆಯವನಿಗೆ ಕಷ್ಟ ಎದುರಾದಂತೆ, ತನ್ನ ಹಿಂಬಾಲಕರಲ್ಲಿ ಹೆಚ್ಚಿನವರಿಗೆ ಅನ್ಯಾಯ ತುಂಬಿದ ಈ ಲೋಕದಲ್ಲಿ ಜೀವನ ಸಾಗಿಸುವುದು ಕಷ್ಟ ಎಂದು ಯೇಸುವಿಗೆ ಗೊತ್ತಿತ್ತು. ಆದ್ದರಿಂದ ಅವನು ಅವರಿಗೆ, “ಅನೀತಿಯ ಐಶ್ವರ್ಯದ ಮೂಲಕ ನಿಮಗೋಸ್ಕರ ಸ್ನೇಹಿತರನ್ನು ಮಾಡಿಕೊಳ್ಳಿ” ಎಂದನು. ಯಾಕೆ? ಯಾಕೆಂದರೆ ತಮ್ಮ ಐಶ್ವರ್ಯ ಕೈಕೊಟ್ಟಾಗ ಆ ಸ್ನೇಹಿತರು ಅಂದರೆ ಯೆಹೋವ ಮತ್ತು ಯೇಸು ಅವರನ್ನು “ನಿತ್ಯವಾದ ವಾಸಸ್ಥಾನಗಳಲ್ಲಿ ಸೇರಿಸಿಕೊಳ್ಳಬಹುದು.” ಯೇಸು ಕೊಟ್ಟ ಸಲಹೆಯಿಂದ ನಾವೇನು ಕಲಿಯಬಹುದು?
6. ಇಂದಿರುವಂಥ ವಾಣಿಜ್ಯ ವ್ಯವಸ್ಥೆ ದೇವರ ಉದ್ದೇಶದ ಭಾಗವಾಗಿರಲಿಲ್ಲ ಎಂದು ನಮಗೆ ಹೇಗೆ ಗೊತ್ತು?
6 ಐಶ್ವರ್ಯವನ್ನು ಯೇಸು ಯಾಕೆ “ಅನೀತಿಯ ಐಶ್ವರ್ಯ” ಎಂದು ಕರೆಯುತ್ತಾನೆಂದು ಅವನು ವಿವರಿಸಿಲ್ಲ. ಆದರೆ ತುಂಬ ಹಣ ಮಾಡುವ ಉದ್ದೇಶದಿಂದ ತಲೆ ಎತ್ತಿರುವ ವಾಣಿಜ್ಯ ವ್ಯವಸ್ಥೆ ದೇವರ ಉದ್ದೇಶದ ಭಾಗವಾಗಿರಲಿಲ್ಲ ಎಂದು ಬೈಬಲಿನಿಂದ ಗೊತ್ತಾಗುತ್ತದೆ. ಉದಾಹರಣೆಗೆ, ಏದೆನ್ ತೋಟದಲ್ಲಿ ಆದಾಮಹವ್ವರಿಗೆ ಏನು ಬೇಕೋ ಅದನ್ನು ಯೆಹೋವನು ಧಾರಾಳವಾಗಿ ಕೊಟ್ಟನು. (ಆದಿ. 2:15, 16) ಅನಂತರ ಒಂದನೇ ಶತಮಾನದಲ್ಲಿ ಅಭಿಷಿಕ್ತರ ಮೇಲೆ ಪವಿತ್ರಾತ್ಮ ಬಂದಾಗ ತಾವು “ಹೊಂದಿದ ಯಾವುದೇ ವಸ್ತು ತನ್ನ ಸ್ವಂತದ್ದೆಂದು ಒಬ್ಬನೂ ಹೇಳುತ್ತಿರಲಿಲ್ಲ; ಬದಲಾಗಿ ಅವರೆಲ್ಲರೂ ಎಲ್ಲವನ್ನೂ ಸಮಾನವಾಗಿ ಹಂಚಿಕೊಂಡರು.” (ಅ. ಕಾ. 4:32) ಮುಂದೆ ಹೊಸ ಲೋಕದಲ್ಲಿ ಮಾನವರೆಲ್ಲರೂ ಭೂಮಿಯ ಉತ್ಪನ್ನವನ್ನು ಹೇರಳವಾಗಿ ಆನಂದಿಸಲಿಕ್ಕಿದ್ದಾರೆಂದು ಪ್ರವಾದಿ ಯೆಶಾಯ ತಿಳಿಸಿದ್ದಾನೆ. (ಯೆಶಾ. 25:6-9; 65:21, 22) ಆದರೆ ಆ ಸಮಯ ಬರುವ ವರೆಗೆ ಯೇಸುವಿನ ಹಿಂಬಾಲಕರಿಗೆ ‘ಪ್ರಾಯೋಗಿಕ ವಿವೇಕದ’ ಆವಶ್ಯಕತೆ ಇದೆ. ಯಾಕೆಂದರೆ ಅವರು ಈ ಲೋಕದ ಅನೀತಿಯ ಐಶ್ವರ್ಯವನ್ನು ಬಳಸಿ ಜೀವನ ಸಾಗಿಸುವ ಅದೇ ಸಮಯದಲ್ಲಿ ದೇವರನ್ನೂ ಮೆಚ್ಚಿಸಬೇಕು.
ಅನೀತಿಯ ಐಶ್ವರ್ಯವನ್ನು ವಿವೇಕದಿಂದ ಬಳಸುವ ವಿಧ
7. ಲೂಕ 16:10-13ರಲ್ಲಿ ಯೇಸು ಯಾವ ಸಲಹೆ ಕೊಟ್ಟಿದ್ದಾನೆ?
7 ಲೂಕ 16:10-13 ಓದಿ. ಯೇಸುವಿನ ಕಥೆಯಲ್ಲಿದ್ದ ಮನೆವಾರ್ತೆಯವನು ತನ್ನ ಪ್ರಯೋಜನಕ್ಕಾಗಿ ಸ್ನೇಹಿತರನ್ನು ಮಾಡಿಕೊಂಡನು. ಆದರೆ ತನ್ನ ಹಿಂಬಾಲಕರು ತಮ್ಮ ಪ್ರಯೋಜನವನ್ನು ಮರೆತು ಸ್ವರ್ಗದಲ್ಲಿರುವವರನ್ನು ಅಂದರೆ ಯೆಹೋವ ಮತ್ತು ಯೇಸುವನ್ನು ಸ್ನೇಹಿತರಾಗಿ ಮಾಡಿಕೊಳ್ಳಬೇಕೆಂದು ಯೇಸು ಪ್ರೋತ್ಸಾಹಿಸಿದನು. ನಮ್ಮ ಅನೀತಿಯ ಐಶ್ವರ್ಯವನ್ನು ಬಳಸುವ ವಿಧ ನಾವು ದೇವರಿಗೆ ನಂಬಿಗಸ್ತರಾಗಿದ್ದೇವಾ ಇಲ್ಲವಾ ಎಂದು ತೋರಿಸುತ್ತದೆ ಎಂದು ನಾವು ಅರ್ಥಮಾಡಿಕೊಳ್ಳಬೇಕೆಂದು ಅವನು ಬಯಸಿದನು. ನಮ್ಮ ಐಶ್ವರ್ಯವನ್ನು ಈ ರೀತಿ ಬಳಸುವುದು ಹೇಗೆ?
8, 9. ಅನೀತಿಯ ಐಶ್ವರ್ಯವನ್ನು ಬಳಸುವ ವಿಷಯದಲ್ಲಿ ಕೆಲವರು ಹೇಗೆ ನಂಬಿಗಸ್ತಿಕೆ ತೋರಿಸುತ್ತಿದ್ದಾರೆ?
8 ನಮ್ಮ ಹಣ-ವಸ್ತುಗಳನ್ನು ಬಳಸುವ ವಿಷಯದಲ್ಲಿ ನಾವು ದೇವರಿಗೆ ನಂಬಿಗಸ್ತರೆಂದು ತೋರಿಸುವ ಒಂದು ವಿಧ ಯೇಸು ಮುಂತಿಳಿಸಿದ ಲೋಕವ್ಯಾಪಕ ಸಾರುವ ಕೆಲಸಕ್ಕೆ ಕಾಣಿಕೆ ಕೊಡುವುದೇ ಆಗಿದೆ. (ಮತ್ತಾ. 24:14) ಭಾರತದಲ್ಲಿರುವ ಒಬ್ಬ ಚಿಕ್ಕ ಹುಡುಗಿ ತನ್ನ ಹತ್ತಿರ ಇದ್ದ ಹಣದ ಡಬ್ಬಿಯಲ್ಲಿ ಕಾಸು ಹಾಕುತ್ತಾ ಬಂದಳು. ಗೊಂಬೆಗಳನ್ನೂ ಖರೀದಿಸದೆ ಕಾಸು ಸೇರಿಸುತ್ತಾ ಇದ್ದಳು. ಡಬ್ಬಿ ತುಂಬಿಹೋದಾಗ ಆ ಹಣವನ್ನೆಲ್ಲಾ ಸಾರುವ ಕೆಲಸವನ್ನು ಬೆಂಬಲಿಸಲು ಕಾಣಿಕೆಯಾಗಿ ಕೊಟ್ಟಳು. ಭಾರತದಲ್ಲಿರುವ ಒಬ್ಬ ಸಹೋದರನಿಗೆ ತೆಂಗಿನತೋಟ ಇದೆ. ಅವನು ಮಲೆಯಾಳಂ ಪ್ರಾದೇಶಿಕ ಭಾಷಾಂತರ ಕಚೇರಿಗೆ ತುಂಬ ತೆಂಗಿನಕಾಯಿಗಳನ್ನು ತಂದು ಕೊಟ್ಟನು. ಭಾಷಾಂತರ ಕಚೇರಿಯಲ್ಲಿ ಇರುವವರಿಗೆ ಅಡಿಗೆ ಮಾಡಲು ತೆಂಗಿನಕಾಯಿ ಬೇಕಾಗಿರುವುದರಿಂದ ಹಣ ಕೊಡುವುದಕ್ಕಿಂತ ತೆಂಗಿನಕಾಯಿ ಕೊಡುವುದು ಉತ್ತಮ ಎಂದು ಅವನಿಗೆ ಅನಿಸಿತು. ಇದು “ಪ್ರಾಯೋಗಿಕ ವಿವೇಕ.” ಇದೇ ರೀತಿ ಗ್ರೀಸ್ನಲ್ಲಿರುವ ಸಹೋದರರು ಬೆತೆಲ್ ಕುಟುಂಬಕ್ಕೆ ಆಲೀವ್ ಎಣ್ಣೆ, ಚೀಸ್ ಮತ್ತು ಬೇರೆ ಆಹಾರ ಪದಾರ್ಥಗಳನ್ನು ತಂದುಕೊಡುತ್ತಾರೆ.
9 ಇನ್ನೊಂದು ದೇಶದಲ್ಲಿರುವ ಸಹೋದರನು ಶ್ರೀಲಂಕದಲ್ಲಿರುವ ತನ್ನ ಮನೆ ಮತ್ತು ಜಾಗವನ್ನು ಕೂಟ, ಸಮ್ಮೇಳನ ನಡೆಸಲು ಮತ್ತು ಪೂರ್ಣ ಸಮಯದ ಸೇವಕರು ವಾಸಿಸಲು ಕೊಟ್ಟಿದ್ದಾನೆ. ಇದರಿಂದ ಆ ಸಹೋದರನಿಗೆ ಯಾವ ಆರ್ಥಿಕ ಲಾಭವೂ ಸಿಗುವುದಿಲ್ಲವಾದ್ದರಿಂದ ಇದೊಂದು ತ್ಯಾಗ. ಅಲ್ಲಿರುವ ಸಹೋದರರ ಹತ್ತಿರ ತುಂಬ ಹಣ ಇಲ್ಲದ ಕಾರಣ ಇದರಿಂದ ತುಂಬ ಸಹಾಯವಾಗಿದೆ. ಇನ್ನೊಂದು ದೇಶದಲ್ಲಿ, ನಮ್ಮ ಕೆಲಸ ನಿರ್ಬಂಧಿಸಲ್ಪಟ್ಟಿದೆ. ಅಲ್ಲಿನ ಸಹೋದರರು ತಮ್ಮ ಮನೆಗಳನ್ನು ರಾಜ್ಯ ಸಭಾಗೃಹಗಳಾಗಿ ಉಪಯೋಗಿಸುತ್ತಾರೆ. ಇದರಿಂದಾಗಿ ಪಯನೀಯರರು ಮತ್ತು ಹೆಚ್ಚು ಹಣವಿಲ್ಲದವರು ಕೂಟದ ಸ್ಥಳಕ್ಕೆ ಬಾಡಿಗೆ ಕೊಡಬೇಕಾಗಿರುವುದಿಲ್ಲ.
10. ನಾವು ಉದಾರವಾಗಿ ಕೊಡುವಾಗ ಯಾವ ಕೆಲವು ಪ್ರಯೋಜನಗಳು ಸಿಗುತ್ತವೆ?
10 ಯೆಹೋವನ ಜನರು ‘ಅತ್ಯಲ್ಪವಾಗಿರುವುದರಲ್ಲಿ’ ಅಂದರೆ ತಮ್ಮ ಹಣ-ವಸ್ತುಗಳನ್ನು ಉಪಯೋಗಿಸುವ ವಿಷಯದಲ್ಲಿ ನಂಬಿಗಸ್ತರಾಗಿದ್ದಾರೆಂದು ಇಂಥ ಉದಾಹರಣೆಗಳು ತೋರಿಸುತ್ತವೆ. (ಲೂಕ 16:10) ಅವರು ತಮ್ಮ ಹಣ-ವಸ್ತುಗಳನ್ನು ಬೇರೆಯವರಿಗೆ ಪ್ರಯೋಜನ ತರುವ ವಿಧದಲ್ಲಿ ಬಳಸುತ್ತಾರೆ. ಇಂಥ ತ್ಯಾಗಗಳನ್ನು ಮಾಡುವುದರ ಬಗ್ಗೆ ಯೆಹೋವನ ಈ ಸ್ನೇಹಿತರಿಗೆ ಹೇಗನಿಸುತ್ತದೆ? ಅವರ ಈ ಉದಾರತೆಯಿಂದ ಸ್ವರ್ಗದಲ್ಲಿ ‘ನಿಜವಾದ’ ಐಶ್ವರ್ಯವನ್ನು ಕೂಡಿಸಿಡುತ್ತಿದ್ದಾರೆ ಎಂದು ತಿಳಿದು ಅವರಿಗೆ ತುಂಬ ಸಂತೋಷವಾಗುತ್ತದೆ. (ಲೂಕ 16:11) ರಾಜ್ಯದ ಕೆಲಸಕ್ಕೆ ಬೆಂಬಲವಾಗಲಿ ಅಂತ ಒಬ್ಬ ಸಹೋದರಿ ಯಾವಾಗಲೂ ಕಾಣಿಕೆಗಳನ್ನು ಹಾಕುತ್ತಾರೆ. ಈ ಎಲ್ಲ ವರ್ಷಗಳಲ್ಲಿ ಅವರಲ್ಲಾದ ಕೆಲವು ಬದಲಾವಣೆಗಳ ಬಗ್ಗೆ ಅವರು ಹೇಳಲು ಬಯಸುತ್ತಾರೆ. “ನಾನು ಉದಾರವಾಗಿ ಕಾಣಿಕೆ ಕೊಡುತ್ತಾ ಬಂದಂತೆ, ಬೇರೆಯವರ ಕಡೆಗಿನ ನನ್ನ ಮನೋಭಾವದಲ್ಲೂ ಉದಾರತೆ ಹೆಚ್ಚಾಗುತ್ತಿರುವುದನ್ನು ಗಮನಿಸಿದ್ದೇನೆ. ಅಂದರೆ ಬೇರೆಯವರನ್ನು ಉದಾರವಾಗಿ ಕ್ಷಮಿಸುತ್ತಿದ್ದೇನೆ, ತುಂಬ ತಾಳ್ಮೆ ತೋರಿಸುತ್ತಿದ್ದೇನೆ. ನಿರುತ್ತೇಜನ ಆದಾಗ, ಸಲಹೆ ಸಿಕ್ಕಿದಾಗ ದೊಡ್ಡ ಮನಸ್ಸಿನಿಂದ ಸ್ವೀಕರಿಸಲು ಸಾಧ್ಯವಾಗಿದೆ” ಎಂದು ಹೇಳುತ್ತಾರೆ. ತಮ್ಮ ಉದಾರತೆಯಿಂದ ತಮಗೆ ವೈಯಕ್ತಿಕವಾಗಿ ಪ್ರಯೋಜನವಾಗಿದೆ ಎಂದು ಅನೇಕರು ಅರ್ಥಮಾಡಿಕೊಂಡಿದ್ದಾರೆ.—ಕೀರ್ತ. 112:5; ಜ್ಞಾನೋ. 22:9.
11. (ಎ) ನಮ್ಮ ಉದಾರತೆ ‘ಪ್ರಾಯೋಗಿಕ ವಿವೇಕವನ್ನು’ ಹೇಗೆ ತೋರಿಸುತ್ತದೆ? (ಬಿ) ಇಂದು ಯೆಹೋವನ ಜನರ ಮಧ್ಯೆ ಏನು ಉಂಟಾಗಿದೆ? (ಲೇಖನದ ಆರಂಭದ ಚಿತ್ರ ನೋಡಿ.)
11 ಸೇವೆಯಲ್ಲಿ ಶ್ರಮಿಸುತ್ತಿರುವ ಇತರರನ್ನು ಬೆಂಬಲಿಸಲು ನಾವು ನಮ್ಮ ಹಣ-ವಸ್ತುಗಳನ್ನು ಬಳಸುವಾಗ ಸಹ “ಪ್ರಾಯೋಗಿಕ ವಿವೇಕ” ತೋರಿಸುತ್ತಿದ್ದೇವೆ. ನಮ್ಮಿಂದ ಪೂರ್ಣ ಸಮಯದ ಸೇವೆ ಅಥವಾ ಅಗತ್ಯ ಹೆಚ್ಚಿರುವ ಸ್ಥಳಕ್ಕೆ ಹೋಗಿ ಸೇವೆ ಮಾಡಲು ಆಗಿಲ್ಲವಾದರೂ ಹೀಗೆ ಬೇರೆಯವರಿಗೆ ಸಹಾಯ ಮಾಡಿದಂತಾಗುತ್ತದೆ. (ಜ್ಞಾನೋ. 19:17) ಉದಾಹರಣೆಗೆ, ನಾವು ಕೊಡುವ ಕಾಣಿಕೆಗಳಿಂದ ಕಡುಬಡತನವಿರುವ ದೇಶಗಳಿಗೆ ಸಾಹಿತ್ಯ ಮುದ್ರಿಸಿ ಕಳುಹಿಸಲು ಮತ್ತು ಅಲ್ಲಿ ನಡೆಯುವ ಸಾರುವ ಕೆಲಸವನ್ನು ಬೆಂಬಲಿಸಲು ಸಾಧ್ಯವಾಗುತ್ತದೆ. ಈ ಸ್ಥಳಗಳಲ್ಲಿ ತುಂಬ ಜನ ಸತ್ಯಕ್ಕೆ ಬರುತ್ತಿದ್ದಾರೆ. ಕಾಂಗೊ, ಮಡಗಾಸ್ಕರ್, ರುವಾಂಡದಂಥ ದೇಶಗಳಲ್ಲಿ ಬೈಬಲನ್ನು ಕೊಂಡುಕೊಳ್ಳಲು ತುಂಬ ಹಣ ಕೊಡಬೇಕಾಗುತ್ತದೆ. ಕೆಲವೊಮ್ಮೆ ಒಂದು ಬೈಬಲನ್ನು ಖರೀದಿಸಲು ಇಡೀ ವಾರದ ಅಥವಾ ಇಡೀ ತಿಂಗಳಿನ ಸಂಬಳವನ್ನು ಕೊಡಬೇಕಾಗುತ್ತದೆ. ನಮ್ಮ ಸಹೋದರರು ತಮಗೆ ಸಿಕ್ಕಿರುವ ಸಂಬಳದಿಂದ ಮನೆಗೆ ಬೇಕಾದ ಆಹಾರವನ್ನು ಖರೀದಿಸಬೇಕಾ, ಬೈಬಲನ್ನು ಕೊಂಡುಕೊಳ್ಳಬೇಕಾ ಎಂದು ತೀರ್ಮಾನಿಸಬೇಕಾದ ಪರಿಸ್ಥಿತಿ ಎಷ್ಟೋ ವರ್ಷಗಳ ತನಕ ಇತ್ತು. ಆದರೆ ಈಗ, ಸಹೋದರರು ಕೊಡುವ ಕಾಣಿಕೆಗಳಿಂದ ಒಂದು “ಸಮಾನತೆ” ಉಂಟಾಗಿದೆ. ಯೆಹೋವನ ಸಂಘಟನೆ ಬೈಬಲನ್ನು ಭಾಷಾಂತರಿಸಿ ಉಚಿತವಾಗಿ ಹಂಚುತ್ತಿದೆ. ಇದರಿಂದ ಕುಟುಂಬದಲ್ಲಿರುವ ಪ್ರತಿಯೊಬ್ಬ ಸದಸ್ಯನು ಮತ್ತು ಬೈಬಲ್ ವಿದ್ಯಾರ್ಥಿಗಳು ಬೈಬಲಿನ ತಮ್ಮ ಸ್ವಂತ ಪ್ರತಿಯನ್ನು ಪಡೆದುಕೊಂಡು ಓದಲಿಕ್ಕಾಗುತ್ತಿದೆ. (2 ಕೊರಿಂಥ 8:13-15 ಓದಿ.) ಹೀಗೆ ಕಾಣಿಕೆ ಕೊಡುವವರು ಮತ್ತು ಅದರಿಂದ ಪ್ರಯೋಜನ ಪಡೆಯುವವರು ಯೆಹೋವನ ಸ್ನೇಹಿತರಾಗಬಹುದು.
ವಾಣಿಜ್ಯ ವ್ಯವಸ್ಥೆಯಿಂದ ಆದಷ್ಟು ದೂರವಿರುವುದು ಹೇಗೆ?
12. ತನಗೆ ದೇವರಲ್ಲಿ ನಂಬಿಕೆ ಇದೆ ಎಂದು ಅಬ್ರಹಾಮ ಹೇಗೆ ತೋರಿಸಿದನು?
12 ವಾಣಿಜ್ಯ ವ್ಯವಸ್ಥೆಯಿಂದ ಆದಷ್ಟು ದೂರವಿದ್ದು, ‘ನಿಜವಾದ’ ಐಶ್ವರ್ಯವನ್ನು ಸಂಪಾದಿಸುವ ಮೂಲಕ ಸಹ ನಾವು ಯೆಹೋವನ ಸ್ನೇಹಿತರಾಗುತ್ತೇವೆ. ನಂಬಿಗಸ್ತ ಅಬ್ರಹಾಮ ಇದನ್ನೇ ಮಾಡಿದನು. ಅವನು ಯೆಹೋವನ ಸ್ನೇಹಿತನಾಗಿಯೇ ಇರಲು ಬಯಸಿದ್ದರಿಂದ ಆತನ ಮಾತಿಗೆ ಬೆಲೆಕೊಟ್ಟು ಶ್ರೀಮಂತ ಪಟ್ಟಣವಾದ ಊರ್ ಅನ್ನು ಬಿಟ್ಟು ಡೇರೆಗಳಲ್ಲಿ ವಾಸಿಸಲು ಹೋದನು. (ಇಬ್ರಿ. 11:8-10) ಪ್ರಾಪಂಚಿಕ ವಸ್ತುಗಳ ಮೇಲೆ ಭರವಸೆ ಇಡುವ ಬದಲು ಯಾವಾಗಲೂ ದೇವರ ಮೇಲೆ ಭರವಸೆ ಇಟ್ಟನು. (ಆದಿ. 14:22, 23) ಇಂಥ ನಂಬಿಕೆಯನ್ನು ತೋರಿಸುವಂತೆ ಯೇಸು ಬೇರೆಯವರನ್ನು ಉತ್ತೇಜಿಸಿದನು. ಒಮ್ಮೆ ಒಬ್ಬ ಶ್ರೀಮಂತ ಯುವಕನಿಗೆ ಆತನು ಹೇಳಿದ್ದು: “ನೀನು ಪರಿಪೂರ್ಣನಾಗಲು ಬಯಸುವುದಾದರೆ ಹೋಗಿ ನಿನ್ನ ಸೊತ್ತನ್ನೆಲ್ಲ ಮಾರಿ ಬಡವರಿಗೆ ಕೊಡು; ಆಗ ಸ್ವರ್ಗದಲ್ಲಿ ನಿನಗೆ ಸಂಪತ್ತಿರುವುದು ಮತ್ತು ನೀನು ಬಂದು ನನ್ನ ಹಿಂಬಾಲಕನಾಗು.” (ಮತ್ತಾ. 19:21) ಈ ಯುವಕನಿಗೆ ಅಬ್ರಹಾಮನಲ್ಲಿ ಇದ್ದಂಥ ನಂಬಿಕೆ ಇರಲಿಲ್ಲ. ಆದರೆ ಬೇರೆ ಕೆಲವರು ದೇವರಲ್ಲಿ ನಿಜವಾದ ನಂಬಿಕೆ ಇಟ್ಟಿದ್ದರು.
13. (ಎ) ಪೌಲ ತಿಮೊಥೆಯನಿಗೆ ಯಾವ ಸಲಹೆ ಕೊಟ್ಟನು? (ಬಿ) ಇಂದು ನಾವು ಪೌಲನ ಸಲಹೆಯನ್ನು ಹೇಗೆ ಪಾಲಿಸಬಹುದು?
13 ತಿಮೊಥೆಯ ತುಂಬ ನಂಬಿಕೆಯಿದ್ದ ವ್ಯಕ್ತಿ. ಅವನನ್ನು “ಕ್ರಿಸ್ತ ಯೇಸುವಿನ ಒಳ್ಳೇ ಸೈನಿಕ” ಎಂದು ಕರೆದ ಮೇಲೆ ಪೌಲನು ಅವನಿಗೆ ಹೇಳಿದ್ದು: “ಸೈನಿಕನಾಗಿ ಸೇವೆಸಲ್ಲಿಸುತ್ತಿರುವ ಯಾವನೂ ತನ್ನನ್ನು ಸೈನಿಕನಾಗಿ ನೇಮಿಸಿಕೊಂಡವನ ಮೆಚ್ಚಿಗೆಯನ್ನು ಪಡೆಯಲಿಕ್ಕಾಗಿ ಜೀವನದ ವಾಣಿಜ್ಯ ವ್ಯವಹಾರಗಳಲ್ಲಿ ತನ್ನನ್ನು ಒಳಗೂಡಿಸಿಕೊಳ್ಳುವುದಿಲ್ಲ.” (2 ತಿಮೊ. 2:3, 4) ಈಗ ಇರುವ ಯೇಸುವಿನ ಹಿಂಬಾಲಕರು, 10 ಲಕ್ಷಕ್ಕಿಂತ ಹೆಚ್ಚಿನ ಪೂರ್ಣ ಸಮಯದ ಸೇವಕರು ಸಹ, ಪೌಲನ ಸಲಹೆಯನ್ನು ಪಾಲಿಸಲು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡುತ್ತಾರೆ. ಅತಿಯಾಸೆ ತುಂಬಿರುವ ಈ ಲೋಕ ತಮ್ಮ ಮುಂದಿಡುವ ಆಕರ್ಷಕ ಜಾಹೀರಾತುಗಳ ಮೋಡಿಗೆ ಅವರು ಬಲಿಬೀಳುವುದಿಲ್ಲ. “ಸಾಲಗಾರನು ಸಾಲಕೊಟ್ಟವನಿಗೆ ಸೇವಕ” ಎಂಬ ತತ್ವವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ. (ಜ್ಞಾನೋ. 22:7) ಈ ಲೋಕದ ವಾಣಿಜ್ಯ ವ್ಯವಸ್ಥೆಯಲ್ಲಿ ನಮ್ಮ ಸಮಯ ಶಕ್ತಿಯನ್ನೆಲ್ಲಾ ವ್ಯಯಿಸಬೇಕೆಂದು ಸೈತಾನನು ಬಯಸುತ್ತಾನೆ. ಕೆಲವು ಜನರು ಮನೆ, ಕಾರು, ವಿದ್ಯಾಭ್ಯಾಸ ಅಥವಾ ಬರೀ ಮದುವೆಗೆಂದು ಭಾರಿ ಮೊತ್ತದ ಸಾಲ ಮಾಡುತ್ತಾರೆ. ಈ ವಿಷಯದಲ್ಲಿ ನಾವು ಜಾಗ್ರತೆ ವಹಿಸದಿದ್ದರೆ ಅನೇಕ ವರ್ಷಗಳ ವರೆಗೆ ಸಾಲದ ಹೊರೆಯನ್ನು ಹೊತ್ತು ಕಷ್ಟಪಡಬೇಕಾಗುತ್ತದೆ. ನಾವು ನಮ್ಮ ಜೀವನವನ್ನು ಸರಳೀಕರಿಸಿಕೊಂಡು, ಸಾಲ ಮಾಡದೆ, ಕಡಿಮೆ ಹಣ ಖರ್ಚು ಮಾಡಿದರೆ ಪ್ರಾಯೋಗಿಕ ವಿವೇಕ ತೋರಿಸುತ್ತಿದ್ದೇವೆ. ಆಗ ನಮಗೆ ದೇವರ ಸೇವೆ ಮಾಡಲು ಹೆಚ್ಚು ಸಮಯ, ಶಕ್ತಿ ಇರುತ್ತದೆ. ಇಲ್ಲಾ ಅಂದರೆ ಇಂದಿನ ವಾಣಿಜ್ಯ ವ್ಯವಸ್ಥೆಯ ಗುಲಾಮರಾಗಿಬಿಡುತ್ತೇವೆ.—1 ತಿಮೊ. 6:10.
14. ನಮ್ಮ ದೃಢನಿಶ್ಚಯ ಏನಾಗಿರಬೇಕು? ಉದಾಹರಣೆಗಳನ್ನು ಕೊಡಿ.
14 ಜೀವನವನ್ನು ಸರಳವಾಗಿ ಇಡಬೇಕಾದರೆ ನಾವು ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಬೇಕು. ಒಬ್ಬ ಪತಿ ಮತ್ತು ಪತ್ನಿ ತುಂಬ ಲಾಭ ತರುತ್ತಿದ್ದ ದೊಡ್ಡ ವ್ಯಾಪಾರ ನಡೆಸುತ್ತಿದ್ದರು. ಆದರೆ ಅವರಿಗೆ ಪೂರ್ಣ ಸಮಯದ ಸೇವೆಯನ್ನು ಪುನಃ ಆರಂಭಿಸಬೇಕೆಂಬ ಆಸೆ ಇತ್ತು. ಆದ್ದರಿಂದ ತಮ್ಮ ವ್ಯಾಪಾರ, ವಿನೋದಕ್ಕಾಗಿ ಬಳಸುತ್ತಿದ್ದ ದೋಣಿ ಮತ್ತು ಬೇರೆ ವಸ್ತುಗಳನ್ನು ಮಾರಿದರು. ನಂತರ, ನ್ಯೂಯಾರ್ಕಿನ ವಾರ್ವಿಕ್ನಲ್ಲಿ ನಡೆಯುತ್ತಿದ್ದ ಮುಖ್ಯ ಕಾರ್ಯಾಲಯದ ನಿರ್ಮಾಣ ಕೆಲಸದಲ್ಲಿ ಸಹಾಯ ಮಾಡಲು ಮುಂದೆ ಬಂದರು. ಇದು ಅವರಿಗೆ ತುಂಬ ವಿಶೇಷವಾಗಿತ್ತು. ಏಕೆಂದರೆ ತಮ್ಮ ಮಗಳು ಮತ್ತು ಅಳಿಯನೊಂದಿಗೆ ಸೇರಿ ಬೆತೆಲಿನಲ್ಲಿ ಸೇವೆಮಾಡುವ ಅವಕಾಶ ಅವರಿಗೆ ಸಿಕ್ಕಿತ್ತು ಮಾತ್ರವಲ್ಲ ಕೆಲವು ವಾರಗಳ ತನಕ ವಾರ್ವಿಕ್ ನಿರ್ಮಾಣಕಾರ್ಯದಲ್ಲಿ ಸಹಾಯಮಾಡಲು ಬಂದ ಆ ಪತಿಯ ತಂದೆತಾಯಿ ಜೊತೆಯೂ ಕೆಲಸಮಾಡಲು ಸಾಧ್ಯವಾಯಿತು. ಒಬ್ಬ ಪಯನೀಯರ್ ಸಹೋದರಿಗೆ ಅಮೆರಿಕದ ಕೊಲರಾಡೊದಲ್ಲಿ ಒಂದು ಬ್ಯಾಂಕ್ನಲ್ಲಿ ಅಲ್ಪಕಾಲಿಕ ಕೆಲಸ ಸಿಕ್ಕಿತು. ಅವಳ ಕೆಲಸ ನೋಡಿ ಬ್ಯಾಂಕ್ನವರಿಗೆ ಎಷ್ಟು ಖುಷಿಯಾಯಿತೆಂದರೆ ಅವಳಿಗೆ ಪೂರ್ಣ ಸಮಯದ ಕೆಲಸ ಮತ್ತು ಮೂರು ಪಟ್ಟು ಜಾಸ್ತಿ ಸಂಬಳ ಕೊಡಲಿಕ್ಕೆ ಮುಂದಾದರು. ಇದನ್ನು ಒಪ್ಪಿಕೊಂಡರೆ ತಾನು ಸೇವೆಗೆ ಗಮನಕೊಡಲು ಆಗುವುದಿಲ್ಲ ಎಂದು ತಿಳಿದು ಆ ಸಹೋದರಿ ಈ ಆಕರ್ಷಕ ಪ್ರಸ್ತಾಪವನ್ನು ಸ್ವೀಕರಿಸಲಿಲ್ಲ. ಇದೆಲ್ಲಾ ಯೆಹೋವನ ಸೇವಕರು ಮಾಡಿರುವ ಅನೇಕ ತ್ಯಾಗಗಳಿಗೆ ಒಂದೆರಡು ಉದಾಹರಣೆ ಅಷ್ಟೆ. ದೇವರ ರಾಜ್ಯಕ್ಕೆ ಮೊದಲ ಸ್ಥಾನ ಕೊಡಬೇಕೆಂಬ ದೃಢನಿಶ್ಚಯ ನಮಗಿದ್ದರೆ, ದೇವರ ಸ್ನೇಹ ಮತ್ತು ನಿಜವಾದ ಐಶ್ವರ್ಯ ಪ್ರಾಪಂಚಿಕ ವಸ್ತುಗಳಿಗಿಂತ ಮುಖ್ಯ ಎಂದು ತೋರಿಸುತ್ತೇವೆ.
ಹಣ ಆಸ್ತಿ ವಿಫಲಗೊಳ್ಳುವಾಗ
15. ಯಾವ ಐಶ್ವರ್ಯಗಳಿಂದ ನಮಗೆ ಅತ್ಯಧಿಕ ಸಂತೃಪ್ತಿ ಸಿಗುತ್ತದೆ?
15 ಒಬ್ಬರ ಹತ್ತಿರ ಹಣ, ಆಸ್ತಿ ಇದ್ದರೆ ಅದಕ್ಕೆ ದೇವರ ಆಶೀರ್ವಾದವೇ ಕಾರಣ ಎಂದು ಹೇಳಲಿಕ್ಕಾಗಲ್ಲ. ಯೆಹೋವನು ಆಶೀರ್ವದಿಸುವುದು “ಸತ್ಕಾರ್ಯಗಳಲ್ಲಿ ಐಶ್ವರ್ಯವಂತರಾಗಿರುವ” ವ್ಯಕ್ತಿಗಳನ್ನು. (1 ತಿಮೊಥೆಯ 6:17-19 ಓದಿ.) ಉದಾಹರಣೆಗೆ, ಲೂಚೀಯಾ ಎಂಬ ಸಹೋದರಿಗೆ ಅಲ್ಬೇನಿಯದಲ್ಲಿ ರಾಜ್ಯ ಪ್ರಚಾರಕರ ಅಗತ್ಯ ಇದೆ ಎಂದು ಗೊತ್ತಾಯಿತು.c ಆದ್ದರಿಂದ ಅವರು 1993ರಲ್ಲಿ ಇಟಲಿಯಿಂದ ಅಲ್ಬೇನಿಯಕ್ಕೆ ಸ್ಥಳಾಂತರಿಸಿದರು. ಅಲ್ಲಿ ಹೋದಾಗ ಅವರಿಗೊಂದು ಕೆಲಸ ಇರಲಿಲ್ಲ, ಆದರೆ ಯೆಹೋವನು ನೋಡಿಕೊಳ್ಳುತ್ತಾನೆ ಎಂದು ಭರವಸೆ ಇಟ್ಟರು. ಅಲ್ಬೇನಿಯನ್ ಭಾಷೆ ಕಲಿತರು. 60ಕ್ಕಿಂತ ಹೆಚ್ಚು ಜನಕ್ಕೆ ಸತ್ಯ ಕಲಿಸಿ ಸಮರ್ಪಣೆ ಮಾಡಿಕೊಳ್ಳಲು ಸಹಾಯ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲಿ ಸಾರುವಾಗ ನಮ್ಮೆಲ್ಲರಿಗೂ ಇದೇ ರೀತಿಯ ಫಲಿತಾಂಶಗಳು ಸಿಗಲಿಕ್ಕಿಲ್ಲ. ಆದರೆ ಯೆಹೋವನ ಬಗ್ಗೆ ಕಲಿತು ಆತನ ಸ್ನೇಹಿತರಾಗಲು ನಾವು ಬೇರೆಯವರಿಗೆ ಏನೇ ಸಹಾಯ ಮಾಡಿದರೂ ಅದರಿಂದ ಶಾಶ್ವತ ಪ್ರಯೋಜನ ಸಿಗುತ್ತದೆ.—ಮತ್ತಾ. 6:20.
16. (ಎ) ಈಗಿರುವ ವಾಣಿಜ್ಯ ವ್ಯವಸ್ಥೆಗೆ ಏನಾಗಲಿದೆ? (ಬಿ) ಇದು ಹಣ-ಆಸ್ತಿಯ ಬಗ್ಗೆ ನಮಗಿರುವ ದೃಷ್ಟಿಕೋನವನ್ನು ಹೇಗೆ ಪ್ರಭಾವಿಸಬೇಕು?
16 ಈಗಿರುವ ವಾಣಿಜ್ಯ ವ್ಯವಸ್ಥೆ ಕೈಕೊಡುತ್ತೆ ಎಂದು ಯೇಸು ಸ್ಪಷ್ಟವಾಗಿ ಹೇಳಿದ್ದಾನೆ. ಆತನು ಅನೀತಿಯ ಐಶ್ವರ್ಯಗಳು ವಿಫಲಗೊಳ್ಳುವುದಾದರೆ ಅನ್ನಲಿಲ್ಲ, ವಿಫಲಗೊಳ್ಳುವಾಗ ಎಂದು ಹೇಳಿದ್ದಾನೆ. (ಲೂಕ 16:9) ಈ ಕಡೇ ದಿವಸಗಳಲ್ಲಿ ಕೆಲವು ಬ್ಯಾಂಕ್ಗಳು ದಿವಾಳಿಯಾಗಿವೆ, ಕೆಲವು ದೇಶಗಳು ಆರ್ಥಿಕ ಬಿಕ್ಕಟ್ಟನ್ನು ಎದುರಿಸಿವೆ. ಮುಂದೆ ಇನ್ನೂ ಕಷ್ಟಕಾಲ ಕಾದಿದೆ. ಸೈತಾನನ ವ್ಯವಸ್ಥೆಯ ಭಾಗವಾಗಿರುವ ರಾಜಕೀಯ, ಧಾರ್ಮಿಕ, ವಾಣಿಜ್ಯ ವ್ಯವಸ್ಥೆಗಳು ಖಂಡಿತ ವಿಫಲಗೊಳ್ಳುತ್ತವೆ. ಈ ಲೋಕದ ವಾಣಿಜ್ಯ ವ್ಯವಸ್ಥೆಗೆ ತುಂಬ ಪ್ರಾಮುಖ್ಯವಾಗಿರುವ ಬೆಳ್ಳಿಬಂಗಾರಕ್ಕೆ ಯಾವುದೇ ಬೆಲೆಯಿಲ್ಲದಿರುವ ಸಮಯ ಬರುತ್ತದೆಂದು ಪ್ರವಾದಿಗಳಾದ ಯೆಹೆಜ್ಕೇಲ, ಚೆಫನ್ಯರು ಮುಂತಿಳಿಸಿದ್ದಾರೆ. (ಯೆಹೆ. 7:19; ಚೆಫ. 1:18) ನೆನಸಿ, ಈ ಲೋಕದ ಅನೀತಿಯ ಐಶ್ವರ್ಯ ಸಂಪಾದಿಸಲಿಕ್ಕಾಗಿ ನಿಜವಾದ ಐಶ್ವರ್ಯವನ್ನು ಕೈಬಿಟ್ಟೆವೆಂದು ನಮ್ಮ ಜೀವನದ ಕೊನೆಗೆ ಬಂದಾಗ ಗೊತ್ತಾದರೆ ಹೇಗಾಗಬಹುದು? ಇದು ಜೀವನಪೂರ್ತಿ ದುಡ್ಡು ಮಾಡುವುದರ ಹಿಂದೆನೇ ಇದ್ದ ಒಬ್ಬ ವ್ಯಕ್ತಿಗೆ ತಾನು ಸಂಪಾದಿಸಿರುವುದೆಲ್ಲಾ ಖೋಟಾ ನೋಟು ಎಂದು ಗೊತ್ತಾದರೆ ಹೇಗನಿಸುವುದೋ ಹಾಗಿರುವುದು. (ಜ್ಞಾನೋ. 18:11) ಈ ಲೋಕದ ಹಣ-ಆಸ್ತಿ ಖಂಡಿತ ವಿಫಲವಾಗಲಿದೆ. ಆದ್ದರಿಂದ ಸ್ವರ್ಗದಲ್ಲಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಲು ನಿಮ್ಮ ಹಣ-ಆಸ್ತಿಯನ್ನು ಉಪಯೋಗಿಸಲು ಮರೆಯಬೇಡಿ. ನಾವು ಯೆಹೋವನಿಗಾಗಿ, ಆತನ ರಾಜ್ಯಕ್ಕಾಗಿ ಅದೇನೇ ಮಾಡಿದರೂ ನಿಜವಾಗಿ ಸಂತೋಷವಾಗಿರುತ್ತೇವೆ.
17, 18. ದೇವರ ಸ್ನೇಹಿತರು ಏನನ್ನು ಎದುರುನೋಡುತ್ತಿದ್ದಾರೆ?
17 ದೇವರ ರಾಜ್ಯದಲ್ಲಿ ಯಾರೂ ಬಾಡಿಗೆ ಕೊಡಬೇಕಾಗಿಲ್ಲ, ಸಾಲ ಪಡೆಯಬೇಕಾಗಿಲ್ಲ. ಅಲ್ಲಿ ತುಂಬ ಆಹಾರ ಸಿಗುತ್ತದೆ, ಅದೂ ಉಚಿತವಾಗಿ ಸಿಗುತ್ತದೆ. ಅಲ್ಲಿ ವೈದ್ಯರಿಗಾಗಿ, ಔಷಧಿಗಾಗಿ ದುಡ್ಡು ಸುರಿಯುವ ಆವಶ್ಯಕತೆ ಇಲ್ಲ. ಯೆಹೋವನ ಸ್ನೇಹಿತರು ಈ ಭೂಮಿಯ ಅತ್ಯುತ್ತಮ ಉತ್ಪನ್ನಗಳನ್ನು ಆನಂದಿಸುವರು. ಬೆಳ್ಳಿ, ಬಂಗಾರ, ರತ್ನಗಳನ್ನು ಅವುಗಳ ಸೌಂದರ್ಯಕ್ಕಾಗಿ ಬಳಸಲಾಗುವುದು, ಒಬ್ಬರನ್ನು ಐಶ್ವರ್ಯವಂತರನ್ನಾಗಿ ಮಾಡಲಿಕ್ಕಲ್ಲ. ಸುಂದರವಾದ ಮನೆಗಳನ್ನು ಕಟ್ಟಲು ಉತ್ತಮ ಗುಣಮಟ್ಟದ ಮರ, ಕಲ್ಲು, ಲೋಹಗಳು ಉಚಿತವಾಗಿ ಸಿಗುವವು. ನಮ್ಮ ಸ್ನೇಹಿತರು ದುಡ್ಡಿಗೋಸ್ಕರ ಅಲ್ಲ, ಸ್ವಂತ ಇಷ್ಟದಿಂದ ಬಂದು ನಮಗೆ ಸಹಾಯ ಮಾಡುವರು. ಈ ಭೂಮಿಯಲ್ಲಿ ಇರುವುದೆಲ್ಲವನ್ನೂ ನಾವೆಲ್ಲರೂ ಹಂಚಿಕೊಂಡು ಆನಂದಿಸುವೆವು.
18 ಇದು, ಸ್ವರ್ಗದಲ್ಲಿರುವವರನ್ನು ಸ್ನೇಹಿತರು ಮಾಡಿಕೊಂಡರೆ ನಮಗೆ ಸಿಗಲಿರುವ ಬೆಲೆಕಟ್ಟಲಾಗದ ಪ್ರತಿಫಲದ ಕಿರುನೋಟ ಅಷ್ಟೆ. ಭೂಮಿಯ ಮೇಲಿರುವ ಯೆಹೋವನ ಆರಾಧಕರಿಗೆ ಯೇಸು, “ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ ಬನ್ನಿರಿ; ಲೋಕದ ಆದಿಯಿಂದ ನಿಮಗಾಗಿ ಸಿದ್ಧಪಡಿಸಲ್ಪಟ್ಟಿರುವ ರಾಜ್ಯವನ್ನು ಬಾಧ್ಯತೆಯಾಗಿ ಪಡೆದುಕೊಳ್ಳಿರಿ” ಎಂದು ಹೇಳುವನು. ಇದನ್ನು ಕೇಳಿ ಯೆಹೋವನ ಆರಾಧಕರು ಮಹಾ ಸಂತೋಷದಿಂದ ಆರ್ಭಟಿಸುವರು.—ಮತ್ತಾ. 25:34.
a ಇಲ್ಲಿ ಬಳಸಲಾಗಿರುವ ವಾಣಿಜ್ಯ ವ್ಯವಸ್ಥೆ ಎಂಬ ಪದ ಸೈತಾನನ ಲೋಕದ ಒಂದು ಭಾಗವಾಗಿದೆ ಮತ್ತು ಅದು ಹಣ ಮಾಡುವುದಕ್ಕೆ ಪ್ರಾಧಾನ್ಯತೆ ಕೊಡುತ್ತದೆ, ಜನರಿಗೆ ನಿಜವಾಗಿ ಅಗತ್ಯವಿಲ್ಲದ ವಸ್ತುಗಳನ್ನೂ ಖರೀದಿಸುವಂತೆ ಉತ್ತೇಜಿಸುತ್ತದೆ.
b ಮನೆವಾರ್ತೆಯವನ ಮೇಲೆ ಹಾಕಲಾದ ದೂರು ಸತ್ಯವೋ ಸುಳ್ಳೋ ಯೇಸು ಹೇಳಲಿಲ್ಲ. ಲೂಕ 16:1ರಲ್ಲಿರುವ “ದೂರು” ಎಂಬ ಪದದಿಂದ ಮನೆವಾರ್ತೆಯವನ ಮೇಲೆ ಯಾರೋ ಸುಳ್ಳಾರೋಪ ಹಾಕುತ್ತಿದ್ದಾರೆ ಎಂಬರ್ಥ ಸಹ ಬರುತ್ತದೆ. ಆ ಮನೆವಾರ್ತೆಯವನು ಯಾಕೆ ಕೆಲಸ ಕಳಕೊಂಡ ಎಂಬುದರ ಬಗ್ಗೆ ಮಾತಾಡುವ ಬದಲು ಯೇಸು ಅವನ ಪ್ರತಿಕ್ರಿಯೆಗೆ ಗಮನ ಕೊಟ್ಟನು.
c ಲೂಚೀಯಾ ಮೂಸಾನೆಟ್ ಅವರ ಜೀವನ ಕಥೆ ಜೂನ್ 22, 2003ರ ಎಚ್ಚರ! ಪತ್ರಿಕೆಯ ಪುಟ 18-22ರಲ್ಲಿದೆ.