ಅಧ್ಯಾಯ 88
ಐಶ್ವರ್ಯವಂತನು ಮತ್ತು ಲಾಜರ
ಯೇಸುವು ತನ್ನ ಶಿಷ್ಯರೊಂದಿಗೆ ಪ್ರಾಪಂಚಿಕ ಐಶ್ವರ್ಯಗಳನ್ನು ಯೋಗ್ಯವಾಗಿ ಬಳಸುವದರ ಕುರಿತಾಗಿ ಮಾತಾಡುತ್ತಾ, ನಾವು ಅವುಗಳ ಸೇವಕರಾಗಿ ಮತ್ತು ಅದೇ ಸಮಯದಲ್ಲಿ ದೇವರ ಸೇವಕರಾಗಿಯೂ ಇರಲು ಸಾಧ್ಯವಿಲ್ಲವೆಂದು ವಿವರಿಸುತ್ತಿದ್ದನು. ಫರಿಸಾಯರು ಕೂಡ ಆಲಿಸುತ್ತಿದ್ದರು ಮತ್ತು ಅವರು ಹಣದಾಸೆಯುಳ್ಳವರಾಗಿದ್ದದರಿಂದ ಯೇಸುವನ್ನು ಹಾಸ್ಯಮಾಡಿದರು. ಆದುದರಿಂದ ಅವನು ಅವರಿಗಂದದ್ದು: “ಮನುಷ್ಯರ ಮುಂದೆ ನೀತಿವಂತರೆಂದು ತೋರಿಸಿಕೊಳ್ಳುವವರು ನೀವು; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳುಕೊಂಡಿದ್ದಾನೆ. ಮನುಷ್ಯರಲ್ಲಿ ಶ್ರೇಷ್ಠವೆನಿಸಿಕೊಳ್ಳುವಂಥದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.”
ಐಹಿಕ ವಸ್ತುಗಳ, ರಾಜಕೀಯ ಶಕ್ತಿಗಳ ಮತ್ತು ಧಾರ್ಮಿಕ ಹತೋಟಿ ಮತ್ತು ಪ್ರಭಾವಗಳ ವಿಷಯಗಳಲ್ಲಿ ಐಶ್ವರ್ಯವಂತರಾಗಿರುವವರಲ್ಲಿ ಅಡಿಮೇಲು ಪರಿವರ್ತನೆಯಾಗುವ ಸಮಯವು ಬಂದಿತ್ತು. ಅವರು ಕೆಳಗೆ ಹಾಕಲ್ಪಡಲಿದ್ದರು. ಆದಾಗ್ಯೂ, ತಮ್ಮ ಆತ್ಮಿಕ ಆವಶ್ಯಕತೆಗಳನ್ನು ತಿಳಿದುಕೊಂಡಿರುವ ಜನರು ಮೇಲಕ್ಕೇರಿಸಲ್ಪಡಲಿದ್ದರು. ಯೇಸುವು ಫರಿಸಾಯರಿಗೆ ಅಂಥ ಒಂದು ಪರಿವರ್ತನೆಯ ಕುರಿತು ತಿಳಿಸುತ್ತಾ ಅಂದದ್ದು:
“ಧರ್ಮಶಾಸ್ತ್ರವೂ ಪ್ರವಾದಿಗಳೂ [ಸ್ನಾನಿಕನಾದ] ಯೋಹಾನನ ತನಕವೇ. ಈಚೆಗೆ ದೇವರ ರಾಜ್ಯವು ಸುವಾರ್ತೆಯಾಗಿ ಸಾರಲ್ಪಡುತ್ತಾ ಇದೆ, ಮತ್ತು ಎಲ್ಲಾ ವಿಧದ ಜನರು ಅದರೆಡೆಗೆ ಮುನ್ನುಗ್ಗುತ್ತಾ ಇದ್ದಾರೆ. ಧರ್ಮಶಾಸ್ತ್ರದೊಳಗಿನ ಒಂದು ಗುಡಸಾದರೂ ಬಿದ್ದುಹೋಗುವದಕ್ಕಿಂತಲೂ ಆಕಾಶವೂ ಭೂಮಿಯೂ ಅಳಿದುಹೋಗುವದು ಸುಲಭ.”
ಮೋಶೆಯ ನಿಯಮಗಳನ್ನು ಪರಿಪಾಲಿಸುತ್ತೇವೆ ಎಂದು ಹೇಳಿಕೊಳ್ಳುವದರಲ್ಲಿ ಶಾಸ್ತ್ರಿಗಳೂ ಫರಿಸಾಯರೂ ಹೆಮ್ಮೆ ಪಡುತ್ತಿದ್ದರು. ಯೆರೂಸಲೇಮಿನಲ್ಲಿ ಯೇಸುವು ಒಬ್ಬ ಮನುಷ್ಯನಿಗೆ ಅದ್ಭುತವಾಗಿ ಕಣ್ಣುಬರುವಂತೆ ಮಾಡಿದಾಗ ಅವರು ಹೆಮ್ಮೆ ಪಟ್ಟುಕೊಂಡಿದ್ದನ್ನು ನೆನಪಿಗೆ ತನ್ನಿರಿ: “ನಾವು ಮೋಶೆಯ ಶಿಷ್ಯರು; ಮೋಶೆಯ ಸಂಗಡ ದೇವರು ಮಾತಾಡಿದನೆಂದು ನಾವು ಬಲ್ಲೆವು.” ದೇವರ ನೇಮಿತ ಅರಸನಾದ ಯೇಸು ಕ್ರಿಸ್ತನ ಕಡೆಗೆ ನಮ್ರ ಜನರನ್ನು ನಡಿಸುವ ಅದರ ಯೋಜಿತ ಉದ್ದೇಶವನ್ನು ಮೋಶೆಯ ನಿಯಮವು ಈಗ ನೆರವೇರಿಸಿರುತ್ತದೆ. ಆದುದರಿಂದ ಯೋಹಾನನ ಶುಶ್ರೂಷೆಯ ಆರಂಭದಲ್ಲಿ ಸಕಲ ರೀತಿಯ ಜನರು, ವಿಶೇಷವಾಗಿ ನಮ್ರರೂ, ಬಡವರೂ, ದೇವರ ರಾಜ್ಯದ ಪ್ರಜೆಗಳಾಗಲು ಸ್ವತಃ ಹೆಣಗಾಡುತ್ತಿದ್ದರು.
ಮೋಶೆಯ ನಿಯಮಶಾಸ್ತ್ರವು ಈಗ ನೆರವೇರಿರುವದರಿಂದ, ಅದನ್ನು ಪರಿಪಾಲಿಸುವ ಹಂಗು ಈಗ ತೆಗೆಯಲ್ಪಟ್ಟಿರುತ್ತದೆ. ನಿಯಮಶಾಸ್ತ್ರವು ಹಲವಾರು ಕಾರಣಗಳಿಂದ ವಿವಾಹವಿಚ್ಛೇದವನ್ನು ಅನುಮತಿಸುತ್ತದೆ, ಆದರೆ ಯೇಸುವು ಈಗ ಹೇಳುವದು: “ತನ್ನ ಹೆಂಡತಿಯನ್ನು ಬಿಟ್ಟು ಬೇರೊಬ್ಬಳನ್ನು ಮದುವೆಮಾಡಿಕೊಳ್ಳುವ ಪ್ರತಿಯೊಬ್ಬನು ವ್ಯಭಿಚಾರ ಮಾಡುವವನಾಗಿದ್ದಾನೆ; ಮತ್ತು ಗಂಡಬಿಟ್ಟವಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರಮಾಡುವವನಾಗಿದ್ದಾನೆ.” ಇಂಥ ಉಚ್ಛಾರಣೆಗಳು ಫರಿಸಾಯರನ್ನು, ವಿಶೇಷವಾಗಿ ಅವರು ಅನೇಕ ನಿಲುವುಗಳ ಮೇಲೆ ವಿವಾಹವಿಚ್ಛೇದಗಳನ್ನು ಅನುಮತಿಸುತ್ತಿದ್ದುದರಿಂದ ಎಷ್ಟೊಂದು ಕೆರಳಿಸಿರಬೇಕು!
ಫರಿಸಾಯರ ಕಡೆಗೆ ತನ್ನ ಹೇಳಿಕೆಗಳನ್ನು ಮುಂದುವರಿಸುತ್ತಾ, ಅಂತಸ್ತು ಇಲ್ಲವೆ ಸನ್ನಿವೇಶಗಳು ನಾಟಕೀಯ ರೀತಿಯಲ್ಲಿ ಕಟ್ಟಕಡೆಗೆ ಪರಿವರ್ತನೆ ಹೊಂದಿದ ಇಬ್ಬರು ಮನುಷ್ಯರನ್ನು ತೋರಿಸುವ ಒಂದು ಸಾಮ್ಯವನ್ನು ಯೇಸುವು ವರ್ಣಿಸುತ್ತಾನೆ. ಈ ಮನುಷ್ಯರಿಂದ ಮತ್ತು ಅವರ ಸನ್ನಿವೇಶಗಳ ಬದಲಾವಣೆಯಿಂದ ಪ್ರತಿನಿಧಿಸಲ್ಪಡುವವರು ಯಾರು ಅಥವಾ ಏನು ಎಂದು ನೀವು ನಿರ್ಧರಿಸಶಕ್ತರೋ?
“ಐಶ್ವರ್ಯವಂತನಾದ ಒಬ್ಬ ಮನುಷ್ಯನಿದ್ದನು,” ಯೇಸುವು ವಿವರಿಸುವದು, “ಅವನು ಸಕಲಾತಿ ನಯವಾದ ನಾರುಮಡಿ ಮುಂತಾದ ವಸ್ತ್ರಗಳನ್ನು ಧರಿಸಿಕೊಂಡು ಪ್ರತಿದಿನವೂ ವೈಭವದೊಡನೆ ಸುಖಸಂತೋಷಪಡುತ್ತಿದ್ದನು. ಅವನ ಮನೇಬಾಗಲಲ್ಲಿ ಲಾಜರನೆಂಬ ಒಬ್ಬ ಭಿಕ್ಷಗಾರನು ಬಿದ್ದುಕೊಂಡಿದ್ದನು. ಇವನು ಮೈತುಂಬಾ ಹುಣ್ಣೆದ್ದವನು; ಐಶ್ವರ್ಯವಂತನ ಮೇಜಿನಿಂದ ಬಿದ್ದ ಎಂಜಲನ್ನು ತಿಂದು ಹಸಿವು ತೀರಿಸಿಕೊಳ್ಳಬೇಕೆಂದಿದ್ದನು; ಇಷ್ಟು ಮಾತ್ರವಲ್ಲದೆ ನಾಯಿಗಳು ಸಹ ಬಂದು ಅವನ ಹುಣ್ಣುಗಳನ್ನು ನೆಕ್ಕುವವು.”
ಇಲ್ಲಿ ಯೇಸುವು ಐಶ್ವರ್ಯವಂತ ಮನುಷ್ಯನನ್ನು ಯೆಹೂದ್ಯರ ಧಾರ್ಮಿಕ ಮುಖಂಡರುಗಳನ್ನು ಪ್ರತಿನಿಧಿಸಲು ಬಳಸಿದನು. ಇದರಲ್ಲಿ ಕೇವಲ ಫರಿಸಾಯರು ಮತ್ತು ಶಾಸ್ತ್ರಿಗಳು ಮಾತ್ರವಲ್ಲ, ಸದ್ದುಕಾಯರು ಮತ್ತು ಮಹಾಯಾಜಕರುಗಳೂ ಇದ್ದರು. ಆತ್ಮಿಕ ಸುಯೋಗ ಮತ್ತು ಅವಕಾಶಗಳಿಂದ ಅವರು ಶ್ರೀಮಂತರಾಗಿದ್ದರು ಮತ್ತು ಅವರು ಈ ಐಶ್ವರ್ಯವಂತನು ವರ್ತಿಸಿದಂತೆ ತಮ್ಮನ್ನು ನಡಿಸಿಕೊಳ್ಳುತ್ತಿದ್ದರು. ಅವರ ರಾಜಭೋಗದ ಕೆನ್ನೀಲಿಯ ವಸ್ತ್ರಗಳು ಅವರ ಮೆಚ್ಚಿಕೆಯ ಸ್ಥಾನವನ್ನು ಪ್ರತಿನಿಧಿಸುತ್ತಿತ್ತು ಮತ್ತು ಬಿಳಿಯ ನಾರುಮಡಿಯು ಅವರ ಸ್ವ-ನೀತಿಯನ್ನು ಚಿತ್ರಿಸುತ್ತಿತ್ತು.
ಈ ಹೆಮ್ಮೆಯ ಐಶ್ವರ್ಯವಂತ ವರ್ಗವು ಬಡವರಾದ, ಸಾಮಾನ್ಯ ಜನರನ್ನು ಅತೀ ಕೀಳುದೃಷ್ಟಿಯಿಂದ ವೀಕ್ಷಿಸುತ್ತಾ, ಅವರನ್ನು ‘ಆಮ್ ಹಾ-‘ರೆಟ್ಸ್ ಇಲ್ಲವೆ ಭೂಮಿಯ ಜನರು ಎಂದು ಕರೆಯುತ್ತಿದ್ದರು. ಭಿಕ್ಷಗಾರನಾದ ಲಾಜರನು ಈ ಜನರನ್ನು ಪ್ರತಿನಿಧಿಸುತ್ತಿದ್ದನು. ಅವರಿಗೆ ಯೋಗ್ಯವಾದ ಆತ್ಮಿಕ ಆಹಾರ ಮತ್ತು ಸುಯೋಗಗಳನ್ನು ಧಾರ್ಮಿಕ ಮುಖಂಡರು ನಿರಾಕರಿಸುತ್ತಿದ್ದರು. ಆದಕಾರಣ, ಮೈತುಂಬಾ ಹುಣ್ಣೆದ್ದವನಾದ ಲಾಜರನಂತೆ, ಸಾಮಾನ್ಯ ಜನರು ಆತ್ಮಿಕವಾಗಿ ರೋಗಗ್ರಸ್ತರು ಮತ್ತು ನಾಯಿಗಳೊಂದಿಗೆ ಮಾತ್ರ ಸಹವಾಸ ಮಾಡಲು ಯೋಗ್ಯರು ಎಂಬಂತೆ ಕೀಳು ನೋಟದಿಂದ ನೋಡಲ್ಪಡುತ್ತಿದ್ದರು. ಆದರೂ, ಲಾಜರನ ವರ್ಗದವರು ಆತ್ಮಿಕ ಆಹಾರಕ್ಕಾಗಿ ಹಸಿದವರೂ, ಬಾಯಾರಿದವರೂ ಆಗಿದ್ದು, ಐಶ್ವರ್ಯವಂತನ ಮೇಜಿನಿಂದ ಕೆಳಗೆ ಬೀಳುತ್ತಿದ್ದ ಆತ್ಮಿಕ ಆಹಾರದ ಎಂಜಲನ್ನಾದರೂ ಪಡೆಯಲು ಮನೇಬಾಗಲಲ್ಲಿ ಬಿದ್ದು ಕೊಂಡಿದ್ದರು.
ಈಗ ಐಶ್ವರ್ಯವಂತನ ಮತ್ತು ಲಾಜರನ ಪರಿಸ್ಥಿತಿಗಳಲ್ಲಿ ಆಗುವ ಬದಲಾವಣೆಗಳನ್ನು ವಿವರಿಸುವದನ್ನು ಯೇಸುವು ಮುಂದುವರಿಸುತ್ತಾನೆ. ಈ ಬದಲಾವಣೆಗಳು ಯಾವುವು, ಮತ್ತು ಅವು ಏನನ್ನು ಪ್ರತಿನಿಧಿಸುತ್ತವೆ?
ಐಶ್ವರ್ಯವಂತನು ಮತ್ತು ಲಾಜರನು ಒಂದು ಬದಲಾವಣೆಯನ್ನು ಅನುಭವಿಸುತ್ತಾರೆ
ಆತ್ಮಿಕ ಸುಯೋಗ ಮತ್ತು ಅವಕಾಶಗಳಿಂದ ಮೆಚ್ಚಿಕೆಯನ್ನು ಪಡೆದ ಧಾರ್ಮಿಕ ಮುಖಂಡರುಗಳನ್ನು ಐಶ್ವರ್ಯವಂತನು ಪ್ರತಿನಿಧಿಸುತ್ತಾನೆ ಮತ್ತು ಲಾಜರನು ಆತ್ಮಿಕ ಆಹಾರಪೋಷಣೆಗಾಗಿ ಹಸಿದಿರುವ ಸಾಮಾನ್ಯ ಜನರನ್ನು ಚಿತ್ರಿಸುತ್ತಾನೆ. ಯೇಸುವು ಅವನ ಕಥೆಯನ್ನು ಮುಂದುವರಿಸುತ್ತಾ, ಈ ಮನುಷ್ಯರ ಪರಿಸ್ಥಿತಿಗಳಲ್ಲಿ ಆದ ನಾಟಕೀಯ ಬದಲಾವಣೆಗಳನ್ನು ವರ್ಣಿಸುತ್ತಾನೆ.
“ಹೀಗಿರುವಲ್ಲಿ ಸ್ವಲ್ಪ ಸಮಯದ ಮೇಲೆ,” ಯೇಸುವು ಹೇಳುವದು, “ಆ ಭಿಕ್ಷಗಾರನು ಸತ್ತನು; ದೇವದೂತರು ಅವನನ್ನು ತೆಗೆದುಕೊಂಡು ಹೋಗಿ ಅಬ್ರಹಾಮನ ಎದೆಗೆ ಒರಗಿಸಿದರು. ಆ ಐಶ್ವರ್ಯವಂತನು ಸಹ ಸತ್ತನು; ಅವನನ್ನು ಹೂಣಿಟ್ಟರು. ಮತ್ತು ಅವನು ಹೇಡಿಸಿನೊಳಗೆ [ಪಾತಾಳ] ಯಾತನೆಪಡುತ್ತಾ ಇರುವಲ್ಲಿ ಕಣ್ಣೆತ್ತಿ ದೂರದಿಂದ ಅಬ್ರಹಾಮನನ್ನೂ ಇವನ ಎದೆಗೆ ಒರಗಿಕೊಂಡಿದ್ದ ಲಾಜರನನ್ನೂ ನೋಡಿದನು.” (NW)
ಐಶ್ವರ್ಯವಂತನು ಮತ್ತು ಲಾಜರನು ನೈಜವ್ಯಕ್ತಿಗಳಲ್ಲ, ಬದಲು ಜನರ ಬೇರೆ ಬೇರೆ ವರ್ಗಗಳಿಗೆ ಸಾಂಕೇತಿಕವಾಗಿರುವ ಕಾರಣ, ಅವರ ಮರಣಗಳು ಕೂಡಾ ತರ್ಕಬದ್ಧವಾಗಿ ಸಾಂಕೇತಿಕವಾಗಿರಬೇಕು. ಅವರ ಮರಣಗಳು ಏನನ್ನು ಸಾಂಕೇತಿಕವಾಗಿ ತಿಳಿಸಿದವು ಯಾ ಪ್ರತಿನಿಧಿಸಿದವು?
‘ಧರ್ಮಶಾಸ್ತ್ರವೂ ಪ್ರವಾದಿಗಳೂ ಸ್ನಾನಿಕನಾದ ಯೋಹಾನನ ತನಕವೇ. ಈಚೆಗೆ ದೇವರ ರಾಜ್ಯವು ಸುವಾರ್ತೆಯಾಗಿ ಸಾರಲ್ಪಡುತ್ತಾ ಇದೆ’ ಎಂದು ಹೇಳುವದರ ಮೂಲಕ ಪರಿಸ್ಥಿತಿಗಳ ಒಂದು ಬದಲಾವಣೆಯ ಕಡೆಗೆ ಯೇಸುವು ನಿರ್ದೇಶಿಸಿ ಈಗಾಗಲೇ ಮಾತಾಡಿದ್ದನು. ಆದಕಾರಣ, ಯೋಹಾನನ ಮತ್ತು ಯೇಸುವಿನ ಸಾರುವಿಕೆಯೊಂದಿಗೆ, ಐಶ್ವರ್ಯವಂತನೂ, ಲಾಜರನು ತಮ್ಮ ಮೊದಲಿನ ಪರಿಸ್ಥಿತಿಗಳಿಗೆ ಇಲ್ಲವೆ ಸನ್ನಿವೇಶಗಳಿಗೆ ಇಬ್ಬರೂ ಸತ್ತಂತಾದರು.
ನಮ್ರರಾದ ಪಶ್ಚಾತ್ತಾಪಿ ಲಾಜರನ ವರ್ಗದವರು ತಮ್ಮ ಹಿಂದಿನ ಆತ್ಮಿಕವಾಗಿ ವಂಚಿಸಲ್ಪಟ್ಟ ಸ್ಥಿತಿಗೆ ಸತ್ತರು ಮತ್ತು ದೈವಿಕ ಅನುಗ್ರಹದ ಸ್ಥಾನಕ್ಕೇರಿಸಲ್ಪಟ್ಟರು. ಮೊದಲು ಅವರು, ಆತ್ಮಿಕ ಮೇಜಿನಿಂದ ಬೀಳುವ ಕೊಂಚವೇ ತುಣುಕುಗಳಿಗಾಗಿ ಧಾರ್ಮಿಕ ಮುಖಂಡರುಗಳನ್ನು ನಿರೀಕ್ಷಿಸುತ್ತಿದ್ದರಾದರೆ, ಈಗ ಯೇಸುವಿನಿಂದ ಕೊಡಲ್ಪಡುತ್ತಿದ್ದ ಆತ್ಮಿಕ ಸತ್ಯತೆಗಳು ಅವರ ಆವಶ್ಯಕತೆಗಳನ್ನು ತೃಪ್ತಿಪಡಿಸುತ್ತಿದ್ದವು. ಅವರು ಈ ರೀತಿಯಲ್ಲಿ ಮಹಾ ಅಬ್ರಹಾಮನಾದ ಯೆಹೋವ ದೇವರ ಎದೆಗೆ ಅಂದರೆ ಅನುಗ್ರಹಿತ ಸ್ಥಾನಕ್ಕೆ ತರಲ್ಪಟ್ಟರು.
ಇನ್ನೊಂದು ಪಕ್ಕದಲ್ಲಿ, ಐಶ್ವರ್ಯವಂತನ ವರ್ಗದಲ್ಲಿ ಕೂಡಿರುವವರು ದೈವಿಕ ಅನಾನುಗ್ರಹದ ಕೆಳಗೆ ಬಂದರು ಯಾಕಂದರೆ ಯೇಸುವಿನಿಂದ ಕಲಿಸಲ್ಪಟ್ಟ ರಾಜ್ಯದ ಸಂದೇಶವನ್ನು ಸ್ವೀಕರಿಸಲು ಅವರು ಪಟ್ಟುಹಿಡಿದು ನಿರಾಕರಿಸಿದರು. ಆ ಮೂಲಕ, ಅನುಗ್ರಹದ ಸ್ಥಾನದಲ್ಲಿದ್ದೇವೆ ಎಂದು ಭಾಸವಾಗುತ್ತಿದ್ದ ತಮ್ಮ ಹಿಂದಿನ ಸ್ಥಾನಕ್ಕೆ ಸತ್ತಂತಾದರು. ವಾಸ್ತವದಲ್ಲಿ, ಅವರು ಲಾಕ್ಷಣಿಕವಾದ ಯಾತನೆಯಲ್ಲಿರುವಂತೆ ಹೇಳಲ್ಪಟ್ಟಿದ್ದಾರೆ. ಈಗ ಐಶ್ವರ್ಯವಂತನು ಮಾತಾಡುವದನ್ನು ಕೇಳಿರಿ:
“ತಂದೆಯೇ, ಅಬ್ರಹಾಮನೇ, ನನ್ನ ಮೇಲೆ ದಯವಿಟ್ಟು ಲಾಜರನನ್ನು ಕಳುಹಿಸು; ಅವನು ತನ್ನ ತುದಿಬೆರಳನ್ನು ನೀರಿನಲ್ಲಿ ಅದ್ದಿ ನನ್ನ ನಾಲಿಗೆಯನ್ನು ತಣ್ಣಗೆ ಮಾಡಲಿ; ಈ ಉರಿಯಲ್ಲಿ ಸಂಕಟ ಪಡುತ್ತೇನೆ.” ಯೇಸುವಿನ ಶಿಷ್ಯರಿಂದ ಸಾರಲ್ಪಟ್ಟ ದೇವರ ಬೆಂಕಿಯಂಥ ನ್ಯಾಯತೀರ್ಪಿನ ಸಂದೇಶಗಳು ಐಶ್ವರ್ಯವಂತ ವರ್ಗದವರ ವ್ಯಕ್ತಿಗಳನ್ನು ಯಾತನೆಗೊಳಪಡಿಸಿದವು. ಈ ಸಂದೇಶಗಳನ್ನು ಸಾರುವದನ್ನು ಶಿಷ್ಯರು ನಿಲ್ಲಿಸಬೇಕೆಂದು ಅವರು ಬಯಸಿದರು, ಆ ಮೂಲಕ ಅವರ ಯಾತನೆಗಳಿಂದ ಅವರಿಗೆ ಸ್ವಲ್ಪವಾದರೂ ಪರಿಹಾರ ದೊರಕುತ್ತದೆಂದು ಭಾವಿಸಿದರು.
“ಆದರೆ ಅಬ್ರಹಾಮನು—ಕಂದಾ, ನೀನು ಆಶಿಸಿದ ಸುಖವನ್ನು ನಿನ್ನ ಜೀವಮಾನದಲ್ಲಿ ಹೊಂದಿದಿ; ಹಾಗೆಯೇ ಲಾಜರನು ಕಷ್ಟವನ್ನು ಹೊಂದಿದನು ಎಂಬದನ್ನು ನೆನಪಿಗೆ ತಂದುಕೋ. ಈಗಲಾದರೋ ಇಲ್ಲಿ ಇವನಿಗೆ ಸಮಾಧಾನ. ಆದರೆ ನಿನಗೆ ಸಂಕಟ. ಇದು ಮಾತ್ರವಲ್ಲದೆ ನಮಗೂ ನಿಮಗೂ ನಡುವೆ ದೊಡ್ಡದೊಂದು ಡೊಂಗರ ಸ್ಥಾಪಿಸಿಯದೆ; ಆದಕಾರಣ ಈ ಕಡೆಯಿಂದ ನಿಮ್ಮ ಬಳಿಗೆ ಹೋಗಬೇಕೆಂದಿರುವವರು ಹೋಗಲಾರರು; ಮತ್ತು ಆ ಕಡೆಯಿಂದ ನಮ್ಮ ಬಳಿಗೆ ಯಾರೂ ದಾಟುವದಕ್ಕಾಗದು.”
ಲಾಜರನ ವರ್ಗ ಮತ್ತು ಐಶ್ವರ್ಯವಂತನ ವರ್ಗದವರ ನಡುವೆ ಅಂಥ ನಾಟಕೀಯ ರೀತಿಯ ತಿರುವುಮುರುವು ಎಷ್ಟೊಂದು ನ್ಯಾಯವೂ, ಸಮಂಜಸವೂ ಆಗಿರುತ್ತದೆ! ಸಾ.ಶ. 33ರ ಪಂಚಾಶತ್ತಮದಲ್ಲಿ ಕೆಲವೇ ತಿಂಗಳುಗಳೊಳಗೆ ಪರಿಸ್ಥಿತಿಗಳಲ್ಲಿ ಅಂಥ ಬದಲಾವಣೆಯು ಉಂಟಾಯಿತು. ಆಗ ಹಳೆಯ ನಿಯಮದೊಡಂಬಡಿಕೆಯ ಸ್ಥಾನದಲ್ಲಿ ಹೊಸ ಒಡಂಬಡಿಕೆಯು ಸ್ಥಾನಪಲ್ಲಟಗೊಂಡಿತು. ಆಗ ಫರಿಸಾಯರು ಮತ್ತು ಇತರ ಧಾರ್ಮಿಕ ಮುಖಂಡರುಗಳು ಅಲ್ಲ, ಬದಲು ಶಿಷ್ಯರುಗಳು ದೇವರಿಂದ ಅನುಗ್ರಹಿತರು ಎಂದು ನಿಸ್ಸಂದೇಹವಾಗಿ ರುಜುಗೊಳಿಸಲ್ಪಟ್ಟಿತು. ಆದ್ದರಿಂದ, ಸಾಂಕೇತಿಕ ಐಶ್ವರ್ಯವಂತ ವರ್ಗದವರನ್ನು ಯೇಸುವಿನ ಶಿಷ್ಯರಿಂದ ಪ್ರತ್ಯೇಕಿಸುವ “ದೊಡ್ಡದೊಂದು ಡೊಂಗರವು”, ದೇವರ ಬದಲಾಗದ, ನೀತಿಯ ನ್ಯಾಯತೀರ್ಪುಗಳನ್ನು ಪ್ರತಿನಿಧಿಸುತ್ತದೆ.
ಐಶ್ವರ್ಯವಂತನು ಅನಂತರ “ತಂದೆ ಅಬ್ರಹಾಮ”ನಿಗೆ ವಿನಂತಿಸುವದು: “ಲಾಜರನನ್ನು ನನ್ನ ತಂದೆಯ ಮನೆಗೆ ಕಳುಹಿಸಬೇಕೆಂದು ಬೇಡಿಕೊಳ್ಳುತ್ತೇನೆ. ನನಗೆ ಐದು ಜನ ಸಹೋದರರಿದ್ದಾರೆ.” ಐಶ್ವರ್ಯವಂತನು ಈ ರೀತಿಯಲ್ಲಿ ಅವನಿಗೆ ಇನ್ನೊಬ್ಬ ತಂದೆಯೊಂದಿಗೆ, ವಾಸ್ತವದಲ್ಲಿ ಪಿಶಾಚ ಸೈತಾನನೊಂದಿಗೆ ಬಹಳ ಹತ್ತಿರದ ಸಂಬಂಧವಿದೆ ಎಂದು ಒಪ್ಪಿಕೊಳ್ಳುತ್ತಾನೆ. ತನ್ನ “ಐದು ಮಂದಿ ಸಹೋದರರು” ಅಂದರೆ ಧಾರ್ಮಿಕ ಒಡನಾಡಿಗಳು, “ಈ ಯಾತನೆಯ ಸ್ಥಳಕ್ಕೆ” ಹಾಕಲ್ಪಡದಂತೆ, ಲಾಜರನು ದೇವರ ನ್ಯಾಯತೀರ್ಪುಗಳ ಸಂದೇಶಗಳ ತೀಕ್ಷ್ಣತೆಯನ್ನು ಕಡಿಮೆಗೊಳಿಸುವಂತೆ ಐಶ್ವರ್ಯವಂತನು ವಿನಂತಿಸುತ್ತಾನೆ.
“ಆದರೆ ಅಬ್ರಹಾಮನು—ಮೋಶೆಯ ಧರ್ಮಶಾಸ್ತ್ರವೂ ಪ್ರವಾದಿಗಳ ಗ್ರಂಥಗಳೂ ಅವರಲ್ಲಿ ಅವೆ.” ಹೌದು, ಈ “ಐದು ಮಂದಿ ಸಹೋದರರು” ಯಾತನೆಯನ್ನು ಪಾರಾಗಬೇಕಾದರೆ, ಅವರು ಮಾಡಬೇಕಾದದ್ದು ಏನಂದರೆ ಯೇಸುವನ್ನು ಮೆಸ್ಸೀಯನೆಂದು ಗುರುತಿಸುವ ಮೋಶೆಯ ಮತ್ತು ಪ್ರವಾದಿಗಳ ಬರಹಗಳಲ್ಲಿರುವದನ್ನು ಆಲಿಸುವದೇ ಮತ್ತು ಕ್ರಿಸ್ತನ ಶಿಷ್ಯರಾಗುವುದೇ. ಆದರೆ ಐಶ್ವರ್ಯವಂತನು ಆಕ್ಷೇಪಿಸುತ್ತಾನೆ: “ತಂದೆಯೇ, ಅಬ್ರಹಾಮನೇ, ಹಾಗಲ್ಲ; ಸತ್ತವರ ಕಡೆಯಿಂದ ಒಬ್ಬನು ಅವರ ಬಳಿಗೆ ಹೋದರೆ ಅವರು ದೇವರ ಕಡೆಗೆ ತಿರುಗಿಕೊಳ್ಳುವರು.”
ಆದಾಗ್ಯೂ, ಅವನಿಗಂದದ್ದು: “ಅವರು ಮೋಶೆಯ ಮಾತನ್ನೂ ಪ್ರವಾದಿಗಳ ಮಾತನ್ನೂ ಕೇಳದಿದ್ದರೆ ಸತ್ತು ಹೋಗಿದ್ದವನೊಬ್ಬನು ಜೀವಿತನಾಗಿ ಎದ್ದರೂ ಅವರು ಒಪ್ಪುವದಿಲ್ಲ.” ಜನರಿಗೆ ಮನವರಿಕೆ ಮಾಡಲು ದೇವರು ವಿಶೇಷ ಸೂಚನೆಗಳನ್ನು ಅಥವಾ ಅದ್ಭುತಗಳನ್ನು ಒದಗಿಸುವದಿಲ್ಲ. ಅವನ ಅನುಗ್ರಹವನ್ನು ಅವರು ಪಡೆಯಬೇಕಾದರೆ ಅವರು ಶಾಸ್ತ್ರ ಗ್ರಂಥಗಳನ್ನು ಓದಿ ಅದನ್ನು ಅನ್ವಯಿಸತಕ್ಕದ್ದು. ಲೂಕ 16:14-31; ಯೋಹಾನ 9:28, 29; ಮತ್ತಾಯ 19:3-9; ಗಲಾತ್ಯ 3:24; ಕೊಲೊಸ್ಸೆಯ 2:14; ಯೋಹಾನ 8:44.
▪ ಐಶ್ವರ್ಯವಂತನ ಮತ್ತು ಲಾಜರನ ಮರಣಗಳು ಯಾಕೆ ಸಾಂಕೇತಿಕವಾಗಿರಬೇಕು, ಮತ್ತು ಅವರ ಮರಣದಿಂದ ಏನು ಚಿತ್ರಿಸಲ್ಪಟ್ಟಿದೆ?
▪ ಯೋಹಾನನ ಶುಶ್ರೂಷೆಯ ಆರಂಭದೊಂದಿಗೆ, ಯಾವ ಬದಲಾವಣೆಯ ಆಗಲಿಕ್ಕಿದೆ ಎಂದು ಯೇಸುವು ಸೂಚಿಸಿದನು?
▪ ಯೇಸುವಿನ ಮರಣದ ನಂತರ ಏನು ತೆಗೆಯಲ್ಪಟ್ಟಿತು, ಮತ್ತು ವಿವಾಹವಿಚ್ಛೇದ ವಿಷಯದ ಮೇಲೆ ಇದು ಹೇಗೆ ಪರಿಣಾಮ ತರುತ್ತದೆ?
▪ ಯೇಸುವಿನ ಸಾಮ್ಯದಲ್ಲಿ ಐಶ್ವರ್ಯವಂತನು ಮತ್ತು ಲಾಜರನು ಯಾರನ್ನು ಪ್ರತಿನಿಧಿಸುತ್ತಾರೆ?
▪ ಐಶ್ವರ್ಯವಂತನಿಂದ ಅನುಭವಿಸಲ್ಪಟ್ಟ ಯಾತನೆಗಳು ಏನಾಗಿವೆ, ಯಾವುದರ ಮೂಲಕ ಅವುಗಳ ಪರಿಹಾರಕ್ಕಾಗಿ ಅವನು ವಿನಂತಿಸುತ್ತಾನೆ?
▪ “ದೊಡ್ಡದೊಂದು ಡೊಂಗರ” ಏನನ್ನು ಪ್ರತಿನಿಧಿಸುತ್ತದೆ?
▪ ಐಶ್ವರ್ಯವಂತನ ನಿಜ ತಂದೆ ಯಾರು, ಮತ್ತು ಅವನ ಐದು ಮಂದಿ ಸಹೋದರರು ಯಾರು?