ಬೈಬಲಿನ ದೃಷ್ಟಿಕೋನ
ವ್ಯಭಿಚಾರ ಕ್ಷಮಿಸಬೇಕೊ ಅಥವಾ ಕ್ಷಮಿಸಬಾರದೊ?
“ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಅವನಿಗೆ ಕ್ಷಮಿಸಿರಿ; ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ನಿಮಗೆ ಕ್ಷಮಿಸಿಬಿಡುವನು.” (ಮಾರ್ಕ 11:25) ಯೇಸುವಿನ ಆ ಮಾತುಗಳು, ವ್ಯಭಿಚಾರದಿಂದಾಗಿ ಕ್ಷೋಭೆಗೊಂಡ ಒಂದು ವಿವಾಹದ ವಿಷಯದಲ್ಲಿ ಕೆಲವು ಕಠಿನ ಪ್ರಶ್ನೆಗಳನ್ನು ಎಬ್ಬಿಸುತ್ತವೆ: ನಿರ್ದೋಷಿಯಾದ ಕ್ರೈಸ್ತಳು ತನ್ನ ಸಂಗಾತಿಯನ್ನು ಕ್ಷಮಿಸಿ, ವಿವಾಹವನ್ನು ಅಖಂಡವಾಗಿಡಬೇಕೊ?a ಆಕೆ ವಿವಾಹವಿಚ್ಛೇದ ಮಾಡಲು ನಿರ್ಧರಿಸುವಲ್ಲಿ, ದೇವರೊಂದಿಗಿನ ಆಕೆಯ ಸ್ವಂತ ಸಂಬಂಧವನ್ನು ಆಕೆ ಅಪಾಯಕ್ಕೆ ಒಡ್ಡುತ್ತಿದ್ದಾಳೊ? ಈ ಪ್ರಶ್ನೆಗಳನ್ನು ಉತ್ತರಿಸಲು ಬೈಬಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ನೋಡೋಣ.
ನೀವು ಯಾವಾಗಲೂ ಕ್ಷಮಿಸಬೇಕೊ?
“ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಅವನಿಗೆ ಕ್ಷಮಿಸಿರಿ” ಎಂಬ ಯೇಸುವಿನ ಮಾತುಗಳು, ಒಬ್ಬ ಸಂಗಾತಿಯು ವ್ಯಭಿಚಾರ ಮಾಡಿರುವುದನ್ನೂ ಸೇರಿಸಿ, ಎಲ್ಲ ಸನ್ನಿವೇಶಗಳಲ್ಲಿ ಕ್ರೈಸ್ತಳೊಬ್ಬಳು ಕ್ಷಮಿಸುವ ಹಂಗುಳ್ಳವಳಾಗಿದ್ದಾಳೆ ಎಂಬುದನ್ನು ಅರ್ಥೈಸುತ್ತವೊ? ಯೇಸುವಿನ ಹೇಳಿಕೆಯು, ಕ್ಷಮಾಪಣೆಯ ಕುರಿತಾಗಿ ಅವನು ಮಾಡಿದ ಇತರ ವ್ಯಾಖ್ಯಾನಗಳ ಬೆಳಕಿನಲ್ಲಿ ತಿಳಿದುಕೊಳ್ಳಲ್ಪಡಬೇಕು.
ಉದಾಹರಣೆಗೆ, ಲೂಕ 17:3, 4ರಲ್ಲಿ ದಾಖಲಿಸಲ್ಪಟ್ಟ ಯೇಸುವಿನ ಮಾತುಗಳಿಂದ ನಾವು ಕ್ಷಮಾಪಣೆಯು ಕುರಿತು ಒಂದು ಪ್ರಾಮುಖ್ಯವಾದ ಮೂಲತತ್ವವನ್ನು ಕಲಿಯುತ್ತೇವೆ: “ನಿನ್ನ ಸಹೋದರನು ತಪ್ಪುಮಾಡಿದರೆ ಅವನನ್ನು ಗದರಿಸು; ಅವನು ಪಶ್ಚಾತ್ತಾಪಪಟ್ಟರೆ (ಓರೆಅಕ್ಷರಗಳು ನಮ್ಮವು.) ಅವನ ತಪ್ಪನ್ನು ಕ್ಷಮಿಸಿಬಿಡು. ಅವನು ದಿನಕ್ಕೆ ಏಳು ಸಾರಿ ನಿನಗೆ ತಪ್ಪುಮಾಡಿ ಏಳು ಸಾರಿಯೂ ನಿನ್ನ ಕಡೆಗೆ ತಿರುಗಿಕೊಂಡು—ನನಗೆ ಪಶ್ಚಾತ್ತಾಪವಾಯಿತು ಎಂದು ಹೇಳಿದರೆ ಅವನಿಗೆ ಕ್ಷಮಿಸು.” ಖಂಡಿತವಾಗಿಯೂ ಗಂಭೀರ ಪಾಪದ ಸಂದರ್ಭಗಳಲ್ಲಿ, ಪ್ರಾಮಾಣಿಕವಾದ ಪಶ್ಚಾತ್ತಾಪವು ಇರುವಲ್ಲಿ, ಮನಸೋಯಿಸಲ್ಪಟ್ಟವಳು ಕ್ಷಮಿಸಲು ಪ್ರಯತ್ನಿಸುವಂತೆ ಪ್ರೋತ್ಸಾಹಿಸಲ್ಪಡುತ್ತಾಳೆ. ಸ್ವತಃ ಯೆಹೋವನೇ ವಿಷಯಗಳನ್ನು ಈ ರೀತಿಯಲ್ಲಿ ವೀಕ್ಷಿಸುತ್ತಾನೆ; ದೈವಿಕ ಕ್ಷಮಾಪಣೆಯನ್ನು ಪಡೆಯಲು ನಾವು ಪ್ರಾಮಾಣಿಕವಾಗಿ ಪಶ್ಚಾತ್ತಾಪಪಡುವವರಾಗಿರಬೇಕು.—ಲೂಕ 3:3; ಅ. ಕೃತ್ಯಗಳು 2:38; 8:22.
ಹಾಗಿದ್ದರೂ, ಇದು ಮತ್ತೂ ತೋರಿಸುವುದೇನೆಂದರೆ, ಒಬ್ಬ ವ್ಯಭಿಚಾರಿ ಸಂಗಾತಿಯು ತನ್ನ ಪಾಪಕ್ಕಾಗಿ ಹೊಣೆಗಾರಿಕೆಯನ್ನು ಸ್ವೀಕರಿಸಲು ನಿರಾಕರಿಸುತ್ತಾ, ಅಪಶ್ಚಾತಾಪ್ತಿಯಾಗಿರುವುದಾದರೆ, ನಿರ್ದೋಷಿಯಾದ ಹೆಂಡತಿಯು ಕ್ಷಮಿಸದಿರಲು ಆರಿಸಿಕೊಳ್ಳಬಹುದಾದ ವಿಷಯವು ಗ್ರಾಹ್ಯವಾಗಿದೆ.—ಹೋಲಿಸಿ 1 ಯೋಹಾನ 1:8, 9.
ಕ್ಷಮಾಪಣೆ—ಪರಿಣಾಮಗಳ ಕುರಿತೇನು?
ಆದರೆ ವ್ಯಭಿಚಾರಿಯು ಪಶ್ಚಾತ್ತಾಪಪಡುವವನಾಗಿರುವಲ್ಲಿ ಆಗೇನು? ಪಶ್ಚಾತ್ತಾಪವು ಇರುವಲ್ಲಿ, ಕ್ಷಮಾಪಣೆಗೆ ಒಂದು ಆಧಾರವಿರುತ್ತದೆ. ಆದರೆ ಕ್ಷಮಾಪಣೆಯು, ತಪ್ಪಿತಸ್ಥನು ತನ್ನ ತಪ್ಪು ಮಾರ್ಗದ ಎಲ್ಲ ಪರಿಣಾಮಗಳಿಂದ ವಿಮುಕ್ತನಾಗಿದ್ದಾನೆಂಬುದನ್ನು ಅರ್ಥೈಸುತ್ತದೊ? ಯೆಹೋವನ ಕ್ಷಮಾಪಣೆಯ ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಇಸ್ರಾಯೇಲ್ಯರು ಕಾನಾನ್ ದೇಶದ ಕುರಿತು ಕೆಟ್ಟ ವರದಿಯನ್ನು ಸಲ್ಲಿಸಿದ ಹತ್ತು ಗೂಢಚಾರರ ಮಾತಿಗೆ ಕಿವಿಗೊಟ್ಟ ನಂತರ ದಂಗೆಯೆದ್ದಾಗ, “ಮಹಾಕೃಪೆಯಿಂದ ಇವರ ಪಾಪವನ್ನು ಕ್ಷಮಿಸಬೇಕೆಂದು,” ಮೋಶೆಯು ಯೆಹೋವನಲ್ಲಿ ಬೇಡಿಕೊಂಡನು. ಯೆಹೋವನು ಪ್ರತಿಕ್ರಿಯಿಸಿದ್ದು: “ನಿನ್ನ ಪ್ರಾರ್ಥನೆಯ ಮೇರೆಗೆ ನಾನು ಕ್ಷಮಿಸಿದ್ದೇನೆ.” ತಪ್ಪಿತಸ್ಥರು ತಮ್ಮ ಕ್ರಿಯೆಗಳ ಯಾವುದೇ ಪರಿಣಾಮಗಳಿಂದ ವಿಮುಕ್ತರಾಗಿದ್ದರೆಂಬುದನ್ನು ಇದು ಅರ್ಥೈಸಿತೊ? ಯೆಹೋವನು ಮುಂದುವರಿಸಿದ್ದು: “ಈ ಮನುಷ್ಯರೆಲ್ಲರು . . . ನನ್ನ ಮಾತಿಗೆ ಕಿವಿಗೊಡದೆ . . . ಪರೀಕ್ಷಿಸಿದದರಿಂದ ನಾನು ಅವರ ಪಿತೃಗಳಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ದೇಶವನ್ನು ಇವರಲ್ಲಿ ಯಾರೂ ನೋಡುವದಿಲ್ಲ.” (ಅರಣ್ಯಕಾಂಡ 14:19-23) ತಾನು ಹೇಳಿದ ವಿಷಯವನ್ನು ಯೆಹೋವನು ನೆರವೇರಿಸಿದನು; ಆ ಹಿಂದಿನ ಸಂತತಿಯು—ಯೆಹೋಶುವ ಮತ್ತು ಕಾಲೇಬರನ್ನು ಹೊರತುಪಡಿಸಿ—ವಾಗ್ದತ್ತ ದೇಶವನ್ನು ನೋಡಲಿಲ್ಲ.—ಅರಣ್ಯಕಾಂಡ 26:64, 65.
ತದ್ರೀತಿಯಲ್ಲಿ, ಬತ್ಷೆಬೆಯೊಂದಿಗೆ ತನ್ನ ಪಾಪಕ್ಕಾಗಿ ಪ್ರವಾದಿಯಾದ ನಾತಾನನು ರಾಜ ದಾವೀದನನ್ನು ಖಂಡಿಸಿದಾಗ, ಪಶ್ಚಾತಾಪ್ತಿಯಾದ ದಾವೀದನು ಅಂಗೀಕರಿಸಿದ್ದು: “ನಾನು ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಿದ್ದೇನೆ.” ಆಗ ನಾತಾನನು ದಾವೀದನಿಗೆ ಹೇಳಿದ್ದು: “ಯೆಹೋವನು ನಿನ್ನ ಪಾಪವನ್ನು ಕ್ಷಮಿಸಿದ್ದಾನೆ.” (2 ಸಮುವೇಲ 12:13) ಯೆಹೋವನು ದಾವೀದನನ್ನು ಕ್ಷಮಿಸಿದನಾದರೂ, ತನ್ನ ಜೀವಿತದ ಉಳಿದ ಕಾಲವೆಲ್ಲ ದಾವೀದನು ತನ್ನ ಪಾಪದ ಪರಿಣಾಮಗಳಿಂದ ಕಷ್ಟಾನುಭವಿಸಿದನು.—2 ಸಮುವೇಲ 12:9-14; 2 ಸಮುವೇಲ, ಅಧ್ಯಾಯ 24ನ್ನು ಸಹ ನೋಡಿರಿ.
ದೈವಿಕ ಕ್ಷಮಾಪಣೆಯ ಈ ಉದಾಹರಣೆಗಳು ಒಂದು ಪ್ರಾಮುಖ್ಯ ಪಾಠವನ್ನು ಎತ್ತಿತೋರಿಸುತ್ತವೆ: ದುಷ್ಪರಿಣಾಮವಿಲ್ಲವೆಂಬ ಅಭಯದಿಂದ ಪಾಪಮಾಡಲು ನಮಗೆ ಸಾಧ್ಯವಿಲ್ಲ. (ಗಲಾತ್ಯ 6:7, 8) ಪಶ್ಚಾತಾಪ್ತಿಯಾದ ಪಾಪಿಯೊಬ್ಬನು, ಕ್ಷಮಾಪಣೆಯನ್ನು ಪಡೆಯಬಹುದಾದರೂ, ತನ್ನ ತಪ್ಪು ಮಾರ್ಗದ ಪರಿಣಾಮಗಳಿಂದ ಅನಿವಾರ್ಯವಾಗಿ ರಕ್ಷಿಸಲ್ಪಡನು. ನಿರ್ದೋಷಿಯಾದ ಸಂಗಾತಿಯು ವ್ಯಭಿಚಾರಿಯನ್ನು, ಕಡಿಮೆಪಕ್ಷ ಬದ್ದದ್ವೇಷವನ್ನು ತೊಲಗಿಸುವ ಅರ್ಥದಲ್ಲಿ ಕ್ಷಮಿಸುವುದಾದರೂ, ಅವನಿಗೆ ವಿವಾಹವಿಚ್ಛೇದವನ್ನು ನೀಡಲು ಇನ್ನೂ ನಿರ್ಣಯಿಸಬಹುದೆಂಬುದನ್ನು ಇದು ಅರ್ಥೈಸುತ್ತದೊ?
ಕ್ಷಮಾಪಣೆ ಮತ್ತು ವಿವಾಹವಿಚ್ಛೇದ
ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು, ಮೂರು ಸಂದರ್ಭಗಳಲ್ಲಿ ವಿವಾಹವಿಚ್ಛೇದದ ಕುರಿತು ಮಾತಾಡಿದನು. (ಮತ್ತಾಯ 5:32; 19:3-9; ಲೂಕ 16:18) ಕುತೂಹಲಕರವಾಗಿ, ಈ ಯಾವುದೇ ಚರ್ಚೆಗಳಲ್ಲಿ ಒಮ್ಮೆಯೂ ಯೇಸು ಕ್ಷಮಾಪಣೆಯನ್ನು ಉಲ್ಲೇಖಿಸಲಿಲ್ಲ. ಉದಾಹರಣೆಗೆ, ಮತ್ತಾಯ 19:9ರಲ್ಲಿ ಕಂಡುಕೊಳ್ಳಲ್ಪಡುವಂತೆ, ಅವನು ಹೇಳಿದ್ದು: “ಮತ್ತು ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟು ಮತ್ತೊಬ್ಬಳನ್ನು ಮದುವೆಮಾಡಿಕೊಳ್ಳುವವನು ವ್ಯಭಿಚಾರ ಮಾಡುವವನಾಗುತ್ತಾನೆ.” “ಹಾದರದ ಕಾರಣದಿಂದಲ್ಲದೆ” ಎಂದು ಹೇಳುವ ಮೂಲಕ, ನಿರ್ದೋಷಿಯಾದ ಸಂಗಾತಿಗೆ ಲೈಂಗಿಕ ಅನೈತಿಕತೆಯು, ವಿವಾಹವಿಚ್ಛೇದ ಮಾಡುವ ಹಕ್ಕನ್ನು ಅಥವಾ ಶಾಸ್ತ್ರೀಯ ‘ಆಧಾರ’ವನ್ನು ಕೊಡುವುದೆಂದು ಯೇಸು ಅಂಗೀಕರಿಸಿದನು. ಆದರೂ, ನಿರ್ದೋಷಿಯಾದ ಸಂಗಾತಿಯು ವಿವಾಹವಿಚ್ಛೇದ ಮಾಡಬೇಕು ಎಂದು ಯೇಸು ಹೇಳಲಿಲ್ಲ. ಆದಾಗ್ಯೂ, ಅವಳು ಹಾಗೆ ಮಾಡಲು ಸಾಧ್ಯ ಎಂದು ಅವನು ಸ್ಪಷ್ಟವಾಗಿಗಿ ಸೂಚಿಸಿದನು.
ವಿವಾಹವು ಇಬ್ಬರು ವ್ಯಕ್ತಿಗಳನ್ನು ಒಟ್ಟಿಗೆ ಕೂಡಿಸುವ ಒಂದು ಬಂಧವಾಗಿದೆ. (ರೋಮಾಪುರ 7:2) ಆದರೆ ಅವರಲ್ಲಿ ಒಬ್ಬರು ನಿಷ್ಠೆಯಿಲ್ಲದವರಾದಾಗ, ಬಂಧವನ್ನು ಕಡಿದುಹಾಕಸಾಧ್ಯವಿದೆ. ಅಂತಹ ಸನ್ನಿವೇಶಗಳಲ್ಲಿ ನಿರ್ದೋಷಿಯಾದ ಸಂಗಾತಿಯು ನಿಜವಾಗಿಯೂ ಎರಡು ನಿರ್ಣಯಗಳನ್ನು ಎದುರಿಸುತ್ತಾಳೆ. ಪ್ರಥಮವಾಗಿ, ಅವಳು ಕ್ಷಮಿಸಬೇಕೊ? ನಾವು ನೋಡಿರುವಂತೆ, ವ್ಯಭಿಚಾರಿಯು ಪ್ರಾಮಾಣಿಕವಾಗಿ ಪಶ್ಚಾತ್ತಾಪಪಡುವವನಾಗಿದ್ದಾನೊ ಇಲ್ಲವೊ ಎಂಬುದು, ಇಲ್ಲಿ ಒಂದು ಮಹತ್ವದ ಅಂಶವಾಗಿದೆ. ಪಶ್ಚಾತ್ತಾಪವು ಇರುವಲ್ಲಿ, ಕಡಿಮೆಪಕ್ಷ ದ್ವೇಷವನ್ನು ತೊಲಗಿಸುವ ಅರ್ಥದಲ್ಲಿ, ನಿರ್ದೋಷಿಯಾದ ಸಂಗಾತಿಯು ಸಕಾಲದಲ್ಲಿ ಕ್ಷಮಿಸಬಹುದು.
ಎರಡನೆಯ ನಿರ್ಣಯವು ಏನಾಗಿದೆಯೆಂದರೆ, ಆಕೆ ಒಂದು ವಿವಾಹವಿಚ್ಛೇದವನ್ನು ಪಡೆಯಬೇಕೊ? ಆಕೆ ಅವನನ್ನು ಕ್ಷಮಿಸಿರುವಲ್ಲಿ ಈ ಪ್ರಶ್ನೆಯು ಏಕೆ ಏಳಬೇಕು?b ಒಳ್ಳೆಯದು, ಆಕೆಯ ಗಂಡನು ವಿಶೇಷವಾಗಿ ಪೂರ್ವದಲ್ಲಿ ದುರುಪಯೋಗ ಮಾಡುವವನಾಗಿದ್ದಲ್ಲಿ, ಆಕೆಗೆ ತನ್ನ ಮತ್ತು ತನ್ನ ಮಕ್ಕಳ ಸುರಕ್ಷೆಯ ಕುರಿತು ಸಮಂಜಸವಾದ ಚಿಂತೆಗಳು ಇರುವುದಾದರೆ ಆಗೇನು? ಅಥವಾ ಒಂದು ರತಿ ರವಾನಿತ ರೋಗದಿಂದ ಸೋಂಕು ತಗಲುವುದರ ಭಯಗಳಿರುವಲ್ಲಿ ಆಗೇನು? ಅಥವಾ ಅವನ ನಂಬಿಕೆದ್ರೋಹದಿಂದಾಗಿ ತಾನು ಇನ್ನುಮುಂದೆ ಅವನನ್ನು ಗಂಡಹೆಂಡಿರ ಸಂಬಂಧದಲ್ಲಿ ನಂಬಲು ಸಾಧ್ಯವಿಲ್ಲವೆಂದು ಆಕೆಗೆ ಗಾಢವಾಗಿ ಅನಿಸುವುದಾದರೆ ಆಗೇನು? ಅಂತಹ ಸನ್ನಿವೇಶಗಳಲ್ಲಿ ನಿರ್ದೋಷಿಯಾದ ಸಂಗಾತಿಯು, ತಪ್ಪುಮಾಡಿದ ತನ್ನ ಸಂಗಾತಿಯನ್ನು (ಬದ್ದದ್ವೇಷವನ್ನು ತೊಲಗಿಸುವ ಅರ್ಥದಲ್ಲಿ) ಕ್ಷಮಿಸಬಹುದೆಂಬುದು, ಆದರೂ ಅವನೊಂದಿಗೆ ಜೀವಿಸುವುದನ್ನು ಮುಂದುವರಿಸಲು ಆಕೆ ಬಯಸುವುದಿಲ್ಲ ಎಂಬ ಕಾರಣದಿಂದ ವಿವಾಹವಿಚ್ಛೇದ ಮಾಡಲು ಇನ್ನೂ ನಿರ್ಣಯಿಸುವುದು, ಭಾವಿಸಲು ಸಾಧ್ಯವಾದ ವಿಷಯವಾಗಿದೆ. ಬದ್ದದ್ವೇಷವನ್ನು ತೊಲಗಿಸುವುದು ತನ್ನ ಜೀವಿತದೊಂದಿಗೆ ಮುಂದುವರಿಯುವಂತೆ ಆಕೆಗೆ ಸಹಾಯ ಮಾಡಬಹುದು. ವ್ಯಭಿಚಾರಿಯೊಂದಿಗೆ ಅಗತ್ಯವಾಗಿರುವ ಯಾವುದೇ ಭವಿಷ್ಯತ್ತಿನ ವ್ಯವಹಾರಗಳನ್ನು ಹೆಚ್ಚು ವ್ಯಾವಹಾರಿಕವಾಗಿಡುವಂತೆ ಸಹ ಅದು ಸಹಾಯ ಮಾಡಬಹುದು.
ಒಬ್ಬ ನಿಷ್ಠಾರಹಿತ ಸಂಗಾತಿಯಿಂದ ವಿವಾಹವಿಚ್ಛೇದವನ್ನು ಪಡೆಯಬೇಕೊ ಇಲ್ಲವೊ ಎಂಬುದು ಒಂದು ವೈಯಕ್ತಿಕ ನಿರ್ಣಯವಾಗಿದೆ. ಇದು ನಿರ್ದೋಷಿಯಾದ ಸಂಗಾತಿಯು, ಒಳಗೊಂಡಿರುವ ಎಲ್ಲ ಅಂಶಗಳನ್ನು ಜಾಗರೂಕವಾಗಿ ಮತ್ತು ಪ್ರಾರ್ಥನಾಪೂರ್ವಕವಾಗಿ ಪರಿಗಣಿಸಿದ ತರುವಾಯ ತೆಗೆದುಕೊಳ್ಳಬೇಕಾದ ನಿರ್ಣಯವಾಗಿದೆ. (ಕೀರ್ತನೆ 55:22) ಒಂದು ಅಥವಾ ಇನ್ನೊಂದು ವಿಧದಲ್ಲಿ ನಿರ್ಣಯಿಸುವಂತೆ ನಿರ್ದೋಷಿಯಾದ ಸಂಗಾತಿಗೆ ಆದೇಶವನ್ನು ಕೊಡಲು ಪ್ರಯತ್ನಿಸುವ ಅಥವಾ ಆಕೆಯ ಮೇಲೆ ಒತ್ತಡವನ್ನು ಹಾಕುವ ಹಕ್ಕು ಇತರರಿಗೆ ಇರುವುದಿಲ್ಲ. (ಹೋಲಿಸಿ ಗಲಾತ್ಯ 6:5.) ನಿರ್ದೋಷಿಯಾದ ಸಂಗಾತಿಯು ಏನು ಮಾಡಬೇಕೆಂದು ಯೇಸು ಹೇಳಲಿಲ್ಲವೆಂಬುದನ್ನು ಜ್ಞಾಪಕದಲ್ಲಿಡಿರಿ. ಹಾಗಾದರೆ, ಸ್ಪಷ್ಟವಾಗಿಗಿ, ಯೋಗ್ಯವಾದ ಶಾಸ್ತ್ರೀಯ ಆಧಾರಗಳ ಮೇಲೆ ವಿವಾಹವಿಚ್ಛೇದ ಮಾಡಲು ಆರಿಸಿಕೊಳ್ಳುವವರೊಂದಿಗೆ ಯೆಹೋವನು ಕೋಪಗೊಳ್ಳುವುದಿಲ್ಲ.
[ಅಧ್ಯಯನ ಪ್ರಶ್ನೆಗಳು]
a ಇಲ್ಲಿ ನಾವು ನಿರ್ದೋಷಿಯಾದ ಸಂಗಾತಿಯನ್ನು “ಆಕೆ,” ಎಂದು ಸೂಚಿಸುವೆವಾದರೂ, ನಿರ್ದೋಷಿಯಾದ ಸಂಗಾತಿಯು ಕ್ರೈಸ್ತ ಪುರುಷನಾಗಿರುವಲ್ಲಿ, ಚರ್ಚಿಸಲ್ಪಟ್ಟ ಮೂಲತತ್ವಗಳು ಒಂದೇ ರೀತಿಯಲ್ಲಿ ಅನ್ವಯಿಸುತ್ತವೆ.
b ಲೈಂಗಿಕ ಸಂಬಂಧಗಳನ್ನು ಮತ್ತೆ ಆರಂಭಿಸುವ ಮೂಲಕ, ತಪ್ಪುಮಾಡಿದ ಸಂಗಾತಿಯೊಂದಿಗೆ ರಾಜಿಮಾಡಲು ಆಕೆ ನಿರ್ಣಯಿಸಿದ್ದಾಳೆಂದು ನಿರ್ದೋಷಿಯಾದ ಸಂಗಾತಿಯು ಸೂಚಿಸುತ್ತಿರುವಳು. ಹೀಗೆ ವಿವಾಹವಿಚ್ಛೇದಕ್ಕಾಗಿರುವ ಯಾವುದೇ ಶಾಸ್ತ್ರೀಯ ಆಧಾರವನ್ನು ಆಕೆ ರದ್ದುಮಾಡುವಳು.
[ಪುಟ 21 ರಲ್ಲಿರುವ ಚಿತ್ರ ಕೃಪೆ]
Life