ಅವನು ತನ್ನ ಹೃದಯದ ಬಯಕೆಯನ್ನು ನೆರವೇರಿಸಿದನು
ಮೆಸ್ಸೀಯ ಸಂಬಂಧಿತ ರಾಜ್ಯವು ಸಂಪೂರ್ಣ ಪರಮಾಧಿಕಾರ ಹೊಂದುವುದನ್ನು ಕಾಣುವುದು ನಿಮ್ಮ ಹೃದಯದ ಅಪೇಕ್ಷೆಯಾಗಿದೆಯೊ? ಹಾಗಿರುವುದಾದರೆ, ಆ ಪರಲೋಕದ ರಾಜ್ಯದ ಕೆಳಗೆ ವಾಗ್ದಾನಿಸಲ್ಪಟ್ಟ ಭೂ ಆಶೀರ್ವಾದಗಳಿಗಾಗಿ ನೀವು ಹಾತೊರೆಯುತ್ತೀರಿ ಮತ್ತು ಪ್ರಾರ್ಥಿಸುತ್ತೀರಿ. ಹಾಗಾದರೆ ತಾಳ್ಮೆಯನ್ನು ಅಭ್ಯಾಸಿಸಿರಿ, ಏಕೆಂದರೆ, “ಕೈಗೂಡಿದ ಇಷ್ಟಾರ್ಥವು ಜೀವವೃಕ್ಷವು.”—ಜ್ಞಾನೋಕ್ತಿ 13:12; ಯಾಕೋಬ 5:7, 8.
ಬಹುತೇಕ 2,000 ವರ್ಷಗಳ ಹಿಂದೆ, ಯೆರೂಸಲೇಮಿನಲ್ಲಿ “ನೀತಿವಂತನೂ ದೇವಭಕ್ತನೂ” ಆದ ಸಿಮೆಯೋನನೆಂಬ ಮನುಷ್ಯನು ವಾಸಿಸುತ್ತಿದ್ದನು. ಮೆಸ್ಸೀಯ ಸಂಬಂಧಿತ ಪ್ರವಾದನೆಗಳಲ್ಲಿ ಆತನಿಗೆ ನಂಬಿಕೆಯಿತ್ತು ಮತ್ತು ಆತನು ತಾಳ್ಮೆಯಿಂದ ‘ಇಸ್ರಾಯೇಲ್ನ ಸಂತೈಸುವಿಕೆಗಾಗಿ ಕಾಯುತ್ತಾ’ ಇದ್ದನು.—ಲೂಕ 2:25.
ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ನಿರೀಕ್ಷೆಯನ್ನೀಯುತ್ತವೆ
ಪಾಪಭರಿತ ಮತ್ತು ಮರಣಹೊಂದುವ ಮಾನವಕುಲಕ್ಕೆ ನಿರೀಕ್ಷೆಯನ್ನಿತ್ತ, ಪ್ರಥಮ ಮೆಸ್ಸೀಯ ಸಂಬಂಧಿತ ಪ್ರವಾದನೆಗೆ ಯೆಹೋವನು ಕಾರಣನಾಗಿದ್ದನು. ಮುಂಬರುವ ತನ್ನ “ಸ್ತ್ರೀ” ಸಂತಾನ, ಅಥವಾ ಸಾರ್ವತ್ರಿಕ ಸಂಸ್ಥೆಯ ಕುರಿತು ದೇವರು ಮುಂತಿಳಿಸಿದನು.—ಆದಿಕಾಂಡ 3:15.
ಆತನು ಅಬ್ರಹಾಮನ ಸಂತಾನದವನೆಂದು ಗುರುತಿಸಲ್ಪಟ್ಟನು, ಮತ್ತು ಆತನ ಬರುವಿಕೆಯನ್ನು ಯಾಕೋಬನು ಮುಂತಿಳಿಸಿದನು. (ಆದಿಕಾಂಡ 22:17, 18; 49:10) ಮೆಸ್ಸೀಯನ ರಾಜ್ಯದ ವೈಭವಗಳು ಕೀರ್ತನೆಗಳಲ್ಲಿ ಉತ್ಸಾಹಪೂರ್ವಕವಾಗಿ ಶ್ಲಾಘಿಸಲ್ಪಟ್ಟಿವೆ. (ಕೀರ್ತನೆ 72:1-20) ಒಬ್ಬ ಕನ್ಯಕೆಯಿಂದ ಆ ಸಂತಾನವು ಜನಿಸಲಿದೆಯೆಂದು ಯೆಶಾಯನು ಮುಂತಿಳಿಸಿದನು, ಮತ್ತು ಅದರ ಜನನವು ಬೇತ್ಲೆಹೇಮ್ನಲ್ಲಿ ಆಗುವುದೆಂದು ಮೀಕನು ಪ್ರವಾದಿಸಿದನು. (ಯೆಶಾಯ 7:14; ಮೀಕ 5:2) ಇವುಗಳು ಮೆಸ್ಸೀಯ ಸಂಬಂಧಿತವಾದ ಅನೇಕ ಪ್ರವಾದನೆಗಳಲ್ಲಿ ಕೆಲವಾಗಿವೆ.
ಇನ್ನೂ ಮೆಸ್ಸೀಯನು ಇಲ್ಲ!
ಗತಕಾಲವನ್ನು ಜ್ಞಾಪಕಕ್ಕೆ ತಂದುಕೊಳ್ಳಿರಿ, ಮತ್ತು ಸಾ.ಶ. ಪ್ರಥಮ ಶತಮಾನವು ಸಮೀಪಿಸುತ್ತಿದೆಯೆಂದು ಊಹಿಸಿರಿ. ದೇವರ ಮೊತ್ತಮೊದಲಿನ ಮೆಸ್ಸೀಯ ಸಂಬಂಧಿತ ಪ್ರವಾದನೆಯು ಈಗ 4,000 ವರ್ಷಗಳಷ್ಟು ಹಳೆಯದ್ದಾಗಿದೆ. ಯೆಹೋವನ ಆಲಯದ ನಾಶನವನ್ನು, ತಮ್ಮ ಸ್ವದೇಶದ ನಿರ್ಜನಗೊಳಿಸುವಿಕೆಯನ್ನು, ಬಬಿಲೋನಿನಲ್ಲಿ 70 ವರ್ಷಗಳ ಬಂದಿವಾಸವನ್ನು, ಮತ್ತು ಅನ್ಯ ಅಧಿಪತಿಗಳಿಗೆ ಅಧೀನತೆಯಲ್ಲಿ 500 ಕ್ಕಿಂತಲೂ ಅಧಿಕ ವರ್ಷಗಳನ್ನು ಯೆಹೂದ್ಯರು ಅನುಭವಿಸಿದ್ದರು. ಇನ್ನೂ ಮೆಸ್ಸೀಯನು ಇಲ್ಲ!
ಮೆಸ್ಸೀಯನ ಬರುವಿಕೆಗಾಗಿ ದೇವ ಭಯವುಳ್ಳ ಯೆಹೂದ್ಯರು ಎಷ್ಟೊಂದು ಹಾತೊರೆದಿದ್ದರು! ಅವರಿಗೆ ಮತ್ತು ಎಲ್ಲಾ ಜನಾಂಗಗಳಿಗೆ ಆತನ ಮೂಲಕ ಆಶೀರ್ವಾದಗಳು ಪ್ರವಹಿಸಲಿಕ್ಕಿದ್ದವು.
ದೇವಭಕ್ತಿಯುಳ್ಳ ಒಬ್ಬ ಮನುಷ್ಯನು
ಮೆಸ್ಸೀಯನ ಬರುವಿಕೆಗಾಗಿ ಹಾತೊರೆಯುತ್ತಾ ಮತ್ತು ಪ್ರಾರ್ಥಿಸುತ್ತಾ ಇದ್ದ ದೇವಭಕ್ತಿಯುಳ್ಳ ಯೆಹೂದ್ಯರಲ್ಲಿ, ಯೂದಾಯದ ರಾಜಧಾನಿಯಲ್ಲಿ ವಾಸಿಸುವ ಯೆಹೋವನ ಒಬ್ಬ ನಂಬಿಗಸ್ತ ವೃದ್ಧ ಸೇವಕನು ಸಿಮೆಯೋನನು. ಏನೋ ವಿಶೇಷವಾದದ್ದು ಸಿಮೆಯೋನನಿಗೆ ಸಂಭವಿಸಿದೆ.
ದೇವರು ಸಿಮೆಯೋನನ ಮೇಲೆ ತನ್ನ ಪವಿತ್ರಾತ್ಮವನ್ನು ಅನುಗೊಳಿಸಿ ಒಂದು ದೈವೋಕ್ತಿಯಿಂದ ಆತನಿಗೆ ಪ್ರತಿಫಲವನ್ನು ನೀಡಿದ್ದಾನೆ. ಸಿಮೆಯೋನನು ಮೆಸ್ಸೀಯನನ್ನು ಕಣ್ಣಾರೆ ಕಾಣುವ ತನಕ ಆತನು ಸಾಯುವುದಿಲ್ಲ. ಆದರೆ ದಿನಗಳು ಮತ್ತು ತಿಂಗಳುಗಳು ಗತಿಸುತ್ತಿವೆ. ಸಿಮೆಯೋನನು ವೃದ್ಧನಾಗುತ್ತಿದ್ದಾನೆ ಮತ್ತು ಹೆಚ್ಚು ದೀರ್ಘಕಾಲ ಜೀವಿಸುವುದನ್ನು ತಾನು ನಿರೀಕ್ಷಿಸಲಾರನು. ದೇವರು ಆತನಿಗೆ ಕೊಟ್ಟ ವಾಗ್ದಾನವು ನೆರವೇರುವುದೊ?
ಒಂದು ದಿನ (ಸಾ.ಶ.ಪೂ. 2 ರಲ್ಲಿ), ಬೇತ್ಲೆಹೇಮ್ನಿಂದ ಒಬ್ಬ ಯುವ ದಂಪತಿಗಳು ಒಂದು ಶಿಶುವಿನೊಂದಿಗೆ ದೇವಾಲಯಕ್ಕೆ ಬರುತ್ತಾರೆ. ತಾನು ದೀರ್ಘಸಮಯದಿಂದ ಎದುರುನೋಡುತ್ತಿದ್ದ ದಿನ ಇದಾಗಿದೆಯೆಂದು ಪವಿತ್ರಾತ್ಮವು ಸಿಮೆಯೋನನಿಗೆ ಪ್ರಕಟಪಡಿಸುತ್ತದೆ. ಪ್ರವಾದಿಗಳು ಯಾರ ಕುರಿತಾಗಿ ಬರೆದಿದ್ದರೋ ಆತನನ್ನು ನೋಡಲಿಕ್ಕಾಗಿ ಅವನು ದೇವಾಲಯಕ್ಕೆ ಹೋಗುತ್ತಾನೆ. ತನ್ನ ಮುಪ್ಪಾದ ಶರೀರವು ಅನುಮತಿಸುವಷ್ಟು ವೇಗದಲ್ಲಿ ಅವಸರದಿಂದ ಹೊರಟು, ಯೋಸೇಫ, ಮರಿಯಳು, ಮತ್ತು ಮಗುವನ್ನು ಆತನು ಕಾಣುತ್ತಾನೆ.
ಸಿಮೆಯೋನನು ಶಿಶುವಾದ ಯೇಸುವನ್ನು ಎಷ್ಟೊಂದು ಆನಂದದಿಂದ ತನ್ನ ಕೈಗಳಲ್ಲಿ ತೆಗೆದುಕೊಳ್ಳುತ್ತಾನೆ! ವಾಗ್ದಾನಿಸಲ್ಪಟ್ಟ ಮೆಸ್ಸೀಯನು—“ಯೆಹೋವನ ಕ್ರಿಸ್ತನು” ಈತನೇ ಆಗಲಿರುವನು. ಸಿಮೆಯೋನನು ಅಂತಹ ಮುಪ್ಪಿನ ಪ್ರಾಯದಲ್ಲಿ, ಯೇಸುವು ತನ್ನ ಭೂಮಿಯ ದೈವ ನಿಯಮಿತ ಕಾರ್ಯವನ್ನು ನೆರವೇರಿಸುವುದನ್ನು ವೀಕ್ಷಿಸಲು ನಿರೀಕ್ಷಿಸಸಾಧ್ಯವಿರಲಿಲ್ಲ. ಆದರೂ, ಆತನನ್ನು ಒಂದು ಶಿಶುವಿನೋಪಾದಿ ನೋಡುವುದು ಅದ್ಭುತಕರವಾದುದು. ಮೆಸ್ಸೀಯ ಸಂಬಂಧಿತ ಪ್ರವಾದನೆಗಳು ನೆರವೇರಲಿಕ್ಕೆ ಪ್ರಾರಂಭಿಸುತ್ತಿವೆ. ಸಿಮೆಯೋನನು ಎಷ್ಟೊಂದು ಸಂತೋಷಿತನಾಗಿದ್ದನು! ಈಗ ಆತನು ಪುನರುತ್ಥಾನದ ತನಕ ಮರಣದಲ್ಲಿ ನಿದ್ರಿಸಲು ತೃಪ್ತಿಪಟ್ಟುಕೊಳ್ಳುವನು.—ಲೂಕ 2:25-28.
ಸಿಮೆಯೋನನ ಪ್ರವಾದನಾ ಮಾತುಗಳು
ಯೆಹೋವನನ್ನು ಸ್ತುತಿಸಲಿಕ್ಕಾಗಿ ಸಿಮೆಯೋನನು ತನ್ನ ಧ್ವನಿಯನ್ನೆತ್ತುವಾಗ, ಆತನು ಹೀಗೆ ಹೇಳುವುದನ್ನು ನಾವು ಕೇಳುತ್ತೇವೆ: “ಒಡೆಯನೇ, ನಿನ್ನ ಮಾತು ನೆರವೇರಿತು; ಈಗ ಸಮಾಧಾನದಿಂದ ಹೋಗುವದಕ್ಕೆ ನಿನ್ನ ದಾಸನಿಗೆ ಅಪ್ಪಣೆಯಾಯಿತು. ನೀನು ನೇಮಿಸಿರುವ ರಕ್ಷಕನನ್ನು ನಾನು ಕಣ್ಣಾರೆ ಕಂಡೆನು. ಎಲ್ಲಾ ಜನಗಳಿಗೆ ಪ್ರತ್ಯಕ್ಷನಾಗಲಿ ಎಂದು ಆತನನ್ನು ಒದಗಿಸಿಕೊಟ್ಟಿದ್ದೀ. ಆತನು ಅನ್ಯದೇಶದವರಿಗೆ ಜ್ಞಾನೋದಯದ ಬೆಳಕು, ನಿನ್ನ ಪ್ರಜೆಯಾದ ಇಸ್ರಾಯೇಲ್ಯರಿಗೆ ಕೀರ್ತಿ.” ಯೇಸುವಿನ ದತ್ತು ತಂದೆ, ಯೋಸೇಫ, ಮತ್ತು ಆತನ ತಾಯಿ, ಮರಿಯಳು, ಈ ಮಾತುಗಳನ್ನು ಕುರಿತು ಕುತೂಹಲಪಡುತ್ತಾ ಮುಂದುವರಿಯುತ್ತಾರೆ.—ಲೂಕ 2:29-33.
ಶಿಶುವಿನ ಕುರಿತಾದ ತಮ್ಮ ಜವಾಬ್ದಾರಿಗಳನ್ನು ನೆರವೇರಿಸುವುದರಲ್ಲಿ ಯೆಹೋವನ ಆಶೀರ್ವಾದವನ್ನು ಸ್ಪಷ್ಟವಾಗಿಗಿ ಹಾರೈಸುತ್ತಾ, ಯೋಸೇಫ ಮತ್ತು ಮರಿಯಳನ್ನು ಆತನು ಆಶೀರ್ವದಿಸುತ್ತಿರುವಾಗ, ಸಿಮೆಯೋನನ ಮುಖಭಾವವು ಪ್ರಕಾಶಮಾನವಾಗಿತ್ತು. ಅನಂತರ ವಯಸ್ಸಾದ ವ್ಯಕ್ತಿಯ ಮುಖವು ಗಂಭೀರವಾಯಿತು. ಮರಿಯಳೊಬ್ಬಳಿಗೇ ತನ್ನ ಅಭಿಪ್ರಾಯಗಳನ್ನು ತಿಳಿಸುತ್ತಾ, ಆತನು ಕೂಡಿಸಿದ್ದು: “ಇಗೋ, ಈತನು ಇಸ್ರಾಯೇಲ್ ಜನರಲ್ಲಿ ಅನೇಕರು ಬೀಳುವದಕ್ಕೂ ಅನೇಕರು ಏಳುವದಕ್ಕೂ ಕಾರಣನಾಗಿರುವನು; ಮತ್ತು ಜನರು ಎದುರುಮಾತಾಡುವದಕ್ಕೆ ಗುರುತಾಗಿರುವನು; ಹೀಗೆ ಬಹುಜನರ ಹೃದಯದ ವಿಚಾರಗಳು ಬೈಲಿಗೆ ಬಂದಾವು; . . . (ಇದಲ್ಲದೆ ನಿನ್ನ ಪ್ರಾಣಕ್ಕಂತೂ ಅಲಗು ನಾಟಿದಂತಾಗುವದು).”—ಲೂಕ 2:34, 35, NW.
ಮರಿಯಳಿಗೆ ಸಿಮೆಯೋನನ ಹೇಳಿಕೆ
ಮರಿಯಳಿಗೆ ಹೇಗೆನಿಸಿತೆಂಬುದನ್ನು ಊಹಿಸಿಕೊಳ್ಳಿ. ಸಿಮೆಯೋನನು ಏನು ಅರ್ಥೈಸಿದನು? ಕೆಲವರು ಕ್ರಿಸ್ತನನ್ನು ಸ್ವೀಕರಿಸುವರು ಮತ್ತು ಈಗಾಗಲೆ ಅವನತಿಯ ಸ್ಥಿತಿಯಲ್ಲಿರುವವರು ಅಲ್ಲಿಂದ ಮೇಲಕ್ಕೆತ್ತಲ್ಪಡುವರು. ಹಾಗಿದ್ದರೂ, ಇತರರು ಆತನನ್ನು ತಿರಸ್ಕರಿಸುವರು, ಆತನ ಮೇಲೆ ಮುಗ್ಗರಿಸುವರು, ಮತ್ತು ಬೀಳುವರು. ಮುಂತಿಳಿಸಲ್ಪಟ್ಟಂತೆ, ಯೇಸು ಅನೇಕ ಯೆಹೂದ್ಯರಿಗೆ ಎಡವುವ ಒಂದು ಕಲ್ಲಾಗಿ ಪರಿಣಮಿಸುವನು. (ಯೆಶಾಯ 8:14; 28:16) ಒಬ್ಬೊಬ್ಬನಾಗಿ ಇಸ್ರಾಯೇಲ್ಯನು ಪ್ರಥಮವಾಗಿ ಅಪನಂಬಿಕೆಯಲ್ಲಿ ಬೀಳುವನು ಮತ್ತು ತದನಂತರ ಯೇಸುವನ್ನು ಅಂಗೀಕರಿಸುವ ಮೂಲಕ ನಂಬಿಕೆಯಲ್ಲಿ ಮೇಲಕ್ಕೇಳುತ್ತಾನೆಂದು ಸಿಮೆಯೋನನ ಮಾತುಗಳ ಅರ್ಥವಾಗಿರಲಿಲ್ಲ. ಬದಲಾಗಿ, ಬಹುಜನರ ಹೃದಯದ ವಿಚಾರಗಳು ಬೈಲಿಗೆ ಬರುವುದರಿಂದ ಮತ್ತು ಒಳ್ಳೆಯ ಅಥವಾ ಕೆಟ್ಟ ಕಾರಣಕ್ಕಾಗಿ ಅವರನ್ನು ದೇವರ ನ್ಯಾಯತೀರ್ಪಿನ ಕಡೆಗೆ ಮುನ್ನಡಿಸುವುದರಿಂದ, ಆತನ ಕಡೆಗಿರುವ ಒಬ್ಬೊಬ್ಬನ ಪ್ರತಿಕ್ರಿಯೆಯೂ ವ್ಯತ್ಯಾಸವುಳ್ಳದ್ದಾಗಿರುವುದು. ಅವಿಶ್ವಾಸಿಗಳಿಗೆ, ಆತನು ಒಂದು ಗುರುತು, ಅಥವಾ ತಿರಸ್ಕಾರದ ಒಬ್ಬ ವ್ಯಕ್ತಿಯಾಗಿರುವನು. ಆತನ ಮೇಲೆ ನಂಬಿಕೆಯನ್ನಿಡುವುದರ ಮೂಲಕ, ಅಪರಾಧಗಳಲ್ಲಿ ಮತ್ತು ಪಾಪಗಳಲ್ಲಿ ನಿರ್ಜೀವ ಸ್ಥಿತಿಯಲ್ಲಿರುವ ಇತರರು ಮೇಲಕ್ಕೆತ್ತಲ್ಪಡುವರು ಮತ್ತು ದೇವರೊಂದಿಗೆ ನೀತಿಯ ಒಂದು ನಿಲುವನ್ನು ಅನುಭವಿಸುವಂತವರಾಗುವರು. ತಮ್ಮ ಹೃದಯಗಳಲ್ಲಿ ಏನಿದೆಯೆಂಬುದನ್ನು ಮೆಸ್ಸೀಯನ ಕಡೆಗಿರುವ ಜನರ ಪ್ರತಿಕ್ರಿಯೆಗಳು ತೋರಿಸುವುವು.
“ನಿನ್ನ ಪ್ರಾಣಕ್ಕಂತೂ ಅಲಗು ನಾಟಿದಂತಾಗುವದು” ಎಂಬ ಸಿಮೆಯೋನನ ಮಾತುಗಳ ಕುರಿತೇನು? ಮರಿಯಳಿಗೆ ವಾಸ್ತವವಾಗಿ ಅಲಗು ನಾಟಿದಂತಹ ವಿಚಾರದ ಕುರಿತು ಶಾಸ್ತ್ರೀಯವಾಗಿ ನಿರ್ದೇಶಿಸಲ್ಪಟ್ಟಿಲ್ಲ. ಆದರೂ, ಅಧಿಕಾಂಶ ಜನರಿಂದ ಯೇಸುವಿನ ಕಡೆಗೆ ತಿರಸ್ಕಾರವು ಅವಳನ್ನು ವೇದನೆಗೊಳಪಡಿಸುವುದು. ಮತ್ತು ಯೇಸು ಕಂಬವೊಂದಕ್ಕೆ ಮೊಳೆಯಿಂದ ಜಡಿಯಲ್ಪಟ್ಟದ್ದನ್ನು ಕಾಣುವುದು ಮರಿಯಳಿಗೆ ಎಷ್ಟೊಂದು ವೇದನೆಯನ್ನುಂಟುಮಾಡಿತ್ತು! ಇದು ಅವಳ ಪ್ರಾಣಕ್ಕೆ ಅಲಗು ನೆಟ್ಟಂತಾಗಿತ್ತು.
ಮೆಸ್ಸೀಯ ಸಂಬಂಧಿತ ಪ್ರವಾದನೆಗಳನ್ನು ಸಿಮೆಯೋನನು ಅನ್ವಯಿಸುತ್ತಾನೆ
ಮೆಸ್ಸೀಯ ಸಂಬಂಧಿತ ಪ್ರವಾದನೆಗಳನ್ನು ಯೇಸುವಿಗೆ ಅನ್ವಯಿಸುವಂತೆ ದೇವರ ಆತ್ಮವು ಸಿಮೆಯೋನನನ್ನು ಪ್ರಚೋದಿಸಿತು. ಸಿಮೆಯೋನನು ಶಾಂತಿಯಲ್ಲಿ, ಅಥವಾ ಪ್ರಶಾಂತವಾಗಿ ಸಾಯಸಾಧ್ಯವಿತ್ತು, ‘ಯಾಕಂದರೆ ಅನ್ಯದೇಶದವರಿಗೆ ಜ್ಞಾನೋದಯದ ಬೆಳಕೂ, ದೇವರ ಪ್ರಜೆಯಾದ ಇಸ್ರಾಯೇಲ್ಯರಿಗೆ ಕೀರ್ತಿಯೂ, ಎಲ್ಲಾ ಜನಗಳಿಗೆ ಪ್ರತ್ಯಕ್ಷನಾಗಲಿ ಎಂದು ಆತನು ಒದಗಿಸಿಕೊಟ್ಟ ಹಾಗೂ ನೇಮಿತ ರಕ್ಷಕನನ್ನು ಆತನು ಕಣ್ಣಾರೆ ಕಂಡನು.’ (ಲೂಕ 2:30-32) ಯೆಶಾಯನ ಪ್ರವಾದನಾ ಮಾತುಗಳಿಗೆ ಇದು ಎಷ್ಟೊಂದು ಸಮರ್ಪಕವಾಗಿ ಅನ್ವಯಿಸಿತು!
ಆ ಪ್ರವಾದಿಯು ಮುಂತಿಳಿಸಿದ್ದು: “ಯೆಹೋವನ ಮಹಿಮೆಯು ಗೋಚರವಾಗುವದು, ಎಲ್ಲಾ ಮನುಷ್ಯರೂ ಒಟ್ಟಿಗೆ ಅದನ್ನು ಕಾಣುವರು.” “ನನ್ನ [ಯೆಹೋವನ] ರಕ್ಷಣೆಯು ಲೋಕದ ಕಟ್ಟಕಡೆಯ ವರೆಗೆ ವ್ಯಾಪಿಸುವಂತೆ ನಿನ್ನನ್ನು [ಮೆಸ್ಸೀಯ] ಅನ್ಯಜನಾಂಗಗಳಿಗೂ ಬೆಳಕನ್ನಾಗಿ ದಯಪಾಲಿಸುವೆನು.” (ಯೆಶಾಯ 40:5; 42:6; 49:6; 52:10) ಮೆಸ್ಸೀಯನಾದ ಯೇಸು ಕ್ರಿಸ್ತನು, ಜನಾಂಗಗಳಿಗೆ ನಿಜವಾದ ಬೆಳಕೂ, ಆತ್ಮಿಕ ಅಂಧಕಾರದ ಮುಸುಕನ್ನು ತೆರೆಯುವಾತನೂ ಮತ್ತು ಜನರಿಗೆ ರಕ್ಷಣೆಯನ್ನುಂಟುಮಾಡುವಾತನೂ ಆಗಿದ್ದಾನೆಂದು ಕ್ರೈಸ್ತ ಗ್ರೀಕ್ ಶಾಸ್ತ್ರವಚನಗಳು ಮತ್ತು ಭೌತಿಕ ಸಂಗತಿಗಳು ದೃಢೀಕರಿಸುತ್ತವೆ.
ವೃದ್ಧ ಸಿಮೆಯೋನನ ಕುರಿತು ದೇವರ ವಾಕ್ಯವು ಇನ್ನು ಹೆಚ್ಚು ವಿಚಾರಗಳನ್ನು ತಿಳಿಸುವುದಿಲ್ಲ. ಕ್ರಿಸ್ತನು ಪರಲೋಕದ ಜೀವಿತಕ್ಕೆ ಮಾರ್ಗವನ್ನು ತೆರೆಯುವುದಕ್ಕೆ ಮುಂಚೆ ಆತನು ಮರಣಹೊಂದಿದನು ಎಂಬುದು ಸ್ಪಷ್ಟ. ಶೀಘ್ರದಲ್ಲಿಯೇ ಸಿಮೆಯೋನನು ಭೂ ಜೀವಿತಕ್ಕಾಗಿ ಪುನರುತ್ಥಾನಗೊಳ್ಳುವನು. ನೂತನ ಲೋಕದಲ್ಲಿ, ದೇವರ ಮೆಸ್ಸೀಯ ಸಂಬಂಧಿತ ರಾಜ್ಯದ ಕೆಳಗೆ ಆತನು ಮತ್ತು ನೀವು ಎಂತಹ ಆನಂದವನ್ನು ಅನುಭವಿಸಬಲ್ಲಿರಿ!