ಅಧ್ಯಾಯ 93
ಮನುಷ್ಯಕುಮಾರನು ಪ್ರತ್ಯಕ್ಷನಾಗುವಾಗ
ಯೇಸುವು ಇನ್ನೂ ಉತ್ತರದಲ್ಲಿರುವಾಗಲೇ, (ಸಮಾರ್ಯದಲ್ಲೋ ಯಾ ಗಲಿಲಾಯದಲ್ಲೋ ಇರಬಹುದು) ದೇವರ ರಾಜ್ಯವು ಬರುವ ವಿಷಯದಲ್ಲಿ ಫರಿಸಾಯರು ಕೇಳುತ್ತಾರೆ. ಅದು ಬಹಳ ಆಡಂಬರ ಮತ್ತು ವಿಜೃಂಭಣೆಯಿಂದ ಬರುವದೆಂದು ಅವರು ನಂಬುತ್ತಿದ್ದರು, ಆದರೆ ಯೇಸುವು ಹೇಳುವದು: “ದೇವರ ರಾಜ್ಯವು ಪ್ರತ್ಯಕ್ಷವಾಗಿ [ಗಮನ ಸೆಳೆಯುವ ರೀತಿಯಲ್ಲಿ, NW] ಬರುವಂಥದಲ್ಲ, ಇಗೋ ಇಲ್ಲಿ ಇದೆ, ಅಗೋ ಅಲ್ಲಿ ಅದೆ ಎಂದು ಹೇಳುವದಕ್ಕಾಗದು; ದೇವರ ರಾಜ್ಯವು ನಿಮ್ಮಲ್ಲಿಯೇ [ನಿಮ್ಮ ಮಧ್ಯದಲ್ಲಿಯೇ, NW] ಇದೆ ಅಂತ ತಿಳುಕೊಳ್ಳಿರಿ.”
“ನಿಮ್ಮ ಮಧ್ಯದಲ್ಲಿಯೇ ಇದೆ” ಎಂಬ ಯೇಸುವಿನ ಮಾತುಗಳು ಕೆಲವೊಮ್ಮೆ “ನಿಮ್ಮೊಳಗೆಯೇ ಇದೆ” ಎಂದು ತರ್ಜುಮೆಗೊಂಡಿರುತ್ತವೆ. ಆದುದರಿಂದ, ದೇವರ ಸೇವಕರ ಹೃದಯಗಳಲ್ಲಿ ದೇವರ ರಾಜ್ಯವು ಆಳುವದೇ ಯೇಸುವಿನ ಅರ್ಥವಾಗಿದೆ ಎಂದು ಕೆಲವರ ಯೋಚನೆಯಾಗಿದೆ. ಯೇಸುವು ಯಾರೊಂದಿಗೆ ಮಾತಾಡುತ್ತಿದ್ದನೋ ಆ ಅವಿಶ್ವಾಸಿ ಫರಿಸಾಯರ ಹೃದಯಗಳೊಳಗೆ ದೇವರ ರಾಜ್ಯವು ಇರಲಿಲ್ಲವೆಂಬುದು ಸ್ಪಷ್ಟ. ಆದರೂ, ಅದು ಅವರ ಮಧ್ಯದಲ್ಲಿಯೇ ಇದೆ, ಯಾಕಂದರೆ ದೇವರ ರಾಜ್ಯದ ನಿಯೋಜಿತ ರಾಜನಾದ ಯೇಸು ಕ್ರಿಸ್ತನು ಅವರ ನಡುವೆ ಅಲ್ಲಿಯೇ ಇದ್ದನು.
ಪ್ರಾಯಶಃ ಫರಿಸಾಯರು ಬಿಟ್ಟು ಹೋದನಂತರ ಯೇಸುವು ಬರಲಿರುವ ರಾಜ್ಯದ ಕುರಿತು ತನ್ನ ಶಿಷ್ಯರೊಂದಿಗೆ ಮುಂದುವರಿಸಿ ಮಾತಾಡುತ್ತಾನೆ. ರಾಜ್ಯದ ಬಲದೊಂದಿಗೆ ಅವನ ಭಾವಿ ಸಾನಿಧ್ಯತೆಯ ಕುರಿತು ವಿಶೇಷವಾಗಿ ಅವನ ಮನಸ್ಸಿನಲ್ಲಿದ್ದಿದ್ದರಿಂದ ಅವನು ಎಚ್ಚರಿಸುವದು: “ಜನರು ನಿಮಗೆ—ಅಗೋ ಅಲ್ಲಿದ್ದಾನೆ, ಇಗೋ ಇಲ್ಲಿದ್ದಾನೆ ಎಂದು ಹೇಳಿದರೆ ನೀವು ಹೊರಟುಹೋಗಬೇಡಿರಿ, ಅವರನ್ನೂ ಹಿಂಬಾಲಿಸಲೂ ಬೇಡಿರಿ. ಯಾಕಂದರೆ ಮಿಂಚು ಮಿಂಚುತ್ತಾ ಆಕಾಶದಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಯ ವರೆಗೂ ಹೇಗೆ ಹೊಳೆಯುವದೋ ಹಾಗೆಯೇ ಮನುಷ್ಯಕುಮಾರನು ತನ್ನ ದಿನಗಳಲ್ಲಿರುವನು.” ಆದಕಾರಣ, ಮಿಂಚು ಹೇಗೆ ವಿಸ್ತಾರವಾದ ಕ್ಷೇತ್ರದಲ್ಲಿ ವಿಶಾಲವಾಗಿ ಕಾಣಬಹುದೋ, ಹಾಗೆಯೇ ರಾಜ್ಯದ ಬಲದೊಂದಿಗೆ ಅವನ ಸಾನಿಧ್ಯತೆಯ ರುಜುವಾತು ಅದನ್ನು ಕಾಣಲು ಬಯಸುವ ಎಲ್ಲರಿಗೂ ಸ್ಪಷ್ಟವಾಗಿ ದೃಶ್ಯಗೋಚರವಾಗುವದು ಎಂದು ಯೇಸುವು ಸೂಚಿಸುತ್ತಾನೆ.
ಅನಂತರ ಅವನ ಭಾವೀ ಸಾನಿಧ್ಯತೆಯ ಸಮಯದಲ್ಲಿ ಜನರ ಮನೋಭಾವಗಳು ಏನಾಗಿರುವವು ಎಂದು ತೋರಿಸಲು ಅವನು ಪ್ರಾಚೀನ ಘಟನೆಗಳೊಂದಿಗೆ ಹೋಲಿಕೆಗಳನ್ನು ಮಾಡುತ್ತಾನೆ. ಅವನು ವಿವರಿಸುವದು: “ನೋಹನ ದಿನಗಳಲ್ಲಿ ನಡೆದ ಹಾಗೆಯೇ ಮನುಷ್ಯ ಕುಮಾರನ ದಿವಸಗಳಲ್ಲಿಯೂ ನಡೆಯುವದು. . . . ಮತ್ತು ಲೋಟನ ದಿವಸಗಳಲ್ಲಿ ನಡೆದ ಪ್ರಕಾರ ನಡೆಯುವದು. ಅವರು ಊಟಮಾಡುತ್ತಿದ್ದರು, ಕುಡಿಯುತ್ತಿದ್ದರು, ಕೊಳ್ಳುತ್ತಿದ್ದರು, ಮಾರುತ್ತಿದ್ದರು, ನೆಡುತ್ತಿದ್ದರು, ಕಟ್ಟುತ್ತಿದ್ದರು. ಆದರೆ ಲೋಟನು ಸೊದೋಮ್ ಊರನ್ನು ಬಿಟ್ಟು ಹೋದ ದಿವಸದಲ್ಲಿ ಆಕಾಶದಿಂದ ಬೆಂಕಿಗಂಧಕಗಳು ಸುರಿದು ಅವರೆಲ್ಲರನ್ನು ನಾಶಮಾಡಿದವು. ಮನುಷ್ಯಕುಮಾರನು ಪ್ರತ್ಯಕ್ಷವಾಗುವ ದಿವಸದಲ್ಲಿ ಅದೇ ರೀತಿಯಾಗಿ ಇರುವದು.”
ನೋಹನ ದಿವಸಗಳು ಮತ್ತು ಲೋಟನ ದಿವಸಗಳ ಜನರು ನಾಶಮಾಡಲ್ಪಟ್ಟದ್ದು ಕೇವಲ ಅವರು ಊಟಮಾಡುವ, ಕುಡಿಯುವ, ಕೊಳ್ಳುವ, ಮಾರುವ, ನೆಡುವ, ಕಟ್ಟುವ ಸಾಮಾನ್ಯ ಚಟುವಟಿಕೆಗಳಲ್ಲಿ ಬೆನ್ನಟ್ಟಿದ್ದ ಕಾರಣದಿಂದಾಗಿ ಅಲ್ಲ. ನೋಹನ ಮತ್ತು ಲೋಟನ ಕುಟುಂಬದವರು ಕೂಡ ಇದನ್ನೆಲ್ಲಾ ಮಾಡಿದ್ದರು. ಆದರೆ ಇತರರು ಇಂಥಾ ದೈನಂದಿನ ಚಟುವಟಿಕೆಗಳಲ್ಲಿ, ದೇವರ ಚಿತ್ತದ ಕಡೆಗೆ ಯಾವುದೇ ಗಮನವನ್ನು ಕೊಡದೆ ಅದರ ಹಿಂದೆ ಹೋದರು ಮತ್ತು ಈ ಕಾರಣದಿಂದ ಅವರನ್ನು ನಾಶಗೊಳಿಸಲಾಯಿತು. ಅದೇ ಕಾರಣಕ್ಕಾಗಿ, ಈ ವಿಷಯಗಳ ವ್ಯವಸ್ಥೆಯ ಮೇಲೆ ಬರಲಿರುವ ಮಹಾಸಂಕಟದ ಸಮಯದಲ್ಲಿ ಕ್ರಿಸ್ತನು ಪ್ರತ್ಯಕ್ಷನಾಗುವಾಗ ಜನರು ನಾಶಗೊಳಿಸಲ್ಪಡುವರು.
ರಾಜ್ಯದ ಬಲದೊಂದಿಗೆ ಅವನ ಭಾವೀ ಸಾನಿಧ್ಯತೆಯ ರುಜುವಾತಿನ ಕಡೆಗೆ ಕೂಡಲೇ ಪ್ರತಿವರ್ತನೆ ತೋರಿಸುವದರ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತಾ, ಯೇಸುವು ಕೂಡಿಸಿದ್ದು: “ಆ ದಿನದಲ್ಲಿ ಮಾಳಿಗೆಯ ಮೇಲೆ ಇರುವವನು ಮನೆಯೊಳಗಿರುವ ತನ್ನ ವಸ್ತುಗಳನ್ನು ತೆಗೆದುಕೊಳ್ಳುವದಕ್ಕೆ ಇಳಿದು ಬರಬಾರದು. ಅದೇ ಪ್ರಕಾರ ಹೊಲದಲ್ಲಿರುವವನು ಸಹ ತಿರಿಗಿ ಹಿಂದಕ್ಕೆ ಹೋಗಬಾರದು. ಲೋಟನ ಹೆಂಡತಿಯನ್ನು ನೆನಪಿಗೆ ತಂದುಕೊಳ್ಳಿರಿ.”
ಕ್ರಿಸ್ತನ ಸಾನಿಧ್ಯತೆಯ ರುಜುವಾತು ಕಾಣತೊಡಗುವಾಗ, ಯಥೋಚಿತ ಕ್ರಿಯೆಗಳನ್ನು ತೆಗೆದುಕೊಳ್ಳಲು, ಅವರ ಪ್ರಾಪಂಚಿಕ ಸೊತ್ತುಗಳ ಕಡೆಗಿನ ಮಮತೆಯು ಅವರನ್ನು ಅಡ್ಡಿಮಾಡುವಂತೆ, ಜನರು ಬಿಡಸಾಧ್ಯವಿಲ್ಲ. ಸೊದೋಮಿನಿಂದ ಹೊರಗೆ ಹೋಗುವಾಗ, ಲೋಟನ ಹೆಂಡತಿಯು, ಹಿಂದಕ್ಕೆ ಬಿಟ್ಟುಬಂದ ವಸ್ತುಗಳ ಕಡೆಗೆ ಬಹುಶಃ ಅತ್ಯಾಸೆಯಿಂದ ಹಿಂದಿರುಗಿ ನೋಡಿರಬೇಕು ಮತ್ತು ಅವಳು ಉಪ್ಪಿನ ಕಂಭವಾದಳು.
ಅವನ ಭವಿಷ್ಯದ ಸಾನಿಧ್ಯತೆಯ ಸಮಯದಲ್ಲಿ ಅಸ್ತಿತ್ವದಲ್ಲಿರಬಹುದಾದ ಸನ್ನಿವೇಶದ ಅವನ ವಿವರಣೆಯನ್ನು ಮುಂದುವರಿಸುತ್ತಾ, ಯೇಸುವು ತನ್ನ ಶಿಷ್ಯರಿಗೆ ಹೇಳುವದು: “ಆ ರಾತ್ರಿಯಲ್ಲಿ ಒಂದೇ ಮಂಚದ ಮೇಲೆ ಇಬ್ಬರಿರುವರು; ಒಬ್ಬನು ತೆಗೆದುಕೊಳ್ಳಲ್ಪಡುವನು; ಮತ್ತೊಬ್ಬನು ಬಿಡಲ್ಪಡುವನು. ಇಬ್ಬರು ಹೆಂಗಸರು ಒಂದೇ ಕಲ್ಲಲ್ಲಿ ಬೀಸುತ್ತಿರುವರು; ಒಬ್ಬಳು ತೆಗೆದುಕೊಳ್ಳಲ್ಪಡುವಳು, ಮತ್ತೊಬ್ಬಳು ಬಿಡಲ್ಪಡುವಳು.”
ತೆಗೆದುಕೊಳ್ಳಲ್ಪಡುವದು, ನೋಹನು ತನ್ನ ಪರಿವಾರದೊಂದಿಗೆ ನಾವೆಯೊಳಗೆ ಪ್ರವೇಶಿಸುವದಕ್ಕೆ ಮತ್ತು ಲೋಟನನ್ನೂ ಅವನ ಕುಟುಂಬವನ್ನೂ ಸೊದೋಮಿನಿಂದ ಹೊರಗೆ ದೇವದೂತರು ಕೊಂಡೊಯ್ಯುವದಕ್ಕೆ ಸರಿಸಮಾನವಾಗಿದೆ. ಅದರ ಅರ್ಥ ರಕ್ಷಣೆಯು. ಇನ್ನೊಂದು ಪಕ್ಕದಲ್ಲಿ ಬಿಡಲ್ಪಡುವದು ಅಂದರೆ ನಾಶನವನ್ನು ಹೊಂದುವದೇ ಆಗಿದೆ.
ಈ ಬಿಂದುವಿನಲ್ಲಿ, ಶಿಷ್ಯರು ವಿಚಾರಿಸುವದು: “ಸ್ವಾಮೀ, ಅದು ಎಲ್ಲಿ ಆಗುವದು?”
“ಹೆಣ [ದೇಹ, NW] ಎಲ್ಲಿಯೋ ಅಲ್ಲಿಯೇ ಹದ್ದುಗಳು ಕೂಡುವವು,” ಎಂದು ಯೇಸುವು ಉತ್ತರಿಸುತ್ತಾನೆ. ರಕ್ಷಣೆಗಾಗಿ “ತೆಗೆದುಕೊಳ್ಳಲ್ಪಟ್ಟವರು” ದೂರದೃಷ್ಟಿಯ ಹದ್ದುಗಳಂತೆ ಇದ್ದಾರೆ, ಅಂದರೆ ಅವರು “ಹೆಣ, [ದೇಹ, NW]”ದ ಹತ್ತಿರ ಅವರು ಒಟ್ಟಾಗಿ ಇರುತ್ತಾರೆ. ರಾಜ್ಯದ ಬಲದೊಂದಿಗಿನ ಅದೃಶ್ಯವಾದ ಅವನ ಸಾನಿಧ್ಯತೆಯಲ್ಲಿ ನಿಜ ಕ್ರಿಸ್ತನಿಗೆ ಮತ್ತು ಯೆಹೋವನು ಒದಗಿಸುವ ಆತ್ಮಿಕ ಭೋಜನಕ್ಕೆ ಇಲ್ಲಿ ತಿಳಿಸಲ್ಪಟ್ಟ ದೇಹವು ಸೂಚಿತವಾಗಿದೆ. ಲೂಕ 17:20-37; ಆದಿಕಾಂಡ 19:26.
▪ ಫರಿಸಾಯರ ಮಧ್ಯದಲ್ಲಿ ರಾಜ್ಯವು ಇದ್ದದ್ದು ಹೇಗೆ?
▪ ಕ್ರಿಸ್ತನ ಸಾನಿಧ್ಯತೆಯು ಒಂದು ಮಿಂಚಿನೋಪಾದಿ ಇರುವದು ಹೇಗೆ?
▪ ಕ್ರಿಸ್ತನ ಸಾನಿಧ್ಯತೆಯ ಸಮಯದಲ್ಲಿ ಅವರ ಚಟುವಟಿಕೆಗಳಿಗಾಗಿ ಜನರನ್ನು ನಾಶಮಾಡುವದು ಯಾಕೆ?
▪ ತೆಗೆದುಕೊಳ್ಳಲ್ಪಡುವದು ಮತ್ತು ಬಿಡಲ್ಪಡುವದು ಎನ್ನುವದರ ಅರ್ಥವೇನು?