ಬೈಬಲ್ ವಚನಗಳ ವಿವರಣೆ
ಯೋಹಾನ 1:1—“ಆದಿಯಲ್ಲಿ ವಾಕ್ಯವಿತ್ತು”
ಯೋಹಾನ 1:1—ಅರ್ಥ
ಒಬ್ಬ ಮನುಷ್ಯನಾಗಿ ಭೂಮಿಗೆ ಬರುವುದಕ್ಕೆ ಮುಂಚೆ ಯೇಸು ಕ್ರಿಸ್ತನ ಜೀವನ ಹೇಗಿತ್ತು ಅಂತ ಈ ವಚನ ವಿವರಿಸುತ್ತದೆ. (ಯೋಹಾನ 1:14-17) 14 ನೇ ವಚನದಲ್ಲಿ “ವಾಕ್ಯ” (ಅಥವಾ “ಲೊಗೋಸ್,” ಗ್ರೀಕ್ನಲ್ಲಿ ಹೊ ಲೊಗೋಸ್) ಅನ್ನುವುದನ್ನು ಬಿರುದಾಗಿ ಬಳಸಲಾಗಿದೆ. “ವಾಕ್ಯ” ಅನ್ನುವ ಬಿರುದು ಯೇಸುವಿನ ಪಾತ್ರವನ್ನು ವರ್ಣಿಸುತ್ತದೆ ಅಂದರೆ ದೇವರ ಆಜ್ಞೆ ನಿರ್ದೇಶನಗಳನ್ನು ಬೇರೆಯವರಿಗೆ ತಿಳಿಸುತ್ತಾನೆಂದು ತೋರಿಸುತ್ತದೆ. ಯೇಸು ಭೂಮಿಯಲ್ಲಿ ದೇವರ ಸೇವೆ ಮಾಡುತ್ತಿದ್ದಾಗಲೂ ಪುನಃ ಸ್ವರ್ಗಕ್ಕೆ ಹೋದ ಮೇಲೂ ದೇವರ ಸಂದೇಶವನ್ನು ಬೇರೆಯವರಿಗೆ ತಿಳಿಸುತ್ತಾ ಇದ್ದನು.—ಯೋಹಾನ 7:16; ಪ್ರಕಟನೆ 1:1.
‘ಮೊದಲಿಂದ’ ಅಥವಾ “ಆದಿಯಲ್ಲಿ” ಅನ್ನುವ ಪದ ದೇವರು ಸೃಷ್ಟಿಯನ್ನು ಶುರುಮಾಡಿದ ಮತ್ತು ವಾಕ್ಯವನ್ನು ಸೃಷ್ಟಿಮಾಡಿದ ಸಮಯಕ್ಕೆ ಸೂಚಿಸುತ್ತದೆ. ಆಮೇಲೆ ದೇವರು ಆ ವಾಕ್ಯದ ಜೊತೆಯಲ್ಲಿ ಕೆಲಸ ಮಾಡುತ್ತಾ ಬೇರೆಲ್ಲವನ್ನು ಸೃಷ್ಟಿ ಮಾಡಿದನು. (ಯೋಹಾನ 1:2, 3) ಯೇಸು “ಎಲ್ಲ ಸೃಷ್ಟಿಗಳಿಗಿಂತ ಮೊಟ್ಟಮೊದ್ಲು ಸೃಷ್ಟಿಯಾದವನು” ಮತ್ತು “ಎಲ್ಲ ಆತನಿಂದಾನೇ ಸೃಷ್ಟಿ ಆಯ್ತು” ಅಂತ ಬೈಬಲ್ ಹೇಳುತ್ತದೆ.—ಕೊಲೊಸ್ಸೆ 1:15, 16.
‘ಆ ವಾಕ್ಯ ದೇವರಾಗಿದ್ದನು’ ಅನ್ನುವುದು ದೇವರಲ್ಲಿ ಇರುವ ಗುಣಗಳು ಭೂಮಿಗೆ ಬರುವುದಕ್ಕೆ ಮುಂಚೆ ಯೇಸುವಿನಲ್ಲೂ ಇದ್ದವು ಎಂದು ತೋರಿಸುತ್ತದೆ. ಯೇಸು ದೇವರಾಗಿದ್ದನು ಎಂದು ಹೇಳುವುದರಲ್ಲಿ ತಪ್ಪಿಲ್ಲ. ಯಾಕೆಂದರೆ ದೇವರ ಪರವಾಗಿ ಮಾತಾಡುವುದು ಯೇಸುವೇ. ಅಲ್ಲದೆ, ದೇವರ ಜ್ಯೇಷ್ಠ ಮಗನಾಗಿ ಆತನಿಗೊಂದು ವಿಶೇಷ ಸ್ಥಾನ ಇದೆ. ಯೇಸುವಿನ ಮೂಲಕವೇ ದೇವರು ಎಲ್ಲವನ್ನು ಸೃಷ್ಟಿ ಮಾಡಿದನು.
ಯೋಹಾನ 1:1—ಸಂದರ್ಭ
ಯೋಹಾನ ಪುಸ್ತಕ ಭೂಮಿಯ ಮೇಲೆ ಯೇಸುವಿನ ಜೀವನ, ಸೇವೆ ಹೇಗಿತ್ತು ಎಂಬ ವಿವರ ಕೊಡುತ್ತದೆ. ಮೊದಲನೇ ಅಧ್ಯಾಯದ ಮೊದಲ ಕೆಲವು ವಚನಗಳು ಯೇಸು ಭೂಮಿಗೆ ಬರುವುದಕ್ಕೆ ಮುಂಚೆಯೇ ಸ್ವರ್ಗದಲ್ಲಿ ಇದ್ದನು, ಆತನಿಗೆ ದೇವರ ಜೊತೆ ವಿಶೇಷವಾದ ಸಂಬಂಧ ಇತ್ತು, ದೇವರು ಮನುಷ್ಯರೊಟ್ಟಿಗೆ ವ್ಯವಹರಿಸುವಾಗ ಯೇಸು ಪ್ರಾಮುಖ್ಯ ಪಾತ್ರ ವಹಿಸಿದನು ಎಂದು ತಿಳಿಸುತ್ತದೆ. (ಯೋಹಾನ 1:1-18) ಈ ವಿವರಗಳು ಯೇಸು ಸೇವೆಯಲ್ಲಿ ಏನು ಹೇಳಿದನೋ ಏನು ಮಾಡಿದನೋ ಅದನ್ನೆಲ್ಲ ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.—ಯೋಹಾನ 3:16; 6:38; 12:49, 50; 14:28; 17:5.
ಯೋಹಾನ 1:1—ತಪ್ಪು ಕಲ್ಪನೆ
ತಪ್ಪು: ಈ ವಚನ ಹೇಳುವ ಪ್ರಕಾರ ವಾಕ್ಯ ಮತ್ತು ಸರ್ವಶಕ್ತ ದೇವರು ಇಬ್ಬರೂ ಒಂದೇ.
ಸರಿ: “ಆ ವಾಕ್ಯ ದೇವರ ಜೊತೆ ಇದ್ದನು” ಅನ್ನುವುದೇ ವಾಕ್ಯ ಮತ್ತು ದೇವರು ಇಬ್ಬರು ಒಂದೇ ಅಲ್ಲ, ಬೇರೆಬೇರೆ ಅಂತ ತೋರಿಸುತ್ತದೆ. ವಾಕ್ಯ ‘ದೇವರ ಜೊತೆ ಇದ್ದು’ ವಾಕ್ಯವೇ ಸರ್ವಶಕ್ತ ದೇವರಾಗಿರಲು ಸಾಧ್ಯವಿಲ್ಲ. ವಾಕ್ಯ ಸರ್ವಶಕ್ತ ದೇವರಲ್ಲ ಎಂದು ಮುಂದಿನ ವಚನಗಳು ಸ್ಪಷ್ಟವಾಗಿ ತೋರಿಸುತ್ತದೆ. ಯೋಹಾನ 1:18 “ಯಾವ ಮನುಷ್ಯನೂ ದೇವರನ್ನ ನೋಡಿಲ್ಲ” ಎಂದು ಹೇಳುತ್ತದೆ. ಆದರೆ ವಾಕ್ಯವಾದ ಯೇಸುವನ್ನು ಜನ ನೋಡಿದ್ದರು. “ಆ ವಾಕ್ಯ ಮನುಷ್ಯನಾಗಿ ಹುಟ್ಟಿ ನಮ್ಮ ಜೊತೆ ವಾಸ ಮಾಡಿದನು. ನಾವು ಆತನ ಮಹಿಮೆಯನ್ನ ನೋಡಿದ್ವಿ” ಎಂದು ಯೋಹಾನ 1:14 ಹೇಳುತ್ತದೆ.
ತಪ್ಪು: ವಾಕ್ಯ ಅನ್ನುವವನು ಯಾವಾಗಲೂ ಇದ್ದನು.
ಸರಿ: ಈ ವಚನದಲ್ಲಿ ‘ಮೊದಲಿಂದ’ ಅನ್ನುವ ಪದ ವಾಕ್ಯಕ್ಕೆ ಒಂದು ಆರಂಭ ಇದೆ ಅಂತ ಹೇಳುತ್ತಿದೆಯೇ ಹೊರತು ದೇವರಿಗೊಂದು ಆರಂಭ ಇದೆ ಅಂತಲ್ಲ. ಯಾಕೆಂದರೆ ದೇವರಿಗೆ ಆರಂಭ ಇಲ್ಲ. “ಯುಗಯುಗಾಂತರಕ್ಕೂ” ಯೆಹೋವನೇa ದೇವರು. (ಕೀರ್ತನೆ 90:1, 2, ಪಾದಟಿಪ್ಪಣಿ) ಆದರೆ ವಾಕ್ಯವಾದ ಯೇಸು ಕ್ರಿಸ್ತನಿಗೆ ಒಂದು ಆರಂಭ ಇತ್ತು. ‘ದೇವರು ಮೊದಲು ಸೃಷ್ಟಿ ಮಾಡಿದ್ದು’ ಯೇಸುವನ್ನೇ.—ಪ್ರಕಟನೆ 3:14.
ತಪ್ಪು: ವಾಕ್ಯವನ್ನು ‘ದೇವರು’ ಎಂದು ಹೇಳುವುದು ತುಂಬ ದೇವರುಗಳನ್ನು ಆರಾಧಿಸಬಹುದೆಂದು ಕಲಿಸುತ್ತದೆ.
ಸರಿ: ಈ ವಚನದಲ್ಲಿ ದೇವರು ಅನ್ನುವ ಪದ ಗ್ರೀಕ್ನಲ್ಲಿ ತಿಯೋಸ್, ಹೀಬ್ರುವಿನಲ್ಲಿ ಎಲ್ ಮತ್ತು ಎಲೊಹಿಮ್ ಎಂದಾಗಿದೆ. ಹಳೇ ಒಡಂಬಡಿಕೆಯಲ್ಲಿ ಸಾಮಾನ್ಯವಾಗಿ ಬಳಸಿರುವುದು ಈ ಪದಗಳನ್ನೇ. ಹೀಬ್ರು ಪದಗಳ ಅರ್ಥ “ಬಲಿಷ್ಠನು; ಶಕ್ತಿಶಾಲಿ” ಎಂದಾಗಿದೆ. ಈ ಪದಗಳನ್ನು ಸರ್ವಶಕ್ತ ದೇವರಿಗೆ, ಬೇರೆ ದೇವರುಗಳಿಗೆ, ಮನುಷ್ಯರಿಗೂ ಬಳಸಲಾಗಿದೆ. (ಕೀರ್ತನೆ 82:6; ಯೋಹಾನ 10:34) ವಾಕ್ಯ ಎಂಬಾತನ ಮೂಲಕವೇ ದೇವರು ಬೇರೆಲ್ಲವನ್ನು ಸೃಷ್ಟಿಸಿದ್ದರಿಂದ ಆ ವಾಕ್ಯವನ್ನು ಬಲಿಷ್ಠನು ಎಂದು ಖಂಡಿತ ಹೇಳಬಹುದು. (ಯೋಹಾನ 1:3) ಯೋಹಾನ 1:1 ರಲ್ಲಿ ವಾಕ್ಯವನ್ನು ದೇವರು ಅಂತ ಹೇಳಿರುವುದು ಯೆಶಾಯ 9:6 ರಲ್ಲಿರುವ ಪ್ರವಾದನೆಗೆ ಹೊಂದಿಕೆಯಲ್ಲಿದೆ. ಅಲ್ಲಿ ದೇವರು ಆರಿಸುವ ಮೆಸ್ಸೀಯ ಅಥವಾ ಕ್ರಿಸ್ತನನ್ನು “ಬಲಿಷ್ಠ ದೇವರು” (ಹೀಬ್ರುವಿನಲ್ಲಿ, ಎಲ್ಗಿಬ್ಬೋರ್) ಎಂದು ಜನ ಕರೆಯುತ್ತಾರೆಂದು ಹೇಳಲಾಗಿದೆ. ಇಲ್ಲಿ ಗಮನಿಸಬೇಕಾದ ವಿಷಯ ಏನಂದ್ರೆ ಕ್ರಿಸ್ತನನ್ನು “ಬಲಿಷ್ಠ ದೇವರು” ಎಂದು ಹೇಳಲಾಗಿದೆ, ಆದರೆ ಆದಿಕಾಂಡ 17:1; 35:11; ವಿಮೋಚನಕಾಂಡ 6:3; ಯೆಹೆಜ್ಕೇಲ 10:5 ರಲ್ಲಿರುವ ಹಾಗೆ “ಸರ್ವಶಕ್ತ ದೇವರು” (ಎಲ್ಶಡ್ಡಾಯ್) ಎಂದು ಹೇಳಲಿಲ್ಲ.
ಅನೇಕ ದೇವರುಗಳನ್ನು ಆರಾಧಿಸಬೇಕೆಂದು ಬೈಬಲ್ ಹೇಳುವುದಿಲ್ಲ. “ನಿನ್ನ ದೇವರಾಗಿರೋ ಯೆಹೋವನನ್ನೇ ಆರಾಧಿಸಬೇಕು ಮತ್ತು ಆತನೊಬ್ಬನಿಗೇ ನೀನು ಪವಿತ್ರ ಸೇವೆ ಮಾಡಬೇಕು” ಎಂದು ಯೇಸು ಕ್ರಿಸ್ತ ಹೇಳಿದನು. (ಮತ್ತಾಯ 4:10) “ಸ್ವರ್ಗ ಮತ್ತು ಭೂಮಿಯಲ್ಲಿ ಎಷ್ಟೋ ದೇವರುಗಳು ಇದ್ದಾರೆ ಅಂತ ಜನ ಹೇಳ್ತಾರೆ. ಹಾಗಾದ್ರೆ ಜನ್ರಿಗೆ ತುಂಬ ದೇವರು, ಪ್ರಭುಗಳು ಇದ್ದಾರೆ. ಆದ್ರೆ ನಮಗೆ ಒಬ್ಬನೇ ದೇವರು. ಆತನು ನಮ್ಮ ತಂದೆ. ಆತನು ಎಲ್ಲವನ್ನ ಸೃಷ್ಟಿ ಮಾಡಿದನು. ನಾವು ಆತನಿಗಾಗಿ ಇದ್ದೀವಿ. ನಮಗೆ ಒಬ್ಬನೇ ಪ್ರಭು, ಆತನು ಯೇಸು ಕ್ರಿಸ್ತ. ಆತನ ಮೂಲಕ ಎಲ್ಲ ಸೃಷ್ಟಿ ಆಯ್ತು, ಆತನ ಮೂಲಕ ನಾವೂ ಸೃಷ್ಟಿ ಆದ್ವಿ” ಅನ್ನುತ್ತದೆ ಬೈಬಲ್.—1 ಕೊರಿಂಥ 8:5, 6.
ಯೋಹಾನ 1:1 ಬೇರೆ ಭಾಷಾಂತರಗಳಲ್ಲಿ
“ಆದಿಯಲ್ಲಿ ವಾಕ್ಯವಿತ್ತು. ಆ ವಾಕ್ಯವು ದೇವರ ಬಳಿಯಲ್ಲಿತ್ತು. ಆ ವಾಕ್ಯವು ದೇವರಾಗಿತ್ತು.”—ಪವಿತ್ರ ಬೈಬಲ್.
“ಜಗತ್ತು ಸೃಷ್ಟಿಯಾಗುವುದಕ್ಕಿಂತ ಮೊದಲೇ ವಾಕ್ಯ ಎಂಬಾತನಿದ್ದನು. ಆ ವಾಕ್ಯ ಎಂಬಾತನು ದೇವರೊಂದಿಗೆ ಇದ್ದನು. ಆ ವಾಕ್ಯ ಎಂಬಾತನೇ ಸ್ವತಃ ದೇವರಾಗಿದ್ದನು.—ಪರಿಶುದ್ಧ ಬೈಬಲ್.
a ಯೆಹೋವ ಅನ್ನೋದು ದೇವರ ಹೆಸರು.—ಕೀರ್ತನೆ 83:18.