ಅಧ್ಯಾಯ 4
“ಅಷ್ಟೇನೂ ಓದಿಲ್ಲದ ಸಾಮಾನ್ಯ ಜನ”
ಅಪೊಸ್ತಲರು ಧೈರ್ಯದಿಂದ ಸಾರಿದ್ರು ಮತ್ತು ಯೆಹೋವ ಅವರನ್ನ ಆಶೀರ್ವದಿಸಿದನು
ಆಧಾರ: ಅಪೊಸ್ತಲರ ಕಾರ್ಯ 3:1–5:11
1, 2. ದೇವಾಲಯದ ಬಾಗಿಲ ಹತ್ರ ಪೇತ್ರ ಮತ್ತು ಯೋಹಾನ ಯಾವ ಅದ್ಭುತ ಮಾಡಿದ್ರು?
ಮಧ್ಯಾಹ್ನದ ಸುಡುಬಿಸಿಲು ಜನರ ಗುಂಪಿನ ಮೇಲೆ ಬೀಳ್ತಿತ್ತು. ದೇವಭಕ್ತ ಯೆಹೂದ್ಯರು ಮತ್ತು ಯೇಸುವಿನ ಶಿಷ್ಯರು ದೇವಾಲಯಕ್ಕೆ ಹೋಗ್ತಾ ಇದ್ರು. ಇನ್ನೇನು “ಪ್ರಾರ್ಥನೆ ಸಮಯ” ಹತ್ರ ಆಗಿತ್ತು.a (ಅ. ಕಾ. 2:46; 3:1) ಜನರ ಗುಂಪಿನಲ್ಲಿ ಪೇತ್ರ ಮತ್ತು ಯೋಹಾನ ಇದ್ರು. ‘ಸುಂದರ’ ಅನ್ನೋ ಬಾಗಿಲ ಕಡೆಗೆ ಅವರು ಹೋಗ್ತಿದ್ರು. ಅಲ್ಲಿ 40 ವರ್ಷ ದಾಟಿದ ಹುಟ್ಟು ಕುಂಟ ಭಿಕ್ಷೆ ಬೇಡ್ತಾ ಕೂತಿದ್ದ. ಜನರು ಮಾತಾಡೋ ಸದ್ದು ಮತ್ತು ಓಡಾಡೋ ಸಪ್ಪಳದ ಮಧ್ಯೆ ಜೋರಾಗಿ ಕೂಗ್ತಾ ಭಿಕ್ಷೆ ಬೇಡ್ತಿದ್ದ.—ಅ. ಕಾ. 3:2; 4:22.
2 ಪೇತ್ರ ಮತ್ತು ಯೋಹಾನ ಬಾಗಿಲ ಹತ್ರ ಹೋದಾಗ ಆ ಭಿಕ್ಷುಕ ಅವರ ಹತ್ರನೂ ಹಣ ಬೇಡಿದ. ಆಗ ಅಪೊಸ್ತಲರು ನಿಂತ್ರು. ಅವರು ನಿಂತಿದ್ದನ್ನ ನೋಡಿ ಏನಾದ್ರೂ ಕೊಡ್ತಾರೆ ಅಂತ ಆ ಭಿಕ್ಷುಕ ಅಂದ್ಕೊಂಡ. ಆದ್ರೆ ಪೇತ್ರ ಅವನಿಗೆ, “ನನ್ನ ಹತ್ರ ಬೆಳ್ಳಿಬಂಗಾರ ಇಲ್ಲ, ಆದ್ರೆ ನನ್ನ ಹತ್ರ ಏನಿದೆಯೊ ಅದನ್ನೇ ನಾನು ನಿನಗೆ ಕೊಡ್ತೀನಿ. ನಜರೇತಿನ ಯೇಸು ಕ್ರಿಸ್ತನ ಹೆಸ್ರಲ್ಲಿ ಹೇಳ್ತೀನಿ, ಎದ್ದು ನಡಿ!” ಅಂತ ಹೇಳಿದ ಮತ್ತು ಆ ಕುಂಟನನ್ನ ಕೈಹಿಡಿದು ಎತ್ತಿದ. ಆಗ ಅವನು ತನ್ನ ಜೀವನದಲ್ಲೇ ಮೊಟ್ಟಮೊದಲ ಸಲ ತನ್ನೆರಡು ಕಾಲುಗಳನ್ನ ಊರಿ ನಿಂತ! ಸ್ವಲ್ಪ ಯೋಚ್ನೆ ಮಾಡಿ, ಇದನ್ನ ನೋಡಿದ ಜನ್ರಿಗೆ ಎಷ್ಟು ಆಶ್ಚರ್ಯ ಆಗಿರಬಹುದಲ್ವಾ! (ಅ. ಕಾ. 3:6, 7) ಆ ವ್ಯಕ್ತಿ ವಾಸಿಯಾದ ತನ್ನ ಕಾಲುಗಳನ್ನ ನೋಡ್ತಾ ನಿಧಾನವಾಗಿ ಒಂದೊಂದೇ ಹೆಜ್ಜೆ ಇಟ್ಟಾಗ ಅವನಿಗೆ ಎಷ್ಟು ಖುಷಿ ಆಗಿರಬೇಕಲ್ವಾ. ಅದಕ್ಕೆ ಅವನು ಕುಣಿದು ಕುಪ್ಪಳಿಸ್ತಾ ಗಟ್ಟಿಯಾಗಿ ದೇವರನ್ನ ಹಾಡಿಹೊಗಳಿದ!
3. ಮುಂಚೆ ಕುಂಟನಾಗಿದ್ದ ವ್ಯಕ್ತಿಗೆ ಮತ್ತು ಜನರ ಗುಂಪಿಗೆ ಯಾವ ವಿಶೇಷ ಉಡುಗೊರೆ ಪಡೆಯೋ ಅವಕಾಶ ಸಿಕ್ತು?
3 ಇದನ್ನ ನೋಡಿದ ಜನರು ಸಂತೋಷದಿಂದ ಓಡೋಡಿ ಬಂದು ಸೊಲೊಮೋನನ ಕಂಬಸಾಲು ಅನ್ನೋ ಸ್ಥಳದಲ್ಲಿ ಪೇತ್ರ ಮತ್ತು ಯೋಹಾನನನ್ನ ಭೇಟಿ ಮಾಡಿದ್ರು. ಹಿಂದೆ ಒಂದ್ಸಲ ಇದೇ ಜಾಗದಲ್ಲಿ ನಿಂತು ಯೇಸು ಜನ್ರಿಗೆ ಕಲಿಸಿದ್ದನು. ಆದ್ರೆ ಈಗ ಪೇತ್ರ ಇದೇ ಸ್ಥಳದಲ್ಲಿ ಈಗಷ್ಟೇ ಮಾಡಿದ ಅದ್ಭುತನ ಯಾಕೆ ಮಾಡಿದ ಅಂತ ವಿವರಿಸಿದ. (ಯೋಹಾ. 10:23) ಅಲ್ಲಿದ್ದ ಜನ್ರಿಗೆ ಮತ್ತು ಮುಂಚೆ ಕುಂಟನಾಗಿದ್ದ ವ್ಯಕ್ತಿಗೆ ಬೆಳ್ಳಿಬಂಗಾರಕ್ಕಿಂತಲೂ ಅಮೂಲ್ಯವಾದ ಒಂದು ಉಡುಗೊರೆ ಬಗ್ಗೆ ಹೇಳಿದ. ಈ ಉಡುಗೊರೆ ಕಾಯಿಲೆಯಿಂದ ವಾಸಿಯಾಗೋದಕಷ್ಟೇ ಅಲ್ಲ ಇನ್ನೂ ತುಂಬಾ ವಿಷ್ಯಗಳಿಗೆ ದಾರಿ ತೆರೀತು. ಪಶ್ಚಾತ್ತಾಪಪಡೋಕೆ, ಪಾಪಗಳು ಶಾಶ್ವತವಾಗಿ ಪರಿಹಾರ ಆಗೋಕೆ ದಾರಿ ತೆರೀತು. ಅಷ್ಟೇ ಅಲ್ಲ, “ಜೀವ ಕೊಡೋ ಮುಖ್ಯ ಪ್ರತಿನಿಧಿ” ಆಗಿರೋ ಯೇಸು ಕ್ರಿಸ್ತನ ಹಿಂಬಾಲಕರಾಗೋಕೆ ಅವ್ರಿಗೆ ಅವಕಾಶನೂ ಕೊಡ್ತು.—ಅ. ಕಾ. 3:15.
4. (ಎ) ಆ ದಿನ ನಡೆದ ಅದ್ಭುತ ಯಾವ ಜಗಳಕ್ಕೆ ಕಾರಣ ಆಗಲಿತ್ತು? (ಬಿ) ಯಾವ ಎರಡು ಪ್ರಶ್ನೆಗಳಿಗೆ ಉತ್ತರ ತಿಳ್ಕೊತೀವಿ?
4 ಅದು ಮರೆಯಲಾಗದ ದಿನವಾಗಿತ್ತು! ಆ ದಿನ ಪೇತ್ರ ಒಬ್ಬ ವ್ಯಕ್ತಿಯನ್ನ ವಾಸಿ ಮಾಡಿದ, ಇದ್ರಿಂದ ಅವನು ನಡೆಯೋಕಾಯ್ತು. ಅಷ್ಟೇ ಅಲ್ಲ ಪೇತ್ರ ಸಾವಿರಾರು ಜನ್ರಿಗೆ ದೇವರ ಇಷ್ಟ ಏನು ಅಂತ ಅರ್ಥ ಮಾಡ್ಕೊಳ್ಳೋಕೆ ಸಹಾಯ ಮಾಡಿದ. ಇದ್ರಿಂದ ಅವರು ದೇವರಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಸಾಧ್ಯವಾಯ್ತು. (ಕೊಲೊ. 1:9, 10) ಆದ್ರೆ ಅಲ್ಲಿರೋ ಅಧಿಕಾರಿಗಳು ಆ ದಿನ ನಡೆದ ಘಟನೆಗಳನ್ನ ನೆಪವಾಗಿ ಇಟ್ಕೊಂಡು ಯೇಸುವಿನ ಶಿಷ್ಯರ ಜೊತೆ ಜಗಳ ಮಾಡಬೇಕಂತಿದ್ರು. ದೇವರ ಆಳ್ವಿಕೆಯ ಸಿಹಿಸುದ್ದಿ ಸಾರಬೇಕು ಅನ್ನೋ ಯೇಸುವಿನ ಆಜ್ಞೆ ಪಾಲಿಸಬೇಕಂತಿದ್ದ ಶಿಷ್ಯರನ್ನ ತಡೀಬೇಕಂತ ಇದ್ರು. (ಅ. ಕಾ. 1:8) ಆದ್ರೆ ನಾವೀಗ ಈ ಎರಡು ಪ್ರಶ್ನೆಗಳಿಗೆ ಉತ್ತರ ನೋಡೋಣ: ‘ಅಷ್ಟೇನೂ ಓದಿಲ್ಲದ ಸಾಮಾನ್ಯ ಜನರಾಗಿದ್ದ’ ಪೇತ್ರ ಮತ್ತು ಯೋಹಾನ ಜನರ ಗುಂಪಿಗೆ ಸಾಕ್ಷಿ ಕೊಡುವಾಗ ಬಳಸಿದ ವಿಧಾನಗಳು ಮತ್ತು ತೋರಿಸಿದ ಮನೋಭಾವದಿಂದ ನಾವೇನು ಕಲಿಬಹುದು?b (ಅ. ಕಾ. 4:13) ವಿರೋಧ ಬಂದಾಗ ಅವರು ಮತ್ತು ಇತರ ಶಿಷ್ಯರು ನಡ್ಕೊಂಡ ರೀತಿಯನ್ನ ನಾವು ಹೇಗೆ ಅನುಕರಿಸಬಹುದು?
‘ಸ್ವಂತ ಶಕ್ತಿಯಿಂದ ಅಲ್ಲ’ (ಅ. ಕಾ. 3:11-26)
5. ಪೇತ್ರ ಜನ ಹತ್ರ ಮಾತಾಡಿದ ರೀತಿಯಿಂದ ನಾವೇನು ಕಲೀಬಹುದು?
5 ವಿರೋಧ ಮಾಡ್ತಿದ್ದ ಈ ಜನರ ಗುಂಪಲ್ಲಿ ಯೇಸುನ ಕೊಲ್ಲಬೇಕಂತ ಕೂಗಿದ್ದವರೂ ಇದ್ದಿರಬಹುದು ಅಂತ ಪೇತ್ರ ಮತ್ತು ಯೋಹಾನನಿಗೆ ಗೊತ್ತಿತ್ತು. ಆದ್ರೂ ಅವರು ಅವ್ರ ಹತ್ರ ಮಾತಾಡೋಕೆ ಮುಂದೆ ಬಂದ್ರು. (ಮಾರ್ಕ 15:8-15; ಅ. ಕಾ. 3:13-15) ಅಷ್ಟೇ ಅಲ್ಲ, ಕುಂಟನಾಗಿದ್ದ ಮನುಷ್ಯನನ್ನ ಯೇಸು ಹೆಸ್ರಲ್ಲೇ ವಾಸಿ ಮಾಡಿದ್ದೀನಿ ಅಂತ ಪೇತ್ರ ಹೇಳಿದ. ಹೀಗೆ ಹೇಳೋಕೆ ಅವನಿಗೆ ಎಷ್ಟು ಧೈರ್ಯ ಬೇಕಿತ್ತಲ್ವಾ. ಅವನು ಸತ್ಯವನ್ನ ಮುಚ್ಚಿಡಲಿಲ್ಲ. ಯೇಸುವಿನ ಸಾವಿಗೆ ಆ ಜನರು ಕೂಡ ಹೊಣೆ ಆಗಿದ್ರು ಅಂತ ನೇರವಾಗಿ ಹೇಳಿದ. ಹಾಗಂತ ಪೇತ್ರನಿಗೆ ಅವರ ಮೇಲೆ ದ್ವೇಷ ಇರಲಿಲ್ಲ, ಯಾಕಂದ್ರೆ ಅವರು ಅದನ್ನ ‘ಗೊತ್ತಿಲ್ಲದೆ ಮಾಡಿದ್ರು.’ (ಅ. ಕಾ. 3:17) ಅವನು ಅವರನ್ನ ಸಹೋದರರೇ ಅಂತ ಕರೆದ, ದೇವರ ಆಳ್ವಿಕೆಯಿಂದ ಸಿಗೋ ಪ್ರಯೋಜನಗಳ ಬಗ್ಗೆ ಅವರ ಹತ್ರ ಜಾಸ್ತಿ ಮಾತಾಡಿದ. ಅವರು ಪಶ್ಚಾತ್ತಾಪಪಟ್ಟು ಕ್ರಿಸ್ತನಲ್ಲಿ ನಂಬಿಕೆ ಇಟ್ರೆ ಯೆಹೋವ ಅವ್ರಿಗೆ “ನೆಮ್ಮದಿ ಕೊಡ್ತಾನೆ” ಅಂತ ಹೇಳಿದ. (ಅ. ಕಾ. 3:19) ನಾವು ಕೂಡ ಜನ್ರಿಗೆ ಮುಂದೆ ಬರೋ ದೇವರ ನ್ಯಾಯತೀರ್ಪಿನ ಬಗ್ಗೆ ಧೈರ್ಯದಿಂದ ಹೇಳಬೇಕು. ಆದ್ರೆ ಕಡ್ಡಿ ಮುರಿದ ತರ, ಒರಟಾಗಿ, ಟೀಕೆ ಮಾಡೋ ತರ ಮಾತಾಡಬಾರದು. ಬದಲಿಗೆ, ನಾವು ಯಾರಿಗೆ ಸಾರುತ್ತೀವೋ ಅವರು ಮುಂದೆ ನಮ್ಮ ಸಹೋದರರಾಗಬಹುದು ಅನ್ನೋ ಮನಸ್ಸಿನಿಂದ ಸಾರಬೇಕು. ಪೇತ್ರನ ತರ ನಾವೂ ದೇವರ ಆಳ್ವಿಕೆಯಿಂದ ಅವ್ರಿಗೆ ಸಿಗೋ ಪ್ರಯೋಜನಗಳ ಬಗ್ಗೆನೇ ಜಾಸ್ತಿ ಮಾತಾಡಬೇಕು.
6. ಪೇತ್ರ ಮತ್ತು ಯೋಹಾನ ಹೇಗೆ ದೀನತೆ ತೋರಿಸಿದ್ರು?
6 ಅಪೊಸ್ತಲರಲ್ಲಿ ದೀನತೆ ಇದ್ದಿದ್ರಿಂದ ಅವರು ಅದ್ಭುತ ಮಾಡಿದಾಗ ಅದು ತಮ್ಮಿಂದನೇ ಆಯ್ತು ಅಂತ ಹೇಳ್ಕೊಳ್ಳಲಿಲ್ಲ. ಬದಲಿಗೆ ಪೇತ್ರ ಜನರಿಗೆ, “ನಾವೇನೋ ನಮ್ಮ ಸ್ವಂತ ಶಕ್ತಿಯಿಂದಾನೋ ದೇವಭಕ್ತಿಯಿಂದಾನೋ ಇವನನ್ನ ನಡಿಯೋ ಹಾಗೆ ಮಾಡಿದ್ವಿ ಅನ್ನೋ ತರ ನೀವು ಯಾಕೆ ನಮ್ಮನ್ನೇ ನೋಡ್ತಾ ಇದ್ದೀರಾ?” ಅಂದ. (ಅ. ಕಾ. 3:12) ಸೇವೆಯಲ್ಲಿ ತಾವು ಸಾಧಿಸಿದ ಒಳ್ಳೇ ವಿಷ್ಯಗಳಿಗೆ ಕಾರಣ ದೇವರ ಶಕ್ತಿನೇ ಹೊರತು ಸ್ವಂತ ಶಕ್ತಿಯಲ್ಲ ಅಂತ ಪೇತ್ರ ಮತ್ತು ಬೇರೆ ಅಪೊಸ್ತಲರಿಗೆ ಗೊತ್ತಿತ್ತು. ಅದಕ್ಕೆ ಅವರು ದೀನತೆಯಿಂದ ಯೆಹೋವನಿಗೆ ಮತ್ತು ಯೇಸುಗೆ ಮಹಿಮೆ ಸಲ್ಲಿಸಿದ್ರು.
7, 8. (ಎ) ನಾವು ಜನ್ರಿಗೆ ಯಾವ ಉಡುಗೊರೆ ಕೊಡಬಹುದು? (ಬಿ) “ಎಲ್ಲವನ್ನ ಸರಿಮಾಡೋ ಸಮಯ ಬರುತ್ತೆ” ಅನ್ನೋ ಭವಿಷ್ಯವಾಣಿ ಇವತ್ತು ಹೇಗೆ ನಿಜ ಆಗ್ತಿದೆ?
7 ನಾವು ದೇವರ ಆಳ್ವಿಕೆ ಬಗ್ಗೆ ಸಾರೋವಾಗ ಇದೇ ರೀತಿ ದೀನತೆ ತೋರಿಸಬೇಕು. ಇವತ್ತು ದೇವರು ನಮಗೂ ಪವಿತ್ರಶಕ್ತಿ ಕೊಡ್ತಾನೆ. ಆದ್ರೆ ಅದ್ರಿಂದ ನಮಗೆ ಅದ್ಭುತ ಮಾಡೋಕೆ ಆಗಿಲ್ಲ ಅಂದ್ರೂ ಜನ ದೇವರಲ್ಲಿ ಮತ್ತು ಕ್ರಿಸ್ತನಲ್ಲಿ ನಂಬಿಕೆ ಬೆಳೆಸ್ಕೊಳ್ಳೋಕೆ ಸಹಾಯ ಮಾಡಕ್ಕಾಗುತ್ತೆ. ಜೊತೆಗೆ, ಪೇತ್ರ ಹೇಳಿದ ಉಡುಗೊರೆ ಅಂದ್ರೆ ತಮ್ಮ ಪಾಪಗಳಿಗೆ ಕ್ಷಮೆ ಮತ್ತು ಯೆಹೋವನಿಂದ ಚೈತನ್ಯ ಪಡೆಯೋ ಅವಕಾಶ ಸಿಗೋ ತರ ಅವ್ರಿಗೆ ಸಹಾಯ ಮಾಡೋಕಾಗುತ್ತೆ. ಇದ್ರಿಂದನೇ ಪ್ರತಿ ವರ್ಷ ಲಕ್ಷಾಂತರ ಜನರು ಸತ್ಯ ಸ್ವೀಕರಿಸಿ ದೀಕ್ಷಾಸ್ನಾನ ಪಡೆದು ಕ್ರಿಸ್ತನ ಶಿಷ್ಯರಾಗ್ತಿದ್ದಾರೆ.
8 “ಎಲ್ಲವನ್ನ ಸರಿಮಾಡೋ ಸಮಯ ಬರುತ್ತೆ” ಅಂತ ಪೇತ್ರ ಹೇಳಿದ್ದ. ಈಗ ನಾವು ಆ ಸಮಯದಲ್ಲೇ ಜೀವಿಸ್ತಾ ಇದ್ದೀವಿ. 1914ರಲ್ಲಿ ದೇವರ ಆಳ್ವಿಕೆ ಸ್ವರ್ಗದಲ್ಲಿ ಶುರು ಆಯ್ತು. ಇದು “ದೇವರು ತನ್ನ ಪವಿತ್ರ ಪ್ರವಾದಿಗಳ ಬಾಯಿಂದ ತುಂಬ ಮುಂಚೆನೇ ಹೇಳಿಸಿದ್ದ” ಮಾತುಗಳನ್ನ ನಿಜ ಮಾಡ್ತು. (ಅ. ಕಾ. 3:21; ಕೀರ್ತ. 110:1-3; ದಾನಿ. 4:16, 17) ಈ ಆಳ್ವಿಕೆ ಶುರು ಆದ ತಕ್ಷಣ, ಭೂಮಿಯಲ್ಲಿ ಸತ್ಯಾರಾಧನೆಯನ್ನ ಮತ್ತೆ ಶುರು ಮಾಡೋಕೆ ಕ್ರಿಸ್ತ ತನ್ನ ಶಿಷ್ಯರಿಗೆ ಸಹಾಯ ಮಾಡಿದ. ಇದ್ರಿಂದ, ಲಕ್ಷಾಂತರ ಜನರು ದೇವರ ಸರ್ಕಾರದ ಪ್ರಜೆಗಳಾಗಿ ನೆಮ್ಮದಿಯಿಂದ ಒಗ್ಗಟ್ಟಾಗಿ ದೇವರನ್ನ ಆರಾಧಿಸೋಕೆ ಆಯ್ತು. ಹೀಗೆ, ಅವರು ದೇವರ ಸರ್ಕಾರದ ಪ್ರಜೆಗಳಾಗಿದ್ದಾರೆ. ಅವರು ಹಳೇ ವ್ಯಕ್ತಿತ್ವ ತೆಗೆದುಹಾಕಿ ‘ಹೊಸ ವ್ಯಕ್ತಿತ್ವವನ್ನ ಬಟ್ಟೆ ತರ ಹಾಕೊಂಡಿದ್ದಾರೆ, ಅದನ್ನ ದೇವರು ತನ್ನ ಇಷ್ಟದ ಪ್ರಕಾರ ಮಾಡಿದ್ದಾನೆ.’ (ಎಫೆ. 4:22-24) ಇದಕ್ಕೆ ಕಾರಣ ಪವಿತ್ರಶಕ್ತಿನೇ. ಕುಂಟನಾಗಿದ್ದ ಭಿಕ್ಷುಕನನ್ನ ವಾಸಿ ಮಾಡೋಕೆ ಪವಿತ್ರಶಕ್ತಿ ವಾಸಿ ಮಾಡಿದ ತರನೇ ಜನರು ಬದಲಾವಣೆ ಮಾಡ್ಕೊಳ್ಳೋದಕ್ಕೂ ಸಹಾಯ ಮಾಡುತ್ತೆ. ಅದಕ್ಕೆ ಪೇತ್ರನ ತರ ನಾವು ಸಹ ಬೇರೆಯವರಿಗೆ ಕಲಿಸೋವಾಗ ದೇವರ ವಾಕ್ಯವನ್ನ ಧೈರ್ಯದಿಂದ ಮನಮುಟ್ಟೋ ಹಾಗೆ ಬಳಸಬೇಕು. ಜನರು ಕ್ರಿಸ್ತನ ಶಿಷ್ಯರಾದಾಗ ಆ ಯಶಸ್ಸಿಗೆ ನಾವಲ್ಲ ಬದಲಿಗೆ ದೇವರ ಶಕ್ತಿನೇ ಕಾರಣ.
“ನಾವಂತೂ . . . ಮಾತಾಡದೆ ಇರಲ್ಲ” (ಅ. ಕಾ. 4:1-22)
9-11. (ಎ) ಪೇತ್ರ ಮತ್ತು ಯೋಹಾನ ಹೇಳಿದ ಸಂದೇಶಕ್ಕೆ ಯೆಹೂದಿ ಮುಖಂಡರು ಹೇಗೆ ಪ್ರತಿಕ್ರಿಯಿಸಿದ್ರು? (ಬಿ) ಅಪೊಸ್ತಲರ ನಿರ್ಧಾರ ಏನಾಗಿತ್ತು?
9 ಪೇತ್ರ ಕೊಟ್ಟ ಭಾಷಣದಿಂದ ಮತ್ತು ವಾಸಿಯಾದ ಕುಂಟ ಕುಪ್ಪಳಿಸ್ತಾ, ಕೂಗಾಡ್ತಾ ಇದ್ದಿದ್ರಿಂದ ದೇವಾಲಯದಲ್ಲಿ ತುಂಬ ಗದ್ದಲ ಆಗ್ತಿತ್ತು. ಇದ್ರಿಂದಾಗಿ, ದೇವಾಲಯದ ಮುಖ್ಯಸ್ಥ (ಆಲಯದ ಆವರಣದೊಳಗಿನ ಸುರಕ್ಷತೆಯ ಮೇಲ್ವಿಚಾರಕ) ಮತ್ತು ಮುಖ್ಯ ಪುರೋಹಿತರು ಏನಾಯ್ತು ಅಂತ ತಿಳ್ಕೊಳ್ಳೋಕೆ ಓಡೋಡಿ ಬಂದ್ರು. ಇವರು ಬಹುಶಃ ಶ್ರೀಮಂತರಾಗಿದ್ದ, ರಾಜಕೀಯ ಬೆಂಬಲವಿದ್ದ ಸದ್ದುಕಾಯರ ಗುಂಪಿಗೆ ಸೇರಿದವರಾಗಿದ್ರು. ಇವರು ರೋಮನ್ನರ ಜೊತೆ ಶಾಂತಿಯಿಂದ ಇರೋಕೆ ಪ್ರಯತ್ನಿಸ್ತಿದ್ರು. ಆದ್ರೆ ಫರಿಸಾಯರು ಮಾಡ್ಕೊಂಡಿದ್ದ ನಿಯಮಗಳನ್ನ ಇವರು ತಿರಸ್ಕರಿಸ್ತಿದ್ರು. ಅಷ್ಟೇ ಅಲ್ಲ, ಸತ್ತವರು ಮತ್ತೆ ಜೀವಂತವಾಗಿ ಎದ್ದು ಬರ್ತಾರೆ ಅನ್ನೋದನ್ನೂ ನಂಬ್ತಿರಲಿಲ್ಲ.c ಯೇಸು ಮತ್ತೆ ಜೀವಂತವಾಗಿ ಎದ್ದಿದ್ದಾನೆ ಅಂತ ಪೇತ್ರ ಮತ್ತು ಯೋಹಾನ ದೇವಾಲಯದಲ್ಲಿ ಧೈರ್ಯದಿಂದ ಕಲಿಸ್ತಿರೋದು ಗೊತ್ತಾದಾಗ ಅವರ ಕೋಪ ನೆತ್ತಿಗೇರಿತು!
10 ಅದಕ್ಕೆ ಆ ವಿರೋಧಿಗಳು ಪೇತ್ರ ಮತ್ತು ಯೋಹಾನನನ್ನು ಜೈಲಿಗೆ ಹಾಕಿದ್ರು. ಮಾರನೇ ದಿನ ಅವ್ರನ್ನ ಯೆಹೂದಿ ಉಚ್ಚ ನ್ಯಾಯಾಲಯಕ್ಕೆ ಕರ್ಕೊಂಡು ಹೋದ್ರು. ತಾವು ತುಂಬ ಶ್ರೇಷ್ಠ ಅಂತ ಭಾವಿಸ್ತಿದ್ದ ಈ ಅಧಿಕಾರಿಗಳ ದೃಷ್ಟಿಯಲ್ಲಿ ಪೇತ್ರ ಮತ್ತು ಯೋಹಾನ ‘ಅಷ್ಟೇನೂ ಓದಿಲ್ಲದ ಸಾಮಾನ್ಯ ಜನರಾಗಿದ್ರು.’ ಇವ್ರಿಗೆ ದೇವಾಲಯದಲ್ಲಿ ಕಲಿಸೋ ಅಧಿಕಾರ ಇರಲಿಲ್ಲ. ಯಾಕಂದ್ರೆ ಅವರು ಮಾನ್ಯತೆ ಪಡೆದಿರೋ ಯಾವ ಧಾರ್ಮಿಕ ಶಾಲೆಗೂ ಹೋಗಿರಲಿಲ್ಲ. ಆದ್ರೂ ಅವರು ತಮ್ಮ ನಂಬಿಕೆಗಳ ಬಗ್ಗೆ ನೇರವಾಗಿ, ಧೈರ್ಯವಾಗಿ ಮಾತಾಡಿದ್ರು. ಇದನ್ನ ನೋಡಿ ನ್ಯಾಯಾಲಯಕ್ಕೇ ಆಶ್ಚರ್ಯ ಆಯ್ತು. ಪೇತ್ರ ಮತ್ತು ಯೋಹಾನ ಅಷ್ಟು ಚೆನ್ನಾಗಿ ಮಾತಾಡೋಕೆ ಕಾರಣ ಏನು? ಒಂದು ಕಾರಣ, ಅವರು “ಯೇಸು ಜೊತೆ ಇದ್ರು.” (ಅ. ಕಾ. 4:13) ಅವರ ಗುರು ಯೇಸು ಪಂಡಿತರ ತರ ಕಲಿಸದೇ ದೇವರಿಂದ ಸಿಕ್ಕ ಅಧಿಕಾರದಿಂದ ಕಲಿಸಿದ್ದನು.—ಮತ್ತಾ. 7:28, 29.
11 ನ್ಯಾಯಾಲಯ ಅಪೊಸ್ತಲರಿಗೆ ಸಾರೋದನ್ನ ನಿಲ್ಲಿಸಬೇಕಂತ ಆಜ್ಞೆ ಕೊಡ್ತು. ಆಗಿನ ಸಮಾಜದಲ್ಲಿ ಆ ನ್ಯಾಯಾಲಯದ ಆದೇಶಕ್ಕೆ ತುಂಬ ಮಹತ್ವ ಇತ್ತು. ಕೆಲವೇ ವಾರಗಳ ಹಿಂದೆ ಇದೇ ನ್ಯಾಯಾಲಯ ಯೇಸುಗೆ “ಮರಣಶಿಕ್ಷೆ ಆಗಬೇಕು” ಅಂತ ತೀರ್ಪು ಕೊಡ್ತು. (ಮತ್ತಾ. 26:59-66) ಆದ್ರೂ ಪೇತ್ರ ಮತ್ತು ಯೋಹಾನ ಹೆದರಲಿಲ್ಲ. ಈ ಶ್ರೀಮಂತ, ವಿದ್ಯಾವಂತ, ಪ್ರಭಾವಶಾಲಿ ಅಧಿಕಾರಿಗಳ ಮುಂದೆ ಅವರು ಭಯಪಡದೆ ಗೌರವದಿಂದ ಹೀಗಂದ್ರು: “ದೇವರ ಮಾತನ್ನ ಬಿಟ್ಟು ನಿಮ್ಮ ಮಾತು ಕೇಳೋದು ದೇವರ ದೃಷ್ಟಿಯಲ್ಲಿ ಸರಿನಾ? ನೀವೇ ಯೋಚನೆ ಮಾಡಿ. ನಾವಂತೂ ನೋಡಿದ್ದನ್ನ, ಕೇಳಿದ್ದನ್ನ ಮಾತಾಡದೆ ಇರಲ್ಲ.”—ಅ. ಕಾ. 4:19, 20.
12. ನಮ್ಮ ನಂಬಿಕೆಗಳು ಸರಿ ಅಂತ ನಮಗೆ ಗೊತ್ತಾಗೋಕೆ ಮತ್ತು ಧೈರ್ಯ ಬೆಳೆಸ್ಕೊಳ್ಳೋಕೆ ನಮಗೆ ಯಾವುದು ಸಹಾಯ ಮಾಡುತ್ತೆ?
12 ನೀವೂ ಇದೇ ರೀತಿ ಧೈರ್ಯ ತೋರಿಸ್ತೀರಾ? ನಿಮ್ಮ ಸಮಾಜದಲ್ಲಿರೋ ಶ್ರೀಮಂತ, ತುಂಬ ವಿದ್ಯಾವಂತ ಅಥವಾ ಪ್ರಭಾವಶಾಲಿ ಜನ್ರಿಗೆ ಸಾಕ್ಷಿ ಕೊಡಬೇಕಾದ ಸಂದರ್ಭ ಬಂದಾಗ ನಿಮಗೆ ಹೇಗನಿಸುತ್ತೆ? ನಿಮ್ಮ ಕುಟುಂಬದವರು, ಸಹಪಾಠಿಗಳು ಅಥವಾ ಜೊತೆಯಲ್ಲಿ ಕೆಲಸ ಮಾಡುವವರು ನಿಮ್ಮ ನಂಬಿಕೆಯ ಕಾರಣ ನಿಮ್ಮನ್ನ ಗೇಲಿಮಾಡಿದ್ರೆ ಹೇಗನಿಸುತ್ತೆ? ನೀವು ಹೆದರುತ್ತೀರಾ? ಹೆದರಿಕೆ ಆದ್ರೆ ಚಿಂತೆಮಾಡಬೇಡಿ, ನೀವು ಇಂಥ ಭಯವನ್ನ ಮೆಟ್ಟಿನಿಲ್ಲೋಕೆ ಆಗುತ್ತೆ. ಯೇಸು ಭೂಮಿಯಲ್ಲಿದ್ದಾಗ, ಅಪೊಸ್ತಲರು ತಮ್ಮ ನಂಬಿಕೆಗಳನ್ನ ಧೈರ್ಯವಾಗಿ ಮತ್ತು ಗೌರವದಿಂದ ಹೇಗೆ ಹೇಳಬೇಕಂತ ಕಲಿಸಿದನು. (ಮತ್ತಾ. 10:11-18) “ಲೋಕದ ಅಂತ್ಯಕಾಲ ಮುಗಿಯೋವರೆಗೂ ಯಾವಾಗ್ಲೂ” ತನ್ನ ಶಿಷ್ಯರ ಜೊತೆ ಇರ್ತಿನಿ ಅಂತ ಯೇಸು ಜೀವಂತ ಎದ್ದು ಬಂದ ಮೇಲೆ ಮಾತು ಕೊಟ್ಟನು. (ಮತ್ತಾ. 28:20) ಯೇಸುವಿನ ಮಾರ್ಗದರ್ಶನದಿಂದ “ನಂಬಿಗಸ್ತ, ವಿವೇಕಿ ಆದ ಆಳು” ನಮ್ಮ ನಂಬಿಕೆಗಳನ್ನ ಸಮರ್ಥಿಸೋದು ಹೇಗಂತ ಕಲಿಸುತ್ತೆ. (ಮತ್ತಾ. 24:45-47; 1 ಪೇತ್ರ 3:15) ಇದನ್ನ ನಾವು ಸಭಾ ಕೂಟಗಳಲ್ಲಿ ಮತ್ತು ಬೈಬಲಾಧಾರಿತ ಪ್ರಕಾಶನಗಳಲ್ಲಿ ಕಲಿತೀವಿ. ಉದಾಹರಣೆಗೆ ಕ್ರೈಸ್ತ ಜೀವನ ಮತ್ತು ಸೇವೆ ಕೂಟದಲ್ಲಿ, ಮತ್ತು jw.org ವೆಬ್ಸೈಟಿನಲ್ಲಿರೋ “ನಿಮ್ಮ ಪ್ರಶ್ನೆಗಳಿಗೆ ಬೈಬಲಿನ ಉತ್ತರ” ಅನ್ನೋ ಸರಣಿ ಲೇಖನಗಳಲ್ಲಿ ಕಲಿತೀವಿ. ಇದನ್ನ ನೀವು ಚೆನ್ನಾಗಿ ಬಳಸ್ತಿದ್ದೀರಾ? ಹಾಗೆ ಮಾಡಿದ್ರೆ ನಿಮ್ಮ ನಂಬಿಕೆಗಳು ಸರಿ ಅಂತ ಅನಿಸುತ್ತೆ ಮತ್ತು ಧೈರ್ಯ ಜಾಸ್ತಿ ಆಗುತ್ತೆ. ಆಗ ಅಪೊಸ್ತಲರ ತರ, ನೀವು ಸಹ ನೋಡಿದ ಮತ್ತು ಕೇಳಿಸ್ಕೊಂಡ ಬೈಬಲ್ ಸತ್ಯಗಳ ಬಗ್ಗೆ ಮಾತಾಡದೇ ಇರಲ್ಲ.
“ಅವ್ರೆಲ್ಲ ಸೇರಿ ದೇವ್ರಿಗೆ . . . ಪ್ರಾರ್ಥನೆ ಮಾಡಿದ್ರು” (ಅ. ಕಾ. 4:23-31)
13, 14. ವಿರೋಧ ಬಂದ್ರೆ ನಾವೇನು ಮಾಡಬೇಕು? ಯಾಕೆ?
13 ಬಿಡುಗಡೆಯಾದ ತಕ್ಷಣ ಪೇತ್ರ ಮತ್ತು ಯೋಹಾನ ಸಭೆಯ ಉಳಿದ ಸದಸ್ಯರನ್ನ ಭೇಟಿ ಮಾಡಿದ್ರು. ಎಲ್ಲರೂ ಸೇರಿ ‘ದೇವ್ರಿಗೆ ಪ್ರಾರ್ಥನೆ ಮಾಡಿ’ ಸಾರುತ್ತಾ ಇರೋಕೆ ಧೈರ್ಯ ಕೊಡು ಅಂತ ಬೇಡ್ಕೊಂಡ್ರು. (ಅ. ಕಾ. 4:24) ದೇವರ ಇಷ್ಟದಂತೆ ಮಾಡುವಾಗ ಸ್ವಂತ ಸಾಮರ್ಥ್ಯದಲ್ಲಿ ಭರವಸೆ ಇಡೋದು ಮೂರ್ಖತನ ಅಂತ ಪೇತ್ರನಿಗೆ ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ ಕೆಲವೇ ವಾರಗಳ ಹಿಂದೆ ಅವನು ಸ್ವಂತ ಸಾಮರ್ಥ್ಯದ ಮೇಲೆ ನಂಬಿಕೆ ಇಟ್ಟು ಯೇಸುಗೆ “ಬೇರೆ ಎಲ್ರೂ ಬಿಟ್ಟು ಹೋದ್ರೂ ನಾನು ಮಾತ್ರ ನಿನ್ನನ್ನ ಬಿಟ್ಟು ಹೋಗಲ್ಲ” ಅಂತ ಹೇಳಿದ್ದ. ಇದನ್ನ ಹೇಳಿ ಸ್ವಲ್ಪ ಸಮಯದಲ್ಲೇ, ಮನುಷ್ಯರ ಭಯದಿಂದ ತನ್ನ ಸ್ನೇಹಿತ ಮತ್ತು ಗುರು ಆಗಿದ್ದ ಯೇಸುನಾ ‘ನನಗೆ ಯಾರಂತಾನೇ ಗೊತ್ತಿಲ್ಲ’ ಅಂತ ಹೇಳಿದ್ದ. ಅವನು ಹೀಗೆ ಮಾಡ್ತಾನೆ ಅಂತ ಯೇಸು ಮುಂಚೆನೇ ಹೇಳಿದ್ದನು. ಆದ್ರೆ ಪೇತ್ರ ತನ್ನ ತಪ್ಪಿಂದ ಪಾಠ ಕಲಿತಿದ್ದ.—ಮತ್ತಾ. 26:33, 34, 69-75.
14 ಕ್ರಿಸ್ತನ ಬಗ್ಗೆ ಸಾಕ್ಷಿ ಕೊಡಬೇಕು ಅನ್ನೋ ಆಜ್ಞೆಯನ್ನ ಪಾಲಿಸೋಕೆ ಛಲ ಒಂದೇ ಇದ್ರೆ ಸಾಕಾಗಲ್ಲ. ನಿಮ್ಮ ನಂಬಿಕೆಯನ್ನ ಮುರಿಯೋಕೆ ಅಥವಾ ಸಾರೋದನ್ನ ತಡೆಯೋಕೆ ವಿರೋಧಿಗಳು ಪ್ರಯತ್ನಿಸುವಾಗ ಪೇತ್ರ ಮತ್ತು ಯೋಹಾನ ಏನೋ ಮಾಡಿದ್ರೋ ಅದೇ ತರ ಮಾಡಬೇಕು. ಬಲಕ್ಕಾಗಿ ಯೆಹೋವನಿಗೆ ಪ್ರಾರ್ಥಿಸಬೇಕು. ಸಭೆಯ ಸಹಾಯ ಪಡಿಬೇಕು. ನಿಮಗೆ ಎದುರಾಗಿರೋ ಕಷ್ಟಗಳ ಬಗ್ಗೆ ಹಿರಿಯರಿಗೆ, ಪ್ರೌಢ ಕ್ರೈಸ್ತರಿಗೆ ಹೇಳಬೇಕು. ಅವರ ಪ್ರಾರ್ಥನೆಗಳಿಂದ ನಿಮಗೆ ಬೇಕಾದ ಶಕ್ತಿ ಸಿಗುತ್ತೆ.—ಎಫೆ. 6:18; ಯಾಕೋ. 5:16.
15. ಸಾರೋದನ್ನ ಸ್ವಲ್ಪ ಸಮಯದ ತನಕ ನಿಲ್ಲಿಸಿದ್ರೆ ಯಾಕೆ ಬೇಜಾರಾಗಬಾರದು?
15 ಒಂದುವೇಳೆ ಒತ್ತಡಕ್ಕೆ ಮಣಿದು ಸಾರೋದನ್ನ ಸ್ವಲ್ಪ ಸಮಯದ ತನಕ ನಿಲ್ಲಿಸಿದ್ದರೆ ಬೇಜಾರಾಗಬೇಡಿ. ಯೇಸು ಸತ್ತ ಮೇಲೆ ಎಲ್ಲ ಅಪೊಸ್ತಲರು ಕೂಡ ಸ್ವಲ್ಪ ಸಮಯದ ತನಕ ಸಾರೋದನ್ನ ನಿಲ್ಲಿಸಿದ್ರು. ಆದ್ರೆ ಆದಷ್ಟು ಬೇಗ ಮತ್ತೆ ಸಾರೋಕೆ ಶುರು ಮಾಡಿದ್ರು. (ಮತ್ತಾ. 26:56; 28:10, 16-20) ಹಾಗಾಗಿ ಹಿಂದೆ ಮಾಡಿದ ತಪ್ಪುಗಳನ್ನ ನೆನಸಿ ಬೇಜಾರ್ ಮಾಡ್ಕೊಬೇಡಿ. ಬದಲಿಗೆ ಅದ್ರಿಂದ ಪಾಠ ಕಲಿತು ಬೇರೆಯವರನ್ನ ಬಲಪಡಿಸಿ.
16, 17. ಯೆರೂಸಲೇಮಿನಲ್ಲಿದ್ದ ಕ್ರಿಸ್ತನ ಹಿಂಬಾಲಕರು ಮಾಡಿದ ಪ್ರಾರ್ಥನೆಯಿಂದ ನಾವೇನು ಕಲಿಬಹುದು?
16 ಅಧಿಕಾರದಲ್ಲಿ ಇರುವವರು ನಮಗೆ ಕಷ್ಟ ಕೊಟ್ರೆ ನಾವು ಏನಂತ ಪ್ರಾರ್ಥಿಸಬೇಕು? ಅಪೊಸ್ತಲರು ‘ನಮ್ಗೆ ಪರೀಕ್ಷೆಗಳೇ ಬರದೇ ಇರೋ ತರ ಮಾಡು’ ಅಂತ ದೇವರ ಹತ್ರ ಬೇಡ್ಕೊಂಡಿಲ್ಲ. ಯಾಕಂದ್ರೆ ಅವ್ರಿಗೆ ಯೇಸು ಹೇಳಿದ ಈ ಮಾತು ಚೆನ್ನಾಗಿ ನೆನಪಿತ್ತು: “ಜನ ನನಗೇ ಹಿಂಸೆ ಕೊಟ್ಟಿರುವಾಗ ನಿಮಗೂ ಹಿಂಸೆ ಕೊಡ್ತಾರೆ.” (ಯೋಹಾ. 15:20) ಹಾಗಾಗಿ ಈ ನಿಷ್ಠಾವಂತ ಶಿಷ್ಯರು, ವಿರೋಧಿಗಳ ಬೆದರಿಕೆಗಳನ್ನ “ಕೇಳಿಸ್ಕೊ” ಅಂತ ಯೆಹೋವನಿಗೆ ಬೇಡ್ಕೊಂಡ್ರು. (ಅ. ಕಾ. 4:29) ಅವರು ಅನುಭವಿಸ್ತಿರೋ ಈ ಹಿಂಸೆ ಭವಿಷ್ಯವಾಣಿ ನಿಜ ಆಗ್ತಿರೋದಕ್ಕೆ ಸೂಚನೆ ಅಂತ ಗುರುತಿಸಿದ್ರು. ಹೀಗೆ ಮುಖ್ಯವಾದ ವಿಷ್ಯಕ್ಕೆ ಗಮನಕೊಟ್ರು. ಅಧಿಕಾರಿಗಳು ಏನೇ ಹೇಳಿದ್ರೂ ಯೇಸು ಕಲಿಸಿದ ಪ್ರಾರ್ಥನೆ ತರ ದೇವರ ಇಷ್ಟ ‘ಭೂಮಿಯಲ್ಲಿ ನೆರವೇರುತ್ತೆ’ ಅಂತ ಅವ್ರಿಗೆ ಚೆನ್ನಾಗಿ ಗೊತ್ತಿತ್ತು.—ಮತ್ತಾ. 6:9, 10.
17 ದೇವರ ಇಷ್ಟದ ತರ ಮಾಡೋಕೆ ಶಿಷ್ಯರಿಗೆ ಮನಸ್ಸಿತ್ತು. ಅದಕ್ಕೆ ಅವರು “ನಿನ್ನ ಸೇವಕರು ನಿನ್ನ ಮಾತನ್ನ ಧೈರ್ಯವಾಗಿ ಹೇಳ್ತಾ ಇರೋಕೆ ಸಹಾಯ ಮಾಡು” ಅಂತ ಪ್ರಾರ್ಥನೆ ಮಾಡಿದ್ರು. ಇದಕ್ಕೆ ಯೆಹೋವ ಹೇಗೆ ಉತ್ರ ಕೊಟ್ಟನು? ತಕ್ಷಣ “ಅವರು ಸೇರಿದ್ದ ಸ್ಥಳ ನಡುಗಿತು. ಅವ್ರಲ್ಲಿ ಪ್ರತಿಯೊಬ್ಬರ ಮೇಲೆ ಪವಿತ್ರಶಕ್ತಿ ಬಂತು. ಹಾಗಾಗಿ ಅವರು ದೇವರ ಮಾತನ್ನ ಧೈರ್ಯದಿಂದ ಹೇಳ್ತಿದ್ರು.” (ಅ. ಕಾ. 4:29-31) ಇದ್ರಿಂದ ನಮಗೇನು ಗೊತ್ತಾಗುತ್ತೆ? ದೇವರ ಇಷ್ಟ ನಡೆಯೋದನ್ನ ತಡಿಯೋಕೆ ಯಾರಿಂದಾನೂ ಯಾವುದರಿಂದಾನೂ ಆಗಲ್ಲ. (ಯೆಶಾ. 55:11) ಎಷ್ಟೇ ಕಷ್ಟ ಬಂದ್ರೂ, ವಿರೋಧಿ ಎಷ್ಟೇ ಬಲಶಾಲಿಯಾಗಿದ್ರೂ ನಾವು ದೇವರಿಗೆ ಪ್ರಾರ್ಥಿಸಿದ್ರೆ ಆತನ ವಾಕ್ಯವನ್ನ ಧೈರ್ಯವಾಗಿ ಹೇಳೋಕೆ ಬೇಕಾದ ಬಲವನ್ನ ಆತನು ನಮಗೆ ಕೊಟ್ಟೇ ಕೊಡ್ತಾನೆ.
“ಮನುಷ್ಯರಿಗೆ ಅಲ್ಲ, ದೇವ್ರಿಗೆ” ಲೆಕ್ಕ ಕೊಡಬೇಕು (ಅ. ಕಾ. 4:32–5:11)
18. ಯೆರೂಸಲೇಮಿನಲ್ಲಿದ್ದ ಸಭೆಯ ಸದಸ್ಯರು ಒಬ್ಬರಿಗೊಬ್ರು ಹೇಗೆ ಸಹಾಯ ಮಾಡಿದ್ರು?
18 ಯೆರೂಸಲೇಮಿನಲ್ಲಿ ಹೊಸದಾಗಿ ಆರಂಭವಾಗಿದ್ದ ಸಭೆ ಬೇಗ ದೊಡ್ಡದಾಗಿ ಅದರ ಸಂಖ್ಯೆ 5,000ಕ್ಕೂ ಜಾಸ್ತಿ ಆಯ್ತು.d ಶಿಷ್ಯರ ಹಿನ್ನೆಲೆ ಬೇರೆಬೇರೆ ಆಗಿದ್ರೂ ಅವರೆಲ್ಲಾ “ಒಂದೇ ಮನಸ್ಸಿಂದ ಒಗ್ಗಟ್ಟಾಗಿದ್ರು.” ಅವರು ಒಂದೇ ತರ ಯೋಚ್ನೆ ಮಾಡ್ತಿದ್ರು. (ಅ. ಕಾ. 4:32; 1 ಕೊರಿಂ. 1:10) ಅವರು ತಮ್ಮ ಪ್ರಯತ್ನಗಳನ್ನ ಆಶೀರ್ವದಿಸು ಅಂತ ಯೆಹೋವನಿಗೆ ಪ್ರಾರ್ಥಿಸಿದ್ರು. ಜೊತೆಗೆ, ಬೇರೆವ್ರ ನಂಬಿಕೆನೂ ಬಲಪಡಿಸಿದ್ರು, ಕಷ್ಟದಲ್ಲಿರೋರಿಗೆ ಸಹಾಯನೂ ಮಾಡಿದ್ರು. (1 ಯೋಹಾ. 3:16-18) ಉದಾಹರಣೆಗೆ, ದೂರ ದೇಶಗಳಿಂದ ಯೆರೂಸಲೇಮಿಗೆ ಬಂದವರು ತಮ್ಮ ಹೊಸ ನಂಬಿಕೆಯ ಬಗ್ಗೆ ಹೆಚ್ಚನ್ನ ಕಲಿಬೇಕಾದ್ರೆ ಅಲ್ಲೇ ಉಳ್ಕೊಬೇಕಿತ್ತು. ಇಂಥವರಿಗೆ ಸಹಾಯ ಮಾಡಿದವರಲ್ಲಿ ಅಪೊಸ್ತಲರು ಯಾರನ್ನ ಬಾರ್ನಬ ಅಂತ ಕರೀತಿದ್ರೋ ಆ ಯೋಸೇಫನೂ ಇದ್ದ. ಇವನು ತನ್ನ ಸ್ವಂತ ಜಮೀನು ಮಾರಿ ಅದ್ರಿಂದ ಬಂದ ಹಣವನ್ನೆಲ್ಲ ದಾನ ಮಾಡಿದ.
19. ಯೆಹೋವ ಅನನೀಯ ಸಪ್ಫೈರಳಿಗೆ ಯಾಕೆ ಮರಣಶಿಕ್ಷೆ ಕೊಟ್ಟನು?
19 ಅನನೀಯ-ಸಪ್ಫೈರ ಅನ್ನೋ ದಂಪತಿ ಕೂಡ ತಮ್ಮ ಆಸ್ತಿ ಮಾರಿ ಕಾಣಿಕೆ ಕೊಟ್ರು. ಆದ್ರೆ “ಬಂದ ಹಣದಲ್ಲಿ ಸ್ವಲ್ಪವನ್ನ ರಹಸ್ಯವಾಗಿ” ಬಚ್ಚಿಟ್ಟು ಪೂರ್ತಿ ಹಣ ಕೊಡ್ತಿದ್ದೀವಿ ಅನ್ನೋ ತರ ನಾಟಕ ಆಡಿದ್ರು. (ಅ. ಕಾ. 5:2) ಆಗ ಯೆಹೋವ ಅವರಿಗೆ ಮರಣಶಿಕ್ಷೆ ಕೊಟ್ಟನು. ಇದಕ್ಕೆ ಕಾರಣ, ಅವರು ಕೊಟ್ಟ ಹಣ ಕಡಿಮೆಯಾಯ್ತು ಅಂತಲ್ಲ, ಬದಲಿಗೆ ಕೊಡೋದರ ಹಿಂದೆ ಅವ್ರಿಗಿದ್ದ ಉದ್ದೇಶ ಕೆಟ್ಟದ್ದಾಗಿತ್ತು. ಅವರು ಮೋಸ ಮಾಡಿದ್ರು. ಅವರು “ಸುಳ್ಳು ಹೇಳಿದ್ದು ಮನುಷ್ಯರಿಗೆ ಅಲ್ಲ, ದೇವ್ರಿಗೆ.” (ಅ. ಕಾ. 5:4) ಯೇಸು ಖಂಡಿಸಿದ್ದ ಕಪಟಿಗಳ ತರ ಅನನೀಯ ಮತ್ತು ಸಪ್ಫೈರ ದೇವರನ್ನ ಮೆಚ್ಚಿಸೋದಕ್ಕಿಂತ ಜನರ ಹೊಗಳಿಕೆ ಪಡೆಯೋದು ಅವ್ರಿಗೆ ಮುಖ್ಯವಾಗಿತ್ತು.—ಮತ್ತಾ. 6:1-3.
20. ಯೆಹೋವನಿಗೆ ಕೊಡೋ ವಿಷ್ಯದಲ್ಲಿ ನಾವು ಯಾವ ಪಾಠ ಕಲಿತೀವಿ?
20 ಒಂದನೇ ಶತಮಾನದಲ್ಲಿ ಯೆರೂಸಲೇಮಿನಲ್ಲಿದ್ದ ನಂಬಿಗಸ್ತ ಶಿಷ್ಯರ ತರ ಈಗ್ಲೂ ಉದಾರ ಮನಸ್ಸಿನ ಲಕ್ಷಾಂತರ ಸಾಕ್ಷಿಗಳು ಇದ್ದಾರೆ. ಇವರು ಮನಸಾರೆ ಕಾಣಿಕೆ ಕೊಡೋ ಮೂಲಕ ಲೋಕವ್ಯಾಪಕ ಸಾರೋ ಕೆಲಸಕ್ಕೆ ಬೆಂಬಲ ಕೊಡ್ತಾರೆ. ಈ ಕೆಲಸವನ್ನ ಬೆಂಬಲಿಸೋಕೆ ಸಮಯ ಅಥವಾ ಹಣ ಕೊಡಿ ಅಂತ ಅವರು ಯಾರನ್ನೂ ಒತ್ತಾಯ ಮಾಡಲ್ಲ. ಯಾಕಂದ್ರೆ, ‘ಅಯ್ಯೋ ಕೊಡಬೇಕಲ್ಲ’ ಅಂತಾಗ್ಲಿ ಬೇರೆಯವರು ಒತ್ತಾಯ ಮಾಡ್ತಿದ್ದಾರೆ ಅಂತಾಗ್ಲಿ ಕೊಡೋದು ಯೆಹೋವನಿಗೆ ಇಷ್ಟ ಇಲ್ಲ. (2 ಕೊರಿಂ. 9:7) ನಾವು ಕೊಡೋವಾಗ ಯಾವ ಉದ್ದೇಶದಿಂದ ಕೊಡ್ತೀವಿ ಅನ್ನೋದನ್ನ ಆತನು ನೋಡ್ತಾನೇ ಹೊರತು ಎಷ್ಟು ಕೊಡ್ತೀವಿ ಅಂತಲ್ಲ. (ಮಾರ್ಕ 12:41-44) ನಾವು ಯಾವತ್ತೂ ಅನನೀಯ ಸಪ್ಫೈರ ತರ ಇರಬಾರದು. ಅಂದ್ರೆ ಸ್ವಾರ್ಥಕ್ಕಾಗಿ ಅಥವಾ ಹೊಗಳಿಕೆ ಸಿಗಬೇಕಂತ ದೇವರ ಸೇವೆ ಮಾಡಬಾರದು. ಬದಲಿಗೆ ನಾವು ಯಾವಾಗ್ಲೂ ಪೇತ್ರ, ಯೋಹಾನ ಮತ್ತು ಬಾರ್ನಬನ ತರ ದೇವರ ಮೇಲೆ ಮತ್ತು ಜನರ ಮೇಲೆ ಇರೋ ಪ್ರೀತಿಯಿಂದ ಯೆಹೋವನ ಸೇವೆ ಮಾಡಬೇಕು!—ಮತ್ತಾ. 22:37-40.
a ಜನ ಪ್ರಾರ್ಥನೆಯನ್ನ ಬೆಳಗ್ಗೆ ಮತ್ತು ಮಧ್ಯಾಹ್ನ ಬಲಿಗಳನ್ನ ಅರ್ಪಿಸೋ ಸಮಯದಲ್ಲಿ ಮಾಡ್ತಿದ್ರು. ಮಧ್ಯಾಹ್ನದ ಬಲಿ ಅರ್ಪಣೆಯನ್ನ “ಮೂರು ಗಂಟೆಗೆ” ಕೊಡ್ತಿದ್ರು.
b “ಪೇತ್ರ—ಚುರುಕಿನ ಅಪೊಸ್ತಲ” ಮತ್ತು “ಯೋಹಾನ—ಯೇಸುವಿನ ಪ್ರಿಯ ಶಿಷ್ಯ” ಅನ್ನೋ ಚೌಕಗಳನ್ನ ನೋಡಿ.
c “ಮಹಾ ಪುರೋಹಿತ ಮತ್ತು ಮುಖ್ಯ ಪುರೋಹಿತರು” ಅನ್ನೋ ಚೌಕ ನೋಡಿ.
d ಕ್ರಿ.ಶ. 33ರಲ್ಲಿ ಯೆರೂಸಲೇಮಿನಲ್ಲಿ ಬರೀ 6,000ದಷ್ಟು ಫರಿಸಾಯರು ಮತ್ತು ಇದಕ್ಕಿಂತಲೂ ಕಡಿಮೆ ಸಂಖ್ಯೆಯ ಸದ್ದುಕಾಯರು ಇದ್ದಿರಬೇಕು. ಯೇಸುವಿನ ಬೋಧನೆಗಳಿಂದ ತಮಗೆ ತುಂಬ ಅಪಾಯವಿದೆ ಅಂತ ಈ ಎರಡೂ ಗುಂಪಿನವರು ನೆನಸೋಕೆ ಇದು ಕೂಡ ಒಂದು ಕಾರಣ ಆಗಿರಬಹುದು.