ದೇವರಿಗೆ ಕಿವಿಗೊಡಲು ನಿಮಗೆ ಮನಸ್ಸುಂಟೋ?
ಬೈಬಲನ್ನು ನಾವು ಓದುವಾಗ, ಒಂದನೇ ಶತಮಾನದ ಜನರ ಸ್ಥಿತಿಗತಿಯು ಅನೇಕ ವಿಧಗಳಲ್ಲಿ ಇಂದಿನ ನಮ್ಮದಕ್ಕೆ ಸರಿಸಮಾನವೆಂಬದನ್ನು ನಾವು ಬೇಗನೇ ಕಂಡುಕೊಳ್ಳುತ್ತೇವೆ. ಬಹಳಷ್ಟು ಅನೈತಿಕತೆ ಮತ್ತು ಅಪ್ರಾಮಾಣಿಕತೆಯು ಅಲ್ಲಿತ್ತು, ವಿಶೇಷವಾಗಿ ಇಸ್ರಾಯೇಲಿನ ಲುಚ್ಛ ನೆರೆಕರೆಯವರಲ್ಲಿ; ಅನೈತಿಕತೆಯು ಹೆಚ್ಚಾಗಿ ಅವರ ಧರ್ಮದ ಒಂದು ಭಾಗವಾಗಿತ್ತು. ಬಡಜನರಿಗೆ ಜೀವನವು ಅನಿಶ್ಚಿತವಾಗಿತ್ತು, ಅಲ್ಲಿ ರಾಜಕೀಯ ಸಮಸ್ಯೆಗಳೂ ಇದ್ದವು. ಸಾ.ಶ. 66 ರೊಳಗೆ ಇಸ್ರಾಯೇಲ್ ಮತ್ತು ರೋಮ್ ಪೂರ್ಣ ಪ್ರಮಾಣದ ಯುದ್ಧಕ್ಕೆ ತೊಡಗಿದ್ದವು. ಆ ದಿನಗಳಲ್ಲಿ, ಇಂದಿನಂತೆ, ಜನರಿಗೆ ಸಹಾಯದ ಅಗತ್ಯವಿತ್ತು.
ಆ ದಿನಗಳ ಮತ್ತು ನಮ್ಮ ದಿನಗಳ ಧಾರ್ಮಿಕ ಸಮಾನತೆಗಳಾದರೋ ಬಹಳ ಹೆಚ್ಚು. ಯೆಹೂದಿ ಧರ್ಮ ಮುಖಂಡರು ಕಪಟತನದಿಂದ ತುಂಬಿದ್ದರು. (ಮತ್ತಾಯ 23:15; ಲೂಕ 20:46, 47) ಯೆಹೂದ್ಯೇತರ ಲೋಕದಲ್ಲಾದರೋ ಧಾರ್ಮಿಕ ಭಾವನೆಗಳು ಸಿನಿಕತನದಿಂದ ಹಿಡಿದು ಮೂಢನಂಬಿಕೆಗೆ ಮತ್ತು ಮತಾಂಧ ಶ್ರದ್ಧೆಗೆ ಇಳಿದಿತ್ತು. (ಅಪೊಸ್ತಲರ ಕೃತ್ಯ 14:8-13; 19:27, 28 ಹೋಲಿಸಿ.) ಸಂಬಂಧಿತವಾಗಿ ಹೊಸತಾಗಿದ್ದ ಕ್ರೈಸ್ತಸಭೆಯಲ್ಲೂ ಎಲ್ಲವೂ ನೆಮ್ಮದಿಯಲ್ಲಿರಲಿಲ್ಲ. ಶತಮಾನದ ಅಂತ್ಯದೊಳಗೆ, ಅಪೊಸ್ತಲ ಯೋಹಾನನು ಎಚ್ಚರಿಸಿದ್ದು: “ಮೋಸಗಾರರು ಅನೇಕ ಮಂದಿ ಹೊರಟು ಲೋಕದೊಳಗೆ ಹೋಗಿದ್ದಾರೆ.” (2 ಯೋಹಾನ 7) ಹೌದು, ಅಲ್ಲಿ ಸಹಾ, ಖೋಟಾ ಸಲಹೆಗಳು ಧರ್ಮದ ವಿಷಯದಲ್ಲಿ ನೀಡಲ್ಪಡುತ್ತಿದ್ದವು. ಆದರೂ, ನಂಬಲರ್ಹವಾದ ಸಹಾಯವು ದೊರಕುತಿತ್ತು.
ಯೇಸುವಿಗೆ ನೀವು ಕಿವಿಗೊಡುತ್ತಿದ್ದಿರೋ?
ಯೋಗ್ಯವಾದ ಸೂಚನೆಯನ್ನು ಆ ದಿನಗಳಲ್ಲಿ ನೀಡುತ್ತಿದ್ದವನು ಯೇಸುವೇ. ಅದೆಷ್ಟು ಪ್ರೇರೇಪಕವಾಗಿತ್ತೆಂದರೆ ನಾವದರ ಪ್ರಭಾವದ ಕುರಿತು ಹೀಗೆ ಓದುತ್ತೇವೆ: “ಜನರ ಗುಂಪುಗಳು ಆತನ ಉಪದೇಶಕ್ಕೆ ಅತ್ಯಾಶ್ಚರ್ಯಪಟ್ಟವು.” (ಮತ್ತಾಯ 7:28) ಆದರೆ ಆ ಗುಂಪಿನವರಲ್ಲಿ ಕೆಲವರು ಮಾತ್ರವೇ ನಿಜವಾಗಿ ಅವನಿಗೆ ಕಿವಿಗೊಟ್ಟರು. ಯೇಸು ಅದ್ಭುತಕೃತ್ಯಗಳನ್ನು ಮಾಡಿದನು ಮತ್ತು ದೈವಿಕ ಜೀವಿತ ಮತ್ತು ನಡವಳಿಕೆಯ ಉತ್ತಮ ಮಾದರಿಯನ್ನಿಟ್ಟನು. ಆದರೂ, ಒಳ್ಳೇ ಶಿಕ್ಷಣ ಪಡೆದವರೆನಿಸಿದ ಮುಖಂಡರು ಸಹಾ ಅವನ ಮಾತುಗಳಲ್ಲಿದ್ದ ಮೂಲ್ಯತೆಯನ್ನು ಕಾಣಲು ನಿರಾಕರಿಸಿದರು. ಏಕೆ?
ಹೆಚ್ಚು ಮಟ್ಟಿಗೆ ಅದಕ್ಕೆ ಕಾರಣವಾಗಿದ್ದದ್ದು ದುರಭಿಮಾನ. ಕೆಲವರು ಯೇಸುವನ್ನು ತಿರಸ್ಕರಿಸಿದ್ದು ಅವನು ನಜರೇತಿನವನೆಂಬ ಕಾರಣದಿಂದ. ತಾವು ಕಲಿತ ಶಾಲೆಯಲ್ಲಿ ಅವನು ಕಲಿತವನಲ್ಲ ಮತ್ತು ತಮ್ಮ ಆಳುವ ವರ್ಗದೊಂದಿಗೆ ಅವನಿಗೆ ಯಾವ ಸಂಬಂಧವೂ ಇಲ್ಲ ಎಂಬ ಕಾರಣದಿಂದ ಬೇರೆಯವರು ಅವನನ್ನು ತಿರಸ್ಕರಿಸಿದ್ದರು. (ಯೋಹಾನ 1:46; 7:12, 15, 47, 48) ಅದಲ್ಲದೆ, ಜನರು ಕೇಳಲು ಬಯಸಿದ್ದನ್ನೇ ಯೇಸುವು ಯಾವಾಗಲೂ ಹೇಳಲಿಲ್ಲ. ಅವನು ಸತ್ಯವನ್ನೇ ಮಾತಾಡಿದನು, ಮತ್ತು ಉದಾಹರಣೆಗಾಗಿ, ಫರಿಸಾಯರು, ಅವನ ಮಾತುಗಳಿಂದ ಬಹಳ ಬಾರಿ ಕುಪಿತರಾಗುತ್ತಿದ್ದರು. (ಮತ್ತಾಯ 15:12-14) ಕಾರ್ಯಥಃ ಯೆಹೂದಿ ಧಾರ್ಮಿಕ ಮುಖಂಡರೇ, ಅವನ ಮೂರುವರೆ ವರ್ಷಗಳ ಸಾರುವಿಕೆಯ ನಂತರ, ಅವನನ್ನು ಮರಣಕ್ಕೆ ಒಪ್ಪಿಸಿದರು. (ಲೂಕ 23:20-35) ಎಂತಹ ಸಂದರ್ಭವನ್ನು ಅವರು ಕಳಕೊಂಡರು, ಯಾಕಂದರೆ, ಯೇಸುವಿನಲ್ಲಿ “ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳು” ಇದ್ದವು!—ಯೋಹಾನ 6:68.
ಒಂದುವೇಳೆ ನೀವಾ ಸಮಯದಲ್ಲಿ ಯೆರೂಸಲೇಮಿನಲ್ಲಿ ಜೀವಿಸಿದ್ದರೆ, ಆ ಧಾರ್ಮಿಕ ಮುಖಂಡರನ್ನು ಮತ್ತು ಆ ಉಳಿದ ಜನರ ಗುಂಪನ್ನು ಹಿಂಬಾಲಿಸುತ್ತಿದ್ದಿರೋ? ಅಥವಾ ಯೇಸುವಂದ ಮಾತುಗಳ ಅರ್ಥವನ್ನು ಗ್ರಹಿಸಿಕೊಳ್ಳಲು ಸಾಕಷ್ಟು ತೆರೆದ ಮನಸ್ಸುಳ್ಳವರಾಗುತ್ತಿದ್ದಿರೋ? ಹಾಗಿದ್ದರೆ, ಯೇಸು ತನ್ನ ಸಂಚಾರಗಳಲ್ಲಿ ಭೇಟಿಯಾದ ಆ ಗಮನಾರ್ಹ ಮಹಿಳೆಯಂತೆ ನೀವಿರುತ್ತಿದ್ದಿರಿ.
ಕಿವಿಗೊಟ್ಟವರಲ್ಲಿ ಒಬ್ಬಳು
ಸಮಾರ್ಯದ ದಾರಿಯಾಗಿ ಸಂಚರಿಸುತ್ತಿದ್ದಾಗ ಅವನು ಈ ಸ್ತ್ರೀಯನ್ನು ಭೇಟಿಯಾದನು. ಅವನೊಂದು ಬಾವಿಯ ಬಳಿಯಲ್ಲಿ ಕೂತು ವಿಶ್ರಮಿಸುತ್ತಿದ್ದನು ಮತ್ತು ಅವನಲ್ಲಿದ್ದಾಗ ಆ ಹೆಂಗಸು ನೀರು ಸೇದುವದಕ್ಕಾಗಿ ಬಂದಳು. ಅವಳ ಹೆಸರು ನಮಗೆ ಗೊತ್ತಿಲ್ಲ, ಆದರೆ, ಯೇಸು ಬಹಳ ದಣಿದಿದ್ದರೂ, ಧರ್ಮದ ಕುರಿತು ಅವಳೊಂದಿಗೆ ಮಾತಾಡಲು ಆ ಸಂದರ್ಭವನ್ನು ತಕ್ಕೊಂಡನು ಎಂದು ಬೈಬಲು ದಾಖಲೆ ಮಾಡಿದೆ.—ಯೋಹಾನ 4:5-15.
ಯೇಸುವಿನ ಬಳಿ ಸಾರುವಿಕೆಯನ್ನು ನಿರಾಕರಿಸಲು ಆ ಹೆಂಗಸು ಅನೇಕ ಕಾರಣಗಳನ್ನು ಕೊಡ ಬಹುದಿತ್ತು. ಆಕೆ ಬೇರೆ ಧರ್ಮದವಳು—ಸಮಾರ್ಯದವರ ಆರಾಧನಾ ಕ್ರಮವು ಯೆಹೂದ್ಯರಿಗಿಂತ ಬೇರೆಯಾಗಿತ್ತು. ಅಲ್ಲದೆ, ಯೆಹೂದ್ಯರು ಸಮಾರ್ಯದವರನ್ನು ನೀಚರಾಗಿ ನೋಡುತ್ತಿದ್ದರು ಮತ್ತು ಅವರೊಡನೆ ಸಹವಾಸವನ್ನು ನಿರಾಕರಿಸುತ್ತಿದ್ದರು. ಅಷ್ಟು ಮಾತ್ರವಲ್ಲ, ಯೆಹೂದಿ ಪುರುಷರು ತಮಗೆ ಅಪರಿಚಿತರಾದ ಸ್ತ್ರೀಯರೊಂದಿಗೆ ಸಾಮಾನ್ಯವಾಗಿ ಮಾತಾಡುತ್ತಿರಲ್ಲಿಲ್ಲ. (ಯೋಹಾನ 4:9, 27) ಅಲ್ಲದೆ ಆ ಸಮಾರ್ಯ ಹೆಂಗಸು ಅನೈತಿಕ ಜೀವನವನ್ನೂ ನಡಿಸುತ್ತಿದ್ದಳು, ಒಂದು ವೇಳೆ ತನ್ನನ್ನು ಖಂಡಿಸಿ ತನ್ನ ಪಾಪಗಳನ್ನು ಬಯಲು ಪಡಿಸುವ ಸಂಭವವಿದ್ದೇತೆಂದು ಅವಳು ಗಾಬರಿಗೊಳ್ಳಲೂ ಬಹುದಿತ್ತು.—ಯೋಹಾನ 4:18.
ಆದರೆ ಆಕೆ ಆ ರೀತಿಯ ಪ್ರತಿಕ್ರಿಯೆ ತೋರಿಸಲಿಲ್ಲ. ಬದಲಾಗಿ, ಯೇಸುವಿನ ಜಾಣತನದ, ಅಭಿರುಚಿಯೆಬ್ಬಿಸುವ ಗೋಚರಕ್ಕೆ ಉತ್ತರವಾಗಿ ಸಮಂಜಸ ಪ್ರಶ್ನೆಗಳನ್ನು ಹಾಕಿದಳು. ಸಂಭಾಷಣೆ ಪ್ರಾರಂಭಿಸಿತು, ಅವಳು ಗಹನವಾದ ವಿಷಯಗಳೆಡೆಗೆ ತಿರುಗಿ, ಯೆಹೂದ್ಯರ ಮತ್ತು ಸಮಾರ್ಯದವರ ನಡುವೆ ಇದ್ದ ಮತಭೇದದ ಕುರಿತೂ ಪ್ರಸ್ತಾಪಿಸಿದಳು. ಯೇಸು ದಯೆಯಿಂದ, ಆದರೆ ಮುಚ್ಚುಮರೆಯಿಲ್ಲದೆ ಆ ಹೆಂಗಸಿಗೆ ಹೇಳಿದ್ದು: “ನಾವು ಅರಿತಿರುವದನ್ನೇ ಆರಾಧಿಸುವವರಾಗಿದ್ದೇವೆ; ನೀವು ಅರಿಯದೆ ಇರುವಂಥದ್ದನ್ನು ಆರಾಧಿಸುವವರು.” (ಯೋಹಾನ 4: 19-22) ಆದರೆ ಅವಳು ಕೋಪಗೊಳ್ಳಲಿಲ್ಲ. ಅವಳ ತೆರೆದ ಮನಸ್ಸು ಹೆಚ್ಚನ್ನು ಕೇಳಲು ಸಿದ್ಧವಾಗಿತ್ತು.
ಆದ್ದರಿಂದ, ಯೇಸು ಒಂದು ಮಹತ್ವದ ಹೇಳಿಕೆಯಿಂದ ಮುಂದರಿಸಿದನು: “ಸತ್ಯಭಾವದಿಂದ ದೇವಾರಾಧನೆ ಮಾಡುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ತಂದೆಯನ್ನು ಆರಾಧಿಸುವ ಕಾಲ ಬರುತ್ತದೆ. ದೇವರು ಆತ್ಮ ಸ್ವರೂಪನು; ಆತನನ್ನು ಆರಾಧಿಸುವವರು ಆತ್ಮೀಯ ರೀತಿಯಲ್ಲಿ ಸತ್ಯಕ್ಕೆ ತಕ್ಕ ಹಾಗೆ ಆರಾಧಿಸಬೇಕು.” (ಯೋಹಾನ 4:23, 24) ಅನಂತರ, ಆ ತೆರೆದ ಮನದ ಹೆಂಗಸು, ತಾನು ಏನನ್ನು ಕಲಿತಳೋ ಅದನ್ನು ತನ್ನ ನೆರೆಯವರಿಗೆ ಆತುರದಿಂದ ತಿಳಿಸಿದ ಮೂಲಕ ತನ್ನ ಗಣ್ಯತೆಯನ್ನು ತೋರಿಸಿದಳು. ಫಲಿತಾಂಶವಾಗಿ, ಅವರೂ ಯೇಸುವಿನ ಮಾತುಗಳಿಗೆ ಕಿವಿಗೊಡುವ ಮೂಲಕ ಅಧಿಕ ಸಮಾಚಾರವನ್ನು ತಿಳಿಯ ಬಯಸಿದರು.—ಯೋಹಾನ 4:39-42.
ಇದರಿಂದ ನಾವೇನನ್ನು ಕಲಿಯಬಹುದು? ಒಳ್ಳೆದು, ನಾವೊಂದು ಜಾತೀಯ, ರಾಷ್ಟ್ರೀಯ ಅಥವಾ ಧಾರ್ಮಿಕ ಅಭಿಮಾನಗಳು ಬಲವಾಗಿರುವ ಕ್ಷೇತ್ರದಲ್ಲಿ ಜೀವಿಸುವುದಾದರೆ, ಮತ್ತು ಬೇರೊಂದು ಜಾತಿಯ, ರಾಷ್ಟ್ರದ ಅಥವಾ ಧರ್ಮದ ಯಾರಾದರೊಬ್ಬನು ಬಂದು ನಮ್ಮನ್ನು ಗೋಚರಿಸಿದರೆ ಹೇಗೆ ಪ್ರತಿಕ್ರಿಯಿಸುವೆವು? ನಾವು ತಪ್ಪೆಂದು ತೋರಿಸಬಹುದಾದ ವಿಷಯಗಳು ಚರ್ಚಿಸಲ್ಪಟ್ಟಾಗ, ಮನಸ್ಸನ್ನು ಮುಚ್ಚಿ ಬಿಡುವೆವೂ? ಅಥವಾ ಆ ಸಮಾರ್ಯದ ಹೆಂಗಸಿನಂತೆ, ಕಡಿಮೆಪಕ್ಷ ಮಾತಾಡಿಯಾದರೂ ನೋಡುವೆವೂ?
ಪೌಲನಿಗೆ ನೀವು ಕಿವಿಗೊಡುತ್ತಿದ್ದಿರೋ?
ಒಂದನೇ ಶತಕದಲ್ಲಿ ಒಳ್ಳೇ ಸೂಚನೆಯನ್ನಿತ್ತ ಇನ್ನೊಬ್ಬನು ಅಪೊಸ್ತಲ ಪೌಲನಾಗಿದ್ದನು. ಒಂದಾನೊಂದು ಸಮಯದಲ್ಲಿ ಪೌಲನಲ್ಲೂ ಮುಚ್ಚಿದ ಮನವಿತ್ತು. ಅವನು ಒಪ್ಪಿಕೊಂಡದ್ದು: “ಮೊದಲು ದೂಷಕನೂ ಹಿಂಸಕನೂ ಬಲಾತ್ಕಾರಿಯೂ ಆದ ನನ್ನನ್ನು . . . ನಾನು ಅವಿಶ್ವಾಸಿಯಾಗಿ ತಿಳಿಯದೆ ಹಾಗೆ ಮಾಡಿದ್ದರಿಂದ ನನ್ನ ಮೇಲೆ ಕರುಣೆ ಉಂಟಾಯಿತು.” (1 ತಿಮೊಥಿ 1:13) ಆದರೂ ಯೇಸು ಕ್ರಿಸ್ತನ ಕುರಿತಾದ ಸತ್ಯವನ್ನು ಅವನು ಸ್ವೀಕರಿಸಿದನು ಮತ್ತು ತನ್ನ ದುರಭಿಮಾನಗಳನ್ನು ತ್ಯಜಿಸಿಬಿಟ್ಟನು. ಬೈಬಲ್ ಸತ್ಯಗಳು ಹೃದಯದಲ್ಲಿರುವ “ಉನ್ನತವಾದ ಎಲ್ಲಾ ಕೊತ್ತಲಗಳನ್ನು,” ಅವು ನಮ್ಮ ಸುಕ್ಷೇಮಕ್ಕೆ ಅಡ್ಡಿಯಾಗಿರುವುದಾದರೆ “ಕೆಡವಿಹಾಕಲು” ನೆರವಾಗುತ್ತವೆ ಎಂದು ಅವನ ಮಾದರಿಯು ತೋರಿಸುತ್ತದೆ.—2 ಕೊರಿಂಥ 10:4.
ಒಮ್ಮೆ ಕ್ರೈಸ್ತನಾಗಿ ಪರಿಣಮಿಸಿದ ಮೇಲೆ ಪೌಲನು, ತಾನು ಕಲಿತ ಸುವಾರ್ತೆಯನ್ನು ಸಾರಲು ಧೈರ್ಯದಿಂದ ಮುಂದೊತ್ತಿದನು. ಮತ್ತು ನಿರೀಕ್ಷಿಸಲ್ಪಡುವ ಪ್ರಕಾರವೇ, ಅವನೊಮ್ಮೆ ಹೇಗಿದ್ದನೋ ಅದೇ ರೀತಿಯ ಮುಚ್ಚಿದ ಮನಸ್ಸು ಅವನಿಗೆ ಎದುರಾಯಿತು—ಆದರೆ ಯಾವಾಗಲೂ ಅಲ್ಲ. ಉತ್ತರ ಗ್ರೀಸಿನ ಬೆರೋಯದಲ್ಲಿ ಕೆಲವು ದೀನ ಹೃದಯದ ಜನರು ಅವನಿಗೆ ಸಿಕ್ಕಿದರು, ಸೂಚನೆಗೆ ಹೇಗೆ ಕಿವಿಗೊಡುವದೆಂಬದಕ್ಕೆ ಇವರು ಉತ್ತಮ ಮಾದರಿಯಾಗಿದ್ದರು. ಪೌಲನ ಮಾತುಗಳಲ್ಲಿದ್ದ ಸತ್ಯದ ನಾದವನ್ನು ಅವರು ಮನಗಂಡರು. ಆದಕಾರಣ, “ದೇವರ ವಾಕ್ಯವನ್ನು ಸಿದ್ಧಮನಸ್ಸಿನಿಂದ ಅಂಗೀಕರಿಸಿದರು.” ಆದರೆ ಅವರು ತೆರೆದ ಮನಸ್ಸಿನವರಾಗಿದ್ದರು, ಮಂಕರಲ್ಲ. “ಹೇಳುವ ಮಾತು ಹೌದೋ ಎಂಬ ವಿಷಯದಲ್ಲಿ ಪ್ರತಿದಿನವೂ ಶಾಸ್ತ್ರ ಗ್ರಂಥಗಳನ್ನು ಶೋಧಿಸುತ್ತಿದ್ದರು.” (ಅಪೊಸ್ತಲರ ಕೃತ್ಯ 17:11) ತಾವು ಕೇಳಿದ ವಿಷಯವು ಅವರಿಗೆ ಇಷ್ಟವಾಯಿತು, ಆದರೂ ಅದನ್ನು ಪೂರ್ಣವಾಗಿ ಸ್ವೀಕರಿಸುವ ಮುಂಚೆ ಬೈಬಲಿನೊಂದಿಗೆ ಅದರ ಸಪ್ರಮಾಣ್ಯವನ್ನು ಪರೀಕ್ಷಿಸಿದರು.
“ಎಲ್ಲವನ್ನು ಪರಿಶೋಧಿಸಿ ತಿಳಿಯಿರಿ”
ನಮ್ಮ ದಿನಗಳಲ್ಲಿ ಯೆಹೋವನ ಸಾಕ್ಷಿಗಳು ಬೇರೆ ಧರ್ಮಗಳಿಗೆ ಸೇರಿರುವ ತಮ್ಮ ನೆರೆಯವರೊಂದಿಗೆ ರಾಜ್ಯದ ಸುವಾರ್ತೆಯನ್ನು ಹಂಚುವ ಪ್ರಯತ್ನದಲ್ಲಿ ಬಹಳ ಸಮಯವನ್ನು ವ್ಯಯಿಸುತ್ತಾರೆ. ಸಾಕ್ಷಿಗಳಿಗೆ ಯಾವ ಪ್ರತಿಕ್ರಿಯೆಯು ದೊರೆಯುತ್ತದೆ? ಅನೇಕ ಸ್ನೇಹಪರ ವ್ಯಕ್ತಿಗಳು ಅವರನ್ನು ಸಂತೋಷದಿಂದ ಸ್ವೀಕರಿಸುತ್ತಾರೆ. ಆದರೆ ಇನ್ನು ಅನೇಕರು ನಿರಾಕರಿಸುತ್ತಾರೆ, ಸಾಕ್ಷಿಗಳು ಸಂದರ್ಶಿಸುವ ಕಾರಣ ಸಿಟ್ಟಾಗುವವರೂ ಇದ್ದಾರೆ.
ಇದು ವಿಷಾಧಕರ, ಯಾಕೆಂದರೆ ಯೆಹೋವನ ಸಾಕ್ಷಿಗಳು ಏನು ಹೇಳ ಬಯಸುತ್ತಾರೋ ಅದು ಬೈಬಲಿನಲ್ಲಿ “ಸುವಾರ್ತೆ”ಯಾಗಿ ಕರೆಯಲ್ಪಟ್ಟಿದೆ. (ಮತ್ತಾಯ 24:14) ಅದಲ್ಲದೆ, “ಎಲ್ಲವನ್ನೂ ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ” ಎಂಬ ಅಪೊಸ್ತಲ ಪೌಲನ ಭಾವವನ್ನೇ ಅವರು ಪ್ರೋತ್ಸಾಹಿಸುತ್ತಾರೆ. (1 ಥೆಸಲೊನೀಕ 5:21) ಒಬ್ಬ ವ್ಯಕ್ತಿಯಲ್ಲಿ ದೃಢಾಬಿಪ್ರಾಯಗಳಿದ್ದಾಗ್ಯೂ, ಬೆರೋಯದವರಂತೆ ಮತ್ತು ಆ ಸಮಾರ್ಯದ ಹೆಂಗಸಿನಂತೆ, ಅವನು ದೇವರ ಕುರಿತು ಇತರರೊಂದಿಗೆ ಮಾತಾಡಲುಸಾಕಷ್ಟು ತೆರೆದ ಮನಸ್ಸಿನವನಿರಬೇಕು.
ತೆರೆದ ಮನಸ್ಸು ಏಕೆ?
ಸಂತೋಷಕರವಾಗಿಯೇ ಸಾವಿರಾರು ಜನರು ಪ್ರತಿ ವರ್ಷ ಅದನ್ನೇ ಮಾಡುತ್ತಿದ್ದಾರೆ. ಬೈಬಲಿನಲ್ಲಿ ಅಡಕವಾಗಿರುವ ಜ್ಞಾನವನ್ನು ಅಂಗೀಕರಿಸಲು ಅನೇಕರು ಕಲಿಯುತ್ತಿದ್ದಾರೆ. ಮತ್ತು ಫಲಿತಾಂಶವು ನೈಜವಾದ, ಬಾಳುವ ಜೀವಿತ ಬದಲಾವಣೆಯೇ. ದೀರ್ಘ ಕಾಲದಿಂದ ಅಮಲೌಷಧಿ ಮತ್ತು ಮದ್ಯಸಾರದ ಚಟದಿಂದಾಗಿ ಕೊನೆಗೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಯುವತಿ ಜ್ಯಾನೆಟ್ನಂತೆ, ಹಿಂದೆ ಅನೇಕರು ಇದ್ದರು. ಇಂದು ಆ ಜ್ಯಾನೆಟ್ ಒಬ್ಬಾಕೆ ಸಂತುಷ್ಟ ಕ್ರೈಸ್ತ ಮಹಿಳೆಯಾಗಿದ್ದಾಳೆ. ಬೈಬಲಿನ ಅಧ್ಯಯನವು ಅವಳಿಗೆ ಪೌಲನ ಸೂಚನೆಯನ್ನು ಅನುಸರಿಸಲು ಬಲವನ್ನು ಕೊಟ್ಟಿತು: “ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿ ಮಾಡಿ ಕೊಳ್ಳೋಣ.”—2 ಕೊರಿಂಥ 7:1.
ವರ್ನನ್ ಒಬ್ಬ ಕುಡುಕನಾಗಿದ್ದನು, ಅವನ ಮದುವೆ ಒಡೆದು ಹೋಗುವ ಅಪಾಯದಲ್ಲಿತ್ತು. ಆದರೆ ಬೈಬಲಿನ ಸೂಚನೆ ಈ ಚಟವನ್ನು ನೀಗಿಸುವಂತೆಮತ್ತು ಅವನ ಪತ್ನಿಯೊಂದಿಗೆ ರಾಜಿಯಾಗುವಂತೆ ಸಾಧ್ಯಗೊಳಿಸಿತು. (1 ಕೊರಿಂಥ 6:11) ದೆಬ್ರಳಿಗೆ ಬಲವಾದ ಜಾತೀಯ ದುರಭಿಮಾನಗಳಿದ್ದವು. ಆದರೆ ಬೈಬಲ್ ಅಧ್ಯಯನ ಮತ್ತು ಕ್ರೈಸ್ತ ಜನರೊಂದಿಗೆ ಸಹವಾಸವು ಅವಳ ಯೋಚನೆಯನ್ನು ಆಳ ವಡಿಸಲು ಸಹಾಯ ಮಾಡಿತು. (ಅಪೊಸ್ತಲರ ಕೃತ್ಯ 10:34, 35) ಮತ್ತು ಒಂದು ದಿನ, ಯೆಹೋವನ ಸಾಕ್ಷಿಗಳೊಂದಿಗೆ ಬೈಬಲಧ್ಯಯನಕ್ಕೆ ನೆದರ್ಲೆಂಡಿನ ಒಬ್ಬ ಯುವ ವೇಶ್ಯೆಯು ಒಪ್ಪಿದಾಗ ಅವಳ ಜೀವನದಲ್ಲಿ ಬದಲಾವಣೆಯಾಗುವದೆಂದು ಯಾರು ನಂಬಿದ್ದರು? ಸ್ವಲ್ಪ ಸಮಯದಲ್ಲೀ, ಅವಳು ಶುದ್ಧಜೀವನ ನಡಿಸುವ ಸ್ನಾತ ಕ್ರೈಸ್ತಳಾದಳು ಮತ್ತು ತನ್ನ ಮಕ್ಕಳನ್ನು ಪೋಷಿಸುವ ಜವಾಬ್ದಾರಿಕೆ ವಹಿಸಿರುತ್ತಾಳೆ.
ಇಂಥ ಅನುಭವಗಳು, ಜನರು ಬೈಬಲಿನ ಮಾತುಗಳಿಗೆ ಕಿವಿಗೊಟ್ಟಂತೇ, ಎಷ್ಟೋ ಪಟ್ಟು ಬಾರಿ ಬಾರಿಗೂ ಸಂಭವಿಸುತ್ತವೆ. ಅವರಲ್ಲಿ ಅನೇಕರು ಅಶಕ್ಯವೆಂದು ನೆನಸಿದ್ದ ರೀತಿಯಲ್ಲಿ ಅವರ ಜೀವನಗಳು ಪ್ರಗತಿಯಾದವು. ಅಧಿಕ ಮಹತ್ವವಾಗಿ, ಅವರು ದೇವರೊಂದಿಗೆ ಒಂದು ಸುಸಂಬಂಧವನ್ನು ಸಂಪಾದಿಸಿದರು, ಮತ್ತು ಅವರೀಗ, “ಪರಲೋಕದಲ್ಲಿರುವ ನಮ್ಮ ತಂದೆಯೇ,” ಎಂದು ಯಥಾರ್ಥಚಿತ್ತದಿಂದ ಪ್ರಾರ್ಥಿಸಶಕ್ತರು. (ಮತ್ತಾಯ 6:9) ಮತ್ತು ಯೇಸುವಿನ ಈ ಮಾತುಗಳ ಸತ್ಯತೆಯನ್ನು ಅನುಭವಿಸುವಾಗ, ಭವಿಷ್ಯತ್ತಿಗಾಗಿ ಒಂದು ದೃಢವಾದ, ಅಖಂಡ ನಿರೀಕ್ಷೆಯನ್ನು ಅವರು ಗಳಿಸುತ್ತಾರೆ: “ಒಬ್ಬನೇ ಸತ್ಯದೇವರಾದ ನಿನ್ನನ್ನೂ ನೀನು ಕಳುಹಿಸಿದ ಯೇಸು ಕ್ರಿಸ್ತನನ್ನು ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.
ಈ ರೀತಿಯ ಸಮಾಚಾರವನ್ನು ಯೆಹೋವನ ಸಾಕ್ಷಿಗಳು ತಮ್ಮ ಶುಶ್ರೂಷೆಯನ್ನು ಬೆನ್ನಟ್ಟುವಾಗ ಮತ್ತು ತಮ್ಮ ನೆರೆಯವರನ್ನು ಸಂದರ್ಶಿಸುವಾಗ ಚರ್ಚಿಸುತ್ತಾರೆ. ನಿಮ್ಮನ್ನು ಪುನಃ ಬೇಗನೇ ಅವರು ಸಂದರ್ಶಿಸಲೂಬಹುದು. ಅವರಿಗೆ ಕಿವಿಗೊಡಲು ನೀವು ಸಾಕಷ್ಟು ಮನತೆರೆದವರಾಗುವಿರೋ? (w89 8/1)
[ಪುಟ 7 ರಲ್ಲಿರುವ ಚಿತ್ರ]
ಯೇಸುವಿಗೆ ಕಿವಿಗೊಡುವದರಿಂದ ದುರಭಿಮಾನವು ತನ್ನನ್ನು ತಡೆಯುವಂತೆ ಆ ಸಮಾರ್ಯದ ಹೆಂಗಸು ಬಿಡಲಿಲ್ಲ. ನೀವೂ ಅದೇ ರೀತಿ ತೆರೆದ ಮನಸ್ಸುಳ್ಳವರೋ?