ಪುನರುತ್ಥಾನದಲ್ಲಿ ನಿಮ್ಮ ನಂಬಿಕೆಯು ಎಷ್ಟು ದೃಢವಾಗಿದೆ?
“ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು.”—ಯೋಹಾನ 11:25.
1, 2. ಯೆಹೋವನ ಆರಾಧಕನಿಗೆ, ಪುನರುತ್ಥಾನದ ನಿರೀಕ್ಷೆಯಲ್ಲಿ ಏಕೆ ಭರವಸೆ ಇರಬೇಕು?
ಪುನರುತ್ಥಾನದಲ್ಲಿ ನಿಮ್ಮ ನಂಬಿಕೆಯು ಎಷ್ಟು ದೃಢವಾಗಿದೆ? ಅದು ಮೃತಪಡುವ ಭೀತಿಯ ವಿಷಯದಲ್ಲಿ ನಿಮ್ಮನ್ನು ಬಲಪಡಿಸಿ, ನೀವು ಪ್ರಿಯರನ್ನು ಮರಣದಲ್ಲಿ ಕಳೆದುಕೊಳ್ಳುವಾಗ ನಿಮ್ಮನ್ನು ಸಂತೈಸುತ್ತದೊ? (ಮತ್ತಾಯ 10:28; 1 ಥೆಸಲೊನೀಕ 4:13) ಪುನರುತ್ಥಾನದಲ್ಲಿನ ತಮ್ಮ ನಂಬಿಕೆಯಿಂದ ಬಲಗೊಳಿಸಲ್ಪಟ್ಟು, ಚಡಿಯೇಟುಗಳು, ಅಪಹಾಸ್ಯ, ಚಿತ್ರಹಿಂಸೆ, ಮತ್ತು ಸೆರೆವಾಸಗಳನ್ನು ತಾಳಿಕೊಂಡ, ಗತಕಾಲದ ದೇವರ ಸೇವಕರಲ್ಲಿ ಅನೇಕರಂತೆ ನೀವು ಇದ್ದೀರೊ?—ಇಬ್ರಿಯ 11:35-38.
2 ಹೌದು, ಪುನರುತ್ಥಾನವು ಇರುವುದೆಂಬ ವಿಷಯದಲ್ಲಿ, ಯೆಹೋವನ ಒಬ್ಬ ಪ್ರಾಮಾಣಿಕ ಆರಾಧಕನಿಗೆ ಯಾವ ಸಂದೇಹಗಳೂ ಇರಬಾರದು. ಮತ್ತು ಅವನ ಭರವಸೆಯು, ಅವನು ತನ್ನ ಜೀವನವನ್ನು ನಡೆಸುವ ರೀತಿಯನ್ನು ಪ್ರಭಾವಿಸಬೇಕು. ದೇವರ ನೇಮಿತ ಸಮಯದಲ್ಲಿ, ಸಮುದ್ರ, ಮರಣ, ಮತ್ತು ಹೇಡಿಸ್ಗಳು ತಮ್ಮಲ್ಲಿರುವ ಮೃತರನ್ನು ಒಪ್ಪಿಸಿಬಿಡುವವು, ಮತ್ತು ಪುನರುತ್ಥಾನಗೊಂಡ ಈ ಜನರಿಗೆ ಭೂಪ್ರಮೋದವನದಲ್ಲಿ ಸದಾಕಾಲ ಜೀವಿಸುವ ಪ್ರತೀಕ್ಷೆಯಿರುವುದೆಂಬ ನಿಜಾಂಶದ ಕುರಿತು ಪರ್ಯಾಲೋಚಿಸುವುದು ಅದ್ಭುತಕರವಾಗಿದೆ.—ಪ್ರಕಟನೆ 20:13; 21:4, 5.
ಭವಿಷ್ಯತ್ತಿನ ಜೀವಿತದ ಕುರಿತು ಸಂದೇಹಗಳು
3, 4. ಮರಣಾನಂತರದ ಜೀವಿತದ ಬಗ್ಗೆ ಅನೇಕರಿಗೆ ಇನ್ನೂ ಯಾವ ನಂಬಿಕೆಯಿದೆ?
3 ಮರಣಾನಂತರದ ಜೀವಿತದ ಕುರಿತು ಕ್ರೈಸ್ತಪ್ರಪಂಚವು ದೀರ್ಘ ಸಮಯದಿಂದ ಕಲಿಸಿದೆ. ಯು.ಎಸ್. ಕ್ಯಾತೊಲಿಕ್ ಎಂಬ ಪತ್ರಿಕೆಯಲ್ಲಿನ ಒಂದು ಲೇಖನವು ಹೇಳಿದ್ದು: “ಯುಗಯುಗಗಳಿಂದ ಕ್ರೈಸ್ತರು, ಶಾಂತಿ ಮತ್ತು ಸಂತೃಪ್ತಿಯ, ನೆರವೇರಿಕೆ ಹಾಗೂ ಸಂತೋಷದ ಮತ್ತೊಂದು ಜೀವಿತವನ್ನು ಎದುರುನೋಡುವ ಮೂಲಕ, ಈ ಜೀವಿತದ ನಿರಾಶೆಗಳು ಮತ್ತು ಕಷ್ಟಾನುಭವಗಳನ್ನು ಸ್ವೀಕರಿಸಿ, ಅವುಗಳನ್ನು ನಿಭಾಯಿಸಲು ತಮ್ಮಿಂದ ಸಾಧ್ಯವಾದಷ್ಟು ಉತ್ತಮವಾಗಿ ಪ್ರಯತ್ನಿಸಿದ್ದಾರೆ.” ಹಾಗಿದ್ದರೂ, ಕ್ರೈಸ್ತಪ್ರಪಂಚದ ಹಲವಾರು ದೇಶಗಳಲ್ಲಿ, ಜನರು ಅಧಾರ್ಮಿಕರೂ ಧರ್ಮದ ಕುರಿತು ತಿರಸ್ಕಾರಭಾವವುಳ್ಳವರೂ ಆಗಿದ್ದಾರೆ. ಆದರೂ, ಮರಣದ ನಂತರ ಏನೋ ಇರಲೇಬೇಕೆಂದು ಅನೇಕರಿಗೆ ಈಗಲೂ ಅನಿಸುತ್ತದೆ. ಆದರೆ ಅವರಿಗೆ ನಿಖರವಾಗಿ ಗೊತ್ತಿರದ ವಿಷಯಗಳು ಬಹಳಷ್ಟಿವೆ.
4 ಟೈಮ್ ಪತ್ರಿಕೆಯಲ್ಲಿ ಬಂದ ಒಂದು ಲೇಖನವು ಗಮನಿಸಿದ್ದು: “ಜನರು [ಮರಣಾನಂತರದ ಜೀವಿತದ] ಕುರಿತು ಈಗಲೂ ನಂಬುತ್ತಾರೆ: ಆದರೆ ವ್ಯತ್ಯಾಸವೇನೆಂದರೆ, ಅದು ನಿಖರವಾಗಿ ಏನಾಗಿದೆ ಎಂಬುದರ ಕುರಿತಾದ ಅವರ ಪರಿಕಲ್ಪನೆಯು ಇನ್ನಷ್ಟು ಅಸ್ಪಷ್ಟವಾಗಿ ಪರಿಣಮಿಸಿದೆ, ಮತ್ತು ಅದರ ಕುರಿತು ಅವರು ತಮ್ಮ ಪಾಸ್ಟರ್ಗಳಿಂದ ಅಪರೂಪವಾಗಿ ಕೇಳಿಸಿಕೊಳ್ಳುತ್ತಾರೆ.” ಧಾರ್ಮಿಕ ಮುಖಂಡರು ಮರಣಾನಂತರದ ಜೀವಿತದ ಕುರಿತು ಈ ಹಿಂದೆ ಮಾತಾಡುತ್ತಾ ಇದ್ದುದಕ್ಕಿಂತಲೂ ಈಗ ಅಪರೂಪವಾಗಿ ಮಾತಾಡುವುದೇಕೆ? ಧಾರ್ಮಿಕತೆಯ ವಿದ್ವಾಂಸರಾದ ಜೆಫ್ರೀ ಬರ್ಟನ್ ರಸಲ್ ಹೇಳುವುದು: “[ವೈದಿಕರು] ಆ ವಿಷಯದಿಂದ ದೂರವಿರಲು ಬಯಸುತ್ತಾರೆ, ಏಕೆಂದರೆ ತಾವು ಜನಪ್ರಿಯ ಸಂದೇಹವಾದದ ತಡೆಯನ್ನು ಜಯಿಸಬೇಕಾಗಿದೆಯೆಂದು ಅವರಿಗೆ ಅನಿಸುತ್ತದೆ.”
5. ನರಕಾಗ್ನಿ ಸಿದ್ಧಾಂತವನ್ನು ಇಂದು ಅನೇಕರು ಹೇಗೆ ವೀಕ್ಷಿಸುತ್ತಾರೆ?
5 ಅನೇಕ ಚರ್ಚುಗಳಲ್ಲಿ, ಮರಣಾನಂತರದ ಜೀವಿತವು, ಒಂದು ಸ್ವರ್ಗವನ್ನು ಹಾಗೂ ಒಂದು ನರಕಾಗ್ನಿಯನ್ನು ಒಳಗೊಳ್ಳುತ್ತದೆ. ಮತ್ತು ವೈದಿಕರು ಸ್ವರ್ಗದ ಕುರಿತು ಮಾತಾಡಲು ಹಿಂಜರಿಯುವಲ್ಲಿ, ನರಕದ ಕುರಿತು ಮಾತಾಡಲು ಅವರು ಮತ್ತಷ್ಟೂ ಹಿಂಜರಿಯುತ್ತಾರೆ. ವಾರ್ತಾಪತ್ರಿಕೆಯ ಲೇಖನವೊಂದು ಹೀಗೆ ಹೇಳಿತು: “ನರಕಾಗ್ನಿಯಲ್ಲಿನ ಶಾಶ್ವತ ದಂಡನೆಯಲ್ಲಿ ನಂಬಿಕೆಯಿಡುವ ಚರ್ಚುಗಳು ಸಹ, ಈ ದಿನಗಳಲ್ಲಿ . . . ಆ ಪರಿಕಲ್ಪನೆಯ ಮೇಲಿರುವ ಒತ್ತನ್ನು ಕಡಿಮೆಮಾಡುತ್ತವೆ.” ಅನೇಕ ಆಧುನಿಕ ದೇವತಾಶಾಸ್ತ್ರಜ್ಞರು, ಮಧ್ಯ ಯುಗಗಳಲ್ಲಿ ಕಲಿಸಲ್ಪಟ್ಟಂತೆ, ನರಕವು ಯಾತನೆಯ ಅಕ್ಷರಾರ್ಥ ಸ್ಥಳವಾಗಿದೆ ಎಂಬುದನ್ನು ಈಗ ನಂಬುವುದೇ ಇಲ್ಲ. ಬದಲಿಗೆ, ಅವರು ನರಕದ ಕುರಿತು ಹೆಚ್ಚು “ದಯಾಪರ” ಕಥನವನ್ನು ಇಷ್ಟಪಡುತ್ತಾರೆ. ಅನೇಕ ಆಧುನಿಕವಾದಿಗಳಿಗೆ ಅನುಸಾರವಾಗಿ, ನರಕದಲ್ಲಿರುವ ಪಾಪಿಗಳು ಅಕ್ಷರಾರ್ಥವಾಗಿ ಹಿಂಸಿಸಲ್ಪಡುವುದಿಲ್ಲ, ಬದಲಿಗೆ ಅವರು “ದೇವರಿಂದ ಧಾರ್ಮಿಕವಾಗಿ ಅಗಲಿದ” ಕಾರಣದಿಂದ ಕಷ್ಟಾನುಭವಿಸುತ್ತಾರೆ.
6. ದುರಂತವನ್ನು ಎದುರಿಸುವಾಗ, ತಮ್ಮಲ್ಲಿ ಸಾಕಷ್ಟು ನಂಬಿಕೆಯಿಲ್ಲವೆಂದು ಕೆಲವರು ಹೇಗೆ ಕಂಡುಕೊಳ್ಳುತ್ತಾರೆ?
6 ಈ ಆಧುನಿಕ ದೃಷ್ಟಿಕೋನವಿರುವವರ ಮನನೋಯಿಸದೆ ಇರಲಿಕ್ಕಾಗಿ, ಚರ್ಚಿನ ಸಿದ್ಧಾಂತವನ್ನು ನಿಸ್ಸತ್ವಗೊಳಿಸುವುದು, ಜನರ ಮೆಚ್ಚಿಕೆ ಪಡೆಯದಿರುವುದನ್ನು ದೂರಮಾಡಲು ಸಹಾಯ ಮಾಡಬಹುದಾದರೂ, ಚರ್ಚಿಗೆ ಹೋಗುವ ಪ್ರಾಮಾಣಿಕ ಹೃದಯದ ಕೋಟಿಗಟ್ಟಲೆ ಜನರು, ತಾವು ಏನನ್ನು ನಂಬಬೇಕೆಂಬ ವಿಷಯದಲ್ಲಿ ಕುತೂಹಲಪಡುತ್ತಾ ಇರುವಂತೆ ಮಾಡುತ್ತದೆ. ಆದಕಾರಣ, ಮರಣವನ್ನು ಮುಖಾಮುಖಿಯಾಗಿ ಎದುರಿಸುವಾಗ, ಅನೇಕ ವೇಳೆ ತಮ್ಮಲ್ಲಿ ಸಾಕಷ್ಟು ನಂಬಿಕೆ ಇಲ್ಲವೆಂಬುದನ್ನು ಅವರು ಕಂಡುಕೊಳ್ಳುತ್ತಾರೆ. ಅವರ ಮನೋಭಾವವು, ಒಂದು ದುರಂತಕರ ಅಪಘಾತದಲ್ಲಿ ಹಲವಾರು ಕುಟುಂಬ ಸದಸ್ಯರನ್ನು ಕಳೆದುಕೊಂಡ ಒಬ್ಬಾಕೆ ಸ್ತ್ರೀಯ ಮನೋಭಾವದಂತಿದೆ. ಅವಳ ಧಾರ್ಮಿಕ ನಂಬಿಕೆಯು ಅವಳಿಗೆ ಸಾಂತ್ವನವನ್ನು ಕೊಟ್ಟಿತ್ತೊ ಎಂದು ಕೇಳಲ್ಪಟ್ಟಾಗ, “ಕೊಟ್ಟಿರಬಹುದು” ಎಂದು ಅವಳು ಅರೆಮನಸ್ಸಿನಿಂದ ಉತ್ತರಿಸಿದಳು. ತನ್ನ ಧಾರ್ಮಿಕ ನಂಬಿಕೆಯು ತನಗೆ ನೆರವನ್ನು ನೀಡಿತ್ತೆಂದು ಅವಳು ಪೂರ್ಣಭರವಸೆಯಿಂದ ಉತ್ತರಿಸಿದ್ದರೂ, ಅವಳ ನಂಬಿಕೆಗಳು ಸಾಧಾರವುಳ್ಳವುಗಳಾಗಿ ಇರದಿದ್ದರೆ, ಅದರಿಂದ ಯಾವ ದೀರ್ಘಾವಧಿಯ ಲಾಭವಿದೆ? ಇದೊಂದು ಪ್ರಮುಖ ಪರಿಗಣನೆಯಾಗಿದೆ, ಏಕೆಂದರೆ, ಭವಿಷ್ಯತ್ತಿನ ಜೀವಿತದ ಕುರಿತು ಹೆಚ್ಚಿನ ಚರ್ಚುಗಳು ಏನನ್ನು ಕಲಿಸುತ್ತವೊ ಅದು ಬೈಬಲ್ ಕಲಿಸುವ ವಿಷಯಕ್ಕಿಂತ ತುಂಬ ಭಿನ್ನವಾಗಿದೆ.
ಮರಣಾನಂತರದ ಜೀವಿತದ ಕುರಿತು ಕ್ರೈಸ್ತಪ್ರಪಂಚದ ದೃಷ್ಟಿಕೋನ
7. (ಎ) ಯಾವ ಸಾಮಾನ್ಯ ನಂಬಿಕೆಯು ಹೆಚ್ಚಿನ ಚರ್ಚುಗಳಲ್ಲಿದೆ? (ಬಿ) ಅಮರ ಆತ್ಮದ ಸಿದ್ಧಾಂತವನ್ನು ಒಬ್ಬ ದೇವತಾಶಾಸ್ತ್ರಜ್ಞನು ಹೇಗೆ ವರ್ಣಿಸುತ್ತಾನೆ?
7 ಅವುಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಮರಣದಲ್ಲಿ ದೇಹವನ್ನು ಬಿಟ್ಟುಹೋಗುವ ಒಂದು ಅಮರ ಆತ್ಮವು ಮಾನವರಿಗಿದೆ ಎಂಬ ವಿಷಯವನ್ನು, ಬಹುಮಟ್ಟಿಗೆ ಕ್ರೈಸ್ತಪ್ರಪಂಚದ ಎಲ್ಲ ಪಂಗಡಗಳು ಒಪ್ಪಿಕೊಳ್ಳುತ್ತವೆ. ವ್ಯಕ್ತಿಯೊಬ್ಬನು ಮೃತಪಡುವಾಗ, ಅವನ ಆತ್ಮವು ಸ್ವರ್ಗಕ್ಕೆ ಹೋಗಬಹುದೆಂದು ಅನೇಕರು ನಂಬುತ್ತಾರೆ. ತಮ್ಮ ಆತ್ಮವು ನರಕಾಗ್ನಿಗೆ ಇಲ್ಲವೆ ಪರ್ಗೆಟರಿಗೆ ಹೋಗಬಹುದೆಂದು ಕೆಲವರು ಭಯಪಡುತ್ತಾರೆ. ಆದರೆ, ಭವಿಷ್ಯತ್ತಿನ ಜೀವಿತದ ಕುರಿತಾದ ಅವರ ದೃಷ್ಟಿಕೋನಕ್ಕೆ, ಅಮರ ಆತ್ಮದ ವಿಚಾರವು ಕೇಂದ್ರಬಿಂದುವಾಗಿದೆ. ಅಮರತ್ವ ಹಾಗೂ ಪುನರುತ್ಥಾನ (ಇಂಗ್ಲಿಷ್) ಎಂಬ ಪುಸ್ತಕದಲ್ಲಿ ಪ್ರಕಟವಾದ ಒಂದು ಪ್ರಬಂಧದಲ್ಲಿ, ದೇವತಾಶಾಸ್ತ್ರಜ್ಞರಾದ ಆಸ್ಕರ್ ಕುಲ್ಮಾನ್ ಈ ವಿಷಯದಲ್ಲಿ ಹೇಳಿಕೆ ನೀಡಿದರು. ಅವರು ಬರೆದುದು: “ಇಂದು ನಾವು ಒಬ್ಬ ಸಾಧಾರಣ ಕ್ರೈಸ್ತನಿಗೆ, . . . ಮರಣದ ಅನಂತರ ಮನುಷ್ಯನ ವಿಧಿಯ ಸಂಬಂಧದಲ್ಲಿ ಹೊಸ ಒಡಂಬಡಿಕೆಯ ಬೋಧನೆಯು ಏನಾಗಿದೆಯೆಂದು ಅವನು ಗ್ರಹಿಸುತ್ತಾನೆಂದು ಕೇಳುವುದಾದರೆ, ಕೆಲವು ಉತ್ತರಗಳನ್ನು ಬಿಟ್ಟು, ‘ಅಮರ ಆತ್ಮ’ ಎಂಬ ಉತ್ತರವು ನಮಗೆ ಸಿಗಬೇಕು.” ಹಾಗಿದ್ದರೂ, ಕುಲ್ಮಾನ್ ಕೂಡಿಸಿ ಹೇಳಿದ್ದು: “ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಈ ವಿಚಾರವು, ಕ್ರೈಸ್ತತ್ವದ ಅತ್ಯಂತ ದೊಡ್ಡ ಅಪಾರ್ಥಗಳಲ್ಲಿ ಒಂದಾಗಿದೆ.” ಈ ಹೇಳಿಕೆಯನ್ನು ಪ್ರಥಮ ಬಾರಿ ನುಡಿದಾಗ, ತಾನು ಒಂದು ಕೋಲಾಹಲವನ್ನೇ ಎಬ್ಬಿಸಿದ್ದೆ ಎಂದು ಕುಲ್ಮಾನ್ ಹೇಳಿದರು. ಆದರೂ, ಅವರ ಹೇಳಿಕೆಯು ಸರಿಯಾದದ್ದಾಗಿತ್ತು.
8. ಸ್ವರ್ಗಕ್ಕೆ ಹೋಗುವ ಬದಲು, ಯಾವ ನಿರೀಕ್ಷೆಯನ್ನು ಯೆಹೋವನು ಪ್ರಥಮ ಸ್ತ್ರೀಪುರುಷರ ಮುಂದಿಟ್ಟನು?
8 ಮನುಷ್ಯರು ಸತ್ತ ಬಳಿಕ ಸ್ವರ್ಗಕ್ಕೆ ಹೋಗುವ ಸಲುವಾಗಿ ಯೆಹೋವ ದೇವರು ಅವರನ್ನು ಸೃಷ್ಟಿಸಲಿಲ್ಲ. ಅವರು ಸಾಯಲೇ ಬೇಕೆಂಬುದು ಆತನ ಮೂಲ ಉದ್ದೇಶವಾಗಿರಲಿಲ್ಲ. ಆದಾಮ ಹವ್ವರು ಪರಿಪೂರ್ಣರಾಗಿ ಸೃಷ್ಟಿಸಲ್ಪಟ್ಟಿದ್ದು, ನೀತಿವಂತ ಮಕ್ಕಳಿಂದ ಭೂಮಿಯನ್ನು ತುಂಬಿಸುವ ಅವಕಾಶವು ಅವರಿಗೆ ಕೊಡಲ್ಪಟ್ಟಿತ್ತು. (ಆದಿಕಾಂಡ 1:28; ಧರ್ಮೋಪದೇಶಕಾಂಡ 32:4) ಅವರು ದೇವರಿಗೆ ಅವಿಧೇಯರಾದಲ್ಲಿ ಮಾತ್ರ ಸಾಯುವರೆಂದು ನಮ್ಮ ಪ್ರಥಮ ಹೆತ್ತವರಿಗೆ ಹೇಳಲಾಗಿತ್ತು. (ಆದಿಕಾಂಡ 2:17) ಅವರು ತಮ್ಮ ಸ್ವರ್ಗೀಯ ತಂದೆಗೆ ವಿಧೇಯರಾಗಿ ಉಳಿದಿದ್ದರೆ, ಅವರು ಸದಾಕಾಲ ಭೂಮಿಯ ಮೇಲೆ ಜೀವಿಸುತ್ತಾ ಇರುತ್ತಿದ್ದರು.
9. (ಎ) ಮನುಷ್ಯನಿಗೆ ಅಮರ ಆತ್ಮವಿದೆಯೊ? (ಬಿ) ಮನುಷ್ಯನು ಸಾಯುವಾಗ ಅವನಿಗೆ ಏನು ಸಂಭವಿಸುತ್ತದೆ?
9 ಆದರೆ, ದುಃಖಕರವಾಗಿ, ಆದಾಮ ಹವ್ವರು ದೇವರಿಗೆ ವಿಧೇಯರಾಗಲು ತಪ್ಪಿಹೋದರು. (ಆದಿಕಾಂಡ 3:6, 7) ದುರಂತರಕರ ಪರಿಣಾಮಗಳು ಅಪೊಸ್ತಲ ಪೌಲನಿಂದ ಹೀಗೆ ವರ್ಣಿಸಲ್ಪಟ್ಟಿವೆ: “ಒಬ್ಬ ಮನುಷ್ಯನಿಂದಲೇ ಪಾಪವೂ ಪಾಪದಿಂದ ಮರಣವೂ ಲೋಕದೊಳಗೆ ಸೇರಿದವು; ಎಲ್ಲರು ಪಾಪ ಮಾಡಿದ್ದರಿಂದ ಮರಣವು ಹೀಗೆ ಎಲ್ಲರಲ್ಲಿಯೂ ವ್ಯಾಪಿಸಿತು.” (ರೋಮಾಪುರ 5:12) ಭೂಮಿಯ ಮೇಲೆ ಸದಾಕಾಲ ಜೀವಿಸುವ ಬದಲು, ಆದಾಮ ಹವ್ವರು ಸತ್ತುಹೋದರು. ತರುವಾಯ ಏನಾಯಿತು? ಪಾಪದ ಕಾರಣ ಒಂದು ನರಕಾಗ್ನಿಗೆ ಸ್ಥಳಾಂತರಿಸಲ್ಪಡಲಿದ್ದ ಒಂದು ಅಮರ ಆತ್ಮವು ಅವರ ದೇಹದೊಳಗಿತ್ತೊ? ಆದಾಮ ಹವ್ವರು ಸತ್ತುಹೋದಾಗ, ಅವರು ಸಂಪೂರ್ಣವಾಗಿ ಸತ್ತುಹೋದರು. ಕಟ್ಟಕಡೆಗೆ ಯೆಹೋವನು ಆದಾಮನಿಗೆ ಹೇಳಿದಂತೆಯೇ ಅವರಿಗೆ ಸಂಭವಿಸಿತು: “ನೀನು ತಿರಿಗಿ ಮಣ್ಣಿಗೆ ಸೇರುವ ತನಕ ಬೆವರಿಡುತ್ತಾ ಬೇಕಾದ ಆಹಾರವನ್ನು ಸಂಪಾದಿಸಬೇಕು. ನೀನು ಮಣ್ಣಿನಿಂದ ತೆಗೆಯಲ್ಪಟ್ಟವನಲ್ಲವೋ; ನೀನು ಮಣ್ಣೇ; ಪುನಃ ಮಣ್ಣಿಗೆ ಸೇರತಕ್ಕವನಾಗಿದ್ದಿ.”—ಆದಿಕಾಂಡ 3:19.
10, 11. ಡಾನ್ ಫ್ಲೆಮಿಂಗ್ ಅವರಿಂದ ಬರೆಯಲ್ಪಟ್ಟ (ಹಿಂದಿ ಭಾಷೆಯ) ಬೈಬಲ್ ಡಿಕ್ಷನೆರಿಯು, ಆತ್ಮದ ವಿಷಯದಲ್ಲಿ ಬೈಬಲಿನ ಬೋಧನೆಯ ಕುರಿತು ಏನನ್ನು ಒಪ್ಪಿಕೊಳ್ಳುತ್ತದೆ, ಮತ್ತು ಬೈಬಲ್ ಕಲಿಸುವ ವಿಷಯದೊಂದಿಗೆ ಇದು ಹೇಗೆ ಹೋಲಿಕೆಯಲ್ಲಿದೆ?
10 ಸಾರಾಂಶದಲ್ಲಿ, ಡಾನ್ ಫ್ಲೆಮಿಂಗ್ ಅವರ ಹಿಂದಿ ಭಾಷೆಯ ಬೈಬಲ್ ಡಿಕ್ಷನೆರಿ ಇದರೊಂದಿಗೆ ಸಮ್ಮತಿಸುತ್ತದೆ. ಆತ್ಮದ ಕುರಿತು ಚರ್ಚಿಸುವ ಒಂದು ಲೇಖನದಲ್ಲಿ, ಅದು ಹೀಗೆ ಹೇಳುತ್ತದೆ: “ಆತ್ಮವು, ದೇಹದಿಂದ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುವ ಯಾವುದೊ ವಿಷಯವಾಗಿದೆ ಎಂದು ಹಳೆಯ ಒಡಂಬಡಿಕೆಯ ಬರಹಗಾರರು ಎಂದಿಗೂ ಅರ್ಥೈಸಲಿಲ್ಲ. ಅವರಿಗೆ, ಆತ್ಮ (ನೆಫೆಷ್) ಅಂದರೆ ಜೀವವಾಗಿತ್ತು. ಪ್ರಾಣಿಗಳು ಮತ್ತು ಮಾನವರು—ಇಬ್ಬರೂ—ನೆಫೆಷ್ ಆಗಿದ್ದಾರೆ, ಅಂದರೆ ‘ಜೀವ-ಇರುವವರು.’ ‘ಮನುಷ್ಯನು ಬದುಕುವ ಆತ್ಮ (ಪ್ರಾಣಿ) ಆದನು’ ಎಂಬ ತರ್ಜುಮೆಯಿಂದ, ಬೈಬಲಿನ ಹಳೆಯ ಕಾಲದ ಇಂಗ್ಲಿಷ್ ಭಾಷಾಂತರಗಳು, ಹೆಚ್ಚಿನ ಗಲಿಬಿಲಿಯನ್ನು ಉಂಟುಮಾಡಿವೆ. (ಆದಿಕಾಂಡ 2:7) ಮೊದಲಿನ ವಚನಗಳಲ್ಲಿರುವಂತೆ ಇತರ ಭಾಷಾಂತರಗಳು ಇದನ್ನು ಬದುಕುವ ಪ್ರಾಣಿ ಎಂಬುದಾಗಿ ತರ್ಜುಮೆಮಾಡುತ್ತವೆ. (ಆದಿಕಾಂಡ 1:21, 24)” ಬೈಬಲಿಗನುಸಾರ, “ಮನುಷ್ಯನು ಜೀವರಹಿತ ದೇಹದಿಂದ ಮತ್ತು ದೇಹರಹಿತ ಪ್ರಾಣದಿಂದ ಮಾಡಲ್ಪಟ್ಟಿದ್ದಾನೆಂದು ನಾವು ಅರ್ಥಮಾಡಿಕೊಳ್ಳಬಾರದು” ಎಂಬುದಾಗಿಯೂ ಅದು ಕೂಡಿಸುತ್ತದೆ. “ಬದಲಿಗೆ ಅವನು ಒಂದು ಘಟಕವಾಗಿದ್ದಾನೆ. ಈ ನೆಫೆಷ್ ಅನ್ನು, ‘ವ್ಯಕ್ತಿ’ ಎಂಬುದಾಗಿಯೂ ಭಾಷಾಂತರಿಸಸಾಧ್ಯವಿದೆ.” ಇಂತಹ ಪ್ರಾಮಾಣಿಕತೆಯು ಚೈತನ್ಯದಾಯಕವಾದದ್ದಾಗಿದೆ, ಆದರೆ, ಸಾಮಾನ್ಯವಾಗಿ ಚರ್ಚಿಗೆ ಹೋಗುವವರಿಗೆ ಈ ನಿಜಾಂಶಗಳ ಅರಿವು ಯಾಕೆ ಕೊಡಲ್ಪಟ್ಟಿಲ್ಲವೆಂದು ಒಬ್ಬನು ವಿಸ್ಮಯಪಡುವುದು ಸ್ವಾಭಾವಿಕ.
11 ಮರಣದಿಂದ ಪಾರಾಗಿ ಉಳಿದು, ಕಷ್ಟಾನುಭವಿಸುವ ಯಾವುದೊ ಅಮರ ಸಂಗತಿಯು ಮನುಷ್ಯನಲ್ಲಿ ಇರುವುದಿಲ್ಲವೆಂಬ ಸರಳವಾದ ಬೈಬಲ್ ಸತ್ಯವು ಚರ್ಚಿಗೆ ಹೋಗುವವರಿಗೆ ಕಲಿಸಲ್ಪಟ್ಟಿದ್ದಲ್ಲಿ, ಅವರನ್ನು ಬಹಳಷ್ಟು ಚಿಂತೆ ಹಾಗೂ ದಿಗಿಲಿನಿಂದ ಕಾಪಾಡಸಾಧ್ಯವಿತ್ತು. ಇದು ಕ್ರೈಸ್ತಪ್ರಪಂಚವು ಏನನ್ನು ಕಲಿಸುತ್ತದೊ ಅದಕ್ಕಿಂತ ತೀರ ಭಿನ್ನವಾಗಿರುವುದಾದರೂ, ದೈವಪ್ರೇರಣೆಯಿಂದ ವಿವೇಕಿಯಾದ ಸೊಲೊಮೋನನು ಏನನ್ನು ಹೇಳಿದನೊ ಅದಕ್ಕೆ ಸಂಪೂರ್ಣವಾಗಿ ಸಮಂಜಸವಾಗಿದೆ: “ಜೀವಿತರಿಗೆ ಸಾಯುತ್ತೇವೆಂಬ ತಿಳುವಳಿಕೆಯು ಉಂಟಷ್ಟೆ; ಸತ್ತವರಿಗೋ ಯಾವ ತಿಳುವಳಿಕೆಯೂ ಇಲ್ಲ; ಅವರಿಗೆ ಇನ್ನು ಮೇಲೆ [ಈ ಜೀವಿತದಲ್ಲಿ] ಪ್ರತಿಫಲವೇನೂ ಇಲ್ಲ, ಅವರ ಜ್ಞಾಪಕವೇ ಹೋಯಿತಲ್ಲವೆ. ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು; ನೀನು ಸೇರಬೇಕಾದ ಪಾತಾಳದಲ್ಲಿ [“ಷಿಓಲ್ನಲ್ಲಿ,” NW, ಮಾನವಕುಲದ ಸಾಮಾನ್ಯ ಸಮಾಧಿಯಲ್ಲಿ] ಯಾವ ಕೆಲಸವೂ ಯುಕ್ತಿಯೂ ತಿಳುವಳಿಕೆಯೂ ಜ್ಞಾನವೂ ಇರುವದಿಲ್ಲ.”—ಪ್ರಸಂಗಿ 9:5, 10.
12. ಅಮರ ಆತ್ಮದ ಕುರಿತಾದ ಅದರ ಬೋಧನೆಯನ್ನು ಕ್ರೈಸ್ತಪ್ರಪಂಚವು ಎಲ್ಲಿಂದ ಪಡೆಯಿತು?
12 ಬೈಬಲ್ ಕಲಿಸುವ ವಿಷಯಕ್ಕಿಂತ ತೀರ ಭಿನ್ನವಾದ ವಿಷಯವನ್ನು ಕ್ರೈಸ್ತಪ್ರಪಂಚವು ಏಕೆ ಕಲಿಸುತ್ತದೆ? ನ್ಯೂ ಕ್ಯಾತೊಲಿಕ್ ಎನ್ಸೈಕ್ಲೊಪೀಡಿಯ ಹೇಳುವುದೇನೆಂದರೆ, ಆರಂಭದ ಚರ್ಚು ಮುಖಂಡರು, ಅಮರ ಆತ್ಮದಲ್ಲಿನ ನಂಬಿಕೆಗೆ ಆಧಾರವನ್ನು ಬೈಬಲಿನಲ್ಲಲ್ಲ, ಬದಲಿಗೆ “ಕವಿಗಳಲ್ಲಿ, ತತ್ವಜ್ಞಾನಿಗಳಲ್ಲಿ ಹಾಗೂ ಗ್ರೀಕ್ ಅಭಿಪ್ರಾಯದ ಸಾಮಾನ್ಯ ಸಂಪ್ರದಾಯದಲ್ಲಿ” ಕಂಡುಕೊಂಡರು . . . “ತದನಂತರ, ತಾರ್ಕಿಕರು ಪ್ಲೇಟೊ ಇಲ್ಲವೆ ಅರಿಸ್ಟಾಟಲ್ನ ಸಿದ್ಧಾಂತಗಳನ್ನು ಉಪಯೋಗಿಸಲು ಇಷ್ಟಪಟ್ಟರು.” “ಪ್ಲೇಟೋನಿಕ್ ಹಾಗೂ ನಿಯೋಪ್ಲೇಟೋನಿಕ್ ವಿಚಾರದ ಪ್ರಭಾವವು”—ಅಮರ ಆತ್ಮದಲ್ಲಿನ ನಂಬಿಕೆಯನ್ನು ಸೇರಿಸಿ—ಕಟ್ಟಕಡೆಗೆ “ಕ್ರೈಸ್ತ ದೇವತಾಶಾಸ್ತ್ರದ ಮುಖ್ಯ ವಿಷಯದೊಳಗೆ” ಸೇರಿಸಲ್ಪಟ್ಟಿತೆಂದು ಅದು ಹೇಳುತ್ತದೆ.
13, 14. ವಿಧರ್ಮಿ ಗ್ರೀಕ್ ತತ್ವಜ್ಞಾನಿಗಳಿಂದ ಜ್ಞಾನೋದಯ ಪಡೆದುಕೊಳ್ಳಲು ನಿರೀಕ್ಷಿಸುವುದು ಏಕೆ ಅಸಮಂಜಸವಾದದ್ದಾಗಿದೆ?
13 ಮರಣಾನಂತರದ ಜೀವನದ ನಿರೀಕ್ಷೆಯಂತಹ ಮೂಲಭೂತ ವಿಷಯದ ಕುರಿತು ಕಲಿತುಕೊಳ್ಳಲು, ಕ್ರೈಸ್ತರೆಂದು ಹೇಳಿಕೊಳ್ಳುವವರು ವಿಧರ್ಮಿ ಗ್ರೀಕ್ ತತ್ವಜ್ಞಾನಿಗಳ ಕಡೆಗೆ ತಿರುಗಬೇಕಿತ್ತೊ? ಖಂಡಿತವಾಗಿಯೂ ಇಲ್ಲ. ಗ್ರೀಸ್ನ ಕೊರಿಂಥ ಪಟ್ಟಣದಲ್ಲಿ ಜೀವಿಸುತ್ತಿದ್ದ ಕ್ರೈಸ್ತರಿಗೆ ಪೌಲನು ಪತ್ರವನ್ನು ಬರೆದಾಗ, ಅವನು ಹೇಳಿದ್ದು: “ಇಹಲೋಕ ಜ್ಞಾನವು ದೇವರ ಮುಂದೆ ಹುಚ್ಚುತನವಾಗಿದೆ. ಆತನು ಜ್ಞಾನಿಗಳನ್ನು ಅವರ ತಂತ್ರಗಳಲ್ಲಿಯೇ ಹಿಡುಕೊಳ್ಳುತ್ತಾನೆಂತಲೂ ಜ್ಞಾನಿಗಳ ಯೋಚನೆಗಳು ನಿಷ್ಫಲವಾದವುಗಳೆಂದು ಕರ್ತನು [“ಯೆಹೋವನು,” NW] ತಿಳುಕೊಳ್ಳುತ್ತಾನೆಂತಲೂ ಬರೆದದೆಯಲ್ಲಾ.” (1 ಕೊರಿಂಥ 3:19, 20) ಪ್ರಾಚೀನ ಗ್ರೀಕರು ಮೂರ್ತಿ ಪೂಜಕರಾಗಿದ್ದರು. ಹಾಗಾದರೆ, ಅವರು ಹೇಗೆ ಸತ್ಯದ ಮೂಲವಾಗಿರಸಾಧ್ಯವಿತ್ತು? ಪೌಲನು ಕೊರಿಂಥದವರಿಗೆ ಕೇಳಿದ್ದು: “ದೇವರ ಮಂದಿರಕ್ಕೂ ವಿಗ್ರಹಗಳಿಗೂ ಒಪ್ಪಿಗೆ ಏನು? ನಾವು ಜೀವಸ್ವರೂಪನಾದ ದೇವರ ಮಂದಿರವಾಗಿದ್ದೇವಲ್ಲಾ. ಇದರ ಸಂಬಂಧವಾಗಿ ದೇವರು—ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.”—2 ಕೊರಿಂಥ 6:16.
14 ಆರಂಭದಲ್ಲಿ ಪವಿತ್ರ ಸತ್ಯಗಳ ಪ್ರಕಟನೆಯನ್ನು ಇಸ್ರಾಯೇಲ್ ಜನಾಂಗದ ಮೂಲಕ ಕೊಡಲಾಯಿತು. (ರೋಮಾಪುರ 3:1, 2) ಸಾ.ಶ. 33ರ ತರುವಾಯ, ಅದು ಪ್ರಥಮ ಶತಮಾನದ ಅಭಿಷಿಕ್ತ ಕ್ರೈಸ್ತ ಸಭೆಯ ಮೂಲಕ ಕೊಡಲ್ಪಟ್ಟಿತು. ಪ್ರಥಮ ಶತಮಾನದ ಕ್ರೈಸ್ತರ ಕುರಿತು ಮಾತಾಡುತ್ತಾ, ಪೌಲನು ಹೇಳಿದ್ದು: “ನಮಗಾದರೋ ದೇವರು ತನ್ನ ಆತ್ಮನ ಮೂಲಕ [ತನ್ನನ್ನು ಪ್ರೀತಿಸುವವರಿಗಾಗಿ ತಯಾರು ಮಾಡಿದ ವಿಷಯಗಳನ್ನು] ಪ್ರಕಟಿಸಿದನು.” (1 ಕೊರಿಂಥ 2:10; ಪ್ರಕಟನೆ 1:1, 2ನ್ನು ಸಹ ನೋಡಿರಿ.) ಕ್ರೈಸ್ತಪ್ರಪಂಚದಲ್ಲಿರುವ ಅಮರ ಆತ್ಮದ ಸಿದ್ಧಾಂತವು, ಗ್ರೀಕ್ ತತ್ವಜ್ಞಾನದಿಂದ ತೆಗೆಯಲ್ಪಟ್ಟಿದೆ. ಅದು ಇಸ್ರಾಯೇಲಿಗೆ ಇಲ್ಲವೆ ಪ್ರಥಮ ಶತಮಾನದ ಅಭಿಷಿಕ್ತ ಕ್ರೈಸ್ತರ ಸಭೆಗೆ ದೇವರು ನೀಡಿದ ಪ್ರಕಟನೆಗಳ ಮೂಲಕ ಪ್ರಕಟಿಸಲ್ಪಡಲಿಲ್ಲ.
ಮೃತರಿಗಾಗಿರುವ ನಿಜವಾದ ನಿರೀಕ್ಷೆ
15. ಯೇಸುವಿಗನುಸಾರ, ಮೃತರಿಗಿರುವ ನಿಜವಾದ ನಿರೀಕ್ಷೆ ಏನಾಗಿದೆ?
15 ಅಮರ ಆತ್ಮವು ಇಲ್ಲದಿರುವಲ್ಲಿ, ಮೃತರಿಗೆ ಯಾವ ನಿಜ ನಿರೀಕ್ಷೆಯಿದೆ? ನಿಶ್ಚಯವಾಗಿಯೂ, ಅದು ಪುನರುತ್ಥಾನವಾಗಿದೆ—ಬೈಬಲಿನ ಪ್ರಧಾನ ಸಿದ್ಧಾಂತ ಮತ್ತು ನಿಜವಾಗಿಯೂ ಅದ್ಭುತಕರವಾಗಿರುವ ದೈವಿಕ ವಾಗ್ದಾನ. “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ; ನನ್ನನ್ನು ನಂಬುವವನು ಸತ್ತರೂ ಬದುಕುವನು” ಎಂದು ತನ್ನ ಸ್ನೇಹಿತೆಯಾದ ಮಾರ್ಥಳಿಗೆ ಹೇಳಿದಾಗ, ಯೇಸು ಪುನರುತ್ಥಾನದ ನಿರೀಕ್ಷೆಯನ್ನು ಅವಳ ಮುಂದಿಟ್ಟನು. (ಯೋಹಾನ 11:25) ಯೇಸುವಿನಲ್ಲಿ ನಂಬಿಕೆ ಇಡುವುದೆಂದರೆ, ಅಮರ ಆತ್ಮದಲ್ಲಿ ಅಲ್ಲ, ಪುನರುತ್ಥಾನದಲ್ಲಿ ನಂಬಿಕೆ ಇಡುವುದೇ ಆಗಿದೆ.
16. ಪುನರುತ್ಥಾನದಲ್ಲಿ ನಂಬಿಕೆಯಿಡುವುದು ಏಕೆ ವಿವೇಚನಾಯುಕ್ತವಾಗಿದೆ?
16 “ಅದಕ್ಕೆ ಆಶ್ಚರ್ಯಪಡಬೇಡಿರಿ; ಸಮಾಧಿಗಳಲ್ಲಿರುವವರೆಲ್ಲರು ಆತನ ಧ್ವನಿಯನ್ನು ಕೇಳಿ ಎದ್ದು ಹೊರಗೆ ಬರುವ ಕಾಲ ಬರುತ್ತದೆ” ಎಂಬುದಾಗಿ ಇದಕ್ಕೆ ಮೊದಲು ಯೇಸು ಕೆಲವು ಯೆಹೂದ್ಯರಿಗೆ ಹೇಳಿದಾಗ, ಅವನು ಪುನರುತ್ಥಾನದ ಕುರಿತು ಮಾತಾಡಿದ್ದನು. (ಯೋಹಾನ 5:28, 29) ಯೇಸು ಇಲ್ಲಿ ವರ್ಣಿಸುವಂತಹ ವಿಷಯವು, ದೇಹದ ಮರಣದಿಂದ ಪಾರಾಗಿ, ನೇರವಾಗಿ ಸ್ವರ್ಗಕ್ಕೆ ಹೋಗುವ ಒಂದು ಅಮರ ಆತ್ಮದ ವಿಷಯಕ್ಕೆ ತೀರ ಭಿನ್ನವಾಗಿದೆ. ಇದು, ಶತಮಾನಗಳಿಂದ ಇಲ್ಲವೆ ಸಾವಿರಾರು ವರ್ಷಗಳಿಂದಲೂ ಸಮಾಧಿಗಳಲ್ಲಿ ಇದ್ದಂತಹ ಜನರ ಭವಿಷ್ಯತ್ತಿನ ‘ಹೊರಬರುವಿಕೆ’ ಆಗಿದೆ. ಇದು, ಮೃತರು ಪುನಃ ಜೀವಿತರಾಗುವ ವಿಷಯವಾಗಿದೆ. ಇದು ಅಸಾಧ್ಯವೊ? ‘ಸತ್ತವರನ್ನು ಬದುಕಿಸುವ, ಇಲ್ಲದ್ದನ್ನು ಇರುವದಾಗಿ ಕರೆಯುವ’ ದೇವರಿಗೆ ಇದು ಅಸಾಧ್ಯವಲ್ಲ. (ರೋಮಾಪುರ 4:17) ಮೃತರು ಜೀವಂತರಾಗುವ ವಿಚಾರವನ್ನು ಸಂದೇಹವಾದಿಗಳು ಗೇಲಿಮಾಡಬಹುದು, ಆದರೆ “ದೇವರು ಪ್ರೀತಿಸ್ವರೂಪಿ”ಯಾಗಿದ್ದು, ತನ್ನನ್ನು “ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ” ಎಂಬ ನಿಜಾಂಶದೊಂದಿಗೆ ಇದು ಪರಿಪೂರ್ಣವಾಗಿ ಹೊಂದಿಕೊಳ್ಳುತ್ತದೆ.—1 ಯೋಹಾನ 4:16; ಇಬ್ರಿಯ 11:6.
17. ಪುನರುತ್ಥಾನದ ಮೂಲಕ ದೇವರು ಏನನ್ನು ಪೂರೈಸುವನು?
17 ಎಷ್ಟೆಂದರೂ, “ಮರಣದ ತನಕ ನಂಬಿಗಸ್ತ”ರಾಗಿ ರುಜುಪಡಿಸಿಕೊಂಡವರನ್ನು ದೇವರು ಪುನಃ ಜೀವಿತರನ್ನಾಗಿ ಮಾಡದಿದ್ದರೆ, ಆತನು ಅವರಿಗೆ ಪ್ರತಿಫಲವನ್ನು ಹೇಗೆ ಕೊಡಸಾಧ್ಯವಿದೆ? (ಪ್ರಕಟನೆ 2:10) ಅಪೊಸ್ತಲ ಯೋಹಾನನು ಅದರ ಕುರಿತು ಏನನ್ನು ಬರೆದನೊ, ಅದನ್ನು ಸಹ ದೇವರು ಪೂರೈಸುವಂತೆ ಪುನರುತ್ಥಾನವು ಸಾಧ್ಯಗೊಳಿಸುತ್ತದೆ: “ಸೈತಾನನ ಕೆಲಸಗಳನ್ನು ಲಯಮಾಡುವದಕ್ಕೋಸ್ಕರವೇ ದೇವಕುಮಾರನು ಪ್ರತ್ಯಕ್ಷನಾದನು.” (1 ಯೋಹಾನ 3:8) ಹಿಂದೆ, ಏದೆನ್ ತೋಟದಲ್ಲಿ, ಸೈತಾನನು ನಮ್ಮ ಪ್ರಥಮ ಹೆತ್ತವರನ್ನು ಪಾಪ ಮತ್ತು ಮರಣಕ್ಕೆ ನಡೆಸಿದಾಗ, ಅವನು ಇಡೀ ಮಾನವ ಕುಲದ ಕೊಲೆಗಡುಕನಾಗಿ ಪರಿಣಮಿಸಿದನು. (ಆದಿಕಾಂಡ 3:1-6; ಯೋಹಾನ 8:44) ಯೇಸು ತನ್ನ ಪರಿಪೂರ್ಣ ಜೀವವನ್ನು ಅನುರೂಪವಾದ ಪ್ರಾಯಶ್ಚಿತ್ತವಾಗಿ ಅರ್ಪಿಸಿದಾಗ, ಅವನು ಸೈತಾನನ ಕೆಲಸಗಳನ್ನು ಲಯಮಾಡಲಾರಂಭಿಸಿದನು. ಈ ಪ್ರಾಯಶ್ಚಿತ್ತವು, ಆದಾಮನ ಉದ್ದೇಶಪೂರ್ವಕ ಅವಿಧೇಯತೆಯಿಂದ ಪರಿಣಮಿಸಿದ ಪಾಪಕ್ಕೆ, ಪಿತ್ರಾರ್ಜಿತವಾಗಿ ಬಂದ ದಾಸತ್ವದಿಂದ ಬಿಡಗಡೆ ಹೊಂದಲು ಮಾನವ ಕುಲಕ್ಕೆ ಒಂದು ಮಾರ್ಗವನ್ನು ತೆರೆಯಿತು. (ರೋಮಾಪುರ 5:18) ಈ ಆದಾಮ ಸಂಬಂಧಿತ ಪಾಪದ ಕಾರಣ ಮೃತರಾಗುವವರ ಪುನರುತ್ಥಾನವು, ಪಿಶಾಚನ ಕೆಲಸಗಳನ್ನು ಇನ್ನೂ ಹೆಚ್ಚು ಲಯಮಾಡುವುದಾಗಿದೆ.
ದೇಹ ಮತ್ತು ಅಮರ ಆತ್ಮ
18. ಯೇಸು ಪುನರುತ್ಥಾನಗೊಳಿಸಲ್ಪಟ್ಟಿದ್ದನೆಂಬ ಪೌಲನ ಹೇಳಿಕೆಗೆ ಕೆಲವು ಗ್ರೀಕ್ ತತ್ವಜ್ಞಾನಿಗಳು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಯಾಕೆ?
18 ಅಪೊಸ್ತಲ ಪೌಲನು ಅಥೇನೆ ಪಟ್ಟಣದಲ್ಲಿದ್ದಾಗ, ಗ್ರೀಕ್ ತತ್ವಜ್ಞಾನಿಗಳನ್ನು ಒಳಗೊಂಡ ಒಂದು ಗುಂಪಿಗೆ ಅವನು ಸುವಾರ್ತೆಯನ್ನು ಸಾರಿದನು. ಒಬ್ಬನೇ ಸತ್ಯ ದೇವರ ಕುರಿತಾದ ಚರ್ಚೆ ಮತ್ತು ಪಶ್ಚಾತ್ತಾಪಪಡುವಂತೆ ಅವನು ನೀಡಿದ ಕರೆಗೆ ಅವರು ಕಿವಿಗೊಟ್ಟರು. ಮುಂದೆ ಏನು ಸಂಭವಿಸಿತು? ಪೌಲನು ಹೀಗೆ ಹೇಳುತ್ತಾ ತನ್ನ ಭಾಷಣವನ್ನು ಮುಗಿಸಿದನು: “[ದೇವರು] ನಿಷ್ಕರ್ಷೆ ಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸವನ್ನು ಗೊತ್ತುಮಾಡಿದ್ದಾನೆ. ಅವನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ಇದನ್ನು ನಂಬುವದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ.” ಆ ಮಾತುಗಳು ಕೋಲಾಹಲವನ್ನು ಎಬ್ಬಿಸಿದವು. “ಸತ್ತವರು ಎದ್ದುಬರುವ ವಿಷಯವನ್ನು ಕೇಳಿದಾಗ ಕೆಲವರು ಅಪಹಾಸ್ಯಮಾಡಿದರು.” (ಅ. ಕೃತ್ಯಗಳು 17:22-32) ದೇವತಾಶಾಸ್ತ್ರಜ್ಞರಾದ ಆಸ್ಕರ್ ಕುಲ್ಮಾನ್ ಗಮನಿಸುವುದು: “ಅಮರ ಆತ್ಮದಲ್ಲಿ ನಂಬಿಕೆಯನ್ನಿಟ್ಟ ಗ್ರೀಕರಿಗೆ, ಪುನರುತ್ಥಾನದ ಕುರಿತಾದ ಕ್ರೈಸ್ತ ಪ್ರಚಾರವನ್ನು ಸ್ವೀಕರಿಸುವುದು, ಇತರ ಜನರಿಗಿಂತ ಬಹಳ ಕಷ್ಟಕರವಾಗಿದ್ದಿರಬಹುದು. . . . ಮಹಾ ತತ್ವಜ್ಞಾನಿಗಳಾದ ಸಾಕ್ರೆಟಸ್ ಹಾಗೂ ಪ್ಲೇಟೊ ಅವರ ಬೋಧನೆಯನ್ನು, ಯಾವುದೇ ವಿಧದಲ್ಲಿ ಹೊಸ ಒಡಂಬಡಿಕೆಯ ಬೋಧನೆಯೊಂದಿಗೆ ಸುಸಂಗತ [ಒಮ್ಮತ]ಗೊಳಿಸಸಾಧ್ಯವಿಲ್ಲ.”
19. ಕ್ರೈಸ್ತಪ್ರಪಂಚದ ದೇವತಾಶಾಸ್ತ್ರಜ್ಞರು, ಪುನರುತ್ಥಾನದ ಬೋಧನೆಯನ್ನು ಅಮರ ಆತ್ಮದ ಸಿದ್ಧಾಂತದೊಂದಿಗೆ ಸರಿಹೊಂದಿಸಲು ಹೇಗೆ ಪ್ರಯತ್ನಿಸಿದರು?
19 ಹಾಗಿದ್ದರೂ, ಅಪೊಸ್ತಲರ ಮರಣದ ತರುವಾಯ ಸಂಭವಿಸಿದ ಮಹಾ ಧರ್ಮಭ್ರಷ್ಟತೆಯ ಸಮಯದಲ್ಲಿ, ಪುನರುತ್ಥಾನದ ಕುರಿತಾದ ಕ್ರೈಸ್ತ ಬೋಧನೆಯನ್ನು ಅಮರ ಆತ್ಮದಲ್ಲಿನ ಪ್ಲೇಟೊವಿನ ನಂಬಿಕೆಯೊಂದಿಗೆ ಏಕೀಕರಿಸಲು ದೇವತಾಶಾಸ್ತ್ರಜ್ಞರು ಶ್ರಮಪಟ್ಟರು. ಸಕಾಲದಲ್ಲಿ, ಕೆಲವರು ಒಂದು ನವೀನ ವಿಚಾರಕ್ಕೆ ಸಮ್ಮತಿಸಿದರು: ಮರಣದಲ್ಲಿ ಆತ್ಮವು ದೇಹದಿಂದ ಬೇರೆಯಾಗುತ್ತದೆ (ಕೆಲವರು ಹೇಳುವಂತೆ, “ಬಿಡುಗಡೆ ಹೊಂದುತ್ತದೆ”). ತರುವಾಯ, ಆರ್. ಜೆ. ಕುಕ್ ಅವರಿಂದ ಬರೆಯಲ್ಪಟ್ಟ, ಪುನರುತ್ಥಾನದ ಸಿದ್ಧಾಂತದ ರೂಪರೇಖೆಗಳು (ಇಂಗ್ಲಿಷ್) ಎಂಬ ಪುಸ್ತಕಕ್ಕನುಸಾರ, ನ್ಯಾಯತೀರ್ಪಿನ ದಿನದಂದು, “ಪ್ರತಿಯೊಂದು ದೇಹವು ಅದರ ಸ್ವಂತ ಆತ್ಮದೊಂದಿಗೆ, ಮತ್ತು ಪ್ರತಿಯೊಂದು ಆತ್ಮವು ತನ್ನ ಸ್ವಂತ ದೇಹದೊಂದಿಗೆ ಪುನಃ ಸೇರಿಕೊಳ್ಳುವುದು.” ದೇಹದೊಂದಿಗೆ ಅಮರ ಆತ್ಮದ ಭವಿಷ್ಯತ್ತಿನ ಪುನರ್ಮಿಲನವು, ಪುನರುತ್ಥಾನವೆಂದು ಹೇಳಲ್ಪಡುತ್ತದೆ.
20, 21. ಪುನರುತ್ಥಾನದ ಕುರಿತಾದ ಸತ್ಯವನ್ನು ಯಾರು ಸತತವಾಗಿ ಕಲಿಸಿದ್ದಾರೆ, ಮತ್ತು ಇದು ಅವರಿಗೆ ಲಾಭದಾಯಕವಾಗಿ ಪರಿಣಮಿಸಿರುವುದು ಹೇಗೆ?
20 ಈ ಸಿದ್ಧಾಂತವು, ಈಗಲೂ ಪ್ರಧಾನ ಚರ್ಚುಗಳ ಮುಖ್ಯ ಸಿದ್ಧಾಂತವಾಗಿ ಇದೆ. ಇಂತಹ ಒಂದು ಪರಿಕಲ್ಪನೆಯು ಒಬ್ಬ ದೇವತಾಶಾಸ್ತ್ರಜ್ಞನಿಗೆ ತರ್ಕಬದ್ಧವಾಗಿ ತೋರಬಹುದಾದರೂ, ಚರ್ಚಿಗೆ ಹೋಗುವ ಹೆಚ್ಚಿನವರಿಗೆ ಇದರ ಬಗ್ಗೆ ಏನೂ ಗೊತ್ತಿಲ್ಲ. ತಾವು ಮೃತರಾದಾಗ, ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆಂದು ಅವರು ನಂಬುತ್ತಾರೆ. ಈ ಕಾರಣಕ್ಕಾಗಿ, ಕಾಮನ್ವೀಲ್ ಪತ್ರಿಕೆಯ 1995, ಮೇ 5ರ ಸಂಚಿಕೆಯಲ್ಲಿ, ಬರಹಗಾರ ಜಾನ್ ಗಾರ್ವೀ ಆಪಾದಿಸಿದ್ದು: “[ಮರಣಾನಂತರದ ಜೀವಿತದ ವಿಷಯದಲ್ಲಿ] ಅಧಿಕಾಂಶ ಕ್ರೈಸ್ತರ ನಂಬಿಕೆಯು, ನಿಜವಾಗಿಯೂ ಕ್ರೈಸ್ತೋಚಿತವಾಗಿರುವುದಕ್ಕಿಂತಲೂ ಪ್ಲೇಟೋವಿನ ನವೀನ ತತ್ವಕ್ಕೆ ಬಹಳಷ್ಟು ನಿಕಟವಾಗಿರುವಂತೆ ತೋರುತ್ತದೆ, ಮತ್ತು ಅದಕ್ಕೆ ಬೈಬಲಿನ ಆಧಾರವಿರುವುದಿಲ್ಲ.” ನಿಶ್ಚಯವಾಗಿಯೂ, ಪ್ಲೇಟೋವಿನ ತತ್ವಕ್ಕಾಗಿ ಬೈಬಲನ್ನು ಅದಲುಬದಲು ಮಾಡಿರುವ ಮೂಲಕ, ಕ್ರೈಸ್ತಪ್ರಪಂಚದ ವೈದಿಕರು ತಮ್ಮ ಹಿಂಡುಗಳಲ್ಲಿ ಬೈಬಲಿನ ಪುನರುತ್ಥಾನದ ನಿರೀಕ್ಷೆಯನ್ನೇ ನಂದಿಸಿಬಿಟ್ಟಿದ್ದಾರೆ.
21 ಮತ್ತೊಂದು ಕಡೆಯಲ್ಲಿ, ಯೆಹೋವನ ಸಾಕ್ಷಿಗಳು ವಿಧರ್ಮಿ ತತ್ವಜ್ಞಾನವನ್ನು ತಿರಸ್ಕರಿಸಿ, ಬೈಬಲಿನ ಪುನರುತ್ಥಾನದ ಬೋಧನೆಗೆ ಅಂಟಿಕೊಳ್ಳುತ್ತಾರೆ. ಅವರು ಅಂತಹ ಬೋಧನೆಯನ್ನು, ಆತ್ಮಿಕ ತಿಳುವಳಿಕೆಯನ್ನು ಕೊಡುವಂತಹದ್ದೂ, ತೃಪ್ತಿಕರವೂ, ಸಾಂತ್ವನದಾಯಕವೂ ಆದದ್ದಾಗಿ ಕಂಡುಕೊಳ್ಳುತ್ತಾರೆ. ಮುಂದಿನ ಲೇಖನಗಳಲ್ಲಿ, ಬೈಬಲಿನ ಬೋಧನೆಯಾದ ಪುನರುತ್ಥಾನವು—ಭೂನಿರೀಕ್ಷೆ ಇರುವವರಿಗೂ ಸ್ವರ್ಗೀಯ ಜೀವನಕ್ಕೆ ಪುನರುತ್ಥಾನ ಪಡೆಯುವ ಪ್ರತೀಕ್ಷೆಯುಳ್ಳವರಿಗೂ—ಎಷ್ಟು ಸಾಧಾರವುಳ್ಳದ್ದು ಮತ್ತು ಎಷ್ಟು ತರ್ಕಬದ್ಧವಾದದ್ದು ಎಂಬುದನ್ನು ನಾವು ನೋಡುವೆವು. ಈ ಲೇಖನಗಳನ್ನು ಪರಿಗಣಿಸುವ ಮೊದಲು, ಪೂರ್ವಸಿದ್ಧತೆಯಾಗಿ ನೀವು ಒಂದನೆಯ ಕೊರಿಂಥದ 15ನೆಯ ಅಧ್ಯಾಯವನ್ನು ಜಾಗರೂಕತೆಯಿಂದ ಓದುವಂತೆ ನಾವು ಕೇಳಿಕೊಳ್ಳುತ್ತೇವೆ.
ನಿಮಗೆ ನೆನಪಿದೆಯೆ?
◻ ಪುನರುತ್ಥಾನದಲ್ಲಿ ನಾವು ದೃಢವಾದ ಭರವಸೆಯನ್ನು ಏಕೆ ಬೆಳೆಸಿಕೊಳ್ಳಬೇಕು?
◻ ಯೆಹೋವನು ಆದಾಮ ಹವ್ವರ ಮುಂದೆ ಯಾವ ಪ್ರತೀಕ್ಷೆಯನ್ನಿಟ್ಟನು?
◻ ಗ್ರೀಕ್ ತತ್ವಜ್ಞಾನದಲ್ಲಿ ಸತ್ಯವನ್ನು ಹುಡುಕುವುದು ತರ್ಕಸಮ್ಮತವಲ್ಲ ಏಕೆ?
◻ ಪುನರುತ್ಥಾನವು ಏಕೆ ವಿವೇಚನಾಯುಕ್ತವಾದ ನಿರೀಕ್ಷೆಯಾಗಿದೆ?
[ಪುಟ 10 ರಲ್ಲಿರುವ ಚಿತ್ರ]
ನಮ್ಮ ಪ್ರಥಮ ಹೆತ್ತವರು ಪಾಪಮಾಡಿದಾಗ, ಭೂಮಿಯ ಮೇಲೆ ಸದಾಕಾಲ ಜೀವಿಸುವ ನಿರೀಕ್ಷೆಯನ್ನು ಕಳೆದುಕೊಂಡರು
[ಪುಟ 12 ರಲ್ಲಿರುವ ಚಿತ್ರ]
ಚರ್ಚಿನ ವಿದ್ವಾಂಸರು, ಅಮರ ಆತ್ಮದಲ್ಲಿ ಪ್ಲೇಟೋವಿಗಿದ್ದ ನಂಬಿಕೆಯಿಂದ ಪ್ರಭಾವಿತರಾದರು
[ಕೃಪೆ]
Musei Capitolini, Roma