“ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ.”
ಯೇಸು ಕ್ರಿಸ್ತನು ಆ ಮಾತುಗಳನ್ನು 19 ಶತಮಾನಗಳಿಗಿಂತಲೂ ಹಿಂದೆ ನುಡಿದಾಗ, ಹಾನಿಕರವಾದ ಧಾರ್ಮಿಕ ಬೋಧನೆಗಳ ಮತ್ತು ಪದ್ಧತಿಗಳ ಕುರಿತು ತನ್ನ ಶಿಷ್ಯರನ್ನು ಎಚ್ಚರಿಸುತ್ತಿದ್ದನು. (ಮತ್ತಾಯ 16:6, 12) ಮಾರ್ಕ 8:15ರ ವೃತ್ತಾಂತವು ಸ್ಪಷ್ಟವಾಗಿಗಿ ಹೇಳುವುದು: “ಎಚ್ಚರಿಕೆ, ಫರಿಸಾಯರ ಮತ್ತು ಹೆರೋದನ ಹುಳಿ ಹಿಟ್ಟಿನ ವಿಷಯದಲ್ಲಿ ನೋಡಿಕೊಳ್ಳಿರಿ.” ಹೆರೋದನನ್ನು ಉಲ್ಲೀಖಿಸಿದ್ದೇಕೆ? ಯಾಕಂದರೆ ಸದ್ದುಕಾಯರಲ್ಲಿ ಕೆಲವರು ಹೆರೋದ್ಯರು, ಒಂದು ರಾಜಕೀಯ ಗುಂಪು ಅಗಿದ್ದರು.
ಯಾಕೆ ಅಂತಹ ಒಂದು ವಿಶೇಷ ಎಚ್ಚರಿಕೆಯ ಆವಶ್ಯಕತೆಯಿತ್ತು? ಫರಿಸಾಯರು ಮತ್ತು ಸದ್ದುಕಾಯರು ಇಬ್ಬರೂ ಯೇಸುವಿನ ತೀವ್ರ ವಿರೋಧಕರಾಗಿರಲಿಲ್ಲವೆ? (ಮತ್ತಾಯ 16:21; ಯೋಹಾನ 11:45-50) ಹೌದು ವಿರೋಧಕರಾಗಿದ್ದರು. ಆದರೂ, ಅವರಲ್ಲಿ ಕೆಲವರು ತದನಂತರ ಕ್ರೈಸ್ತತ್ವವನ್ನು ಸ್ವೀಕರಿಸಿ ಆಮೇಲೆ ತಮ್ಮ ಸ್ವಂತ ವಿಚಾರವನ್ನು ಕ್ರೈಸ್ತ ಸಭೆಯ ಮೇಲೆ ಹೊರಿಸುವವರಿದ್ದರು.—ಅ. ಕೃತ್ಯಗಳು 15:5.
ಯಾರ ಪ್ರಭಾವದ ಕೆಳಗೆ ಅವರು ಬೆಳೆಸಲ್ಪಟ್ಟಿದ್ದರೊ ಆ ಧಾರ್ಮಿಕ ಮುಖಂಡರನ್ನು ಶಿಷ್ಯರು ತಾವೇ ಅನುಕರಿಸಬಹುದಾದ ಅಪಾಯವು ಸಹ ಅಲ್ಲಿತ್ತು. ಕೆಲವೊಮ್ಮೆ, ಅಂತಹ ಒಂದು ಧಾರ್ಮಿಕ ಹಿನ್ನೆಲೆಯಿಂದ ಬರುವುದು ತಾನೆ, ಯೇಸುವಿನ ಬೋಧನೆಗಳ ಅರ್ಥವನ್ನು ಗ್ರಹಿಸುವುದಕ್ಕೆ ಅವರಿಗೆ ಒಂದು ತಡೆಗಟ್ಟಾಗಿ ಪರಿಣಮಿಸಿತು.
ಫರಿಸಾಯತ್ವ ಮತ್ತು ಸದ್ದುಕಾಯತ್ವವನ್ನು ಅಷ್ಟು ಅಪಾಯಕರವಾಗಿ ಮಾಡಿದ್ದು ಯಾವುದು? ಯೇಸುವಿನ ದಿನಗಳ ಧಾರ್ಮಿಕ ಪರಿಸ್ಥಿತಿಗಳ ಕಡೆಗಿನ ಒಂದು ನೋಟವು ನಮಗೆ ಅದರ ಕಲ್ಪನೆಯನ್ನು ಕೊಡುವುದು.
ಧಾರ್ಮಿಕ ಅನೈಕ್ಯ
ಸಾ.ಶ. ಒಂದನೆಯ ಶತಮಾನದ ಯೆಹೂದ್ಯ ಸಮಾಜದ ಕುರಿತು ಇತಿಹಾಸಕಾರ ಮ್ಯಾಕ್ಸ್ ರೇಡನ್ ಬರೆದದ್ದು: “ಯೆಹೂದ್ಯ ಸಭೆಗಳು ಒಂದರಿಂದೊಂದು ಸ್ವತಂತ್ರವಾಗಿದುದ್ದು ತೀರ ನೈಜವಾಗಿತ್ತು, ಮತ್ತು ಒತ್ತಿಹೇಳಲ್ಪಟ್ಟಿತು ಸಹ. . . . ಅನೇಕ ವೇಳೆ, ಆಲಯಕ್ಕಾಗಿ ಮತ್ತು ಪವಿತ್ರ ಪಟ್ಟಣಕ್ಕಾಗಿ ಪೂಜ್ಯತೆಯು ಅತಿ ಬಲವಾಗಿ ಒತ್ತಿಹೇಳಲ್ಪಟ್ಟಾಗ, ತಾಯ್ನಾಡಿನಲ್ಲಿ ಆ ಗಳಿಗೆ ಸರಕಾರೀ ಅಧಿಕಾರವನ್ನು ಹಿಡಿದವರೆಡೆಗೆ ತೀವ್ರ ತಿರಸ್ಕಾರವು ಪ್ರದರ್ಶಿಸಲ್ಪಡಬಹುದಿತ್ತು.”
ಆತ್ಮಿಕ ಕಾರ್ಯಾಧಿಗಳ ಒಂದು ಶೋಚನೀಯ ಸ್ಥಿತಿಯು ಇದಾಗಿತ್ತು ನಿಶ್ಚಯ! ನೆರವಾದ ಕೆಲವು ಕಾರಣಾಂಶಗಳು ಯಾವುವು? ಯೆಹೂದ್ಯರೆಲ್ಲರೂ ಪಲೆಸ್ತೀನದಲ್ಲಿ ವಾಸಿಸಲಿಲ್ಲ. ಯಾವುದರಲ್ಲಿ ಪುರೋಹಿತರು ಸಮಾಜದ ಮುಖಂಡರಾಗಿ ಇರಲಿಲ್ಲವೊ ಆ ಗ್ರೀಕ್ ಸಂಸ್ಕೃತಿಯ ಪ್ರಭಾವವು, ಯೆಹೋವನ ಯಾಜಕತ್ವದ ಏರ್ಪಾಡಿಗಾಗಿ ಗೌರವವನ್ನು ಕುಗ್ಗಿಸುವುದರಲ್ಲಿ ನೆರವಾಗಿತ್ತು. (ವಿಮೋಚನಕಾಂಡ 28:29; 40:12-15) ಮತ್ತು ಸುಶಿಕ್ಷಿತ ಲೌಕಿಕರನ್ನು ಮತ್ತು ಶಾಸ್ತ್ರಿಗಳನ್ನು ಉಪೇಕ್ಷಿಸಲಾಗದು.
ಫರಿಸಾಯರು
ಫರಿಸಾಯರು, ಅಥವಾ ಪೆರುಶಿಮ್ ಎಂಬ ಹೆಸರಿಗೆ “ಬೇರ್ಪಟ್ಟವರು” ಎಂಬರ್ಥ ಸಂಭವನೀಯ. ಫರಿಸಾಯರು ತಮ್ಮನ್ನು ಮೋಶೆಯ ಅನುಯಾಯಿಗಳಾಗಿ ಪರಿಗಣಿಸಿದರು. ಅವರು ತಮ್ಮ ಸ್ವಂತ ಒಕ್ಕೂಟವನ್ನು ಅಥವಾ ಭ್ರಾತೃತ್ವ (ಹೀಬ್ರು, ಚವೂರ) ವನ್ನು ರಚಿಸಿದರು. ಇದರಲ್ಲಿ ಸದಸ್ಯನಾಗಿ ಸೇರಿಸಲ್ಪಡಲು, ಲೇವ್ಯ ಶುದ್ಧತೆಯ ಕಟ್ಟುನಿಟ್ಟಿನ ಆಚರಣೆಯನ್ನು, ‘ಏಮ್-ಹೆಎ’ರೆಟ್ಸ್ (ಅಶಿಕ್ಷಿತ ಜನತೆ) ಯೊಂದಿಗೆ ಆಪ್ತ ಸಂಬಂಧದ ವರ್ಜನೆಯನ್ನು ಮತ್ತು ದಶಮಾಂಶ ಸಲ್ಲಿಸುವಿಕೆಯಲ್ಲಿ ನಿಷ್ಠೆಯನ್ನು—ಸಂಘದ ಮೂವರು ಸದಸ್ಯರ ಮುಂದೆ ಒಬ್ಬನು ಪ್ರತಿಜ್ಞೆಮಾಡಿ ಹೇಳಬೇಕಿತ್ತು. ಮಾರ್ಕ 2:16 “ಫರಿಸಾಯರ ಶಾಸ್ತ್ರಿಗಳ” ಕುರಿತು ಮಾತಾಡುತ್ತದೆ. ಈ ಸಂಘದ ಫರಿಸಾಯರಲ್ಲಿ ಕೆಲವರು ಕಸಬುದಾರ ಶಾಸ್ತ್ರಿಗಳು ಮತ್ತು ಶಿಕ್ಷಕರಾಗಿದ್ದಾಗ, ಇತರರಾದರೊ ಲೌಕಿಕ ಸಾಮಾನ್ಯರಾಗಿದ್ದರು.—ಮತ್ತಾಯ 23:1-7.
ಫರಿಸಾಯರು ಸರ್ವವ್ಯಾಪಿ ದೇವರಲ್ಲಿ ನಂಬಿಕೆಯಿಟ್ಟರು. ದೇವರು ಎಲ್ಲೆಲ್ಲಿಯೂ ಇದ್ದಾನಾದುದರಿಂದ, ದೇವಾಲಯದ ಹೊರಗೆ ಮತ್ತು ಒಳಗೆ ಅವನನ್ನು ಆರಾಧಿಸಸಾಧ್ಯವಿದೆ, ಬಲಿಯರ್ಪಣೆಗಳಿಂದಲೇ ಅಹ್ವಾನ ಮಾಡಬೇಕೆಂದಿಲ್ಲ. ಅವರು ಹೀಗೆ ಸಭಾಮಂದಿರವನ್ನು ಆರಾಧನೆಯ, ಅಧ್ಯಯನದ ಮತ್ತು ಪ್ರಾರ್ಥನೆಯ ಸ್ಥಳವಾಗಿ ಪರಿಪಾಲಿಸಿದರು, ಮತ್ತು ದೇವಾಲಯದ ಪ್ರತಿಸ್ಪರ್ಧಿಯಾದ ಅದನ್ನು ಜನರ ಜೀವನದಲ್ಲಿ ಒಂದು ಕೇಂದ್ರ ಹಾಗೂ ಪ್ರಾಮುಖ್ಯ ಸ್ಥಾನವಾಗುವಂತೆ ಮೇಲ್ಪಡಿಸಿದರು.”—ಎನ್ಸೈಕ್ಲೊಪೀಡಿಯ ಜುಡೈಕಾ.
ಫರಿಸಾಯರಿಗೆ ಯೆಹೋವನ ಆಲಯದೆಡೆಗೆ ಗಣ್ಯತೆಯ ಕೊರತೆಯಿತ್ತು. ಇದನ್ನು ಯೇಸುವಿನ ಮಾತುಗಳಲ್ಲಿ ಕಾಣಸಾಧ್ಯವಿದೆ: “ಅಯ್ಯೋ, ದಾರಿತೋರಿಸುವ ಕುರುಡರೇ, ಒಬ್ಬನು ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ. ಆದರೆ ಒಬ್ಬನು ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ನೀವು ಹೇಳುತ್ತೀರಿ. ಹುಚ್ಚರೇ, ಕುರುಡರೇ, ಯಾವದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪಾವನಮಾಡುವ ದೇವಾಲಯವೋ? ಒಬ್ಬನು ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದೇನು ಆಣೆಯಲ್ಲ, ಆದರೆ ಅದರಲ್ಲಿರುವ ಕಾಣಿಕೆಯ ಮೇಲೆ ಆಣೆಯಿಟ್ಟುಕೊಂಡರೆ ಅದನ್ನು ನಡಿಸಲೇಬೇಕು ಎಂದು ಹೇಳುತ್ತೀರಿ. ಕುರುಡರೇ, ಯಾವದು ಹೆಚ್ಚಿನದು? ಕಾಣಿಕೆಯೋ, ಆ ಕಾಣಿಕೆಯನ್ನು ಪಾವನಮಾಡುವ ಯಜ್ಞವೇದಿಯೋ? ಹೀಗಿರುವದರಿಂದ ಯಜ್ಞವೇದಿಯ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿರುವ ಎಲ್ಲಾದರ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು.”—ಮತ್ತಾಯ 23:16-20.
ಫರಿಸಾಯರು ತಮ್ಮ ವಿವೇಚನೆಯಲ್ಲಿ ಅಷ್ಟು ವಕ್ರರಾದದ್ದು ಹೇಗೆ? ಅವರು ಏನನ್ನು ಅಲಕ್ಷ್ಯ ಮಾಡುತ್ತಿದ್ದರು? ಯೇಸು ಆಮೇಲೆ ಏನನ್ನುತ್ತಾನೆಂದು ಗಮನಿಸಿರಿ: “ದೇವಾಲಯದ ಮೇಲೆ ಆಣೆಯಿಟ್ಟುಕೊಂಡರೆ ಅದರ ಮೇಲೆಯೂ ಅದರಲ್ಲಿ ವಾಸಮಾಡುವಾತನ ಮೇಲೆಯೂ ಆಣೆಯಿಟ್ಟುಕೊಂಡ ಹಾಗಾಯಿತು. (ಮತ್ತಾಯ 23:21) ಈ ವಚನದ ಕುರಿತು, ವಿದ್ವಾಂಸ ಇ. ಪಿ. ಸ್ಯಾಂಡರ್ಜ್ ಅವಲೋಕಿಸಿದ್ದು: “ಪರಿಶುದ್ಧ ದೇವರನ್ನು ಅಲ್ಲಿ ಆರಾಧಿಸುತ್ತಿದ್ದುದರಿಂದ ಮಾತ್ರವಲ್ಲ ಆತನ ಉಪಸ್ಥಿತಿಯ ಕಾರಣದಿಂದಲೂ ದೇವಾಲಯವು ಪವಿತ್ರವಾಗಿತ್ತು.” (ಜುಡಾಯಿಸಂ: ಪ್ರ್ಯಾಕ್ಟಿಸ್ ಆ್ಯಂಡ್ ಬಿಲೀಫ್, 63 ಸಾ.ಶ.ಪೂ—66 ಸಾ.ಶ.) ಆದರೂ, ಆತನು ಸರ್ವವ್ಯಾಪಿಯೆಂದು ನೆನಸಿದವರಿಗೆ ಯೆಹೋವನ ವಿಶೇಷ ಉಪಸ್ಥಿತಿಯು ಅಷ್ಟೇನು ಮಹತ್ವದ್ದಾಗಿರದು.
ಪೂರ್ವಾದೃಷ್ಟ ಮತ್ತು ಇಚ್ಛಾ ಸ್ವಾತಂತ್ರ್ಯದ ಒಂದು ಸಂಯೋಗದಲ್ಲಿಯೂ ಫರಿಸಾಯರು ನಂಬಿಕೆಯಿಟ್ಟರು. ಬೇರೊಂದು ಮಾತಿನಲ್ಲಿ ಹೇಳುವುದಾದರೆ, “ಪ್ರತಿಯೊಂದು ವಿಷಯವೂ ಮುನ್ನರಿಯಲ್ಪಡುತ್ತದೆ, ಆದರೂ ಆಯ್ಕೆಯ ಸ್ವಾತಂತ್ರ್ಯವನ್ನು ಕೊಡಲಾಗುತ್ತದೆ.” ಆದರೂ, ಆದಾಮ ಮತ್ತು ಹವ್ವ ಪಾಪ ಮಾಡುವಂತೆ ಪೂರ್ವ ನಿರ್ಣಯವನ್ನು ಹೊಂದಿದ್ದರು ಮತ್ತು ಬೆರಳ ಮೇಲಿನ ಒಂದು ಚಿಕ್ಕ ಗಾಯವು ಸಹ ಮೊದಲೇ ನಿಯಮಿಸಲ್ಪಟ್ಟಿದೆ ಎಂದು ಅವರು ನಂಬಿದರು.
ಹದಿನೆಂಟು ಮಂದಿಗೆ ಸಾವನ್ನು ತಂದ ಬುರುಜು ಕುಸಿತದ ಕುರಿತು ಮಾತಾಡಿದಾಗ ಅಂಥ ಮಿಥ್ಯಾ ವಿಚಾರಗಳನ್ನು ಯೇಸು ಗಮನಕ್ಕೆ ತಂದಿದ್ದಿರಬಹುದು. ಅವನು ಕೇಳಿದ್ದು: “[ಬಲಿಯಾದವರು] ಯೆರೂಸಲೇಮಿನಲ್ಲಿ ವಾಸವಾಗಿರುವ ಎಲ್ಲಾ ಮನುಷ್ಯರಿಗಿಂತಲೂ ಅಪರಾಧಿಗಳೆಂದು ಭಾವಿಸುತ್ತೀರೋ?” (ಲೂಕ 13:4) ಹೆಚ್ಚಿನ ದುರಂತಗಳಲ್ಲಿ ಸತ್ಯವಾಗಿರುವ ಪ್ರಕಾರ, “ಕಾಲವೂ ಮುನ್ನರಿಯದಿರುವ ಸಂಭವವೂ” ಅದಕ್ಕೆ ಕಾರಣವಾಗಿತ್ತೇ ಹೊರತು ಫರಿಸಾಯರು ಕಲಿಸಿದಂತೆ ವಿಧಿನಿರ್ಣಯವಲ್ಲ. (ಪ್ರಸಂಗಿ 9:11, NW) ಜ್ಞಾನಿಗಳೆನ್ನಲಾಗುವ ಅಂತಹ ಜನರು ಶಾಸ್ತ್ರೀಯ ಆಜ್ಞೆಗಳನ್ನು ಹೇಗೆ ನಿರ್ವಹಿಸಿಯಾರು?
ಅವರು ಧಾರ್ಮಿಕ ಹೊಸದುಗಾರರು
ಶಾಸ್ತ್ರೀಯ ಆಜ್ಞೆಗಳು ಪ್ರತಿಯೊಂದು ಸಂತತಿಯ ರಬ್ಬಿಯಿಂದ ಹೊಚ್ಚಹೊಸ ವಿಚಾರಗಳಿಗೆ ಹೊಂದಿಕೆಯಲ್ಲಿ ಅರ್ಥವಿವರಣೆ ಮಾಡಲ್ಪಡಬೇಕೆಂದು ಫರಿಸಾಯರು ಅಭಿಪ್ರಯಿಸಿದರು. ಹೀಗೆ ಅವರಿಗೆ, “ತಮ್ಮ ಹೊಚ್ಚಹೊಸ ವಿಚಾರಗಳನ್ನು ಟೋರಾ [ಯೆಹೂದ್ಯ ಧರ್ಮಶಾಸ್ತ್ರ]ದ ಬೋಧನೆಗಳೊಂದಿಗೆ ಹೊಂದಿಸುವುದರಲ್ಲಿ, ಅಥವಾ ಟೋರಾದ ಮಾತುಗಳಲ್ಲಿ ತಮ್ಮ ವಿಚಾರಗಳ ಇಂಗಿತ ಸೂಚಿಸಲು ಯಾ ಸೂಕ್ಷ್ಮಸೂಚನೆ ಕೊಡಲು ಕಷ್ಟವೇನೂ ಆಗಲಿಲ್ಲ” ಎಂದು ಎನ್ಸೈಕ್ಲೊಪೀಡಿಯ ಜುಡೈಕಾ ಹೇಳುತ್ತದೆ.
ವಾರ್ಷಿಕ ದೋಷಪರಿಹಾರ ದಿನದ ಸಂಬಂಧದಲ್ಲಿ, ಪಾಪಗಳಿಗಾಗಿ ಪರಿಹಾರವನ್ನು ನೀಡುವ ಅಧಿಕಾರವನ್ನು ಯಾಜಕರಿಂದ ತೆಗೆದುಬಿಟ್ಟು ದಿನಕ್ಕೆ ಸ್ಥಳಾಂತರಿಸಿದರು. (ಯಾಜಕಕಾಂಡ 16:30, 33) ಪಸ್ಕದಾಚರಣೆಯಲ್ಲಿ, ವಿಮೋಚನಾ ಕಥನದ ಪಾಠಗಳನ್ನು ಪಸ್ಕದ ಕುರಿಮರಿಯ ಮೇಲೆ ಪಠಿಸುವುದಕ್ಕಿಂತ ಹೆಚ್ಚಾಗಿ ದ್ರಾಕ್ಷಾಮದ್ಯ ಮತ್ತು ಮ್ಯಾಟ್ಜೊ [ಹುಳಿಹಿಡಿಸದ ರೊಟ್ಟಿ]ದ ಮೇಲಿನ ಪಠನಕ್ಕೆ ಒತ್ತುಹಾಕಿದರು.
ಸಕಾಲದಲ್ಲಿ, ಫರಿಸಾಯರು ದೇವಾಲಯದಲ್ಲಿ ಪ್ರಾಬಲ್ಯವನ್ನು ಹೊಂದಿದರು. ಅನಂತರ ಅವರು ಧರ್ಮಶಾಸ್ತ್ರದಲ್ಲಿ ಯಾವದೇ ಆಧಾರವಿದಿರ್ದದ, ಸಿಲೋವ ಕೊಳದ ನೀರನ್ನು ಒಯ್ಯುವುದನ್ನು ಮತ್ತು ಪರ್ಣಶಾಲೆಗಳ ಹಬ್ಬದಲ್ಲಿ ಅದರ ಅರ್ಪಣೆ ಮಾಡುವುದನ್ನು ಒಳಗೊಂಡ ಮೆರವಣಿಗೆಯನ್ನು ಹಾಗೂ ಹಬ್ಬದ ಅಂತ್ಯದಲ್ಲಿ ವಿಲೋ ರೆಂಬೆಗಳನ್ನು ಯಜ್ಞವೇದಿಯ ಮೇಲೆ ಬಡಿಯುವುದನ್ನು ಮತ್ತು ನಿಯತಕ್ರಮದ ದೈನಂದಿನ ಪ್ರಾರ್ಥನೆಗಳನ್ನು ಸ್ಥಾಪಿಸಿದರು.
“ಸಬ್ಬತ್ ಸಂಬಂಧವಾದ ಫರಿಸಾಯ ಸಂಬಂಧಿತ ಹೊಸ ರೀತಿಗಳು ವಿಶೇಷ ಗಮನಾರ್ಹವಾದವುಗಳು” ಎಂದು ಹೇಳುತ್ತದೆ ದ ಜ್ಯೂವಿಷ್ ಎನ್ಸೈಕ್ಲೊಪೀಡಿಯ. ಪತ್ನಿಯೊಬ್ಬಳು ದೀಪಗಳನ್ನು ಬೆಳಗಿಸುವ ಮೂಲಕ ಸಬ್ಬತ್ತನ್ನು ಸ್ವಾಗತಿಸುವಂತೆ ಅಪೇಕ್ಷಿಸಲಾಯಿತು. ಯಾವುದೇ ಚಟುವಟಿಕೆಯು ನಿಯಮಾನುಸಾರವಲ್ಲದ ಕೆಲಸಕ್ಕೆ ನಡಿಸಬಹುದೆಂದು ತೋರಿದರೆ, ಫರಿಸಾಯರು ಅದನ್ನು ನಿಷೇಧಿಸಿದರು. ಔಷಧೋಪಚಾರವನ್ನು ನಿಯಂತ್ರಣಗೊಳಿಸುವಷ್ಟು ಮಟ್ಟಿಗೂ ಅವರು ಮುಂದರಿದರು ಮತ್ತು ಸಬ್ಬತ್ ದಿನದಲ್ಲಿ ಯೇಸುವಿನ ಅದ್ಭುತಕರವಾದ ವಾಸಿಮಾಡುವಿಕೆಗಾಗಿ ಸಿಟ್ಟುಗೊಂಡರು. (ಮತ್ತಾಯ 12:9-14; ಯೋಹಾನ 5:1-16) ಆದರೂ, ಈ ಧಾರ್ಮಿಕ ಹೊಸದುಗಾರರು ಶಾಸ್ತ್ರೀಯ ನಿಯಮಗಳ ರಕ್ಷಣೆಗಾಗಿ ಒಂದು ಸುತ್ತುಗೋಡೆಯನ್ನು ಅಥವಾ ಬೇಲಿಯನ್ನು ನಿರ್ಮಿಸುವ ಪ್ರಯತ್ನದಲ್ಲಿ, ಹೊಸ ಹೊಸ ಸಂಘಟನೆಗಳನ್ನು ಸ್ಥಾಪಿಸುವುದನ್ನು ಮಾತ್ರ ನಿಲ್ಲಿಸಲಿಲ್ಲ.
ರದ್ದು ಮಾಡುವಿಕೆ
ಶಾಸ್ತ್ರೀಯ ನಿಯಮಗಳನ್ನು ತಳ್ಳಿಹಾಕುವ ಅಥವಾ ರದ್ದುಮಾಡುವ ಅಧಿಕಾರ ತಮಗಿದೆಯೆಂದು ಫರಿಸಾಯರು ಹೇಳಿಕೊಂಡರು. ಅವರ ವಿವೇಚನೆಯು ಟ್ಯಾಲ್ಮಡ್ [ಯೆಹೂದ್ಯ ಧಮಶಾಸ್ತ್ರ]ನ ತತ್ವಗಳಲ್ಲಿ ಪ್ರತಿಬಿಂಬಿಸುತ್ತದೆ: “ಇಡೀ ಟೋರಾವನ್ನು ಮರೆತುಬಿಡುವುದಕ್ಕಿಂತ ಏಕಾಕಿ ನಿಯಮವನ್ನು ತಳ್ಳಿಹಾಕುವುದು ಹೆಚ್ಚು ಒಳ್ಳೆಯದು.” ಜೂಬಿಲಿಯ ಕಾಲಾವಧಿಯು ಹತ್ತಿರವಾದಾಗ ಬಡವನು ತನ್ನ ಹಕ್ಕನ್ನು ಕಳೆದುಕೊಳ್ಳುವನೆಂಬ ಭಯದಿಂದ ಬಡವನಿಗೆ ಯಾರೂ ಸಾಲಕೊಡರೆಂಬ ಆಧಾರದ ಮೇಲೆ ಜೂಬಿಲಿಯನ್ನು ನಿಲ್ಲಿಸಿದ್ದು ಇದರ ಒಂದು ಉದಾಹರಣೆ.—ಯಾಜಕಕಾಂಡ ಅಧ್ಯಾಯ 25.
ವ್ಯಭಿಚಾರದ ಸಂಶಯಕ್ಕೆ ಗುರಿಯಾದ ಹೆಂಗಸಿನ ವಿಚಾರಣೆ ಮತ್ತು ಪತ್ತೆಹಚ್ಚದ ನರಹತ್ಯದ ಸಂಬಂಧದಲ್ಲಿ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಕ್ರಮವನ್ನು ರದ್ದುಮಾಡುವಿಕೆಗಳು ಬೇರೆ ಉದಾಹರಣೆಗಳಾಗಿವೆ. (ಅರಣ್ಯಕಾಂಡ 5:11-31; ಧರ್ಮೋಪದೇಶಕಾಂಡ 21:1-9) ಕೊರತೆಯಲ್ಲಿರುವ ಹೆತ್ತವರಿಗೆ ಒದಗಿಸುವ ಶಾಸ್ತ್ರೀಯ ಆವಶ್ಯಕತೆಯನ್ನು ಫರಿಸಾಯರು ರದ್ದುಮಾಡುವುದು ಕೇವಲ ಸಮಯವನ್ನು ಕಾಯುವ ಸಂಗತಿಯಾಗಿತ್ತು.—ವಿಮೋಚನಕಾಂಡ 20:12; ಮತ್ತಾಯ 15:3-6.
ಯೇಸು ಎಚ್ಚರಿಸಿದ್ದು: “ಫರಿಸಾಯರ ಕಪಟವೆಂಬ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರ್ರಿ.” (ಲೂಕ 12:1) ಫರಿಸಾಯತ್ವವು, ಅದರ ದೇವಪ್ರಭುತ್ವವಲ್ಲದ ಮನೋಭಾವಗಳೊಂದಿಗೆ, ಕಪಟಾಚರಣೆಯಲ್ಲದೆ ಬೇರೇನೂ ಆಗಿರಸಾಧ್ಯವಿಲ್ಲ—ಖಂಡಿತವಾಗಿಯೂ ಕ್ರೈಸ್ತ ಸಭೆಯೊಳಗೆ ತರಲ್ಪಡಬಾರದ ಸಂಗತಿಯದು. ಆದರೂ, ಯೆಹೂದ್ಯ ನಿರ್ದೇಶಕ ಕೃತಿಗಳು ಫರಿಸಾಯರನ್ನು ಸದ್ದುಕಾಯರಿಗಿಂತ ಹೆಚ್ಚು ಮೆಚ್ಚಿನ ಬೆಳಕಿನಲ್ಲಿ ಸಾದರಪಡಿಸುತ್ತವೆ. ನಾವೀಗ ಈ ಅಧಿಕ ಸಂಪ್ರದಾಯ ಪಾಲಕ ಗುಂಪನ್ನು ಪರಿಗಣಿಸೋಣ.
ಸದ್ದುಕಾಯರು
ಸದ್ದುಕಾಯರು ಎಂಬ ಹೆಸರು, ಸೊಲೊಮೋನನ ದಿನಗಳ ಮಹಾಯಾಜಕ ಚಾದೋಕನಿಂದ ಬಂದಿರಸಾಧ್ಯವಿದೆ. (1 ಅರಸುಗಳು 2:35, ಪಾದಟಿಪ್ಪಣಿ) ಸದ್ದುಕಾಯರು ದೇವಾಲಯ ಮತ್ತು ಯಾಜಕತ್ವದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ಒಂದು ಸಂಪ್ರದಾಯಸ್ಥ ಗುಂಪನ್ನು ರಚಿಸಿದರು. ಕಲಿಯುವಿಕೆ ಮತ್ತು ಧರ್ಮನಿಷ್ಠೆಯ ಆಧಾರದ ಮೇಲೆ ಅಧಿಕಾರದ ಹಕ್ಕು ಸಾಧಿಸಿದ ಫರಿಸಾಯರಂತೆ ಇರದೆ, ಸದ್ದುಕಾಯರು ತಮ್ಮ ವಂಶಾವಳಿ ಮತ್ತು ಸ್ಥಾನದ ಆಧಾರದ ಮೇಲೆ ಹಕ್ಕು ಸಾಧಿಸಿದರು. ಫರಿಸಾಯರ ನವೀನತೆಗಳನ್ನು ಸಾ.ಶ. 70 ರಲ್ಲಿನ ದೇವಾಲಯದ ನಾಶನದ ತನಕವೂ ಅವರು ವಿರೋಧಿಸಿದರು.
ಸದ್ದುಕಾಯರು ಪೂರ್ವಾದೃಷ್ಟವನ್ನು ತಿರಸ್ಕರಿಸಿದುದಲ್ಲದೆ, ಪೆಂಟಟ್ಯೂಕ್ [ಬೈಬಲಿನ ಮೊದಲ ಐದು ಪುಸ್ತಕಗಳು] ನಲ್ಲಿ ಸ್ಪಷ್ಟವಾಗಿಗಿ ನಮೂದಿಸದಿರುವ ಯಾವುದೇ ಬೋಧನೆಯನ್ನು ಅದು ದೇವರ ವಾಕ್ಯದಲ್ಲಿ ಬೇರೆ ಕಡೆ ತಿಳಿಸಲ್ಪಟ್ಟರೂ, ಅಂಗೀಕರಿಸಲು ನಿರಾಕರಿಸಿದರು. ವಾಸ್ತವವಾಗಿ ಅವರು, ಈ ವಿಷಯಗಳನ್ನು “ವಾಗ್ವಾದಿಸುವುದನ್ನು ಒಂದು ಸದ್ಗುಣವಾಗಿ ಪರಿಗಣಿಸಿದರು.” (ದ ಜ್ಯೂವಿಷ್ ಎನ್ಸೈಕ್ಲೊಪೀಡಿಯ) ಪುನರುತ್ಥಾನದ ಕುರಿತಾಗಿ ಯೇಸುವನ್ನು ಪಂಥಾಹ್ವಾನಿಸಿದ ಸಂದರ್ಭವನ್ನು ಇದು ನೆನಪಿಗೆ ತರುತ್ತದೆ.
ಏಳು ಮಂದಿ ಗಂಡಂದಿರ ವಿಧವೆಯ ದೃಷ್ಟಾಂತವನ್ನು ಉಪಯೋಗಿಸುತ್ತಾ, ಸದ್ದುಕಾಯರು ಕೇಳಿದ್ದು: “ಪುನರುತ್ಥಾನದಲ್ಲಿ ಆಕೆ ಆ ಏಳು ಮಂದಿಯಲ್ಲಿ ಯಾರ ಹೆಂಡತಿಯಾಗಿರುವಳು?” ನಿಶ್ಚಯವಾಗಿ, ಅವರ ಆ ಕಾಲ್ಪನಿಕ ವಿಧವೆಗೆ 14 ಅಥವಾ 21 ಮಂದಿ ಗಂಡಂದಿರು ಇದ್ದಿರಲೂಬಹುದು. ಯೇಸು ವಿವರಿಸಿದ್ದು: “ಪುನರುತ್ಥಾನವಾದ ಮೇಲೆ ಮದುವೆಮಾಡಿಕೊಳ್ಳುವದೂ ಇಲ್ಲ, ಮಾಡಿಕೊಡುವದೂ ಇಲ್ಲ.”—ಮತ್ತಾಯ 22:23-30.
ಮೋಶೆಯ ಹೊರತು ಬೇರೆ ಪ್ರೇರಿತ ಲೇಖಕರನ್ನು ಸದ್ದುಕಾಯರು ತಿರಸ್ಕರಿಸುವುದನ್ನು ಯೇಸು ಅರಿತವನಾಗಿ ಪೆಂಟಟ್ಯೂಕ್ನಿಂದ ಉಲ್ಲೀಖಿಸುತ್ತಾ ತನ್ನ ವಾದವನ್ನು ಸಮರ್ಥಿಸಿದನು: “ಸತ್ತವರು ಬದುಕಿ ಏಳುತ್ತಾರೆಂಬ ವಿಷಯದಲ್ಲಿ ಹೇಳಬೇಕಾದರೆ—ನಾನು ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು ಎಂದು ದೇವರು ಮೋಶೆಗೆ ನುಡಿದದ್ದನ್ನು ನೀವು ಮೋಶೆಯ ಗ್ರಂಥದಲ್ಲಿ ಪೊದೆಯ ಸಂಗತಿಯಿರುವ ಅಧ್ಯಾಯದಲ್ಲಿ ಓದಲಿಲ್ಲವೇ? ಆತನು ಜೀವಿತರಿಗೆ ದೇವರಾಗಿದ್ದಾನೆ ಹೊರತು ಜೀವವಿಲ್ಲದವರಿಗೆ ಅಲ್ಲ.”—ಮಾರ್ಕ 12:26, 27.
ಯೇಸು ಮತ್ತು ಅವನ ಹಿಂಬಾಲಕರ ಹಿಂಸಕರು
ಇತರ ರಾಷ್ಟ್ರಗಳೊಂದಿಗೆ ವ್ಯವಹರಿಸುವಲ್ಲಿ, ಮೆಸ್ಸೀಯನಿಗಾಗಿ—ಅವನ ಬರೋಣವನ್ನು ಅವರು ತುಸುವಾದರೂ ನಂಬಿದಲ್ಲಿ—ಕಾಯುವ ಬದಲಾಗಿ ರಾಜ್ಯತಂತ್ರವನ್ನು ಬಳಸುವುದನ್ನು ಸದ್ದುಕಾಯರು ನೆಚ್ಚಿದರು. ರೋಮ್ನೊಂದಿಗೆ ಮಾಡಿದ ಒಂದು ಒಪ್ಪಂದದ ಕೆಳಗೆ, ಸದ್ದುಕಾಯರು ದೇವಾಲಯವನ್ನು ನಡಿಸಲಿದ್ದರು ಮತ್ತು ಯಾವನೆ ಮೆಸ್ಸೀಯನು ಉಪಸ್ಥಿತನಾಗಿ ವಿಷಯಗಳನ್ನು ಕದಡುವುದು ಅವರಿಗೆ ಬೇಡವಾಗಿತ್ತು. ಯೇಸುವನ್ನು ತಮ್ಮ ಸ್ಥಾನಕ್ಕೆ ಹಾನಿಯಾಗಿ ವೀಕ್ಷಿಸುತ್ತಾ, ಆತನ ಮರಣದ ಹಂಚಿಕೆಯಲ್ಲಿ ಫರಿಸಾಯರೊಂದಿಗೆ ಅವರು ಜತೆಗೂಡಿದರು.—ಮತ್ತಾಯ 26:59-66; ಯೋಹಾನ 11:45-50.
ರಾಜನೀತಿಗೆ ಅಭಿಮುಖರಾಗಿದ್ದ ಸದ್ದುಕಾಯರು, ರೋಮಿಗೆ ನಿಷ್ಠೆಯನ್ನು ತರ್ಕಬದ್ಧ ವಾದಾಂಶವಾಗಿ ಮಾಡಿ, ಕೂಗಾಡಿದ್ದು: “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ.” (ಯೋಹಾನ 19:6, 12-15) ಯೇಸುವಿನ ಮರಣ ಮತ್ತು ಪುನರುತ್ಥಾನದ ಬಳಿಕ, ಕ್ರೈಸ್ತತ್ವದ ಹಬ್ಬುವಿಕೆಯನ್ನು ನಿಲ್ಲಿಸಲು ಪ್ರಯತ್ನಿಸಿದುದರಲ್ಲಿ ನಾಯಕತ್ವವನ್ನು ವಹಿಸಿದವರು ಸದ್ದುಕಾಯರೇ. (ಅ. ಕೃತ್ಯಗಳು 4:1-23; 5:17-42; 9:14) ಸಾ.ಶ. 70 ರಲ್ಲಿ ಯೆರೂಸಲೇಮಿನ ನಾಶನದ ಬಳಿಕ, ಈ ಗುಂಪು ಗತಿಸಿಹೋಯಿತು.
ಜಾಗರೂಕತೆಯಿಂದಿರುವ ಅಗತ್ಯ
ಯೇಸುವಿನ ಎಚ್ಚರಿಕೆ ಎಷ್ಟು ಸೂಕ್ತವಾದುದಾಗಿ ಪರಿಣಮಿಸಿತು! ಹೌದು, “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಜಾಗರೂಕರಾಗಿರಿ.” ಅದರ ಕೆಟ್ಟ ಫಲವನ್ನು ಇಂದು ಯೆಹೂದ್ಯರಲ್ಲಿ ಮತ್ತು ಕ್ರೈಸ್ತಪ್ರಪಂಚದಲ್ಲಿ ಒಬ್ಬನು ಕೇವಲ ಅವಲೋಕಿಸುವುದೇ ಸಾಕು.
ತೀರ ವೈದೃಶ್ಯದಲ್ಲಿಯಾದರೊ, ಭೂಸುತ್ತ 75,500 ಕ್ಕಿಂತಲೂ ಮಿಕ್ಕಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಅರ್ಹತೆಯುಳ್ಳ ಕ್ರೈಸ್ತ ಹಿರಿಯರು, ‘ಅವರ ವಿಷಯದಲ್ಲಿಯೂ ಅವರ ಉಪದೇಶದ ವಿಷಯದಲ್ಲಿಯೂ ಸತತ ಗಮನವನ್ನು ಕೊಡುತ್ತಾರೆ.’ (1 ತಿಮೊಥೆಯ 4:16) ಅವರು ಇಡೀ ಬೈಬಲನ್ನು ದೈವಪ್ರೇರಿತವಾಗಿ ಅಂಗೀಕರಿಸುತ್ತಾರೆ. (2 ತಿಮೊಥೆಯ 3:16) ಹೊಸರೀತಿಯನ್ನು ಆಚರಣೆಗೆ ತರುವವರೂ ತಮ್ಮ ಸ್ವಂತ ಧಾರ್ಮಿಕ ಕಾರ್ಯಗತಿಯನ್ನು ಪ್ರವರ್ಧಿಸುವವರೂ ಆಗಿರುವ ಬದಲಾಗಿ, ಈ ಪತ್ರಿಕೆಯನ್ನು ಅದರ ಪ್ರಧಾನ ಬೋಧನಾ ಉಪಕರಣವಾಗಿ ಬಳಸುವ ಬೈಬಲಾಧಾರಿತ ಸಂಸ್ಥೆಯೊಂದರ ಮಾರ್ಗದರ್ಶನದ ಕೆಳಗೆ ಅವರು ಐಕಮತ್ಯದಿಂದ ಕಾರ್ಯನಡಿಸುತ್ತಾರೆ.—ಮತ್ತಾಯ 24:45-47.
ಫಲಿತಾಂಶವೇನು? ಭೂಸುತ್ತಲೂ ಲಕ್ಷಾಂತರ ಜನರು ಬೈಬಲಿನ ತಿಳಿವಳಿಕೆಯನ್ನು ಪಡೆದು, ಅದನ್ನು ತಮ್ಮ ಜೀವನಕ್ಕೆ ಅನ್ವಯಿಸಿಕೊಂಡು, ಇತರರಿಗೆ ಅದನ್ನು ಕಲಿಸುತ್ತಾ ಇರುವಾಗ, ಆತ್ಮಿಕವಾಗಿ ಮೇಲ್ಮೆಯನ್ನು ಪಡೆಯುತ್ತಿದ್ದಾರೆ. ಇದು ಹೇಗೆ ನಿರ್ವಹಿಸಲ್ಪಡುತ್ತಿದೆಯೆಂದು ನೋಡಲು, ಯೆಹೋವನ ಸಾಕ್ಷಿಗಳ ಅತಿ ಹತ್ತಿರದ ಸಭೆಯನ್ನು ಯಾಕೆ ಸಂದರ್ಶಿಸಬಾರದು ಇಲ್ಲವೆ ಈ ಪತ್ರಿಕೆಯ ಪ್ರಕಾಶಕರಿಗೆ ಯಾಕೆ ಬರೆಯಬಾರದು?
[ಪುಟ 26 ರಲ್ಲಿರುವ ಚೌಕ]
ಯೇಸು ತನ್ನ ಸಭಿಕರನ್ನು ಪರಿಗಣಿಸಿದನು
ಯೇಸು ಕ್ರಿಸ್ತನು ಸ್ಪಷ್ಟತೆಯಿಂದ, ತನ್ನ ಕೇಳುಗರ ವಿಚಾರಗಳನ್ನು ಎಣಿಕೆಗೆ ತಂದುಕೊಂಡವನಾಗಿ ಕಲಿಸಿದನು. ಉದಾಹರಣೆಗೆ, ಫರಿಸಾಯ ನಿಕೊದೇಮನೊಂದಿಗೆ “ಹೊಸದಾಗಿ” ಹುಟ್ಟುವ ಕುರಿತು ಮಾತಾಡಿದಾಗ ಅವನು ಹಾಗೆ ಮಾಡಿದನು. ನಿಕೊದೇಮನು ಕೇಳಿದ್ದು: “ಮನುಷ್ಯನು ಮುದುಕನಾದ ಮೇಲೆ ಹುಟ್ಟುವದು ಹೇಗೆ? ಅವನು ತನ್ನ ತಾಯಿಯ ಗರ್ಭದಲ್ಲಿ ತಿರಿಗಿ ಸೇರಿ ಹುಟ್ಟುವದಾದೀತೇ?” (ಯೋಹಾನ 3:1-5) ಯೆಹೂದ್ಯ ಧರ್ಮಕ್ಕೆ ಪರಿವರ್ತಿತರಾಗುವವರಿಗೆ ಹೊಸದಾಗಿ ಹುಟ್ಟುವುದು ಅವಶ್ಯವೆಂದು ಫರಿಸಾಯರು ನಂಬಿರಲಾಗಿ, ಮತ್ತು ರಬ್ಬಿಗಳ ಒಂದು ನಾಣ್ಣುಡಿಯು ಪರಿವರ್ತಿತನನ್ನು “ಹೊಸದಾಗಿ ಹುಟ್ಟಿದ ಮಗು” ವಿಗೆ ಹೋಲಿಸಿರುವಾಗ, ನಿಕೊದೇಮನು ಅಷ್ಟು ತಬ್ಬಿಬ್ಬಾದದ್ದೇಕೆ?
ಜಾನ್ ಲೈಟ್ಫುಟ್ ಇವರ ಎ ಕಾಮೆಂಟ್ರಿ ಆನ್ ದ ನ್ಯೂ ಟೆಸ್ಟಮೆಂಟ್ ಫ್ರಾಮ್ ದ ಟಾಲ್ಮಡ್ ಆ್ಯಂಡ್ ಹಿಬ್ರೇಇಕ, ಈ ಕೆಳಗಿನ ಒಳನೋಟವನ್ನು ನೀಡುತ್ತದೆ: “ತನ್ನ ಆರಂಭಿಕ ದುರಭಿಪ್ರಾಯವನ್ನು ಸುಲಭವಾಗಿ ತಳ್ಳಿಬಿಡ” ಲಾರದ “ಈ ಪರಿಸಾಯನ ಮನಸ್ಸಿನಲ್ಲಿ ಒಬ್ಬ ಇಸ್ರಾಯೇಲ್ಯನ ಅರ್ಹತೆಯ ಕುರಿತು ಯೆಹೂದ್ಯರ ಸಾಮಾನ್ಯ ಅಭಿಪ್ರಾಯವು . . . ಇನ್ನೂ ಅಂಟಿಕೊಂಡಿದೆ: ‘ಇಸ್ರಾಯೇಲ್ಯರಿಗೆ . . . ಮೆಸ್ಸೀಯನ ರಾಜ್ಯದೊಳಗೆ ಸೇರಿಸಲ್ಪಡುವ ಒಂದು ಹಕ್ಕು ಇರಲಾಗಿ, ಯಾವನಿಗಾದರೂ ಹೊಸ ಇಸ್ರಾಯೇಲ್ಯನಾಗಿರಲು ತಾಯಿಯ ಗರ್ಭವನ್ನು ಎರಡನೆಯ ಸಾರಿ ಸೇರುವುದು ಅವಶ್ಯವೆಂದು ನಿನ್ನ ಈ ಮಾತಿನ ಅರ್ಥವೋ?’”—ಹೋಲಿಸಿ ಮತ್ತಾಯ 3:9.
ಪರಿವರ್ತನೆಯಾದವರು ಹೊಸದಾಗಿ ಹುಟ್ಟುವುದನ್ನು ನಿಕೊದೇಮನು ಅಂಗೀಕರಿಸಿದರೂ, ಮಾಂಸಿಕ ಯೆಹೂದ್ಯರಿಗೆ ಅಂತಹ ಒಂದು ಪ್ರಕ್ರಿಯೆಯು—ಗರ್ಭದಲ್ಲಿ ತಿರಿಗಿ ಸೇರುವುದೊ ಎನ್ನುವಂತೆ—ಅಶಕ್ಯವಾದುದಾಗಿ ಅವನು ವೀಕ್ಷಿಸಿದನು.
ಇನ್ನೊಂದು ಸಂದರ್ಭದಲ್ಲಿ, ‘ತನ್ನ ಮಾಂಸವನ್ನು ತಿಂದು ತನ್ನ ರಕ್ತವನ್ನು ಕುಡಿಯುವ’ ಕುರಿತು ಯೇಸು ಮಾತಾಡಿದಾಗ ಅನೇಕರು ಸಿಟ್ಟಾದರು. (ಯೋಹಾನ 6:48-55) ಆದರೂ, “ರೂಪಕಾರ್ಥದಲ್ಲಿ ‘ತಿನ್ನುವುದು ಮತ್ತು ಕುಡಿಯು’ವ ವಾಕ್ಸರಣಿಗಳಿಗೆ ಸೂಚಿಸುವುದು ಯೆಹೂದ್ಯ ಶಾಲೆಗಳಲ್ಲಿ ಅತ್ಯಂತ ಸರ್ವಸಾಮಾನ್ಯ” ಎಂದು ಲೈಟ್ಫುಟ್ ತಿಳಿಸುತ್ತಾರೆ. “ಮೆಸ್ಸೀಯನನ್ನು ತಿನ್ನುವು” ದನ್ನು ಟ್ಯಾಲ್ಮಡ್ ನಮೂದಿಸಿದೆ ಎಂದೂ ಅವರು ತಿಳಿಸಿದರು.
ಹೀಗೆ ಫರಿಸಾಯರ ಮತ್ತು ಸದ್ದುಕಾಯರ ನೋಟಗಳು ಒಂದನೆಯ ಶತಮಾನದ ಯೆಹೂದ್ಯರ ವಿಚಾರದ ಮೇಲೆ ಪೂರ್ತಿಯಾಗಿ ಪರಿಣಾಮ ಬೀರಿದ್ದವು. ಆದರೂ ಸೂಕ್ತವಾಗಿಯೆ, ಯೇಸು ಯಾವಾಗಲೂ ತನ್ನ ಸಭಿಕರ ಜ್ಞಾನ ಮತ್ತು ಅನುಭವವನ್ನು ಎಣಿಕೆಗೆ ತೆಗೆದುಕೊಂಡನು. ಅವನನ್ನು ಮಹಾ ಶಿಕ್ಷಕನಾಗಿ ಮಾಡಿದ ಅನೇಕ ಕಾರಣಾಂಶಗಳಲ್ಲಿ ಇದು ಒಂದು.