ಯೇಸುವಿನ ಜೀವನ ಮತ್ತು ಶುಶ್ರೂಷೆ
ಅನೇಕ ಶಿಷ್ಯರು ಯೇಸುವನ್ನು ಹಿಂಬಾಲಿಸುವುದನ್ನು ಬಿಡುತ್ತಾರೆ
ಯೇಸು ಕಪೆರ್ನೌಮಿನ ಒಂದು ಸಭಾಮಂದಿರದಲ್ಲಿ, ಪರಲೋಕದಿಂದ ಇಳಿದು ಬಂದ ನಿಜ ರೊಟಿಯ್ಟಾದ ತನ್ನ ಪಾತ್ರದ ಕುರಿತು ಕಲಿಸುತ್ತಿದ್ದನು. ಅವನ ಆ ಭಾಷಣವು ಪ್ರತ್ಯಕ್ಷವಾಗಿ, ಗಲಿಲಾಯದ ಸಮುದ್ರದ ಪೂರ್ವತೀರದಲ್ಲಿ ಜನರು ಅವನನ್ನು ಕಂಡು ಕೊಂಡಾಗ ಮತ್ತು ಅಲ್ಲಿ ಅವರಿಗೆ ಅದ್ಭುತಕರವಾಗಿ ಒದಗಿಸಲ್ಪಟ್ಟ ರೊಟ್ಟಿ ಮತ್ತು ಮೀನುಗಳ ಭೋಜನವನ್ನು ಉಂಡಾಗ ಆರಂಭವಾದ ಚರ್ಚೆಯ ಮುಂದುವರಿಯಾಗಿತ್ತು ಎನ್ನಬಹುದು.
ಯೇಸು ತನ್ನ ಹೇಳಿಕೆಗಳನ್ನು ಮುಂದರಿಸುತ್ತಾ, ಅಂದದ್ದು: “ನಾನು ಕೊಡುವ ರೊಟ್ಟಿ ನನ್ನ ಮಾಂಸವೇ; ಅದನ್ನು ಲೋಕದ ಜೀವಕ್ಕೋಸ್ಕರ ಕೊಡುವೆನು.” ಕೇವಲ ಎರಡು ವರ್ಷಗಳ ಮುಂಚೆ, ಸಾ. ಶ. 30 ರ ವಸಂತಕಾಲದಲ್ಲಿ, ಯೇಸು ನಿಕೋದೇಮನಿಗೆ- ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ರಕ್ಷಕನಾಗಿ ಕೊಟ್ಟನು ಎಂದು ಹೇಳಿದ್ದನು. ಹೀಗೆ, ಆತನು ಬೇಗನೇ ಅರ್ಪಿಸಲಿದ್ದ ಬಲಿಯಲ್ಲಿ ನಂಬಿಕೆಯನ್ನಿಡುವ ಮೂಲಕ, ಆತನ ಮಾಂಸವನ್ನು ಸಾಂಕೇತಿಕವಾಗಿ ತಿನ್ನುವ ಮಾನವ ಕುಲದ ಲೋಕದ ಯಾವನಾದರೂ ನಿತ್ಯಜೀವವನ್ನು ಪಡೆಯ ಬಲ್ಲನು ಎಂದು ಯೇಸು ಈಗ ತೋರಿಸುತ್ತಿದ್ದನು.
ಜನರಾದರೋ ಯೇಸುವಿನ ಈ ಮಾತುಗಳಿಂದ ಎಡವಿಬೀಳುತ್ತಾರೆ. “ಇವನು ತನ್ನ ಮಾಂಸವನ್ನು ನಮಗೆ ಹೇಗೆ ತಿನ್ನುವದಕ್ಕೆ ಕೊಟ್ಟಾನು?” ಎಂದವರು ಕೇಳುತ್ತಾರೆ. ತನ್ನ ಮಾಂಸವನ್ನು ತಿನ್ನುವುದು ಒಂದು ಸಾಂಕೇತಿಕ ರೀತಿಯಲ್ಲಿ ಎಂದು ತನಗೆ ಕಿವಿಗೊಡುವವರು ತಿಳಿಯುವಂತೆ ಯೇಸು ಬಯಸುತ್ತಾನೆ. ಅದನ್ನು ಒತ್ತಿಹೇಳಲು ಅವನಂದ ವಿಷಯವನ್ನು, ಅಕ್ಷರಶಃ ತಕ್ಕೊಂಡಲ್ಲಿ, ಇನ್ನೂ ಹೆಚ್ಚು ಆಕ್ಷೇಪಣೀಯವಾಗುತ್ತದೆ.
“ನೀವು ಮನುಷ್ಯಕುಮಾರನ ಮಾಂಸವನ್ನು ತಿನ್ನದೆ ಅವನ ರಕ್ತವನ್ನು ಕುಡಿಯದೆ ಹೋದರೆ ನಿಮ್ಮೊಳಗೆ ಜೀವವಿಲ್ಲ” ಎನ್ನುತ್ತಾನೆ ಯೇಸು. “ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದಿದ್ದಾನೆ ಮತ್ತು ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವೇ ನಿಜವಾದ ಆಹಾರ, ನನ್ನ ರಕ್ತವೇ ನಿಜವಾದ ಪಾನ. ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುವವನು ನನ್ನಲ್ಲಿ ಇರುತ್ತಾನೆ ಮತ್ತು ನಾನು ಅವನಲ್ಲಿ ಇರುತ್ತೇನೆ.”
ಇಲ್ಲಿ ಯೇಸು, ನರಭಕ್ಷಣೆಯ ಕುರಿತು ಸೂಚಿಸುತ್ತಿದ್ದರೆ ಅವನ ಬೋಧನೆಯು ಅತ್ಯಂತ ಹೇವರಿಕೆ ಹುಟ್ಟಿಸುವದಾಗಿರುತ್ತಿತ್ತು, ನಿಜ. ಆದರೆ ಯೇಸು ಅಕ್ಷರಶಃ ಮಾಂಸವನ್ನು ತಿನ್ನುವ ಅಥವಾ ರಕ್ತವನ್ನು ಕುಡಿಯುವುದನ್ನು ಇಲ್ಲಿ ಪ್ರತಿಪಾದಿಸಿಲ್ಲ ನಿಶ್ಚಯ. ನಿತ್ಯಜೀವವನ್ನು ಪಡೆಯುವವರೆಲ್ಲರೂ, ಮುಂದಕ್ಕೆ ಅವನು ಅರ್ಪಿಸಲಿದ್ದ ಪರಿಪೂರ್ಣ ಮಾನವ ದೇಹದ ಬಲಿಯಲ್ಲಿ ಮತ್ತು ಸುರಿಸಲಿದ್ದ ಜೀವರಕ್ತದಲ್ಲಿ ನಂಬಿಕೆಯನ್ನು ಇಡಲೇ ಬೇಕೆಂಬದನ್ನು ಅವನು ಕೇವಲ ಒತ್ತಿಹೇಳುತ್ತಿದ್ದನು. ಆದರೂ, ಅವನ ಶಿಷ್ಯರಲ್ಲೂ ಅನೇಕರು, ಅವನ ಬೋಧನೆಯನ್ನು ತಿಳಿದು ಕೊಳ್ಳಲು ಯಾವ ಪ್ರಯತ್ನವನ್ನೂ ಮಾಡುವದಿಲ್ಲ. “ಇದು ಕಠಿಣವಾದ ಮಾತು, ಇದನ್ನು ಯಾರು ಕೇಳಾರು?” ಎಂದು ಆಕ್ಷೇಪವೆತ್ತುತ್ತಾರೆ.
ತನ್ನ ಶಿಷ್ಯರಲ್ಲಿ ಅನೇಕರು ಗುಣುಗುಟ್ಟುತ್ತಿದ್ದಾರೆಂದು ತಿಳುಕೊಂಡ ಯೇಸು ಅವರಿಗೆ, “ಈ ಮಾತಿನಿಂದ ನಿಮಗೆ ಬೇಸರವಾಯಿತೋ? ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇರುವಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? . . . ನಾನು ನಿಮಗೆ ಹೇಳಿರುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ. ಆದರೆ ನಿಮ್ಮಲ್ಲಿ ಕೆಲವರು ನಂಬದವರಾಗಿದ್ದಾರೆ.”
ಯೇಸು ಮುಂದರಿಸಿ, ಅನ್ನುವುದು: “ತಂದೆಯ ಅನುಗ್ರಹವಿಲ್ಲದೆ ಯಾರೂ ನನ್ನ ಬಳಿಗೆ ಬರಲಾರರು ಎಂಬದನ್ನು ನಿಮಗೆ ನಾನು ಅದರ ದೆಸೆಯಿಂದಲೇ ಹೇಳಿದೆನು.” ಆಗ ಅವನ ಶಿಷ್ಯರಲ್ಲಿ ಅನೇಕರು ಹೊರಟು ಹೋಗುತ್ತಾರೆ ಮತ್ತು ಅವನನ್ನು ಹಿಂಬಾಲಿಸುವದನ್ನು ಬಿಡುತ್ತಾರೆ. ಯೇಸುವೀಗ ತನ್ನ ಹನ್ನೆರಡು ಮಂದಿ ಅಪೊಸ್ತಲರ ಕಡೆ ತಿರುಗಿ, ಕೇಳುತ್ತಾನೆ: “ನೀವು ಸಹಾ ಹೋಗಬೇಕೆಂದಿದ್ದೀರಾ?”
ಪೇತ್ರನು ಪ್ರತಿವರ್ತನೆ ತೋರಿಸುತ್ತಾನೆ. “ಸ್ವಾಮೀ, ನಿನ್ನನ್ನು ಬಿಟ್ಟು ನಾವು ಇನ್ನಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವವನ್ನು ಉಂಟುಮಾಡುವ ವಾಕ್ಯಗಳುಂಟು. ನೀನು ದೇವರು ಪ್ರತಿಷ್ಠಿಸಿದವನೇ ಎಂದು ನಾವು ನಂಬಿದ್ದೇವೆ ಮತ್ತು ತಿಳಿದಿದ್ದೇವೆ.” ಪೇತ್ರ ಮತ್ತು ಇತರ ಅಪೊಸ್ತಲರಿಗೆ ಆ ವಿಷಯವಾದ ಯೇಸುವಿನ ಬೋಧನೆಯು ಪೂರ್ಣವಾಗಿ ಅರ್ಥವಾಗಿರದಿದ್ದರೂ, ನಿಷ್ಠೆಯ ಎಂತಹ ಉತ್ತಮ ಹೇಳಿಕೆಯದು!
ಪೇತ್ರನ ಪ್ರತಿವರ್ತನೆಯನ್ನು ಯೇಸು ಮೆಚ್ಚಿದರೂ, ಅವನು ಅವಲೋಕಿಸಿದ್ದು: “ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ತೆಗೆದುಕೊಂಡೆನಲ್ಲವೋ? ನಿಮ್ಮಲ್ಲಿಯೂ ಒಬ್ಬನು ಸೈತಾನನ ಮಗನಾಗಿದ್ದಾನೆ.” ಆತನು ಇಸ್ಕಾರಿಯೋತ ಯೂದನನ್ನು ಸೂಚಿಸಿ ನುಡಿಯುತ್ತಾನೆ. ಆ ಬಿಂದುವಲ್ಲಿ ಯೇಸು, ಯೂದನಲ್ಲಿ ದುರ್ಮಾರ್ಗದ ಒಂದು “ಪ್ರಾರಂಭ”ವನ್ನು ಅಥವಾ ಸುರುವನ್ನು ಕಂಡುಹಿಡಿದಿರಬಹುದು.
ಆತನನ್ನು ರಾಜನನ್ನಾಗಿ ಮಾಡುವ ಜನರ ಪ್ರಯತ್ನಗಳನ್ನು ಎದುರಿಸಿದ ಮೂಲಕ ಯೇಸು ಆಗಲೇ ಅವರನ್ನು ನಿರಾಶೆಗೊಳಿಸಿದ್ದನು. ‘ಮೆಸ್ಸೀಯನಿಗೆ ತಕ್ಕದಾದ್ದ ಯೋಗ್ಯ ಸ್ಥಾನವನ್ನು ಅವನು ವಹಿಸದಿದ್ದರೆ ಅವನು ಮೆಸ್ಸೀಯನಾಗುವುದು ಹೇಗೆ?’ ಎಂದವರು ವಿವೇಚನೆ ಮಾಡಿರಲೂ ಬಹುದು. ಇದು ಸಹಾ ಜನರ ಮನಸ್ಸಿನಲ್ಲಿ ಹಸನಾಗಿ ಇರುವ ಒಂದು ಸಂಗತಿಯಾಗಿರುವುದು. ಯೋಹಾನ 6:51-71; 3:16.
◆ ಯಾರಿಗಾಗಿ ಯೇಸು ತನ್ನ ಮಾಂಸವನ್ನು ಕೊಡುತ್ತಾನೆ, ಮತ್ತು ಅವರು ‘ಅವನ ಮಾಂಸವನ್ನು ತಿನ್ನುವುದು’ ಹೇಗೆ?
◆ ಯೇಸುವಿನ ಯಾವ ಹೆಚ್ಚಿನ ಮಾತು ಜನರಿಗೆ ಧಕ್ಕೆಕೊಡುತ್ತದೆ, ಆದರೂ ಅವನೇನನ್ನು ಒತ್ತಿಹೇಳುತ್ತಿದ್ದನು?
◆ ಅನೇಕರು ಯೇಸುವನ್ನು ಹಿಂಬಾಲಿಸುವದನ್ನು ಬಿಟ್ಟಾಗ ಪೇತ್ರನ ಪ್ರತಿವರ್ತನೆಯೇನು? (w87 10/15)